ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 1, 2016

7

ಅನಾಣ್ಯೀಕರಣ ಯಾಕೆ ? ಹೇಗೆ ?

‍ನಿಲುಮೆ ಮೂಲಕ

– ರೂಪಲಕ್ಷ್ಮಿ

hqdefaultಮೋದಿಯವರು ಈ ೫೦೦/೧೦೦೦ ನೋಟ್ ಗಳನ್ನು ನಿಷೇಧಿಸಿದ ದಿವಸದಿಂದ ಜನರಿಗೆ ಸಿಕ್ಕಾಪಟ್ಟೆ ಗೊಂದಲಗಳು. ಬಹುಶಃ ರಹಸ್ಯವಾಗಿಟ್ಟು, ದಿಢೀರನೆ ಘೋಷಿಸಿದ್ದರಿಂದಾದ ಪ್ರಮಾದವಿದು. ಮಾಧ್ಯಮಗಳು ಕೂಡ ವಸ್ತುನಿಷ್ಟವಾಗಿ ಇದನ್ನು ವಿಶ್ಲೇಷಿಸದೆ, ಯುದ್ಧವೇ ಘೋಷಣೆಯಾಗಿದೆ ಅನ್ನುವ ರೀತಿಯಲ್ಲಿ ಬಿಂಬಿಸಿದ್ದು ಮತ್ತೊಂದು ಕಾರಣ. ಕಪ್ಪು ಹಣ / ಬಿಳಿ ಹಣ, ೨೦೦% ಟ್ಯಾಕ್ಸ್ / ೫೦% ಟ್ಯಾಕ್ಸ್, ರಾಜಕಾರಣಿಗಳು / ಉದ್ಯಮಿಗಳು, ೨೦೦೦ದ ನೋಟ್ / ೫೦೦ ರ ನೋಟ್, ನಮಗೆ ಟೈಮ್ ಕೊಡಬೇಕಿತ್ತು ಅಂತಾ ಒಂದಷ್ಟು ಜನರ ಬೊಬ್ಬೆ, ಬಡಜನರು ಸಾಯ್ತಿದ್ದಾರೆ ಅಂತಾ ಒಂದಷ್ಟು ಜನರ ಗೋಳು, ಇದರ ಮಧ್ಯೆ ಆ ನೋಟ್ ಗಳನ್ನು ನಿಷೇಧಿಸಿರುವುದಷ್ಟೆ, ಮೌಲ್ಯವನ್ನಲ್ಲ, ಅದಕ್ಕೆ ನಿಮಗೆ ಬದಲಾಯಿಸಲು ಅಥವಾ ನಿಮ್ಮ ಅಕೌಂಟಿಗೆ ಪಡೆಯಲು ೫೦ ದಿವಸಗಳ ಕಾಲಾವಕಾಶ ಇದೆ ಎಂದರೂ ಕೂಡ ಜನರು ಅರ್ಜೆಂಟಿನಲ್ಲಿ ಹೋಗಿ, ಅವಶ್ಯಕತೆ ಇದೆಯೋ, ಇಲ್ಲವೋ, ಕ್ಯೂ ನಲ್ಲಿ ನಿಂತು ಹಣ ತಂದು ಸಂಗ್ರಹಿಸಿಟ್ಟುಕೊಂಡು ಸದ್ಯ, ಬದಲಾಯಿಸಿಕೊಂಡ್ವಿ ಎಂಬ ನಿಟ್ಟುಸಿರು ಬಿಟ್ಟರು. ಮತ್ತೂ ಕೆಲವರು ಇದೇ ಸಮಯದಲ್ಲಿ ತಮ್ಮಲ್ಲಿರುವ ಕಪ್ಪು ಹಣವನ್ನು ಬದಲಾಯಿಸಲು ಪೈಪೋಟಿಗೆ ಬಿದ್ದವರಂತೆ ಕೂಲಿಯಾಳುಗಳನ್ನು ಕ್ಯೂ ನಲ್ಲಿ ನಿಲ್ಲಿಸಿ, ಹಣ ಬದಲಾಯಿಸಿದರು. ಮೋದಿಯವರು ಯಾರೂ ಕೂಡ ಹೆದರುವ ಅವಶ್ಯಕತೆಯಿಲ್ಲ ಎಂದು ಸಾರಿ, ಸಾರಿ ಹೇಳಿದರೂ ಕೂಡ ಬಡವ, ಬಲ್ಲಿದರೆನ್ನದೆ ಕ್ಯೂನಲ್ಲಿ ನಿಂತದ್ದೇ, ನಿಂತದ್ದು. ಹಾಗಿದ್ದರೆ ಈ ಅನಾಣ್ಯೀಕರಣದಿಂದ ತೊಂದರೆಗಳಿಲ್ಲವೇ? ಈ ಯೋಜನೆಯಿಂದ ದೇಶಕ್ಕಾಗುವ ಉಪಯೋಗಗಳೇನು?

ಈಗಾಗಲೇ ಚಲಾವಣೆಯಲ್ಲಿರುವ ನೋಟ್ ಗಳಲ್ಲಿ ಅನೇಕ ನಕಲಿ ನೋಟ್ ಗಳು ಇರುವುದರಿಂದ, ಅಸಂಖ್ಯಾತ ಮುಗ್ಧ ಜನರು ಮೋಸ ಹೋಗುತ್ತಿದ್ದಾರೆ. ಇದು ಚಲಾವಣೆಯಾಗುತ್ತಿದ್ದರೂ ಕೂಡ, ಇದರಿಂದ ಭೂಗತ ಪಾತಕಿಗಳು, ಉಗ್ರರು ಮೊದಲಾದವರೆಲ್ಲಾ ಬಲಿಷ್ಟರಾಗುತ್ತಾರೆಯೇ ಹೊರತು ದೇಶಕ್ಕೆ ಇದರಿಂದ ನಯಾಪೈಸೆಯ ಉಪಯೋಗವಿಲ್ಲ. ಇದು ಇನ್ನಷ್ಟು ಮುಗ್ಧ ಜನರ ಸಾವು, ನೋವುಗಳಿಗೆ ಕಾರಣವಾಗುತ್ತದೆ. ಈ ಹಿಂದೆ ಪಾಕಿಸ್ತಾನ ಮತ್ತು ಭಾರತಕ್ಕೆ ನೋಟ್ ಪ್ರಿಂಟ್ ಮಾಡಲು ಪೇಪರ್ ಸರಬರಾಜು ಮಾಡುತ್ತಿದ್ದದ್ದು ಒಂದೇ ಸಂಸ್ಥೆಯಿಂದ. ಅದೀಗ ಬದಲಾಗಿದೆಯಂತೆ. ಪೇಪರ್ ನ ಕ್ವಾಲಿಟಿ ಕೂಡ ಬದಲಾಗಿದೆಯಂತೆ. ಹಾಗಾಗಿ ಇನ್ನು ಮುಂದೆ ನಕಲಿ ನೋಟ್ ಗಳನ್ನು ಪ್ರಿಂಟ್ ಮಾಡುವುದು ಕಷ್ಟವೆನ್ನುತ್ತಿದ್ದಾರೆ. ಇದರ ಸತ್ಯಾಸತ್ಯತೆ ತಿಳಿಯಲು ಕಾದು ನೋಡಬೇಕಷ್ಟೆ. ಆದರೆ ಸದ್ಯಕ್ಕಂತೂ ನಕಲಿ ನೋಟ್ ಗಳ ಹಾವಳಿ ಇರುವುದಿಲ್ಲ. ಜೊತೆಗೆ ಹಣವನ್ನು ಬದಲಾಯಿಸಲು ರಿಸರ್ವ್ ಬ್ಯಾಂಕಿನ ಕೆವೈಸಿ ನಿಯಮಗಳನ್ನು ಅನುಸರಿಸುತ್ತಿರುವ ಬ್ಯಾಂಕ್ ಗಳಿಗೆ ಹೋಗಬೇಕಿರುವುದರಿಂದ, ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ವಿದೇಶಿಯರನ್ನು ತಡೆಯಬಹುದು. ಪಶ್ಚಿಮ ಬಂಗಾಳ, ಅಸ್ಸಾಮ್ ಮುಂತಾದ ಕಡೆ ಅಕ್ರಮವಾಗಿ ನೆಲೆಸಿರುವ ಬರ್ಮಾದವರನ್ನು ಕಂಡುಹಿಡಿಯುವುದು ಇದರಿಂದ ಸುಲಭ.

ಹಣವನ್ನು ಅನಗತ್ಯವಾಗಿ ಶೇಖರಿಸುವವರಲ್ಲಿ ಎರಡು ರೀತಿಯ ಜನರಿದ್ದಾರೆ. ಉದ್ಯಮಿಗಳು ಟ್ಯಾಕ್ಸ್ ವಂಚಿಸಿ, ಒಂದಷ್ಟು ಕಪ್ಪು ಹಣವನ್ನುಳಿಸುತ್ತಾರೆ. ಯಾಕೆ? ಉದಾಹರಣೆಗೆ, ಎಷ್ಟೋ ಕಡೆಗಳಲ್ಲಿ ಅವರು ಉದ್ಯಮವನ್ನು ಪ್ರಾರಂಭಿಸಬೇಕಾದರೆ ಅಥವಾ ನಡೆಸಬೇಕಾದರೆ, ಈ ಅಧಿಕಾರಿಗಳ / ರಾಜಕಾರಣಿಗಳ ಕಾಟ ತಡೆಯಲಾರದೆ ಲಂಚ ನೀಡಬೇಕಾಗಿ ಬರುತ್ತದೆ. ಅದು ತಪ್ಪೇ. ಅದರಲ್ಲಿ ಎರಡು ಮಾತಿಲ್ಲ. ಆದರೆ ತಮ್ಮ ಉದ್ಯಮವನ್ನು ನೆಮ್ಮದಿಯಾಗಿ ನಡೆಸಬೇಕಾದರೆ, ಇಷ್ಟವಿಲ್ಲದಿದ್ದರೂ ನೀಡಬೇಕಾಗುತ್ತದೆ. ಈ ಖರ್ಚುಗಳನ್ನೆಲ್ಲಾ ತಮ್ಮ ಅಕೌಂಟಿನಲ್ಲಿ ತೋರಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಅವರು ಟ್ಯಾಕ್ಸ ವಂಚಿಸಿ, ಒಂದಷ್ಟು ಕಪ್ಪು ಹಣ ಮಾಡಿಕೊಳ್ಳುತ್ತಾರೆ. ಆದರೆ ಅದನ್ನು ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ. ಇನ್ಯಾವುದೋ, ಮತ್ತೊಂದು, ಮಗದೊಂದು ಉದ್ಯಮಗಳಿಗೆ ಹಣ ಹಾಕಿ, ಮತ್ತೆ ಮತ್ತೆ ಹಣ ಮಾಡುತ್ತಿರುತ್ತಾರೆ. ಮತ್ತೊಂದು ರೀತಿ – ಅನೈತಿಕ ಕೆಲಸಗಳಲ್ಲಿ ತೊಡಗಿಕೊಂಡು ಹಣ ಮಾಡಿಕೊಳ್ಳುವುದು. ಇದು ಅಕ್ರಮ ಕಪ್ಪು ಹಣ. ಇದನ್ನು ಸಮಾಜದಲ್ಲೆಲ್ಲೂ ತೋರಿಸಲು ಸಾಧ್ಯವೇ ಇಲ್ಲ. ಮೊದಲಿಗೆ ಈ ಕೆಲಸವೇ ಕಾನೂನು ಬಾಹಿರ. ಇನ್ನೂ ಈ ಕೆಲಸದಿಂದ ಸಿಕ್ಕ ಹಣವನ್ನು ಎಲ್ಲಾದರೂ ತೋರಿಸಲು ಸಾಧ್ಯವೇ? ಇಲ್ಲವೇ ಇಲ್ಲ. ಈ ಹಣಕ್ಕೆ ಟ್ಯಾಕ್ಸ್ ಕೂಡ ಕಟ್ಟಿರುವುದಿಲ್ಲ. ಒಟ್ಟಿನಲ್ಲಿ ಈ ಹಣವಿರುತ್ತದೆ, ಆದರೆ ಚಲಾವಣೆಯಲ್ಲಿರುವುದಿಲ್ಲ. ಕೈಯಿಂದ ಕೈಗೆ ಬದಲಾಗುತ್ತಿರುತ್ತದೆ. ಆದರೆ ಅಕೌಂಟಬಲ್ ಆಗಿರುವುದಿಲ್ಲ.

ಮೊದಲನೆಯದರಲ್ಲಿ ಕೆಲಸ ಸರಿಯಾದದ್ದು, ಎರಡನೆಯದರಲ್ಲಿ ಕೆಲಸವೇ ಕಾನೂನುಬಾಹಿರ. ಮೊದಲನೆಯದು ಆದಾಯ ತೆರಿಗೆ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ, ಆದಾಯ ತೆರಿಗೆ ಕಾಯಿದೆಯನ್ವಯ ಆ ಕಪ್ಪು ಹಣವನ್ನು ನಿರ್ವಹಿಸಲು ಸಾಧ್ಯ. ಒಂದಕ್ಕೆರಡು ದಂಡ ಕಟ್ಟಿಯೋ ತಮ್ಮ ಹಣವನ್ನು ಬಿಳಿ ಮಾಡಲು ಸಾಧ್ಯ, ಕಾನೂನುಬದ್ಧವಾಗಿಯೇ ಅದನ್ನು ಮತ್ತೆ ಚಲಾವಣೆಗೆ ಬಿಡಬಹುದು. ಆದರೆ, ಎರಡನೆಯದರಲ್ಲಿ ಕೆಲಸವೂ ಮತ್ತು ಅದರಿಂದ ಬಂದಂತಹ ಹಣವೂ ಎರಡೂ ಕೂಡ ಕಾನೂನು ಬಾಹಿರವಾದ್ದರಿಂದ, ಕೇವಲ ಆದಾಯ ತೆರಿಗೆ ಕಾಯಿದೆ ಮಾತ್ರ ಅನ್ವಯವಾಗುವುದಿಲ್ಲ. ಬರೀ ದಂಡ ಕಟ್ಟಿ, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನೂ ಈ ನೋಟ್ ಗಳ ನಿಷೇಧದಿಂದ ತಾತ್ಕಾಲಿಕ ತೊಂದರೆ ಸಾಮಾನ್ಯ ಜನರಿಗೆ ಆಗುತ್ತದೆಯಾದರೂ, ದೊಡ್ಡ ಹೊಡೆತ ತಿನ್ನುವುದು ಮಾತ್ರ ರಾಜಕಾರಣಿಗಳು, ಸರ್ಕಾರೀ ಅಧಿಕಾರಿಗಳು, ಭೂಗತ ಪಾತಕಿಗಳು, ನಕ್ಸಲರು, ಉಗ್ರರು ಮುಂತಾದವರು. ಇವರು ಸಮಾಜದಲ್ಲಿ ಎಲ್ಲರ ಮುಂದೆ ಬಂದು ಈ ಹಣ ನಮ್ಮದು, ಸಂಗ್ರಹವಾದದ್ದು ಹೇಗೆ? ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಟ್ಯಾಕ್ಸ್, ದಂಡ ಇವನೆಲ್ಲಾ ಕಟ್ಟಲು ಕೂಡ ಸಾಧ್ಯವಿಲ್ಲ. ಹಾಗಾಗಿ ಅಷ್ಟು ಹಣವೂ ಸರ್ಕಾರದ ವಶವಾಗುತ್ತದೆ.

ದೇಶದಲ್ಲಿ ಪ್ರಿಂಟಾದ ೫೦೦ / ೧೦೦೦ ನೋಟ್ ಗಳ ಶೇಕಡ ೮೫% ರಷ್ಟು ಹಣ ಚಲಾವಣೆಯಲ್ಲಿಲ್ಲ. ಅವೆಲ್ಲವೂ ರಾಜಕಾರಣಿಗಳ, ಉನ್ನತ ಅಧಿಕಾರಿಗಳ, ಭೂಗತ ಪಾತಕಿಗಳ, ನಕ್ಸಲರ, ಉಗ್ರರ, ಉದ್ಯಮಿಗಳ ಅಡಗುದಾಣಗಳಲ್ಲಿ ಅಡಗಿ ಕುಳಿತಿವೆ. ಹಣ ಯಾವತ್ತಿಗೂ ಸುಮ್ಮನೆ ಕುಳಿತಿರಬಾರದು. ಸದಾ ಕೈಯಿಂದ ಕೈಗೆ ಚಲಿಸುತ್ತಿರಬೇಕು. ಅಂದರೆ ಅದರ ಅರ್ಥ ಖರ್ಚು ಮಾಡುತ್ತಿರಬೇಕೆಂದಲ್ಲ. ನಿಮಗೆ ಎಷ್ಟು ಬೇಕೋ ಅಷ್ಟನ್ನು ಖರ್ಚು ಮಾಡಿಕೊಂಡು, ಉಳಿದದ್ದನ್ನು ಬ್ಯಾಂಕಿನಲ್ಲಿ ಹಾಕಬೇಕು. ಆಗ ಬ್ಯಾಂಕ್ ಗಳು ಅದನ್ನುಪಯೋಗಿಸಿಕೊಂಡು ಇನ್ನೊಂದಿಷ್ಟು ಹಣ ಸಂಪಾದನೆ ಮಾಡುತ್ತದೆ. ಅದರಲ್ಲೊಂದು ಪಾಲು ನಿಮಗೂ ಕೊಡುತ್ತದೆ. ಇನ್ಯಾರೋ ಈ ಬ್ಯಾಂಕಿನಿಂದ ಹಣವನ್ನು ಸಾಲವಾಗಿ ಪಡೆದವರು, ಆ ಹಣದಿಂದ ಕೆಲಸವನ್ನು ಮಾಡಿ ಸಂಪಾದಿಸುತ್ತಾರೆ. ಹೀಗೆ ಹಣ ಚಲಾವಣೆಯಲ್ಲಿದಷ್ಟು ದಿವಸವೂ, ಎಲ್ಲರಿಗೂ ಉದ್ಯೋಗ ಸಿಗುತ್ತದೆ, ಹಣವೂ ಸಿಗುತ್ತದೆ, ಖರ್ಚು ಮಾಡಲು ಅನುವು ಮಾಡಿಕೊಡುತ್ತದೆ, ಅದು ಇನ್ನೊಂದಿಷ್ಟು ಉದ್ಯೋಗಗಳನ್ನು ಸೃಷ್ಟಿ ಮಾಡುತ್ತದೆ. ಹೀಗೆ ದೇಶವು ಅಭಿವೃದ್ಧಿಯ ಕಡೆಗೆ ಸಾಗುತ್ತದೆ. ಹಾಗಾಗಿ ಶೇಖರಿಸಿಟ್ಟಿರುವ ಹಣವು, ಪ್ರಯೋಜನಕ್ಕೆ ಬರುವಂತೆ ಮಾಡುವ ಮೂಲ ಉದ್ದೇಶದಿಂದ ೫೦೦ / ೧೦೦೦ ನೋಟ್ ಗಳನ್ನು ನಿಷೇಧಿಸಿ, ಅವುಗಳನ್ನು ಬಲವಂತವಾಗಿ ಬದಲಾಯಿಸುವಂತೆ, ತನ್ಮೂಲಕ ಪ್ರತಿಯೊಬ್ಬ ನಾಗರೀಕನೂ ಕೂಡ ಅಕೌಂಟಬಲ್ ಆಗುವಂತೆ ಮಾಡಿದ್ದಾರೆ. ಹಣ ಚಲಾವಣೆಯಲ್ಲಿಲ್ಲದಿದ್ದರೆ ಏನಾಗುತ್ತದೆ? ಸುಮ್ಮನೆ ಇದ್ದಲ್ಲೇ ಇರುತ್ತದೆಯಷ್ಟೆ. ಅದರಿಂದಾವ ಪ್ರಯೋಜನವೂ ಇಲ್ಲ.

ಇದರಿಂದ ಸಾಮಾನ್ಯ ಜನರಿಗೆ ಅನುಕೂಲಗಳೇನು? ಗೃಹಿಣಿಯೊಬ್ಬಳು ಅನಪಥ್ಯಕ್ಕೆ ಬೇಕಾಗುತ್ತದೆಯೆಂದು ಒಂದಷ್ಟು ಹಣವನ್ನು ಸಂಗ್ರಹಿಸಿಟ್ಟುಕೊಂಡಿರುತ್ತಾಳೆ ಎಂದುಕೊಳ್ಳಿ. ಆಕೆಯ ಹಣ ಅವಳ ಬಳಿಯೇ ಇದ್ದರೆ ಪ್ರಯೋಜನವೇನು? ಅದರ ಬದಲು ಆಕೆ, ಅದನ್ನು ಬ್ಯಾಂಕಿನಲ್ಲಿ ಹಾಕಿಟ್ಟರೆ ರಕ್ಷಣೆಗೆ ರಕ್ಷಣೆಯೂ ಸಿಗುತ್ತದೆ, ಜೊತೆಗೆ ಒಂದಿಷ್ಟು ಬಡ್ಡಿಯೂ ಕೂಡ ಸಿಗುತ್ತದೆ. ತನಗೆ ಬೇಕಾದಾಗ, ಆಕೆ ಹೋಗಿ ಹಣವನ್ನು ತರಬಹುದು. ಹೀಗೆ ಸಂಗ್ರಹಗೊಂಡ ಹಣವನ್ನು ಬ್ಯಾಂಕ್ ಗಳು ದೇಶದ ಅಭಿವೃದ್ಧಿಗೆ ಬಳಸುತ್ತದೆ. ಕಡಿಮೆ ಬಡ್ಡಿಗೆ ಸಾಲ ನೀಡುತ್ತದೆ. ಅನೇಕ ಪ್ರಗತಿಪರ ಕೆಲಸಗಳು ನಡೆಯಲು ಸಹಕಾರಿಯಾಗುತ್ತದೆ. ಉದ್ಯಮಿಗಳ ಕಪ್ಪು ಹಣವನ್ನು ದಂಡ ಕಟ್ಟಿ ಬಿಳಿ ಮಾಡುವುದರಿಂದ ಕೂಡ, ಇದೇ ರೀತಿಯ ಲಾಭವಾಗುತ್ತದೆ. ದಂಡ ಕಟ್ಟಿಸಿಕೊಳ್ಳುವುದರಿಂದ ಸರ್ಕಾರಕ್ಕೆ, ದೇಶಕ್ಕೆ ಲಾಭ, ತನ್ನಲ್ಲಿರುವ ಹಣ ಕಾನೂನುಬದ್ಧವಾಗುವುದರಿಂದ, ಉದ್ಯಮಿಗಳು ಕೂಡ ನೆಮ್ಮದಿಯಾಗಿರಬಹುದು. ಇನ್ನುಳಿದಂತೆ ಕಾನೂನುಬಾಹಿರ ಕೆಲಸಗಳು ಕಡಿಮೆಯಾಗಿಬಿಡುತ್ತದೆ. ಸಾಮಾನ್ಯ ಜನರಿಂದ ಲಂಚ ತೆಗೆದುಕೊಳ್ಳುವುದು, ಮುಂತಾದ ಕೆಲಸಗಳು ನಿಂತು ಹೋಗುತ್ತವೆ. ರಾಜಕಾರಣಿಗಳಿಗಿಂತ ಹೆಚ್ಚಾಗಿ ಉನ್ನತ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇವೆಲ್ಲವೂ ನೋಟ್ ಗಳನ್ನು ನಿಷೇಧಿಸಿದ ಒಂದೆರಡು ದಿನಗಳಲ್ಲಿಯೇ ಆಗಿಬಿಡುವುದಿಲ್ಲ. ಆದರೆ ದೇಶವನ್ನು ಅಭಿವೃದ್ಧಿ ಪಥದತ್ತ ಮುಂದೊಯ್ಯಲು ಇಟ್ಟಿರುವ ಮೊದಲ ಹೆಜ್ಜೆಯಷ್ಟೆ. ಹಾಗಾಗಿಯೇ ನಮ್ಮ ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ರವರು ದೀರ್ಘಕಾಲದ ಪ್ರಯೋಜನಗಳನ್ನು ಮಾತಾಡದೇ, ತಾತ್ಕಾಲಿಕ ಸಮಸ್ಯೆಗಳ ಬಗ್ಗೆ ಮಾತಾಡಿ ಸುಮ್ಮನಾದರು. ಅವರು In the long run, we all are dead ಎಂಬ ಯಾರದೋ ಮಾತನ್ನು ಉಲ್ಲೇಖಿಸಿದರು. ನಿಜ, ಅವರ ಮಾತು. ಆದರೆ ಹಾಗೆಂದು ಸುಮ್ಮನೆ ಕುಳಿತುಕೊಳ್ಳಲಾದೀತೇ? ನಮ್ಮ ಮಕ್ಕಳು, ಮೊಮ್ಮಕ್ಕಳು, ಅವರ ಮಕ್ಕಳು, ಮೊಮ್ಮಕ್ಕಳು ಬದುಕಿ ಬಾಳಬೇಕಲ್ಲವೇ? ನಮ್ಮ ಹಿರಿಯರು ಹೀಗೆಯೇ ಯೋಚಿಸಿದಿದ್ದಿದ್ದರೆ, ಸ್ವಾತಂತ್ರ್ಯ ನಮ್ಮ ದೇಶಕ್ಕೆ ಸಿಗುತ್ತಿತ್ತೇ? ‘In the long run, we all are dead’ ಎಂಬುದು ಈ ಜೀವನ ನಶ್ವರ, ಇದ್ದಷ್ಟು ಕಾಲ ಈ ಸಮಾಜಕ್ಕೆ ಒಳಿತು ಮಾಡೋಣ ಎಂಬ ಗುಣಾತ್ಮಕ ಭಾವನೆಯನ್ನು ಹುಟ್ಟುಹಾಕಬೇಕೇ ಹೊರತು ಯಾವ ಅರಸ ಬಂದರೇನಂತೆ? ಹಿಟ್ಟು ಬೀಸೋದು ತಪ್ಪುತ್ತಾ? ಎಂಬ ನಿರಾಶಾಭಾವವನ್ನು ಉಂಟು ಮಾಡುವುದಲ್ಲ.

7 ಟಿಪ್ಪಣಿಗಳು Post a comment
 1. Rakesh LR
  ಡಿಸೆ 1 2016

  “ಅನಾಣ್ಯೀಕರಣ”. ಎಷ್ಟು ಸೊಗಸಾದ ಕನ್ನಡ ಮಹರಾಯರೇ ಅದು! ಉದ್ಧಾರವಾಯಿತು ನಮ್ಮ ಕನ್ನಡ.

  ಉತ್ತರ
 2. ಡಿಸೆ 1 2016

  ಅರವಿಂದ ಕೆಜರೀವಾಲ್ ಎಂಬ ಅಣ್ಣ,ಮಾಯಾವತಿ ಅಕ್ಕ,ಲಾಲೂ ದೊಡ್ಡಪ್ಪ, ಅಖಿಲೇಸ ಎಂಬ ಭಾವ,ರಾಹುಲ್ಗಾಂಧಿ ಎಂಬ ಮಾವನ ಮಗ,ಮಮತಾ ಬೇನರ್ಜಿ ಎಂಬ ಸೋದರ ಅತ್ತೆ, ಇತ್ಯಾದಿ ಬಂಧು ಬಾಂಧವರನ್ನು ಹೊಂದಿ ಕೃತಾರ್ಥನಾದ ಬ್ರದರ್ ಬಸವ ಎಲ್ಲಿದ್ದರೂ ಓದತಕ್ಕದ್ದು.

  ಉತ್ತರ
  • ರಮೇಶ್ ಕುಮಾರ್ ಉಳ್ಳಾಗಡ್ಡಿ
   ಡಿಸೆ 1 2016

   ಅಲ್ಲೆಲ್ಲೋ ring road ಅಂಥ ಹೇಳಿ, ಆಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲು ಆಗದೆ ಇಲ್ಲಿ ಓಡಿ ಬಂದ್ರ 😁 ……… ಈಗ ನೋಡ್ತ ಇರಿ ಈ ಯಪ್ಪ ಹೇಗೆ £&#÷©¥¥ ಮಾಡಿಕೊಳ್ತಾರೆ ಅಂತ… 😉

   ಉತ್ತರ
   • sudarshana gururajarao
    ಡಿಸೆ 2 2016

    ರಿಂಗ್ ರೋಡ್ ಕುರಿತಾದ ಕಾಮೆಂಟ್ನ ವಿಡಿಯೋ ಸಹ ಇದೆ. ಬಿಬಿಸಿ ಕಾರ್ಯಕ್ರಮದಲ್ಲಿ ಪ್ರಸಾರವೂ ಆಗಿದೆ.
    ಸೀಟ್ ಬೆಲ್ಟ್ ಕಡ್ಡಾಯ ಮಾಡಿದಾಗಲೂ ಹಿಂಗೇ ಬಡ್ಕೊಂಡಿದ್ವು,ದೂರದೃಷ್ಟಿ ಇಲ್ಲದ ಗೂಬೆಗಳು. ಬೇಕಾದರೆ ನಂಬು,ಬ್ಯಾಡಾದರೆ ಬಿಡು.

    ಉತ್ತರ
  • ಶೆಟ್ಟಿನಾಗ ಶೇ.
   ಡಿಸೆ 2 2016

   ಮೊದಲು ಜಗತ್ತಿನ ಪ್ರಮುಖ ಅರ್ಥಶಾಸ್ತ್ರ ತಜ್ಞರು ನೋಟು ನಿವೃತ್ತಿಯನ್ನು ಖಂಡಿಸಿರುವುದನ್ನು ಓದಿರಿ. ಆಮೇಲೆ ರೂಪಲಕ್ಷ್ಮಿ ಸುಬ್ಬುಲಕ್ಷ್ಮಿಯರ ಅಂಬೋಣವನ್ನು ಗಮನಿಸೋಣ.

   ಉತ್ತರ
  • ಶೆಟ್ಟಿನಾಗ ಶೇ.
   ಡಿಸೆ 2 2016

   ವಸುಧೈವ ಕುಟುಂಬಕಂ! ಅಲ್ಲವೇ ಬ್ರದರ್?

   ಉತ್ತರ
 3. ಮಮತಾ ಪೂಜಾರಿ
  ಡಿಸೆ 1 2016

  “ಹೀಗೆ ಸಂಗ್ರಹಗೊಂಡ ಹಣವನ್ನು ಬ್ಯಾಂಕ್ ಗಳು ದೇಶದ ಅಭಿವೃದ್ಧಿಗೆ ಬಳಸುತ್ತದೆ.” ಇದು ಸರಿಯಲ್ಲ. ಇದು ಒಂದುವೇಳೆ ನಿಜ ಆದರೆ, ಸರ್ಕಾರ ತನಗೆ ಬೇಕಾದಷ್ಟು ಹಣ ತಾನೇ ಏಕೆ ಮುದ್ರಣ ಮಾಡಿಕೊಳ್ಳವುದಿಲ್ಲ?

  ಇಂತಹ propaganda ಲೇಖನ ಬರೆಯುವ ಮುನ್ನ ಒಮ್ಮೆ ಅರ್ಥಶಾಸ್ತ್ರದ ಪುಸ್ತಕಗಳನ್ನು ತೆಗೆದು ನೋಡಿ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments