ಕಲಬುರ್ಗಿಯವರ ಸಾವಿನಲ್ಲೂ ಸಾಹಿತಿಗಳು ಲಾಭ ಹುಡುಕಿದರಾ ?
– ಪ್ರವೀಣ್ ಕುಮಾರ್, ಮಾವಿನಕಾಡು
ಇತ್ತೀಚಿಗೆ ಒಂದು ದಿನ ಬೆಳಿಗ್ಗೆ ರೈಲಿನಲ್ಲಿ ಪ್ರಯಾಣ ಹೊರಟಿದ್ದೆ. ಎಂದಿನಂತೆ 2-3 ದಿನಪತ್ರಿಕೆಗಳನ್ನು ಕೊಂಡು ರೈಲು ಹತ್ತಿ ಕುಳಿತೆ. ರೈಲು ಹೊರಟ ನಂತರ ಒಂದು ದಿನಪತ್ರಿಕೆಯನ್ನು ತೆಗೆದು ಓದಲು ಶುರು ಮಾಡಿದೆ. ಪಕ್ಕದಲ್ಲಿ ಕುಳಿತಿದ್ದ ಹಿರಿಯರೊಬ್ಬರು ನಾನು ಓದುತ್ತಿದ್ದ ಪತ್ರಿಕೆಯ ಕಡೆ ಇಣುಕಿ ಇಣುಕಿ ನೋಡತೊಡಗಿದರು. ಸಣ್ಣದೊಂದು ಮುಗುಳ್ನಗೆಯೊಂದಿಗೆ ನನ್ನಲ್ಲಿದ್ದ ಇನ್ನೊಂದು ದಿನಪತ್ರಿಕೆಯನ್ನು ಅವರಿಗೆ ನೀಡಿ ಓದು ಮುಂದುವರಿಸಿದೆ. ಕೆಲವು ನಿಮಿಷಗಳ ನಂತರ ಆ ಹಿರಿಯರು “ಛೆ, ಕಲಬುರ್ಗಿಯವರ ಸಾವಿನಲ್ಲೂ ಸಾಹಿತಿಗಳು ಲಾಭ ಮಾಡ್ಕೋಳೋಕೆ ಹೋದ್ರು” ಅಂತ ಒಂದು ಉದ್ಘಾರ ತೆಗೆದರು.
ನನಗೆ ಆಶ್ಚರ್ಯವಾಯಿತು. ಏನ್ಸಾರ್ ಹೀಗೆ ಹೇಳ್ತಾ ಇದ್ದೀರಾ..! ಏನಾಯ್ತು? ಅಂದೆ. ಆಗ ಅವರು ತಮ್ಮ ಕೈಯಲ್ಲಿ ಹಿಡಿದಿದ್ದ ಪತ್ರಿಕೆಯಲ್ಲಿದ್ದ ಒಂದು ಸುದ್ದಿಯನ್ನು ನನಗೆ ತೋರಿಸಿದರು. ಆ ಸುದ್ದಿ ಹೀಗಿತ್ತು.
“ಇಡೀ ದೇಶದ ಗಮನ ಸೆಳೆದಿದ್ದ ಖ್ಯಾತ ಸಾಹಿತಿ, ಸಂಶೋಧಕ ಡಾ| ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣ ಸಂಬಂಧ ಸಿಐಡಿ ಪೊಲೀಸರು ಕಡೆಗೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಲ್ಬುರ್ಗಿ ಅವರ ತವರು ಜಿಲ್ಲೆ ವಿಜಯಪುರದ ಕೆಲವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು ಆ ಪೈಕಿ ಇಬ್ಬರು ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಮಗೆ ಕಲ್ಬುರ್ಗಿ ಅವರ ವಿಚಾರಗಳು, ಪುಸ್ತಕ, ಬರಹ – ಇವೇನೂ ಗೊತ್ತಿಲ್ಲ. ಆದರೆ, ಆಸ್ತಿ ವಿಷಯವಾಗಿ ಅವರೊಂದಿಗೆ ಜಗಳವಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಹತ್ಯೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ”.
ನನಗೆ ಏನು ಮಾತನಾಡಬೇಕೆಂದೇ ತೋಚಲಿಲ್ಲ. ಆಗ ಅವರೇ ಮುಂದಾಗಿ ಅರೆ! ಇದು ಇಷ್ಟೊಂದು ಸಣ್ಣ ಸುದ್ದಿಯೇ? ಸಂಶೋಧಕ ಡಾ|ಎಂ. ಎಂ.ಕಲ್ಬುರ್ಗಿ ಹತ್ಯೆ ನಡೆದ ನಂತರ ಕೆಲವು ದಿನಗಳಲ್ಲಿ ರಾಜ್ಯ ಮತ್ತು ಇಡೀ ದೇಶದಲ್ಲಿ ಯಾವ ರೀತಿಯಲ್ಲಿ ಸುದ್ದಿಯಾಯಿತು ಎನ್ನುವುದನ್ನು ನಾವೆಲ್ಲರೂ ನೋಡಿಲ್ಲವೇ ? ಅವರ ಸಾವಿನ ತನಿಖೆ ಪ್ರಾರಂಭವಾಗುವ ಮೊದಲೇ ಅವರನ್ನು ಬಲಪಂಥೀಯ ಸಂಘಟನೆಗಳೇ ಕೊಲೆ ಮಾಡಿವೆ ಎಂದು ನೇರಾನೇರವಾಗಿ ಅದೆಷ್ಟು ವಿಚಾರವಾದಿಗಳು ಆರೋಪಿಸಿದ್ದರು ಎನ್ನುವುದು ನೆನಪಿಲ್ಲವೇ ? ಅವರ ಕೊಲೆಗೆ ಅಸಹಿಷ್ಣುತೆಯೇ ಕಾರಣ ಎಂದು ಪ್ರಸಿದ್ಧ ಸುಪ್ರಸಿದ್ಧ ಸಾಹಿತಿಗಳಿಂದ ಹಿಡಿದು ಚಿಲ್ಲರೆ ಸಾಹಿತಿಗಳವರೆಗೆ ಎಲ್ಲರೂ ಸಾಲುಸಾಲಾಗಿ ತಾವು ಪಡೆದುಕೊಂಡಿದ್ದ ಪ್ರಶಸ್ತಿಯ ತಟ್ಟೆಗಳನ್ನು ವಾಪಸು ಮಾಡಿ ರಾಷ್ಟ್ರ ಮಟ್ಟದವರೆಗೂ ಪತ್ರಿಕೆ, ಟೀವಿ ಗಳಲ್ಲಿ ಮಿಂಚಿದ್ದು ಮರೆತು ಹೋಯಿತೇ? ಅವರ ಕೊಲೆಯಾಗಿದ್ದು ಅವರ ವೈಚಾರಿಕತೆಯನ್ನು ವಿರೋಧಿಸುವವರಿಂದಲೇ ಎನ್ನುವ ಸಂದೇಶ ಹೊತ್ತ ‘ನೀವು ವಿಚಾರವಾದಿಯನ್ನು ಕೊಲ್ಲಬಹುದು – ಆದರೆ ಅವರ ವಿಚಾರವನ್ನಲ್ಲ’ ಎನ್ನುವ ಸ್ಲೋಗನ್ ಕಾರ್ಡುಗಳನ್ನು ಹಿಡಿದುಕೊಂಡು ಟೌನ್ ಹಾಲ್ ನ ಮೆಟ್ಟಿಲುಗಳನ್ನು ಬುದ್ದಿಜೀವಿಗಳು ತಮ್ಮ ಪೃಷ್ಠಗಳಿಂದ ಪುನೀತಗೊಳಿಸಿದ್ದು ನೋಡಿಲ್ಲವೇ? ಎಂದು ಹೇಳುತ್ತಲೇ ಹೋದರು.
ಹಾಗಾದರೆ ಎಂ.ಎಂ.ಕಲ್ಬುರ್ಗಿಯವರ ಹತ್ಯೆಯ ಅಪರಾಧಿಗಳು ಯಾರು ಎನ್ನುವುದು ತಿಳಿಯುವ ಮೊದಲೇ ಸಾಹಿತಿಗಳು ಬೇರೆ ರೀತಿಯಲ್ಲಿ ಪ್ರಚಾರ ಮಾಡಿದ್ದರಾ? ಎಂದು ಅವರನ್ನು ಕೇಳಿದೆ.
ಹೌದು ಮತ್ತೆ. ಅವರ ಹತ್ಯೆಯ ಬಗ್ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಧ್ವನಿ ಎತ್ತದೇ ಇರುವುದನ್ನು ವಿರೋಧಿಸಿ, ಸಾಹಿತಿಗಳು ಪ್ರಶಸ್ತಿ ಮರಳಿಸುವ ಅಭಿಯಾನ ಆರಂಭಿಸಿದ್ದರು. ಜೊತೆಗೆ ಅಕಾಡೆಮಿಯ ಕೆಲ ಸದಸ್ಯರೂ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಕೈ ಜೋಡಿಸಿದ್ದರು. ನಂತರ ಅವರೆಲ್ಲರ ಒತ್ತಡಕ್ಕೆ ಮಣಿದ ಕೇಂದ್ರ ಸಾಹಿತ್ಯ ಅಕಾಡೆಮಿ ಕೊನೆಗೊಂದು ದಿನ ತುರ್ತು ಸಭೆ ನಡೆಸಿ ಎಂ.ಎಂ.ಕಲಬುರ್ಗಿ ಹತ್ಯೆಯನ್ನು ಖಂಡಿಸುವ ನಿರ್ಣಯ ಅಂಗೀಕರಿಸಿತು.
ಈಗ ನೀವೇ ಹೇಳಿ, ಕೇಂದ್ರ ಸಾಹಿತ್ಯ ಅಕಾಡೆಮಿಯಂಥಾ ಸಂಸ್ಥೆ ಖಂಡನಾ ನಿರ್ಣಯ ಅಂಗೀಕರಿಸುವಂತೆ ಮಾಡಲಾಯಿತು ಅಂದ ಮೇಲೆ ಅದು ಅವರ ವೈಚಾರಿಕ ಸಾಹಿತ್ಯಕ್ಕೆ ವಿರುದ್ಧವಿದ್ದ ವ್ಯಕ್ತಿಗಳೇ ಮಾಡಿದ ಹತ್ಯೆಯೇ ಹೊರತೂ ಬೇರೆ ಯಾವ ಕಾರಣಕ್ಕೂ ಅಲ್ಲ ಎನ್ನುವುದನ್ನು ತನಿಖೆಗೂ ಮೊದಲೇ ಸಾಬೀತು ಪಡಿಸುವ ಪ್ರಯತ್ನ ಅಂತ ತಾನೇ ಅರ್ಥ? ವೈಯುಕ್ತಿಕ ಕಾರಣಕ್ಕೆ ಮೃತರಾದವರಿಗೆ ಸಂತಾಪ ವ್ಯಕ್ತಪಡಿಸಲಾಗುತ್ತಾ ಅಥವಾ ಖಂಡನೆ ವ್ಯಕ್ತಪಡಿಸಲಾಗುತ್ತಾ ಹೇಳಿ, ಅಂದ್ರು.
ಹೌ..ದ..ಲ್ವಾ…..ಅಂತ ನಾನು ತಲೆ ಕೆರೆದುಕೊಳ್ಳತೊಡಗಿದೆ.
ಆದರೂ ಅವರ ಹತ್ಯೆಗೆ ಬೇರೆ ಕಾರಣಗಳಿಲ್ಲ ಅಂತ ಸಾಬೀತುಪಡಿಸೋಕೆ ಪ್ರಯತ್ನಿಸಿದ್ರು ಅನ್ನೋದು ತಪ್ಪಲ್ವಾ? ಅಂದೆ.
ನಾನೊಂದಷ್ಟು ಉದಾಹರಣೆ ಕೊಡ್ತೇನೆ. ಆಮೇಲೆ ತಪ್ಪೋ ಸರೀನೋ ಅಂತ ನೀವೇ ನಿರ್ಧಾರ ಮಾಡಿ ಅನ್ನುತ್ತಾ ಅವರು ಒಂದೊಂದೇ ಕಥೆ ಹೇಳತೊಡಗಿದರು.
‘ನಾವೆಲ್ಲರೂ ದೇಶದ ತುಂಬೆಲ್ಲ ಅಸಹಿಷ್ಣುತೆ ದಿನೇದಿನೇ ಹೆಚ್ಚುತ್ತಿರುವಾಗ ಬೇರೆ ರೂಪದ ಪ್ರತಿಭಟನೆಗೆ ಇಳಿಯುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲದರ ಜತೆಗೆ ನಮ್ಮ ಪ್ರಭುತ್ವವೂ ಸಹ ಇಂಥ ಅಸಹಿಷ್ಣುತೆಯ ಜನ್ಮದಾತರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗುತ್ತಲೇ ಬಂದಿದೆ’ ಎಂದು ಹೇಳುವ ಮೂಲಕ ಅವರ ಹತ್ಯೆಗೆ ಅಸಹಿಷ್ಣುತೆಯೇ ಕಾರಣ ಎನ್ನುವ ತೀರ್ಪಿನೊಂದಿಗೆ ದಯಾನಂದ ಟಿ.ಕೆ. ಎನ್ನುವ ಬರಹಗಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ ಪತ್ರ ಬರೆದು ತನಗೆ ಬಂದಿದ್ದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಿರಸ್ಕರಿಸಿ ಸಾಕಷ್ಟು ಪ್ರಚಾರ ಪಡೆದುಕೊಂಡಿದ್ದ, ಗೊತ್ತಾ? ಎಂದು ಕೇಳಿದರು.
ಹೌದು, ಎಲ್ಲೋ ಕೇಳಿದಂತಿದೆ ಎಂದೆ.
ಹಾಗೆಯೇ ಕೋಮುವಾದಿ ಶಕ್ತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿವೆ. ಇದರ ವಿರುದ್ಧ ಸಾಹಿತಿಗಳು ಪ್ರಶಸ್ತಿಗಳನ್ನು ಹಿಂತಿರುಗಿಸುವ ಮೂಲಕ ತಮ್ಮ ಸಾತ್ವಿಕ ಸಿಟ್ಟು ಹೊರಹಾಕುತ್ತಿದ್ದಾರೆ ಎಂದು ಕನ್ನಡ ಸಂಘದ ಸಂಚಾಲಕಿ ಹೇಳುತ್ತಾರೆ. ಮಹಾರಾಷ್ಟ್ರ ಮಾದರಿಯಲ್ಲಿ ಮೌಢ್ಯವಿರೋಧಿ ವಿಧೇಯಕ ಮಂಡನೆಯಾಗಬೇಕು ಎನ್ನುವ ಹೋರಾಟಗಳ ಮೂಲಕ ಆ ಜಾಗದಲ್ಲಿ ತೂರಿಕೊಳ್ಳುವ ಪ್ರಯತ್ನವನ್ನು ಒಂದಷ್ಟು ಮಂದಿ ಹಿರಿಕಿರಿ ವಿಚಾರವಾದಿಗಳು ನಡೆಸಿದರು. ವಿಚಾರವಾದಿ ಎಂ.ಎಂ.ಕಲ್ಬುರ್ಗಿ ಅವರ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿ ಪ್ರತೀ ವರ್ಷ ನಮ್ಮ ನಡುವೆ ಇರುವ ವಿಚಾರವಾದಿಗಳಿಗೆ ಆ ಪ್ರಶಸ್ತಿ ಕೊಡಬೇಕು ಎನ್ನುವ ಇನ್ನೊಂದು ಕೂಗಿನೊಂದಿಗೆ ಮತ್ತೊಂದಷ್ಟು ವಿಚಾರವಾದಿಗಳು ಇನ್ನೊಂದಷ್ಟು ಪ್ರಶಸ್ತಿಗಳನ್ನು ತಮ್ಮ ಜೋಳಿಗೆಗೆ ತುಂಬಿಕೊಳ್ಳಲು ಪ್ರಯತ್ನಿಸಿದರು, ಗೊತ್ತಾ..? ಎಂದರು.
ಕೇಳಿದ್ದೇನೆ. ಆದರೆ ಅದರ ಹಿಂದೆ ಇಂಥದ್ದೊಂದು ಸ್ವಾರ್ಥವಿತ್ತು ಎನ್ನುವುದು ಗೊತ್ತಿರಲಿಲ್ಲ ಸಾರ್ ಎಂದೆ.
ಅದೆಲ್ಲ ಹೋಗಲಿ, ಅವರ ಹತ್ಯೆಯ ನಂತರ ಸ್ವತಃ ಈ ನಾಡಿನ ದೊರೆಯ ಸಲಹೆಗಾರರೇ “ಕಲ್ಬುರ್ಗಿ ಆಯ್ತು, ಮುಂದಿನ ಗುಂಡು ಯಾರ ತಲೆಗೆ..?” ಎಂದು ಕೇಳುತ್ತಾರೆ! “ನಮ್ಮ ಸ್ನೇಹಿತರೇ ಮಾಡಿರುವ ಪಟ್ಟಿಯಲ್ಲಿ ನನ್ನ ಹೆಸರೂ ಇದೆ. ಕಲ್ಬುರ್ಗಿಯವರನ್ನು ಕೋಮುವಾದಿ ಹಂತಕರೇ ಹತ್ಯೆ ಮಾಡಿದ್ದರೆ ಅವರು ಸರತಿಯ ಸಾಲನ್ನು ಮುರಿದು ಮಾಡಿದ್ದಾರೆ ಎಂದಾಗುತ್ತದೆ. ಆದ್ದರಿಂದ ಗುಂಡು ಯಾರ ತಲೆಗೂ ಬೀಳಬಹುದು. ನನ್ನ ತಲೆಗೆ ಗುಂಡು ಬಿದ್ದರೆ ರಕ್ಷಣೆಗೆ ಕೂದಲೂ ಇಲ್ಲದಿರುವುದು ನನ್ನನ್ನು ಇನ್ನೂ Vulnerable ಮಾಡಿದೆ. ಭಯದಿಂದ ಗಡಗಡಗಡ ನಡುಗುತ್ತಿದ್ದೇನೆ” ಎಂದು ಬರೆದುಕೊಳ್ಳುತ್ತಾರೆ. ಅವರ ಸ್ನೇಹಿತರೇ ಮಾಡಿರುವ ಪಟ್ಟಿಯನ್ನು ರಾಷ್ಟ್ರೀಯ ಮಾಧ್ಯಮಗಳು ಕೂಡಾ ಪ್ರಕಟಿಸುತ್ತವೆ.
ಅದರಲ್ಲೇನು ತಪ್ಪು? ಅವರಿಗೆ ಬೆದರಿಕೆ ಇದ್ದಿದ್ದಕ್ಕೇ ಮಾಧ್ಯಮಗಳಲ್ಲಿ ಬಂದಿರಬಹುದು, ಅಂದೆ.
ಸರಿ ಸಾರ್, ಹಾಗಾದರೆ ಸ್ವತಃ ನಾಡಿನ ದೊರೆಯ ಸಲಹೆಗಾರರೂ ಸೇರಿ ಏಳೆಂಟು ಜನ ಪ್ರಸಿದ್ಧ ಸಾಹಿತಿಗಳೂ ಕೊಲೆಗಾರರ ಹಿಟ್ ಲಿಸ್ಟ್ ನಲ್ಲಿದ್ದಾರೆ ಎಂದು ಗೊತ್ತಾದ ಮೇಲೂ ಅದರ ಹಿಂದೆ ಯಾರಿದ್ದಾರೆ ಎಂದು ಸರ್ಕಾರ ಸಮರ್ಥವಾಗಿ ತನಿಖೆ ನಡೆಸಿತಾ? ಅವರಿಗೆ ಗುಂಡು ಹಾಕಲು ಸಿದ್ಧರಿದ್ದ ಯಾರನ್ನಾದರೂ ಸರ್ಕಾರ ಬಂಧಿಸಿತಾ? ನಮ್ಮ ಮೇಲೆ ಗುಂಡು ಹಾರಿಸಲು ಕೆಲವರು ಕಾಯುತ್ತಿದ್ದಾರೆ, ಅವರನ್ನು ಬೇಗ ಬಂಧಿಸಿ ಎಂದು ಹಿಟ್ ಲಿಸ್ಟ್ ನಲ್ಲಿದ್ದ ಆ ಸಾಹಿತಿಗಳ್ಯಾರಾದರೂ ಸರ್ಕಾರದ ಮೇಲೆ ಒತ್ತಡ ಹಾಕಿದ್ದು ನೋಡಿದಿರಾ? ಅದೆಲ್ಲ ಹೋಗಲಿ, ಅದಾಗಿ ಒಂದೂವರೆ ವರ್ಷಗಳೇ ಆಗುತ್ತಾ ಬಂದರೂ ಯಾರ ಮೇಲಾದರೂ ಹಲ್ಲೆ ನಡೆದ ಬಗ್ಗೆ ವರದಿಯಾಯಿತಾ?
ಅಂದರೆ ನೀವು ಏನು ಹೇಳೋಕೆ ಪ್ರಯತ್ನಿಸ್ತಿದ್ದೀರಿ ಸಾರ್? ಅಂದೆ.
ಅಂದ್ರೆ ಇವರದ್ದೆಲ್ಲಾ ಬರೀ ನಾಟಕ. ಕಲಬುರ್ಗಿಯವರ ಹತ್ಯೆಯ ವಿಷಯವನ್ನಿಟ್ಟುಕೊಂಡು ಪ್ರಚಾರ ಪಡೆಯೋಕೆ ಈ ರೀತಿಯ ನಾಟಕ ಆಡಿದ್ರು ಅಷ್ಟೇ.. ಅಂದ್ರು. ನನಗೆ ಸಂಪೂರ್ಣ ನಂಬಿಕೆ ಬರಲಿಲ್ಲವಾದರೂ ಅವರು ಹೇಳಿದ್ದು ತಪ್ಪು ಅಂತ ವಾದಿಸೋಕೆ ನನಗೆ ಯಾವ ಪಾಯಿಂಟ್ ಗಳೂ ಸಿಗಲಿಲ್ಲ.
ಡಾ. ಎಂ.ಎಂ. ಕಲಬುರ್ಗಿ ಹತ್ಯೆಯಾದ ಮುಂದಿನ ಒಂದೇ ದಿನದಲ್ಲಿ ಬರಗೂರು ರಾಮಚಂದ್ರಪ್ಪ ಮುಂತಾದ ಸಾಹಿತಿಗಳ ನೇತೃತ್ವದಲ್ಲಿ ಪುರಭವನದ ಎದುರು ಪ್ರತಿಭಟನೆ ನಡೆಸಲಾಯಿತು. ಆ ಪ್ರತಿಭಟನೆಯಲ್ಲಿ ಮಾತನಾಡಿದ ಬರಗೂರು ಅವರು ‘ವಸ್ತುನಿಷ್ಠವಾಗಿ ಮಾತನಾಡುತ್ತಿದ್ದ ಕಲಬುರ್ಗಿ ಅವರ ಹತ್ಯೆ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅಪಾಯಕಾರಿ ಬೆಳವಣಿಗೆಯಾಗಿದೆ’ ಎನ್ನುವ ಮೂಲಕ ಆ ಕೊಲೆ ಅವರ ಸಿದ್ಧಾಂತಗಳನ್ನು ಸಹಿಸದ ವ್ಯಕ್ತಿಗಳು ಮಾಡಿದ ಕೊಲೆಯೇ ಹೊರತೂ ಬೇರೆ ಯಾವುದೇ ಕಾರಣಕ್ಕೂ ಅಲ್ಲ ಎನ್ನುವ ಪರೋಕ್ಷ ತೀರ್ಪು ನೀಡಿಬಿಟ್ಟರು. ನಂತರ ಕೆಲವೇ ದಿನಗಳಲ್ಲಿ ಸಾಹಿತಿಗಳ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ‘ದಾಭೋಲ್ಕರ್, ಪನ್ಸಾರೆ ಅವರ ಹತ್ಯೆಗಳ ಜೊತೆ ಕಲಬುರ್ಗಿ ಅವರ ಹತ್ಯೆಯೂ ವೈಚಾರಿಕ ಕಾರಣಕ್ಕೇ ನಡೆದಿದೆ’ ಎಂದು ಪ್ರತಿಪಾದಿಸುವ ಮೂಲಕ ಬೇರೆ ಕೋನಗಳಿಂದ ತನಿಖೆ ನಡೆಸಲಾಗದಂತೆ ಪರೋಕ್ಷ ಒತ್ತಡ ಹೇರಲಾಯಿತು.
ಆಶ್ಚರ್ಯವೆಂದರೆ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗಳ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿತ್ತು. ಅದರ ಋಣ ತೀರಿಸಲು ಪರೋಕ್ಷವಾಗಿ ಬಲಪಂಥೀಯ ಸಂಘಟನೆಗಳ ಮೇಲೆ ಬೊಟ್ಟು ಮಾಡಿ ತನಿಖೆಯ ದಿಕ್ಕು ತಪ್ಪಿಸಲಾಯಿತೇ ಎನ್ನುವುದು ಜನ ಸಾಮಾನ್ಯರ ಪ್ರಶ್ನೆ. ನಂತರ ಕಳೆದ ಒಂದು ವರ್ಷದಲ್ಲಿ ಏನೇನು ಕಾರ್ಯಗಳಾಗಿವೆ ಎನ್ನುವ ಸಣ್ಣ ಪ್ರಶ್ನೆಯನ್ನೂ ಮಾಡದೆ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗಳ ಅಧ್ಯಕ್ಷರನ್ನಾಗಿ ಸರ್ಕಾರ ಅವರನ್ನೇ ಮರುನೇಮಕ ಮಾಡಿತು. ಇನ್ನೂ ಆಶ್ಚರ್ಯವೆಂದರೆ ಮರು ವರ್ಷವೇ ಒಬ್ಬ ಸಾಹಿತಿಯ ಜೀವಮಾನದಲ್ಲೇ ಸಿಗಬಹುದಾದ ಅತ್ಯಂತ ಶ್ರೇಷ್ಠ ಗೌರವ ಎನ್ನಬಹುದಾದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅದೇ ಬರಗೂರು ರಾಮಚಂದ್ರಪ್ಪ ಆಯ್ಕೆಯಾಗುತ್ತಾರೆ! ಇವೆಲ್ಲವೂ ಕೇವಲ ಕಾಕತಾಳೀಯ ಎಂದರೆ ನಂಬಲಾದೀತೇ ಎಂದು ನನ್ನನ್ನು ಪ್ರಶ್ನಿಸಿದರು.
ನಾನಂತೂ ಉತ್ತರಿಸಲು ವಿಫಲನಾದೆ. ಅಷ್ಟರಲ್ಲೇ ನನ್ನ ಮನಸ್ಸು ಗೊಂದಲದ ಗೂಡಾಗಿತ್ತು.
ಕಲಬುರ್ಗಿಯವರ ಹತ್ಯೆ ನಡೆದು ಸರಿಯಾಗಿ ಒಂದು ತಿಂಗಳ ನಂತರ ಹಿಂದೂ ದೇವರುಗಳನ್ನು ಅಶ್ಲೀಲವಾಗಿ ಚಿತ್ರಿಸುವುದೇ ಸಾಹಿತ್ಯ ಎಂದುಕೊಂಡಿರುವ ಯೋಗೇಶ್ ಮಾಸ್ಟರ್ ಎನ್ನುವ ವ್ಯಕ್ತಿಯೊಬ್ಬರು ಎರಡೇ ವಾರ ಮುಂಚೆ ಬಂಧೂಕುಧಾರಿಗಳು ನಮ್ಮ ಮನೆಗೂ ಬಂದಿದ್ದರು. ಒಟ್ಟು ನಾಲ್ಕು ಬಾರಿ ನನ್ನ ಮನೆಗೆ ಬಂದಿದ್ದರು. ಅದೇ ವ್ಯಕ್ತಿಗಳೇ ಕಲಬುರ್ಗಿಯವರ ಕೊಲೆ ಮಾಡಿದ್ದಾರೆ. ನನಗೂ ಜೀವಬೆದರಿಕೆಯಿದೆ ಎನ್ನುವ ಮೂಲಕ ಸರ್ಕಾರದಿಂದ ಪೊಲೀಸರ ರಕ್ಷಣೆ ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಪ್ರಚಾರ ಗಿಟ್ಟಿಸಿಕೊಂಡರು. ಅವರಿಗೆ ರಕ್ಷಣೆ ಕೊಟ್ಟ ಸರ್ಕಾರ ಅವರ ಮನೆಗೆ ಬಂದು ಬೆದರಿಕೆಯೊಡ್ಡಿದ ಯುವಕರನ್ನು ಹುಡುಕುವ ಪ್ರಯತ್ನ ಮಾಡಿತೇ ಅಥವಾ ಇಲ್ಲವೇ ಎನ್ನುವ ಬಗ್ಗೆ ಎಲ್ಲಿಯೂ ಸುದ್ದಿಯಾಗಲಿಲ್ಲ. ಹಾಗೊಂದು ವೇಳೆ ಆ ವ್ಯಕ್ತಿಗೆ ಬೆದರಿಕೆ ಇದ್ದಿದ್ದೇ ಆದರೆ ಆ ಕಿಡಿಗೇಡಿಗಳನ್ನು ಯಾಕೆ ಬಂಧಿಸಲಿಲ್ಲ, ವರ್ಷ ಕಳೆದರೂ ಯಾಕೆ ಹುಡುಕಿ ಬಂಧಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಅದೇ ಯೋಗೇಶ್ ಮಾಸ್ಟರ್ ಸರ್ಕಾರವನ್ನು ಯಾಕೆ ಒತ್ತಾಯಿಸುತ್ತಿಲ್ಲ? ಎಲ್ಲಾ ಬರೀ ನಾಟಕ ಅನಿಸುತ್ತಿಲ್ವಾ? ಎಂದು ನನ್ನ ಕಡೆ ನೋಡಿದರು.
ಅವರ ಮುಖ ನೋಡುವುದಷ್ಟೇ ನನ್ನ ಉತ್ತರವಾಗಿತ್ತು.
ಹೆಚ್ಚೂಕಡಿಮೆ ಇದೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಧುಸೂದನ್ ಗೌಡ ಎನ್ನುವ ವ್ಯಕ್ತಿಯೊಬ್ಬ ನನಗೆ ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾನೆ ಎಂದು ಪತ್ರಕರ್ತೆಯೊಬ್ಬಳು ನಟ ನಟಿಯರ ಜೊತೆ ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ದೇಶದಾದ್ಯಂತ ಸುದ್ದಿಯಾಗುತ್ತಾಳೆ. ವಿಚಿತ್ರವೆಂದರೆ ಇವತ್ತಿನವರೆಗೂ ಆ ಮಧುಸೂದನ್ ಗೌಡ ಅನ್ನುವ ವ್ಯಕ್ತಿಯ ಬಗ್ಗೆ ಯಾವ ಸುಳಿವೂ ಇಲ್ಲ!
ಅಂದ್ರೆ ಮಧುಸೂದನ್ ಗೌಡ ತಪ್ಪಿಸಿಕೊಂಡುಬಿಟ್ಟನಾ? ಅಂದೆ.
ಹಹ್ಹಹ್ಹಹ್ಹ… ಹಾಗೊಬ್ಬ ಇದ್ದಾನೆ ಅನ್ನೋದೇ ಅನುಮಾನ. ಹಾಗೊಂದು ವೇಳೆ ಇದ್ದರೂ ಫೇಸ್ ಬುಕ್ ನಲ್ಲಿ ಬೆದರಿಕೆ ಹಾಕಿ ವರ್ಷಗಳ ಕಾಲ ಕಾನೂನಿನ ಕಣ್ಣಿಂದ ತಪ್ಪಿಸಿಕೊಳ್ಳೋದು ಅಷ್ಟೊಂದು ಸುಲಭಾನಾ? ಅದಾದ ಮೇಲೆ ನನಗೆ ಬೆದರಿಕೆ ಹಾಕಿದವನನ್ನು ಇದುವರೆಗೂ ಯಾಕೆ ಹಿಡಿದಿಲ್ಲ ಅಂತ ಆಕೆ ಅಥವಾ ಆಕೆಯ ಪರವಾಗಿ ಯಾರಾದರೂ ಹೋರಾಟ ಮಾಡಿದ್ದು ನೋಡಿದ್ದೀರಾ?
ಅಂದ್ರೆ ಇದೆಲ್ಲಾ ಪ್ರಚಾರ ಪಡೆಯೋದಕ್ಕೆ ಮಾಡಿದ ನಾಟಕ ಅನ್ನೋದು ನಿಮ್ಮ ಅಭಿಪ್ರಾಯಾನಾ? ಅಂದೆ.
ಇರಿ. ನಿಮಗೆ ಇನ್ನೂ ಒಂದು ಉದಾಹರಣೆ ಕೊಡ್ತೀನಿ ನೋಡಿ ಎನ್ನುತ್ತಾ.. ಕಲಬುರ್ಗಿಯವರ ಹತ್ಯೆಯಾಗಿ ಕೆಲವೇ ದಿನಗಳ ಅಂತರದಲ್ಲಿ ವಿಚಾರವಾದಿ ಎಂದು ಹೇಳಿಕೊಳ್ಳುವ ಭಗವಾನ್ ಅವರು ತನಗೂ ಬೆದರಿಕೆ ಇದೆ ಎಂದು ದೂರುತ್ತಾರೆ. ಸರ್ಕಾರ ಅವರ ಮನೆಯ ಸುತ್ತಾ ಪೊಲೀಸ್ ಸರ್ಪಗಾವಲು ಹಾಕಿದ ನಂತರವೂ ನಿನ್ನನ್ನೂ ಹತ್ಯೆಗೈಯುವುದಾಗಿ ಬೆದರಿಕೆ ಹಾಕಿ ಯಾವುದೇ ಹಸ್ತಾಕ್ಷರವಿಲ್ಲದೆ ಟೈಪ್ ಮಾಡಲ್ಪಟ್ಟ ಐದು ರೂಪಾಯಿ ಸ್ಟ್ಯಾಂಪ್ ಹಚ್ಚಿದ ಪತ್ರವೊಂದು ಭಗವಾನ್ ಅವರಿಗೆ ತಲುಪುತ್ತದೆ. ಆ ಪತ್ರವನ್ನು ತೋರಿಸಲೆಂದೇ ಭಗವಾನ್ ರವರು ಪತ್ರಿಕಾಗೋಷ್ಠಿಯನ್ನು ಕೂಡಾ ಕರೆಯುತ್ತಾರೆ. ಹೀಗೆ ಭಗವಾನ್ ಅವರು ತಾನೊಬ್ಬ ದೊಡ್ಡ ವಿಚಾರವಾದಿ ಎಂದು ಬಿಂಬಿಸಿಕೊಳ್ಳುವ ಮೂಲಕ ಇಡೀ ದೇಶದ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಆ ಪತ್ರದ ಮೂಲ ಮತ್ತು ಅದರ ಹಿಂದಿರುವ ವ್ಯಕ್ತಿಯನ್ನು ಸರಿ ಸುಮಾರು ಒಂದೂವರೆ ವರ್ಷ ಕಳೆದ ನಂತರವೂ ಪತ್ತೆಹಚ್ಚಿಲ್ಲ ಮತ್ತು ಯಾಕೆ ಪತ್ತೆಹಚ್ಚಿಲ್ಲ ಎಂದು ಭಗವಾನ್ ಅವರೂ ಸರ್ಕಾರವನ್ನು ಒತ್ತಾಯಿಸಿದ ಬಗ್ಗೆ ಎಲ್ಲೂ ವರದಿಯಾಗಿಲ್ಲ!
ಆಶ್ಚರ್ಯವೆಂದರೆ ಹತ್ಯೆಯ ತನಿಖೆಯ ದಿಕ್ಕನ್ನು ತಪ್ಪಿಸಲು ಪ್ರಯತ್ನಿಸಿದರು ಎಂದು ಜನಸಾಮಾನ್ಯರು ಅಂದುಕೊಳ್ಳುವ ಅದೇ ಭಗವಾನರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗುತ್ತದೆ. ಯಾವ ಕೃತಿಗೆ ನೀಡಬೇಕು ಎನ್ನುವ ಗೊಂದಲ ಉಂಟಾದಾಗ ಸಮಗ್ರ ಸಾಹಿತ್ಯಕ್ಕೆ ಎನ್ನುವ ಹೆಸರಿನೊಂದಿಗೆ ನೀಡುವ ತೀರ್ಮಾನವಾಗುತ್ತದೆ. ಅದಾಗಲೇ ಅವರ ಮೇಲೆ ಹಲವಾರು ದೂರುಗಳು ದಾಖಲಾಗಿದ್ದ ಕಾರಣ ಅವರಿಗೆ ಪ್ರಶಸ್ತಿ ನೀಡಬಾರದು ಎಂದು ಒತ್ತಾಯಿಸಿದ ರಾಜ್ಯದ ಹತ್ತಾರು ಸಾವಿರಕ್ಕೂ ಅಧಿಕ ಸಾಹಿತ್ಯಾಭಿಮಾನಿಗಳ ಒತ್ತಾಯವನ್ನೂ ತಿರಸ್ಕರಿಸಿ ಏಕಪಕ್ಷೀಯವಾಗಿ ಸಾಹಿತ್ಯಿಕ ಇತಿಹಾಸದಲ್ಲಿಯೇ ಮೊತ್ತ ಮೊದಲನೆಯ ಬಾರಿಗೆ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ! ಇದು ಕಲಬುರ್ಗಿ ಅವರ ಹತ್ಯೆಯ ನಂತರ ಅಸಹಿಷ್ಣುತೆಯ ಹೆಸರಿನಲ್ಲಿ ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು ತನಿಖೆಗೂ ಮೊದಲೇ ಫಿಟ್ ಮಾಡಿಸಲು ಅವರು ನಡೆಸಿದ ಪ್ರಯತ್ನಕ್ಕೆ ಸಿಕ್ಕಿದ ಋಣಸಂದಾಯ ಎಂದು ನಿಮಗೆ ಅನ್ನಿಸುವುದಿಲ್ಲವೇ? ಎಂದರು.
ಇರಬಹುದೇನೋ ಅನ್ನಿಸುತ್ತಿದೆ ಎಂದು ರಾಗ ಎಳೆದೆ.
ಅವರ ಹತ್ಯೆಯ ನಂತರ ದೇಶದಾದ್ಯಂತ ಅಸಹಿಷ್ಣುತೆ ಎನ್ನುವ ಪದ ಬಳಕೆಗೆ ಬಂದಿದ್ದು ಗೊತ್ತೇ ಇದೆ ಅಲ್ವಾ? ಅದನ್ನೇ ಬಳಸಿಕೊಂಡು ಇನ್ನೊಬ್ಬ ಹ್ಯಾಗೆ ಹೀರೊ ಆಗೋಕೆ ಪ್ರಯತ್ನಿಸಿದ ಗೊತ್ತಾ? ಅಂದ್ರು.
ಗೊತ್ತಿಲ್ಲ, ಹೇಳಿ ಅಂದೆ.
ಯುವ ಸಾಹಿತಿ ಎಂದು ಹೇಳಿಕೊಳ್ಳುವ ಹುಚ್ಚಂಗಿ ಪ್ರಸಾದ್ ಎನ್ನುವ ಹುಡುಗ ಕಲಬುರ್ಗಿ ಅವರ ಹತ್ಯೆಯಾಗಿ ಎರಡು ತಿಂಗಳು ಕಳೆಯುವ ಮೊದಲೇ “ರಾತ್ರಿ ದುಷ್ಕರ್ಮಿಗಳು ನಿನ್ನ ತಾಯಿಗೆ ಹೃದಾಯಘಾತವಾಗಿದೆ ಅಂತ ಸುಳ್ಳು ಹೇಳಿ ಕರೆದೊಯ್ದು, ದಾರಿ ಮಧ್ಯೆ ಮನಬಂದಂತೆ ನಿಂದಿಸಿ ಹಲ್ಲೆ ಮಾಡಿದ್ದರು. ಅಲ್ಲದೆ ನನ್ನ ಪುಸ್ತಕ ಬಿಡುಗಡೆಗೆ ಕೆ ಎಸ್ ಭಗವಾನ್ ಬಂದಿದ್ದನ್ನು ಗುರಿಯಾಗಿಸಿ ಕೊಲೆ ಯತ್ನ ನಡೆಸಿ ನನ್ನ ಕೈ ಕತ್ತರಿಸಲು ಮುಂದಾಗಿದ್ದರು ಎಂದು ಕೈಗೊಂದು ಬ್ಯಾಂಡೇಜ್ ಕಟ್ಟಿಕೊಂಡು ಬಂದು ಪತ್ರಿಕಾಘೋಷ್ಠಿ ಮಾಡಿದ. ಆ ನಂತರ ಹಾಗೊಬ್ಬ ಇದ್ದಾನೆ ಎನ್ನುವುದೇ ಗೊತ್ತಿರದಿದ್ದ ಜನಕ್ಕೆ ಹುಚ್ಚಂಗಿ ಪ್ರಸಾದ್ ಅನ್ನುವ ಲೇಖಕನೊಬ್ಬನಿದ್ದಾನೆ ಎನ್ನುವುದು ಗೊತ್ತಾಯಿತು. ರಾಜ್ಯದಾದ್ಯಂತ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕೇರಳ ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳಲ್ಲೂ ಆತನಿಗೆ ಒಳ್ಳೇ ಪ್ರಚಾರ ದೊರೆಯಿತು.
ಆಶ್ಚರ್ಯ ಏನು ಗೊತ್ತಾ..? ಕೊನೆಗೊಂದು ದಿನ ಅವನು ಹೇಳಿದ್ದೆಲ್ಲಾ ಕಟ್ಟುಕಥೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂತು. ಆದರೆ ಅದು ಅಷ್ಟು ದೊಡ್ಡ ಸುದ್ದಿಯಾಗಲೇ ಇಲ್ಲ. ಅಲ್ಲಿಗೆ ಆ ಯುವಕ ಕಲಬುರ್ಗಿಯವರ ಹತ್ಯೆಯ ವಿಷಯ ಮತ್ತು ಅಸಹಿಷ್ಣುತೆಯ ವಿಷಯ ಬಳಸಿಕೊಂಡು ದೇಶದಾದ್ಯಂತ ಹೆಸರು ಮಾಡಿಬಿಟ್ಟ. ಅವನಿಗೆ ಬೇಕಾಗಿದ್ದು ಅದೇ!
ಅದೆಲ್ಲಾ ಸರಿ ಸಾರ್, ಆ ನೆಪದಲ್ಲಿ ಅವರುಗಳು ಒಂದಷ್ಟು ಪ್ರಚಾರ ಪಡೆದುಕೊಂಡರು ಎನ್ನುವುದನ್ನೂ ಒಪ್ಪುತ್ತೇನೆ. ಅವರ ಹತ್ಯೆಯನ್ನು ತನಿಖೆಗೂ ಮೊದಲೇ ಈ ಸಾಹಿತಿಗಳೆಲ್ಲಾ ಇನ್ಯಾವುದೋ ಸಂಘಟನೆಗಳ ಮೇಲೆ ಹಾಕಿದರು ಎಂದೇ ಒಪ್ಪೋಣ. ಆದರೆ ಅದಕ್ಕೆ ಸರ್ಕಾರದಿಂದ ನೆರವು ಸಿಗುತ್ತೆ, ಲಾಭವಾಗುತ್ತೆ ಅನ್ನೋದನ್ನೆಲ್ಲಾ ನಾನು ಒಪ್ಪಲ್ಲ ಸಾರ್.. ಅಂದೆ.
ಹಾಗಾದರೆ ಬಹುತೇಕ ಅದೇ ಸಮಯದಲ್ಲಿ “ಬಿಜೆಪಿ ಬೆಂಬಲಿತ ಸಂಘಟನೆಗಳ ವಿರುದ್ಧ ಹೋರಾಡಿ :ನಿಮಗೆ ಬೆಂಬಲ ಕೊಡುತ್ತೇವೆ” ಎಂದು ಮುಖ್ಯಮಂತ್ರಿಗಳು ಕೊಟ್ಟ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅಂದರು.
ಅವರಿಗೆ ಏನೆಂದು ಉತ್ತರಿಸಬೇಕು ಎಂದು ಯೋಚಿಸುತ್ತಿರುವಾಗಲೇ ‘ನನ್ನ ಸ್ಟೇಷನ್ ಬಂತು. ಇಲ್ಲೇ ನನ್ನ ಮಗಳ ಮನೆಗೆ ಹೋಗ್ತಾ ಇದ್ದೇನೆ, ಸಾಧ್ಯವಾದರೆ ಇನ್ನೊಮ್ಮೆ ಸಿಗೋಣ’ ಎನ್ನುತ್ತಾ ನನ್ನ ದಿನಪತ್ರಿಕೆಯನ್ನು ನನ್ನ ಕೈಗಿಡುತ್ತಾ ಇಳಿದು ಹೊರಟೇಬಿಟ್ಟರು.
ಅವರು ರೈಲಿನಿಂದ ಇಳಿದು ಹೋದರೂ, ಮುಂದಿನ ನಿಲ್ದಾಣದಲ್ಲಿ ನಾನೂ ಕೂಡಾ ರೈಲಿನಿಂದ ಇಳಿದರೂ ಅವರು ಹೇಳಿದ “ಛೆ, ಕಲಬುರ್ಗಿಯವರ ಸಾವಿನಲ್ಲೂ ಸಾಹಿತಿಗಳು ಲಾಭ ಮಾಡ್ಕೋಳೋಕೆ ಹೋದ್ರು” ಎನ್ನುವ ಶಬ್ದ ನನ್ನ ಮನಸ್ಸಿನಿಂದ ಇಳಿಯಲೇ ಇಲ್ಲ.
- ಬಹುಷಃ ಭಗವಾನ್ ಅವರಿಗೆ ಅಷ್ಟೊಂದು ವಿರೋಧವಿದ್ದಾಗಿಯೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಡದಿದ್ದರೆ ನನ್ನ ಒಂದು ಅನುಮಾನ ಕಡಿಮೆಯಾಗುತ್ತಿತ್ತೇನೋ.
- ಬಹುಷಃ ಬರಗೂರು ಅವರಿಗೆ ಸಮಿತಿಯಲ್ಲಿ ಈ ವರೆಗೂ ಏನೇನು ಕಾರ್ಯಗಳಾಗಿವೆ ಎನ್ನುವ ಸಣ್ಣ ಪ್ರಶ್ನೆಯನ್ನೂ ಮಾಡದೆ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗಳ ಅಧ್ಯಕ್ಷರನ್ನಾಗಿ ಮರುನೇಮಕ ಮಾಡಿರದಿದ್ದರೆ ನನ್ನ ಇನ್ನೊಂದು ಅನುಮಾನ ಕಡಿಮೆಯಾಗುತ್ತಿತ್ತೇನೋ.
- ಬಹುಷಃ ನಾಡಿನ ದೊರೆಯ ಸಲಹೆಗಾರರು, ಯೋಗೇಶ್ ಮಾಸ್ಟರ್ ಮತ್ತು ಹಿಟ್ ಲಿಸ್ಟ್ ನಲ್ಲಿ ಇದ್ದೇವೆ ಎಂದು ಹೇಳಿಕೊಂಡಿದ್ದ ಇತರ ಸಾಹಿತಿಗಳಿಗೆ ಬೆದರಿಕೆ ಹಾಕಿದ್ದ ವ್ಯಕ್ತಿಗಳು ಸಿಕ್ಕಿಬಿದ್ದಿದ್ದರೆ ನನ್ನ ಮತ್ತೊಂದು ಅನುಮಾನ ಕಡಿಮೆಯಾಗುತ್ತಿತ್ತೇನೋ.
- ಬಹುಷಃ ಪತ್ರಕರ್ತೆಯೊಬ್ಬಳಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾದ ಮಧುಸೂದನ್ ಗೌಡ ಎನ್ನುವವನು ಸಿಕ್ಕಿಬಿದ್ದಿದ್ದರೆ ನನ್ನ ಮತ್ತೂ ಒಂದು ಅನುಮಾನ ಕಡಿಮೆಯಾಗುತ್ತಿತ್ತೇನೋ.
- ಬಹುಷಃ ಹುಚ್ಚಂಗಿ ಪ್ರಸಾದ್ ಮೇಲೆ ಹಲ್ಲೆ ನಡೆದಿದ್ದು ಸುಳ್ಳು ಎಂದು ಗೊತ್ತಾದ ಮೇಲೆ ಇತರ ಸಾಹಿತಿಗಳು ಆತನನ್ನು ಖಂಡಿಸಿದ್ದರೆ ನನ್ನ ಇನ್ನೂ ಒಂದು ಅನುಮಾನ ಕಡಿಮೆಯಾಗುತ್ತಿತ್ತೇನೋ.
- ಬಹುಷಃ “ಡಾ| ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣ ಸಂಬಂಧ ಸಿಐಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆ ಪೈಕಿ ಇಬ್ಬರು ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ” ಎನ್ನುವ ಸುದ್ದಿಗೆ ಸಾಹಿತಿಗಳು ಪ್ರತಿಕ್ರಿಯೆ ನೀಡಿದ್ದರೆ ನನ್ನ ಮತ್ತೂ ಒಂದು ಅನುಮಾನ ಕಡಿಮೆಯಾಗುತ್ತಿತ್ತೇನೋ.
- ಬಹುಷಃ ಮೇಲಿನ ಬಹುತೇಕ ಎಲ್ಲಾ ಘಟನೆಗಳೂ ಅದೇ ಎರಡು ಮೂರು ತಿಂಗಳ ಆಸುಪಾಸಿನಲ್ಲಿಯೇ ನಡೆದಿದ್ದೇಕೆ ಎನ್ನುವುದನ್ನು ಯಾರಾದರೂ ಸ್ಪಷ್ಟಪಡಿಸಿದ್ದರೆ ನನ್ನ ಇನ್ನೂ ಒಂದು ಅನುಮಾನ ಕಡಿಮೆಯಾಗುತ್ತಿತ್ತೇನೋ.
- ಬಹುಷಃ ಇವೆಲ್ಲಾ ಘಟನೆಗಳೂ ಕೇವಲ ಕಾಕತಾಳೀಯ ಎಂದು ಯಾರಾದರೊಬ್ಬರು ಸ್ಪಷ್ಟವಾಗಿ ವಿವರಿಸುವವರೆಗೂ ನನಗಷ್ಟೇ ಅಲ್ಲ, ಇಡೀ ಕರ್ನಾಟಕದ ಜನರಿಗೆ ಅಂತಹಾ ಅನುಮಾನಗಳು ಇದ್ದೇ ಇರುತ್ತವೆ.
ಅಂದ ಹಾಗೇ ಈ ವಿಷಯದ ಬಗ್ಗೆ ನಿಮಗೇನನ್ನಿಸುತ್ತದೆ?
ಹೇಳುವುದೆಲ್ಲವನ್ನು ನೀವೇ ಹೇಳಿದ್ದಿರಲ್ಲ, ನಮಗೆನು ಹೇಳಲು ಉಳಿದಿಲ್ಲ ಗುರುಗಳೇ
ಪ್ರವೀಣ್ ಕುಮಾರ್ ರವರೆ, “ಆಸ್ತಿ ವಿಷಯವಾಗಿ ಅವರೊಂದಿಗೆ ಜಗಳವಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಹತ್ಯೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ”. ಎಂದು ಪತ್ರಿಕೆಯೊಂದು ಪ್ರಕಟಿಸಿರಬಹುದು. ಆದರೆ ಇನ್ನೂ ತನಿಖೆ ಮುಗಿದಿಲ್ಲ ಅಲನೇ? ತನಿಖಾ ತಂಡ ತನಿಖೆ ಮುಗಿಸಿ, ನೀವು ಕೊಂಡ ಪತ್ರಿಕೆಯಲ್ಲಿ ಪ್ರಕಟಿಸಿರುವಂತೆ ವರದಿ ಸಲ್ಲಿಸಿಲ್ಲವಲ್ಲ. ರೈಲಿನಲ್ಲಿ ನಿಮ್ಮ ಪಕ್ಕದಲ್ಲಿ “ಕುಳಿತಿದ್ದ ಹಿರಿಯರೊಬ್ಬರು” ಹೇಳಿದಂತೆ ಕಲಬುರ್ಗಿಯವರ ಸಾವಿನಲ್ಲೂ ಸಾಹಿತಿಗಳು ಲಾಭ ಮಾಡ್ಕೋಳೋಕೆ ಹೋದ್ರು ಎಂದೇ ಅಂದುಕೊಳ್ಳೋಣ. ಆ ಸಾಹಿತಿಗಳು ಮಾಡಿದ್ದು ತಪ್ಪು ಎಂದೇ ಅಂದುಕೊಳ್ಳೋಣ ಆದರೆ ತನಿಖೆ ಮುಗಿಯುವ ಮೊದಲೇ ಆ ಸಾಹಿತಿಗಳು ಮಾಡಿದ್ದು ತಪ್ಪು ಎಂದು ನೀವು ಹೇಳಬಯಸಿರುವುದು ಸರಿಯೇ?
ಇನ್ನೂ ತನಿಖೆ ಮುಗಿದಿಲ್ಲ,ಸರಿ.ಆದರೆ ಅವರು ಬೇರೆ ಯಾರನ್ನೋ ಆರೋಪಿಸಿದಾಗ ತನಿಖೆ ಪ್ರಾರಂಭವೇ ಆಗಿರಲಿಲ್ಲ.