ಸಾಲದ ಮನೆಯೊಡೆಯ ಅಪ್ಪ..!
– ಸೋಮು ಕುದರಿಹಾಳ
ಬಡತನ ಉಂಡುಳಿದ ಬದುಕು
ವಂಶವಾಹಿನಿಯ ಕೊಂಡಿ
ಸಾಲದೆಂಬುದಕ್ಕೆ ಸಾಲದ ನಂಟು
ಗುಡಿಸಲಿನಲ್ಲಿ ಆರದ ಬೆಂಕಿ
ಬರೆದ ಗೆರೆಗಳೆಲ್ಲಾ ಸಾಲದ ಲೆಕ್ಕಕ್ಕೆ
ಸಮನಾಗಿ ಬಡ್ಡಿಗೆ ಹೆಚ್ಚುತ್ತಿದ್ದದ್ದು
ಬಿದಿರ ತಡಿಕೆಗೆ ಮೆತ್ತಿದ ಮಣ್ಣನ್ನು
ಬಲಪಡಿಸುತ್ತಿತ್ತು
ಕಣ್ಣೀರ ಕರಗಿಸಿಕೊಳತ್ತಿತ್ತು
ವಸೂಲಿಯ ಶೂಲಕೊಮ್ಮೆ ಅಪ್ಪ
ಕೆಮ್ಮುತ್ತಿದ್ದ ಉಸಿರಿನೊಡನೆ ಸ್ಪರ್ಧೆ
ಮತ್ತೆ ಬದುಕುತ್ತಿದ್ದ ಭೂಮಿ ತಾಯಿಗೆ
ತಲೆಯಿಟ್ಟು ಬೆವರಿನ ದಕ್ಷಿಣೆ ಕೊಟ್ಟು
ಮಣ್ಣಿನಾಸೆಗೆ ಮಾನವತ್ವ ತೊರೆಸಿದ ಹಣ
ಮರ್ಯಾದೆಗಾಗಿ ಪ್ರಾಣ ಬಿಟ್ಟ ಅಪ್ಪ ಹೆಣ
ಗುಡಿಸಲ ಗೋಡೆಗೆ ಹೊಡೆದ ಮೊಳೆ
ಜಾರಿ ಬೀಳುತ್ತದೆ ಅಪ್ಪನ ನೆನೆವ ಅಮ್ಮನಿಗೆ
ಒಡೆದ ಫೋಟೋದ ಗಾಜಿನ ತುಣುಕು ಚುಚ್ಚುತ್ತದೆ
ಬಡ್ಡಿ ಚಕ್ರಬಡ್ಡಿಯ ಕಂತುಗಳಾಗಿ
ಪ್ರತಿಫಲಿಸುವ ಬಿಂಬದಲಿ
ಬೆಳಕು ಮೂಡುವ ಬದಲು ಸಾಲ ಕೊಟ್ಟವನ ಕ್ರೌರ್ಯ ಮಿಂಚುತ್ತದೆ
ಈ ಅಪ್ಪ ರೈತ
ಕೀಲು ತಪ್ಪಿದ ಬೆನ್ನು ಮೂಳೆ
ಬಾಳ ನಡೆಸುವುದಿರಲಿ
ಬದುಕಲು ಅವಕಾಶ ಸಿಗದ ನಿಸ್ತಂತು
ಚಿತ್ರ ಕೃಪೆ:- surendratripathi786.blogspot.in