ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 21, 2016

6

ವಿತ್ತೀಯ ಸಾಕ್ಷರತೆ ಮತ್ತು ಉನ್ನತ ಶಿಕ್ಷಣ ಕೇಂದ್ರಗಳ ಸಾಮಾಜಿಕ ಬದ್ಧತೆ

‍ನಿಲುಮೆ ಮೂಲಕ

– ಶ್ರೇಯಾಂಕ ಎಸ್ ರಾನಡೆ

maxresdefaultಭಾರತೀಯ ರಿಸರ್ವ್ ಬ್ಯಾಂಕ್‍ನ ಅಕ್ಟೋಬರ್ 2016ರ ದಾಖಲೆಯ ಪ್ರಕಾರ, 125 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಭಾರತ ದೇಶದಲ್ಲಿ ಒಟ್ಟಾರೆ 94.2 ಕೋಟಿ ಡೆಬಿಟ್ ಕಾರ್ಡ್‌ಗಳಿವೆ. ಅಕ್ಟೋಬರ್ ತಿಂಗಳಲ್ಲಿ ಈ ಕಾರ್ಡ್‌ಗಳಿಂದ 2.63 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರವಾಗಿದೆ. ಆದರೆ ಇದರಲ್ಲಿ ಶೇಕಡ 90%ಗೂ ಅಧಿಕ ಕಾರ್ಡ್‌ಗಳ ಬಳಕೆಯಾಗಿದ್ದು ಅಟೋಮೇಟೆಡ್ ಟೆಲ್ಲರ್ ಯಂತ್ರ(ಎ.ಟಿ.ಎಂ.)ದಿಂದ ಹಣ ಹೊರತೆಗೆಯುವುದಕ್ಕೆ ಮಾತ್ರ. ಅಂದರೆ ಬರೀ 8% ಕಾರ್ಡ್‌ಗಳನ್ನು ನೇರವಾಗಿ ನೋಟುರಹಿತ ವ್ಯಾಪಾರಕ್ಕಾಗಿ(ಆನ್‍ಲೈನ್ ಮತ್ತು ಆಫ್‍ಲೈನ್) ಬಳಸಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ವೈರುಧ್ಯದಿಂದ ಕೂಡಿದೆಯೆಂದರೆ ದೇಶದಲ್ಲಿ ಕಾರ್ಡ್‌ಗಳಿಂದ ವ್ಯವಹಾರ ನಡೆಸುವ 15.12ಲಕ್ಷ ‘ಪಾಯಿಂಟ್ ಆಫ್ ಸೇಲ್’ ಟರ್ಮಿನಲ್‍ಗಳಿವೆ. ಆದರೆ ದೇಶದಲ್ಲಿರುವ ಒಟ್ಟು ಎ.ಟಿ.ಎಂ.ಗಳ ಸಂಖ್ಯೆ ಕೇವಲ 2.20 ಲಕ್ಷ ಮಾತ್ರ. ಚಲಾವಣೆಯಲ್ಲಿರುವ ಶೇಕಡಾ 50% ಡೆಬಿಟ್ ಕಾರ್ಡ್‍ಗಳು ಸಕ್ರಿಯವಾಗಿ ನೋಟು ವಿನಿಮಯಕ್ಕಾಗಿ ಬಳಕೆಯಾಗುತ್ತಿವೆ. ಭಾರತದ ಪ್ರತೀ 10 ಡೆಬಿಟ್ ಕಾರ್ಡ್‍ಗಳಲ್ಲಿ 9 ಕಾರ್ಡ್‍ಗಳನ್ನು ಕೇವಲ ಎ.ಟಿ.ಎಂ. ಯಂತ್ರಗಳಿಂದ ಹಣ ಪಡೆದುಕೊಳ್ಳುವುದಕ್ಕೆ ಮಾತ್ರ ಉಪಯೋಗಿಸಲಾಗುತ್ತಿದೆ. ಅವುಗಳಿಂದ ನೇರವಾಗಿ ನೋಟುರಹಿತ ವ್ಯವಹಾರವಾಗುತ್ತಿಲ್ಲ.

ಇದು 2016ರ ಅಕ್ಟೋಬರ್ ತಿಂಗಳೊಂದರ ದಾಖಲೆಯಲ್ಲ ಬದಲಾಗಿ ದೇಶದ ನೋಟುರಹಿತ(ಕಡಿಮೆ-ನೋಟು) ವ್ಯವಹಾರದ ಸಮಗ್ರ ಚಿತ್ರಣ. ಡೆಬಿಟ್ ಕಾರ್ಡ್‍ಗಳನ್ನು ಹೊಂದಿರುವವರಿಗೆ ಅದನ್ನು ಯಾವುದಕ್ಕೆಲ್ಲ, ಹೇಗೆಲ್ಲ ಬಳಸಬಹುದು ಎಂಬ ಮಾಹಿತಿ ಇರುವುದಿಲ್ಲ. ಅಥವಾ ಬಳಸುವುದಕ್ಕೆ ಬರುವುದಿಲ್ಲ. ನೋಟುರಹಿತ ವ್ಯವಹಾರದಿಂದ ತಮ್ಮ ಬ್ಯಾಂಕ್ ಖಾತೆಯ ಸುರಕ್ಷತೆಗೆ ಧಕ್ಕೆಯಾಗಬಹುದು… ಇತ್ಯಾದಿ ಸವಾಲು, ಗೊಂದಲಗಳು ಹೆಚ್ಚಿನ ಕಾರ್ಡ್ ಬಳಕೆದಾರರನ್ನು ಮೊಬೈಲ್ ವ್ಯಾಲೆಟ್, ಆನ್‍ಲೈನ್ ಬ್ಯಾಂಕಿಂಗ್, ಪಾಯಿಂಟ್ ಆಫ್ ಸೇಲ್ ಸೇವೆಗಳಿಂದ ವಿಮುಖರನ್ನಾಗಿಸುತ್ತಿವೆ.

ಸರಕಾರ “ಇ-ಪಾಠಶಾಲ”ದ ಮೂಲಕ ಡಿಜಿಟಲ್ ಬ್ಯಾಂಕಿಂಗ್, ನಗದುರಹಿತ ವ್ಯಾಪಾರ ಇತ್ಯಾದಿ ಸಂಗತಿಗಳನ್ನು “ವಿತ್ತೀಯ ಸಾಕ್ಷಾರತಾ ಅಭಿಯಾನ”ದ ಮೂಲಕ ಜನರತ್ತ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದೆ. ಆದರೆ ಜನ್‍ಧನ್ ಯೋಜನೆಯ ಪ್ರಾರಂಭಿಕ ಯಶಸ್ಸಿನ ಹೊರತಾಗಿಯೂ ಈಗಲೂ ದೇಶದ ಅರ್ಧದಷ್ಟು ಜನಸಂಖ್ಯೆ ಬ್ಯಾಂಕ್ ಖಾತೆ ಹೊಂದಿಲ್ಲ. ಡಿಜಿಟಲ್ ಇಂಡಿಯಾ ಯೋಜನೆ ಪ್ರಾರಂಭವಾಗಿದ್ದರೂ ಅಂತರ್ಜಾಲವನ್ನು ಬಳಸುತ್ತಿರುವುದು ಕೇವಲ 30% ಭಾರತೀಯರು ಮಾತ್ರ. ಸ್ಮಾರ್ಟ್ ಪೋನ್ ಬಳಕೆದಾದರ ಸಂಖ್ಯೆ 17%.

ಇಂತಹ ಸಂದಿಗ್ಧ ಸಂದರ್ಭದಲ್ಲಿ ನಗದುರಹಿತ ವ್ಯವಹಾರದ ವೃದ್ಧಿಗಾಗಿ ಡಿಜಿಟಲ್ ಜ್ಞಾನವಿರುವ ತಂತ್ರಜ್ಞಾನಿ ನಾಗರಿಕರು, ಸಂಘಸಂಸ್ಥೆಗಳು, ಮುಖ್ಯವಾಗಿ ಉನ್ನತ ಶಿಕ್ಷಣ ಕೇಂದ್ರಗಳು ವಿಮುದ್ರಿಕರಣದಿಂದ ರಚನಾತ್ಮಕವಾಗಿ ಪ್ರಧಾನ ನೆಲೆಗೆ ಬಂದಿರುವ ನೋಟುರಹಿತ ವ್ಯವಹಾರದ ಸಾಧ್ಯತೆ, ಸಾಕ್ಷರತೆಯನ್ನು, ನೋಟುಗಳ ಮೂಲಕವೆ ಎಲ್ಲಾ ವ್ಯವಹಾರ ಮಾಡುತ್ತಿರುವ ಜನರತ್ತ ವಿಸ್ತರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸರಕಾರದ ಯಾವುದೇ ಕ್ರಮ ಜನರ ಪಾಲ್ಗೊಳ್ಳುವಿಕೆಯ ಹೊರತು ನಿಶ್ಚಿತ ಯಶಸ್ಸನ್ನು ಸಾಧಿಸಲಾಗದು. ಇದನ್ನು ಮಾಡಬೇಕಾದ್ದು ಶಿಕ್ಷಣ ಕೇಂದ್ರಗಳ ಸಾಮಾಜಿಕ ಜವಾಬ್ದಾರಿಯೂ ಹೌದು.

ಶೈಕ್ಷಣಿಕ ವರ್ಷದ ಓದಿನ ಚಟುವಟಿಕೆಯ ಜೊತೆಗೆ ವಿದ್ಯಾರ್ಥಿಗಳು ಸಾಮಾಜಿಕ ಮೌಲ್ಯವರ್ಧನೆಯ ಚಟುವಟಿಕೆಗಳಲ್ಲೂ ಪಾಲ್ಗೊಂಡು ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿ ಕಾಣಬೇಕೆಂಬುದು ಯು.ಜಿ.ಸಿ.ಯ ಆಶಯವೂ ಕೂಡ. ಅದೇ ರೀತಿ ಈ ಕುರಿತು ನಡೆದಿರುವ ಅಧ್ಯಯನಗಳ ಪ್ರಕಾರ, ಉನ್ನತ ಶಿಕ್ಷಣ ಕೇಂದ್ರಗಳ ಶಿಕ್ಷಕರು-ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಅರಿವಿನ(ಕಾಗ್ನಿಟಿವ್) ಸಾಮರ್ಥ್ಯ ಹಾಗೂ ಭಾವನಾತ್ಮಕ(ಇಮೋಶನಲ್) ಲಬ್ಧತೆ ಹೆಚ್ಚು ಪರಿಣಾಮಕಾರಿಯಾಗಿದ್ದು ಹೆಚ್ಚು ಜವಾಬ್ದಾರಿಯುತ ಪ್ರಜೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ.

ವಿಮುದ್ರಿಕರಣ ತನ್ನ ಯೋಚನೆ ಹಾಗೂ ಕ್ಷಿಪ್ರ ಜಾರಿಯಾಗುವಿಕೆಯಿಂದಲೇ ವಿಶೇಷವಾಗಿದೆ. ದೇಶದ ಭವಿಷ್ಯವನ್ನು ಬದಲಾಯಿಸಬಲ್ಲ, ಆರ್ಥಿಕತೆಗೆ ಹೊಸ ಆಯಾಮ ನೀಡಬಲ್ಲ ಈ ಬಗೆಯ ಯೋಜನೆಗಳು ಜಾರಿಯಾದಾಗ ನಮ್ಮ ಜ್ಞಾನ ಕೇಂದ್ರಗಳು ಅತ್ಯಂತ ಜವಾಬ್ದಾರಿಯುತ ಕರ್ತವ್ಯವನ್ನು ಸಕ್ರಿಯವಾಗಿ ನಿರ್ವಹಿಸಬೇಕಿವೆ. ಕಾರ್ಪೋರೇಟ್ ವಲಯಕ್ಕೆ ತಮ್ಮ ಲಾಭದ 2% ಮೊತ್ತವನ್ನು ಸಾಮಾಜಿಕ ಕಾರ್ಯಕ್ಕೆ ವಿನಿಯೋಗಿಸಬೇಕೆಂಬ ಕಡ್ಡಾಯ ನಿಯಮವಿದೆ. ಹೆಚ್ಚಿನ ಜ್ಞಾನಕೇಂದ್ರಗಳು ಸರಕಾರದಿಂದ ನೇರವಾಗಿಯೇ ಅಥವಾ ಅನುದಾನಗಳ ಮೂಲಕ ಪೋಷಿಸುತ್ತಿರುವ ಸಂಸ್ಥೆಗಳು. ಅವುಗಳ ಅಭಿವೃದ್ಧಿಗೆ ಜನರ ತೆರಿಗೆಯ ಹಣವೂ ಬಳಕೆಯಾಗುತ್ತದೆ. ಐ.ಐ.ಟಿ, ಐ.ಐ.ಎಂ, ವೃತ್ತಿ ಕೇಂದ್ರಿತ ಕೋರ್ಸ್‍ಗಳು, ಕೇಂದ್ರ, ರಾಜ್ಯ ಹಾಗೂ ಖಾಸಗಿ ವಿಶ್ವವಿದ್ಯಾನಿಲಯಗಳು ಹೀಗೆ ಒಟ್ಟಾರೆ ಉನ್ನತ ಶಿಕ್ಷಣ ಕೇಂದ್ರಗಳ ಸಾಮಾಜಿಕ ಬದ್ಧತೆಯೇನು?

ಉನ್ನತ ಶಿಕ್ಷಣ ಕೇಂದ್ರಗಳು ಇಂತಹ ಯೋಜನೆಯನ್ನು ಸ್ವಯಂಪ್ರೇರಿತರಾಗಿ ಯಶಸ್ವಿಯಾಗಿಸುವಲ್ಲಿಯೋ, ಡಿಜಿಟಲ್ ಸಾಕ್ಷರತೆಯನ್ನು ಜನರತ್ತ ವಿಸ್ತರಿಸುವತ್ತಲೋ, ಅಥವಾ ಸ್ವಚ್ಛಭಾರತದಂತಹ ಗುಣಾತ್ಮಕ ಯೋಜನೆಗಳಲ್ಲಿ ತಮ್ಮ ಅಧ್ಯಯನದ, ಜ್ಞಾನ ಶಾಖೆಯ ಶಿಸ್ತಿನ ಹಿನ್ನೆಲೆಯಲ್ಲಿಯೇ ತಮ್ಮ ಕರ್ತವ್ಯವನ್ನೇಕೆ ನಿರ್ವಹಿಸಬಾರದು? ತಮ್ಮ ಬಿಡುವಿನ ಸಮಯವನ್ನು ಮುಡಿಪಾಗಿಟ್ಟು ಶಿಕ್ಷಕರು-ವಿದ್ಯಾರ್ಥಿಗಳು ಇಂತಹ ಯೋಜನೆಗಳನ್ನು ಜನರತ್ತ ಕೊಂಡೊಯ್ಯಬೇಕು. ವಿಮುದ್ರಿಕರಣ ಯೋಜನೆಯ ಆಳ ಅರಿವನ್ನು ಅಧ್ಯಯನ ನಡೆಸುತ್ತಿರುವ ಅಧ್ಯಯನನಿರತರು ವಿಮುದ್ರಿಕರಣ ಯೋಜನೆಯನ್ನು ಸರಳೀಕೃತಗೊಳಿಸಿ ಜನರತ್ತ ಯಾಕೆ ಕೊಂಡೊಯ್ಯುತ್ತಿಲ್ಲ? ತಾವೇ ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸುವುದಕ್ಕಾಗಿ, ಪಾಯಿಂಟ್ ಆಫ್ ಸೇಲ್ ಯಂತ್ರಗಳನ್ನು ಬಳಸುವುದು ಹೇಗೆ ಎಂಬ ಮಾಹಿತಿ ಪ್ರಸರಣವನ್ನೂ, ಪ್ರಾತ್ಯಕ್ಷಿಕೆಗಳನ್ನು ಮಾಡುವುದಿಲ್ಲವೇಕೆ? ಓದಿನ ನೆಲೆಯಲ್ಲಿ ಅಧ್ಯಯನಿಸುತ್ತಿರುವ ವಿದ್ಯಾರ್ಥಿ, ಸಂಶೋಧನಾರ್ಥಿಗಳಿಗೆ ಅವರ ಜ್ಞಾನವನ್ನು ಪ್ರಾಯೋಗಿಕ ನೆಲೆಗೆ ವಿಸ್ತರಿಸುವ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಡವೆ? ಇದು ಉನ್ನತ ಜ್ಞಾನ ಕೇಂದ್ರಗಳ ಸಾಮಾಜಿಕ ಬದ್ಧತೆಯ ಕಾರ್ಯ. ಇಲ್ಲಿ ಯಾರೂ ಪ್ರಾಧ್ಯಾಪಕರ ಗಳಿಕೆಯನ್ನೋ, ವಿದ್ಯಾರ್ಥಿಗಳ ಭವಿಷ್ಯದ ಗಳಿಕೆಯನ್ನೋ ಅಪೇಕ್ಷಿಸುತ್ತಿಲ್ಲ. ಬಯಸುತ್ತಿರುವುದು ಸಮಾಜಕ್ಕಾಗಿ ಕಾಳಜಿ, ಒಂದಷ್ಟು ಸಮಯ, ತಾವು ಕಲಿತ ವಾಸ್ತವಿಕ ಜ್ಞಾನದ ಪ್ರಸರಣೆ, ಆನ್ವಯಿಕತೆ ಅಷ್ಟೆ.

ರುಪೆ, ಆಧಾರ್ ಆಧರಿತ ಪಾವತಿ, ಬ್ಯಾಂಕ್‍ಗಳ ಯುಪಿಐ, ಬೇಸಿಕ್ ಮೊಬೈಲ್ ಹ್ಯಾಂಡ್‍ಸೆಟ್‍ಗಳಿಂದ ವ್ಯವಹಾರ ನಡೆಸಬಲ್ಲ ಯುಎಸ್‍ಎಸ್‍ಡಿ, ಮೊಬೈಲ್ ವ್ಯಾಲೆಟ್‍ನಂತಹ ಹೊಸಕಾಲದ ಹೊಸ ಸಾಧ್ಯತೆಗಳ ಅರಿವು ನಗರಗಳಲ್ಲಿಯೇ ಕಡಿಮೆ ಪ್ರಮಾಣದಲ್ಲಿದೆ. ಅನೇಕ ಗ್ರಾಮೀಣರಿಗೆ ಇದರ ಬಗ್ಗೆ ಕೇಳಿಯೂ ಗೊತ್ತಿಲ್ಲ. ಇಂತಹ ಸೌಲಭ್ಯಗಳ ಪರಿಚಯ ಮಾಡಿಕೊಡಬೇಕಾದ್ದು ಶಿಕ್ಷಿತರ, ಅರ್ಥಶಾಸ್ತ್ರ, ವಾಣಿಜ್ಯ-ವ್ಯವಹಾರಶಾಸ್ತ್ರಗಳನ್ನು ಓದುತ್ತಿರುವವರ ಜವಾಬ್ದಾರಿಯಲ್ಲವೇ? ಐ.ಐ.ಟಿ., ಐ.ಐ.ಎಂ., ಅನೇಕ ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉನ್ನತ ತಂತ್ರಜ್ಞಾನಗಳ ಉತ್ತಮ ಮಾಹಿತಿ ಹಾಗೂ ತಮ್ಮ ಕ್ಷೇತ್ರಗಳಲ್ಲಿ ಪರಿಣತಿಯಿರುತ್ತದೆ. ಅವುಗಳ ಆನ್ವಯಿಕತೆಯನ್ನು ಜನರಿಗೆ ತಲುಪಿಸಬೇಕಾದ್ದು ಶಿಕ್ಷಣ ಪಡೆಯುತ್ತಿರುವವರ ಕರ್ತವ್ಯ.

ವಿಜ್ಞಾನ, ತಂತ್ರಜ್ಞಾನ, ಸಮಾಜ ನಿಕಾಯದವರೂ ವಿಮುದ್ರಿಕರಣದ ಲಾಭಗಳನ್ನು ನಗದುರಹಿತ ವ್ಯವಹಾರದ ಸಾಧ್ಯತೆಗಳನ್ನು ಗ್ರಾಮಗಳಿಗೆ ವಿಸ್ತರಿಸಬೇಕು. ವ್ಯಾಪಾರ ಕೇಂದ್ರಗಳಿಗೆ, ಕೃಷಿ ಮಾರುಕಟ್ಟೆ, ವಾಣಿಜ್ಯ ಕೇಂದ್ರ, ಮಾರ್ಕೆಟ್ ಪ್ರದೇಶಗಳತ್ತ ತೆರಳಿ ಮೊಬೈಲ್ ವ್ಯಾಲೆಟ್, ಕಾರ್ಡ್ ಸ್ವೈಪ್ ಮಿಶನ್‍ಗಳನ್ನು ಬಳಸುವ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿ ನಗದುರಹಿತ ವ್ಯವಹಾರದ ಲಾಭ ಹಾಗೂ ಅದರ ಬಗ್ಗೆ ಜನರಿಗಿರುವ ಗೊಂದಲಗಳನ್ನು ನಿವಾರಿಸುವ ಪ್ರಯತ್ನವಾಗಿ ಜನಸಾಮಾನ್ಯರಿಗೆ ಡಿಜಿಟಲ್ ಶಿಕ್ಷಣವನ್ನು ನೀಡಬೇಕಿದೆ. ಎನ್.ಸಿ.ಸಿ., ಎನ್.ಎಸ್.ಎಸ್., ರೋವರ್ಸ್ ರೇಂಜರ್ಸ್, ಕಾಲೇಜು ವಿದ್ಯಾರ್ಥಿ ಸಂಘದಂತಹ ದೇಶಸೇವೆಗೆ ಸಿದ್ಧವಿರುವ ವಿದ್ಯಾರ್ಥಿ ಸಂಘಟನೆಗಳು ಕಾರ್ಯಪ್ರವೃತ್ತರಾಗಿ ಆಸಕ್ತ ವಿದ್ಯಾರ್ಥಿಗಳನ್ನು ಜೊತೆಯಲ್ಲಿ ಕರೆದುಕೊಂಡು ಈ ರೀತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿವೆ.

ಮೌಲ್ಯಯುತ ಯೋಜನೆಗಳ ಆಳ ಅರಿವು, ದೂರದೃಷ್ಟಿತ್ವವನ್ನು ಪದವಿ, ಸ್ನಾತಕೋತ್ತರ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಪ್ರಾಧ್ಯಾಪಕ ವೃಂದ ಅರಿತು, ತಮ್ಮ ನಾಯಕತ್ವದಲ್ಲಿ ವಿದ್ಯಾರ್ಥಿಗಳನ್ನು ಮುನ್ನಡೆಸಬೇಕು. ಅದು ಏಕತಾನತೆಯ, ಹಳತಾದ ಸ್ಥಿರ ಜ್ಞಾನದ ಪರಿಮಿತಿಯಿಂದ ತಮ್ಮನ್ನು ತಾವು ಒರೆಗೆ ಹಚ್ಚಿಕೊಂಡು ವರ್ತಮಾನದ ಸವಾಲುಗಳಿಗೆ ಸ್ಪಂದಿಸುವ ಆ ಮೂಲಕ ತಾವೂ ಸಮಾಜದೊಂದಿಗೆ ಬೆರೆತು ಬೆಳೆಯುವ ಅವಕಾಶವೊಂದನ್ನು ಪ್ರಾಧ್ಯಾಪಕವರ್ಗ ಹಾಗೂ ವಿದ್ಯಾರ್ಥಿವರ್ಗ ಯಾಕೆ ನಿರ್ಮಿಸಿಕೊಳ್ಳಬಾರದು? ವಿದ್ಯಾರ್ಥಿಗಳಿಗೆ ಅದೇ ಹಳೆಯ ಉರುಹೊಡೆಯುವ; ಬೇರೆ ಮೂಲಗಳಿಂದ ಹುಡುಕಿ ಬರೆಯುವ ಸೆಮಿನಾರ್, ಅಸೈಮ್ನೆಂಟ್‍ಗಳಿಗಷ್ಟೇ ಸೀಮಿತಗೊಳಿಸುವ ಬದಲು ಸಮಾಜವೆಂಬ ಬೃಹತ್ ಪ್ರಯೋಗಶಾಲೆಯಲ್ಲಿ ವಿದ್ಯಾರ್ಥಿಗಳ ಅಧ್ಯಯನವನ್ನು ಅನುಷ್ಟಾನಗೊಳಿಸಲು ವಾಸ್ತವ ಅವಕಾಶ ಮಾಡಿಕೊಡಬೇಕು. ಅದಕ್ಕಾಗಿ ಶಿಕ್ಷಣ ಕೇಂದ್ರಗಳ ಆಸುಪಾಸಿನ ಗ್ರಾಮ, ಊರು ಅಥವಾ ಮಾರುಕಟ್ಟೆಗಳನ್ನು ಕೇಂದ್ರವಾಗಿಸಿಕೊಂಡು ತಮ್ಮ ಸಾಮಾಜಿಕ ಸೇವೆಯನ್ನು, ಸಾಂಸ್ಕøತಿಕ ಕ್ರಾಂತಿಯನ್ನು ಮುಂದುವರೆಸಬೇಕಿವೆ. ಇಂತಹ ಕ್ರಿಯಾತ್ಮಕ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಂಕಗಳನ್ನು, ಕ್ರೆಡಿಟ್‍ಗಳನ್ನು ನೀಡಬೇಕು.

ಉನ್ನತ ಶಿಕ್ಷಣ ಕೇಂದ್ರಗಳು “ವಿಮುದ್ರಿಕರಣ”ದ ವಿವಿಧ ಆಯಾಮಗಳನ್ನು ಅರಿಯುವ ವಿಚಾರ ಸಂಕಿರಣಗಳಿಗಷ್ಟೇ ಸೀಮಿತಗೊಳ್ಳದೆ ಅದನ್ನು ಜನರತ್ತ ಕೊಂಡೊಯ್ಯುವ ಸ್ವಯಂಪೂರ್ಣ ಕಳಕಳಿಯ ಕೆಲಸವನ್ನೇಕೆ ಮಾಡಬಾರದು? ಶಿಕ್ಷಣ ಕೇಂದ್ರಗಳು ಯು.ಜಿ.ಸಿ., ಮಾನವ ಸಂಪನ್ಮೂಲ ಸಚಿವಾಲಯಗಳ ಆದೇಶಕ್ಕೆ ಕಾಯುವ ಬದಲು ಇಂತಹ ವಿನೂತನವಾದ ಆದರೆ ಅಷ್ಟೇ ಶಕ್ತಿಯುತ, ದಿನನಿತ್ಯದ ಪಠ್ಯಕ್ರಮಕ್ಕಿಂತ ಭಿನ್ನವಾದ ಯೋಜನೆಯೊಂದನ್ನು ವಿಭಾಗಗಳ ಮೂಲಕ ರೂಪಿಸಬಾರದೇಕೆ?

ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ ತಾವೇಕೆ ಈ ವಿತ್ತೀಯ ಸಾಕ್ಷರತೆಯ ರಾಜಕಾರಣದಲ್ಲಿ ಬೀಳಬೇಕೆಂಬ ಗೊಂದಲವಿರಬಹುದು. ವಿಶ್ವದ ಆರ್ಥಿಕತೆ ಹಳ್ಳಹಿಡಿದಿದ್ದರೂ ಭಾರತದ ಆರ್ಥಿಕ ಸ್ಥಿತಿ ಮಾತ್ರ ಆರೋಗ್ಯಕರವಾಗಿರುವ ಈ ಸುಸಮಯದಲ್ಲಿ ವಿಮುದ್ರಿಕರಣ ಜಾರಿಗೊಳಿಸಿದ್ದು. ಇದರಿಂದ ಭವಿಷ್ಯದಲ್ಲಿ ದೇಶಕ್ಕೆ, ದೇಶವಾಸಿಗಳಿಗೆ ಸಹಾಯವಾಗಲಿದೆ. ಇದನ್ನು ಕೇವಲ ಮೋದಿಯವರ ಯೋಜನೆ ಎಂಬುದಾಗಿ ಮಾಡಿದ್ದು ನಮ್ಮ ಸಣ್ಣತನ. ಅದು ದೇಶದ ಯೋಜನೆ. ಆಧಾರ್ ಕಾರ್ಡ್ ಯೋಜನೆಯನ್ನು ಹಿಂದಿನ ಸರಕಾರವೇ ಜಾರಿಗೆ ತಂದಿದ್ದರೂ ಭವಿಷ್ಯದಲ್ಲೂ ಅದು ಅನೇಕ ಸೌಲಭ್ಯಗಳನ್ನು ಪಡೆಯುವುದಕ್ಕೆ ಅಗತ್ಯ ಮಾನದಂಡವಾಗಿರಲಿದೆ. ವಿಮುದ್ರಿಕರಣ ಯೋಜನೆಯ ಬಗ್ಗೆ ಅನೇಕರಲ್ಲಿ ಅಸಮಾಧಾನವಿರಬಹುದು. ತಪ್ಪೇನಿಲ್ಲ. ಆದರೆ ಭಾರತವನ್ನು ಕಡಿಮೆನೋಟು ಆರ್ಥಿಕತೆಯನ್ನಾಗಿ ರೂಪಿಸಲು ಹಳ್ಳಿಗರಿಗೆ, ಶ್ರೀಸಾಮಾನ್ಯರಿಗೆ, ಡಿಜಿಟಲ್ ಶಿಕ್ಷಣ ನೀಡುವುದಕ್ಕೆ, ಪಾರದರ್ಶಕ ವ್ಯವಹಾರವನ್ನು ರೂಪಿಸಿ ದೇಶದ ಚಿತ್ರಣವನ್ನೇ ಬದಲಾಯಿಸಬೇಕೆಂಬುದನ್ನು ಎಲ್ಲ ಆರ್ಥಿಕ ತಜ್ಞರೂ ಬಯಸುತ್ತಾರೆ. ಹಾಗಿದ್ದಾಗ ಜನರನ್ನು ವಿತ್ತೀಯ ಸಾಕ್ಷರಸ್ಥರನ್ನಾಗಿ ಮಾಡುವ ಉತ್ತಮ ಯೋಚನೆಯ ಬಗ್ಗೆ ಅಸಮಾಧಾನ ಪಡುವುದರಲ್ಲಿ ಅರ್ಥವಿಲ್ಲ.

ಡಿಜಿಟಲ್ ವ್ಯವಹಾರಕ್ಕೆ ವಿಮುದ್ರಿಕರಣ ಯೋಜನೆ ಕಾರಣವಷ್ಟೆ. ಶಿಕ್ಷಕರು, ವಿದ್ಯಾರ್ಥಿಗಳು ಡಿಜಿಟಲ್ ಸಾಕ್ಷರತೆಯ ಪ್ರಸರಣದ ಕರ್ತವ್ಯ ನಿರ್ವಹಿಸುವುದರಿಂದ ಅಭಿವೃದ್ಧಿಹೊಂದಿದ ದೇಶಗಳಂತೆ ನಗದುರಹಿತ ಆರ್ಥಿಕತೆಯಾಗಿ ರೂಪುಗೊಂಡು ತೆರಿಗೆ ವಂಚನೆಯಂತಹ ಅನೇಕ ನ್ಯೂನತೆಗಳ ನಿವಾರಣೆಯಾಗುತ್ತದೆ. ಭಾರತದ ಸ್ವಸ್ಥ ಆರ್ಥಿಕತೆಯ ದೃಷ್ಟಿಯಿಂದ ಇದೊಂದು ಉತ್ತಮ ನಡೆ. ಇಂತಹ ಚಟುವಟಿಕೆಗಳಿಂದ ಕಲಿಯಬಹುದಾದ ಜೀವನ ಪಾಠ, ಸಾಮಾಜಿಕ ಮೌಲ್ಯಗಳು, ಸಮಾಜದೊಂದಿಗೆ ಬೆರೆತು ಸಮಾಜವನ್ನು ಅರಿಯುವ ಅವಕಾಶ, ಕೀಳರಿಮೆಯನ್ನು ದೂರವಾಗಿಸಿ ಆತ್ಮವಿಶ್ವಾಸ ತುಂಬುವ ನಾಯಕತ್ವ ಗುಣ, ಸಾಮಾಜಿಕ ಸ್ಪಂದನೆ, ಸಮಾಜದಲ್ಲಿ ವ್ಯವಹರಿಸುವ, ಸಂವಹನ ನಡೆಸುವ ಕಲೆ, ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಹಾಗೂ ಅವರನ್ನು ತಳಸ್ಪರ್ಶಿಗೊಳಿಸಿ, ಮನುಷ್ಯ ಮೌಲ್ಯಗಳನ್ನು ಬೆಳೆಸುವ ಪ್ರಯತ್ನವಾಗುವುದಿಲ್ಲವೆ? ಇದು ಪರಸ್ಪರ ಏಳಿಗೆಯ ಮಾರ್ಗವಲ್ಲವೆ?

ಈ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾಗಿರುವ ರಾಜ್ಯಶಾಸ್ತ್ರ ಪ್ರಾಧ್ಯಾಪಕ, ಕೆ.ಎಸ್. ಮೋಹನ್‍ನಾರಾಯಣರ “ಸಾಮಾಜಿಕ ಪ್ರಯೋಗಾಲಯ”ವೆಂಬ ಪ್ರಯೋಗಶೀಲತೆಯನ್ನು ತಿಳಿಸಲೇಬೇಕು. ವಿದ್ಯಾರ್ಥಿಗಳನ್ನು ಕೇವಲ ಪಠ್ಯದ ಓದಿಗೆ ಸೀಮಿತಗೊಳಿಸದೆ ತಾವು ಓದುವ ಗ್ರಾಮ ಸ್ವರಾಜ್, ಪಂಚಾಯತಿ ಸಬಲೀಕರಣ, ಸ್ತ್ರೀ ಸಶಕ್ತೀಕರಣ, ಸಂವಿಧಾನದ ಆನ್ವಯಿಕತೆ, ಮತದಾನದ ಜಾಗೃತಿ, ಸ್ವಸಹಾಯ ಸಂಘಗಳ ಸಬಲೀಕರಣದಂತಹ ಬಹುಮುಖ್ಯ ವಿಚಾರಗಳನ್ನು ವಿದ್ಯಾರ್ಥಿಗಳ ಮೂಲಕ ಜನರತ್ತ ಕೊಂಡೊಯ್ದು ಜನರನ್ನು ಜಾಗೃತಗೊಳಿಸುವ ಪ್ರಯತ್ನ ವಿಶಿಷ್ಟವಾದದ್ದು. ಇದು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಾಮಾಜಿಕತ್ವ ಗುಣಗಳ ಜೊತೆಗೆ ಸಾಮಾಜಿಕ ಬದ್ಧತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.

ಇತ್ತೀಚೆಗೆ ರಾಷ್ಟ್ರಪತಿಯವರು “ನಮ್ಮ ಉನ್ನತ ಶಿಕ್ಷಣ ಕೇಂದ್ರಗಳು ಉದ್ಯೋಗಿಗಳನ್ನು ನಿರ್ಮಿಸುವ ಬದಲು ಯುವ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿವೆ. ಉದ್ಯೋಗಕ್ಕೆ ಬೇಕಾದ ಕೌಶಲ್ಯವನ್ನು ನೀಡಲು ಶಿಕ್ಷಣ ಕೇಂದ್ರಗಳು ಸೋಲುತ್ತಿವೆ” ಎಂದಿದ್ದಾರೆ. ಅಂದರೆ ನಮ್ಮ ಜ್ಞಾನ ಕೇಂದ್ರಗಳು ಕೇವಲ ಮಾಹಿತಿ ಪ್ರಸರಣೆಯ ಶಿಕ್ಷಣ ಕೇಂದ್ರಗಳಾಗುತ್ತಿವೆಯೆ ಹೊರತು ಪ್ರಾಯೋಗಿಕ ಅನಿವಾರ್ಯತೆಗೆ ಉತ್ತರಿಸುವ ಕಲಿಕಾಶಾಲೆಗಳಾಗುತ್ತಿಲ್ಲ.

ಸರಕಾರದ ಯೋಜನೆ ಬಂದಾಗ ಅದರ ಆಶಯ, ಕಾರ್ಯನಿರ್ವಹಣೆಯ ಹಿನ್ನೆಲೆಯಲ್ಲಿ ಪರ ವಿರೋಧ ರೂಪುಗೊಳ್ಳುವುದು ಸಹಜ. ಆದರೀಗ ಯೋಜನೆಗಳನ್ನು ಯಾರು ತರುತ್ತಿದ್ದಾರೆಂಬುದರ ಮೇಲೆ ಯೋಜನೆಗೆ ಬೆಂಬಲ ಅಥವಾ ನಿರಾಕರಣೆಯ ಧೋರಣೆ ರೂಪುಗೊಳ್ಳುತ್ತಿದೆ. ಇದು ಬೌದ್ಧಿಕ ರಾಜಕಾರಣ. ಹಾಗಾಗಿಯೇ ಅನೇಕರು ವಿಮುದ್ರಿಕರಣ ಯೋಜನೆಯನ್ನು ವಿರೋಧಿಸುತ್ತಿರುವುದು, ಜ್ಞಾನಕೇಂದ್ರಗಳಲ್ಲಿ ಸಿದ್ಧಾಂತಗಳಿಗೆ ಜೋತುಬಿದ್ದು ಇಡೀ ಯೋಜನೆಯಲ್ಲಿರುವ ಮೌಲ್ಯಾತ್ಮಕ ಸಂಗತಿಗಳನ್ನು ಕಾಣದ ಮನಸ್ಥಿತಿ ರೂಪಿಸಿಕೊಂಡಿರುವುದು.

ಸಾಮಾನ್ಯವಾಗಿ ಅರ್ಥಶಾಸ್ತ್ರಜ್ಞರು ಚೌಕಟ್ಟಿನ ಆಚೆ ಯೋಚಿಸುವುದಿಲ್ಲ. ಆರ್ಥಿಕತೆಯಲ್ಲಿ ಎಲ್ಲವೂ ಹೀಗೆಯೇ ಆಗುತ್ತದೆ ಎಂದು ಭವಿಷ್ಯ ನುಡಿಯಲು(ಪ್ರಿಡಿಕ್ಶನ್) ಸಾಧ್ಯವಿಲ್ಲ. ಆದರೆ ಹೀಗಾಗಬಹುದು ಎಂದು ಊಹಿಸಬಹುದು. ಹೊಸರೀತಿಯಲ್ಲಿ ಜಾರಿಗೊಂಡ ಈ ಯೋಜನೆಯ ಕುರಿತು ಅನೇಕ ಆರ್ಥಿಕ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ. ಬೃಹತ್ ದೇಶಕ್ಕೆ ಈ ರೀತಿ ಚಿಕಿತ್ಸಕವಾಗಿ ಸ್ಥಾಪಿತ ವ್ಯವಸ್ಥೆ ಬುಡಮೇಲು ಮಾಡುವ ಯೋಜನೆ ಜಾರಿ ಮಾಡಬಹುದೆಂದು ಅವರೆಲ್ಲ ಊಹಿಸಿರಲಿಲ್ಲ. ಅದೇ ಮನಸ್ಥಿತಿ ಜ್ಞಾನಕೇಂದ್ರಗಳಲ್ಲಿಯೂ ನೆಲೆಗೊಂಡಿದೆ. ತಾವೇ ಹೇರಿಕೊಳ್ಳುತ್ತಿರುವ ಸಂಕೀರ್ಣತೆಗಳನ್ನು ನಿವಾರಿಸಿಕೊಂಡು ಜ್ಞಾನಕೇಂದ್ರಗಳು ಮುನ್ನಡೆಯಬೇಕಿವೆ.

ಶಿಕ್ಷಣ ಕೇಂದ್ರಗಳು ಅಪ್ರತಿಮ ಸಾಮಥ್ರ್ಯವಿರುವ ಉತ್ಸಾಹಿ ವಿದ್ಯಾರ್ಥಿಗಣದ ಸಹಾಯದಿಂದ, ಅವರಲ್ಲಿರುವ ಗುಣಾತ್ಮಕ ಬೌದ್ಧಿಕ ಶಕ್ತಿ, ಅದ್ವಿತೀಯ ಕೌಶಲ್ಯಗಳ ನೆರವಿನಿಂದ ಹಾಗೂ ಸರಿಸಾಟಿಯಿಲ್ಲದ ಶಿಕ್ಷಕರ ಮಾರ್ಗದರ್ಶನದಿಂದ ತಮ್ಮ ಕಲಿಕೆಯ ಒಂದಂಶವನ್ನು ವಿದ್ಯಾರ್ಥಿಗಳಿರುವಾಗಲೇ ಸಮಾಜದ ಏಳಿಗೆ, ಅಭಿವೃದ್ಧಿಗೂ ವಿನಿಯೋಗಿಸುವ ಅನಿವಾರ್ಯತೆಯಿದೆ. ಭಾರತವನ್ನು ವಿತ್ತೀಯ ಹಾಗೂ ಡಿಜಿಟಲ್ ಸಾಕ್ಷರಸ್ಥಗೊಳಿಸಲು ತಮ್ಮ ಪ್ರದೇಶಗಳಲ್ಲಿಯೇ ಅಂತಹ ಸಣ್ಣ ಪ್ರಯತ್ನಗಳ ಮೂಲಕ ನೋಟುರಹಿತ ವಿತ್ತ ಕ್ರಾಂತಿಗೆ ನಾಂದಿಹಾಡುವ ಮಹತ್ವದ ಪಾತ್ರವಹಿಸಬೇಕಿವೆ. ಜ್ಞಾನಕೇಂದ್ರಗಳು ಪರಿಸರದ ಅಗತ್ಯಗಳಿಗುಣವಾಗಿ ಸಾಮಾಜಿಕ ಬದ್ಧತೆಯ ಕಾರ್ಯಗಳನ್ನು ಕಾಲದಿಂದ ಕಾಲಕ್ಕೆ ಕೈಗೆತ್ತಿಕೊಂಡು ಸಾಮಾಜಿಕ ಪರಿವರ್ತನೆಗೆ ಕಾರಣವಾಗಬೇಕು. ಭಾರತದ ಆರ್ಥಿಕತೆಯನ್ನು ಯಶಸ್ವಿ ಡಿಜಿಟಲ್ ಆರ್ಥಿಕತೆಯನ್ನಾಗಿ ಅಭಿವೃದ್ಧಿಪಡಿಸಿ, ಎಲ್ಲರೂ ಸಮಾನವಾಗಿ ಬಳಸುವಂತೆ ವ್ಯವಸ್ಥೆಯನ್ನು ಸಕ್ಷಮಗೊಳಿಸುವ ಸವಾಲು ಹಾಗೂ ಜವಾಬ್ದಾರಿ ಶಿಕ್ಷಣ ಸಮುದಾಯದ ಮೇಲಿದೆ.

Read more from ಲೇಖನಗಳು
6 ಟಿಪ್ಪಣಿಗಳು Post a comment
 1. ವಲವಿ
  ಡಿಸೆ 22 2016

  ನೀವು ಹೇಳುವದೇನೋ ಸರಿ . ಆದರೆ ನಮ್ಮಂಥ ಸಣ್ಣ ಪಟ್ಟಣದಲ್ಲಿ ನವಂಬರ್ ಎಂಟರ ವರೆಗೂ ವ್ಯಾಪಾರಿಗಳು ಸ್ವಿಪಿಂಗ್ ಮಸಿನ್ ಇದ್ದರೂ ಕೆಟ್ಟಿದೆ ಅಂತಾ ಹೇಳ್ತಿದ್ದರು. ಇಲ್ಲವೇ ೨% ಹೆಚ್ಚು ಹಣ ಕೊಡಬೇಕು. ೫೦೦ ಮೇಲ್ಗಡೆ ಖರೀದಿಗೆ ಮಾತ್ರ ಸ್ವಿಪ್ ಹೀಗೆಲ್ಲಾ ಹೇಳ್ತಿದ್ದರು. ಈಗ ಸ್ವಿಪ್ ಮಸಿನ್ ಇದೆ. ಪೇಟಿಎಂ ಇದೆ. ಅಂತಾ ಬೋರ್ಡ್ ಹಾಕುವದಲ್ಲದೇ ಐವತ್ತೆಂಟು ರೂಪಾಯಿಗೇ ಸ್ವಿಪ್ ಮಾಡುತ್ತಿದ್ದಾರೆ. ಮುಂದೇನು ಮಾಡುವರೋ ತಳಿದಿಲ್ಲ. ಅಂದರೆ ಹಣ ಸಲೀಸಾಗಿ ಎಲ್ಲ ಕಡೆ ಸಿಗತೊಡಗಿದಾಗ ಹಳೇ ಚಾಳಿ ಮುಂದುವರಿಸುವರಾ ತಿಳಿದಿಲ್ಲ.

  ಉತ್ತರ
 2. ವಲವಿ
  ಡಿಸೆ 22 2016

  ಭಾರತದಲ್ಲಿ ಹೊಸತನಕ್ಕೆ ಜನ ಬೇಗ ಬೇಗ ಹೊಂದಿಕೊಳ್ಳುವದಿಲ್ಲ. ಅದೂ ಅಲ್ಲದೇ ೨% ಹೆಚ್ಚಿನ ಹಣ ಪ್ರತಿ ಸ್ವಿಪಿಂಗ್ ಕೊಡುವದೆಂದರೆ ದುಬಾರಿಯೇ. ಇದರ ಬಗ್ಗೆ ಸರಕಾರ ಕ್ರಮ ತಗೊಳ್ಳಬೇಕು. ಅಲ್ಲದೇ ವ್ಯಾಪಾರಿಗೂ ಪ್ರೋತ್ಸಾಹ ರೂಪದಲ್ಲಿ ಕೆಲವು ರಿಯಾಯತಿ ನೀಡಿದರೆ ಅವರು ತಾವಾಗಿಯೇ ಕ್ಯಾಸ್ಲೆಸ್ ಕುರಿತು ಕಲಿಸುತ್ತಾರೆನಿಸುತ್ತದೆ.

  ಉತ್ತರ
  • SalamBava
   ಡಿಸೆ 23 2016

   “ಭಾರತದಲ್ಲಿ ಹೊಸತನಕ್ಕೆ ಜನ ಬೇಗ ಬೇಗ ಹೊಂದಿಕೊಳ್ಳುವದಿಲ್”

   What a joke! Do u know how fast TV and mobile phone market grew in India? People adopt technology that provides value to them. Electronic payment systems don’t provide value to 95% citizens of India and hence the resistance.

   ಉತ್ತರ
 3. SalamBava
  ಡಿಸೆ 23 2016

  Demonetisation has failed very badly. Black money has not been confiscated but life of ordinary citizens has been made hell. Forget digital payments first ensure that electricity and phone signal is available 24 hours everywhere.

  ಉತ್ತರ
  • ಡಿಸೆ 24 2016

   I have seen two towns and a village. Ordinary people are with this move and are supporting Mods on this. Successive raids revealed many black transactions and more will come. This is a true revolution and those who don’t adapt for being lazy will dropout and will be happy to see Salam Bava go.

   ಉತ್ತರ
   • ಶೆಟ್ಟಿನಾಗ ಶೇ.
    ಡಿಸೆ 24 2016

    ಇಂದು ರೈಲಿನಲ್ಲಿ ಎದುರು ಕುಳಿತಿದ್ದ ಸಹಪ್ರಯಾಣಿಕರೊಬ್ಬರು, ಇವರು ಬ್ರಾಹ್ಮಣರು ದಕ್ಷ ಸರಕಾರೀ ನೌಕರರು, ನೋಟು ನಿವೃತ್ತಿಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ಕಷ್ಟಗಳ ಬಗ್ಗೆ ಬಹಳ ಆರ್ತಭಾವದಿಂದ ಒಂದು ಗಂಟೆ ಮಾತನಾಡಿದರು. ಭಾಜಪದ ಬಗ್ಗೆ ನಿಷ್ಠೆ ಮೋದಿ ಬಗ್ಗೆ ಒಲವು ಇದ್ದರೂ ಸತ್ಯವನ್ನೇ ಹೇಳಿದರು. ಜನರ ಕಷ್ಟಗಳನ್ನು ಅರಿತು ಸ್ಪಂದಿಸದ ಸರಕಾರ ಜನವಿರೋಧಿಯಾದ ಮೇಲೆ ಹೆಚ್ಚು ದಿನ ಉಳಿಯುವುದಿಲ್ಲ; ಮೋದಿ ಇನ್ನಾದರೂ ಎಚ್ಚರ ವಹಿಸಿ ಜನರ ಕಷ್ಟಗಳಿಗೆ ನೇರ ಜವಾಬ್ದಾರಿ ಹೊರತಕ್ಕದ್ದು ಎಂದರು.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments