ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 6, 2016

2

ಸೈದ್ಧಾಂತಿಕ ಸಂಘರ್ಷದಡಿಯಲ್ಲಿ ಸಾಹಿತ್ಯಿಕ ಭಯೋತ್ಪಾದನೆ..?

‍ನಿಲುಮೆ ಮೂಲಕ

– ಸಂತೋಷಕುಮಾರ ಮೆಹೆಂದಳೆ.

hqdefault( ಇವತ್ತು ಅರ್ಜೆಂಟಿಗೆ ಬಿದ್ದು ಸ್ಟೇಟಸ್ ಅಪ್‍ಡೇಟ್ ಮಾಡುವವರು ಅದನ್ನು ಪೂರೈಸಿ ಎದ್ದು ಹೋಗಿಬಿಡುತ್ತಿದ್ದಾರೆ. ಕೆಲವರಿಗದು ತಮ್ಮ ಟಿ.ಆರ್.ಪಿ. ಯ ಮಾನದಂಡವೂ ಆಗಿರುವುದರಿಂದ ಲಿಂಗ, ಧರ್ಮ ಸೇರಿದಂತೆ ವರ್ಗಬೇಧದ ವ್ಯತ್ಯಾಸವಿಲ್ಲದೆ, ಕಾಮ, ಕರ್ಮಗಳ ಅಭ್ಯಂತರವಿಲ್ಲದೆ ನಾಲ್ಕು ಸಾಲು ಬರೆಯುತ್ತಾರೆ ಇಲ್ಲಾ ಜಗತ್ತಿನ ಯಾವ ಮೂಲೆಯದ್ದೋ ಶೇರು ಮಾಡಿ ಚು.. ಚು.. ಎಂದು ಹಲ್ಲಿ ಲೊಚಗುಟ್ಟಿದಂತೆ ತಾವೊಂದೆರಡು ಸಾಲು ಸೇರಿಸಿಬಿಡುತ್ತಾರೆ. ಆದರೆ ಅದರ ಕೆಳಗೆ ಮುಖ ಮೂತಿ, ಪರಿಚಯವೇ ಇಲ್ಲದವರೂ, ಜಾತಿ ಪಂಥದ ಹೊರತಾಗಿ ಪರಮ ದ್ವೇಷಿಗಳಾಗಿ ಬದಲಾಗಿ, ನಿರಂತರ ಸಂಘರ್ಷಗಳಿಗಿಳಿದು ಉಳಿದುಬಿಡುತ್ತಾರಲ್ಲ ಅದರ ಹೊಣೆಗಾರಿಕೆ ಯಾರದ್ದು…? )

ಪ್ರತಿಯೊಬ್ಬನಿಗೂ ಇವತ್ತು ಅವನ ಜಾತಿ ಮತ್ತು ಧರ್ಮದ ಪ್ರಿಯಾರಿಟಿಯೇ ಮುನ್ನೆಲೆಗೆ ಬಂದು ನಿಂತು ಅದರ ಮೂಲಕವೇ ತನ್ನ ಐಡೆಂಟಿಟಿ ಕಂಡುಕೊಳ್ಳುತ್ತಿರುವಾಗ, ಯಾವ ಒಂದು ಸಾರಸ್ವತ ಲೋಕದ ಸಂವೇದನೆಗಳಿಂದ, ಜಗತ್ತಿನ ಸಾಮಾಜಿಕ ನಡೆ ನುಡಿಗಳು ಸುಧಾರಿಸಿ ಬದಲಾವಣೆಯತ್ತ ಜರುಗುವ ಪ್ರಕ್ರಿಯೆಗೆ ಕಾರಣವಾಗುತ್ತಿತ್ತೋ ಅಂತಹ ಸಾಹಿತ್ಯಿಕ ಜಗುಲಿಯಲ್ಲೂ ಇವತ್ತು ಪೆನ್ನು ಹಿಡಿಯುವ (ಕೆಲವರು ನೇರವಾಗಿ ಕರ್ಸರ್/ಮೌಸ್ ಹಿಡಿಯುತ್ತಾರೆ ಇರಲಿ) ಮೊದಲೇ ಅವನ/ಳ ಭಾಗ ಎಡ/ಬಲ ಎಂದವರನ್ನು ನಿರ್ಧರಿಸಿಬಿಡುವ ಅಪಾಯಕಾರಿ ಕಾಲ ಘಟ್ಟದಲ್ಲಿ ಸಾಹಿತ್ಯದ ಸಾರಸ್ವತ ಲೋಕ ನಿಂತಿದೆ. ಇಂತಹ ಹೊತ್ತಿನಲ್ಲಿ ಅಮೋಘವಾಗಿ ಸಾಹಿತ್ಯದ ಮತ್ತು ಸಾಂಸ್ಕೃತಿಕ ರಂಗದ ಹಲವು ಸಮಕಾಲೀನ ಪಲ್ಲಟಗಳಿಗೆ ಕಾರಣವಾಗುತ್ತಿರುವ ಸಾಮಾಜಿಕ ಜಾಲತಾಣದಿಂದ ಕ್ರಿಯಾತ್ಮಕ ಕೆಲಸಗಳಿಗೆ ಬದಲಾಗಿ ಸೃಜನಶೀಲ ಲೋಕವನ್ನು ಹತ್ತಿಕ್ಕುವ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಲೋಕದ ನಿರ್ಭೀಡೆಯ ಅಭಿವ್ಯಕ್ತಿ ಸ್ವಾತಂತ್ರವನ್ನು ತುಳಿಯುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಅದಾಗದೆ ಹೋದಾಗ ಸಾರ್ವಜನಿಕವಾಗಿ ವೈಯಕ್ತಿಕ ದಾಳಿ ಮತ್ತು ನಿರಂತರ ನಿಂದನೆಗಳಿಂದ ತುಳಿಯಲಾಗುತ್ತಿದ್ದು, ಒಟ್ಟಾರೆ ಉತ್ಪನ್ನ ಬೆಳವಣಿಗೆಯ ಬದಲಿಗೆ ಖಾಸಗಿ ವಿಷಯ ಬಯಲಿಗಿಡುವ ಮೂಲಕ ಅಧೋಗತಿಯತ್ತ ಸಾಗುತ್ತಿದೆ. ಇಂತಹ ಹೊತ್ತಿನಲ್ಲಿ ಅವನಿಗೆ ಬೇಕಿದೆಯೋ ಇಲ್ಲವೋ, ಸ್ವತಃ ತನ್ನ ಪಾಡಿಗೆ ಬರೆದುಕೊಂಡಿದ್ದರೂ, ಇವತ್ತು ಲೇಖಕನೊಬ್ಬ, ಅಂಕಣಾಗಾರನೊಬ್ಬ ಬಲವೋ ಎಡವೋ ಎನ್ನುವ ನಿರ್ಧಾರಕ್ಕೆ, ತನ್ನ ಬರಹ ತನ್ನ ಸೈದ್ಧಾಂತಿಕ ಚಿಂತನೆಗಳು ಮತ್ತು ನಿಜಾಯಿತಿ ಯಾವ ಧೋರಣೆಯದ್ದು ಎಂದು ತನ್ನ ಬೌದ್ಧಿಕ ಚಿಂತನೆಯ ಮಾನದಂಡದಲ್ಲಿ ನಿರ್ಧಾರಕ್ಕೆ ಬರುವ ಮೊದಲೇ, ಓದುಗರೇ ಅವನ ಹಣೆಬರಹವನ್ನು ನಿರ್ಧರಿಸಿ ಅವನನ್ನು ಪಕ್ಕಕ್ಕೆ ಗುಡಿಸಿಯಾಗಿರುತ್ತದೆ ಅಥವಾ ಬಾಹ್ಯ ಒತ್ತಡ ಮತ್ತು ಸಾಮಾಜಿಕವಾಗಿ ಎದುರಿಸಲಾಗದ ಸಾಂಸ್ಕೃತಿಕ ಬೆದರಿಕೆಗಳಿಂದ ಅನಿವಾರ್ಯವಾಗಿ ತನ್ನ ಬರವಣಿಗೆಯಾಗಿ, ಬೌದ್ಧಿಕ ಮತ್ತು ಸೈದ್ಧಾಂತಿಕ ಆಲೋಚನೆಗಳನ್ನು (ಪ್ರಿನ್ಸಿಪಲ್ಡ್ ಥಾಟ್ಸ್) ಗಳನ್ನೂ ಬದಲಿಸಿಕೊಳ್ಳುವ ಒತ್ತಡಕ್ಕೊಳಗಾಗುತ್ತಿದ್ದಾನೆ. ಹೀಗಿದ್ದೂ ಕೆಲವೊಮ್ಮೆ ಸಾಹಿತ್ಯವನ್ನೇ ತ್ಯಜಿಸಬೇಕಾಗುತ್ತಿದೆ. ಇದೊಂದು ರೀತಿಯ ಸಾಹಿತ್ಯಿಕ ಭಯೋತ್ಪಾದನೆಯಲ್ಲದೆ ಬೇರೇನಲ್ಲ.

ಇದೇಕೆ ಹೀಗಾಗುತ್ತಿದೆಯೆಂದರೆ ಸಾಹಿತ್ಯಿಕ ಭಯೋತ್ಪಾದನೆಯನ್ನು ಸೈದ್ಧಾಂತಿಕ ಸಂಘರ್ಷದಡಿಯಲ್ಲಿ ಬೆಳೆಸಲಾಗುತ್ತಿದೆ. ಬರಹಗಾರನೊಬ್ಬ ಪಕ್ಷೇತರನಾಗಿಯೂ, ಜಾತ್ಯಾತೀತನಾಗಿಯೂ ಇರಬೇಕೆನ್ನುತ್ತದೆ ಸಾಹಿತ್ಯಿಕ ವಲಯ. ಆದರೆ ಅವನ ಬರವಣಿಗೆ, ಸಾಮಾಜಿಕ ಜಾಲತಾಣದಲ್ಲಿನ ಸಕ್ರೀಯತೆ ವ್ಯಕ್ತಪಡಿಸುವ ನಿರ್ಭೀಡೆಯ ಬರಹಗಳು ಒಂದು ಪಕ್ಷವನ್ನು ಜರೂರಾಗಿ ಭೀತಿಗೊಳಪಡಿಸುತ್ತವೆ. ಅದು ಯಾವ ಪಂಥವಾದರೂ ಸರಿ. ನೈಜವಾದುದನ್ನು ಇಬ್ಬರೂ ಒಪ್ಪಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಕಾರಣ, ಇವತ್ತು ಯಾವ ವ್ಯಕ್ತಿ ತನ್ನ ನಂಬಿಕೆ, ಧರ್ಮ, ಆಲೋಚನೆ, ಬದ್ಧತೆ, ಸಿದ್ಧಾಂತ ಮತ್ತು ಉಳಿದ ಸಾಮಾಜಿಕ ಗೊಂದಲಗಳಾಚೆಗೆ, ಸತ್ಯಾನ್ವೇಷಣೆಯ ತುದಿಯಲ್ಲಿ ನಿಂತು ಬರೆಯತೊಡಗುತ್ತಾನೊ ಅವು ಕಠೋರವಾಗಿರುತ್ತವೆ. ಹಾಗಾಗಿ ಅದರ ನೆರಳಿನಡಿ ಅನ್ನ ನೀರು ಕಂಡುಕೊಳ್ಳುತ್ತಿರುವ ಹುಸಿ ಬುದ್ಧಿಜೀವಿಗಳಿಗೆ ಆಂತರಿಕ ಭಯ ಉತ್ಪತ್ತಿಯಾಗುತ್ತಿದೆ. ಆ ಭಯ ಅವರ ಅಸ್ತಿತ್ವವನ್ನೆ ಅಲ್ಲಾಡಿಸುತ್ತದೆ. ಹೀಗಾಗಲು ಕಾರಣ ಹೆಚ್ಚಿನ ಬುದ್ಧಿಜೀವಿಗಳಿಗೆ ವೈಯಕ್ತಿಕವಾಗಿ ಸೈದ್ಧಾಂತಿಕ ಅಸ್ತಿತ್ವವೇ ಇಲ್ಲ. ಬುದ್ಧಿಜೀವಿಗಳ ಮೂಲವೇ ಬರೀ ಮೇಲು ಮಾತಿನ ಬಡಾಯಿ. ಓದಿಕೊಂಡಿರುವ ಹಣೆಬರಹವೂ ಅಷ್ಠಕ್ಕಷ್ಠೆ. ಹೆಚ್ಚಿನವರು ಪಕ್ಷ ಪ್ರೇರಿತ ಸಿದ್ಧಾಂತ, ಜಾತಿ ಮತ್ತು ಧರ್ಮಾದಾರಿತ ಸಾಹಿತ್ಯಿಕ ಚಿಂತನೆಗಳಿಗೆ ಆತುಕೊಂಡಿರುವುದರಿಂದ ತಮ್ಮ ಅಸ್ತಿತ್ವದ ಪ್ರಶ್ನೆ ಬಂದಾಗ ಸಂಘಟಿತ ಪಕ್ಷದ ಚಿಂತನೆಯನ್ನು ಕೆದಕುವುದರ ಜತೆಗೆ ತಮ್ಮ ನೆಲೆಯನ್ನು ಕಂಡುಕೊಳ್ಳಲು ಎದುರಾಳಿಯ ಮೇಲೆ ಖಾಸಗಿ ದಾಳಿಯ ಮೂಲಕ ನಿಯಂತ್ರಣ ಸಾಧಿಸುವುದು ಸ್ಪಷ್ಟವಾಗುತ್ತಿದೆ.

ಸ್ಪಷ್ಟ ಮತ್ತು ನಿರ್ಭೀತಿಯ ಬರಹಗಳು ಇವತ್ತಲ್ಲ ನಾಳೆ ಇವರ ಸಾಮಾಜಿಕ, ರಾಜಕೀಯ ಮತ್ತು ಬೌದ್ಧಿಕ, ವಿಚಾರವನ್ನೂ ಬದಲಿಸಿ, ಕೊನೆಗೆ ರಾಷ್ಟ್ರೀಯತೆಯ ಚಿಂತನೆಗೆ ಅಗತ್ಯದ ಸಾರ್ವತ್ರಿಕ ಬೆಂಬಲವನ್ನೂ ಒದಗಿಸಿಬಿಟ್ಟರೆ..? ಹಾಗೊಂದು ಆಲೋಚನೆ ಬಲವಾಗುತ್ತಿದ್ದಂತೆ ಸೈದ್ಧಾಂತಿಕ ಸಂಘರ್ಷದಡಿಯಲ್ಲಿ ಸಕ್ರೀಯರ ಮೇಲೆ ವೈಯಕ್ತಿಕ ದಾಳಿಗಳು ಆರಂಭವಾಗುತ್ತವೆ. ಯಾವ ರೀತಿಯ ಸಂಪರ್ಕ, ಸಂಬಂಧವೂ ಇಲ್ಲದವರನ್ನೂ ಕಾನೂನಿನ ಕುಣಿಕೆಗೆ ಸಿಕ್ಕಿಸಲು, ಮಾನನಷ್ಟ ಮೊಕದ್ದಮೆಗೆ ಈಡು ಮಾಡುವುದೋ ನಡೆಯುತ್ತದೆ. ಆದರೆ ಇದೇನೂ ಹೊಸದಲ್ಲ ಮತ್ತು ಯಾವತ್ತೂ ಕೊನೆಯಾಗಲಾರದು ಕೂಡಾ. ಆದರೆ ಒಂದು ಪ್ರಬುದ್ಧ ಸಮಾಜವನ್ನು ಬೆಳೆಸಬೇಕಾದ ತಂತಮ್ಮ ವರ್ಗ ಮತ್ತು ಸಾಮಾಜಿಕ ಪ್ರಾತಿನಿಧ್ಯವನ್ನು ಹೊಂದಬೇಕಾದ, ಸಮುದಾಯದ ಏಳ್ಗೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾದವರು ಇತರ ವೈಯಕ್ತಿಕ ಮತ್ತು ಸಂವಿಧಾನಾತ್ಮಕ ಸ್ವಾತಂತ್ಯವನ್ನು, ಬೆದರಿಕೆಯ ತಂತ್ರದ ಮೂಲಕ ಹತ್ತಿಕ್ಕಲಾರಂಭಿಸಿದರೆ ಉಂಟಾಗುವುದೇ ನಿಜವಾದ ಅನಾಹುತ. ಇಂತಹ ಕಿತ್ತಾಟಗಳ ಮಂಚೂಣಿಯ ನಾಯಕರು ತಮ್ಮ ಸ್ವಂತದ್ದನ್ನೆಲ್ಲ ಬೆಳೆಸಿಕೊಳ್ಳುತ್ತಾರೆಯೇ ವಿನಃ ಸಮುದಾಯದ ಅಭಿವೃದ್ಧಿ ಎಲ್ಲಿರುತ್ತದೋ ಅಲ್ಲೇ ಇರುತ್ತದೆ. ಯಾರೊಬ್ಬರಿಗೆ ಬೇಕಿದೆಯೋ ಇಲ್ಲವೋ ಇಂಥವರೆಲ್ಲಾ ಬಹಿರಂಗವಾಗೇ ಶತ್ರುಗಳಾಗಿ ಹೋಗುತ್ತಾರೆ. ಅಲ್ಲಿಗೆ ಒಂದು ಹಂತದವರೆಗೆ ಸಾಮಾಜಿಕವಾಗಿ ಪರಿಚಯದ ಕತೆ ಅತ್ಲಾಗಿರಲಿ, ಎನೇನೂ ಪರಿಚಯ ಇಲ್ಲದವರೂ ನೇರಾನೇರ ಶತ್ರುಗಳಾಗಿ ಬದಲಾಗುತ್ತಿದ್ದಾರೆ. (ಲೇಖನದ ಕೆಳಗೆ ಕಮೆಂಟಿಸಿಕೊಳ್ಳುವ ಸ್ನೇಹಿತರಿಬ್ಬರು ಇಪ್ಪತ್ತು ಸಾಲು ದಾಟುವ ಮೊದಲೇ ಅಪೂಟು ಶತ್ರುಗಳಾಗಿ ನಿಲ್ಲಬಲ್ಲ ಭಾಷೆಯ ಉದಾ.ಗಳು ನನ್ನ ಮುಂದಿದೆ. ಅವರಿಬ್ಬರೂ ಬಡಿದಾಡಿಕೊಂಡಿರುವ ಪರಿಯನ್ನು ನೋಡಿದರೆ ಇನ್ಯಾವತ್ತೂ ಈ ಜನ್ಮದಲ್ಲಿ ಸ್ನೇಹಿತರಾಚೆಗಿರಲಿ, ಮುಖವನ್ನೂ ನೋಡಲಿಕಿಲ್ಲ ಅನ್ನಿಸುತ್ತಿದೆ ನನಗೆ.)

ಹೀಗಿದ್ದಾಗ ಯಾವ ಲೇಖನಿಯ ಮೂಲಕ ರಾಜಕೀಯ ಶಕ್ತಿಗಳನ್ನು ಅಲ್ಲಾಡಿಸುವ ಪ್ರಭಾವಶಾಲಿ ಬರಹಗಳ ವ್ಯಕ್ತಿತ್ವವನ್ನು ಈ ನೆಲದಲ್ಲಿ ಬೆಳೆಯಲಾಗಿತ್ತೋ, ಇವತ್ತು, ಜಾಲತಾಣದಲ್ಲಿ ನಾಲ್ಕು ಸಾಲು ಗೀಚಿ ಧಿಮಂತ ನಾಯಕರಾಗುವ ಎಲ್ಲ ಲಕ್ಷಣ ಮತ್ತು ಅಂಥವರಿಗೆ ಬೆಂಬಲವನ್ನು ಜಾಲತಾಣಗಳು ಪೋಷಿಸುತ್ತಿವೆ. ದುರದೃಷ್ಟವೆಂದರೆ ಧನಾತ್ಮಕ ಪರಿಣಾಮಗಳ ಬೆಳವಣಿಗೆ ಶೇ.10 ದಾಟುವುದಿಲ್ಲವಾದರೆ ಸಮಾಜದಲ್ಲಿ ಸ್ಪಷ್ಟವಾಗಿ ಗೆರೆ ಕೊರೆದು ನಿಲ್ಲುವ ಸಂಘರ್ಷಗಳ ಪ್ರಮಾಣ ಶೇ.60ತ್ತಕ್ಕೂ ಹೆಚ್ಚು. ಇನ್ನುಳಿದದ್ದು ಕಾಳು ಹಾಕುವವರು, ಇನ್ನೊಬ್ಬರನ್ನು ಕಂಡು ಕರಬುವವರ, ತಮಗಾಗದ್ದುದಕ್ಕೆ ಇನ್ನೊಬ್ಬರನ್ನು ಯಾವ ಮುಲಾಜೂ ಇಲ್ಲದೆ ಹರಿಹಾಯುವ, ವೈಯಕ್ತಿಕ ದಾಳಿಗಿಳಿದು ಬರಹ ಮತ್ತು ಬರಹಗಾರ ಎರಡನ್ನೂ ಹತ್ತಿಕ್ಕಲು ನೋಡುವ, ಇದೆಲ್ಲದರ ಜತೆಗೆ ತನ್ನ ಮುಖೇಡಿತನ, ಮನದ ಸಂಕಟ ಬೇಗುದಿಗಳಾನ್ನೆಲ್ಲಾ ಹರಿ ಬಿಡುವ ಮೂಲಕ ತನ್ನ ಅವ್ಯಕ್ತ ಸೇಡು, ತುಮಲ, ಅಸಹಾಯಕತನ, ಸೆಡವು, ಸಮಾಜದೆಡೆಗಿನ ನಿರ್ಲಜ್ಯ ಸಿನಿಕತನ ಮತ್ತು ಪೂರ್ವಾಗ್ರಹ ಪೀಡಿತರ ಓಲಗವಾಗಿ ಇವೆಲ್ಲವನ್ನೂ ಹೊರಹಾಕುವ ಸಂತೆಯಾಗುತ್ತಿದೆಯೇ ಹೊರತಾಗಿ, ಎಲ್ಲೂ ರಚನಾತ್ಮಕ ಹೋರಾಟದ ಕೆಲಸದ ಮುಖಗಳೇ ಕಾಣಿಸುತ್ತಿಲ್ಲ. ಇದ್ದವರನ್ನೂ ಕೊಂಕು ಹುಡುಕಿ ಹರಾಜಿಗಿಡುವ ಪೀಡಕರ ಕೊಂಪೆಯಾಗುತ್ತಿದೆ ಸಾಮಾಜಿಕ ಜಾಲತಾಣ.

ವ್ಯವಸ್ಥಿತ ಮತ್ತು ರಚನಾತ್ಮಕ ತಾಣವಾಗಿ ಸಮಾಜ ಕಟ್ಟುವ ಕ್ರಿಯೆಯಲ್ಲಿ ತೊಡಗಬೇಕಿದ್ದ ಮನಸ್ಸುಗಳು ಬರೀ ಕಾಲೆಳೆಯುವ ಮತ್ತು ಕಂದರ ಹೆಚ್ಚಿಸುವ ಕಾಯಕಕ್ಕೆ ತೊಡಗಿರುವುದೇ ಎದ್ದು ಕಾಣುತ್ತಿದೆ. ಪ್ರಸಕ್ತ ವಿದ್ಯಮಾನದಲ್ಲಿ ತೀರ ಹಿಂದೆ ಹೋಗುವುದು ಬೇಡ. ಈ ದೇಶದ ಪ್ರಧಾನಿ ನೋಟು ಬ್ಯಾನ್ ಮಾಡಿ ಕಾಳ ಧನಿಕರ ಬುಡಕ್ಕೆ ನೀರು ಬಿಟ್ಟರು ನೋಡಿ. ಮೊದಲೆರಡ್ಮೂರು ದಿನ ಕೆಲವರಿಗೆ ಏನು ಎತ್ತ ಯಾಕೆ ಹೇಗೆ ಏನೆಂದು ಪ್ರತಿಕ್ರಿಯಿಸಬೇಕು..? ಇದರ ತಾಂತ್ರಿಕ ಅಂಶಗಳೇನು..? ಹೀಗೆ ಆದರೆ ಇದರ ಫಲಿತಾಂಶ ಏನಾಗುತ್ತದೆ..? ಇದರಿಂದ ದೇಶದ ಆರ್ಥಿಕತೆಗೆ ಏನಾಗುತ್ತದೋ ಬಿಡುತ್ತದೋ ಆತ್ತ ಇರಲಿ, ನಾನು ಮೋದಿಯನ್ನು ಇಷ್ಟ ಪಡದಿರುವುದಿರಿಂದ ಹೇಗೆ ಇದರ ಋಣಾತ್ಮಕ ಅಂಶಗಳ ಗಮನವನ್ನು ಜನ ಸಾಮಾನ್ಯರ ಗಮನಕ್ಕೆ ತರಬಹುದು ಎಂದು ತಲೆಕೆಡಿಸಿಕೊಂಡು ಅರ್ಥವಿಲ್ಲದ ಪೋಸ್ಟ್ ಗಳನ್ನು ಹಾಕಿಕೊಳ್ಳುತ್ತಾ ಸಾಮಾನ್ಯ ಜನರನ್ನು ಗೊಂದಲಕ್ಕೆ ದೂಡಿದರು.

ಇವರಷ್ಟೆ ಯಾಕೆ.. ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಅತ್ಯಧಿಕ ಕಪ್ಪು ಹಣದ ಕುಳಗಳೂ ಮೊದಲ ದಿನ ಅಕ್ಷರಶಃ ತೆಪ್ಪಗೆ ಯೋಚಿಸುತ್ತಿದ್ದರೆ ವಿನಃ ಯಾವ ಮಾತೂ ಆಡಲೇ ಇಲ್ಲ. ಜತೆಗೆ ಅವರಿಗೆಲ್ಲಾ ಒಳಗೊಳಗೇ ಈ ಕಾನೂನಿಂದ ಹೊರಬರುವ, ಹಣ ಬದಲಿಸಿಕೊಳ್ಳುವ ತಮ್ಮ ಕೆಲಸಕ್ಕೆ ಯಾರಾದರೊಬ್ಬ, ಯಾವುದಾದರೂ ದಾರಿ ಕಂಡು ಹಿಡಿದೇ ಹಿಡಿಯುತ್ತಾರೆ ಎಂದೆನ್ನಿಸಿದ್ದ, ಆದಮ್ಯ ವಿಶ್ವಾಸ ಕೂಡಾ ಮೊದಲ 24 ಗಂಟೆ ಕಳೆಯುತ್ತಿದ್ದಂತೆ ಕಡಿಮೆಯಾಗತೊಡಗಿತ್ತು. ಆದರೆ ಮೂರನೆಯ ದಿನದಿಂದ ಯಾವುದನ್ನು ಬೆಂಬಲಿಸಬೇಕು ಬಾರದು ಎನ್ನುವ ಕನಿಷ್ಟ ನಿಜಾಯಿತಿಯನ್ನೂ ಉಳಿಸಿಕೊಳ್ಳದೆ ಜಾಲತಾಣದಲ್ಲಿ ಮೋದಿಯವರ ವಿರುದ್ಧ ಭಾರಿ ಋಣಾತ್ಮಕ ಬರಹಗಳು ಬರತೊಡಗಿದವು ನೋಡಿ. ಇಂತಹ ಜಾಲ ತಾಣದ ಪ್ರತಿಕ್ರಿಯೆಗಳಲ್ಲಿ ಅವರೊಬ್ಬ ಭಾರತದ ಪ್ರಧಾನಿ ಮತ್ತು ರಾಜತಾಂತ್ರಿಕ ಮುತ್ಸದ್ದಿ ಎನ್ನುವುದರ ಹೊರತಾಗಿ ಅವರನ್ನು ವೈಯಕ್ತಿಕವಾಗಿ ಅವರ ಯಶಸ್ಸಿಗೆ ಕರುಬುತ್ತಾ ಪ್ರತಿಕ್ರಿಯಿಸುವ ವರಸೆ ಸ್ಪಷ್ಟವಾಗಿ ಕಾಣಿಸುತ್ತಿರುತ್ತದೆ ಮತ್ತು ಸೈದ್ಧಾಂತಿಕ ಸಂಘರ್ಷಕ್ಕೆ ಎಡೆ ಮಾಡಿಕೊಡುವುದೇ ಇಂತಹ ಬೇಡದ ಪದಗಳ ಬಳಕೆ, ವೈಯಕ್ತಿಕ ದ್ವೇಷ ಮತ್ತು ಯಶಸ್ಸಿನ ಅಲೆಯ ಮೇಲೆ ಇರುವ ವ್ಯಕ್ತಿಯೆಡೆಗಿನ ವಿನಾಕಾರಣ ಒಳ ಉರಿಗಳು. ಯಾವ ಮಟ್ಟದಲ್ಲಿ ಕೀಳು ಪದಗಳನ್ನು ಮಾನ್ಯ ಪ್ರಧಾನಿಯವರ ವಿರುದ್ಧ ಬಳಸಲಾಗಿದೆ ಎಂದರೆ, ತೀರ ಬೀದಿಬದಿಯ ಬಡಿದಾಟದಲ್ಲಿ ವಿನಿಮಯವಾಗುವಂತಹದ್ದು. ಅಸಲಿಗೆ ಹಾಗೆ ಬರೆದುಕೊಳ್ಳುವವರಿಗೆ ಪ್ರಧಾನಿಯ ಬಗ್ಗೆಯಾಗಲಿ, ಅವರ ನಿಲುವಿನ ಬಗ್ಗೆಯಾಗಲಿ ಯಾವ ಗಟ್ಟಿ ಸಕಾರಣವೂ ಇಲ್ಲ. ಕೇವಲ ಸೈದ್ಧಾಂತಿಕ ದ್ವೇಷ ಮತ್ತು ಭವಿಷ್ಯತ್ತಿನಲ್ಲಿ ನಾಯಕನೊಬ್ಬ ಬೆಳೆದು ಅವನಿಗೆ ಸಾಂಸ್ಕೃತಿಕ ಬೆಂಬಲವೂ ಗಟ್ಟಿಗೊಳ್ಳತೊಡಗಿದರೆ ತಮ್ಮ ಬುಡಕ್ಕೆ ಬಿಸಿ ನೀರು ಬರುತ್ತದೆ ಮತ್ತು ಇಲ್ಲಿಯವರೆಗೆ ತಾವು ಕಾಯ್ದುಕೊಂಡಿದ್ದ ಬುದ್ಧಿಜೀವಿಯ ಪಟ್ಟ ಅಲ್ಲಾಡುತ್ತದಲ್ಲ ಎಂಬ ಭಯಕ್ಕೆ. ಆ ಬೆದರಿಕೆ ಮತ್ತು ಅಸತ್ವ ಜೀವನ ಈ ಕೆಲಸಕ್ಕೆಳೆಯತೊಡಗುತ್ತದೆ.

ಅಷ್ಟಕ್ಕೂ ಜಾಲತಾಣಗಳು ಮಾಹಿತಿಗಾಗಿ ಮತ್ತು ಸಮಾಜದ ಸ್ವಾಸ್ಥ್ಯವನ್ನು ಎತ್ತಿ ಹಿಡಿಯುವ ನಾಲ್ಕು ಜನರಿಗೆ ಉಪಯೋಗವಾಗುವ ಮನರಂಜನ ಪೂರಿತ ತಾಣವಾಗುವ ಬದಲಾಗಿ, ಯಾಕೆ ನೋಡುತ್ತಿದ್ದೇವೆ ಎನ್ನಿಸುವ ಹಂತಕ್ಕೆ ತಂದು ನಿಲ್ಲಿಸಲೇ ಕೆಲವರು ಕಾಯ್ದು ನಿಂತಿದ್ದಾರಾ ಎನ್ನಿಸುತ್ತದೆ. ತೀರ ಅಮಾನವೀಯ ಚಿತ್ರಗಳನ್ನು ಶೇರ್ ಮಾಡಿ ” ನೋಡಿ ದೇಶದ ಮೂಲೆಯಲ್ಲಿ ಹೀಗೆ ಆಗಿದೆ ಇದು ಅಸಹಿಷ್ಣುತೆ ಅಲ್ಲವಾ..? ” ಎನ್ನುತ್ತಾ ಕಾಲ್ಕೆರೆದು ನಿಲುತ್ತಾ, ಅದರಲ್ಲೂ ಅಂತಹದನ್ನು ಹೆಣ್ಣೊಬ್ಬಳು ವಾಲ್‍ನಲ್ಲಿ ಹಂಚುವ ಪ್ರಕ್ರಿಯೆಗಿಳಿದರೆ ಸಹಜವಾಗೇ ಆಕೆಯ ಬೆಂಬಲಕ್ಕೆಂದೆ ಇರುವ ಪಡೆ ಆಕೆಯ ಕಿತ್ತು ಹೋದ ಕಿರೀಟಕ್ಕೆ ಗರಿ ತೊಡಿಸತೊಡಗಿರುತ್ತಾರೆ. ಮತ್ತವರಿಗೆ ಅದೇ ಕೆಲಸ. ಆಕೆ ತಮ್ಮ ವೈಯಕ್ತಿಕ ವೈಮನಸ್ಸಿನ ಕಾರಣವಾದ ಮತ್ತು ತಮಗೆ ಒಲ್ಲದ ಮೋದಿಯಂತಹ ವ್ಯಕ್ತಿಯನ್ನು ನೇರವಾಗಿ ಯಾವ ಮುಲಾಜಿಲ್ಲದೆ ಹರಾಜಿಗೆ ತರಲು ಯತ್ನಿಸುತ್ತಿದ್ದಾಳೆ. ತಮಗಿಲ್ಲದ ಮೀಟರು ಆಕೆಯದ್ದು ಮತ್ತು ಆಕೆ ಹೆಣ್ಣು ಎನ್ನುವ ಕಾರಣಕ್ಕೆ ಒತ್ತಾಸೆ ನೀಡುವ ಅಭಿಲಾಶೆ ಇನ್ನಷ್ಟು ಪುಷ್ಟಿ ನೀಡಿ ಪ್ರದರ್ಶನವನ್ನು ಬೆಂಬಲಿಸಲು ಆರಂಭಿಸುತ್ತಾರೆ.

ಸ್ಥೂಲವಾಗಿ ನೋಡಿದರೆ ಹಾಗೆ ಮಾಡುವ ಮೂಲಕ ತಮ್ಮೆಲ್ಲ ವೈಯಕ್ತಿಕ ದಾರಿದ್ರ್ಯತನವನ್ನು ಹೊರ ಹಾಕಿಕೊಳ್ಳುತ್ತಿರುತ್ತಾರೆಯೇ ವಿನಃ ಯಾವ ರೀತಿಯ ಪಲ್ಲಟಗಳಿಗೂ ಕಾರಣವಾಗುವುದು ಸಾಧ್ಯವೇ ಇಲ್ಲ. ಆದರೆ ಒಂದು ಸಮಾಜದ ಸ್ವಾಸ್ಥ್ಯವನ್ನೂ ಅದರ ಉಸಿರನ್ನು ಹಾಳುಗೆಡುವುತ್ತಿದ್ದೇವೆ ಎನ್ನುವ ಕನಿಷ್ಟ ಸ್ವಂತಿಕೆ ಇರಬೇಕೆನ್ನುವುದು ಪ್ರಜ್ಞಾವಂತರ ಲಕ್ಷಣ. ಆದರೆ ಎಲ್ಲಾ ಬಿಟ್ಟು ನಿಲ್ಲುತ್ತೇನೆ ಎನ್ನುವವರಿಗೆ ಇದನ್ನೆಲ್ಲ ತಿಳಿಯಪಡಿಸುವುದಾದರೂ ಹೇಗೆ..?

2 ಟಿಪ್ಪಣಿಗಳು Post a comment
 1. sudarshana gururajarao
  ಡಿಸೆ 7 2016

  ಇತಿಹಾಸ ಜೊಳ್ಳುಗಳನ್ನು ಬೇರ್ಪಡಿಸಿ ತೂರದೇ ಇರುವುದಿಲ್ಲ. ಇವರುಗಳೂ ಅಷ್ಟೇ, ಕಾಲ ಕ್ರಮೇಣ ಶೂನ್ಯಕ್ಕೆ ಗಾಳಿಗೆ ಸಿಕ್ಕಿ ತೂರಿಹೋಗುವ ಜೊಳ್ಳುಕಾಳುಗಳೇ.
  ೬೦ ವರ್ಷ ವಿವಿಧ ಕೃಪಾಕಟಾಕ್ಷಗಳಲ್ಲಿ ಬದುಕಿದವಿವರು ಕೇವಲ ೨ ವರ್ಷಗಳಲ್ಲಿ ಬೆತ್ತಲಾಗಿ ಬೀದಿಗೆ ಬಿದ್ದದ್ದು ನೋಡಿದರೆ …..

  ಉತ್ತರ
  • ಶೆಟ್ಟಿನಾಗ ಶೇ.
   ಡಿಸೆ 9 2016

   ಪ್ರಗತಿಪರರನ್ನು ಸೈದ್ಧಾಂತಿಕ ತಾತ್ವಿಕ ನೆಲೆಗಳಲ್ಲಿ ಎದುರಿಸಲಾಗದ ಹಿಂದುತ್ವವಾದಿಗಳು ಅವರ ಮೇಲೆ ಮಿಥ್ಯಾರೋಪಗಳನ್ನು ಮಾಡಿ ನಿಂದಿಸುತ್ತಿದ್ದಾರೆ. ಸಹಸ್ರಮಾನಗಳ ಶೋಷಣೆಯ ಸಂಕೋಲೆಗಳನ್ನು ಅರವತ್ತು ವರ್ಷಗಳಲ್ಲಿ ಪೂರ್ಣವಾಗಿ ಕಡಿದೆಸೆಯಲು ಸಾಧ್ಯವೇ? ಪ್ರಗತಿಪರರ ಪ್ರಯತ್ನದಿಂದ ಸಾಮಾಜಿಕ ನ್ಯಾಯದ ವಿಷಯದಲ್ಲಿ ಎಷ್ಟೋ ಸಾಧನೆಯಾಗಿದೆ – ಇಲ್ಲವಾದರೆ ಇಂದೂ ಶೋಷಿತರು ವೈದಿಕರ ಸಮಾರಂಭಗಳ ಬ್ರಾಹ್ಮಣರ ಎಂಜಲೆಲೆ ತೆಗೆದು ಚೊಕ್ಕ ಮಾಡುವ ಕಾಯಕವನ್ನು ಮುಂದುವರೆಸುವ ಪರಿಸ್ಥಿತಿ ಇರುತ್ತಿತ್ತು. ಪ್ರಗತಿಪರರ ಹೋರಾಟದಿಂದಲೇ ಕುಕ್ಕೆ ಮಠದ ಎಂಜಲೆಲೆ ಹೊರಳಾಟ ಕ್ರೀಡೆ ನಿಂತಿರುವುದು, ಶಬರಿಮಲೆಯಲ್ಲಿ ಸ್ತ್ರೀಯರಿಗೆ ಪ್ರವೇಶ ಸಿಕ್ಕಿರುವುದು.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments