ಪುಷ್ಪಕ ವಿಮಾನ..
– ಶಾರದ ಡೈಮಂಡ್
ಅಪ್ಪ ಮಗಳ ನಡುವಿನ ಮುಗ್ಧ ಪ್ರಪಂಚದ ಸುತ್ತ ಹೆಣೆದಿರುವ ಕಥೆ ಈ ಪುಷ್ಪಕ ವಿಮಾನ. ಅವರದ್ದೇ ಭಾವ ಪ್ರಪಂಚದಲ್ಲಿ ಖುಷಿಯಾಗಿ ಮಧುರ ಕ್ಷಣಗಳನ್ನು ಸಂಭ್ರಮಿಸುತ್ತಿದ್ದ ಮನಸ್ಸುಗಳು ಅನ್ಯಾಯವಾಗಿ ಯಾರದೋ ಕ್ರೂರ ಮನಸ್ಸಿನ ಹಠ ಮತ್ತು ಸೇಡಿಗಾಗಿ ಒಡೆದು ದೂರವಾಗೋದೇ ಚಿತ್ರದ ಕಥೆ. ಇದು ರಮೇಶ್ ಅರವಿಂದ್ ರವರ ನೂರನೇ ಚಿತ್ರ . ಅವರ ಜೀವನದ ಮೈಲಿಗಲ್ಲು. ರಮೇಶ್ ಅವರ ಮುಗ್ದಾವತಾರದ ಆ ಅದ್ಭುತ ಅಭಿನಯವನ್ನು ಪದಗಳಲ್ಲಿ ವಿವರಿಸೋದು ಕಷ್ಟ ಸಾಧ್ಯ. ರಮೇಶ್ ಅರವಿಂದರ ಅಭಿಮಾನಿ ಅಂತ ಹೇಳಿಕೊಳ್ಳುವುದೇ ನನಗೆ ಖುಷಿ ವಿಚಾರ. ಅದರಲ್ಲೂ ಈ ಚಿತ್ರದಲ್ಲಿ ಅವರ ಅಭಿನಯವನ್ನು ನೋಡಿದ ಮೇಲೆ ನಿಜವಾಗಲೂ ಅವರ ಅಭಿಮಾನಿ ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಅನಿಸ್ತಾ ಇದೆ.
ಇನ್ನು ಮಗಳ ಪಾತ್ರವಾದ ಪುಟ್ಟಲಕ್ಷ್ಮಿ – ಪುಟ್ಟು ಪಾತ್ರಕ್ಕೆ ಜೀವ ತುಂಬಿರೋ ಯುವಿನಾ ತನ್ನ ಅಮೋಘ ಅಭಿನಯದಿಂದ ಪ್ರೇಕ್ಷಕರ ಮನಸ್ಸಲ್ಲಿ ಉಳಿಯುತ್ತಾಳೆ. ತಪ್ಪೇ ಮಾಡದೇ ಜೈಲಿಗೆ ಸೇರಿಕೊಳ್ಳುವ ಬುದ್ಧಿಮಾಂದ್ಯ ಅನಂತಯ್ಯ ತನ್ನ ಪ್ರಪಂಚವೇ ಆದ ಮಗಳಿಗಾಗಿ ಪ್ರತೀ ಕ್ಷಣ ಹಂಬಲಿಸುವುದನ್ನ ನಾವು ನೋಡಬಹುದು. ಎಂಥಹ ಕ್ರೂರಿಯೂ ಪ್ರೀತಿಗೆ ಸೋತೆ ಸೋಲ್ತಾರೆ ಅನ್ನುವುದನ್ನು ಇಲ್ಲಿ ಖೈದಿಗಳ ಮುಖಾಂತರ ತೋರಿಸಿದ್ದಾರೆ. ಅಪ್ಪ ಮಗಳ ಪ್ರೀತಿ ವಾತ್ಸಲ್ಯ ಮುಗ್ಧತೆಗೆ ಸೋತ ಆ ಖೈದಿಗಳು ಜೈಲಿನೊಳಗೆ ಆ ಮಗುವನ್ನು ಕರೆತಂದು ಅವರಿಬ್ಬರನ್ನು ಜೊತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.
ಕೇವಲ ಭಾವನಾತ್ಮಕವಾದ ಸಂಭಾಷಣೆಗಳು ಮಾತ್ರವಲ್ಲದೆ ಚಿತ್ರದ ಲಘು ಹಾಸ್ಯ ನಿಮ್ಮ ಮುಖದಲ್ಲಿ ನಗುವನ್ನು ಉಕ್ಕಿಸದಿದ್ದರೆ ಹೇಳಿ. ” ಬಾನ ತೊರೆದು ನೀಲಿ ಮರೆಯಾಯಿತೇಕೆ ? ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ ” ಎಂಬ ಗೀತೆ ಈಗಲೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ. ಚಿತ್ರದ ಮಧುರ ಸಂಗೀತ ನಮ್ಮನ್ನು ಪದೇ ಪದೇ ಹಾಡುಗಳನ್ನು ಕೇಳುವ ಹಾಗೆ ಮಾಡುತ್ತದೆ. ಕನಸ್ಸಿನಲ್ಲಿ ಎರಡು ಕೈ ರಾಕ್ಷಸ ಬಂದಿದ್ದ, ನಾನು ಎಷ್ಟು ಹೆದರಿಕೊಂಡುಬಿಟ್ಟಿದ್ದೆ ಗೊತ್ತಾ ಎಂದು ಹೇಳುವ ಆ ಪುಟ್ಟ ಮಗುವಿಗೆ ಆ ಬುದ್ಧಿಮಾಂದ್ಯ ಅಪ್ಪ ಹೇಳುವ ಮಾತುಗಳು ನಿಜವಾಗಲೂ ಒಬ್ಬ ತಂದೆ ತನ್ನ ಮಗಳಿಗೆ ಎಷ್ಟರ ಮಟ್ಟಿಗೆ ಧೈರ್ಯ ತುಂಬಬಹುದು ಅನ್ನುವುದಕ್ಕೆ ಸಾಕ್ಷಿ.
ಇದೇ ತರಹದ ಹಲವಾರು ಸನ್ನಿವೇಷಗಳು ಕಣ್ಣೀರು ಧಾರಾಕಾರವಾಗಿ ಹರಿಯೋ ಹಾಗೆ ಮಾಡುತ್ತದೆ. ತನ್ನ ಒಳ್ಳೆಯತನದಿಂದ ಜೈಲಿನಲ್ಲಿ ಎಲ್ಲರಿಗೂ ಹತ್ತಿರವಾಗೋ ನಿರಪರಾಧಿ ಅನಂತಯ್ಯನಿಗೆ ಶಿಕ್ಷೆ ಆಗುತ್ತಾ, ನ್ಯಾಯ ಸಿಗುತ್ತಾ, ತನ್ನ ಪ್ರಪಂಚಕ್ಕೆ ಮತ್ತೆ ವಾಪಸ್ ಆಗ್ತಾನಾ ಅನ್ನೋದು ಸಿನಿಮಾದ ಕ್ಲೈಮಾಕ್ಸ್. ಪುಟ್ಟದಾದರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರೋ ರಚಿತಾ, ಜೈಲರ್ ರವಿಕಾಳೆ, ಜೈಲಿನ ಖೈದಿಗಳು ಕೂಡ ಮನಸ್ಸಿನಲ್ಲಿ ಉಳಿಯುತ್ತಾರೆ. ಚಿತ್ರದ ಪ್ರಾರಂಭದಿಂದ ಕೊನೆಯವರೆಗೆ ಎಲ್ಲಾದರೂ ಒಂದು ಕಡೆಯಾದರು ನಿಮ್ಮನ್ನ ನೀವು ಆ ಪಾತ್ರಕ್ಕೆ ಸನ್ನಿವೇಶಕ್ಕೆ ಖಂಡಿತವಾಗಲೂ ಹೋಲಿಸಿಕೊಳ್ಳುತ್ತೀರಿ. ಶಬ್ದಗಳಿಗೆ ಕೊನೆಯಿದೆ, ಭಾವನೆಗಳನ್ನು ಸ್ವತಃ ಅನುಭವಿಸಬೇಕು. ಎಂತವರನ್ನೂ ಮಂತ್ರಮುಗ್ಧರನ್ನಾಗಿ ಮಾಡುವುದರಲ್ಲಿ ಎರಡನೆಯ ಮಾತೇ ಇಲ್ಲ. ಮನಸ್ಸಿಗೆ ಹತ್ತಿರವಾದ ಕಥೆ, ಕಲಾವಿದರ ಅಭಿನಯ, ಹಾಸ್ಯ, ಸಂಗೀತ ಎಲ್ಲವನ್ನೂ ಹೊಂದಿರುವ ಈ ಚಿತ್ರ ಶತದಿನೋತ್ಸವವನ್ನು ಆಚರಿಸುವುದರಲ್ಲಿ ಸಂದೇಹವೇ ಇಲ್ಲ.
ಪ್ರೇಕ್ಷಕರನ್ನು ಅಳಿಸಿಯೇ ತೀರುತ್ತೇನೆಂದು ಹಟ ಹಿಡಿದವರೊಬ್ಬರು ಚಿತ್ರ ನಿರ್ದೇಶಿಸಿದರೆ ಹೇಗಿರುತ್ತದೆಂಬುಕ್ಕೆ ಪುಷ್ಪಕ ವಿಮಾನ ಸಾಕ್ಷಿ.
ಒಬ್ಬ ನಿರ್ದೇಶಕ ನಿರ್ದೇಶನ ಮಾಡುವುದು ಗೊತ್ತಿಲ್ಲದಿದ್ದರೆ ಹೇಗೆ ಎಳಸು ನಿರ್ದೇಶನ ಮಾಡುತ್ತಾನೆ.. ಓದ್ತಾ ಹೋಗಿ
೧. ಜೈಲಿಗೆ ಹೋದ ಬುದ್ದಿಮಾಂದ್ಯ ಅನಂತರಾಮಯ್ಯ ತನ್ನ ಖೈದಿಯನ್ನು ಪಾರು ಮಾಡುವ ಸೀನ್ ಮತ್ತು ಬೆಂಕಿ ಹೊತ್ತಿಕೊಂಡಾಗ ಜೈಲರ್ ರವಿಕಾಳೆಯನ್ನು ರಕ್ಷಿಸುವ ಸೀನ್ ಗಳೆರಡನ್ನು ಮಾಡುವಾಗ ಪ್ರಾಯಶಃ ನಿರ್ದೇಶಕರು ಅನಂತರಾಮಯ್ಯ ಬುದ್ದಿಮಾಂದ್ಯ ಎನ್ನುವುದನ್ನು ಮರೆತಿದ್ದರು ಅಂತ ಕಾಣುತ್ತೆ.
೨. ಮಗಳನ್ನು ಜೈಲಿಗೆ ಕರೆತರುವ ವಿಚಾರದಲ್ಲಿ ಒಂದೆರಡು ಸೀನ್ ಗಳಲ್ಲಿ ಹೇಗೆ ಮಗಳನ್ನು ಒಳಕ್ಕೆ ಕರೆತರಲಾಯಿತು ಎಂದು ತೋರಿಸಿರುವುದು ಸರಿ ಇದೆ. ಆದರೆ ಮುಂದೆ ಮುಂದೆ ಮಗಳು ಜೈಲಿನಲ್ಲೇ ಸೆಟಲ್ ಆಗಿಹೋಗುತ್ತಾಳೆ. ಮತ್ತು ಕೇವಲ ಬಲವಂತದ ಸೆಂಟಿಮೆಂಟ್ ಹೇರಿ ಅಳುವಂತೆ ಮಾಡಿರುವುದು ಆರೋಗ್ಯಕರ ಅಲ್ಲವೇ ಅಲ್ಲ.
೩. ಸಹಕೈದಿಯೊಬ್ಬ ತನ್ನ ಹೆಂಡತಿಯ ಹತ್ತಿರ ಮೊಬೈಲಲ್ಲಿ ಮಾತನಾಡುವ ಸೀನ್ ನಲ್ಲಿ ಡೈರೆಕ್ಟರ್ ಸಾಹೇಬರಿಗೆ ಅದ್ಯಾಕೆ ಹಾಗನ್ನಿಸಿತೋ ಥೇಟ್ ಬುದ್ದಿಮಾಂದ್ಯ ಅನಂತ ರಾಮಯ್ಯನ ಶೈಲಿಯಲ್ಲಿ ಮಾತನಾಡಿಸಿದ್ದಾರೆ. ಬುದ್ದಿಮಾಂದ್ಯನ ಜೊತೆ ಇದ್ದು ಅಲ್ಲಿಯವರೆಗೂ ಸರಿ ಇದ್ದ ಇವನ್ ಯಾಕಪ್ಪ ಹಿಂಗಾದ ಅನ್ನೋದಂತು ಸುಳ್ಳಲ್ಲ.
೪. ನೆನ್ನೆ ಆಟ ಸಾಮಾನು ಮಾರುವ ಅಂಗಡಿಯಲ್ಲಿ ಸಿಕ್ಕ ಮಗು ದಿಢೀರನೆ ಅನಂತ ರಾಮಯ್ಯನ ಮುಂದೆ ಬಂದು ಅಂಕಲ್ ಬನ್ನಿ ನಿಮಗೆ ವಿಮಾನ ಮಾರೋ ಇನ್ನೊಂದು ಅಂಗಡಿ ತೋರಿಸ್ತೀನಿ ಅಂತ ಪೆಕರು ಪೆಕರಾಗಿ ಸೀನ್ ಕ್ರಿಯೇಟ್ ಮಾಡಿ, ಆ ಮಗೂನ ಅಲ್ಲೆಲ್ಲೋ ಕಾಲು ಜಾರಿ ಬೀಳೋ ಹಾಗೆ ಮಾಡಿ, ನಂತರ ಅನಂತ ರಾಮಯ್ಯ ರೇಪ್ ಮಾಡ್ತಿದಾನೆ ಅನ್ನೋ ಸೀನು, ಆ ಗ್ಯಾಪಲ್ಲಿ ಆ ಸೈಡ್ ಆರ್ಟಿಸ್ಟು “ಅಯ್ಯೋ ಯಾರಾದ್ರು ಬರ್ರಪ್ಪ ಮಗೂನ ಹಾಳು ಮಾಡ್ತಿದಾನೆ”
….
ಥೂ..ಥೂ.. ನಿಜಕ್ಕೂ ಇಂತಹ ಬೌದ್ದಿಕ ದಾರಿದ್ರ್ಯ ಯಾವ ನಿರ್ದೇಶನನಿಗೂ ಕೊಡಬೇಡಪ್ಪ ತಂದೆ
೫. ಅಪ್ಪ ಮಗಳ ಸೆಂಟಿಮೆಂಟ್ ಪಿಚ್ಚರ್ರು ಇದು, ಜೈಲಲ್ಲಿ ಬರಿ ಆಡಲ್ಟ್ ಡೈಲಾಗ್ ಗಳು
೬. ಅನಂತ್ ರಾಮಯ್ಯನ್ನ ಹ್ಯಾಂಗ್ ಮಾಡೋಕೂ ಮುಂಚಿನ ಹತ್ತು ನಿಮಿಷ ಪ್ರೇಕ್ಷಕರ ಕುತ್ತಿಗೆಹಿಚುಕಿ ಅಳುವಂತೆ ಮಾಡುವಲ್ಲಿ ಕೊನೆಗೂ ನಿರ್ದೇಶಕರು ಸಫಲರಾಗಿರುವುದನ್ನ ನಾವಿಲ್ಲಿ ಶ್ಲಾಘಿಸಲೇಬೇಕು…
ಇನ್ನು ಕೊನೆಯದಾಗಿ ರಮೇಶ್ ಅರವಿಂದ್ ಬಿಟ್ರೆ, ರವಿಕಾಳೆಯವರ ಅಭಿನಯ ಅದ್ಭುತ, ಅಮೋಘ..
ಥಿಯೇಟರಿನಲ್ಲಿದ್ದ ಅಷ್ಟೂ ಜನ ಅಳ್ತಿದ್ರೂ , ಗುಂಡುಕಲ್ಲಂಗೆ ಕುಳಿತಿದ್ದ ನನ್ನನ್ನು ಕೂಡ ರವಿ ಕಾಳೆಯ ಕಡೆಯಿಂದ ಆ ರೇಂಜ್ ಫೇಸ್ expression ಕೊಡಿಸಿ ನನ್ನನ್ನೂ ಅಳಿಸಿದ ನಿರ್ದೇಶಕರಿಗೆ ಧಿಕ್ಕಾರವಿರಲಿ.
Its a remake of Korean movie called Miracle in cell number 7