ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 3, 2016

1

ಸಾಹಿತಿ, ಬುದ್ಧಿಜೀವಿಗಳ ಆತ್ಮ ಸಾಕ್ಷಿ ಯಾರ ಪಾದಾರುವಿಂದವನ್ನು ಸೇರಿದೆ?

‍ನಿಲುಮೆ ಮೂಲಕ

ಕಿರಣ್ ಕಿಜೋ
ಸಂಶೋಧನಾ ವಿದ್ಯಾರ್ಥಿ
ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ
ಆಂಧ್ರ ಪ್ರದೇಶ

15203330_1161962633852199_2178590942366491034_nಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅರೆನಗ್ನ ಚಿತ್ರ ನೋಡಿ, ಸಾಕಷ್ಟು ಛೀಮಾರಿಗೆ ಒಳಗಾಗಿರುವ ಶಿಕ್ಷಣ ಸಚಿವ ತನ್ವೀರ್ ಸೇಠ್, “ಮೂರೂ ಬಿಟ್ಟವರು ಊರಿಗೆ ದೊಡ್ಡವರು” ಎನ್ನುವ ಹಾಗೇ ಓಡಾಡಿಕೊಂಡಿರುವುದನ್ನು ನೋಡಿದರೆ ನಿಜಕ್ಕೂ ಖೇದವೆನಿಸುತ್ತದೆ. ಈ ನಡುವೆ ಸರ್ಕಾರವು ಸಚಿವ ಮಹಾಶಯರ ಬೆನ್ನಿಗೆ ನಿಂತು, ಸಿ.ಐ.ಡಿ.ಯಿಂದ ತನಿಖೆಯ ನಾಟಕವಾಡಿಸಿ ಕ್ಲೀನ್‍ಚೀಟ್ ನೀಡುವ ಉಮ್ಮೇದಿಯಲ್ಲಿದೆ. ನಿಷ್ಠ ಪೋಲಿಸ್ ಅಧಿಕಾರಿ ಗಣಪತಿ ಸಾವಿನ ವಿಚಾರದಲ್ಲೇ ಜಾರ್ಜ್‍ಗೆ ಕ್ಲೀನ್‍ಚೀಟ್ ನೀಡಿದವರಿಗೆ, ಈ ಪ್ರಕರಣ ಹೂವೆತ್ತಿದಷ್ಟೇ ಸಲೀಸು ಬಿಡಿ! ಇರಲಿ, ಇದೆಲ್ಲಾ ರಾಜಕಾರಣದ ಕೇಡಿನ ಭಾಗ. ನನ್ನ ಪ್ರಶ್ನೆ ಆ ಕುರಿತದ್ದಲ್ಲ, ಆ ಉದ್ದೇಶವೂ ನನ್ನಲ್ಲಿಲ್ಲ. ಆದರೆ ಸಭ್ಯ, ಪ್ರಜ್ಞಾವಂತ ಸಮಾಜವನ್ನು ಕಾಡುತ್ತಿರುವುದು ಹಾಗೂ ಸಂಕಟಕ್ಕೆ ದೂಡಿರುವುದು, ಈ ಮನುಷ್ಯ ನಾಡಿದ್ದು ರಾಯಚೂರಿನಲ್ಲಿ ನಡೆಯುತ್ತಿರುವ 82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷನೆಂಬುದು!

ನಮಗೆಲ್ಲಾ ತಿಳಿದಿರುವಂತೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತನ್ನದೇ ಆದ ಘನತೆ, ಗೌರವಗಳಿವೆ. ನಮ್ಮ ನಾಡಿನ ಕಲೆ, ಸಂಸ್ಕೃತಿ, ಜನರ ಆದ್ಯತೆ ಹಾಗೂ ಆಶೋತ್ತರಗಳ ಕುರಿತಾಗಿ ಸುದೀರ್ಘ ಚರ್ಚೆ ನಡೆದು ಈ ನಿಟ್ಟಿನಲ್ಲಿ ಸರ್ಕಾರದ ಸಾಂಸ್ಕೃತಿಕ ನೀತಿ ನಿಯಮಗಳನ್ನು ನಿರ್ದೇಶಿಸುವದರೊಂದಿಗೆ ನಾಡು-ನುಡಿಯ ಕುರಿತಾಗಿ ಜನರ ಪ್ರಜ್ಞೆಯನ್ನು ಎಚ್ಚರಿಸುತ್ತಾ ಬಂದಿದೆ. ಸೂಕ್ಷ್ಮ ಸಂವೇದನೆಯ ಸಾಹಿತಿಗಳು, ಪ್ರಜ್ಞಾವಂತ ಸಾಹಿತ್ಯಾಭಿಮಾನಿಗಳು ಸೇರುವ ನುಡಿ ಹಬ್ಬದ ಸ್ವಾಗತ ಸಮಿತಿಯ ಅಧ್ಯಕ್ಷತೆಯನ್ನು ಈ ರೀತಿಯ ಕಳಂಕಿತ ಸಚಿವರು ವಹಿಸುವುದು ಎಷ್ಟು ಸರಿ? ಎಂಬುದಷ್ಟೇ ಇಲ್ಲಿಯ ನೈತಿಕ ಕಾಳಜಿ.

ಪ್ರತಿ ಬಾರಿ ಸಾಹಿತ್ಯ ಸಮ್ಮೇಳನಗಳು ನಡೆಯುವಾಗಲೆಲ್ಲಾ, “ಸಮ್ಮೇಳನದ ಅನುದಾನಕ್ಕಾಗಿ ಸರ್ಕಾರದ ಮುಂದೆ ಬೇಡುವಂತಾಗಬಾರದು. ಪರ್ಯಾಯ ಯೋಜನೆಗಳನ್ನು ಸಿದ್ಧಪಡಿಸಬೇಕಿದೆ”. ಎಂಬ ಕೂಗು ಪ್ರತಿ ವರ್ಷವೂ ಕೇಳಿ ಬರುತ್ತದೆ. ಆ ಕುರಿತು ಸಾಹಿತ್ಯ ಪರಿಷತ್ ಯಾವ ರೀತಿಯಿಂದಲೂ ಗಂಭೀರವಾಗಿ ಪ್ರಯತ್ನಿಸಿದ್ದಂತೂ ಇಲ್ಲ. ಹೀಗೆ ಸಾಹಿತ್ಯ ಪರಿಷತ್‍ದೇ ಸಂಪನ್ಮೂಲವಿದ್ದಾಗ, ಸರ್ಕಾರದ ಮೂಲಾಜಿಗೆ ಬೀಳುವ ಅವಶ್ಯಕತೆ ಇರುವುದಿಲ್ಲ. ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದೆಂದು ವಾದಿಸುವವರಿದ್ದಾರೆ. ಇಲ್ಲಿ ಮುಖ್ಯವಾಗಿ ವಿಚಾರವೊಂದನ್ನು ಗಮನಿಸಬೇಕು. ಆಡಳಿತದಲ್ಲಿರುವ ಸರ್ಕಾರ ಯಾವುದೋ ಇಂಗ್ಲೇಂಡಿನ ರಾಣಿ ನೇಮಿಸಿದ್ದಲ್ಲ. ನಮ್ಮದೇ ಜನ ಆಯ್ಕೆ ಮಾಡಿರುವಂಥದ್ದು. ಸರ್ಕಾರವೇ ನಮ್ಮದಾದಾಗ, ಸರ್ಕಾರ ನೀಡುವ ಅನುದಾನ ಭಿಕ್ಷೆಯಲ್ಲ; ಸಾಹಿತ್ಯಾಭಿಮಾನಿಗಳ ಹಕ್ಕು. ಇಲ್ಲಿ ಮುಜುಗರದ ಪ್ರಶ್ನೆಯಿಲ್ಲ. ಹಾಗೆಂದು ಅನುಧಾನಕ್ಕಾಗಿ ಸರ್ಕಾರದ ಮುಂದೆ ಬಾಗುವುದಂತೂ ಸರ್ವಥಾ ಸಾಧುವಲ್ಲ.

ಇಂತಹ ಸಚಿವರು, ಸರ್ಕಾರಿ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷರೋ ಅಥವಾ ಕಾರ್ಯಕ್ರಮದ ಅಧ್ಯಕ್ಷರೋ ಆಗಿದ್ದರೆ, ಇಷ್ಟೊಂದು ಚಿಂತಿಸುವ ಪ್ರಮೇಯವೇ ಇರುತ್ತಿರಲಿಲ್ಲ. “ಹಾಳು ರಾಜಕಾರಣ, ಹೋಗ್ಲಿ ಬಿಡು ಅತ್ಲಾಗೆ” ಎಂದು ಉಗಳುನುಂಗಿಕೊಂಡು ಸುಮ್ಮನಿರಬಹುದಿತ್ತು. ಆದರೆ ಸಾಹಿತ್ಯ ಸಮ್ಮೇಳನ ಹಾಗಲ್ಲವಲ್ಲಾ? ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ‘ಕನ್ನಡ ಸಾಹಿತ್ಯ ಪರಿಷತ್’ನಿಂದ ನಡೆಯುವಂಥದ್ದು. ನಾಡಿನ ಸಾಹಿತಿಗಳು, ವಿಚಾರವಂತರು, ಸಂಸ್ಕೃತಿ ಚಿಂತಕರು, ಅಕ್ಷರಾಭಿಮಾನಿಗಳು ಇದರ ಪಾಲುದಾರರು. ಇಂತಹ ಮೌಲ್ಯಯುತ ಸಮ್ಮೇಳನಕ್ಕೆ ಕಳಂಕಿತ ಸಚಿವರು ಸ್ವಾಗತ ಸಮಿತಿಯ ಅಧ್ಯಕ್ಷರಾಗುವುದು ಈವರೆಗಿನ ಸಾಹಿತ್ಯ ಸಮ್ಮೇಳನಗಳ ಪರಂಪರೆಗೆಯೇ ಒಂದು ಕಪ್ಪು ಚುಕ್ಕೆ. ಸದ್ಯದ ವಿಷಮ ಪರಿಸ್ಥಿತಿ ನೆನೆದರೆ, ತೀರಾ ಕೇಡೆನಿಸುತ್ತದೆ. ನಾಡಿನ ಸಾಹಿತಿಗಳು, ಬುದ್ಧಿ ಜೀವಿಗಳು, ಸಂಸ್ಕøತಿ ಚಿಂತಕರು ಪಾಲ್ಗೊಳ್ಳುವ ಸಮ್ಮೇಳನದ ಸ್ವಾಗತ ಸಮಿತಿಗೆ ಚಾರಿತ್ರ್ಯಹೀನರೊಬ್ಬರು ಅಧ್ಯಕ್ಷರಾಗುತ್ತಿರುವುದು ನಿಜಕ್ಕೂ ರಾಜಕಾರಣದ ಕ್ರೂರ ವ್ಯಂಗ್ಯ. ಇನ್ನೂ ಜೀರ್ಣಿಸಿಕೊಳ್ಳಲಾಗದ ನೋವೆಂದರೆ, ಈ ಅಪಚಾರವನ್ನು ಸಮ್ಮೇಳನಾಧ್ಯಕ್ಷರು ಹಾಗೂ ಸಾಹಿತ್ಯ ಪರಿಷತ್ ಅಧ್ಯಕ್ಷರಾದಿಯಾಗಿ ಯಾವೊಬ್ಬ ಸಾಹಿತಿಯೂ ಪ್ರಶ್ನಿಸದೇ ಇರುವುದು! ಇದು ಅಕ್ಷರಾಭಿಮಾನಿಗಳ ದೌರ್ಭಾಗ್ಯವೆನ್ನದೆ ವಿಧಿಯಿಲ್ಲ. ಎಂಬತ್ತರ ದಶಕದಲ್ಲಿ ಬಂಡಾಯ ಚಳುವಳಿಯ ಮುಂಚೂಣಿಯಲ್ಲಿದ್ದ ಬರುಗೂರರು, ವ್ಯವಸ್ಥೆಯೊಂದಿಗೆ ಹೊಂದಿಕೊಳ್ಳುವಷ್ಟು ಮೆತ್ತಗಾಗಿರುವುದೇಕೆ? ಪರಿಷತ್ ಅಧ್ಯಕ್ಷರು, “ಇಂತಹ ಕಳಂಕಿತರು ಸ್ವಾಗತ ಸಮಿತಿಯ ಅಧ್ಯಕ್ಷರಾದರೆ, ನಾಡಿನ ಸೂಕ್ಷ್ಮ ಮನಸ್ಸಿನ ಚಿಂತಕರಿಗೆ ಮುಜುಗರವಾಗುತ್ತದೆ. ದಯವಿಟ್ಟು ಇದನ್ನು ತಪ್ಪಿಸಿ” ಎಂದು ನಾಡಿನ ಜನತೆಯ ಪರವಾಗಿ ಸರ್ಕಾರವನ್ನು ಕೇಳಿಕೊಳ್ಳಬಹುದಿತ್ತಲ್ಲವೇ? ಇದಾದುವುದನ್ನು ಗಮನಿಸದೇ, ‘ಏನೂ ಆಗಿಯೇ ಇಲ್ಲಾ’ ಎಂಬಂತಿರುವುದನ್ನು ನೋಡಿದರೆ, ಇವರ ಆತ್ಮ ಸಾಕ್ಷಿ ಯಾರ ಪಾದಾರುವಿಂದವನ್ನು ಸೇರಿದೆ ಎಂಬುದನ್ನು ಜನ ಲೆಕ್ಕಹಾಕಬಲ್ಲರು.

ಜನತೆಯ ಬದುಕಿನ ಮೌಲ್ಯಗಳನ್ನು ಮತ್ತು ವೈಚಾರಿಕತೆಯನ್ನು ಉನ್ನತೀಕರಿಸುವ ಕೆಲಸ ಸಾಹಿತ್ಯದಿಂದ ಆಗಬೇಕು. ಜನಸಾಮಾನ್ಯರಿಗೆ ಬದುಕಿನ ಆದರ್ಶದ ದಾರಿಯೊಂದನ್ನು ಹಾಕಿಕೊಟ್ಟಾಗ, ಸಾಹಿತ್ಯದ ಕೆಲಸ ಪೂರ್ಣವೆನಿಸುತ್ತದೆ. ಇಂತಹ ಆದರ್ಶದ ಏಳೆಗಳು ಅಚ್ಚು ಹಾಕುವ ಪುಸ್ತಕಗಳಲ್ಲಿ, ಮಾರಾಟವಾಗುವ ಪುಸ್ತಕ ಮಳಿಗೆಯಲ್ಲಿದ್ದರೆ ಮಾತ್ರ ಸಂಪನ್ನಗೊಳ್ಳುವುದಿಲ್ಲ. ಸಮ್ಮೇಳನದ ವೇದಿಕೆ ಮೇಲಿರುವವರ ನಡೆ-ನುಡಿಗಳಲ್ಲೂ ಹೊಮ್ಮಬೇಕು. ನಾಡಿನ ಸಮಸ್ತ ಕನ್ನಡಾಭಿಮಾನಿಗಳ ಪ್ರಾತಿನಿಧಿಕ ಸಂಸ್ಥೆಯ ಸಮ್ಮೇಳನ ಯಾವ ಆದರ್ಶಗಳನ್ನು, ಮೌಲ್ಯಗಳನ್ನು ಸಾರಬೇಕು? ಕೇವಲ ‘ಸಾಂಸ್ಕøತಿಕ ನೀತಿಯ’ ಕುರಿತು ಗಂಟೆ ಗಂಟೆ ಮಾತನಾಡುತ್ತಾ, ವಿಕೃತಿಯನ್ನು ಬೆನ್ನಹಿಂದೆ ಪ್ರೋತ್ಸಾಹಿಸಿದರೆ, ಬೆಂಬಲಿಸಿದರೆ ಆತ್ಮ ವಂಚೆನೆ ಏನಿಸಿಕೊಳ್ಳದೇ?

ಸಮ್ಮೇಳನದ ಪಾವಿತ್ರ್ಯೆತೆಯನ್ನು ಹಾಳುಗೆಡವಲು ಹೊರಟಿರುವ ಸರ್ಕಾರದ ನಡೆಯನ್ನು ಪ್ರತಿಪಕ್ಷಗಳು ಪ್ರಶ್ನಿಸಬೇಕಿತ್ತು. ಆದರೆ ವಾಸ್ತವದಲ್ಲಿ ಆಗಿದ್ದೇನು? ಪ್ರತಿಪಕ್ಷಗಳು ಈ ಕುರಿತು ಮಾತನಾಡಲು ಆರಂಭಿಸಿದರೇ, ಅವರದೇ ಗಂಟಲು ಕಟ್ಟುತ್ತದೆ. ಈಗೀನ ಪ್ರತಿಪಕ್ಷದವರು, ತಾವು ಅಧಿಕಾರದಲ್ಲಿದ್ದಾಗ ಸದನದಲ್ಲಿ ಮಾಡಿದ್ದೂ ಈ ರೀತಿ ಭಾನಗಡಿಯೇ. ಆಗ ಲಜ್ಜೆ ಬಿಟ್ಟು ಯಡಿಯೂರಪ್ಪ ತಮ್ಮ ಶಾಸಕರನ್ನು ಸಮರ್ಥಿಸಿಕೊಂಡಿದ್ದರು. ಇಂದು ಸಿದ್ಧರಾಮಯ್ಯ, ಪರಮೇಶ್ವರ್‍ರು ತನ್ವೀರ್ ಸೇಠ್ ಬೆಂಬಲಕ್ಕೆ ನಿಂತಿರುವುದೂ ಆ ರೀತಿಯ ಲಜ್ಜೆಗೇಡಿತನವೇ. ನೈತಿಕತೆಯನ್ನು ಕಳೆದುಕೊಂಡ ದನಿ ಎಂದಾದರೂ ದೊಡ್ಡದಾಗಿ ಹೊಮ್ಮಲು ಸಾಧ್ಯವೇ? ವ್ಯವಸ್ಥೆಯೊಂದಿಗೆ ನಾವು ರಾಜಿಯಾದಾಗ, ವ್ಯವಸ್ಥೆಯ ನೇರಾ ನೇರ ವಿಮರ್ಶೆ ಸಾಧ್ಯವಾಗದೇ ಹೋಗುತ್ತದೆ. ಸದ್ಯದ ಸನ್ನೀವೇಶದಲ್ಲಿ ಕನ್ನಡದ ಸಾಕ್ಷಿ ಪ್ರಜ್ಞೆಗಳು, ಚಿಂತಕರು, ಸಂವೇದನಾಶೀಲರು, ಬುದ್ಧಿಜೀವಿಗಳು ಬಾಯಿ ಕಳೆದುಕೊಂಡು ಮೂಖರಾಗಿರುವುದಕ್ಕೆ ಮುಖ್ಯ ಕಾರಣವೇ ಈ ರೀತಿಯ ವ್ಯವಸ್ಥೆಯೊಂದಿಗಿನ ರಾಜಿ, ಹೊಂದಾಣಿಕೆ!

“ಈ ವಿಷಯವನ್ನು ಹೆಚ್ಚು ಚರ್ಚಿಸದೇ, ಎಲ್ಲರೂ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಬೇಕು” ಎಂಬ ಅಭಿಪ್ರಾಯ ಕೆಲ ಸಾಹಿತಿಗಳಿಂದ ಹೊರಬಿದ್ದಿದೆ. ನಿಜ, ರಾಯಚೂರು ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಬೇಕೆಂಬುದೇ ಸಮಸ್ತರ ಇಂಗಿತ. ಆದರೆ ಈ ಸಮ್ಮೇಳನದ ಸ್ವಾಗತ ಸಮಿತಿಯ ಉಸ್ತುವಾರಿ ಕಳಂಕಿತನೊಬ್ಬನ ಹೆಗಲೇರಿದೆಯಲ್ಲಾ? ಈ ಅಪಸವ್ಯವನ್ನು ತಡೆಯಬೇಕೆಂಬುದು ಮಾತ್ರ ನನ್ನ ಪ್ರಮಾಣಿಕ ಅಳಲು, ಕಾಳಜಿ ಮತ್ತು ಕಳವಳ. ಇದು ನನ್ನೊಬ್ಬನ ಆತಂಕವಲ್ಲ, ಎಲ್ಲಾ ಪ್ರಾಮಾಣಿಕ ಸಾಹಿತ್ಯಾಭಿಮಾನಿಗಳದ್ದು. ಈ ವಿಚಾರವನ್ನು ಸಾಹಿತ್ಯ ಪರಿಷತ್ ಅಧ್ಯಕ್ಷರು, ಸರ್ಕಾರದ ಗಮನಕ್ಕೆ ತಂದು ಕಳಂಕಿತ ಸಚಿವನನ್ನು ಸ್ವಾಗತ ಸಮಿತಿಯಿಂದ ದೂರವಿರಿಸಿ, ಸಮ್ಮೇಳನಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಸಾಹಿತ್ಯ ಪರಿಷತ್‍ನ ನೈತಿಕತೆಯೂ ಮಣ್ಣಾದಂತೆ. ಹಾಗೇನಾದರೂ ಆದಲ್ಲಿ, ಈಗಿನ ಅನೇಕ ಸಾಹಿತಿಗಳ ಗಂಟಲು ಕಟ್ಟಿದ ರೀತಿಯಲ್ಲೇ ಮುಂದೆ ಸಾಹಿತ್ಯ ಪರಿಷತ್‍ನ ಗಂಟಲು ಕಟ್ಟುತ್ತದೆ. ಮುಂದೆ ದಿನಗಳಲ್ಲಿ ತನ್ವೀರ್ ಸೇಠ್ ತರಹದ ಇನ್ನೊಬ್ಬ ಮಹಾಶಯ ಸಮ್ಮೇಳನದ ವೇದಿಕೆಯ ಮೇಲೆಯೇ ತನ್ನ ಭಾನಗಡಿತನವನ್ನು ಪ್ರದರ್ಶಿಸಬಹುದು. ಆಗ ಅದನ್ನು ಪ್ರಶ್ನಿಸಲು ಪರಿಷತ್‍ಗೆ ಬಾಯಿಯಿರುತ್ತದೆಯೇ? ಅದಕ್ಕಾಗಿ ನೈತಿಕ ಪ್ರಜ್ಞೆಯನ್ನು ಅಡವಿಟ್ಟು ‘ಮಾರಿಕೊಂಡವರು’ ಆಗುವುದು ಸರ್ವಥಾ ಸಾಧುವಲ್ಲ.
ವರ್ಷವೀಡಿ ವೇದಿಕೆ, ಸಭೆ- ಸಮಾರಂಭ ಎಲ್ಲದರಲ್ಲೂ ರಾಜಾಜಿಸುವ ಮುಖ್ಯಮಂತ್ರಿಯ ಹೆಸರು, ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಕೊಂಚ ಕೆಳ ಸಾಲಿನಲ್ಲಿ ನಮೂದಾಯಿತೆಂದು ರಚ್ಚೆ ಹಿಡಿದು ರೋಧಿಸುವ ಮರಿ ಪುಡಾರಿಗಳ ವಿವೇಚನೆಗೆ, ಸ್ವಾಗತ ಸಮಿತಿಯ ಅಧ್ಯಕ್ಷ ಅಶ್ಲೀಲ ವಿಡಿಯೋ ನೋಡಿದ ಕಳಂಕಿತನೆಂಬುದು ತಿಳಿಯದೇ ಹೋಯಿತಲ್ಲ? ಈ ಪ್ರಜ್ಞೆಗೆ ಏನನ್ನೋಣ?

ಈ ಕಳಂಕಿತ ಸಚಿವರು, ಈ ನಾಡಿನ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರು ಎಂಬುದು ಒಂದು ಬಗೆಯ ಕೇಡಾದರೆ, ಇದಕ್ಕಿಂತ ಭೀಕರವಾದುದು ಅವರು ಮುಂದಿನ ತಲೆಮಾರನ್ನು ರೂಪಿಸುವ ಶಿಕ್ಷಣ ಇಲಾಖೆಯ ಸಚಿವರೆಂಬುದು! ಮಕ್ಕಳ ಭವಿಷ್ಯವನ್ನು ನೆನೆಸಿಕೊಂಡರೆ ಸಾಕು ದಿಗಿಲಾಗುತ್ತದೆ. ಇಂತಹ ಶಿಕ್ಷಣ ಸಚಿವರಿಂದ ಯಾವ ಮಹತ್ತರ ಗುಣಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬಲ್ಲರು? ಯಾವುದೇ ಕ್ಷೇತ್ರದಲ್ಲಿ ನೈತಿಕತೆ, ಪ್ರಾಮಾಣಿಕತೆಗಳು ಮಣ್ಣು ಮುಕ್ಕಿದರೂ ಪರವಾಗಿಲ್ಲ. ಶಿಕ್ಷಣ ಇಲಾಖೆಯೊಂದರಲ್ಲಿಯಾದರೂ ನೈತಿಕತೆ, ಪ್ರಮಾಣಿಕತೆ ಉಸಿರಾಡುವಂತೆ ಮಾಡಬೇಕಿದೆ. ಇದಕ್ಕೆ ಜನಸಾಮಾನ್ಯನ ಹೊರತಾಗಿ ಯಾರೂ ಧ್ವನಿ ಏರಿಸರು. “ಕಳಂಕಿತರು ಸ್ವಾಗತ ಸಮಿತಿಯಲಿದ್ದರೇ ನಾನು ವೇದಿಕೆ ಏರಲಾರೆ” ಎಂದು ಗಟ್ಟಿತನ ಪ್ರದರ್ಶಿಸಲು ಸಮ್ಮೇಳನಾಧ್ಯಕ್ಷರಿಗಾಗಲೀ, ಪರಿಷತ್ ಅಧ್ಯಕ್ಷರಿಗಾಗಲೀ ಸಾಧ್ಯವಾಗುವುದಿಲ್ಲವೆಂದರೆ ಅದಕ್ಕೆ ಅವರ ಸ್ವಹಿತಾಸಕ್ತಿಗಳೇ ಕಾರಣವೇ ಹೊರತು ಬೇರೆನಲ್ಲ. ಇನ್ನು, ಪ್ರಶಸ್ತಿ ವಾಪಾಸಿ ಬ್ರಿಗೇಡಿಗರಂತೂ ಈ ಕುರಿತು ಒಂದು ಮಾತೂ ಆಡಲಾರರು. ಅನ್ನದ ಋಣವಿರುವುದಿಲ್ಲವೇ? ಆದರೆ ನಾಡಿನ ನೈತಿಕ ಪ್ರಜ್ಞೆ ಹೊತ್ತ ಯಾವೊಬ್ಬ ಸಾಹಿತ್ಯಾಭಿಮಾನಿಗೂ ಈ ಕುರಿತು ಧ್ವನಿ ಏರಿಸಲು ಯಾವುದೇ ಅಡ್ಡಿ, ಆತಂಕಗಳಿಲ್ಲ. ಈ ಸ್ವಾಭಿಮಾನ, ನೈತಿಕ ಪ್ರಜ್ಞೆ ಜಾಗೃತವಾಗಲಿ. ರಾಯಚೂರಿನ ಸ್ವಾಭಿಮಾನಿ ಮಹಿಳೆಯರು ಮನಸ್ಸು ಮಾಡಿದರೇ, ಇಂತಹ ಕಳಂಕಿತ, ಕಪ್ಪು ಮನಸ್ಸುಗಳು ಮರೆಯಾಗುತ್ತವೆ. ಕನ್ನಡದ ನುಡಿ ಜಾತ್ರೆ ಮಲೀನಗೊಳ್ಳುವುದಿಲ್ಲ. ಕನ್ನಡದ ತೇರು ನೈತಿಕ ಪ್ರಜ್ಞೆಯೊಂದಿಗೆ ಮುಂದೆ ಸಾಗಲಿ.

1 ಟಿಪ್ಪಣಿ Post a comment
  1. Goutham
    ಡಿಸೆ 5 2016

    ಕಿರಣ್ ಕಿಜೋರವರೆ, “ಈ ಅಪಚಾರವನ್ನು ಸಮ್ಮೇಳನಾಧ್ಯಕ್ಷರು ಹಾಗೂ ಸಾಹಿತ್ಯ ಪರಿಷತ್ ಅಧ್ಯಕ್ಷರಾದಿಯಾಗಿ ಯಾವೊಬ್ಬ ಸಾಹಿತಿಯೂ ಪ್ರಶ್ನಿಸದೇ ಇರುವುದು! ” ಎಂದಿರುವಿರಿ. ಭೈರಪ್ಪನವರಾದರೂ ಪ್ರಶ್ನಿಸಬೇಕಿತ್ತು ಎಂಬುದು ತಮ್ಮ ಅಭಿಪ್ರಾಯವೆ ?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments