“ಮನುಷ್ಯರು”…
– ‘ಶ್ರೀ’ ತಲಗೇರಿ
ಕಂಕುಳ ಬಿಸಿಯಲ್ಲಿ
ಸಿಕ್ಕಿಸಿಕೊಂಡ ಹೂವಿಗಿಂತ
ಆಚೆಮನೆಯ ಬೇಲಿ ಸಂಧಿಯಲಿ
ಬೀಡುಬಿಟ್ಟ ಮೊಗ್ಗು
ತಡವುತ್ತದೆ ರೋಮಗಳ ಹೆಚ್ಚೆಚ್ಚು..
ಆಗಲೂ ಮನುಷ್ಯರು ನಾವು…
ಕಾಮಾಟಿಪುರದ ಗಲ್ಲಿಗಲ್ಲಿಯ
ಕತ್ತಲಲಿ ಅಲೆದಲೆದು
ಸುಸ್ತಾಗಿ ಪಡೆದದ್ದು ಭಾಸ!
ಭೇದಿಸಿದ ರಹಸ್ಯದಸ್ತಿತ್ವಕೆ
ಬೇಕೇನು ಸುಟ್ಟ ಗಾಯದ
ಸುತ್ತ ಜಾರಿದ ಹನಿಗಳ ಸಾಕ್ಷಿ..
ಕತೆಯಾಗುತ್ತದೆ
ಕಪ್ಪು ಬಿಳುಪಿನ ಏರಿಳಿತಕ್ಕೆ
ಅಂಗಿಗಂಟಿದ ಬೆವರು..
ಆಗಲೂ ಮನುಷ್ಯರು ನಾವು…
ಋತುಮಾನಗಳಿಗೆ ಗೋಗರೆದು
ಎದೆರಸವ ಬಸಿದು
ಮೊಳಕೆಗೆಂದು ಬಿಟ್ಟಿದ್ದ
ಬೀಜಗಳ ಮೈಯೆಲ್ಲಾ
ಕೆಂಪು ಸಾಲಿನ ಗೀರುಗಳು..
ಬರಿಯ ರಕ್ತದ ವಾಸನೆಗೆ
ತೀರುವುದೇ ಯಾರ ಹಸಿವೂ!..
ಆಗಲೂ ಮನುಷ್ಯರು ನಾವು…
ಕೊಳೆತು ನಾರುವ
ಆಸ್ಪತ್ರೆಯ ತೊಟ್ಟಿಯಲ್ಲಿ
ಕಣ್ಬಿಟ್ಟಿರದ ಧ್ಯಾನಸ್ಥ ಹೆಣ..
ಮಡಚಿಕೊಳ್ಳುತ್ತದೆ ಪುಟ್ಟ ಪ್ರಪಂಚ
ಸೆರಗು ಹೊರಗಿನ ಗೋಡೆಯಲ್ಲಿ..
ಇನ್ನೆಲ್ಲೋ ನಿಲ್ಲುತ್ತದೆ ಗಕ್ಕನೆ
ಕೊಸರುತ್ತ, ಅರ್ಧ ಮುರಿದ
ಬೀದಿ ದೀಪಗಳಡಿಯಲ್ಲಿ
ತಾಜಾ ಚರ್ಮ ಹರಿದು
ಯಾರದೋ ಅಕ್ಕತಂಗಿಯ ಉಸಿರು..
ಈಗಲೂ?!!…