ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 10, 2016

ಅಬ್ ಕಿ ಬಾರ್, ‘ಟ್ರಂಪ್ ಸರ್ಕಾರ್’

‍ನಿಲುಮೆ ಮೂಲಕ

– ಶ್ರೇಯಾಂಕ ಎಸ್ ರಾನಡೆ

ಎಲ್ಲಾ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವ ಮೂಲಕ, ಸ್ಥಾಪಿತ ರಾಜಕೀಯ ಶಕ್ತಿಗಳನ್ನು ಬೀಳಿಸಿದ ಡೊನಾಲ್ಡ್ ಟ್ರಂಪ್ ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದು ಮೋದಿಯವರನ್ನು ಟ್ರಂಪ್ ರೀತಿಯ ವ್ಯಕ್ತಿತ್ವದವರೆಂದೋ, ಟ್ರಂಪ್ ಮೋದಿಯವರಷ್ಟೇ ಉತ್ತಮರೆಂದೋ ಹೇಳುವ ಪ್ರಯತ್ನವಲ್ಲ. ಆದರೆ ಭಾರತದ ಅನುಕೂಲಕ್ಕೆ ತಕ್ಕಂತಹ ಸೂಕ್ತ ಸಮಯ, ವಾತಾವರಣ “ನ ಭೂತೋ ಭವಿಷ್ಯತಿಃ” ಎಂಬಂತೆ ಅಮೆರಿಕದಲ್ಲಿ ನಿರ್ಮಾಣಗೊಂಡಿದೆ. 21ನೇ ಶತಮಾನ ಭಾರತ ಹಾಗೂ ಉಪಖಂಡದ್ದಾಗಲು ಭಾರತ ಈ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಭಾರತ ಹಾಗೂ ಅಮೆರಿಕದ ಸಮಾನ ಆಸಕ್ತಿಗಳನ್ನು ದ್ವಿಪಕ್ಷೀಯ ಬಾಂಧವ್ಯದ ಮತ್ತೊಂದು ದಿಕ್ಕಿಗೆ ಕೊಂಡೊಯ್ಯಬೇಕು.

ಫಲಿತಾಂಶ ಜನರ ಮಾನಸಿಕತೆಯನ್ನು ಬದಲಾಯಿಸಲು ಹೊರಟಿದ್ದ ಅಸತ್ಯ, ದೋಷಪೂರ್ಣ ಸಮೀಕ್ಷೆಗಳನ್ನು ಅಮೆರಿಕ ನಿರಾಕರಿಸಿದೆ. ಟ್ರಂಪ್ ಕಾರ್ಡ್‍ನ ಮುಂದೆ ಜೀವಂತವಿರುವ ಅತೀ ಜನಪ್ರಿಯ ಅಧ್ಯಕ್ಷ ಬಿಲ್ ಕ್ಲಿಂಟನ್ ಕಸರತ್ತು, ಒಬಾಮಾ ಆಡಳಿತದ ವರ್ಚಸ್ಸು, ಒಬಾಮಾರ ವೈಯ್ಯಕ್ತಿಕ ಹಾಗೂ ಅಧಿಕಾರದ ಎಲ್ಲಾ ಇಲಾಖೆಗಳ ಶಕ್ತಿ, ಎಲ್ಲಾ ಮಾಧ್ಯಮಗಳ ದೋಷಣೆಯ ಹಿತಾಸಕ್ತಿ ಇತ್ಯಾದಿ ಎಲ್ಲವೂ ಕಳೆಗಟ್ಟಿದೆ. ಅಮೆರಿಕದ ಪ್ರಾಚೀನ ಪಕ್ಷ ರಿಪಬ್ಲಿಕನ್ ಹಾಗೂ ಭಾರತದ ಭಾರತೀಯ ಜನತಾ ಪಕ್ಷಗಳು ಬಲಪಂಥೀಯವೆಂದು ಗುರುತಿಸಿಕೊಂಡಿರುವ, ಪರಂಪರೆ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಪಕ್ಷಗಳೇ. ಕಾಲ ದೇಶಗಳ ಸಂಗತಿ-ಸವಾಲುಗಳ ಚೌಕಟ್ಟನ್ನು ಮೀರಿ ನೋಡಿದಾಗ ಎರಡೂ ಪಕ್ಷಗಳ ಆಶಯವೂ ಒಂದೇ. ತಮ್ಮ ದೇಶವನ್ನು ಮತ್ತೆ ಪರಮ ವೈಭವಕ್ಕೆ ಕೊಂಡೊಯ್ದು ವಿಶ್ವಗುರುವನ್ನಾಗಿಸುವುದು. ಅಮೆರಿದಲ್ಲಿ ಅದು “ಮೇಕ್ ಅಮೆರಿಕ ಗ್ರೇಟ್ ಅಗೈನ್”, ಭಾರತಕ್ಕೆ 21ನೇ ಶತಮಾನವನ್ನು ತನ್ನ ಶತಮಾನವನ್ನಾಗಿಸುವ ಆಸೆ. ಅಲ್ಲಿ ಟ್ರಂಪ್ ಹೇಳಿದ್ದು ಅಮೆರಿಕನ್ನರಿಗೆ ಅಮೆರಿಕದಲ್ಲಿ ಉದ್ಯೋಗ. ಭಾರತದಲ್ಲಿ “ಮೇಕ್ ಇನ್ ಇಂಡಿಯಾ”. ಚೀನಾ ಕೂಡ “ಒಂದು ರಸ್ತೆ ಒಂದು ಬೆಲ್ಟ್” ನ ಮೂಲಕ ಅದನ್ನೇ ಸಾಧಿಸಲು ಹೊರಟಿದೆ. ಸ್ವಂತಿಕೆ, ಸ್ವಕೀಯತೆ ಹಾಗೂ ಸ್ವ-ಶ್ರೇಷ್ಟತೆಯ ಯೋಚನೆಯಾದ ನಮ್ಮ ನಾಡು ನಮ್ಮವರಿಗಾಗಿ ಎಂಬ 19ನೇ ಶತಮಾನದ ಜಪಾನಿನ ಚಿಂತನೆ “ಏಷಿಯಾ ಫಾರ್ ಏಷಿಯನ್ಸ್”ನ ಆಧುನಿಕ ರೂಪಕವಾಗಿವೆ.

ರಾಜಕಾರಣಿಯೇ ಆಗಿರದಿದ್ದ ಇಬ್ಬರೂ ಮೊದಲ ಪ್ರಯತ್ನದಲ್ಲೇ ಪರಸ್ಪರ ದೇಶಗಳ ಅಧಿಕಾರದ ಗದ್ದುಗೆಯೇರಿದ್ದು ಮಹಾಸಾಧನೆಯೇ ಸರಿ. ಮೋದಿಯವರಿಗೆ ಮೂರು ಅವಧಿಯ ಮುಖ್ಯಮಂತ್ರಿಯಾಗಿ ಅನುಭವವಿತ್ತಾದರೂ ಅವರೇನು ಸಾಂಪ್ರದಾಯಿಕ ರಾಜಕಾರಣಿಯಲ್ಲ. ಅಮೆರಿಕದ ಕಾನೂನುಗಳಲ್ಲಿದ್ದ ಕಂದಕಗಳನ್ನೇ ಬಳಸಿಕೊಂಡು ಮಲ್ಟಿ ಬಿಲಿಯನ್ ಟ್ರಂಪ್ ಸಾಮ್ರಾಜ್ಯವನ್ನೇ ಕಟ್ಟಿದ ಟ್ರಂಪ್‍ಗೆ ಅನುಭವವಿರುವುದು ಅಮೆರಿಕದ ರಾಜಕಾರಣವನ್ನು ಹತ್ತಿರದಿಂದ ಕಂಡು. ಟ್ರಂಪ್ ವ್ಯಕ್ತಿಗತವಾಗಿ ಚುನಾವಣೆಗೆ ಧುಮುಕಿ ಪ್ರಾಥಮಿಕ ಸ್ಪರ್ಧೆಯಲ್ಲಿ ರಿಪಬ್ಲಿಕನ್ ಪಕ್ಷದ ಎಲ್ಲ ಅಧಿಕೃತ ಅಭ್ಯರ್ಥಿಗಳನ್ನೇ ಸೋಲಿಸಿ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾದವರು. ಕಾದು ಕುಳಿತಿದ್ದ ದೆಹಲಿಯ ಸಕ್ರಿಯ ರಾಜಕಾರಣದ ಹಿರಿಯ ಆಕಾಂಕ್ಷಿತರನ್ನೆಲ್ಲ ಹಿಮ್ಮೆಟ್ಟಿಸಿ ಸ್ವವರ್ಚಸ್ಸನಿಂದ ತಮ್ಮದೇ ಪಕ್ಷದ ಅಧಿಕೃತ ನಾಯಕನಾಗಿ ಆಯ್ಕೆಯಾದವರು ನರೇಂದ್ರ ಮೋದಿ. ಪ್ರಾರಂಭದಿಂದಲೂ ಮೋದಿಯವರನ್ನು ಬೆಂಬಲಿಸಿದ್ದು ರಾಷ್ಟ್ರೀಯವಾದಿಗಳು ಹಾಗೂ ಬಲಪಂಥೀಯರೇ. ಟ್ರಂಪ್‍ರನ್ನು ಬೆಂಬಲಿಸಿದವರೂ ಕ್ಯಾಥೋಲಿಕ್ ಚರ್ಚ್‍ನ ಕ್ರಿಶ್ಚಿಯನ್ ಸಂಪ್ರದಾಯವಾದಿಗಳು, ಮೂಲ ಅಮೆರಿಕನ್ನರು, ಬಿಳಿಯರು, ನಿರುದ್ಯೋಗಿಗಳು, “ಇಸ್ಲಾಮಿಕ್ ಭಯೋತ್ಪಾದನೆ”ಯಿಂದ ಬೇಸತ್ತಿದ್ದ ಎಲ್ಲಾ ಪ್ರಜೆಗಳು ಹಾಗೂ ಭಾರತೀಯ ಸಮಾಜ. ಮೋದಿಯವರಿಗೂ ಭಾರತದ ಸಂದರ್ಭದಲ್ಲಿ ಇಂತಹ ವರ್ಗಗಳು ಜೊತೆಯಾಗಿದ್ದವು.

“ಅಬ್ ಕಿ ಬಾರ್ ಟ್ರಂಪ್ ಸರ್ಕಾರ್” ಯಾವುದೇ ಕೆಲಸದಲ್ಲಿ ಸ್ಪಷ್ಟತೆ, ಅಚಲತೆ ಇದ್ದರೆ ಇಡೀ ವ್ಯವಸ್ಥೆಯೇ ವಿರೋಧಿಸಿ ನಿಂತರೂ ಗೆದ್ದು ಬರುವುದನ್ನು ಯಾರೂ ತಡೆಯಲಾಗದು. ಭಾರತದಲ್ಲಿ ಮೋದಿ ಪ್ರಧಾನಿಯಾಗಲೇಬಾರದು ಎಂಬ ಉದ್ದೇಶದಿಂದ ಎಲ್ಲಾ ಮಾಧ್ಯಮಗಳು ಸಮೀಕ್ಷೆಗಳನ್ನು ನಡೆಸಿದ್ದು. ಚುನಾವಣೆಯ ಕೊನೆಯ ದಿನಗಳವರೆಗೂ ಸರಕಾರಿ ಕೃಪಾಪೋಷಿತ ಸಮೀಕ್ಷೆಗಳು ಚುನಾವಣೆಯಲ್ಲಿ ಮೋದಿ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಸಾರಿದ್ದು. ಕೊನೆಗೆ ಅವರೆನಾದರೂ ಪ್ರಧಾನಿಯಾದರೆ ದೇಶವನ್ನೇ ಬಿಟ್ಟು ಹೋಗುತ್ತೇವೆಂದು ಕೆಲವಷ್ಟು ಜನರು ಜನರ ಮನಸ್ಸಿನಲ್ಲಿ ಮೋದಿಯ ಕುರಿತಾಗಿ ಭಯ ಹುಟ್ಟಿಸಲು ಪ್ರಯತ್ನಿಸಿ ಜನರ ಮನಸ್ಸಿನಲ್ಲಿ ಅಭದ್ರತೆಯನ್ನು ಹೇರುವ ಪ್ರಯತ್ನ ಮಾಡಿದ್ದು. ಅವರನ್ನು ಗೋದ್ರಾ ಹಿಂಸಾಚಾರದಲ್ಲಿ ತಪ್ಪಿತಸ್ಥರಂತೆ ಕಂಡಿದ್ದು. ಈ ಎಲ್ಲಾ ರಾಜಕೀಯ ಹಿಡನ್ ಅಜೆಂಡಾಗಳ ಹಿಂದಿನ ಸತ್ಯವನ್ನು ಜಾಣ ಮತದಾರರು ತಮ್ಮ ಮತದಾನದ ಶಕ್ತಿಯ ಮೂಲಕ ತೋರ್ಪಡಿಸಿದ್ದು ಅದ್ಭುತವೇ ಸರಿ. ಆಗಲೂ ಪ್ರತೀ ವಿಷಯದಲ್ಲಿ ಮೋದಿಯವರನ್ನು ಹಣಿಯಲು ಹೊಂಚು ಹಾಕುತಿದ್ದದನ್ನು ನೋಡಿದ್ದೇವೆ. ಅವೆಲ್ಲ ಸವಾಲುಗಳನ್ನೂ ಗೆಲ್ಲುತ್ತ ಅಪ್ರತಿಮ ವ್ಯಕ್ತಿತ್ವದಿಂದ ಸ್ವರ್ಣಪುತ್ಥಳಿಯಂತೆ ಸಮಯದ ವ್ಯಕ್ತಿಯಾಗಿ ಮೋದಿ ಹೊರಹೊಮ್ಮಿದ್ದು ಈಗ ಇತಿಹಾಸ. ಕಳೆದ 70 ವರ್ಷಗಳಲ್ಲಿ ಸಾಧ್ಯವಾಗದ ಕಪ್ಪುಹಣದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲು ಮೋದಿಯವರೇ ಬರಬೇಕಾಯಿತು. ವಾಸ್ತವಿಕವಾಗಿ ಧರ್ಮನಿರಪೇಕ್ಷತೆಯನ್ನು ಜಾರಿಗೆ ತರಲು, ಸಂವಿಧಾನದಲ್ಲಿ ಸುರಾಜ್ಯದ ಆಶಯವಿರುವ ರಾಜ್ಯ ನಿರ್ದೇಶಕ ತತ್ವಗಳಲ್ಲಿರುವ 44ನೇ ಅನುಚ್ಛೇದ ರಾಜಕೀಯ ಪಾಪಕೂಪದಲ್ಲಿ ಬಂಧಿಯಾಗಿತ್ತು. ಆ ಸಮಾನ ನಾಗರಿಕ ಸಂಹಿತೆಯ ವಿಚಾರ ಮುನ್ನಲೆಗೆ ಬರುವಂತಾಯಿತು. ಇಂತಹ ಅದೆಷ್ಟೋ ಭಾರತದ ಭವಿಷ್ಯವನ್ನೇ ಬದಲಾಯಿಸಬಲ್ಲ ನಿರ್ಣಯಗಳ ಮಾದರಿಯನ್ನೇ ಅಮೆರಿಕ ಟ್ರಂಪ್‍ರಿಂದ ನಿರೀಕ್ಷಿಸುತ್ತಿದೆ. 21 ತಿಂಗಳ ಸುದೀರ್ಘ ಚುನಾವಣೆಯ ಪ್ರತೀ ಹಂತದಲ್ಲೂ ಟ್ರಂಪ್‍ರನ್ನು ಅನೇಕರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಪ್ರತೀ ವಿಚಾರದಲ್ಲೂ ಅವರನ್ನು ಪ್ರತ್ಯೇಕಗೊಳಿಸುವ ಪ್ರಯತ್ನ ನಡೆಯಿತು. ಅಪ್ರಿಯ ಸತ್ಯಗಳಿಗೆ ಅಸಭ್ಯತೆಯ ಕಾರಣ ನೀಡಿ ಹಿನ್ನೆಲೆಗೆ ಸರಿಸುವ ಪ್ರಯತ್ನ ಮಾಡಲಾಯಿತು. ಆದರೆ ಇವೆಲ್ಲ ಸಂಗತಿಗಳಿಂದ ವಿಚಲಿತರಾಗದೇ ಟೀಕೆಗಳನ್ನೂ ಪ್ರಶಂಸೆಗಳನ್ನೂ ತಮ್ಮತ್ತಲೇ ಕೇಂದ್ರಿಕೃತಗೊಳಿಸಿ ಸದಾ ಸುದ್ದಿಯಲ್ಲಿರುವ ಮೂಲಕ ತಮ್ಮತನವನ್ನೇ ಅಮೆರಿಕತನವನ್ನಾಗಿ ಪರಿವರ್ತಿಸಿದರು. 2014ರ ಲೋಕಸಭೆಯ ಚುನಾವಣೆಯ ಸಂದರ್ಭದಲ್ಲಿ ಒಳ್ಳೆಯ ಕಾರಣಕ್ಕೆ ಸುದ್ದಿಯಲ್ಲಿದ್ದದ್ದು ಕೇವಲ ಮೋದಿ ಹಾಗೂ ಮೋದಿ ಮಾತ್ರ.

ಮೋದಿ ಪ್ರಧಾನಿಯಾದ ನಂತರವೂ ಸವಾಲುಗಳು ಕಡಿಮೆಯಾಗಲಿಲ್ಲ. ಆದರೆ ಅವುಗಳನ್ನು ಜಾಣ್ಮೆಯಿಂದ ಎದುರಿಸಿದ ರೀತಿ ಟ್ರಂಪ್‍ಗೆ ಮಾದರಿಯಾಗಬೇಕು. ಯಾಕೆಂದರೆ ಟ್ರಂಪ್‍ ನಡೆಯುತ್ತಿರುವುದು, ನಡೆಯಬೇಕಿರುವುದು ಮೋದಿಯವರು ನಡೆದ ನಡಿಗೆ. ಇಂದು 279 ಸಂಖ್ಯೆಯನ್ನು ಪಡೆದಿರುವ ಟ್ರಂಪ್‍ಗೆ ಸೆನೆಟ್, ಕಾಂಗ್ರೆಸ್‍ಗಳಲ್ಲಿ ರಿಪಬ್ಲಿಕನ್ ಪಕ್ಷದ್ದೇ ಬಹುಮತವಿದೆ. ಇದು ರಾಜ್ಯಸಭೆಯನ್ನು ಹೊರತುಪಡಿಸಿ ಲೋಕಸಭೆಯಲ್ಲಿ ಮೋದಿಯವರು ಪಡೆದ 272+ ಬಹುಮತದಂತಿದೆ. ಟ್ರಂಪ್ ಆಡಳಿತವಿರುವಷ್ಟು ದಿನ ಅಲ್ಲಿನ ಪ್ರತಿಪಕ್ಷ ಡೆಮಾಕ್ರಾಟಿಕ್ ಪಕ್ಷಕ್ಕೆ ಇಲ್ಲಿನ ಪ್ರತಿಪಕ್ಷಗಳದ್ದೇ ಪರಿಸ್ಥಿತಿ ಎದುರಾಗಲಿದೆ. ಆಡಳಿತದ ಪ್ರಾರಂಬಿಕ ವರ್ಷದಲ್ಲಿ ಎದುರಿಸಿದಂತೆ ಪ್ರಗತಿಪರ ಬುದ್ದಿಜೀವಿಗಳಿಂದ ಟೀಕೆ, ಇನ್ನಿತರ ಸ್ವಾರ್ಥ ಸಾಧನೆಗಳಿಗೆ ಮೋದಿಯವರು ಗುರಿಯಾಗುತ್ತಿರುವಂತೆ ಟ್ರಂಪ್ ಗುರಿಯಾಗುವ ಅಪಾಯವಿದೆ. ಇಲ್ಲಿ ಹಿಂದೂ ಮುಸ್ಲಿಂ ಶಾಂತಿ ಕದಡುವ ಕೋಮುಗಲಭೆ ಮಾಡಿಸುವ ಅಥವಾ ಆ ರೀತಿಯ ಸುದ್ದಿ ಹರಡಿ ಗೊಂದಲ ಸೃಷ್ಟಿಸುವ ಪ್ರಯತ್ನವಾದಂತೆ ಅಲ್ಲಿಯೂ ಕಪ್ಪು ಬಿಳಿಯರ ನಡುವೆ, ಅಮೆರಿಕನ್ನರು ಹಾಗೂ ವಿದೇಶಗಳಿಂದ ಬಂದವರ ನಡುವೆ ಗಲಭೆಯನ್ನು ಸೃಷ್ಟಿಸಿ ಟ್ರಂಪ್‍ರನ್ನು ಅಸಮರ್ಥರನ್ನಾಗಿಸುವ ನಿಗೂಢ ಪ್ರಯತ್ನವೂ ನಡೆಯಬಹುದು. ಆದರೆ ಇದನ್ನು ಮೀರಿ ಹೇಗೆ ತಮ್ಮ ನಾಯಕತ್ವದ ದಿಟ್ಟತನ ಹಾಗೂ ವ್ಯಕ್ತಿತ್ವದ ಗಟ್ಟಿತನವನ್ನು ಪ್ರದಶಿಸುತ್ತಾರೆ ಎಂಬುದರ ಮೇಲೆ ಭವಿಷ್ಯದ “ಅಮೆರಿಕನ್ ಕನಸು”, ಇದರ ಅಡಿಗಲ್ಲು ನಿಲ್ಲಲಿದೆ.

ತಮ್ಮ ಅಸ್ಮಿತೆಯ ಭಾಗ ಮಾಡಿಕೊಂಡಿರುವ ಅಸಭ್ಯತೆ, ಮಾನಹಾನಿ, ಕೀಳುಮಾತುಗಳು, ವಿಕೃತಿಗಳ ಕಾರಣದಿಂದ ಅವರ ಆಡಳಿತಾತ್ಮಕ ಕಾರ್ಯಗಳಿಗಿಂತಲೂ ವೈಯ್ಯಕ್ತಿಕ ಕೃತ್ಯದ ಕಾರಣದಿಂದ ವಿಶ್ವ ‘ಟ್ರಂಪ್‍’ರನ್ನು ದ್ವೇಷಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ತಮ್ಮೆಲ್ಲ ಗತವನ್ನು ಹಿಂದೆ ಒದ್ದು ಟ್ರಂಪ್ ಮೋದಿಯವರಿಂದ ಸನ್ನಡತೆ, ಸುಸಂಸ್ಕೃತಿ, ಘನತೆ ಹಾಗೂ ಉತ್ತಮ ವ್ಯಕ್ತಿತ್ವವನ್ನು ಕಲಿಯುವ ಮೂಲಕ, ಟ್ರಂಪ್ ಅಮೆರಿಕ ದೇಶದಿಂದ ಜಗತ್ತು ನಿರೀಕ್ಷಿಸುವ ಕನಿಷ್ಟ ಘನತೆಯನ್ನೂ, ಅಧ್ಯಕ್ಷ ಸ್ಥಾನದ ಗೌರವವನ್ನು ಎತ್ತಿಹಿಡಿಯಬೇಕು.

“ಹೌಸ್ ಆಫ್ ಕಾಡ್ರ್ಸ್” ಶ್ವೇತ ಭವನ, ಅಮೆರಿಕ ಅಧ್ಯಕ್ಷರ ಕುರಿತ ಹಾಗೂ ಆ ಹುದ್ದೆಗಾಗಿ ನಡೆಯುವ ರಾಜಕಾರಣ, ಕಸರತ್ತು ಹೊಂದಿರುವ ಅಮೆರಿಕದ ಬಹುನೆಚ್ಚಿನ ಕಿರುತೆರೆಯ ಧಾರವಾಹಿ ಗುಚ್ಚ. ಲೇಖಕ ಮಿಕಾಯಿಲ್ ಡೊಬ್ಸ್, ನಿರ್ದಯ ವಾಸ್ತವಿಕವಾದದ ಮೇಲೆ ಬರೆದ ಕಾದಂಬರಿಯ ಕಿರುತೆರೆ ರೂಪಾಂತರವನ್ನು ಅಮೆರಿಕದ ರಾಜಕೀಯದಲ್ಲಿ ಆಸಕ್ತಿಯಿರುವ ಪ್ರತಿಯೊಬ್ಬರೂ ನೋಡಿರುತ್ತಾರೆ. ಅಧಿಕಾರಕ್ಕಾಗಿ ಯಾವ ಮಾರ್ಗವನ್ನೂ ಹಿಡಿಯುವ ಸ್ವಾರ್ಥ ಸಾಧಕ ಮನಸ್ಸುಗಳು ಹೇಗೆ ಲೋಕವನ್ನೇ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಬಹುದು ಎಂಬುದನ್ನು ಇದು ತೋರಿಸುತ್ತದೆ. ಇದರಿಂದ ಅಮೆರಿಕದ ಅಧ್ಯಕ್ಷ ಚುನಾವಣೆಗೆ ನಿಂತ ಅಭ್ಯರ್ಥಿಗಳು ಸಾಕಷ್ಟು ಕಲಿತಿದ್ದಾರೆ. ಗೆಲ್ಲಲು ಯಾವ ಮಟ್ಟಕ್ಕೂ ಹೋಗಲು ಸಿದ್ಧ ಎಂಬುದನ್ನು ತೋರಿಸಿದ್ದಾರೆ. ಈ ಗೆಲುವಿನ ಬಳಿಕ ಅಮೆರಿಕದ ಪ್ರಜೆಗಳು ಈ ಚುಣಾವಣೆಯನ್ನು “ಹೌಸ್ ಆಫ್ ಟ್ರಂಪ್ ಕಾರ್ಡ್” ಎಂದೇ ಬಣ್ಣಿಸುತ್ತಿದ್ದಾರೆ.

ಅಧ್ಯಕ್ಷರಾಗಿ ಟ್ರಂಪ್ ಗುರಿಗಳು ಹಾಗೂ ಅವುಗಳಿಂದ ಜಗತ್ತಿನ ಮೇಲೆ, ವಿಶೇಷವಾಗಿ ಭಾರತದ ಮೇಲಾಗುವ ಪರಿಣಾಮಗಳು:

1. ಜಾಗತೀಕರಣ: ಉದ್ಯೋಗಗಳ ಹೊರಗುತ್ತಿಗೆಯನ್ನು ನಿಲ್ಲಿಸಲು ಕೆನಡಾ, ಮೆಕ್ಸಿಕೋ, ಅಮೆರಿಕದ ನಡುವಿನ ಮೂರು ದೇಶಗಳ “ಉತ್ತರ ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ (ನಾಫ್ತಾ)ವನ್ನು ತಕ್ಷಣ ಕೊನೆಗೊಳಿಸುವುದು. ಇದು ಮುಂದಿನ ದಿನಗಳಲ್ಲಿ ಭಾರತದತ್ತಲೂ ತಿರುಗಿ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನೇಕ ಅಮೆರಿಕನ್ ಸಾಫ್ಟವೇರ್ ಕಂಪೆನಿಗಳು, ಬಿ.ಪಿ.ಒ., ಕಾಲ್ ಸೆಂಟರ್‍ಗಳಲ್ಲಿನ ಭಾರತೀಯರ ಉದ್ಯೋಗದ ಮೇಲೂ ಪರಿಣಾಮ ಬೀರಬಹುದು. ಇನ್ನೊಂದೆಡೆ ಭಾರತವೂ ತನ್ನ ದೇಶದಿಂದ ವಲಸೆ ಹೋಗುತ್ತಿರುವ ಉದ್ಯೋಗಿಗಳನ್ನು ತಡೆಯುವ ಪ್ರಯತ್ನ ಮಾಡುತ್ತಲೇ ಇದೆ.

2. ಚೀನಾದಿಂದ ಆಮದಾಗುತ್ತಿರುವ ವಸ್ತುಗಳ ಮೇಲೆ ಶೇಕಡ 45% ಹೆಚ್ಚುವರಿ ತೆರಿಗೆ ಸುಂಕ ವಿಧಿಸುವುದು. ಇದು ಚೀನಾದ ಮಾರುಕಟ್ಟೆ ಸೇರಿದಂತೆ ವಿಶ್ವದ ವ್ಯಾಪಾರ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಒಂದು ವೇಳೆ ಡಬ್ಲು.ಟಿ.ಒ. ವ್ಯಾಪಾರ ನಿಯಮಕ್ಕೆ ವಿರುದ್ಧವಾಗಿ ತೆರಿಗೆ ವಿಧಿಸಿ ತನ್ನ ದೇಶಿ ಮಾರುಕಟ್ಟೆಯನ್ನು ಅಮೆರಿಕ ಉಳಿಸಿಕೊಂಡಲ್ಲಿ ಕಳಪೆ ಗುಣಮಟ್ಟದ ಮೇಡ್ ಇನ್ ಚೀನಾ ವಸ್ತುಗಳನ್ನು ನಿಷೇಧಿಸಲು ಭಾರತಕ್ಕೆ ಸರಿಯಾದ ದಾರಿ ಹಾಗೂ ವಿಶ್ವಮಟ್ಟದಲ್ಲಿ ಬೆಂಬಲ ಸಿಗಲಿದೆ.

3. ಭಾರತದಂತಹ ಪ್ರಮುಖ ದೇಶವನ್ನು ಕೈಬಿಟ್ಟಿರುವ ಹಾಗೂ ವಿಶ್ವದ ಶೇಕಡ 40% ವ್ಯಾಪಾರ ವಹಿವಾಟನ್ನು ಒಳಗೊಂಡಿರುವ 12 ದೇಶಗಳ ಟ್ರಾನ್ಸ್ ಫೆಸಿಫಿಕ್ ಪಾರ್ಟ್‍ರ್ನಶಿಪ್ ಟಿ.ಪಿ.ಪಿ. ಎಂಬ ಮುಕ್ತ ವ್ಯಾಪಾರ ಒಪ್ಪಂದವನ್ನು ವಿರೋಧಿಸುವುದು ಮತ್ತು ಆ ಮೂಲಕ ಅಮೇರಿಕದ ಕೆಲಸಗಾರರ ಉದ್ಯೋಗ, ಸಂಬಳ ಹಾಗೂ ಅಮೆರಿಕದ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವುದು. ಅಮೆರಿಕ ಈ ಒಪ್ಪಂದದಿಂದ ಹೊರಬಂದರೆ ಈ ಒಪ್ಪಂದವೇ ಬಿದ್ದುಹೋಗುತ್ತದೆ. ಆಗ್ನೇಯ ಏಷಿಯಾ ಸೇರಿದಂತೆ ಇತರ ದೇಶಗಳ ಪಾಲ್ಗೊಳ್ಳುವಿಕೆಯಿಂದ ಭಾರತದ ವ್ಯಾಪಾರ ವಹಿವಾಟಿನ ಮೇಲೆ ಆಗಬಹುದಾಗಿದ್ದ ಬಹು ದೊಡ್ಡ ಆತಂಕ ನಿವಾರಣೆಯಾಗಲಿದೆ.

4. ವಲಸೆ: ಅಮೆರಿಕದೊಳಗೆ ಅಕ್ರಮವಾಗಿ ಬರುತ್ತಿರುವ ವಲಸಿಗರನ್ನು ತಡೆಯುವುದು. ಈ ಯೋಜನೆ ಯಶಸ್ವಿಯಾಗಲು ಸರಿಯಾದ ಯೋಜನೆ, ಪೂರ್ವಸಿದ್ಧತೆಗಳು ಹಾಗೂ ಜನ ಶಕ್ತಿ ಅವಶ್ಯಕ.

5. ವಲಸೆ ಹಾಗೂ ಇನ್ನಿತರ ಸಮಾಜಬಾಹಿರ ದಂಧೆಗಳನ್ನು ತಡೆಯಲು ಅಮೆರಿಕ ಮತ್ತು ಮೆಕ್ಸಿಕೊ ಮಧ್ಯೆ ಬೃಹತ್ ಗೋಡೆಯನ್ನು ಕಟ್ಟುವುದು. ಸ್ಪಷ್ಟ ಗಡಿ ಹಾಗೂ ಬಾಂಗ್ಲಾ ಅಕ್ರಮ ವಲಸೆಯನ್ನು ನಿಲ್ಲಿಸಲು ಭಾರತ ಮತ್ತು ಬಾಂಗ್ಲಾ ದೇಶ ಮಾಡಿಕೊಂಡ “ಲ್ಯಾಂಡ್ ಬೌಂಡರಿ ಒಪ್ಪಂದ”ದಷ್ಟೇ ಮಹತ್ವಪೂರ್ಣ. ಆದರೆ ಗೋಡೆಗಳನ್ನು ಮುರಿದು ಮುಂದುವರೆಯಬೇಕಾದ ಆಧುನಿಕ ಕಾಲದಲ್ಲಿ ಗೋಡೆಕಟ್ಟಲು ಹೊರಟ ನಡೆ ನಿರುದ್ಯೋಗಿ, ಸಂಪ್ರದಾಯವಾದಿಗಳಿಗೆ ಸಂತೋಷ ನೀಡಿದರೂ, ಅಮೆರಿಕದ ಬೆಳವಣಿಗೆ, ಅಭಿವೃದ್ಧಿಯಲ್ಲಿ ಎಲ್ಲರ ಪಾಲೂ ಇರುವ ಕಾರಣ ಹಾಗೂ ಸಮಾನತೆ, ಉದಾರತೆ, ಹಕ್ಕು-ನ್ಯಾಯ, ಸ್ವಾತಂತ್ರ್ಯದ ತಳಹದಿಯನ್ನು ನಂಬಿರುವ ಅಮೆರಿಕದೊಳಗೆ ಈ ಯೋಜನೆಗೆ ಅಂತಹ ಬೆಂಬಲ ದೊರೆಯುವುದು ಕಷ್ಟ.

6. ಅಮೆರಿಕಗೆ ಬರುತ್ತಿರುವ ವಿದೇಶಿ ಮುಸ್ಲಿಮರಿಗೆ ನಿಷೇಧ ಹೇರುವುದು. ಇದು ಅಮೆರಿಕದ ಆಂತರಿಕ ಭದ್ರತೆ ಹಾಗೂ ಅಮೆರಿಕದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕಲು ಟ್ರಂಪ್ ಕಂಡುಕೊಂಡ ಮಾರ್ಗ. ಅಮೆರಿಕದಲ್ಲಿ ಏರುತ್ತಿರುವ “ಇಸ್ಲಾಮೋಫೋಬಿಯಾ” (9/11 ರ ಘಟನೆಯ ನಂತರ ಶುರುವಾದ ಮುಸ್ಲಿಮರ ಕುರಿತಾದ ಭಯ)ಗೆ ಕೊಡುಗೆ ನೀಡಿದಂತಾಗುತ್ತದೆ. ಯಾವುದೇ ಒಂದು ಸಮುದಾಯವನ್ನು ಅಮೆರಿಕದೊಳಗೆ ಬರದಂತೆ ನೋಡಿಕೊಳ್ಳುವುದು ಕಷ್ಟದ ಮಾತು. ಇದಕ್ಕೆ ವಿಶ್ವ ಸಮುದಾಯ ಹೇಗೆ ಪ್ರತಿಕ್ರಿಯಿಸಬಹುದು ಎಂಬುದರ ಮೇಲೆ ಇದರ ಆನ್ವಯಿಕತೆ ನಿಂತಿದೆ.

7. ವಲಸೆ ಬರುವವರಿಗೆ ಸೈದ್ಧಾಂತಿಕ ಪರೀಕ್ಷೆಯನ್ನು ಏರ್ಪಡಿಸುವುದು. ಈ ಸೈದ್ಧಾಂತಿಕ ಪರಿಕ್ಷೆಯೇ ವಲಸಿಗರ ನೈಜ ಅಂತಿಮ ನಿಲುವು ಎಂಬುದು ತೀರ್ಮಾನಿಸುವುದು ಹೇಗೆ ಎಂಬುದರ ಬಗ್ಗೆ ಟ್ರಂಪ್‍ಗೂ ಸ್ಪಷ್ಟತೆಯಿಲ್ಲ.

8. ಆರೋಗ್ಯ: ಕೆಳ ಹಾಗೂ ಮಧ್ಯಮ ವರ್ಗದ ಲಕ್ಷಾಂತರ ಜನರಿಗೆ ಆಶಾಕಿರಣದಂತೆ ತೋರುತ್ತಿರುವ ಆದರೂ ಜನರಿಗೂ ಹಾಗೂ ಸರಕಾರದ ಬೊಕ್ಕಸಕ್ಕೆ ಹೊರೆಯಾಗಿರುವ, ಒಬಾಮಾ ಆಡಳಿತದ ಬಹು ನಿರೀಕ್ಷಿತ ಯೋಜನೆ “ಒಬಾಮಾ ಕೇರ್” ಅನ್ನು ಸ್ಥಗಿತಗೊಳಿಸುವುದು. ಇದರ ಸ್ಪಷ್ಟ ಚಿತ್ರಣ ನೀಡಿದ ಹೊರತಾಗಿಯೂ ಮತದಾದರು ಟ್ರಂಪ್‍ರತ್ತ ಚಿತ್ತೈಸಿದ್ದಾರೆ. ಆದರೆ ಅದಕ್ಕೆ ಪ್ರತಿಯಾಗಿ ಅಮೆರಿಕನ್ನರಿಗೆ ತೀರಾ ಅಗತ್ಯವಿರುವ ಪರ್ಯಾಯ ಆರೋಗ್ಯ ವಿಮೆಯನ್ನು ನೀಡಬೇಕಾಗುತ್ತದೆ.

9. 1973ರ “ರೋವ್ ವರ್ಸಸ್ ವಾಡೆ” ಕೇಸಿನ ಮಹತ್ವದ ತೀರ್ಪು ಅಮೇರಿಕದಲ್ಲಿ ಗರ್ಭಫಾತವನ್ನು (ಅಬಾರ್ಷನ್) ಕಾನೂನು ಸಮ್ಮತಗೊಳಿಸಿತ್ತು. ಆ ತೀರ್ಪನ್ನು ಪ್ರಶ್ನಿಸಲು ಟ್ರಂಪ್ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ತ್ವರಿತವಾಗಿ ನೇಮಿಸಲಿದ್ದಾರೆ. ಅನೇಕ ಕ್ಯಾಥೋಲಿಕ್ ಸಂಪ್ರದಾಯವಾದಿ ದೇಶಗಳಲ್ಲಿ ತಾಯಿ ಸಾಯುವ ಪರಿಸ್ಥಿತಿ ಬಂದರೂ ಗರ್ಭಪಾತಕ್ಕೆ ಅವಕಾಶವಿಲ್ಲ. ಇಂತಹ ಮೂಲಭೂತವಾದಿ ಧೋರಣೆಯನ್ನು ಮೊದಲಿನಿಂದಲೂ ಪ್ರದರ್ಶಿಸಿಕೊಂಡು ಬರುತ್ತಿರುವ ಟ್ರಂಪ್ ಅದನ್ನೀಗ ಸಾಕಾರಗೊಳಿಸಲಿದ್ದಾರೆ. ಒಂದೆಡೆ ಜಗತ್ತು ಹಲವು ಆಯಾಮಗಳಲ್ಲಿ ಮುಂದುವರೆಯುತ್ತಿದ್ದರೆ ಟ್ರಂಪ್ ಮಾತ್ರ ಇಂತಹ ಆಲೋಚನೆಗಳಿಂದ ತಾವೂ ಹಿಂದಕ್ಕೆ ಹೋಗುತ್ತಿದ್ದಾರೆ. ಅಮೆರಿಕವನ್ನೂ ಹಿಂದಕ್ಕೊಯ್ಯುತ್ತಿದ್ದಾರೆ.

10. ಭಯೋತ್ಪಾದನೆ ಹಾಗೂ ಐ.ಎಸ್.ಐ.ಎಸ್: ಇರಾಕ್ ಸಿಯಾದ ಭಾಗಗಳಲ್ಲಿ ಖಲೀಫತ್ ನಿರ್ಮಿಸಲು ಹೊರತಿರುವ ಧರ್ಮಾಂಧ ಜಿಹಾದಿ ಐ.ಎಸ್.ಐ.ಎಸ್‍ನ ಹುಟ್ಟಿಗೆ ಅಮೆರಿಕ ಹಾಗೂ ಪಾಶ್ಚಾತ್ಯ ದೇಶಗಳ ಬೆಂಬಲವೇ ಕಾರಣವಾಗಿದ್ದರೂ ಅದನ್ನು ಬುಡದಿಂದ ಕಿತ್ತೆಸೆಯುವುದಕ್ಕೆ ಟ್ರಂಪ್ ಸಿದ್ಧರಾಗಿದ್ದಾರೆ. ಹಿಲರಿ ತಾವು ವೈಮಾನಿಕ ದಾಳಿಯನ್ನು ಮುಂದುವರೆಸುವುದಾಗಿ ಹೇಳಿದ್ದರು. ಆದರೆ ಟ್ರಂಪ್ ಅಗತ್ಯಬಿದ್ದರೆ ಭೂಮಿಗಿಳಿದು ಅದರ ಸಮಗ್ರ ನಾಡಿಗಳನ್ನು ಸರ್ವನಾಶ ಮಾಡುವುದಾಗಿ ಹೇಳಿದ್ದಾರೆ. ಹೇಗೆ ಮಾಡುತ್ತಾರೆಂಬ ಗೌಪ್ಯ ಯೋಜನೆಯನ್ನು ಬಿಟ್ಟುಕೊಡದಿದ್ದರೂ ಮನಸ್ಸಿನಿಂದ ಇಸ್ಲಾಂ ಹಾಗೂ “ಇಸ್ಲಾಮಿಕ್ ಭಯೋತ್ಪಾದನೆ”ಯನ್ನು ದ್ವೇಷಿಸುವ ಟ್ರಂಪ್ ಅದರ ವಿನಾಶಕ್ಕೆ ಇರಾಕ್‍ನ ಮೇಲೆ ಮತ್ತೊಮ್ಮೆ ಯುದ್ಧ ಸಾರುವ ಸಂದರ್ಭ ಎದುರಾದರೆ ಅದಕ್ಕೂ ಸಿದ್ಧರಿರುವಂತೆ ತೋರುತ್ತಿದೆ. ಭಯೋತ್ಪಾದನೆ ಎಂಬುದು ಭಾರತ ಸೇರಿದಂತೆ ಜಗತ್ತೇ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಇದರ ಜೊತಗೆ ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಎಲ್ಲಾ ದೇಶಗಳ, ಎಲ್ಲಾ ರೀತಿಯ ಭಯೋತ್ಪಾದನೆಯನ್ನು ನಿರ್ನಾಮ ಮಾಡಲು ಭಾರತ ಹಾಗೂ ವಿಶ್ವದ ಶಕ್ತಿಗಳು ಅಮೆರಿಕವನ್ನು ಒಪ್ಪಿಸಿದರೆ ಎಲ್ಲರ ಸುಭಿಕ್ಷೆ ಸಾಧ್ಯವಿದೆ.

11. ಯಾವುದೇ ಮಾರ್ಗದಿಂದಾದರೂ ಸರಿ ಐ.ಎಸ್.ಐ.ಎಸ್‍ ಅನ್ನು ಸದೆ ಬಡಿಯಲೇಬೇಕೆಂಬ ಉದ್ದೇಶದಿಂದ ಅಧ್ಯಕ್ಷರಾದ 30 ದಿನಗಳಲ್ಲಿ ಅದರ ವಿನಾಶಕ್ಕೆ ಯೋಜನೆಯನ್ನು ನಿರೂಪಿಸುವಂತೆ ಮಿಲಿಟರಿ, ನ್ಯಾಟೋ, ಸಿ.ಐ.ಎ. ಜನರಲ್‍ಗಳಿಗೆ ತಿಳಿಸಲಿದ್ದಾರೆ ಹಾಗೂ ಅದನ್ನು ತಕ್ಷಣಕ್ಕೆ ಕಾರ್ಯಗತಗೊಳಿಸಲಿದ್ದಾರೆ.

12. 9/11 ದಾಳಿಯ ಹಿಂದೆ ಸೌದಿ ಅರೇಬಿಯಾದ ದುಡ್ಡು ಬಳಕೆಯಾಗಿತ್ತು ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಅದಕ್ಕೆ ಬೇಕಾದ ಸೂಕ್ತ ಸಾಕ್ಷಿಯನ್ನು ಕಲೆಹಾಕಿ ಸೌದಿ ಅರೆಬಿಯವನ್ನು ಶಿಕ್ಷಿಸುವ ಮಾತುಗಳನ್ನಾಡುತ್ತಿದ್ದಾರೆ. ಆದರೆ ಮಧ್ಯ ಪ್ರಾಚ್ಯದಲ್ಲಿ ಹಿಂದಿನಿಂದಲೂ ವ್ಯಾವಹಾರಿಕವಾಗಿ ಹಾಗೂ ರಾಜಕೀಯವಾಗಿ ಸೌದಿ ಅರೆಬಿಯ ಅಮೇರಿಕದ ಮಿತ್ರ ರಾಷ್ಟ್ರ. ಹಾಗಾಗಿ ಈ ದೇಶವನ್ನು ಬಳಸಿಕೊಂಡು ಆ ಪ್ರಾಂತ್ಯದಲ್ಲಿ ಮತ್ತಷ್ಟು ಅತಂತ್ರತೆ ಹಾಗೂ ಶಕ್ತಿ ರಾಜಕಾರಣವನ್ನು ನಡೆಸಬಹುದೇ ಹೊರತು ಸೌದಿ ಅರೆಬಿಯಾದಂತಹ ಶಕ್ತಿಶಾಲಿ ಶ್ರೀಮಂತ ದೇಶದ ಜೊತೆಗೆ ಸಂಬಂಧ ಹಾಳು ಮಾಡಿಕೊಳ್ಳುವುದು ಅಸಾಧ್ಯದ ಮಾತು.

13. ಇಸ್ರೇಲ್‍ನ ಯೋಜನೆಗಳನ್ನು ಸಮರ್ಥಿಸುತ್ತಲೇ ಬಂದಿರುವ ಟ್ರಂಪ್ ಪ್ಯಾಲೇಸ್ತೀನಿಯರ ವಿರೋಧಿ. ಹಮಾಸ್‍ನಂತಹ ಸಂಘಟನೆಗಳ ನಿರ್ನಾಮ ಮಾಡಲು ಟ್ರಂಪ್ ಇಸ್ರೇಲ್ ಜೊತೆಗೆ ನಿಲ್ಲಲಿದ್ದಾರೆ.

14. ಕೆಲಸಗಾರರು, ಸಂಬಳ: ಅಮೆರಿಕದ ಆರ್ಥಿಕತೆ ಇಳಿಮುಖವಾಗುತ್ತಿರುವಲ್ಲಿ ಅಮೆರಿಕನ್ ಕೆಲಸಗಾರರ, ಸಾಮಾನ್ಯರ ಪಾಲೂ ದೊಡ್ಡದಿದೆ. ಹಾಗಾಗಿ ತೆರಿಗೆ ಹೊರೆಯಿಂದ ಅವರನ್ನು ಪಾರು ಮಾಡಿ ಅವರ ಜೀವನ್ನು ಸುಧಾರಿಸಲು ಆದಾಯ ಬ್ರಾಕೆಟ್‍ ಅನ್ನು 7ರಿಂದ 3ಕ್ಕೆ ಇಳಿಸಲಿದ್ದಾರೆ. ಇದು ಅನೇಕರ ಪಾಲಿಗೆ ಆರ್ಥಿಕ ಮುಗ್ಗಟ್ಟು ಹಾಗೂ ಸಾಲದ ಹೊರೆಯಿಂದ ತಪ್ಪಿಸಿಕೊಳ್ಳಲು ದೊರೆತ ಚೇತೋಹಾರಿ ಫಲ.

15. ಮೊದಲಿನಿಂದಲೂ ಅಮೆರಿಕದಲ್ಲಿ ಕಾರ್ಪೋರೆಟ್ ತೆರಿಗೆ ಇತರ ದೇಶಗಳಿಗಿಂತಲೂ ಹೆಚ್ಚಾಗಿಯೇ ಇದೆ. ಹಾಗಾಗಿ ಪ್ರಸ್ತುತ ಶೇಕಡ 35% ಇರುವ ತೆರಿಗೆಯನ್ನು ಬೃಹತ್ ರೀತಿಯಲ್ಲಿ ಶೇಕಡ 15% ಗೆ ಇಳಿಸಲಿದ್ದಾರೆ. ಕಾರ್ಪೋರೇಟ್ ವಲಯದ ತೆರಿಗೆಯನ್ನು ಸ್ಪರ್ಧಾತ್ಮಕಗೊಳಿಸಿ ಕಾರ್ಪೋರೇಟ್ ವಲಯಕ್ಕೆ ಕೆಂಪು ಹೊದಿಕೆಯನ್ನು ಹಾಸುವ ಮಹತ್ವಾಕಾಂಕ್ಷೆ ಟ್ರಂಪ್‍ರದ್ದು. ಇದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟದಂತೆ ತೋರಿದರೂ ಕಡಿಮೆಯಾದ ತೆರಿಗೆಯ ಪ್ರಮಾಣದಿಂದ ತೆರಿಗೆ ತಪ್ಪಿಸುವುದು ಕಡಿಮೆಯಾಗುತ್ತದೆ ಆ ಮೂಲಕ ಸರಕಾರದ ಬೊಕ್ಕಸಕ್ಕೆ ಯಾವುದೇ ರೀತಿಯಿಂದಲೂ ನಷ್ಟವಾಗುವುದಿಲ್ಲ. ಹಾಗೆಯೇ ಕಾರ್ಪೋರೆಟ್ ವಲಯವೂ ಹೆಚ್ಚು ಕ್ರಿಯಾಶೀಲವಾಗಲಿದೆ. ಇದೇ ರೀತಿಯ ಸುಧಾರಣಾ ಕ್ರಮವನ್ನು ಭಾರತ ಸರಕಾರವೂ ಕೈಗೊಂಡಿದೆ. 30% ಇದ್ದ ಕಾರ್ಪೋರೆಟ್ ತೆರಿಗೆಯನ್ನು ಮುಂದಿನ 5 ವರ್ಷಗಳಲ್ಲಿ 25%ಗೆ ಇಳಿಸಲಿದೆ.

16. ಅನೇಕ ವರ್ಷಗಳಿಂದ ಕೆಲಸಗಾರರು ಕೇಳುತ್ತಿರುವ ಒಂದು ಕೋರಿಕೆ ತುಟ್ಟಿಯಾಗುತ್ತಿರುವ ಮಾರುಕಟ್ಟೆಯ ಅನಿವಾರ್ಯತೆಗೆ ತಕ್ಕಂತೆ ಫೆಡರಲ್ ಕನಿಷ್ಟ ಸಂಬಳವನ್ನು ಏರಿಸಬೇಕೆಂಬುದು. ಪ್ರಸ್ತುತ ಘಂಟೆಯೊಂದಕ್ಕೆ ನೀಡುವ 7.5 ಅಮೆರಿಕನ್ ಡಾಲರ್‍ಗಳಿಂದ ಪ್ರತೀ ಘಂಟೆಯ ಕೆಲಸಕ್ಕೂ 10 ಡಾಲರ್ ಕನಿಷ್ಟ ಸಂಬಳ ಎಂಬ ಕಾನೂನನ್ನು ತರಲಿದ್ದಾರೆ. ಬಡತನ, ಗ್ಯಾಜೆಟ್‍ಗಳು, ಮನೆ ಹಾಗೂ ಸಣ್ಣ ಖುಷಿಯಿಂದ ವಂಚಿತರಾಗುತ್ತಿರುವ ಅಮೆರಿಕದ ಬಡ ಮಧ್ಯಮದ ಕೆಲಸಗಾರರಿಗೆ ಈ ಗೆಲುವಿನಿಂದ ಸಿಗುತ್ತಿರುವ ಕೊಡುಗೆಯಾಗಿದೆ. ಹಿಲರಿ ತಾವು ಗೆದ್ದರೆ ಈ ಕನಿಷ್ಟ ಸಂಬಳವನ್ನು ಘಂಟೆಗೆ 12 ಡಾಲರ್‍ಗಳಿಗೆ ಏರಿಸುವ ಪ್ರಸ್ತಾಪವಿಟ್ಟಿದ್ದರು.

17. ಇನ್ನು ಬಡವರು, ಪದವಿ ಪೂರ್ಣಗೊಳಿಸದವರು, ನಿರುದ್ಯೋಗಿಗಳು, ಬಿಳಿ ವರ್ಣಿಯರು ಇತ್ಯಾದಿ ತಮ್ಮ ಕೋರ್ ಬೆಂಬಲಿಗರಿಗೆ ಟ್ರಂಪ್‍ರ ಟ್ರಂಪ್‍ಕಾರ್ಡ್ ಯೋಜನೆಗಳು ಇನ್ನಷ್ಟೇ ಬೆಳಕು ಕಾಣಬೇಕಿವೆ.

ಇವೇ ಕಾರಣಗಳಿಂದ ಅಮೆರಿಕ ಇತರಿಗಿಂತ ಭಿನ್ನ ವ್ಯಕ್ತಿತ್ವ ಹೊಂದಿರುವ ಟ್ರಂಪ್‍ರನ್ನು ಆರಿಸಿದೆ. ಜೊತೆಗೆ ಒರ್ವ ಮಹಿಳೆಯನ್ನು ಅಧ್ಯಕ್ಷೆಯಾಗಿ ಸ್ವೀಕರಿಸಲಾಗದ ‘ಆಧುನಿಕ’ ಅಮೆರಿಕನ್ ಸಂಪ್ರದಾಯವಾದಿ, ಪುರುಷಪ್ರಾಧಾನ್ಯ ಮನಸ್ಥಿತಿಯೂ ಬೆಳಕಿಗೆ ಬಂದಿದೆ. ಅಮೆರಿಕವನ್ನು ಶ್ರೇಷ್ಟವಾಗಿಸುವ ಪಣ ತೊಟ್ಟಿರುವ ಟ್ರಂಪ್ ಈ ಪ್ರಯತ್ನದಲ್ಲಿ ಏಕಾಂಗಿಯಾಗಿ ಉಳಿಯದೆ, ಅಮೆರಿಕವನ್ನೂ ಏಕಾಂಗಿಗೊಳಿಸದೆ ವಿಶ್ವವನ್ನು ಜೊತೆಗೆ ಕೊಂಡೊಯ್ಯಬೇಕಾದ ಅನಿವಾರ್ಯತೆಯಿದೆ. ಅಮೆರಿಕ ಹಾಗೂ ವಿಶ್ವವೇ ಸಂಧಿಕಾಲದಲ್ಲಿ ನಿಂತಿರುವಾಗ 21ನೇ ಶತಮಾನಕ್ಕೆ ಟ್ರಂಪ್ ಸ್ಪಷ್ಟ ದಿಕ್ಕು ತೋರಿಸುವಂತಾಗಲಿ. ಭಾರತದಂತಹ ಶ್ರೇಷ್ಟ ದೇಶದ ಜೊತೆಗೆ ಉತ್ತಮ ಬಾಂಧವ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ಅಮೆರಿಕದ ಪ್ರಗತಿ ಹಾಗೂ ವಿಶ್ವದ ಪ್ರಗತಿ ಸಾಧ್ಯವಾಗಲಿ. ಚುನಾವಣೆ ಗೆದ್ದು ತಮ್ಮ ಮೊದಲ ಭಾಷಣದಲ್ಲಿ ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ಯುವ ಮಾತುಗಳನ್ನು ಆಡುತ್ತಿದ್ದಾರೆ. ಇದೊಂದು ಭರವಸೆಯ ಉತ್ತಮ ನಾಯಕತ್ವದ ನಡೆಯೂ ಹೌದು. ಯಾರು ಏನೇ ಹೇಳಿದರು ಇನ್ನು ಕೆಲವು ವರ್ಷಗಳು ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿರಲಿದ್ದಾರೆ. ಈ ವಾಸ್ತವದ ತಳಹದಿಯ ಮೇಲೆ ಭಾರತ ತನ್ನ ಭವಿಷ್ಯವನ್ನು ಸುಂದರಗೊಳಿಸುವ, ಅಮೆರಿಕದೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಯತ್ನಕ್ಕೆ ಸಮರೋಪಾದಿಯಲ್ಲಿ ಚಾಲನೆ ನೀಡಬೇಕಿದೆ.

ಕೊನೆಯಲ್ಲಿ: ಚುನಾವಣೆಗೂ ಮೊದಲೇ, ಗೂಗಲ್ ಸರ್ಚ್‍ನಲ್ಲಿ ಟ್ರಂಪ್ ಅಮೆರಿಕದ 38 ರಾಜ್ಯಗಳಲ್ಲಿ ಹಿಲರಿಯವರನ್ನು ಸೋಲಿಸಿದ್ದಾರೆ. ಇದು ಅಮೆರಿಕನ್ನರಿಗೆ ಟ್ರಂಪ್ ಬಗೆಗೆ ಇರುವ ಆಸಕ್ತಿಯನ್ನೂ, ಕುತೂಹಲವನ್ನೂ ಹಾಗೂ ಅವರನ್ನು ತಮ್ಮದೇ ಸುಪ್ತ ಮನಸ್ಸಿನ ಕನ್ನಡಿ ಎಂದು ನಂಬಿರುವ ಅಮೆರಿಕನ್ ಯೋಚನೆಗೆ ಸಾಕ್ಷಿ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments