ವಿಷಯದ ವಿವರಗಳಿಗೆ ದಾಟಿರಿ

ಜನವರಿ 10, 2017

ಸರ್ಕಾರಿ ಶಾಲೆಯಲ್ಲಿ ಓದುವ ಬಡವರ ಮಕ್ಕಳು ಯಾವ ಪಾಪ ಮಾಡಿದ್ದರು ಸಿದ್ದಣ್ಣನವರೇ …… 

‍ನಿಲುಮೆ ಮೂಲಕ

– ಅರುಣ್ ಬಿನ್ನದಿ

unnamedನೀಟ್ ಎಕ್ಸಾಂ ನಲ್ಲಿ ಕನ್ನಡಕ್ಕೆ ಅವಕಾಶ ಸಿಗದಂತೆ ಆಗಿರುವುದು ರಾಜ್ಯದ ತಪ್ಪಿನಿಂದಲೇ ಎಂದು ಸಾಬೀತಾಗುತ್ತಿದ್ದಂತೆ ರಾಜ್ಯಸರ್ಕಾರ ಎಚ್ಛೆತ್ತು ತಪ್ಪು ತಿದ್ದಲು ಬೇಕಾದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿತ್ತು, ಆದರೆ ಅದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಪರಿಜ್ಞಾನವಿದ್ದಂತಿಲ್ಲ. ಪಿಯುಸಿ ಮಕ್ಕಳು ಸಿ.ಬಿ.ಎಸ್.ಸಿ ಪಠ್ಯಕ್ರಮದ ಕನ್ನಡ ಅವತರಿಣಿಕೆಯನ್ನು ಓದುತ್ತಿರುವ ಸಮಯದಲ್ಲಿ ಒಮ್ಮೆಲೇ ಹತ್ತರವರೆಗೆ ರಾಜ್ಯದ ಪಠ್ಯಕ್ರಮದಲ್ಲಿ ಓದಿದ ಮಕ್ಕಳಿಗೆ ಪಿಯುಸಿಯಲ್ಲಿ ಕಷ್ಟವಾಗಿ ಮುಂದಿನ ಶೈಕ್ಷಣಿಕ ಜೀವನದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಬಹುದಾದ ನಿರೀಕ್ಷೆ ಇದ್ದಾಗ್ಯೂ ಸಹ ಅದಕ್ಕೆ ಸಂಬಂಧಿಸಿದ ಯಾವುದೇ ಚಿಂತನೆಗಳು ನಡೆದಿಲ್ಲ. ಆದರೆ ರಾಜ್ಯದಲ್ಲಿ ರಹಸ್ಯ ಕೋಣೆಯಲ್ಲಿ, ನಿಗೂಢವಾಗಿ, ಕೆಲವೇ ಕೆಲವು ಬುದ್ದಿಜೀವಿಗಳು ಮಾಡಿದ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ಪಠ್ಯ ಪರಿಷ್ಕರಣೆಯಲ್ಲಿ, ಕಮ್ಯುನಿಸಂ ಐಡಿಯಾಲಜಿಯನ್ನು ಹೇರಿ, ರಾಜ್ಯದ ಮಕ್ಕಳನ್ನು ಮಾರ್ಕ್ಸ್ ಸಿದ್ದಾಂತದ ಪೊಲಿಟಿಕಲ್ ಪಕ್ಷದ ಕಾರ್ಯಕರ್ತರನ್ನು ಸೃಷ್ಟಿಸುವ ಕಾರ್ಯಕ್ಕೆ ಸಿದ್ದರಾಮಯ್ಯನವರು, ಬರಗೂರು ರಾಮಚಂದ್ರರ ಕೈಯಲ್ಲಿ ಅಡಿಗಲ್ಲನ್ನು ಹಾಕಿಸಲು ಎಲ್ಲ ಸಿದ್ದತೆಯನ್ನು ಮಾಡಿಸಿದ್ದಾರೆ. ೨೧ ನೇ ಶತಮಾನದಲ್ಲಿ ನಮ್ಮ ಮಕ್ಕಳು ಅಂತರಾಷ್ಟ್ರೀಯ ಮಟ್ಟದಲ್ಲಿನ ಸ್ಪರ್ಧಾತ್ಮಕ ಬದುಕಿಗೆ ಎದೆ ಕೊಟ್ಟು ನಿಲ್ಲುವ ಆತ್ಮ ಸ್ಥೈರ್ಯವನ್ನು ಉಂಟು ಮಾಡುವ ಶಿಕ್ಷಣವನ್ನು ಕೊಡುವ ಬದಲು ತಮ್ಮ ರಾಜಕೀಯ ಪಕ್ಷದ ಐಡಿಯಾಲಜಿ ಪ್ರೇರಕ ಶಿಕ್ಷಣದ ಜೊತೆಗೆ ಭಾರತವನ್ನು ದ್ವೇಷಿಸುವ, ತನ್ನ ರಾಷ್ಟ್ರದ ಬಗ್ಗೆ ಕಿಂಚಿತ್ತೂ ಗೌರವ ಹುಟ್ಟಿಸದ ವಿಚಾರಗಳನ್ನು ಪಠ್ಯದಲ್ಲಿ ತುರುಕಿ, ತರಾತುರಿಯಲ್ಲಿ ಯಾರಿಗೂ ತಿಳಿಯದಂತೆ ಪಠ್ಯ ಮುದ್ರಣಕ್ಕೆ ಸಂಪೂರ್ಣ ತಯಾರಿ ನಡೆಸಿರುವುದು ಈ ರಾಜ್ಯದ ಬಡ ಮಕ್ಕಳ ಮೇಲೆ ಮಾಡುತ್ತಿರುವ ಘೋರ ಅನ್ಯಾಯ ಎನ್ನದೆ ವಿಧಿಯಿಲ್ಲ.

೨೦೧೨-೧೩ ರಲ್ಲಿ  ಪಠ್ಯ ಪುಸ್ತಕಗಳು ಪರಿಷ್ಕರಣೆಯಾದಾಗ ಅಂದಿನ ಶಿಕ್ಷಣ ಸಚಿವ ಕಾಗೇರಿಯವರು ಹಿಂದಿನ ಎಲ್ಲ ಪಕ್ಷದ ಎಲ್ಲಾ  ಮಾಜಿ ಶಿಕ್ಷಣ ಸಚಿವರು ಹಾಗು ಶಿಕ್ಷಣ ತಜ್ಞರೊಂದಿಗೆ ಬಹಿರಂಗವಾಗಿ ಚರ್ಚಿಸಿ ಹಲವು ವಿಚಾರ ಮಂಥನದ ನಂತರ ಆಸಕ್ತ ಶಿಕ್ಷಕರನ್ನು ಆಹ್ವಾನಿಸಿ ಅವರಿಗೆ ವಿಶೇಷ ತರೆಬೇತಿ ನೀಡಲಾಯಿತು. ನಂತರ ಡಿ.ಎಸ್.ಅರ್.ಟಿ, ಡಯಟ್ಗಳು, ವಿಷಯ ಶಿಕ್ಷಕರ ವೇದಿಕೆಗಳು, ಸಿಟಿಇಗಳಲ್ಲಿ ಚರ್ಚಿಸಿ, ಅಭಿಪ್ರಾಯ ಪಡೆದು ಬರೋಬ್ಬರಿ ಮೂರೂ ವರ್ಷಗಳ ಕಾಲಾವಕಾಶವನ್ನು ನೀಡಿ, ಕೇವಲ ಮಕ್ಕಳ ಏಳಿಗೆಯ ದೃಷ್ಟಿಕೋನವನ್ನು ಹಿಡಿದು ಪಠ್ಯ ಪುಸ್ತಕಗಳನ್ನು ತಯಾರು ಮಾಡಲಾಗಿತ್ತು. ಆದರೆ ಅಂದು ಕೇಸರೀಕರಣದ ಹುಯ್ಲೆಬ್ಬಿಸಿದವರೇ ಆ ಪಠ್ಯ ಪರಿಷ್ಕರಣೆಗೆ ಅನುಸರಿಸಬೇಕಾದ ಯಾವುದೇ ಕಾನೂನುಗಳನ್ನು ಪಾಲಿಸದೇ, ಯಾರನ್ನು ಪರಿಗಣನೆಗೆ ಪಡೆಯದೇ, ಮುಕ್ತ ಚರ್ಚೆಗೆ ಒಳಪಡಿಸದೆ, ಸ್ವತಃ ಶಿಕ್ಷಣ ಸಚಿವ ತನ್ವಿರ್ ಸೇಠ್ ರವರ ಮಾತಿಗೆ ಬೆಲೆ ಕೊಡದೆ ಬರಗೂರು ರಾಮಚಂದ್ರಪ್ಪ ರವರು ಸಿಡಿಯಲ್ಲಿ ತಂದು ಕೊಟ್ಟ ಮಾಲನ್ನು ಸಿಎಂ ಸಾಹೇಬ್ರು ಪರಮ ಪ್ರಸಾದವೆಂಬಂತೆ ಪುಸ್ತಕದಲ್ಲಿ ಇಳಿಸಿ, ಮಕ್ಕಳ ಮೇಲೆ ಹೇರಲು ಹೊರಟಿರುವುದು ಪ್ರಜ್ಞಾವಂತ ಸಮಾಜವು ಒಪ್ಪಲು ಹೇಗೆ ಸಾಧ್ಯ?

ಡಿಸೆಂಬರ್ ೨ ರಂದು ವಿಧಾನ ಪರಿಷತ್ ಸಭೆಯಲ್ಲಿ ವಿರೋಧ ಪಕ್ಷದ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ ತನ್ವಿರ್ ಸೇಠ್ ರವರು ೨೦೧೮-೧೯ ರಲ್ಲಿ ಪಠ್ಯ ಪರಿಷ್ಕರಣೆ ಮಾಡುತ್ತೇವೆ ಎಂದವರು ಈಗ ಇದ್ದಕ್ಕಿದ್ದ ಹಾಗೆ ಜನವರಿ ಕೊನೆಗೆ ತರಲು ತಯಾರಿ ನಡೆದಿದೆ ಎನ್ನುವ ಹೇಳಿಕೆ ನೀಡುತ್ತಾರೆ. ಇದರಿಂದ ಶಿಕ್ಷಣ ಸಚಿವರನ್ನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಳಸಿಕೊಂಡು, ಬರಗೂರು ರಾಮಚಂದ್ರಪ್ಪನವರು ತಮಗೆ ಬೇಕಾದ ಹಾಗೆ ಆಡಿಸುತಿದ್ದಾರೆ ಎನ್ನುವುದು ಸ್ಪಷ್ಟವಾಗುವುದಿಲ್ಲವೆ? ಸದನದಲ್ಲಿ ಕೊಟ್ಟ ಹೇಳಿಕೆಯನ್ನು ಗಾಳಿಗೆ ತೂರಿದ ಸಚಿವರ ನಡೆ, ಸದನಕ್ಕೆ ಅಗೌರವ ತೋರಿದಂತೆ ಅಲ್ಲವೇ? ಇವರ ಪೊಲಿಟಿಕ್ಸ್ ಹಾಳಾಗಿ ಹೋಗ್ಲಿ, ಮಕ್ಕಳಿಗಾದ್ರು ಒಳ್ಳೆದಾಗುತ್ತದೆಯೇ? ಅಂತ ನೋಡಿದರೆ ಮುಂದೆ ಬಾರಿ ಗಂಡಾಂತರವೇ ಕಾಣುತ್ತಿದೆ. ದುರಾದೃಷ್ಟ ಎಂದರೆ ಸರ್ಕಾರದ ಈ ಗೊಂದಲಕಾರಿ ರಾಜಕೀಯ ಪ್ರೇರಿತ, ಸೈದ್ಧಾಂತಿಕ ಪ್ರತಿಷ್ಠೆಗೆ ಬಲಿಯಾಗುವುದು ನಮ್ಮ ಬಡ ಸರ್ಕಾರೀ ಶಾಲೆಯ ಮಕ್ಕಳೇ ಹೊರತು ಸಿರಿವಂತರ ಕಾನ್ವೆಂಟ್ ಶಿಕ್ಷಣ ಪಡೆಯುತ್ತಿರುವ ಮಕ್ಕಳಲ್ಲ ಎನ್ನುವುದು ಸ್ಪಷ್ಟ. ಏಕೆಂದರೆ ಕಾನ್ವೆಂಟ್ಗಳು ತಮಗೆ ಬೇಕಾದ ಪಠ್ಯಕ್ರಮವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವಿದೆ. ಆದರೆ ಬಡ ಮಕ್ಕಳು ಓದುವ ಸರ್ಕಾರಿ ಶಾಲೆಗಳು, ಸರ್ಕಾರ ಕೊಟ್ಟಿದ್ದನ್ನೇ ಪರಮ ಪ್ರಸಾದವೆಂಬಂತೆ ಒಪ್ಪಿ ಓದಬೇಕಲ್ಲವೆ? ಇನ್ನು ರಾಜ್ಯಸರ್ಕಾರ ಈಗ ಮಾಡ ಹೊರಟಿರುವ ಪಠ್ಯಕ್ರಮ ೧೧ ವರ್ಷಗಳ ಹಿಂದಿನ ಅಂದರೆ ೨೦೦೫ ರಲ್ಲಿ ರಚಿತವಾದ ರಾಷ್ಟ್ರಿಯ ಪಠ್ಯಕ್ರಮ ಚೌಕಟ್ಟು-೨೦೦೫ (ನ್ಯಾಷನಲ್ ಕರಿಕ್ಯುಲಮ್ ಪ್ರೇಮ್ ವರ್ಕ್) ನ ಅನ್ವಯದ ಆಧಾರದ ಮೇಲೆಯೇ ಪಠ್ಯ ಪರಿಷ್ಕರಣೆ ಮಾಡಬೇಕಾಗುತ್ತದೆ. ಆದರೆ ಈಗಾಗಲೇ ಅದು ಔಟ್ ಡೇಟೆಡ್ ಅನ್ನುವ ನಿಲುವಿಗೆ ಸ್ವತಃ ಯು.ಪಿ.ಎ ಸರ್ಕಾರವೇ ಬಂದು ೨೦೧೨ರಲ್ಲಿ ಪಠ್ಯಕ್ರಮ ಚೌಕಟ್ಟನ್ನು ಬದಲಾಯಿಸಲು ಹೊರಟಿತ್ತು. ತನ್ನ ಪಕ್ಷದ ಕೇಂದ್ರಸರ್ಕಾರವೇ ಬದಲಾಯಿಸಲು ಹೊರಟಿದ್ದ ಪಠ್ಯಕ್ರಮ ಚೌಕಟ್ಟನ್ನು ಹಿಡಿದುಕೊಂಡು ನಮ್ಮ ರಾಜ್ಯದಲ್ಲಿನ ಮಕ್ಕಳಿಗೆ ಪಠ್ಯ ಪರಿಷ್ಕರಣೆ ಮಾಡುವುದು ರಾಜ್ಯದ ಬಡ ಮಕ್ಕಳಿಗೆ ಮಾಡುತ್ತಿರುವ ಅನ್ಯಾಯವಲ್ಲವೇ?.

ಇನ್ನು ವಿದ್ಯಾರ್ಥಿಗೆಳು, ಪೋಷಕರು, ಶಿಕ್ಷಣ ತಜ್ಞರ ಅಭಿಪ್ರಾಯಗಳ  ಸಂಗ್ರಹವನ್ನು ಪಡೆದು ಹಲವು ಆಯಾಮಗಳ ಆಧಾರದ ಮೇಲೆ ಬರಲಿರುವ ೨೦೧೭ರ  ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಅನ್ವಯ ಎಲ್ಲಾ ರಾಜ್ಯಗಳು ಹೊಸ  ಪಠ್ಯ ರಚನೆ ಮಾಡಲೇಬೇಕು. ಆದರೆ ರಾಜ್ಯಸರ್ಕಾರ ಈಗ ಪಠ್ಯ ಪರಿಷ್ಕರಣೆ ಮಾಡಿ ಪುಸ್ತಕಗಳನ್ನು ಹೊರ ತಂದರೆ ಅದರ ಅವಧಿ ಕೇವಲ ಒಂದೇ ವರ್ಷವಲ್ಲವೇ? ಇನ್ನುಳಿದಿರುವ ನಾಲ್ಕು ತಿಂಗಳ ಒಳಗೆ ಪುಸ್ತಕಗಳನ್ನು ಹೊರತಂದು, ಶಿಕ್ಷಕರಿಗೆ ತರಬೇತಿ ನೀಡಿ, ಜೂನ್ ನಲ್ಲಿ ಅಳವಡಿಸಿಕೊಳ್ಳುವುದು ಸಾಧ್ಯವಿದೆಯೇ? ತರಾತುರಿಯಲ್ಲಿ ಪ್ರತಿಷ್ಠೆಗೋಸ್ಕರ ಶಿಕ್ಷಣ ವ್ಯವಸ್ಥೆಯ ಮೇಲೆ ಹೊಸ ಪರಿಷ್ಕೃತ ಪಠ್ಯಕ್ರಮವನ್ನು ಹೇರಿದರೆ, ಕೊನೆಗೆ ಇದರ ಪರಿಣಾಮ ನೇರವಾಗಿ ಆಗುವುದು ಮಕ್ಕಳ ವಿದ್ಯಾಬ್ಯಾಸದ ಮೇಲೆ! ಎನ್ನುವ ಸಾಮಾನ್ಯ ಜ್ಞಾನವು ಸರ್ಕಾರಕ್ಕೆ ಇಲ್ಲವಾಯಿತೇ ಎನ್ನುವುದು ದುರಂತ. ಇನ್ನು ಕಸ್ತೂರಿ ರಂಗನ್ ನೇತೃತ್ವದ ಜ್ಞಾನ ಆಯೋಗದ ಶಿಫಾರಸ್ಸಿನ ಅನ್ವಯ ಈ ವರ್ಷದಿಂದಲೇ ಸಿಬಿಎಸ್ಸಿ ಪಠ್ಯಕ್ರಮವನ್ನು ಒಂಬತ್ತು ಹಾಗು ಹತ್ತನೇ ತರಗತಿಗೆ ಅಳವಡಿಸುವ ಭರವಸೆ ನೀಡಲಾಗಿತ್ತು. ಆದರೆ ಅದಕ್ಕೂ ಈಗ ಎಳ್ಳು ನೀರು ಬಿಡಲಾಗಿದೆ. ರಾಜ್ಯಸರ್ಕಾರದ ಪ್ರತಿ ಹೆಜ್ಜೆಯನ್ನು ಗಮನಿಸಿದರೆ ೨೦೧೭ ರ ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಒಪ್ಪಿಕೊಳ್ಳಲು ಯಾವುದೇ ಮನಸ್ಸಿಲ್ಲದಂತೆ ಕಾಣುತ್ತಿದೆ. ಆ ಕಾರಣಕ್ಕೆ ಪಠ್ಯಕ್ರಮಕ್ಕೆ ಸುಪ್ರೀಂ ಆಗಬೇಕಿದ್ದ ಆಡಳಿತ ಮಂಡಳಿಯನ್ನು ಮೂಲೆಗುಂಪು ಮಾಡಿ, ಚುನಾವಣೆ ಸಮಯದಲ್ಲಿ ತಮ್ಮ ಪರ ವಕಾಲತ್ತು ವಹಿಸಿದ ಎಡ ಸಿದ್ದಾಂತ ಪ್ರೇರಿತ ಸಾಹಿತಿಗಳ ಋಣ ತೀರಿಸಲು, ಬರಗೂರು ರಾಮಚಂದ್ರಪ್ಪನವರನ್ನು ಪಠ್ಯಕ್ರಮ ಪುನರ್ ರಚನೆ ಸಮಿತಿಯ ಸುಪ್ರೀಂ ಅಧ್ಯಕ್ಷರನ್ನು ಮಾಡಿ, ಅವರು ಕೊಟ್ಟದ್ದನ್ನೇ ಮಕ್ಕಳಿಗೆ ಉಣ ಬಡಿಸಲು ಹೊರಟಿದ್ದಾರೆ. ಆದರೆ ಅದರಲ್ಲಿ ಮಕ್ಕಳ ಏಳಿಗೆಗಿಂತ ರಾಜಕೀಯ ಹಿತವೇ ಎದ್ದು ಕಾಣುತ್ತಿರುವುದರಿಂದ, ರಾಜ್ಯದ ಜನ ಒಕ್ಕೊರಲಿನಿಂದ ವಿರೋಧಿಸುವ ಅಗತ್ಯತೆ ಇದೆ ಎನ್ನುವುದಂತೂ ಸ್ಪಷ್ಟವಾಗುತ್ತಿದೆ.

Read more from ಲೇಖನಗಳು

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments