ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 3, 2016

1

ಆ ಯೋಧನ ಸಾವೂ ಕೂಡಾ ಚಿಲ್ಲರೆ ಸಂಗತಿಯಲ್ಲಿ ಹೂತುಹೋಯಿತು..!

‍ನಿಲುಮೆ ಮೂಲಕ

– ಸಂತೋಷ್ ತಮ್ಮಯ್ಯ

srinivas-kumar-sinha-3ಅಂದು ಭಾರತೀಯ ಮಿಲಿಟರಿ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆಯೊಂದುನಡೆದುಹೋಗಿತ್ತು. ದೇಶಾದ್ಯಂತ ಅಚ್ಚರಿ, ಕೆಲವರಿಗೆ ಆಘಾತ. ಇದೇಕೆ ಹೀಗೆ ಎಂಬ ಉದ್ಗಾರ. ಆರ್ಮಿ ಕೇಂದ್ರಕಛೇರಿಯ ಸೌತ್‌ಬ್ಲಾಕ್‌ನಲ್ಲಿ ತಿಂಗಳುಗಟ್ಟಲೆ ಗಾಸಿಫ್‌ಗಳು. ಎಮರ್ಜೆನ್ಸಿ ಇನ್ನೂ ಹೋಗಿಲ್ಲವೇ? ಇಂದಿರಾ ಸರ್ವಾಧಿಕಾರಕ್ಕೆ ಇದಕ್ಕಿಂತ ಇನ್ನೇನು ಉದಾಹರಣೆ ಬೇಕು ಎಂದು ವಿರೋಧ ಪಕ್ಷಗಳ ಆರೋಪ.

ಅಂದು ನಡೆದಿದ್ದು ಇಷ್ಟು:
ಆರ್ಮಿಯ ೧೧ನೇ ಚೀಫ್ ಆಫ್ ಆರ್ಮಿ ಸ್ಟಾಫ್ ಕೆ.ವಿ ಕೃಷ್ಣರಾವ್ ೧೯೮೩ರ ಮೇ ಕೊನೆಯಲ್ಲಿ ನಿವೃತ್ತರಾಗುವವರಿದ್ದರು. ಕೆಲವು ದಿನಗಳ ಹಿಂದಿನಿಂದಲೇ ಸೌತ್ ಬ್ಲಾಕ್ ಹೊಸ ಜನರಲ್‌ನ ನೇಮಕದ ಪ್ರಕ್ರಿಯೆಯಲ್ಲಿ ನಿರತವಾಗಿತ್ತು. ಹೊಸ ಜನರಲ್ ಯಾರೆಂಬ ಬಗ್ಗೆ ಆರ್ಮಿಗಾಗಲಿ, ಜನರಿಗಾಗಲೀ ಯಾವುದೇ ಗೊಂದಲಗಳಿರಲಿಲ್ಲ. ಏಕೆಂದರೆ ಕೃಷ್ಣರಾವ್ ಚೀಫ್ ಆಗಿದ್ದಾಗ ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿದ್ದವರು ಮಹಾ ಮೇಧಾವಿ ಯೋಧ ಶ್ರೀನಿವಾಸ್ ಕುಮಾರ್ ಸಿನ್ಹಾ. ಮಿಲಿಟರಿಯ ಸೇವಾರ್ಹತೆಯಲ್ಲಿ ಸದ್ಯಕ್ಕಿದ್ದ ಹಿರಿಯರು ಅವರೇ. ಅಲ್ಲದೆ ಅವರು ಪ್ರಥಮ ಮಹಾದಂಡನಾಯಕ ಜನರಲ್ ಕಾರ್ಯಪ್ಪನವರಿಗೆ adc-aide de corps ಅಗಿದ್ದ ಅನುಭವಸ್ಥರು. ಜನರಲ್ ಆಯ್ಕೆಗೆ ಇನ್ನು ಅಧಿಕೃತ ಪ್ರಕಟಣೆಯೊಂದು ಮಾತ್ರ ಉಳಿದಿತ್ತು. ಜ.ಕೃಷ್ಣರಾವ್ ನಿವೃತ್ತರಾಗುವ ಕೇವಲ ಮೂರು ದಿನಗಳ ಹಿಂದೆ ಆ ಅಧಿಕೃತ ಪ್ರಕಟಣೆ ಹೊರಬಿತ್ತು. ದೇಶವನ್ನು ಆಘಾತಕ್ಕೆ ದೂಡಿದ್ದು ಆ ಪ್ರಕಟಣೆಯೇ. ಏಕೆಂದರೆ ಎಸ್. ಕೆ. ಸಿನ್ಹಾ ಅವರಿಗಿಂತ ವಯಸ್ಸಿನಲ್ಲೂ, ಸೇವಾವಧಿಯಲ್ಲೂ ಕಿರಿಯರಾಗಿದ್ದ ಲೆ.ಜ ಎ.ಎಸ್. ವೈದ್ಯ ಅವರನ್ನು ಭೂಸೇನೆಯ ದಂಡನಾಯಕ ಎಂದು ಘೋಷಣೆ ಮಾಡಲಾಗಿತ್ತು. ಈ ಎ.ಎಸ್ ವೈದ್ಯ ಎಂಥ ಮಹಾ ಯೋಧರೆಂದರೆ ಮಹಾವೀರ ಚಕ್ರವನ್ನು ಎರಡೆರಡು ಬಾರಿ ಪಡೆದು mahavirachakra bar ಎಂದು ಹೆಸರು ಪಡೆದಿದ್ದವರು. ಅಂದರೆ ಎಸ್. ಕೆ ಸಿನ್ಹಾರನ್ನು ಸೂಪರ್ ಸೀಡ್ ಮಾಡಲಾಗಿತ್ತು!

ಮುಂದಿನ ಕೆಲವು ದಿನಗಳು ದೆಹಲಿಯಲ್ಲಿ ಗಾಳಿ ಸುದ್ದಿಗಳು ಲಗಾಮಿಲ್ಲದಂತೆ ಹರಡಿದವು. ಕೆಲವು ಪತ್ರಿಕೆಗಳಲ್ಲಿ ಸುದ್ಧಿಯಾಗಿಯೂ ಪ್ರಕಟವಾದವು. ರಕ್ಷಣಾ ಸಚಿವ ಆರ್. ವೆಂಕಟರಾಮನ್ ಎಲ್ಲೋ ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ ಆದವರೊಂದಿಗೆ ಕುಳಿತು ನಾನು ಚಹಾ ಸೇವಿಸಬೇಕೇ? ಎಂದಿದ್ದರು ಎಂದೂ, ಸಿನ್ಹಾ ಲೆ.ಜನರಲ್ ಆಗಿದ್ದಾಗಲೇ ಇಂದಿರಾ ಗಾಂಧಿ ಅಮೃತಸರದ ಅಕಾಲ್ ತಖ್ತ್ ದಾಳಿಗೆ ಯೋಜನೆ ರೂಪಿಸಿದ್ದರು ಎಂದೂ, ಆಗ ಸಿನ್ಹಾ ಭಿಂದ್ರನ್ ವಾಲೆಯನ್ನು ಸೆರೆಹಿಡಿಯಲು ಇದು ಸೂಕ್ತ ಮಾರ್ಗವಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದರೆಂದೂ, ಎ.ಎಸ್ ವೈದ್ಯ ಪರಾಕ್ರಮಿಯಾದರೂ ಬುದ್ಧಿವಂತನಲ್ಲ, ಇಂದಿರಾಗಾಂಧಿಯ ತಾಳಕ್ಕೆ ತಕ್ಕಂತೆ ಕುಣಿಯುವವರೆಂದೂ ಪತ್ರಿಕೆಗಳು ಬರೆದವು.

ಯಾವ ದೇಶದ ಮಿಲಿಟರಿಯಲ್ಲೂ ನಡೆಯಬಾರದ ಒಂದು ಘಟನೆ ಭಾರತೀಯ ಮಿಲಿಟರಿಯಲ್ಲಿ ನಡೆದುಹೋಯಿತು. ಜನರಲ್ ಕೆ.ವಿ ಕೃಷ್ಣರಾವ್ ಸ್ವತಃ ವಿದ್ವಾಂಸರಾದರೂ ಈ ಉಸಾಬರಿ ನನಗೇಕೆಂದು ತೆಪ್ಪಗಿದ್ದುಬಿಟ್ಟರು. ಇನ್ನು ಒಂದೆಡೆ ಇಂದಿರಾ, ಇನ್ನೊಂದೆಡೆ ಮಹಾವೀರಚಕ್ರ ಬಾರ್. ರಕ್ಷಣಾ ಪರಿಣತರ ಬಾಯಿ ಕಟ್ಟಿ ಹೋಯಿತು.  ಲೆ.ಜ. ಎಸ್. ಕೆ ಸಿನ್ಹಾ ಅಂದು ಕೃಷ್ಣರಾವ್ ಕರೆದಿದ್ದ ಚಹಾಕೂಟಕ್ಕೂ ಹೋಗಲಿಲ್ಲ. ಮರುದಿನ ಬೆಳಿಗ್ಗೆಯೇ ಸಿನ್ಹಾ ರಾಜೀನಾಮೆ ಸಲ್ಲಿಸಿಬಿಟ್ಟರು. ಮಹಾ ಚಾಣಾಕ್ಷ, ಬುದ್ಧಿವಂತ, ಮಿಲಿಟರಿಯ ಬಗ್ಗೆ ಕನಸ್ಸುಗಳಿದ್ದ, ಮೂರು ಯುದ್ಧಗಳಲ್ಲಿ ಭಾಗವಹಿಸಿದ್ದ ಸಿನ್ಹಾ ಈಗ ಯೋಧರಲ್ಲ. ರಾಜಿನಾಮೆ ಸಲ್ಲಿಸಿ ಹೊರಬಂದ ಸಿನ್ಹಾರನ್ನು ಪತ್ರಕರ್ತರು ಸುತ್ತುವರಿದರು. ನಿಮ್ಮ ಈ ನಿರ್ಧಾರಕ್ಕೆ ಕಾರಣವೇನು? ನಿಮಗೇಕೆ ಅನ್ಯಾಯವಾಯಿತು? ಆ ಕೈ ಯಾವುದು? ವೈದ್ಯರಿಗೂ ನಿಮಗೂ ವೈಮನಸ್ಸೇ?-ಮುಂತಾದ ನೂರಾರು ಚೂಪು ಬಾಣಗಳು. ಕೆಲಹೊತ್ತಿನ ಹಿಂದಿನವರೆಗೂ ಸೈನಿಕನಾಗಿದ್ದವನು ಈಗ ಸರ್ಕಾರವನ್ನು ಬಯ್ಯಬೇಕಿತ್ತು ಅಥವಾ ಸೈನ್ಯದ ವ್ಯವಸ್ಥೆಯನ್ನು ಟೀಕೆ ಮಾಡಬೇಕಿತ್ತು. ಆದರೆ ಸಿನ್ಹಾರಿಗೆ ಅದಾವುದೂ ಸಾಧ್ಯವಾಗಲಿಲ್ಲ. ಅಂದವರು ನೀಡಿದ್ದು ಒಂದೇ ಒಂದು ಹೇಳಿಕೆ, “ನನ್ನ ಪೂರ್ವಜರು ಮಾಡಿದ ತಪ್ಪಿಗೆ ನಾನು ಪ್ರಾಯಶ್ಚಿತ ಅನುಭವಿಸಿದ್ದೇನೆ” ಎಂದವರೇ ಸಾಮಾನ್ಯ ಮನುಷ್ಯನ ಹಾಗೆ ಟ್ಯಾಕ್ಸಿ ಹತ್ತಿ ಹೊರಟುಹೋದರು. ರಾಜ್ಯವಿಲ್ಲದ ಯುಧಿಷ್ಠಿರ ವನವಾಸಕ್ಕೆ ತೆರಳಿದಂತೆ.

ಮರುದಿನ ಎಲ್ಲಾ ಪತ್ರಿಕೆಗಳಲ್ಲಿ ಸಾಧಾರಣ ಒಂದೇ ಶೀರ್ಷಿಕೆ ಪ್ರಕಟವಾಯಿತು ‘ಯಾವುದು ಆ ಪ್ರಾಯಶ್ಚಿತ?’ ಮತ್ತೆ ಗಾಳಿಸುದ್ಧಿಗಳ ಚಂಡಮಾರುತ. ಆ ಪ್ರಾಯಶ್ಚಿತವೇನು ಎಂಬುದಕ್ಕಿಂತ ಮೊದಲು ತಿಳಿಯಬೇಕಾದುದು ಲೆ.ಜ ಶ್ರೀನಿವಾಸ್ ಕುಮಾರ್ ಸಿನ್ಹಾ ಬಗ್ಗೆ. ಅವರನ್ನು ಯಾರಾದರೂ ಊರೆಲ್ಲಿ ಎಂದು ಕೇಳಿದರೆ ಪಾಟ್ನಾ ಬದಲು ಪಾಟಲೀಪುತ್ರ ಎನ್ನುತ್ತಿದ್ದರು. ಅವರ ಅಪ್ಪ ಬಿಹಾರದ ಮೊದಲ ಪೊಲೀಸ್ ಮಹಾನಿರ್ದೇಶಕರಾಗಿದ್ದವರು. ತನ್ನಾಸೆಯಂತೆ ಸಿನ್ಹಾ ಮಿಲಿಟರಿ ಸೇರಿದರು. ಆಗ ಬೆಳಗಾವಿಯಲ್ಲಿದ್ದ ಆಫಿಸರ್ಸ್ ಟ್ರೈನಿಂಗ್ ಸ್ಕೂಲಿನಲ್ಲಿ ಸಿನ್ಹಾ ಬೆಸ್ಟ್ ಕೆಡೆಟ್ ಆಗಿ ಹೊರಬಂದಿದ್ದರು. ಬ್ರಿಟಿಷ್ ಆರ್ಮಿ ಎರಡನೆ ಮಹಾಯುದ್ಧಕ್ಕಿಳಿದಾಗ ಸಿನ್ಹಾ ಬರ್ಮಾಕ್ಕೆ ಕಳಿಸಲ್ಪಟ್ಟರು. ಶತ್ರುಪಡೆಗಳು ಭಾರೀ ಸಂಖ್ಯೆಯಲ್ಲಿ ಸೆರೆಸಿಕ್ಕಿದಾಗ ಯುದ್ಧ ಖೈದಿಗಳ ಉಸ್ತುವಾರಿಯನ್ನು ಸಿನ್ಹಾರಿಗೆ ವಹಿಸಲಾಗಿತ್ತು. ಅದುವರೆಗೆ ಮಿತ್ರಪಡೆಗಳು ತಮಗೆ ಸೆರೆಸಿಕ್ಕ ಯುದ್ಧ ಖೈದಿಗಳನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ಆದರೆ ಸಿನ್ಹಾ ಬರ್ಮಾದಲ್ಲಿ ತಮಗೆ ಸೆರೆಸಿಕ್ಕ ಜಪಾನಿ ಮತ್ತು ಬೋಸರ ಸೈನಿಕರಿಗೆ ಖಡಕ್ಕಾಗಿ ನನಗೆ ಯಾರೂ ಸೆಲ್ಯೂಟ್ ಹೊಡೆಯಬಾರದು ಎಂದು ಆಜ್ಞಾಪಿಸಿದ್ದರು. ಅದು ಜಪಾನಿ ಸೈನಿಕರ ಎದೆಯನ್ನು ನಾಟಿತ್ತು. ಮುಂದೆ ಯುದ್ಧ ಮುಗಿದು ಎಷ್ಟೋ ವರ್ಷಗಳ ನಂತರ ಲೆ.ಜನರಲ್ ಸಿನ್ಹಾರಿಗೆ ಜಪಾನಿನಿಂದ ಪತ್ರಗಳು ಬರುತ್ತಿದ್ದುವಂತೆ! ಒಬ್ಬ ಯೋಧ ಗಳಿಸಿಕೊಳ್ಳಬಹುದಾದ ದೊಡ್ಡ ಆಸ್ತಿಯನ್ನು ಸಿನ್ಹಾ ಆಗಲೇ ಗಳಿಸಿದ್ದರು. ಮಹಾಯುದ್ಧದ ನಂತರ ೪೮ರಲ್ಲಿ ಪಾಕ್ ಜಮ್ಮು ಮತ್ತು ಕಾಶ್ಮೀರಕ್ಕೆ ಸೈನ್ಯ ನುಗ್ಗಿಸಿದಾಗ ಮೊದಲ ತಂಡದ ಸದಸ್ಯರಾಗಿ ಸಿನ್ಹಾ ಪಾಕೆಟ್ ಏರ್‌ಕ್ರಾಫ್ಟ್ ನಲ್ಲಿ ನೌಶೇರಾಕ್ಕೆ ಹಾರಿದ್ದರು. ಹೀಗೆ ಮೂರು ಯುದ್ಧಗಳಲ್ಲಿ ಪ್ರತ್ಯಕ್ಷ ಭಾಗವಹಿಸಿದ್ದು ಮಾತ್ರವಲ್ಲದೆ ೭೧ರಲ್ಲಿ ಸೆರೆಸಿಕ್ಕ ೯೦ ಸಾವಿರ ಯುದ್ಧ ಖೈದಿಗಳನ್ನು ನಿಭಾಯಿಸಿದ ಧುರೀಣ ಲೆ.ಜ. ಎಸ್ ಕೆ. ಸಿನ್ಹಾ. ಬಾಂಗ್ಲಾವೇನೋ ನಿರ್ಮಾಣವಾಯಿತು. ಆದರೆ ಅಷ್ಟು ಜನ ಖೈದಿಗಳನ್ನು ಒಂದು ದಿನವಾದರೂ ನಿಭಾಯಿಸುವುದು? ಸಿನ್ಹಾ ಅದನ್ನು ನಿರ್ವಹಿಸಿದ್ದರು. ನಂತರ ಸಿನ್ಹಾರನ್ನು ವೆಸ್ಟರ್ನ್ ಕಮಾಂಡಿಗೆ ಕಮಾಂಡರ್ ಇನ್ ಚೀಫ್ ಆಗಿ ನೇಮಿಸಲಾಯಿತು.

ಅದರ ನಡುವೆ ಕೆಲವು ಬದಲಾವಣೆಗಳು ಸಂಭವಿಸಿದವು. ಜನರಲ್ ಕೃಷ್ಣರಾವ್ ಸಿನ್ಹಾರ ಮೇಲೆ ನಂಬಿಕೆ ಇಟ್ಟಿದ್ದರು. ಮಿಲಿಟರಿಯ ಸುಧಾರಣೆಗೆ ವರದಿ ಕೊಡುವಂತೆ ಸಿನ್ಹಾರನ್ನು ಕೇಳಿಕೊಂಡರು. ಸಿನ್ಹಾರ ವರದಿಯನ್ನು ಓದಿದ ಅಂದಿನ ರಕ್ಷಣಾ ಸಚಿವ ಸಿ. ಸುಬ್ರಹ್ಮಣ್ಯಂ ನೀವು ಕಾನೂನು ಪದವಿಧರರೇ ಎಂದು ಪ್ರಶ್ನಿಸಿದ್ದರು! ಅಂಥ ದೂರದೃಷ್ಟಿತ್ವ ಸಿನ್ಹಾರದ್ದು. ಅಂಥ ಎಸ್. ಸಿನ್ಹಾರನ್ನು ಈಗ ಇಂದಿರಾ ಗಾಂಧಿ ಸೂಪರ್ ಸೀಡ್ ಮಾಡಿದ್ದರು. ಅದಕ್ಕೆ ಸರ್ಕಾರ ಕೊಟ್ಟ ಕಾರಣವೇನೆಂದರೆ ಲೆ.ಜ ಎಸ್. ಕೆ ಸಿನ್ಹಾರಿಗೆ ಯಾವುದೇ ವಾರ್ ಡೆಕೋರೇಶನ್ (ಶೌರ್ಯ ಪದಕಗಳು) ಮತ್ತು ವಾರ್ ಊಂಡ್ (ಯುದ್ಧ ಗಾಯಗಳು) ಇಲ್ಲ ಮತ್ತು ಲೆ.ಜ ಸಿನ್ಹಾ ೬೫ರ ಯುದ್ಧದಲ್ಲಿ ತನ್ನ ಕಮಾಂಡನ್ನು ಮತ್ತಷ್ಟು ಮುಂದುವರಿಯುವುದನ್ನು ತಡೆದಿದ್ದರು ಎನ್ನುವುದು. ವಿಚಿತ್ರವೆಂದರೆ ಚೀಫ್ ಆಫ್ ಆರ್ಮಿ ಸ್ಟಾಫ್ ಆಯ್ಕೆಗೆ ವಾರ್ ಡೆಕೊರೇಶನ್‌ಗಳಾಗಲೀ, ವಾರ್ ಊಂಡ್‌ಗಳಾಗಲೀ ಇರಲೇಬೇಕೆಂಬ ನಿಯಮಗಳಿಲ್ಲ. ಶೇ ೯೦ ರಷ್ಟು ದಂಡನಾಯಕರುಗಳಿಗೆ ಇವೆರಡೂ ಇಲ್ಲ! ಪ್ರತೀ ಕಾರ್ಯಾಚರಣೆಯಲ್ಲೂ ಮುಂದುವರಿಯಬೇಕೇ, ಬೇಡವೇ ಎಂಬುದು ಆಯಾಯ ಕಮಾಂಡಿಂಗ್ ಆಫೀಸರರ ವಿವೇಚನೆಗೆ ಬಿಟ್ಟ ವಿಚಾರ. ಆದರೆ ಇಂದಿರಾ ಸರ್ಕಾರ ಈ ಕುತರ್ಕವನ್ನು ನೀಡಿ ಸಿನ್ಹಾರನ್ನು ಸದೆಬಡಿದಿದ್ದರು. ಏಕೆಂದರೆ ಅವರ ಕೋವಿ ಎ.ಎಸ್ ವೈದ್ಯ ಎಂಬ ಮಹಾಪರಾಕ್ರಮಿ ಯೋಧನ ಹೆಗಲಲ್ಲಿತ್ತು.

ಅಷ್ಟಕ್ಕೂ ಇಂದಿರಾ ಯಾಕೆ ಸಿನ್ಹಾರನ್ನು ಸೂಪರ್ ಸೀಡ್ ಮಾಡಿದರು ಎಂಬುದಕ್ಕೆ ಬೇರೆಯೇ ಕಾರಣವಿತ್ತು. ಸಿನ್ಹಾರ ಅಪ್ಪ ಮಿಥಿಲೇಶ್ ಕುಮಾರ್ ಸಿನ್ಹಾ ಇಂದಿರಾ ಹೇರಿದ ತುರ್ತುಪರಿಸ್ಥಿತಿಯ ವಿರುದ್ಧ ಜೆಪಿ ಚಳವಳಿಯಲ್ಲಿ ಗುರುತಿಸಿಕೊಂಡಿದ್ದರು! ಅಲ್ಲದೆ ಎಸ್ ಕೆ ಸಿನ್ಹಾ ವೆಸ್ಟರ್ನ್ ಕಮಾಂಡಿನ ಮುಖ್ಯಸ್ಥರಾಗಿದ್ದಾಗ ಖಲಿಸ್ಥಾನ್ ಮತ್ತು ಬಿಂಧ್ರನ್ ವಾಲೆಯನ್ನು ಮಟ್ಟಹಾಕಲು I would have conduct this oparation different manner ಎಂದಿದ್ದರು. ಆದರೆ ಇಂದಿರಾಗೆ ಅದನ್ನು ಮಟ್ಟಹಾಕಲು ಅಕಾಲ್ ತಖ್ತ್ ಮಾತ್ರ ಕಾಣುತ್ತಿತ್ತು. ಸಿನ್ಹಾ ಇರುವವರೆಗೆ ತನ್ನ ಯೋಜನೆ ಸಾಧ್ಯವಿಲ್ಲ ಎಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು. ಪರಿಣಾಮ ಸಿನ್ಹಾರ ಸೂಪರ್ ಸೀಡ್ ಮತ್ತು ವೈದ್ಯರ ನೇಮಕ. ಮುಂದೆ ನಡೆದಿದ್ದು ಕರಾಳ ಇತಿಹಾಸ. ವೈದ್ಯರನ್ನು ಕಟ್ಟಿಕೊಂಡು ಇಂದಿರಾ ಆಪರೇಶನ್ ಬ್ಲೂಸ್ಟಾರ್ ನಡೆಸಿದರು. ಒಂದು ದೊಡ್ಡ ಸಮುದಾಯದ ವಿರೋಧ ಕಟ್ಟಿಕೊಂಡರು. ಮುಂದೆ ಅದೇ ಕಾರಣಕ್ಕೆ ಅವರು ಕೊಲೆಯಾಗಿಹೋದರು. ಎರಡೆರಡು ಮಹಾವೀರ ಚಕ್ರ ಪಡೆದ ವೈದ್ಯರೇನು ಉಳಿದರೇ? ಖಲಿಸ್ಥಾನ್ ಉಗ್ರರು ಪುಣೆಯ ಅವರ ನಿವಾಸದ ಗೇಟಿನ ಮುಂದೆಯೇ ಅವರನ್ನು ಹತ್ಯೆಗೈದರು. ಸಿನ್ಹಾರನ್ನು ಸೂಪರ್‌ಸೀಡ್ ಮಾಡಿದ ತಪ್ಪಿಗೆ ದೇಶ ತನ್ನ ನಾಯಕಿಯನ್ನೂ ಮಹಾಯೋಧನನ್ನೂ ವಿನಾ ಕಾರಣ ಕಳೆದುಕೊಳ್ಳಬೇಕಾಗಿತ್ತು. ಸಿನ್ಹಾರ ತಂತ್ರ ಕೆಲಸ ಮಾಡಿದ್ದರೆ ದೇಶದ ನಕಾಶೆಯೇ ಬದಲಾಗಿರುತ್ತಿತ್ತು.

ನಿವೃತ್ತರಾದ ಸಿನ್ಹಾ ವ್ಯವಸ್ಥೆಯ ಸುಧಾರಣೆಗೆ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರು. ಸೋತರು. ಪುಸ್ತಕಗಳನ್ನು ಬರೆದರು. ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು. ಆದರೂ ಅವರು ತಮ್ಮ ಆತ್ಮಕಥನ ಎ ಸೋಲ್ಜರ್ಸ್ ರಿಕಾಲ್ ನಲ್ಲೂ ಕೂಡಾ ತಮ್ಮನ್ನು ಸೂಪರ್ ಸೀಡ್ ಮಾಡಿದ ಸಂಗತಿಯ ಬಗ್ಗೆ ಒಂದೇ ಒಂದು ವಾಕ್ಯವನ್ನು ಬರೆದುಕೊಳ್ಳಲಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಷ್ಟು ದಿನವೂ ಅಂಥ ಪಂಡಿತನನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳಲಿಲ್ಲ. ಐ ಕೆ ಗುಜ್ರಾಲ್ ಪ್ರಧಾನ ಮಂತ್ರಿಯಾದಾಗ ಸಿನ್ಹಾರನ್ನು ನೇಪಾಳದ ರಾಯಭಾರಿಯಾಗಿ ನೇಮಕ ಮಾಡಲಾಯಿತು. ಅದೇ ಹೊತ್ತಲ್ಲಿ ನೇಪಾಳದಲ್ಲಿ ರಾಜಪರಿವಾರದ ಅಧಿಕಾರ ಮೊಟಕುಗೊಂಡು ಪ್ರಜಾಪ್ರಭುತ್ವ ನೆಲೆಯಾಗಿ ಪ್ರಕ್ಷುಬ್ದ ವಾತಾವರಣ ನೆಲೆಯಾಯಿತು. ಆ ಹೊತ್ತಲ್ಲಿ ಸಿನ್ಹಾ ಭಾರತ-ನೇಪಾಳ ಸಂಬಂಧಕ್ಕೆ ಕುಂದುಂಟಾಗದಂತೆ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡರು. ಅವರ ಕಾರ್ಯವನ್ನು ಶ್ಲಾಘಿಸಿ ಅಂದಿನ ನೇಪಾಳ ಪ್ರಧಾನಿ ಕೃಷ್ಣಪ್ರಸಾದ್ ಭಟ್ಟಾರಾಯ್ ಲೆ.ಜ ಸಿನ್ಹಾರಂಥ ಪ್ರಜ್ಞಾವಂತ ರಾಯಭಾರಿಗಳು ನಮ್ಮ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿದರು ಎಂದು ಭಾರತಕ್ಕೆ ಪತ್ರ ಬರೆದಿದ್ದರು! ನಂತರ ಸಿನ್ಹಾರನ್ನು ೧೯೯೭ರಲ್ಲಿ ಅಸ್ಸಾಮಿನ ರಾಜ್ಯಪಾಲರಾಗಿ ನೇಮಕ ಮಾಡಲಾಯಿತು. ಅದು ಅಸ್ಸಾಮಿನಲ್ಲಿ ಉಲ್ಫಾ ಉಗ್ರರ ಉಪಟಳ ತಾರಕಕ್ಕೇರಿದ್ದ ಹೊತ್ತು. ಅಸ್ಸಾಮಿನ ಪರಿಸ್ಥಿತಿ ಸುಧಾರಣೆಗೆ ಸಿನ್ಹಾ ಆರ್ಥಿಕ, ಭಾವನಾತ್ಮಕ ಮತ್ತು ಮಿಲಿಟರಿ ಎಂಬ ಮೂರು ಸೂತ್ರಗಳನ್ನು ರೂಪಿಸಿ ಯಶಸ್ವಿಯಾದರು. ಬಾಂಗ್ಲಾ ವಲಸಿಗರ ಬಗ್ಗೆ ವರದಿ ತಯಾರಿಸಿ ಕೇಂದ್ರಕ್ಕೆ ಕಳುಹಿಸಿದರು. ಆ ವರದಿಯ ನಂತರ ಭಾರತ ಬಾಂಗ್ಲಾ ವಲಸಿಗರ ಬಗ್ಗೆ ಮೊಟ್ಟವೊದಲು ತಲೆಕೆಡಿಸಿಕೊಂಡಿತು. ಗೌಹಾಟಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಸ್ಸಾಮಿ ನಾಯಕ ಲೋಕಪ್ರಿಯ ಗೋಪಿನಾಥ್ ಬರ್ದೋಲೋಯಿ ಹೆಸರನ್ನು ಇರಿಸಿದರು. ಅವರ ೧೧ ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಿದರು, ಮರಣೋತ್ತರವಾಗಿ ಗೋಪಿನಾಥರಿಗೆ ಭಾರತರತ್ನವನ್ನೂ ಕೊಡಿಸಿದರು. ಬ್ರಹ್ಮಪುತ್ರ ನೀರಾವರಿ ಯೋಜನೆ, ಸಮೃದ್ದ್ ಕೃಷಿಕ್ ಯೋಜನಾ ಆರಂಭಿಸಿದರು. ಕೊನೆಗೆ ಅಸ್ಸಾಮಿನಿಂದ ತೆರಳುವಾಗ ಅಸ್ಸಾಮಿನ ಜನ ಸಿನ್ಹಾ ಅಸ್ಸಾಮಿನ ಸುಪುತ್ರ ಎಂದು ಹಾಡುಕಟ್ಟಿ ಹಾಡಿದರು! ಆದರೆ ಇಂದಿರಾ? ೨೦೦೩ರಲ್ಲಿ ವಾಜಪೇಯಿ ಸರ್ಕಾರ ಅವರನ್ನು ಜಮ್ಮು ಮತ್ತು ಕಾಶ್ಮಿರದ ರಾಜ್ಯಪಾಲರನ್ನಾಗಿ ನೇಮಿಸಿತು. ಮುಫ್ತಿ ಮಹಮದ್ ಸಯೀದ್ ಮತ್ತು ಫಾರೂಕ್ ಅಬ್ದುಲ್ಲಾರ ವಿರೋಧ ಕಟ್ಟಿಕೊಂಡು ಅಮರನಾಥ ಯಾತ್ರೆಯನ್ನು, ಸೈನ್ಯದ ಪರಮಾಧಿಕಾರವನ್ನೂ ಜಿದ್ದಿನಿಂದ ಮುಂದುವರಿಸಿದರು. ಅಸಲಿ ಕಾಶ್ಮೀರಿಯತ್ ಬಗ್ಗೆ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಏರ್ಪಡಿಸಿ ಪ್ರತ್ಯೇಕತಾವಾದಿಗಳ ಕೆಂಗಣ್ಣಿಗೆ ಗುರಿಯಾದರು. ಒಂದು ವೇಳೆ ಇಂದಿರಾ ಗಾಂಧಿ ಸಿನ್ಹಾರನ್ನು ಅಂದು ಸೂಪರ್ ಸೀಡ್ ಮಾಡದೇ ಇದ್ದಿದ್ದರೆ ತಮ್ಮ ಪ್ರಾಣ ಉಳಿಸಿಕೊಳ್ಳುವುದರ ಜೊತೆಗೆ ಮತ್ತಷ್ಟು ಬಾರಿ ದುರ್ಗೆ ಎನಿಸಿಕೊಳ್ಳುತ್ತಿದ್ದರು.

ನಿವೃತ್ತರಾದ ನಂತರ ಸಿನ್ಹಾ ಹಲವು ಪತ್ರಿಕೆಗಳಿಗೆ ಅಂಕಣವನ್ನು ಬರೆದರು. ಅದರಲ್ಲಿ ಅವರು ಕೊನೆಗೂ ತಾವೆಂದ “ಪ್ರಾಯಶ್ಚಿತ”ದ ಗುಟ್ಟನ್ನು ಹೀಗೆ ಬಿಚ್ಚಿಟ್ಟಿದ್ದರು,
“ಮೌರ್ಯ ಸಾಮ್ರಾಟ ಬೃಹದೃತ ತನ್ನ ಬೌದ್ಧ ಅಹಿಂಸೆ ಮತ್ತು ದೌರ್ಬಲ್ಯದಿಂದ ರಾಜ್ಯವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾಗ ಪುಷ್ಯಮಿತ್ರ ಶುಂಗ ಎಂಬ ಆತನ ಸೇನಾಪತಿ ಆತನ ರುಂಡ ಕತ್ತರಿಸಿ ಶುಂಗ ಸಾಮ್ರಾಜ್ಯ ನಿರ್ಮಾಣ ಮಾಡಿ ಸನಾತನ ಧರ್ಮವನ್ನು ಉಳಿಸಿದ್ದ. ಆ ಶುಂಗ ಈಗ ಸಿನ್ಹಾ! ನಾನು ಆತನ ವಂಶಸ್ಥ”

ನಿಜಕ್ಕೂ ಸಿನ್ಹಾರದ್ದು ಪ್ರಾಯಶ್ಚಿತವೇ? ಸಿನ್ಹಾ ಶುಂಗನಾಗಬಾರದಿತ್ತೇ? ಯಾಕಾಗಲಿಲ್ಲ?
ಅಂಥ ಸಿನ್ಹಾ ಎಂಬ ಶುಂಗ ಕಳೆದ ೧೭ರಂದು ನಿಧನರಾದಾಗ ದೇಶದಲ್ಲಿ ನೋಟು ಮತ್ತು ಚಿಲ್ಲರೆಗಳು ಸದ್ದು ಮಾಡುತ್ತಿದ್ದವು. ಪ್ರಧಾನಮಂತ್ರಿಗಳ ಟ್ವಿಟ್ಟೂ ಸುದ್ಧಿಯಾಗಲಿಲ್ಲ. ಅಂದು ಸೂಪರ್ ಸೀಡ್ ಆದ ಮನುಷ್ಯ ಇಂದು ಕೂಡಾ ಸುದ್ಧಿಯಾಗದೇ ಸಮಾಧಿ ಸೇರಿದರು. ಎಸ್.ಕೆ. ಸಿನ್ಹಾ ಅಮರರಾದರು.

1 ಟಿಪ್ಪಣಿ Post a comment
  1. Goutham
    ಡಿಸೆ 7 2016

    ಹಳೆಯ ನೋಟುಗಳ ನಿಷೇದದಿಂದ ದೇಶದಾದ್ಯಂತ ಉಂಟಾಗಿರುವ ಸಮಸ್ಯೆ ಎಷ್ಟು ಬೃಹತ್ತಾಗಿದೆ ಎಂದು ಇದರಿಂದ ಸ್ಪಷ್ಟವಾಗಿದೆ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments