ಮೋದಿಜಿ ಮಾಡುವುದೆಲ್ಲ ವೋಟಿಗಲ್ಲಾ…!
– ವಿಕ್ರಮ್ ಎಂ.ಆರ್
ನಲವತ್ತು ವರ್ಷಗಳಿಂದ ಹಾಗೆಯೇ ಮೂಲೆ ಗುಂಪಾಗಿ ಬಿದ್ದಿತ್ತು. 1973ರಲ್ಲಿ ಇಂದಿರಾಗಾಂಧಿ OROP ಪ್ರಸ್ತಾಪವನ್ನೇ ಕಿತ್ತು ಎಸೆದಿದ್ದರು. ಇಂದು ಮೋದಿ ಸರ್ಕಾರ ದೇಶಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಸೈನಿಕರ ಕನಸನ್ನು ನನಸು ಮಾಡಿದೆ. GST ಎಷ್ಟು ವರ್ಷದಿಂದ ಚರ್ಚೆಯಲ್ಲಿತ್ತು, ನೀವೇ ವಿಚಾರ ಮಾಡಿ! ಗಾಂಧಿ ಮನೆತನದ ತಂದಿಟ್ಟ ನೂರೆಂಟು ವಿಘ್ನಗಳ ನಡುವೆಯೂ ಮೋದಿಜಿ GST ಬಿಲ್ಲನ್ನು ಸಂಸತ್ತಿನಲ್ಲಿ ತಂದು ಎರಡೂ ಸದನದಲ್ಲಿ ಮಂಡನೆ ಮಾಡಿ ಎಲ್ಲರ ಒಪ್ಪಂದ ಪಡೆದು ಪಾಸು ಮಾಡಲಾಗಿದೆ. ಪ್ರಧಾನಮಂತ್ರಿ ಧನ ಜನ ಯೋಜನೆ ಅಸ್ತಿತ್ವಕ್ಕೆ ಬಂದಾಗಿನಿಂದ ಎಷ್ಟೋ ಕೋಟಿ ಬಡ ಜನರು ಬ್ಯಾಂಕಿನಲ್ಲಿ ತಮ್ಮ ಖಾತೆ ಹೊಂದಿದ್ದಾರೆ. ಮೊದಲು ಅವರಿಗೆ ಸಿಗಬೇಕಾದ ಹಣ ಕೈಗೆ ಬರುತ್ತಿರಲಿಲ್ಲ ಆದರೆ ಈಗ ನೇರವಾಗಿ ಅವರ ಖಾತೆಗೆ ಜಮಾ ಆಗುತ್ತದೆ. ನಮ್ಮ ಕಂಪನಿಯಲ್ಲಿರುವ ಕಾಂಟ್ರಾಕ್ಟ್ ಕೆಲಸಗಾರನೊಬ್ಬ ಹೀಗೆ ಹೇಳುತ್ತಾನೆ “ಸರ್, ಮೊದಲು ನೂರು ರೂಪಾಯಿ ವೇತನ ಇದ್ದರೆ ಅದರಲ್ಲಿ ಇಪ್ಪತ್ತು ರೂಪಾಯಿಯನ್ನು ಮೇಲ್ವಿಚಾರಕ ಇಟ್ಟುಕೊಂಡು ಉಳಿದಿದ್ದನ್ನು ನನಗೆ ಕೊಡುತ್ತಿದ್ದ ಆದರೆ ಈಗ ನೇರವಾಗಿ ನೂರು ರುಪಾಯಿ ನನ್ನ ಬ್ಯಾಂಕಿಗೆ ಬರುತ್ತದೆ”. ಇದು ಒಂದು ಉದಾಹರಣೆ ಅಷ್ಟೇ, ಇಂತಹ ಸಾವಿರ ನಿದರ್ಶನಗಳನ್ನು ಹಂಚಿಕೊಳ್ಳಬಹುದು. ಇವೆಲ್ಲ ಒಂದಲ್ಲಾ ಒಂದುಕಡೆ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಆದರೆ ಮೋದಿ ಸರ್ಕಾರ ಏನೇ ಮಾಡಿದರೂ ಕೆಲವರಿಗೆ ಉರಿ. ವಿರೋಧ ಪಕ್ಷ ಅಥವಾ ಕೆಲವು ಬುದ್ಧಿಜೀವಿಗಳು ಮೋದಿಜಿಯವರ ಪ್ರತಿ ಪ್ರಯತ್ನವನ್ನೂ ವಿರೋಧಿಸುವುದು ಯಾತಕ್ಕೆ? ಮಾಡಬೇಕು ಇಲ್ಲವೇ ಮಾಡಲು ಬಿಡಬೇಕು. ಅರವತ್ತು ವರ್ಷವಾಯಿತು, ಇನ್ನೂ ದೇಶ ಎಷ್ಟು ಮುಂದುವರಿಯಬೇಕೋ ಅಷ್ಟು ಮುಂದುವರಿದಿಲ್ಲ. ಮೋದಿಜಿ ಬಂದಾಗಿನಿಂದ ಒಂದು ರಿದಮ್ ಸಿಕ್ಕಿದೆ ಅದನ್ನು ಹಾಳು ಮಾಡಲು ಕಾರಣಗಳೇನು? ಏನೇ ಮಾಡಿದರೂ ಅದು ಚುನಾವಣೆಯಲ್ಲಿ ಮತ ಗಳಿಸಲೇ ಮಾಡಿದ್ದು ಎಂದು ಡಂಗುರ ಬಾರಿಸುತ್ತ ಸಾರುವ ಈ ಎಡಬಿಡಂಗಿಗಳ ಉದ್ದೇಶವಾದರೂ ಏನು?
ಇತ್ತೀಚೆಗಷ್ಟೇ ಭಾರತ, ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ಒಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಮೂವತ್ತೆಂಟು ಭಯೋತ್ಪಾದಕರನ್ನು ಸಾಯಿಸಿ ಯಶಸ್ವಿಯಾಗಿ ಬಂದರು. ಇದಕ್ಕೂ ಮುಂಚೆ ಉರಿಯಲ್ಲಿ ಭಯೋತ್ಪಾದಕರು ದಾಳಿ ನಡೆಸಿ ನಮ್ಮ ಹದಿನೇಳು ಯೋಧರನ್ನು ಬಲಿ ತೆಗೆದುಕೊಂಡಿದ್ದರು. ಇದಕ್ಕೆ ಪ್ರತ್ಯುತ್ತರವಾದ ದಾಳಿ ‘ಸರ್ಜಿಕಲ್ ಸ್ಟ್ರೈಕ್’ ಆಗಿತ್ತು. ಅದಾದ ನಂತರ ಎರಡೇ ದಿನಗಳಲ್ಲಿ ಕಾಂಗ್ರೆಸ್, ಆಮ್ ಆದಮಿ ಪಾರ್ಟಿ ಎಲ್ಲ ಒಟ್ಟಾಗಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇ ಸುಳ್ಳು, ಅದಕ್ಕೆ ಪುರಾವೆ ಬೇಕು ಎಂದು ಗೊಣಗುತ್ತಾ ಹೊರಬಂದವು. ಇನ್ನು ಕೆಲವರು, ಮೋದಿಜಿ ‘ಸರ್ಜಿಕಲ್ ಸ್ಟ್ರೈಕ್’ ಹೆಸರಲ್ಲಿ ಉತ್ತರಪ್ರದೇಶದ ಚುನಾವಣೆಗೆ ತಯಾರಿ ನೆಡೆಸುತ್ತಿದ್ದಾರೆ ಎಂದರು. ಇದೆಲ್ಲಾ ಯಾಕೆ ಎನ್ನುವುದೇ ಅರ್ಥವಾಗುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿದೆ ಅನ್ನುವ ಕಾರಣಕ್ಕೆ ದ್ರೋಹಿಗಳು ನಮ್ಮ ದೇಶದ ಮೇಲೆ ಆಕ್ರಮಣ ಮಾಡುತ್ತಿರುವಾಗ ನಾವು ಸುಮ್ಮನಿರಬೇಕೆ? ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ‘ಕಾಶ್ಮೀರ ತಮ್ಮದು’ ಎಂದು ಮಂಡಿಸಲು ಹೊರಟಿರುವಾಗ ನಾವೇನು ಸುಮ್ಮನೆ ಕೈಕಟ್ಟಿಕೊಂಡು ಕೂತಿರಬೇಕೇನು? ಮಾಡಿದರೂ ಕಷ್ಟ, ಮಾಡದೇ ಹೋದರು ಕಷ್ಟ. ದೇಶದ ಹೊರಗೆ ಇದ್ದಿದ್ದೇ ಆದರೆ ಇಲ್ಲಿ ವೈರಿಗಳು ದೇಶದ ಒಳಗೇ ಇರುವಂತೆ ಕಾಣುತ್ತಿದೆ. ರಾಜಕೀಯ ಬೇರೆ, ದೇಶದ ಹಿತಾಸಕ್ತಿ ಬೇರೆ. ರಾಜಕೀಯದಲ್ಲಿ ದೇಶದ ಹಿತ ಅಥವಾ ಭದ್ರತೆಯನ್ನು ಹೊಂದಾಣಿಕೆ ಮಾಡಿಕೊಳ್ಳಬಾರದು. ಸರ್ಜಿಕಲ್ ಸ್ಟ್ರೈಕ್ ಆದನಂತರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಸಾಕಷ್ಟು ಭಯೋತ್ಪಾದಕರ ಗುಂಪುಗಳು ತಮ್ಮ ಗಂಟು ಮೂಟೆ ಕಟ್ಟಿಕೊಂಡು ಹೋಗಿವೆಯಂತೆ. ಇದನ್ನು ಯಾರೂ ಪ್ರಶಂಸಿವುದಿಲ್ಲ. ಅದರ ಬದಲು ಭಾರತದಲ್ಲಿದ್ದುಕೊಂಡು ಭಾರತದ ಸೇನೆಯ ವಿರುದ್ಧವೇ ಹೇಳಿಕೆಗಳನ್ನು ನೀಡಿ ಪಾಕಿಸ್ತಾನಿ ಮೀಡಿಯಾದಲ್ಲಿ ಹೀರೋ ಅನಿಸಿಕೊಳ್ಳಲು ಬಯಸುತ್ತಾರೆ ಕೆಲವರು. ಅದೇನು ಸಂತೃಪ್ತಿ ಸಿಗುತ್ತದೆಯೋ ಗೊತ್ತಿಲ್ಲ ಕೆಲವು ಪತ್ರಕರ್ತರಂತೂ ಪಾಕಿಸ್ತಾನದ ಪರವಾಗಿಯೇ ತಮ್ಮ ಅಭಿಪ್ರಾಯವನ್ನು ಸೂಚಿಸುತ್ತಾರೆ. ಅವರ ಕೆಲಸವೂ ಹಾಗೆಯೇ ಇರುತ್ತದೆ. ಉದಾಹರಣೆಗೆ ನೋಡಿ, ಒಂದುಕಡೆ ಕಾಶ್ಮೀರ ಹತ್ತಿ ಉರಿಯುತ್ತಿದ್ದರೆ ಇಲ್ಲಿ ಇವರು ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಲೀಕ್ ಮಾಡಿ ಜ್ವಾಲೆಗೆ ತುಪ್ಪ ಸುರಿಯುತ್ತಾರೆ. ಇಂತವರು ಯಾವತ್ತೂ ದೇಶದ ಬಗ್ಗೆ ಯೋಚಿಸಲಾರರು, ಅವರಿಗೆ ಬರೀ ಅಧಿಕಾರ ಬೇಕು, ಹಣ ಬೇಕು, ಹೆಗ್ಗಳಿಕೆ ಬೇಕು.. ಅದಕ್ಕಾಗಿ ಏನು ಹೊಂದಾಣಿಕೆ ಬೇಕಾದರೂ ಮಾಡಿಕೊಳ್ಳಲು ಸಿದ್ದರಿರುತ್ತಾರೆ.
ಇತ್ತೀಚಿಗೆ ನಡೆದ ಸರ್ಜಿಕಲ್ ಸ್ಟ್ರೈಕ್ ಆಗಲಿ, ಕಳೆದ ಎರಡು ವರ್ಷಗಳ ಹಿಂದೆ LoC ಯಲ್ಲಿ ನಡೆದ ಸತತ ಗುಂಡಿನ ಚಕಮಕಿ ಇರಲಿ, ಅಥವಾ ಬರ್ಮಾದ ಗಡಿ ಪ್ರದೇಶದಲ್ಲಿನ ಉಗ್ರಗಾಮಿಗಳ ಮೇಲೆ ನಡೆದ ದಾಳಿ ಇರಬಹುದು ಇವೆಲ್ಲ ದೇಶದ ಭದ್ರತೆಯ ದೃಷ್ಟಿಯಿಂದ ಅವಶ್ಯಕವಾದವು. ಅದನ್ನು ಚುನಾವಣೆಗಾಗಿ ಮಾಡಿದ್ದು ಎಂದು ಹೇಳುವುದು ಯಾಕೆ? ಎಷ್ಟೋ ದಶಕಗಳ ಬಾಂಗ್ಲಾ ಗಡಿ ವಿವಾದವನ್ನು ಮೋದಿ ಸರ್ಕಾರ ಬಗೆಹರಿಸಲಿಲ್ಲವೆ ? ನಾಗಾ ಉಗ್ರಗಾಮಿಗಳು ಹಿಂದಿನ ವರ್ಷ ಜೂನ್ ನಾಲ್ಕರಂದು ನಮ್ಮ ದೇಶದ ಹದಿನೆಂಟು ಸೈನಿಕರನ್ನು ಹೊಂಚು ಹಾಕಿಸಾಯಿಸಿದರು. ಅದಕ್ಕೆ ಹಿಂದಿನ ಸರ್ಕಾರಗಳಾದರೆ ಪತ್ರ ಬರೆಯುತ್ತ ಸುಮ್ಮನೆ ಕೂತಿಕೊಳ್ಳುತ್ತಿದ್ದವು. ಮೋದಿಜಿ ಬಾಂಗ್ಲಾದೇಶದ ಪ್ರವಾಸದಿಂದ ಬಂದ ಮರುದಿನವೇ ಆರ್ಮಿಗೆ ಒಪ್ಪಿಗೆ ಕೊಟ್ಟು ಬಿಟ್ಟರು. ಆಗಿದ್ದೇನು? ಎಪ್ಪತ್ತು ಕಮಾಂಡೋಗಳ ಪಡೆ ಬರ್ಮಾದೊಳಗೆ ನುಗ್ಗಿ ನಲವತ್ತು ನಿಮಿಷದೊಳಗೆ ಮೂವತ್ತೆಂಟು ನಾಗಾ ಉಗ್ರಗಾಮಿಗಳನ್ನು ಕೊಂದು ಆಪರೇಷನ್ ಯಶಸ್ವಿಗೊಳಿಸಿ ತಿರುಗಿ ಬಂದಿದ್ದವು! ಇದು ಚುನಾವಣೆಯಲ್ಲಿ ಮತ ಗಿಟ್ಟಿಸಲು ಮೋದಿಜಿ ಮಾಡಿದ ಸಂಚೇ? ಏನನಿಸುತ್ತದೆ ನಿಮಗೆ? ಕೆಲವು ಪತ್ರಕರ್ತರು ಹಾಗೂ ಮೋದಿಜಿ ವಿರೋಧಿಗಳು ಇದು ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೆ ಜನರನ್ನು ಬಿಜೆಪಿಯತ್ತ ಆಕರ್ಷಿಸಲು ಮಾಡಿದ್ದು ಅಂದರು! ಆ ಮಾತನ್ನೆಲ್ಲ ಕೇಳಿದಾಗ ರಕ್ತ ಕುದಿಯುತ್ತದೆ. ಒಂದು ಹಂತದ ತನಕ ರಾಜಕೀಯ ತಂತ್ರ ಕುತಂತ್ರಗಳು ಸರಿ.. ಆದರೆ ದೇಶದ ಭದ್ರತೆ ಹಾಗೂ ಜನರ ಜನಜೀವನ ಸುಧಾರಣೆಯ ನಿಟ್ಟಿನಲ್ಲಿ ಯಾರೇ ಒಂದು ಹೆಜ್ಜೆಯನ್ನಿಟ್ಟರೆ ಅದನ್ನು ಎಲ್ಲರೂ ಸೇರಿ ಸ್ವಾಗತಿಸಬೇಕೆ ಹೊರತು ದೇಶ ವಿರೋಧಿ ಹೇಳಿಕೆ ನೀಡಿ ಶತ್ರುಗಳನ್ನು ಪ್ರೋತ್ಸಾಹಿಸಬಾರದು.
ಪ್ರತಿ ವರ್ಷ ನಾಲ್ಕು ಅಥವಾ ಐದು ರಾಜ್ಯಗಳ ವಿಧಾನ ಸಭಾ ಚುನಾವಣೆಗಳು ಬರುತ್ತವೆ. 2014 ರಲ್ಲಿ ಮಹಾರಾಷ್ಟ್ರ, ಹಿಂದಿನ ವರ್ಷ ಬಿಹಾರ, ಹರಿಯಾಣ ಹಾಗೂ ದೆಹಲಿ, ಈ ವರ್ಷ ಪಶ್ಚಿಮ ಬಂಗಾಳ, ತಮಿಳುನಾಡು. ಮುಂದಿನ ವರ್ಷ ಪಂಜಾಬ್ ಹಾಗೂ ಉತ್ತರ ಪ್ರದೇಶ ಹೀಗೆ ಪ್ರತಿ ವರ್ಷ ಒಂದಕ್ಕಿಂತ ಒಂದು ಮುಖ್ಯವಾದ ಚುನಾವಣೆಗಳು. ಬರೀ ಚುನಾವಣೆಯನ್ನು ನೋಡಿ ಕೆಲಸ ಮಾಡುತ್ತಾ ಹೋದರೆ ಅರವತ್ತು ವರ್ಷಗಳಲ್ಲ ಸಾವಿರ ವರ್ಷಗಳಾದರೂ ದೇಶ ಅಭಿವೃದ್ಧಿ ಆಗುವುದಿಲ್ಲ. ಮೋದಿಜಿಯವರು ಸಂಸತ್ತಿನಲ್ಲಿ ನೀಡಿದ ಮೊದಲ ಭಾಷಣವನ್ನು ಇಲ್ಲಿ ನೆನಪಿಸಿಕೊಳ್ಳೊಣ. ಮೋದಿಜಿ ಆ ಭಾಷಣದಲ್ಲಿ ಒಂದು ಬಹುಮುಖ್ಯ ವಿಚಾರವನ್ನು ಹೇಳಿದ್ದರು, ಏನು ಗೊತ್ತಾ? “ನಾಲ್ಕು ವರ್ಷ ಎಲ್ಲರೂ ಸೇರಿ ದೇಶಕ್ಕಾಗಿ ಕೆಲಸ ಮಾಡೋಣ, ಒಂದು ವರ್ಷ ರಾಜಕೀಯಕ್ಕೆ ಅವಕಾಶ ಇದೆ” ಎಂದು ಬಲು ಸೂಕ್ಷ್ಮವಾಗಿ ಹೇಳಿದ್ದರು. ಆದರೆ ವಿರೋಧ ಪಕ್ಷಗಳು ಅದರಲ್ಲೂ ವಂಶ ಪಾರಂಪರೆ ಪಿಡೀತ ಕಾಂಗ್ರೆಸ್ ಪಾರ್ಟಿ ಮಾಡಿದ್ದೇನು? ದಾದ್ರಿಯ ಹೆಸರಿನಲ್ಲಿ ಅವಾರ್ಡ್ ವಾಪಸ್ಸಿ ಬ್ರಿಗೇಡ್ ಶುರು ಮಾಡಿದರು. ಆವಾಗ ಬಿಹಾರದ ಚುನಾವಣೆ ಸಮೀಪಿಸುತ್ತಿತ್ತು. ನಂತರ ಅಸಹಿಷ್ಣುತೆಯ ಗಾಳಿ ದೇಶದಲ್ಲೆಲ್ಲಾ ಹಬ್ಬಿತು. ದಾದ್ರಿಯ ವಿಷಯವಾಗಲಿ, ರೋಹಿತ್ ವೆಮುಲಾನ ವಿಷಯವಾಗಲಿ ಎಲ್ಲವೂ ವೈಯಕ್ತಿಕ ಎಂಬುವುದು ಸಾಬೀತಾಯಿತು. ಧರ್ಮದ ಅಸಹಿಷ್ಣುತೆ, ಆಹಾರದ ಅಸಹಿಷ್ಣುತೆ ಎಲ್ಲವೂ ಯಾರೋ ಬೇಕಂತಲೇ ಹುಟ್ಟು ಹಾಕಿದ್ದು ಎಂಬುದು ಕೂಡಾ ಜನರಿಗೆ ಮನವರಿಕೆಯಾಯಿತು. ಇದನ್ನೆಲ್ಲಾ ಅರಿತ ಮೇಲೆ, ಇವೆಲ್ಲ ವಿರೋಧ ಪಕ್ಷಗಳು ಚುನಾವಣೆಗಾಗಿ ಮಾಡಿದ ಷಡ್ಯಂತ್ರವೆಂದು ಗೊತ್ತಾಗುತ್ತದೆ. ‘ಕಾಮಾಲೆ ಕಣ್ಣಿಗೆ ಜಗವೆಲ್ಲಾ ಹಳದಿಯಾಗಿ ಕಾಣುವುದಂತೆ’. ಅದಕ್ಕಾಗಿಯೇ ಮೋದಿಜಿ ಏನು ಮಾಡಿದರೂ ಅದೆಲ್ಲ ಇವರಿಗೆ ಚೆನಾವಣೆ ಗೆಲ್ಲುವ ಸಹಜವಾಗಿಯೇ ಮಾಡಿದ್ದು ಎಂದೆನಿಸುತ್ತದೆ. ಯಾವತ್ತೂ ಯಾರೂ ಯೋಚಿಸದ ಅತೀ ಸಣ್ಣ ಆದರೆ ಬಹಳ ಮುಖ್ಯವಾದ ಸ್ವಚ್ಛ ಭಾರತ ಅಭಿಯಾನ ಇವರ ಪ್ರಕಾರ ಫೋಟೊ ತೆಗೆಸಿಕೊಳ್ಳುವುದಕ್ಕೆ. ದಶಕಗಳಿಂದ ಆಗದ ರೆಫಾಲ್ ಡೀಲ್ ಮಾಡಿದ್ದು ಅಂಬಾನಿಗೆ ವ್ಯಾಪಾರದಲ್ಲಿ ಅವಕಾಶ ಮಾಡಿಕೊಡುವುದಕ್ಕೆ, ಸರ್ಜಿಕಲ್ ಸ್ಟ್ರೈಕ್ ಮಾಡುವುದು ಚುನಾವಣೆಗೆ, ವಿದೇಶ ಯಾತ್ರೆ ಮಾಡುವುದು ಕಾಲ ಹರಣಕ್ಕೆ ಹೀಗೆ ಪ್ರತಿಯೊಂದಕ್ಕೂ ಕಾರಣ ಕಟ್ಟುವುದೇ ಆಗಿದೆ. ವಿರೋಧ ಪಕ್ಷ ಆಗಿರಲಿ, ಪತ್ರಕರ್ತ ಆಗಿರಲಿ ಸರ್ಕಾರದ ಪ್ರತಿಯೊಂದು ಕೆಲಸವನ್ನು ವಿರೋಧಿಸುವುದಲ್ಲ ಬದಲಾಗಿ ತಪ್ಪು ಮಾಡಿದಾಗ ಎದ್ದು ನಿಂತು ವಿರೋಧಿಸುವುದು ಇಲ್ಲವೇ ಕನ್ನಡಿ ಹಿಡಿಯುವುದು. ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಗೆ ಕಾರ್ಯಗತವಾಗಲು ಸ್ವಾತಂತ್ರ್ಯ ನೀಡಿದರೆ ಅದರಲ್ಲಿ ತಪ್ಪೇನು? ಭಯೋತ್ಪಾದಕ ವಿರುದ್ಧ ದಾಳಿ ಮಾಡಿದರೆ ಅದರಲ್ಲಿ ಮೋದಿಜಿಯ ಸ್ವಾರ್ಥವೇನು? ರಾಜಕೀಯವನ್ನು ಯಾವ ವಿಷಯದಲ್ಲಿ ಮಾಡಬೇಕೋ ಆ ವಿಷಯದಲ್ಲಿ ಮಾಡಬೇಕು, ದೇಶದ ಭದ್ರತೆಯ ವಿಷಯಗಳಲ್ಲಿ ಅಲ್ಲ.. ಕೆಲವು ಪಕ್ಷಗಳಿಗಂತೂ ದೇಶದ ಚಿಂತೆಯೇ ಇಲ್ಲ, ಇನ್ನು ದೇಶದ ಭದ್ರತೆ ಕುರಿತಾದರು ಚಿಂತಿಸುವ ಮನಸ್ಸೆಲ್ಲಿಂದ ಬರಬೇಕು!
ಚಿತ್ರ ಕೃಪೆ :- http://www.apherald.com