ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ; ವಲಸಿಗರ ರಾಜ್ಯದ ನಾಯಕರನ್ನು ಪ್ರಶ್ನಿಸಬೇಕಾಗೈತಿ
– ರಾಕೇಶ್ ಶೆಟ್ಟಿ
ಕರ್ನಾಟಕ ರಾಜ್ಯದ ಖಾಸಗಿ ಕೈಗಾರಿಕೆಗಳಲ್ಲಿ (ಐಟಿ, ಬಿಟಿ ಹೊರತುಪಡಿಸಿ) ಶೇ 70 ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಕಡ್ಡಾಯವಾಗಿ ಕಲ್ಪಿಸಲು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರುವ ತಯಾರಿಯಲ್ಲಿ ರಾಜ್ಯ ಸರ್ಕಾರವಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಶೇ.70 ರಲ್ಲಿ ಸಿ ಮತ್ತು ಡಿ ಹುದ್ದೆಗಳಲ್ಲಿ ಶೇ 50, ಎ ಮತ್ತು ಬಿ ದರ್ಜೆಯ ಹುದ್ದೆಗಳಲ್ಲಿ ಶೇ 20 ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು ಎಂಬುದು ಪ್ರಸ್ತಾವನೆ. ಇನ್ನು “ಸ್ಥಳೀಯರು ಯಾರು?” ಎಂಬುದರ ಮಾನದಂಡವಾಗಿ ಕರ್ನಾಟಕದಲ್ಲಿ ಜನಿಸಿದವರು ಮತ್ತು ರಾಜ್ಯದಲ್ಲಿ ೧೫ ವರ್ಷಗಳ ಕಾಲವಿದ್ದು ಕನ್ನಡವನ್ನು ಮಾತನಾಡಲು, ಬರೆಯಲು, ಓದಲು ಕಲಿತವರನ್ನು ಪರಿಗಣಿಸಲಾಗುವುದು.
ಇಂತಹದ್ದೊಂದು ನಿರ್ಧಾರವಾಗಿದೆ ಎಂಬುದು ಕಿವಿಗೆ ಬಿದ್ದಾಗ, ನನ್ನ ಮೊದಲ ಪ್ರತಿಕ್ರಿಯೆ ಸರಿಯಾದ ನಿರ್ಧಾರ ಎನಿಸಿತ್ತು. ನಂತರ ಕುಳಿತು ಯೋಚಿಸಿದಾಗ ನನಗನ್ನಿಸಿದ್ದಿಷ್ಟು.
ಸಿ ಮತ್ತು ಡಿ ದರ್ಜೆಯ ಹುದ್ದೆಗಳು Skill ಬೇಡುವಂತಹ ಹುದ್ದೆಗಳಲ್ಲ, ಹೀಗಾಗಿ ಇಂತಹ ಹುದ್ದೆಗಳಲ್ಲಿ ಸ್ಥಳೀಯರಿಗೆ ಮೊದಲ ಪ್ರಾತಿನಿಧ್ಯ ಕೊಡುವುದು ಸರಿಯಾದ ನಿರ್ಧಾರವೇ. ಅಷ್ಟಕ್ಕೂ ಇಲ್ಲಿ ಕೇಳುತ್ತಿರುವುದು ಶೇ.50ರಷ್ಟು ಹುದ್ದೆಗಳನ್ನು ಮಾತ್ರವೇ ಹೊರತು ನೂರಕ್ಕೆ ನೂರರಷ್ಟಲ್ಲ. ಆದರೆ, ಈ ಶೇ.50ರ ಅನ್ವಯ ಸೇರಿಕೊಂಡವರಿಗೆಲ್ಲ ಕಂಪೆನಿಯ ನಿಯಮ ಒಂದೇ ರೀತಿ ಇರುವಂತೆ ನೋಡಿಕೊಳ್ಳಲೇಬೇಕು. ಇಲ್ಲವಾದರೆ, ಮುಂದೊಂದು ದಿನ ಈ ಕಾಯ್ದೆ ಯಾವುದಾದರೂ ಹಫ್ತಾ ವಸೂಲಿ ಸಂಘಟನಗೆಳ ಪಾಲಿಗೆ ದಾಳವಾಗಬಹುದು. ಇನ್ನುಳಿದಂತೆ ಶೇ.50ರಷ್ಟು ಸ್ಥಾನವಂತೂ ಉಳಿದ ರಾಜ್ಯಗಳ ಆಕಾಂಕ್ಷಿಗಳಿಗೆ ಸಿಗುವುದರಿಂದ ಇದರಲ್ಲೇನು ತಪ್ಪಿದೆ?
ಎ ಮತ್ತು ಬಿ ದರ್ಜೆಯ ಹುದ್ದೆಗಳಲ್ಲಿ ಶೇ.20 ರಷ್ಟು ಹುದ್ದೆಗಳನ್ನು ಮೀಸಲಿಡಬೇಕು ಎಂಬ ಇನ್ನೊಂದು ಪ್ರಸ್ತಾವನೆಗೂ ನನ್ನ ಬೆಂಬಲವಿದೆ. ಖಾಸಗಿ ರಂಗದಲ್ಲಿ ಹತ್ತು ವರ್ಷಗಳನ್ನು ಕಳೆದಿರುವ ನನ್ನ ಅನುಭವದ ಆಧಾರದ ಮೇಲೆ ನೋಡಿಯೇ ಈ ಮಾತನ್ನು ಹೇಳುತಿದ್ದೇನೆ. ಶೇ.20 ಮೀಸಲಿಡುವುದು ಒಳ್ಳೆಯ ನಡೆಯೇ. ನಮ್ಮ ಐಟಿ ರಂಗವನ್ನೇ ಉದಾಹರಣೆಗೆ ತೆಗೆದುಕೊಂಡರೇ, ಕನ್ನಡಿಗರು ಇತರರ ಸಂದರ್ಶನ ನಡೆಸುವಾಗ ಅಭ್ಯರ್ಥಿಗೆ ಸಿ, ಜಾವಾ, ಡಾಟ್ನೆಟ್ ಲಾಂಗ್ವೇಜ್ ಗೊತ್ತಾ ಎಂದು ನೋಡಿದರೆ, ತಮಿಳರು ತಮಿಳು ಲಾಂಗ್ವೇಜ್ ಗೊತ್ತಿದ್ದರೆ, ಮಲ್ಲುಗಳು ಮಲಾಯಾಳಿ ಗೊತ್ತುಂಟೋ ಅಂತಲೋ ನೋಡಿ ತೆಗೆದುಕೊಳ್ಳುವುದು, ಸಾಮಾನ್ಯವಾಗಿ ನಡೆಯುವ ಸಂಗತಿಗಳು ( Exceptionsಗಳು ಇದ್ದೇ ಇರ್ತವೆ ಬಿಡಿ ). ಕಚೇರಿಯೊಳಗಿನ ರಾಜಕೀಯದಲ್ಲೂ ಭಾಷೆ ಮತ್ತು ರಾಜ್ಯಗಳು ಪ್ರಮುಖ ಪಾತ್ರವಹಿಸುವುದನ್ನು ನನ್ನ ಅನುಭವದ ಭಾಗವಾಗಿಯೇ ನೋಡಿದ್ದೇನೆ. ಹೀಗಿರುವಾಗ ನಮ್ಮ ಮಕ್ಕಳಿಗೆ ಶೇ.20 ಕೊಟ್ಟರೇನು ತಪ್ಪು?
ಇಂತಹ ಕಾನೂನುಗಳ ಮೂಲಕ ಭಾರತ ಒಕ್ಕೂಟದಲ್ಲಿ ಪ್ರಾದೇಶಿಕ ಭಾವನೆ ಬಿತ್ತುವುದೇಕೆ ಎನ್ನುವುದು ಕೆಲ ಮಿತ್ರರ ಪ್ರಶ್ನೆ. ಅಂತವರಿಗೆ ನನ್ನದೊಂದು ಪ್ರಶ್ನೆಯಿದೆ. ಮುಂಬೈನಲ್ಲಿ ರಾಜ್ ಠಾಕ್ರೆ ಬಿಹಾರಿ, ಉತ್ತರ ಪ್ರದೇಶಗಳ ಜನರ ವಿರುದ್ಧ ತಿರುಗಿಬಿದ್ದಾಗ ನಮ್ಮ ಮಾಧ್ಯಮಗಳು ಮತ್ತು ಜನರು ರಾಜ್ ಠಾಕ್ರೆಯನ್ನು ಪ್ರಶ್ನಿಸಿದವೇ ಹೊರತೂ ಬಿಹಾರದ ನಿತೀಶ್ ಕುಮಾರ್, ಲಾಲೂ ಯಾದವ್ ಅವರನ್ನು, ಉ.ಪ್ರದೇಶದ ಅಖಿಲೇಶ್, ಮುಲಾಯಂ, ಮಾಯಾವತಿಯವರನ್ನು ಪ್ರಶ್ನಿಸಲಿಲ್ಲ. ಲಾಲೂ ಪ್ರಸಾದ್ ಯಾದವ್ ರೈಲ್ವೇ ಸಚಿವರಾಗಿದ್ದಾಗ ‘ಗರೀಬ್ ರಥ್’ ಅಂತ ಶುರು ಮಾಡಿ ಉತ್ತರ ಭಾರತದಿಂದ ಜನರನ್ನು ತಂದು ಮುಂಬೈನಲ್ಲಿ ಕಡಿಮೆ ಖರ್ಚಿನಲ್ಲಿ ಸಾಗಹಾಕಿ ಕೈ ತೊಳೆದುಕೊಂಡರೇ ಹೊರತು ಬಿಹಾರಿಗಳಿಗೆ ಬಿಹಾರದಲ್ಲೇ ಬದುಕು ಕಟ್ಟಿಕೊಳ್ಳುವ ಅವಕಾಶವನ್ನೇಕೆ ಕೊಡಲಿಲ್ಲ ಅಂತ ಯಾರಾದರೂ ಪ್ರಶ್ನಿಸಿದರೇ ? ರಾಜ್ ಠಾಕ್ರೆ ಮೇಲೆ ಆಗಾಗೇ ತೋಳೇರಿಸುತ್ತಿದ್ದ ಇತರೆ ರಾಜ್ಯದ ರಾಜಕಾರಣಿಗಳಿಗೆ ತಮ್ಮ ರಾಜ್ಯದ ಜನರಿಗೆ ತಮ್ಮ ರಾಜ್ಯದಲ್ಲೇ ಉದ್ಯೋಗವಕಾಶ ಕಲ್ಪಿಸಲೇಕೆ ಆಗಲಿಲ್ಲ? ಖಾಸಗಿ ಕಂಪೆನಿಗಳನ್ನು ಆ ರಾಜ್ಯದಲ್ಲಿ ಹೂಡಿಕೆ ಮಾಡದಂತೆ ತಡೆದಿರುವುದು ಏನು?
ಬದುಕಿನ ಬಂಡಿಯೆಳೆಯಲು ಮುಂಬೈ, ಬೆಂಗಳೂರು ಸೇರಿಕೊಂಡ ಬೇರೆ ರಾಜ್ಯದವರ ಅನಿವಾರ್ಯತೆಯನ್ನೂ ಒಪ್ಪುತ್ತಲೇ, ರಾಜ್ ಠಾಕ್ರೆಯಂತವರ ಸಂಘಟನೆಗಳು ಇವರ ಮೇಲೆ ದೌರ್ಜನ್ಯಗಳನ್ನು ಖಂಡಿಸುತ್ತಲೇ, ಕೇಳಬೇಕಾಗಿರುವ ಮುಖ್ಯ ಪ್ರಶ್ನೆ ಈ ಜನರ ಜವಬ್ದಾರಿ ಹೊರಬೇಕಾಗಿರುವುದು ಆಯಾ ರಾಜ್ಯಗಳ ಹೊಣೆಗಾರಿಕೆಯೋ ಅಥವಾ ಬೇರೆ ರಾಜ್ಯಗಳದ್ದೋ? ರಾಜಕೀಯವಾಗಿ ಬಲಿಷ್ಟವಾಗಿರುವ ಬಿಹಾರ, ಉತ್ತರ ಪ್ರದೇಶದ ರಾಜಕಾರಣಿಗಳಿಗೆ ಅವರ ಹೊಣೆಗಾರಿಕೆಯನ್ನು ನೆನಪಿಸಬೇಕಾಗಿರುವುದು ಈಗೀನ ತುರ್ತು. ಪಕ್ಕದ ಮನೆಯ ಯಜಮಾನ ಜವಬ್ದಾರಿಯಿಲ್ಲದೇ ಐಶಾರಾಮಿಯಾಗಿ ಬದುಕು ಸವೆಸುತ್ತ ತನ್ನ ಮಕ್ಕಳನ್ನು ನಮ್ಮ ಮನೆಗೆ ಕಳುಹಿಸಿ, ನಮ್ಮ ಮಕ್ಕಳಿಗೆ ನ್ಯಾಯವಾಗಿ ಸಿಗಬೇಕಾದ ಕೆಲಸಕ್ಕೆ ಕೈ ಹಾಕುವುದನ್ನು ಹೇಗೆ ಸಹಿಸಿಕೊಳ್ಳುವುದು? ಪಕ್ಕದ ಮನೆಯ ಯಜಮಾನನ್ನು ಪ್ರಶ್ನಿಸುವುದು ಬೇಡವೇ? ನಮ್ಮದು ಸಾಕ್ಷರರ ರಾಜ್ಯವೆಂದು ಹೇಳಿಕೊಳ್ಳುವ ಕೇರಳಿಗರು ರಾಜ್ಯ ಬಿಟ್ಟು ಗಲ್ಫ್ ಅಥವಾ ದೇಶದ ಇನ್ನಿತರೆ ನಗರಗಳಿಗೇಕೆ ಹೋಗುತ್ತಾರೆ ಎಂದು ಕಾಮ್ರೇಡುಗಳನ್ನು, ಕಾಂಗ್ರೆಸ್ಸಿಗಳನ್ನು ಯಾರಾದರೂ ಪ್ರಶ್ನಿಸಿದಿರೇ? ಪಿಳ್ಳೆ ನೆವಗಳನ್ನಿಟ್ಟುಕೊಂಡು ಕಾಮ್ರೇಡುಗಳು ಬಂದ್, ಹರತಾಳಗಳನ್ನು ಮಾಡಿದರೆ ಯಾವ ಕಂಪೆನಿಯ ಹೂಡಿಕೆ ಮಾಡಲು ಮುಂದೆ ಬರುತ್ತಾನೆ? ಇದು ಪಶ್ಚಿಮ ಬಂಗಾಳದಂತಹ ರಾಜ್ಯಗಳಿಗೂ ಅನ್ವಯಿಸುತ್ತದೆ.
ಸರ್ಕಾರ ತರಲು ಹೊರಟಿರುವ ಈ ಕಾಯ್ದೆಯನ್ನು ಬೆಂಬಲಿಸುವುದರ ಜೊತೆ ಜೊತೆಗೆ, ಈ ಕಾಯ್ದೆಯ ಮೂಲ ಉದ್ದೇಶ ಸ್ಥಳೀಯರಿಗೆ (ಸ್ಥಳೀಯರು ಎಂದು ನಿರ್ಧರಿಸುವ ಸರ್ಕಾರದ ಡೆಫಿನೇಷನ್ನನೇ ಲಾಜಿಕಲಿ ಪ್ರಶ್ನಿಸಬಹುದು ಎಂಬುದನ್ನೂ ಬದಿಗಿಟ್ಟು ನೋಡುತ್ತ) ನ್ಯಾಯಯುತವಾಗಿ ಸಿಗಬೇಕಾದ ಉದ್ಯೋಗವಕಾಶವನ್ನು ಕೊಡಿಸುವುದಕ್ಕೆ ಮಾತ್ರ ಸೀಮಿತವಾಗಬೇಕೆ ಹೊರತು, ಹಫ್ತಾ ವಸೂಲಿ ಸಂಘಟನೆಗಳು ಖಾಸಗಿ ಕಾರ್ಖಾನೆಯ ಮಾಲೀಕರೊಂದಿಗೆ ವ್ಯವಹಾರಕ್ಕಿಳಿಯದಂತೆ ನೋಡಿಕೊಳ್ಳಬೇಕು. ಕಂಪೆನಿಯ ನಿಯಮಗಳು ಎಲ್ಲಾ ಉದ್ಯೋಗಿಗಳಿಗೂ ಏಕರೂಪವಾಗಿ ಅನ್ವಯವಾಗುವಂತಿರಬೇಕು. ಇನ್ನು ಸರ್ಕಾರದ ಆದೇಶವನ್ನು ಪಾಲಿಸಲು ಒಪ್ಪದವರನ್ನು ಏನು ಮಾಡಲಾಗುತ್ತದೆ ಎಂಬುದೂ ಇನ್ನು ಸ್ಪಷ್ಟವಾಗಿಲ್ಲ. ಮೊದಲು ಬಂದ ಪತ್ರಿಕಾವರದಿಯ ಪ್ರಕಾರ ಅಂತಹ ಕಂಪೆನಿಗಳಿಗೆ ರಾಜ್ಯ ಸರ್ಕಾರದಿಂದ ರಿಯಾಯಿತಿಯಲ್ಲಿ ಸಿಗುವ ಸೌಲಭ್ಯಗಳನ್ನು ನಿಲ್ಲಿಸಲಾಗುವುದು ಎಂದಿದ್ದರೇ, ಇನ್ನೊಂದು ವರದಿಯ ಪ್ರಕಾರ ಏನು ಮಾಡಬೇಕು ಎಂಬುದನ್ನು ಇನ್ನು ನಿರ್ಧರಿಸಿದಂತಿಲ್ಲ.
ಈ ಕಾಯ್ದೆ ಜಾರಿಗೆ ಬರುತ್ತದೆಯೋ ಅಥವಾ ಇದೊಂದು ರಾಜಕೀಯ ಸ್ಟಂಟ್ ಅಷ್ಟೇ ಇರಬಹುದೇ ಎನ್ನುವ ಪ್ರಶ್ನೆಗಳನ್ನಿಟ್ಟುಕೊಂಡೇ, ಇಂತಹದ್ದೊಂದು ಕಾಯ್ದೆ ಆದಷ್ಟು ಬೇಗ ಜಾರಿಗೆ ಬರಲಿ ಮತ್ತು ಆಯಾ ರಾಜ್ಯದ ಜನರು ತಮ್ಮ ಹುಟ್ಟಿದ ಊರಿನಲ್ಲಿಯೇ ಬದುಕು ಕಟ್ಟಿಕೊಳ್ಳುವಂತ ಕೆಲಸಗಳನ್ನು ಉಳಿದ ರಾಜ್ಯಗಳು ಮಾಡುವ ಒತ್ತಡವನ್ನು ಇಂತಹ ಕಾಯ್ದೆಗಳು ತರಲಿ ಮತ್ತು ಈ ಚರ್ಚೆ ಕಾಯ್ದೆಯ ಪರ-ವಿರೋಧದ ಜೊತೆಗೆ ಕಟಕಟೆಯಲ್ಲಿ ವಲಸಿಗರ ರಾಜ್ಯದ ನಾಯಕರನ್ನು ನಿಲ್ಲಿಸುವಂತೆ ಮಾಧ್ಯಮಗಳು ಮಾಡಲಿ ಎನ್ನುವುದು ನನ್ನ ಆಶಯ.
“ಇಂತಹದ್ದೊಂದು ಕಾಯ್ದೆ ಆದಷ್ಟು ಬೇಗ ಜಾರಿಗೆ ಬರಲಿ”
+1