ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 12, 2016

19

ಜಯಲಲಿತಾರನ್ನು ಚಿರಸ್ಮರಣೀಯವಾಗಿಸಿದ “ಅಮ್ಮ ಉನವಾಗಮ್”

‍ನಿಲುಮೆ ಮೂಲಕ

– ಶ್ರೇಯಾಂಕ ಎಸ್ ರಾನಡೆ

26amma-kitchen1||ವಿಶ್ವಸಂಸ್ಥೆಯ ಅಂಗಸಂಸ್ಥೆ ಆಹಾರ ಮತ್ತು ಕೃಷಿ ಸಂಸ್ಥೆಯ ಇತ್ತೀಚಿನ “ವಿಶ್ವದ ಆಹಾರ ಅಭದ್ರತೆಯ ಪರಿಸ್ಥಿತಿ 2015″ರ ವರದಿಯ ಪ್ರಕಾರ ಭಾರತದಲ್ಲಿ ದಿನನಿತ್ಯ 19.46 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಭಾರತ ನಗರೀಕರಣಗೊಳ್ಳುತ್ತಿರುವ ದೇಶ. ಹಾಗಾಗಿ ಸರಿಯಾದ ಯೋಜನೆ ರೂಪಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳದ ಹೊರತು ನಗರೀಕರಣಗೊಂಡಂತೆಲ್ಲ ನಿರಾಶ್ರಿತರ, ಬಡವರ, ಹಸಿವಿನಿಂದ ಬಳಲುವವರ ಸಂಖ್ಯೆಯೂ ಹೆಚ್ಚಲಿದೆ. ತಕ್ಷಣದ ಪರಿಸ್ಥಿತಿಯಿಂದ ನೋಡಿದರೆ ಸರಕಾರಗಳ ಕಡಿಮೆ ಮೊತ್ತದ ಆದರೆ ಉತ್ತಮ ಗುಣಮಟ್ಟದ ‘ಅಮ್ಮ ಮೆಸ್’ನಂತಹ ಆಹಾರ ಪೂರೈಸುವ ಯೋಜನೆಗಳು ಈ ದೇಶದ ಹಸಿವು ಹಾಗೂ ಪೌಷ್ಟಿಕತೆಯ ಕೊರತೆಯನ್ನು ನೀಗಿಸಿ ದೇಶವನ್ನು ಮತ್ತಷ್ಟು ಉತ್ಪಾದಕಗೊಳಿಸಲು ಸಹಾಯ ಮಾಡುತ್ತವೆ.||

ಅಮ್ಮ ಜೊತೆಗಿಲ್ಲ. ಆದರೆ ಹಸಿದವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಆಹಾರ ನೀಡುವ ರಾಜಕೀಯ ಹಾಗೂ ಮಮತೆಯ ನಿರ್ಧಾರ ಜನರಿಗೆ ಉಳಿದಿದೆ. ಜಯಲಲಿತಾ ಸಾವಿನಿಂದ ಚೆನೈ ಸಂಪೂರ್ಣ ಬಂದ್ ಆಗಿದ್ದರೂ ಅಮ್ಮ ಮೆಸ್‍ಗಳು ಅಮ್ಮನ ನೆನೆಪಿನಲ್ಲಿ ಚೊಕ್ಕವಾಗಿ ಕಾರ್ಯನಿರ್ವಹಿಸುತ್ತಿವೆ. ಯಾವುದೋ ರಾಜಕೀಯ ಸಮಾವೇಷಗಳಿಗೆ ಜನರನ್ನು ಕರೆತಂದಾಗ ಒಂದು ಹೊತ್ತಿಗೆ ತಯಾರಾದ ಆಹಾರದ ವ್ಯವಸ್ಥೆಯಲ್ಲಿ ಏರುಪೇರಾಗುವ ಸುದ್ದಿಗಳನ್ನು ಕೇಳಿದ್ದೇವೆ. ಆದರೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ, ತನ್ನ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವ ಅಮ್ಮಾ ಕ್ಯಾಂಟೀನ್‍ಗಳಿಂದ ದೇಶದ ಕಳಪೆ ಗುಣಮಟ್ಟದ ಬಿಸಿಯೂಟ ಕೇಂದ್ರಗಳು ಕಲಿಯುವುದು ಸಾಕಷ್ಟಿದೆ. ಯಾಕೆಂದರೆ ಪ್ರತೀ ತಟ್ಟೆ ಆಹಾರಕ್ಕೆ ತಗಲುವ ತೌಲನಿಕ ವೆಚ್ಚವನ್ನು ಗಮನಿಸಿದಾಗ ಹೆಚ್ಚು ಕಡಿಮೆ ಎರಡೂ ಯೋಜನೆಗಳಿಗೂ ವೆಚ್ಚದಲ್ಲಿ ಮಹತ್ವದ ವ್ಯತ್ಯಾಸವಿಲ್ಲ. ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಪ್ರತೀ ತಟ್ಟೆ ಊಟಕ್ಕೆ ತಗಲುವ ವೆಚ್ಚ 3.11-4.65 ರೂಪಾಯಿಗಳು, ಅದೇ ಅಮ್ಮ ಮೆಸ್‍ಗಳಲ್ಲಿ ಅಗತ್ಯ ಪೌಷ್ಟಿಕಾಂಶದಿಂದ ಕೂಡಿರುವ ಸುಸಜ್ಜಿತ ಹಾಗೂ ಸುರಕ್ಷಿತ ಊಟಕ್ಕೆ ತಗಲುವ ವೆಚ್ಚ 5 ರೂಪಾಯಿಗಳು ಮಾತ್ರ. ಜನಪರ ಯೋಜನೆಯೊಂದನ್ನು ಹೇಗೆ ಜನಸ್ನೇಹಿಗೊಳಿಸಬಹುದೆಂಬುದಕ್ಕೆ ಉದಾಹರಣೆ ಅಮ್ಮ ಉನವಾಗಮ್ ಯೋಜನೆ ಅಥವಾ ತಮಿಳುನಾಡಿನಲ್ಲಿ ಪ್ರಖ್ಯಾತಿ ಪಡೆದಿರುವ ಅಮ್ಮ ಕ್ಯಾಂಟೀನ್‍ಗಳು.

ಉಪ್ಪು, ನೀರು, ವಿದ್ಯುತ್, ಫ್ಯಾನ್, ಸಿಮೆಂಟ್, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಮಹಿಳೆಯರಿಗೆ ದ್ವಿಚಕ್ರವಾಹನ ಕೊಳ್ಳಲು 50% ಸಬ್ಸಿಡಿ, ಮೊಬೈಲ್, ಔಷಧಿ, ನವಜಾತ ಶಿಶುಗಳಿಗೆ ಬೇಬಿ ಕೇರ್ ಕಿಟ್, ಹಾಲು ನೀಡುವ ಹಸು, ಆಡುಗಳು.. ಹೀಗೆ ಹುಟ್ಟಿನಿಂದ ಸಾಯುವವರೆಗೆ ಜನಸಾಮಾನ್ಯರಿಗೆ ಏನು ಬೇಕೋ ಅದನ್ನೆಲ್ಲ “ಅಮ್ಮ” ಯೋಜನೆಯಡಿ ಮುಕ್ತವಾಗಿ ಒದಗಿಸಿ ಕೆಲವೊಮ್ಮೆ ಜನರನ್ನು ಸರಕಾರದ ಫಲಾನುಭವಕ್ಕಷ್ಟೇ ಸೀಮಿತಗೊಳಿಸಿ ಅವರನ್ನು ಹಾಗೇ ಬಡವರಾಗಿ ಉಳಿಸಿ, ಅವರಿಂದ ವೋಟುಗಳನ್ನು ಪಡೆಯುತ್ತಾ ಪ್ರತ್ಯಕ್ಷ ಯೋಜನೆಗಳ ಹೆಸರಿನಲ್ಲಿ ಪರೋಕ್ಷ ಲಂಚನೀಡುತ್ತಾ, ಇನ್ನೂ ಕೆಲವೊಮ್ಮೆ ಕೊಟ್ಟಿದ್ದು ಸಾಲದೆನಿಸಿ ಮುಂದಿನ ಚುನಾವಣೆಯ ಮುನ್ನ ಬಡವರ ಹೆಸರಿನಲ್ಲಿ ಇನ್ನೂ ಅನೇಕಾನೇಕ ಯೋಜನೆಗಳ ಜಾರಿ. ಎಷ್ಟರ ಮಟ್ಟಿಗೆಂದರೆ ದೇಶದ ಪ್ರತೀ ರಾಜ್ಯದಲ್ಲೂ ಕೊಡುವುದರಲ್ಲಿ ತಮಿಳುನಾಡನ್ನು ನೋಡಿ ಕಲಿಯಬೇಕು, ಕೊಟ್ಟರೆ ತಮಿಳುನಾಡಿನ ಅಮ್ಮನಂತೆ ಕೊಡಬೇಕು ಎಂಬಷ್ಟರ ಮಟ್ಟಿಗೆ ಜನರಿಗೆ ಉಚಿತ ಸೌಲಭ್ಯಗಳನ್ನು ಜನಪ್ರಿಯವಾಗಿ ಹಾಗೂ ಯಶಸ್ವಿಯಾಗಿ ಜಯಲಲಿತ ಜಾರಿಗೊಳಿಸಿದ್ದರು. ಈ ಕ್ರಮದಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟವಾಗುತ್ತಿದ್ದರೂ ಬಡಜನರ ಪಾಲಿಗೆ ಯಾವುದರಲ್ಲೂ ಕಮ್ಮಿಯಾಗಬಾರದೆಂಬ ಧೋರಣೆ ಹೊಸ ಯೋಜನೆಗಳ ಅನುಷ್ಠಾನಗಳ ರಾಜಕೀಯ ಆನ್ವಯಿಕತೆಯಲ್ಲಿರುತ್ತಿತ್ತು. ಅದು ಹೇಗೆಂದರೆ ತಾಯಿ ತನಗಿಲ್ಲದಿದ್ದರೂ ತನ್ನ ಮಕ್ಕಳಿಗೆ ಹೊಟ್ಟೆ ತುಂಬ ಬಡಿಸುವುದಿಲ್ಲವೆ? ಅಲ್ಲಿ ಅಮ್ಮ ಊಟಮಾಡಿಸುವುದು ತನ್ನ ಹೊಟ್ಟೆ ಹೊರೆದು. ಆದರೆ ಇಲ್ಲಿನ ಅಮ್ಮ ತುಂಬಾ ಜಾಣೆ. ತಾನೂ ಹಸಿವಿನಿಂದ ಬಳಲದೆ, ಜನರಿಗೂ ಚೆನ್ನಾಗಿ ಊಟಮಾಡಿಸಿ ನಷ್ಟವನ್ನು ರಾಜ್ಯದ ಬೊಕ್ಕಸದ ಬಾಯಿಗೆ ಒರೆಸಿದರು. ಆದರೆ ಅದರಿಂದ ಬರುವ ಜನರ ಪ್ರೀತಿ, ವಿಶ್ವಾಸವೆಂಬ ರಾಜಕೀಯ ಲಾಭವನ್ನು ನೇರವಾಗಿ ಪಡೆದರು.

1 ರೂಪಾಯಿಗೆ ಒಂದು ಇಡ್ಲಿ, 1 ರೂಪಾಯಿಗೆ ಒಂದು ಪ್ಲೇಟ್ ಪೊಂಗಲ್, 3 ರೂಪಾಯಿಗೆ ಎರಡು ಚಪಾತಿ ಮತ್ತು ದಾಲ್; 5 ರೂಪಾಯಿಗೆ ಅನ್ನ ಸಾಂಬಾರ್, ಚಿತ್ರಾನ್ನ ಹಾಗೂ ಮೊಸರಾನ್ನ ಒಳಗೊಂಡ ಹೊಟ್ಟೆತುಂಬುವ ಊಟ. ಇದು ಪಾರ್ಲಿಮೆಂಟ್ ಕ್ಯಾಂಟೀನ್‍ನ ದರಪಟ್ಟಿಯಲ್ಲ. ತಮಿಳುನಾಡಿನ ಎಲ್ಲ ವರ್ಗದ ಜನರಿಗೂ ತೆರೆದುಕೊಂಡ ಅಮ್ಮ ಕ್ಯಾಂಟೀನ್‍ನಲ್ಲಿ ದೊರೆಯುವ ಶುಚಿ-ರುಚಿ ಆಹಾರದ ದರ ವಿವರ. ಇದು ರಸ್ತೆಬದಿಯ ತಳ್ಳುಗಾಡಿಯ ದರಕ್ಕಿಂತಲೂ ಕಡಿಮೆ. ತಿಂಗಳಿಗೆ ಎರಡರಿಂದ ಮೂರು ಬಾರಿ ಆಹಾರ ಇಲಾಖೆಯ ಅಧಿಕಾರಿಗಳಿಂದ ಗುಣಮಟ್ಟದ ಪರೀಕ್ಷೆ ಹಾಗೂ ಅಮ್ಮ ಕ್ಯಾಂಟೀನ್‍ಗಳ ತಪಾಸಣೆ. ಶುಭ್ರವಾದ ನೆಲ, ಗೋಡೆಗಳು. ಸ್ವಚ್ಛ ಪಾತ್ರೆಗಳು ಮತ್ತು ಆವರಣ. ಆಹಾರ ತಯಾರಿಕೆ ಮತ್ತು ಬಡಿಸುವಿಕೆಯಲ್ಲಿ ವ್ಯವಸ್ಥಿತ ತಯಾರಿ. ಜೇಬು ತುಂಬಿರುವವರಿಗೂ, ಕೈಯಲ್ಲಿ ಚಿಲ್ಲರೆಯಿರುವವರಿಗೂ ತರತಮವಿಲ್ಲದಂತೆ ಸಲ್ಲುವ ಒಂದೇ ಗುಣಮಟ್ಟದ ಆಹಾರ. ಬಿಹಾರ, ಒರಿಸ್ಸಾ, ಪೂರ್ವಾಂಚಲ ರಾಜ್ಯಗಳಿಂದ ವಲಸೆ ಬಂದ ಬಡ ಕೂಲಿ ಕಾರ್ಮಿಕರಿಗೂ ವರದಾಯಕ. ಅನೇಕ ದೂರದೃಷ್ಟಿ ಹಾಗೂ ಚಾತುರ್ಯದಿಂದ 2013ರ ಫೆಬ್ರವರಿಯಲ್ಲಿ ಜಯಲಲಿತಾ ಪ್ರಾರಂಭಿಸಿದ ‘ಅಮ್ಮ ಉನವಾಗಮ್ ಯೋಜನೆ’ ವಿಶೇಷ.

ತಮಿಳುನಾಡಿನ ಅನೇಕ ಕಡೆ ಅಮ್ಮಾ ಕ್ಯಾಂಟೀನ್‍ಗಳು ಕಾರ್ಯನಿರ್ವಹಿಸುತ್ತಿವೆ. ರಾಜಧಾನಿ ಚೆನೈ ನಗರವೊಂದರಲ್ಲಿಯೇ 400 ಕ್ಯಾಂಟೀನ್‍ಗಳು ದಿನನಿತ್ಯ ಸಾವಿರಾರು ಜನರಿಗೆ ಆಹಾರ ನೀಡುತ್ತಿದೆ. ಕ್ಯಾಂಟೀನ್‍ಗಳಲ್ಲಿ ನಿತ್ಯವೂ ಬೆಳಗಿನ ಉಪಹಾರಕ್ಕೆ ದಿನಕ್ಕೆ 0.43 ಮಿಲಿಯನ್ ಅಂದರೆ 430 ಸಾವಿರ ಇಡ್ಲಿಗಳು ಮತ್ತು 0.12 ಮಿಲಿಯನ್ ಪ್ಲೇಟ್ ಪೊಂಗಲ್. ಮಧ್ಯಾಹ್ನದ ಊಟಕ್ಕೆ 0.25 ಮಿಲಿಯನ್ ಪ್ಲೇಟ್ ಅನ್ನ ಸಾಂಬಾರ್ ಮತ್ತು 0.11 ಮಿಲಿಯನ್ ಪ್ಲೇಟ್ ಮೊಸರನ್ನ. ರಾತ್ರೆಗೆ 60,000 ಚಪಾತಿಗಳನ್ನು ಉಣಬಡಿಸಲಾಗುತ್ತದೆ. ಜನರೂ ಕಡಿಮೆ ದರದಲ್ಲಿ ಹೊಟ್ಟೆತುಂಬಿದ ಸಂತೋಷದಿಂದ ಹರಸಿ ಹೋಗುವ ದೃಶ್ಯ ಸಾಮಾನ್ಯ. ಈ ಯೋಜನೆಗಾಗಿಯೇ ಸರಕಾರ ವಾರ್ಷಿಕ 200-300 ಕೋಟಿ ರೂಪಾಯಿಗಳನ್ನು ವಿನಿಯೋಗಿಸುತ್ತಿದೆ. ಚೆನೈ ನಗರದಲ್ಲಿಯೇ ದಿನಕ್ಕೆ 1.5 ಲಕ್ಷ ಜನರನ್ನು ಉಣಬಡಿಸಲು 5 ಲಕ್ಷ ರುಪಾಯಿಗಳನ್ನು ಬಳಸಲಾಗುತ್ತಿದೆ. ಇದರಿಂದ ಜನರು ಸುಮಾರು 2,000 ರೂಪಾಯಿಗಳನ್ನು ತಮ್ಮ ಆಹಾರದ ಖರ್ಚಿನಿಂದ ಉಳಿಸಲು ಸಾಧ್ಯವಾಗುತ್ತಿದೆ. ಉಳಿತಾಯದ ಈ ಹಣವನ್ನು ಇತರ ಮೂಲಗಳಿಗೆ ಧನಾತ್ಮಕವಾಗಿ ವಿನಿಯೋಗಿಸಲು ಸಹಾಯ ಮಾಡುತ್ತಿದೆ. ತಮಿಳುನಾಡಿನ ಅನೇಕ ಬಡ, ಅವಿವಾಹಿತ ಉದ್ಯೋಗಿಗಳು, ನಿರಾಶ್ರಿತರ ಜನರು ಆಹಾರಕ್ಕಾಗಿ ತಮ್ಮ ಮನೆಗಳಲ್ಲಿ ಒಲೆಯನ್ನೇ ಹಚ್ಚುವುದಿಲ್ಲ.

ತಮಿಳುನಾಡು ಸರಕಾರದ 2016ರ ಬಜೆಟ್ ದಾಖಲೆಯ ಪ್ರಕಾರ 2011ರಿಂದ 4,331 ಕೋಟಿ ವೆಚ್ಚದಲ್ಲಿ 31,78 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್‍ಗಳನ್ನು ವಿತರಿಸಿದೆ. 7,775 ಕೋಟಿ ವೆಚ್ಚದಲ್ಲಿ 1.76 ಲಕ್ಷ ಫ್ಯಾನ್, ಸ್ಟವ್, ಮಿಕ್ಸಿ, ಗ್ರ್ಯಾಂಡರ್ ಸೆಟ್‍ಗಳನ್ನು ಜನರಿಗೆ ಹಂಚಿದೆ. ಇವುಗಳ ಮುಂದೆ ಪರಿಷ್ಕೃತ ದರದಲ್ಲಿ ಆಹಾರ ಒದಗಿಸುತ್ತಿರುವ 200 ರಿಂದ 300 ಕೋಟಿ ಖರ್ಚಿನ ಅಮ್ಮ ಮೆಸ್‍ಗಳಿಗೆ ತಗಲುವ ವೆಚ್ಚ ಕಡಿಮೆಯೆಂದೇ ಹೇಳಬೇಕು. ಇಷ್ಟಿದ್ದೂ ಇಂತಹ ಅನೇಕ “ಉಚಿತ ಯೋಜನೆ”ಗಳಿಗೆ ಸರಕಾರ ಸಾವಿರಾರು ಕೋಟಿಗಳನ್ನು ವಿನಿಯೋಗಿಸುತ್ತಿದೆ. ಆರ್ಥಿಕ ಶಿಸ್ತಿನ ಮೇಲೆ ಗಂಭೀರ ಪರಿಣಾಮ ಬೀರಬಲ್ಲ ಯೋಜನೆಗೆ ಸಾಧ್ಯವಾಗಿರುವುದು ತಮಿಳುನಾಡಿನ ಆರ್ಥಿಕ ಬೆಳವಣಿಗೆ. 150 ಬಿಲಿಯನ್ ಗ್ರಾಸ್ ಡೊಮೆಸ್ಟಿಕ್ ಸ್ಟೇಟ್ ಪ್ರಾಡಕ್ಟ್(ಜಿ.ಎಸ್.ಡಿ.ಪಿ) ಹೊಂದಿರುವ ದೇಶದ ಎರಡನೇ ಅತೀ ದೊಡ್ಡ ಆರ್ಥಿಕ ಬೆಳವಣಿಗೆಯಿರುವ ರಾಜ್ಯ ತಮಿಳುನಾಡು. ಹಾಗಾಗಿಯೇ ಅದರ ಎಲ್ಲಾ ಸಾಮಾಜಿಕ ಉದಾರಿ ಯೋಜನೆಗಳು ಅಷ್ಟು ಯಶಸ್ವಿಯಾಗಿ ಸಾಗುತ್ತಿರುವುದು. ರಾಜ್ಯ ಸರಕಾರ ನೀಡುತ್ತಿರುವ ಅಂಕಿ ಸಂಖ್ಯೆಗಳಲ್ಲಿ ನಿಖರತೆ ಇಲ್ಲದಿರಬಹುದು ಆದರೆ ಒಟ್ಟಾರೆ ಚಿತ್ರಣ ಭದ್ರವಾಗಿರುವಂತೆ ತೋರುತ್ತದೆ.

ಅತೀ ಕಡಿಮೆ ವೆಚ್ಚದ ಊಟ ಒದಗಿಸುವ ಯೋಜನೆ ತಮಿಳುನಾಡಿಗೆ ಹೊಸತಲ್ಲ. 1945ರಲ್ಲಿ ಹೆನ್ರಿ ಟ್ರೂಮನ್ ಅಧ್ಯಕ್ಷರಾಗಿದ್ದಾಗ ಅಮೆರಿಕದ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಹಾಗೂ ಪೌಷ್ಟಿಕಾಂಶಯುಕ್ತ ಮಧ್ಯಾಹ್ನದ ಬಿಸಿಯೂಟ ನೀಡುವ “ನ್ಯಾಷನಲ್ ಸ್ಕೂಲ್ ಆಕ್ಟ್” ಜಾರಿಗೆ ತರಲಾಯಿತು. ಅದರ ಯಶಸ್ಸಿನಿಂದ ಆ ಕಾಲದಲ್ಲಿ ಜಗತ್ತಿನಾದ್ಯಂತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಊಟದ ವಿತರಣೆಗೆ ಕಾರಣವಾಯಿತು. ಆದರೆ 1923ರಲ್ಲಿಯೇ ಅಂದರೆ ಅಮೆರಿಕಗಿಂತಲೂ 22 ವರ್ಷಗಳಿಗೆ ಹಿಂದೆಯೇ ಬ್ರಿಟಿಷ್ ಆಡಳಿತವಿದ್ದ ಮದ್ರಾಸ್ ಪ್ರಾಂತ್ಯದ ಅನೇಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ಶಾಲೆಗಳತ್ತ ಆಕರ್ಷಿತರಾಗಿ ಶಿಕ್ಷಣವನ್ನು ಮುಂದುವರೆಸಿದರೋ ಇಲ್ಲವೋ ಗೊತ್ತಿಲ್ಲ. ಆದರೆ ಆಧುನಿಕ ಕಾಲಘಟ್ಟದಲ್ಲಿ ಬೆಳೆಯುವ, ಕಲಿಯುವ ಮಕ್ಕಳಿಗೆ ಅಗತ್ಯ ಪೌಷ್ಟಿಕಾಂಶ ನೀಡುವ ಮೊದಲ ಯೋಚನೆ ಬಹು ಮಹತ್ವದ್ದು. 1960ರ ಸುಮಾರಿಗೆ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಕೆ.ಕಾಮರಾಜ್ ಚೆನೈನಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಪ್ರಾರಂಬಿಸಿದರು. ಕ್ರಮೇಣ ಅದು ಇತರ ಜಿಲ್ಲೆಗಳಿಗೂ ವಿಸ್ತರಿಸಿತು. 1982ರಲ್ಲಿ “ಸತುನಾವು ಥಿತಮ್” ಎಂಬ ಬಹು ಪ್ರಖ್ಯಾತ ಪೌಷ್ಟಿಕಾಂಶ ಕೇಂದ್ರಿತ ಬಿಸಿಯೂಟ ಯೋಜನೆಯನ್ನು ಎಂಜಿ. ರಾಮಚಂದ್ರನ್ ಜಾರಿಗೆ ತಂದರು. ಇಂದಿಗೂ ತಮಿಳುನಾಡಿನ ಶಾಲೆಗಳಲ್ಲಿ ಅದೇ ಯೋಜನೆ ಮುಂದುವರೆಯುತ್ತಿದೆ. 1990ರ ಹೊತ್ತಿಗೆ ಅದನ್ನು ಕ್ರಮೇಣ 12 ರಾಜ್ಯಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ ಜಾರಿಗೆ ತರಲಾಯಿತು. ಅಮ್ಮ ಆ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿ ಅದನ್ನು ಶಾಲೆಗಳಿಂದ ಪ್ರತಿಯೊಬ್ಬ ಬಡ, ಸೌಲಭ್ಯವಂಚಿತ ಜನಸಾಮಾನ್ಯರತ್ತ ಕೊಂಡೊಯ್ದರು. ಅದೇ ಕಾರಣಕ್ಕೆ ಅಮ್ಮ ಯಶಸ್ವಿಯಾದರು. 2006ರ ಚುನಾವಣೆಯಲ್ಲಿ ಕರುಣಾನಿಧಿ ಎಲ್ಲರಿಗೂ ಉಚಿತ ಟಿ.ವಿ. ನೀಡುವ ಭರವಸೆ ನೀಡಿ ಗೆದ್ದರು. ಜಯಲಲಿತಾ ಅದನ್ನೇ ದಾಳವಾಗಿಟ್ಟುಕೊಂಡು ಲ್ಯಾಪ್ ಟಾಪ್‍ನಿಂದ ನೀರಿನವರೆಗೆ ಸಕಲವನ್ನೂ ಸರಕಾರದ ವೆಚ್ಚದಲ್ಲಿ ನೀಡುತ್ತಾ ಚುನಾವಣೆಯನ್ನೂ, ಜನರ ನಿಷ್ಟೆಯನ್ನೂ ಗೆಲ್ಲುತ್ತಾ ಬಂದರು.

ನೀಡುವ ಕನಿಷ್ಟ ದರದ ಆಹಾರ ಒಂದೆಡೆಯಾದರೆ ಈ ಯೋಜನೆ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಒದಗಿಸುತ್ತಿರುವ ಉದ್ಯೋಗವೂ ಗಮನಾರ್ಹ. ವಾರ್ಡ್ ಕೌನ್ಸಿಲರ್ ಸಹಾಯದಿಂದ ಆಯಾ ಪ್ರದೇಶದ ಮಹಿಳಾ ಸ್ವಸಹಾಯ ಗುಂಪುಗಳಿಂದ ಕೆಲಸಗಾರರನ್ನು ಆರಿಸಲಾಗುತ್ತದೆ. ಅಲ್ಲಿನ ಹೆಚ್ಚಿನ ಕೆಲಸಗಾರರು ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು. ಪ್ರತೀ ಕ್ಯಾಂಟೀನ್‍ಲ್ಲೂ 10 ರಿಂದ 16 ಮಹಿಳಾ ಸಿಬ್ಬಂದಿಗಳನ್ನು ಕೆಲಸಕ್ಕೆ ನೇಮಕ ಮಾಡಲಾಗುತ್ತದೆ. ಪಾಲಿಕೆಯ ಮೂಲಕ ತಿಂಗಳಿಗೆ 7,500 ರೂಪಾಯಿಗಳ ಸಂಬಳ ಅವರ ಕೈ ಸೇರುತ್ತದೆ. ಇದು ಅನೇಕ ಮಹಿಳೆಯರ ಪಾಲಿಗೆ ಉದ್ಯೋಗ ಒದಗಿಸಿ ಆರ್ಥಿಕ ಸಾಮಾಜಿಕ ಸಬಲೀಕರಣಕ್ಕೆ ಕಾರಣವಾಗಿರುವ ಯೋಜನೆಯೂ ಕೂಡ. ಲಾಭ ರಹಿತ, ನಷ್ಟಹೀನ ಆಶಯದಿಂದ ಪ್ರಾರಂಭಗೊಂಡ ಕ್ಯಾಂಟೀನ್‍ಗಳು ನಷ್ಟದಿಂದ ಬಳಲುತ್ತಿರುವುದು ಗೊತ್ತಿರದ ಸಂಗತಿಯಲ್ಲ. ಇದು ಭಾರತದ ಎಲ್ಲಾ ಜನಪ್ರಿಯ ಸಾಮಾಜಿಕ ಯೋಜನೆಗಳ ಪರಿಸ್ಥಿತಿಯೂ ಹೌದು. ಆದರೆ ಅದರ ಸಾಮಾಜಿಕ ಪರಿಣಾಮದ ಮುಂದೆ ನಷ್ಟದ ಪ್ರಮಾಣ ಅಪ್ರಸ್ತುತ. ಅದೇ ರೀತಿ ಜನರ ಬಾಯಿಗೆ ಅನ್ನ ನೀಡುವ ಬದಲು ಜನರೇ ಅನ್ನವನ್ನು ಸಂಪಾದಿಸುವಂತೆ ಸಕ್ಷಮಗೊಳಿಸುವ, ಈ ಯೋಜನೆಗಿಂತ ಭಿನ್ನವಾದ ಕ್ರಿಯಾತ್ಮಕ ಯೋಜನೆಗಳನ್ನು ಸರಕಾರಗಳು ರೂಪಿಸಬೇಕು. ಯಾಕೆಂದರೆ ಭೋಗ, ಭಾಗ್ಯಗಳಿಗಿಂತ ಸ್ವಂತ, ಸ್ವಾಭಿಮಾನದ ಬದುಕು ದೊಡ್ಡದು.

ಹಣದುಬ್ಬರದ ಏರಿಳಿತಕ್ಕೆ ಜನರನ್ನು ದೂಡದೆ ಜನರಿಗೆ ಉಪಕಾರ ಮಾಡುತ್ತಿರುವ ಈ ಯೋಜನೆ ಮತ್ತೊಂದು ದೃಷ್ಟಿಯಿಂದ ಬೀದಿ ಬದಿಯ ಸಣ್ಣ ಗಾತ್ರದ ಆಹಾರ ವ್ಯಾಪಾರಿಗಳಿಗೆ ಎಂಬ ಮಾತುಗಳಿವೆ. ಬುದ್ದಿವಂತ ವ್ಯಾಪಾರಿಗಳು ಒಂದೋ ಅಮ್ಮ ಮೆಸ್‍ನಲ್ಲಿ ದೊರೆಯದ ಸಹವರ್ತಿ ಆಹಾರ ಪದಾರ್ಥಗಳನ್ನು ತಯಾರಿಸುವತ್ತ ಮುಖ ಮಾಡಿದರು. ಇನ್ನೂ ಕೆಲವರು ಅಮ್ಮ ಮೆಸ್‍ಗಳು ಇಲ್ಲದ ಜಾಗದಲ್ಲಿ ತಮ್ಮ ತಾಣವನ್ನು ಮಾಡಿ ತಮ್ಮ ಅಸ್ತಿತ್ವವನ್ನೂ ಉಳಿಸಿಕೊಂಡಿದ್ದಾರೆ. ಯೋಜನೆಯ ಎರಡೂ ಮುಖಗಳನ್ನು ನೋಡಿದರೆ ಹಸಿದು ಬಂದವರಿಗೆ ಸರಕಾರಿ ಕ್ಯಾಂಟೀನ್ ಒಂದು ಸಬ್ಸಿಡಿ ದರದಲ್ಲಿ ಆಹಾರ ಒದಗಿಸುತ್ತಿರುವುದು ಬಹುದೊಡ್ಡ ಸಾಧನೆ. ಇಂತಹ ಕ್ರಮಗಳು ಸಂಪದ್ಭರಿತ ರಾಜ್ಯ ಪ್ರಜೆಗಳಿಗೆ ಸಲ್ಲಿಸುವ ಸೇವೆಯಂತೆ, ಮೌರ್ಯ ರಾಜ ಅಶೋಕ ಪ್ರಾಚೀನ ಭಾರತದಲ್ಲಿ ಜಾರಿಗೊಳಿಸಿದ್ದ “ಧಮ್ಮ” ಸಿದ್ದಾಂತದ ಆಧುನಿಕ ರೂಪದಂತೆ ತೋರುತ್ತದೆ.

ಈ ಯೋಜನೆಯನ್ನು ಜಯಲಲಿತಾ ಎಷ್ಟು ಪರಿಣಾಮಕಾರಿಗೊಳಿಸಿದರು ಎಂದರೆ ಇತ್ತೀಚೆಗೆ ಈಜಿಪ್ಟ್ ಹಾಗೂ ದಕ್ಷಿಣ ಕೊರಿಯಾ ದೇಶದ ಪ್ರತಿನಿಧಿಗಳು ತಮಿಳುನಾಡಿಗೆ ಆಗಮಿಸಿ ತಮ್ಮ ದೇಶಗಳಲ್ಲಿ ಇದನ್ನು ಜಾರಿಗೊಳಿಸಲು ಅಧ್ಯಯನ ನಡೆಸಿ ಯೋಜನೆ ರೂಪಿಸುತ್ತಿರುವುದಕ್ಕೆ ಸಾಕ್ಷಿ. ರಾಜಕೀಯವಾಗಿಯೂ ಹಾಗೂ ಸಾಮಾಜಿಕವಾಗಿಯೂ ಇದು ಬಹಳ ಪ್ರಭಾವಶಾಲಿ. ಅದೇ ಕಾರಣದಿಂದ ದೆಹಲಿಯ ಸರಕಾರವೂ ಬಡಜನರಿಗೆ ಆಮ್ ಆದ್ಮಿ ಮೆಸ್‍ಗಳನ್ನು ತೆರೆಯುವ ಯೋಚನೆ ಮಾಡಿದೆ. ಈ ವರ್ಷದ ಜೂನ್‍ನಲ್ಲಿ ಆಂದ್ರ ಪ್ರದೇಶ ಸರಕಾರ ದಿನಗೂಲಿ ನೌಕರರಿಗೆ ರಾಜ್ಯಾದ್ಯಂತ “ಅಣ್ಣಾ ಎನ್.ಟಿ.ಆರ್. ಕ್ಯಾಂಟೀನ್”ಗಳನ್ನು ತೆರೆಯುವ ಯೋಜನೆಯನ್ನು ಘೋಷಿಸಿದೆ. ಮಧ್ಯಪ್ರದೇಶ ಸರಕಾರವೂ ಬಡವರಿಗಾಗಿ ಇದೇ ರೀತಿಯ ಯೋಜನೆಯನ್ನು ಜಾರಿಗೊಳಿಸುವ ಯೋಚನೆಯಲ್ಲಿದೆ.

ವಿಶ್ವಸಂಸ್ಥೆಯ ಅಂಗಸಂಸ್ಥೆ ಫುಡ್ ಆಂಡ್ ಅಗ್ರಿಕಲ್ಚರಲ್ ಆರ್ಗನೈಸೇಶನ್(ಆಹಾರ ಮತ್ತು ಕೃಷಿ ಸಂಸ್ಥೆ)ನ ಇತ್ತೀಚಿನ “ದಿ ಸ್ಟೇಟ್ ಆಫ್ ಫುಡ್ ಇನ್ಸೆಕ್ಯುರಿಟಿ ಇನ್ ದಿ ವಲ್ಡ್ 2015” (ವಿಶ್ವದ ಆಹಾರ ಅಭದ್ರತೆಯ ಪರಿಸ್ಥಿತಿ 2015)ರ ವರದಿಯ ಪ್ರಕಾರ ಭಾರತದಲ್ಲಿ ದಿನನಿತ್ಯ 194.6 ಮಿಲಿಯನ್ ಅಂದರೆ 19.46 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಭಾರತ ನಗರೀಕರಣಗೊಳ್ಳುತ್ತಿರುವ ದೇಶ. ಹಾಗಾಗಿ ಸರಿಯಾದ ಯೋಜನೆ ರೂಪಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳದ ಹೊರತು ನಗರೀಕರಣಗೊಂಡಂತೆಲ್ಲ ನಿರಾಶ್ರಿತರ, ಬಡವರ, ಹಸಿವಿನಿಂದ ಬಳಲುವವರ ಸಂಖ್ಯೆಯೂ ಹೆಚ್ಚಲಿದೆ. ತಕ್ಷಣದ ಪರಿಸ್ಥಿತಿಯಿಂದ ನೋಡಿದರೆ ಸರಕಾರಗಳ ಕಡಿಮೆ ಮೊತ್ತದ ಆದರೆ ಉತ್ತಮ ಗುಣಮಟ್ಟದ ‘ಅಮ್ಮ ಮೆಸ್’ನಂತಹ ಆಹಾರ ಪೂರೈಸುವ ಯೋಜನೆಗಳು ಈ ದೇಶದ ಹಸಿವು ಹಾಗೂ ಪೌಷ್ಟಿಕತೆಯ ಕೊರತೆಯನ್ನು ನೀಗಿಸಿ ದೇಶವನ್ನು ಮತ್ತಷ್ಟು ಉತ್ಪಾದಕಗೊಳಿಸಲು ಸಹಾಯ ಮಾಡುತ್ತವೆ.

ಕರ್ನಾಟಕದಿಂದ ಚಲನಚಿತ್ರ ನಟಿಯಾಗಿ ಬೆಳೆದು ತಮಿಳುನಾಡಿನ ಜನನಾಯಕಿಯಾಗಿ ಮೆರೆದ ಜಯಲಲಿತ ವಿಧಿವಶರಾಗಿದ್ದಾರೆ. ಒಂದು ವೋಟಿನಿಂದ ವಾಜಪೇಯಿ ಸರಕಾರವನ್ನು ಬೀಳಿಸಿ ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿ, ಕಾವೇರಿ ವಿಚಾರದಲ್ಲಿ ಕರ್ನಾಟಕದ ನೆಮ್ಮದಿಯನ್ನು ಕಂಗೆಡೆಸಿದ್ದ ಸೆಲ್ವಿ ಜಯಲಲಿತರನ್ನು ತಮಿಳುನಾಡಿನ ಜನರು ವಿಪರೀತವಾಗಿ ಇಷ್ಟಪಟ್ಟು, ಹುಚ್ಚರಂತೆ ಪೂಜಿಸುತ್ತಿರುವುದಕ್ಕೆ, ಮುಖ್ಯಮಂತ್ರಿಯಾಗಿ ಅನೇಕ ಸಮಾಜ ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇ ಪ್ರಮುಖ ಕಾರಣ. ಸಾಕಷ್ಟು ಸಂಪತ್ತನ್ನು ಮಾಡಿದ್ದರೂ ಅದ್ಯಾವುದು ಜಯಾರನ್ನು ಉಳಿಸಲಿಲ್ಲ. ಆದರೆ “ಅಮ್ಮ ಯೋಜನೆ”ಗಳ ಮೂಲಕ ಸಂಪಾದಿಸಿದ್ದ ಲಕ್ಷಾಂತರ ತಮಿಳು ಅಭಿಮಾನಿಗಳ ಪ್ರೀತಿ ಆಕೆಯನ್ನು ತಮಿಳುನಾಡಿನ ಇತಿಹಾಸದಲ್ಲಿ ಅಜರಾಮರಗೊಳಿಸಲಿದೆ.

19 ಟಿಪ್ಪಣಿಗಳು Post a comment
  1. shripad
    ಡಿಸೆ 12 2016

    “ತಾಯಿ ತನಗಿಲ್ಲದಿದ್ದರೂ ತನ್ನ ಮಕ್ಕಳಿಗೆ ಹೊಟ್ಟೆ ತುಂಬ ಬಡಿಸುವುದಿಲ್ಲವೆ? ”
    ಈ ಅಮ್ಮಳ ವಿಷಯದಲ್ಲಿ ಇದು ಸರಿ ಅಲ್ಲ. ಆಗಾಗ ಜೈಲಿಗೆ ಹೋಗಿ ಬಂದ ಸಂದರ್ಭ ನೆನಪಿಸಿಕೊಳ್ಳಿ.
    ಕೆಲಸಕ್ಕೆ ಬಾರದ ಸಮಾಜವಾದೀ ಕಲ್ಯಾಣ ರಾಜ್ಯದ ಚಿಂತನೆಯಿಂದ ಜನತಂತ್ರ ವ್ಯವಸ್ಥೆ ಹಳ್ಳ ಹಿಡಿಯುವಂತೆ ಮಾಡಿದ್ದರಲ್ಲಿ ಈಯಮ್ಮಳ ಪಾತ್ರ ಅಸಾಧಾರಣ. ಬಿಟ್ಟಿ ಕೊಟ್ಟರೆ ಯಾರು ಬೇಡ ಅಂತಾರೆ? ಜನ ತಾವು ಸ್ವಾಭಿಮಾನಿಗಳು ಅಂದುಕೊಳ್ಳುತ್ತಾರೆ…ಆದರೆ ಸವಲತ್ತುಗಳ ವಿಷಯದಲ್ಲಿ ಅಯ್ಯಯ್ಯೋ ನಮಗೆ ದಿಕ್ಕಿಲ್ಲ, ನಮಗೆ ತಿಳಿಯುವುದಿಲ್ಲ ಇತ್ಯಾದಿ ಅಲವತ್ತುಕೊಳ್ಳುವುದನ್ನೂ ಬಿಡುವುದಿಲ್ಲ. ಆಯ್ತು…ಎಷ್ಟು ಕಾಲ ಹೀಗೆ ಪುಕ್ಸಟ್ಟೆ ಕೊಡುತ್ತೀರಿ? ಹಸಿದ ಹೊಟ್ಟೆ ಶಾಶ್ವತ ತುಂಬುವುದು ಎಂದು?
    ರಾಜಕೀಯ ಪ್ರೇರಿತ ಇಂಥ ಚೀಪ್ ಜನಪ್ರಿಯ ಯೋಜನೆಗಳಿಗಿಂತ ಸೃಷ್ಟಿಶೀಲ, ಉದ್ಯೋಗಶೀಲ ಸಮಾಜ ಸೃಷ್ಟಿಸುವಂತೆ ಎಲ್ಲರ ಕೈಗೆ ಕೆಲಸವನ್ನೂ ಆಹಾರ ಬೆಲೆ ನಿಯಂತ್ರಣವನ್ನೂ ಬೆಳೆಗೆ ಸೂಕ್ತ ದರ ನಿಗದಿಯನ್ನೂ ಕೃಷಿ ನೀತಿಯನ್ನೂ ಜಾರಿಗೆ ತರಬಹುದಿತ್ತಲ್ಲಾ? ಇಂಥ ಕೆಲಸಕ್ಕೆ ಮುತ್ಸದ್ದಿತನ ಬೇಕು, ವೋಟ್ ಬ್ಯಾಂಕ್ ಪಾಲಿಟಿಕ್ಸ್ ಅಲ್ಲ.
    ದೇವೇಗೌಡರು ಹೇಳಿದಂತೆ ‘ತನಗೇ ಮೊಬೈಲ್ ಬಳಕೆ ಗೊತ್ತಾಗಲ್ಲ, ಇನ್ನು ಹಳ್ಳೀಜನ ಏನ್ ಮಾಡ್ತಾರೆ’ ಅಂದಹಾಗೆ-ಎಷ್ಟು ಕಾಲ ಇಂಥ ಕಿತ್ತುಹೋದ ಚಿಂತನೆಯನ್ನು ಒಪ್ಪುವುದು? ಗೊತ್ತಾಗಲ್ಲ ಅಂದ್ರೆ-ಕಲಿಯಿರಿ, ಕಲಿಸಿರಿ. “ಪಾಪ ಜನಕ್ಕೆ ಏನೂ ಗೊತ್ತಾಗಲ್ಲ” ಅನ್ನುವ ಜನರ ಪ್ರಾಮಾಣಿಕತೆ ಬಗ್ಗೆ ಅನುಕಂಪವಿದೆ.

    ಉತ್ತರ
  2. SalamBava
    ಡಿಸೆ 12 2016

    Jayalalitha Amma was a charismatic politician who captured the imagination of the masses of Tamil Nadu both as cinema star and politician. Coming from Brahminical patriarchy background she evolved in the non Brahmnical yet patriarchal turf in cinema and politics. She hardened like cement but her politics is that of a compassionate mother. She lacked the ideological background of Marxists but she implemented more pro poor policies than hard nosed Marxists. She was secular and didn’t hesitate to send Shankaracharya to jail. She was a tall figure in the sphere of South Indian politics.

    ಉತ್ತರ
  3. shripad
    ಡಿಸೆ 12 2016

    “. She was secular and didn’t hesitate to send Shankaracharya to jail” She was secular because she sent Shankaracharya to Jail…!!! If She had sent a Cleric to the jail, then she would have become a communal…?

    ಉತ್ತರ
    • ಶೆಟ್ಟಿನಾಗ ಶೇ.
      ಡಿಸೆ 13 2016

      ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯರಂತಹ ಪ್ರಭಾವಶಾಲಿ ಸನಾತನಿಯನ್ನೂ ಗುರುತರ ಅಪರಾಧದ ಹಿನ್ನೆಲೆಯಲ್ಲಿ ಅರೆಸ್ಟ್ ಮಾಡಿಸುವ ಕೆಚ್ಚು ಅಮ್ಮನಿಗಲ್ಲದೆ ಮತ್ಯಾರಿಗಿದೆ ರಾಯರೇ? ಕನ್ನಡ ನಾಡಿನಲ್ಲಿ ಮಡೆಸ್ನಾನವನ್ನೂ ಪಂಕ್ತಿಭೇದವನ್ನೂ ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುವ ಪ್ರಭಾವಶಾಲಿ ಸನಾತನಿಯೊಬ್ಬರನ್ನು ಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸುವ ಕೆಚ್ಚು ಕನ್ನಡದ ರಾಜಕಾರಣಿಗಳಿಗಿದೆಯೇ?

      ಉತ್ತರ
      • shripad
        ಡಿಸೆ 13 2016

        ಕಂಚಿ ಶಂಕರಾಚಾರ್ಯರನ್ನು ಜೈಲಿಗೆ ಕಳುಹಿಸಿದ ಕೆಚ್ಚೆದೆ ಅಂತೀರಲ್ಲಾ? ಅದರ ನೈಜ ಕಾರಣ ಏನು? ಮಠದ ಟ್ರಸ್ಟ್ ನಡೆಸುತ್ತಿರುವ ಮೆಡಿಕಲ್ ಕಾಲೇಜಿನ ಯಜಮಾನಿಕೆ ಕೊಟ್ಟಿಲ್ಲ ಅಂತ ತಾನೇ? ಸುಳ್ಳು ‘ಕೊಲೆ ಆರೋಪ’ ಸಾಬಿತಾಯ್ತಾ?

        ಉತ್ತರ
        • ಶೆಟ್ಟಿನಾಗ ಶೇ.
          ಡಿಸೆ 13 2016

          ಆತ್ಮವಿಕಸನಕ್ಕೆ ಸೀಮಿತವಾಗಿರತಕ್ಕ ಕಂಚಿ ಮಠಕ್ಕೆ ಮೆಡಿಕಲ್ ಕಾಲೇಜು ನಡೆಸಿ ಹಣ ಮಾಡುವ ಹುಚ್ಚೇಕೆ ರಾಯರೇ?

          ಉತ್ತರ
          • ಶೆಟ್ಟಿನಾಗ ಶೇ.
            ಡಿಸೆ 13 2016

            ಪಾರಮಾರ್ಥಿಕ ಚಿಂತನೆಗೆ ಸೀಮಿತವಾಗಿರತಕ್ಕ ಕಂಚಿ ಮಠಕ್ಕೆ ಮೆಡಿಕಲ್ ಕಾಲೇಜು ಮೂಲಕ ಶೀಕ್ಷಣವನ್ನು ಮಾರಿ ಆರ್ಥಿಕ ಲಾಭ ಮಾಡಿಕೊಳ್ಳುವ ಹುಚ್ಚೇಕೆ ರಾಯರೇ?

            ಉತ್ತರ
            • ಶೆಟ್ಟಿನಾಗ ಶೇ.
              ಡಿಸೆ 14 2016

              ಪ್ರಶ್ನೆ ನೋಡಿ ರಾಯರಿಗೆ ಮರ್ಮಾಘಾತವಾಗಿದೆ ಅಂತ ಅವರ ಮೌನವೆ ಹೇಳುತ್ತಿದೆ! ಹೆಹ್ಹೆಹೆ!! ವೈದಿಕಶಾಹಿಯು ಪಾರಮಾರ್ಥಿಕ ಚಿಂತನೆಯ ಮುಖವಾಡ ಧರಿಸಿ ಆರ್ಥಿಕ ಲಾಭವನ್ನು ಸಹಸ್ರಾರು ವರ್ಷಗಳಿಂದ ಮಾಡುತ್ತಲೇ ಬಂದಿದೆ. ಇದನ್ನು ವಿರೋಧಿಸಿ ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿ ಹುಟ್ಟಿ ಬೆಳೆದು ಬ್ರಾಹ್ಮಣೇತರ ಪರ್ಯಾಯವನ್ನು ರಾಜಕೀಯಕ್ಕೆ ಕೊಟ್ಟಿದೆ. ಅಮ್ಮ ಕೂಡ ಈ ಅವೈದಿಕ ಮಣ್ಣಿನ ಮಕ್ಕಳ ರಾಜಕೀಯ ಚಳುವಳಿಯ ಕಾವಿನಲ್ಲಿ ಪಕ್ವವಾದ ರಾಜಕಾರಣಿ. ಆದುದರಿಂದ ಆಕೆ ಶಂಕರಾಚಾರ್ಯರನ್ನು ಜೈಲಿಗೆ ಕಳುಹಿಸಲು ಹಿಂದೇಟು ಹಾಕಲಿಲ್ಲ.

              ಉತ್ತರ
              • shripad
                ಡಿಸೆ 14 2016

                ಡಬ್ಬಾ ವೈದಿಕ ಅವೈದಿಕ, ಪುರೋಹಿತಶಾಹಿ, ಕಿತ್ತುಹೋದ ಹಳಸಲು ದ್ರಾವಿಡ-ಆರ್ಯ ಚಿಂತನೆಗಳನ್ನೇ ವೈದಿಕರಂತೆ ಬಾಯಿಪಾಠ ಮಾಡಿ ಒಪ್ಪಿಸುತ್ತ ಕೇಳುವ ಪ್ರಶ್ನೆಗೆ ಉತ್ತರಕೊಡುವ ಅಗತ್ಯವೇ ಇಲ್ಲ, ಯಾಕಂದರೆ ಇಂಥ ಪ್ರಶ್ನೆಗಳಿಗೆ ತಲೆಯೂ ಇಲ್ಲ ಬುಡವೂ ಇಲ್ಲ!
                ಪುರೋಹಿತಶಾಹಿ ಬೈಯುತ್ತ, ಬಿಟ್ಟಿ ಊಟ ಸಿಗುವುದನ್ನು ಹೊಗಳುತ್ತ ಕೂರುವುದು ಬಿಟ್ಟರೆ ಇನ್ನೇನು ಉದ್ಧರಿಸಿದೆ ಈ ಚಿಂತನೆ?

                ಉತ್ತರ
              • Shripad
                ಡಿಸೆ 15 2016

                ಅಯ್ಯಯ್ಯ…ಸತಸತಮಾನಗಳಿಂದ ಸೋಸಿಸುತ್ತ ಬಂದ ಪುರೋಇತಸಾಇ ಪಳೆಯುಳಿಕೆಯಾದ ಈ ‘ಜಯಮ್ಮ’ ನೇ ಸತಸತಮಾನಗಳಿಂದ ಸೋಸಣೆಗೊಳಗಾದ ‘ಮಾಯಕ್ಕ’ನಿಗಿಂತ ವಾಸಿ ಎಂದು ಹೇಳುತ್ತಿದ್ದೀರಿ! ಭೇಷ್. ಇಲ್ಲೂ ಸಂಕಟ ಯಾರಿಗೆ ಚೆನ್ನಾಗಿ ಅರ್ಥವಾಗುತ್ತದೆ ಎಂಬುದು ಸಾಬೀತಾಯಿತು!!

                ಉತ್ತರ
                • ಶೆಟ್ಟಿನಾಗ ಶೇ.
                  ಡಿಸೆ 16 2016

                  ತಮಿಳುನಾಡಿನ ರಾಜಕೀಯ ಇತಿಹಾಸದ ಬಗ್ಗೆ ಪ್ರಾಥಮಿಕ ಮಾಹಿತಿಯೂ ನಿಮಗಿಲ್ಲ ರಾಯರೇ! ತಮಿಳುನಾಡಿನ ಜನರು ನಿಮಗಿಂತ ಹೆಚ್ಚು ರಾಜಕೀಯ ಸಂವೇದನೆ ಇರುವವರಾಗಿದ್ದಾರೆ. ಆದುದರಿಂದ ವೈದಿಕ ಕುಟುಂಬದಿಂದ ಬಂದಿದ್ದರೂ ಅವೈದಿಕ ದ್ರಾವಿಡ ಸಂವೇದನೆಯನ್ನು ಮೈಗೂಡಿಸಿಕೊಂಡ ಜಯಲಲಿತಾ ಅಮ್ಮನನ್ನು ಹಲವು ಚುನಾವಣೆಗಳಲ್ಲಿ ಬೆಂಬಲಿಸಿದ್ದಾರೆ. ಅಮ್ಮ ಇಲ್ಲದ ಈ ಹೊತ್ತಿನಲ್ಲಿ ಚಿನ್ನಮ್ಮನನ್ನು ಬೆಂಬಲಿಸಲಿದ್ದಾರೆ.

                  ಉತ್ತರ
                  • shripad
                    ಡಿಸೆ 16 2016

                    ತಮಿಳುನಾಡಿನ ರಾಜಕಾರಣವೋ ನಿಮಗೇ ಇರಲಿ. ಆ ಜನ ಪುಗ್ಸಟ್ಟೆ ಯೋಜನೆ ತಿಂದು, ಸಾಲದ ಸುಳಿಗೆ ಸಿಕ್ಕ ಸರ್ಕಾರದಿಂದ ಮುಂದಿನ ದಿನಗಳಲ್ಲಿ ತೆರಿಗೆ ಭಾರದಿಂದ ಸೋತು ಅಮ್ಮಾ ಹಗ್ಗ ಯೋಜನೆಯೂ ಇದ್ದಿದ್ದರೆ ಎಂದು ಯೋಚಿಸುವಂತಾಗದಿದ್ದರೆ ಸಾಕು! ಇಲ್ಲೇ ಇನ್ನೊಂದು ಲೇಖನವಿದೆ. ಓದಿ. ನಿಮ್ಮ ಭಯಂಕರ ಆರ್ಥಿಕ ಜ್ನಾನ ಹೆಚ್ಚಿಸಿಕೊಳ್ಳಿ.

                    ಉತ್ತರ
                    • ಶೆಟ್ಟಿನಾಗ ಶೇ.
                      ಡಿಸೆ 17 2016

                      ರಾಯರೇ, ನಿಮ್ಮಂತಹ ಭಂಡರ ಗುರುವಿನ ಬಂಡವಾಳವನ್ನು ದರ್ಗಾ ಸರ್ ಬಯಲು ಮಾಡಿದ್ದಾರೆ: _https://www.facebook.com/ramjan.darga/posts/1195932357128761

                      ಭಂಡತನವನ್ನು ಬಿಡಿ, ಅಧ್ಯಾತ್ಮದ ಕೇಂದ್ರವಾಗಿರತಕ್ಕ ಕಂಚಿ ಮಠಕ್ಕೆ ಮೆಡಿಕಲ್ ಕಾಲೇಜು ನಡೆಸಿ ಶಿಕ್ಷಣ ಮಾರಾಟ ಮಾಡುವ ದರ್ದು ಏಕೆ ಹೇಳಿ?

                  • shripad
                    ಡಿಸೆ 16 2016

                    ಮಾತೆತ್ತಿದರೆ ಕಾಯಕವೇ ಕೈಲಾಸ ಅಂತೀರಿ? ಕಾಯಕವಿಲ್ಲದೇ ಕೈಲಾಸ ಸಿಗುವ ಬಿಟ್ಟಿ ಮಾರ್ಗ ಯಾಕೆ ಹಿತವಾಗುತ್ತದೆ?

                    ಉತ್ತರ
                    • ಶೆಟ್ಟಿನಾಗ ಶೇ.
                      ಡಿಸೆ 16 2016

                      ವಿಷಯಾಂತರ ಮಾಡಿ ಕೆಡಬೇಡಿ ರಾಯರೇ. ಮೊದಲು ಪಾರಮಾರ್ಥಿಕ ಚಿಂತನೆಗೆ ಸೀಮಿತವಾಗಿರತಕ್ಕ ಕಂಚಿ ಮಠಕ್ಕೆ ಮೆಡಿಕಲ್ ಕಾಲೇಜು ಮೂಲಕ ಶೀಕ್ಷಣವನ್ನು ಮಾರಿ ಆರ್ಥಿಕ ಲಾಭ ಮಾಡಿಕೊಳ್ಳುವ ಹುಚ್ಚೇಕೆ ಹೇಳಿ? ಬಡವರಿಗೆ ಕಾಯಕದ ಬಗ್ಗೆ ಬೋಧನೆ ಮಾಡುವ ಬದಲು ಕಂಚಿ ಮಠ ಶಿಕ್ಷಣ ಮಾರಾಟಕ್ಕೆ ಇಳಿದಿದ್ದು ತಪ್ಪಲ್ಲವೇ ಒಪ್ಪಿಕೊಳ್ಳಿ.

                    • ಶೆಟ್ಟಿನಾಗ ಶೇ.
                      ಡಿಸೆ 16 2016

                      ಕಂಚಿ ಮಠದ ಆರ್ಥಿಕ ವಿಷಯ ಬಂದಾಗಲೆಲ್ಲ ರಾಯರ ಬೋಲತೀ ಬಂದ್! ಹಹ್ಹಹಹ!

            • SalamBava
              ಡಿಸೆ 15 2016

              Good question Shetkar. Marx called religion as the opium of the masses. Priests are dope sellers. Like all drug peddlers their goal is to make money at the expense of others.

              ಉತ್ತರ
    • SalamBava
      ಡಿಸೆ 13 2016

      Sripad, Crime has no religion and criminals must not be spared because they’re from powerful communities. Amma would have definitely arrested Mulla if she had reasonable evidence that Mulla has committed crime or fraud.

      ಉತ್ತರ
      • ಶೆಟ್ಟಿನಾಗ ಶೇ.
        ಡಿಸೆ 14 2016

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments