ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 5, 2016

2

ನನ್ನೆಸ್ರು ಕಂಪ್ಯೂಟರ್ರೇ. ಬೇಕಾದ್ರೆ ಈ ಏರೋಪ್ಲೇನನ್ ಕೇಳ್ರಿ!

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

780053446ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಕೂಗಳತೆ ದೂರದಲ್ಲಿರುವ ಹೊಸೂರು ಹಳ್ಳಿಯ ಯಾವುದೋ ಗಲ್ಲಿಯಲ್ಲಿ ಹೋಗಿ ಕಂಪ್ಯೂಟರ್ ಎಂದು ಜೋರಾಗಿ ಕೂಗುತ್ತೀರಿ. ಆಗ ಗಲ್ಲಿಯ ನಾಲ್ಕು ಮೂಲೆಯಿಂದ ನಾಲ್ಕು ಹುಡುಗರು ಓಡಿಬಂದು ನಿಮ್ಮ ಮುಂದೆ ನಿಲ್ಲುತ್ತಾರೆ. ಏನಯ್ಯ, ನೀವ್ಯಾಕ್ರಯ್ಯ ಬಂದ್ರಿ ಎಂದರೆ ನಮ್ಮ ಹೆಸರು ಕಂಪ್ಯೂಟರ್ ಅಂತಾ ಸಾರ್ ಎಂದು ನಿಮ್ಮನ್ನೇ ಗೊಂದಲಕ್ಕೆ ಬೀಳಿಸಿಬಿಡುತ್ತವೆ ಆ ಚಳ್ಳೆಪಿಳ್ಳೆಗಳು. ಹೋಗೋಗ್ರೋ, ಕಂಪ್ಯೂಟರ್ ಅನ್ನೋ ಹೆಸರನ್ನ ಮನುಷ್ಯರಿಗ್ಯಾರಾದ್ರೂ ಇಡತಾರಾ ಅಂತ ಅವರ ಜೊತೆ ವಾದಕ್ಕಿಳಿದಿರಾ, ಮುಗೀತು ಕತೆ! ಬೇಕಾದ್ರೆ ನನ್ ಅಣ್ಣ ಹೈಕೋರ್ಟನ್ನ ಕೇಳಿ ಅನ್ನಬಹುದೊಬ್ಬ. ನಮ್ ಕೇರಿಯ ಬಸ್ಸು, ಟ್ರೇನು, ಮಿಲಿಟ್ರಿ, ರಾಕೆಟ್ ಯಾರನ್ನು ಬೇಕಾದರೂ ಕೇಳ್ರಿ; ನನ್ ಹೆಸರು ಹೇಳತಾರೆ ಅನ್ನಬಹುದು ಇನ್ನೊಬ್ಬ. ನನ್ನ ಅಕ್ಕ ಹೇಮಮಾಲಿನೀನ ಕೇಳಿ, ಇಲ್ಲಾ ನನ್ನವ್ವನ ತಂಗೀ ಮಗ ರಾಜೇಶ್ ಖನ್ನನನ್ನ ಕೇಳಿ ಅನ್ನಬಹುದು ಮೂರನೆಯವನು. ನಮಗೆಲ್ಲ ವೋಟರ್ ಕಾರ್ಡ್ ಮಾಡಿಸುವ ಜಲ್ಲಿಯಮ್ಮ ಜಪಾನ್ ಅವರನ್ನೇ ಕೇಳಿ ಬನ್ನಿ ಅನ್ನಬಹುದು ನಾಲ್ಕನೆ ಹುಡುಗ. ಅಂದ ಹಾಗೆ, ನಾವು ಜಗತ್ತಲ್ಲಿ ನೋಡಬಹುದಾದ ದೋಸೆ, ಫೋನ್, ಕಾಫಿ, ಬಾಲ್, ಸೈಕಲ್, ಮೈಸೂರು ಪಾಕ್, ಏರೋಪ್ಲೇನ್, ಕ್ರಿಕೆಟ್ ಎಲ್ಲವೂ ಇಲ್ಲಿ ಮನುಷ್ಯರ ಹೆಸರುಗಳಾಗಿ ಅವತರಿಸಿವೆ. ಇಂಥದೊಂದು ವಿಚಿತ್ರ ಜಗತ್ತನ್ನು ನೋಡಬೇಕಾದರೆ ನಾವು ಹಕ್ಕಿಪಿಕ್ಕಿಗಳ ಹಾಡಿಗೇ ಹೋಗಿಬರಬೇಕು!

ಹಕ್ಕಿಪಿಕ್ಕಿ ಎನ್ನುವುದು ಅಲೆಮಾರಿ ಜನಾಂಗ. ಕುವೆಂಪು ಹೇಳಿದ ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು ಎಂಬ ಮಾತಿಗೆ ಇವರೇ ಸ್ಫೂರ್ತಿ ಇರಬೇಕು. ನಿಂತ ನೆಲೆಯೇ ಕನ್ನಡನಾಡು, ಕುಡಿವ ನೀರೇ ಕಾವೇರಿ ಎನ್ನುತ್ತ, ಭಗವದ್ಗೀತೆಯ ಪದ್ಮಪತ್ರಮಿವಾಂಭಸಿ ಎಂಬ ತತ್ತ್ವವನ್ನು ಅರೆದುಕುಡಿದಂತೆ ಬದುಕುತ್ತಿರುವ ವಿಚಿತ್ರ ಜನ ಹಕ್ಕಿಪಿಕ್ಕಿಗಳು. ಹುಟ್ಟಿದ ಊರು ಯಾವುದೋ, ಬೆಳೆದ ರಾಜ್ಯ ಯಾವುದೋ, ಕೊನೆ ಎಲ್ಲಿ ಬರೆದಿದೆಯೋ ದೇವರೇ ಬಲ್ಲ ಎಂಬಂತೆ ಇವರ ಜೀವನ. ಒಂದಾನೊಂದು ಕಾಲದಲ್ಲಿ ಇವರು ರಜಪೂತ ದೊರೆ ಮಹಾರಾಣಾ ಪ್ರತಾಪನ ಅಂತರಂಗದ ದೋಸ್ತರಾಗಿದ್ದರಂತೆ! ಅಕ್ಬರ ಮತ್ತು ಪ್ರತಾಪನ ನಡುವೆ ಯುದ್ಧವಾಗಿ ಅಕ್ಬರ ರಜಪೂತ ರಾಜ್ಯವನ್ನು ಗೆದ್ದ ಮೇಲೆ ನಿಲ್ಲಲು ನೆಲೆಯಿಲ್ಲದೆ ಜೀವ ಉಳಿಸಿಕೊಳ್ಳುವ ಸಲುವಾಗಿ ಈ ಜನರು ರಾಜಸ್ಥಾನ ಬಿಟ್ಟು ಚೆಲ್ಲಾಪಿಲ್ಲಿಯಾದರಂತೆ. ಕೆಲವರು ಈಗಿನ ಪಾಕಿಸ್ತಾನಕ್ಕೆ ಹೋದರು; ಇನ್ನುಳಿದವರು ಅತ್ತ ಮಧ್ಯಪ್ರದೇಶಕ್ಕೆ, ಇತ್ತ ಕೆಳಗಿನ ಮಹಾರಾಷ್ಟ್ರಕ್ಕೆ ಚದುರಿದರು. ಮಹಾರಾಷ್ಟ್ರಕ್ಕೆ ಬಂದವರು ಅಲ್ಲೂ ನೆಲೆ ನಿಲ್ಲದೆ ಕರ್ನಾಟಕದೊಳಗೆ ಸೇರಿಕೊಂಡರು. ಧಾರವಾಡ, ಬಿಜಾಪುರ, ಕಲ್ಬುರ್ಗಿ, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ಬೆಂಗಳೂರು ಎನ್ನುತ್ತ ಸಿಕ್ಕಸಿಕ್ಕಲ್ಲಿ ಡೇರೆ ಎಬ್ಬಿಸಿದರು. ಮೊದಮೊದಲಿಗೆ ಅನಿವಾರ್ಯಕರ್ಮವಾಗಿದ್ದ ಈ ಗುಳೆಜೀವನ ಬರಬರುತ್ತ ಅವರ ಜೀವನಶೈಲಿಯೇ ಆಯಿತು. ಹತ್ತೂರು ತಿರುಗಿದ ಭಾಗ್ಯಕ್ಕೋ ಏನೋ ನೀರು-ನೆಲೆ ಕೊಟ್ಟ ಊರುಗಳ ಭಾಷೆಗಳೆಲ್ಲವನ್ನೂ ತಮ್ಮೊಳಗೆ ಇಳಿಸಿಕೊಂಡರು. ಹತ್ತು-ಹನ್ನೆರಡು ಭಾಷೆ ಮಾತಾಡಿದರು. ಆ ಭಾಷೆಗಳ ಮಿಶ್ರಣದಿಂದ ಉದಿಸಿದ ಹೊಸದೊಂದು ಕಲಸುಮೇಲೋಗರದಂಥ ಭಾಷೆಯನ್ನು ತಮ್ಮ ಅಧಿಕೃತ ತಾಯ್ನುಡಿಯಾಗಿ ಉಳಿಸಿ ಬಳಸಿ ಬೆಳೆಸಿದರು. ಈ ಹಕ್ಕಿಪಿಕ್ಕಿಗಳ ಇಂದಿನ ಮಾತೃಭಾಷೆಯೂ ಹಾಗೆಯೇ ಉಳಿದಿದೆ. ರಜಪುತಾನಿಯಿಂದ ಹಿಡಿದು ಗೊಲ್ಲರ ಗೊಂಡರ ಭಾಷೆಯವರೆಗೆ ಎಲ್ಲವನ್ನೂ ಹಾದುಬಂದಿರುವ ಈ ಭಾಷೆ, ಅವರಲ್ಲದೆ ಹೊರಗಿನವರಿಗೆ ಸುತಾರಾಂ ಅರ್ಥವಾಗದು!

ಹಕ್ಕಿಪಿಕ್ಕಿಗಳು ರಜಪೂತರ ನಾಡು ಬಿಟ್ಟು ಹೊರಬಿದ್ದ ಮೇಲೆ ಅವರಿಗೊಂದು ನೆಲೆಯೂ ಉದ್ಯೋಗವೂ ತುರ್ತಾಗಿ ಬೇಕಾಗಿತ್ತಲ್ಲ? ಹಾಗೆ ಮೊದಲ ನೆಲೆ ಕಲ್ಪಿಸಿದ್ದು ಕಾಡುಗಳು. ಊರಿನ ಸಂಸ್ಕೃತಿಗೆ ಹೊರತಾಗಿದ್ದ ಇವರ ಆಚರಣೆ, ಸಂಪ್ರದಾಯಗಳಿಗೆ ಕಾಡೇ ರಕ್ಷಾಕವಚವಾಯಿತು. ಅಲ್ಲಿದ್ದುಕೊಂಡು ಹಕ್ಕಿ-ಪಿಕ್ಕಿಗಳನ್ನು ಬಿದಿರ ಪಂಜರ ಮಾಡಿ ಹಿಡಿದು ಊರ ಸಂತೆಗಳಲ್ಲಿ ಮಾರಿ ಹೊಟ್ಟೆ ಹೊರೆಯತೊಡಗಿದರು. ಇವರ ಹೆಂಗಸರು ಕಾಡಲ್ಲಿ ಸಿಗುವ ಹೂವುಗಳ ಮಾಲೆ ಹೆಣೆದು ನಾಲ್ಕು ರಸ್ತೆಗಳು ಸೇರುವ ಗಲ್ಲಿಗಳಲ್ಲಿ ನಿಂತು ಮಾರಿ ಕಾಸು ಸಂಪಾದಿಸಿದರು. ಕಾಲ ಬದಲಾದಂತೆ, ಬ್ರಿಟಿಷರ ಸರಕಾರ ಹೋಗಿ ನಮ್ಮದೇ ಪ್ರಜಾಪ್ರಭುತ್ವದಲ್ಲಿ ನೂರಾರು ಹೊಸ ಕಾನೂನುಗಳು ಬಂದಂತೆ ಬೇಟೆ, ಭಿಕ್ಷೆಗಳೆಲ್ಲ ನಿಷೇಧಗೊಂಡವು; ಹಕ್ಕಿಪಿಕ್ಕಿಯ ಜನರಿಗೆ ಹೊಸ ಉದ್ಯೋಗಗಳು ಅನಿವಾರ್ಯವಾದವು. ಆಗ ಅವರು ಪ್ಲಾಸ್ಟಿಕ್ ಹೂವು ಮಾರಿದರು. ಕಾಡಿನ ಜೇನು ತಂದು ಪೇಟೆಯವರಿಗೆ ಕೊಟ್ಟರು. ಸರಕಾರ ಕೊಟ್ಟ ಜಮೀನಲ್ಲಿ ಹಣ್ಣು-ತರಕಾರಿಗಳನ್ನೂ ಬೆಳೆದರು. ಆದರೂ ಹೊಟ್ಟೆಬಟ್ಟೆಗೆ ಬೇಕಾದಷ್ಟು ಸಂಪಾದಿಸಲು ಸಾಧ್ಯವಾಗದಾಗ ಕಳ್ಳತನ, ದರೋಡೆಯ ದಾರಿಗಳನ್ನೂ ಹಿಡಿದರು. ಪೊಲೀಸ್ ದಫ್ತರಗಳಲ್ಲಿ ಇವರ ಹೆಸರುಗಳು ಮೇಲಿಂದ ಮೇಲೆ ಕಾಣಿಸಿಕೊಳ್ಳತೊಡಗಿದಾಗ, ಅವರ ಕಣ್ತಪ್ಪಿಸಲು ತಮ್ಮ ಹೆಸರನ್ನು ಪೊಲೀಸ್, ಅಮಿತಾಬ್, ಶಾರುಖ್, ಗೂಗಲ್, ಕಾಂಗ್ರೆಸ್, ಡೆಲ್ಲಿ, ಟೈಗರ್, ಪಿಸ್ತೂಲ್, ಜಪಾನ್, ಡಾಕ್ಟರ್ ಎನ್ನುತ್ತ ಬದಲಿಸಿಕೊಂಡು ಕೋಡ್‍ವರ್ಡ್‍ಗಳಲ್ಲಿ ವ್ಯವಹರಿಸತೊಡಗಿದರು. ಆ ತಂತ್ರವೇ ಗಟ್ಟಿಯಾಗಿ ಮಕ್ಕಳಿಗೆ ಅಧಿಕೃತವಾಗಿ ಅಂಥವೇ ಹೆಸರಿಡುವ ಸಂಪ್ರದಾಯ ಹುಟ್ಟಿಕೊಂಡಿತು. ಹಕ್ಕಿಪಿಕ್ಕಿಗಳ ಹಾಡಿಗೆ ಹೋದ ಸರಕಾರೀ ಅಧಿಕಾರಿಗಳಿಗೆ ಅಲ್ಲಿನವರ ವೋಟರ್ ಕಾರ್ಡು, ಪಡಿತರ ಚೀಟಿ, ಆಧಾರ್ ಕಾರ್ಡ್ ನೋಡಿದರೆ ನಕ್ಕು ನಕ್ಕೇ ಹೃದಯಾಘಾತವಾಗಬಹುದು!

ಹಕ್ಕಿಪಿಕ್ಕಿಗಳ ಮದುವೆಶಾಸ್ತ್ರವೂ ವಿಚಿತ್ರವೇ. ನೂರಕ್ಕೆ ತೊಂಬತ್ತು ಮಂದಿ ಇಲ್ಲಿ ಇಬ್ಬರು-ಮೂವರು ಹೆಂಡಿರನ್ನು ಕಟ್ಟಿಕೊಂಡವರೇ. ಮೊದಲೆಲ್ಲ ಹುಡುಗನಿಗೆ 15, ಹುಡುಗಿಗೆ 12 ತುಂಬಿದರೆ ಸಾಕು ಮದುವೆ ಶಾಸ್ತ್ರ ಮುಗಿದುಹೋಗುತ್ತಿತ್ತು. ಈಗ ಅಂಥವಕ್ಕೆಲ್ಲ ಕಾನೂನಿನಲ್ಲಿ ಆಸ್ಪದವಿಲ್ಲವೆಂದು ಕಟ್ಟುನಿಟ್ಟು ಮಾಡಿದ ಮೇಲೆ ಹುಡುಗನಿಗೆ ಹದಿನೆಂಟಾಗುವವರೆಗೆ ಕಾಯುತ್ತಾರೆ. ಆತನಿಗೆ 18, ಆಕೆಗೆ 15 ತುಂಬಿದರೆ ಮದುವೆಗೆ ಕಾಲ ಕೂಡಿತೆಂದೇ ಅವರ ಲೆಕ್ಕ. ಹಿಂದೆ ಅರಣ್ಯವಾಸಿಗಳಾಗಿ ಬದುಕುತ್ತಿದ್ದಾಗ ಮದುವೆಪ್ರಾಯಕ್ಕೆ ಬಂದ ಹುಡುಗನ ಕಡೆಯವರು ಹುಡುಗಿ ಕಡೆಯವರಿಗೆ ವಧುದಕ್ಷಿಣೆಯಾಗಿ ನರಿ, ಕೀರ, ರಣಹದ್ದುಗಳನ್ನು ಕೊಡುತ್ತಿದ್ದರಂತೆ. ಕಾಲ ಬದಲಾಗಿ, ಜೊತೆಗೆ ನರಿ-ರಣಹದ್ದುಗಳ ಸಂಖ್ಯೆಯೂ ಕ್ಷೀಣವಾಗಿ, ಈಗ ವಧುದಕ್ಷಿಣೆಯಲ್ಲಿ ಆಧುನಿಕತೆ ಬಂದಿದೆ. ವಧುದಕ್ಷಿಣೆಯ ಪದ್ಧತಿ ಉಳಿದಿದ್ದರೂ ಅಕ್ಕಿ, ತುಪ್ಪ, ಬೆಲ್ಲದಂತಹ ದಿನಸಿ ವಸ್ತುಗಳು, ಕುರಿ, ಕೋಳಿಯಂತಹ ಪ್ರಾಣಿಪಕ್ಷಿಗಳು, ಹೆಣ್ಣಿನ ಕಡೆಯ ಹೆಂಗಸರಿಗೆ ಅರಿಷಿಣ ಕುಂಕುಮ, ರವಿಕೆ – ಸೀರೆ, ಬೆಟ್‍ಶೀಟ್ ಮುಂತಾದ ವಸ್ತುಗಳನ್ನು ಕೊಡುವ ಕ್ರಮಕ್ಕೆ ಬಡ್ತಿ ಪಡೆದಿದ್ದಾರೆ. ನಟ್ಟನಡುರಾತ್ರಿ 12 ಗಂಟೆಗೆ ತಾಳಿಮುಹೂರ್ತ ಇವರ ಮದುವೆಯ ವಿಶೇಷ! ಮದುವೆಯ ಕ್ರಮ ಸ್ವಲ್ಪ ಹಿಂದುಮುಂದಾದರೂ ಯಾರೂ ಬೇಸರಿಸಿಕೊಳ್ಳುವುದಿಲ್ಲ. ಅಸಲಿಗೆ ಅಂತಹ ಕ್ರಮ-ಪದ್ಧತಿಗಳಲ್ಲಿ ಹಿರಿಯ ನಾಲ್ಕೈದು ತಲೆಗಳಿಗೆ ಆಸಕ್ತಿ ಇರುತ್ತದೆಂಬುದು ಬಿಟ್ಟರೆ ಮಿಕ್ಕವರೆಲ್ಲ ಅವರವರದೇ ಲೋಕದಲ್ಲಿ ಮುಳುಗಿಬಿಟ್ಟಿರುತ್ತಾರೆ. ಕರ್ವಾಲೋದಲ್ಲಿ ಪ್ರಭಾಕರ ಮಾಡಿಸುವ ಮಂದಣ್ಣನ ಮದುವೆಯಂತೆ ಕ್ಯಾಮೆರ ಕ್ಲಿಕ್ ಅಂದಾಗ ಗುಂಪಾಗಿ ಕೂಡಿ ಕಿಸಕ್ಕೆಂದು ನಗುವ ಮುಖಗಳು ಆಮೇಲೆ ಅತ್ತಿತ್ತ ಚದುರಿ ತಂತಮ್ಮ ಜಗತ್ತಿನಲ್ಲಿ ಲೀನವಾಗುತ್ತವೆ. ಮದುವೆಯ ದಿನ ಮದ್ಯಸಮಾರಾಧನೆಯೇ ಬಹುಮುಖ್ಯ ಆಕರ್ಷಣೆ. ತಾಳಿ ಕಟ್ಟುವ ಕಾರ್ಯಕ್ರಮಕ್ಕೆ ಬಂದವರೆಲ್ಲ ಕಂಠಮಟ್ಟ ಕುಡಿದು ತಾಳ ತಪ್ಪಿ ತೂರಾಡಿದರೆ ಕಾರ್ಯಕ್ರಮ ಯಶಸ್ವಿ ಎಂದು ಅರ್ಥ!

ಹಕ್ಕಿಪಿಕ್ಕಿ ಸಮುದಾಯದ ಬಗ್ಗೆ ಯೋಚಿಸುತ್ತ ಹೋದರೆ ಹಲವಾರು ವಿಚಾರಗಳು ಮನಸ್ಸನ್ನು ತುಂಬಿಕೊಳ್ಳುತ್ತವೆ. ಆಧುನಿಕತೆ, ಅಭಿವೃದ್ಧಿ, ಪ್ರಗತಿ ಎಂದು ಏನೆಲ್ಲ ಹೇಳುತ್ತ ಮುಂದುವರಿಯುತ್ತಿರುವ ನಾವು ಈ ಜಗತ್ತಿನಲ್ಲಿ ಹಲವು ಕಾಲಘಟ್ಟಗಳಲ್ಲಿ ಸಹಜವಾಗಿ ಬದುಕಿಕೊಂಡಿದ್ದ ಎಷ್ಟೋ ಸಮುದಾಯಗಳ ಸ್ಥಿತ್ಯಂತರಗಳಿಗೆ ನೇರ ಕಾರಣವಾಗಿದ್ದೇವಲ್ಲ ಅನ್ನಿಸುತ್ತದೆ. ಹಕ್ಕಿಪಿಕ್ಕಿಗಳನ್ನೇ ನೋಡಿ, ಒಂದು ಕಾಲದಲ್ಲಿ ಯಾವುದೋ ರಾಜನ ಸೈನ್ಯದಲ್ಲಿ ಇವರು ಕೆಲಸ ಮಾಡುತ್ತಿದ್ದರು. ಕಾರಣಾಂತರಗಳಿಂದ ಆ ರಾಜ್ಯ ಬಿಟ್ಟು ಓಡಿಬಂದರು. ಓಡಿಬಂದವರಿಗೆ ಯಾವ ಹೊಸ ಊರಲ್ಲಿ ನೆಲೆ ನಿಲ್ಲುವುದೆಂಬ ದೊಡ್ಡ ಗೊಂದಲವಿದ್ದಂತೆ ಕಾಣುತ್ತದೆ. ಮತ್ತು ಈ ಗೊಂದಲ ಇಡೀ ಸಮುದಾಯಕ್ಕೆ ವರ್ಗಾವಣೆಯಾಗಿ, ಅವರೆಲ್ಲರ ಮನಸ್ಸುಗಳಲ್ಲೂ ಶಾಶ್ವತವಾಗಿ ಉಳಿದುಹೋದದ್ದು ವಿಚಿತ್ರ! ಯಾವ ಹೊಸ ಊರಿಗೆ ಕಾಲಿಟ್ಟರೂ ಇದು ನಮ್ಮದಲ್ಲ ಎಂಬ ಚಡಪಡಿಕೆ ತಮ್ಮನ್ನು ಆವರಿಸಿದ್ದಂತೆ ಅವರು ಎಲ್ಲೂ ನೆಲೆ ನಿಲ್ಲದೆ ಅಂತರಪಿಶಾಚಿಗಳಂತೆ ಅಲೆದರು. ಹೊಸ ಜಾಗಕ್ಕೆ ಹೋಗುವುದು, ಬಿಡಾರ ಕಟ್ಟುವುದು, ಒಂದೆರಡು ವಾರ ಅಲ್ಲಿದ್ದು ಸಿಕ್ಕಸಿಕ್ಕ ಕೆಲಸ ಮಾಡಿ ಹೊಟ್ಟೆ ಹೊರೆದುಕೊಂಡು ಮತ್ತೊಂದು ಸ್ಥಳಕ್ಕೆ ಗಂಟುಮೂಟೆ ಕಟ್ಟಿ ಗುಳೆ ಹೋಗುವುದು ಅವರ ನಿತ್ಯಕಾಯಕವಾಯಿತು. ಹೀಗೆ ಭೂಮಿಗೆ ಭದ್ರವಾಗಿ ಅಂಟಿ ಬೇರು ಬಿಡದ ಕಾರಣಕ್ಕೋ ಏನೋ ಅವರಲ್ಲಿ ಬದುಕಿನ ಬಗ್ಗೆ, ಭವಿಷ್ಯದ ಬಗ್ಗೆ ಒಂದು ಬಗೆಯ ಸಿನಿಕತನ ಕೂಡ ಬೆಳೆಯಿತು. ತಮ್ಮ ಮಕ್ಕಳನ್ನು ಓದಿಸಿ, ಅವರ ಬದುಕು ರೂಪಿಸುವ ವಿಚಾರದಲ್ಲೂ ಅವರಿಗಷ್ಟೇನೂ ಆಸಕ್ತಿ ಇದ್ದಂತೆ ಕಾಣುವುದಿಲ್ಲ. ಸಮಾಜದ ಜೊತೆಗಿದ್ದೂ ಸಮಾಜದಿಂದ ಕತ್ತರಿಸಿಕೊಂಡಂತೆ ಬದುಕುವ ವಿಕ್ಷಿಪ್ತತೆ ಹಕ್ಕಿಪಿಕ್ಕಿಗಳದ್ದಾಯಿತು. ಸರಕಾರ ಅವರನ್ನು ಸುಶಿಕ್ಷಿತರಾಗಿಸುವ ನೆಪದಲ್ಲಿ ಶಾಲೆಗಳನ್ನು ತೆರೆದಿದೆ. ಬೇಸಾಯದ ಭೂಮಿ ಕೊಟ್ಟು ಉಳುಮೆ ಮಾಡಿ ಎಂದಿದೆ. ಆದರೆ ನೂರಕ್ಕೆ ತೊಂಬತ್ತು ಜನ ಇನ್ನೂ ತಮ್ಮ ಕುಲಕಸುಬೆಂಬ ಅಭಿಮಾನದಿಂದ ಬಿದಿರ ಪಂಜರ ಹಿಡಿದು ಹಕ್ಕಿಗಳನ್ನು ಹಿಡಿಯುವ ಕೆಲಸ ಮಾಡುತ್ತಲೇ ಇದ್ದಾರೆ. ಅದು ನಮ್ಮ ಸಂಸ್ಕೃತಿ ಎಂಬ ಸಮುದಾಯ ಒಂದೆಡೆ; ಅವರನ್ನು ಸಮಾಜದ ಒಪ್ಪಿತ ಮೌಲ್ಯಗಳಿಗೆ ಒಗ್ಗಿಸುವ, ಬಗ್ಗಿಸುವ ಸರಕಾರದ ಪ್ರಯತ್ನ ಒಂದೆಡೆ! ಯಾರು ಸರಿ, ಯಾರು ತಪ್ಪು ಎಂದು ಪೂರ್ವಗ್ರಹಗಳಿಲ್ಲದೆ ಯೋಚಿಸುವುದು ನಿಜಕ್ಕೂ ಸವಾಲಿನ ಕೆಲಸ.

ಹಕ್ಕಿಪಿಕ್ಕಿಗಳಿಗೆ ಇಂದಿಗೂ ಸರಕಾರೀ ಸೌಲಭ್ಯಗಳಿಲ್ಲ. ರೇಷನ್ ಕಾರ್ಡ್, ವೋಟರ್ ಕಾರ್ಡ್ ಕೊಟ್ಟು ಅವರನ್ನು ಮತಗಳನ್ನಾಗಿ ಪರಿವರ್ತಿಸಿದರೂ ನಿಲ್ಲಲು ನೆಲೆ, ದುಡಿಯಲು ಉದ್ಯೋಗ ಕಲ್ಪಿಸುವ ವಿಷಯದಲ್ಲಿ ಮಾತ್ರ ರಾಜಕೀಯ ಪಕ್ಷಗಳು ಉದಾಸೀನವಾಗಿವೆ. ಹಾಗೆಂದು ಎಲ್ಲವನ್ನೂ ಸರಕಾರದ ತಲೆಗೆ ಕಟ್ಟಲೂ ಬರದು. ಅಲೆದಾಡುವ ಜೀವನ ಬಿಟ್ಟು ಒಂದೆಡೆ ನೆಲೆ ನಿಂತು ಗಟ್ಟಿ ಉದ್ಯೋಗ ಹಿಡಿದು ಬದುಕು ರೂಪಿಸಿಕೊಳ್ಳುವ ಪ್ರಬಲ ಇಚ್ಛೆ ಹಕ್ಕಿಪಿಕ್ಕಿಯ ಜನಕ್ಕೂ ಇಲ್ಲವೆನ್ನುವುದನ್ನು ಒಪ್ಪಲೇಬೇಕು. ಇವರಲ್ಲಿ ಇಂದಿಗೂ ಅನೇಕರು ದ್ವಿಪತ್ನಿತ್ವ ಅನುಸರಿಸುತ್ತ, ಮಕ್ಕಳು ಹೆಂಡತಿ ಎಂಬ ಕೊನೆಯಿಲ್ಲದ ಗುಂಡಿಯಲ್ಲಿ ಬಿದ್ದು ಒದ್ದಾಡುತ್ತ, ಸೌಲಭ್ಯ ಸಿಗಲಿಲ್ಲ ಎಂದು ಸರಕಾರವನ್ನು ಬಯ್ಯುತ್ತ, ಮಕ್ಕಳ ಶಿಕ್ಷಣದತ್ತ ದಿವ್ಯ ನಿರ್ಲಕ್ಷ್ಯ ತೋರುತ್ತ ಹೇಗೋ ಬದುಕು ಕಳೆಯುತ್ತಿದ್ದಾರೆ. “ಏನ್ ಮಾಡೋದು ಸರ! ಒಂದಾನೊಂದು ಕಾಲದಲ್ಲಿ ಅಲೆಮಾರಿಗಳಾಗಿ ಭೂಮಿಯೆಲ್ಲ ಅಳೆದಿವಿ. ಈಗ ಎಲ್ಲರ ಹಾಗೆ ನಾವೂ ಮನೆ-ಮಠ, ನೌಕ್ರಿ ಎಲ್ಲ ಮಾಡಿಕೊಂಡು ಬದುಕಬೇಕು ಅನಿಸ್ತತಿ. ಈ ಕಾರು, ಬಸ್ಸು, ಟ್ರೇನು ಹೆಸರುಗಳನ್ನ ಬಿಟ್ಟು ಏನೋ ಅರ್ಥವಾಗುವ ಹೆಸರು ಇಟ್ಟುಕೊಂಡು ನಿಮ್ಮ ಹಾಗೇ ಆಗಬೇಕು ಅನಿಸ್ತತಿ” ಎನ್ನುವಾಗ ಎಲಿಜಬೆತ್ ರಾಣಿಯ ಕಣ್ಣಲ್ಲಿ ಇದ್ದದ್ದು ನೋವೋ ವಿಷಾದವೋ ಸಿಟ್ಟೋ ಮಹತ್ವಾಕಾಂಕ್ಷೆಯೋ, ಅವೆಲ್ಲವನ್ನು ಮೀರಿದ ದೂರ ತೀರದ ಬಯಕೆಯೋ ಯಾರಿಗೆ ಗೊತ್ತು!

ಚಿತ್ರ ಕೃಪೆ : antekante.com

2 ಟಿಪ್ಪಣಿಗಳು Post a comment
  1. ಡಿಸೆ 6 2016

    ನಿಲುಮೆಯ ಗೆಳೆಯರೇ ಅತ್ಯುತ್ತಮ ಬರಹ, ಇಂತಹ ಇನ್ನಷ್ಟು ಜೀವನ ಪ್ರೀತಿಯ ನೋಟಗಳನ್ನು ನಿಲುಮೆಯಲ್ಲಿ ನಿರೀಕ್ಷಿಸುವೆ

    ಉತ್ತರ
  2. BNS
    ಡಿಸೆ 11 2016

    ವಿಶ್ವೇಶ್ವರ ಭಟ್ಟರು ಕನ್ನಡ ಪ್ರಭದ ಸಂಪಾದಕರಾಗಿದ್ದಾಗ ಕೆ ವಿ ಪ್ರಭಾಕರ ಎನ್ನುವ ಪತ್ರಕರ್ತರೊಬ್ಬರು ‘ಜಾತಿ-ಜ್ಯೋತಿ’ ಎನ್ನುವ ಹೆಸರಿನ ಅಂಕಣ ಬರೆಯುತ್ತಿದ್ದರು. ಅದರಲ್ಲಿ ಕರ್ನಾಟಕದಲ್ಲಿ ಇರಬಹುದಾದ ಹತ್ತು ಹಲವು ಜಾತಿಗಳ ಬಗ್ಗೆ ಚಿಕ್ಕ, ಚೊಕ್ಕ ಬರಹ ಇರುತ್ತಿತ್ತು. ಈಗ ಎಲ್ಲಿದ್ದಾರೋ ತಿಳಿಯದು. ರೋಹಿತ್ ಚಕ್ರತೀರ್ಥರ ಬಹುಮುಖ ಆಸಕ್ತಿಗೆ ಈ ಹಕ್ಕಿಪಿಕ್ಕಿಗಳೂ ಕಂಡಿದ್ದು (ಆಶ್ಚರ್ಯದ ವಿಷಯವೇನಲ್ಲ) ನೋಡಿ ನೆನಪಾಯಿತು. ಚೆನ್ನಾಗಿದೆ. ಅಭಿನಂದನೆಗಳು.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments