ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 11, 2016

3

ನಿದ್ದೆಯ ಖರಾಮತ್ತು..!

‍ನಿಲುಮೆ ಮೂಲಕ

– ಗೀತಾ ಹೆಗಡೆ

m_id_401088_kids_sleepನಿದ್ದೆ ಪರಮಾತ್ಮನ ವರಪ್ರಸಾದ. ಅದಿಲ್ಲ ಅಂದಿದ್ದರೆ ಜಗತ್ತು ಹೇಗಿರುತ್ತಿತ್ತು?  ಜೀವನದ ಗತಿ ಏನಾಗಿರುತ್ತಿತ್ತು? ಆಹಾರ, ವ್ಯವಹಾರ, ಕೆಲಸ, ಕಾರ್ಯ ಯಾವ ರೀತಿ ನಡೀತಿತ್ತು? ಜನ ಸಂಖ್ಯೆ ಕಡಿಮೆ ಆಗಿರುತ್ತಿತ್ತೆ? ಸೂರ್ಯನಿಲ್ಲದ ಕತ್ತಲೆಯ ಸಾಮ್ರಾಜ್ಯದಲ್ಲಿ ಜನ ಇನ್ನೂ ಹೆಚ್ಚಿನ ಮೋಜು ಮಸ್ತಿಯಲ್ಲಿ ಪಾಲ್ಗೊಳ್ಳುತ್ತಿದ್ದರೆ? ಒಂದಾ ಎರಡಾ? ತಲೆತುಂಬಾ ಹುಳುಗಳ ಹರಿದಾಟ. ಇಂಥ ಯೋಚನೆ ಬರೋದೆ ನಿದ್ದೆಯಿಲ್ಲದ ರಾತ್ರಿಗಳಲ್ಲಿ.. ಭಗವಂತನ ಸಾಕ್ಷಾತ್ಕಾರ ಆದ ಹಾಗೆ.

ಸೂರ್ಯ ಮಂಡಲದ ತುಂಬಾ ನಕ್ಷತ್ರಗಳ ಕಣ್ಗಾವಲು ಇದ್ದಂತೆ ಭಗವಂತ ನಮಗೆ ನಿದ್ದೆಯನ್ನೆ ಕಣ್ಗಾವಲಾಗಿ ಇಟ್ಟಿದ್ದಾನೆ ಅನಿಸುತ್ತದೆ. ಛೆ! ಇವತ್ತೊಂದಿನ ನಿದ್ದೆ ಮಾಡದೆ ಬೆಳಗಿನವರೆಗೂ ಏನಾದರೂ ಓದುತ್ತಿರೋಣ, ಬರೆಯುತ್ತಿರೋಣ, ಟೀವಿ ನೋಡೋಣ.. ಹೀಗೆ ಇತ್ಯಾದಿ ಅವರವರ ಭಾವಕ್ಕೆ ತಕ್ಕಂತೆ ಅನಿಸಿದರೂ ತಾರಾ ಮಂಡಲದಲ್ಲಿ ನಡೆಯುವ ಸೂರ್ಯ ಚಂದ್ರರ ಪಾಳಿಯ ಕೆಲಸದಂತೆ ತಪ್ಪದೆ ನಿದ್ದೆ ರಾತ್ರಿ ಕಾಲಿಕ್ಕುತ್ತದೆ. ಉಂಡೊಟ್ಟೆಗೆ ‘ತೇಗಿನ ಸಿಗ್ನಲ್ ಮಗನೆ ಎದ್ದೇಳು ಸಾಕು ತಿಂದಿದ್ದು ನಾ ಬಂದಾಯಿತಲ್ಲ’ ಎಂದು ಎಚ್ಚರಿಸುವಂತೆ. ನಿದ್ದೆ ಕಾಲಿಕ್ಕುವುದು ಆಕಳಿಕೆಯ ಸಿಗ್ನಲ್ ಕೊಟ್ಟು. ಇಲ್ಲೂ ಮಗನೆ ನೀ ಮಲಗು.. ನೀ ಕಡಿದು ಗುಡ್ಡೆ ಹಾಕಿದ್ದು ಸಾಕು..! ಬಿದ್ದುಕೊ ನಾ ಅಡಿಯಿಟ್ಟಾಯಿತಲ್ಲ..! ಹೇಗಿದೆ ನೋಡಿ ಸಿಗ್ನಲ್ಗಳ ಸಮಾಚಾರ. ದೇಹವೆಂಬ ಬಸ್ಸಿಗೆ ಭಗವಂತ ಇಟ್ಟ ಹಾರನ್!

ರಾತ್ರಿನೆ ಯಾಕೆ ನಿದ್ದೆ ಬರಬೇಕು?  ಅದೂ ಎಲ್ಲರಿಗೂ? ಕೆಲವರಿಗೆ ರಾತ್ರಿ ಕೆಲವರಿಗೆ ಹಗಲು.. ಯಾಕೆ ಹಾಗಿಲ್ಲ? ನೋಡಲು ಮನುಷ್ಯ ಒಬ್ಬರು ಇದ್ದ ಹಾಗೆ ಮತ್ತೊಬ್ಬರು ಇಲ್ಲ.  ಇಲ್ಲಿ ತಾರತಮ್ಯ. ಬುದ್ಧಿನೂ ಅಷ್ಟೆ.  ಜೀವನ ಶೈಲಿ, ಧ್ವನಿ, ಮಾತು, ಬಣ್ಣ  ಇತ್ಯಾದಿ ಎಲ್ಲ ಬೇರೆ ಬೇರೆ. ಆದರೆ ಈ ನಿದ್ದೆ ಮಾತ್ರ ಪ್ರಾಣಿ ಪಕ್ಷಿ ಎಲ್ಲರಿಗೂ ಒಂದೆ. ಯಾಕೀಗೆ?ನೀವು ಕೇಳಬಹುದು; ಹಗಲೂ ನಿದ್ದೆ ಬರುತ್ತಲ್ಲ ? ಮಾಡ್ತೀವಲ್ಲ.!  ಅದು ಬೇರೆ.  ಕೆಲಸದಲ್ಲಿ ರಾತ್ರಿ ಪಾಳಿ ಮಾಡಿನೊ ಕಾಯಿಲೆಯಿಂದಲೊ ಇತ್ಯಾದಿ ನಿದ್ದೆ ಮಾಡೋಕೆ ತೊಡಕಾಗಿರುವುದರಿಂದ ಹಗಲು ನಿದ್ದೆ ಬರುತ್ತದೆ. ಆದರೆ ನಿಯಮದಂತೆ ರಾತ್ರೀನೇ ನಿದ್ದೆ ಮಾಡಬೇಕು. ನಿಶ್ಯಬ್ಧ ಮೌನದಲ್ಲಿ ಜನ ಜೀವನ ಸ್ಥಬ್ಧವಾಗಬೇಕು. ದೇಹ ಜಡವಾಗಬೇಕು ಜಗತ್ತನ್ನೆ ಮರೆಯಬೇಕು!

ಆದರೆ ಈ ಆಧುನಿಕ ಜಗತ್ತಿನಲ್ಲಿ ಪೃಕೃತಿ ನಿಯಮವನ್ನೂ ಮೀರಿ ಬದಲಾವಣೆ ಬರುತ್ತಿದೆ. ಇದು ಮನುಷ್ಯನ ಆರೋಗ್ಯದ ಮೇಲೆ ದುಶ್ಪರಿಣಾಮ ಬೀರುತ್ತಿದೆ. ನಿದ್ದೆ ಅನ್ನೋದು ದೇಹದ ದಣಿವನ್ನು ಆರಿಸಿ ವಿಶ್ರಾಂತಿ ಕೊಟ್ಟು ಅಂಗಾಂಗಳಲ್ಲಿ ನವ ಚೈತನ್ಯ ಉಂಟು ಮಾಡುತ್ತದೆ. ಸರಿಯಾಗಿ ನಿದ್ದೆ ಮಾಡಿದ ಮನುಷ್ಯ ದಿನವೆಲ್ಲ ಲವಲವಿಕೆಯಿಂದ ಇರಲು ಸಾಧ್ಯ.  ಮನುಷ್ಯನಿಗೆ ನಿದ್ದೆ ಒಂದು ವರ ಪ್ರಸಾದ. ಕೆಲವರು ಕೂತಲ್ಲೆ ಎಲ್ಲಂದರಲ್ಲಿ ನಿದ್ದೆ ಮಾಡ್ತಾರೆ ರಾತ್ರಿ ಆಗಲಿ ಹಗಲಾಗಲಿ ಟೈಂ ಸಿಕ್ಕಿದಾಗ. ಇಂಥವರನ್ನು ನೋಡಿದಾಗ ಇವರೆಷ್ಟು ಪುಣ್ಯವಂತರಪ್ಪಾ ಅಂತ ಅಂದುಕೊಂಡಿದ್ದಿದೆ. ಅದರಲ್ಲೂ ರಾತ್ರಿ ಪ್ರಯಾಣ ಮಾಡುವಾಗ, ಎಲ್ಲರೂ ನಿದ್ದೆ ಮಾಡುತ್ತಿರುವಾಗ ಕೂತಲ್ಲೆ ಒದ್ದಾಡತಾ ಇರೋ ಸೀಟಲ್ಲೇ ಮಗ್ಗಲು ಬದಲಾಯಿಸುತ್ತ ಕಳೆಯೊ ರಾತ್ರಿ.. ಒಬ್ಬೋಬ್ಬರ ಗೊರಕೆ ಸದ್ದು, ಆ ರಾತ್ರಿಯ ನಿರವತೆಯಲ್ಲಿ ನಿದ್ದೆ ಬರದ ಒದ್ದಾಟದಲ್ಲಿ.. ಎದ್ದು ಹೋಗಿ ಗುದ್ದು ಕೊಟ್ಟು ಎಬ್ಬಿಸಿಬಿಡಬೇಕೆನ್ನುವಷ್ಟು ಮನಸ್ಸು ವಿಕಾರವಾಗಿದ್ದಿದೆ.  ಇದು ಎಲ್ಲೆಂದರಲ್ಲಿ ಆರಾಮಾಗಿ ನಿದ್ದೆ ಮಾಡಲಾಗದವರ ಪ್ರಯಾಣದಲ್ಲಿಯ ಒದ್ದಾಟ. ಹಗಲು ಪ್ರಯಾಣ ಸಾಕಪ್ಪಾ, ನಿದ್ದೆ ಇಲ್ಲದಿದ್ದರೆ ಕಷ್ಟ ಆಗುತ್ತದೆ.  ರಾತ್ರಿ ಪ್ರಯಾಣ ನಾ ಒಲ್ಲೆ ಅನ್ನುತ್ತದೆ ಮನಸು. ನಗು ಬರುತ್ತದೆ ಎಂಥಾ ಪ್ರಾಶಸ್ಥ್ಯ ಈ ನಿದ್ದೆಯೆಂಬ ಭೂತಕ್ಕೆ!

ಎಲ್ಲಾದರೂ ಸಮಾರಂಭದ ದಿನಗಳಲ್ಲಿ ಗಜಿಬಿಜಿ ಸದ್ದುಗಳ ನಡುವೆ ರಾತ್ರಿಯ ವಸತಿ ಕಲ್ಪಿಸಿದ ಸ್ಥಳಗಳಲ್ಲಿ ಉದ್ದಕ್ಕೂ ಹಾಸಿದ ಜಮಕಾನದ ಪಲ್ಲಂಗದಲ್ಲಿ ಒತ್ತುವ ನೆಲದ ಹಿಂಸೆ.. ಇಂತಹ ಸ್ಥಳದಲ್ಲಿ ಕೆಲವರಿಗೆ ಏನೂ ಅಲ್ಲ ಎಂಬಂತೆ ಪೊಗದಸ್ಥಾಗಿ ಮಲಗಿದ ತಕ್ಷಣ ನಿದ್ದೆಗೆ ಜಾರಿ, ಗೊರಕೆಯ ಸದ್ದು. ಈ ಕಡೆ ಪಕ್ಕದಲ್ಲಿ ಮಾತಾಡುವವ ಅರೆ ಹೂ ಇಲ್ಲ ಹಾ ಇಲ್ಲ ಆಗಲೇ ಗೊರಕೆ ಹೊಡಿತಾನಲ್ಲ ಇವನು? ಅಂದುಕೊಂಡ ಅನುಭವ ಹಲವರ ಅನುಭವಕ್ಕೆ ಬಂದಿರಬಹುದು. ಅದು ಹೇಗೆ? ಸುಃಖಿಗಳಪ್ಪ ನೀವು ಎಂದು ಬೆಳಿಗ್ಗೆ ಎದ್ದಾಗ ಅವರ ನಿದ್ದೆಗೊಂದು ಶಹಬಾಸ್ ಗಿರಿ ಹೇಳಿರ್ತೀರಿ ಅಲ್ವಾ?

ನಮ್ಮಲ್ಲೊಂದು ಗಾದೆ ಇದೆ “ಚಿಂತೆ ಇಲ್ಲದವ ಸಂತೆಯಲ್ಲೂ ನಿದ್ದೆ ಮಾಡ್ತಾನೆ” ಎಂದು. ಇದು ಹೌದಾದರೂ ಕೆಲವರ ವಿಷಯದಲ್ಲಿ ಸುಳ್ಳು. ಅವರಿಗೆ ಚಿಂತೆ ಇರಲಿ ಇಲ್ಲದಿರಲಿ ಎಲ್ಲಾದರೂ ಸರಿ ನಿದ್ದೆ ಮಾಡೋದೆ ಗೊತ್ತು. ಅವರ ಮೈಂಡ ನಿದ್ದೆಗೆ ಸೆಟ್ ಆಗೋಗಿದೆ.. ಇನ್ನೊಂದು ವಿಷಯ ನಾ ಹೇಳಲೇ ಬೇಕು; ಕೆಲವು ಸಾರಿ ನನ್ನನುಭವಕ್ಕೆ ಬಂದ ವಿಚಾರ. ಒಮ್ಮೆ ಒಂದಷ್ಟು ತಿಂಗಳು ಆಗಾಗ ಬಸ್ಸಿನಲ್ಲಿ ಪ್ರಯಾಣ ಮಾಡುವ ಸಂದರ್ಭ ಎದುರಾಯಿತು. ಪಲ್ಲಂಗದಲ್ಲೆ ಹೊರಳಾಡಿ ನಿದ್ದೆಗಾಗಿ ಗೋಳಾಡುವ ಗೀಳಿರುವ ನನಗೆ ಅದೇನೊ ನೋಡ್ರಿ, ಆಗಾಗ ಪ್ರಯಾಣ ಮಾಡಿ ನಿದ್ದೆನೂ ಒಗ್ಗೋಗಿತ್ತೊ ಏನೊ.. ಬಸ್ಸು ಹೊರಟ ತಕ್ಷಣ ನಾನೂ ನಿದ್ದೆಗೆ ಜಾರಿದ್ದಿದೆ. ಅಂದರೆ ನಿದ್ದೆಗೂ ಗತಿ ಇಲ್ಲ ಅಂದಾಗ ಅದೂ ಎಲ್ಲೆಂದರಲ್ಲಿ ಒಗ್ಗಿಕೊಳ್ಳುವ ಸ್ವಭಾವವಿರಬಹುದೆ?  ಗೊತ್ತಿಲ್ಲ. ಆದರೆ ಮನೆಯಲ್ಲಿ ಮಲಗಿದಾಗಲೂ ಕೆಲವು ದಿನ ಕಣ್ಣು ಮುಚ್ಚಿದರೆ ಸಾಕು ಬಸ್ಸಿನಲ್ಲಿ ಪ್ರಯಾಣಿಸುವಂತೆ ತಲೆ ಗಿರಿ ಗಿರಿ ಅದೇ ಅನುಭವ.

ಎಂಥಾ ದೇಹವಪ್ಪ ಇದು? ಯಾವ ರೀತಿ ರಚನೆ. ಜ್ವರ ಬಂದರೆ ಸಾಕು ಸದಾ ನಿದ್ದೆಯ ಮಂಪರು. ಇಡೀ ದಿನ ನಿದ್ದೆ ನಿದ್ದೆ. ನುಂಗುವ ಮಾತ್ರೆಗಳ ಪ್ರಭಾವವೇ? ಅದೆ ಜ್ವರ ಬಿಟ್ಟು ಎರಡು ದಿನ ಯಾಕೋ ನಿದ್ದೆನೆ ಬರುತ್ತಿಲ್ಲ. ರಾತ್ರಿ ಹಗಲು ಮತ್ತೆ ಇದೇ ಒದ್ದಾಟ. ಇಲ್ಲಿ ನಿದ್ದೆಗೆ ನಿದ್ದೆ ಮಾಡಿ ಮಾಡಿ ಸಾಕಾಗೋಗಿರುತ್ತಾ? ಅಥವಾ ಮಲಗೀ ಮಲಗಿ ಸುಸ್ತಾಗಿರೊ ದೇಹಕ್ಕೆ ನಿದ್ದೆ ಬೇಡಾಗಿರುತ್ತೊ ಹೇಗೆ.. ಏನೋ ಗೊತ್ತಿಲ್ಲ..! ಈ ನಿದ್ದೆ ಎಲ್ಲಿ ಓಡೋಗಿರುತ್ತದೆ? ಮತ್ತೆರಡು ದಿನಗಳಲ್ಲಿ ಮತ್ತೆ ಹೇಗೆ ವಕ್ಕರಿಸಿಕೊಳ್ಳುತ್ತದೆ? ಬರೀ ಪ್ರಶ್ನೆ ಕಂಡ್ರೀ..!

ಕೆಲವು ಸಾರಿ ಯಾರೋ ಆಡಿದ ಮಾತಿಗೋ, ಮನೆಯಲ್ಲಿ ಶಾಂತಿ ಇಲ್ಲದಕ್ಕೋ, ಆಫೀಸ್ ಟೆನ್ಷನ್ನಿಗೊ ಇತ್ಯಾದಿ ನಿದ್ದೇನೆ ಬರದೇ ಒದ್ದಾಡುತ್ತೇವೆ. ಹಾಗಾದರೆ ಚಿಂತೆಗೂ ನಿದ್ದೆಗೂ ಎಣ್ಣೆ ಶೀಗೆಕಾಯಿ ಸಂಬಂಧವಾ?  ಅಥವಾ ಸೂರ್ಯ ಚಂದ್ರರಂತೆ ಅವರವರಲ್ಲೆ ಒಪ್ಪಂದವೇನಾದರೂ ಏರ್ಪಟ್ಟಿದೆಯಾ? ರಾತ್ರಿ ಹಗಲು ಆದ ಕೂಡಲೇ ಎಲ್ಲಿ ಹೋಗುತ್ತದೆ ಈ ನಿದ್ದೆ?  ಇಲ್ಲೂ ಒಂದು ಖರಾಮತ್ತು ನಿದ್ರೆಯದ್ದು.; ರಾತ್ರಿ ನಿದ್ದೆ ಇಲ್ಲ ಅಂದರೆ ಹಗಲಲ್ಲಿ ನಿದ್ದೆ ಮಾಡಿ ಬಡ್ಡಿ ತೀರಿಸಿಕೊಳ್ಳೊ ಈ ನಿದ್ದೆ ಬಲು ಪಂಚರಂಗಿ. ದೇಹ, ಮನಸ್ಸು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಆಟ ಆಡಿಸೊ ಜಾಣೆ. ಅಬ್ಬಾ! ನಿದ್ದೆಯೆ…?

ನಿದ್ದೆ ಮಾಡೋದೇ ಇಲ್ಲದಿದ್ದರೆ ಜಗತ್ತು ಬಹುಶಃ ಇನ್ನಷ್ಟು ಬಡಿದಾಟದ ಗೂಡಾಗುತ್ತಿತ್ತೊ ಏನೋ. ಅಹಾರದ ಕೊರತೆ, ಮನುಷ್ಯ ಮನುಷ್ಯನ ನಡುವೆ ಸಂಘರ್ಷ.. ಒಂದಾ ಎರಡಾ?  ಊಹಿಸಲು ಅಸಾಧ್ಯ. ಸಾಕು ನೀ ಎಚ್ಚರದಲ್ಲಿ ಇದ್ದು ಎಗರಾಡೋದು.. ತೆಪ್ಪಗೆ ಮಲಗಿ ನನಗೂ ಸ್ವಲ್ಪ ವಿಶ್ರಾಂತಿ ಕೊಡು ಹೇ ಮನುಜ, ಅಂತ ದೇವರೂ ನಿದ್ದೆ ಜೊತೆ ಒಡಂಬಡಿಕೆ ಮಾಡಿಕೊಂಡಂತಿದೆ. ಅದಕೆ ಯಾರ ಪ್ರಯತ್ನಕ್ಕೂ ಮಣಿಯದೆ, ನಿದ್ದೆ ಗೆಟ್ಟವರ ದಿನದ ಉತ್ಸಾಹ, ಆರೋಗ್ಯ ಕಸಿದುಕೊಂಡು ದೇವರನ್ನೇ ಗೆದ್ದ ಭೂಪ ನಾನು ಎಂದು ಈ ಮಾಯಾಂಗನೆ ಎಲ್ಲರನ್ನೂ ಆಟ ಆಡಿಸುತ್ತಿರಬಹುದೆ? ನೋಡಿದ್ರಾ?  ವೈಜ್ಞಾನಿಕ ಕಾರಣ ಏನೇ ಇರಬಹುದು; ವಿಚಾರ ಮಾಡ್ತಾ ಮಾಡ್ತಾ ನಿದ್ದೆಯಿಲ್ಲದ ರಾತ್ರಿಯಲ್ಲಿ ಮೆದುಳಿಗೆ ಬಂದದನ್ನು ಬರೆದ ಬರಹವಿದು.

ಹಂಗೆ ಮನಸಲ್ಲಿ ಮೂಡಿದ ಕಲ್ಪನೆ
ರಾತ್ರಿ ನಿದ್ರೆ ಚಂದ್ರ – ತಂಪು ತಂಪು ದೇಹಕ್ಕೆ ಹಿತ.
ಹಗಲು ನಿದ್ರೆ ಸೂರ್ಯ – ಬಿಸಿ ಬಿಸಿ ದೇಹಕ್ಕೆ ಅಹಿತ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments