ಚೇಂಜ್‍ಗೆ ಗಂಡ, ಎಕ್ಸ್’ಚೇಂಜ್‍ಗೆ ಪರಗಂಡ..! ( ಹಾಸ್ಯ )
– ತುರುವೇಕೆರೆ ಪ್ರಸಾದ್
ಬ್ರಹ್ಮಚಾರಿಯಾದ ಮೋದಿಗೆ ನಮ್ಮಂತಹ ಸದ್ (ಸತ್?) ಗೃಹಸ್ಥರ ಕಷ್ಟ ಹೇಗೆ ಗೊತ್ತಿರಲಿಕ್ಕೆ ಸಾಧ್ಯ ? ಎಂದು ನಾವು ಹಲವು ಬಾರಿ ಬಹಳ ಬೇಸತ್ತುಕೊಂಡಿದ್ದೆವು. ದೊಡ್ಡ ದೇಶದ ಪ್ರಧಾನಿ ಆಗುವುದು ದೊಡ್ಡದಲ್ಲ, ಚಿಕ್ಕ ಸಂಸಾರದಲ್ಲಿ ನಿಧಾನಿಯಾಗಿ ಎಲ್ಲವನ್ನೂ ನಿಭಾಯಿಸುವುದೇ ಕಷ್ಟ ಎಂದು ಮೊದಲಿನಿಂದಲೂ ನಮಗೆ ಅನುಭವವೇದ್ಯವಾದ ಅರಿವು ಮೂಡಿತ್ತು. ಅಂತದ್ದೊಂದು ಅರಿವಿಲ್ಲದೆ ಮೋದಿ ಎಲ್ಲಂದರಲ್ಲಿ ಓಡಾಡಿಕೊಂಡು, ದೇಶ ಸುತ್ತಿಕೊಂಡು ನೆಮ್ಮದಿಯಾಗಿದ್ದಾರಲ್ಲ ಎಂದು ನಮಗೆ ಸಿಕ್ಕಾಪಟ್ಟೆ ಹೊಟ್ಟೆ ಉರಿಯಿತ್ತು. ನಮ್ಮಂತಹ ಗೃಹಸ್ಥರಿಗೆ ಯಾವುದೇ ಪ್ಯಾಕೇಜ್ ಘೋಷಿಸಿರಲಿಲ್ಲ ಎಂದು ಮುಂದಿನ ಬಾರಿ ಅವರಿಗೆ ಓಟ್ ಮಾಡುವುದೇ ಬೇಡ ಎಂದು ನಿರ್ಧರಿಸಿದ್ದೆವು. ಈಗ ಅವರು ಏಕಾಏಕಿ 1000, 500ರ ನೋಟುಗಳನ್ನು ಬ್ಯಾನು ಮಾಡಿ ನಮಗೆ ದೊಡ್ಡ ಉಪಕಾರ ಮಾಡಿದ್ದಾರೆ. ಮಡದಿ ಇದ್ದಿದ್ದರೆ ಇಷ್ಟೆಲ್ಲಾ ಗುಟ್ಟು ಕಾಯ್ದಿಟ್ಟುಕೊಂಡು ಮೋದಿ ದೊಡ್ಡ ದೊಡ್ಡ ನೋಟುಗಳನ್ನು ಬ್ಯಾನ್ ಮಾಡಲು ಆಗುತ್ತಿರಲಿಲ್ಲ. ಹೇಗೋ ದೊಡ್ಡ ದೊಡ್ಡ ನೋಟುಗಳನ್ನು ಬ್ಯಾನ್ ಮಾಡಿ ಕೋಟ್ಯಂತರ ಗೃಹಸ್ಥರನ್ನು ಸಂಕಟದಿಂದ ಪಾರು ಮಾಡಿದ್ದಾರೆ. ನಮ್ಮಲ್ಲೂ ಹೊಸ ಆಸೆ ಭರವಸೆ ಮೂಡಿಸಿದ್ದಾರೆ. ಕೋಟ್ಯಂತರ ಪತ್ನೀ ಶೋಷಿತ ಗಂಡಸರ ಪರವಾಗಿ ಮೋದಿಗೆ ಕೋಟಿಕೋಟಿ ವಂದನೆಗಳು..
ರೂ.1000 ಮತ್ತು 500 ರೂ ನೋಟುಗಳನ್ನು ಬ್ಯಾನ್ ಮಾಡಿದ್ದರಿಂದ ಮನೆಯ ‘ಗಂಡ’ ಎನ್ನುವ ಪ್ರಾಣಿಗಳಿಗೆ ಹೇಗೆ ಉಪಕಾರವಾಯಿತು ಎಂಬ ಜಿಜ್ಞಾಸೆ ನಿಮಗಿರಬಹುದು.. ನಮಗೆ ನಿಜಕ್ಕೂ ಉಪಕಾರವಾಗಿದೆ. ‘ಹೇಗೆ..?’ ಎಂದು ಹೇಳುತ್ತೇನೆ ಕೇಳಿ. ನಾವು ಒಂದು ಸಾವಿರ, ಐನೂರರ ನೋಟನ್ನು ಆಫೀಸಲ್ಲಿ ಅಥವಾ ಬ್ಯಾಂಕ್‍ಗಳಲ್ಲಿ ಏಣಿಸಿಕೊಂಡಾಗಷ್ಟೇ ಅದರ ದಿವ್ಯಸ್ಪರ್ಶ ಪಡೆದು ಪುಳಕಿತರಾಗುತ್ತಿದ್ದುದು. ಆ ನಂತರ ಅಷ್ಟೂ ನೋಟುಗಳು ಮನೆಗೆ ಬಂದ ಕೂಡಲೇ ಮನೆಯ ಶ್ರೀಮತಿಯ ಕೈ ಸೇರುತ್ತಿದ್ದವು. ಹಾಗೆನ್ನುವುದಕ್ಕಿಂತ ಮನೆಯ ಯಜಮಾನಿಯೇ ಮುತುವರ್ಜಿ ವಹಿಸಿ ಎಲ್ಲಾ ಸಾವಿರ, ಐನೂರರ ನೋಟಗಳನ್ನು ಕಿತ್ತುಕೊಂಡು ಜೋಪಾನ ಮಾಡುತ್ತಿದ್ದಳು. ನಮಗೆ ಸಿಗುತ್ತಿದ್ದುದು ಮಾಮೂಲಿ ನೂರು ಐವತ್ತರ ಪುಡಿ ಕಾಸೇ! ಪ್ರತಿ ದಿವಸ ಅದಕ್ಕಾಗಿ ಕೈ ಒಡ್ಡಿ ಕಾಡಿ ಬೇಡಬೇಕಿತ್ತು. ಅದರಲ್ಲೇ ದಿನದ ಸಿಗರೇಟ್, ಕಾಫಿ ಖರ್ಚು, ಸೇವಿಂಗ್ಸ್, ಆ ಸೇವಿಂಗ್ಸ್’ನಲ್ಲಿ ವೀಕೆಂಡ್ ಪಾರ್ಟಿ, ಚಾರಣ ಇತ್ಯಾದಿ ಇತ್ಯಾದಿ ನಡೆಸಬೇಕಿತ್ತು. ತೀರಾ ಬೇಕಾದಾಗ ಸ್ನೇಹಿತರಿಂದ ಕೈ ಸಾಲ ಮಾಡುವ ಹಣೆಬರಹ ಇದ್ದೇ ಇತ್ತು. ಇದು ಮಾಮೂಲಿ ಕರ್ಮ ಆಗಿದ್ದರಿಂದ ಮತ್ತು ವರ್ಷಗಟ್ಟಲೆ ಇದಕ್ಕೆ ಒಗ್ಗಿ ಹೋಗಿದ್ದರಿಂದ, ಮನೆಯ ಹೆಂಡತಿಯರು ನಾವು ಚಿಲ್ಲರೆ ಖರ್ಚು ಮಾಡಲೇ ಲಾಯಕ್ಕು ಎಂದು ತೀರ್ಮಾನಿಸಿ ಚಿಲ್ಲರೆ ಗಂಡಂದಿರು ಎಂದು ಪರಿಗಣಿಸಿದ್ದರಿಂದ, ನಿಮ್ಮಾಣೆ ಮೋದಿಜಿ..! ನಮಗೆ ದೊಡ್ಡ ನೋಟಿಲ್ಲ ಎಂದು ಮನಸ್ಸಿಗೆ ನೋವೂ ಆಗಿಲ್ಲ, ಬೇಸರವಂತೂ ಇಲ್ಲವೇ ಇಲ್ಲ..
ಹಾಗೆ ನೋಡಿದರೆ ಈಗ ನಮ್ಮ ಹೆಂಡತಿಯರು ಪಡುತ್ತಿರುವ ಪಾಡು ನಮಗೆ ಅಂಜೂರ ಮಿಲ್ಕ್ ಶೇಕ್ ಕುಡಿದಷ್ಟು ಸಂತೋಷವಾಗಿದೆ. ನಮ್ಮ ಕೈಗೆ ಚಿಲ್ಲರೆ ಕಾಸು ಹಾಕಿ ತಾವು ಸೀರೆ, ಕಾಸ್ಮೆಟಿಕ್‍ಗಳಿಗೆ ಖರ್ಚು ಮಾಡಿ ಉಳಿದ ಯಥೇಚ್ಛ ಹಣವನ್ನು, ಅಲ್ಲಿ ಇಲ್ಲಿ ಬಚ್ಚಿಟ್ಟಿದ್ದ ಸಾವಿರ, ಐನೂರರ ನೋಟುಗಳನ್ನು ಖರ್ಚು ಮಾಡಲಾಗದೆ, ಬದಲಾಯಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ. ನೋಟುಗಳನ್ನು ಈಚೆ ತೆಗೆದರೆ ಇವರು ನಮ್ಮ ದುಡ್ಡನ್ನು ಹೊಡೆದು ಎಷ್ಟು ಬ್ಲಾಕ್ ಮನಿ ಮಾಡಿದ್ದರು ಎಂಬ ಸತ್ಯ ಗಂಡಂದಿರಾದ ನಮಗೆ ತಿಳಿದು ಹೋಗುತ್ತದೆ. ಅದನ್ನು ಸೀರೆ ಚೀಟಿ, ಒಡವೆ ಸ್ಕೀಮ್‍ಗಳಿಗೆ ಕೊಟ್ಟು ಕೈ ತೊಳೆದುಕೊಳ್ಳಲಾಗದೆ ಬೀರು ಅಲ್ಮೇರಾಗಳಲ್ಲಿ ಸೀರೆ, ಕುಪ್ಪಸಗಳ ಮಡಿಕೆಗಳಲ್ಲಿ ಇಟ್ಟುಕೊಂಡು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಈಗ ಅನಿವಾರ್ಯವಾಗಿ ಹೇಗಾದರೊಂದು ತಂತ್ರ ಹುಡುಕಿ ಆ ನೋಟುಗಳನ್ನು ಬದಲಿಸಿಕೊಳ್ಳಲೇಬೇಕು. ಹಾಗೆ ಬದಲಾಯಿಸಿಕೊಳ್ಳಲು ತಾವೇ ಬ್ಯಾಂಕ್‍ಗಳ ಮುಂದೆ ಕ್ಯೂ ನಿಲ್ಲಬೇಕು ಇಲ್ಲ ಗಂಡಂದಿರಾದ ನಮಗೆ ಶರಣು ಹೋಗಬೇಕು. ಬ್ಯಾಂಕ್‍ಗಳ ಮುಂದೆ ಬಿಸಿಲಲ್ಲಿ ಕ್ಯೂ ನಿಲ್ಲಲು ಅಪ್ರತಿಮ ಸುಂದರಿಯರಾದ ನಮ್ಮ ಹೆಂಡತಿಯರು ಖಂಡಿತಾ ಒಪ್ಪಲಿಕ್ಕಿಲ್ಲ. ಅವರ ತ್ವಚೆ ಕರ್ರಗಾಗುವುದಲ್ಲದೆ ಚಿಲ್ಲರೆಗಾಗಿ ಬ್ಯಾಂಕಿನ ಮುಂದೆ ನಿಲ್ಲುವುದು ಅವರಿಗೆ ತೀರಾ ಅವಮಾನದ ವಿಷಯ. ಮಾಲ್‍ಗಳಲ್ಲಿ ಸಿನಿಮಾಗೆ ಕ್ಯೂ ನಿಲ್ಲುವುದು ಪ್ರತಿಷ್ಠೆಯ ವಿಷಯವಿರಬಹುದು. ಆದರೆ ಯಕಶ್ಚಿತ್ ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕ್‍ಗಳ ಮುಂದೆ ಕ್ಯೂ ನಿಲ್ಲುವುದು ಎಷ್ಟು ಮಾತ್ರಕ್ಕೂ ಅವರಿಗೆ ಪಥ್ಯದ ವಿಷಯವಲ್ಲ. ಅದೂ ಅಲ್ಲದೆ ಓಟು ಚಲಾಯಿಸಿದಾಗ ಹಾಕುವಂತೆ ನೋಟು ಬದಲಾಯಿಸಿದಾಗಲೂ ಬೆರಳಿಗೆ ಮಸಿ ಹಾಕಿಸಿಕೊಂಡರೆ ಅವರ ಸೌಂದರ್ಯದ ಗತಿ ಏನಾಗಬೇಡ? ಹಾಗೆಂದು ಇಡೀ ಸಾಸಿವೆ ಡಬ್ಬಿ ಬ್ಲಾಕ್ ಮನಿ ತೆಗೆದು ನಮ್ಮ ಕೈಗೆ ಕೊಡುವಷ್ಟು ದೊಡ್ಡತನ(ದಡ್ಡತನ?) ಅವರಿಗೆ ಇರಲಿಕ್ಕೆ ಸಾಧ್ಯವೇ ಇಲ್ಲ. ಆ ತರ ಸಾವಿರ, ಐನೂರರ ನೋಟು ವಾಪಸ್ ನಮ್ಮ ಕೈಸೇರಿದರೆ ಅದು ಹೊಸ ನೋಟುಗಳಾಗಿ ಅವರ ಕೈ ಸೇರುವುದಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿದೆ.
ಈಗ ನಾವು ಸಾಕಷ್ಟು ನೆಮ್ಮದಿಯಿಂದ ಇದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸದರಲ್ಲಿ ನಾವು ಕಳೆದುಕೊಂಡ ಸ್ವಾತಂತ್ರ್ಯ ಈಗ ಮರಳಿ ಸಿಕ್ಕಿದೆ. ಕಳೆದೊಂದು ವಾರದಿಂದ ನಾವು ಯಾವಾಗ ಮನೆಗೆ ಬಂದರೂ ಹೆಂಡತಿ ‘ಯಾಕೆ ಲೇಟು ? ಎಲ್ಲಿ ಹಾಳಾಗಿ ಹೋಗಿದ್ದಿರಿ ? ’ ಎಂದು ಕೇಳುವ ಹಾಗಿಲ್ಲ. ಅಕಸ್ಮಾತ್ ಕೇಳಿದರೆ ‘ಎಟಿಎಂ ಮುಂದೆ ಕ್ಯೂ ನಿಂತಿದ್ದೆ’ ಎಂಬ ಸಿದ್ಧ ಉತ್ತರ ಇದ್ದೇ ಇದೆ. ಅಲ್ಲಿ ಇಲ್ಲಿ ಸ್ನೇಹಿತರೊಂದಿಗೆ ಸುತ್ತಿಕೊಂಡು ಪಾರ್ಟಿ ಮಾಡಿಕೊಂಡು ಹ್ಯಾಪ್ ಮೋರೆ ಹಾಕ್ಕಂಡು ಮನೆಗೆ ಬರುವುದು. ‘ತಥ್! ಇದರಜ್ಜೀನ್! ಸಕತ್ ಕ್ಯೂ ಕಣೆ. ಇಷ್ಟೊತ್ತು ನಿಂತರೂ ಹಾಳಾದ್ದು ಒಂದು ಪೈಸೆ ಸಿಗಲಿಲ್ಲ’ ಎಂದು ಅವಲತ್ತುಕೊಂಡು ಎಟಿಎಂಗಳನ್ನು ಬಾಯಿಗೆ ಬಂದಂತೆ ಬೈದು ಬಿಟ್ಟರಾಯಿತು. ಹೆಂಡತಿ ಎನ್ನುವವಳು ಅನಿವಾರ್ಯವಾಗಿ ಸುಮ್ಮನಾಗಲೇಬೇಕು. ಮನೆಗೆ ಬಂದ ಮೇಲೂ ಸಂಬಳ ತಂದ್ರಾ ? ತೆಗೀರ್ರೀ ಈಚೆ ಎಂದು ಜಬರ್‍ದಸ್ತು ಮಾಡುವ ಹಾಗಿಲ್ಲ. ಈ ಬಾರಿಯ ಸಂಬಳದ ದುಡ್ಡು ನಮ್ ಅಕೌಂಟಲ್ಲೆ ಸೇಫಾಗಿರುತ್ತದೆ. ಸಾವಿರಗಟ್ಟಲೆ ಡ್ರಾ ಮಾಡಿ ಕೊಡಿ ಎಂದು ದಬಾಯಿಸಿ ಕೇಳುವ ಹಾಗಿಲ್ಲ. ಮಾಮೂಲಿನಂತೆ ಸೀರೆ ಕೊಡಿಸಿ, ಚಿನ್ನ ಕೊಡಿಸಿ ಎಂದು ಇಂಡೆಂಟ್ ಹಾಕುವ ಹಾಗಿಲ್ಲ. ಟ್ರಾಫಿಕ್ ಜಾಮಲ್ಲಿ ಒದ್ದಾಡಿಕೊಂಡು ಕೆಲಸಕ್ಕೆ ಹೋಗಬೇಕು, ಅಲ್ಲಿಂದ ಬಂದು ಎಟಿಎಂ ಮುಂದೆ ಕ್ಯೂ ನಿಲ್ಲಬೇಕು, ಇದರ ಮಧ್ಯ ಸೀರೆ ಒಡವೆಗೆ ಕಾರ್ಡ್ ಉಜ್ಜಲು ಯಾವಾನಿಗೆ ಪುರಸೊತ್ತಿದೆ ? ಎಂದು ಒಂದು ಆವಾಜ್ ಹಾಕಿಬಿಟ್ಟರೆ ಯಾವ ಹೆಂಡತಿಯಾದರೂ ತೆಪ್ಪಗಾಗಲೇ ಬೇಕು.
ಹೀಗೆಲ್ಲಾ ಯೋಚಿಸುತ್ತಾ ‘ಒಂದಷ್ಟು ದಿನಗಳಾದರೂ ಹೆಂಡತಿಯಾದವಳು ನಾನ್ ಕೊಟ್ಟ ಚಿಲ್ರೆ ಇಸ್ಕೊಂಡ್, ಇತಿ ಮಿತಿಲಿ ಸಂಸಾರ ಮಾಡ್ಬೇಕು. ಮೊದ್ಲಿನ ಹಾಗ್ ರೋಪ್ ಹಾಕೋದಾಗ್ಲಿ, ದರ್ಬಾರ್ ಮಾಡೋದಾಗ್ಲಿ ಸಾಧ್ಯ ಇಲ್ಲ. ಮೋದಿ ಸಕತ್ತಾಗಿ ಬಾಲ ಕತ್ತರ್ಸಿದಾರೆ’ ಎಂದು ಒಳಗೊಳಗೇ ಖುಷಿ ಪಡುತ್ತಾ ಹೋಗುತ್ತಿದ್ದೆ. ಅಷ್ಟರಲ್ಲಿ ಮಿಸ್ ತರ್ಲೆಕ್ಯಾತ್‍ನಳ್ಳಿ ಮೂಲೆ ಮನೆ ವನಜ ಒಯ್ಯಾರ ಮಾಡುತ್ತಾ ಗಾಡಿಗೆ ಅಡ್ಡ ಬಂದಳು. ತಟ್ಟನೆ ಬ್ರೇಕ್ ಹಾಕಿದೆ. ‘ರೀ! ನೀವು ಏನೂ ತಿಳ್ಕೊಳಲ್ಲ ಅಂದ್ರೆ ಈ ನೋಟ್ಸ್ ಎಕ್ಸ್’ಚೇಂಜ್ ಮಾಡಿಸಿಕೊಡ್ತೀರಾ?’ ಅಂತ ತುಟಿ ಕೊಂಕಿಸಿ ನಕ್ಕಳು. ಯಾಕೋ ಅವಳ ಮಾದಕ ನೋಟ ನೋಡಿ ನೋಟು ಚೇಂಜ್ ಮಾಡ್ಕೊಡಕ್ಕೆ ಆಗಲ್ಲ ಎನ್ನಲಾಗಲಿಲ್ಲ, ಸರಿ ಕೊಡಿ ಎಂದು ಸಾವಿರ, ಐನೂರರ ನೋಟು ತೆಗೆದುಕೊಂಡೆ. ‘ತುಂಬಾ ಥ್ಯಾಂಕ್ಸ್! ನೀವು ತುಂಬಾ ಒಳ್ಳೆಯೋರಪ್ಪ’ಎಂದು ಇನ್ನೊಂದು ರೌಂಡ್ ನುಲಿಯುತ್ತಾ ಒಳಗೆ ಹೋದಳು. ನಾನು ಬೈಕ್ ಒದ್ದೆ..
ಸಂಜೆ ಮಾಮೂಲಿ ಲೇಟಾಗಿ ಮನೆಗೆ ಬಂದ ತಕ್ಷಣ ಹೆಂಡತಿ ಎಂದಿನಂತೆ ಬೆಪ್ಪಳಂತಿರದೆ ಸ್ವಲ್ಪ ಚಿಗುರಿಕೊಂಡಿದ್ದಾಳೆ ಎನಿಸಿತು. ನಾನು ಎಟಿಎಂ ಮುಂದೆ ಕಾದು ಸಾಕಾಯ್ತು ಎಂದು ಕತೆ ಹೇಳುವಷ್ಟರಲ್ಲೇ ‘ಮೊದ್ಲು ನಾಕೂವರೆ ಸಾವಿರ ಹೊಸ ನೋಟ್ ಒಗೀರ್ರೀ ಈ ಕಡೆ ‘ಅಂದ್ಲು.. ನಾನು ಬೆಚ್ಚಿ ಬಿದ್ದೆ.’ ಯಾವ್ದೇ ಹೊಸ ನೋಟು ?’ ಅಂದೆ ಅಚ್ಚರಿಯಿಂದ. ‘ವನಜ ಕೊಟ್ಟಿದ್ಲಲ್ಲ ಅದು?’ ಎಂದು ಹುಬ್ಬು ಹಾರಿಸಿದಳು. ‘ಓಹ್! ಅದಾ! ತುಂಬಾ ಪ್ರಾಬ್ಲಂ ಇತ್ತಂತೆ, ಅದಕ್ಕೆ ನಂಗೆ ಎಕ್ಸ್’ಚೇಂಜ್ ಮಾಡಕ್ ಕೊಟ್ಟಿದ್ರು’ ಎಂದು ಹುಳ್ಳಗೆ ನಕ್ಕು ನಾಕೂವರೆ ಸಾವಿರ ತೆಗೆದು ಕೈಗಿಟ್ಟೆ. ‘ರೀ! ಇದು ವನಜಂದಲ್ಲ ದುಡ್ಡು, ನನ್ದೇ ದುಡ್ಡು, ನಾನ್ ಎಕ್ಸ್’ಚೇಂಜ್ ಮಾಡ್ಕೊಡಿ ಅಂದಿದ್ರೆ ನೀವು ಇಷ್ಟು ಆಸಕ್ತಿ ವಹಿಸಿ ನೋಟ್ ಬದ್ಲುಸ್ತಾನೂ ಇರ್ಲಿಲ್ಲ, ವಾಪಸ್ ದುಡ್ಡು ತಂದ್ ಕೊಡ್ತಾನೂ ಇರ್ಲಿಲ್ಲ. ಅದಕ್ಕೆ ನಾವೆಲ್ಲಾ ಬೇರೆಯವರ ಗಂಡಂದಿರ ಕೈಲಿ ನೋಟ್ ಬದ್ಲಿಸೋ ಪ್ಲಾನ್ ಮಾಡಿದೀವಿ.. ವನಜ್‍ನ ಮೂಲಕ ನನ್ ಬ್ಲಾಕ್ ಮನಿ ವೈಟ್ ಆಯ್ತು. ಅವಳ ಗಂಡಂಗೆ ನಾನ್ ನೋಟ್ ಎಕ್ಸ್‍ಚೇಂಜ್ ಮಾಡಕ್ಕೆ ಕೊಟ್ಟಿದೀನಿ.. ಹೀಗೇ ಚೈನ್ ಲಿಂಕ್ ತರ ನಮ್ ಪೂರಾ ಬ್ಲಾಕ್ ಮನಿ ವೈಟ್ ಮಾಡ್ಕೊತೀವಿ.. ತಗೊಳಿ, 200 ರುಪಾಯಿ ಇಟ್ಕೊಳಿ, ಖರ್ಚಿಗೆ’ ಹೆಂಡತಿ ರೇಖಾ ನಗುತ್ತಾ ನನ್ನ ಕೈಗೆ ನೂರರ ಎರಡು ನೋಟು ಹಾಕಿದಳು. ನಾನು ಖಾಲಿಯಾದ ಎಟಿಎಂನಂತೆ ಬೆಪ್ಪಾಗಿ ನಿಂತೆ!
ಚಿತ್ರ ಕೃಪೆ :- http://laughter-fun-humor.blogspot.in/