ಚೀನಿಯರ ಹೊಸ ಅವಿಷ್ಕಾರ.. ಬ್ರಹ್ಮಪುತ್ರ ಎಂಬ ವರುಣಾಸ್ತ್ರ..!
– ಸಂತೋಷಕುಮಾರ ಮೆಹೆಂದಳೆ.
(ನಮ್ಮಲ್ಲಿ ಯಾವೊಂದು ವಿಷಯವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಅಭ್ಯಾಸವೇ ಇದ್ದಂತಿಲ್ಲ. ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಹಿಮಾಚಲ, ಅರುಣಾಚಲ, ಬಾಂಗ್ಲಾದೇಶ ಮತ್ತು ಅಸ್ಸಾಂ ವಲಯದಲ್ಲಿ ನಡೆದ ಆಕಸ್ಮಿಕ ಪ್ರವಾಹದ ಹಿನ್ನೆಲೆಯನ್ನು ಇಲ್ಲಿವರೆಗೂ ಕೆಲವೇ ಕೆಲವು ತಜ್ಞರು ಅದೊಂದು ವ್ಯವಸ್ಥಿತ ಸ್ಯಾಂಪಲ್ ದಾಳಿ ಎಂದು ಕಂಡುಕೊಂಡಿದ್ದಾರೆ. ಚುಕ್ಕೆಗೆ ಚುಕ್ಕೆ ಸರಿಯಾಗಿ ಸೇರಿಸಿದ್ದರೆ ಆಗಲೇ ವೃತ್ತ ಸಿದ್ಧವಾಗುತ್ತಿತ್ತು. ಅದಾಗಲೇ ಇಲ್ಲ. ಇಂತಹದ್ದೊಂದು ಕೃತಕ ಪ್ರಾಕೃತಿಕ ವಿಕೋಪ ಸೃಷ್ಠಿಸಿ ಅದಕ್ಕೆ ಪ್ರತಿಕ್ರಿಯೆ ತಿಳಿಯುವುದಷ್ಟೆ ಆಗ ಚೀನಾದ ಉದ್ದೇಶವಾಗಿತ್ತು. ಈಗ ಅದರ ನಿಜವಾದ `ವಾಟರ್‍ವಾರ್ ಸ್ಟ್ರಾಟಜಿ’ ಮುನ್ನೆಲೆಗೆ ಬರುತ್ತಿದೆ. ಅತಿ ಬುದ್ಧಿವಂತಿಕೆಯ ಈ ಯೋಜನೆ ಭವಿಷ್ಯದಲ್ಲಿ ಅನಾಹುತಕಾರಿಯಾದ ಆಯುಧವಾಗಿ ಬಳಕೆಯಾಗಲಿದೆ. ಅದೇ `ವಾಟರ್ ವಾರ್’ ಅರ್ಥಾತ್ ವರುಣಾಸ್ತ್ರ. ಇದನ್ನು ತಡೆಯಲು ನಮ್ಮ ಪ್ರಧಾನಿ ಮೋದಿ ಉಸಿರುಕಟ್ಟಿ ಕಾದುತ್ತಿದ್ದರೆ, ಇದಾವುದರ ಅರಿವೂ ಇಲ್ಲದ ಎಬುಜೀಗಳು ಸಾಕ್ಷಿಗಾಗಿ ತೂಬು ಕಿತ್ತುಕೊಳ್ಳುತ್ತಿದ್ದಾರೆ.)
ವಿಶ್ವದ ಅತಿ ದೊಡ್ಡ ಕೊಳ್ಳ ಯಾರ್ಲುಂಗ್ ಟ್ಯಾಂಗ್ಬೊವನ್ನು ಈ ನದಿ ಸೃಷ್ಟಿಸಿದೆ. ವಿಶ್ವದ ಅತಿದೊಡ್ಡ ನದಿ ಮುಖಜ ಭೂಮಿಯೂ (ಡೆಲ್ಟಾ ಗಂಗಾ) ಇದೇ ನದಿಯ ಉತ್ಪನ್ನ. ವಿಶ್ವದಲ್ಲೇ ಅತ್ಯಂತ ಎತ್ತರ( ನಾಲ್ಕೂವರೆ ಸಾವಿರ ಅಡಿ)ದಲ್ಲಿ ಹರಿಯುವ ನದಿ ಭವಿಷ್ಯತ್ತಿನಲ್ಲಿ ಚೀನಾದ ಪಾಲಿಗೆ ಅತಿ ದೊಡ್ಡ ನೈಸರ್ಗಿಕ ಅಸ್ತ್ರವಾಗಲಿದೆ. ಅದಕ್ಕಾಗಿ ಈಗ ಅಖಾಡ ಶುರುವಾಗುತ್ತಿದೆ. ಪರೀಕ್ಷಾರ್ಥ ಪ್ರಯೋಗಗಳೂ ಯಶಸ್ವಿಯಾಗೇ ಜರುಗಿವೆ. ಇದೆಲ್ಲದಕ್ಕೂ ಮೂಲ ಹಿಂದೊಮ್ಮೆ ನಾವು ಟಿಬೆಟ್ ಉಳಿಸಿಕೊಳ್ಳದೆ ಹೋದದ್ದು ಮತ್ತು ನದಿ, ನೀರು ಸಾಗರಗಳನ್ನು ಹೇಗೆ ಜತನ ಮಾಡಿಕೊಳ್ಳಬೇಕೆಂಬುವುದನ್ನು ಕಳೆದ ಆರೂವರೆ ದಶಕದಿಂದಲೂ ನಿರ್ಲಕ್ಷಿಸಿದ ಕಾರಣ ಅದಕ್ಕೆ ಬೆಲೆ ತೆರುತ್ತಿದೆ ಭಾರತ. ಬ್ರಹ್ಮಾಂಡ ನದಿಯಾದ ಚೀನಾದ ಪಾಲಿಗೆ ಯಾರ್ಲುಂಗ್ ಟಾಂಗ್ಬೊ, ಟಿಬೇಟಿಯನ್ನರಿಗೆ ಡಿಹಾಂಗ್, ಅರುಣಾಚಲದಲ್ಲಿ ಸಿಯಾಂಗ್, ಬಾಂಗ್ಲಾದೇಶಿಯರಿಗೆ ಜಮುನಾ ಮತ್ತು ನಮಗೆ ಬ್ರಹ್ಮಪುತ್ರ. ಬರಲಿರುವ ವರ್ಷಗಳಲ್ಲಿ ಈ ಬರಹ ಸತ್ಯವಾಗಲಿದ್ದು ಸಾಕ್ಷಿಯಾಗಲು ನಾವಾರೂ ಇರುವುದಿಲ್ಲ ಎನ್ನುವುದಷ್ಟೆ ಸದ್ಯದ ಕಟುವಾಸ್ತವ.
ಹೀಗೆ ಸಾಲುಸಾಲು ವಿಶೇಷಗಳೊಂದಿಗೆ ಬೆಳೆದಿರುವ ನದಿಯ ಹರಿವು ಎಷ್ಟು ದೊಡ್ಡದೋ, ಎರಡು ದೇಶಗಳ ಮಧ್ಯೆ ಅತಿ ದೊಡ್ಡ ತಲೆ ನೋವಾಗಿ ನಿಲ್ಲಲಿದೆಯಾ ಎನ್ನುವುದೂ ಅಷ್ಟೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಲಿದೆ. ಕಾರಣ ಬ್ರಹ್ಮಪುತ್ರ ನದಿಗೆ ಅಂತರಾಷ್ಟ್ರೀಯವಾಗಿ ಯಾವುದೇ ಕಾನೂನಾತ್ಮಕ ಒಪ್ಪಂದಗಳಿಲ್ಲದಿರುವುದೂ ಸೇರಿದಂತೆ ಅದನ್ನು ತನ್ನ ಸುಪರ್ದಿಗಿಟ್ಟುಕೊಳ್ಳಲು ಹೊರಟಿರುವ ಚೀನಾ ಯಾವ ಒತ್ತಡ ಮತ್ತು ಕಾನೂನುಗಳನ್ನು ಕೇರ್ ಮಾಡದೆ ಮುನ್ನುಗ್ಗುವ ಛಾತಿಯ ದೇಶ ಎನ್ನುವುದೂ ಒಂದು. ನಮ್ಮ ದುರದೃಷ್ಟಕ್ಕೆ ಕಂಡಕಂಡಲ್ಲೆಲ್ಲಾ ಉದಾರವಾಗಿ ಈ ದೇಶ ಮತ್ತು ಇದರ ಪ್ರಾಕೃತಿಕ ಸಂಪತ್ತನ್ನು ಹಿಂದಿನವರು ಹಂಚಿಟ್ಟಿದ್ದು ಮತ್ತದನ್ನು ವಿದೇಶಿಗರು ವ್ಯವಸ್ಥಿತವಾಗಿ ದಾಖಲೆಯ ಮೂಲಕ ಸುಭದ್ರಪಡಿಸಿಕೊಂಡಿದ್ದೂ ನಮ್ಮ ಕರ್ಮ. ಕೈಯ್ಯಲ್ಲಿರುವುದೀಗ ಬರೀ ಚಿಪ್ಪು. ಇಂತಹ ಪರಿಸ್ಥಿತಿಯಿಂದ ಭವಿಷ್ಯವನ್ನು ಸುಭಧ್ರಗೊಳಿಸುವತ್ತ ನಮ್ಮ ಮೋದಿಯಂತಹ ಜಗಮಾನ್ಯ ಪ್ರಧಾನಿ ಹೋರಾಡುತ್ತಿದ್ದರೆ, ಇತ್ತ ಅತಿರೇಕಿ ಬುದ್ಧಿಜೀವಿಗಳು ಸಾಕ್ಷಿ ಕೊಡು, ದಾಖಲೆ ತೋರಿಸು ಎಂದು ಲಬೋಲಬೋ ಬಡಿದುಕೊಳ್ಳುತ್ತಿದ್ದಾರೆ. ದೇಶದ್ರೋಹವಂತೂ ಇವರ ಕರ್ಮವೇ ಆಗಿಹೋಗಿದೆ. ಆತ್ಮಘಾತಕತನಕ್ಕೂ ಒಂದು ಮಿತಿ ಬೇಡವೆ. ಇರಲಿ ವಿಷಯಕ್ಕೆ ಬರೋಣ.
ಇವತ್ತು ಪ್ರತಿ ವರ್ಷ ಎರಡು ಲಕ್ಷ ಜನರನ್ನು ನಿರಾಶ್ರಿತರನ್ನಾಗಿಸುತ್ತಿರುವ ಬ್ರಹ್ಮಪುತ್ರ ಬಗ್ಗೆ ಅರಿತುಕೊಳ್ಳಹೋದರೆ ಸುಲಭದಲ್ಲಿ ಒಂದು ತೆಕ್ಕೆಗೆ ನಿಲುಕುವ ಸಬ್ಜೆಕ್ಟೇ ಅಲ್ಲ. ಏನಿದ್ದರೂ ಒಂದು ಕಡೆಯಿಂದ ಅದರ ದಂಡೆಗುಂಟ ಎಕ್ಕ ಎಬ್ಬಿದಂತೆ ಕಾಲಾಡಿಸಿಕೊಂಡು ಹೋದಲ್ಲಿ ಮಾತ್ರ ಒಂಚೂರು ಅರಿವಾದೀತು. ಅದಕ್ಕಾಗೆ ಇವತ್ತು ಬ್ರಹ್ಮಪುತ್ರ ಸರಿ ಸುಮಾರು ನಾಲ್ಕು ದೇಶಗಳ ಜೀವನದಿಯಾಗಿ ಹರಿಯುತ್ತಿದ್ದರೂ ತನ್ನ ಗುಟ್ಟುಬಿಟ್ಟು ಕೊಡದೆ ಗುಟುರು ಹಾಕುತ್ತಿದೆ. ಹೀಗೆ ಒಂದು ತುದಿಯಿಂದ ಇನ್ನೊಂದು ಕಡೆಯಲ್ಲಿ ಹರಿಯಲು ಆರಂಭಿಸಿ ಅರ್ಧ ದಾರಿಯಾದ ಮೇಲೆ ಅದೇ ರಸ್ತೆಯಲ್ಲಿ ತಿರುವು ತೆಗೆದುಕೊಂಡು ಉಲ್ಟಾ ಪ್ರಯಾಣ ಬೆಳೆಸಿದ ನದಿಯ ಇನ್ನೊಂದು ಉದಾಹರಣೆ ಭೂಮಿಯ ಮೇಲೆ ಇಲ್ಲ. ತನ್ನದೆ ದಿಕ್ಕಿನ ಕಡೆಗೆ ತೆಗೆದುಕೊಳ್ಳುವ ತಿರುವನ್ನು ಇವತ್ತು ಜಾಗತಿಕವಾಗಿ `ಗ್ರೇಟ್ ಬೆಂಡ್’ ಎಂದು ಗುರುತಿಸುತ್ತಾರೆ.
ಇಂತಹ ನೈಸರ್ಗಿಕ ವೈಚಿತ್ರ್ಯವನ್ನೇ ಚೀನಾ ತನ್ನ ಆಯುಧವನ್ನಾಗಿ ಮಾಡಿಕೊಳ್ಳತೊಡಗಿದೆ. ಭಾರತ ಬಹ್ವಂಶ ಜನರಿಗೆ ತಿಳಿಯದಿರುವ ಒಂದು ವೈಜ್ಞಾನಿಕ ಸತ್ಯವೇನೆಂದರೆ ಕಳೆದ ಒಂದು ದಶಕದ ಅವಧಿಯಲ್ಲಿ ಆದ ಮೇಘ ಸ್ಫೋಟಗಳು, ಪ್ರವಾಹಗಳು, ಇದ್ದಕ್ಕಿದ್ದಂತೆ ನೆರೆಯುಕ್ಕಿ ಹರಿದಿರುವುದು ಇವೆಲ್ಲಾ ಮಳೆಯಿಂದಾಗಿ ಆಗಿವೆ ಎನ್ನುವುದು ಅಪ್ಪಟ ಸುಳ್ಳು. 2000 ದಿಂದ 2016 ರವರೆಗಿನ ಅಸ್ಸಾಂ, ಅರುಣಾಚಲ, ಪಶ್ಚಿಮ ಬಂಗಾಳ ಮತ್ತು ಇತರ ಈಶಾನ್ಯ ರಾಜ್ಯದಲ್ಲಿ ಎದ್ದ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ಅಂದಾಜು 20 ಸಾವಿರಕ್ಕೂ ಅಧಿಕ. ದಿಕ್ಕೆಟ್ಟವರ ಸಂಖ್ಯೆ ಅನಾಮತ್ತು ಎಂಟು ಲಕ್ಷ. ನೀರುಪಾಲಾದ ಕಾಡು ಪ್ರಾಣಿಗಳ ಸಂಖ್ಯೆ ಲೆಕ್ಕಕ್ಕೆ ಸಿಕ್ಕಿಲ್ಲ. ವಿಚಿತ್ರವೆಂದರೆ ಇಲ್ಲೆಲ್ಲೂ ತೀರ ಎನ್ನುವಂತಹ ಇಷ್ಟು ನೀರು ಒಟ್ಟಾರೆಯಾಗಿ ಮುಗಿಲು ಹರಿದುಕೊಂಡು ಬಿದ್ದಿರಬಹುದಾದಂತಹ ಮಳೆಯೇ ಆಗಿಲ್ಲ. ಆದರೆ ನೂರಿನ್ನೂರು ಮಿ.ಮಿ. ಮಳೆಯಾದಾಗಲೂ ನೆರೆ ಉಕ್ಕಿ ಬಿದ್ದಿದೆ. ವಾಸ್ತವವಾಗಿ ಇಂತಹ ಪುಟಗೋಸಿ ಮಳೆಗೆ ಹಿಮಾಲಯದ ಕೊಳ್ಳಗಳಲ್ಲಿ ಆ ಪರಿಯ ಬೃಹದಾಕಾರದ ಅಲೆಗಳುಕ್ಕಿ ಮನೆ ಮಠ ಮುಳುಗಿಸಲಾರವು ಏನಿದ್ದರೂ ಗುಡ್ಡ ಕುಸಿತಕ್ಕೆ ಕಾರಣವಾಗಬಹುದೇ ವಿನಃ ತೀರಾ ಒಮ್ಮೆಲೆ ನೂರು ಅಡಿಗಳಷ್ಟು ನೀರು ಏರಲು ಅಲ್ಲಿ ಬಿದ್ದಿರಬಹುದಾದ ಮಳೆಯ ಪ್ರಮಾಣದ ಕಾರಣಕ್ಕೆ ಸಾಧ್ಯವೇ ಇಲ್ಲ. ಹಾಗಿದ್ದರೂ ಈ ಅಚಾನಕ್ ಪ್ರವಾಹ ಹೇಗೆ ಬರುತ್ತಲೇ ಇದೆ ?
ಅಸಲಿಗೆ ಮಳೆ ಬೀಳುವ ಕೊಳ್ಳಗಳ ಪಾತ್ರದಿಂದ ಕೆಳಭಾಗಕ್ಕೆ ನೀರು ಸಂಗ್ರಹವಾಗುತ್ತಾ ಸಾಗಿ ಅಲ್ಲಿ ನೆರೆ ಉಕ್ಕಬೇಕು. ಹಾಗಾದರೆ ಮಳೆ ಶುರುವಾದ ಅರ್ಧದಿನದಲ್ಲೇ ಅದೆಲ್ಲಿಂದ ಆಪಾಟಿ ನೀರು ಗಡಿರಾಜ್ಯಗಳ ನದಿ ಪಾತ್ರ ಭೂಮಿಯಲ್ಲಿ ಉಕ್ಕೇರುತ್ತಿದೆ. ಇದೇನಿದು ಈ ಪ್ರದೇಶದಲ್ಲೆಲ್ಲಾ ಇದ್ದಕ್ಕಿದಂತೆ ನೆರೆಯೇರುತ್ತದೆ. ಜನರೂ ಚೆಕ್ಕುಚೆದುರಾಗಿ ಹೋಗುತ್ತಾರೆ. ಆದರೆ ಆತ್ತಲಿಂದ ಚೀನಾ ಮಾಡಿದ ಆಣೆಕಟ್ಟೆಯ ಪ್ರಮಾದ ಇಂತಹದ್ದೊಂದು ಪ್ರಮಾದಕ್ಕೆ ಕಾರಣವಾಗಿದೆ ಎನ್ನುವುದನ್ನು ಜಾಗತಿಕ ಎಲ್ಲಾ ವೈಜ್ಞಾನಿಕ ರಿಪೋರ್ಟುಗಳೂ ಸಾಬೀತು ಮಾಡಿವೆ. ಅಷ್ಟೇ ಏಕೆ ..? ಆಗೀನ ಉಪಗ್ರಹದ ಚಿತ್ರಗಳು ಮತ್ತು ಇತರೆ ಮೂಲದ ಪ್ರಕಾರ ಯಾವ್ಯಾವ ಆಣೆಕಟ್ಟೆಗಳನ್ನು ಚೀನಾ ಬಾಯ್ಬಿಡಿಸಿ ನೀರು ಹರಿಸಿ ಕೂತಿದೆ ಎನ್ನುವುದಕ್ಕೂ ಪುರಾವೆಗಳಿವೆ. ಆದರೆ ಅದೆಲ್ಲಾ ಗೊತ್ತಾಗುವ ಹೊತ್ತಿಗಾಗಲೇ ಭಾರತದಲ್ಲಿ ಲಕ್ಷಾಂತರ ಜನರ ಮನೆ ಮಠ ನಾಶವಾಗಿ ಚೆಕ್ಕು ಚೆದುರಾಗಿ ಹೋಗಿತ್ತು.
ಇನ್ನು ಅತೀ ಮಳೆಯ ಕಾರಣ ಹಾಗು ಸರಿಯಾಗಿ ಅದೇ ಹೊತ್ತಿಗೆ ಎಲ್ಲಿ ಮಳೆಯಾದೀತು ಎನ್ನುವುದನ್ನು ಚೀನಿಯರು ಯಾವಾಗಲೂ ನಿಖರವಾಗಿ ಗುರುತಿಸುತ್ತಾರೆ. ಹಾಗಾಗಿ ತುಂಬ ನಿಖರವಾದ ಮಾಹಿತಿಯ ಆಧಾರದ ಮೇಲೆ ಸರಿಯಾಗಿ ಪ್ರವಾಹವನ್ನು ಸೃಷ್ಟಿಸಿ ಇಂಥಾ ರಾಷ್ಟ್ರೀಯ ವಿಕೋಪ ಎದುರಾದಾಗ ಭಾರತ ಹೇಗೆ ಸ್ಪಂದಿಸುತ್ತದೆ ಎನ್ನುವುದನ್ನು ಅದು ಕುತೂಹಲದಿಂದ ಕಾಯುತ್ತಿತ್ತು. ಕಳೆದ ಹದಿನಾರು ವರ್ಷದ ರಿಪೋರ್ಟ್ ನೋಡಿ. ಅಲ್ಲಿ ಪ್ರವಾಹ ಉಂಟಾಗಿ ಹರಿದ ಸುಮಾರು ಒಂದೂ ಚಿಲ್ರೆ ಲಕ್ಷ ಟಿ.ಎಮ್.ಸಿ ನೀರಿಗೂ ನೂರು ಚಿಲ್ರೆ ಸೆ.ಮೀ. ಬೀಳುವ ಮಳೆಗೂ ತಾಳಮೇಳವೇ ಇಲ್ಲ. ಒಂದರ್ಥದಲ್ಲಿ ಇದು ಚೀನಿಯರ ಟ್ರೈಯಲ್ ಆಂಡ್ ಎರರ್. ಯುದ್ಧಕ್ಕೆ ಮೊದಲಿನ ಮಾಕಪ್.
ಅಲ್ಲಿಗೆ ಚೀನಿಯರಿಗೆ ಬಂದೂಕು, ಮದ್ದು ಗುಂಡುಗಳಿಗಿಂತ ಬಲಿಷ್ಟವಾದ ನೈಸರ್ಗಿಕ ಆಯುಧ ಕೈಗೆ ಸಿಕ್ಕಿ ಹೋಗಿದೆ. ಅಲ್ಲಿಂದ ಶುರುವಾಗಿದ್ದೇ ಸರಣಿ ಅಣೆಕಟ್ಟೆಯ ಕಾಮಗಾರಿ. ನೆನಪಿರಲಿ ಜಗತ್ತಿನ ಶೇ.50 ಕ್ಕಿಂತ ಹೆಚ್ಚು ಕಾಮಗಾರಿ ಇವತ್ತು ನಡೆಯುತ್ತಿರುವುದು ಚೀನಾದಲ್ಲೇ. ಎಂಬತ್ತು ಸಾವಿರಕ್ಕೂ ಮಿಕ್ಕಿ ಆಣೆಕಟ್ಟೆ, ಸ್ಯಾಡಲ್‍ಡ್ಯಾಂಗಳು, ಬಾಂದಾರಗಳು ಮತ್ತು ಸಪೋರ್ಟಿಂಗ್ ವಾಟರ್‍ವಾಲ್‍ಗಳ ಸರಣಿ ಹೊಂದಿರುವ ಏಕೈಕ ರಾಷ್ಟ್ರವೆಂದರೆ ಚೀನಾ. ಹಾಗಾಗಿ ಸುತ್ತ ಮುತ್ತಲಿನ ದೇಶಗಳೇನಾದರೂ ಬಾಲ ಬಿಚ್ಚಿದರೆ ಬರೀ ತನ್ನ ಸರಣಿ ಗೇಟುಗಳನ್ನು ತೆರೆದಿಟ್ಟೆ ಇವತ್ತು ಯುದ್ಧ ಗೆದ್ದು ಬಿಡುವ ರಣೋತ್ಸಾಹದಲ್ಲಿದೆ ಚೀನಾ.
ಇಷ್ಟೆಲ್ಲಾ ಆ ರಾಷ್ಟ್ರದಿಂದ ನಿರಂತರ ಪರೋಕ್ಷ ಮತ್ತು ಸಾಮೂಹಿಕ ಪ್ರಹಾರ ನಡೆಯುತ್ತಿದ್ದರೂ ನಮ್ಮ ದೇಶದಲ್ಲಿ ಇವತ್ತು ಅವರ ನಿಲುವಿನ ಬಗ್ಗೆ ಕುಲುಕುಲು ಎನ್ನುವ, ಮರ್ಜಿ ಕಾಯುವ ಈ ನೆಲಕ್ಕೆ ದ್ರೋಹ ಬಗೆಯುತ್ತಿರುವ ಕಮ್ಮಿನಿಷ್ಠೆಯ ಬುದ್ಧಿ ಜೀವಿಗಳಿಗೇನೂ ಬರವಿಲ್ಲ. ಮಾತೆತ್ತಿದರೆ ಚೇಗೋವೆರ.. ಲೆನಿನ್ನು.. ಕಾರ್ಲು ಎನ್ನುವವರು ನಿಶ್ಚಿತವಾಗಿಯೂ ಇದೇ ನೆಲದಿಂದ ಎದ್ದು ಹೋಗಿ ಜಾಗತಿಕವಾಗಿ ಈ ದೇಶದ ಸನಾತನ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ ವಿವೇಕಾನಂದರ ಬಗ್ಗೆ ಓದಿಯೇ ಇರುವುದಿಲ್ಲ. ಅಹಿಂಸೆ ಮತ್ತು ಸಮಾನತೆ ಬೋಧಿಸಿದ ಗಾಂಧೀಜಿಯವರ ಸಮಾನತೆ ಎಂದರೆ ಅದೇನು ಎನ್ನುವರೇ ಜಾಸ್ತಿ.
ನೆನಪಿರಲಿ ಚೀನಾ ಬ್ರಹ್ಮಾಂಡ ಗಾತ್ರದ ನಾಲ್ಕು ಸುರಂಗ ನಿರ್ಮಿಸುತ್ತಿದೆಯಲ್ಲ ಅದನ್ನು ಸಹಜ ಮಾನವ ಶಕ್ತಿಯಿಂದ ಅಸಾಧ್ಯವಾದ ಕಾರ್ಯ. ಆದರೂ ನಾಲ್ಕು ಸಾವಿರ ಅಡಿ ಎತ್ತರದಲ್ಲಿ ಅದು ಕೊರೆಯುತ್ತಿರುವ ಸುರಂಗಕ್ಕಾಗಿ ಅನಾಹುತಕಾರಿ ವಿಸ್ಫೋಟನೆಯನ್ನು ಬಳಸಲಿದೆ. ಇದರಿಂದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಆಗುವ ಭೂಮಿಯ ವೈಪರಿತ್ಯ ಮತ್ತು ದಖನ್ ಶ್ರೇಣಿಯ ಪ್ಲೇಟುಗಳ ಅಲುಗಾಡುವಿಕೆಯಿಂದ ಶಾಶ್ವತ ಅಸ್ಥಿರತೆ ಉಂಟಾಗುತ್ತದೆ. ಇಷ್ಟಾಗಿಯೂ ನಾವು ಊಹಿಸಿಕೊಳ್ಳಲೇ ಆಗದ ಮೊತ್ತದ ಪ್ರಾಜೆಕ್ಟು ಕೈಗೂಡಿದ ನಂತರ ಚೀನಾ ಬಯಸಲಿ ಬೀಡಲಿ ನೈಸರ್ಗಿಕ ಅಪಘಾತ ತಪ್ಪಿದ್ದಲ್ಲ.
ಕಾರಣ ಯಾವ ಭಾಗದಲ್ಲಿ ಇಂತಹ ಕಾಮಗಾರಿ ಕೈಗೊಳ್ಳಲೇಬಾರದು ಎಂದಿದೆಯೋ ಅದೇ ಜಾಗದಲ್ಲಿ ಸುರಂಗ ತೋಡುತ್ತಿದೆ ಚೀನಾ. ಅಲ್ಲಿ ಗುರುತ್ವ ಬಲದಿಂದ ನೀರು ಹರಿಯುವ ರಭಸ ಮತ್ತು ಮೊದಲೇ ಸಡಿಲಗೊಂಡಿರುವ ಬುಡದ ಪರಿಣಾಮ ಒಂದು ಭಾಗದಲ್ಲಿ ಒಳಾವರಣ ಕುಸಿತದೊಂದಿಗೆ ಬ್ಲಾಕ್ ಆಗಿದ್ದೇ ಆದರೆ, ತನ್ನ ಅಣೆಕಟ್ಟೆ ಮತ್ತು ದಕ್ಷಿಣ ಚೀನಾ ಪ್ರಾಂತ್ಯದ ಭಾಗಗಳನ್ನು ಉಳಿಸಿಕೊಳ್ಳಲು ಗೇಟುಗಳನ್ನು ತೆರೆಯುವುದಂತೂ ಇದ್ದೇ ಇದೆ. ಅದಕ್ಕೂ ಮೊದಲೇ ಲೆಕ್ಕಕ್ಕೆ ನಿಲುಕದ ಪ್ರಮಾಣದ ನೀರು `ಗ್ರೇಟ್‍ಬೆಂಡ್’ ನ ಬಲಭಾಗಕ್ಕೆ ನುಗ್ಗಿ ಬರುತ್ತದೆ. ಆ ರಭಸ ಮತ್ತು ವೇಗವನ್ನು ತಡೆಯುವ ಶಕ್ತಿ ಮತ್ತು ಯುಕ್ತಿ ಯಾವ ತಂತ್ರಜ್ಞಾನಕ್ಕೂ ಸಾಧ್ಯವಿಲ್ಲ. ಇಂತಹ ನೈಸರ್ಗಿಕ ವಿಧಾನವನ್ನೇ ಚೀನಾ ಆಯುಧವನ್ನಾಗಿ ಬಳಸುವಲ್ಲಿಯೂ ಭಯಾನಕ ಯೋಜನೆ ರೂಪಿಸಿಟ್ಟುಕೊಂಡಿದೆ. ಸುರಂಗ ನಿಲುಗಡೆ ಅಥವಾ ನೀರು ಬಿಡುಗಡೆಯ ಹಿಂದೆ ಕೃತಕ ಸೃಷ್ಟಿ ಉಂಟಾಗಿಸಿದ್ದೇ ಆದರೆ ಈಶಾನ್ಯ ಭಾರತವನ್ನು ಹಾಳುಗೆಡವಲು ಚೀನಾಕ್ಕೆ ಅರ್ಧ ದಿನವೂ ಬೇಡ. ಯಾವ ದೈತ್ಯ ಮಿಲಿಟರಿಯಿಂದಲೂ ಮಾಡಲಾಗದಷ್ಟು ಹಾನಿಯನ್ನು ಬರೀ ಪುಗಸಟ್ಟೆ ನೀರು ಮಾಡಿಬಿಡುತ್ತದೆ. ಇದು ನಿಜವಾದ ಅಪಾಯಕಾರಿಯಾದ ತಿರುವು ಹೊರತಾಗಿ ಭಾರತಕ್ಕೆ ನೀರು ಕಡಿಮೆಯಾಗುತ್ತದೆ ಎನ್ನುವುದೆಲ್ಲ ತೀರ ಅವೈಜ್ಞಾನಿಕವಾದ. ಅದೆಷ್ಟೇ ಬಾಂದುಗಳನ್ನು ಚೀನಾ ಬಿಗಿದಿಟ್ಟುಕೊಂಡರೂ ಯಾವ ಲೆಕ್ಕದಲ್ಲೂ ನೀರಿಗೆ ತೀರ ಕೊರತೆ ಕಾಡುವುದೇ ಇಲ್ಲ.
ಕಾರಣ ಭಾರತದೊಳಕ್ಕೆ ಧಾವಿಸುವ ಬ್ರಹ್ಮಪುತ್ರಕ್ಕೆ ಅನಾಮತ್ತಾಗಿ ಇವತ್ತಿಗೂ ಲೆಕ್ಕಕ್ಕೆ ಸಿಗದಷ್ಟು ನೀರನ್ನು ಅದರ ಎಡಬಲದಲ್ಲಿರುವ ನದಿಗಳು ಸೇರಿಸುತ್ತಿವೆ. ಇವೆಲ್ಲ ಭಾರತದಲ್ಲಿಯೇ ಹುಟ್ಟಿ 300-400 ಕಿ.ಮೀ. ದೂರ ಕ್ರಮಿಸುವಂತಹ ಅಗಾಧತೆಯನ್ನೂ ಹೊಂದಿವೆ. ಏನೂ ಇಲ್ಲದಿದ್ದಾಗಲೂ ಭೀಕರ ಬರದ ಪರಿಸ್ಥಿತಿಯಲ್ಲೂ ಕನಿಷ್ಠ 22000 ಟಿ.ಎಮ್.ಸಿ. ನೀರನ್ನು ಸಮುದ್ರಕ್ಕೆ ಸುಖಾ ಸುಮನೆ ಹರಿಸುವ ತಾಕತ್ತು ಬ್ರಹ್ಮಪುತ್ರಕ್ಕಿದೆ. ಅದೆಲ್ಲಾ ಚೀನಾದಿಂದ ಬಂದ ಲೆಕ್ಕಾಚಾರವಲ್ಲ. ಕೇವಲ ಭಾರತದ ಮುಖಜ ಭೂಮಿಯಲ್ಲಿ ಜನರೇಟ್ ಆಗುವ ಜಲ ಬಂಗಾರ.
ಚೀನಾ ಬ್ರಹ್ಮ ಪುತ್ರನಿಂದ ನೀರನ್ನು ಎತ್ತಿ ತನ್ನ ಇನ್ನೊಂದು ತುದಿಗೆ ರವಾನಿಸುವ ಮಾನವ ಮಾತ್ರರಿಂದ ಅಸಾಧ್ಯ ಎನ್ನಿಸುವ ಕೆಲಸಕ್ಕೆ ಕೈ ಹಾಕಿದೆಯಲ್ಲ ಅದರ ಮೂಲ ಇರುವುದೇ ಈ ಗ್ರೇಟ್‍ಬೆಂಡ್ ಭಾಗದಲ್ಲಿ. ಇಲ್ಲಿ ಆಣೆಕಟ್ಟೆ ಕಟ್ಟಿ ನಿಲ್ಲಿಸಿ ತಿರುಗಿಸಲು ಯೋಜಿಸುತ್ತಿರುವ ನೀರೇ ಚೀನಾದ ಜೀವ ನದಿಯಾದ `ಯೆಲ್ಲೊ ರೀವರ್’ ಗೆ ತಲುಪುತ್ತದೆ. ಇಲ್ಲೇ ಚೀನಾ ಯಾರ ಕಣ್ಣಿಗೊ ಬೀಳದ ನಾಲ್ಕು ಸುರಂಗಗಳನ್ನು ನಿರ್ಮಿಸಿ ಅದರೊಳಗಿಂದ ನೀರು ಹರಿಸಿಕೊಳ್ಳಲು ಯೋಜಿಸಿದೆ. ಅದರಲ್ಲಾಗಲೇ ಒಂದು ಸುರಂಗ ಕೈಗೂಡಿದ್ದು ಸುಮಾರು ನಾಲ್ಕು ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪನ್ನ ನಡೆದಿದೆ. ಅಂದರೆ ನಮ್ಮ ಪೂರ್ತಿ ಕರ್ನಾಟಕಕ್ಕೆ ಪೂರೈಸಬಹುದಾದಷ್ಟು. ಅಷ್ಟಕ್ಕೂ ಇದನ್ನು ನದಿ ಎಂದು ಒಪ್ಪದೆ ಅದನ್ನೂ ಒಂದು ಮಿನಿ ಸಾಗರವೇ ಎಂದು ನಂಬಿರುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಉಳಿದದ್ದು ಏನೇ ಇರಲಿ ನದಿಯ ಮೂಲ ಮಾಹಿತಿಗೆ ಬೇರೆ ಪುಟಗಳಿವೆ. ಅದಕ್ಕೂ ಮೊದಲು ನಮಗೆ ಈಗ ಆಗುತ್ತಿರುವ ತಳಮಳವನ್ನು ವಾಸ್ತವದ ಆಧಾರದ ಮೇಲೆ ಪರಿಶೀಲಿಸಿದರೆ ಪ್ರಸ್ತುತ ಮೊದಲ ಒಂದು ದಶಕಗಳ ಕಾಲಾವಧಿಯಲ್ಲಂತೂ ಬ್ರಹ್ಮಪುತ್ರ ಯಾವ ಟೆನ್ಶನ್ನೂ ಕೊಡುವ ಲಕ್ಷಣಗಳಿಲ್ಲ. ಆದರೆ ಚೀನಾದ ಬಗ್ಗೆ ಒಂದು ಮಾತಿದೆ. ಚೀನಾ ಯೋಜನೆ ರೂಪಿಸುವುದೇ ಕಷ್ಟ. ಒಮ್ಮೆ ಯೋಜನೆ ಸಿದ್ಧವಾದರೆ ಅದನ್ನು ಯೋಜನೆಯನ್ನು ಪೂರ್ಣಗೊಳಿಸದೆ ಬಿಡುವುದಿಲ್ಲ.
ಇದನ್ನು ಗಮನದಲ್ಲಿರಿಸಿಕೊಂಡು ಚಿಂತಿಸುವಾಗ ಇವತ್ತಲ್ಲ ನಾಳೆ ಚೀನಾ ತನ್ನ ಹಳದಿ ನದಿಗೆ ( ಯೆಲ್ಲೋ ರೀವರ್) ಬ್ರಹ್ಮ ಪುತ್ರದ ಒಂದಷ್ಟು ಹರಿವಿನ ಕಾಲುವೆ ಸೇರಿಸದೇ ಉಳಿಯಲಿಕ್ಕಿಲ್ಲ. ಹಾಗಾದಾಗಲೂ ಭಾರತಕ್ಕೆ ಅಂತಹ ಲುಕ್ಷಾನು ಆಗದಿದ್ದರೂ ಅಕಸ್ಮಾತ ನೀರಿನ ಹರಿವು ಮತ್ತು ಭೂಮುಖದ ವ್ಯತ್ಯಾಸಾತ್ಮಕ ತಲ್ಲಣಗಳ ಕಾರಣ ನದಿಯ ಹರಿವಿನಲ್ಲೇ ಇಳಿಮುಖವಾದಲ್ಲಿ ಆಗ ಭಾರತದೊಳಕ್ಕೆ ಹರಿದು ಬರುವ ಮುನ್ನವೇ ಬ್ರಹ್ಮಪುತ್ರ ಸೊರಗಬಹುದು. ಆದರೆ ಇಲ್ಲಿ ಇನ್ನೊಂದು ಲಾಜಿಕ್ಕಿದೆ. ಕಾರಣ ಭಾರತದೊಳಕ್ಕೆ ಬ್ರಹ್ಮ ಪುತ್ರ ಮೈದುಂಬಿಕೊಳ್ಳುವುದೇ ಭಾರತದಲ್ಲಿಯೇ ಹುಟ್ಟುವ ಇತರ ನದಿಗಳಿಂದ.
ಕಾರಣ ಉತ್ತರ ಚೀನಾ ಸಾಕಷ್ಟು ಅಂತರ್ಜಲ ಕುಸಿತದಿಂದ ತತರಿಸುತ್ತಿದೆ. ಅದಕ್ಕಾಗಿ ಅದು ಹಾಕಿಕೊಂಡಿರುವ ಯೋಜನೆಯೇ ಯೆಲ್ಲೋ ರಿವರ್ ಪ್ರಾಜೆಕ್ಟು. ಇಲ್ಲಿಗೆ ಬ್ರಹ್ಮ ಪುತ್ರದಿಂದ ನೇರವಾಗಿ ಅಸಾಧ್ಯ ಎನ್ನಿಸುವ ಪರ್ವತ ಪ್ರದೇಶದ ಮಗ್ಗುಲನ್ನು ಸೀಳಿ ನೀರನ್ನು ಹಳದಿ ನದಿಯ ಬಾಯಿಗೆ ಕೊಟ್ಟರೆ ಜಗತ್ತಿನಲಿ ನೀರಿನ ವಿಷಯವಾಗಿ ಚೀನಾವನ್ನು ಹಿಡಿಯುವವರಿಲ್ಲವಾಗಿ ಬಿಡುತ್ತಾರೆ. ಸಮಸ್ಯೆ ಇದಷ್ಟೆ ಆದರೆ ಪರವಾಗಿಲ್ಲ. ಹರಿಸಿಕೊಳ್ಳಲಿ ಎನ್ನಬಹುದಿತ್ತು. ಆದರೆ ಅದು ನೀರಿನ ಹರಿವನ್ನು ನಿಯಂತ್ರಿಸುವುದರ ಜತೆಗೆ ಯಾವಾಗೆಂದರೆ ಆವಾಗ ಹಿಡಿದಿಡುವ ನೀರನ್ನು ಗೇಟು ತೆರೆಯುವುದರ ಮೂಲಕ ಇತ್ತ ತಿರುಗಿಸಿದರೆ ಅಸ್ಸಾಂ, ಅರುಣಾಚಲ ಮತ್ತು ಭಾಗಶಃ ಬಂಗ್ಲಾದೇಶ ಹೇಳ ಹೇಸರಿಲ್ಲದಂತೆ ಕಾಣೆಯಾಗುತ್ತವೆ. ನೀರಿನ ಅಗಾಧತೆಯ ಅರಿವಿಲ್ಲದವರಿಗೆ ಇದರ ಚಿತ್ರಣ ಇಂಥ ಬರಹದಲ್ಲಿ ಕೊಡುವುದು ಅಸಾಧ್ಯ. ಆದರೆ ಕೇದಾರನಾಥ ಮತ್ತು ಅಸ್ಸಾಂನಲ್ಲಾದ ಪ್ರವಾಹವನ್ನು ನೆನೆಪಿಸಿಕೊಳ್ಳುವುರಾದರೆ, ಅಂತಹದ್ದೊಂದು ತೀರ ಮರಣ ಸದೃಶ್ಯ ಪ್ರವಾಹವನ್ನು ಸೃಷ್ಟಿಸುವ ತಾಕತ್ತು ಚೀನಾಕ್ಕೆ ಹೀಗೆ ಗ್ರೇಟ್‍ಬೆಂಡ್‍ನಲ್ಲಿ ನೀರು ನಿಲ್ಲಿಸುವ ಮೂಲಕ ಬಂದುಬಿಡುತ್ತದೆ ಮತ್ತು ಆ ನೈಸರ್ಗಿಕ ಆಯುಧದ ಎದುರಿಗೆ ಜಗತ್ತಿನ ಯಾವ ಶಕ್ತಿಯೂ ನಿಲ್ಲಲಾರದು ಎನ್ನುವುದೇ ಭವಿಷ್ಯತ್ತಿನ ಅಘಾತಕಾರಿ ಅಂಶ.