ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 8, 2016

ಭಾರವಾಗದಿರಲಿ ಬದುಕು..!

‍ನಿಲುಮೆ ಮೂಲಕ

– ದಿವ್ಯಾಧರ ಶೆಟ್ಟಿ ಕೆರಾಡಿ

hanuman-sanjivaniಕೆಲ ದಿನದ ಹಿಂದೆ ನಮ್ಮ ಹುಡುಗನೊಬ್ಬ ಮನೆಯಲ್ಲಿದ್ದ ಬೆಕ್ಕನ್ನು ಮೇಲೆ ಎತ್ತಿ ಎಸೆಯುತ್ತ ಆಟ ಆಡುತ್ತಿದ್ದ ನನಗ್ಯಾಕೊ ಇದು ವಿಪರೀತ ಅನ್ನಿಸಿ ನಾನು ಯಾಕೋ ಬೆಕ್ಕಿನ ಜೀವ ತಿಂತಿಯಾ ಅಂತ ರೇಗಿದ್ರೆ ಅವನು ನೋಡಣ್ಣ ಬೆಕ್ಕನ್ನು ಎಷ್ಟೇ ಮೇಲೆ ಎಸೆದ್ರೂ ಹೇಗೆ ತಿರುಗಿಸಿ ಎಸೆದ್ರೂ ಕೆಳಕ್ಕೆ ಬೀಳೊವಾಗ ಪಾದ ನೆಲಕ್ಕೂರಿ ನಿಲ್ಲುತ್ತದೆ ಎಂದು ಇನ್ನೊಮ್ಮೆ ಎಸೆದ ಗರಗರನೆ ತಿರುಗಿದ ಬೆಕ್ಕು ಕಾಲೂರಿ ನಿಂತು ಮಿಯ್ಯಾವ್ ಎಂದು ಓಡಿತು.. ನನಗೂ ಇದು ಒಂದು ಕ್ಷಣ ಅರೇ ಹೌದಲ್ವ..! ಎಂದು ಅನ್ನಿಸಿತು. ಇದೇನು ಯಾರಿಗೂ ಗೊತ್ತಿಲ್ಲದ ವಿಷಯವೆನಲ್ಲ, ಅದ್ಭುತವಾದ ಸಂಶೋದನೆಯೂ ಅಲ್ಲ.. ಆದರೆ ಇದನ್ನು ಸ್ವಲ್ಪ ಬದುಕಿಗೆ ಅಳವಡಿಸಿಕೊಂಡ್ರೆ ಬೆಕ್ಕನ್ನೇ ಬದುಕಿಗೆ ‘ಗುರು’ ಅಂದುಕೊಂಡ್ರೆ ಎಷ್ಟು ಚೆನ್ನಾಗಿರುತ್ತಲ್ಲ ಅನ್ನಿಸಿ ಇಲ್ಲಿ ನನಗನ್ನಿಸಿದ್ದನ್ನು ಬರೆಯುತ್ತಿದ್ದೇನೆ..

ಚಾರ್ಲಿ ಚಾಪ್ಲಿನ್ ನ ಬಗ್ಗೆ ವಾಟ್ಸಾಪ್ ನಲ್ಲಿ ಒಂದು ಸಂದೇಶ ಬಂದಿತ್ತು. ಒಮ್ಮೆ ಚಾಪ್ಲಿನ್ ಒಂದು ಅದ್ಭುತವಾದ ಜೋಕ್ಸನ್ನು ತುಂಬಿದ ಸಭೆಯಲ್ಲಿ ಹೇಳಿದನಂತೆ ಜನರೆಲ್ಲಾ ಬಿದ್ದು ಬಿದ್ದು ನಕ್ಕರಂತೆ, ಚಾಪ್ಲಿನ್ ಅದೇ ಜೋಕನ್ನು ಇನ್ನೊಮ್ಮೆ ಹೇಳಿದನಂತೆ ಆಗ ಕೆಲವು ಜನ ಮಾತ್ರ ನಕ್ಕರಂತೆ.. ಅವನು ಮತ್ತೆ ಅದೇ ಜೋಕನ್ನು ಇನ್ನೊಮ್ಮೆ ಹೇಳಿದಾಗ ಜನ ಯಾರೂ ನಗದೆ ಸುಮ್ಮನೆ ನೋಡುತ್ತಿದ್ದರಂತೆ..! ಆಗ ಚಾಪ್ಲಿನ್ ಹೇಳಿದನಂತೆ, ನೋಡಿ ಒಂದೇ ಜೋಕನ್ನು ಮೂರು ಬಾರಿ ಹೇಳಿದಾಗ ನಗಲು ಯೋಚಿಸಿದ ನೀವು ಬದುಕಿನಲ್ಲಿ ಯಾವೂದೋ ಒಂದು ಸಮಸ್ಯೆಗೆ ಜೀವನ ಪರ್ಯಂತ ದುಃಖಿಸುತ್ತಿರಲ್ಲ.. ‘ನಾವು ಹೇಗಿರಬೇಕು ಯೋಚಿಸಿ’ ಎಂದಾಗ ಜನರೆಲ್ಲ ಅವನ ಮಾತನ್ನು ಚಪ್ಪಾಳೆಯ ಮೂಲಕ ಅನುಮೋದಿಸಿದರಂತೆ.. ಯಾಕೆ ಈ ಮಾತು ಇಲ್ಲಿ ಬಂತು ಅಂದರೆ ಬದುಕಿನಲ್ಲಿ ಮತ್ತೆ ಮತ್ತೆ ಎಡವುದು, ಬ್ಯಾಲೆನ್ಸ್ ಮಾಡಲಾಗದೆ ಜೀವನವನ್ನೆ ನರಕವಾಗಿಸಿಕೊಳ್ಳೊದ್ರರಲ್ಲಿ ಮನುಷ್ಯ ಬೇರೆಲ್ಲಾ ಜೀವಿಗಳನ್ನು ಮೀರಿಸುತ್ತಾನೆ.

ಎಡವಿದಲ್ಲೆ ಮಲಗುವ ನಮ್ಮನ್ನು ನೋಡಿದ್ರೆ, ‘ಬೆಕ್ಕು’ ನಮಗಿಂತ ಎಷ್ಟು ಮೇಲಲ್ವಾ ಎಂದೆನಿಸುತ್ತಿರುತ್ತದೆ.. ‘ಪ್ರಕೃತಿ ನಮಗೆ ಅದ್ಭುತವಾದ ಪಾಠಗಳನ್ನು ಹೇಳಿಕೊಡುತ್ತದೆ ಆದರೆ ನೋಡಿ ಕಲಿಯುವ ಕಣ್ಣು’ ಮುಚ್ಚಿರುವುದರಿಂದ ನಮ್ಮ ಸಮಸ್ಯೆಗಳೇ ನಮಗೆ ಬಲು ದೊಡ್ಡದಾಗಿ ಕಾಣುತ್ತೆ. ‘ಮಳೆ ಬಂದಾಗ ಬೇರೆಲ್ಲ ಪಕ್ಷಿಗಳು ಓಡಿ ಹೋಗಿ ಗೂಡಿನ ಆಶ್ರಯ ಪಡೆದರೆ ಗಿಡುಗ ಮಾತ್ರ ಮೋಡಕ್ಕಿಂತ ಮೇಲೆ ಹೋಗಿ ಮಳೆಯಿಂದ ತಪ್ಪಿಸಿಕೊಳ್ಳುತ್ತದೆ’ ಪ್ರಕೃತಿಯಲ್ಲಿರುವ ಎಂತಹ ಅದ್ಭುತವಾದ ಸಂಗತಿ ಇದು. ಚಿಕ್ಕ ಪುಟ್ಟ ಕಷ್ಟದ ಗಳಿಗೆ, ಯಾವುದೋ ಒಂದು ವಿಷಗಳಿಗೆಯಲ್ಲಿ ನನ್ನ ಪಾಲಿಗೆ ಯಾರೂ ಇಲ್ಲ ಇಡೀ ಜಗತ್ತೇ ನನ್ನ ಕೈಬಿಟ್ಟಿದೆ ಅಂತ ನಮಗೆ ನಾವೇ ಅಂದು ಕೊಂಡು ಬೊರಲು ಮಲಗಿ ಕಣ್ಣೀರಾಗುವಾಗ ಇದೆಲ್ಲ ನೆನಪಾದರೆ ಎಷ್ಟೊಂದು ಬದುಕುಗಳು ಹಸನಾಗುತ್ತಿತ್ತು..

ಚಿಕ್ಕಂದಿನಲ್ಲಿ ಕೇಳಿದ ರಾಮಾಯಣದ ಕತೆಯಲ್ಲಿ ಬರುವ ಒಂದು ಸಂಗತಿ ಈ ಸಂದರ್ಭದಲ್ಲಿ ಪ್ರಸ್ತುತ ಅನ್ನಿಸುತ್ತದೆ. ಲಂಕೆಯಲ್ಲಿ ಯುದ್ದದ ಸಂದರ್ಭದಲ್ಲಿ ಲಕ್ಷ್ಮಣನು ಇಂದ್ರಜಿತುವಿನ ಬಾಣದ ಆಘಾತದಿಂದ ಭೂಮಿಗೆ ಬಿದ್ದಾಗ ಅವನನ್ನು ಉಳಿಸಲು ಆಂಜನೇಯ ಸಂಜೀವಿನಿ ಹುಡುಕುತ್ತ ಬೆಟ್ಟದ ಬಳಿ ಬಂದಾಗ, ಆ ಬೃಹತ್ತಾದ ಬೆಟ್ಟನೋಡಿ ಸಾವಿರಾರು ಗಿಡಮೂಲಿಕೆಯ ನಡುವೆ ಸಂಜೀವಿನಿ ಹುಡುಕಲಾಗದೆ ಒಂದು ಕ್ಷಣ ಕಂಗಾಲಾದರೂ ಮರುಕ್ಷಣದಲ್ಲಿ ತಾನು ಬೆಟ್ಟಕ್ಕಿಂತ ದೊಡ್ಡದಾಗಿ ಬೆಳೆದು, ತನ್ನೆದುರಿನ ಸಮಸ್ಯೆಯನ್ನೇ ಚಿಕ್ಕದಾಗಿಸಿ ಬೆಟ್ಟವನ್ನೇ ಕಿತ್ತು ಹೊತ್ತೊಯ್ದು ಲಕ್ಷ್ಮಣನನ್ನು ಬದುಕಿಸಿ ಪ್ರಕರಣದ ಸುಖಾಂತ್ಯಕ್ಕೆ ಕಾರಣನಾದ. ನಾವೆಲ್ಲ ಸಮಸ್ಯೆಯನ್ನೇ ದೊಡ್ಡದು ಎಂದುಕೊಂಡಾಗಲೆಲ್ಲ ಸಮಸ್ಯೆಗಿಂತ ತಾನೇ ದೊಡ್ಡದಾಗಿ ಬೆಳೆದು ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಂಡ ಆಂಜನೇಯ ನಮಗೆಲ್ಲ ಮಾದರಿ ಎನ್ನಿಸುತ್ತಾನಲ್ಲವೇ. ಈಜು ಬರದ ವ್ಯಕ್ತಿಯೂ ಕೂಡ ಆಕಸ್ಮಿಕವಾಗಿ ನೀರಿಗೆ ಬಿದ್ದರೆ ಆತ ತನಗೆ ಈಜು ಬರಲ್ಲ ಅಂತ ಗೊತ್ತಿದ್ದರೂ ಅವನು ಕೈಕಾಲು ಬಡಿಯದೆ ಸುಮ್ಮನಿರಲಾರ ಹೇಗಾದರೂ ಬದುಕ ಬೇಕೆಂದು ಒದ್ದಾಡುತ್ತಾನೆ ಬದುಕಿಗಾಗಿ ಹೋರಾಡುತ್ತಾನೆ.

ಆದರೆ ಬದುಕಿನಲ್ಲಿ ನಾವೆಷ್ಟು ಸಲ ನಮ್ಮ ಬಗ್ಗೆ ನಾವೇ ಕೀಳರಿಮೆ ಬೆಳೆಸಿಕೊಂಡು ಕುಗ್ಗಿಲ್ಲ ಹೇಳಿ.. ನಮ್ಮಲ್ಲಿರುವ ಶಕ್ತಿ ನಮಗೆ ಗೊತ್ತಿಲ್ಲದ ಹಾಗೆ ಜೀವನ ಕಳೆದಿಲ್ಲ ಹೇಳಿ. ಕುಲುಮೆಯಲ್ಲಿ ಕಾಯದೆ ಚಿನ್ನ ಆಗಲ್ಲ ಅಂತ ಗೊತ್ತಿದ್ದರೂ ಬದುಕಿನ ಬೆಂಕಿಗೆ ಹೆದರಿ ಚಿಂತೆಯ ಬೆಂಕಿಗೆ ಬಿದ್ದು ಚಿತೆಯ ಬೆಂಕಿಯತ್ತ ಸಾಗುವುದು ನಿಜವಾದ ದುರಂತವಲ್ಲದೆ ಮತ್ತಿನ್ನೇನು. ಸಾಯೋ ವೇಳೆ ಬದುಕಿಗೆ ಹೋರಾಡೋ ನಾವು ಬದುಕಿದ್ದಾಗ ಏನು ಪ್ರಯತ್ನ ಮಾಡಿದ್ದೇವೆ ಎಂದು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಂಡರೆ ಮನುಷ್ಯ ಕೂಡ ಬದುಕಿನೆತ್ತರ ತಲುಪಬಲ್ಲ ಒಂದೊಮ್ಮೆ ಕೆಳಗೆ ಬಿದ್ದರೂ ಬೆಕ್ಕಿನಂತೆ ಕಾಲೂರಿ ಬದುಕುಳಿಯಬಲ್ಲ ಅಲ್ಲವೇ..

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments