ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 28, 2016

ಒಂದು ಪ್ರೇಮ ಪಲ್ಲಕ್ಕಿಯ ಮೇಲೆ…!

‍ನಿಲುಮೆ ಮೂಲಕ

– ಗುರುರಾಜ ಕೋಡ್ಕಣಿ. ಯಲ್ಲಾಪುರ

2686103_0f90c4f1ಸಾಯಂಕಾಲದ ಆರು ಗಂಟೆಗೆ ಇನ್ನೇನು ಆರೇ ನಿಮಿಷಗಳಿವೆ ಎಂಬುದನ್ನು ಸೂಚಿಸುತ್ತಿತ್ತು, ನ್ಯೂಯಾರ್ಕಿನ ಗ್ರಾಂಡ್ ಸೆಂಟ್ರಲ್ ರೈಲ್ವೆ ನಿಲ್ದಾಣದ ಮಾಹಿತಿ ಕೇಂದ್ರದ ಹೊರಗೊಡೆಯ ಮೇಲೆ ತೂಗುತ್ತಿದ್ದ ಬೃಹತ್ ಗಡಿಯಾರ. ಬಿಸಿಲಿಗೆ ಕಪ್ಪಗಾಗಿದ್ದ ತನ್ನ ಮುಖವನ್ನೊಮ್ಮೆ ನಿಧಾನಕ್ಕೆ ಮೇಲಕ್ಕೆತ್ತಿದ್ದ ಆ ಸೈನ್ಯಾಧಿಕಾರಿ ನಿಖರವಾದ ಸಮಯವನ್ನು ಕಂಡುಕೊಳ್ಳಲು ತನ್ನ ಕಣ್ಣುಗಳನ್ನು ಕ್ಷಣಕಾಲ ಕಿರಿದಾಗಿಸಿ ಗಡಿಯಾರವನ್ನು ದಿಟ್ಟಿಸಿದ. ಉಸಿರುಗಟ್ಟಿಸುವಷ್ಟು ಜೋರಾಗಿದ್ದ ಹೃದಯಬಡಿತ ಅವನಿಗಿಂದು. ಕೇವಲ ಆರೇ ಅರು ನಿಮಿಷಗಳಲ್ಲಿ ಆತ ತನ್ನ ಬದುಕಿನ ಬೆಳದಿಂಗಳ ಬಾಲೆಯನ್ನು ಭೇಟಿಯಾಗಲಿದ್ದ. ಕಳೆದ ಹದಿನೆಂಟು ತಿಂಗಳಿನಿಂದ ಬಾಳಿಗೊಂದು ಸ್ಪೂರ್ತಿಯಾಗಿರುವ, ತಾನು ಇದುವರೆಗೂ ನೋಡಿರದಿದ್ದ ತನ್ನ ಪತ್ರ ಪ್ರೇಮಿಯನ್ನು ಆತ ಮೊದಲ ಬಾರಿಗೆ ಸಂಧಿಸಲಿದ್ದ. ನಿಲ್ದಾಣದ ಮುಖ್ಯ ದ್ವಾರದತ್ತಲೇ ತದೇಕಚಿತ್ತದಿಂದ ನೋಡುತ್ತ ನಿಂತಿದ್ದ ಅವನು, ಮಾಹಿತಿಗಾಗಿ ಅಲ್ಲಿದ್ದ ಗುಮಾಸ್ತನ ಸುತ್ತ ಗಜಿಬಿಜಿಯಿಂದ ನಿಂತಿದ್ದ ಜನಜಂಗುಳಿಯಿಂದ ಕೊಂಚ ದೂರ ಸರಿದು ಮಾಹಿತಿ ಕೇಂದ್ರದ ಪಕ್ಕದಲ್ಲಿಯೇ ನಿಂತಿದ್ದ.

ಹಾಗೆ ಪ್ರೇಯಸಿಗಾಗಿ ಕಾಯುತ್ತ ಸುಮ್ಮನೇ ನಿಂತಿದ್ದ ಅಧಿಕಾರಿ ಬ್ಲಾಂಡಫೋರ್ಡನಿಗೆ ನೂರೆಂಟು ಕನವರಿಕೆಗಳು. ಆ ಕ್ಷಣಕ್ಕೆ ಅವನಿಗೆ ಯುದ್ಧಭೂಮಿಯಲ್ಲಿ ತಾನೆದುರಿಸಿದ್ದ ಭಯಾನಕ ಸನ್ನಿವೇಶವೊಂದು ಹಠಾತ್ತನೇ ನೆನಪಾಗಿತ್ತು. ತನ್ನ ವಿಮಾನವನ್ನು ಸುತ್ತುವರೆದಿದ್ದ ಶತ್ರುಗಳ ಹತ್ತಾರು ವಿಮಾನಗಳು ನಿಜಕ್ಕೂ ಅವನನ್ನು ಕಂಗಾಲಾಗಿಸಿದ್ದವು. ಪಕ್ಕದಲ್ಲೇ ಹಾರಿಬರುತ್ತಿದ್ದ ಶತ್ರು ಸೈನ್ಯದ ವಿಮಾನದ ಪೈಲೆಟ್ ತನ್ನತ್ತ ವ್ಯಂಗ್ಯದ ನಗು ನಕ್ಕಾಗಲಂತೂ ಸಾವು ಕಣ್ಣೆದುರು ಕಂಡ ಅನುಭವ. ಆತ ತನ್ನ ಭಯದ ಕುರಿತಾಗಿಯೂ ತನ್ನ ಪ್ರೇಯಸಿಗೆ ಪತ್ರಗಳಲ್ಲಿ ಉಲ್ಲೇಖಿಸಿದ್ದ. ಆತನ ಭಯದ ಬಗ್ಗೆ ಓದಿಕೊಂಡ ಆಕೆ ಯುದ್ದಕ್ಕೂ ಮುನ್ನವೇ ಆತನಿಗೊಂದು ಚಂದದ ಉತ್ತರ ಬರೆದಿದ್ದಳು. “ನಿನಗೆ ಭಯವಾಗುವುದು ಅಸಹಜವೇನಲ್ಲ ಬ್ಲಾಂಡ್. ಭಯವೆನ್ನುವುದು ಮನುಷ್ಯನಿಗೆ ನಿಸರ್ಗದತ್ತವಾದದ್ದು. ಎಲ್ಲ ವೀರಯೋಧರಿಗೂ ತಮಗರಿವಿರದ ಅವ್ಯಕ್ತ ಭಯವೊಂದು ಕಾಡುತ್ತಿರುತ್ತದೆ. ಇಸ್ರೇಲಿನ ರಾಜ ಡೇವಿಡನಿಗೇನು ಕಮ್ಮಿ ಭಯವಿತ್ತೇ.? ತನ್ನ ಭಯದ ನಿವಾರಣೆಗಾಗಿಯೇ ಅಲ್ಲವಾ ಆತ ದೇವರ ಸ್ತುತಿಗಳನ್ನು ರಚಿಸುತ್ತಿದ್ದದ್ದು..? ಮುಂದಿನ ಬಾರಿ ನಿನಗೆ ಭಯವಾದಾಗ ನನ್ನ ಮಾತುಗಳನ್ನು ನೆನಪಿಸಿಕೊ. ನನ್ನ ಧ್ವನಿಯಲ್ಲಿ, ‘ದಿನಬೆಳಗಾದರೆ ಸಾವೆಂಬ ಅಂಧಕಾರದ ಕಣಿವೆಗಳ ದಾರಿಯಲ್ಲಿ ನಡೆಯುವವ ನಾನು. ನಾನು ಸಾವಿಗೆ ಭಯಪಡುವುದು ಅರ್ಥಹೀನ. ಸಾವಿನೊಂದಿಗೆ ಆಟವಾಡುವುದೇ ನನ್ನ ಕರ್ತವ್ಯ’ ಎಂದು ಕೇಳುತ್ತಿರುವಂತೆ ಕಲ್ಪಿಸಿಕೊ” ಎಂದು ಬರೆದಿದ್ದ ಗೆಳತಿಯ ಮಾತುಗಳು ಅವನಿಗೆ ನೆನಪಾಗಿದ್ದವು. ಯುದ್ಧಭೂಮಿಯ ಆಗಸದ ನಡುವೆ ಶತ್ರುಸೇನೆಯೊಂದಿಗೆ ವೈಮಾನಿಕ ಹೋರಾಟ ನಡೆಸುತ್ತಿದ್ದ ಆ ನಿಮಿಷಕ್ಕೆ ಅವನಿಗೆ ಪ್ರೇಯಸಿಯ ಧ್ವನಿ ಕೇಳಿಸಲಾರಂಭಿಸಿತ್ತು. ಆಕೆಯ ಕಾಲ್ಪನಿಕ ಧ್ವನಿ ತನಗೊದಗಿಸಿದ್ದ ನವಚೈತನ್ಯದಿಂದಾಗಿ ಆತ ಶತ್ರುಗಳನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದ.

ಕಲ್ಪನೆಯಲ್ಲಿ ಮಾತ್ರ ಕೇಳಿದ್ದ ಪ್ರೇಯಸಿಯ ಮಧುರ ದನಿಯನ್ನು ಆತ ಇಂದು ಮೊದಲ ಸಲ ಕೇಳಿಸಿಕೊಳ್ಳಲಿದ್ದ. ಪ್ರಿಯತಮೆಯ ಭೇಟಿಗೆ ತೀರ ಉತ್ಸುಕನಾಗಿದ್ದ ಆತನಿಗೆ ಆರು ಗಂಟೆಗಿನ್ನೂ ನಾಲ್ಕು ನಿಮಿಷವಿದ್ದಿದ್ದು ಅರಿವಿಗೆ ಬಂದಿತ್ತು. ಅಷ್ಟರಲ್ಲಿ ಒಬ್ಬ ಸುಂದರ ಯುವತಿ, ಬ್ಲಾಂಡಫೊರ್ಡನನ್ನು ಸಮೀಪಿಸಲಾರಂಭಿಸಿದಳು. ಇನ್ನೇನು ಮುಗುಳ್ನಕ್ಕು ಆಕೆಯತ್ತ ಕೈಚಾಚಬೇಕೆಂದುಕೊಂಡ ಬ್ಲಾಂಡಫೋರ್ಡನಿಗೆ ಆಕೆಯ ರವಿಕೆಯ ಮೇಲಂಟಿಸಿಕೊಂಡಿದ್ದ ಹೂವು ಗುಲಾಬಿಯಲ್ಲವೆನ್ನುವುದು ಗಮನಕ್ಕೆ ಬಂದಿತ್ತು. ಮೊದಲ ಬಾರಿಗೆ ಭೇಟಿಯಾಗುವಾಗ ತನ್ನ ರವಿಕೆಯ ಮೇಲೊಂದು ಕೆಂಪುಗುಲಾಬಿಯನ್ನು ಅಂಟಿಸಿಕೊಂಡುಬರುವುದಾಗಿ ನುಡಿದ್ದಿದ್ದ ಹಾಲ್ಲಿಸ್ ಮೆಯ್ನೆಲ್ಲಳ ಮಾತುಗಳನ್ನು ಆತ ಮರೆತಿರಲಿಲ್ಲ. ಅಲ್ಲದೇ ಅವನೆದುರು ಹಾದು ಹೋಗಿದ್ದ ಹುಡುಗಿಯ ತೀರ ಹದಿನೆಂಟರ ಯುವತಿಯಾಗಿದ್ದಳು. ಹಾಲ್ಲಿಸ್ ತನ್ನ ವಯಸ್ಸು ಮೂವತ್ತು ಎಂದು ಬರೆದುದ್ದನ್ನು ಬ್ಲಾಂಡಫೋರ್ಡ್ ಒಮ್ಮೆ ಜ್ನಾಪಿಸಿಕೊಂಡು ಸುಮ್ಮನಾದ. ಹಾಲ್ಲಿಸಳ ಪ್ರೇಮದ ನಶೆಯಲ್ಲಿ ಬ್ಲಾಂಡ್ ಫೋರ್ಡ್ ಅದೆಷ್ಟು ಮುಳುಗಿಹೋಗಿದ್ದನೆಂದರೆ ತನ್ನ ನಿಜವಾದ ವಯಸ್ಸು ಇಪ್ಪತ್ತೊಂಬತ್ತಾಗಿದ್ದರೂ, ತನಗೆ ಮೂವತ್ತೆರಡು ವರ್ಷ ವಯಸ್ಸೆನ್ನುತ್ತ ಆಕೆಗೆ ಸುಳ್ಳು ಹೇಳಿದ್ದ.

ಕಾಯುತ್ತ ನಿಂತವನ ಕಾಲಹರಣಕ್ಕೆ ನೆನಪುಗಳೇ ಸಂಗಾತಿಗಳು. ತನ್ನನ್ನು ಸೈನಿಕನಾಗಿಸಿದ್ದ ಫ್ಲೊರಿಡಾದ ಸೈನ್ಯ ತರಬೇತಿ ಕೇಂದ್ರದ ಗ್ರಂಥಾಲಯಗಳಲ್ಲಿದ್ದ ಸಾವಿರಾರು ಪುಸ್ತಕಗಳ ಪೈಕಿ ಆ ಪುಸ್ತಕವೇ ತನ್ನ ಕೈಗೆ ಸಿಕ್ಕಿದ್ದು ನಿಜಕ್ಕೂ ಆಶ್ಚರ್ಯವೇ ಎಂದೆನಿಸಿತ್ತು ಅವನಿಗೆ. ಪುಸ್ತಕದ ಮೇಲೆ ಪೆನ್ನಿನಿಂದ ಗೀಚುವ ಅಭ್ಯಾಸವನ್ನು ಆತ ನಖಶಿಖಾಂತ ದ್ವೇಷಿಸುತ್ತಿದ್ದನಾದರೂ ಮೊದಲ ಬಾರಿಗೆ ಪುಸ್ತಕದ ಮೇಲಿದ್ದ ಗೀಚುವಿಕೆ ಅವನನ್ನು ಆಕರ್ಷಿಸಿತ್ತು. ಆ ಗಿಚುವಿಕೆಗಳಲ್ಲಿದ್ದ ಆರ್ದ್ರತೆ ಅವನಲ್ಲೊಂದು ಹೊಸಭಾವವನ್ನು ಮೀಟಿತ್ತು. ಪುಸ್ತಕದ ಮುಖಪುಟದ ಮೇಲೆ ಗೀಚಿದ್ದ ‘ಹಾಲ್ಲಿಸ್ ಮೆಯ್ನೆಲ್’ ಎಂಬ ಹೆಸರು ಅವನನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ನ್ಯೂಯಾರ್ಕ್ ನಗರದ ದೂರವಾಣಿಯ ಕೈಪಿಡಿಯಲ್ಲಿದ್ದ ಹಾಲ್ಲಿಸ್ಸಳ ವಿಳಾಸವನ್ನು ಪಡೆದುಕೊಂಡ ಬ್ಲಾಂಡ್ ಫೋರ್ಡ್, ಆಕೆಗೆ ಮೊದಲ ಪತ್ರ ಬರೆದಿದ್ದ. ಆಕೆ ಅದಕ್ಕೊಂದು ಉತ್ತರ ಬರೆದಿದ್ದಳು. ತನ್ನ ತರಬೇತಿ ಮುಗಿಸಿ ಆತ ಮರುದಿನವೇ ಫ್ಲೋರಿಡಾದಿಂದ ತೆರಳಿದ್ದನಾದರೂ ಹಾಲ್ಲಿಸಳೊಂದಿಗಿನ ಆತನ ಪತ್ರ ವ್ಯವಹಾರ ಮಾತ್ರ ಸತತವಾಗಿ ಮುಂದುವರೆದಿತ್ತು. ಆಕೆ ಸತತವಾಗಿ ಹದಿಮೂರು ಮಾಸಗಳ ಕಾಲ ಅವನ ಪತ್ರಗಳಿಗೆ ಉತ್ತರಿಸಿದ್ದಳು. ಆತನ ಪತ್ರ ಬಾರದಿದ್ದಾಗಿಯೂ ಆಕೆ ಉತ್ತರಿಸುತ್ತಲೇ ಇದ್ದಳು. ಹಾಗೊಂದು ದಿನ ಬ್ಲಾಂಡಫೋರ್ಡ್ ನಿಗೆ ತಾವಿಬ್ಬರು ಪರಸ್ಪರ ಪ್ರೀತಿಸಲಾರಂಭಿಸಿದ್ದೇವೆನ್ನುವ ಬಗ್ಗೆ ಖಚಿತವಾಗಿತ್ತು. ಆಕೆಯ ಭಾವಚಿತ್ರಕ್ಕಾಗಿ ಬ್ಲಾಂಡಫೋರ್ಡನ ಕೋರಿಕೆಯನ್ನು ಆಕೆ ನಿರಾಕರಿಸಿಬಿಟ್ಟಿದ್ದಳು. ‘ನನ್ನ ಬಗ್ಗೆ ನಿನ್ನ ಪ್ರೀತಿ ಪರಿಶುದ್ಧ ಪ್ರೇಮವಾಗಿದ್ದರೆ ನನ್ನನ್ನು ನೋಡುವ ಅಗತ್ಯವೇ ನಿನಗಿಲ್ಲವೆನ್ನುವುದು ನನ್ನ ನಂಬಿಕೆ. ನಾನು ಸುಂದರಳಾಗಿದ್ದೇನೆ ಎಂದುಕೊಂಡು ನೀನು ಪ್ರೀತಿಸುತ್ತಿದ್ದೆ ಎನ್ನುವ ಭಾವ ನನ್ನನ್ನು
ಕಾಡಿಬಿಟ್ಟರೇ, ಸುಂದರತೆಗಾಗಿ ಮಾತ್ರ ನೀನು ಬೆಲೆ ನೀಡುವ ವ್ಯಕ್ತಿ ಎನ್ನುವ ತರ್ಕ ನನ್ನಲ್ಲಿ ಹುಟ್ಟಿ ಭವಿಷ್ಯದಲ್ಲಿ ನಾನು ತೀವ್ರ ಅಭದ್ರತಾಭಾವದಿಂದ ಬಳಲಿಬಿಟ್ಟೇನು. ನಾನು ಕೂರುಪಿಯಾಗಿದ್ದು ನೀನು ನನ್ನನ್ನು ಪ್ರೀತಿಸುತ್ತಿದ್ದೆ ಎನ್ನುವ ಭಾವನೆಯಂತೂ ಇನ್ನೂ ಭೀಕರ, ನೀನೊಬ್ಬ ಒಂಟಿಪಿಶಾಚಿ, ನನ್ನನ್ನು ಬಿಟ್ಟರೇ ನಿನಗೆ ಬೇರೊಬ್ಬರು ಗತಿಯಿಲ್ಲ ಎನ್ನುವ ಅನಿಸಿಕೆ ಕೊಡ ನನ್ನಲ್ಲಿ ಅಭದ್ರತೆ ಮೂಡಿಸುವುದು ಸುಳ್ಳಲ್ಲ. ಎರಡೂ ಸಂದರ್ಭಗಳಲ್ಲಿಯೂ ನನಗೆ ಹಾನಿಯೇ. ಹಾಗಾಗಿ ನಾನು ನಿನಗೆ ಭಾವಚಿತ್ರವನ್ನು ಕಳುಹಿಸಲಾರೆ, ನ್ಯೂಯಾರ್ಕಿನ ನಮ್ಮ ಮೊದಲ ಭೇಟಿಯಲ್ಲಿಯೇ ನೀನು ನನ್ನ ಬಾಹ್ಯರೂಪದ ಬಗ್ಗೆ ನಿರ್ಧರಿಸು’ ಎನ್ನುವುದು ಹಾಲ್ಲಿಸಳ ವಿವರಣೆಯಾಗಿತ್ತು. ಆರು ಗಂಟೆಯಾಗಲು ಇನ್ನು ಕೇವಲ ಒಂದೇ ನಿಮಿಷ ಬಾಕಿಯುಳಿದಿತ್ತು. ಭಾವೊದ್ರೇಕನಾಗಿದ್ದ ಬ್ಲಾಂಡಫೋರ್ಡನ ಹೃದಯಮಿಡಿತ ಅದೆಷ್ಟು ಜೋರಾಗಿತ್ತೆಂದರೆ ಅಂಥಹ ಗದ್ದಲದಲ್ಲಿಯೂ ಅವನದ್ದೇ ಹೃದಯಬಡಿತ ಅವನಿಗೆ ಕೇಳಿಸಲಾರಂಭಿಸಿತ್ತು.

ಅಷ್ಟರಲ್ಲಿ ಯುವತಿಯೊಬ್ಬಳು ಅವನೆದುರು ನಡೆದು ಬರಲಾರಂಭಿಸಿದಳು. ನೀಳಕಾಯದ, ತೆಳ್ಳಗಿನ ಸುಂದರ ಯುವತಿ ಆಕೆ. ಹೊಂಬಣ್ಣದ ಗುಂಗುರು ಕೂದಲುಗಳು ಆಕೆಯ ಕಿವಿಯನ್ನಾವರಿಸಿ ಇಳಿಬಿದ್ದಿದ್ದವು. ಹೂವಿನಂತಹ ನೀಲಿ ಕಂಗಳ ಆ ಚೆಲುವೆಯ ಮುದ್ದುಮುದ್ದಾದ ತುಟಿಗಳು, ಚೂಪು ಗಲ್ಲ ರಸಿಕರ ನಿದ್ದೆಗೆಡಿಸುವಂತಿದ್ದವು. ತಿಳಿ ಹಸಿರು ಬಣ್ಣದ ನಿಲುವಂಗಿಯನ್ನು ಧರಿಸಿದ್ದ ಆಕೆ ಅಕ್ಷರಶಃ ದೇವಲೋಕದಿಂದಿಳಿದ ಅಪ್ಸರೆಯಂತಿದ್ದಳು. ಕ್ಷಣಕಾಲಕ್ಕೆ ಆಕೆಯ ರೂಪಕ್ಕೆ ಮರಳಾದ ಬ್ಲಾಂಡಫೋರ್ಡ್ಆ ಕೆ ತನ್ನೆದೆಯ ಮೇಲೆ ಕೆಂಗುಲಾಬಿಯನ್ನು ಅಂಟಿಸಿಕೊಂಡಿಲ್ಲವೆನ್ನುವುದನ್ನೂ ಸಹ ಗಮನಿಸದೇ ಆಕೆಯತ್ತ ನಡೆಯಲಾರಂಭಿಸಿದ. ಬ್ಲಾಂಡಫೋರ್ಡನ ವರ್ತನೆಯಿಂದ ಕೊಂಚ ವಿಚಲಿತಳಾದ ಯುವತಿ, ಸಾವರಿಸಿಕೊಂಡು ಸಣ್ಣದ್ದೊಂದು ಮುಗುಳ್ನಗೆಯೊಂದಿಗೆ ಪಿಸುದನಿಯಲ್ಲಿ ‘ನನ್ನ ದಾರಿಗೆ ನೀವು ಅಡ್ಡಗಟ್ಟಿ ಬರುತ್ತೀದ್ದೀರಿ ಸರ್’ ಎಂದು ನುಡಿದಳು. ಈಗ ಗಾಬರಿಯಾಗುವ ಸರದಿ ಬ್ಲಾಂಡಫೋರ್ಡನದ್ದು. ಅನಿಯಂತ್ರಿತನಾಗಿ ಒಂದು ಹೆಜ್ಜೆ ಯುವತಿಯತ್ತಲೇ ಸಾಗಿ ಗಕ್ಕನೇ ನಿಂತವನಿಗೆ ಗೋಚರಿಸಿದ್ದು ಯುವತಿಯ ಹಿಂದೆ ನಿಂತಿದ್ದ ಮತ್ತೊಬ್ಬ ಮಹಿಳೆ. ಅವಳಿಗೆ ಸರಿಸುಮಾರು ನಲ್ವತ್ತು ವರ್ಷಗಳಿರಬಹುದು. ಹಳೆಯ ಟೋಪಿಯೊಂದರ ಅಡಿಯಲ್ಲಿ ಬಚ್ಚಿಕೊಂಡಿದ್ದ ಆಕೆಯ ಕೇಶರಾಶಿಯ ನಡುವಿನ ಬಿಳಿಯ ಕೂದಲುಗಳು ಟೋಪಿಯಿಂದ ಹೊರಗೆ ಇಣುಕುತ್ತಿದ್ದವು. ಕೊಂಚ ಹೆಚ್ಚೇ ಎನ್ನುವಷ್ಟು ದಪ್ಪಗಿದ್ದ ಆಕೆಯ ದಪ್ಪ ಪಾದಗಳನ್ನು ಸಾಧಾರಣವಾದ ಎರಡು ಚಪ್ಪಲಿಗಳು ಹಿಡಿದಿಟ್ಟಿದ್ದವು. ಆಕೆ ತನ್ನ ಸುಕ್ಕಾಗಿ, ಮುದುರಿ ಹೋಗಿದ್ದ ದಿರಿಸಿನ ಎದೆಯ ಭಾಗದಲ್ಲಿ ಕೆಂಪು ಗುಲಾಬಿಯನ್ನು ಧರಿಸಿದ್ದಳು. ಅಷ್ಟರಲ್ಲಿ ಹಸಿರು ದಿರಿಸಿದ ಹುಡುಗಿ ತನ್ನ ಪಾಡಿಗೆ ತಾನೆಂಬಂತೆ ಬ್ಲಾಂಡಫೋರ್ಡನನ್ನು ದಾಟಿ ನಡೆದಳು.

ಹಾಲ್ಲಿಸಳನ್ನು ಮೊದಲಬಾರಿಗೆ ಕಂಡ ಬ್ಲಾಂಡಫೋರ್ಡನಿಗೆ ಕತ್ತರಿಸಿ ಹೋದ ಅನುಭವ. ಹಸಿರು ದಿರಿಸಿನ ಹುಡುಗಿಯನ್ನು ಹಿಂಬಾಲಿಸಬೇಕೆನ್ನುವುದು ಅವನ ಹುಚ್ಚು ಮನಸಿನ ಹಂಬಲಿಕೆಯಾಗಿದ್ದರೆ, ಬದುಕಿನ ಪ್ರತಿಕ್ಷಣವೂ ತನ್ನಲ್ಲಿದ್ದ ಆತ್ಮವಿಶ್ವಾಸವನ್ನು ಎತ್ತಿ ಹಿಡಿದ ತನ್ನೆದುರಿಗೆ ನಿಂತಿರುವ ದಪ್ಪನೆಯ ಕಳಾಹೀನ ಮಹಿಳೆಯನ್ನು ಒಪ್ಪಿಕೊಳ್ಳುವ ನೈತಿಕತೆಯ ಒತ್ತಡವೂ ಆತನದ್ದೇ ಮನಸಿನದ್ದು. ಆದರೆ ಕ್ಷಣಮಾತ್ರವೂ ಬ್ಲಾಂಡಫೋರ್ಡ್ ಚಿಂತಿಸಲಿಲ್ಲ. ಆತನಲ್ಲಿದ್ದ ನೈತಿಕತೆಯ ಬಲ ದೊಡ್ಡದಿತ್ತು. ನಗುತ್ತಲೇ ಮಹಿಳೆಯತ್ತ ಕೈ ಚಾಚಿದ ಆತ, ತನ್ನ ಗುರುತಿಗಾಗಿ ಆಕೆಯ ಗಿಚುವಿಕೆಯಿದ್ದ ಪುಸ್ತಕವನ್ನು ಆಕೆಯತ್ತ ಹಿಡಿದ. ‘ನಾನು ಲ್ಯುಟೆನಂಟ್ ಬ್ಲಾಂಡಪೋರ್ಡ್. ನೀವು ಮಿಸ್.ಮೆಯ್ನೆಲ್ ಎನ್ನುವುದನ್ನು ನಾನು ಬಲ್ಲೆ. ನೀವು ಬಂದದ್ದು ನನಗೆ ತೀರ ಸಂತಸವನ್ನುಂಟು ಮಾಡಿದೆ. ಬನ್ನಿ ನಾವೀಗ ಊಟಕ್ಕೆ ಹೋಗೋಣ..”’ ಎಂದು ನುಡಿದ ಬ್ಲಾಂಡಫೋರ್ಡನ ಧ್ವನಿಯಲ್ಲೊಂದು ಅವ್ಯಕ್ತ ನಿರಾಸೆ.

ಮಹಿಳೆಯ ಮುಖದಲ್ಲೊಂದು ಗೊಂದಲಮಯ ನಗು. ನಸುನಗುತ್ತ ‘ಇದೆಲ್ಲ ಏನು ಎಂಬುದೇ ನನಗರ್ಥವಾಗುತ್ತಿಲ್ಲ ಮಗು. ಈಗಷ್ಟೇ ನಮ್ಮೆದುರು ನಡೆದು ಹೋದಳಲ್ಲ ಹಸಿರು ಉಡುಪಿನ ಚಂದದ ಹುಡುಗಿ ಆಕೆ ಕೆಲವು ನಿಮಿಷಗಳ ಕಾಲ ನನ್ನ ರವಿಕೆಯ ಮೇಲೆ ಈ ಕೆಂಗುಲಾಬಿಯನ್ನು ಧರಿಸುವಂತೆ ಬೇಡಿಕೊಂಡಿದ್ದಳು. ಏಕೆಂದು ಕೇಳಿದಾಗ ಇದೊಂದು ಬಗೆಯ ನೈತಿಕತೆಯ ಪರೀಕ್ಷೆಯೆಂದೂ, ನೀನು ನನ್ನನ್ನು ಊಟಕ್ಕೆ ಆಹ್ವಾನಿಸಿದರೆ ನೀನು ಪರೀಕ್ಷೆಯಲ್ಲಿ ಪಾಸಾದಂತೆ ಅರ್ಥವೆಂದೂ ವಿವರಿಸಿದಳು. ನೀನು ಹಾಗೆ ನನ್ನನ್ನು ಊಟಕ್ಕೆ ಆಹ್ವಾನಿಸಿದರೆ ಮಾತ್ರ ಆಕೆ ನಿನಗಾಗಿ ಸ್ಟೇಷನ್ನಿನ ಹೊರಗಿರುವ ದೊಡ್ಡ ಹೋಟೆಲ್ಲಿನಲ್ಲಿ ಕಾಯುತ್ತಿರುವುದಾಗಿ ತಿಳಿಸಲು ಹೇಳಿದ್ದಳು. ನೀನಿಗ ಆಕೆಯನ್ನು ಭೇಟಿಯಾಗಬಹುದೆನ್ನಿಸುತ್ತದೆ. ಎರಡು ಮಕ್ಕಳ ತಾಯಿಯಾಗಿರುವ ನನ್ನ ಊಟದ ಚಿಂತೆ ನಿನಗೆ ಬೇಡ’ ಎಂದು ಗಹಗಹಿಸಿದಳು ಮಹಿಳೆ. ಮಹಿಳೆಯ ಮಾತುಗಳನ್ನು ಕೇಳಿ ಅರ್ಥೈಸಿಕೊಳ್ಳುವಷ್ಟರಲ್ಲಿ ಬ್ಲಾಂಡಫೋರ್ಡನ ಮೊಗದಲ್ಲೊಂದು ಸಂತೃಪ್ತಿಯ ನಗು.

ಹೀಗೆ ಮುಗಿಯುವ ‘ಅಪಾಯಂಟಮೆಟ್ ವಿತ್ ಲವ್’ ಎನ್ನುವ ಈ ಕತೆಯನ್ನು ಬರೆದ ಲಂಡನ್ ಸಂಜಾತ ಅಮೆರಿಕನ್ ಕತೆಗಾರ್ತಿಯ ಹೆಸರು ಸುಲಾಮಿತ್ ಇಶ್ಕಿಶೋರ್. ತಂಗಾಳಿಯಂತಹ ಕತೆಗೆ ಹೆಚ್ಚಿನ ವಿವರಣೆ ಬೇಕಿಲ್ಲ. ಸುಮ್ಮನೇ ಓದಿಕೊಳ್ಳಿ. ಒಂದು ನವಿರಾದ ಪ್ರೇಮಕತೆಯನ್ನು ಓದಿಕೊಂಡ ಪ್ರಾಂಜಲ ಸಂತೋಷ ನಿಮ್ಮದಾಗಲಿ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments