ಪರ ವಿರೋಧಗಳ ನಡುವೆ ನೋಟುಗಳ ಸಮಸ್ಯೆ
– ಮು ಅ ಶ್ರೀರಂಗ
ಪ್ರಜಾಪ್ರಭುತ್ವದಲ್ಲಿ ‘ಪಾಸಿಟಿವ್ ಆದ ವಾತಾವರಣ’ ಎಂಬುದು ಒಂದು ಆದರ್ಶವಾಗಬಹುದಷ್ಟೇ ಹೊರತು ವಾಸ್ತವ ಆಗಲಾರದು. ಹೀಗಾಗಿ ಕೆಲವೊಂದು ಸುಧಾರಣೆಗಳನ್ನು ಮುಂದಿನ ದಿನಗಳ ಒಳಿತಿಗಾಗಿ, ಕೆಲವರಿಗೆ ಸದ್ಯಕ್ಕೆ ಅನಾನುಕೂಲವೆನಿಸಿದರೂ, ಇದು ಪಾಸಿಟಿವ್ ಆದ ವಾತಾವರಣ ಅಲ್ಲ ಎಂದು ಅನಿಸಿದರೂ ತರಲೇಬೇಕಾಗುತ್ತದೆ. ಹಿಂದೆ ಭಾರತದಲ್ಲಿ ಭೂಸುಧಾರಣಾ ಕಾನೂನು, ಬ್ಯಾಂಕುಗಳ ರಾಷ್ಟ್ರೀಕರಣ, ರಾಜಧನ ರದ್ದತಿ ಇವುಗಳನ್ನು ಜಾರಿಗೆ ತಂದಾಗಲೂ ‘ಎಲ್ಲೂ, ಎಲ್ಲರಲ್ಲೂ ಪಾಸಿಟಿವ್ ಆದ ವಾತಾವರಣ’ ಇರಲಿಲ್ಲ. ಭಾರತದಲ್ಲಿ ಅನಕ್ಷರಸ್ಥರೇ ಜಾಸ್ತಿ; ಇಡೀ ದೇಶದಲ್ಲಿ ಅಕ್ಷರಸ್ಥರು ಜಾಸ್ತಿ ಇರುವ ರಾಜ್ಯವಾದ ಕೇರಳದಲ್ಲಿ ಸಹ ‘ನಗದು’ ವ್ಯವಹಾರವೇ ಜಾಸ್ತಿ; ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, Paytm ಇತ್ಯಾದಿಗಳ ಮೂಲಕ ವ್ಯವಹಾರ ಕಡಿಮೆ. ಹೀಗಾಗಿ ಇಡೀ ಭಾರತದಲ್ಲಿ ಈ ವ್ಯವಸ್ಥೆಯನ್ನು ಶೇಕಡಾ ಐವತ್ತರಷ್ಟು ಜಾರಿಗೆ ತರುವುದೂ ಅಸಾಧ್ಯ ಎಂದು ಹೇಳಲು ಕೆಲವರು ಕೊಡುವ ಅಂಕಿ-ಅಂಶಗಳ ಬಗ್ಗೆ ನನ್ನ ತಕರಾರೇನೂ ಇಲ್ಲ. ಯಾವುದಾದರೂ ಒಂದೆರೆಡು ಸಂಸ್ಥೆಗಳು ಅಂತಹ sample surveyಗಳನ್ನು ಮಾಡಿರುತ್ತವೆ. ಅವುಗಳ ಆಧಾರದ ಮೇಲೆ ಹೇಳಿರುತ್ತಾರೆ. ಚುನಾವಣೆಯ ಫಲಿತಾಂಶಗಳು, ಯಾವುದೋ ಒಂದು ಸಾಮಾಜಿಕ ಸಮಸ್ಯೆ ಇವುಗಳ ಬಗೆಗಿನ ಇಂತಹ ಅಂಕಿ-ಅಂಶಗಳು ‘ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದೇ ಜಾಸ್ತಿ’. ಈಗಂತೂ ಸುದ್ದಿ ವಾಹಿನಿಗಳು yes or no ಎಂಬ ಎರಡು ಪದಗಳ sms ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿವೆ! ಅಲ್ಲಿಗೆ ಮುಗಿಯಿತು. ಅದೇ ಸತ್ಯ, ದೂಸರಾ ಮಾತಿಲ್ಲ.
ಬ್ಯಾಂಕು, ಎಟಿಎಂ ಗಳಲ್ಲಿ ತಲೆದೋರಿರುವ ನೋಟುಗಳ ಸಮಸ್ಯೆಯನ್ನು ಎದುರಿಸುವುದು ಸರ್ಕಾರಕ್ಕೆ ಒಂದು ಸವಾಲೇ ಸರಿ. ಆದರೆ ಆ ನಿಟ್ಟಿನಲ್ಲಿ ಅದು ಕಾರ್ಯಪ್ರವೃತ್ತ ಆಗೇ ಇಲ್ಲ ಎನ್ನುವುದು ಸರಿಯಲ್ಲ. ಬೇರೆ ಬೇರೆ ಮಾರ್ಗಗಳಿಂದ ಈ ತಳಮಳವನ್ನು ನಿವಾರಿಸುತ್ತಿದೆ. ೧-೧೨-೧೬ರ ಬೆಂಗಳೂರು ಆವೃತ್ತಿಯ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಕೆಲವು ವರದಿಗಳ ಮುಖ್ಯ ಅಂಶಗಳು ಹೀಗಿವೆ.
೧. ಮೈಸೂರಿನಲ್ಲಿರುವ ಆರ್ ಬಿ ಐ ನ ನೋಟು ಮುದ್ರಣ ಘಟಕದಲ್ಲಿ ನಿತ್ಯ ಮೂರು ಕೋಟಿ ನೋಟುಗಳನ್ನು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಮುದ್ರಿಸಲಾಗುತ್ತಿದೆ. ಚಿಲ್ಲರೆ ಸಮಸ್ಯೆ ನೀಗಿಸಲು ಐನೂರು ಮುಖಬೆಲೆಯ ನೋಟುಗಳಿಗೆ ಆದ್ಯತೆ ನೀಡಲಾಗುತ್ತಿದೆ.
೨. ಅಲ್ಲಿಯ ಸಿಬ್ಬಂದಿಗೆ ನೆರವಾಗಲು (ಯಂತ್ರಗಳಿಗೆ ಕಾಗದ ಭರ್ತಿ ಮಾಡುವುದು, ಟ್ರಾಲಿ ಎಳೆದು ತರುವುದು, ನೋಟು ಪ್ಯಾಕಿಂಗ್ ಇತ್ಯಾದಿ) ಅರೆಸೇನಾ ಪಡೆಯ ಅಸ್ಸಾಮ್ ರೆಜಿಮೆಂಟಿನ ೧೨೦ ಯೋಧರನ್ನು ನೇಮಿಸಿಕೊಳ್ಳಲಾಗಿದೆ.
೩. ಹಿಂದೆ ಆರು ತಿಂಗಳಿಗೋ, ಜಾತ್ರೆಯ ಸಮಯದಲ್ಲೋ ಒಡೆಯುತ್ತಿದ್ದ ದೇವಸ್ಥಾನಗಳ ಹುಂಡಿಗಳನ್ನು ದಿನವೂ ಒಡೆಸಿ ಅಲ್ಲಿರುವ ಹಣವನ್ನು ಬ್ಯಾಂಕ್ ಗೆ ಜಮಾ ಮಾಡುವಂತೆ ಬ್ಯಾಂಕ್ ಮ್ಯಾನೇಜರ್ ಗಳು ಮನವೊಲಿಸುತ್ತಿದ್ದಾರೆ. ಇದರ ಜತೆಗೆ ಮದ್ಯದಂಗಡಿಗಳಿಂದ ಬರುವ ಹಣವನ್ನು ಉಪಯೋಗಿಸಿಕೊಂಡು ಪರಿಸ್ಥಿತಿಯನ್ನು ಬ್ಯಾಂಕುಗಳು ಸ್ವಲ್ಪವಾದರೂ ಸುಧಾರಿಸುತ್ತಿವೆ. (ಸಂಪೂರ್ಣ ಪಾನ ನಿಷೇಧ ಇಡೀ ದೇಶದಲ್ಲಿ ಜಾರಿಗೆ ಬರುವ ತನಕ ಮದ್ಯದಂಗಡಿಗಳ ಹಣವನ್ನು ಪಾಪ-ಪುಣ್ಯಗಳ ತಕ್ಕಡಿಯಲ್ಲಿಟ್ಟು ತೂಗುವುದು ವಾಸ್ತವಕ್ಕೆ ದೂರವಾದ ಅಂಶ. ಹೀಗಾಗಿ ‘ಕುಡಿತದಿಂದ ಬ್ಯಾಂಕುಗಳ ಮಾನ ಉಳಿಯಿತು’ ಎಂಬ ಕುಹಕಕ್ಕೆ ಅರ್ಥವಿಲ್ಲ).
ಡಿಜಿಟಲೈಸೇಶನ್ ಬಗ್ಗೆ ಈ ಹಿಂದೆ ಹೇಳಿದಂತೆ sms survey ಮತ್ತಿತರ ಅಂಕಿ ಅಂಶಗಳನ್ನು ಆಧರಿಸಿ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಕೆಲವರಿಗೆ ಕೆಲವೊಂದು ಪೂರ್ವಗ್ರಹಗಳಿರಬಹುದು. ಆದರೆ ದೇಶ ನಿಧಾನವಾಗಿಯಾದರೂ ಸದ್ಯದ ಸನ್ನಿವೇಶಕ್ಕೆ ಅನುಗುಣವಾಗಿ ಅದರತ್ತ ಸಾಗುತ್ತಿದೆ. ೧-೧೨-೧೬ರ ಪ್ರಜಾವಾಣಿ (ಬೆಂಗಳೂರು ಆವೃತ್ತಿ) ಪತ್ರಿಕೆಯಲ್ಲಿ ಈ ಬಗ್ಗೆ ಮೂರ್ನಾಲಕ್ಕು ಸುದ್ದಿಯಿದೆ. ಮುಂಬೈನ ಪೋರ್ಟ್ ನಾರಿಮನ್ ಪಾಯಿಂಟ್ ಪ್ರದೇಶದಿಂದ ಎಪ್ಪತ್ತು ಕಿ ಮೀ ದೂರದಲ್ಲಿರುವ ಮಹಾರಾಷ್ಟ್ರದ ಧಾಸಾಯ್ ಗ್ರಾಮದ ಜನರು ವಡಾಪಾವ್ ಖರೀದಿಸಲಿ ಅಥವಾ ಟ್ರ್ಯಾಕ್ಟರ್ ಕೊಳ್ಳಲಿ ಅದಕ್ಕೆ ಉಪಯೋಗಿಸುವುದು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಳನ್ನು. ಈ ಗ್ರಾಮ ನಿಧಾನವಾಗಿ ನಗದು ವಹಿವಾಟು ರಹಿತ ಹಳ್ಳಿಯಾಗಿ ಪರಿವರ್ತನೆಯಾಗುತ್ತಿದೆಯಂತೆ. ಗುಜರಾತ್ ರಾಜ್ಯದ ಹಳ್ಳಿಯೊಂದು ದೇಶದ ಪ್ರಥಮ ಸಂಪೂರ್ಣ ಡಿಜಿಟಲೈಸ್ಡ್ ಹಳ್ಳಿಯಾಗುವ ಹಂತದಲ್ಲಿದೆ ಎಂದು ಈಗಾಗಲೇ ವರದಿಯಾಗಿದೆ. ಮುಂಬೈನ ರಸ್ತೆಬದಿಯ ತರಕಾರಿ ಅಂಗಡಿಗಳಲ್ಲಿ Paytm ಮೂಲಕ ವ್ಯವಹಾರ ನಡೆಯುತ್ತಿರುವ ಚಿತ್ರ ಸಹಿತ ಸುದ್ದಿ ಆ ಪತ್ರಿಕೆಯಲ್ಲೇ ಪ್ರಕಟವಾಗಿದೆ. ಇದು ನಾಳೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಹೀಗೆ ಕರ್ನಾಟಕದಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರಾರಂಭವಾಗುವ ಬಗ್ಗೆ ಅನುಮಾನವಿಲ್ಲ ಅಲ್ಲವೇ?
ದೇಶದಲ್ಲಿ ಮೊದಲಿಗೆ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಈ ನಗದು ರಹಿತ ವಹಿವಾಟು ಪ್ರಾರಂಭವಾದರೆ ಬ್ಯಾಂಕುಗಳಲ್ಲಿರುವ ಅಷ್ಟು ನೋಟುಗಳು ಹಳ್ಳಿಗಳಿಗೆ ಹರಿಯುತ್ತದೆ. ಆ ನಂತರ ಹಳ್ಳಿಗಳಲ್ಲೂ ಸಹ ನಿಧಾನವಾಗಿ ಈ ಜಾಗೃತಿ ಮೂಡುತ್ತದೆ. ಈ ಮುಂಚೆ ಬೆಂಗಳೂರಿನಲ್ಲಿ ಸಹ ಮೂರ್ನಾಲಕ್ಕು ಡೆಬಿಟ್, ಕ್ರೆಡಿಟ್ ಕಾರ್ಡ್ ಹೊಂದಿರುವ ಸಂಸಾರಗಳು ಅವುಗಳನ್ನು ತರಕಾರಿ, ಹಾಲು, ಕಿರಾಣಿ ಅಂಗಡಿ, ಕೇಬಲ್ ಟಿವಿ ಶುಲ್ಕ ಇತ್ಯಾದಿಗಳಿಗೆ ಉಪಯೋಗಿಸುತ್ತಿದ್ದುದು ಕಡಿಮೆಯೇ. ಈಗ ಅದೇ ಅಭ್ಯಾಸವಾಗುತ್ತಿದೆ. ಗ್ರಾಹಕರು ನಗದು ರಹಿತ ವ್ಯವಹಾರಕ್ಕೆ ಪ್ರಾರಂಭವಾದರೆ ವ್ಯಾಪಾರ ನಡೆಸುವವರೂ ಅದಕ್ಕೆ ಹೊಂದಿಕೊಳ್ಳಲೇಬೇಕಾಗುತ್ತದೆ. ಬೇರೆ ದಾರಿಯಿಲ್ಲ. ಪ್ರಾರಂಭದಲ್ಲಿ ಗೊಣಗಾಟ ಸಹಜ. ಆದರೆ ಅದನ್ನೇ breaking news ಎಂದು ಬಿಂಬಿಸಿದರೆ ಆತಂಕ ಹೆಚ್ಚಾಗುತ್ತದೆ. ತಮ್ಮ ಒಂದು ವಾರದ ಟಿ ಆರ್ ಪಿ ಗಾಗಿ ಇಂತಹ ಬ್ರೇಕಿಂಗ್ ನ್ಯೂಸ್ ನೀಡುವ ವಾಹಿನಿಗಳ ನಡುವೆಯೇ ನಾವು ಕಳೆದು ಹೋದರೆ ಕಷ್ಟ.
ಭಾರತೀಯ ಸ್ಟೇಟ್ ಬ್ಯಾಂಕ್ ಮೂಲಕ ಸುಮಾರು ಎರಡು ವರ್ಷಗಳಷ್ಟು ಹಿಂದೆಯೇ ‘ಎಸ್ ಬಿ ಐ ಇನ್ ಟಚ್’ ಎಂಬ ಸಂಪೂರ್ಣ ಸ್ವಯಂಚಾಲಿತ ಶೂನ್ಯ ಠೇವಣಿಯ ಉಳಿತಾಯ ಖಾತೆಯನ್ನು ಕೇವಲ ಹದಿನೈದು ನಿಮಿಷದಲ್ಲಿ ತೆರೆಯುವ ಸೌಲಭ್ಯವನ್ನು ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಕಲ್ಪಿಸಲಾಗಿತ್ತು. ಹತ್ತಾರು ದಾಖಲೆಗಳ ಜಂಜಾಟವಿಲ್ಲದೆ, ಬ್ಯಾಂಕ್ ನಲ್ಲಿ ಕ್ಯೂ ನಿಲ್ಲದೆ ಪಾಸ್ ಬುಕ್ ಮತ್ತು ಡೆಬಿಟ್ ಕಾರ್ಡ್ ಪಡೆದು ಬರಬಹುದು. ಗ್ರಾಹಕರು ಕೇವಲ ಪ್ಯಾನ್ ಕಾರ್ಡ್ ನೀಡಿದರೆ ಸಾಕು. ನೋಟು ರದ್ದತಿಯ ನಂತರ ಇಲ್ಲಿ ಖಾತೆ ತೆರೆಯುವವರ ಸಂಖ್ಯೆಯಲ್ಲಿ ಶೇಕಡಾ ೧೫ರಷ್ಟು ಏರಿಕೆ ಕಂಡು ಬಂದಿದೆಯಂತೆ. ಈಗಲಾದರೂ ಇಷ್ಟು ಸುಲಭ ಅವಕಾಶವನ್ನು ಪಡೆದುಕೊಳ್ಳದೆ ಎಲ್ಲರ ಬಳಿಯಲ್ಲಿ ಬ್ಯಾಂಕ್ ಖಾತೆ ಎಲ್ಲಿರುತ್ತದೆ ಎಂದೋ, ಬ್ಯಾಂಕ್ ಗಳ ಉದ್ದನೆಯ ಕ್ಯೂ ಬಗ್ಗೆಯೋ, ಸರ್ಕಾರದ ನೀತಿ-ನಿಯಮಗಳ ಬಗ್ಗೆಯೋ ಗೊಣಗುವುದರಲ್ಲಿ ಅರ್ಥವಿಲ್ಲ. ನಮ್ಮ ದೈನಂದಿನ ಜೀವನದಲ್ಲಿ ಪ್ರತಿ ಹೊಸದು ಬಂದಾಗಲೂ ಕೆಲವು ಜನ ಅಷ್ಟು ಸುಲಭವಾಗಿ ಸ್ವೀಕರಿಸುವುದಿಲ್ಲ. ವಿರೋಧ ಇದ್ದೇ ಇರುತ್ತದೆ. ೧೯೪೭ರಲ್ಲಿ ಸ್ವಾತಂತ್ರ್ಯ ಬಂದಾಗಲೂ ಸಹ ‘ಬ್ರಿಟಿಷರೇ ನಮ್ಮ ದೇಶದಲ್ಲಿ ಇರಬೇಕಾಗಿತ್ತು ಎಂದು ಅನ್ನುವವರು ಇದ್ದರು. ಕೊನೆಯದಾಗಿ ಸದ್ಯದ ಸನ್ನಿವೇಶಕ್ಕೆ ಹೊಂದುವ ಕೆ ಎಸ್ ನರಸಿಂಹಸ್ವಾಮಿಯವರ ಕವಿತೆಯ ನಾಲ್ಕು ಸಾಲುಗಳು. ಕವಿತೆಯ ಹೆಸರು ಮರೆತಿದೆ. ಕವಿತೆಯ ಭಾವ ಹೀಗಿದೆ.
ಚಳಿಗಾಲ ಬಂದಾಗ ಅಯ್ಯೋ ಚಳಿಯೆಂದರು
ಬೇಸಿಗೆ ಬಂದಾಗ ಕೆಟ್ಟ ಬಿಸಿಲೆಂದೆರು
ಮಳೆ ಬಂದಾಗ ಬಿಡದಲ್ಲ ಈ ಶನಿಯೆಂದರು
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ