ಗ್ರಸ್ತ
– ಪ್ರಶಾಂತ್ ಭಟ್
ಕರಣಮ್ ಪವನ್ ಪ್ರಸಾದ್ ಕರ್ಮ, ನನ್ನಿ ಕಾದಂಬರಿಗಳಿಂದ, ಬೀದಿ ಬಿಂಬ ರಂಗದ ತುಂಬ ಹಾಗೂ ಪುರಹರ ನಾಟಕಗಳಿಂದ ಕನ್ನಡ ಸಾಹಿತ್ಯದಲ್ಲಿ ಬೇರೆಯದೇ ಹೆಜ್ಜೆಗುರುತು ಮೂಡಿಸಿಕೊಂಡಿರುವ ಕರಣಮ್ ಅವರ ಹೊಸ ಕಾದಂಬರಿ ‘ಗ್ರಸ್ತ’. ಕರ್ಮದಲ್ಲಿ ಆಧುನಿಕತೆ ಮತ್ತು ಸಾಂಪ್ರದಾಯಿಕತೆಯ ನಡುವಿನ ತಿಕ್ಕಾಟವನ್ನು ಸಮರ್ಥವಾಗಿ ತೋರಿಸಿದ್ದ ಅವರು ನನ್ನಿಯಲ್ಲಿ ನನ್ ಗಳ ಜೀವನ ಕುರಿತಾದ ಹಲವಾರು ಕಹಿ ಸತ್ಯಗಳ ಅನಾವರಣಗೊಳಿಸಿದರು. ಇವೆರಡು ವಸ್ತುಗಳಿಂದ ಬಿಡಿಸಿಕೊಂಡು ಹೊಸತಾಗಿ ವಿಜ್ಞಾನ ಮತ್ತು ಕರ್ಮ ಸಿದ್ದಾಂತ ವ ಸಮೀಕರಿಸಿ ‘ಗ್ರಸ್ತ’ ಬರೆದಿದ್ದಾರೆ.
ವೇದಾಂತ, ಕರ್ಮ ಸಿದ್ದಾಂತದ ವಾದವು ಸಾಮಾನ್ಯ ತಿಳುವಳಿಕೆಗೆ ವೈಜ್ಞಾನಿಕ ನಿಲುವಿಗೆ ವಿರುದ್ಧವಾಗಿ ಎಂಬ ಕಲ್ಪನೆಯಿದೆ. ಆದರೆ ಬೆರಗುಗೊಳಿಸುವ ಶೈಲಿಯಲ್ಲಿ ಎರಡನ್ನೂ ಜೋಡಿಸಿ ಕರಣಮ್ ನಿಭಾಯಿಸಿದ ರೀತಿ ವಿಸ್ಮಯ ಹುಟ್ಟಿಸುತ್ತದೆ. ಕತೆಯ ಮುಖ್ಯ ಪಾತ್ರ ಅವಿನಾಶ ಅಂತರ್ಜಾತಿಯ ಮದುವೆಯಿಂದ ಹುಟ್ಟಿದವ. ತಾಯಿ ಬ್ರಾಹ್ಮಣ ತಂದೆ ಎಸ್ ಸಿ. ಚಿಕ್ಕಂದಿನಲ್ಲೇ ತಾಯಿ ತಂದೆಯರ ಜಗಳಗಳು ಜಾತಿ ವಿಷಯದಲ್ಲೇ ಪರ್ಯಾವಸಾನಗೊಳ್ಳುತ್ತಿದ್ದದ್ದು ನೋಡಿ ಬೆಳೆದವನು. ಕಡು ಬಡತನದಲ್ಲಿ ಬೆಳೆದ ಅವನಲ್ಲಿ ವಿಜ್ಞಾನದ ಕುರಿತಾದ ಹೊಸ ಹೊಳಹುಗಳಿವೆ. ಬದುಕಲು ದಾರಿ ಕಾಡದೆ ಸುಳ್ಳು ಹೇಳಿ ತಾಯಿ ಗೋಪಿನಾಥರ ಮನೆಯಲ್ಲಿ ಕೆಲಸಕ್ಕೆ ಸೇರುತ್ತಾಳೆ. ಅವಳ ನಂತರ ಅವಿನಾಶ ಅಲ್ಲೇ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರೆಸುತ್ತಾನೆ. ಗೋಪಿನಾಥರ ಮಗಳು ಸುಷ್ಮಾ ಬಗ್ಗೆ ಅವನಿಗೆ ಒಲವಿದೆ. ಇದರ ಜೊತೆಗೆ ತನ್ನ ಹುಟ್ಟಿನ ಅರಿವೂ, ತಾನು ಸಾಗಬೇಕಾದ ಹಾದಿಯ ಅರಿವೂ ಸ್ಪಷ್ಟವಿದೆ. ಇನ್ನೊಂದೆಡೆ ಇವನಿಗೆ ಪರಿಚಯವಾಗುವ ರೇಖಾ. ಅವಳಿಗೆ ತನ್ನ ಗಂಡನ ಬಗ್ಗೆ ಅತೃಪ್ತಿ ಇದೆ. ಮಗಳ ಸಾಕುವ ಅನಿವಾರ್ಯತೆಯೂ. ತನ್ನ ಸೆಳೆತವ ಹತ್ತಿಕ್ಕಲು ಅವಿನಾಶನ ಸಂಗ ಬಯಸುವ ಇವಳ ಪಾತ್ರ ಕೊಂಚ ದುರ್ಬಲವಾಗಿ ಚಿತ್ರಿತವಾಗಿದೆ ( ಬೆನ್ನು ಮೂಳೆ ಇಲ್ಲದವಳ ಹಾಗೆ).
ಅವಿನಾಶ ತನ್ನ ವಿದ್ಯಾಭ್ಯಾಸಕ್ಕಾಗಿ ಹೊರದೇಶಕ್ಕೆ ಹೋಗಿ ಬರುತ್ತಾನೆ. ಇತ್ತ ತನ್ನ ಗಂಡನ ಜೊತೆ ಜಗಳವಾಡಿ ಹೊರಬರುವ ರೇಖಾ, ಗೋಪಿನಾಥರ ಮುಖಾಂತರ ಅವಿನಾಶನ ಜೊತೆ ಸೇರುತ್ತಾಳೆ. ಒಳಗಿನ ಕಾಮನೆಯ ಆಸೆಗೆ ಜೋಡಿಸಿಕೊಂಡ ನಂಟು ಗಂಟು ಬಿದ್ದಾಗ ಅವಿನಾಶನಿಗೆ ಯಾವುದು ಸರಿ ಎಂಬ ಜಿಜ್ಞಾಸೆ ಕಾಡುತ್ತದೆ. ಇರುವುದೆಲ್ಲ ಬಿಟ್ಟವ ಸಾಧಕನೋ, ಸಹಿಸಿಕೊಂಡವ ಸಾಧಕನೋ ಅಂತ. ಅವನಿಗೆ ತನ್ನ ದೌರ್ಬಲ್ಯಗಳ ಅರಿವು ಇದೆ. ಇತರರದ್ದು ಕೂಡ. ಆದರೆ ತನ್ನ ಸಂಶೋಧನೆಯ ಉದ್ದೇಶ ಸಾಧನೆಗಾಗಿ ಅವೆಲ್ಲ ನಗಣ್ಯ ಅವನಿಗೆ. ಶಕ್ತಿಯ ಬದಲಾಗದು ಅದನ್ನು ಹಿಡಿಯಲು ಹೋದಾಗ ಭಿನ್ನತೆ ಬರುತ್ತದೆ ಮೂಲರೂಪ ಒಂದೇ ಎಂಬ ವಿಜ್ಞಾನವೂ, ಆತ್ಮದ ಕುರಿತಾದ ಕರ್ಮ ಸಿದ್ಧಾಂತವನ್ನೂ ಸಮೀಕರಿಸಿದ ಅವಿನಾಶನ ಸಂಶೋಧನೆ ಯಶಸ್ವಿಯಾಗುತ್ತದಾ? ಬದುಕಿನ ಕುರಿತಾದ ನಿಲುವು ಹುಟ್ಟಿನಿಂದ ಬರುವುದಾ ಅಥವಾ ನಮ್ಮ ಪರಿಸರ ನಮ್ಮನ್ನು ರೂಪಿಸುವುದಾ ಇತ್ಯಾದಿ ಒಳನೋಟಗಳಿರುವ ಈ ಕೃತಿ ಹೊಸಬಗೆಯದು. ಹಾಗಾಗಿ ಇಷ್ಟವಾಗುತ್ತದೆ.