ಲಘು ಹರಟೆ: ಡಿಮಾನಿಟೈಸಷನ್ನೂ, ಅಜೈಲ್ ಪ್ರೊಜೆಕ್ಟೂ..
– ನಾಗೇಶ ಮೈಸೂರು
ಪೆಚ್ಚು ಮೋರೆ ಹಾಕಿಕೊಂಡು ಸುಟ್ಟ ಬದನೆಯ ಮುಖ ಹಾಕಿಕೊಂಡು ಬರುತ್ತಾ, ಎದುರು ಸಿಕ್ಕಿದ ಗುಬ್ಬಣ್ಣನನ್ನು ಕಂಡು ಮರುಭೂಮಿಯಲ್ಲಿ ಓಯಸಿಸ್ ಕಂಡಂತಾಗಿ ‘ ಹಲೋ ಗುಬ್ಬಣ್ಣ..!’ ಎಂದೆ ತುಸು ಉದ್ವೇಗದ ದನಿಯಲ್ಲಿ.
‘ನಮಸ್ಕಾರ ಸಾರ್..’ ಅಷ್ಟೇ ನೀರಸ ದನಿಯಲ್ಲಿ ಗುಬ್ಬಣ್ಣನ ಮಾರುತ್ತರ.. ಸಂವೇರ್ ಸಂಥಿಂಗ್ ಈಸ್ ರಾಂಗ್.. ಹಾಳು ಸಿಂಗಪುರದ ಬಿಸಿಲು ಕಾಡಿ ನಲುಗಿಸಿಬಿಟ್ಟಿರಬೇಕು..
‘ತುಂಬಾ ಬಿಸಿಲು ಅಲ್ವಾ.. ಬಾ ಹೋಗಿ ಒಂದೊಂದು ಎಳನೀರು ಆದರು ಕುಡಿಯೋಣ.. ಮುಖವೆಲ್ಲ ಬಾಡಿ ಹೋಗಿದೆಯಲ್ಲೋ..?’ ಅಂದೆ.
‘ಅಯ್ಯೋ ಅದು ಬಿಸಿಲಿಗೆ ಬಾಡಿದ್ದಲ್ಲ ಸಾರ್.. ಹಾಳು ಅಪ್ಕಮಿಂಗ್ ಇಂಡಿಯಾ ಟ್ರಿಪ್ ಪ್ರಭಾವ… ಸುತ್ತಿ ಸುತ್ತಿ ಸಾಕಾಗೋಯ್ತು.. ಆದರೂ ನೋ ಸಕ್ಸಸ್..’
ಕ್ರಿಸ್ಮಸ್ ಹತ್ತಿರವಾಗುತ್ತಿದ್ದ ಹಾಗೆ ಸ್ಕೂಲಿನ ರಜೆಗಳು ಶುರುವಾಗೋ ಕಾರಣ ಆ ವೇಳೆಯಲ್ಲೇ ಸುಮಾರು ಜನ ಇಂಡಿಯಾ ಟ್ರಿಪ್ ಹಾಕುವುದು ಮಾಮೂಲಿ ಸಂಗತಿ. ಆದರೆ ಅದಕ್ಕೆ ಸುತ್ತಿ ಬಳಲಬೇಕಾದ್ದು ಯಾಕೋ ಗೊತ್ತಾಗಲಿಲ್ಲ.
‘ಅಲ್ಲಾ ಗುಬ್ಬಣ್ಣ, ಈ ಟೈಮಿನ ಟ್ರಿಪ್ಪು ಮಾಮೂಲಿನದ್ದಲ್ವಾ ? ಪ್ರತಿ ವರ್ಷ ಇದ್ದದ್ದೇ ತಾನೇ ? ಇಷ್ಟೊಂದು ಸುಸ್ತು ಹೊಡೆಸೋದು ಏನಾಯ್ತು ಈ ಸಾರಿ ?’
‘ಅಯ್ಯೋ.. ಎಲ್ಲಾ ಹೊಸ ನೋಟಿನ ಮೋಡಿ ಸಾರ್.. ಊರಿಗೆ ಹೋಗೋಕೆ ಮುಂಚೆ ಕೈಯಲ್ಲಿ ಹೊಸ ನೋಟಿರಬೇಕಲ್ವಾ ? ಜತೆಗೆ ಚಿಲ್ಲರೆನು ಇರ್ಬೇಕಲ್ವಾ? ಅದಕ್ಕೆ ಒಂದ್ ಸ್ವಲ್ಪ ಮೊದ್ಲೇ ಎಕ್ಸ್ ಚೇಂಜು ಮಾಡಿಕೊಂಡು ಹೋಗೋಣ ಅಂತ ಎಲ್ಲಾ ಮನೀ ಚೇಂಜರುಗಳ ಹತ್ರ ಬೆಳಿಗ್ಗೆಯಿಂದ ಒಂದೇ ಸಮ ಸುತ್ತುತಾ ಇದೀನಿ ಸಾರ್.. ಒಬ್ಬರ ಹತ್ರಾನಾದ್ರು ಸಿಗಬಾರದಾ ?’ ಗುಬ್ಬಣ್ಣನ ದನಿಯಲ್ಲಿ ನಿರಾಶಾಪೂರ್ಣ ಹತಾಶೆ ತುಂಬಿ ತುಳುಕುತ್ತಿತ್ತು.
ಅವನ ಕಷ್ಟ ಗೊತ್ತಾಗದ್ದೇನಲ್ಲ. ಏರ್ಪೋರ್ಟಿನಲ್ಲಿ ಇಳಿದ ಮೇಲೆ ಕನಿಷ್ಠ ಬಸ್ಸು, ಟ್ಯಾಕ್ಸಿಗಾಗುವಷ್ಟಾದರೂ ದುಡ್ಡು ಕೈಲಿರದಿದ್ದರೆ ಊರು, ಮನೆ ತಲುಪಿಕೊಳ್ಳುವುದು ಹೇಗೆ ? ಈಗ ಕೈಲಿರುವ ದುಡ್ಡೆಲ್ಲ ಬರಿ ಹಳೇ ಐನೂರು, ಸಾವಿರದ್ದೇ ಜಾಸ್ತಿ. ಅದನ್ನು ಬದಲಿಸಿಕೊಳ್ಳೋ ಕೆಲಸ ಇನ್ನೊಂದು ತಲೆನೋವು..
ಎನಿವೇ ಫಸ್ಟ್ ಥಿಂಗ್ಸ್ ಫಸ್ಟ್…..
‘ಅಯ್ಯೋ ಮಂಕೆ ಹಾಗಂತ ಮೊದಲೇ ಹೇಳಬಾರದಿತ್ತಾ? ನಮ್ಮ ಮನೆ ಹತ್ರ ನನಗೆ ಗೊತ್ತಿರೋ ಮನಿ ಚೇಂಜರ್ ಹತ್ರ ಅಷ್ಟಿಷ್ಟು ಕೊಡಿಸ್ತಿದ್ನಲ್ಲಾ? ಇನ್ನು ಸಿಕ್ಕಿಲ್ಲಾಂದ್ರೆ ಹೇಳು, ಟ್ರೈ ಮಾಡೋಣ.. ಸಿಕ್ದಷ್ಟು ಸಿಗಲಿ..’
‘ಅಯ್ಯೋ ಸಿಕ್ದಷ್ಟು ಕೊಡ್ಸಿ ಪುಣ್ಯ ಕಟ್ಕೋಳಿ ಸಾರ್..’ ಅಂದವನನ್ನ ನೇರ ಸಂದಿಯಲ್ಲಿದ್ದ ಅಂಗಡಿಯತ್ತ ಕರೆದೊಯ್ದೆ. ಆ ಓಣಿಗಲ್ಲಿಯ ರೂಪನ್ನು ನೋಡುತ್ತಲೇ, ‘ಸಾರ್.. ಇದೇನ್ ಒರಿಜಿನಲ್ ಅಂಗಡಿನಾ ? ಗೋಲ್ಮಾಲ್ ಕೇಸಾ?’ ಎಂದ ಅನುಮಾನದಲ್ಲಿ.
‘ಅಯ್ಯೋ.. ಬಾರಪ್ಪ ಇಷ್ಟು ಬೇಗ ಹೊಸ ನೋಟನ್ನ ಯಾರು ಕೋಟಾ ಮಾಡೋಕೆ ಆಗಲ್ಲ.. ವಿತ್ ರಿಸಿಪ್ಟ್ ಕೊಡಿಸ್ತೀನಿ ಬಾ..’ ಎಂದೆ
ಅಲ್ಲೇನು ಕ್ಯೂ ಇರಲಿಲ್ಲ.. ಇರುವ ನಾಲ್ಕು ಕೌಂಟರ್ನಲ್ಲಿ ಒಂದರ ಮುಂದೆ ನಿಂತು ಅನುಮಾನದಲ್ಲೇ ಕೇಳಿದ ಗುಬ್ಬಣ್ಣ. ಒಳಗಿದ್ದ ಪಾರ್ಟಿ ‘ಸಾರ್.. ಎಷ್ಟು ಬೇಕಾದ್ರೂ ಕೊಡ್ತೀನಿ .. ಆದ್ರೆ ಚಿಲ್ರೆ ಮಾತ್ರ ಕೇಳ್ಬೇಡಿ.. ಓನ್ಲಿ ಟೂ ಥೌಸಂಡ್ ರುಪೀ ನೋಟ್ಸ್’ ಎಂದ..
ಒಂದು ಸಾರಿ ನನ್ನ ಮುಖ ನೋಡಿದ ಗುಬ್ಬಣ್ಣ… ನಾನು, ‘ಸದ್ಯಕ್ಕೆ ಕೈಲಿ ಹೊಸ ನೋಟು ಬರಲಿ.. ಚಿಲ್ಲರೆ ವಿಷಯ ಅಲ್ಲಿಗೆ ಹೋದ ಮೇಲೆ ನೋಡಿಕೋ.. ಒನ್ ಬ್ಯಾಟಲ್ ಅಟ್ ಎ ಟೈಮ್..’ ಎಂದೆ.
ಸದ್ಯ ಎರಡು ಸಾವಿರದ ನೋಟಾದ್ರೂ ಸಿಕ್ಕಿತಲ್ಲ ಅಂತ ಸಮಾಧಾನದ ನಿಟ್ಟುಸಿರಿನೊಂದಿಗೆ ವೀರಾಸಾಮಿ ರಸ್ತೆಯ ಹತ್ತಿರ ಕೆತ್ತಿದ ಎಳನೀರು ಬುರುಡೆಯಿಂದ ಸೊರಸೊರ ಹೀರುತ್ತಾ ನಿಂತ ಹೊತ್ತಲ್ಲಿ ಮತ್ತೆ ಬಾಯಿ ತೆರೆದ ಗುಬ್ಬಣ್ಣ..’ ಸಾರ್.. ಚಿಲ್ರೆಗೆ ಭಾರಿ ತಾಪತ್ರಯ ಇದೆ ಅಂತ ಹೇಳ್ತಾ ಇದಾರೆ ಎಲ್ಲಾ.. ಹೆಂಗೆ ಸಾರ್ ಮ್ಯಾನೇಜು ಮಾಡೋದು.. ಟ್ಯಾಕ್ಸಿ, ಆಟೋದೋರೆಲ್ಲ ಚಿಲ್ರೆ ಇಲ್ಲ ಅನ್ನೋ ನೆಪದಲ್ಲೇ ಜಾಸ್ತಿ ಬೋಳಿಸ್ತಾರೋ ಏನೋ..’ ಅಂದ.
‘ಅಯ್ಯೋ ಮಂಕೆ.. ಅದಕ್ಯಾಕೆ ಇಷ್ಟು ತಲೆ ಕೆಡಿಸ್ಕೊತಿ ? ಇಳಿತಿದ್ದ ಹಾಗೆ ಏರ್ಪೋರ್ಟಾಚೆ ಇರೊ ಯಾವ್ದಾದ್ರು ಅಂಗಡಿಗೆ ಹೋಗಿ ಇನ್ನೂರು, ಮುನ್ನೂರುಕ್ಕೆ ಏನಾದ್ರೂ ತೊಗೊ.. ಆಗ ಎರಡು ಸಾವಿರಕ್ಕೆ ಚಿಲ್ರೆ ಸಿಗುತ್ತೆ.. ಅದರಲ್ಲಿ ಮನೆಗೆ ತಲುಪಿಕೊಬೋದ ? ಮಿಕ್ಕಿದ್ದು ಆಮೇಲೆ… ಆಟೋದವರು, ಬಸ್ಸವರು, ತರಕಾರಿ ಅಂಗಡಿ, ಚಿಲ್ರೆ ಅಂಗಡಿಗಳ ಹತ್ರ ಹತ್ತು, ಐವತ್ತು, ನೂರು ರೂಪಾಯಿ ನೋಟು ಓಡಾಡುತ್ಲೆ ಇರುತ್ತೆ.. ಎಲ್ಲ ತಾನಾಗ್ತಾನೆ ನಡ್ಕೊಂಡ್ ಹೋಗುತ್ತೆ..’ ಅಂದೆ.
‘ನಾನು ಅದೇ ಅನ್ಕೊಂಡಿದೀನಿ ಸಾರ್.. ಆದ್ರೆ ಅಲ್ಲಿ ಹೋದ್ಮೇಲೆ ಏನಾಗುತ್ತೋ ಗೊತ್ತಿಲ್ಲ. ಇದರ ಜತೆಗೆ ನನ್ ಹತ್ರನು ಒಂದಷ್ಟು ಐನೂರು, ಸಾವಿರದ ಹಳೆ ನೋಟುಗಳು ಬೇರೆ ಮಿಕ್ಕೊಂಡ್ಬಿಟ್ಟಿವೆ.. ಅದನ್ನ ಬದಲಾಯಿಸಬೇಕು.. ಅದಕ್ಕೇನೇನು ಗಾಳಿಗಂಟು ಮಾಡ್ಬೇಕೊ ಗೊತ್ತಿಲ್ಲ.. ಎಲ್ಲದಕ್ಕೂ ಲಿಮಿಟ್ಟು ಅಂತ ಬೇರೆ ಹಾಕ್ಬಿಟ್ಟಿದ್ದಾರೆ.. ಹೋಗಿದ್ದೆ ಬರಿ ಬ್ಯಾಂಕ್ ಕ್ಯೂನಲ್ಲಿ ನಿಂತ್ಕೊಳೋದೆ ಆಗುತ್ತಾ ಅಂತ ಅನುಮಾನ ಆಗ್ತಿದೆ ಸಾರ್..’ ಗುಬ್ಬಣ್ಣ ತೋಡಿ ರಾಗದಲ್ಲಿ ತನ್ನ ಗೋಳು ತೋಡಿಕೊಂಡ.
ಇದು ವಿದೇಶದಲ್ಲಿ ಹಳೆ ಕರೆನ್ಸಿ ಇಟ್ಕೊಂಡಿದ್ದವರ ಪಾಡು.. ಊರಿಗೆ ಓಡಾಡುವಾಗ ಎಮರ್ಜನ್ಸಿಗೆ ಇರಲಿ ಅಂತ ಒಂದಷ್ಟು ಕೈಲಿಟ್ಟುಕೊಂಡಿರೋದು ಅಭ್ಯಾಸ. ಈಗ ಅದನ್ನು ಊರಿಗೆ ಹೋದಾಗಲೇ ಬದಲಾಯಿಸಿಕೊಬೇಕು, ವಿದೇಶದಲ್ಲಿ ಇರೊ ಕಡೆ ಸಾಧ್ಯವಾಗೋಲ್ಲ.
‘ಎಷ್ಟು ಇದೆಯೋ ಗುಬ್ಬಣ್ಣ ?’ ಎಂದೆ…
‘ಒಂದು ಮೂವತ್ತು ನಲ್ವತ್ತು ಸಾವಿರ ಇರ್ಬೇಕು ಸಾರ್.. ಹೋದ ಸಾರಿ ವಾಪಸ್ ಬರೋ ಹೊತ್ತಲ್ಲಿ ಏನೋ ಪರ್ಚೆಸಿಂಗ್ ಅಂತ ಕನ್ವರ್ಟ್ ಮಾಡಿಟ್ಟುಕೊಂಡಿದ್ದೆ; ಆದರೆ ಆ ಡೀಲ್ ಆಗಲಿಲ್ಲ. ಸರಿ ನೆಕ್ಸ್ಟ್ ಟೈಮ್ ಉಪಯೋಗಿಸ್ಕೊಂಡ್ರೆ ಆಯ್ತು ಅಂತ ತೊಗೊಂಡ್ ಬಂದ್ಬಿಟ್ಟೆ.. ಈಗ ನೋಡಿದ್ರೆ ಡಿಮಾನಿಟೈಸೇಶನ್ ಆಗಿ ಎಲ್ಲ ‘ಹಳೆ ಪೇಪರ್ ಖಾಲಿ ಸೀಸ’ ಆಗೋಗಿದೆ ಸಾರ್..’
‘ಅಯ್ಯೋ ಅದೇನು ದೊಡ್ಡದಲ್ಲ ಬಿಡೋ.. ಲೋಕಲ್ ಜನರಿಗೆ ಎರಡೂವರೆ ಲಕ್ಷದ ತನಕ ಡೆಪಾಸಿಟ್ ಮಾಡಬೋದು… ನಿಂದು ಎನ್ನಾರೈ ಸ್ಟೇಟಸ್ ಅಲ್ವಾ ? ಲಿಮಿಟ್ ಜಾಸ್ತಿ ಇರುತ್ತೆ.. ಹೋಗಿ ಇರೋದನ್ನೆಲ್ಲ ನಿನ್ನ ಎನ್ನಾರ್ವೋ ಅಕೌಂಟ್ಗೆ ಮೊದ್ಲು ಡೆಪಾಸಿಟ್ ಮಾಡ್ಬಿಡು ಅಷ್ಟೆ..’ ಅಂದೆ ತುಸು ಸಮಾಧಾನಿಸುವ ದನಿಯಲ್ಲಿ.
‘ ಹಾಕೋದೇನೋ ಸರಿ.. ಇನ್ನು ತೊಗೊಳೋ ಕಥೆ ಹೇಳಿ ಸಾರ್.. ಎಟಿಎಂಲೆಲ್ಲ ಎರಡೂ ಮೂರೋ ಸಾವ್ರ ಅಷ್ಟೆ ಅಂತಲ್ಲ ದಿನಕ್ಕೆ ? ಕೌಂಟರ್ಲು ವಾರಕ್ಕೆ ಇಪ್ಪತ್ನಾಲ್ಕು ಸಾವ್ರ ಮಾತ್ರ ಅಂತೆ..?’
‘ಪೆದ್ದು, ಅದು ಲೋಕಲ್ ಅಕೌಂಟ್ ಲೆಕ್ಕಾಚಾರಕ್ಕೆ ಕಣೋ. ಎನ್ನಾರೈಗೆ ಡೈಲಿ ಲಿಮಿಟ್, ವೀಕ್ಲಿ ಲಿಮಿಟ್ ಎರಡೂ ಜಾಸ್ತಿ ಇದೆ..’
‘ನಿಮಗ್ಹೇಗೆ ಗೊತ್ತು ಸಾರ್.. ಅಷ್ಟು ಖಡಾಖಂಡಿತವಾಗಿ ಹೇಳ್ತಿದಿರಿ ?’ ಗುಬ್ಬಣ್ಣನಿಗಿನ್ನು ಅನುಮಾನವೇ.
‘ಹೋದ ವಾರ ತಾನೆ ಅಲ್ಲಿಂದ ಬಿಸಿನೆಸ್ ಟ್ರಿಪ್ ಮುಗಿಸಿ ವಾಪಸ್ ಬಂದ್ನಲ್ಲೋ… ನಾನು ಡೆಪಾಸಿಟ್ ಮಾಡ್ಬೇಕಿತ್ತು, ಎಕ್ಸ್ಚೇಂಜ್ ಕೂಡ ಮಾಡ್ಬೇಕಿತ್ತು.. ಆಗೆಲ್ಲ ವಿಚಾರಿಸ್ಕೊಂಡ್ ಬಂದಿದ್ದು..’ ಎಂದಾಗ ಸ್ವಲ್ಪ ನಂಬಿಕೆ ಬಂತು ಅಂತ ಕಾಣುತ್ತೆ.
‘ಒಹ್ ! ಹೌದಲ್ಲಾ ಸಾರ್…! ಹೇಗಿತ್ತು ಸಾರ್ ನಿಮ್ಮನುಭವ ? ಕ್ಯೂಲಿ ನಿಂತ್ಕೊಂಡು ಒದ್ದಾಡಿದ್ರಾ ಹೇಗೆ ?’
‘ನೋಡೋ ಗುಬ್ಬಣ್ಣ.. ನಾನು ನಿನ್ ತರಾನೇ ಏನೇನೋ ಕಲ್ಪನೆ ಮಾಡ್ಕೊಂಡು ಹೋಗಿದ್ದೆ.. ಆದ್ರೆ ನಿಜ ಹೇಳ್ಬೇಕಂದ್ರೆ ನಾನಿದ್ದ ಸಾಲಲ್ಲಿ ಇದ್ದೋರೆ ಏಳೆಂಟು ಜನ.. ಹತ್ತೇ ನಿಮಿಷದಲ್ಲಿ ಕೆಲಸ ಮುಗ್ದು ಹೋಗ್ತಿತ್ತು – ಆ ಇನ್ವೆಸ್ಟ್ಮೆಂಟ್ ಏಜೆಂಟುಗಳ ಜತೆ ಸಿಕ್ಕಾಕೊಳ್ದೆ ಇದ್ರೆ…’
‘ಅಂದ್ರೆ?’
‘ಇನ್ನೇನು.. ? ಎನ್ನಾರೈ ಅಂದ ತಕ್ಷಣ ‘ಆ ಸ್ಕೀಮ್ ಇದೆ, ಈ ಸ್ಕೀಮ್ ಇದೆ, ಪರ್ಫೆಕ್ಟ್ ಟೈಮ್ ಫಾರ್ ಇನ್ವೆಸ್ಟ್ಮೆಂಟ್’ ಅಂತೆಲ್ಲ ಹಿಂದೆ ಬೀಳ್ತಾರಲ್ಲಾ.. ಯಾವ್ದ್ಯಾವ್ದೋ ಫಾರಂ ಫಿಲಪ್ ಮಾಡಿಸ್ಕೊತಾ ಎಲ್ಲಾ ವಿಚಾರಿಸ್ಕೊಂಡ್ರು.. ನಾನು ಏನೋ ಒಂದು ಹೇಳಿ ತಪ್ಪಿಸ್ಕೊಂಡು ಎದ್ದು ಬಂದೆ ನನ್ ದುಡ್ಡು ತೊಗೊಂಡು..’
‘ಏನ್ ಸಾರ್.. ಹಂಗಾದ್ರೆ ಒಂಚೂರು ತೊಂದ್ರೇನೇ ಆಗ್ಲಿಲ್ವಾ ?’ ತುಸು ಅಚ್ಚರಿಯಲ್ಲೇ ತೆರೆದ ಬಾಯಿ ತೆರೆದ ಹಾಗೆ ಕೇಳಿದ ಗುಬ್ಬಣ್ಣ
‘ಆಗ್ಲಿಲ್ಲ ಅಂತಲ್ಲ ಗುಬ್ಬಣ್ಣ… ಆಯ್ತು.. ಆದ್ರೆ ಪ್ರಾಣ ಹೋಗೋಂತಾದ್ದೇನು ಆಗ್ಲಿಲ್ಲ ಬಿಡು..’ ಎಂದೆ
‘ಅದೇನಾಯ್ತು ಬಿಡಿಸಿ ಹೇಳಿ ಸಾರ್.. ನನಗು ಪ್ರಿಪೇರ್ ಆಗಿರೋಕೋ ಹೆಲ್ಪ್ ಆಗುತ್ತೆ..’
‘ಏನಿಲ್ಲ ಕಣೋ.. ನಿನಗೀಗಾಯ್ತಲ್ಲ ಅದೇ ಪ್ರಾಬ್ಲಮ್.. ಬರಿ ಎರಡು ಸಾವಿರದ ನೋಟು ಮಾತ್ರ ಕೊಟ್ರು.. ಸ್ವಲ್ಪ ಚಿಲ್ರೆ ಕೊಡಿ ಅಂದ್ರು ಇಲ್ಲ ಅಂದ್ಬುಟ್ರು..’
‘ಸರಿ ಬಿಡಿ.. ನೀವು ಇನ್ವೆಸ್ಟ್ ಮಾಡ್ಲಿಲ್ಲ ಅನ್ನೋ ಕೋಪನಾ ಚಿಲ್ರೆ ಕೊಡ್ದೆ ತೀರಿಸ್ಕೊಂಡಿದಾರೆ..’
‘ಅಯ್ಯೋ ಇನ್ವೆಸ್ಟ್ಮೆಂಟ್ ಮಾತ್ಬಿಡು.. ಹದಿನೈದು ವರ್ಷದ ಹಿಂದೆ ಇಲ್ಲಿಂದ ಡಾಲರ್ ತೆಗೆದು ಅಲ್ಲಿ ಇನ್ವೆಸ್ಟ್ ಮಾಡಿದ್ದೆ. ಮೆಚ್ಯುರ್ ಆದ್ಮೇಲೆ ಸೂಪರ್ ರಿಟರ್ನ್ಸ್ ಅಂತ ಹೇಳಿ ೫೦% ರಿಟರ್ನ್ಸ್ನೇ ದೊಡ್ಡದು ಅನ್ನೋ ಹಾಗೆ ತೋರಿಸ್ಬಿಟ್ರು. ನಾನು ಎಕ್ಸ್ಚೇಂಜ್ ರೇಟು ಲೆಕ್ಕ ಹಾಕಿ ನೋಡಿದ್ರೆ, ಇನ್ವೆಸ್ಟ್ ಮಾಡದೇನೆ ಹಾಗೆ ಇದ್ದಿದ್ರೆ ೧೦೦% ರಿಟರ್ನ್ ಬಂದಿರೋದು. ಆಮೇಲೆ ತಲೆತಲೆ ಚಚ್ಕೊಂಡೆ.. ಏನ್ ಸುಖ? ಅದು ಬಿಟ್ಟಾಕು. ನಾ ಹೇಳಿದ ಹಾಗೆ ಮಾಡು.. ಅಲ್ಲಿ ಇಲ್ಲಿ ಸಣ್ಣ ಪುಟ್ಟ ಪ್ರಾಬ್ಲಮ್ ಇದೆ ಅನ್ನೋದು ಬಿಟ್ರೆ ಪ್ರಾಣ ಹೋಗೋ ಅಂತಾದ್ದೇನು ಇಲ್ಲ.. ಎಲ್ಲಾ ಮಾಮೂಲಾಗೇ ನಡ್ಕೊಂಡ್ ಹೋಗ್ತಾ ಇದೆ..’
‘ಹಾಗಂತೀರಾ..?’
‘ನಾನು ಮೊದ್ಮೊದ್ಲು ಚಿಲ್ರೆ ಕಲೆಕ್ಟ್ ಮಾಡೋಕ್ ಶುರು ಮಾಡಿದ್ದೆ.. ನೋಡ್ತಾ ನೋಡ್ತಾ ಜೇಬಲ್ಲಿ ಜಾಗನೆ ಇಲ್ದೆ ಅದನ್ನ ಮೊದ್ಲು ಖಾಲಿ ಮಾಡ್ಬೇಕಾಯ್ತು.. ನನ್ನ ಹಾಗೆ ಎಷ್ಟೋ ಜನ ಇರ್ಲಿ ಅಂತ ಇಟ್ಕೊಂಡಿರೋರು ಜಾಸ್ತಿ ಆದಾಗ ಚಲಾಯಿಸಲೇ ಬೇಕಲ್ವಾ? ಸೊ ಚಿಲ್ರೆ ಸಿಗುತ್ತೆ ಮಧ್ಯೆ ಮಧ್ಯೆ ಕಷ್ಟ ಆದ್ರೂನು..’
‘ನಿಮ್ ಮಾತ್ ಕೇಳಿ ಅರ್ಧಕ್ಕರ್ಧ ಸಮಾಧಾನ ಆಯ್ತು ಸಾರ್.. ಆದರು ಈಚೆಗೆ ಆಗ್ತಾ ಇರೊ ಐಟಿ ರೈಡ್, ಸಿಗ್ತಾಯಿರೋ ಹೊಸನೋಟು ನೋಡ್ತಾ ಇದ್ರೆ ಈ ಡಿಮಾನಿಟೈಸಷನ್ ಇಂಪ್ಲಿಮೆಂಟೇಷನ್ಲಿ ಏನೋ ಎಡವಟ್ಟಾಯ್ತು ಅಂತ ಅನಿಸೋದಿಲ್ವಾ ?’ ಅಂತ ಏಕ್ದಂ ಪರ್ಸನಲ್ ಲೆವೆಲ್ಲಿನಿಂದ ನ್ಯಾಷನಲ್ ಲೆವೆಲ್ ಸುದ್ದಿಗೆ ಬಂದ್ಬಿಟ್ಟ ಗುಬ್ಬಣ್ಣ..
ನಾನು ಒಂದರೆಗಳಿಗೆ ಅವನ ಮುಖ ನೋಡುತ್ತಾ, ‘ಗುಬ್ಬಣ್ಣ, ಈ ರೈಡು, ಸೀಜು, ಓಕೇ, ನಾಟ್ ಓಕೆ ಎಲ್ಲಾ ಸೋಷಿಯಲ್ ಮೀಡಿಯಾ, ಪೇಪರುಗಳಲ್ಲಿ ರೀಮುಗಟ್ಲೆ ಓಡಾಡಿಬಿಟ್ಟಿವೆ.. ಅದನ್ನೆಲ್ಲ ಬಿಟ್ಟು ಒಂದು ಬೇರೆ ಆಂಗಲ್ನಲ್ಲಿ ಯೋಚಿಸಬೇಕಾದ ಒಂದು ವಿಷ್ಯ ಹೇಳಲಾ ? ಅದು ಕೇಳಿದ ಮೇಲೆ ಇಂಪ್ಲಿಮೆಂಟೇಷನ್ ಸರಿಯೋ, ಬೆಸವೋ ನೀನೆ ಡಿಸೈಡ್ ಮಾಡ್ಕೋ..’
‘ಹೇಳಿ ಸಾರ್.. ನಿಮ್ಮ ಪೀಠಿಕೆ ನೋಡಿದ್ರೆ ಏನೋ ಸೀರಿಯಸ್ ಆಗಿ ಹೇಳೋಕ್ ಹೊರಟ ಆಗಿದೆ..’
‘ಒಂತರ ಸೀರಿಯಸ್ ಅಂತಲೇ ಇಟ್ಕೋ.. ಆದ್ರೆ ಮೊದ್ಲು ನಿನ್ನ ಕೆಲವು ಪ್ರಶ್ನೆ ಕೇಳ್ತೀನಿ – ಪ್ರಾಜೆಕ್ಟ್ ಮ್ಯಾನೇಜ್ಮೆಂಟಿಗೆ ಸಂಬಂಧಿಸಿದ್ದು.. ನೀನು ಐಟಿ ಪ್ರಾಜೆಕ್ಟ್ ಗಳಲ್ಲೇ ಕೆಲಸ ಮಾಡ್ತಿರೋನು.. ಸೊ, ನಿನಗೂ ಸುಲಭದ ಪ್ರಶ್ನೆಗಳು.. ಇದಕ್ಕೆ ಉತ್ತರ ಹೇಳಿದ್ರೆ ನಿನ್ನ ಪ್ರಶ್ನೆಗೂ ಉತ್ತರ ಸಿಗುತ್ತೆ..’ ಎಂದೆ
‘ಸರಿ ಕೇಳಿ ಸಾರ್.. ನೀವು ಹೇಳ್ತಿರೋದ್ರಲ್ಲೇ ಏನೋ ಸ್ಪೆಷಲ್ ಲಾಜಿಕ್ ಇರೋ ಹಾಗಿದೆ..’
‘ಪ್ರಾಜೆಕ್ಟ್ ಮ್ಯಾನೇಜ್ಮೆಂಟಲ್ಲಿ ನೀನು ಬಳಸೋ ವಿಧಾನಗಳು ಯಾವ್ಯಾವ್ದಪ್ಪ ? ಹಳೇದು, ಹೊಸದು ಎರಡು ಹೇಳು..’
‘ನಮ ಐಟಿಲಿ ಇದು ಹೇಳೋದು ಸುಲಭ ಅಲ್ವಾ.. ಮೊದಲಿಂದಲೂ ಬಳಸ್ತಾ ಇರೊ ‘ವಾಟರ್ ಫಾಲ್ ಮೆಥಡ್’ ಮತ್ತೆ ಈಚೆಗೆ ಜಾಸ್ತಿ ಬಳಸ್ತಾ ಇರೊ ‘ಅಜೈಲ್ ಅಪ್ರೋಚ್’ – ಇವೆರಡೇ ತಾನೆ ?’ ಎಂದ ಗುಬ್ಬಣ್ಣ
‘ಸರಿ.. ಅವೆರಡಕ್ಕೂ ಇರೋ ವ್ಯತ್ಯಾಸ ಹೇಳ್ತೀಯಾ ?’
‘ಏನು ಮಾಡಬೇಕು ಅನ್ನೋದು ನಿರ್ದಿಷ್ಠವಾಗಿ ಗೊತ್ತಿದ್ದಾಗ ಅದರ ಪೂರ್ತಿ ಯೋಜನೆ (ಪ್ಲಾನ್) ತಯಾರಿಸಿಕೊಂಡು, ಟೈಮ್ ಎಷ್ಟು, ಬಜೆಟ್ ಎಷ್ಟು, ಸ್ಕೋಪ್ ಎಷ್ಟು ಅಂತೆಲ್ಲ ಗ್ಯಾರಂಟಿ ಮಾಡ್ಕೊಂಡು ಒಂದು ಶುರು ದಿನಾಂಕ ಮತ್ತೆ ಮುಗಿಸೋ ದಿನಾಂಕ ಲೆಕ್ಕ ಹಾಕಿ ಅದರ ಪ್ರಕಾರ ಇಡೀ ತಂಡನ ಆ ಗುರಿಗೆ ನಡೆಸೋದು.. ಇದು ವರ್ಷಾನುಗಟ್ಟಲೇ ಬೇಕಾದ್ರೂ ನಡೀಬಹುದು. ಇದರಲ್ಲಿ ಮುಖ್ಯವಾದ ಅಂಶ ಏನು ಅಂದ್ರೆ ಎಲ್ಲಾನು ನಿಖರವಾಗಿ ನಿರ್ಧರಿಸಿಕೊಂಡು ಅದರ ಪ್ರಕಾರನೇ ಮಾಡ್ಕೊಂಡು ಹೋಗೋದು. ಅಂತಿಮ ಫಲಿತಾಂಶ ಸಿಗೋದು ಮಾತ್ರ ಕೊನೆಲಿ .. ಅಲ್ಲೀತನಕ ಪ್ರಾಜೆಕ್ಟ್ ನಡೀತಾನೇ ಇರ್ಬೇಕು ಉದ್ದಕ್ಕೂ ಅಡ್ಜೆಸ್ಟ್ ಮಾಡ್ಕೋತಾ ..’
‘ಯಾಕೆ ಅಡ್ಜೆಸ್ಟ್ ಮಾಡ್ಕೊಳ್ತಾ ನಡೀಬೇಕು ಹೇಳು ?’
‘ಇನ್ನೇನು ? ಚೇಂಜ್ ಈಸ್ ದಿ ಓನ್ಲಿ ಕಾನ್ಸ್ಟಂಟ್ ಥಿಂಗ್… ಬದಲಾವಣೆಯೇ ಜಗದ ನಿಯಮ.. ಪ್ಲಾನ್ ಮಾಡಿದ್ದೆಲ್ಲ ಈ ಕಾರಣದಿಂದ ಬದಲಾಗ್ತಾ ಹೋಗ್ಬೇಕಾಗುತ್ತೆ.. ಅದ್ರಿಂದ ತಾನೆ ಟೈಮು, ಬಜೆಟ್ಟು, ಸ್ಕೋಪು ಎಲ್ಲಾ ಬದಲಾಗ್ತಾ ಹೋಗೋದು ? ಶುರುನಲ್ಲಿ ಗಣಪತಿ ಮಾಡೋಕೋ ಹೊರಟ್ರು ಕೊನೇಲೀ ಅವರಪ್ಪ ಆಗೋ ಪರಿಸ್ಥಿತಿ ಬರೋದು..? ಅದೇನೇ ಇದ್ರೂ ಗುರಿ ಏನು ಅಂತ ಮತ್ತೆ ಅದನ್ನ ತಲುಪೋ ದಾರಿ ಏನು ಅಂತ ಚೆನ್ನಾಗಿ ಗೊತ್ತಿದ್ರೆ ಎಲ್ರು ಮಾಡೋದು ವಾಟರ್ಫಾಲ್ ಮೆಥೆಡ್ನಲ್ಲೇ..’
‘ಪರ್ವಾಗಿಲ್ಲ.. ಒಳ್ಳೆ ಪ್ರಾಜೆಕ್ಟ್ ಮ್ಯಾನೇಜರು ನೀನು.. ಚೆನ್ನಾಗಿ ಅನುಭವ ಆಗಿದೆ ನಿನಗೆ… ಈಗ ಅಜೈಲ್ ಮೆಥಡ್ ಹೇಗೆ ಡಿಫರೆಂಟ್ ಅಂತ ಹೇಳಿಬಿಡು ಮತ್ತೆ ?’
‘ಮೊಟ್ಟಮೊದಲನೆಯದಾಗಿ, ಕಟ್ಟಕಡೆಯ – ಅಂತಿಮಗುರಿ ಏನೂ ಅಂತ ಗೊತ್ತಿದ್ರು, ತಲುಪೋ ದಾರಿ ಅಸ್ಪಷ್ಟ; ಅನಿರ್ದಿಷ್ಟತೆ ಅರ್ಥಾತ್ ಅನ್ಸರ್ಟನಿಟಿ ಅದರ ಮುಖ್ಯ ಗುಣ. ಹೀಗಾಗಿ ಮೊದಲೇ ಎಲ್ಲಾನು ಪ್ಲಾನ್ ಮಾಡೋಕೆ ಆಗೋಲ್ಲ.. ಗೊತ್ತಿದ್ದಷ್ಟು ಪ್ಲಾನ್ ಮಾಡಿ ಅದರ ಅಳತೆಯಲ್ಲೇ ಮಧ್ಯಂತರ ಫಲಿತಾಂಶ ಬರೋ ಹಾಗೆ ಮಾಡ್ಕೊಂಡು, ಅದರ ಆಧಾರದಲ್ಲೇ ಮುಂದಿನ ಪ್ಲಾನ್ ಮಾಡ್ತಾ ಮತ್ತೊಂದು ಇಂಟರಿಂ ಫಲಿತಾಂಶಕ್ಕೆ ಕಣ್ಣಿಡಬೇಕು. ಹೀಗೆ ಕತ್ತಲಲ್ಲಿ ಕಣ್ಣುಕಟ್ಟಿ ಬಿಟ್ಟ ಹಾಗೆ ನಡೀತಾ ಚೂರುಪಾರು ಕಾಣೋ ಬೆಳಕಲ್ಲೇ ದಾರಿ ಮಾಡ್ಕೋತಾ ಕೊನೆತನಕ ಮುಂದುವರಿಬೇಕು. ಇಲ್ಲಿ ರಿಸಲ್ಟಿಗೋಸ್ಕರ ವರ್ಷಾನುಗಟ್ಟಲೆ ಕಾಯೋ ಹಾಗಿಲ್ಲ. ಚೂರುಚೂರಾಗಿ, ಉದ್ದಕ್ಕೂ ಫಲಿತಾಂಶ ಬರ್ತಾ ಇರುತ್ತೆ.. ಆದರೆ ಉದ್ದಕ್ಕೂ ಏನು ಮಾಡ್ಬೇಕು, ಏನು ಮಾಡ್ತೀವಿ ಅನ್ನೋ ನಿಖರತೆ ಇರಲ್ಲ.. ಆ ಗಳಿಗೆ, ಸಂಧರ್ಭ ನೋಡಿ ಡಿಸೈಡ್ ಮಾಡಿ ಮುಂದುವರಿಬೇಕು.. ಅದಕ್ಕೆ ಹಾದಿಯುದ್ದಕ್ಕೂ ಅಸ್ಪಷ್ಟತೆ ಗೊಂದಲ ಜಾಸ್ತಿ.. ಆದ್ರೆ ಜತೆಜತೆಗೆ ಸ್ವಲ್ಪ ಸ್ವಲ್ಪ ರಿಸಲ್ಟ್ ಬರ್ತಾ ಇರೋದ್ರಿಂದ ಪೂರ್ಣ ಫಲಿತಕ್ಕೆ ಕೊನೆತನಕ ಕಾಯೋ ಅಗತ್ಯವಿರಲ್ಲ… ಜತೆಗೆ ಹೆಜ್ಜೆಹೆಜ್ಜೆಗೂ ಆಗ್ತಾ ಇರೊ ಪ್ರತಿ ಬದಲಾವಣೆಗೂ ಅಡ್ಜಸ್ಟ್ ಆಗೋ ತರ, ಪ್ಲಾನ್ ಅಡ್ಜಸ್ಟ್ ಮಾಡ್ಕೋತಾ ಹೋಗಬಹುದು… ಹೀಗಾಗಿ ಅಂತಿಮವಾಗಿ ಅಂದ್ಕೊಂಡಿದ್ದನ್ನ ಹೆಚ್ಚು ವ್ಯತ್ಯಾಸ ಇಲ್ದೆ ಸುಲಭದಲ್ಲಿ ಸಾಧಿಸಬಹುದು..’
‘ವೆರಿ ಗುಡ್… ಚೆನ್ನಾಗಿ ತಿಳ್ಕೊಂಡಿದೀಯಾ.. ಈಗ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಹೇಳು ಗುಬ್ಬಣ್ಣ.. ಡಿಮಾನಿಟೈಸಷನ್ ಕೂಡ ಗೋಪ್ಯತೆ ಜತೆ ಇಂತದ್ದೇ ಅನಿರ್ದಿಷ್ಟತೆ ಇರೋ ಪ್ರಾಜೆಕ್ಟ್ ಅಲ್ವಾ ? ಇಂಥ ಪ್ರಾಜೆಕ್ಟ್ ಗೆ ಯಾವ ಮೆಥಡ್ ಸೂಕ್ತ ಹೇಳು ವಾಟರ್ಫಾಲಾ ? ಅಜೈಲಾ?’
ಗುಬ್ಬಣ್ಣ ಒಂದರೆಗಳಿಗೆ ಮೌನವಾಗಿಯೆ ಯೋಚಿಸುತ್ತಿದ್ದವನು ನಂತರ ನುಡಿದ: ‘ಅಂದರೆ.. ನಮ್ಮ ಪಿಎಮ್ಮು, ಎಫ್ಎಮ್ಮುಗಳು ಇದನ್ನೊಂದು ಅಜೈಲ್ ಪ್ರಾಜೆಕ್ಟ್ ತರ ಮ್ಯಾನೇಜ್ ಮಾಡ್ತಾ ಇದಾರೆ ಅಂತೀರಾ?’
‘ನನಗಂತೂ ಅನುಮಾನವೇ ಇಲ್ಲ… ಪಿಎಮ್ಮು ಪ್ರಾಡಕ್ಟ್ ಮ್ಯಾನೇಜರ್ ಇದ್ದ ಹಾಗೆ, ಎಫ್ಎಮ್ಮು ಸ್ಕ್ರಮ್ ಮಾಸ್ಟರ್ ಇದ್ದಹಾಗೆ.. ಕೊನೆಗೇನು ಸಾಧಿಸಬೇಕು ಇಬ್ಬರಿಗೂ ಗೊತ್ತಿದ್ರು ದಾರಿ ಅಸ್ಪಷ್ಟ ಅಂತಲೂ ಗೊತ್ತು.. ಹೆಜ್ಜೆ ಹೆಜ್ಜೆಗೂ ದಾರಿ ಮಾಡ್ಕೋತಾ ಮುಂದೋಗ್ತಾ ಇದಾರೆ..’
‘ಅದಕ್ಕೇನೆ ದಿನಕ್ಕೊಂದೊಂದು ಹೊಸ ನಿರ್ಧಾರ, ಅಡ್ಜಸ್ಟ್ಮೆಂಟ್ ಮಾಡ್ಕೋಬೇಕಾಗಿರೋದು ಅಂತೀರಾ?’ ತನ್ನಲ್ಲೇ ಪ್ರಶ್ನಿಸಿಕೊಳ್ಳುವವನಂತೆ ಹೇಳಿದ ಗುಬ್ಬಣ್ಣ.
‘ನನಗನ್ನಿಸೋದು ಹಾಗೆ… ಹಾಗೆ ಮಾಡದೆ ವಾಟರ್ಫಾಲ್ ವಿಧಾನ ಹಿಡಿದ್ರೆ ಪಂಚವಾರ್ಷಿಕ ಯೋಜನೆ ತರ ಪ್ಲಾನ್ ಮಾಡೋದೇ ವರ್ಷಾನುಗಟ್ಟಲೆ ಆಗುತ್ತೆ.. ಅದು ಅನುಷ್ಠಾನಕ್ಕೆ ಬರೋದು ಇನ್ಯಾವಾಗಲೋ.. ಮಾಡಿದ ಪ್ಲಾನ್ ಎಲ್ಲಾ ಔಟ್ ಡೇಟೆಡ್ ಆಗಿಬಿಟ್ಟಿರುತ್ತೆ..! ಆದ್ರೆ ಈ ಅಜೈಲ್ ವಿಧಾನದಲ್ಲಿ ತೀರಾ ಚಂಚಲತೆ ಇರೋ ಹಾಗೆ ಕಂಡ್ರು ಬೇಗ ಫಲಿತಾಂಶ ಆದ್ರೂ ಗೊತ್ತಾಗುತ್ತೆ.. ಅನ್ಕೊಂಡ ಹಾಗೆ ನಡಿತಿದಿಯೊ, ಇಲ್ವೋ ಅಂತ…’
‘ನಿಮ್ಮ ಮಾತು ಕೇಳ್ತಾ ನನಗು ನಿಜ ಅನ್ಸುತ್ತೆ ಸಾರ್.. ಹಾಗೆ ನೋಡಿದ್ರೆ ಈ ವಿಧಾನದಲ್ಲೇ ಬೇಗ ಬಂಡವಾಳ ಗೊತ್ತಾಗೋದು.. ಆದರೆ ಇದು ನಿಜಕ್ಕೂ ಸಕ್ಸಸ್ಸೂ ಆಗುತ್ತೆ ಅಂತೀರಾ?’ ಅಂದ ಗುಬ್ಬಣ್ಣ.
‘ನೋಡೋ ಗುಬ್ಬಣ್ಣ.. ನಾವು ಮಾಡೋ ಎಲ್ಲಾ ಪ್ರಾಜೆಕ್ಟ್ ಸಕ್ಸಸ್ ಆಗುತ್ತೆ ಅನ್ಕೊಂಡೆ ಶುರು ಮಾಡ್ತೀವಿ.. ಆದರೆ ಹಾಗಿದ್ದೂ ಫೇಲ್ ಆಗಿರೋ ಕೇಸುಗಳಿಲ್ವಾ ? ಇದೂ ಹಾಗೇನೇ.. ಆಶಯ ಒಳ್ಳೇದು, ಐಡಿಯಾ ಒಳ್ಳೇದು ಅಂತ ಅನಿಸಿದ್ರೆ ಜಸ್ಟ್ ಎಂಜಾಯ್ ದಿ ಜರ್ನಿ. ಕೊನೆಯಲ್ಲಿ ಏನಾಗುತ್ತೋ ವಾದ, ವಿವಾದ ಮಾಡೋದರ ಬದಲು ಲೆಟ್ ಅಸ್ ವೇಟ್ ಆಂಡ್ ಸೀ.. ‘ಯಶಸ್ಸಾದರೆ ಪ್ರಗತಿ, ಇಲ್ಲದಿದ್ದರೆ ಕಲಿಕೆಯ ಮೇಲ್ಪಂಕ್ತಿ’ ಅನ್ಕೊಂಡು ಮುಂದುವರೆಯೋದು ಸರಿಯಲ್ವಾ..?’ ಎಂದೆ.
ಹೌದೆಂದು ತಲೆಯಾಡಿಸಿದ ಗುಬ್ಬಣ್ಣ, ‘ಸಾರ್.. ಈಗೆಷ್ಟೋ ನಿರಾಳ ಆಯ್ತು.. ಕೊನೆ ಮುಟ್ಟೋ ತನಕ ಅಪ್ಸ್ ಆಂಡ್ ಡೌನ್ಸ್ ಇದ್ದೆ ಇರುತ್ತೆ.. ಅದನ್ನ ಮಾಡ್ತಾ ಇರೊ ದೊಡ್ಡವರಿಗೆ ಬಿಟ್ಟು, ಟೈಮ್ ಕೊಟ್ಟು ಕಾಯೋಣ ಅನ್ನೋದು ನ್ಯಾಯವಾದ ಮಾತು… ನಾನು ಈಗ ಮೊದಲಿಗಿಂತ ನಿರಾಳ ಆಂಡ್ ಅಜೈಲ್ ಆಲ್ಸೋ..’ ಅಂದ.
‘ನಮ್ಮ ಜನಗಳು ಹೀಗೆ ಅಜೈಲ್ ಆಗಿ ಎಲ್ಲ ನೋಡಲಿ.. ತಕ್ಷಣದ ಅನುಕೂಲಕ್ಕಿಂತ ದೂರಗಾಮಿ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಳ್ಳಲಿ ಅಂತ ಹಾರೈಸೋಣ ಗುಬ್ಬಣ್ಣ’ ಎಂದೆ.
‘ಸರಿ ಸಾರ್.. ಏನಾಗುತ್ತೋ ಕಾದು ನೋಡೋಣ.. ನಾನು ಹೊರಟೆ’ ಎಂದು ಮೇಲೆದ್ದ.
ಅದುವರೆಗೂ ಸೋಮಾರಿಯಂತೆ ಕೂತಿದ್ದ ನಾನೂ ಮೇಲೆದ್ದೆ ಅಜಿಲಿಟಿಯಾ ಭೂತ ಮೈಗೆ ಹೊಕ್ಕವನ ಹಾಗೆ..!
ಚಿತ್ರ ಕೃಪೆ :- http://www.filosofia.org