ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 28, 2016

3

ಉಳಿಯುವಂಥ ವಿಜ್ಞಾನ ಸಾಹಿತ್ಯ ಕೊಟ್ಟ ಅಡ್ಯನಡ್ಕರು

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

adyanadka-krishna-bhat1ಶಾಲೆಯಲ್ಲಿದ್ದಾಗ ನಾವು ಕಿತ್ತಾಡಿಕೊಂಡು ಓದುತ್ತಿದ್ದ ಪತ್ರಿಕೆ ಎಂದರೆ ಬಾಲವಿಜ್ಞಾನ. ಅದರಲ್ಲಿ ಬರುತ್ತಿದ್ದ “ನೀನೇ ಮಾಡಿ ನೋಡು” ಎಂಬ ಸರಳ ಪ್ರಯೋಗಗಳನ್ನು ಮನೆಯಲ್ಲಿ ಮಾಡಿ ನೋಡುತ್ತಿದ್ದೆವು. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಅಲ್ಲಿ ತಜ್ಞರು ಕೊಟ್ಟ ಉತ್ತರಗಳನ್ನು ಓದಿ ಖುಷಿ ಪಡುತ್ತಿದ್ದೆವು. ವ್ಯಕ್ತಿಚಿತ್ರಗಳನ್ನು ಎರಡೆರಡು ಬಾರಿ ಓದಿ ಮನನ ಮಾಡಿಕೊಳ್ಳುತ್ತಿದ್ದೆವು. ವಿಜ್ಞಾನ ಪದಬಂಧವನ್ನು ಪೂರ್ತಿಗೊಳಿಸಲು ಹೆಣಗುತ್ತಿದ್ದೆವು. ಪಂಡಿತವರ್ಗಕ್ಕೆ ಸೇರಿದ ವಿಶೇಷ ತಳಿಗಳೆಂಬ ನಮ್ಮ ಜಂಬವನ್ನು ಬಾಲವಿಜ್ಞಾನ ಹೀಗೆ ತೃಪ್ತಿಗೊಳಿಸುತ್ತಿತ್ತು. ಆ ಪತ್ರಿಕೆಯಲ್ಲಿ ತಪ್ಪದೆ ಕಾಣಿಸಿಕೊಳ್ಳುತ್ತ, ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿಹೋಗಿದ್ದ ಒಂದು ಹೆಸರು ಅಡ್ಯನಡ್ಕ ಕೃಷ್ಣ ಭಟ್.

ಬಹುಶಃ ಅವರ ಲೇಖನವಿಲ್ಲದೆ ಆ ಪತ್ರಿಕೆಯ ಒಂದಾದರೂ ಸಂಚಿಕೆ ಬಂದಿತ್ತೇ ಎಂಬುದು ಅನುಮಾನ. ಕೃಷ್ಣ ಭಟ್ಟರು ಬಾಲವಿಜ್ಞಾನ ಮಾತ್ರವಲ್ಲದೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಆಗಾಗ ಪ್ರಕಟಿಸುತ್ತಿದ್ದ ಪುಸ್ತಕಗಳಲ್ಲಿ ಒಂದೋ ಲೇಖಕರಾಗಿ ಇಲ್ಲವೇ ಸಂಪಾದಕರಾಗಿ, ಕೆಲವೊಮ್ಮೆ ಎರಡೂ ಆಗಿ ಕಾಣಿಸಿಕೊಳ್ಳುತ್ತಿದ್ದ ವ್ಯಕ್ತಿ. ಅವರಷ್ಟೇ ಅಲ್ಲ, ಆಗಿನ ಕಾಲದ ಯಾವ ವಿಜ್ಞಾನ ಪತ್ರಿಕೆ-ಪುಸ್ತಕಗಳನ್ನು ತೆರೆದರೂ ಜೆ.ಆರ್. ಲಕ್ಷ್ಮಣರಾವ್, ಡಿ.ಆರ್. ಬಳೂರಗಿ, ಎಸ್.ಆರ್. ಮಾಧುರಾವ್, ಎಂ.ಎ. ಸೇತುರಾವ್, ಎಚ್. ಸಂಜೀವಯ್ಯ, ಎಂ.ಸಿ. ಯಾಳವಾರ, ಎನ್.ಬಿ. ಕಾಖಂಡಕಿ, ಜಿ.ಟಿ. ನಾರಾಯಣರಾವ್ ಮುಂತಾದ ಹೆಸರುಗಳು ಕಡ್ಡಾಯವೆನ್ನುವಂತೆ ಬಂದೇ ಬರುತ್ತಿದ್ದವು. ಅಂದರೆ, ವಿಜ್ಞಾನದ ವಿಷಯಗಳನ್ನು ತಿಳಿದುಕೊಳ್ಳಲು ಹಪಹಪಿಸುತ್ತಿದ್ದ ಕನ್ನಡದ ಕಂದಮ್ಮಗಳನ್ನು ಈ ಇಷ್ಟು ಜನ ಆವರಿಸಿಕೊಂಡಿದ್ದರಷ್ಟೇ ಅಲ್ಲ; ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ತಪ್ಪಿಲ್ಲದಂತೆ ಕೊಡುವ ಗುರುತರ ಹೊಣೆಗಾರಿಕೆಯನ್ನೂ ಹೊತ್ತವರಾಗಿದ್ದರು. ವಿಸ್ಮಯವೇ ಸ್ಥಾಯಿಗುಣವಾಗಿದ್ದ ತೇಜಸ್ವಿಯವರ ಬರಹಗಳಿಗಿಂತ ತುಸು ಭಿನ್ನವಾಗಿದ್ದ ಅಡ್ಯನಡ್ಕ ಮತ್ತು ಅವರ ಓರಗೆಯ ಸಾಹಿತಿಗಳ ಬರಹಗಳಲ್ಲಿ ರೋಚಕತೆಗೆ ಎರಡು-ಮೂರನೇ ಸ್ಥಾನ. ಇಂಗ್ಲೀಷಿನಲ್ಲಿ ಅಥವಾ ಹೊರ ಜಗತ್ತಿನ ಬೇರೆ ಭಾಷೆಗಳಲ್ಲಿ ಬರುತ್ತಿರುವ ಅತ್ಯಂತ ಮಹತ್ವದ ಸಂಗತಿಗಳ ತಿರುಳನ್ನು ತಿಳಿಗನ್ನಡದಲ್ಲಿ ಕಿರಿಯರಿಗೂ ತಿಳಿಯುವಂತೆ ನೀಡಬೇಕು ಎಂಬುದಕ್ಕೇ ಆಗ ಪ್ರಾಶಸ್ತ್ಯ. ಅತಿರಂಜಿತ ವಿವರಣೆಗಳು ವಿಜ್ಞಾನ ಬರಹಗಳ ಉದ್ದೇಶದ ದಾರಿ ತಪ್ಪಿಸುತ್ತವೆ ಎಂಬುದನ್ನು ಕಠೋರವಾಗಿ ನಂಬಿದ್ದ ಅಡ್ಯನಡ್ಕರು ಯಾವ ಏರಿಳಿತಗಳಿಗೆ ಅವಕಾಶ ಕೊಡದೆ ಭಾವೋನ್ಮಾದಕ್ಕೆ ಆಸ್ಪದ ನೀಡದೆ ವಿಜ್ಞಾನದ ತಿಳಿಕೆನೆಯನ್ನು ನಮ್ಮೆಲ್ಲರಿಗೆ ಉಣಬಡಿಸುತ್ತಿದ್ದರು. ಜಿಟಿಎನ್ ಬರಹಗಳಲ್ಲಿ ಸಂಸ್ಕೃತಕ್ಕೆ ಸ್ವಲ್ಪ ಹೆಚ್ಚಿನ ಮರ್ಯಾದೆ. ಅಡ್ಯನಡ್ಕರ ಭಾಷೆಯಲ್ಲಿ ಕನ್ನಡಕ್ಕೇ ಮೊದಲ ಪೀಠ.

ಆಚಾರ್ಯರ ಶಿಷ್ಯ

ಅಡ್ಯನಡ್ಕ ಕೃಷ್ಣ ಭಟ್ಟರು ಹುಟ್ಟಿದ್ದು ವಿಟ್ಲ-ಕಾಸರಗೋಡುಗಳ ನಡುವಿನ ಅಡ್ಯನಡ್ಕ ಎಂಬ ಕುಗ್ರಾಮದಲ್ಲಿದ್ದ ಹವ್ಯಕ ಬ್ರಾಹ್ಮಣ ಮನೆತನವೊಂದರಲ್ಲಿ. ಕೃಷ್ಣ ಭಟ್ಟರ ತಂದೆ ತಿಮ್ಮಣ್ಣ ಭಟ್ಟರಿಗೆ ಮೊದಲ ಪತ್ನಿಯಿಂದ ಓರ್ವ ಪುತ್ರ. ಎರಡನೇ ಪತ್ನಿಯಿಂದ ಆರು ಗಂಡು, ಇಬ್ಬರು ಹೆಣ್ಣು ಮಕ್ಕಳು. ಕೊನೆಯ ಎಂಟು ಮಕ್ಕಳಲ್ಲಿ ಹಿರಿಯರು ಕೃಷ್ಣ ಭಟ್ಟರು. ಪ್ರಾಥಮಿಕ ವಿದ್ಯಾಭ್ಯಾಸ, ಅಪ್ಪನೇ ಕಟ್ಟಿ ಮುಖ್ಯೋಪಾಧ್ಯಾಯನಾಗಿ ದುಡಿಯುತ್ತಿದ್ದ ಊರ ಶಾಲೆಯಲ್ಲೇ. ಮುಂದೆ ಪ್ರೌಢಶಾಲಾ ವಿದ್ಯಾಭ್ಯಾಸಕ್ಕೆ ಪಕ್ಕದ ಪುತ್ತೂರಿನ ಬೋರ್ಡ್ ಹೈಸ್ಕೂಲ್ ಸೇರಿದರು. ಅಲ್ಲಿ ಹತ್ತನೇ ಕ್ಲಾಸ್ ಮುಗಿಸಿ, ಉಡುಪಿಗೆ ಬಂದರು. ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ (ಎಂ.ಜಿ.ಎಂ) ಇಂಟರ್‍ಮೀಡಿಯೇಟ್ ಆಯಿತು. ಎಂ.ಜಿ.ಎಂ. ಕಾಲೇಜಿನ ಗ್ರಂಥಾಲಯದ ಅಗಾಧ ಪುಸ್ತಕ ಸಂಪತ್ತನ್ನು ಸಾಧ್ಯವಿದ್ದರೆ ಅಗಸ್ತ್ಯ ಮುನಿಯಂತೆ ಆಪೋಶನ ತೆಗೆದುಕೊಳ್ಳುತ್ತಿದ್ದರೋ ಏನೋ! ಅಲ್ಲಿ, ಕೈಗೆ ಸಿಕ್ಕಿದ್ದನ್ನೆಲ್ಲ ಓದಿ ಮನನ ಮಾಡಿ ಸ್ಮರಣಕೋಶಕ್ಕಿಳಿಸಿಕೊಳ್ಳುವ ಪಂಡಿತಪ್ರವೃತ್ತಿ ಜಾಗೃತವಾಯಿತು. ಎರಡು ವರ್ಷಗಳಲ್ಲಿ ಪ್ರೊಫೆಸರ್ ಯು.ಎಲ್. ಆಚಾರ್ಯರು ಕಲಿಸಿದ ಭೌತಶಾಸ್ತ್ರವನ್ನು ಸವಿದ ಮೇಲಂತೂ, ಗೂಟಕ್ಕೆ ಸುತ್ತು ಬಂದೂ ಬಂದು ಹಗ್ಗ ಬಿಗಿಸಿಕೊಳ್ಳುವ ಎಳೆಗರುವಿನಂತೆ ಅಡ್ಯನಡ್ಕದಿಂದ ಬಂದಿದ್ದ ಈ ಹುಡುಗ ವಿಜ್ಞಾನವನ್ನೇ ನಿದ್ರೆ-ಎಚ್ಚರಗಳಲ್ಲಿ ಕನವರಿಸತೊಡಗಿದ.

ಸ್ವಾತಂತ್ರ್ಯಪೂರ್ವದಲ್ಲಿ ದಕ್ಷಿಣ ಕನ್ನಡ, ಮದರಾಸು ಪ್ರಾಂತ್ಯಕ್ಕೆ ಸೇರಿತ್ತಲ್ಲ? ಆ ಕಳ್ಳುಬಳ್ಳಿಯ ಸಂಬಂಧ ಸ್ವಾತಂತ್ರ್ಯಾನಂತರವೂ ಕತ್ತರಿಸಿಹೋಗಿರಲಿಲ್ಲ. ಕರಾವಳಿಯ ಬಹಳಷ್ಟು ಹುಡುಗರು ಕಾಲೇಜು ಕಲಿಯಲು ವಿದ್ಯಾರ್ಥಿವೇತನಗಳನ್ನು ಹೊಂದಿಸಿಕೊಂಡು ಮದ್ರಾಸಿನ ಕಾಲೇಜುಗಳನ್ನು ಸೇರಿಕೊಳ್ಳುತ್ತಿದ್ದದ್ದು ಸಾಮಾನ್ಯವಾಗಿತ್ತು. ಕೃಷ್ಣ ಭಟ್ಟರೂ ಧೈರ್ಯ ಮಾಡಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಅರ್ಜಿ ಹಾಕಿದರು. ಪುಣ್ಯಕ್ಕೆ ಸೀಟು ಸಿಕ್ಕೇಬಿಟ್ಟಿತು. ಅಲ್ಲಿ, ಬಿ.ಎಸ್‍ಸಿ. ಆನರ್ಸ್ ಜೊತೆಗೆ ಒಂದು ವರ್ಷದ ಸ್ನಾತಕೋತ್ತರ ಪದವಿಯೂ ಆಯಿತು. ಪ್ರೆಸಿಡೆನ್ಸಿ ಕಾಲೇಜು ಎಂದರೆ ಆಗಿನ ಕಾಲದಲ್ಲಿ ಇಡೀ ದಕ್ಷಿಣ ಭಾರತಕ್ಕೇ ಹೆಸರುವಾಸಿಯಾಗಿದ್ದ ಕಾಲೇಜು. ಸರ್ ಸಿ.ವಿ. ರಾಮನ್, ಅವರ ಸೋದರನ ಮಗ ಸುಬ್ರಹ್ಮಣ್ಯನ್ ಚಂದ್ರಶೇಖರ್ ಇಬ್ಬರೂ ಓದಿದ, ಕೆಲವು ವರ್ಷ ಕೆಲಸ ಮಾಡಿದ್ದ ಕಾಲೇಜು ಅದು. ಅಂತಹ ಮಹಾಮಹಿಮರು ಓಡಾಡಿದ ಕಾಲೇಜಿನ ಕಾರಿಡಾರುಗಳಲ್ಲೇ ತಾನೂ ನಡೆಯುತ್ತಿದ್ದೇನೆ, ಅವರಿದ್ದ ಪ್ರಯೋಗಶಾಲೆಗಳಲ್ಲೇ ತಾನೂ ಪ್ರಯೋಗಗಳನ್ನು ಮಾಡುತ್ತಿದ್ದೇನೆಂಬ ಆರ್ದೃಭಾವ ಆಗಾಗ ಕೃಷ್ಣ ಭಟ್ಟರನ್ನು ತುಂಬಿಕೊಳ್ಳುತ್ತಿತ್ತಂತೆ. ಅಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಮೇಲೆ ಎಲ್ಲೆಲ್ಲೋ ಹೋಗಿ ಬದುಕಿನ ಹೊಸ ಅಧ್ಯಾಯವನ್ನು ವಿಜೃಂಭಣೆಯಿಂದ ಪ್ರಾರಂಭಿಸುವ ಅವಕಾಶವಿದ್ದರೂ ಭಟ್ಟರು ಮಾತ್ರ ತನ್ನ ಹುಟ್ಟೂರಿಗೇ ವಾಪಸು ಬಂದರು. ಎಂ.ಜಿ.ಎಂ. ಕಾಲೇಜಿಗೆ ಬಂದು ಸೈನ್ಸ್ ಡೆಮಾನ್‍ಸ್ಟ್ರೇಟರ್ ಆಗಿ ವೃತ್ತಿಜೀವನ ಪ್ರಾರಂಭಿಸಿದರು. ಪದವಿ ಮುಗಿಸಿ ಬಂದವರು ವಿಜ್ಞಾನ ವಿಭಾಗದಲ್ಲಿ ಹೀಗೆ ವಿಜ್ಞಾನ ಪ್ರದರ್ಶಕ ಎಂಬ ಹುದ್ದೆಯಲ್ಲಿ ಒಂದೆರಡು ವರ್ಷ ಕಳೆಯುತ್ತಿದ್ದದ್ದು ಆಗ ಪದ್ಧತಿ. ಈಗ ಆ ಹುದ್ದೆ ಕಾಲೇಜುಗಳಲ್ಲಿ ಇರುವಂತಿಲ್ಲ. ಎಂ.ಜಿ.ಎಂ. ಕಾಲೇಜಿನಲ್ಲಿ ಒಂದೆರಡು ವರ್ಷ ನೌಕರಿ ಮಾಡಿದ ಮೇಲೆ ಪುತ್ತೂರಿನ ಫಿಲೊಮಿನಾ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಬಡ್ತಿ ಸಿಕ್ಕಿತು. ಅಲ್ಲಿ ಒಂದೆರಡು ವರ್ಷ ಕಳೆಯುತ್ತಲೇ ಮೂಲ್ಕಿಯಲ್ಲಿ ಡಾ. ಟಿ.ಎಂ.ಎ. ಪೈಗಳು ಹೊಸದೊಂದು ಕಾಲೇಜು ಪ್ರಾರಂಭಿಸುತ್ತಿದ್ದಾರಂತೆ ಎಂಬ ಸುದ್ದಿ ಬಂತು. ತನ್ನ ಸಂಸ್ಥೆಗಳಿಗೆ ಎಲ್ಲೆಡೆಯಲ್ಲಿ ಹುಡುಕಿ ಒಳ್ಳೆಯದನ್ನೇ, ಒಳ್ಳೆಯವರನ್ನೇ ಆರಿಸಿ ತರುತ್ತಿದ್ದ ಪೈಗಳಿಗೆ ಈ ಫಲ, ಅದೆಷ್ಟು ಎಲೆಗಳ ಮರೆಯಲ್ಲಿ ಅಡಗಿದರೂ ತಿಳಿಯದೆ ಇದ್ದೀತೇ? ಮೂಲ್ಕಿಯ ಹೊಸ ವಿಜಯಾ ಕಾಲೇಜಿಗೆ ಅಧ್ಯಾಪಕನಾಗಿ ಬರುವಂತೆ ಕೃಷ್ಣ ಭಟ್ಟರನ್ನು ಕೇಳಿಕೊಂಡರು. ಈಗಷ್ಟೇ ಕಟ್ಟಿಮುಗಿಸಿ ಸುಣ್ಣಬಣ್ಣದ ವಾಸನೆ ಗಾಢವಾಗಿ ಮೂಗಿಗೆ ಅಡರುವಂತಿದ್ದ ಆ ಕಾಲೇಜಿನಲ್ಲಿ ಫಿಸಿಕ್ಸ್ ವಿಭಾಗವನ್ನು ಕಟ್ಟಿಬೆಳೆಸುವ ಜವಾಬ್ದಾರಿ ಕೃಷ್ಣ ಭಟ್ಟರ ಹೆಗಲೇರಿತು. ಒಂದು ಅಧ್ಯಾಯ ಮುಗಿದು ಬದುಕು ಎರಡನೆಯದಕ್ಕೆ ತೆರೆದುಕೊಂಡಿತು.

ಶುರುವಾಯ್ತು ಸಾಹಿತ್ಯಯಾತ್ರೆ

ಅಡ್ಯನಡ್ಕ ಕೃಷ್ಣ ಭಟ್ಟರು ವಿಜಯಾ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿಕೊಂಡ ಮೇಲೆ ಅಧ್ಯಯನ – ಅಧ್ಯಾಪನಗಳಲ್ಲಿ ಕಳೆದುಹೋಗಲಿಲ್ಲ. ಕಾಲೇಜಿನಲ್ಲಿ ವಿಜ್ಞಾನ ಸಂಘ ಕಟ್ಟಿದರು. ಶಿವರಾಮ ಕಾರಂತರು ಒಂದು ಕಾಲದಲ್ಲಿ ಪುತ್ತೂರಿನಿಂದ ಪ್ರಕಟಿಸುತ್ತಿದ್ದ ವಿಚಾರವಾಣಿ ಎಂಬ ಪತ್ರಿಕೆ ಕಾಲಕ್ರಮೇಣ ಹಲವು ಮುಗ್ಗಟ್ಟುಗಳಿಗೆ ಪಕ್ಕಾಗಿ ನಿಂತುಹೋಗಿತ್ತು. ಅದನ್ನು ಮತ್ತೆ ಪ್ರಾರಂಭಿಸಿ, ಅದರಲ್ಲಿ ವಿಜ್ಞಾನ ಲೇಖನಗಳನ್ನು ಸರಣಿಯಂತೆ ಬರೆಯುವ ಮೂಲಕ ಕೃಷ್ಣ ಭಟ್ಟರ ಸಾಹಿತ್ಯಯಾತ್ರೆ ಸಣ್ಣ ತೊರೆಯಂತೆ ಪ್ರಾರಂಭವಾಯಿತು. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಕಟ್ಟಿಕೊಂಡು ಅಧ್ಯಯನ ಕೂಟವೊಂದನ್ನು ಪ್ರಾರಂಭಿಸಿದರು. ಪ್ರತಿ ಹದಿನೈದು ದಿನಗಳಿಗೊಮ್ಮೆ ಜೊತೆ ಸೇರುವುದು; ತಾವು ಓದಿದ ಬರೆದ ವಿಜ್ಞಾನ ಪ್ರಬಂಧವೊಂದನ್ನು ಎಲ್ಲರೆದುರು ಓದುವುದು ಮತ್ತು ಚರ್ಚೆಗೆ ಚಾಲನೆ ಕೊಡುವುದು – ಅದರ ಸ್ವರೂಪವಾಗಿತ್ತು. ಆಗಷ್ಟೇ ಸೋವಿಯೆಟ್ ಒಕ್ಕೂಟದಿಂದ ಯೂರಿ ಗಗಾರಿನ್ ಎಂಬ ಬಾಹ್ಯಾಕಾಶ ಯಾನಿ ಒಂದೂವರೆ ತಾಸು ಅಂತರಿಕ್ಷದಲ್ಲಿ ನಡೆದಾಡಿದ ಸುದ್ದಿ ಜಗತ್ತಿನಾದ್ಯಂತ ವಿಜ್ಞಾನ ಕುತೂಹಲಿಗಳ ಹುಬ್ಬುಗಳನ್ನೆತ್ತರಿಸಿತ್ತು. ಆ ವಿಸ್ಮಯ, ಅಚ್ಚರಿಗಳಲ್ಲೇ ಕೃಷ್ಣ ಭಟ್ಟರು ಗಗನಯುಗ ಎಂಬ ಹೆಸರಿನ ಪ್ರಬಂಧ ಬರೆದು ಅಧ್ಯಯನ ಕೂಟದಲ್ಲಿ ಓದಿದರು. ಅದು ಮಿಕ್ಕವರನ್ನು ಅದೆಷ್ಟು ರೋಮಾಂಚನದಲ್ಲಿ ಕೆಡವಿಬಿಟ್ಟಿತೆಂದರೆ ಪ್ರಬಂಧವನ್ನು ಇನ್ನಷ್ಟು ವಿಸ್ತರಿಸಿ ಒಂದು ಪುಸ್ತಕವನ್ನೇ ಪ್ರಕಟಿಸಿಬಿಡುವಾ ಎಂಬ ಯೋಚನೆ ಎಲ್ಲರಿಗೂ ಬಂತು. ಅಧ್ಯಯನಕ್ಕೆಂದು ಸೇರಿದ್ದ ಗುಂಪು, ಪ್ರಕಾಶನ ಸಂಸ್ಥೆಯಾಗಿ ತಟ್ಟನೆ ಪರಿವರ್ತನೆಯಾಗಿಬಿಟ್ಟಿತು! ಕೂಟಕ್ಕೆ “ರೀಸರ್ಚ್ ಆಂಡ್ ಪಬ್ಲಿಕೇಶನ್” ಎಂಬ ಹೊಸ ನಾಮಕರಣವಾಯಿತು. ಅದರ ಮೂಲಕ “ಗಗನಯುಗ” ಪುಸ್ತಕವಾಗಿ ಪ್ರಕಟವಾಯಿತು.

ಅದೇ ಹೊತ್ತಲ್ಲಿ ಸುರತ್ಕಲ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ಮತ್ತು ಕೆಲವು ವಿದ್ಯಾರ್ಥಿಗಳು ಸೇರಿಕೊಂಡು “ವಿಜ್ಞಾನಲೋಕ” ಎಂಬ ಪತ್ರಿಕೆ ಪ್ರಾರಂಭಿಸುವ ಕುರಿತು ಯೋಚಿಸಿದರು. ತಪ್ಪಿಲ್ಲದೆ, ಇರುವ ಪಾರಿಭಾಷಿಕ ಪದಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಇಲ್ಲದಲ್ಲಿ ಸೃಷ್ಟಿಸಿಕೊಂಡು, ಓದುಗರಿಗೆ ರುಚಿಸುವಂತೆ ಕನ್ನಡದಲ್ಲಿ ಬರೆಯುವವರು ಯಾರಿದ್ದಾರೆ ಎಂದಾಗ ಎಲ್ಲರ ಮನಸ್ಸಲ್ಲಿ ಬಂದ ಹೆಸರು ಕೃಷ್ಣ ಭಟ್ಟರದ್ದೇ. ಸರಿ, ವಿಜ್ಞಾನಲೋಕ ಎಂಬ ಎರಡನೆ ನೊಗ ಹೆಗಲೇರಿತು. ಅದನ್ನು ಕೃಷ್ಣ ಭಟ್ಟರು ಏಳು ವರ್ಷಗಳ ಕಾಲ ಸಮರ್ಥವಾಗಿ ನಿಭಾಯಿಸಿ ನಂತರ ಮುಂದಿನ ಪೀಳಿಗೆಗೆ ಹಸ್ತಾಂತರಿಸಿದರು. 1983ರ ನವೆಂಬರ್ 1ರಂದು “ಬಾಲ ವಿಜ್ಞಾನ” ಎಂಬ ಪತ್ರಿಕೆಯನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪ್ರಾರಂಭಿಸಿದಾಗ, ಕೃಷ್ಣ ಭಟ್ಟರು ಸಂಪಾದಕೀಯ ಮಂಡಳಿಯಲ್ಲಿ ಸೇರಿಕೊಂಡರು. ಆರು ವರ್ಷಗಳ ನಂತರ, 1989ರಲ್ಲಿ ಅದರ ಪ್ರಧಾನ ಸಂಪಾದಕರೂ ಆದರು. ಅಲ್ಲಿಂದ ಮುಂದೆ ಎರಡು ದಶಕಗಳ ಕಾಲ ಅದನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸಿದರು. 2000ಕ್ಕೂ ಅಧಿಕ ವಿಜ್ಞಾನ ಲೇಖನಗಳು ಕನ್ನಡದಲ್ಲಿ ಮೂಡಿ ಬರುವುದರಲ್ಲಿ ಅಡ್ಯನಡ್ಕರು ಬಹಳ ದೊಡ್ಡ ಪಾತ್ರ ವಹಿಸಿದರು. ಸಂಪಾದಕನ ಹೊಣೆಗಾರಿಕೆಯನ್ನು ಕೆಳಗಿಟ್ಟ ಮೇಲೂ ಅವರು ಬಾಲವಿಜ್ಞಾನದ ಸಂಬಂಧವನ್ನೇನೂ ಕಡಿದುಕೊಳ್ಳಲಿಲ್ಲ. ಮೊನ್ನೆಮೊನ್ನೆ ಬಂದ ಸಂಚಿಕೆಯ ಪುಟಗಳನ್ನು ತೆರೆದು ನೋಡಿದರೂ ಅಲ್ಲಿ ಅವರ ಲೇಖನವನ್ನು ಕಾಣಬಹುದು!

ಆಕಾಶ ತೋರಿಸುತ್ತಿದ್ದರು

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸ್ಥಾಪನೆಯಾದ ದಿನದಿಂದಲೂ ಅದರ ಜತೆ ನಿಕಟವಾಗಿ ಗುರುತಿಸಿಕೊಂಡ, ಅದರ ಒಂದು ಭಾಗವೇ ಆಗಿದ್ದ ಕೃಷ್ಣ ಭಟ್ಟರು ಬಹುಶಃ ಭೇಟಿ ನೀಡದ ಊರು ಕರ್ನಾಟಕದಲ್ಲಿ ಇಲ್ಲ. ರಾಜ್ಯದ ಮೂಲೆ ಮೂಲೆಗೆ ಹೋಗಿ ವಿಜ್ಞಾನ ಉಪನ್ಯಾಸ, ಸಂವಾದ, ಕಮ್ಮಟ, ಪ್ರಾತ್ಯಕ್ಷಿಕೆ, ಕಾರ್ಯಾಗಾರ ನಡೆಸಿ ಅಲ್ಲಿನ ಶಾಲೆ – ಕಾಲೇಜುಗಳ ವಿದ್ಯಾರ್ಥಿಗಳನ್ನು ಸೇರಿಸುತ್ತಿದ್ದ ಅಡ್ಯನಡ್ಕರು ಒಳ್ಳೆಯ ಸಂಘಟಕ ಕೂಡ. ಜಿಟಿಎನ್ ಸಹವಾಸವೋ ಅಥವಾ ಮೊದಲಿಂದ ಇದ್ದ ಸ್ವಂತಾಸಕ್ತಿಯೋ, ಅವರು ನಾಲ್ಕು ದಶಕಗಳ ಕಾಲ ಬಿಟ್ಟೂಬಿಡದೆ ನಡೆಸಿದ ಇನ್ನೊಂದು ಕಾರ್ಯಕ್ರಮ ಎಂದರೆ ಆಕಾಶವೀಕ್ಷಣೆ. ಹೋದಲ್ಲೆಲ್ಲ ರಾತ್ರಿ ಹುಡುಗರನ್ನೂ ಹಿರಿಯರನ್ನೂ ಒಟ್ಟು ಹಾಕಿ ಆಕಾಶದ ವಿವಿಧ ನಕ್ಷತ್ರರಾಶಿಗಳನ್ನು ತೋರಿಸುತ್ತಿದ್ದರು. ಅಡ್ಯನಡ್ಕರಿಗೆ ಯಂತ್ರಗಳನ್ನು ಹೇಗೆ ಉಪಯೋಗಿಸಬೇಕು ಎಂಬ ವಿಷಯದಲ್ಲಿ ಅತ್ಯಂತ ಖಚಿತವಾದ ಜ್ಞಾನವಿತ್ತು. ಕಾಲೇಜಿನಲ್ಲೇ ಒಂದು ಪುಟ್ಟ ಖಗೋಳ ವೀಕ್ಷಣಾಲಯವನ್ನೂ ಅವರು ವ್ಯವಸ್ಥೆ ಮಾಡಿದ್ದರು. ಅಲ್ಲಿ ಅವರ ಜೊತೆ ನರಸಿಂಹಮೂರ್ತಿ ಮಯ್ಯ ಎಂಬ ಸಹಾಯಕರು ಅದೆಷ್ಟೋ ರಾತ್ರಿಗಳನ್ನು ಆಕಾಶದ ಚುಕ್ಕಿಗಳನ್ನು ದೂರದರ್ಶಕದಲ್ಲಿ ಬೆನ್ನಟ್ಟುತ್ತ ಕಳೆದದ್ದುಂಟು.

ಮೂಲ್ಕಿ ಎಂಬ ಪುಟ್ಟ ಊರಲ್ಲಿದ್ದುಕೊಂಡೇ ರಾಜ್ಯದಲ್ಲಿ ವಿಜ್ಞಾನದ ಬೃಹತ್ತಾದ ಚಳುವಳಿ ಹುಟ್ಟಿಕೊಳ್ಳುವಂತೆ ಮಾಡುವುದು ಸಣ್ಣ ಕೆಲಸವೇನಲ್ಲ. ಅಡ್ಯನಡ್ಕರ ಸಾಹಸವನ್ನು ಮೆಚ್ಚಿದ ಸಾಹಿತಿ ನಿರಂಜನರು ತಾನು ರೂಪಿಸುತ್ತಿದ್ದ ಕಿರಿಯರ ವಿಶ್ವಕೋಶ ಮಾಲಿಕೆಯಲ್ಲಿ ಭೌತಜಗತ್ತು, ಜೀವಜಗತ್ತು ಮತ್ತು ಯಂತ್ರಜಗತ್ತು ಎಂಬ ಮೂರು ಸಂಪುಟಗಳ ಸಂಪಾದಕತ್ವದ ಜವಾಬ್ದಾರಿಯನ್ನು ಅವರಿಗೆ ಹೊರಿಸಿದರು. ಆ ಸಂಪುಟಗಳ ಕೆಲಸ ಪೂರೈಸುವುದಕ್ಕಾಗಿ ಅವರು ನಾಲ್ಕು ವರ್ಷ ತನ್ನ ಪ್ರಾಧ್ಯಾಪಕ ಕೆಲಸಕ್ಕೆ ವಿರಾಮ ಕೊಟ್ಟು ಬೆಂಗಳೂರಲ್ಲಿ ಇರಬೇಕಾಗಿ ಬಂತು. ಆ ಸಂಪುಟಗಳನ್ನು ಅತ್ಯಂತ ಅದ್ಭುತವಾಗಿ ಸಂಪಾದಿಸಿಕೊಟ್ಟಿದ್ದೇ ಅಲ್ಲದೆ ಅವಕ್ಕೆ ಪ್ರತ್ಯೇಕವಾದ ಮೂರು ದೀರ್ಘ ಮುನ್ನಡಿಗಳನ್ನೂ ಅವರು ಬರೆದರು. ಜ್ಞಾನಗಂಗೋತ್ರಿ ಎಂಬ ಹೆಸರಿನಲ್ಲಿ ಪ್ರಕಟವಾದ ಆ ಸಂಪುಟಗಳು ಅಡ್ಯನಡ್ಕರ ಸಾಹಸಮಯ ವ್ಯಕ್ತಿತ್ವಕ್ಕೆ ಕಿರೀಟಪ್ರಾಯವಾದ ಹೊತ್ತಗೆಗಳು ಎಂದೇ ಹೇಳಬೇಕು. ಕಾರಂತರ ಬಾಲಪ್ರಪಂಚ ಮಾಡಿದ್ದ ಮ್ಯಾಜಿಕ್‍ಅನ್ನು ಈ ಸಂಪುಟಗಳು ಮತ್ತೊಮ್ಮೆ ಕರ್ನಾಟಕದಲ್ಲಿ ಮಾಡಿದವು. ರಾಜ್ಯದ ಪ್ರತಿ ಶಾಲೆ ಕಾಲೇಜು ಕೂಡ ಈ ಸಂಪುಟಗಳನ್ನು ತನ್ನ ಗ್ರಂಥಾಲಯಕ್ಕೆ ಸೇರಿಸಿಕೊಂಡಿತು. ವಿಕಿಪೀಡಿಯಾ, ಗೂಗಲ್ ಇಲ್ಲದ ಆ ಕಾಲಕ್ಕೆ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳಿಗೆ ಅಡ್ಯನಡ್ಕರೇ ವಿಷಯಮೂಲವಾದರು. ಅವರು ಮಾಡಿದ ಮತ್ತೊಂದು – ಗಾತ್ರದಲ್ಲೂ ಮೌಲ್ಯದಲ್ಲೂ ದೊಡ್ಡದಾದ ಕೆಲಸ ಎಂದರೆ ಇಂಗ್ಲೀಷ್ ಕನ್ನಡ ವಿಜ್ಞಾನ ಪದಕೋಶ. ಈ ಕೆಲಸದಲ್ಲಿ ಜೊತೆಯಾದವರು ಕನ್ನಡದ ಇನ್ನೋರ್ವ ವಿಜ್ಞಾನ ಸಾಹಿತ್ಯ ಮೇರು ಎನ್ನಬಹುದಾದ ಪ್ರೊ. ಜೆ.ಆರ್. ಲಕ್ಷ್ಮಣರಾಯರು.

1977ರಲ್ಲಿ ಮಣಿಪಾಲದ ಶಿಕ್ಷಣ ಸಂಸ್ಥೆಗಳ ಅಧ್ವರ್ಯು, ವಿಜಯಾ ಕಾಲೇಜಿನ ಸ್ಥಾಪಕ ತೋನ್ಸೆ ಮಾಧವ ಅನಂತ ಪೈಗಳಿಗೆ (ಡಾ. ಟಿ.ಎಂ.ಎ. ಪೈ) 80 ವರ್ಷ ತುಂಬಿತು. ಆ ಸಂದರ್ಭದಲ್ಲಿ ಅವರಿಗೊಂದು ಸೊಗಸಾದ ಅಭಿನಂದನ ಗ್ರಂಥ ಅರ್ಪಿಸಬೇಕೆಂದು ಎಲ್ಲರೂ ಯೋಚಿಸಿದ್ದಾಯಿತು. ಗ್ರಂಥದ ಸಂಪಾದಕತ್ವವನ್ನು ಯಾರಿಗೆ ವಹಿಸಬೇಕು ಎಂದು ಯೋಚನೆ ಬಂದಾಗ ತಟ್ಟನೆ ಎಲ್ಲರೂ ನೋಡಿದ್ದು ಒಬ್ಬರನ್ನೇ! ಸರಿ, ಆ ಹೊಣೆಯೂ ಅಡ್ಯನಡ್ಕರ ಹೆಗಲೇರಿತು! ಆದರೆ “ಸುದರ್ಶನ” ಎಂಬ ಹೆಸರಿನ ಆ ಸ್ಮರಣ ಗ್ರಂಥ ಬಿಡುಗಡೆಯಾದಾಗ ಮಾತ್ರ ಎಲ್ಲರೂ ಒಂದು ಕ್ಷಣ ಚಮಕಿತರಾದರು. 120 ಲೇಖಕರ ಬೆನ್ನು ಬಿದ್ದು ಅವರಿಂದ ಒಳ್ಳೊಳ್ಳೆಯ ಲೇಖನಗಳನ್ನು ಬರೆಸಿ ಅಚ್ಚುಕಟ್ಟಾಗಿ ಪುಟಗಳಲ್ಲಿ ಕೂರಿಸಿ, 600ಕ್ಕೂ ಮೀರಿ ಪುಟಗಳಿದ್ದ ಅದ್ಭುತ ಉಡುಗೊರೆಯನ್ನೇ ಕೃಷ್ಣ ಭಟ್ಟರು ತಯಾರಿಸಿದ್ದರು. ಆ ಗ್ರಂಥ ಕೇವಲ ಒಬ್ಬ ವ್ಯಕ್ತಿಯ ಹೊಗಳುಪತ್ರವಾಗದಂತೆ ಎಚ್ಚರ ವಹಿಸಿ, ಅಲ್ಲಿ ದಕ್ಷಿಣ ಕನ್ನಡದ ಸಂಸ್ಕೃತಿ, ಭೂತಾರಾಧನೆ, ಸಾಹಿತ್ಯ, ಇತಿಹಾಸ, ಬ್ಯಾಂಕಿಂಗ್ ಕ್ಷೇತ್ರದ ಏಳುಬೀಳಿನ ಚರಿತ್ರೆ, ಶಿಕ್ಷಣಯಾತ್ರೆ, ವೈದ್ಯಕೀಯ ರಂಗದ ಅನಾವರಣ, ತುಳುನಾಡಿನ ನೈಸರ್ಗಿಕ ಸಂಪತ್ತಿನ ವಿವರಗಳು – ಹೀಗೆ ಒಂದಿಡೀ ಜಿಲ್ಲೆಯ ಸಮಗ್ರ ದಾಖಲೆಯಾಗುವಂತೆ ನೋಡಿಕೊಂಡರು. ಮಣಿಪಾಲದ ಪವರ್ ಪ್ರೆಸ್ಸಿನಲ್ಲಿ ಮುದ್ರಣವಾದ ಆ ಕೃತಿಗೆ ರಾಷ್ಟ್ರೀಯ ಉತ್ಕೃಷ್ಟ ಮುದ್ರಣ ಪ್ರಶಸ್ತಿ ಕೂಡ ಬಂತು. ಇಂದಿಗೂ ಸ್ಮರಣ ಸಂಚಿಕೆಗಳನ್ನೂ ಅಭಿನಂದನ ಗ್ರಂಥಗಳನ್ನೂ ಮಾಡಹೊರಡುವವರು “ಸುದರ್ಶನ”ದ ಪುಟಗಳನ್ನೊಮ್ಮೆ ಅವಶ್ಯವಾಗಿ ತಿರುವಿ ಹಾಕುತ್ತಾರೆ.

ಕಿರಿಯರನ್ನು ಮುನ್ನಡೆಸುತ್ತ

ಕೃಷ್ಣ ಭಟ್ಟರು ಅದೆಷ್ಟೆಲ್ಲ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತರೂ ತನ್ನ ಮೂಲಪಥದಿಂದ ಅತ್ತಿತ್ತ ಕದಲಲಿಲ್ಲ ಎನ್ನುವುದು ವಿಶೇಷ. ಅವರ ಮೂಲ ನಿಷ್ಠೆ ಏನಿದ್ದರೂ ವಿಜ್ಞಾನ ಸಾಹಿತ್ಯಕ್ಕೇನೇ. ಅದರಲ್ಲೂ ಜನಸಾಮಾನ್ಯರಿಗೆ ಉಪಯೋಗವಾಗುವಂಥ ಇಂಧನ, ಮಾಲಿನ್ಯ ಮುಂತಾದ ಸರಳ ವಿಷಯಗಳ ಬಗ್ಗೆಯೂ ವಿಜ್ಞಾನ ಲೇಖಕರು ಬರೆಯಬೇಕು ಎಂದು ದೃಢವಾಗಿ ನಂಬಿದ್ದವರು ಅವರು. ಗ್ರಹಣ, ಗುರುತ್ವಾಕರ್ಷಣೆ, ಬೆಳ್ಳಿ ಚುಕ್ಕಿ, ನಮ್ಮ ವಾತಾವರಣ, ಮನುಷ್ಯನ ವಂಶಾವಳಿ, ಕಿಶೋರ ವಿಜ್ಞಾನ, ಫಿಸಿಕ್ಸ್ ಮತ್ತು ಐನ್‍ಸ್ಟೈನ್ – ಅವರ ಕೆಲವು ಕೃತಿಗಳು. ಸರ್. ಸಿ.ವಿ. ರಾಮನ್ ಮತ್ತು ಐಸಾಕ್ ನ್ಯೂಟನ್ ಮೇಲೆ ವ್ಯಕ್ತಿ ಚಿತ್ರಗಳನ್ನು ಬರೆದರು. ಮನುಷ್ಯನ ಕತೆ ಎಂಬ ಅವರ ಒಂದು ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ಕನ್ನಡ ಸಾಹಿತ್ಯ ಪರಿಷತ್ತು ವಿಜ್ಞಾನ ಲೇಖಕ ಡಾ. ಟಿ.ಆರ್. ಅನಂತರಾಮು ಅವರ ಸಂಪಾದಕತ್ವದಲ್ಲಿ ಹೊರತಂದ “ಕನ್ನಡದಲ್ಲಿ ವಿಜ್ಞಾನ – ತಂತ್ರಜ್ಞಾನ ಸಾಹಿತ್ಯ” ಎಂಬ ಸಂಗ್ರಾಹ್ಯ ಕೃತಿಯಲ್ಲಿ ಕೃಷ್ಣ ಭಟ್ಟರು “ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ – ಆರಂಭದ ಹೆಜ್ಜೆಗಳು” ಮತ್ತು “ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಪತ್ರಿಕೆಗಳು” ಎಂಬ ಎರಡು ಅಮೂಲ್ಯ ಲೇಖನಗಳನ್ನು ಬರೆದಿದ್ದಾರೆ. ರಾಷ್ಟ್ರೀಯ ವಿಜ್ಞಾನ ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಕೊಡುವ ರಾಷ್ಟ್ರೀಯ ಪ್ರಶಸ್ತಿಯನ್ನು 1996ರಲ್ಲಿ ಪಡೆದವರು ಅಡ್ಯನಡ್ಕರು. ಆ ಸರಣಿಯ ಮೊದಲ ವರ್ಷದ ಪ್ರಶಸ್ತಿಯನ್ನು ಪಡೆದದ್ದು ಅವರೇ ಕಟ್ಟಿ ಬೆಳೆಸಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು.

1996ರಲ್ಲಿ ನಿವೃತ್ತರಾದ ಮೇಲೆ ತನ್ನ ವಿಶ್ರಾಂತ ಜೀವನವನ್ನು ನಡೆಸಲು ಅವರು ಆರಿಸಿಕೊಂಡದ್ದು ಮೈಸೂರನ್ನು. ಕಳೆದ ಮೂರ್ನಾಲ್ಕು ವರ್ಷಗಳಿಂದ ಅಡ್ಯನಡ್ಕರು ವಯೋಸಹಜ ಸಮಸ್ಯೆಗಳಿಂದ ನರಳಬೇಕಾಗಿ ಬಂದಿತ್ತು. ಫೋನಿನಲ್ಲಿ ಹತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ಮಾತಾಡಿದರೂ ಅರ್ಧ ದಿನ ಕೂತು ಸುಧಾರಿಸಿಕೊಳ್ಳಬೇಕಾಗುತ್ತಿತ್ತು. ಓದು-ಬರವಣಿಗೆಗೆ ದೇಹ ಸಹಕರಿಸುತ್ತಿರಲಿಲ್ಲ. ಆದರೂ ವಿಜ್ಞಾನದ ಹೊಸ ಲೇಖಕರನ್ನು ಬಿಟ್ಟೂಬಿಡದೆ ಓದಿ ಚರ್ಚಿಸಿ ಬೇಕಾದ ಸಲಹೆ ಸೂಚನೆಗಳನ್ನು ತಪ್ಪದೆ ಕೊಡುತ್ತಿದ್ದರು. ನನ್ನ ಮೊದಲ ಐದು ವಿಜ್ಞಾನ ಕೃತಿಗಳು ಪ್ರಕಟವಾಗಿ ಓದುಗರ ಕೈಗೆ ಸಿಗುವ ಮೊದಲು ಅಡ್ಯನಡ್ಕರ ಕ್ಷಕಿರಣದಂಥ ಕಣ್ಣೋಟದ ಪರೀಕ್ಷೆಯಲ್ಲಿ ಗೆದ್ದು ಬಂದವೆಂಬುದು ನನಗೊಂದು ಹೆಮ್ಮೆಯ ವಿಷಯ. ಅವರ ನಿಧನದೊಂದಿಗೆ ನನ್ನದೇ ದೇಹದ ಒಂದು ಭಾಗವನ್ನು ಕಳೆದುಕೊಂಡಿದ್ದೇನೆಂಬ ಶೂನ್ಯಭಾವ ಕಾಡುತ್ತಿದೆ.

ಟಿಪ್ಪಣಿ
ವಿಜ್ಞಾನವೆಂದರೆ ಮೈಲಿಗೆಯೇ?
ವಿಪರ್ಯಾಸ ನೋಡಿ. ವಿಜ್ಞಾನ ಸಂವಹನದಲ್ಲಿ ದೇಶದಲ್ಲೇ ಅತ್ಯುತ್ತಮ ಕೆಲಸ ಮಾಡಿರುವ, ಮಾಡುತ್ತಿರುವ ಕನ್ನಡ ವಿಜ್ಞಾನ ಲೇಖಕರು ಕರ್ನಾಟಕದಲ್ಲಿ ಮಾತ್ರ ಅಸ್ಪರ್ಶ್ಯರು. ಕನ್ನಡ ಸಾಹಿತ್ಯ ಪರಿಷತ್ತು ವಿಜ್ಞಾನ ಸಾಹಿತ್ಯವನ್ನು ಒಂದು ಸಾಹಿತ್ಯ ಪ್ರಕಾರ ಎಂದು ಪರಿಗಣಿಸಿಯೇ ಇಲ್ಲ! ರಾಜ್ಯದಲ್ಲಿ ಪ್ರತಿ ವರ್ಷ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ವಿಜ್ಞಾನವನ್ನು ಚಪ್ಪರದಿಂದ ಹೊರಗೇ ನಿಲ್ಲಿಸಲಾಗುತ್ತದೆ. ವಿಜ್ಞಾನ ಲೇಖಕರು ಪುಸ್ತಕ ಕೊಳ್ಳುವ ಓದುಗರಿಗೆ ಆಪ್ತರಾಗುತ್ತಾರೆಯೇ ಹೊರತು ಸಮ್ಮೇಳನದ ಸಂಘಟಕರಿಗಲ್ಲ. ಸಮ್ಮೇಳನದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಗೋಷ್ಠಿಗಳನ್ನು ಆಯೋಜಿಸಲಾಗುವುದಿಲ್ಲ. ವಿಜ್ಞಾನ ಬರೆವ ಲೇಖಕರನ್ನೂ ಸಮ್ಮೇಳನಗಳ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬಹುದು ಎಂದು ಹೇಳಿದರೆ ಬಹುಶಃ ಪರಿಷತ್ತಿನ ಅಧ್ಯಕ್ಷರು ತಲೆ ತಿರುಗಿ ಬೀಳಬಹುದೇನೋ! ಯಾಕೆ ಈ ಮಾತು ಹೇಳಬೇಕಾಗಿದೆ ಎಂದರೆ, ವಿಜ್ಞಾನ ಸಾಹಿತ್ಯಕ್ಕಾಗಿ ತನ್ನ ಬದುಕಿನ ಐದು ದಶಕಗಳನ್ನು ಮೀಸಲಿಟ್ಟ ಅಡ್ಯನಡ್ಕ ಕೃಷ್ಣ ಭಟ್ಟರಿಗೆ ಅವರ ಜೀವಿತದಲ್ಲಿ ಒಂದೇ ಒಂದು ಸಾಹಿತ್ಯ ಪ್ರಶಸ್ತಿಯನ್ನು ಕನಾಟಕ ಸರಕಾರ ನೀಡಲಿಲ್ಲ. ಪ್ರಶಸ್ತಿ ರಾಜಕೀಯ ಮತ್ತು ಲಾಬಿಗಳಿಗೆ ಅತೀತರಾಗಿದ್ದ; ಅಂಥವನ್ನೆಲ್ಲ ಎಂದೂ ಮಾಡದ ಅಡ್ಯನಡ್ಕರು ಸರಕಾರೀ ಪ್ರಶಸ್ತಿಗಳನ್ನೊಂದನ್ನೂ ಪಡೆಯದೆ ಹೋದದ್ದು ಕನ್ನಡಿಗರ ಮಟ್ಟಿಗೆ ದೌರ್ಭಾಗ್ಯವಲ್ಲವೆ? ಈ ಉಪೇಕ್ಷೆ ಇಂದು ನಿನ್ನೆಯದಲ್ಲ. ವಿಜ್ಞಾನ ಸಾಹಿತ್ಯಕ್ಕೆ ಕೊಡುಗೆ ಕೊಟ್ಟ ಬಿ.ಜಿ.ಎಲ್. ಸ್ವಾಮಿ, ಕೃಷ್ಣಾನಂದ ಕಾಮತ್, ಅನುಪಮಾ ನಿರಂಜನ, ರಾಜಶೇಖರ ಭೂಸನೂರಮಠ, ಜೆ.ಆರ್. ಲಕ್ಷ್ಮಣರಾವ್, ಡಿ.ಆರ್. ಬಳೂರಗಿ, ಟಿ.ಆರ್. ಅನಂತರಾಮು, ನಾಗೇಶ ಹೆಗಡೆ – ಈ ಯಾರನ್ನೂ ಸಾಹಿತ್ಯ ಅಕಾಡೆಮಿಯಾಗಲೀ ಕನ್ನಡ ಸಾಹಿತ್ಯ ಪರಿಷತ್ತಾಗಲೀ ಕರ್ನಾಟಕ ರಾಜ್ಯ ಸರಕಾರವಾಗಲೀ ಸರಿಯಾದ ಮರ್ಯಾದೆ ಕೊಟ್ಟು ಗೌರವಿಸಲಿಲ್ಲ ಎಂಬುದು ಬೇಸರದ ಸಂಗತಿ.

(25 ಡಿಸೆಂಬರ್ 2016ರಂದು ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ಲೇಖನದ ಪೂರ್ಣಪಾಠ)

ಚಿತ್ರ ಕೃಪೆ :- ಉದಯವಾಣಿ

3 ಟಿಪ್ಪಣಿಗಳು Post a comment
  1. Sowmya
    ಡಿಸೆ 28 2016

    superb article.

    ಉತ್ತರ
  2. latha
    ಡಿಸೆ 28 2016

    ಕನ್ನಡ ನಾ ಬಲ್ಲೆ ಆದರೂ ನಾನು ಜ್ಞಾನಿ ಅಲ್ಲ
    ನಿಮ್ಮ ನಿಲುಮೆ ಯಿಂದ ಪಡೆದ ಜ್ಞಾನ ತುಂಬಾ ಅಪಾರ
    ವಂದನೆಗಳು”’ಕೆಲವೊಮ್ಮೆಓದಲು ಸಮಯದ ಅಭಾವ ಕ್ಷಮೆ ಇರಲಿ

    ಉತ್ತರ
  3. Chandru tumkur
    ಡಿಸೆ 28 2016

    ನನ್ನ ವಿಜ್ಞಾನ ಶಿಕ್ಷಕ ನನ್ನನ್ನಾಗಿಸಿದ್ದು ಬಾಲ ವಿಜ್ಞಾನ ಅಂಕಣಗಳು.ur article super.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments