ನನ್ನ ಚೊಚ್ಚಲ ಪರ್ವತಾರೋಹಣ
– ಅಭಿಜಿತ್ ಕೆ ಜಾಯಕ್ಕನವರ
ನನಗೆ ತುಂಬಾ ಖುಷಿಯಾದಾಗ ಬರೆಯಬೇಕೆನಿಸುತ್ತದೆ. ಈಗ ಬರೆಯುತ್ತಿರುವ ಖುಷಿಗೆ ಕಾರಣ ಮೂರು. ಒಂದು ಸತತ ೭೦ ಘಂಟೆಗಳ ನಂತರ ಸುಖವಾಗಿ ನಿದ್ರೆ ಮಾಡಿದ್ದು, ಎರಡು ನನ್ನ ಮೊದಲ ಪರ್ವತಾರೋಹಣವನ್ನು ಯಶಸ್ವಿಯಾಗಿ ಮುಗಿಸಿದ್ದು, ಮೂರು ಈ ಎರಡಕ್ಕಿಂತಲೂ ಮುಖ್ಯವಾದದ್ದು ಅದೆಂದರೆ ಪರ್ವತಾರೋಹಣದ ಸಮಯದಲ್ಲಿ ನಾನು ಮತ್ತು ನನ್ನ ನಾಲ್ಕು ಜನ ಗೆಳೆಯರು ಕೈಗೊಂಡ ಒಂದು ಸಣ್ಣ ಕಾರ್ಯ ( an initiative ). ಈ ನನ್ನ ಪರ್ವತಾರೋಹಣದ ಮೇಲೆ ಒಂದು ಸುದೀರ್ಘವಾದ ಪ್ರಭಂದವನ್ನೇ ಬರೆಯಬಹುದಾದರೂ, ನನ್ನ ಮನಸ್ಸು ಆ ಚಿಕ್ಕ ಘಟನೆಯೊಂದನ್ನು ಮಾತ್ರ ಪ್ರಸ್ತಾಪಿಸಲು ಹಾತೊರೆಯುತ್ತಿದೆ.
ನಾವು ಪರ್ವತಾರೋಹಣಕ್ಕೆಂದು ಹೋಗಿದ್ದು ಕುಕ್ಕೆ ಸುಬ್ರಮಣ್ಯಂಗೆ, ಅಲ್ಲಿರುವ ಕುಮಾರಪರ್ವತವನ್ನು ಏರಿ, ನಾವು ನಿನ್ನನ್ನು ಮೆಟ್ಟಿ ಬಂದೆವು ಎಂದು ಅದಕ್ಕೆ ಹೇಳೋಣ ಎಂದುಕೊಂಡು. ಅದಕ್ಕಾಗಿ ನಮ್ಮ ತಯಾರಿ ಮೂರು ದಿನದ ಹಿಂದಿನಿಂದಲೇ ನಡೆಯುತ್ತಿತ್ತು. ಟೆಂಟ್, ತಿಂಡಿ, ವಾಟರ್ ಬಾಟಲಿ, ಮೆಡಿಸಿನ್, ಹೀಗೆ ಮುಂತಾದವುಗಳನ್ನು , ಆಗಲೇ ಪರ್ವತಾರೋಹಣವನ್ನು ಮಾಡಿ ಬಂದವರನ್ನು ಕೇಳಿ, ಪಟ್ಟಿ ಮಾಡಿ, ಎಲ್ಲ ಸಿದ್ಧತೆಗಳಿಂದಲೇ ಹೋಗಿ ಬೆಳಿಗ್ಗೆ ೮ ಘಂಟೆಗೆ ಪರ್ವತ ಏರಲು ಶುರು ಮಾಡಿದೆವು. ಏರುವಾಗ ಶಕ್ತಿಗೆಂದು ಮಧ್ಯದಾರಿಯಲ್ಲಿ ಚಾಕಲೇಟ್, ಗ್ಲುಕೋಸ್, ಹಣ್ಣಿನ ರಸ ಸೇವಿಸುತ್ತ ಹರಟುತ್ತ ಪರ್ವತದ ತುದಿ ಮುಟ್ಟಿದಾಗ ಬರೋಬ್ಬರಿ ಸಂಜೆ ೫ ಘಂಟೆ. ಆಗಲೇ ಕತ್ತಲಾಗತೊಡಗಿತ್ತು. ಬೇಗ ಬೇಗ ಟೆಂಟ್ ಹಾಕಿ, ಸ್ವಲ್ಪ ಹೊತ್ತು ವಿಶ್ರಮಿಸಿ ರಾತ್ರಿಯಾಗುವ ವೇಳೆಗೆ ನಡುವೆ ಬೆಂಕಿ ಹಾಕಿಕೊಂಡು ತಂದ ತಿಂಡಿ ತಿನ್ನುತ್ತಿರುವಾಗ ನಮ್ಮ ಮಾತುಗಳು ಶುರುವಾದವು. ದಿಕ್ಕು ದೆಸೆಯಿಲ್ಲದೆ ನಮ್ಮ ಮಾತುಗಳು ಸರಾಗವಾಗಿ ಆ ಪರ್ವತದ ತಿಳಿ ತಂಗಾಳಿಯಂತೆ ಬೀಸುತ್ತಿದ್ದವು. ಸಾಮಾನ್ಯವಾಗಿ ನಮ್ಮ ಮಾತುಗಳು ಮೌಲ್ಯಗಳು, ಮನುಷ್ಯನ ಕರ್ತವ್ಯ ಇತ್ಯಾದಿ ಇಂಥಹ ವಿಷಯಗಳ ಸುತ್ತಲೇ ಸುಳಿದಾಡುತ್ತಿದ್ದವು. ಆ ಮಧ್ಯೆ ನಮಗೆ ಅರಿವಾದದ್ದೇನೆಂದರೆ ನಾವು ಮಾತನಾಡುತ್ತಿರುವುದಕ್ಕೂ ಮತ್ತು ನಾವು ಪರ್ವತ ಏರುವಾಗ ಮಾಡಿದ ಕಾರ್ಯಕ್ಕೂ ಬಂದ ವಿವಾದ. ನಾವು ಮಾಡಿದ ಆ ದುಷ್ಕಾರ್ಯ ಏನೆಂದರೆ, ಸ್ವರ್ಗವನ್ನೂ ಮೀರುವಂಥ ಈ ಸುಂದರ ಪ್ರಕೃತಿಯನ್ನು ನಾವು ಸೇವಿಸುತ್ತಾ ಬಂದ ತಿಂಡಿಗಳ ಪ್ಲಾಸ್ಟಿಕ್ ಹೊದಿಕೆಗಳಿಂದ ಮಲೀನಗೊಳಿಸಿದ್ದು. ಆಗ ನಮಗೆ ನಾವು ಈ ಪ್ರಕೃತಿಯನ್ನ ಮಲೀನಗೊಳಿಸುತ್ತಿದ್ದೇವೆ ಎಂಬ ಚಿಕ್ಕ ಜ್ಞಾನವೂ ಇಲ್ಲದೆ ಈ ಪರ್ವತವನ್ನು ಮೆಟ್ಟುತ್ತೇವೆ ಎಂಬ ಅಹಂಕಾರದಿಂದ ಹತ್ತಿ, ಇಷ್ಟು ಹೊತ್ತು ಮೆಟ್ಟಿ ನಿಂತಿದ್ದೇವೆ ಎಂದು ಬೀಗುತ್ತಿದ್ದ ನಮಗೆ ನಾಚಿಗೆಯಾಗತೊಡಗಿತು. ನಮ್ಮ ಕೈಲಾದಷ್ಟು ಏನಾದರೂ ಮಾಡಿ ಹೋಗಬೇಕಲ್ಲ ನಾವು ನಾಳೆ ಈ ಪರ್ವತದಿಂದ ನಿರ್ಗಮಿಸುವ ಮುನ್ನ ಎಂದುಕೊಂಡು, ಎಲ್ಲರೂ ಒಂದು ಯೋಜನೆ ಹಾಕಿಕೊಂಡು ಟೆಂಟ್ಗೆ ವಿಶ್ರಮಿಸಲು ಹೋದೆವು.
ಬೆಳಗ್ಗೆ ಕೆಳಗೆ ಇಳಿಯಲು ತಯಾರಾಗಿ ನಿಂತಾಗ ನಾವು ಐದೂ ಜನರೂ ಬ್ಯಾಗ್ಗಳನ್ನು ಹೆಗಲಿಗೇರಿಸಿ ಸೊಂಟಕ್ಕೊಂದೊಂದು ಪ್ಲಾಸ್ಟಿಕ್ ಚೀಲ ಕಟ್ಟಿಕೊಂಡು ದಾರಿಯಲ್ಲಿನ ಪೇಪರ್ , ಪ್ಲಾಸ್ಟಿಕ್ಗಳನ್ನು ಆರಿಸುತ್ತ ಹೋಗೋಣ ಎಂದು ಹೊರಟೆವು. ಈ ಯೋಜನೆ ವಿಚಿತ್ರ ಎನಿಸಿದರೂ ಮಜವಾಗಿತ್ತು. ಇತರ ಪರ್ವತಾರೋಹಿಗಳಿಗೂ ಸ್ವಚ್ಚ ಪರಿಸರದ ಬಗ್ಗೆ ಎಚ್ಚರಿಸಬೇಕೆಂಬುದು ನಮ್ಮ ಉದ್ದೇಶವಾಗಿತ್ತು. ಆದರೆ ಮಾತುಗಳಿಂದಾಗಲಿ, ಸ್ಲೋಗನ್ ಚೀರಿಕೊಂಡು ಹೋಗುವುದರ ಬದಲಿಗೆ ಸ್ವತಃ ನಾವೇ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ಜಾಗೃತಿ ಮೂಡಿಸುವ ಉದ್ದೇಶ. (talk does not cook rice, ಎಲ್ಲೋ ಕೇಳಿದ ನೆನಪು ) ಎಂದಿನಂತೆ ಆ ದಿನವೂ ತುಂಬಾ ಪರ್ವತಾರೋಹಿಗಳು ಪರ್ವತ ಏರುತ್ತಿದ್ದರು. ಹೀಗೆ ನಮಗೆ ಎದುರಾಗುತ್ತಿದ್ದವರಲ್ಲಿ ಕೆಲವರು ಗಮನಿಸದೆ ಮುಂದೆ ಸಾಗುತ್ತಿದ್ದರು, ಕೆಲವರು ನಮ್ಮನ್ನು ನೋಡಿ ನಕ್ಕು ಮುಂದೆ ಸಾಗಿದರು ( ಹುಚ್ಚರು ಎಂದುಕೊಂಡರೋ ಏನೋ, but who cares), ಕೆಲವರು ನಿಂತು ಏನು ಮಾಡುತ್ತಿದ್ದೀರಿ ಎಂದು ಕೇಳುತ್ತಿದ್ದರು. ಹಾಗೆ ಕೇಳಿದವರಿಗೆ ಮಾತ್ರ ನಾವು ನಮ್ಮ ಯೋಜನೆಯನ್ನು ವಿವರಿಸಿ, ಅವರಿಗೂ ಕೂಡ ಈ ಸಂದೇಶವನ್ನು ಇತರರಿಗೆ ಸಾಗಿಸಲು ಹೇಳುತ್ತಾ ಮುಂದೆ ಸಾಗುತ್ತಿದ್ದೆವು. ತುಂಬಾ ಜನ ಮೆಚ್ಚುಗೆ ವ್ಯಕ್ತಪಡಿಸಿ ತಾವು ಕೂಡ ಈ ಪರ್ವತದ ಸೌಂದರ್ಯ ಕಾಪಾಡಲು ಭಾಗಿಯಗುತ್ತೆವೆಂದು ಆಶ್ವಾಸನೆ ನೀಡುತ್ತ ಹೋದರು.
ಕೆಳಗೆ ಬರುವ ಹೊತ್ತಿಗೆ ನಾವು ಸುಮಾರು ೧೦೦ ಜನಕ್ಕಾದರೂ ನಮ್ಮ ಸಂದೇಶ ತಲುಪಿಸಿದ್ದೆವು. ತುಂಬಾ ಖುಷಿಯಾಯಿತು. ಆದರೆ ಈ ಖುಷಿ ಕುಮಾರಪರ್ವತವನ್ನು ಮೆಟ್ಟಿ ಬಂದ ಖುಷಿಯಾಗಿರಲಿಲ್ಲ ಬದಲಿಗೆ ನಾವು ಪ್ರಾಯಶ್ಚಿತಕ್ಕೆಂದು ಮಾಡಿದ ಈ ಹೊಸ ಯೋಜನೆಯ ಸಫಲತೆಯ ಖುಷಿಯಾಗಿತ್ತು. ‘ತಪ್ಪು ಮಾಡೋದು ಸಹಜ, ತಿದ್ದಿಕೊಳ್ಳೋದು ಮನುಜ’ ಎಂದು ಒಬ್ಬ ಕವಿ ಹೇಳಿದ್ದು ನೆನಪಾಗಿ ಎಲ್ಲರಿಗೂ ಹೇಳಿದೆ. ಆಗಲೇ ಸಂಜೆಯಾಗುತ್ತಿತ್ತು. ನಮ್ಮ ಬಸ್ ಬೆಂಗಳೂರಿಗೆ ರಾತ್ರಿ ೯ ಘಂಟೆಗೆ ಇದ್ದಿದ್ದರಿಂದ ಬೇಗ ಬೇಗ ಹೊರಟೆವು . ಬೆಳಿಗ್ಗೆ ಬಸ್ ಬೆಂಗಳೂರು ತಲುಪಿತ್ತು. ರೂಂಗೆ ಬಂದಿದ್ದೆ ತಡ, ನಿದ್ರಾದೇವಿ ಆವರಿಸಿದ್ದಳು. ದೇಹದಲ್ಲಿ ತ್ರಾಣವೇ ಇಲ್ಲದಂತಾಗಿತ್ತು. ೧೨ ಘಂಟೆಗಳ ಸುಧೀರ್ಘವಾದ ನಿದ್ದೆ ಮಾಡಿದೆ. ನನಗೆ ಯಾವಾಗ ಈ ಘಟನೆಯ ಬಗ್ಗೆ ಬರೆಯುತ್ತೇನೋ ಎಂದು ಮನಸ್ಸು ಹಾತೊರೆಯುತ್ತಿತ್ತು. ನಮ್ಮ ತಂಡದ ಈ ಕಾರ್ಯ ಇನ್ನಷ್ಟು ಜನರನ್ನು ತಲುಪಲಿ ಎಂಬ ಆಶಯ.. ಈಗ ಬರೆದೆ.. ಮನಸ್ಸು ತಿಳಿಯಾಗಿದೆ..