ಭಗವದ್ಗೀತೆ ಹೇಳುವ ಆಹಾರ ಆದರ್ಶ
ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಆಹಾರ ಎಂದರೆ ದೇಹಕ್ಕೆ ಪೌಷ್ಟಿಕಾಂಶಗಳನ್ನು ಒದಗಿಸುವ ಯಾವುದೇ ಪದಾರ್ಥ “ಪೋಷಕಾಂಶ (ಪ್ರೊಟೀನು), ಶರ್ಕರಪಿಷ್ಟ (ಕಾರ್ಬೊಹೈಡ್ರೇಟು) ಮತ್ತು ಕೊಬ್ಬು (ಫ್ಯಾಟ್)ಗಳನ್ನು ಅಗತ್ಯವಾಗಿ ಒಳಗೊಂಡ, ದೇಹದ ಪೋಷಣೆ, ಬೆಳವಣಿಗೆ, ಸುಭದ್ರತೆಗೆ ಕಾರಣವಾಗುವ ವಸ್ತು” ಎಂದು ವಿಶ್ವಕೋಶ ಹೇಳುತ್ತದೆ. ಆಹಾರ ವಸ್ತು ಮೂಲತಃ ಸಸ್ಯ ಅಥವಾ ಪ್ರಾಣಿ ಮೂಲದ್ದಿರಬಹುದು. ಅದರಲ್ಲಿ ಜೀವಿಗಳ ಬೆಳವಣಿಗೆಗೆ ಅಗತ್ಯವಾದ ಮೇಲ್ಕಂಡ ಧಾತುಗಳ ಜೊತೆಗೆ ವಿಟಮಿನ್ ಮತ್ತು ಖನಿಜಾಂಶಗಳು ಇದ್ದಾಗ ಮಾತ್ರ ಅಂಥ ವಸ್ತುವನ್ನು ಆಹಾರ ಎನ್ನಲಾಗುತ್ತದೆ. ಆಹಾರ ಸೇವಿಸಿದ ದೇಹದ ವ್ಯವಸ್ಥೆ ಆಹಾರದಲ್ಲಿನ ಮೂಲವಸ್ತುಗಳನ್ನು ಬೇರ್ಪಡಿಸಿ, ತನ್ನ ಕೋಶಗಳ ಮೂಲಕ ದೇಹದ ವಿವಿಧ ಭಾಗಗಳಿಗೆ ಧಾತುಗಳನ್ನು ಪ್ರವಹಿಸಿ ದೇಹದಲ್ಲಿ ಶಕ್ತಿ ಸಂಚಯನವಾಗುವಂತೆ ಮಾಡುತ್ತದೆ, ದೇಹದ ಬೆಳವಣಿಗೆಗೂ ಕಾರಣವಾಗುತ್ತದೆ. ಇದು ಆಹಾರದ ಬಗ್ಗೆ ಆಧುನಿಕ ವಿಜ್ಞಾನ ಹೇಳುವ ಮಾತು.
ಆಹಾರ ಜೀವನಾಧಾರ. ಆಹಾರವಿಲ್ಲದೇ ಬದುಕಿಲ್ಲ. ಮೂಲತಃ ಎಲ್ಲ ಜೀವಿಗಳಿಗೂ ಉದಾರವಾಗಿ ದೊರೆಯಬೇಕಿದ್ದ ಆಹಾರ ಇಂದು ಮಹಾನ್ ವಹಿವಾಟಿನ ವಸ್ತುವಾಗಿದೆ. ಆರ್ಥಿಕ ಸಂಗತಿಗೆ ಮಹತ್ವ ನೀಡಿದ್ದು ಹಾಗೂ ಬದಲಾದ ರಾಜಕೀಯ ನೀತಿ-ನಿಯಮಗಳು ಇದಕ್ಕೆ ಕಾರಣವೆನಿಸುತ್ತದೆ. ಆಹಾರ ಎಂದರೆ ದೇಹ ಪೋಷಣೆಯ ಮೂಲವಸ್ತು ಎಂದು ಆಧುನಿಕ ಸಮಾಜ ತಿಳಿದಿದೆ. ಹೀಗಾಗಿಯೇ ಇಂದಿನ ಆಧುನಿಕ ಸಮಾಜದಲ್ಲಿ ಆಹಾರ ಸಂಗ್ರಹಣೆ, ಸುರಕ್ಷತೆ, ವಿತರಣೆ ಇತ್ಯಾದಿಗಳೆಲ್ಲ ಅಂತಾರಾಷ್ಟ್ರೀಯ ಆಹಾರ ಭದ್ರತಾ ಸಂಸ್ಥೆ (International Association for Food Protection), ಜಾಗತಿಕ ಸಂಪನ್ಮೂಲ ಸಂಸ್ಥೆ (WorldResources Institute), ಜಾಗತಿಕ ಆಹಾರ ಕಾರ್ಯಕ್ರಮ (World Food Programme), ಆಹಾರ ಮತ್ತು ಕೃಷಿ ಸಂಘಟನೆ (Food and Agriculture Organisation) ಮತ್ತು ಅಂತಾರಾಷ್ಟ್ರೀಯ ಆಹಾರ ಮಾಹಿತಿ ಪರಿಷತ್ತು (International Food Information Council) ಮೊದಲಾದ ಏಜನ್ಸಿಗಳ ಹಿಡಿತದಲ್ಲಿವೆ. ಈ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಆಹಾರ ಸುಸ್ಥಿರತೆ, ಜೈವಿಕ ವೈವಿಧ್ಯ, ಹವಾಮಾನ ಬದಲಾವಣೆ, ಪೌಷ್ಟಿಕಾಂಶ ಸಂಬಂಧಿ ಆರ್ಥಿಕತೆ, ಜನಸಂಖ್ಯಾ ಏರಿಕೆ, ನೀರಿನ ವಿತರಣೆ ಹಾಗೂ ಆಹಾರ ಲಭ್ಯತೆ ಇತ್ಯಾದಿ ಸಂಗತಿಗಳ, ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುತ್ತವೆ. ಈ ಸಂಸ್ಥೆಗಳ ದೃಷ್ಟಿ ಮೂಲತಃ ಆರ್ಥಿಕ ಸಂಗತಿಯನ್ನೇ ಅವಲಂಬಿಸಿದ ಯೂರೋಪ್ ಮತ್ತು ಅಮೆರಿಕದ ಆಹಾರ ನೀತಿಯನ್ನು ಹಾಗೂ ದೃಷ್ಟಿಯನ್ನು ಆಧರಿಸಿವೆ. ಜಾಗತಿಕ ಆಹಾರ ನೀತಿಯನ್ನು ರೂಪಿಸಿ ಅವುಗಳನ್ನು ಎಲ್ಲೆಡೆ ಹೇರುವ ಯತ್ನವನ್ನು ಇವು ಮಾಡುತ್ತವೆ. ಈ ಕಾರಣದಿಂದಾಗಿಯೇ ಪ್ರಪಂಚದ ಜನಸಮುದಾಯಗಳು ಪರಂಪರೆಯ ಮೂಲಕ ಕಲಿತ, ಅಳವಡಿಸಿಕೊಂಡ ಆಹಾರ ಸಂಬಂಧಿ ಪರಿಕಲ್ಪನೆಯನ್ನು ಕೈಬಿಡಬೇಕಾಗಿ ಬಂದಿದೆ. ತಲೆತಲಾಂತರದಿಂದ ಕಲಿತ ಆಹಾರ ಪದ್ಧತಿಗೆ ಬದಲಾಗಿ ಹೊಸ ಪದ್ಧತಿಯನ್ನು ಅಳವಡಿಸಿಕೊಂಡು ಬದುಕುವುದು ಜನಪದ ಸಮುದಾಯಗಳಿಗೆ ಕಷ್ಟವಾಗುತ್ತಿದೆ. ಇಲ್ಲಿ ಆಹಾರ ಎಂದರೆ ತಾವು ಸೇವಿಸುವ ಆಹಾರವನ್ನು ಬೆಳೆಯುವುದು ಅಥವಾ ಸಂಗ್ರಹಿಸುವುದು, ಸಂರಕ್ಷಿಸುವುದು ಮತ್ತು ಬಳಸುವುದು- ಇವೆಲ್ಲ ಸೇರುತ್ತವೆ. ಭಾರತೀಯರ ಆಹಾರ ಪರಿಕಲ್ಪನೆ ಯೂರೋಪ್ ಅಥವಾ ಅಮೆರಿಕದ ದೃಷ್ಟಿಕೋನಕ್ಕಿಂತ ಸಂಪೂರ್ಣ ಭಿನ್ನವಾದುದು.
ಭಾರತೀಯ ಪರಂಪರೆಯಲ್ಲಿ ಆಹಾರ ಎಂದರೆ ಅದು ಕೇವಲ ದೇಹ ಪೋಷಣೆಯ ಮೂಲವಸ್ತುವಷ್ಟೇ ಅಲ್ಲ. ಅದು ಮನುಷ್ಯನ ವ್ಯಕ್ತಿತ್ವ ರೂಪಿಸುವ ಮೂಲ ಸಾಮಗ್ರಿ. ಹೀಗಾಗಿ ಆಧ್ಯಾತ್ಮಿಕ ಸ್ಪರ್ಶ ಅದಕ್ಕಿದೆ. ಮಾನವನ ಆರೋಗ್ಯ, ಪರಿಸರ ಸಂರಕ್ಷಣೆ, ಮಾಲಿನ್ಯ ಮೊದಲಾದ ಕಾರಣಗಳಿಂದ ಪ್ರಾಚೀನ ಹಾಗೂ ಸಾಂಪ್ರದಾಯಿಕ ಆಹಾರ ಬೆಳೆ ಪದ್ಧತಿ ಹಾಗೂ ಆಹಾರ ಸಂಗ್ರಹಣೆ, ಸಂರಕ್ಷಣೆ ಮತ್ತು ವಿತರಣೆ ಮೊದಲಾದ ವಿಷಯಗಳಲ್ಲಿ ಆಧುನಿಕ ಯೂರೋಪ್ ಮಾದರಿಯ ಪದ್ಧತಿಗಿಂತ ಶ್ರೇಷ್ಠ ಎಂಬುದನ್ನು ಸಾಬೀತುಪಡಿಸುವ ಹತ್ತಾರು ಸಂಶೋಧನ ಕೆಲಸಗಳು ನಡೆದಿವೆ. ಅಲ್ಲದೇ ಈಚಿನ ದಿನಗಳಲ್ಲಿ ನೈಸರ್ಗಿಕ, ವಿಶ್ವಾಸಾರ್ಹ ಹಾಗೂ ಸುಸ್ಥಿರ ಆಹಾರ ಉತ್ಪಾದನೆ ಹಾಗೂ ಸಂರಕ್ಷಣೆಯ ಕಾರಣಕ್ಕೆ ವಿಷಪೂರಿತ ಕೃತಕ ರಾಸಾಯನಿಕ ದ್ರವ್ಯಗಳ ಬಳಕೆಯ ಬದಲಾಗಿ ಸಾಂಪ್ರದಾಯಿಕ ಪದ್ಧತಿಯತ್ತಲೇ ಒಲವು ಹೆಚ್ಚುತ್ತಿದೆ. ಇದು ಜಾಗತಿಕ ಪ್ರವೃತ್ತಿಯಾಗಿ ಕಾಣಿಸತೊಡಗಿದೆ. ಆಹಾರ ಬೆಳೆ, ಸಂರಕ್ಷಣೆ ಮತ್ತು ಬಳಕೆಗೆ ಸಂಬಂಧಿಸಿದಂತೆ ಆಯಾ ಭೂ ಪ್ರದೇಶ ಮತ್ತು ಜನಸಮುದಾಯಗಳಲ್ಲಿ ಪಾರಂಪರಿಕವಾಗಿ ಹರಿದುಬಂದ ಜ್ಞಾನ ಅವಿಚ್ಛಿನ್ನವಾಗಿದೆ ಎಂಬುದನ್ನು ಈ ಅಧ್ಯಯನಗಳು ತೋರಿಸುತ್ತವೆ. ನಿರ್ದಿಷ್ಟ ಭೂಪ್ರದೇಶದಲ್ಲಿ ವಾಸಿಸುವ ಜನ ವರ್ಗ ಅನೇಕ ಶತಮಾನಗಳ ಅನುಭವದಿಂದ ತಮಗೆ ಒಗ್ಗುವ ಆಹಾರ ಹಾಗೂ ನಿರ್ದಿಷ್ಟ ಹವಾಮಾನಕ್ಕೆ ಸರಿಹೋಗುವ ಬೆಳೆ, ಅದರ ಸಂರಕ್ಷಣೆಯ ವಿಧಾನವನ್ನು ಕಂಡುಕೊಂಡಿರುತ್ತದೆ. ಇಂಥ ವಿಧಾನಗಳು ಕೈಗಾರಿಕಾ ಕ್ರಾಂತಿ ನಡೆದ ಶತಮಾನಗಳಿಗಿಂತ ಬಹಳ ಹಿಂದಿನವಾದ ಕಾರಣ ಇವುಗಳಲ್ಲಿ ಕೃತಕ ರಾಸಾಯನಿಕ ಬಳಕೆಯಾಗಲೀ ಅಂಥ ಬಳಕೆಯಿಂದಾಗುವ ಪರಿಸರಾತ್ಮಕ ಪರಿಣಾಮಗಳಾಗಲೀ ಇಲ್ಲದೇ ಪರಿಸರ ಪ್ರೇಮಿಯಾಗಿರುತ್ತವೆ. ಆಹಾರ ಉತ್ಪಾದನೆ ಮತ್ತು ಸಂರಕ್ಷಣೆ ಮಾತ್ರ ಇಂಥ ವಿಧಾನಗಳ ಉದ್ದೇಶವೇ ವಿನಾ ಅನ್ಯ ಜೀವಿಗಳಿಗೆ ಹಾನಿಮಾಡುವುದಲ್ಲ. ಅಲ್ಲದೇ ಆಹಾರದಿಂದ ಲಾಭ ಮಾಡಿಕೊಳ್ಳುವ ಉದ್ದೇಶವೂ ಇದರಲ್ಲಿಲ್ಲ.
ಇದಕ್ಕೆ ಉದಾಹರಣೆಯಾಗಿ ಉತ್ತರ ಪ್ರದೇಶದ ಸೋಹಗೌರ ಎಂಬ ಊರಿನಲ್ಲಿ ದೊರೆತ ಕ್ರಿ.ಶ 6ನೆಯ ಶತಮಾನದ್ದೆಂದು ಒಂದು ಶಾಸನವನ್ನು ಗಮನಿಸಬಹುದು. ಈ ತಾಮ್ರ ಶಾಸನದಲ್ಲಿ ಬರಗಾಲ ಬಿದ್ದಾಗ ಜನರ ಬಳಕೆಗಾಗಿ ಆಹಾರ ಧಾನ್ಯಗಳನ್ನು ಮೂರು ಸ್ತರಗಳ ನೆಲದೊಳಗಿನ ಉಗ್ರಾಣದಲ್ಲಿ ಶೇಖರಿಸಿದ್ದಾಗಿಯೂ ಇದನ್ನು ಮಾಥುರ್, ಚಂಚು, ಮಯುದಾಮ್, ಭಲ್ಲಕ್ ಗ್ರಾಮಗಳ ಜನರಿಗೆ ಮಾತ್ರ ಕೊಡಬೇಕು, ಅನ್ಯರು ಇದನ್ನು ಪಡೆಯುವಂತಿಲ್ಲ ಎಂದು ಬರೆಯಲಾಗಿದೆ. ಈ ಬಗೆಯ ಶಾಸನಗಳು ಕರ್ನಾಟಕದಲ್ಲೂ ಇವೆ. ಕೆಲವೊಮ್ಮೆ ವ್ಯಾಪಾರಿಗಳ ನಡುವೆ ಆಹಾರಕ್ಕಾಗಿ ಗಲಾಟೆ ನಡೆದದ್ದೂ ಇದೆ. ವಿಜಯನಗರ ಕಾಲದ ಈ ಶಾಸನದಲ್ಲಿ ಸಕ್ಕರೆ ವ್ಯವಹಾರಕ್ಕಾಗಿ ಎರಡು ವ್ಯಾಪಾರಿ ತಂಡದ ನಡುವೆ ಗಲಭೆ ನಡೆದು, ಸಕ್ಕರೆಯನ್ನು ಮಾಳಿಗೆಯಲ್ಲಿಟ್ಟು ಬೆಲೆ ಬಂದಾಗ ಗ್ರಾಹಕರಿಗೆ ವಿತರಿಸಬೇಕು ಎಂದು ಸಂಧಾನ ಮಾಡಲಾಯಿತು ಎಂಬ ಉಲ್ಲೇಖವಿದೆ. ಇಂಥ ಉಲ್ಲೇಖಗಳು ಆಹಾರದ ಮಹತ್ವವನ್ನು ತಿಳಿಸುತ್ತವೆ. ಬಹುಶಃ ಇದು ಇಂದಿನ ಸಕ್ಕರೆ ರೂಪದಲ್ಲಿರದೆ, ಕಲ್ಲು ಸಕ್ಕರೆ ರೂಪದಲ್ಲಿದ್ದರಿಬೇಕು. ಇದೇ ಕಾಲದ ಪುರಂದರದಾಸರು ‘ಕಲ್ಲುಸಕ್ಕರೆ ಕೊಳ್ಳಿರೋ’ ಎಂದು ಹೇಳಿರುವುದನ್ನು ಗಮನಿಸಬಹುದು.
ಈ ಬಗೆಯ ಉಲ್ಲೇಖಗಳು ಶಾಸನಾದಿಗಳಲ್ಲಿ ದೊರೆಯುವುದಕ್ಕಿಂತ ಬಹು ಹಿಂದಿನಿಂದಲೇ ಆಹಾರದ ಬಗ್ಗೆ ಮಾನವನ ಕಲ್ಪನೆ ಬೆಳೆದಿತ್ತು. 15,000 ವರ್ಷಗಳ ಹಿಂದೆ ಮಾನವ ಆಹಾರ ಸಂಗ್ರಹಣೆ ಆರಂಭಿಸಿದನಲ್ಲದೇ ತರುವಾಯ ಆಹಾರ ಬೆಳೆಯಲು ಆರಂಭಿಸಿದ. ಆರಂಭಿಕ ಹಂತದಲ್ಲಿ ಮಾನವನ ಪ್ರಮುಖ ಆಹಾರ ಹಣ್ಣುಹಂಪಲುಗಳೇ ಆಗಿದ್ದವು. ಮಂಗನಿಂದ ಮಾನವನಾಗಿ ಪರಿವರ್ತನೆಯಾದ ನಂತರ “ಹೋಮೋಸ್ಟೆಬಿಲಿಸ್” ಮಾಂಸಾಹಾರವನ್ನು ಸೇವಿಸತೊಡಗಿದ. ಸುಮಾರು 1.8 ದಶಲಕ್ಷ ವರ್ಷಗಳ ಹಿಂದೆ “ಹೋಮೋ ಎರೆಕ್ಟಸ್” ಕಾಣಿಸಿಕೊಂಡ ನಂತರ ಕಲ್ಲಿನ ಒರಟು ಆಯುಧಗಳನ್ನು ಮಾಡಿಕೊಳ್ಳತೊಡಗಿದ. ಇವುಗಳ ಮೂಲಕ ಹೆಚ್ಚು ಪ್ರಮಾಣದಲ್ಲಿ ಮಾಂಸ ಸಂಗ್ರಹಣೆ ಸಾಧ್ಯವಾಯಿತಲ್ಲದೇ ಶಿಲಾಯುಗ ಕಾಲದ ಮಾನವ ವಸತಿ ಸ್ಥಳಗಳಲ್ಲಿ ದೊರೆತ ಅಪಾರ ಪ್ರಮಾಣದ ಪ್ರಾಣಿ ಎಲುಬುಗಳು ಆತ ಹೆಚ್ಚಿನ ಪ್ರಮಾಣದಲ್ಲಿ ಮಾಂಸಾಹಾರ ಸೇವಿಸುತ್ತಿದ್ದ ಎಂಬುದನ್ನು ದೃಢಪಡಿಸುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದರ ಜೊತೆಗೆ ಕಾಡಿನ ಗಡ್ಡೆ ಗೆಣಸುಗಳನ್ನೂ ಸಂಗ್ರಹಮಾಡತೊಡಗಿದ. ಕ್ರಿ.ಪೂ. ಸುಮಾರು 10,000 ವರ್ಷಗಳ ಹಿಂದೆ ಕೃಷಿ ಕಾಣಿಸಿಕೊಂಡ ಮೇಲೆ ಆಹಾರಕ್ಕಾಗಿ ಪ್ರಾಣಿ ಬೇಟೆಯ ಅಗತ್ಯ ಕಡಿಮೆಯಾಯಿತು. ಕೆಲವು ಪ್ರಾಣಿಗಳನ್ನು ಆತ ಕೃಷಿ ಉಪಯೋಗಕ್ಕಾಗಿ ಸಾಕತೊಡಗಿದ. ಕೆಲವು ಸಾವಿರ ವರ್ಷಗಳ ನಂತರ ಪ್ರಾಣಿ ಆಹಾರ ಪ್ರಮಾಣ ಇನ್ನೂ ಕಡಿಮೆಯಾಯಿತು. ಇದರ ಜಾಗವನ್ನು ಕೃಷಿಮೂಲ ದವಸ ಧಾನ್ಯಗಳು ಆಕ್ರಮಿಸಿದವು. ಮಾನವನ ವಿಕಾಸ ನಡೆಯುತ್ತ ಬಂದಂತೆಯೇ ಅವನ ಆಹಾರ ಪದ್ಧತಿಯೂ ಬದಲಾಗುತ್ತ ಬಂದಿರುವುದನ್ನು ಪ್ರಾಕ್ತನ ಶಾಸ್ತ್ರಜ್ಞರು ನಡೆಸಿದ ಸಂಶೋಧನೆಗಳಿಂದ ತಿಳಿದುಬರುತ್ತದೆ. ಶಿಲಾಯುಧಗಳು, ಗುಹೆಗಳೊಳಗಿನ ಕೆತ್ತನೆ ಮತ್ತು ವರ್ಣಶಿಲ್ಪಗಳು ಹಾಗೂ ಪುರಾತನ ಅವಶೇಷಗಳು ಇಂಥ ಸಂಶೋಧನೆಗಳಲ್ಲಿ ಮುಖ್ಯವಾದವು. ಆಹಾರ ವಿಧಾನ ಬದಲಾದಂತೆಲ್ಲ ಅದರ ಕಲ್ಪನೆ ಹಾಗೂ ಆಹಾರ ಕುರಿತ ಚಿಂತನೆಗಳು ಕೂಡ ಬೆಳೆಯುತ್ತ ಬಂದವು. ಭಾರತೀಯ ಪರಂಪರೆಯಲ್ಲಿ ಇದಕ್ಕೆ ಬಹು ದೊಡ್ಡ ಇತಿಹಾಸವೇ ಇದೆ.
ಅತ್ಯಂತ ಪ್ರಾಚೀನ ಜಾಗತಿಕ ಸಾಹಿತ್ಯ ಕೃತಿಗಳೆನಿಸಿದ ವೇದಗಳಲ್ಲಿ ಆಹಾರ ಕುರಿತ ಗಂಭೀರ ತತ್ತ್ವ ಚಿಂತನೆ ಕಾಣಿಸುತ್ತದೆ. ಎಲ್ಲ ಬಗೆಯ ಆಹಾರವನ್ನು ವೇದಗಳು ‘ಅನ್ನ’ ಎಂದು ಕರೆಯುತ್ತವೆ. ತೈತ್ತರೀಯ ಉಪನಿಷತ್ತಿನಲ್ಲಿ “ಆಕಾಶಾದ್ವಾಯುಃ, ವಾಯೋರಾಪಃ, ಆಪಃ ಪೃಥಿವೀ, ಪೃಥಿವ್ಯಾ ಓಷಧಯಃ, ಓಷಧೀಭ್ಯೋನ್ನಂ, ಅನ್ನಾತ್ ಪುರುಷಃ, ಅನ್ನಂ ಬಹುಕುರ್ವೀತ…” (ಆಕಾಶದಿಂದ ವಾಯು, ವಾಯುವಿನಿಂದ ನೀರು, ನೀರಿನಿಂದ ಭೂಮಿ, ಭೂಮಿಯಿಂದ ಸಸ್ಯಗಳು, ಸಸ್ಯಗಳಿಂದ ಆಹಾರ, ಆಹಾರದಿಂದ ಮಾನವ) ಎಂದು ಹೇಳಲಾಗಿದೆ. ಹೀಗಾಗಿ ಮನುಷ್ಯನಲ್ಲಿ ಆಹಾರವೇ ಅಡಗಿದೆ… ಆಹಾರದಿಂದ ಎಲ್ಲ ಜೀವಿಗಳೂ ಉತ್ಪನ್ನವಾಗುತ್ತವೆ, ಆಹಾರದಿಂದಲೇ ಅವು ಬೆಳೆಯುತ್ತವೆ… ಆತ್ಮ, ಮನಸ್ಸು, ಉಸುರಿನಲ್ಲೂ ಅನ್ನವಿದೆ” ಎಂದು ಹೇಳಿದೆ. ಈ ಕಾರಣದಿಂದ ಆಹಾರ ಎಂಬುದು ಭಾರತೀಯರ ದೃಷ್ಟಿಯಲ್ಲಿ ಕೇವಲ ದೇಹಕ್ಕೆ ಸಂಬಂಧಿಸಿದ ಬಾಹ್ಯ ವಸ್ತು ಅಥವಾ ದ್ರವ್ಯವಲ್ಲ. ಅದು ಆದಿಭೌತಿಕ ದ್ರವ್ಯ. ದೇಹ ಮತ್ತು ಆತ್ಮಗಳ ಬೆಸುಗೆ ಮಾಡುವ ದಿವ್ಯ ತತ್ತ್ವ.
ಆಹಾರ, ಆಹಾರ ಸೇವಿಸುವಾತ ಹಾಗೂ ಇಡೀ ವಿಶ್ವ-ಇವೆಲ್ಲ ಸಾಮರಸ್ಯದಿಂದ ಇರಬೇಕು ಎಂಬುದು ಉಪನಿಷತ್ತುಗಳ ಸಾರ. ಯಾವುದೇ ಆಹಾರದಿಂದ ಮೂರು ಉತ್ಪನ್ನಗಳು ಕಾಣಿಸುತ್ತವೆ, ಇದರಲ್ಲಿ ಘನರೂಪ ತ್ಯಾಜ್ಯವಾಗಿ ಹೊರಹೋಗುತ್ತದೆ. ಮಧ್ಯಮ ರೂಪದ ದ್ರವ್ಯ ಮಾಂಸವಾಗಿ ಪರಿವರ್ತನೆಯಾಗುತ್ತದೆ. ಆಹಾರದ ಅಂತಿಮ ಮತ್ತು ಅಗೋಚರ ಉತ್ಪನ್ನ ಉತ್ಕೃಷ್ಟವಾದುದು. ಅದೇ ಮನಸ್ಸು. ಇದೇ ಬುದ್ಧಿ ಅಥವಾ ಚಿಂತನೆ. ದೇವರಿಗೆ ಸಮರ್ಪಿಸಿ ಉಳಿದ ಆಹಾರವನ್ನು ‘ಪ್ರಸಾದ’ ಎಂದು ಶಿಷ್ಟ ಸಾಹಿತ್ಯದಲ್ಲಿ ಕರೆಯಲಾಗುತ್ತದೆ. ಇದು ಶುದ್ಧವಾದುದು ಹಾಗೂ ಮನುಷ್ಯರಲ್ಲಿ ಅಧ್ಯಾತ್ಮದ ಹೊಳಹು ಉಂಟುಮಾಡುತ್ತದೆ ಎಂದು ಬಗೆಯಲಾಗಿದೆ. ಇದಷ್ಟೇ ಅಲ್ಲದೇ ಅನ್ನದಿಂದ ಏನೆಲ್ಲ ಆಗುತ್ತವೆ ಎಂಬುದಕ್ಕೆ ಛಾಂದೋಗ್ಯ ಉಪನಿಷತ್ತಿನಲ್ಲಿ ನಿದರ್ಶನವೊಂದು ದೊರೆಯುತ್ತದೆ.
ತನ್ನ ಗುರು ಮತ್ತು ತಂದೆಯ ಬಳಿ ಶ್ವೇತಕೇತು ಆಹಾರ ಸ್ವೀಕರಿಸದಿದ್ದರೆ ಏನಾಗುತ್ತದೆ ಎಂದು ಕೇಳುತ್ತಾನೆ. ನೀನೇ ಅನುಭವಿಸಿ ನೋಡು ಎಂದು ಉತ್ತರ ಬರುತ್ತದೆ. ಶ್ವೇತಕೇತು ಹದಿನೈದು ದಿನ ಉಪವಾಸ ಇದ್ದು ನನ್ನ ನೆನಪಿನ ಶಕ್ತಿ ಕುಂದಿದೆ ಎನ್ನುತ್ತಾನೆ. ಆಹಾರ ಸೇವಿಸಿದಾಗ ಅವನ ನೆನಪು ಮರಳುತ್ತದೆ. ಛಾಂದೋಗ್ಯ ಮತ್ತು ತೈತ್ತರೀಯ ಉಪನಿಷತ್ತುಗಳಲ್ಲಿ ಆಹಾರ ಕುರಿತ ಗಂಭೀರ ಚಿಂತನೆಗಳಿವೆ. “ಆಹಾರ ಸ್ವೀಕರಿಸುವವನನ್ನೇ ಆಹಾರ ಸೇವಿಸುತ್ತದೆ” ಎನ್ನುವ ವಿಚಿತ್ರ ಎನಿಸುವ ಮಾತು ಕೂಡ ವೇದಗಳಲ್ಲಿದೆ. ಇದನ್ನು ಆಧುನಿಕ ಸೂಕ್ಷ್ಮಜೀವಶಾಸ್ತ್ರ ಕೂಡ ಅನುಮೋದಿಸುತ್ತದೆ. ಉದಾಹರಣೆಗೆ, ಮಾನವ ದೇಹದಲ್ಲಿ ಶೇ.80 ಭಾಗ ಉಪಕಾರಿ ಬ್ಯಾಕ್ಟೀರಿಯಾಗಳಿವೆ. ದೇಹ ಪ್ರವೇಶಿಸಿದ ಆಹಾರವನ್ನಷ್ಟೇ ಅಲ್ಲದೇ ಇವು ದೇಹ ಸಂಪರ್ಕವುಳ್ಳ ವಸ್ತುಗಳನ್ನೂ ಸ್ವೀಕರಿಸುತ್ತವೆ. ಹೀಗಾಗಿ ನಾವು ಆಹಾರ ಸ್ವೀಕರಿಸುತ್ತಿರುವಾಗಲೇ ನಮ್ಮನ್ನೂ ಅವು ಸ್ವೀಕರಿಸುತ್ತವೆ! ಹೀಗಾಗಿ ಆಹಾರವನ್ನು ನಾವು ಸ್ವೀಕರಿಸಬಹುದು ಅಥವಾ ದಾನ ಮಾಡಬಹುದು. ಆಹಾರ ಸ್ವೀಕರಿಸುವವನನ್ನು ಅದು ಸ್ವೀಕರಿಸುತ್ತದೆ; ಆಹಾರ ರಕ್ಷಿಸುವವನ್ನು ಅದು ರಕ್ಷಿಸುತ್ತದೆ. ಇದು ನಿಸರ್ಗದ ನಿಯಮ. ಅತಿಥಿಗಳಿಗೆ ಆಹಾರ ಕೊಡುವುದು ಕೇವಲ ಔದಾರ್ಯ ಮಾತ್ರವಲ್ಲ. ಈ ಕಾರಣದಿಂದ ಆಹಾರವನ್ನು ಹಾಳು ಮಾಡಬಾರದು ಎಂದು ಹೇಳುವುದು.
ಭಾರತೀಯ ಚಿಂತನೆಯ ಸಮಸ್ತ ಸಾರ ಸಂಗ್ರಹ ಅನ್ನಬಹುದಾದ ಭಗವದ್ಗೀತೆಯಲ್ಲಿ ಜೀವಿಗಳ ಆಹಾರಕ್ಕೆ ಸಂಬಂಧಿಸಿದ ಗಂಭೀರ ಚಿಂತನೆಗಳು ಕಾಣಿಸುತ್ತವೆ. ಎಲ್ಲ ಜೀವಿಗಳ ಅಸ್ತಿತ್ವ ಇರುವುದೇ ಅನ್ನದಿಂದ ಎಂದು ಭಗವದ್ಗೀತೆ ಹೇಳುತ್ತದೆ. ಭಗವದ್ಗೀತೆಯ ಮೂರು ಮತ್ತು ಹದಿನೇಳನೆಯ ಅಧ್ಯಾಯಗಳಲ್ಲಿ ಆಹಾರ ಕುರಿತ ಮಾತುಗಳು ಸ್ಪಷ್ಟವಾಗಿವೆ. “ಯಜ್ಞದ ಶೇಷವನ್ನು ಉಣ್ಣುವ ಸಂತರು ಸರ್ವದೋಷಗಳಿಂದ ಮುಕ್ತರಾಗುತ್ತಾರೆ. ಆದರೆ ತಮಗೋಸ್ಕರವಾಗಿಯೇ ಪಾಕ ಮಾಡಿಕೊಳ್ಳುವವರು ಪಾಪವನ್ನು ಉಣ್ಣುತ್ತಾರೆ” (3-13) ಎಂದು ಹೇಳುವ ಗೀತೆ, ಅನ್ನ ಹಾಗೂ ಜೀವಜಂತುಗಳ ಅವಿನಾ ಸಂಬಂಧವನ್ನು ಹೀಗೆ ಹೇಳಿದೆ: “ಅನ್ನದಿಂದ ಪ್ರಾಣಿಗಳು ಉತ್ಪನ್ನವಾಗುತ್ತವೆ. ಮಳೆಯಿಂದ ಅನ್ನದ ಉತ್ಪತ್ತಿಯಾಗುತ್ತದೆ. ಯಜ್ಞದಿಂದ ಮಳೆಯಾಗುತ್ತದೆ. ಯಜ್ಞವು ಕರ್ಮದಿಂದ ಉದ್ಭವಿಸುತ್ತದೆ” (3-14). ಯಜ್ಞಕ್ಕೂ ಆಹಾರಕ್ಕೂ ಇರುವ ನಂಟು ಇಲ್ಲಿ ಸ್ಪಷ್ಟ. ‘ಯಜ್ಞ’ ಎಂದರೇನೆಂದು ನಾಲ್ಕನೆಯ ಅಧ್ಯಾಯ ಬಗೆಬಗೆಯಾಗಿ ವಿವರಿಸಿದೆ. ಇಷ್ಟಲ್ಲದೇ ವ್ಯಕ್ತಿಯ ಗುಣಕ್ಕೂ ಆತ ಸೇವಿಸುವ ಆಹಾರಕ್ಕೂ ನೇರ ಸಂಬಂಧವಿದೆ ಎಂಬುದನ್ನು ಮೊದಲು ಪ್ರತಿಪಾದಿಸಿದ್ದು ಭಗವದ್ಗೀತೆ. ಇದು ಅತ್ಯಂತ ಸೂಕ್ಷ್ಮ ಸಂಗತಿ. ಹದಿನೇಳನೆಯ ಅಧ್ಯಾಯದಲ್ಲಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣದ ಜನರ ವಿಭಾಗದ ಬಗ್ಗೆ ವಿವರಿಸುತ್ತ ಈ ಗುಣ ಬರುವುದು ಆಹಾರದಿಂದ ಎನ್ನಲಾಗಿದೆ. “ಸತ್ವದ ಕಾರಣದಿಂದ ಆಹಾರದಲ್ಲಿ ಮೂರು ವಿಧ. ಆಯಸ್ಸು, ಸತ್ವ, ಬಲ, ಆರೋಗ್ಯ, ಸುಖ ಮತ್ತು ಪ್ರೀತಿಗಳನ್ನು ವೃದ್ಧಿಸುವ ರಸಯುಕ್ತವೂ ಸ್ನಿಗ್ಧವೂ ಸ್ಥಿರವೂ ಹೃದಯಪ್ರಿಯವೂ ಆದವು ಸಾತ್ವಿಕ ಆಹಾರ; ಅತಿ ಕಹಿ, ಅತಿ ಹುಳಿ, ಅತಿ ಉಪ್ಪು, ಅತಿ ಉಷ್ಣವಾಗಿದ್ದು, ತೀಕ್ಷ್ಣವೂ ಒಣಕಲೂ ಆಗಿದ್ದು ದಾಹವನ್ನುಂಟುಮಾಡುವಂಥವು ರಾಜಸಿಕ ಆಹಾರಗಳು. ಇವು ದುಃಖ, ಶೋಕ ಹಾಗೂ ರೋಗಗಳನ್ನುಂಟುಮಾಡುತ್ತವೆ. ರಸಹೀನವಾದ, ಸ್ವಲ್ಪ ಪಕ್ವವಾದ, ಹಳಸಿದ ದುರ್ಗಂಧಯುಕ್ತವಾದ ಆಹಾರ ತಾಮಸಿಕ. ಇದು ಸೇವನೆಗೆ ಅರ್ಹವಲ್ಲ (17-7, 8, 9 ಮತ್ತು 10).
ಹೀಗೆ ಆಹಾರ ಮತ್ತು ವ್ಯಕ್ತಿತ್ವಗಳ ಪರಸ್ಪರ ಸಂಬಂಧವನ್ನು ಸೂಕ್ಷ್ಮವಾಗಿ ಹೇಳುವ ಭಗವದ್ಗೀತೆ ಇವುಗಳನ್ನು ಹೆಚ್ಚು ವಿಶ್ಲೇಷಿಸುವುದಿಲ್ಲ. ಈ ಮೂರು ಬಗೆಯ ಆಹಾರಗಳಾವುವು, ಈ ವರ್ಗಗಳಲ್ಲಿ ಯಾವ್ಯಾವ ಆಹಾರ, ಪಾನೀಯಗಳು ಸೇರುತ್ತವೆ, ಇವುಗಳ ಸೇವನೆಯಿಂದ ಆಗುವ ಪರಿಣಾಮಗಳೇನು ಇತ್ಯಾದಿ ವಿವರಗಳು ಆಯುರ್ವೇದ ಕೃತಿಗಳಲ್ಲಿ ವಿಶೇಷವಾಗಿ ಲಭಿಸುತ್ತದೆ. ವ್ಯಕ್ತಿಗೂ ಆತನ ಆಹಾರಕ್ಕೂ ವಿಚಿತ್ರ ನಂಟು ಹುಟ್ಟಿನಿಂದಲೇ ಬರುತ್ತದೆ ಎನ್ನುತ್ತದೆ ಗೀತೆ. ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣದ ವ್ಯಕ್ತಿ ಅಂಥ ಆಹಾರವನ್ನೇ ಬಯಸುತ್ತಾನೆ. “ಯಾವನು ಯಾವ ಶ್ರದ್ಧೆಯುಳ್ಳವನೋ ಅವನು ಆ ಶ್ರದ್ಧೆಗೆ ಅನುರೂಪನಾಗುತ್ತಾನೆ” (17-3) ಎನ್ನುವ ಮಾತು ನಾವು ಬದುಕಲು ಬಯಸುವ ಜೀವನ ಶೈಲಿಗೂ ನಾವು ತಿನ್ನಲು ಬಯಸುವ ಆಹಾರಕ್ಕೂ ಅನ್ವಯ. ವ್ಯಕ್ತಿಯಲ್ಲಿನ ಸಾತ್ವಿಕ ಗುಣ ಸಾತ್ವಿಕ ಆಹಾರವನ್ನು ಬಯಸಿದರೆ, ರಾಜಸಿಕ ಗುಣ ರಾಜಸಿಕ ಆಹಾರವನ್ನೂ ತಾಮಸಿಕ ಗುಣ ತಾಮಸಿಕ ಆಹಾರವನ್ನೂ ಬಯಸುತ್ತದೆ. ಅಷ್ಟೇ ಅಲ್ಲ, ಆಯಾ ಆಹಾರಗಳು ಮತ್ತೆ ಅದೇ ಗುಣವನ್ನು ವ್ಯಕ್ತಿಯಲ್ಲಿ ವೃದ್ಧಿಸುತ್ತವೆ. ಅಂದರೆ ಇದೊಂದು ವರ್ತುಲ. ಒಂದು ಅರ್ಥದಲ್ಲಿ ಭಗವದ್ಗೀತೆ ಆಹಾರದ ಆಯ್ಕೆ ವೈಯಕ್ತಿಕ ಇಷ್ಟಾನಿಷ್ಟದ್ದು ಎಂದು ಹೇಳಿದೆ. ರಾಜಸಿಕ ಹಾಗೂ ತಾಮಸಿಕ ಆಹಾರಗಳು ದುಃಖವನ್ನೂ ಅನಾರೋಗ್ಯವನ್ನೂ ಸಂಕಟವನ್ನೂ ತರುತ್ತವೆ. ಯಾವ ಆಹಾರ ಬೇಕೋ ಎಂಥ ಗುಣ ಬೇಕೋ ಅದೂ ಮನುಷ್ಯನ ವಿವೇಕಕ್ಕೆ ಬಿಟ್ಟಿದ್ದು ಎನ್ನುವ ಮುಕ್ತ ಚಿಂತನೆ ಇದರಲ್ಲಿದೆ. ಸಾತ್ವಿಕ ಆಹಾರ ಸಂತೋಷವನ್ನೂ ಆರೋಗ್ಯ, ತೃಪ್ತಿಯನ್ನೂ ನೀಡುತ್ತದೆ. ಅಂತಿಮವಾಗಿ ಜೀವನದಲ್ಲಿ ನಾವು ಬಯಸುವುದೂ ಇದನ್ನೇ.
ನಿಸರ್ಗ ಸಹಜವಾಗಿ ಲಭಿಸುವ ಬೇಳೆ ಕಾಳುಗಳು, ತರಕಾರಿ, ಹಣ್ಣು, ಸೊಪ್ಪು, ಹಾಲು ಮೊದಲಾದವು ಸಾತ್ವಿಕ ಆಹಾರಗಳು. ಇವುಗಳನ್ನು ಪರಸ್ಪರ ಬೆರೆಸಿ, ಉಪ್ಪು, ಹುಳಿ, ಖಾರ ಮೊದಲಾದವನ್ನು ಸೇರಿಸಿ, ಬೇಯಿಸಿದರೆ, ಹುರಿದರೆ, ಸುಟ್ಟರೆ ಅವು ರಾಜಸಿಕವಾಗುತ್ತವೆ. ಎಲ್ಲ ಬಗೆಯ ಮಾಂಸಾಹಾರಗಳನ್ನು ತಾಮಸಿಕ ಎಂದು ವರ್ಗೀಕರಿಸಲಾಗಿದೆ. ಆದರೆ ಸಸ್ಯಮೂಲದಿಂದಲೂ ತಾಮಸಿಕ ಆಹಾರ ಪಡೆದುಕೊಳ್ಳಬಹುದು. ಆಹಾರದ ಸ್ಥೂಲ ರೂಪ ದೇಹವಾದರೆ, ಅದರ ಸೂಕ್ಷ್ಮ ರಸಾದಿಗಳು ಮನಸ್ಸಾಗುತ್ತದೆ ಎನ್ನುತ್ತದೆ ಛಾಂದೋಗ್ಯ ಉಪನಿಷತ್ತು. ಇದನ್ನೇ ಗೀತೆ ಸಂಗ್ರಹವಾಗಿ ಹೇಳಿದೆ. ಹುರಿದ, ಬೇಯಿಸಿದ, ಷಡ್ರಸಗಳಿಂದ ಕೂಡಿದ, ಬಾಯಿ ಚಪಲ ತಣಿಸುವ ಆಹಾರವನ್ನು ನಮ್ಮ ಮನಸ್ಸು ಮತ್ತು ದೇಹಗಳು ಸಹಜವಾಗಿಯೇ ಬೇಡುತ್ತವೆ. ಇದನ್ನೇ ಗೀತೆ ಇಂದ್ರಿಯ ಚಾಪಲ್ಯ ಎನ್ನುವುದು. ಜ್ಞಾನಿಯಾದವನು ದುಃಖ ಮತ್ತು ಅನಾರೋಗ್ಯಕ್ಕೆ ಕಾರಣವಾಗುವ ಇಂಥ ಚಪಲಕ್ಕೆ ಆಸ್ಪದ ನೀಡುವುದಿಲ್ಲ, ಇವುಗಳಲ್ಲಿ ರಮಿಸುವುದಿಲ್ಲ (5-22) ಎನ್ನುತ್ತದೆ ಗೀತೆ.
“ಆಹಾರ ಏಕೆ ಸ್ವೀಕರಿಸುತ್ತೀರಿ” ಎಂದು ಯಾರನ್ನೇ ಕೇಳಿದರೂ ಸಾಮಾನ್ಯವಾಗಿ ದೊರೆಯುವ ಉತ್ತರ ‘ಬದುಕುವುದಕ್ಕಾಗಿ’ ಎಂದೇ ಇರುತ್ತದೆ. ಬದುಕಲು ಆಹಾರವೇ ಬೇಕಿಲ್ಲ. ಯಾವುದನ್ನು ತಿಂದರೂ ಬದುಕಬಹುದು. ಏನೂ ತಿನ್ನದೇ ಅನೇಕ ವರ್ಷಗಳಿಂದ ಬದುಕುತ್ತಿರುವವರೂ ಇದ್ದಾರೆ. ಅಂದರೆ ಆಹಾರಕ್ಕೂ ಬದುಕುವುದಕ್ಕೂ ಸಂಬಂಧವಿಲ್ಲ. ಆಹಾರ ಸೇವನೆ ಕೇವಲ ಬದುಕುವುದಷ್ಟೇ ಅಲ್ಲ. ಆಹಾರದ ಉದ್ದೇಶ ಆಯಸ್ಸು ಹೆಚ್ಚಿಸುವುದು, ಮನಸ್ಸನ್ನು ಶುದ್ಧಗೊಳಿಸುವುದು, ದೇಹ ಮತ್ತು ಮನಸ್ಸಿನ ಶಕ್ತಿಯನ್ನು ವೃದ್ಧಿಸುವುದು. ಇದೊಂದೇ ಅದರ ಉದ್ದೇಶ. ಆಹಾರ ಸೇವನೆಯನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಇದನ್ನೇ ಭಗವದ್ಗೀತೆ ಹೇಳುತ್ತಿದೆ ಎಂಬುದು ಅರಿವಾಗುತ್ತದೆ.
ಆಹಾರ ಸೇವನೆ ಕೂಡ ಭಾರತೀಯ ಪರಂಪರೆಯಲ್ಲಿ ಬದುಕಿನ ಪರಮೋಚ್ಚ ಉದ್ದೇಶವಾದ ಆನಂದವನ್ನು ಹೊಂದುವುದೇ ಆಗಿದೆ. ಹಸಿವಿನಿಂದಲೋ ಬಾಯಿಚಪಲಕ್ಕೋ ಏನನ್ನೋ ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಕ್ರಿಯೆ ಅಲ್ಲ ಅದು. ಈ ದೃಷ್ಟಿ ಇರುವುದರಿಂದಲೇ ಸಂಪ್ರದಾಯ, ಆಚರಣೆ, ನಿತ್ಯ ಜೀವನದಲ್ಲಿ ಆಹಾರ ವೈವಿಧ್ಯ ಕಾಣಿಸುವುದು. ಭಾರತೀಯ ಸಂಪ್ರದಾಯ ಆಹಾರಕ್ಕೂ ಅಧ್ಯಾತ್ಮದ ಸ್ಪರ್ಶ ನೀಡಿದೆ. ಹೀಗಾಗಿಯೇ ತಿಥಿ ಊಟದ ಆಹಾರವನ್ನು ಮದುವೆ ಊಟಕ್ಕೆ ತಯಾರಿಸುವುದಿಲ್ಲ, ವಿಶೇಷ ಹಬ್ಬ, ಹರಿದಿನಗಳ ಆಹಾರ ಸಿದ್ಧತೆ, ಬಗೆಗಳೇ ಬೇರೆ ಇರುತ್ತವೆ. ಊಟ ತಿಂಡಿಗಳ ವಿಷಯದಲ್ಲಿ ದೇಶದ ಅಸಂಖ್ಯಾತ ಸಮುದಾಯಗಳಲ್ಲಿ ಅಸಂಖ್ಯಾತ ವಿಧಿ ನಿಷೇಧಗಳಿವೆ. ಆಹಾರ ‘ಕೇವಲ ತಿನ್ನುವುದಕ್ಕಾಗಿ’ ಅಥವಾ ‘ಬದುಕುವುದಕ್ಕಾಗಿ’ ಎಂದಾಗಿದ್ದರೆ ಇಷ್ಟೆಲ್ಲ ಸಂಗತಿಗಳು ಆಹಾರವನ್ನು ಸುತ್ತಿಕೊಳ್ಳುತ್ತಿರಲಿಲ್ಲ.
ಆಹಾರದ ಮೂಲಕ ಆನಂದ ದೊರೆಯುತ್ತದೆ, ಆದರೆ ಆನಂದ ದೊರೆಯಲು ಎಂಥ ಆಹಾರ ಸೇವನೆ ಅಗತ್ಯ ಎಂಬುದನ್ನು ಭಗವದ್ಗೀತೆ ಮನುಷ್ಯನಿಗೆ ತಿಳಿ ಹೇಳುತ್ತದೆಯಾದರೂ ‘ಹೀಗೇ ಮಾಡಬೇಕು’ ‘ಇದನ್ನೇ ತಿನ್ನತಕ್ಕದ್ದು’ ‘ಹೀಗೇ ತಿನ್ನತಕ್ಕದ್ದು’ ಎಂದೆಲ್ಲ ವಿಧಿ ಹೇರುವುದಿಲ್ಲ. ಆಹಾರದ ಗುಣಧರ್ಮವನ್ನು ಪಟ್ಟಿ ಮಾಡಿ ಇಂತಿಂಥ ಆಹಾರ ಸೇವನೆಯಿಂದ ಹೀಗೆಲ್ಲ ಆಗುತ್ತದೆ ಎಂದಷ್ಟೇ ಜ್ಞಾನ ನೀಡುತ್ತದೆ. ಹಾಗೆಂದು ಅದು ಪಟ್ಟಿ ಮಾಡುವ ಉತ್ತಮ, ಮಧ್ಯಮ ಹಾಗೂ ಅಧಮ ಆಹಾರಗಳ ಸೇವನೆಯನ್ನು ಕೂಡ ಖಂಡಿಸುವುದಿಲ್ಲ ಎಂಬುದು ಇನ್ನೂ ವಿಶೇಷ. ಆರನೆಯ ಅಧ್ಯಾಯದ 18ನೆಯ ಶ್ಲೋಕ ಇದಕ್ಕೆ ನಿದರ್ಶನ. ಇದರಲ್ಲಿ “ಪಂಡಿತ ಅಥವಾ ಜ್ಞಾನಿಯಾದವನಿಗೆ ಬ್ರಾಹ್ಮಣ, ಗೋವು, ಆನೆ, ನಾಯಿ ಮತ್ತು ನಾಯಿ ಮಾಂಸ ತಿನ್ನುವವರಲ್ಲಿ ಯಾವ ಭೇದವೂ ಇಲ್ಲ” ಎಂದು ಹೇಳಲಾಗಿದೆ. ಆದರೆ ಯೂರೋಪ್ ಅಥವಾ ಅಮೆರಿಕದ ಕ್ರಿಶ್ಚಿಯನ್ ಸಮಾಜದಲ್ಲಿ ಆಹಾರ ಸೇವನೆಗೂ ಸಾಮಾಜಿಕ ವರ್ಗಕ್ಕೂ ನೇರ ಸಂಬಂಧವಿದೆ. ಇಸ್ಲಾಂನಲ್ಲಂತೂ ಆಹಾರ ಸೇವನೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳೇ ಇವೆ.
ಆರೋಗ್ಯಕರ ಸಮಾಜ ರೂಪಿಸಲು ಆರೋಗ್ಯಕರ ವ್ಯಕ್ತಿಗಳ ನಿರ್ಮಾಣ ಅಗತ್ಯ. ಇದರ ಮೂಲ ನಾವು ಬಳಸುವ ಆಹಾರದಲ್ಲಿದೆ. ಮೂರು ಗುಣಗಳ ಆಹಾರವೇ ಮೂರು ಗುಣಗಳ ವ್ಯಕ್ತಿಗಳನ್ನು ನಿರ್ಮಿಸುತ್ತದೆ ಎನ್ನುತ್ತಲೇ ಉತ್ತಮ ಸಮಾಜಕ್ಕೆ ಯಾವುದು ಸೂಕ್ತ ಎಂದೂ ಸೂಚಿಸುವ ಭಗವದ್ಗೀತೆ ಆಹಾರ ಸ್ವಾತಂತ್ರ್ಯದ ಜೊತೆಗೆ ಅದಕ್ಕೆ ಸಂಬಂಧಿಸಿದ ಎಚ್ಚರಿಕೆಯನ್ನೂ ನೀಡುತ್ತ, ವ್ಯಕ್ತಿ ವಿವೇಕಕ್ಕೆ ಹೆಚ್ಚಿನ ಮಹತ್ತ್ವ ನೀಡಿ ತನಗೆ ಯಾವುದು ಬೇಕು ಎಂಬುದರ ಆಯ್ಕೆಯನ್ನು ವ್ಯಕ್ತಿಯ ಆಯ್ಕೆಗೇ ಬಿಡುತ್ತದೆ. ಇದು ಭಗವದ್ಗೀತೆ ತೋರಿಸುವ ಆಹಾರದ ಆದರ್ಶ.
ಚಿತ್ರ ಕೃಪೆ:- http://daivivarnashram.com
ಮಾಂಸಾಹಾರವನ್ನು ಸರ್ವಥಾ ನಿಷೇಧ ಮಾಡಿರುವ ಶಾಸ್ತ್ರ ವೇದಗಳು. ಯಜುರ್ವೇದದ ಪ್ರಥಮ ಮಂತ್ರದ ಆಜ್ಞೆ ಇಂತಿದೆ” ಅಘ್ನ್ಯಾ, ಯಜಮಾನಸ್ಯ ಪಶೂನ್ ಪಾಹಿ” ಹೇ ಮಾನವರೇ ನೀವುಗಳು ಈ ಪಶುಗಳನ್ನು ಎಂದಿಗೂ ಕೊಲ್ಲದಿರಿ,ಮತ್ತು ಯಜಮಾನನ ಅರ್ಥಾತ್, ಎಲ್ಲರಿಗೂ ಸುಖವನ್ನು ನೀಡುವ ಜನರ- ಪಶುಗಳನ್ನು ಸಂರಕ್ಷಿಸಿರಿ. ಆದುದರಿಂದ ಹಿಂದಿನಿಂದಲೂ ನಮ್ಮ ಜನರು ಪಶುಹಿಂಸೆಯನ್ನು ಅಧರ್ಮ ಎಂದು ತಿಳಿಯುತ್ತಿದ್ದರು. ಮತ್ತು ಮಾಂಸ ಭಕ್ಷ್ಯಣೆ ಮಾಡುತ್ತಿರಲಿಲ್ಲ. ಅನಾಗೋ ಹತ್ಯಾ ವೈ ಭೀಮಾಃ {ಅಥರ್ವ 10.1.29] ಎಂದರೆ ನಿಷ್ಪಾಪವಾದ ಪ್ರಾಣಿಯನ್ನು ಕೊಲ್ಲುವುದು ಮಹಾ ಪಾಪ ಎಂದು ಹೇಳಿ ಆಹಾರಕ್ಕೋಸ್ಕರ ಪ್ರಾಣಿಯನ್ನು ಕೊಲ್ಲುವುದು ವೇದ ನಿಷೇಧ ಮಾಡಿದೆ. ಇನ್ನು ವೇದಗಳನ್ನು ಆಧರಿಸಿ ಬರೆದ ಮನುಸ್ಮೃತಿಯಲ್ಲಿ ಮಾಂಸಾಹಾರದ ಬಗ್ಗೆ ಹೀಗೆ ಹೇಳಿದೆ.
ಅನುಮಂತಾ ವಿಶಸಿತಾ ನಿಹಂತಾ ಕ್ರಯ ವಿಕ್ರಯೀ |
ಸಂಸ್ಕರ್ತಾ ಚೋಪಹರ್ತಾ ಚ ಖಾದಕಶ್ಚೇತಿ ಘಾತಕಾಃ ||
ಅರ್ಥ:- ಪ್ರಾಣಿವಧೆಗೆ ಅನುಮತಿ ನೀಡುವವನು, ಪ್ರಾಣಿವಧೆಗಾಗಿ ಅದನ್ನು ಎಳೆದು ತರುವವನು, ಪ್ರಾಣಿಯನ್ನು ಕೊಲ್ಲುವವನು, ಪ್ರಾಣಿಯ ಮಾಂಸವನ್ನು ಮಾರುವವನು, ಕೊಳ್ಳುವವನು, ಆ ಮಾಂಸದಿಂದ ಅಡುಗೆ ಮಾಡುವವನು, ಆ ಅಡುಗೆಯನ್ನು ಬಡಿಸುವವನು, ಬಡಿಸಿದ್ದನ್ನು ತಿನ್ನುವವನು ಎಲ್ಲರೂ ಘಾತಕರೇ
ಹೀಗೆ ಇರುವಾಗ ಗೀತೆಯಲ್ಲಿ ಆಹಾರದ ಅದರ್ಶವನ್ನು ಮುಂದಿಟ್ಟು ಇದನ್ನು ತಿನ್ನಬೇಕು, ಇದನ್ನು ತಿನ್ನ ಬಾರದು ಎಂದು ಅಡ್ಡ ಗೊಡೆಯ ಮೇಲೆ ದೀಪವಿಡುವಂತೆ ಮಾತನಾಡಿದಲ್ಲಿ ಅದು ಶ್ರೇಷ್ಠ ವೆನಿಸಿಕೊಳ್ಳುತ್ತದೆಯೇ.? ಆದುದರಿಂದಲೇ ಇದನ್ನು ತಿನ್ನಬೇಕು, ಇದನ್ನು ತಿನ್ನಲೇ ಬಾರದು ಎಂದು ವಿಧಿ- ನಿಷೇಧ ಮಾಡುವ ವೇದಗಳು ಮತ್ತು ಅದಕ್ಕೊಪ್ಪುವ ಮನುಸ್ಮೃತಿ ಮಾನವನಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತದೆ. ಹಾಗಾಗಿ ಯಾವುದೇ ಸ್ಪಷ್ಟ ಧೋರಣೆಯಿಲ್ಲದಿರುವ ಸಾಹಿತ್ಯ ಅದು ಗೀತೆಯಿರಬಹುದು ಮೆಚ್ಚತಕ್ಕದಲ್ಲ ಎಂಬುದು ನನ್ನ ಅನಿಸಿಕೆ.
ನಿಮ್ಮ ಅನಿಸಿಕೆಯೇನೋ ಚೆನ್ನಾಗಿದೆ. ಆದರೆ ಭಗವದ್ಗೀತೆ ನೀವು ನಿರೀಕ್ಷಿಸುವ ಕಾನೂನು ಕಟ್ಟಳೆಯ ಗ್ರಂಥವಲ್ಲವಲ್ಲಾ! ಅದು ತಿಳಿವಳಿಕೆ ಮತ್ತು ವಿವೇಕ ಎರಡೂ ಇರುವವರಿಗೆ. ಅನ್ನ ತಿಂದರೆ ಏನಾಗುತ್ತದೆ, ಅದು ಪಚನವಾದ ಮೇಲೆ ತಿಂದರೆ ಏನಾಗುತ್ತದೆ ಎಂಬುದನ್ನು ತಿಳಿಸುವುದಷ್ಟೇ ಅದರ ಕೆಲಸ. ಮನುಷ್ಯನಿಗೆ ಬುದ್ಧಿ/ವಿವೇಕವಿದೆ ಎಂಬ ಅರಿವು ಮತ್ತು ಎಚ್ಚರದಿಂದಲೇ ಅದು ಮಾತನಾಡುತ್ತದೆ. ಇದು ಅರ್ಥವಾಗದವರಿಗೆ ಶಾಸ್ತ್ರ ಗ್ರಂಥಗಳು ಬೇಕಾಗುತ್ತವೆ ಅನಿಸಿದ್ದರಿಂದಲೇ ಅವು ಹುಟ್ಟಿಕೊಂಡಿವೆ. ಭಗವದ್ಗೀತೆ ಅಡ್ಡಗೋಡೆಯ ಮೇಲಿನ ದೀಪ ಎಂದು ನಿಮಗೆ ಅನಿಸುವುದು ಕೂಡ ಅದರ ಗುಣವೇ. ನಿಮಗಿನ್ನೂ ಸಿದ್ಧತೆ ಬೇಕು ಎಂದರ್ಥ!
ಲೇಖನ ಚೆನ್ನಾಗಿದೆ. ಬೈಬಲ್ ನ ಲೆವಿಟಿಕಸ್ ಅಧ್ಯಾಯದ 7 ಮತ್ತು 8ನೆ ವಾಕ್ಯಗಳು ಹೀಗೆ ಸಾರುತ್ತದೆ; (7) and the pig, for though it divides the hoof, thus making a split hoof, it does not chew cud, it is unclean to you. (8) You shall not eat of their flesh nor touch their carcasses; they are unclean to you.… ಹಂದಿಯ ಮಾಂಸವನ್ನು ನೀವು ತಿನ್ನಬಾರದು ಹಾಗೆಯೇ ಅದರ ಶವವನ್ನು ಮುಟ್ಟಬಾರದು, ಅದು ನಿಮ್ಮ ಪಾಲಿಗೆ ಅಶುದ್ಧವಾಗಿದೆ ಎಂದು ಹಳೆಯ ಒಡಂಬಡಿಕೆಯಲ್ಲಿ ಒಂದಕ್ಕಿಂತ ಹೆಚ್ಚು ಸರ್ತಿ ಹೇಳುತ್ತದೆ. ಆದರೆ ಜನಸಾಮಾನ್ಯರು ಅವರವರ ಧರ್ಮದ ಗ್ರಂಥಗಳನ್ನು ಒದುವ ಅಭ್ಯಾಸವನ್ನು ಇಟ್ಟೂಕೊಂಡಿಲ್ಲ. ಅದು ವಿಷಾದನೀಯ.