ಲೈಫ್ ಹಿಂಗೂ ‘ಚೇಂಜ್’ ಆಗುತ್ತೆ ಕಣಾ..!
– ತುರುವೇಕೆರೆ ಪ್ರಸಾದ್
ನಾನು ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾಗ ಐದು ಪೈಸೆ ತಗೊಂಡು ಹೋದರೆ ಅಂಗಡಿ ನಾಗಣ್ಣ ಮೂರು ಪೈಸೆಗೆ ಒಂದು ಹಿಡಿ ಕಡಲೆ, ಎರಡು ಪೈಸೆಗೆ ಒಂದು ಉಂಡೆ ಬೆಲ್ಲ ಕೊಡುತ್ತಿದ್ದರು. ಮೊನ್ನೆ ಬುಧವಾರ ಪ್ರಧಾನಿ ಮೋದಿ ರೂ 1000, 500ರ ನೋಟುಗಳನ್ನು ರಾತ್ರೋ ರಾತ್ರಿ ರದ್ದು ಮಾಡಿದ ಮರುದಿನ 500 ರೂಪಾಯಿ ನೋಟು ಹಿಡಿದು ಹೋದರೂ ಒಂದು ಹಿಡಿ ಕಡ್ಲೆ ಒಂದು ಉಂಡೆ ಬೆಲ್ಲ ಸಿಗದ ಪರಿಸ್ಥಿತಿ ಉಂಟಾಗಿತ್ತು. ಹಿಂದಿನ ದಿನ ರಾತ್ರಿ ಊರಿನಲ್ಲಿ ನೆಟ್ಟಗೆ ಕೆಲಸ ಮಾಡುತ್ತಿದ್ದ 2-3 ಎಟಿಎಂಗಳಲ್ಲಿದ್ದ ಅಳಿದುಳಿದ ನೂರರ ನೋಟುಗಳೆಲ್ಲಾ ಖಾಲಿಯಾಗಿದ್ದವು. ಎಲ್ಲ ಕಡೆಯೂ ರೂ.500ರ ನೋಟುಗಳೇ ರಾರಾಜಿಸುತ್ತಿದ್ದವು, ಜನ ಅವುಗಳನ್ನು ಚಿಲ್ಲರೆ ಮಾಡಿಸಲು ಪರದಾಡುತ್ತಿದ್ದರು.. ದಿನನಿತ್ಯದ ಖರ್ಚಿಗೆ ಚಿಲ್ಲರೆ ನೋಟುಗಳನ್ನು ಹೊಂದಿಸಲು ಹರಸಾಹಸ ಮಾಡುತ್ತಿದ್ದರು. ಹಾಲಿಗೆ, ದಿನಸಿಗೆ, ಬಸ್ಸಿಗೆ, ಆಟೋಗೆ ಹೀಗೆ ಯಾವ ಬಾಬತ್ತಿಗೂ 1000, 500ರ ನೋಟು ಕೆಲಸಕ್ಕೆ ಬಾರದಂತಾಗಿತ್ತು. ಎಲ್ಲಾ ಚಿಲ್ಲರೆ ಕೇಳುವವರೇ! 2-3 ಪೆಟ್ರೋಲ್ ಬಂಕ್‍ಗಳು ಬೆಳಿಗ್ಗೆ ಬಾಗಿಲೇ ತೆರೆಯಲಿಲ್ಲ. ಒಂದು ಪೆಟ್ರೋಲ್ ಬಂಕ್‍ನಲ್ಲಿ ರೂ.500ಕ್ಕೆ ಪೂರಾ ಪೆಟ್ರೋಲ್ ಹಾಕಿಸಿಕೊಂಡರೆ ಉಂಟು.. ಇಲ್ಲವೆಂದರೆ ಒಂದೆರಡು ಲೀಟರ್ ಹಾಕಿ ಚಿಲ್ಲರೆ ಕೊಡುವ ಉಸಾಬರಿಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಅವರು ತಾನೆ ಎಷ್ಟು ಜನಕ್ಕೆ ಚಿಲ್ಲರೆ ಕೊಟ್ಟಾರು? ಎಲ್ಲಿಂದ ಚಿಲ್ಲರೆಯನ್ನು ತಂದಾರು?
ಅಂತೂ ಇಡೀ ಊರು 1000, 500 ನೋಟಿನ ಚಲಾವಣೆಯಿಲ್ಲದೆ ಮೇಕಪ್ ಕಳಚಿದ ಸಿನಿಮಾ ಸ್ಟಾರ್ ತರ ಮಂಕು ಬಡಿದಂತಾಗಿತ್ತು. ಬ್ಯಾಂಕ್, ಎಟಿಎಂಗಳು ಮುಚ್ಚಿಕೊಂಡಿದ್ದರೆ ಅಂಗಡಿ, ಉದ್ಯಮ, ಹೋಟೆಲ್‍ಗಳು ಭಣಗುಡುತ್ತಿದ್ದವು. ಹೊರಗೆ ಗಾಡಿ ತೆಗೆಯಲು ಪೆಟ್ರೋಲ್ ಬೇಕು, ಅದಕ್ಕೆ 500 ಪೂರಾ ಪೆಟ್ರೋಲ್ ಕುಡಿಸಬೇಕು.. ಬೈಟು ಟೀ ಕುಡಿಯಲೂ 10 ರೂಪಾಯಿ ಹೊಂಚಿಕೊಂಡು ಕಿಸೆಯಲ್ಲಿಟ್ಟುಕೊಂಡು ಹೋಗಬೇಕು. ಕಣ್ಣಿಗೆ ಬೇಕಾದ್ದು ಕಂಡರೂ ಜೇಬಿನ ತುಂಬ ದುಡ್ಡಿದ್ದರೂ ಕೊಳ್ಳುವ ಉಮೇದಿದ್ದರೂ ಕೊಳ್ಳಲಾಗದ ಸಂಕಟ. ಎಲ್ಲಾ ವೈಭೋಗ ಸಾಮಾಗ್ರಿಗಳನ್ನು ತುಂಬಿಕೊಂಡು ಗಿರಾಕಿಗಾಗಿ ಕಾಯುತ್ತಾ ಕುಳಿತ ಮಾರಾಟಗಾರನಿಗೆ ವ್ಯಾಪಾರ ಇಲ್ಲದ ಚಿಂತೆ.. ಗಿರಾಕಿಗೆ ಅತ್ತ ಕಣ್ ಹಾಯಿಸಲೂ ವ್ಯವಧಾನವಿಲ್ಲದೆ ದೊಡ್ಡ ನೋಟನ್ನು ಹಾಲಿಗೋ, ಕಾಪಿಪುಡಿಗೋ, ಸಿಗರೇಟಿಗೋ ಚಿಲ್ಲರೆ ಮಾಡಿಸುವ ಧಾವಂತ. ಎಲ್ಲಾ ಮೋಜು, ಮಸ್ತಿಗೆ ಬ್ರೇಕ್! ಬಾರು ಬೀರಿರಲಿ, ಸಾರಿಗೆ ಬೇಳೆ ಹೊಂಚಲು ಚಿಲ್ಲರೆ ಎಲ್ಲಿಂದ ತರುವುದೆಂಬ ಯೋಚನೆ.. ಎಲ್ಲಿ ಹೋದರೂ ಚಿಲ್ರೆ ಕೊಡಿ ಸರ್..!
ಇದು ಒಂದೆರಡು ದಿನದ ಸಮಸ್ಯೆ ನಿಜ! ಒಂದು ಉದಾತ್ತ ಧ್ಯೇಯದ ಹಿನ್ನಲೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಇಂತಹ ಒಂದೆರಡು ದಿನಗಳ ತಪಸ್ಸು, ವ್ರತ ಅನಿವಾರ್ಯವೇನೋ? ಹಾಗೇ ಕೆಟ್ಟದ್ದಕ್ಕೆ ಕುಮ್ಮಕ್ಕು ಕೊಡುವವರನ್ನು ನೋಡುತ್ತಾ ಕಣ್ಮುಚ್ಚಿ ಕುಳಿತ ನಮಗೆ ಚಿಕ್ಕ ಪ್ರಾಯಶ್ಚಿತ್ತದ ಶಿಕ್ಷೆಯೂ ಹೌದು.. ಆದರೆ ಮನುಷ್ಯ ದೊಡ್ಡ ದೊಡ್ಡ ನೋಟುಗಳ ಮೋಹದಲ್ಲಿ ಚಿಕ್ಕದ್ದರ ಮೌಲ್ಯಗಳನ್ನೇ ಮರೆತುಬಿಟ್ಟಿದ್ದನಲ್ಲ ಎಂಬುದನ್ನು ನೋಡಿದರೆ ಅಚ್ಛರಿ ಎನಿಸುತ್ತದೆ. 1000, 500ರ ನೋಟು ಹಿಡಿದುಕೊಂಡು ಏನು ಬೇಕಾದರೂ ಮಾಡಿ ಬಿಡುತ್ತೇನೆ, ಜಗತ್ತನ್ನೇ ಬೇಕಾದರೂ ಕೊಂಡು ಬಿಡುತ್ತೇನೆ..! ಎಂದು ಅಹಂನಿಂದ ಮೆರೆಯುತ್ತಿದ್ದ ಮನುಷ್ಯನಿಗೆ ಆ ನೋಟಿಗೆ ಒಂದು ಕೆಜಿ ಅಕ್ಕಿಯೂ ಸಿಗದ ಇಂತಹ ಒಂದು ದಿನ ಬಂದೀತೆಂದು ಊಹಿಸಲೂ ಸಾಧ್ಯವಾಗಿರಲಿಕ್ಕಿಲ್ಲ. ಪರ್ಸ್ ತೆಗೆದು ಅಹಂಕಾರದಿಂದ ಸಾವಿರ, ಐನೂರರ ನೋಟು ಒಗೆಯುತ್ತಿದ್ದವರು ಇವತ್ತು ನೂರು, ಐವತ್ತಕ್ಕೆ ಪರದಾಡಬೇಕಾಗಿದೆ. ಸಾವಿರದ, ಐನೂರರ ಕಂತೆ ಕಂತೆಗಳು ಕೇವಲ ಕಾಗದದ ಚೂರುಗಳಾಗಿ ಒಂದು ನೋಟಿಗೆ ಚಿಲ್ಲರೆ ಹುಡುಕುತ್ತಾ ಭಿಕ್ಷುಕನಂತೆ ಓಡಾಡುವುದಿದೆಯೆಲ್ಲ ಅದು ನಮ್ಮೊಳಗಿನ ಅಹಂಗೆ, ದುರಹಂಕಾರಕ್ಕೆ ಹಾಕಿದ ಸವಾಲು. ನಮ್ಮೊಳಗಿನ ಬಲಿಯನ್ನು ವಾಮನನಂತೆ ತುಳಿದ ಸಮಯ. ಸಾವಿರ, ಐನೂರರ ನೋಟುಗಳು ಒಂದು ದಿನದ ಮಟ್ಟಿಗಾದರೂ ಅಕ್ಕಿ, ಬೇಳೆ, ಎಣ್ಣೆ, ಹಾಲು, ಸಕ್ಕರೆ, ಕಾಪಿಪುಡಿ, ಬೆಂಕಿಪೊಟ್ಟಣ ಈ ಯಾವ ದಿನಬಳಕೆಯ ವಸ್ತುವನ್ನೂ ಕೊಡಲಾರವು. ಬುಕ್ ಮಾಡಿದ ಸಿಲಿಂಡರ್, ಪಿಜ್ಜಾ ಬರ್ಗರ್ ನೂರು, ಐವತ್ತರ ನೋಟುಗಳಿಲ್ಲ ಎಂಬ ಕಾರಣಕ್ಕೆ ವಾಪಸ್ ಹೋಗುತ್ತದೆ ಎಂಬುದು ಎಂತಹ ಚೋದ್ಯ? 100, 50, 20, 10ರ ನೋಟುಗಳನ್ನು ಧಿಕ್ಕರಿಸಿ ಮೆರೆದವರಿಗೆ, ಅವನ್ನು ಕ್ಷುಲ್ಲಕವಾಗಿ ಕಂಡವರಿಗೆ ಈಗ ಒಂದು ದಿನದ ಜೀವನಕ್ಕಾದರೂ ಅವೇ ಬೇಕು! ಮೋದಿ ಬಚ್ಚಿಟ್ಟ ದೊಡ್ಡ ದೊಡ್ಡ ನೋಟುಗಳ ರೂಪದ ಕಪ್ಪು ಹಣದ ನಿರ್ಮೂಲನೆಗೆ ಈ ತಂತ್ರ ಹೂಡಿರಬಹುದು.. ಆದರೆ ಇದು ಮನಸ್ಸಿನಾಳದಲ್ಲಿ ದೊಡ್ಡ ವಸ್ತುಗಳೇ ಶ್ರೇಷ್ಠ, ಚಿಲ್ಲರೆ ವಸ್ತುಗಳೆಂದರೆ ಕ್ಷುಲ್ಲಕ ಎಂದು ಕಪ್ಪುಮಸಿ ಬಳಿದಿಟ್ಟಿದ್ದ ನಮ್ಮ ಮನಸ್ಥಿತಿಗೆ ಭೂತಕನ್ನಡಿ ಹಿಡಿದು ಬಿಚ್ಚಿಟ್ಟ ಘೋರ ಅಣಕ.!
ಮನುಷ್ಯ ಮೂಲತಃ ಚಿಲ್ಲರೆ ಜೀವಿ,. ಅಂದರೆ ಜೀವನಾಧಾರವಾದ ವಿಷಯಗಳು, ವಸ್ತುಗಳು ಸಣ್ಣ ಪುಟ್ಟವುಗಳೇ! ಆದರೆ ತನ್ನ ದೊಡ್ಡಸ್ತಿಕೆಯಿಂದ ದೊಡ್ಡತನದಿಂದ, ದರ್ಬಾರಿನಿಂದ, ದುರಂಹಂಕಾರದಿಂದ ದೊಡ್ಡ ದೊಡ್ಡ ನೋಟುಗಳಿವೆಯೆಂಬ ಅಹಂನಿಂದ ಬೇರೆಯವರ ಮೇಲೆ ದೌರ್ಜನ್ಯವೆಸಗುತ್ತಲೇ ಇರುತ್ತಾನೆ. ‘ಕೀಪ್ ದ ಚೇಂಜ್’ ಎಂದು ಸಾವಿರದ ನೋಟು ಬಿಸುಡಿ ಹೋಗುವ ಮನುಷ್ಯ ಇವತ್ತು ‘ಚೇಂಜ್ ಕೊಡಿ’ ಎಂದು ದಯನೀಯವಾಗಿ ಬೇಡಬೇಕಿದೆ. ನಮ್ಮಂತಹವರು ಐನೂರು, ಸಾವಿರ ಹಿಡಿದು ಸಿಗದ ಚಿಲ್ಲರೆಗಾಗಿ ಹುಡುಕುತ್ತಿದ್ದರೆ ಅದೇ ಮೈಕೈ ಮುರಿದು ಕೂಲಿ, ನಾಲಿ ಮಾಡಿ ಬದುಕುತ್ತಿದ್ದವರಿಗೆ ನೋಟು ಮುರಿಸುವ ಯಾವ ಚಿಂತೆಯೂ ಇಲ್ಲ, ಅವರಿಗೆ ಹಾಲು, ಸಕ್ಕರೆ, ಬೇಳೆ ಎಲ್ಲವೂ ಸಲೀಸಾಗಿ ಎಂದಿನಂತೆಯೇ ಸಿಗುತ್ತದೆ. ಯಾರನ್ನು ನಾವು ಚಿಲ್ಲರೆ ಮನುಷ್ಯರು ಎಂದು ಕೊಂಡಿದ್ದೆವೋ ಒಂದೆರಡು ದಿನದ ಮಟ್ಟಿಗಾದರೂ ಅವರೇ ರಾಜರು! ಅವರು ಯಾರನ್ನೂ ಚಿಲ್ಲರೆಗೆ ಬೇಡಬೇಕಿಲ್ಲ, ಅಂಗಲಾಚಬೇಕಿಲ್ಲ. ‘ಅಯ್ಯೋ ಬೇಕಾದ್ದು ಸಿಗುತ್ತಿಲ್ಲವಲ್ಲಾ ಎಂದ ಕೈ ಕೈ ಹಿಸುಕಿಕೊಳ್ಳಬೇಕಿಲ್ಲ.
ನಾಗರಿಕತೆಯ ಅಭಿವೃದ್ಧಿ ಅಥವಾ ವಿಕಾಸ ಎಂಬುದು ಹೀಗೇ ಬದುಕಿನ ವಾಸ್ತವಿಕತೆಯನ್ನು, ಮೂಲ ಬೇರುಗಳನ್ನು ಮತ್ತು ತನ್ನನ್ನು ತಾನು ಪ್ರಶ್ನಿಸಿಕೊಂಡು ಮೌಲ್ಯಗಳೊಂದಿಗೆ ಬದುಕುವುದನ್ನೇ ಮರೆಸಿಬಿಡುತ್ತದೆ. ನಾಗರಿಕತೆಯ ಅಭಿವೃದ್ದಿಯ ದ್ಯೋತಕವೇ ಈ ದೊಡ್ಡ ದೊಡ್ಡ ನೋಟುಗಳು. ಇವು ನಮ್ಮನ್ನು ದೊಡ್ಡದೊಂದು ಭ್ರಮಾಲೋಕಕ್ಕೆ ಕೊಂಡೊಯ್ಯುತ್ತದೆ. ಹೀಗಾದಾಗ ಬೇರೆಲ್ಲಾ ಸಂಗತಿಗಳು ಚಿಲ್ಲರೆಯಾಗಿ, ಯಕಶ್ಚಿತ್ ತೃಣವಾಗಿ ಕಾಣಲಾರಂಭಿಸುತ್ತವೆ. ಸಮಾಜದ ವ್ಯವಸ್ಥೆಗಳಲ್ಲೇ ಕೊರತೆಯಿದೆ. ಸಂಪತ್ತಿನ ಅಸಮಾನ ಹಂಚಿಕೆಯಿದೆ. ಇದಕ್ಕೆ ವಿರುದ್ಧವಾಗಿ ಕೊರತೆಯೇ ಇಲ್ಲದ ಬದುಕಿನಲ್ಲಿ ಲೋಕದ ಸುಖಗಳು ದೊಡ್ಡ ನೋಟಿದ್ದವರಿಗೆ ಮಾತ್ರ ಸಿಗುತ್ತವೆ ಎಂಬ ಭ್ರಮೆಯಿದೆ. ದೊಡ್ಡ ನೋಟುಗಳಿಂದಲೇ ಇನ್ನೊಬ್ಬನ ಬದುಕನ್ನು ತುಳಿಯವ ಹುನ್ನಾರಗಳು ಶುರುವಾಗುತ್ತವೆ. ಚಿಕ್ಕ ಚಿಕ್ಕ ವಸ್ತುಗಳ ಮೌಲ್ಯ ಕಡೆಗಣಿಸಲ್ಪಟ್ಟು ಗೌಣವಾಗುತ್ತಾ ಹೋಗುತ್ತವೆ. ಒಂದೆರಡು ದಿನ ಕಾಲ ಹಿಂದಕ್ಕೆ ಬಂದು ವಾಸ್ತವ ಬದುಕಿನ ಸತ್ಯ ದರ್ಶನ ಮಾಡಿಸಿದೆ.
ಇಷ್ಟಾದರೂ ಬೆಳಿಗ್ಗೆ ಐದು ನೂರು ರೂಪಾಯಿ ಹಿಡಿದು ಮುಖ ಪೆಚ್ಚು ಮಾಡಿಕೊಂಡು ಹಾಲಿಗೆ ಹೋದಾಗ, ದಿನಸಿ ತರಲು ಹೋದಾಗ ಹಾಲಿನವನು, ಅಂಗಡಿಯವನು ಹೇಳುತ್ತಾನೆ: ‘ಇರ್ಲಿ, ಪರ್ವಾಗಿಲ್ಲ ತಗೊಂಡ್ ಹೋಗಿ ಸರ್, ನೀವು ಮೋಸ ಮಾಡೋರಲ್ಲ, ಇನ್ನೊಂದಿನ ಕೊಟ್ರಾಯ್ತು?’ ಎಂದು ಹೇಳಿ ಬೇಕಾದ್ದನ್ನು ಅವನೇ ಚೀಲಕ್ಕೆ ತುಂಬುತ್ತಾನೆ. ಇಂದು ಕೈಯಲ್ಲಿರುವ ಗುಲಗಂಜಿ, ರಾಗಿಗಂಜಿಯನ್ನೂ ಕೊಡಿಸಲಾಗದ ಸಾವಿರ, ಐನೂರರ ನೋಟಿನ ಮೌಲ್ಯಕ್ಕಿಂತ ಈ ಗಳಿಸಿಕೊಂಡ ಮೌಲ್ಯವೇ ದೊಡ್ಡದು.. ಇದು ನೋಟು ಎನ್ನುವುದು ಒಂದು ಭ್ರಾಮುಕ ಮೌಲ್ಯ, ಜೀವನಮೌಲ್ಯಕ್ಕಿಂತ ದೊಡ್ಡದಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿ ನಮ್ಮ ಕಣ್ ತೆರೆಸಬೇಕಲ್ಲವೇ?
ಹಿದರಲ್ಲಿ ಪಡೆದುಕೊಳ್ಳಲು ಏನು ಜ್ಞಾನ ವಿಲ್ಲ
ಒಳ್ಳೆಯ ಅವಲೋಕನ