ಸ್ಫೂರ್ತಿ ದಾರಿಯ ದೀಪಗಳು
– ಶಮಂತ್ ಬಿ ಎಸ್
‘ಜೀವನವೇ ದುಃಖ’ ಎಂಬ ಬುದ್ಧನ ಮಾತನ್ನು, ನಮ್ಮ ದೇಶವನ್ನು ಪ್ರತಿನಿಧಿಸಿದ ‘ಪ್ಯಾರಾಲಂಪಿಕ್ಗಳು’ ಗಂಭೀರವಾಗಿ ಪರಿಗಣಿಸಲಿಲ್ಲ. ಇವರ ಪ್ರತಿನಿತ್ಯದ ಜೀವನವೇ ಜ್ವಾಲೆಯ ಕೂಪವಾಗಿದ್ದರೂ, ಆತ್ಮಸ್ಥೈರ್ಯವನ್ನು ಮಾತ್ರ ಕಳೆದುಕೊಳ್ಳದಿರುವುದು ನಮ್ಮೆಲ್ಲರಿಗೂ ಸ್ಫೂರ್ತಿಯ ಸರಮಾಲೆಯೇ ಸರಿ. ಇತ್ತೀಚಿಗೆ ಮುಕ್ತಾಯಗೊಂಡ ಪ್ಯಾರಾಲಂಪಿಕ್ಸ್ ಸ್ಪರ್ಧೆಯಲ್ಲಿ ಭಾರತ ೪ ಪದಕಗಳನ್ನು ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ೪೩ನೇ ಸ್ಥಾನವನ್ನು ಪಡೆಯಿತು. ನಮ್ಮ ರಾಷ್ಟ್ರದಲ್ಲಿ ಕ್ರೀಡೆಗೆ ನೀಡುತ್ತಿರುವ ಅಲ್ಪ ಪ್ರೋತ್ಸಾಹಕ್ಕೆ ಹೋಲಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸ್ಥಾನವನ್ನು ನಾವು ಹೆಮ್ಮೆಯಿಂದಲೇ ಪರಿಗಣಿಸಬೇಕು.
ಈ ವರ್ಷದ ಒಲಂಪಿಕ್ಸ್ನಲ್ಲಿ ಪದಕಗಳನ್ನು ಪಡೆದ ತಂಗವೇಲು, ದೀಪ ಮಲಿಕ್, ದೇವೇಂದ್ರ ಝಝಾರಿಯ ಅವರ ಹಿಂದೆ ಸಾಕಷ್ಟು ತ್ಯಾಗ, ನೋವುಗಳೂ ಇವೆ ಹಾಗೂ ಹಲವಾರು ಸ್ಫೂರ್ತಿದಾಯಕ ಸಂಗತಿಗಳೂ ಇವೆ. ಆದರೆ ನಮ್ಮ ಮಾಧ್ಯಮ ಮತ್ತು ನಮ್ಮ ನಡುವಿನ ಜನ ಇಂತಹ ವಿಷಯಗಳಿಗೆ ಹೆಚ್ಚಿನ ಆಧ್ಯತೆ ನೀಡದಿರುವುದು ವಿಷಾದದ ಸಂಗತಿ. ಇದೆಲ್ಲ ನನ್ನ ಜ್ಞಾಪಕಕ್ಕೆ ಬಂದಿದ್ದು ಇತ್ತೀಚೆಗೆ ರಿಯೋ ನಲ್ಲಿ ನಡೆದ ಪ್ಯಾರಾಲಂಪಿಕ್ಸ್ನಲ್ಲಿ ತಂಗವೇಲು ಚಿನ್ನದ ಪದಕವನ್ನು ಪಡೆದು ತಿರಂಗದ ಕೀರ್ತಿ ಪತಾಕೆಯನ್ನು ಹಾರಿಸಿದಾಗ. ನಮ್ಮ ದೇಶದಲ್ಲಿ ಕ್ರೀಡೆಗೆ ಉತ್ತಮ ಪ್ರೋತ್ಸಾಹವಿಲ್ಲದಿದ್ದರೂ ನಮ್ಮನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ಕಷ್ಟವಾದರೂ ಹೆಮ್ಮೆ ಪಡಿಸುವ ಕ್ರೀಡಾರತ್ನಗಳನ್ನು ನೆನೆದರೆ ಮೈ ಜುಮ್ಮೆನಿಸುತ್ತದೆ. ತಂಗವೇಲು ನಮ್ಮೆಲ್ಲರಿಗೂ ಸ್ಫೂರ್ತಿ ಮತ್ತು ಧೈರ್ಯದ ಪ್ರತೀಕ. ತಮಿಳು ನಾಡಿನ ಸೇಲಂ ಹತ್ತಿರದ ಪರಿಯವಡಗಮ್ಪಟ್ಟಿ ಎಂಬ ಊರು ಅತಿ ಚಿಕ್ಕದು, ಕಡುಬಡತನದ ಈ ಊರಿನಲ್ಲಿ ತಂಗವೇಲು ಕೇವಲ ಉಸಿರು ಮಾತ್ರ ಬದುಕು ಎಂಬಂತೆ ಜೀವಿಸುತ್ತಿದ್ದರು. ತಂದೆ ಮಕ್ಕಳನ್ನೂ ಲೆಕ್ಕಿಸದೆ ಬಿಟ್ಟು ಹೋಗಿದ್ದ ಸಮಯವದು. ಅವರ ತಾಯಿ ದಿನವೂ ಇಟಕೆ ಎತ್ತಿ ನೂರು ರೂಪಾಯಿ ಗಳಿಸಿ ಮೂರು ಜನ ಮಕ್ಕಳನ್ನು ಸಾಕುತ್ತಿದ್ದರೂ ಮಕ್ಕಳನ್ನು ತೃಪ್ತಿಪಡಿಸಲು ಬಹಳ ಕಷ್ಟವಾಗುತಿತ್ತು. ಗಾಯದ ಮೇಲೆ ಬರೆಯಂತೆ ತಂಗವೇಲು ಚಿಕ್ಕ ಹುಡುಗನಿದ್ದಾಗ ಕಾಲಿನ ಮೇಲೆ ಲಾರಿ ಹರಿಯಿತು. ಇದರ ಪರಿಣಾಮವಾಗಿ ತಮ್ಮ ಬಲಗಾಲಿನ ಸ್ವಾಧೀನ ಹೋಯಿತು. ಮಗನ ಕಾಲು ಸರಿ ಪಡಿಸಲು ೩ ಲಕ್ಷ ರೂಪಾಯಿಗಳನ್ನು ಸಾಲ ತೆಗೆದುಕೊಂಡ ಆ ತಾಯಿ ಇಂದಿಗೂ ತೀರಿಸುತ್ತಿದ್ದಾರೆ. ಆದರೆ ಕಾಲನ್ನು ಮಾತ್ರ ಸರಿಪಡಿಸಲು ಸಾಧ್ಯವಾಗಲಿಲ್ಲ! ಜೀವನವು ಇಷ್ಟೆಲ್ಲಾ ಸವಾಲುಗಳನ್ನು ಎಸೆದರೂ ಧೃತಿಗೆಡದೆ, ಜೀವನಕ್ಕೇ ಸಾವಲೆಸೆದದ್ದು ಅಚ್ಚರಿಯ ಸಂಗತಿ. ಹೋದದ್ದು ಕಾಲು ಅಷ್ಟೆ, ಅವರ ಛಲವಲ್ಲ, ಶಾಲೆಯ ದಿನಗಳಲ್ಲಿಯೇ ಅಪೂರ್ವ ಶ್ರದ್ದೆಯಿಂದ ವಾಲಿಬಾಲ್ ಮತ್ತು ಹೈಜಂಪ್ನಂತಹ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಶಾಲೆಯಲ್ಲಿ ನಡೆದ ಹೈಜಂಪ್ ಸ್ಪರ್ಧೆಯಲ್ಲಿ ೨ನೇ ಸ್ಥಾನ ಪಡೆದಾಗ, ಎಲ್ಲರ ಗಮನ ಸೆಳೆದರು. ಅಂದಿನಿಂದ ಶಾಲಾ ಮಟ್ಟದಲ್ಲಿ ನಡೆಯುತ್ತಿದ್ದ ಹೈಜಂಪ್ ಮತ್ತು ಇತರೆ ಸ್ಪರ್ಧೆಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದರು. “ಕಠಿಣ ಪರಿಶ್ರಮದಿಂದ ಸದಾ ತಮ್ಮ ಧ್ಯೇಯದ ಕಡೆ ಗಮನ. ಅಭ್ಯಾಸದ ಸಮಯದಲ್ಲಿ ಕಾಲಿನ ಮೇಲೆ ಗಾಯಗಳಾಗಿ ವಾಸಿಯಾಗಲು ವಾರಗಳೇ ಹಿಡಿಯುತ್ತಿದ್ದರೂ ಯಾವುದನ್ನೂ ಲೆಕ್ಕಿಸದೆ ಅಭ್ಯಾಸ ಮಾಡುತ್ತಿದ್ದರು” ಎಂದು ತಮಿಳುನಾಡು ಪ್ರಾಧಿಕಾರದ ಕೋಚ್ ಎಳಮ್ಪರಿತಿ ಹೇಳುತ್ತಾರೆ. ಇಂತಹ ಸಮಯದಲ್ಲಿ ಅವರ ತಾಯಿ ಸರೋಜ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಾಗ ಇಟುಕೆ ಎತ್ತುವ ಕೆಲಸವನ್ನು ಬಿಡಿಸಿ ೫೦೦ ರೂಪಾಯಿ ಸಾಲ ಮಾಡಿ ತರಕಾರಿ ಮಾರುವ ಒಂದು ಸಣ್ಣ ಬುಟ್ಟಿ ಮತ್ತು ತರಕಾರಿಗಳನ್ನು ತೆಗೆದುಕೊಟ್ಟರು.
ಪ್ಯಾರಾಲಂಪಿಕ್ಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಕಲಚೇತನರಿಗಾಗಿ ನಡೆಯುವ ಕ್ರೀಡಾ ಸ್ಪರ್ಧೆ. ೧೯೪೮ರಲ್ಲಿ ೨ನೇ ಮಹಾಯುದ್ಧದ ಬ್ರಿಟೀಷ್ ಯೋಧರು ಆರಂಭಿಸಿದ ಈ ಕ್ರೀಡಾಕೂಟ, ಇಂದು ಅತಿದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ವಿಶ್ವದ ಅನೇಕ ರಾಷ್ಟ್ರಗಳ ಕ್ರೀಡಾಪಟುಗಳು ಪ್ಯಾರಾಲಂಪಿಕ್ಸ್ನಲ್ಲಿ ಭಾಗವಹಿಸುತ್ತ ಬಂದಿದ್ದಾರೆ.
೨೦೧೩ರ ರಾಷ್ಟ್ರೀಯ ಪ್ಯಾರಾಲಂಪಿಕ್ ಚಾಂಪಿಯನ್ಶಿಪ್ ತಂಗವೇಲು ಅವರ ಜೀವನದ ಪ್ರಮುಖ ಘಟ್ಟವಾಯಿತು. ಇವರ ಪ್ರತಿಭೆಯನ್ನು ಬೆಂಗಳೂರು ಮೂಲದ ಕೋಚ್ ಸತ್ಯನಾರಾಯಣ ಗುರುತಿಸಿ ಬೆಂಗಳೂರಿನಲ್ಲಿ ತರಬೇತಿಗಾಗಿ ಆಹ್ವಾನಿಸಿ ೧೦,೦೦೦ ರೂಪಾಯಿಗಳ ಕಲಿಕಾ ವೇತನವನ್ನೂ ಸಹ ನೀಡಿದರು. ಬೆಂಗಳೂರಿನಲ್ಲಿ ಎರಡು ವರ್ಷಗಳ ಕಠಿಣ ತರಬೇತಿಯ ನಂತರ ೨೦೧೬ರಲ್ಲಿ ಟ್ಯುನೀಷಿಯಾದಲ್ಲಿ ನಡೆದ ಐಪಿಸಿ ಗ್ರ್ಯಾಂಡ್ ಪಿಕ್ಸ್ ನಲ್ಲಿ ೧.೭೮ಮಿ ಎತ್ತರ ಜಿಗಿಯುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಭರವಸೆ ಮೂಡಿಸಿದ್ದು ಅವರ ಯಶಸ್ಸಿನ ಮೊದಲ ಹೆಜ್ಜೆ. ಪ್ಯಾರಾಲಂಪಿಕ್ಸ್ ಸ್ಪರ್ಧೆ ಸಹ ಸುಲಭವಾಗಿರಲಿಲ್ಲ, ಇದರಲ್ಲಿ ಭಾಗವಹಿಸಿದ ಎಂಟು ಮಂದಿ ಅಳಗಪ್ಪನ್ಗಿಂತ ಕೆಲವೇ ಮಿಲಿಮೀಟರ್ ಹಿಂದಿದ್ದರು. ಇದರಲ್ಲಿ ೧.೮೬ ಮೀಟರ್ ಎತ್ತರ ಜಿಗಿದು ಕಂಚು ಪದಕ ಪಡೆದ ಭಾರತದ ವರುಣ್ ಭಾಟಿಯ ಸಹ ಒಬ್ಬರು. ತಂಗವೇಲು ೧೨ ವರ್ಷಗಳ ನಂತರ ೧.೮೯ ಮೀಟರ್ ಜಿಗಿದು ನಮ್ಮ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿರುವುದು ಅತ್ಯಂತ ಸ್ಫೂರ್ತಿದಾಯಕ ವಿಷಯ. ಎರಡು ರಾಜ್ಯಗಳ ನಡುವೆ, ಕನ್ನಡ ಮತ್ತು ತಮಿಳಿನ ನಡುವೆ ಐಕ್ಯತೆ ಬೆಳೆಸುವಂತಹ ಇಂತಹ ಘಟನೆಗಳನ್ನು ಮಾಧ್ಯಮಗಳು ತೋರಿಸಬಹುದಲ್ಲವೇ.
ಮನುಷ್ಯನು ಅನಾರೋಗ್ಯಕ್ಕೆ ತುತ್ತಾದರೆ ತನ್ನ ಕೆಲಸದ ಮೇಲಿನ ಗಮನ ಕಡೆಮೆಯಾಗುವುದು ಸಹಜ. ದೀಪ ಮಲಿಕ್ ೧೯೯೯ರಲ್ಲಿ ಸ್ಪೈನಲ್ ಟ್ಯೂಮರ್ ನಿಂದ ಶಾಶ್ವತವಾಗಿ ವೀಲ್ಚೇರ್ ಹಿಡಿಯಬೇಕಾಯಿತು. ೩ ಟ್ಯೂಮರ್ ಸರ್ಜರಿ, ಬುಜದ ನಡುವೆ ೧೮೩ ಕುಟ್ಟುಗಳೊಂದಿಗೆ ಕಷ್ಟದ ಪ್ರಕೋಪವನ್ನು ಎದುರಿಸಬೇಕಾಯಿತು. ಆದರೆ ತಮ್ಮ ಅಂಗವೈಕಲ್ಯ ತಮ್ಮ ಉತ್ಸಾಹವನ್ನು ಮಾತ್ರ ತಡೆಯಲು ಆಗಲಿಲ್ಲ. ಅಥ್ಲೆಟಿಕ್ಸ್, ಈಜು, ಬೈಕ್ ಸಾಹಸ ಮತ್ತು ಹಲವಾರು ಸಾಹಸದ ಕ್ರೀಡೆಗಳಲ್ಲಿ ಯಶಸ್ವಿಯಾದರು. ಅನಾರೋಗ್ಯಕ್ಕೆ ತುತ್ತಾದಾಗ ತಮ್ಮ ಪತಿ ಕಾರ್ಗಿಲ್ನಲ್ಲಿ ಹೋರಾಡುತ್ತಿದ್ದರೆ ದೀಪ ತಮ್ಮ ಟ್ಯೂಮರ್ನೊಂದಿಗೆ ಹೋರಾಡುತ್ತಿದ್ದರು. ಕೊನೆಗೂ ಗಂಡ ಹೆಂಡತಿ ಇಬ್ಬರೂ ಎರಡೂ ಯುದ್ದಗಳನ್ನು ಸಫಲವಾಗಿ ಜಯಸಿದರು. ದೀಪ ತಾವು ವೀಲ್ಚೇರ್ಗೆ ಶಾಶ್ವತ ಎಂದು ಒಪ್ಪಿಕೊಳ್ಳಲು ಮೂರು ವರ್ಷಗಳೇ ಬೇಕಾಯಿತು. ಹಿಮಾಲಯನ್ ಮೋಟರ್ ಸ್ಪೋರ್ಟ್ಸ್ ಸಂಘಟನೆ ಮತ್ತು ಫೆಡರೇಷನ್ ಆಫ್ ಮೋಟರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯ ಎಂಬ ಸಂಘಟನೆಗಳನ್ನು ಸೇರಿದರು. ೧೮,೦೦೦ ಅಡಿ ಎತ್ತರದ ಘಟ್ಟಗಳಲ್ಲಿ ಮೊದಲ ಬಾರಿಗೆ ೧,೭೦೦ ಕಿಮಿ ದೂರದ ಗುರಿಯನ್ನು ಬೈಕ್ನಲ್ಲಿ ಕ್ರಮಿಸಿ ಎಲ್ಲರ ಗಮನ ಸೆಳೆದರು. ೧೯೬೮ರ ನಂತರ ಭಾರತವನ್ನು ಪ್ಯಾರಾಲಂಪಿಕ್ನಲ್ಲಿ ಪ್ರತಿನಿಧಿಸಿದ ಮೊದಲ ಮಹಿಳೆ ಎಂಬ ಪಾತ್ರಕ್ಕೆ ಗುರಿಯಾದರು. ಸ್ವೀಮ್ಮಿಂಗ್, ಜಾವ್ಲಿನ್, ಶಾಟ್ಪುಟ್ ಮತ್ತು ಇತರೆ ಕ್ರೀಡೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ೫೪ ಪದಕಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ೧೩ ಪದಕಗಳನ್ನು ಜಯಿಸಿದ್ದು ನಿಜವಾಗಲೂ ಅಚ್ಚರಿಯ ಸಂಗತಿ. ಇಷ್ಟೇ ಅಲ್ಲದೆ ದೆಹಲಿ ಚೆನ್ನೈ ನಡುವೆ ೩,೨೭೮ ಕಿಮಿ ದೂರವನ್ನು ಕ್ರಮಿಸುವ ಮೂಲಕ ಲಿಮ್ಕಾ ದಾಖಲೆಯಲ್ಲಿ ಸಹ ತಮ್ಮ ಹೆಸರನ್ನು ಬರೆದಿದ್ದಾರೆ. ಇವೆಲ್ಲವನ್ನೂ ದಾಟಿ ಭಾರತಕ್ಕೆ ಬೆಳ್ಳಿಯ ಪದಕವನ್ನ ತಂದುಕೊಟ್ಟಿರುವುದು ಹೆಮ್ಮೆಯ ಸಂಗತಿ.
ದೇವೇಂದ್ರ ಜರ್ಜಾರಿಯ ರಾಜಸ್ಥಾನದ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿದರು. ಎಂಟು ವರ್ಷದ ಹುಡುಗನಾಗಿದ್ದಾಗ ಮರ ಹತ್ತುತ್ತಿರಬೇಕಾದರೆ ವಿದ್ಯುತ್ ತಂತಿ ಸ್ಪರ್ಶಿಸಿ ತಮ್ಮ ಎಡಗೈ ಸ್ವಾಧೀನವನ್ನು ಸಂಪೂರ್ಣವಾಗಿ ಕಳೆದುಕೊಂಡರು. ಸಣ್ಣ ವಯಸ್ಸಿಗೆ ಪ್ರಮುಖ ಅಂಗವನ್ನು ಕಳೆದುಕೊಂಡ ಕಾರಣ ಜೀವನದ ಸ್ಥಿತಿ ಬಹಳ ಗಂಭೀರ ಹಂತಕ್ಕೆ ತಲುಪಿತು. ಈ ಘೋರವಾದ ಘಟನೆಯ ಬಳಿಕ ಇವರು ಧೃತಿಗೆಡಲಿಲ್ಲ, ಜೀವನವನ್ನು ಧೈರ್ಯದಿಂದ ಎದುರಿಸಿದರು. ಶಾಲೆಯಲ್ಲಿ ಜಾವ್ಲಿನ್ ಸ್ಪರ್ಧೆಯಲ್ಲಿ ಯಶಸ್ವಿಯಾಗಿ ಭಾಗವಹಿಸಿದರು. ಸ್ಪರ್ಧೆಯ ಸಮಯದಲ್ಲಿ ಇವರನ್ನು ಜನ “ಈತ ಯಾರದೋ ಶಿಫಾರಸ್ಸಿನ ಮೇಲೆ ಅರ್ಹತೆ ಪಡೆದಿರಬಹುದು” ಎಂದು ಟೀಕಿಸುತ್ತಿದ್ದಾಗ ದೇವೇಂದ್ರ ತಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಲಿಲ್ಲ. ೧೯೯೭ ರಲ್ಲಿ ಇವರ ಗುರುಗಳಾದ ರಿಪುದಮನ್ ಸಿಂಗ್ ಇವರ ವ್ಯಕ್ತಿತ್ವವನ್ನು ಗುರುತಿಸಿ ದೇವೆಂದ್ರರವರಿಗೆ ಬೇಕಾದ ಮಾರ್ಗದರ್ಶನ ನೀಡಿದರು. ಇದರ ಪ್ರತಿಫಲವಾಗಿ ೨೦೦೨ರಲ್ಲಿ ಬುಸನ್ ಏಷಿಯನ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಕೀರ್ತಿಯನ್ನು ತಂದುಕೊಟ್ಟರು. ೨೦೦೪ರಲ್ಲಿ ಭಾರತಕ್ಕೆ ಅಥೆನ್ಸ್ ಒಲಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಎಲ್ಲರಿಗೂ ಸ್ಫೂರ್ತಿಯ ಬೆಳಕಾದರು. ೨೦೦೮ ಮತ್ತು ೨೦೧೨ರ ಪ್ಯಾರಾ ಒಲಂಪಿಕ್ಸ್ನಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿಂದ ದೇವೇಂದ್ರ ಅವರು ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಇಲ್ಲದಿದ್ದರೆ ದೇವೇಂದ್ರರವರಿಂದ ಭಾರತಕ್ಕೆ ಇನ್ನೂ ನಾಲ್ಕು ಪದಕಗಳ ಗೌರವ ಲಭಿಸುತ್ತಿದ್ದವು. ಮತ್ತೆ ೨೦೧೬ರ ಒಲಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಎರಡು ಚಿನ್ನದ ಪದಕ ಪಡೆದ ಮೊದಲಿಗರಾಗಿದ್ದಾರೆ.
ಶೋಭಾ ಡೇ ನಂತಹ ಕ್ರೀಡಾಘಾತಕಾರಿಗೆ ತಂಗವೇಲು ಮತ್ತು ಇತರೆ ಕ್ರೀಡಾಪಟುಗಳು ದಿಟ್ಟ ಉತ್ತರ ನೀಡಿದ್ದಾರೆ. ಪಿವಿ ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಅವರು ಒಲಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದಾಗ ಸರ್ಕಾರ ಮತ್ತು ಹಲವಾರು ಸಂಸ್ಥೆಗಳು ಅವರನ್ನು ಮತ್ತು ಅವರ ಗುರುಗಳನ್ನೂ ಹಣದ ಮಹಾಪೂರದಿಂದ ಗೌರವಿಸಿದವು. ಆದರೆ ಪ್ಯಾರಾಲಂಪಿಕ್ ಗಳನ್ನು ನಮ್ಮ ಸಮಾಜ ಮತ್ತು ಸರ್ಕಾರ ನೋಡುತ್ತಿರುವ ರೀತಿ ಬಹಳ ನೋವನ್ನುಂಟು ಮಾಡುವಂತಹದು. ಅಂಗವೈಕಲ್ಯವನ್ನೂ ಮೀರಿ ಸಾಧನೆಗೈದ ಇವರಿಗೆ ಹೆಚ್ಚಿನ ಬೆಂಬಲ, ಪ್ರೋತ್ಸಾಹದ ಅವಶ್ಯಕತೆ ಇದೆ. ತಂಗವೇಲು ನಂತಹ ಕ್ರೀಡಾಪಟುಗಳು ನಮ್ಮ ದೇಶದಲ್ಲಿ ಹಲವಾರು ಮಂದಿಯಿದ್ದಾರೆ. ಆದರೆ ಸಾಕಷ್ಟು ಜನರನ್ನು ನಾವು ಪ್ರೋತ್ಸಾಹಿಸುತ್ತಿಲ್ಲ. ಜನರ ಮನಸ್ಥಿತಿ ಬದಲಾಗುವವರೆಗು ನಾವು ಒಲಂಪಿಕ್ಸ್ನಲ್ಲಿ ಹೆಚ್ಚಿನ ಪದಕಗಳನ್ನು ಪಡೆಯಲು ಸಾಧ್ಯವಿಲ್ಲ. ತಂಗವೇಲು ಮತ್ತು ಇತರೆ ಕ್ರೀಡಾಪಟುಗಳ ಸಾಧನೆಗಳು ನಮ್ಮ ಕಣ್ಣು ತೆರೆಯುವಲ್ಲಿ ಸಫಲವಾದರೆ ಸಾಕು.