ನೋಟುಗಳ ಅಮಾನ್ಯೀಕರಣ – ಭಾರತೀಯರ ಪ್ರತಿಸ್ಪಂದನೆ
– ವಿನಾಯಕ ಹಂಪಿಹೊಳಿ
ಪಾಶ್ಚಿಮಾತ್ಯರಿಂದ ಆಮದು ಮಾಡಿಕೊಂಡಿರುವ “ಸಿಸ್ಟಂ”ಗಳ ಜೊತೆ ನಾವು ಭಾರತೀಯರು ಮುಂಚಿನಿಂದಲೂ ಅಗತ್ಯವಿದ್ದರೆ ಮಾತ್ರ ಹೊಂದಿಸಿಕೊಳ್ಳುವ ಗುಣವನ್ನು ಹೊಂದಿದ್ದೇವೆ. ಇದು ವಾಸ್ತವವಾಗಿ ನಮ್ಮ ತಪ್ಪಲ್ಲ. ಸಿಸ್ಟಂನ ತಪ್ಪೂ ಅಲ್ಲ. ಭಾರತೀಯ ಸಮಾಜಗಳ ಸಂರಚನೆಗೆ ಪಾಶ್ಚಿಮಾತ್ಯರ “ಸಿಸ್ಟಂ” ಸಂಪೂರ್ಣ ಸಾಂಗತ್ಯವನ್ನು ಹೊಂದಿಲ್ಲ. ಯಾವುದೇ ಸಿಸ್ಟಂನ ಜೊತೆಗೆ ನಾವು ವರ್ತಿಸುವ ರೀತಿಯನ್ನು ಗಮನಿಸಿದರೆ ನಮಗಿದು ಅರ್ಥವಾಗುತ್ತದೆ.
ವಿದ್ಯಾರ್ಥಿ ಜೀವನವನ್ನೇ ತೆಗೆದುಕೊಳ್ಳಿ. ಎಜುಕೇಶನ್ ಸಿಸ್ಟಂ ನಡೆಸುವ ಪರೀಕ್ಷೆಗಳ ಜೊತೆಗೆ ನಾವು ಹೇಗೆ ವರ್ತಿಸಿದ್ದೇವೆ? ನೂರು ಜನ ವಿದ್ಯಾರ್ಥಿಗಳಲ್ಲಿ, ಅಂದಂದಿನ ಪಾಠವನ್ನು ಅಂದಂದಿಗೇ ಓದಿಕೊಂಡು, ಪರೀಕ್ಷೆಯ ಸಮಯದಲ್ಲಿ ಕೇವಲ ಕಣ್ಣಾಡಿಸಿಕೊಂಡಿರುವ ವಿದ್ಯಾರ್ಥಿಗಳು, ಕೇವಲ ಬೆರಳೆಣಿಕೆಯಷ್ಟು ಮಾತ್ರ. ಅದು ಬಿಟ್ಟರೆ ಉಳಿದೆಲ್ಲ ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸುತ್ತಿದ್ದಂತೆ, ಅಭ್ಯಾಸದ ವೇಗವನ್ನು ಹೆಚ್ಚಿಸಿಕೊಳ್ಳುವವರೇ. ಶಿಕ್ಷಕರೂ ಹಾಗೆಯೇ. ಮೊದಲಿನ ಪಾಠಗಳನ್ನು ಎಳೆದೂ ಎಳೆದೂ ಕಲಿಸಿ, ಸೆಮಿಸ್ಟರ್ ಮುಗಿಯಲು ಬಂದಂತೆ, ಸ್ಪೆಷಲ್ ಕ್ಲಾಸುಗಳನ್ನು ಇರಿಸಿ, ಕೊನೆಯ ಪಾಠಗಳನ್ನೆಲ್ಲ ಮುಗಿಸುತ್ತಾರೆ.
ಇದು ವಿದ್ಯಾರ್ಥಿಗಳ ತಪ್ಪಲ್ಲ. ಶಿಕ್ಷಕರ ತಪ್ಪೂ ಅಲ್ಲ. ಎಜುಕೇಶನ್ ಸಿಸ್ಟಂನ ತಪ್ಪೂ ಅಲ್ಲ. ವಿಷಯ ಏನೆಂದರೆ, ಪಾಶ್ಚಿಮಾತ್ಯರಿಂದ ಎರವಲು ಪಡೆದ ಎಜುಕೇಶನ್ ಸಿಸ್ಟಂ ಸಾಫ್ಟವೇರ್ ನಮ್ಮ ಸಮಾಜದ ಹಾರ್ಡವೇರಿಗೆ ಅಷ್ಟು ಕಂಪಾಟಿಬಲ್ ಅಲ್ಲ. ಹೀಗಾಗಿ ಇಂತಹ ಎಜುಕೇಶನ್ ಸಿಸ್ಟಮ್ಮನ್ನು ನಮ್ಮ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಮೇಲೆ ಹೇರಿದಾಗ, ಈ ರೀತಿಯ ಯುದ್ಧಕಾಲೇ ಶಸ್ತ್ರಾಭ್ಯಾಸವನ್ನು ಕಾಣುವದು ಅತ್ಯಂತ ಸಹಜ. ಈಗ ನಾವು ಪಾಶ್ಚಿಮಾತ್ಯರಿಂದ ಏನೆಲ್ಲ ಎರವಲು ಪಡೆದುಕೊಂಡಿದ್ದೇವೋ, ಅವುಗಳ ಜೊತೆ ನಮ್ಮ ವರ್ತನೆಯನ್ನು ಗಮನಿಸಿ ನೋಡಿದರೆ ನಮಗೆ ಈ ವಿಷಯ ಇನ್ನೂ ದೃಢವಾಗುತ್ತದೆ.
ಫಾರ್ಮ್-೧೬ ಎಪ್ರಿಲ್ ತಿಂಗಳಲ್ಲೇ ಬಂದರೂ, ನಾವು ಅದನ್ನು ಕಟ್ಟುವದು ಜೂನ್ ೨೮ರ ನಂತರ. ಕಾಮಗಾರಿಗಳು ಚುರುಕುಕೊಳ್ಳುವದು ಲೋಕಾರ್ಪಣೆಯ ದಿನ ಹತ್ತಿರ ಬಂದಂತೆ. ಸರಕಾರಿ ಕಾಮಗಾರಿಗಳಷ್ಟೇ ಏಕೆ; ಆಧುನಿಕ ಕಂಪನಿಗಳಲ್ಲೂ ಪ್ರಾಜೆಕ್ಟಿಗೆ ಹಾಕಿಕೊಂಡಿರುವ ಡೆಡ್ಲೈನ್ ಹತ್ತಿರ ಬಂದಂತೆ, ಅಹೋರಾತ್ರಿ ಕೆಲಸಗಳು ನಡೆಯುತ್ತವೆ. ನನ್ನಂಥ ಲಕ್ಷಾಂತರ ಸಾಫ್ಟವೇರ್ ಎಂಜಿನಿಯರುಗಳು ಬೆಳಿಗ್ಗೆಯೆಲ್ಲ, ಚಹಾ ಕಾಫಿ ಎನ್ನುತ್ತ ಕ್ಯಾಂಟೀನಿಗೆ ೩-೪ ಬಾರಿ ಎಡತಾಕಿ, ರಾತ್ರಿಯಾಗುತ್ತಿದ್ದಂತೆ ಕೆಲಸ ಮುಗಿಸುವ ಗಡಿಬಿಡಿಗೆ ಬೀಳುವವರೇ. ನಾವು ಭಾರತೀಯರು, ಈ ರೀತಿಯ ಪ್ರವೃತ್ತಿಗೆ, ಒಗ್ಗಿಕೊಂಡು ಬಿಟ್ಟಿದ್ದೇವೆ.
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳು ಬಂದಾಗಲೇ, ಸ್ವೈಪಿಂಗ್ ಕಾರ್ಡ್ ಕೂಡ ಮಾರುಕಟ್ಟೆಗೆ ಧಾವಿಸಿತು. ಆದರೆ ನಾವು ಆ ಡೆಬಿಟ್ ಕಾರ್ಡುಗಳನ್ನು ಕೇವಲ ಎ.ಟಿ.ಎಂಗೆ ಮಾತ್ರ ಸೀಮಿತವಾಗಿ ಮಾಡಿಕೊಂಡಿದ್ದೆವು. ಕ್ಯಾಶ್ ಕೊಡಲಾಗದಿರುವ ಸಂದರ್ಭಗಳಲ್ಲಿ, ದೊಡ್ಡ ದೊಡ್ಡ ಹೋಟೆಲ್ಲುಗಳಲ್ಲಿ ಮಾತ್ರ ಈ ಕಾರ್ಡುಗಳನ್ನು ಬಳಸುತ್ತಿದ್ದೆವು. ಈ ಪ್ರವೃತ್ತಿಯಿಂದಾಗಿ ಚಿಕ್ಕ ಪುಟ್ಟ ಅಂಗಡಿಗಳನ್ನು ಇಟ್ಟುಕೊಂಡವರಿಗೆ ಸ್ವೈಪಿಂಗ್ ಮಶೀನ್ ಒಂದು ನಿರುಪಯೋಗಿ ಇನ್ವೆಸ್ಟಮೆಂಟ್ ಆಗಿತ್ತು. ಹಳ್ಳಿಗಳಲ್ಲಿ ಡೆಬಿಟ್ ಕಾರ್ಡ್ ಕೂಡ ಜನರಿಗೆ ಅನಗತ್ಯವಾಗಿ ಬಿಟ್ಟಿತ್ತು. ಹೀಗಾಗಿ ನನ್ನ ಹಳ್ಳಿಯಲ್ಲಿ ಈಗಲೂ ಒಂದು ಎ.ಟಿ.ಎಂ ಇಲ್ಲ. ಊರಿನಲ್ಲಿರುವ ಎ.ಟಿ.ಎಂಗಳಲ್ಲಿ ಹೆಚ್ಚು ಹಣವೂ ಇಲ್ಲ. ಜನರೆಲ್ಲ ಬ್ಯಾಂಕಿನಿಂದ ಹಣ ತೆಗೆಸುವವರೇ. ಓಲಾ ಮುಂತಾದ ಕ್ಯಾಬ್ ಅಪ್ಲಿಕೇಶನ್ ಬಳಸುವವರಲ್ಲಿ, ೯೦% ಹೆಚ್ಚು ಜನ ಹಣ ನೀಡುವವರೇ. ಪೇಟಿಎಂ ನಂತಹ ಅಪ್ಲಿಕೇಶನ್ನುಗಳ ಬಳಕೆಯೇನಿದ್ದರೂ ಕೇವಲ ಇತ್ತೀಚಿನ ಯುವಕರಿಂದ ಮಾತ್ರ, ಅದೂ ಕೂಡ ಕ್ಯಾಶ್-ಬ್ಯಾಕ್ ಸೌಲಭ್ಯ ಪಡೆದುಕೊಳ್ಳಲಷ್ಟೇ!
ಕಪ್ಪುಹಣದ ಕ್ರೋಢೀಕರಣ ತಡೆಯಲು ನಗದಿನ ಮೇಲೆಯೇ ಅವಲಂಬಿತವಾಗಿರುವ ನಮ್ಮ ಪ್ರವೃತ್ತಿಯನ್ನು ಬದಲಾಯಿಸಲೇಬೇಕಾದ ಅಗತ್ಯತೆಯನ್ನು ಈಗಾಗಲೇ ಹಲವಾರು ಅರ್ಥಶಾಸ್ತ್ರಜ್ಞರು ಮುಂಚಿನಿಂದಲೂ ಹೇಳುತ್ತ ಬಂದಿದ್ದಾರೆ. ಹೆಚ್ಚಿನ ಮುಖಬೆಲೆಯ ನೋಟುಗಳು ಬಂದಂತೆ ಕಪ್ಪುಹಣ ಹೆಚ್ಚುವದು ನಿಜ. ಆದರೆ ಈ ಪ್ರವೃತ್ತಿಯನ್ನು ತಡೆಯುವದು ಹೇಗೆ? ಜನರು ದೊಡ್ಡ ದೊಡ್ಡ ನೋಟುಗಳನ್ನು ಉಪಯೋಗಿಸುವದನ್ನು ನಿಲ್ಲಿಸುವ ತನಕ ಈ ನೋಟುಗಳನ್ನು ಚಲಾವಣೆಗೆ ಬಿಡಬಹುದೇ? ಹಾಗೆ ಮಾಡುವದು ಒಂದು ರೀತಿ, ಎಲ್ಲ ವಿದ್ಯಾರ್ಥಿಗಳೂ ಓದಿದ ನಂತರ ಪರೀಕ್ಷೆ ಇಡೋಣ ಎಂದಂತೆ. ೫೦೦/೧೦೦೦ ನೋಟುಗಳನ್ನು ಉಪಯೋಗಿಸದೇ ಬಾಳುವ ಎಲ್ಲ ಸೌಲಭ್ಯಗಳೂ ನಗರ ಪ್ರದೇಶಗಳ ಮಧ್ಯಮವರ್ಗದವರಿಗಿದ್ದರೂ, ಆ ಸೌಲಭ್ಯವನ್ನು ಅವರು ಉಪಯೋಗಿಸಿಕೊಳ್ಳುತ್ತಿಲ್ಲ. ಇನ್ನು ಬಡವರು, ಹಳ್ಳಿಗರು ಏನು ತಾನೇ ಉಪಯೋಗಿಸಿಯಾರು?
ಈಗಲೂ ನನಗನ್ನಿಸುವದು, ೨೦೦೦ರೂ ನೋಟನ್ನು ಚಲಾವಣೆಗೆ ತಂದಿದ್ದು, ಕೇವಲ ಹಣ ಬದಲಾಯಿಸುವ ಪ್ರಕ್ರಿಯೆ ಎಲ್ಲೆಡೆ ಏಕಕಾಲಕ್ಕೆ ಆರಂಭವಾಗುವದರಿಂದ, ಬ್ಯಾಂಕಿಗೆ ಸಹಾಯಕವಾಗಲಿ ಎಂಬ ಉದ್ದೇಶಕ್ಕೆ ಮಾತ್ರವಿರಬಹುದು. ಇಲ್ಲವಾದಲ್ಲಿ ೧೦೦೦ ನೋಟಿಗೆ ಬದಲಾಗಿ ಹೊಸ ೧೦೦೦ ನೋಟನ್ನು ಬಿಡಬಹುದಿತ್ತು. ಹಾಗೆ ಮಾಡದೇ ೨೦೦೦ ನೋಟನ್ನು ಬಿಡಲು ಕಾರಣ, ೨೦೦೦ ಮುಖಬೆಲೆಯ ಸಾವಿರ ನೋಟುಗಳು ಬ್ಯಾಂಕ್ ಬಳಿ ಇದ್ದರೆ, ೫೦೦ ಜನರಿಗೆ ಸಹಾಯ ಮಾಡಬಹುದು. ಆದರೆ ಮುಖಬೆಲೆ ಕಡಿಮೆಯಿದ್ದರೆ, ಪ್ರಿಂಟಿಂಗ್ ವೇಗವನ್ನು ಹೆಚ್ಚಿಸಬೇಕಾಗುತ್ತಿತ್ತು ಎನ್ನುವ ಕಾರಣಕ್ಕೆ ಮಾತ್ರ, ಸದ್ಯಕ್ಕೆ ೨೦೦೦ ಮುಖಬೆಲೆಯ ನೋಟು ಬಂದಿದೆ. ಒಂದು ವೇಳೆ ಈ ಊಹೆಯು ಸರಿಯಾಗಿದ್ದರೆ, ಮುಂದಿನ ಒಂದು ವರ್ಷದಲ್ಲಿ ಸರಕಾರವು ೨೦೦೦ ನೋಟನ್ನು ಹಿಂಪಡೆಯುವ ಸಾಧ್ಯತೆಯಿದೆ.
ಅಂದರೆ, ಈಗ ಸಾವಿರದ ನೋಟು ಚಲಾವಣೆಯಲ್ಲಿ ಇಲ್ಲ. ಮುಂದೆ ಬರುವ ಸಾಧ್ಯತೆಯೂ ಇಲ್ಲ. ಎರಡು ಸಾವಿರದ ನೋಟು ಕೇವಲ ತತ್ಕಾಲಕ್ಕೆ ಮಾತ್ರ. ನಂತರ ೫೦೦ರ ಮುಖಬೆಲೆಯ ನೋಟುಗಳಷ್ಟೇ ಉಳಿದುಕೊಳ್ಳುತ್ತದೆ. ಈಗಾಲೂ ೫೦೦ರೂ. ಗಳ ನೋಟುಗಳು ಹೆಚ್ಚು ಲಭ್ಯವಿಲ್ಲ. ಎ.ಟಿ.ಎಂಗಳು ಕಾರ್ಯನಿರ್ವಹಿಸಲು ಇನ್ನೂ ಸಮಯ ಬೇಕು. ಹೀಗಾಗಿ ಅಕ್ಷರ ಮತ್ತು ಅಂಕಿಗಳನ್ನು ಓದಲು/ಬರೆಯಲು ಬರುವ ಚಿಕ್ಕ/ಮಧ್ಯಮ ವ್ಯಾಪಾರಿಗಳು, ಅಸಂಘಟಿತ ವಲಯದ ಕಾರ್ಮಿಕರು ಸ್ವೈಪಿಂಗ್ ಮಶೀನುಗಳನ್ನು, ಪೇಟಿಎಂ ಮುಂತಾದ ಅಪ್ಲಿಕೇಶನ್ನುಗಳನ್ನು ಉಪಯೋಗಿಸಲು ಆರಂಭಿಸಿಬಿಟ್ಟಿದ್ದಾರೆ. ಮನೆ, ಆಸ್ತಿ, ಬಂಗಾರವನ್ನು ಖರೀದಿಸುವವರು, ಕಾರ್ಡುಗಳನ್ನು ಸ್ವೈಪಿಸಲಾರಂಭಿಸಿದ್ದಾರೆ. ಹಳ್ಳಿಗಳಲ್ಲಿರುವ ಬ್ಯಾಂಕುಗಳ ಜನರು ಡೆಬಿಟ್ ಕಾರ್ಡುಗಳಿಗೆ, ಇ-ಬ್ಯಾಂಕಿಂಗ್ ಸೌಲಭ್ಯಕ್ಕಾಗಿ ಬೇಡಿಕೆಗಳನ್ನಿಡಲಾರಂಭಿಸದ್ದಾರೆ. ಬೇಡಿಕೆಯು ಪೂರೈಕೆಯ ಮುನ್ನುಡಿ. ಹೀಗಾದಾಗ ಇನ್ನು ಅಲ್ಲಿ ಎ.ಟಿ.ಎಂಗಳು ಕಾಲಿಡುವ ದಿನಗಳು ದೂರವಿಲ್ಲ. ಹಳ್ಳಿಗಳು ನಗದಿನಿಂದ ದೂರಸರಿಯುವ ದಿನಗಳೂ ದೂರವಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು, ತಕ್ಷಣಕ್ಕೆ ಹೊಂದಿಕೊಳ್ಳುವ ನಮ್ಮ ಹಳ್ಳಿಗರ ಪ್ರವೃತ್ತಿಗೆ ಸಾವಿರ ವರ್ಷಗಳ ಇತಿಹಾಸವಿರುವುದರಿಂದ ಇದೇನೂ ದೊಡ್ಡ ಸಮಸ್ಯೆಯೇ ಅಲ್ಲ.
ಹಳ್ಳಿಯ ಮತ್ತು ಪಟ್ಟಣಗಳಲ್ಲಿರುವ ಬಹುಸಂಖ್ಯಾತ ಚಿಕ್ಕ/ಮಧ್ಯಮ ವ್ಯಾಪಾರಿಗಳು ಮತ್ತಿತರ ಬ್ಯುಸಿನೆಸ್ ಮಾಡುವವರು ಆಧುನಿಕತೆಯನ್ನು ಒಪ್ಪಿಕೊಳ್ಳುವದೇ ಇಲ್ಲವೆಂದು ಕೆಲವು ಆಧುನಿಕ ಯುವಕರು ಭಾವಿಸುತ್ತಾರೆ. ಆದರೆ ಅದು ತಪ್ಪು ಅಭಿಪ್ರಾಯ. ಏಕೆಂದರೆ ಡಿಜಿಟಲ್ ತೂಕದ ಯಂತ್ರಗಳು ಬಂದಾಗ, ಅವುಗಳು ಈ ಎಲ್ಲ ವ್ಯಾಪಾರಿಗಳಿಗೆ ಆಕರ್ಷಕವಾಗಿ ಕಂಡವು. ೧,೨,೫,೧೦ ಕೆಜಿ ತೂಕದ ಕಲ್ಲುಗಳನ್ನು ಅಲ್ಲಿಂದ ಇಲ್ಲಿ ಹಾಕಿ, ಇಲ್ಲಿಂದ ಅಲ್ಲಿ ಹಾಕಿ, ತೂಗುವ ಕೆಲಸವನ್ನು ಸುಲಭವಾಗಿಸಿ, ಸಮಯ ಉಳಿಸಿ, ಆ ಸಮಯವನ್ನು ಹೆಚ್ಚಿನ ವ್ಯಾಪಾರದಲ್ಲಿ ತೊಡಗಿಸಿಕೊಂಡರು. ಆದರೆ ಹಣದ ವಿಷಯದಲ್ಲಿ ಹಾಗಿರಲಿಲ್ಲ. ೧೦೦೦ ಮುಖಬೆಲೆಯ ನೋಟಿನ ೨ ನೋಟುಗಳನ್ನು ತೆಗೆದುಕೊಳ್ಳುವದು, ಸ್ವೈಪಿಂಗಿಗಿಂತ ಸುಲಭವಾಗಿದ್ದರಿಂದ, ನಮ್ಮ ಜನರು ಇ-ವ್ಯವಹಾರಗಳ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.
ಕಳೆದ ವಾರ ಬ್ಯಾಂಕಿಗೆ ಹೋಗಿ ಹಣ ತೆಗೆಸಿದಾಗ, ೧೦೦೦೦ ರೂಗಳಷ್ಟು ಹಣವನ್ನು ನನ್ನ ಬ್ಯಾಂಕು ೧೦, ೨೦ ಮತ್ತು ೫೦ ಬೆಲೆಯ ನೋಟುಗಳಲ್ಲಿ ನೀಡಿತ್ತು. ಏಕೆಂದರೆ ಉಳಿದೆಲ್ಲ ಮುಖಬೆಲೆಯ ನೋಟುಗಳು ಖಾಲಿಯಾಗಿದ್ದವು. ಅವುಗಳನ್ನೆಲ್ಲ ಬ್ಯಾಗಿನಲ್ಲಿ ಹಾಕಿಕೊಂಡು, ಮನೆಯಲ್ಲಿ ಪೇರಿಸಿದೆ. ೫೦ರ ಬೆಲೆಯ ನೋಟುಗಳು ಹೇಗೋ ಖಾಲಿಯಾದವು. ಆದರೆ ೧೦ ಮತ್ತು ೨೦ ಮುಖಬೆಲೆಯ ನೂರಾರು ನೋಟುಗಳು ಹಾಗೆಯೇ ಉಳಿದುಕೊಂಡವು. ನಿನ್ನೆ ಕಿರಾಣಿ ತರಲು ಹೋದಾಗ ೮೩೦ ರೂಪಾಯಿಗಳ ಬಿಲ್ಲು ನೀಡಿದ. ಆಗ ನಾನು ೨೦,೪೦,೬೦,೮೦… ಅಂತಾ ೨೦ ರೂಗಳ ನೋಟಿನ ಕಟ್ಟು ತೆಗೆದು ಎಣಿಸಲಾರಂಭಿಸಿದೆ. ಆಗ, ಆತ “ಅಷ್ಟೆಲ್ಲ ಬೇಡ ಸರ್.. ಪೇಟಿಎಂ ಮಾಡಿ ಇಲ್ಲಾ ಕಾರ್ಡ್ ಸ್ವೈಪ್ ಮಾಡಿ, ಹೊಸ ಮಶೀನ್ ತಂದಿದೀನಿ. ಬ್ಯಾಂಕಿನಲ್ಲಿ ಇಷ್ಟೆಲ್ಲ ಚೇಂಜ್ ಸಿಕ್ಕಿದ್ದು ನಿಮ್ಮ ಪುಣ್ಯ. ಇಟ್ಟುಕೊಳ್ಳಿ.” ಎಂದ. ಅದಕ್ಕೆ ನನಗೆ ಆಶ್ಚರ್ಯವಾಗಿ “ಏನ್ ಸಾರ್! ಅಪ್ಡೇಟ್ ಆಗ್ಬಿಟ್ರಿ?” ಎಂದು ಕೇಳಿದೆ. ಅದಕ್ಕವನು “ಏನ್ ಮಾಡೋದು ಸಾರ್! ವ್ಯಾಪಾರ ನಡೀಬೇಕಂದ್ರೆ ಆಗ್ಲೇಬೇಕು. ಎಲ್ಲಾರೂ ಆಗ್ತಾರೆ ನೋಡ್ತಾ ಇರಿ ಸರ್.” ಎಂದು ಉತ್ತರಿಸಿದ. “ಸಾಮಾನ್ಯ ವ್ಯಾಪಾರಿಗಳು ಮತ್ತು ಹಳ್ಳಿಗರು ಆಧುನಿಕ ವ್ಯವಹಾರಗಳನ್ನು ಕಲಿಯುವ ಪ್ರವೃತ್ತಿಯನ್ನೇ ಹೊಂದಿಲ್ಲ” ಎಂಬ ನನ್ನಂತಹ ಯುವಕರ ಹಳೆಯ ಪೂರ್ವಗ್ರಹವೊಂದನ್ನು ಈತನ ಮಾತುಗಳು ಬುಡಸಮೇತ ಅಲ್ಲಾಡಿಸುವಂತಿವೆ.
ಆಸ್ತಿ ವ್ಯವಹಾರಗಳು ನಗದಿನಲ್ಲಿ ನಡೆಯಬಾರದು ಎಂದು ಪ್ರಬಲವಾದ ಕಾನೂನು ಇದ್ದರೂ ಕೂಡ, ಅಂತಹ ಕಾನೂನನ್ನು ಗಾಳಿಗೆ ತೂರಿ ಹಳ್ಳಿಗಳಲ್ಲಿ ಹಾಗೂ ನಗರಗಳಲ್ಲಿ ನಗದು ವ್ಯವಹಾರ ಅವ್ಯಾಹತವಾಗಿ ನಡೆಯುತ್ತಲೇ ಇತ್ತು. ಆಸ್ತಿ ಖರೀದಿಸುವವರು ಮನಸ್ಸಿಲ್ಲದ ಮನಸ್ಸಿನಿಂದ ತಮ್ಮ ಬೆವರಿನ ದುಡ್ಡನ್ನು ಕಪ್ಪಾಗಿಸಿ ಕೊಡಬೇಕಿತ್ತು. ಆದರೆ ಈಗ ದೊಡ್ಡ ನೋಟುಗಳ ಹಿಂತೆಗೆತದಿಂದ ಕಪ್ಪುಹಣದ ಕ್ರೋಢೀಕರಣದಲ್ಲಿ ಮುಖ್ಯ ಪಾತ್ರ ವಹಿಸಿದ್ದ, ರಿಯಲ್ ಎಸ್ಟೇಟ್, ಮೆಡಿಕಲ್ ಮತ್ತಿತರ ವೃತ್ತಿಪರ ಕಾಲೇಜುಗಳು ಒಳ್ಳೆಯ ಪೆಟ್ಟು ತಿಂದಿವೆ. ದೊಡ್ಡ ನೋಟುಗಳು ಶಾಶ್ವತವಾಗಿ ತೊಲಗಿ ಹೋದರೆ ಇವೆಲ್ಲವೂ ಸಂಪೂರ್ಣವಾಗಿ ನಿಲ್ಲಲಿವೆ. ಆರ್.ಟಿ.ಒ.ಗಳಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಪೋಲೀಸ್ ವ್ಯವಸ್ಥೆಯಲ್ಲಿ ಲಿಕ್ಕರ್ ಮಾಫಿಯಾದ ಹಸ್ತಕ್ಷೇಪ, ವಿಶ್ವವಿದ್ಯಾಲಯದ ಕುಲಪತಿಯಾಗಲು, ರಾಜ್ಯಪಾಲರಿಗೆ ನೀಡಬೇಕಾದ ಚಾರಿಟಿಗಳೆಲ್ಲ ನಿಲ್ಲಲಿವೆ. ಆದರೆ ಇದೆಲ್ಲ ಆಗಬೇಕಾದರೆ, ದೊಡ್ಡ ನೋಟುಗಳು ಸಂಪೂರ್ಣವಾಗಿ ಬ್ಯಾನ್ ಆಗಬೇಕು. ಅದಕ್ಕಾಗಿ ಸಮಾಜ ತಯಾರಾಗಬೇಕು. ಆ ದಿಕ್ಕಿನಲ್ಲಿ ಮೊದಲ ಹೆಜ್ಜೆ ಇಡುವ ಧೈರ್ಯವನ್ನು ಯಾರಾದರೂ ತೋರಿಸಬೇಕಿತ್ತು. ಈ ನೋಟುಗಳ ನಿಷೇಧದಿಂದ ಆ ಪ್ರಕ್ರಿಯೆ ಆರಂಭವಾಗಿದೆ ಅಷ್ಟೇ.
ನವೆಂಬರ್ ಎಂಟರ ನಂತರ ಜನರು ತಮ್ಮ ವ್ಯವಹಾರಗಳ ಅಗತ್ಯತೆಗನುಗುಣವಾಗಿ ಇ-ವ್ಯವಹಾರಗಳಲ್ಲಿ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳಲಾರಂಭಿಸಿದ್ದಾರೆ. ಇದು ಇ-ವ್ಯವಹಾರದತ್ತ ಭಾರತೀಯರು ಇಡುತ್ತಿರುವ ಅಂಬೆಗಾಲು. ಇ-ವ್ಯವಹಾರವನ್ನು ರೂಢಿಸಿಕೊಳ್ಳಲು ಜನರಿಗೆ ಸ್ವಲ್ಪ ಸಮಯ ಬೇಕು. ಏಕೆಂದರೆ ಪರ್ಸಿನಲ್ಲಿ ೫೦೦೦೦ ನಗದಿಟ್ಟುಕೊಂಡು, ಮನೆಮಂದಿಗೆಲ್ಲ ಬಟ್ಟೆ ಕೊಡಿಸಲು ಯಜಮಾನ ಕರೆದೊಯ್ಯುವಾಗ, ಹಣ ಖಾಲಿಯಾದಂತೆಲ್ಲ ಪರ್ಸು ಹಗುರವಾಗುತ್ತಿತ್ತು ಮತ್ತು ಯಜಮಾನನಿಗೆ ಹಣ ಕರಗುತ್ತಿರುವದರ ಅರಿವಿರುತ್ತಿತ್ತು. ಆದರೆ ಹೋದಲ್ಲೆಲ್ಲ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿದರೆ, ಹಣ ಖಾಲಿಯಾದ ಫೀಲಿಂಗೇ ಇರುವದಿಲ್ಲ. ಇದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಆ ಸಮಯದ ತನಕ ೫೦೦ರ ನೋಟುಗಳು ಚಾಲ್ತಿಯಲ್ಲಿರುವಂತೆ ಸರ್ಕಾರವು ನೋಡಿಕೊಳ್ಳಬಹುದು. ೫೦೦/೧೦೦೦ ನೋಟುಗಳು ಬ್ಯಾನ್ ಆದಾಗ ಕೆಲವು ವ್ಯಾಪಾರಿಗಳು ತಮಗೆ ಪರಿಚಯವಿದ್ದ ಎಂಜಿನಿಯರ್ ಯುವಕರ ಬಳಿ ತೆರಳಿ, ಪೇಟಿಎಂ, ಇ-ಬ್ಯಾಂಕಿಂಗ್, ಸ್ವೈಪಿಂಗ್ ಮಶೀನುಗಳ ಬಗ್ಗೆ ಕೇಳಿಕೊಂಡಿದ್ದಾರೆ. ಅವುಗಳು ನಂಬಿಕೆಗೆ ಅರ್ಹವೇ ಎನ್ನುವದನ್ನು ಪರಿಶೀಲಿಸಿಕೊಂಡಿದ್ದಾರೆ. ಅದು ಕೆಲಸ ಮಾಡುವದನ್ನು ದೃಢೀಪಡಿಸಿಕೊಂಡ ನಂತರ ಉಳಿದವರಿಗೂ ಹೇಳಿದ್ದಾರೆ. ಹೀಗೆ ಜನರು ಮೋದಿಯನ್ನು ಬೈಯುತ್ತ ಕೂರುವ ಬದಲು, ಬದಲಾಗುವ ಸನ್ನಿವೇಶಕ್ಕೆ ಒಗ್ಗಿಸಿಕೊಳ್ಳುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಒಂದು ವೇಳೆ ಮಾಧ್ಯಮದ ಜನ ಪರೀಕ್ಷೆಗಾಗಿ ಅಭ್ಯಾಸದಲ್ಲಿ ನಿರತರಾಗಿರುವ ಮಕ್ಕಳ ಬಳಿ ಹೋಗಿ, “ನಿಮ್ಮ ನಿದ್ದೆ, ಶಾಂತಿ ಕೆಡಿಸಿರುವ ಪರೀಕ್ಷೆಗಳು ನಿಜವಾಗಿಯೂ ಬೇಕೇ?” ಎಂದು ಕೇಳಿದರೆ ವಿದ್ಯಾರ್ಥಿಗಳು ಏನು ಉತ್ತರ ನೀಡಬಹುದು? ಬಹುಶಃ ಎಲ್ಲರೂ “ಪರೀಕ್ಷೆಯ ದಿನಗಳಲ್ಲಿ ಸ್ವಲ್ಪ ಕಷ್ಟವಾಗುವದು ಹೌದು. ಆದರೆ ನಮ್ಮ ಭವಿಷ್ಯಕ್ಕೆ ಇದು ಒಳ್ಳೆಯದು” ಎಂದೇ ಉತ್ತರಿಸುತ್ತಾರಲ್ಲವೇ? ಈ ಅರ್ಥಕ್ರಾಂತಿಯೂ ಹಾಗೆಯೇ. ಇದರಿಂದ ಸ್ವಲ್ಪ ದಿನ ಕಷ್ಟವಾಗುತ್ತದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆ ಕಷ್ಟವನ್ನನುಭವಿಸಿಯೂ ಕೂಡ ಅಂತಹ ಕ್ರಾಂತಿಯ ಪರವಾಗಿ ನಿಲ್ಲುತ್ತಾರೆ. ಕಾರಣ ಸಿಸ್ಟಂನ ಪುನರುತ್ಥಾನದಿಂದ ಆಗುವ ಪ್ರಯೋಜನಗಳಿಗಾಗಿ, ತಾತ್ಕಾಲಿಕ ಅನಾನುಕೂಲತೆಗೆ ನಮ್ಮ ಜನರು ಒಗ್ಗಿಕೊಳ್ಳಬಲ್ಲರು. ಸಾವಿರ ವರ್ಷಗಳ ದಾಳಿಗೇ ಒಗ್ಗಿಕೊಂಡ ಜನರಿಗೆ ಇದೇನೂ ದೊಡ್ಡ ವಿಷಯವಲ್ಲ.
ಒಂದು ವೇಳೆ ಮೋದಿಯ ನಿರ್ಧಾರವೇ ತಪ್ಪಾಗಿದ್ದಿದ್ದರೆ ಜನರು ಇಷ್ಟೊತ್ತಿಗೆ, ಕಾನೂನು ಮತ್ತು ಸುವ್ಯವಸ್ಥೆಗಳನ್ನೆಲ್ಲ ಗಾಳಿಗೆ ತೂರಿ ಬೀದಿಗಿಳಿಯುತ್ತಿದ್ದರು, ‘ಎಮರ್ಜನ್ಸಿಯ’ ಕಾಲದಲ್ಲಿ ನಡೆದಂತೆ. ಆದರೆ ಜನರು ಶಾಂತವಾಗಿ ಕ್ಯೂನಲ್ಲಿ ನಿಂತು, ಬೆವರು ಒರಿಸಿಕೊಳ್ಳುತ್ತ, ಕಾಲು ನೋಯಿಸಿಕೊಳ್ಳುತ್ತ, ಮೋದಿ ಮಾಡಿದ್ದು ಸರಿಯಿದೆ, ವ್ಯವಸ್ಥೆಯಲ್ಲಿ ದೋಷಗಳಿರುವದರಿಂದ ಸ್ವಲ್ಪ ಕಷ್ಟವಾಗುತ್ತಿದೆ ಎಂದು ಈ ನಡೆಯನ್ನು ಹೊಗಳುತ್ತಿದ್ದಾರೆ ಎಂದರೆ ಅದು ನೂರಿಪ್ಪತ್ತೈದು ಕೋಟಿ ಭಾರತೀಯರ ಪ್ರಜ್ಞೆಯನ್ನು ತೋರಿಸುತ್ತದೆ.
ನಮ್ಮ ಜನರು ಸಿಸ್ಟಂಗಳ ಪ್ರಯೋಜನಗಳನ್ನೂ ಬಲ್ಲರು. ಇತಿಮಿತಿಗಳನ್ನೂ ಬಲ್ಲರು. ಹೀಗಾಗಿ ಅಂತಹ ಇತಿಮಿತಗಳನ್ನು ಮೀರಲು ಸಿಸ್ಟಮ್ಮನ್ನು ಉತ್ತಮಪಡಿಸುವ ಕ್ರಿಯೆಗಳಲ್ಲಿ ಒದಗಬಹುದಾದ ಅನಾನುಕೂಲಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ತಕ್ಕಮಟ್ಟಿಗೆ ಸಹಿಸಿಕೊಳ್ಳಬಲ್ಲರು. ಈ ಭಾರತೀಯ ಪ್ರಜ್ಞೆಯನ್ನು ವಿದೇಶದಲ್ಲಿರುವ ರಾಜಕಾರಣಿಗಳು ಮತ್ತು ಮಾಧ್ಯಮಗಳು ಗುರುತಿಸಿ ಕೊಂಡಾಡುತ್ತಿವೆ. ಆದರೆ ನಮ್ಮದೇ ಮಾಧ್ಯಮಗಳು ಈ ಪ್ರಜ್ಞೆಯನ್ನು ಗುರುತಿಸುವಲ್ಲಿ ದಯನೀಯವಾಗಿ ವಿಫಲವಾಗಿವೆ.
ಅಗತ್ಯತೆಯೇ ಅನ್ವೇಷಣೆಗೆ ಕಾರಣ. ಒಂದು ವೇಳೆ ೫೦೦ರ ನೋಟೂ ಕೂಡ ಮುಂದಿನ ವರ್ಷಗಳಲ್ಲಿ ಅಮಾನ್ಯವಾದರೆ ಆಗ ಭಾರತೀಯರಿಗೆ ಉಂಟಾಗುವ ಅಗತ್ಯತೆಗಳನ್ನು ಗಮನಿಸಿ. ಈಗ ಇ-ವ್ಯವಹಾರಗಳ ಎಲ್ಲ ವೆಬ್ಸೈಟ್ ಮತ್ತು ಅಪ್ಲಿಕೇಶನ್ನುಗಳು ಇಂಗ್ಲೀಷಿನಲ್ಲಿವೆ. ಆದರೆ ಮುಂದಿನ ದಿನಗಳಲ್ಲಿ ಇವು ಭಾರತೀಯ ಭಾಷೆಗಳಲ್ಲಿ ಬರಬೇಕಾಗುತ್ತವೆ. ಈ ಅಗತ್ಯತೆಯಿಂದ, ನಮ್ಮ ಭಾರತೀಯ ಭಾಷೆಗಳನ್ನು ಸಾಫ್ಟವೇರ್ ಕಂಪನಿಗಳು ತಂತ್ರಜ್ಞಾನಗಳಲ್ಲಿ ಸೇರಿಸಿಕೊಳ್ಳಬೇಕಾಗುತ್ತವೆ. ಭಾರತೀಯ ಭಾಷೆಗಳಲ್ಲಿ ದಿನವೊಂದಕ್ಕೆ ಟೆರಾಗಿಗಾಬೈಟಿನಷ್ಟು ಡೇಟಾ ಉತ್ಪನ್ನವಾಗುತ್ತದೆ. ಫೇಸ್ಬುಕ್ ಮತ್ತು ಟ್ವಿಟರುಗಳಲ್ಲಿ ಈಗಾಗಲೇ ಇದು ಆರಂಭವಾಗಿದೆ. ಆಗ ಭಾರತೀಯ ಭಾಷೆಗಳಲ್ಲಿರುವ ಡೇಟಾ-ಅನಾಲಿಸಿಸ್ ತಂತ್ರಜ್ಞಾನಗಳು ಬೇಕಾಗುತ್ತವೆ. ಹೊಸ ಉದ್ಯೋಗಾವಕಾಶಕ್ಕೆ ಈ ಬೆಳವಣಿಗೆಗಳು ಅವಕಾಶ ಮಾಡಿಕೊಡಲಿವೆ. ಹೀಗಾಗಿ ಪ್ರಜ್ಞಾವಂತ ನಾಗರೀಕರಾದ ನಾವು ಮೋದಿ ಮಾಡಿದ್ದು ಸರಿಯೇ ತಪ್ಪೇ ಎಂಬ ವ್ಯರ್ಥ ಚರ್ಚೆಯಲ್ಲಿ ತೊಡಗುವ ಬದಲು, ಈ ನಿರ್ಣಯದಿಂದ ಅನಾನೂಕೂಲತೆಯನ್ನು ಅನುಭವಿಸುತ್ತಿರುವ ಜನರ ಬಗ್ಗೆ ಕರಳು ಕಿತ್ತಿ ಬರುವ ಸಾಹಿತ್ಯ ರಚಿಸುವ ಬದಲು, ಅಂತಹ ಜನರ ಸಮಸ್ಯೆಯ ನಿವಾರಣೆಯಲ್ಲಿ ಮತ್ತು ಭಾರತೀಯರಿಗೆ ಇ-ವ್ಯವಹಾರ ಅನುಕೂಲವಾಗುವಂತೆ ಹೊಸ ವ್ಯವಸ್ಥೆಗಳನ್ನು ರೂಪಿಸುವಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವದು ಶ್ರೇಯಸ್ಕರ.
ಅರ್ಥಗರ್ಭಿತ ಲೇಖನ. ಜನರಿಗೆ ತಾಳ್ಮೆ ಬೇಕು ಅಷ್ಟೆ.
ಅತ್ಯುಪಯುಕ್ತ ಮಾಹಿತಿ ಧನ್ಯವಾದಗಳು ನಿಮಗೆ
ಮತ್ತೊಂದು ಪ್ರೊಪಗಾಂಡಾ ಲೇಖನ. ಏನನ್ನೂ ವಿವರಿಸುವುದಿಲ್ಲ ಈ ಲೇಖನ. ಒಂದು ಉದ್ದದ ಭಾಷಣ. ಅದರ ಉದ್ದೇಶ ಒಂದೇ: ಒಂದು ನಡೆಯನ್ನು ಹೇಗಾದರೂ ಮಾಡಿ ಸಮರ್ಥಿಸಿಕೊಳ್ಳುವುದು. ಸಾಧ್ಯವಿದ್ದರೆ ಈ ಪ್ರಶ್ನೆಗಳನ್ನು ಉತ್ತರಿಸಿ.
(೧) “೨೦೦೦ರೂ ನೋಟನ್ನು ಚಲಾವಣೆಗೆ ತಂದಿದ್ದು, ಕೇವಲ ಹಣ ಬದಲಾಯಿಸುವ ಪ್ರಕ್ರಿಯೆ ಎಲ್ಲೆಡೆ ಏಕಕಾಲಕ್ಕೆ ಆರಂಭವಾಗುವದರಿಂದ, ಬ್ಯಾಂಕಿಗೆ ಸಹಾಯಕವಾಗಲಿ ಎಂಬ ಉದ್ದೇಶಕ್ಕೆ ಮಾತ್ರವಿರಬಹುದು.” ಅಂದರೆ ನೋಟು ವಾಪಸಾತಿ ಒಂದು ಅವಸರದ, ಸಾಕಷ್ಟು ತಯಾರಿ ಮಾಡಿ ಕೊಳ್ಳದೆ ತೆಗೆದುಕೊಂಡ ನಿರ್ಧಾರ. ಇಲ್ಲದಿದ್ದರೆ ಬಹಳ ಮುಂಚೆಯೇ ಸಾಕಷ್ಟು ನೋಟು ಮುದ್ರಿಸಿ ಈ ಕೆಲಸಕ್ಕೆ ಕೈ ಹಾಕಬಹುದಾಗಿತ್ತು.
(೨) “ಎರಡು ಸಾವಿರದ ನೋಟು ಕೇವಲ ತತ್ಕಾಲಕ್ಕೆ ಮಾತ್ರ.” ಇದು ನಿಜವಾದರೆ, ಈ ಮುದ್ರಣ-ವಾಪಸಾತಿ ಕೆಲಸಕ್ಕೆ ವ್ಯವಯವಾಗುವ ವೆಚ್ಚ ಭರಿಸುವವರು ಯಾರು? ನಮ್ಮ ನಿಮ್ಮ ತೆರಿಗೆಯ ಆದಾಯದಿಂದ. ಇದಕ್ಕೆ ಕಾರಣ? ಮೇಲೆ ತಿಳಿಸಿದ ಬೇಜವಾಬ್ದಾರಿಯುತ ಅವಸರದ ಹೆಜ್ಜೆ.
(೩) “ಎ.ಟಿ.ಎಂಗಳು ಕಾರ್ಯನಿರ್ವಹಿಸಲು ಇನ್ನೂ ಸಮಯ ಬೇಕು.” ನೋಟಿನ ಅಳತೆ ಬದಲಾಯಿಸಿದ್ದು ಯಾಕೆ? ಹಾಗೆ ಮಾಡಿ ಇರುವ ಏಟಿಎಂ ಕೆಲಸ ಮಾಡದಂತೆ ಮಾಡುವ ಅವಶ್ಯಕೆತೆ ಏನಿತ್ತು? ಅದಕ್ಕೂ ನಿಮ್ಮ ಟೋಪಿಯಲ್ಲಿ ಒಂದು ಉತ್ತರ ಇರಬಹುದೇ?
(೪) “ಹೀಗಾಗಿ ಅಕ್ಷರ ಮತ್ತು ಅಂಕಿಗಳನ್ನು ಓದಲು/ಬರೆಯಲು ಬರುವ ಚಿಕ್ಕ/ಮಧ್ಯಮ ವ್ಯಾಪಾರಿಗಳು, ಅಸಂಘಟಿತ ವಲಯದ ಕಾರ್ಮಿಕರು ಸ್ವೈಪಿಂಗ್ ಮಶೀನುಗಳನ್ನು, ಪೇಟಿಎಂ ಮುಂತಾದ ಅಪ್ಲಿಕೇಶನ್ನುಗಳನ್ನು ಉಪಯೋಗಿಸಲು ಆರಂಭಿಸಿಬಿಟ್ಟಿದ್ದಾರೆ.” ಒಮ್ಮೆ ಹಳ್ಳಿಗಳಿಗೆ ಹೋಗಿ ನೋಡಿ. ಬೆಂಗಳೂರಿನಲ್ಲಿ ಕುಳಿತು ಭಾಷಣ ಕೊಟ್ಟಂತೆ ಅಲ್ಲ ಅಲ್ಲಿ ಜೀವನ.
(೫) “ಮನೆ, ಆಸ್ತಿ … ಖರೀದಿಸುವವರು, ಕಾರ್ಡುಗಳನ್ನು ಸ್ವೈಪಿಸಲಾರಂಭಿಸಿದ್ದಾರೆ.” ಹೌದಾ? ಅಂದರೆ ಪ್ರತಿಯೊಬ್ಬರೂ ಕಾರ್ಡ್ ಸ್ವೀಪ್ ಮಾಡುವ ಯಂತ್ರವನ್ನು ಕೊಳ್ಳಬೇಕು ಅಂತಾಯಿತು. ನಿಮ್ಮ ಬಳಿಯೂ ಇದೆಯೇ ಒಂದು?
(೬) “ಹಳ್ಳಿಗಳಲ್ಲಿರುವ ಬ್ಯಾಂಕುಗಳ ಜನರು ಡೆಬಿಟ್ ಕಾರ್ಡುಗಳಿಗೆ, ಇ-ಬ್ಯಾಂಕಿಂಗ್ ಸೌಲಭ್ಯಕ್ಕಾಗಿ ಬೇಡಿಕೆಗಳನ್ನಿಡಲಾರಂಭಿಸದ್ದಾರೆ. ಬೇಡಿಕೆಯು ಪೂರೈಕೆಯ ಮುನ್ನುಡಿ. ಹೀಗಾದಾಗ ಇನ್ನು ಅಲ್ಲಿ ಎ.ಟಿ.ಎಂಗಳು ಕಾಲಿಡುವ ದಿನಗಳು ದೂರವಿಲ್ಲ. ಹಳ್ಳಿಗಳು ನಗದಿನಿಂದ ದೂರಸರಿಯುವ ದಿನಗಳೂ ದೂರವಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು, ತಕ್ಷಣಕ್ಕೆ ಹೊಂದಿಕೊಳ್ಳುವ ನಮ್ಮ ಹಳ್ಳಿಗರ ಪ್ರವೃತ್ತಿಗೆ ಸಾವಿರ ವರ್ಷಗಳ ಇತಿಹಾಸವಿರುವುದರಿಂದ ಇದೇನೂ ದೊಡ್ಡ ಸಮಸ್ಯೆಯೇ ಅಲ್ಲ.” ಚಪ್ಪಾಳೆ, ಚಪ್ಪಾಳೆ. ಭಾಷಣ ಚೆನ್ನಾಗಿದೆ ಸಾರ್.
(೭) “…ಅಂತಹ ಕಾನೂನನ್ನು ಗಾಳಿಗೆ ತೂರಿ ಹಳ್ಳಿಗಳಲ್ಲಿ ಹಾಗೂ ನಗರಗಳಲ್ಲಿ ನಗದು ವ್ಯವಹಾರ ಅವ್ಯಾಹತವಾಗಿ ನಡೆಯುತ್ತಲೇ ಇತ್ತು.” ಅಂದರೆ ನಿಮಗೆ ಇಲ್ಲಿ ಕೇವಲ ‘ಕಾನೂನನ್ನು ಗಾಳಿಗೆ ತೋರುವ’ (ಅಂದರೆ, ಅನೈತಿಕತೆ) ಮಾತ್ರ ಕಾಣಿಸುತ್ತಿದೆ ಅಂತಾಯಿತು. ಭಲೇ ನಿಮ್ಮ ಕನ್ನಡಕ. ಇದೂ ೧೯ನೆಯ ಶತಮಾನದ ವಿಕ್ಟೋರಿಯನ್ ಮೊರಾಲಿಟಿಯ ಒಂದು ಕೊಡುಗೆಯೇ. ಅದನ್ನು ಅವ್ಯಾಹತವಾಗಿ ಇಂದು ಮಾರುತ್ತಿರುವುದು ನಿಮ್ಮ ಹಿಂದುತ್ವ ಬಂಧುಗಳೇ.
ಕಡೆಯದಾಗಿ, “ಪಾಶ್ಚಿಮಾತ್ಯರಿಂದ ಆಮದು ಮಾಡಿಕೊಂಡಿರುವ ‘ಸಿಸ್ಟಂ’ಗಳ” ಕುರಿತ ಭಾಷಣ ಕೊಟ್ಟಿರಲ್ಲಾ ಅದಕ್ಕೆ ಈ ಪ್ರಶ್ನೆ. ಈ ಹಿಂದೆ ನೋಟಿನ ವಾಪಸಾತಿge ಕೈ ಹಾಕಿದವರು ಯಾರು ಯಾರು ಎಂದು ಏನಾದರೂ ಗೊತ್ತೇ? ಓದಿ ನೋಡಿ ಈ ‘ಸಿಸ್ಟಂ’ ಎಲ್ಲಿಂದ ಆಮಾದಾಗಿದೆ ಎಂದು.
ಟಾಟಾ
“ಭಾರತೀಯರ ಪ್ರತಿಸ್ಪಂದನೆ” ಎಂದಿರೋ? ಒಹ್, ಇಲ್ಲೊಬ್ಬ ಪಾಕಿಸ್ತಾನಿ ಮುದುಕ ಏನೋ ಬಡಬಡಾಯಿಸುತ್ತಿದ್ದಾನೆ ನೋಡಿ. ಹೇಗೆ ಇವರ ಬಾಯಿ ಮುಚ್ಚಿಸುವುದು ಓ ಗಾಡ್: http://www.agniweekly.com/2016/edition_19/issue_59/page_8/index.html
ಏನ್ ಸಾ, ಅಷ್ಟು ಗೊತ್ತಿಲ್ಲ ಅಂದರೆ ಹೇಗೆ. ಬಾಯಿ ಮುಚ್ಚಿ ಒಪ್ಪಿಕೊಂಡರೆ ನಿಮ್ಮದು ‘ಭಾರತೀಯ ಪ್ರತಿಸ್ಪಂದನೆ’, ಇಲ್ಲ ಅಂದ್ರೆ ನಿಮ್ಮದು ‘ಪಾಕಿಸ್ತಾನಿ ಪ್ರತಿಸ್ಪಂದನೆ’.
All well known economists from the world have criticised demonetisation as cruel, thoughtless, and harmful move. Today a man committed suicide as he couldn’t withdraw his money from bank for his daughter’s wedding. Bhakts who were all up against Siddaramaiahji when IAS officer Ravi committed suicide are silent about this death. Why don’t they demand CBI probe on what abetted the father’s death and demand PM’s resignation?
Nobel prize winner in Economics and Bharat Ratna Prof. Amartya Sen on demonetisation:
Yet the lowly Hampiholi Chakrateertha gang continues to brainwash Nilume readers on demonetisation! And professional trolls try to silence Shetkar and other dissenters!
Nobel laureate and Bharat Ratna Professor Amartya Sen, has questioned the demonetisation step and its impact in the country. Sen also said that both the idea and the way it was implemented, was similar to a “despotic action” and showed “authoritarian nature of the government”.
Here is a challenge to all those hindutva brothers who support demonetisation. Come and stay in my place, Holalkere, for 15 days, not as guests but as workers with a family, which should include a young kid and an old person. Pay only through your atm/paytm account, for everything. Come without your personal vehicle and MTR packets bought in some supermarket in Bangalore. If you survive for all 15 days, I will return all the money you have spent during those days. If you fail… just one request, don’t support everything that a person does, just because you hate his enemies. Thank you!
ನಿಲುಮೆಯ ನಮೋ ಕಾಲಾಳು ಪಡೆಗೆ ಬೆಂಗಳೂರು ನಗರದ ಹತ್ತು ಕಿಲೋಮೀಟರ್ ಹೊರಬದಿಯ ಪರಿಸರದ ಗಂಧಗಾಳಿ ಇಲ್ಲ. ಬೆಂಗಳೂರು ನಗರದ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಜೀವನಕ್ಕಿಂತ ಭಿನ್ನವಾದ ಜೀವನಕ್ರಮವೂ ಇದೆ ಎಂಬ ಅವೇರ್ ನೆಸ್ ಇಲ್ಲ! ಇವರಿಗೆ ಗೊತ್ತಿರುವುದು ಒಂದೇ: ಸದಾ ಎನ್ನ ಹೃದಯದಲ್ಲಿ ನಮೋ ನೆಲಸಿರಲಿ ಎಂಬ ಭಜನೆ! ಈ ರಾಕೇಶ್ ಶೆಟ್ಟಿ, ಸುದರ್ಶನ್, ಹಂಪಿಹೊಳಿ ಮೊದಲಾದವರನ್ನು ಒಂದು ತಿಂಗಳು ನಿಮ್ಮ ಹೊಳಲ್ಕೆರೆಯಲ್ಲೋ ನಮ್ಮ ಬೀದರ್ ಜಿಲ್ಲೆಯ ಹಳ್ಳಿಗಳಲ್ಲೋ ಬಿಟ್ಟು ರಿಯಾಲಿಟಿ ಷೋ ರೆಕಾರ್ಡ್ ಮಾಡಬೇಕು. ಇವರು ಪಡುವ ಪಾಡು ಬಹಳ ಮಜವಾಗಿರುತ್ತದೆ, ಬಿಗ್ ಬಾಸ್ ಗಿಂತ.
“ಅಗತ್ಯತೆಯೇ ಅನ್ವೇಷಣೆಗೆ ಕಾರಣ”
ಇದೇನಿದು ಅನ್ವೇಷಣೆಗೆ ಕಾರಣ ‘ವಸಾಹತು ಪ್ರಜ್ಞೆ’ ಎನ್ನುವ ಬದಲು ‘ಅಗತ್ಯ’ ಎಂದು ಹೇಳುತ್ತಿರುವಿರಲ್ಲಾ? ಬಾಲಗಂಗಾಧರರ ಪಾಠ ಇಲ್ಲಿ ಹೇಗೆ ಮಿಸ್ ಆಯ್ತು?