‘ಗಾಂಧಿಬಜಾರ್’ನಲ್ಲಿ ನೆನಪುಗಳ ಸೋನೆ ಮಳೆ!
– ತುರುವೇಕೆರೆ ಪ್ರಸಾದ್
ಬೆಂಗಳೂರಿನ ಗಾಂಧಿಬಜಾರ್‍ನ ಮಧುರ ನೆನಪುಗಳನ್ನು ಯಾವತ್ತಿಗೂ ಮರೆಯಲಾಗುವುದಿಲ್ಲ. ಗಾಂಧಿಬಜಾರ್‍ನ ಬ್ಯೂಗಲ್ ರಾಕ್, ವಿದ್ಯಾರ್ಥಿ ಭವನ್ ಮಸಾಲೆ ದೋಸೆ, ಚುರ್ಮುರಿ, ಸುಬ್ಬಮ್ಮಜ್ಜಿ ಹಪ್ಪಳದ ಅಂಗಡಿ, ಪ್ರಜಾಮತ ಕಛೇರಿ ಇವೆಲ್ಲಾ ಗಾಂಧಿಬಜಾರ್ ಎಂದೊಡನೆ ದುತ್ತನೆ ಕಣ್ಮುಂದೆ ಬಂದು ನಿಲ್ಲುತ್ತವೆ. ಗಾಂಧಿಬಜಾರ್ ಇಡೀ ಬೆಂಗಳೂರಿಗೇ ಒಂದು ಘನತೆವೆತ್ತ ಶಾಂತಿಕುಟೀರ ಎಂಬಂತಂಹ ಭಾವನೆ ಮೂಡಿಸುವ ಅನುಭವಗಳು ಗಾಂಧಿಬಜಾರ್‍ನ ರಸ್ತೆಗಳಲ್ಲಿ ಸುತ್ತಾಡಿದಾಗ ನನಗಾಗಿದೆ. ಸೋನೆ ಮಳೆ ಬಂದು ನಿಂತ ಒಂದು ಮುಸ್ಸಂಜೆಯಲ್ಲಿ ಇಕ್ಕೆಲೆಗಳ ಹಸಿರು ಮರಗಳ ನಡುವೆ ಪ್ರಶಾಂತವಾಗಿ ನಡೆಯುತ್ತಾ ಗಾಂಧಿಬಜಾರ್‍ನ ಹೂವಿನಂಗಡಿಗಳ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಒಂದು ಅನಿರ್ವಚನೀಯ ಅನುಭವ. ಬಹುಶಃ ನನಗೆ ನೆನೆಪಿರುವ ಹಾಗೆ ಮೆಜೆಸ್ಟಿಕ್‍ನಿಂದ ಆ ಕಾಲದ ಮೊದಲ ಡಬ್ಬಲ್ ಡೆಕ್ಕರ್ ಬಸ್ ಓಡಾಟ ಆರಂಭಿಸಿದ್ದೇ ಗಾಂಧಿಬಜಾರ್‍ಗೆ! ಆಹ್ಲಾದಕರ ವಾತಾವರಣ ಬೆಂಗಳೂರಿನ ಕೆಲವೇ ಬಡಾವಣೆಗಳಿಗಿರುವ ಸೌಭಾಗ್ಯ.ಅವುಗಳಲ್ಲಿ ಗಾಂಧಿಬಜಾರ್‍ಗೆ ಅಗ್ರಸ್ಥಾನ ಎಂದರೆ ತಪ್ಪಿಲ್ಲ, ಇಲ್ಲೇ ಪೂರ್ವ ಆಂಜನೇಯ ದೇವಸ್ಥಾನದ ರಸ್ತೆಯಲ್ಲಿದ್ದ ಅಜ್ಜನ ಮನೆಗೆ ವರ್ಷಕ್ಕೊಂದು ಭಾರಿ ಬಂದು ಜಾಂಡಾ ಹೊಡೆಯುತ್ತಿದ್ದ ನನಗೆ ಗಾಂಧಿಬಜಾರ್, ಡಿವಿಜಿ ರೋಡ್, ಬುಲ್ ಟೆಂಪಲ್ ರಸ್ತೆಯ ಸಂದಿಗೊಂದಿಗಳೂ ಪರಿಚಯವಾಗಿತ್ತು. ವರ್ಷಕ್ಕೊಮ್ಮೆ ನಡೆಯುತ್ತಿದ್ದ ಕಳ್ಳೆಕಾಯಿ ಪರಿಷೆಗಂತೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಬನಶಂಕರಿಯಲ್ಲಿ ನಮ್ಮೂರಿನಿಂದ ಹೋಗಿ ನೆಲೆಸಿದ್ದ ನನ್ನ ಗೆಳೆಯರು ಇದ್ದರು, ನಾವೆಲ್ಲಾ ಬ್ಯೂಗಲ್ ರಾಕ್,ಕೃಷ್ಣರಾವ್ ಪಾಕ್‍ಗಳಲ್ಲಿ ಅದೆಷ್ಟು ಕಾಲ ಕಳೆದಿದ್ದೇವೆಂಬುದಕ್ಕೆ ಲೆಕ್ಕವೇ ಇಲ್ಲ.ಆಗೀಗ ಒಂದಿಷ್ಟು ಪದ್ಯ, ಹಾಸ್ಯಲೇಖನಗಳನ್ನು ಬರೆಯುತ್ತಿದ್ದ ನನಗೆ ನಮ್ಮ ತಾತನ ಮನೆಗೆ ಫರ್ಲಾಂಗ್ ಹತ್ತಿರದಲ್ಲೇ ಇದ್ದ ಪ್ರಜಾಮತ ಕಛೇರಿ ಒಂದು ಪ್ರಮುಖ ಆಕರ್ಷಣೆ. ನನ್ನ ತರವೇ ಹವ್ಯಾಸಿ ಬರಹಗಾರರಾಗಿದ್ದ ನಮ್ಮ ಮಾವನೊಂದಿಗೆ ಪ್ರಜಾಮತ ಕಛೇರಿಗೆ ಅವಾಗವಾಗ ಭೇಟಿ ಕೊಡುತ್ತಿದ್ದೆ. ಅದರಲ್ಲೂ ಒಂದಿಷ್ಟು ಲೇಖನಗಳು ಪ್ರಕಟವಾಗಿದ್ದವು. ಒಂದು ನಗೆಬರಗಳ ಸಂಕಲನವನ್ನು ನಮ್ಮೂರಲ್ಲೇ ನಾನೇ ಕೈ ಸುಟ್ಟುಕೊಂಡು ಪ್ರಕಾಶಿಸಿ ಹೊರತಂದ ಮೇಲೆ ತಾಂತ್ರಿಕವಾಗಿ ಇನ್ನಷ್ಟು ಅಂದವಾಗಿ ಹಾಗೂ ಶೀಘ್ರವಾಗಿ ಮತ್ತೊಂದು ಸಂಕಲನ ತರುವ ಯೋಚನೆ ಮಾಡಿದೆ. ಆಗ ಸಾಹಿತಿ ಮಿತ್ರ ಗೋಪಾಲಕೃಷ್ಣರವರು ಗಾಂಧಿಬಜಾರ್‍ನ ಬಾಕಿನ (ಬಾಲಕೃಷ್ಣ ಕಿಳಿಂಗಾರು ನಡುಮನೆ) ಅವರನ್ನು ಕೇಳಿ ನೋಡಿ. ಅವರು ಮುದ್ರಿಸಿಕೊಡುತ್ತಾರೆ ಎಂದರು. ಗಾಂಧಿಬಜಾರ್‍ನ ಅವಿನಾಭಾವ ನಂಟು ಇದ್ದ ನನಗೆ ಅಲ್ಲೊಂದು ಪ್ರಕಾಶನ ಸಂಸ್ಥೆ ಇದೆ, ಅಲ್ಲಿಂದ ಒಂದು ಗಾಂಧಿಬಜಾರ್ ಹೆಸರಿನ ಪತ್ರಿಕೆ ಹೊರಬರುತ್ತದೆ ಎಂಬ ಸಂಗತಿಯೇ ಅಚ್ಛರಿ ಮೂಡಿಸಿತು.ಬೇರೆ ಎಲ್ಲೂ ಹೋಗದೆ ಸೀದಾ ಬಾಕಿನ ಅವರ ಪ್ರೆಸ್‍ಗೆ ಹೋದೆ. ಬಾಕಿನ ಅವರು ತುಂಬಾ ಖುಷಿಯಿಂದಲೇ ಸ್ವಾಗತಿಸಿ ನನ್ನ ಮನವಿ ಆಲಿಸಿದರು. ಮರು ಮಾತಿಲ್ಲದೆ, ಹೊಸಬನೆಂಬ ತಿರಸ್ಕಾರ, ಉಪೇಕ್ಷೆ ಏನೂ ಇಲ್ಲದೆ ನನ್ನ ಹಸ್ತಪ್ರತಿಯನ್ನು ತೆಗೆದುಕೊಂಡರು. ಒಂದು ತಿಂಗಳ ಅವಧಿಯಲ್ಲೇ ಸೊಗಸಾದ ಚಿತ್ರಗಳ ಸಮೇತ ನನ್ನ ಅಶ್ವಮೇಧ ಹಾಸ್ಯಬರಹಗಳ ಸಂಕಲನವನ್ನು ಬಾಕಿನ ಸಿದ್ಧಪಡಿಸಿಕೊಟ್ಟರು.
ಒಂದು ಹಾಸ್ಯ ಸಂಕಲನವನ್ನು ಯಾರಾದರೂ ಮುದ್ರಿಸಿ ಕೊಡುತ್ತಿದ್ದರು ಎನ್ನುವುದು ಬೇರೆ ಮಾತು. ಆದರೆ ಬಾಕಿನ ಅವರ ಭೇಟಿ ಸಾಹಿತ್ಯದ ಬಗ್ಗೆ ನನಗಿದ್ದ ಎಷ್ಟೋ ಭ್ರಮೆಗಳನ್ನು ಕಳಚಿ ಹಾಕಿತು, ಹೊಸದೊಂದು ಸಾರಸ್ವತ ಸಾಹಿತ್ಯ ಲೋಕಕ್ಕೆ ನನ್ನ ಕರೆದೊಯ್ದಿತು. ನಾನು ನನ್ನ ಪುಸ್ತಕದ ಮುದ್ರಣದ ಓಡಾಟದಲ್ಲಿದ್ದಾಗಲೇ ವೈಎನ್‍ಕೆ ಅವರ ಪರಿಚಯ ಆಯಿತು. ಅವರ ವಂಡರ್‍ಕಣ್ಣು, ಮಾತು ಮಥಿಸಿ ಮಥಿಸಿ ಮೊದಲಾದ ಅಂಕಣ ಬರಹಗಳನ್ನು ಓದಲಾರಂಭಿಸಿದೆ. ವೈಎನ್‍ಕೆ ನನ್ನ ಪುಸ್ತಕವನ್ನು ನೋಡಿ ಕನ್ನಡಪ್ರಭಕ್ಕೂ ಬರೆಯಪ್ಪ ಎಂದರು. ಪ್ರಚಲಿತ ವಿದ್ಯಮಾನಕ್ಕೆ ಕಚಗುಳಿ ಇಡುವ ಮಿಡ್ಲ್ ಕಾಲಂ ಬರಹಗಾರರನ್ನು ಸೃಷ್ಟಿಸಿದ್ದೇ ವೈಎನ್‍ಕೆ. ವೈಎನ್‍ಕೆ ಪ್ರಭಾವದಿಂದ ನಾನು ಸಾವಿರಾರು ಮಿಡ್ಲ್ ಕಾಲಂಗಳನ್ನು ಬರೆದೆ. ಇದಕ್ಕೆಲ್ಲಾ ಮೂಲ ಸ್ಪೂರ್ತಿ ಗಾಂಧಿಬಜಾರ್ ಮತ್ತು ಅಲ್ಲಿನ ಲಿಪಿ ಪ್ರಕಾಶನದ ಬಾಕಿನ ಅವರು.
ಇದಾದ ನಂತರ ಬಾಕಿನ ಪ್ರತಿ ತಿಂಗಳು ತಮ್ಮ ಲಿಪಿ ಪ್ರಕಾಶನದಿಂದ ಹೊರಬರುತ್ತಿದ್ದ ಗಾಂಧಿಬಜಾರ್ ಪತ್ರಿಕೆಯನ್ನು ದಾಕ್ಷಿಣ್ಯಕ್ಕೋ, ಮುಲಾಜಿಗೋ ನನಗೆ ಕಳಿಸುತ್ತಿದ್ದರು. ಆರಂಭದಲ್ಲಿ ಅಷ್ಟೇನೂ ಆಸಕ್ತಿ ಇಲ್ಲದೆ ಗಾಂಧಿಬಜಾರ್ ಎನ್ನುವ ಹೆಸರಿನ ಆಕರ್ಷಣೆಗೆ, ನಾಸ್ಟಾಲ್ಜಿಯಾಗೆ ಅದನ್ನು ತಿರುವಿ ಹಾಕುತ್ತಿದ್ದ ನಾನು ದಿನಗಳೆದಂತೆ ಗಾಂಧಿಬಜಾರ್‍ಗಾಗಿ ಕಾಯತೊಡಗಿದೆ. ಯಾವ ಮುಖಪುಟ, ಸಿನಿಮಾ ಚಿತ್ರ, ಸುದ್ದಿಗಳು, ಜಾಹಿರಾತಿನ ಹಂಗಿಲ್ಲದೆ ಪೂರಾ ಪರಿಪೂರ್ಣ, ಶುದ್ಧ ಸಾಹಿತ್ಯದ ಮುಖವಾಣಿಯಂತಿದ್ದ ಗಾಂಧಿಬಜಾರ್ ನನ್ನಂತಹ ನೂರಾರು ಲೇಖಕರನ್ನು, ಓದುಗರನ್ನು ತನ್ನತ್ತ ಸೆಳೆದುಕೊಂಡಿತು. ಗಾಂಧಿಬಜಾರ್‍ಗೆ ವೈಎನ್‍ಕೆ, ಪುತಿನ, ಕೆಎಸ್‍ನ, ಕೆ.ವಿ.ತಿರುಮಲೇಶ್, ಲಕ್ಷ್ಮಣರಾವ್, ಸುಮತೀಂದ್ರ ನಾಡಿಗ ಅವರಿಂದ ಹಿಡಿದು ತೀರಾ ಇತ್ತೀಚಿನವರೆಗಿನ ಎಲ್ಲಾ ಹಿರಿಯರು ಕಿರಿಯರು ಬರೆಯುತ್ತಿದ್ದರು ಎನ್ನುವುದೇ ಒಂದು ಹೆಗ್ಗಳಿಕೆ. ಅದು ಸ್ಮಾರ್ಟ್ ಪತ್ರಿಕೆ ಆಗಿರಲಿಲ್ಲ ನಿಜ, ಆದ್ರೆ ಅದು ಜನ ಸಾಮಾನ್ಯರ ಸಾಹಿತ್ಯ ಪತ್ರಿಕೆಯಾಗಿತ್ತು. ಪುಸ್ತಕಲೋಕದ ಪರಿಚಾರಕ ಎಂಬ ಟ್ಯಾಗ್‍ಲೈನ್‍ಗೆ ಅನ್ವರ್ಥವಾಗುವಂತಹ ಕೆಲಸ ಮಾಡುತ್ತಿತ್ತು. ಮಣಿಪಾಲದ ಗೋವಿಂದ ಪೈಗಳು, ಧಾರಾವಾಡದ ಜಿ.ಬಿ.ಜೋಷಿ, ಇವರ ಆದರ್ಶಗಳ ನೆಲೆಯಲ್ಲೇ ಬಾಕಿನ ಕೆಲಸ ಮಾಡುತ್ತಾರೇನೋ ಎನಿಸುತ್ತಿತ್ತು. ಕಥೆ, ಕವನ, ಹಾಸ್ಯ ಹೀಗೆ ಆ ಚಿಕ್ಕಪತ್ರಿಕೆಯಲ್ಲಿ ಎಲ್ಲಕ್ಕೂ ಸ್ಥಾನವಿತ್ತು. ವೈಎನ್‍ಕೆಯವರ ಜೋಕ್‍ಫಾಲ್ಸ್, ಕೊನೆಸಿಡಿಯಂತೂ ಗಾಂಧಿಬಜಾರ್‍ಗಾಗಿ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡುತ್ತಿತ್ತು. ವೈಎನ್‍ಕೆ ಮರೆಯಾದ ಮೇಲೂ ಗಾಂಧಿಬಜಾರ್‍ನಲ್ಲಿ ಉತ್ಕೃಷ್ಟ ಸಾಹಿತ್ಯ ವಿಮರ್ಶೆಗಳು ಪ್ರತಿ ತಿಂಗಳೂ ಪ್ರಕಟವಾಗುತ್ತಿದ್ದವು. ಪುಸ್ತಕಗಳ ಪರಿಚಯಕ್ಕಂತೂ ಗಾಂಧಿಬಜಾರ್‍ನಲ್ಲಿ ಅಗ್ರಸ್ಥಾನ! ಸಾದರ ಸ್ವೀಕಾರದ ಜೊತೆಗೆ ಒಂದೆರಡು ಪುಸ್ತಕಗಳ ಕಿರು ಪರಿಚಯ ಹಾಗೆ ಇನ್ನೊಂದೆರಡು ಮಹತ್ವದ ಕೃತಿಗಳ ಸವಿಸ್ತಾರ, ಪಾಂಡಿತ್ಯಪೂರ್ಣ ವಿಮರ್ಶೆಗಳು ಪ್ರಕಟವಾಗುತ್ತಿದ್ದವು. ಪ್ರೊ. ಬರಗೂರು ರಾಮಚಂದ್ರಪ್ಪನವರ ಕನ್ನಡ ಪ್ರಜ್ಞೆಯ ಮೇಲೆ ಒಂದು ವಿಸ್ತಾರವಾದ ಅತಿಉಪಯುಕ್ತ ವಿಮರ್ಶೆ (ಗಾಂಧಿಬಜಾರ್‍ನಲ್ಲಿ ಡಾ.ಜಿ.ಎನ್ ಉಪಾಧ್ಯ ಬರೆದಿದ್ದಾರೆ) ಪ್ರಕಟಿಸಲು ನಮ್ಮ ಎಷ್ಟೋ ಕನ್ನಡ ಪತ್ರಿಕೆಗಳಿಗೆ ಸ್ಥಳಾವಕಾಶವೂ ಇಲ್ಲ, ಅಭಿರುಚಿಯೂ ಇಲ್ಲ ಎಂಬುದು ನಿಷ್ಠುರ ಸತ್ಯವಾದರೂ ಸುಳ್ಳಂತೂ ಅಲ್ಲ. ಇಷ್ಟಾದರೂ ಗಾಂಧಿಬಜಾರ್ ಯಾವುದೇ ಇಸಂ, ಪಂಥಗಳಿಗೆ ಶರಣಾಗದೆ, ಅವುಗಳ ಮುಖವಾಣಿಯಾಗದೆ, ವಿವಾದಗಳಿಂದ ದೂರವೇ ಉಳಿದು ಸದ್ದಿಲ್ಲದೆ ಸಾಹಿತ್ಯ ಪರಿಚಾರಿಕೆಯಲ್ಲಿ ತೊಡಗಿಸಿಕೊಂಡಿತ್ತು. ಜೊತೆಗೆ ಗಾಂಧಿಬಜಾರ್ ಒಂದು ಸಾಹಿತ್ಯಕ ರೆಡಿ ರೆಕನರ್ ತರ ಕೆಲಸ ಮಾಡುತ್ತಿತ್ತು. ಒಮ್ಮೆ ತಿರುವಿ ಹಾಕಿಬಿಟ್ಟರೆ ಈಚೆಗೆ ಬಂದಿರುವ ಉತ್ಕೃಷ್ಟ ಕೃತಿಗಳಾವುವು, ಅವುಗಳ ವಿಮರ್ಶೆ ಅವುಗಳ ಪ್ರಕಾಶಕರು ಯಾರು, ಅವು ಎಲ್ಲಿ ಲಭ್ಯವಿದೆ ಈ ಎಲ್ಲದರ ವಿವರ ಸಿಕ್ಕಿಹೋಗುತ್ತಿತ್ತು. ಗಾಂಧಿಬಜಾರ್‍ನ ಮತ್ತೊಂದು ವಿಶಿಷ್ಟ ಸಂಗತಿಯೆಂದರೆ ಸಾಂದರ್ಭಿಕ ಲೇಖನಗಳು, ಯಾವುದೇ ಕವಿಯ ಹುಟ್ಟುಹಬ್ಬ,50 ವರ್ಷ ತುಂಬಿದ್ದು, 60 ತುಂಬಿದ್ದು, 70 ತುಂಬಿದ್ದು, ಪುಣ್ಯ ತಿಥಿ ಹೀಗೆ ಎಲ್ಲಾ ವಿಷಯಗಳನ್ನು ನೆನಪಿಟ್ಟುಕೊಂಡು ಆ ಸಾಹಿತಿ ಬರಹಗಾರರ ಬಗ್ಗೆ ಒಂದು ಸಮಗ್ರ ಮಾಹಿತಿ ನೀಡುವ ವಿಶೇಷ ಲೇಖನವನ್ನು ಬಾಕಿನ ಮರೆಯದೆ ಸಿದ್ಧಪಡಿಸುತ್ತಿದ್ದರು.
30 ವರ್ಷಗಳ ಕಾಲ ಸಾಹಿತ್ಯ ಹಾಗೂ ಪುಸ್ತಕ ಲೋಕಕ್ಕೆ ಸುಧೀರ್ಘ ಸೇವೆ ಸಲ್ಲಿಸಿದ್ದ ಗಾಂಧಿಬಜಾರ್‍ನ ಕೊನೆಯ ಸಂಚಿಕೆ (ಡಿಸೆಂಬರ್-16)ಯೊಂದಿಗೆ ಗಾಂಧಿಬಜಾರ್ ಪ್ರಕಟಣೆಯನ್ನು ಬಾಕಿನ ನಿಲ್ಲಿಸಿದ್ದಾರೆ. ಗಾಂಧಿಬಜಾರ್ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ಅಂಕದಿಂದ ನಿರ್ಗಮಿಸಿದೆ. ಅದಕ್ಕೆ ಕಾರಣಗಳೇನೇ ಇರಬಹುದು, ಆದರೆ ಕನ್ನಡ ನಾಡು ಮತ್ತು ಸಾಹಿತ್ಯ ಲೋಕಕ್ಕೆ ಇದು ನಿಜವಾಗಿಯೂ ದೊಡ್ಡ ನಷ್ಟ! ಏಕೆಂದರೆ ಗಾಂಧಿಬಜಾರ್ ಎಷ್ಟೋ ಸಂದರ್ಭಗಳಲ್ಲಿ ಸಾಹಿತ್ಯದ ಮರುವಿಮರ್ಶೆ ಮತ್ತು ಮೌಲ್ಯಮಾಪನಕ್ಕೂ ವೇದಿಕೆಯಾಗಿತ್ತು. ಇದಕ್ಕೆ ಹಲವಾರು ಬರಹಗಳನ್ನು ಉದಾಹರಿಸಬಹುದು. ನವೆಂಬರ್ ಸಂಚಿಕೆಯ ಕೆಎಸ್‍ನ ಅವರ ಕೆಲವು ನೆನಪುಗಳು, ಕೊನೆಯ ಸಂಚಿಕೆಯಲ್ಲಿ ಪ್ರಕಟವಾಗಿರುವ ಮನದಲ್ಲಿ ಸೆರೆಯಾದ ಕಾಮದ ಪ್ರತೀಕ ಹಾವು ಎಂಬ ಡಾ.ಮಮತಾರಾವ್ ಅವರ ವಿಮರ್ಶಾತ್ಮಕ ಲೇಖನ ಇದಕ್ಕೆ ಇತ್ತೀಚಿನ ಎರಡು ಉದಾಹರಣೆ. ಈ ವಿಮರ್ಶೆ ಮತ್ತು ಬರಹಗಳಲ್ಲಿ ಹಿಂದಿನ ಸಾಹಿತಿಗಳ ಜೀವನಾನುಭವ, ವ್ಯಕ್ತಿ ಚಿತ್ರಗಳು, ಮಹತ್ವದ ಸಾಹಿತ್ಯ ಕೃತಿಗಳ ಉಲ್ಲೇಖ, ಪರಿಚಯಗಳಿರುತ್ತಿದ್ದವು.ಇವುಗಳು ಯುವ ಪೀಳಿಗೆಗೊಂದು ಕೈಪಿಡಿಯಂತೆ, ದಿಕ್ಸೂಚಿಯ ಕೈಮರದಂತೆ ಇದ್ದುದು ಸುಳ್ಳಲ್ಲ. ನಗೆಚಟಾಕಿ ಸಿಡಿಸಲು ವೈಎನ್‍ಕೆ ಅವರ ಕೊನೆಸಿಡಿ, ಜೋಕ್ ಫಾಲ್ಸ್‍ಗಳ ಸಂಗ್ರಹ, ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸಲು ಗಾಂಧಿಬಜಾರ್‍ನ ಕೊನೆಮಾತು ಪುಟಗಳ ಸಾಹಿತಿಗಳ ಅಮೂಲ್ಯ ನುಡಿಗಳ ಸಂಗ್ರಹ ಈಗಲೂ ನನ್ನ ಬಳಿ ಇದೆ. ಆದರೆ ಕನ್ನಡದ ಧ್ವನಿ ಹೊರಡಿಸುತ್ತಿದ್ದ ಒಂದು ‘ಬ್ಯೂಗಲ್ ಟಾಕ್’ ನಿಂತಿದೆ ಎನಿಸಿದಾಗ ಬೆಂಗಳೂರಿನ ಗಾಂಧಿಬಜಾರ್ ವೈಭವ ಒಂದಿಷ್ಟು ಮರೆಯಾಯಿತೇನೋ ಎನಿಸುತ್ತದೆ. ಆದರೆ ಮಳೆ ನಿಂತ ಮೇಲೂ ಗಾಂಧಿಬಜಾರ್‍ನ ಮರದ ಎಲೆಗಳಿಂದ ತೊಟ ತೊಟ ನೀರು ತೊಟ್ಟಿಕ್ಕುವ ಹಾಗೆ ಗಾಂಧಿಬಜಾರ್ ಪತ್ರಿಕೆ ನಿಂತ ಮೇಲೂ ನೆನಪಿನ ಹನಿಗಳು ನಿರಂತರ ಒಸರುತ್ತಲೇ ಇರುತ್ತವೆ ಎಂಬ ನಂಬಿಕೆ ನನ್ನದು.
ಮಾನ್ಯರೇನನಗೆ ಒಂದು ಕಾಮೆಂಟ್ ಬರೆಯಬೇಕಾಗಿದೆ. ಎಲ್ಲಿ ಮತ್ತು ಹೇಗೆ ಬರೆಯಬೇಕು ತಿಳಿಸಿ.ನನ್ನ ಇಮೇಲ್ ಗೆ ತಿಳಿಸಿಧನ್ಯವಾದಗಳುಸಿದ್ರಾಮಪ್ಪ ದಿನ್ನಿ ಬೆಂಗಳೂರು 9449890981
From: ನಿಲುಮೆ To: sdd2025@yahoo.co.in Sent: Tuesday, 17 January 2017 11:58 AM Subject: [New post] ‘ಗಾಂಧಿಬಜಾರ್’ನಲ್ಲಿ ನೆನಪುಗಳ ಸೋನೆ ಮಳೆ! #yiv2551924096 a:hover {color:red;}#yiv2551924096 a {text-decoration:none;color:#0088cc;}#yiv2551924096 a.yiv2551924096primaryactionlink:link, #yiv2551924096 a.yiv2551924096primaryactionlink:visited {background-color:#2585B2;color:#fff;}#yiv2551924096 a.yiv2551924096primaryactionlink:hover, #yiv2551924096 a.yiv2551924096primaryactionlink:active {background-color:#11729E;color:#fff;}#yiv2551924096 WordPress.com | ನಿಲುಮೆ posted: “- ತುರುವೇಕೆರೆ ಪ್ರಸಾದ್ಬೆಂಗಳೂರಿನ ಗಾಂಧಿಬಜಾರ್‍ನ ಮಧುರ ನೆನಪುಗಳನ್ನು ಯಾವತ್ತಿಗೂ ಮರೆಯಲಾಗುವುದಿಲ್ಲ. ಗಾಂಧಿಬಜಾರ್‍ನ ಬ್ಯೂಗಲ್ ರಾಕ್, ವಿದ್ಯಾರ್ಥಿ ಭವನ್ ಮಸಾಲೆ ದೋಸೆ, ಚುರ್ಮುರಿ, ಸುಬ್ಬಮ್ಮಜ್ಜಿ ಹಪ್ಪಳದ ಅಂಗಡಿ, ಪ್ರಜಾಮತ ಕಛೇರಿ ಇವೆಲ್ಲಾ ಗಾಂಧಿಬಜಾರ್ ಎಂದೊಡನೆ ದುತ್ತನೆ ಕಣ್ಮುಂದೆ ಬಂದು ನಿಲ್ಲುತ್ತ” | |