ವಿಷಯದ ವಿವರಗಳಿಗೆ ದಾಟಿರಿ

ಜನವರಿ 2, 2017

4

ಮೋದಿ ಭಕ್ತರೇನು ಮುಟ್ಟಾಳರೇ..?

‍ನಿಲುಮೆ ಮೂಲಕ

– ಸಂತೋಷಕುಮಾರ ಮೆಹೆಂದಳೆ.

2( ತನ್ನ ನಂಬಿ ಹಿಂದೆ ಕರೆದೊಯ್ಯುವವನು ನಾಯಕನಾಗುವುದು ಸಹಜ. ಆದರೆ ಕ್ರಮೇಣ ಸಿದ್ಧಾಂತದಲ್ಲಿ ವೈಪರಿತ್ಯಗಳುಂಟಾಗಿ ಆ ನಾಯಕತ್ವ ಸಹಜವಾಗೇ ಕುಸಿಯುತ್ತದೆ. ಆದರೆ ತನ್ನ ನಂಬಿಕೆಗಳನ್ನು ಸಂಪೂರ್ಣ ಸಮೂಹದ ನಂಬಿಕೆಯನ್ನಾಗಿ ಪರಿವರ್ತಿಸೋದಿದೆಯಲ್ಲ ಅಂಥವನು ಶಾಶ್ವತವಾಗಿ ನಾಯಕನಾಗುತ್ತಾನೆ ಮತ್ತು ಆ ಸ್ಥಾನ ಅಬಾಧಿತ. ಹಾಗೆ ಜನರ ನಂಬುಗೆ ಮತ್ತು ವಿಶ್ವಾಸ ಎರಡನ್ನೂ ಗಳಿಸುವವನು ಮಿತ್ರರಷ್ಟೇ ಶತ್ರುಗಳನ್ನೂ ಗಳಿಸುತ್ತಾನೆ. ಕಾರಣ ಯಶಸ್ಸು ಎನ್ನುವುದು ಎಂಥವನ ನಿಯತ್ತನ್ನೂ ಹಾಳು ಮಾಡಿಬಿಡುತ್ತದೆ )

ಇವತ್ತು ರಾಜಕೀಯ ನೇತಾರರ ಬೆಂಬಲಿಗರು ಅವರವರ ನಾಯಕರನ್ನು ಬೆಂಬಲಿಸುವುದು ಮತ್ತು ಅವರ ಪ್ರತಿಯೊಂದು ನಡೆಗೂ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುವುದು ಸಹಜ ಮತ್ತು ಅಭಿಮಾನದ ದ್ಯೋತಕ ಕೂಡಾ. ಆದರೆ ಅವರವರ ಅಭಿಮಾನವನ್ನೇ ತಪ್ಪು ಅಥವಾ ಅವರ ಬೆಂಬಲಿಗರ ಪಡೆಯ ನಡೆಯೇ ಹಾಸ್ಯಾಸ್ಪದ ಎನ್ನುವಂತೆ ಎಲೆಲ್ಲೂ ಹುಯಿಲೆಬ್ಬಿಸುತ್ತಿರುವ ಸಂತತಿಯೇ ಎದ್ದು ನಿಂತಿದೆ. ಅದರಲ್ಲಿ ಪ್ರಮುಖವಾಗಿರುವುದೆಂದರೆ ಪ್ರಸ್ತುತ ಈ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಜೀಯವರ ಬೆಂಬಲಿಗರನ್ನು ಹಣಿಯುವುದಕ್ಕೆ ಕಾದಿರುವ ಪಡೆ.

ಇವತ್ತು ನಿಜವಾಗಿಯೂ ಈ ದೇಶದ ಪ್ರಧಾನಿಯ ಯಾವುದಾದರೊಂದು ನಡೆಯನ್ನು ಮೆಚ್ಚಿಕೊಂಡು ಇವೆರಡೂ ಪಂಗಡ ಆಚೆಗಿನವರೂ ಮೆಚ್ಚುಗೆ ಸೂಚಿಸುವಂತೆಯೇ ಇಲ್ಲ ಎಂಬಂತಾಗಿದೆ ಪರಿಸ್ಥಿತಿ. ಹಾಗಾದಲ್ಲಿ ಆತನೂ ಭಕ್ತನಾಗಿ ಬ್ರಾಂಡ್ ಆಗುತ್ತನಲ್ಲ. ಕಾರಣ ಹೆಚ್ಚಿನವರು ಭಕ್ತರು, ಮೋದಿ ಸರದಾರರು ಅಥವಾ ಅಚ್ಛೇ ದಿನ್ ಕಾರ್ಯಕರ್ತರು ಎಂಬ ದೃಷ್ಟಿಯಲ್ಲಿ ನೋಡಲಾಗುತ್ತಿದೆ ಮತ್ತು ಗುರುತಿಸಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ಇಲ್ಲಿಯವರೆಗೂ ಇದ್ದ ಹಳೆಯ ಅಧಿಕಾರ ಕೇಂದ್ರವನ್ನು ಬೆಂಬಲಿಸುತ್ತಿರುವವರಿಗೆ ಮತ್ತು ಈಗಲೂ ಶತಾಯಗತಾಯ ಮೋದಿಯವರನ್ನು ವಿರೋಧಿಸುತ್ತಿರುವವರಿಗೆ ಅವ್ರವರದ್ದೇ ಭಾಷೆಯಲ್ಲಿ ಉತ್ತರಿಸಲಾಗುತ್ತಿದೆ.. ಸದ್ಯಕ್ಕಿದು ನಿಲ್ಲುವ ಲಕ್ಷಣಗಳಿಲ್ಲ. ಇರಲಿ ಒಂದು ವಿಷಯಕ್ಕೆ ಪರ – ವಿರೋಧ ಮತ್ತು ಸೈದ್ಧಾಂತಿಕ ಸಂಘರ್ಷಗಳು ಅಥವಾ ಅವರವರ ಅಭಿಮಾನದ ಪರಾಕಾಷ್ಠೆಗಳು ಇದ್ದದ್ದೇ.. ಆದರೆ ಅದೇ ಚಟವಾಗಬಾರದು ಮತ್ತು ಎಲ್ಲಾ ಉದ್ದೇಶಕ್ಕೂ ಅದನ್ನೆ ಬಳಸಿಕೊಳ್ಳಬಾರದು ಕೂಡಾ ಅಲ್ಲವೇ..?

ಆದರೆ ಇದೇನಿದು ಓಲೈಕೆಯ ಪರಿ ಹೀಗೆಲ್ಲಾ ಬದಲಾಗುತ್ತದಾ..? ಗಮನಿಸಿ ನೋಡಿ. ನವಂಬರ್ 8 ರಂದು ನೋಟು ಬ್ಯಾನ ಆದದ್ದೇ ಆದದ್ದು. ಹೆಚ್ಚಿನ ಅಂಕಣಕಾರರು ಆವತ್ತಿನಿಂದ ಇವತ್ತಿನವರೆಗೆ ಅದರ ಬಗ್ಗೆ ಎಲ್ಲೆಲ್ಲಿ ಜನ ಸಾಲಾಗಿ ನಿಂತು ಸತ್ತರು, ಯಾರ ಮನೆಯಲ್ಲಿ ಮದುವೆ ನಿಂತು ಹೋಯಿತು (ಅಸಲಿಗೆ ಯಾವ ಮದುವೆಯೂ ನಿಂತ ದಾಖಲೆಗಳೇ ಇಲ್ಲ) ಯಾವ ಟ್ರಿಪ್ಪು ಕ್ಯಾನ್ಸಲ್ ಆಯಿತು..? ಯಾವ ಮನೆ ವಾಸ್ತು ಬದಲಿಸಬೇಕಾಯಿತು.. ಯಾರ ಮನೆ ಗೃಹ ಪ್ರವೇಶ ಮಾಡಲಾಗಲಿಲ್ಲ… ಯಾವ ಮನೆಗಳಲ್ಲಿ ಊಟಕ್ಕೆ ದುಡ್ಡೆ ಉಳಿದಿಲ್ಲ.. ಯಾರ್ಯಾರ ಮನೆಗಳಲ್ಲಿ ದವಸ ಧಾನ್ಯ ತರಲಾಗುತ್ತಿಲ್ಲ.. ಹೀಗೆ ತಮಗೆ ಅನ್ನಿಸಿದ್ದೆಲ್ಲಾ ಬರೆಯುವುದನ್ನೆ ಗುತ್ತಿಗೆ ಪಡೆದವರಂತೆ ಚೆಂದ ಚೆಂದ ಕತೆಗಳನ್ನು ಪೋಣಿಸುತ್ತಲೇ ಇದ್ದಾರೆ.. ತಪ್ಪೇನಿಲ್ಲ. ಅದೂ ಒಂದು ರೀತಿಯ ಅವರವರ ನಾಯಕನ ಅಭಿಮಾನದ ಪರಾಕಾಷ್ಠೆ.

ತಮಾಷೆಯೆಂದರೆ ಇಲ್ಲಿನ ವೈರುಧ್ಯ ನೋಡಿ. ಹೀಗೆ ಬರೆಯುತ್ತಿರುವವರಿಗೂ, ಅಪೂಟು ಸಮಾಜ ಸುಧಾರಿಸುತ್ತೇನೆಂದು ಹೊರಟು ನಿಂತವರಿಗೂ ವಾರದ ಕೊನೆಯ ಮೋಜು ಮಸ್ತಿಗೆ ಮಾತ್ರ ದುಡ್ಡು ಕಡಿಮೆಯಾಗಲಿಲ್ಲ. ಒಂದು ಚಲನಚಿತ್ರ ಗೆಲ್ಲಿಸಲು ನೂರು ಕೋಟಿ ಆದಾಯ ಮಾಡಿಕೊಡಲು ದುಡ್ಡು ಕಡಿಮೆಯಾಗಲಿಲ್ಲ. ಯಾವೆಲ್ಲಾ ಜಾತ್ರೆ ಮೆರವಣಿಗೆಗಳಲ್ಲಿ ನಾವು ಮಿಂಚಲು, ಅಲ್ಲಿ ತಿಂದು ತಿರುಗಿ ಕುಣಿದು ಕುಪ್ಪಳಿಸಲು ಎಲ್ಲೂ ನಮಗೆ ಚಿಲ್ಲರೆ ಅಭಾವವೇ ಆಗಲಿಲ್ಲ. ಆದರೆ ಬೇರೆಯವರ ಅಭಾವದ ಕತೆ ಮಾತ್ರ ಎದ್ದು ಕಾಣತೊಡಗಿದ್ದು ವಿಪರ್ಯಾಸ. ಇದಕ್ಕೆ ಪೈಪೋಟಿಯಾಗಿ ಗಟ್ಟಿ ದನಿಯಲ್ಲಿ ಕತ್ತಿನ ನರ ಉಬ್ಬಿಸಿಕೊಂಡು ನಿರೂಪಕಿಯರು,

“..ಸಾಲು ಕರಗದ ಏ.ಟಿಎಂ. ದುಡ್ಡು ಮಾತ್ರ ಸಿಗಲೇ ಇಲ್ಲ..”
“…ಸಾಲು ಸಾಲು ಜನ, ನಗದಿಗೆ ಮಾತ್ರ ಆಯ್ತು ಕೊರತೆ.. ”
“..ಇವತ್ತಿಗೆ ಒಂದು ತಿಂಗಳು, ಹಣ ಮಾತ್ರ ಸಿಗುತ್ತಲೇ ಇಲ್ಲ..”

ಎನ್ನುತ್ತಾ ಪ್ರತೀ ಚಾನೆಲ್ ಎರಡೂ ತುದಿಗೆ ಆತು ನಿಂತು ಕಿರುಚಿದ್ದೇ ಕಿರುಚಿದ್ದು. ಜೊತೆಗೆ ಪ್ರತಿ ಮಾತಿಗೊಮ್ಮೆ ಹಲ್ಲಿಯಂತೆ ಲೊಚಗುಟ್ಟುವ ಕೆಲವು ಕಲಾವಿದೆಯರು, “…ಇದೆಂಥಾ ಪರಿಸ್ಥಿತಿ ರೀ, ಮೋದಿ ಹಿಂಗೆಲ್ಲಾ ಮಾಡಬಾರದಿತ್ತು. ಪಾಪ ಅವ್ರಿಗೆ ದುಡ್ಡಿಲ್ವಂತೆ..” ಎನ್ನುತ್ತಾ ಫೋಸು ಕೊಟ್ಟಿದ್ದೇ ಕೊಟ್ಟಿದ್ದು. ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ “..ಮೋದಿ ಪಾಕಿಸ್ತಾನದಿಂದ ಬಂದ ರಹಸ್ಯ..” ಎಜೆಂಟ್ ಎಂಬ ಕತೆಗೂ, ಅವರ ದಾಡಿ ಬಿಟ್ಟ ಸ್ಟೈಲಿಗೂ, ಕೊನೆಗೆ ಅವರ ಬಾಲ್ಯಕಾಲದ ಇತಿಹಾಸ ಇಲ್ಲವೇ ಇಲ್ಲ ನೋಡಿ ಅದಕ್ಕೆ ಮೋದಿ ಹೊಸದಾಗಿ ಭಾರತದೊಳಕ್ಕೆ ಎಂಟ್ರಿ ಹೊಡೆದಿರುವ ಎಜೆಂಟ್! ಎಂಬಲ್ಲಿಗೂ ಬಂದು ನಿಂತಿತು ಚರ್ಚೆ. ಅದಕ್ಕೂ ಮುಂದಕ್ಕೆ ಹೋದ ಕೆಲವರಂತೂ ತಮಗೆ ಅಂಕಣವನ್ನು ಸಂಪಾದಕ ಯಾವ ವಿಷಯಕ್ಕಾಗಿ ಬರೆಯಲು ನಿಗದಿಪಡಿಸಿದ್ದಾರೆ ಎನ್ನುವುದನ್ನು ಮರೆತು ಬರೆಯಲು ಕೂತುಕೊಂಡು ಬಿಟ್ಟಿದ್ದಾರೆ.

ರಾಜ್ಯದ ಪ್ರಮುಖ ಪತ್ರಿಕೆಯ ಕೆಲವು ಅಂಕಣದಲ್ಲಿ ತಮ್ಮ ವಿಷಯವನ್ನೇ ಮರೆತು, ಮೋದಿ ಪ್ರತಿ ಮನೆಗಳ ಉರಿಯುವ ಒಲೆಯನ್ನೇ ನಂದಿಸಿದ್ದಾರೆ ಎನ್ನುವಂತಹ ಕರುಣಾಜನಕ ಕತೆ ಕಟ್ಟಲು ಆರಂಭಿಸಿದ್ದರು. ಅತ್ತ ಅಂಕಣಗಾರ್ತಿಯೊಬ್ಬರು ಯಾವ ಲೇಖನದ ಕನೆಕ್ಷನ್ನು ಎಲ್ಲಿಗೆ ಹೋಗುತ್ತದೋ ಎಂಬುದು ಗೊತ್ತಾಗದಂತೆ ಉದ್ದುದ್ದವಾಗಿ ಬರೆದು ಬೀಸಾಕಿದ್ದರು. ಅವರ ಬರಹದುದ್ದಕ್ಕೂ ಬರೆಯಬೇಕಾದ ಅಂಕಣದ ವಿಷಯಕ್ಕೂ ಕನೆಕ್ಷನ್ನೇ ಇರಲಿಲ್ಲ. ಎಲ್ಲಾ ಅಂಕಣಗಾರರು ಮೋದಿಯನ್ನು ಜರಿಯುತ್ತಿದ್ದಾರೆ ನಾನೂ ಜರೆಯಬೇಕು ಅಥವಾ ವಿಶ್ಲೇಷಿಸಬೇಕು.. ಅಷ್ಟೆ..! ಎಲ್ಲರೂ ತಮ್ಮನ್ನು ತಾವು ಪ್ರಗತಿಪರರು ಎಂದು ಬಿಂಬಿಸಿಕೊಳ್ಳುತ್ತಾ ಥಾನುಗಟ್ಟಲೇ ನೋಟು ನಿಷೇಧ ವಿರೋಧಿಸುವ ಬರಹ ಬರೆಯುವಾಗ ಇದೆಲ್ಲಿದು.. ತಗಿ, ಅಂತಾ ಅಂಕಣದ ಸಬ್ಜಕ್ಟೇ ಬಿಟ್ಟಾಕಿ ಎಲ್ಲಿಂದೆಲ್ಲಿಗೋ ಕನೆಕ್ಷನ್ ತೆಗೆದುಕೊಂಡು ನೋಟ್ ಬ್ಯಾನ್ – ಬ್ಯಾನ್ ಎಂದು ಬರೆದು ಅಯ್ಯಪ್ಪ ಎಂದು ಉಸಿರ್ಗೆರೆದುಕೊಂಡಿದ್ದೂ ಆಯಿತು.

ಇನ್ನೊಬ್ಬ ಬರೆಯುವ ಭರದಲ್ಲಿ ನೋಟು ಹಿಂಪಡೆತದ ನಂತರ, ಎಲ್ಲಿವರೆಗೆ ಸಾರ್ವಜನಿಕರು ವಾಪಸ್ಸು ಜಮೆ ಮಾಡಬಹುದು ಎನ್ನುವ ಮಾಹಿತಿ ಇಲ್ಲದೆ ಕಾಲಚಕ್ರವನ್ನೇ ಒಂದು ತಿಂಗಳ ಹಿಂದಕ್ಕೆ ಒಯ್ದು ನಿಲ್ಲಿಸಿದ್ದರು. ಅಂತೂ ಸಂಪಾದಕರು ಮರುದಿನ ಮಧ್ಯ ಪ್ರವೇಶಿಸಿ ದಿನಾಂಕ ಸರಿಪಡಿಸಿ ತಿಳಿಯಾಗಿಸಿದರು. ಮೊದಲೇ ಹಗ್ಗ ಹಾವಾಗಿದೆ ಎಂಬಂತೆ ಸಾರ್ವಜನಿಕರನ್ನು ತಪ್ಪು ದಾರಿಗೆಳಸುವಾಗ ನೋಟು ಸರೆಂಡರ್ ತಾರೀಕನ್ನೇ ಬದಲಿಸಿ ಇಟ್ಟುಬಿಟ್ಟರೆ ಪತ್ರಿಕೆ ಮತ್ತು ಅಂಕಣವನ್ನು ಗಂಭೀರವಾಗಿ ತೆಗೆದುಕೊಳ್ಳುವ ಜನ ಸಾಮಾನ್ಯ ಏನು ಮಾಡಬೇಕು. (ಇಲ್ಲಿ ಬೈ ಚಾನ್ಸ್ ದಿನಾಂಕ ತಪ್ಪಾಗಿದ್ದರೆ ಏನಾಯ್ತೀಗ ಎಂದು ವಕಾಲತ್ತಿಗೆ ಬರುವವರು ಇಲ್ಲದಿಲ್ಲ. ಆದರೆ ನೆನಪಿಟ್ಟುಕೊಳ್ಳಿ. ಒಂದು ಗಂಭೀರ ವಿಷಯದ ಬಗ್ಗೆ ನಿಖರ ಮಾಹಿತಿ ಇಲ್ಲದೆ ಬರೆಯಲು ಕೂರುವವರು ಅಂಕಣಗಾರನಂತೂ ದೂರ ಇರಲಿ, ಲೇಖನ ಬರೆಯೋದಕ್ಕೂ ಕೂರಬಾರದು ಎನ್ನುತ್ತೇನೆ ನಾನು) ಹೋಗಲಿ ಈ ಎಲ್ಲಾ ಕೇಸುಗಳಲ್ಲಿ ಆ ಸಂಪಾದಕರಾದರೂ ಏನು ಮಾಡುತ್ತಿದ್ದಾರೆ..? ಯಾವ ವಿಷಯ ಪ್ರಕಟಪಡಿಸಬೇಕು ಯಾವುದು ಬೇಡ ಎನ್ನುವುದನ್ನು ನಿರ್ಧರಿಸಲೇ ಅವರನ್ನು ಅಲ್ಲಿ ಕೂರಿಸಿದ ಮೇಲೆ, ಒಂದು ಲೇಖನ ಅದಕ್ಕೆ ಸಂಬಂಧಿಸಿದ್ದಾ ಇಲ್ಲವಾ ಎನ್ನುವುದನ್ನೂ ನೋಡುವುದಿಲ್ಲ ಎಂದಾದ ಮೇಲೆ ಅದ್ಯಾಕಾದರೂ ಜವಾಬ್ದಾರಿ ತೆಗೆದುಕೊಳ್ಳಬೇಕು..?

ಮೊನ್ನೆ ಮೊನ್ನೆ ನೋಟು ನಿಷೇಧ ಎನ್ನುವುದನ್ನು ಶತಾಯ ಗತಾಯ ಮೂರ್ಖ ನಿರ್ಧಾರ ಎನ್ನುವಂತೆ ಒಬ್ಬರು ಬರೆದದ್ದೂ ಅಲ್ಲದೆ ಅವರಿಂದ ಧಮಕಿಯನ್ನೂ ಎದುರಿಸಬೇಕಾಯಿತು. ಆಯಿತು ಸ್ವಾಮಿ ನಿಮ್ಮ ಅನಿಸಿಕೆ ಸರಿ. ಭಕ್ತರು ಕಾಲು ಕೆದರಿಕೊಂಡು ಬಂದು ನಿಮ್ಮನ್ನು ಅವಹೇಳನ ಮಾಡುತ್ತಾರೆ. ಅದಾಗಬಾರದು ನೇರ ಧನಾತ್ಮಾಕ ಚರ್ಚೆ ಮಾತ್ರ ನಿಮ್ಮ ಆಯ್ಕೆಯಾಗಿದ್ದರಿಂದ ನೀವು ಬಾಕಿದ್ದಕ್ಕೆ ಅವಕಾಶ ಇಲ್ಲ ಎಂದಿರಿ ಕರೆಕ್ಟೇ. ಆದರೆ ಪ್ರಧಾನಿಯ ನಿರ್ಧಾರವನ್ನು ತಪ್ಪು ಎಂದು ನೀವು ನಿರೂಪಿಸಲು ಕಾಲೂರಿ ನಿಂತು ಬಡಿದಾಡುವಾಗ, ಅದನ್ನು ಹೌದೆಂದು ನಿರೂಪಿಸುವ ಅವಕಾಶ ಬೇರೆಯವರಿಗೂ ಇದ್ದೇ ಇದೆ ಅಲ್ಲವಾ..?

ಅದಕ್ಕಾಗಿ ಎಲ್ಲರನ್ನೂ ಸಾರಾ ಸಗಾಟಾಗಿ ನೀವಾಳಿಸಿ ಎಸೆಯಲು ಮೋದಿಯನ್ನು ಬೆಂಬಲಿಸುತ್ತಿರುವ ಎಲ್ಲಾ ಅಭಿಮಾನಿಗಳು/ಭಕ್ತರು ಏನು ಮುಠ್ಠಾಳರಾ ಅಥವಾ ಭಕ್ತರಿಗೆಲ್ಲರಿಗೂ ಬುದ್ಧಿ ಇಲ್ಲವೆಂದಾ..? ಅಕಸ್ಮಾತ್ ನಿಮ್ಮ ಅನಿಸಿಕೆ ಮತ್ತು ಅವರೆಲ್ಲಾ ಭಕ್ತರು ಹೌದೇ ಅಂತಾದರೆ ಇಲ್ಲಿವರೆಗೆ ಇತಿಹಾಸದಲ್ಲಿನ ಪ್ರಧಾನಿಗಳನ್ನು ಅವರವರ ಶಕ್ತಾನುಸಾರ ಬೆಂಬಲಿಸಿ ಅಂಬಲಿಗೂ, ಗಂಜಿಗೂ ದಾರಿ ಮಾಡಿಕೊಂಡು ಕೂತಿದ್ದವರೆಲ್ಲಾ ಏನು ಪೂಜಾರಿಗಳಾ..? ಅರ್ಚಕರಾ..? ಇದೇನಿದು ತಾನು ಕುಡಿದರೆ ನೀರು, ಬೇರೆಯವರು ಕುಡಿದರೆ ನೀರಾ..?
ಇವತ್ತು ಸರಾಸರಿ 29 ವರ್ಷವಾದರೂ ಇನ್ನೂ ಸರಿಯಾಗಿ ಓದಿ ಮುಗಿಸದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯ(?) ಬೆಂಬಲಿಗೆ ನಿಲ್ಲುವ ಭಕ್ತರಿಗೂ ಇತರ ನಾಯಕನ ಭಕ್ತರಿಗೂ ವ್ಯತ್ಯಾಸವೇ ಇಲ್ಲವಾ..? ಇಂತಹ ಸಂದರ್ಭದಲ್ಲಿ ಇವತ್ತು ಅಂತಹದ್ದೇ ಒಂದು ಯುನಿವರ್ಸಿಟಿಯಿಂದ ಓದಿ ಹೊರಬಿದ್ದು, ಅವನಿಗಿಂತಲೂ ಕಿರಿಯನಾಗಿದ್ದರೂ ಜಗತ್ತಿನ ಅತ್ಯುತ್ತಮ ಕಂಪನಿಯೊಂದರ ಸಿ.ಈ.ಓ ಆಗಿರುವ ಪಿಚ್ಛಾಯಿಯ ನೆನಪು ಬರುವುದೇ ಇಲ್ಲ. ಬದಲಿಗೆ ದಶಕಗಳಿಂದ ಪಟ್ಟಭದ್ರರನ್ನು ಹಿಂಬಾಲಿಸಿ, ಬೊಗಸೆಯೊಡ್ಡಿ ನಿಂತು, ಕಳೆದ ಹಲವು ದಶಕಗಳಿಂದ ಶಕ್ತಾನುಸಾರ ದುಡಿಯುತ್ತಿರುವ ನಿಮಗೆ ಈಗ ಅದಕ್ಕೆ ಕುತ್ತು ಬಂದಿದ್ದೇ ಅದರ ರೋಷವೆಲ್ಲಾ ಭಕ್ತರ ಮೇಲೆ ತಿರುಗುತ್ತಿದೆ ಅಲ್ಲವಾ..?

ಆಯಿತು ಇವರೆಲ್ಲಾ ಭಕ್ತರು ಎಂತಾದರೆ, ನಿಮಗೆ ಬೇಕಾದ ನಾಯಕರ ಬೆಂಬಲಕ್ಕೆ ಧಾವಿಸುವ ನೀವು ಏನಾಗುತ್ತೀರಿ..? ಇದೆಲ್ಲಾ ಯಾಕೆ ಪ್ರಸ್ತಾಪಿಸಬೇಕಾಯಿತೆಂದರೆ ಒಂದು ದೇಶದ ಪ್ರಧಾನಿಯಾಗಬೇಕಾದರೆ ಸುಖಾ ಸುಮ್ಮನೆ ಆ ಮನುಶ್ಯ ಟೌನ್‍ಹಾಲ್ ಎದುರಿಗೆ ಟವಲು ಹಾಕಿ ಕೂತೆದ್ದು ಹೋಗಿ ದೆಹಲಿ ಗದ್ದುಗೆಯನ್ನು ಏರಿಲ್ಲ ಮತ್ತು ಈ ದೇಶದ ಯಾವ ಪ್ರಧಾನಿಯೂ ಸುಮ್ಮನೆ ಗದ್ದುಗೆ ಹತ್ತಿ ಕೂತಿಲ್ಲ.. ಹಾಗೆ ಕೂರಲು ಈ ದೇಶದ ಸೋಕಾಲ್ಡ್ ಗಿರಾಕಿಗಳೂ, ಇನ್ನಿತರರು ಸುಮ್ಮನೇ ಬಿಡುವುದೂ ಇಲ್ಲ ಎನ್ನುವುದು ನಿಮಗೂ ಗೊತ್ತಿಲ್ಲದ್ದೇನಲ್ಲ.

ಒಬ್ಬಾತ ಇವತ್ತು ಎಷ್ಟೇ ಶ್ರೀಮಂತನಿರಲಿ, ಬಡವನಿರಲಿ ಸುಮ್ಮನೆ ಗದ್ದುಗೆ ಹತ್ತುವ ಚಾನ್ಸೇ ಇಲ್ಲ. ಹಾಗಾಗುವುದೇ ಆದರೆ ಕೋಟ್ಯಾಂತರ ದುಡ್ಡಿರುವವರೆಲ್ಲರೂ ಈ ದೇಶದಲ್ಲಿ ಇನ್ನೇನಿಲ್ಲದಿದ್ದರೂ ನಂ ಒನ್. ಸಿನೇಮಾ ನಟರಾದರೂ ಆಗಬೇಕಿತ್ತು. ಅದೂ ಆಗಲಿಲ್ಲ. ನೆನಪಿರಲಿ ದುಡ್ಡು ಎಲ್ಲದಕ್ಕೂ ಬೇಕು ಆದರೆ ಎಲ್ಲವೂ ಅದೇ ಅಲ್ಲ. ಅದನ್ನು ತೂಗಿಸಿಕೊಂಡು ಅದರೊಂದಿಗಿರುವ ಜನಗಳನ್ನೂ ತನ್ನೊಂದಿಗೆ ಕರೆದೊಯ್ಯುವವ ಮಾತ್ರ ಗದ್ದುಗೆ ಹತ್ತುತ್ತಾನೆ. ಹೊರತಾಗಿ ಒಮ್ಮೆಲೆ ನೆಗೆದು ಕೂತಿರುವುದಿಲ್ಲ. ಹಾಗೆ ನೆಗೆದು ಕೂತಿರುವವರ್ಯಾರೂ ಪ್ರಧಾನಿಯ ಪಟ್ಟದಲ್ಲಿ ದೀರ್ಘ ಕಾಲ ಬಾಳಲೂ ಇಲ್ಲ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ.

ಇವತ್ತು ಪ್ರಧಾನಿಯ ಹಲವು ಕಸರತ್ತುಗಳ ಹಿಂದೆ ತಿಂಗಳಿಗೆ ಲಕ್ಷ ರೂ. ಸಂಬಳ ಬಿಟ್ಟು ಬಂದ ಯುವಕರಿದ್ದಾರೆ. ವಿದೇಶದಿಂದ ಬಂದು ಕೂತೆದ್ದು ಕೆಲಸ ಮಾಡುತ್ತಿರುವ ನೌಕರರಿದ್ದಾರೆ. ಸಾಲು ಸಾಲು ಅತಿ ಬುದ್ಧಿವಂತ ಅಧಿಕಾರಿಗಳು ನಿಸ್ಪೃಹರಾಗಿ ಕೆಲಸ ಮಾಡುತ್ತಿದ್ದಾರೆ. ಮನೆ ಮಠದ ಕಾಳಜಿ ಇಲ್ಲದೆ ಕಾಪ್‍ಗಳು ಅಲ್ಲಲ್ಲಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ದೇಶ ಕಾಯುತ್ತಿದ್ದಾರೆ. ಹಾಗೆಯೇ ನೋಟಿನ ರಾಮಾಯಣ ಕೂಡಾ ತಡೆಯುತ್ತಿದ್ದಾರೆ. ಇದರ ಜತೆಗೆ ದಿನಕ್ಕೆ ಕನಿಷ್ಟ ಇಪ್ಪತ್ತರಷ್ಟು ಜನ ದೂ. ವಾ. ಕರೆಮಾಡಿ ಈ ದೇಶದಲ್ಲಾಗುತ್ತಿರುವ ಹರಾಮಿತನಗಳ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ಕೊಡುತ್ತಿರುವ ನಿಷ್ಟಾವಂತ ನಾಗರಿಕರಿದ್ದಾರೆ. ಒಂದೇ ದಿನಕ್ಕೆ ಇನ್ನೂರು ಚಿಲ್ರೆ ಕಾಗದ ಬರೆಯುತ್ತಿರುವ ಅಸಹಾಯಕ ಭಾರತೀಯರಿದ್ದಾರೆ (ಹಿಂದಿನ ಯಾವ ಪ್ರಧಾನಿಯ ಕಾಲದಲ್ಲಿ ಹೀಗೆ ಕಾರ್ಯಾಲಯ, ಕನ್ನಡ ಶಾಲೆಯ ಮಕ್ಕಳ ಬರಹಕ್ಕೂ ಸ್ಪಂದಿಸಿದೆ ? ಒಮ್ಮೆ ನೆನಪಿಸಿಕೊಳ್ಳಿ) ನಿರಂತರವಾಗಿ ಛೇಂಜ್.ಆರ್ಗ್ ನಲ್ಲಿ ತಮ್ಮ ಅಭಿಪ್ರಾಯ ಮತ್ತು ಸಾರ್ವಜನಿಕ ಅಭಿಪ್ರಾಯ ದಾಖಲಿಸಿ ಈ ದೇಶದ ಹಲವು ದಶಕಗಳಲ್ಲಿ ಬದಲಾಗದ ವ್ಯವಸ್ಥೆಯ ವಿರುದ್ಧ ತಮ್ಮ ಅಭಿಪ್ರಾಯ ಮತ್ತು ಪಾಲಿಸಿ ಬದಲಾವಣೆಗೆ ಪ್ರಯತ್ನಿಸುತ್ತಿದ್ದಾರೆ.

ಇದೆಲ್ಲದಕ್ಕೂ ಮಿಗಿಲಾಗಿ ಈ ದೇಶದಲ್ಲಿ ಏನೂ ಬದಲಾವಣೆನೇ ಬರಲ್ಲ ಎಂದು ನಂಬಿಕೂತಿದ್ದು, ಬಂದಿದ್ದು ಬರಲಿ ಎಂದು ನಿರಾಶರಾಗಿ ಕೈ ಹೊತ್ತಿದ್ದವರೂ, ಇವತ್ತು ಏನಾದರೊಂದು ಆದೀತು ಎಂದು ಮೈ ಕೊಡವಿ ಎದ್ದು ನಿಂತಿದ್ದಾರೆ. ತೀರ ಭಾವುಕ ಮನಸ್ಸುಗಳು ಇಂತವನೊಬ್ಬ ನಮ್ಮ ದೇಶ ಉಳಿಸಕ್ಕೆ ಬಂದಿದಾನೆ ಎನ್ನುವಂತೆ ನಂಬಿ ತಮ್ಮ ಬದುಕು ಮರು ದೃಢೀಕರಣಗೊಳಿಸಿಕೊಳ್ಳುತ್ತಿದ್ದಾರೆ. ಇವರೆಲ್ಲ ಹಾಗೆ ನಂಬಿಕೊಂಡು ಮೋದಿಯ ಮಾತಿಗೆ ಕೈ ಎತ್ತಲು, ಮನತುಂಬಿ ಚಪ್ಪಾಳೆ ತಟ್ಟಲು ಏನು ಅವರ ಬಂಧುಗಳಾ..? ಊರ ಕಡೆಗಳಲ್ಲಿ ಎಷ್ಟೊ ಜನಕ್ಕೆ ಪ್ರಧಾನಿಯ ಮಾತು ತಲುಪಿಲ್ಲವಾದರೂ ಅವರ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡಿದ್ದಾರೆ. ಇದಲ್ಲವಾ ಬದಲಾವಣೆ ಹಾಗಿದ್ದರೆ..? ಇವರೆಲ್ಲಾ ಭಕ್ತರಾ.. ಅಥವಾ ಭಕ್ತರೂ ಮುಠ್ಠಾಳರಾ..? ಅವರಿಗೇನೂ ಬುದ್ಧಿ ಇಲ್ಲದೆ ಮೋದಿಯನ್ನು ಬೆಂಬಲಿಸುತ್ತಿದ್ದಾರಾ..?

ಒಪ್ಪುತ್ತೇನೆ.. ಭಕ್ತ ಗಣಗಳ ಆವೇಶ ಒಂದಿಷ್ಟು ಹೆಚ್ಚಾಗಿ ಖುಶಿಯಿಂದ ಹುಯಿಲೆಬ್ಬಿಸಿರಬಹುದು. ಅದರೇನಾಯಿತು..? ಹಿಂದೊಮ್ಮೆ ದೊಡ್ಡ ಮರವೊಂದು ಉರುಳಿದಾಗ ಭೂಮಿ ಕಂಪಿಸುವುದು ಸಹಜ ಎಂದು ಹೇಳಿದವರಾರು ಸ್ವಾಮಿ..? ಆದರೆ ಈಗ ನನಗೆ ಯಾವ ಭೂಕಂಪವಾಗಿದ್ದೂ ಕಂಪಿಸಿದ್ದೂ ಗೊತ್ತಿಲ್ಲ ಅಕಸ್ಮಾತ ಆದರೂ, ಮತ್ತೆ ಕಂಪಿಸಿದರೆ ನೀವೂ ಕೂಡಾ ಈಗ ತಡೆದುಕೊಳ್ಳಬೇಕಲ್ಲವಾ..? ಅದು ಬಿಟ್ಟು ಅವರೆಲ್ಲಾ ಭಕ್ತರು ಎಂದಾದ್ರೆ ನೀವೇನು…? ಸಧ್ಯ ಇವರೆಲ್ಲಾ ಇತ್ತಿಚಿನ ದಶಕದಲ್ಲಿ ಹುಟ್ಟಿಕೊಂಡವರು. ಆದರೆ ಹಾಗೆ ಭಕ್ತರಾಗಬಹುದು, ಫ್ಯಾನ್ ಫಾಲೋವಿಂಗ್ ಟ್ರೆಂಡ್ ಏನು ಎನ್ನುವುದನ್ನು ಕಳೆದ ಆರು ದಶಕಗಳಲ್ಲಿ ಇತರರು ಮಾಡಿ ಕಲಿಸಿದ್ದನ್ನೆ, ಮಾಡಿದ್ದನ್ನೆ ಈಗ ಅವರ ಬೆಂಬಲಿಗರು ಮಾಡುತ್ತಿದ್ದಾರೆ.. ಈಗ ಯಾರನ್ನು ಭಕ್ತರು ಎನ್ನೋಣ..? ಹಾಗಾದರೆ.. ? ಗ್ಲೋಬಲೈಜೆಶನ್ ಜಮಾನದಲ್ಲಿ ಯಾವನೂ ಕಣ್ಣು ಮುಚ್ಚಿ ಹಿಂಬಾಲಿಸುವುದಿಲ್ಲ. ನಾಯಕನಾಗಬೇಕಾದವನು ಕೋಟ್ಯಾಂತರ ಕಣ್ಣಿನ ನಿಗರಾಣಿಯಲ್ಲಿರುತ್ತಾನೆ ಹೊರತು ಭಕ್ತರೇನೂ ಅವನನ್ನು ರಕ್ಷಿಸುತ್ತಿರುವುದಿಲ್ಲ. ಅವನ ನಿಲುವನ್ನು ನಂಬಿ ಭಕ್ತರು ಹಿಂಬಾಲಿಸುತ್ತಾರೆ ಹೊರತಾಗಿ ಕಣ್ಮುಚ್ಚಿ ಜೈಕಾರ ಹಾಕಲು ಯಾವ ಭಕ್ತನೂ ಮುಠ್ಠಾಳನಲ್ಲ. ಆ ಕಾಲ ಯಾವತ್ತೋ ಮುಗಿದಿದೆ.

4 ಟಿಪ್ಪಣಿಗಳು Post a comment
  1. ಜನ 2 2017

    ಉತ್ತಮ ಲೇಖನ ಧನ್ಯವಾದ ನಿಲುಮೆ ಹಾಗೂ ಸಂತೋಷ್ ಸರ್

    ಉತ್ತರ
    • santoshkumar mehadnale
      ಜನ 6 2017

      ಥ್ಯಾಂಕ್ಯೂ ಸರ್ .. 🙂

      ಉತ್ತರ
  2. supreethps
    ಜನ 14 2017

    very authentic and truth thank you sir , India will change

    ಉತ್ತರ
  3. ವಿಶ್ವಮಾನವ
    ಫೆಬ್ರ 22 2017

    [ಯಶಸ್ಸು ಎನ್ನುವುದು ಎಂಥವನ ನಿಯತ್ತನ್ನೂ ಹಾಳು ಮಾಡಿಬಿಡುತ್ತದೆ] ಈಗ ಮೋದಿಯವರ ವಿಷಯದಲ್ಲಿ ಆಗಿರುವುದೂ ಇದೇ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments