ಮಾನಸಿಕ ದಾಳಿಗಳು ನಮ್ಮನ್ನು ಆಯಾಸಗೊಳಿಸುವುದಿಲ್ಲ : ಡಾ. ಮೋಹನ್ ಆಳ್ವ
2016 ರ ನುಡಿಸಿರಿ ಕಾರ್ಯಕ್ರಮ ನಡೆಯುತ್ತಿರುವ ಈ ಸಮಯದಲ್ಲಿ ಆಳ್ವಾಸ್ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರವರ ಬಳಿ ನುಡಿಸಿರಿಯ ಉದ್ದೇಶಗಳ ಕುರಿತು ಶ್ರೀಮತಿ ಮೌಲ್ಯ ಜೀವನ್ ರವರು ನಡೆಸಿದ ಒಂದು ಸಂದರ್ಶನ ನಿಲುಮೆಯ ಓದುಗರಿಗಾಗಿ ಇಲ್ಲಿದೆ.
ಮೌಲ್ಯ ಜೀವನ್: ಈ ಮೊದಲು ‘ಕನ್ನಡ ಮನಸ್ಸು’ ಎಂಬ ಪರಿಕಲ್ಪನೆಯಲ್ಲಿ ಆಳ್ವಾಸ್ ನುಡಿಸಿರಿ ನಡೆಯುತ್ತಿತ್ತು. ಆದರೆ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನಂತರ ವಿಭಿನ್ನ ಪರಿಕಲ್ಪನೆಗಳಲ್ಲಿ ನುಡಿಸಿರಿ ನಡೆಯುತ್ತ ಬಂದಿದೆ. ಈ ಬಾರಿ `ಕರ್ನಾಟಕ-ನಾಳೆಗಳ ನಿರ್ಮಾಣ’ ಎಂಬ ಕೇಂದ್ರ ವಿಷಯದಡಿಯಲ್ಲಿ ನುಡಿಸಿರಿ ನಡೆಯುತ್ತಿದೆ. ಈ ಪರಿಕಲ್ಪನೆಗಳ ಬಗ್ಗೆ ನೀವು ಏನು ಹೇಳುತ್ತೀರಿ?
ಡಾ. ಎಂ. ಮೋಹನ್ ಆಳ್ವ: ಆರಂಭದಲ್ಲಿ `ಕನ್ನಡ ಮನಸ್ಸು’ ಎಂಬ ಮುಖ್ಯ ಪರಿಕಲ್ಪನೆಯಡಿಯಲ್ಲಿ ಬೇರೆ ಬೇರೆ ಆಯಾಮಗಳನ್ನಿಟ್ಟುಕೊಂಡು ನುಡಿಸಿರಿ ಮಾಡುತ್ತಿದ್ದೆವು. ಅದಕ್ಕೆ ತಕ್ಕಂತೆ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೆವು. ಈ ಬಾರಿ `ಕರ್ನಾಟಕ: ನಾಳೆಗಳ ನಿರ್ಮಾಣ’ ಎಂಬ ಬಹಳ ಒಳ್ಳೆಯ ಪರಿಕಲ್ಪನೆಯಲ್ಲಿ ನುಡಿಸಿರಿಯನ್ನು ನಡೆಸುತ್ತಿದ್ದೇವೆ. ಇಡೀ ಜಗತ್ತನ್ನು ಒಳ್ಳೆಯ ವಿಚಾರಗಳತ್ತ, ಮೌಲ್ಯಗಳತ್ತ, ನಾಳೆಗಳತ್ತ ಕೊಂಡೊಯ್ಯಬೇಕೆಂಬುದು ಇದರ ಮುಖ್ಯ ಆಶಯ. ಪ್ರಸ್ತುತ ನಮ್ಮ ಜಗತ್ತು ಬದಲಾಗುತ್ತಿದೆ. ನಮ್ಮ ಸಂಸ್ಕೃತಿ, ಮೌಲ್ಯಗಳು, ವಿಚಾರಧಾರೆಗಳ ಮೇಲೆ ಜಾಗತಿಕ ದಾಳಿಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಭಾಷೆಯನ್ನು, ಭಾಷೆಯನ್ನು ನಂಬಿಕೊಂಡಿರುವ ಸಂಸ್ಕೃತಿಯನ್ನು, ವಿಚಾರಗಳನ್ನು ನೂರುಕಾಲ ಮುಂದಕ್ಕೆ ಕೊಂಡೊಯ್ಯಬೇಕಾದದ್ದು ನಮ್ಮ ಮೇಲಿರುವ ದೊಡ್ಡ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ `ಕರ್ನಾಟಕ: ನಾಳೆಗಳ ನಿರ್ಮಾಣ’ ಪರಿಕಲ್ಪನೆ ತುಂಬಾ ಮುಖ್ಯವೆನಿಸುತ್ತದೆ. ಆದ್ದರಿಂದ ಈ ಬಾರಿಯ ನುಡಿಸಿರಿಯಲ್ಲಿ ನಾಳೆಗಳ ನಿರ್ಮಾಣ ಎಂಬ ಪರಿಕಲ್ಪನೆಯಡಿಯಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ನುಡಿಸಿರಿಯನ್ನು ನಡೆಸಲಾಗುತ್ತಿದೆ.
ಮೌಲ್ಯ ಜೀವನ್: ಈ ಬಾರಿಯ ನುಡಿಸಿರಿ ಅಧ್ಯಕ್ಷರನ್ನಾಗಿ ಸುಮಿತ್ರಾಬಾಯಿಯವರನ್ನು ಆಯ್ಕೆ ಮಾಡಿದ್ದೀರಿ. ಮಹಿಳಾ ಅಧ್ಯಕ್ಷರ ಆಯ್ಕೆಗೆ ಕಾರಣವೇನು?
ಡಾ. ಎಂ. ಮೋಹನ್ ಆಳ್ವ: ನುಡಿಸಿರಿ ಸಮ್ಮೇಳನದ ಆರಂಭದಲ್ಲಿಯೇ ನಾವು ಒಂದು ಬಲವಾದ ನಿರ್ಣಯ ಮಾಡಿದ್ದೆವು. ಆಳ್ವಾಸ್ ನುಡಿಸಿರಿಯಲ್ಲಿ ಲಿಂಗ, ಜಾತಿ, ಮತ ಯಾವುದನ್ನೂ ಪರಿಗಣಿಸದೆಯೇ ಕೇವಲ ಅರ್ಹತೆಯ ಆಧಾರದ ಮೇಲೆ ಅಧ್ಯಕ್ಷರನ್ನು ಆಯ್ಕೆ ಮಾಡಬೇಕೆಂಬುದೇ ಆ ನಿರ್ಣಯ. ನಮ್ಮ ಎಲ್ಲಾ ಆಯ್ಕೆಗಳು ಆ ನಿರ್ಣಯಕ್ಕೆ ಬದ್ಧವಾಗಿರಬೇಕು ಎಂಬ ಆಸೆ ನಮ್ಮದಾಗಿತ್ತು. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ, ನುಡಿಸಿರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಮಹಿಳಾ ಸಾಹಿತಿಗಳು ಕಡಿಮೆಯೆಂದೇ ಹೇಳಬಹುದು. ಏಕೆ ಹೀಗಾಯ್ತು ಎಂಬ ಪ್ರಶ್ನೆ ಹಲವಾರು ಬಾರಿ ನನ್ನನ್ನು ಕಾಡಿದ್ದಿದೆ. ಪ್ರತೀವರ್ಷ ನುಡಿಸಿರಿ ಸಭೆ ನಡೆಯುವ ಮುನ್ನ ಮಹಿಳಾ ಸಾಧಕರನ್ನೇ ಅಧ್ಯಕ್ಷರನ್ನಾಗಿಸಬೇಕೆಂದು ನಾನು ಮಾನಸಿವಾಗಿ ಸಿದ್ಧನಾಗಿ ಬರುವುದಿದೆ. ಆದರೆ ಸುದೀರ್ಘ ಚರ್ಚೆಗಳ ಬಳಿಕ ಪುರುಷರೇ ನುಡಿಸಿರಿ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದರು. ಈ ಬಾರಿ ಮಾತ್ರ ನನ್ನ ನಿರ್ಧಾರ ಅಚಲವಾಗಿತ್ತು. ಸಾಕಷ್ಟು ಅರ್ಹ ಪ್ರತಿಭಾನ್ವಿತ ಸಾಧಕ ಮಹಿಳೆಯರು ನಮ್ಮಲ್ಲಿದ್ದಾರೆ. ಒಬ್ಬ ಶ್ರೇಷ್ಠ ಮಹಿಳಾ ಸಾಧಕಿ ನಮ್ಮ ನುಡಿಸಿರಿ ಅಧ್ಯಕ್ಷ ಗಾದಿಗೇರಬೇಕೆಂಬುದು ನನ್ನ ಬಹುದಿನದ ಕನಸಾಗಿತ್ತು. ಇದು ಮಹಿಳಾವಾದ ಅಥವಾ ಮಹಿಳಾ ಮೀಸಲಾತಿಯ ಗಿಮ್ಮಿಕ್ ಅಂತೂ ಖಂಡಿತಾ ಅಲ್ಲ. ಈ ಎಲ್ಲದರ ಹಿನ್ನೆಲೆಯಲ್ಲಿ ಸೂಕ್ತ ವ್ಯಕ್ತಿಯ ಹುಡುಕಾಟ ನಡೆಸಿದಾಗ ಶ್ರೀಮತಿ ಸುಮಿತ್ರಾಬಾಯಿಯವರ ಹೆಸರು ಪ್ರಬಲವಾಗಿ ಕೇಳಿಬಂತು. ಹೀಗಾಗಿ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆವು.
ಮೌಲ್ಯ ಜೀವನ್: ಈ ಹಿಂದೆ ನಡೆದ 13 ನುಡಿಸಿರಿಗಳಿಗಿಂತ ಈ ಬಾರಿಯ ನುಡಿಸಿರಿ ವಿಭಿನ್ನವಾಗಿ ನಡೆಯಲಿದೆ. ವಿದ್ಯಾರ್ಥಿಸಿರಿ, ಕೃಷಿಸಿರಿ ಜೊತೆಗೆ ಶ್ವಾನಸಿರಿ, ಗೋಸಿರಿ, ಮತ್ಸ್ಯ ಸಿರಿ, ಸಿನಿಸಿರಿ, ಛಾಯಾಚಿತ್ರ ಸಿರಿ, ದೇಹಧಾಡ್ರ್ಯಸಿರಿ ಈ ಬಾರಿಯ ನುಡಿಸಿರಿಗೆ ಜೊತೆಗೂಡಿವೆ. ಇದರ ಬಗ್ಗೆ…..
ಡಾ. ಎಂ. ಮೋಹನ್ ಆಳ್ವ: ಸಾಹಿತ್ಯ ಸಮ್ಮೇಳನ ಅಂದರೆ ಕೇವಲ ಭಾಷೆ, ಭಾಷೆಯನ್ನು ನಂಬಿಕೊಂಡಿರುವ ಸಂಸ್ಕೃತಿ, ಸಾಹಿತ್ಯ ಇಷ್ಟೇ ಮಗ್ಗುಲುಗಳಲ್ಲಿ ನಾವು ನೋಡುತ್ತೇವೆ. ಭಾಷೆಯನ್ನು ಶ್ರೀಮಂತಗೊಳಿಸಿದ ಸಾಹಿತಿಗಳಿಗೆ ಖಂಡಿತ ಗೌರವ ಸಲ್ಲಬೇಕು. ಆದರೆ ಕನ್ನಡ ಭಾಷೆಯನ್ನು, ಸಾಂಸ್ಕೃತಿಕ ಬದುಕನ್ನು, ಕನ್ನಡ ಮನಸ್ಸನ್ನು ಕೇವಲ ಸಾಹಿತಿಗಳು ಮಾತ್ರ ಕಟ್ಟಿದ್ದಲ್ಲ. ಒಟ್ಟು ಆಲೋಚನೆ ಮಾಡುವಾಗ, ವಿಭಿನ್ನ ದೃಷ್ಟಿಕೋನಗಳಿಂದ ಅವಲೋಕನ ಮಾಡುವಾಗ ವೈವಿಧ್ಯಮಯ ಆಲೋಚನೆಗಳು ನಮಗೆ ಸಿಗುತ್ತವೆ. ಉದಾಹರಣೆಗೆ ಸಿನಿಮಾವನ್ನೇ ತೆಗೆದುಕೊಳ್ಳಿ. ಸಿನಿಮಾ ಎಂಬುದು ಬಹುದೊಡ್ಡ ಮಾಧ್ಯಮ. ಕನ್ನಡ ಭಾಷೆ ಬೆಳೆಯುವಲ್ಲಿ ಸಿನಿಮಾದ ಪಾತ್ರವಿಲ್ಲವೇ? ಕೆಲವು ಚಿಕ್ಕಪುಟ್ಟ ಗೊಂದಲಗಳಿದ್ದರೂ ಆಡುಭಾಷೆಯ ಮೂಲಕ ಸಿನಿಮಾವನ್ನ ಶ್ರೀಮಂತಗೊಳಿಸುವಲ್ಲಿ ಸಿನಿಮಾದ ಕೊಡುಗೆ ಅಪಾರವಾದದ್ದು. ವರನಟ ಡಾ. ರಾಜ್‍ಕುಮಾರ್‍ನ್ನೇ ಗಮನಿಸಿ. ಅವರು ಕಲಿತಿದ್ದು ಕೇವಲ ಮೂರನೇ ತರಗತಿಯವರೆಗಾದರೂ 150ಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಕೇವಲ ಒಬ್ಬ ಯಶಸ್ವೀ ನಟನಾಗಿ ಉಳಿಯಲಿಲ್ಲ. ಬದಲಿಗೆ ಒಬ್ಬ ಜನಾನುರಾಗಿ ಕನ್ನಡ ನಾಯಕನಾದರು. ಕನ್ನಡದ ಸ್ವಾಭಿಮಾನವನ್ನು ತಮ್ಮ ಮಾತುಗಳು, ಹಾಡುಗಳ ಮೂಲಕ ಬೆಳೆಸಿದರು. ಅವರು ಸಾಹಿತ್ಯ ರಚಿಸದೇ ಇರಬಹುದು; ಆದರೆ ಸಿನಿಮಾ ಎಂಬ ಮಾಧ್ಯಮದ ಮೂಲಕ ಭಾಷೆ ಕಟ್ಟುವ, ಮನಸ್ಸುಗಳನ್ನು ಒಂದಾಗಿಸುವ ಕೆಲಸ ಮಾಡಿದ್ದಾರೆ.
ನಮ್ಮ ಸಾಂಸ್ಕೃತಿಕ ಕಲೆಗಳೂ ಕೂಡ ಅಷ್ಟೇ. ವಿದ್ಯಾಭ್ಯಾಸ ಮಾಡದೇ ಕೇವಲ ರಂಗಭೂಮಿಯ ಹಿನ್ನಲೆಯಿಂದ ಬರುವ ಕಲಾವಿದರು ತಮ್ಮ ಪಾತ್ರಗಳ ಮೂಲಕ ಭಾಷೆಗೆ ಜೀವಂತಿಕೆ ತುಂಬುತ್ತಿದ್ದಾರೆ. ವೇದಿಕೆಯಲ್ಲಿ ನಿಂತಂತೆಯೇ ಮಾತಿನ ಮಂಟಪ ಕಟ್ಟುವ ಈ ಕಲಾವಿದರು ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಇನ್ನು ಜಾನಪದ ಕಲಾವಿದರನ್ನು ಗಮನಿಸಿ. ಶಾಸ್ತ್ರೀಯವಾಗಿ ಯಾವುದೇ ಗ್ರಂಥಗಳನ್ನು ರಚಿಸದಿದ್ದರೂ ಜಾನಪದ ಕಲೆಯಿಂದಲೇ ಕನ್ನಡದ ಸುಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಯಾವುದೇ ಸಂಗತಿ ಗಮನಿಸಿದರೂ ಅಲ್ಲಿ ಬೇಕಾದಷ್ಟು ಕನ್ನಡ ಕೆಲಸ ಮಾಡಿದವರಿದ್ದಾರೆ. ಈ ದೃಷ್ಟಿಯಲ್ಲಿ ನೋಡಿದಾಗ ನಮಗೆ ಎಲ್ಲವೂ ಅಗತ್ಯವಾಗಿ ಬೇಕು, ಚಿತ್ರ ಬಿಡಿಸುವ ಚಿತ್ರ ಕಲಾವಿದ, ಛಾಯಾಚಿತ್ರಗ್ರಾಹಕ ಎಲ್ಲರೂ ಮುಖ್ಯವಾಗುತ್ತಾರೆ. ಯಾವುದೂ ನಗಣ್ಯ ಎನಿಸುವುದಿಲ್ಲ. ಇದೇ ಕಾರಣಕ್ಕಾಗಿಯೇ ನಾವು ಎಲ್ಲವನ್ನೂ ಒಳಗೊಂಡ ನುಡಿಸಿರಿಯನ್ನು ತರಲು ಪ್ರಯತ್ನಿಸುತ್ತಿದ್ದೇವೆ.
ಮೌಲ್ಯ ಜೀವನ್: ಪಂಚದ್ರಾವಿಡ ಭಾಷೆಗಳು ಈ ಸಲದ ವಿಚಾರಗೋಷ್ಠಿಗಳಲ್ಲಿ ಸೇರಿಕೊಂಡಿವೆ. ಕನ್ನಡ ಸಮ್ಮೇಳನದಲ್ಲಿ ಉಳಿದ ದ್ರಾವಿಡ ಭಾಷೆಗಳನ್ನು ಸೇರಿಸಿದ ಹಿನ್ನೆಲೆಯೇನು?
ಡಾ. ಎಂ. ಮೋಹನ್ ಆಳ್ವ: ನಮ್ಮ ಪರಿಕಲ್ಪನೆ ಇರುವುದು `ಕರ್ನಾಟಕ: ನಾಳೆಗಳ ನಿರ್ಮಾಣ’. ಹೀಗಿರುವಾಗ ಪಂಚದ್ರಾವಿಡ ಭಾಷೆಗಳಲ್ಲಿರುವ ಬೇರೆ ಭಾಷೆಗಳು ನಾಳೆಗಳ ನಿರ್ಮಾಣಕ್ಕಾಗಿ ಏನು ತಯಾರಿ ಮಾಡಿಕೊಂಡಿವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಇದಕ್ಕಾಗಿ ಮಲೆಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿ ಕೆಲಸ ಮಾಡಿದ ನಮ್ಮದೇ ಸಾಹಿತಿಗಳನ್ನಿಟ್ಟುಕೊಂಡು ಆ ರಾಜ್ಯದಲ್ಲಿ, ಆ ಭಾಷೆಗಳಲ್ಲಿ ಯಾವ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿದ್ದಾರೆಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಈ ಗೋಷ್ಠಿಗಳದ್ದು. ನಮ್ಮ ಕರ್ನಾಟಕ, ಕನ್ನಡಿಗರು ಇದರ ಜೊತೆಗೆ ಹೇಗೆ ಸಮತೋಲನ ಸಾಧಿಸಿಕೊಂಡು ಹೋಗಬೇಕೆಂಬುದರ ಬಗ್ಗೆ ನಮ್ಮ ವಿದ್ವಾಂಸರು ಮಾತನಾಡಲಿದ್ದಾರೆ. ನಮ್ಮ ಪಂಚದ್ರಾವಿಡ ಭಾಷೆಗಳ ನಾಳೆಗಳ ನಿರ್ಮಾಣದ ತಯಾರಿಗಳ ಬಗ್ಗೆ ತಿಳಿಯುವುದು ನಮ್ಮ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ಇದು ನಮ್ಮ ಚಿಕ್ಕ ಪ್ರಯತ್ನ.
ಮೌಲ್ಯ ಜೀವನ್: ಈ ಬಾರಿ ಹತ್ತು ವೇದಿಕೆಗಳಲ್ಲಿ ನುಡಿಸಿರಿಯ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದೆ. ಇದರ ಒಟ್ಟು ಸಂಘಟನೆ ಹಾಗೂ ರೂಪುರೇಷೆ ಹೇಗಾಗುತ್ತದೆ?
ಡಾ. ಎಂ. ಮೋಹನ್ ಆಳ್ವ: ಒಬ್ಬ ಕಲಾವಿದನಾಗಿ, ಸಾಂಸ್ಕೃತಿಕ ರಂಗದ ಮೇಲೆ ಅಪಾರ ಗೌರವ ಇಟ್ಟುಕೊಂಡವನಾಗಿ ಹೇಳುವುದಾದರೆ ನುಡಿಸಿರಿಯ ಕಲಾ ವೈಭವಕ್ಕೆ ಈ ಹತ್ತು ವೇದಿಕೆಗಳು ಕೂಡ ಕಡಿಮೆಯೆನಿಸುತ್ತವೆ. ನಮ್ಮ ಇಡೀ ಭಾಷೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ನೋಡಿದರೆ ಈ ವೇದಿಕೆಗಳ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ನಮ್ಮ ನುಡಿಸಿರಿಗೆ ಬರುವ ಹಲವಾರು ಪ್ರೇಕ್ಷಕ ವರ್ಗಗಳಿವೆ. ಪುಟಾಣಿ ಮಕ್ಕಳು, ಯುವಕ ಯುವತಿಯರು, ಪ್ರಬುದ್ಧ ವರ್ಗ, 60 ದಾಟಿದ ಹಿರಿಜೀವಗಳು, ವಿದ್ವಾಂಸರು, ಸಾಧಕರು ಈ ಪ್ರೇಕ್ಷಕವರ್ಗದಲ್ಲಿದ್ದಾರೆ. ಅವರೆಲ್ಲರೂ ನಮ್ಮ ನುಡಿಸಿರಿಯ ಭಾಗವಾಗಬೇಕೆಂಬುದು ನಮ್ಮ ಆಸೆ ಕೂಡ. ಅವರನ್ನು ಬೇರೆ ಬೇರೆ ರೀತಿಯಲ್ಲಿ ಆಕರ್ಷಿಸುವುದು ಅಷ್ಟೇ ಮುಖ್ಯ.
ಚಿಕ್ಕ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಅದಕ್ಕಾಗಿ ಅವರಿಗೆ ಆನೆ, ಮತ್ಸ್ಯ, ಶ್ವಾನ ಹಾಗೂ ವೈವಿಧ್ಯಮಯ ಪುಷ್ಪಗಳನ್ನು ಆಕರ್ಷಣೆಯಾಗಿರಿಸಿದ್ದೇವೆ. ಸಾಮಾನ್ಯವಾಗಿ ನೋಡುವುದಾದರೆ ಸಾಹಿತ್ಯ ಸಮ್ಮೇಳನಗಳಲ್ಲಿ ಯುವಜನತೆ ಭಾಗವಹಿಸುವುದು ಕಡಿಮೆ ಎಂಬ ಅಪವಾದ ನಮ್ಮಲ್ಲಿದೆ. ಈ ಅಪವಾದವನ್ನು ಹೋಗಲಾಡಿಸಿ ಯುವ ಜನತೆಯನ್ನು ಸಮ್ಮೇಳನದ ಮುಖ್ಯ ಭಾಗೀದರರನ್ನಾಗಿ ಮಾಡುತ್ತಿದ್ದೇವೆ. ಪ್ರಬುದ್ಧ ವರ್ಗವನ್ನು ಆಕರ್ಷಿಸಲೆಂದು ಅತ್ಯುತ್ತಮ ವಿಚಾರಧಾರೆಗಳನ್ನಿಟ್ಟುಕೊಂಡ ಗೋಷ್ಠಿಗಳನ್ನು ನಡೆಸುತ್ತಿದ್ದೇವೆ. ಇನ್ನು ಹಿರಿಯ ಜೀವಗಳಿಗೆ ಬೇಕಾದ ಗೌರವ, ಆತಿಥ್ಯವನ್ನು ಯೋಗ್ಯವಾಗಿ ನೀಡಲೆತ್ನಿಸುತ್ತಿದ್ದೇವೆ. ಅವರವರ ಅಭಿರುಚಿಗೆ ತಕ್ಕಂತೆ ಕಾರ್ಯಕ್ರಮಗಳಿದ್ದಾಗ ಖಂಡಿತವಾಗಿಯೂ ಪ್ರೇಕ್ಷಕರು ಬರುತ್ತಾರೆ. ಇದೆಲ್ಲ ಅನೂಚಾನವಾಗಿ ನಡೆಯಬೇಕೆಂದರೆ ಹೆಚ್ಚು ವೇದಿಕೆಗಳು ಬೇಕೇ ಬೇಕು. ಈ ನಿಟ್ಟಿನಲ್ಲಿ 10 ವೇದಿಕೆಗಳನ್ನಿಟ್ಟುಕೊಂಡು ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ.
ಮೌಲ್ಯ ಜೀವನ್: ಇತ್ತೀಚೆಗೆ ಬೆಳಗಾವಿ ಜಿಲ್ಲಾ ಘಟಕದಲ್ಲಿ ನಡೆದ ನುಡಿಸಿರಿ ಘಟಕದಲ್ಲಿ ಸಹಸ್ರ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಈ ಬಾರಿಯ ನುಡಿಸಿರಿಗೆ ಈಗಾಗಲೇ 35,000ಕ್ಕೂ ಮಿಕ್ಕಿದ ದಾಖಲಾತಿಗಳು ನಡೆದಿವೆ. ಈ ಅಪಾರ ಜನಸ್ತೋಮವನ್ನು ಹೇಗೆ ನಿಯಂತ್ರಿಸುತ್ತೀರಿ? ಅದಕ್ಕಾಗಿ ಆಳ್ವಾಸ್ ಆವರಣದಲ್ಲಿ ಏನೆಲ್ಲಾ ಸಿದ್ಧತೆಗಳಾಗಿವೆ?
ಡಾ. ಎಂ. ಮೋಹನ್ ಆಳ್ವ: ಹನ್ನೆರಡು ವರ್ಷಗಳ ಅನುಭವಗಳನ್ನು ಪಡೆದು ಪ್ರತೀ ಬಾರಿಯೂ ನಮ್ಮನ್ನು ನಾವು ಉತ್ತಮಗೊಳಿಸಿಕೊಳ್ಳಲು ಪ್ರಯತ್ನಿಸಿದ್ದೇವೆ. ಅದು ಸಂಘಟನೆ, ಕಾರ್ಯಕ್ರಮ ನಿರ್ವಹಣೆ, ಜವಾಬ್ದಾರಿ ಅಥವಾ ವಿಚಾರಧಾರೆಗಳ ವಿಷಯವಾಗಿರಬಹುದು. ಎಲ್ಲದರಲ್ಲೂ ಉತ್ತಮರಾಗುತ್ತಿದ್ದೇವೆ. ಈಗಾಗಲೇ ದೊಡ್ಡ ಸಾಂಸ್ಕೃತಿಕ ಕಲಾತಂಡವನ್ನಿಟ್ಟುಕೊಂಡು ರಾಜ್ಯದ ಹೆಚ್ಚಿನ ಭಾಗಗಳಲ್ಲಿ ತಿರುಗಾಟ ನಡೆಸುತ್ತಿದ್ದೇವೆ. ಎಲ್ಲಿ ಹೋದರೂ 25,000ಕ್ಕಿಂತಲೂ ಅಧಿಕ ಜನರು ಕಾರ್ಯಕ್ರಮಕ್ಕೆ ಸೇರುತ್ತಾರೆ. `ಜನ ಮರುಳೋ ಜಾತ್ರ ಮರುಳೋ’ ಎಂಬಂತಲ್ಲ; ಸಾಂಸ್ಕೃತಿಕ ಮನಸ್ಸಿರುವ, ಕಲೆಯನ್ನು ಆರಾಧಿಸುವ, ಪ್ರಬುದ್ಧ ಜೀವಿಗಳು ಅಲ್ಲಿ ಸೇರುತ್ತಾರೆ. ಪ್ರತಿ ಬಾರಿಯೂ ಸೌಂದರ್ಯಪ್ರಜ್ಞೆಯಿರುವ ಒಳ್ಳೆಯ ಪ್ರೇಕ್ಷಕ ವರ್ಗ ನಮಗೆ ಸಿಕ್ಕಿದೆ. ಇದು ನಮಗೆ ತುಂಬಾ ಖುಷಿ ನೀಡುವ ವಿಚಾರ. ಕಲೆವು ಕಡೆ ಸತತವಾಗಿ 5-6 ವರ್ಷಗಳಿಂದ ಹೋಗುತ್ತಿದ್ದೇವೆ. ಪ್ರಾರಂಭದಲ್ಲಿ ಹೋಗುವುದಕ್ಕೂ ಈಗ ಹೋಗುವುದಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಬಹಳ ಉತ್ಕೃಷ್ಠ ಮಟ್ಟಕ್ಕೆ ನಾವು ಹೋಗುತ್ತಿದ್ದೇವೆ. ನಮ್ಮ ಆವರಣದಲ್ಲಿ ನಮಗೆ ಯಾವ ಸಮಸ್ಯೆಯೂ ಇಲ್ಲ. 25 ರಿಂದ 30 ಸಾವಿರ ಜನ ಬಂದು ನಿಲ್ಲುತ್ತಾರೆ. ಅವರಿಗೆ ಊಟೋಪಚಾರ, ವಸತಿ, ವ್ಯವಸ್ಥೆಯನ್ನು ಸರಿಯಾಗಿ ಮಾಡುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಇದನ್ನು ನಾವು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದೇವೆ ಕೂಡ. ಈ ಬಾರಿ ಕೂಡ ನುಡಿಸಿರಿಗಾಗಿ ಎಲ್ಲಾ ಪೂರ್ವಸಿದ್ಧತೆಗಳು ಆರಂಭವಾಗಿವೆ.
ಮೌಲ್ಯ ಜೀವನ್: ಡಾ. ಎಂ. ಮೋಹನ್ ಆಳ್ವ ಎಂದರೆ `ಸಂಘಟನಾ ಸಾಮ್ರಾಟ್’ ಎನ್ನುತ್ತಾರೆ. ಅಚ್ಚುಕಟ್ಟುತನದ ಸಂಘಟನೆಗೆ ಮತ್ತೊಂದ ಹೆಸರೇ ಡಾ. ಆಳ್ವರು. ಈ ಸಂಘಟನೆಯ ಹಿಂದೆ ಎಷ್ಟು ಕಷ್ಟಗಳಿವೆ? ಇದರ ಬಗ್ಗೆ ತೃಪ್ತಿಯಿದೆಯಾ?
ಡಾ. ಎಂ. ಮೋಹನ್ ಆಳ್ವ: ಸಂಘಟನೆಯೆಂಬುದು ಕೂಡ ಇತರ ವಿಷಯಗಳಂತೆಯೇ. ಇದು ದಿಢೀರನೇ ತೆಗೆದುಕೊಳ್ಳುವ ನಾಯಕತ್ವ. ಅದೊಂದು ಅಸಾಮಾನ್ಯ ಜವಾಬ್ದಾರಿಯೆಂದು ನನಗೆ ಯಾವಾಗಲೂ ಅನಿಸಿಲ್ಲ. ನನಗೆ ಯಾವ ವಿಷಯದಲ್ಲಿ ಶಕ್ತಿ, ಸಾಮರ್ಥ್ಯ ಇದೆಯೋ ಆ ವಿಷಯದಲ್ಲಿ ಮಾತ್ರ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಇದು ಇಂದು ನಿನ್ನೆಯ ವಿಚಾರವಲ್ಲ. ಬಾಲ್ಯದಿಂದಲೂ ನಾನು ಜವಾಬ್ದಾರಿಗಳನ್ನು ವಹಿಸಿಕೊಂಡು, ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬೆಳೆದವನು. ಯಾವುದೇ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಯಾವುದೇ ರಿಸ್ಕ್ ಇಲ್ಲ ಎಂಬುದೂ ನನಗೆ ಗೊತ್ತು. ಈ ಶಿಕ್ಷಣ ಸಂಸ್ಥೆ ಆರಂಭಿಸುವಾಗ ವಿದ್ಯಾಭ್ಯಾಸ ಅಂದರೆ ಏನು, ಅಲ್ಲಿ ನಾವು ಯಾವ್ಯಾವ ರಿಸ್ಕ್’ಗಳನ್ನು ತೆಗೆದುಕೊಳ್ಳಬೇಕಾಗುವುದೆಂಬುದನ್ನು ಅರಿತು ಅದರಂತೆ ರಿಸ್ಕ್ ಗಳನ್ನು ತೆಗೆದುಕೊಳ್ಳುತ್ತಾ ಹೋದವನು. ನುಡಿಸಿರಿ- ವಿರಾಸತ್ ಆಗುವಾಗ ಕೂಡ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವಾಗ ನಮಗೆ ಸವಾಲುಗಳು ಎದುರಾಗುತ್ತವೆ, ತಾಳ್ಮೆ ತಪ್ಪುವ ಪರಿಸ್ಥಿತಿ ಬರುತ್ತದೆ. ಎಷ್ಟೇ ಚೆನ್ನಾಗಿ ಸಂಘಟಿಸಿದರೂ ಪ್ರತಿಬಾರಿ ನುಡಿಸಿರಿ-ವಿರಾಸತ್ ಮುಗಿದ ಮೇಲೆ ನಮ್ಮ ಮೇಲೆ ಮಾನಸಿಕ ದಾಳಿಗಳಾಗುತ್ತವೆ. ಆದರೆ ಈ ದಾಳಿಗಳಿಂದ ನಮಗೆಂದೂ ಆಯಾಸವಾಗಿಲ್ಲ. ಎಲ್ಲವನ್ನೂ ನಿಭಾಯಿಸಬೇಕು; ಎಲ್ಲವನ್ನೂ ಸಹಿಸಿಕೊಳ್ಳಬೇಕು. ತಪ್ಪುಗಳನ್ನು ಬದಿಗೆ ಸರಿಸಿ ಇನ್ನೂ ಒಳ್ಳೆಯ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹೇಗೆ ಕೊಡಬಹುದು ಎಂಬುದನ್ನು ಯೋಜಿಸಬೇಕು. ನುಡಿಸಿರಿ ಹತ್ತರೊಟ್ಟಿಗೆ ಹನ್ನೊಂದು ಎಂಬಂತಾಗದೇ ವೈವಿಧ್ಯಮಯವಾಗಿ, ವಿಭಿನ್ನವಾಗಿ ಮೂಡಿ ಬರಬೇಕು. ಯಾವುದು ಒಳ್ಳೆಯ ನುಡಿಸಿರಿ ಎನ್ನುವಾಗ ಈ ವರ್ಷದ್ದೇ ಶ್ರೇಷ್ಠ ಎಂಬಂತಾಗಬೇಕು. ಹಾಗಾದಾಗ ಮಾತ್ರ ನುಡಿಸಿರಿ ನಿತ್ಯ ನಿರಂತರವಾಗಿರಲು ಸಾಧ್ಯ. ಈ ಕೆಲಸದಲ್ಲಿ ಆಯಾಸವೆಂಬುದೇ ಇಲ್ಲ. ಇದು ನಮ್ಮ ತೃಪ್ತಿ, ನೆಮ್ಮದಿ. ಆದ್ದರಿಂದ ಜವಾಬ್ದಾರಿಗಳನ್ನು ತೆಗೆದುಕೊಳ್ಳಕೊಳ್ಳುವ ಮನಸ್ಸಿದೆ.
ಮೌಲ್ಯ ಜೀವನ್: ಆಳ್ವಾಸ್ ನುಡಿಸಿರಿಯಲ್ಲಿ ಲಕ್ಷ ಲಕ್ಷ ಜನ ಆವರಣಕ್ಕೆ ಬಂದರೂ ಕೂಡ ಇಲ್ಲಿ ಯಾವುದೇ ಪೊಲೀಸ್ ಅವಶ್ಯಕತೆ ಇದೆ ಎನ್ನಿಸುವುದಿಲ್ಲ. ಇಲ್ಲಿ ಎಲ್ಲರೂ ಸ್ವಯಂ ಸೇವಕರು. ಇದರ ಹಿಂದೆ ಯಾವ ಶಕ್ತಿ ಕೆಲಸ ಮಾಡ್ತಾ ಇದೆ?
ಡಾ. ಎಂ. ಮೋಹನ್ ಆಳ್ವ: ಇಲ್ಲಿ ಬರುವವರು ಸಜ್ಜನರು, ಸಮಾನ ಮನಸ್ಕರು. ಎಲ್ಲಿಯೂ ಸಲ್ಲದ ಅನಗತ್ಯ ವ್ಯಕ್ತಿಗಳು ಎಂದಿಗೂ ಈ ಆವರಣಕ್ಕೆ ಬರುವುದಿಲ್ಲ. ಹಾಗಾಗಿ ಇಲ್ಲಿಯವರೆಗೂ ನಮಗೆ ಪೊಲೀಸ್ ಸೇವೆಯ ಅವಶ್ಯಕತೆ ಖಂಡಿತ ಉಂಟಾಗಿಲ್ಲ. ಬಂದಂತಹ ಪ್ರೇಕ್ಷಕರು ತಾವೇ ಸ್ವಯಂ ಶಿಸ್ತನ್ನು ರೂಢಿಸಿಕೊಂಡು ಸಭ್ಯತೆಯಿಂದಿರುವುದರಿಂದ ನಮಗೆ ಬಹಳಷ್ಟು ಅನುಕೂಲವಾಗಿದೆ. ಪೊಲೀಸ್ ಕಣ್ಗಾವಲು ಇಲ್ಲದೆಯೇ ನುಡಿಸಿರಿಯಂತಹ ಕಾರ್ಯಕ್ರಮಗಳು ನಡೆಯಬೇಕೆಂಬುದು ನಮ್ಮ ಆಸೆಯೂ ಹೌದು.
ಮೌಲ್ಯ ಜೀವನ್: ತಮಗೆ ಸಮಗ್ರ ಕನ್ನಡ ಕಟ್ಟುವ ಯೋಚನೆಯಿದೆ. ಇದಕ್ಕಾಗಿ 2018ರಲ್ಲಿ ನಡೆಯಲಿರುವ ವಿಶ್ವ ನುಡಿಸಿರಿಯ ಯೋಜನೆಗಳು, ರೂಪುರೇಷೆಗಳು ಈಗಾಗಲೇ ಆರಂಭಗೊಂಡಿವೆ. ಈ ಯೋಜನೆಗಳನ್ನು ನಮ್ಮೊಂದಿಗೆ ಹಂಚ್ಕೊಳ್ತೀರಾ?
ಡಾ. ಎಂ. ಮೋಹನ್ ಆಳ್ವ: ಸಮಗ್ರವಾಗಿ ಕನ್ನಡ ಕಟ್ಟುವ ಚಿಂತನೆ ನಮಗೆ ಯಾವಾಗಲೂ ಇರಬೇಕು. ಉದಾಹರಣೆಗೆ ದೇವಸ್ಥಾನವನ್ನೇ ತೆಗೆದುಕೊಳ್ಳಿ. ದೇವಸ್ಥಾನವಿರುವುದು ಧರ್ಮವನ್ನು ಮುನ್ನಡೆಸಿಕೊಂಡು ಹೋಗುವುದಕ್ಕೆ, ನಮ್ಮ ಸಂಸ್ಕೃತಿಯನ್ನು ಕಾಪಾಡುವುದಕ್ಕೆ. ಇಲ್ಲಿ ದಿನನಿತ್ಯದ ಪೂಜೆಗಳು ಸಾಂಪ್ರದಾಯಿಕವಾಗಿ, ನಿಷ್ಠೆಯಿಂದ ನಡೆದುಕೊಂಡು ಬರಬೇಕು. ಆಮೇಲೆ ವರ್ಷಕ್ಕೊಮ್ಮೆ ವಾರ್ಷಿಕೋತ್ಸವ ಆಗಬೇಕು. ಇನ್ನು ಹನ್ನೆರಡು ವರ್ಷಗಳಿಗೊಮ್ಮೆ ಬ್ರಹ್ಮ ಕಲಶೋತ್ಸವ ನಡೆಯಲೇಬೇಕು. ದೇವಸ್ಥಾನವೇನಾದರೂ ಶಿಥಿಲಗೊಂಡಿದ್ದರೆ ಅದಕ್ಕೆ ಬ್ರಹ್ಮ ಕಲಶೋತ್ಸವ ಮಾಡಿ ಹೊಸ ರೂಪ ಕೊಡಬೇಕು. ನಮ್ಮ ಆವರಣದಲ್ಲಿಯೂ ಹಾಗೆಯೇ. ದಿನನಿತ್ಯ ಸಂಸ್ಕೃತಿ- ಸಾಂಸ್ಕೃತಿಕತೆಯ ಪರವಾದ ಚಟುವಟಿಕೆಗಳು ನಡೆಯಬೇಕು. ವರ್ಷಕ್ಕೊಮ್ಮೆ ಉತ್ಸವದಂತೆ ನುಡಿಸಿರಿ-ವಿರಾಸತ್ ನಡೆಯಬೇಕು. ನಿತ್ಯ ಮಕ್ಕಳಲ್ಲಿ ಹೊಸ ಸ್ಫೂರ್ತಿ ತುಂಬಲು ಸಂಗೀತ, ನೃತ್ಯ ಇತರೆ ಕಾರ್ಯಕ್ರಮಗಳು ಆಗಬೇಕು. ಹೀಗೆ ಹತ್ತು ಹನ್ನೆರಡು ವರ್ಷವಾಗುವಾಗ ನಮ್ಮ ಯೋಜನೆ ಯೋಚನೆಗಳು ಶಿಥಿಲಗೊಂಡಿರುತ್ತವೆ. ಅದರ ಮೂಲ ಆಶಯಗಳಿಗೆ ಧಕ್ಕೆ ಬಂದಿರುತ್ತದೆ. ಆಗ ಜನರ ನಿರೀಕ್ಷೆಗಳೂ ಬದಲಾಗಿರುತ್ತವೆ. ಆ ಸಮಯದಲ್ಲಿ ಬ್ರಹ್ಮ ಕಲಶದಂತೆ ವಿಶ್ವ ನುಡಿಸಿರಿ ವಿರಾಸತ್ ಕೂಡ ವಿಶ್ವ ಮಟ್ಟದ ಆಲೋಚನೆಗಳನ್ನು ಒಗ್ಗೂಡಿಸಿಕೊಂಡು ಬರಬೇಕು. ಈಗ ಒಂದು ಬಾರಿ ವಿಶ್ವ ನುಡಿಸಿರಿ-ವಿರಾಸತ್‍ನ್ನು ಅದ್ಭುತ ರೀತಿಯಲ್ಲಿ ಆಯೋಜನೆ ಮಾಡಿದ ಅನುಭವವಿದೆ. ಅದರಿಂದ ನೂರು ಸಂದೇಶಗಳು ನಮ್ಮ ರಾಜ್ಯದ ಮೂಲೆ ಮೂಲೆಗಳನ್ನು ತಲುಪಿವೆ. ನುಡಿಸಿರಿಗೆ 15 ತುಂಬುವಾಗ, ವಿರಾಸತ್‍ಗೆ 25 ವರ್ಷ ತುಂಬುವಾಗ ಪುನಃ ವಿಶ್ವ ನುಡಿಸಿರಿ ವಿರಾಸತ್ ನಡೆಸುವ ಯೋಜನೆಯಿದೆ. ಈ ಮೂಲಕ ನುಡಿಸಿರಿ-ವಿರಾಸತ್‍ನ್ನು ನೂರು ವರ್ಷ ಕಾಲ ಮುಂದಕ್ಕೆ ಕೊಂಡೊಯ್ಯುವ ಯೋಜನೆಯಿದೆ.
ನುಡಿಸಿರಿ ಕಾರ್ಯಕ್ರಮದ ನಿರಂತರ ಮಾಹಿತಿ ಮತ್ತು ಚಿತ್ರಗಳಿಗಾಗಿ ಆಳ್ವಾಸ್ ನುಡಿಸಿರಿ – Alva’s Nudisiri ಪೇಜ್ ಲೈಕ್ ಮಾಡಿ.
ಅದ್ಭುತ ವಿಚಾರಧಾರೆ. ಕಟ್ಟುವ ಮನಸ್ಸುಗಳು ಯೋಚಿಸುವ ರೀತಿಯೇ ಒಂದು ಸೋಜಿಗ.
ಎಲ್ಲಿಯೂ ಸಲ್ಲದ ನಿಷ್ಪ್ರಯೋಜಕ ಜನಗಳು ನುಡಿಸಿರಿಗೆ ಬರುವುದೇ ಇಲ್ಲ ಎಂಬ ಮಾತು ಬಹಳ ಪ್ರಸ್ತುತ.
ಇದೇ ಮಾತು ನಿಲುಮೆಯ ಕೆಲವು ನಿಷ್ಪ್ರಯೋಜಕ ಡೊಂಕು ಬಾಲದವರಿಗೂ, ಪಾತಕಿಯನ್ನು ಪಾತಕಿ ಎನ್ನಲಾಗದ ಹೇತ್ಲಾಂಡಿಗಳಿಗೂ, ಶಂಕರಾಚಾರ್ಯರನ್ನು ಹಳಿಯಲು ಭಗವಾನ್ ಎಂಬ ತರಕಲಾಂಡಿಯ ಆಧಾರ ಕೊಡುವ ಪರಕ್ಊ ಇಹಕ್ಕೂ ಸಲ್ಲದ ಪರಗತಿಪರ ಎಂದು ಕರೆ್ಉಕೊಳ್ಳುವ ಸಿಕ್-ಊಳಿಡರ್ಗಳಿಗೂ ಅನ್ವಯಿಸುತ್ತದೆ.