ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 9, 2016

3

‘ಶಿಕ್ಷಣ ಕ್ರಾಂತಿ’ಯ ಅನಿವಾರ್ಯತೆ

‍ನಿಲುಮೆ ಮೂಲಕ

– ವಿನಾಯಕ ಪೈ
ಉಪನ್ಯಾಸಕರು
ಉಡುಪಿ

swami-vivekananda-quotes-educationಶಿಕ್ಷಣವೆಂದರೆ ಮೊದಲೇ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು
– ಸ್ವಾಮಿ ವಿವೇಕಾನಂದ

ವಿವೇಕಾನಂದರು ಭಾರತ ಕಂಡಂತಹ ಶ್ರೇಷ್ಟ ಚಿಂತಕ, ಧೀರ ಸನ್ಯಾಸಿ, ಅಪ್ರತಿಮ ದೇಶ ಪ್ರೇಮಿ. ಸಾಮಾಜಿಕ ಒಡಕುಗಳ ವಿರುದ್ಧ ಪ್ರತಿಭಟಿಸಿ ಜಾಗೃತಿ ಸೃಷ್ಟಿಸಿದ ಸಮಾಜ ಸುಧಾರಕ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಹಿರಿಮೆಯನ್ನು, ದೇಶದ ಅಂತಃಸತ್ವವನ್ನು ಮನೆ ಮನೆಯಲ್ಲಿ ಪಸರಿಸಿ ರಾಷ್ಟ್ರ ದೀವಿಗೆಯ ಬೆಳಕನ್ನು ಎಲ್ಲೆಲ್ಲೂ ಚೆಲ್ಲಿದ ಯುಗಪುರುಷ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಾರತದ ಬಗೆಗಿನ ದ್ವಂದ್ವಗಳನ್ನು, ಕೀಳರಿಮೆಯನ್ನು ಹೋಗಲಾಡಿಸಿ ಭಾರತ ಸರ್ವಕಾಲಕ್ಕೂ ಶ್ರೇಷ್ಟ ಎಂದು ಭೋಗರಾಷ್ಟ್ರಗಳಲ್ಲಿ ಜ್ಞಾನೋದಯಗೊಳಿಸಿದ  ಪವಿತ್ರ ಬೋಧಿವೃಕ್ಷದ ಪ್ರತಿರೂಪ ವಿವೇಕಾನಂದರು.

ಸ್ವಂತಿಕೆ, ಉದಾತ್ತ ಚಿಂತನೆಗಳಿಲ್ಲದೆ, ಸಂಘಟಿತಗೊಳ್ಳದೆ, ಸ್ವಹಿರಿಮೆಯನ್ನು ಹಾಗು ಭಾರತೀಯ ಇತಿಹಾಸವನ್ನು ತಿಳಿಯದೆ ಭಾರತದ ಸ್ವಾತಂತ್ರ್ಯ ಅಸಾಧ್ಯ ಎಂದು ಅರಿತಿದ್ದ ಈ ಮಹಾನ್ ಚೇತನಾ, ರಾಷ್ಟ್ರವನ್ನು ಸಂಪೂರ್ಣವಾಗಿ ಪರ್ಯಾಟಿಸಿ ಜನಾಂದೋಲನಕ್ಕೆ ನಾಂದಿಹಾಡಿದವರು. ಇವರ ನೇರ ನುಡಿ, ರಾಷ್ಟ್ರ ಚಿಂತನೆಗಳು ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಅಂದಿನ ಎಷ್ಟೋ ಸ್ವಾತಂತ್ರ್ಯ ಹೋರಾಟಗಾರರಿಗೆ ಉತ್ಸಾಹದ ಚಿಲುಮೆಯಾಗಿ, ಸ್ಫೂರ್ತಿಯಾಗಿ ನಿಂತವರು ವಿವೇಕಾನಂದರು. ೨೦ನೇ ಶತಮಾನದಲ್ಲಿ ದಿವ್ಯ ಭಾರತದ ಮಣ್ಣಲ್ಲಿ ಸಂಚರಿಸಿ, ವಿವೇಕಾನಂದರು ತಾಯಿ ಭಾರತೀಯ ದಾಸ್ಯದ ಸರಪಳಿಯನ್ನು ಕಿತ್ತೆಸೆದರು. ತಮ್ಮ 39 ವರುಷಗಳ ಜೀವನಾವಧಿಯಲ್ಲಿ ಇವರ ಸಾಧನೆ ನಮ್ಮೆಲ್ಲರ ಕಲ್ಪನೆಗೂ ನಿಲುಕದ್ದು, ವಿಶ್ಲೇಷಣೆಗೆ ಹೊರಟರೆ ಅಕ್ಷರಕ್ಕೂ ನಿಲುಕದ ವ್ಯಕ್ತಿತ್ವ ಈ ವಿಶ್ವಮಾನವನದು. ವಿವೇಕಾನಂದರ ಚಿಂತನೆಗಳು ಅದೆಷ್ಟು ಸ್ವಷ್ಟವಾಗಿತ್ತೆಂದರೆ, ಅವರ ಸಂಪೂರ್ಣ ಸ್ವಾತಂತ್ರ್ಯ ಕೇವಲ ರಾಜಕೀಯ ಸ್ವಾತಂತ್ರ್ಯಕ್ಕೆ ಸೀಮಿತವಾಗಿರಲಿಲ್ಲ. ಸ್ವಾತಂತ್ರ್ಯ ಬೇಕಾದರೆ ೨೪ ಗಂಟೆಗಳಲ್ಲಿ ಪಡೆದುಕೊಳ್ಳಬಹುದು, ಆದರೆ ಅದನ್ನು ಉಳಿಸಿಕೊಳ್ಳಲು ಪುರುಷ ಸಿಂಹರ ಅವಶ್ಯಕತೆಯನ್ನು ಸಾರಿ ಹೇಳಿದರು. ಶಕ್ತಿಯೇ ಜೀವನ, ದುರ್ಭಲತೆಯೇ ಮರಣ ಎಂಬ ವೇದಾಂತ ಸಾರವನ್ನು ಮನೆ-ಮನಗಳಿಗೆ ತಲುಪಿಸಿದರು .

ತಾಯಿ ಭಾರತೀಯ ಸ್ವಾತಂತ್ರ್ಯಕ್ಕೋಸ್ಕರ ನಡೆದ ಹೋರಾಟ, ಚಳುವಳಿಗಳು, ಪ್ರಾಣಾರ್ಪಣೆ ಎಲ್ಲವು ದೇಶಾಭಿಮಾನದ ಪ್ರತೀಕವಾಗಿ ದೇಶಪ್ರೇಮವನ್ನು ಸಾರುತ್ತಿದ್ದರೆ, ಸ್ವಾತಂತ್ರ್ಯ ನಂತರ ದೇಶದಲ್ಲಿ ಬೆಳೆಯುತ್ತಿರುವ ಗುಲಾಮಿ ಪ್ರವೃತ್ತಿ, ಅಸಂವಿಧಾನಿಕ ನಡೆಗಳು, ಮೂಲೆ ಗುಂಪಾಗುತ್ತಿರುವ ವೇದಾಂತಿಕ ಸತ್ಯ, ಸ್ವತಂತ್ರದ ಹೆಸರಲ್ಲಿ ಆರಂಭವಾದ ಸ್ವೇಚ್ಛಾಚಾರಗಳೆಲ್ಲವೂ ದುರಭಿಮಾನದ, ಸತ್ಯಾನಾಶದ ಕುರುಹುಗಳೆಂದರು ತಪ್ಪಲ್ಲ. ಇಷ್ಟಕ್ಕೂ ಭಾರತ ಸ್ವಾಭಿಮಾನವನ್ನು ಕಳೆದುಕೊಳ್ಳುತ್ತಿರುವುದು ಎಲ್ಲಿ ಎಂದು ಆಲೋಚಿಸತೊಡಗಿದರೆ, ಇಂದಿನ ಶಿಕ್ಷಣದಲ್ಲಿ ಮರೆಯಾಗುತ್ತಿರುವ ಮೌಲ್ಯಗಳಿಂದ ಎನ್ನಬಹುದು. ಭಾರತ ಮಾಹಿತಿ ತಂತ್ರಜ್ಞಾನ , ಕೈಗಾರಿಕೆ, ಉತ್ಪಾದನೆ, ಕೃಷಿ, ಮತ್ತು ಇತರ ಕ್ಷೇತ್ರಗಳಲ್ಲಿ ಕ್ರಾಂತಿಯನ್ನು, ಸ್ವಾವಲಂಬನೆ ಸಾಧಿಸಿದರೂ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯ ಅವಶ್ಯತೆ ತಿಳಿಯದೆ ಹೋಯಿತು. ಶಿಕ್ಷಣ ಪದ್ದತಿಯಲ್ಲಿ ಪರಾವಲಂಬನೆಯೇ ಮಿತಿಮೀರಿ, ಶಿಕ್ಷಣ ಎಂದರೆ ವ್ಯವಹಾರಿಕ ದೃಷ್ಟಿಕೋನವೇ ಅತಿಯಾಗಿ, ಪದ್ದತಿಯ ಅವನತಿಗೆ ಕಾರಣವಾಗುತ್ತಿದೆ. ಇವೆಲ್ಲವನ್ನು ವಿಶ್ಲೇಷಿಸಿ, ಅರ್ಥೈಸಿಕೊಳ್ಳಾಗದಷ್ಟು ದೂರವನ್ನು ನಾವೆಲ್ಲ ಕ್ರಮಿಸಿದ್ದೇವೆ.

ಶಿಕ್ಷಣ ತಜ್ಞರ ಅಭಿಪ್ರಾಯವೆಂದರೆ, ಈ ಹಿಂದೆ ಪ್ರಸ್ತುತವಾಗಿದ್ದ  ಗುರುಕುಲ ಶಿಕ್ಷಣ ಪದ್ದತಿಯನ್ನು ಧಿಕ್ಕರಿಸಿ, Thomas Macaulay ಶಿಕ್ಷಣ ಪದ್ದತಿಯ ಫಲಾನುಭವಿಗಳಾಗಿದ್ದರಿಂದ ಇಂದು ಶಿಕ್ಷಣ ಎಂದರೆ ವ್ಯಾಪಾರೀಕರಣವಾಗಿದೆ  ಎಂಬುದು. ಆದರೆ ಸತ್ಯ ಇದಲ್ಲ. ಸ್ವತಃ Macualay ಶಿಕ್ಷಣದ ವ್ಯವಹರಿಕರಣವನ್ನು ವಿರೋಧಿಸಿದ್ದರು. ಅನಂತರ ಭಾರತದಲ್ಲಿ ಇತಿಹಾಸವನ್ನು ತಿರುಚಿ ಬ್ರಿಟಿಷರ ಮೇಲೆ ಗೂಬೆ ಕೂರಿಸುವ ಪ್ರಕ್ರಿಯೆ ಇಂದಿಗೂ ಕಾಣಬಹುದು. ಸ್ವಾಮಿ ವಿವೇಕಾನಂದರು ಹೇಳುತಿದ್ದ ‘ಭಾರತದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣ ಒಂದೇ ಪರಿಹಾರ’ ಎಂಬುದು ನಮ್ಮನ್ನು ಆಳುವ ನಾಯಕರಿಗೆ ತಿಳಿಯುತ್ತಿಲ್ಲ ಯಾಕೆ? ಅಥವಾ ತಿಳಿದು ತಿಳಿಯದೆ ಇರುವಂತೆ ನಟಿಸುವ ಮೂರ್ಖತನವೋ ಗೊತ್ತಿಲ್ಲ. ಹೌದು, ಶಿಕ್ಷಣದಿಂದ ಜನರ ಜೀವನ ಉತ್ತಮವಾದರೆ, ಸಮಸ್ಯೆ ಪರಿಹಾರವಾದರೆ ಈ ನಾಯಕರಿಗೆ ತಾನೇ ಸಮಸ್ಯೆ. ನವ ಭಾರತ ನಿರ್ಮಾಣ ರಾಯಭಾರಿಗಳಾಗಬೇಕಿದ್ದ ಯುವ ಜನತೆ ಶಿಕ್ಷಣವನ್ನು ಪರಿಪೂರ್ಣತೆಯನ್ನು ಪ್ರಕಟಗೊಳಿಸುವ ಮಾಧ್ಯಮ ಎಂದು ತಿಳಿಯದೆ ಅದು ಕೇವಲ ಉದ್ಯೋಗಕ್ಕಾಗಿ, ಆರ್ಥಿಕ ಲಾಭಕ್ಕಾಗಿ ಎಂದು ತಿಳಿದು ಈವಾಗಿನ ಹೈಬ್ರಿಡ್ ಶಿಕ್ಷಣ ಪದ್ದತಿಯ ದಾಸರಾಗಿರುದು ದುರಂತ.

ಶಿಕ್ಷಣ ಎಂದರೆ ಒಂದೇ ನಾಣ್ಯದ ಎರಡು ಮುಖಗಳಂತೆ. ಒಂದು ಮುಖ ‘ಜ್ಞಾನ’ದ ಸಂಕೇತವಾಗಿದ್ದರೆ ಇನ್ನೊಂದು ಮುಖ ಕಲಿತ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದನ್ನು ತಿಳಿಸುತ್ತದೆ. ಇಂದಿನ ಶಿಕ್ಷಣ ಕ್ರಮ ಈ ರೀತಿಯದ್ದೋ? ಮನೋಧೈರ್ಯ, ಬುದ್ಧಿಕ್ಷಮತೆ ಮತ್ತು ಸ್ಥಿರತೆಗಿಂತ, ಬ್ಯಾಂಕ್ನಲ್ಲಿ ಇರುವ ಸ್ಥಿರ ಠೇವಣಿಯ ಮೇಲೆ ಕಾರ್ಯಕಲ್ಪವಾದ ಶಿಕ್ಷಣ ಪದ್ಧತಿ, ಭೋಗಜೀವನದ ಮಧ್ಯವರ್ತಿಯಾಗಿರುವುದೆ. ಸಮಾಜದ ಕಷ್ಟಕ್ಕೆ ಸ್ಪಂದಿಸುವ ಅರಿವು ಕೊಡದ, ಸಾಮಾಜಿಕ ಪಿಡುಗುಗಳನ್ನು ನೋಡಿಯೂ ಕುರುಡರಂತೆ ವರ್ತಿಸುವ ಮೂರ್ಖರನ್ನು ಉತ್ಪಾದಿಸುವ ಕಾರ್ಖಾನೆಗಳಾಗಿವೆ ಶಿಕ್ಷಣ ಸಂಸ್ಥೆಗಳು. ಹಾಲು, ತುಪ್ಪ, ಸೈಕಲ್, ಬೂಟು, ಲ್ಯಾಪ್ಟಾಪ್ ಕೊಡುವ ಸರ್ಕಾರ ಪಾಠಪ್ರವಚನ ನಡೆಸಲು ಅವಶ್ಯ ಬೇಕಿರುವ ಶಿಕ್ಷಕರನ್ನು ಒದಗಿಸದೆ ಹೋಗಿರುವುದು ಈ ಶಿಕ್ಷಣ ಪದ್ದತಿಯ ದುರಂತ. ಜ್ಞಾನವಂತ ಗುರುವಿರಲು, ಮುಂದೆ ಗುರಿಯಿರಲು ಸಾಗುತ್ತಿತ್ತು ವೀರರ ದಂಡು.. ಇಂದು ಮುಂದೆ ಗುರಿ ಕಳೆದುಹೋಗಿರಲು, ಮಾರ್ಗದರ್ಶನ ನೀಡಲು ಶಿಕ್ಷಕರಿಲ್ಲದೆ ಒಬ್ಬೊರನ್ನೊಬ್ಬರು ಅನುಕರಿಸಿ ಕುರಿಗಳಂತೆ ಬೆಳೆಯುತ್ತಿದ್ದಾರೆ. ಶಾಲೆಗಳು ಮುಚ್ಚಿ ಎಷ್ಟೋ ಬಡ ವಿದ್ಯಾರ್ಥಿಗಳ ಕನಸಿನ ಮೇಲೆ ಬರೆ ಹಾಕುತ್ತಿರುವ ಸರ್ಕಾರವನ್ನು  ಕಂಡಾಗ, ಸ್ವಾತಂತ್ರ್ಯ ಪೂರ್ವದಲ್ಲೇ ಶಾಲೆಗಳನ್ನು ನಿರ್ಮಿಸಿದ ಬಾಸೆಲ್ ಮಿಷನ್ ಮತ್ತು ಆಂಗ್ಲರೇ, ಪ್ರಸ್ತುತ ನಾಯಕರಿಗಿಂತ  ಮೇಲು ಎಂಬುದು ನನ್ನ ವೈಯಕ್ತಿಕ ನಿಲುವು.

ವಿದ್ಯಾಭ್ಯಾಸವೆಂದರೆ ಪುಸ್ತಕದ ಪಾಂಡಿತ್ಯವಾಗಲಿ, ವಿಷಯ ಸಂಗ್ರಹವಾಗಲಿ ಅಲ್ಲ. ಯಾವುದರ ತರಬೇತಿಯ ಮೂಲಕ ಇಚ್ಛಾಶಕ್ತಿಯ ಪ್ರವಾಹ ಮತ್ತು ಅಭಿವ್ಯಕ್ತಿಗಳು ನಿಯಂತ್ರಣಕ್ಕೆ ಒಳಗಾಗಿ ಏಕಾಗ್ರತೆ, ಶ್ರದ್ದೆ ಪ್ರಾಪ್ತಿಯಾಗುವುದೋ ಮತ್ತು ಜನಸಾಧಾರಣರನ್ನು ಜೀವನ ಸಂಗ್ರಾಮಕ್ಕೆ ಸಮರ್ಥರನ್ನಾಗಿ ಮಾಡುವುದೋ, ಚಾರಿತ್ರ್ಯವಂತ , ಸೇವಾತತ್ಪರತ ಸಿಂಹಾಸಾಹಸಿಗಳ ನಿರ್ಮಿಸುವುದು.. ಇಂತಹ ಶಿಕ್ಷಣವಲ್ಲವೇ ಬೇಕಾಗಿರುವುದು? ಇಂದಿನ ಶಿಕ್ಷಣ ಪುರುಷಸಿಂಹರ ನಿರ್ಮಾಣ ಹೊಣೆಯನ್ನು ಹೊರಲು ಸಮರ್ಥವೇ? ಯಾಕೆಂದರೆ ದಿನ ನಿತ್ಯ ಪತ್ರಿಕೆಗಳಲ್ಲಿ ಬರುವ ಮೂರನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ, SSLC ಅನುತ್ತೀರ್ಣಗೊಂಡ ವಿದ್ಯಾರ್ಥಿ ನೊಂದು ಆತ್ಮಹತ್ಯೆ, ಶಿಕ್ಷನಿಂದಲೇ ಲೈಂಗಿಕ ಕಿರುಕುಳ ಎಂಬ ವರದಿಗಳು ಭವ್ಯ ಭಾರತ ನಿರ್ಮಾಣದ ಕನಸಿಗೆ ಆತಂಕಕಾರಿಯಲ್ಲವೇ? ಮಾನಸಿಕ ದೌರ್ಬಲ್ಯ ಇಂದು ಶಿಕ್ಷಣದ ಅಂಕ / ಶ್ರೇಣಿಗಳೊಂದಿಗೆ ಉಚಿತವಾಗಿ ದೊರಕುವುದರೊಂದಿಗೆ , ಮತ್ತು ಇವೆಲ್ಲಕ್ಕೂ ಪೂರಕವಾಗಿ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣದಲ್ಲಿನ ಸರ್ಕಾರದ ಅವೈಜ್ಞಾನಿಕ ಆಯಾಮಗಳಿಂದ ಭಾರತದ ಯುವಪೀಳಿಗೆ ನಿರ್ವೀರ್ಯರಾಗುತ್ತಿದ್ದಾರೆ.

ಅಷ್ಟಕ್ಕೂ Macaulay ಶಿಕ್ಷಣ ಕ್ರಮವನ್ನು ಸಂಪೂರ್ಣವಾಗಿ ಅನುಕರಿಸಿದ್ದರೂ ನಮ್ಮ ಯುವಜನತೆ ಪ್ರಪಾತಕ್ಕೆ ತಲುಪುತ್ತಿರಲಿಲ್ಲ. ಅರ್ಥತಃ ಶಿಕ್ಷಣ ಎಂಬುವುದು ಸಾಮಾಜಿಕ ಕ್ರಾಂತಿಯೆಂದು ಮರೆತು, ವಿಶ್ವವಿದ್ಯಾನಿಲಯಗಳ ಸುಂದರ ಹವಾನಿಯಂತ್ರಿತ ಕೊಠಡಿಗಳಿಗೆ, ಧರಿಸುವಂತಹ ಸೂಟು ಬೂಟುಗಳಿಗಷ್ಟೇ ಶಿಕ್ಷಣ ಸೀಮಿತವಾಗಿದೆ. ಒಂದು ಕಡೆ ಆಧುನಿಕ ಭಾರತ, ಪಾಶ್ಚಾತ್ಯರ ಭಾವನೆ, ಭಾಷೆ, ಆಹಾರ, ಉಡಿಗೆ-ತೊಡಿಗೆ, ಆಚಾರ -ವಿಚಾರ ವ್ಯವಹಾರಗಳಂತಹ ಅಂಧ ಅನುಕರಣೆ, ಇನ್ನೊಂದೆಡೆ ಸಾಮಾಜಿಕ ಕ್ರಾಂತಿಗೆ ತವಕಿಸುತ್ತಿರುವ ಬಡ ಜನತೆ. ಇವೆಲ್ಲವನ್ನು ಸಮರ್ಥವಾಗಿ ಹೆದರಿಸಲು ಶಿಕ್ಷಣ ಕ್ರಾಂತಿ ಅನಿವಾರ್ಯವಲ್ಲವೇ?

ಶಿಕ್ಷಣ ಕ್ರಾಂತಿಯೊಂದೇ ಎಲ್ಲವನು ಸುಧಾರಣೆಗೆ ಹೊಯ್ಯಲು ಸಾಧ್ಯ. ವಿವೇಕಾನಂದರ ಚಿಂತನೆಗಳೊಂದಿಗೆ ಹೊರಸೂಸಲ್ಪಟ್ಟ ಶಿಕ್ಷಣ ಕ್ರಮವೊಂದೇ ಸಾರ್ವಕಾಲಿಕ ಸತ್ಯ. ವೇದಾಂತಗಳೊಡನೆ ಮಿಳಿತಗೊಂಡಿರುವ ಪಾಶ್ಚಿಮಾತ್ಯ ವಿಜ್ಞಾನ, ಬ್ರಹ್ಮಚರ್ಯವೆ ಆಸರೆಯಾದ ಧ್ಯೆಯ ಮತ್ತು ನಮ್ಮ ಆತ್ಮದಲ್ಲಿ ದೃಢವಾದ ಶ್ರದ್ದೆ, ನಂಬಿಕೆಯನ್ನು ಜಾಗೃತಗೊಳಿಸುವ ಶಿಕ್ಷಣ ನಮಗೆ ಬೇಕಾಗಿರುವುದೇ ಹೊರತು ಕುರಿಗಳನ್ನು ಉತ್ಪಾದಿಸುವ ಕಾರ್ಖಾನೆಗಳಿಗೆ ಪರವಾನಿಗೆ ನೀಡುವ ಶಿಕ್ಷಣ ಪದ್ದತಿಯಲ್ಲ. ಶಿಕ್ಷಣ ಕ್ರಾಂತಿಯ ಮುಂದಾಳತ್ವವನ್ನು ವಹಿಸಲು ದೂರದೃಷ್ಟಿಯುಳ್ಳ, ಚಿಂತನೆಗಳ ಸಾಕಾರಮೂರ್ತಿ ಸ್ವಾಮಿ ವಿವೇಕಾನಂದರೆ ಮತ್ತೊಮ್ಮೆ ಹುಟ್ಟಿ ಬರಲಿ ಎಂಬ ಆಶಯ ಯುವಭಾರತೀಯರಾದ ನಮ್ಮೆಲ್ಲರದು.

ಚಿತ್ರ ಕೃಪೆ :- quotesgram.com

3 ಟಿಪ್ಪಣಿಗಳು Post a comment
 1. ಶೆಟ್ಟಿನಾಗ ಶೇ.
  ಡಿಸೆ 9 2016

  ವಚನಕಾರರ ಜ್ಞಾನಸುಧೆಯನ್ನು ಪ್ರಾಥಮಿಕ ಶಾಲಾ ಮಟ್ಟದಲ್ಲೇ ಮಕ್ಕಳಿಗೆ ಬೋಧಿಸತಕ್ಕದ್ದು. ಸಾಮಾಜಿಕ ನ್ಯಾಯ ಹಾಗೂ ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು ಎಂಬ ಅರಿವು ಮಕ್ಕಳಲ್ಲಿ ಮೂಡಿಸತಕ್ಕದ್ದು. ಶೋಷಣೆ ಹಾಗೂ ಕಂದಾಚಾರಗಳ ವಿರುದ್ಧ ಸಿಡಿದೇಳುವ ಕೆಚ್ಚು ಮಕ್ಕಳಲ್ಲಿ ಹುಟ್ಟಿದಾಗ ಸಮಾಜದಲ್ಲಿ ಕ್ರಾಂತಿಕಾರಕ ಬೆಳವಣಿಗೆಯಾಗುತ್ತದೆ.

  ಉತ್ತರ
 2. sudarshana gururajarao
  ಡಿಸೆ 9 2016

  ನಿಮ್ಮ ಮಾತುಗಳು ಅರ್ಥ ಪೂರ್ಣವಾಗಿವೆ. ಇಙದಿನ ಈ ಅವ್ಯವಸ್ಥೆ ಹಾಗೂ ಯುವಪೀಳಿಗೆಯ ನಿರ್ಭಾವುಕ ಮನೋವ್ಯಾಪಾರಕ್ಕೆ ಮೆಕ್ಜಾಲೆ ಪ್ರಣೀತ ಶಿಕ್ಷಣ ಒಂದೇ ಕಾರಣವಲ್ಲ. ೮೦ರ ದಶಕದಲ್ಲೂ ಮಕ್ಕಳು ಮೌಲ್ಯ ಗಳನ್ನು ಸಮಾಜದಿಂದ ಶಾಲೆಗಳಿಂದ ಕಲಿಯುತ್ತಿದ್ದರು. ಸರಕಾರಿ ಶಾಲೆಯ ನನಗೂ, ಖಾಸಗೀ ಶಾಲೆಯ ನನ್ನ ಸಂಭಂಧಿಕರಿಗೂ ವ್ಯತ್ಯಾಸ ಆಗಲೇ ನನ್ನ ಅರಿವಿಗೆ ಬರುತ್ತಿತ್ತು. ಅತಿಯಾದ ಶಾಲೆಗಳ ಖಾಸಗೀಕರಣ,ಖಾಸಗೀ ಶಾಲೆಗಳಲ್ಲಿ ಕಾಣದ ಬಡತನ ಕಾರ್ಪಣ್ಯತೆ ಈ ಮಕ್ಕಳನ್ನು ಸಂಪೂರ್ಣ ಕುರುಡಾಗಿಸುತ್ತವೆ. ಇದರ ಜತೆಗೆ ಕೇಂದ್ರ,ರಾಜ್ಯಗಳಲ್ಲಿ ತಂದ ಪಠ್ಯಪುಸ್ತಕಗಳು,ಅದರಲ್ಲಿ ರಾಹುಲ್ವಗಾಂಧಿಯಂತ ಅಪ್ರಯೋಜಕನ ಮೇಲಿರಿಸಿದ ಪಾಠಗಳು,ವ್ಯವಸ್ಥಿತವಾಗಿ ಭಾರತೀಯತೆಯ ಪರಿಕಲ್ಪನೆಯ ಮೇಲೆ ನಡೆಸಿದ ಪ್ರಹಾರ ಇವೆಲ್ಲವೂ ಅಧೋಗತಿಗೆ ತಮ್ಮ ಕಾಣಿಕೆ ನೀಡಿವೆ.
  ಅಂತೆಯೇ ಇಂದು ದಾವುದ್ನನ್ನು ಹಳಿಯದ, ಕೇಜರೀವಾಲನಂಥಾ ಅಯೋಗ್ಯನನ್ನು ಅಣ್ಣನೆಂದೂ,ಮಾಯಾವತಿಯಂಥಾ ಭ್ರಷ್ಟ ಳನ್ನು ಅಕ್ಕನೆಂದೂ,ಮಮತಾಳಂಥ ಗೂಂಡಾಗಿರಿಯನ್ನು ತಾಯಿಯೆಂದೂ, ಮನೆಹಾಳರನ್ನು ಸಭ್ಯರೆಂದೂ, ಶಂಕರಾಚಾರ್ಯರಂಥಾ ಮಹಾನ್ ಚಿಂತಕರನ್ನು ವಂಚಕರೆಂದೂ,ಭಗವಾನನಂಥ ಹರುಕು ಬಾಯಿಯ ಸಾಹಿತಿಯೇ ಅಲ್ಲದ,ಪಾಠ ಮಾಡಲು ಬರದ “ಪ್ರಾಧ್ಯಾಪ”ಕನ, ಪುಸ್ತಕ ಓದಿ ನಂಬಿಕೊಂಡು ಎಗರಾಡುವ ಸಂತತಿಗಳು ತಯಾರಾಗಿಬಿಟ್ಟಿವೆ. ಆಯಕಟ್ಟಿನ ಜಾಗಗಳಲ್ಲಿ ಕೂತ ಇವುಗಳು ಇಡೀ ವ್ಯವಸ್ಥೆಯನ್ನು ಹಳ್ಳ ಹಿಡಿಸುತ್ತಿವೆ.

  ಉತ್ತರ
  • ಶೆಟ್ಟಿನಾಗ ಶೇ.
   ಡಿಸೆ 10 2016

   ಬ್ರಾಹ್ಮಣ್ಯದ ಬುಡಕ್ಕೆ ಪ್ರಗತಿಪರರು ಬತ್ತಿ ಹಿಡಿದಿದ್ದಾರೆಮ್ಬುದು ಮೇಲಿನ ಕಾಮೆಂಟಿಗರ ಹಳಹಳಿಕೆಯಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ. ಸನಾತನಶಾಹಿಯ ಪುನರುತ್ಥಾನದ ಕನಸು ಬಿಟ್ಟು ಪ್ರಗತಿಪರರಾಗಿ.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments