ಸರ್ಕಾರದಿಂದ ವೀರಪ್ಪನ್ ಜಯಂತಿಗೆ ಸಕಲ ಸಿದ್ಧತೆ: ಬರುವ ಯುಗಾದಿಗೆ ದಿನ ನಿಗದಿ (ಸುಳ್ಸುದ್ದಿ)
– ಪ್ರವೀಣ್ ಕುಮಾರ್, ಮಾವಿನಕಾಡು
ಬೆಂಗಳೂರು: ರಾಜ್ಯದಲ್ಲಿ ವೀರಪ್ಪನ್ ಜಯಂತಿಯನ್ನು ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ವೀರಪ್ಪನ್ ಜಯಂತಿ ಅಂಗವಾಗಿ ಮೊನ್ನೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಈ ಸಾಲಿನಿಂದ ಸರ್ಕಾರದ ಹಣದಲ್ಲಿ ವೀರಪ್ಪನ್ ಜಯಂತಿಯನ್ನು ಆಚರಿಸಲಾಗುವುದು ಮತ್ತು ಮೊದಲ ವರ್ಷದ ವೀರಪ್ಪನ್ ಜಯಂತಿಯನ್ನು ಬರುವ ಯುಗಾದಿಯಂದು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಅಂದು ರಾಜ್ಯದಾದ್ಯಂತ ವೀರಪ್ಪನ್ ಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಮಾಡಲಾಗುತ್ತಿದ್ದು, ಎಲ್ಲೆಡೆ ವೀರಪ್ಪನ್ ಅವರ ಭಾವಚಿತ್ರದ ಮೆರವಣಿಗೆಯನ್ನು ಮಾಡಲಾಗುವುದು ಎಂದರು.
ಆಮಂತ್ರಣ ಪತ್ರಿಕೆ ಹಾಗೂ ಇತರ ವಿಷಯಗಳ ಕುರಿತು ಮಾಹಿತಿ ನೀಡಿದ ಮಾನ್ಯ ಗೃಹ ಸಚಿವರು ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ತಿಳಿಸಬೇಕು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ವೀರಪ್ಪನ್ ಅವರ ಬಗ್ಗೆ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಿ ತಾಲೂಕು ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಬಹುಮಾನಗಳನ್ನು ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಆಡಳಿತ ಪಕ್ಷದ ಕಾರ್ಯಾಧ್ಯಕ್ಷರು ಮಾತನಾಡಿ ವೀರಪ್ಪನ್ ಅವರು ಒಬ್ಬ ಮಹಾನ್ ಪುಣ್ಯ ಪುರುಷರಾಗಿದ್ದು ಮಲೆಮಹದೇಶ್ವರನ ಸನ್ನಿಧಿಗೆ ಅವರು ತಮ್ಮ ಸ್ವಂತ ಆದಾಯದಿಂದ ಕಾಣಿಕೆಗಳನ್ನು ಸಲ್ಲಿಸಿದ್ದರು. ಆದ್ದರಿಂದ ಪ್ರತಿಯೊಬ್ಬ ಹಿಂದುವೂ ಕೂಡಾ ವೀರಪ್ಪನ್ ಅವರ ಜಯಂತಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಬಲ್ಲ ಮೂಲಗಳ ಪ್ರಕಾರ ಬರುವ ಚುನಾವಣೆಯಲ್ಲಿ ಬಹುತೇಕ ಅನ್ಯ ಭಾಷಿಕರ ಮತಗಳು ಆಡಳಿತಾರೂಢ ಪಕ್ಷದ ಕೈ ತಪ್ಪಲಿವೆ ಎಂದು ಗುಪ್ತಚರ ಇಲಾಖೆ ನೀಡಿದ ವರದಿಯಿಂದ ಭಯಗೊಂಡ ಆಡಳಿತಾರೂಢ ಪಕ್ಷ ಪ್ರಖ್ಯಾತ ರಾಜಕೀಯ ತಜ್ಞ ಕಿಶೋರ್ ಪ್ರಶಾಂತ್ ಅವರನ್ನು ಸಂಪರ್ಕಿಸಿತ್ತು. ಅವರು ನೀಡಿದ ಸಲಹೆಯ ಮೇರೆಗೆ ಅನ್ಯಭಾಷಿಕರ ಮತಗಳನ್ನು ಸೆಳೆಯಲು ವೀರಪ್ಪನ್ ಜಯಂತಿಯನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಆದರೆ ವೀರಪ್ಪನ್ ಜಯಂತಿಯನ್ನು ಆಚರಿಸುವ ನಿರ್ಣಯವನ್ನು ಸರ್ಕಾರ ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಕೆಲವು ಸಂಘಟನೆಗಳು ನೆನ್ನೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದವು. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳ ಎದುರು ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು, ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವೀರಪ್ಪನ್ ಒಬ್ಬ ನರಹಂತಕ, ಕನ್ನಡ ವಿರೋಧಿ, ಕಾಡುಗಳ್ಳ, ಆನೆಗಳ ಹಂತಕ ಮತ್ತು ಕ್ರೂರಿಯಾಗಿದ್ದ ಎಂದು ಆರೋಪಿಸಿದರು. ಸರ್ಕಾರ ಒಮ್ಮೆ ಇತಿಹಾಸವನ್ನು ಅಧ್ಯಯನ ಮಾಡಿ ವೀರಪ್ಪನ್ ಜಯಂತಿಯನ್ನು ಆಚರಣೆ ಮಾಡಬೇಕು. ‘ವೀರಪ್ಪನ್ ನಾಡಡ್ರೋಹಿ, ವ್ಯವಸ್ಥೆಯ ವಿರೋಧಿಯಾಗಿದ್ದ. ಇಂತವನ ಜಯಂತಿಯನ್ನು ಆಚರಣೆ ಮಾಡುವ ಉದ್ದೇಶವಾದರೂ ಏನು..?’ ಎಂದು ಸಂಘಟಕರು ಸರ್ಕಾರವನ್ನು ಪ್ರಶ್ನಿಸಿದರು.
ಇನ್ನೊಂದೆಡೆ ವೀರಪ್ಪನ್ ಜಯಂತಿಯನ್ನು ವಿರೋಧಿಸುವವರ ಮೇಲೆ ಸಾಮರಸ್ಯಕ್ಕೆ ಧಕ್ಕೆಯನ್ನುಂಟು ಮಾಡುವ ಪ್ರಕರಣ ದಾಖಲಿಸಬೇಕು ಎಂದು ಕೋಮು ವೇದಿಕೆ ರಾಜ್ಯ ಅಧ್ಯಕ್ಷರು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಪ್ಪನ್ ಅವರು ಒಬ್ಬ ಅಸಾಮಾನ್ಯ ಧೈರ್ಯಶಾಲಿಗಳಾಗಿದ್ದರು. ಅವರು ಯಾರನ್ನೂ ಸಹಾ ಜಾತಿ ಆಧಾರದಲ್ಲಿ ಕೊಂದು ಹಾಕಿರಲಿಲ್ಲ ಎನ್ನುವುದು ಚರಿತ್ರೆಯಲ್ಲಿ ದಾಖಲಾಗಿದೆ. ನಿಜವಾದ ಅರ್ಥದಲ್ಲಿ ಅವರೊಬ್ಬ ಮಹಾನ್ ಜಾತ್ಯತೀತ ವ್ಯಕ್ತಿಯಾಗಿದ್ದರು. ಒಬ್ಬ ಕಾಡುಗಳ್ಳನಾಗಿ ಅವರು ತಮ್ಮ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದರು. ಆದರೆ ಕೆಲವು ಕೋಮು ಕ್ರಿಮಿಗಳು ಅಂತಹಾ ಮಹಾನ್ ವ್ಯಕ್ತಿಯ ತೇಜೋವಧೆಗೆ ಇಳಿದಿವೆ. ಜಾತಿವಾದಿ ಮತಾಂಧರ ಇಂತಹಾ ಪ್ರಯತ್ನಗಳನ್ನು ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ. ಸರ್ಕಾರ ಯಾವುದೇ ಕಾರಣಕ್ಕೂ ಇಂತಹ ಜಾತಿವಾದಿಗಳಿಗೆ ಮಣಿಯದೆ ವೀರಪ್ಪನ್ ಜಯಂತಿಯನ್ನು ಆಚರಣೆ ಮಾಡಬೇಕು. ವೀರಪ್ಪನ್ ಒಬ್ಬ ನರಹಂತಕ, ಕನ್ನಡ ವಿರೋಧಿ, ಕಾಡುಗಳ್ಳ, ಆನೆಗಳ ಹಂತಕ ಮತ್ತು ಕ್ರೂರಿ ಎಂದು ಇತಿಹಾಸ ತಿಳಿಯದ ಕೆಲವು ವ್ಯಕ್ತಿಗಳು ಸುಳ್ಳು ಹಬ್ಬಿಸಿ ಸಮಾಜದಲ್ಲಿ ಅಶಾಂತಿ ಹರಡಲು ಪ್ರೇರೇಪಿಸುತ್ತಿದ್ದಾರೆ. ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಇಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈಗಾಗಲೇ ಅಂತಹಾ ಸಂಘಟನೆಗಳ ಮುಖಂಡರ ಬಳಿ ‘ವೀರಪ್ಪನ್ ಜಯಂತಿಗೆ ನನ್ನಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ’ ಎಂದು ಹತ್ತು ಲಕ್ಷ ರೂ.ಗಳ ಬಾಂಡ್ ಬರೆಸಿಕೊಳ್ಳುವ ಕೆಲಸವನ್ನು ನಮ್ಮ ಪೊಲೀಸ್ ಇಲಾಖೆ ಮಾಡುತ್ತಿದೆ ಎಂದು ಅವರು ತಮಗೆ ಕೇಳಲ್ಪಟ್ಟ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಯಾರೇ ವಿರೋಧಿಸಿದರೂ, ಸ್ವತಃ ಸುಪ್ರೀಂ ಕೋರ್ಟ್ ಕೂಡಾ ವೀರಪ್ಪನ್ ಜಯಂತಿ ನಿಲ್ಲಿಸುವಂತೆ ಆದೇಶಿಸಿದರೂ ನಾವು ಇಡೀ ರಾಜ್ಯದಾದ್ಯಂತ ನಿಷೇಧಾಜ್ಞೆ ಹೇರಿಯಾದರೂ ವೀರಪ್ಪನ್ ಜಯಂತಿಯನ್ನು ಮಾಡಿಯೇ ತೀರುತ್ತೇವೆ. ಆ ಬಗ್ಗೆ ಆತಂಕ ಬೇಡ ಎಂದು ಅವರು ರಾಜ್ಯದ ವೀರಪ್ಪನ್ ಅಭಿಮಾನಿಗಳಿಗೆ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ವೀರಪ್ಪನ್ ಅವರು ವಿವಿಧ ಆದಿವಾಸಿಗಳಿಗೆ ತಮ್ಮ ಜೀವಮಾನದುದ್ದಕ್ಕೂ ಆರ್ಥಿಕ ಸಹಾಯ ಮಾಡಿದ್ದರು. ಮೇಲ್ವರ್ಗದ ಶೋಷಣೆಯಿಂದ ಶೋಷಿತರನ್ನು ರಕ್ಷಿಸಿದ ಮಹಾಶೂರ ವೀರಪ್ಪನ್. ಅವರ ಜಯಂತಿಯನ್ನು ನಾವೆಲ್ಲಾ ಮನಃ ಪೂರ್ವಕವಾಗಿ ಸ್ವಾಗತಿಸಬೇಕು. ಈ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಸಮಾಜ ಕಲ್ಯಾಣ ಸಚಿವರು ಪತ್ರಕರ್ತರೆದುರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಎನ್ನಡ ಚಳಿಚಳಿ ಪಕ್ಷದ ರಾಜ್ಯಾಧ್ಯಕ್ಷರು ಬೆಂಗಳೂರಿನಲ್ಲಿ ಮಾತನಾಡಿ ವೀರಪ್ಪನ್ ಅವರು “ದಕ್ಷಿಣ ಭಾರತದ ಆನೆ”. ಅವರ ಜಯಂತಿಯನ್ನು ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಆಚರಿಸುತ್ತಿರುವುದು ನಮಗೆಲ್ಲಾ ಸಂತಸ ತಂದಿದೆ. ವೀರಪ್ಪನ್ ಅವರು ಕನ್ನಡದ ಮೇಲಿನ ಪ್ರೀತಿಯಿಂದಾಗಿ ನಮ್ಮ ಕನ್ನಡದ ಮೇರುನಟರೊಬ್ಬರನ್ನು ತಾವಿರುವ ಕಾಡಿಗೇ ಕರೆದುಕೊಂಡು ಹೋಗಿ ನೂರಾರು ದಿನ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಅಲ್ಲದೇ ಅವರನ್ನು ಕಾಡಿನಿಂದ ಬೀಳ್ಕೊಡುವಾಗ ಪಾದ ಮುಟ್ಟಿ ನಮಸ್ಕರಿದ್ದರು ಮತ್ತು ಅತ್ಯಂತ ಗೌರವ ಪೂರ್ವಕವಾಗಿ ಕಳಿಸಿಕೊಟ್ಟಿದ್ದರು. ಇದು ವೀರಪ್ಪನ್ ಅವರು ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಎಷ್ಟು ಬೆಲೆ ಕೊಡುತ್ತಿದ್ದರು ಎನ್ನುವುದಕ್ಕೆ ಸಾಕ್ಷಿ. ಆದ್ದರಿಂದ ಮುಖ್ಯಮಂತ್ರಿಗಳ ಈ ಕ್ರಮವನ್ನು ಕನ್ನಡ ನಾಡಿನ ಪ್ರತಿಯೊಬ್ಬರೂ ಸ್ವಾಗತಿಸಬೇಕು. ವೀರಪ್ಪನ್ ಜಯಂತಿಯ ಪರವಾಗಿ ನಮ್ಮ ಪಕ್ಷದಿಂದ ಶೀಘ್ರದಲ್ಲೇ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ನಾಯಿಗಳ ಮೆರವಣಿಗೆ ನಡೆಸಲಾಗುವುದು ಎಂದು ಅವರು ತಿಳಿಸಿದರು. ವೀರಪ್ಪನ್ ಜಯಂತಿಯನ್ನು ಶಾಲಾ ಕಾಲೇಜುಗಳಲ್ಲಿ ಯಾವ ರೀತಿ ಆಚರಿಸಬೇಕು ಎನ್ನುವ ವಿವರಗಳನ್ನು ರಾಜ್ಯದ ಎಲ್ಲಾ ಶಿಕ್ಷಕರಿಗೂ ಶೀಘ್ರದಲ್ಲೇ ವಾಟ್ಸಾಪ್ ಮೂಲಕ ಕಳಿಸಿಕೊಡಲಾಗುವುದು. ಆದ್ದರಿಂದ ಎಲ್ಲಾ ಶಿಕ್ಷಕರೂ ನಾಳೆ ಸಂಜೆಯೊಳಗಾಗಿ ತಮ್ಮ ತಮ್ಮ ವಾಟ್ಸಾಪ್ ನಂಬರ್ ಗಳನ್ನೂ ನೇರವಾಗಿ ತಮಗೆ ಕಳಿಸಬೇಕು ಎಂದು ‘ಪ್ರಾಥಮಿಕ ಶಿಕ್ಷಣ’ ಸಚಿವರು ಆದೇಶಿಸಿದ್ದಾರೆ.
ವಿ.ಸೂ: ಇದೊಂದು ಕಾಲ್ಪನಿಕ ಸುದ್ದಿ(ಸುಳ್ಸುದ್ದಿ)ಯಾಗಿದ್ದು ಇದು ಕೇವಲ ಮನರಂಜನೆಗಾಗಿ ಮಾತ್ರ.ಇದರಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳ ಹೋಲಿಕೆಗಳು ಕಂಡು ಬಂದರೆ ಅದು ಕೇವಲ ಕಾಕತಾಳೀಯ ಮಾತ್ರ.
ಗೋಡ್ಸೆ…ದಿನಾಚರಣೆಯನ್ನೂ ಆಚರಿಸ್ತಾರಂತೆ….
ಆಚರಿಸಿದ್ರೂ ಆಶ್ಚರ್ಯವಿಲ್ಲ.ನಾಕು ವೋಟು ಜಾಸ್ತಿ ಸಿಗುತ್ತೆ ಅಂದ್ರೆ ಅದನ್ನು ಮಾಡೋಕೂ ರೆಡಿ ಈ ಸಿದ್ದರಾಮಯ್ಯನವರ ಸರ್ಕಾರ!
ಓಹೋ….ವೀರಪ್ಪನ್ನೂ…ಗೋಡ್ಸೆ….ಇವರ ದಿನಾಚರಣೆಗೂ….ಸಿದ್ದರಾಮಯ್ಯನವರಿಗೆ…ಓಟು…ಹಾಕ್ತೀರೋ…ನೀವು…ಅದೂ…ನಾಕು….ನಾಕು….ಹಾಕ್ಕೊಳ್ಳಿ…..ನೀವುಂಟು…..ನಿಮ್ಮ ಸಿದ್ದರಾಮಯ್ಯ….ಉಂಟು….