ವಿಷಯದ ವಿವರಗಳಿಗೆ ದಾಟಿರಿ

ಜನವರಿ 19, 2017

4

ಕಾಲೇಜು – ವಿ.ವಿಗಳಲ್ಲಿ ಐಡಿಯಾಲಜಿ ಪ್ರಣೀತ ಹೋರಾಟಗಳು ಅವಶ್ಯಕವೇ?

‍ನಿಲುಮೆ ಮೂಲಕ

– ಪ್ರವೀಣ ಟಿ.ಎಲ್
ಶಿವಮೊಗ್ಗ

519ಭಾರತೀಯ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಹಲವು ಪ್ರಬಂಧಗಳೇ ಮಂಡನೆಯಾಗಿವೆ. ಆದರೆ ಇತ್ತೀಚಿನ ಕೆಲವು ಘಟನೆಗಳು ನಮ್ಮನ್ನು ಹೊಸ ಸಮಸ್ಯೆಯತ್ತ ಗಮನಹರಿಸುವಂತೆ ಮಾಡಿದೆ. ಅಂತಹ ಘಟನೆಗಳೆಂದರೆ;

  • ರೋಹಿತ್ ವೇಮುಲಾ ಎಂಬ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆಯ ಸುತ್ತ ನಡೆದ ಪ್ರಹಸನ. ಆತ ವಿವಿಯಲ್ಲಿ ಸಕ್ರಿಯವಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಕಾರಣಕ್ಕೆ ಆತನ ಆತ್ಮಹತ್ಯೆಯನ್ನು ಕೇಂದ್ರ ಸರ್ಕಾರವೇ ವ್ಯವಸ್ಥಿತವಾಗಿ ನಡೆಸಿದೆ ಎಂಬ ಆರೋಪ.

  • ಜೆ.ಎನ್.ಯು ನಲ್ಲಿ ವಿದ್ಯಾರ್ಥಿ ಪ್ರತಿಭಟನೆಯ ಹೆಸರಲ್ಲಿ ಭಾರತ ವಿರೋಧಿ ಘೋಷಣೆ. ನಂತರ ಕನ್ನಯ್ಯನೆಂಬ ವಿದ್ಯಾರ್ಥಿ ನಾಯಕನ ಉದಯ-ಬಂಧನ. ಇವರ ಪರವಾಗಿ ದೇಶದ ಹಲವಾರು ವಿವಿಗಳಲ್ಲಿ ಹೋರಾಟ. ಬೇರೆ ದೇಶದ ಕೆಲವು ಪಂಡಿತರು ಸಹ ಇವರನ್ನು ಬೆಂಬಲಿಸಿ ಸಹಿಮಾಡಿದ ಪತ್ರಗಳು ರವಾನೆಯಾದವು. ಆ ಪತ್ರಗಳ ತಿರುಳು “ವಿ.ವಿ.ಗಳಲ್ಲಿ ವಿದ್ಯಾರ್ಥಿ ಹೋರಾಟಕ್ಕೆ ಅವಕಾಶಗಳಿರಬೇಕು. ಹತ್ತಿಕ್ಕಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯಹರಣವೆಂದಾಗುತ್ತದೆ”.

ಎರಡೂ ಘಟನೆಗಳು ದೇಶದಲ್ಲಿ ದೊಡ್ಡ ಸುದ್ದಿ ಮಾಡಿದ್ದಂತೂ ಸುಳ್ಳಲ್ಲ. ಅದರಲ್ಲೂ ಹಲವಾರು ವಿವಿ ಆವರಣಗಳಲ್ಲಿ ಹೋರಾಟಗಳನ್ನು ಬಗೆಬಗೆಯಾಗಿ ನೆರವೇರಿಸಿದ್ದು ಈಗ ಇತಿಹಾಸ. ಆದರೆ ಇತ್ತೀಚೆಗೆ ಅಷ್ಟೇನೂ ಸುದ್ದಿಯಾಗದ (ಮಾಡದ!) ಮೂರನೇ ಘಟನೆಯೆಂದರೆ ಶೃಂಗೇರಿ ಕಾಲೇಜಿನ ಎಬಿವಿಪಿ ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆ.

ಈ ಎಲ್ಲಾ ಘಟನೆಗಳಲ್ಲಿಯೂ ಸಹ ವಿದ್ಯಾರ್ಥಿ ಸಂಘಟನೆಯ ಭಾಗವಾಗಿ, ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು. ಅದರಲ್ಲಿ ಕೆಲವರಿಗೆ ಆತ್ಮಹತ್ಯೆ ಭಾಗ್ಯವಾದರೆ, ಇನ್ನು ಕೆಲವರಿಗೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟದ ಸೌಭಾಗ್ಯ.

ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಶಿಕ್ಷಣ ಕ್ಷೇತ್ರದಲ್ಲಿ ಈ ರೀತಿಯ ಆಕ್ಟಿವಿಸಂ ಅವಶ್ಯಕವೇ? ಇದರ ಪರಿಣಾಮಗಳೇನು? ಕಾಲೇಜುಗಳು ಮತ್ತು ವಿವಿಗಳು ಹೋರಾಟದ ಅಡ್ಡಗಳಾಗಬೇಕೆ? ಹಲವರು ಇದಕ್ಕೆ ಪೂರಕವಾಗಿ ಉತ್ತರಿಸುತ್ತಾರೆ. ಸಿದ್ಧಾಂತದ ಭಾಗವಾಗುವುದರ ಜೊತೆಜೊತೆಗೆ ಚಳವಳಿಯ ಭಾಗವೂ ಆಗುವುದು ಇಂದಿನ ತುರ್ತು” ಎಂಬುದು ಅವರ ನಿಲುವು. ಇಲ್ಲಿ ಅವರು ನಿಜವಾಗಿಯೂ ಸಿದ್ಧಾಂತದ ಭಾಗವಾಗುತ್ತಿದ್ದಾರೆಯೇ? ಎಂಬುದನ್ನು ಸರಿಯಾಗಿ ಗ್ರಹಿಸುವ ಅಗತ್ಯತೆ ಇದೆ. ಅದಕ್ಕಿಂತ ಮುಂಚೆ “ ಶಿಕ್ಷಣವೆಂದರೆ ಏನು ? ” ಎಂಬುದರ ಕಡೆಗೆ ಸ್ವಲ್ಪ ಗಮನಹರಿಸುವುದಾದರೆ,

ಶಿಕ್ಷಣವೆಂದರೆ ನಮ್ಮ ಸುತ್ತಲಿನ ಪ್ರಪಂಚದ ಕುರಿತ ತಿಳುವಳಿಕೆಯನ್ನು ಸದಾ ಪರಿಷ್ಕರಿಸುತ್ತಾ, ನಮ್ಮ ತಪ್ಪು ತಿಳುವಳಿಕೆಗಳನ್ನು ಹಾಗೂ ಅದನ್ನಾಧರಿಸಿದ ಪರಿಹಾರಗಳನ್ನು ಮರುಚಿಂತನೆಗೆ/ ಆಲೋಚನೆಗೆ ಒಳಪಡಿಸುವುದೇ ಆಗಿರುತ್ತದೆ. ಆ ಮೂಲಕ ಸಮಾಜದ ಕುರಿತ ತಪ್ಪು ನಿರ್ಣಯಗಳಿಂದ ಕಳಚಿಕೊಳ್ಳುವುದು ಶಿಕ್ಷಣದ ಗುರಿ. ಸಮಾಜದ ಕುರಿತು ಹಾಗೂ ನಮ್ಮ ಸುತ್ತಮುತ್ತಲಿನ ಪ್ರಪಂಚದ ಕುರಿತು ರೂಪುಗೊಳ್ಳುವ ಹೊಸ ಹೊಸ ತಿಳುವಳಿಕೆಯೇ ಸಿದ್ಧಾಂತಗಳು.

ಆದರೆ ವಿದ್ಯಾರ್ಥಿ ಸಂಘಟನೆಗಳು ಇಂತಹ ಸಿದ್ಧಾಂತಗಳಿಂದ ಹುಟ್ಟಿದವೇ? ಖಂಡಿತ ಇಲ್ಲ. ಅವುಗಳು ಐಡಿಯಾಲಜಿ ಪ್ರೇರಿತ ಹೊರಾಟಗಳೇ ಆಗಿರುತ್ತವೆ. ಐಡಿಯಾಲಜಿಯನ್ನು ಕನ್ನಡದಲ್ಲಿ ಸಿದ್ಧಾಂತ ಎಂದು ತಪ್ಪಾಗಿ ಅನುವಾದಿಸಲಾಗುತ್ತದೆ. ಅದೇ ಪದವನ್ನು ಥಿಯರಿಗೂ ಬಳಸಲಾಗುತ್ತದೆ. ಥಿಯರಿ ಮತ್ತು ಐಡಿಯಾಲಜಿಗಳ ನಡುವೆ ಅಗಾಧ ವ್ಯತ್ಯಾಸಗಳಿವೆ. ಆ ವ್ಯತ್ಯಾಸವನ್ನು ಅರ್ಥಮಾಡಿಕೊಂಡರೆ, ಈ ಐಡಿಯಾಲಜಿ ಪ್ರಣೀತ ಸಂಘಟನೆಗಳು ಮತ್ತು ಹೋರಾಟಗಳು ಕಾಲೇಜು – ವಿಶ್ವವಿದ್ಯಾನಿಲಯಗಳಿಗೆ ಅವಶ್ಯಕವೋ ಇಲ್ಲವೋ ಎಂಬುದಕ್ಕೆ ಉತ್ತರ ಸಿಗುತ್ತದೆ.

ಸಮಾಜದ ಕುರಿತ ನಮ್ಮ ತಿಳುವಳಿಕೆ ಹೆಚ್ಚಾಗಬೇಕೆಂದಾದರೆ, ಸಿದ್ಧಾಂತಗಳು ಸೃಷ್ಟಿಯಾಗಬೇಕು ಹಾಗೂ ಪರಿಷ್ಕರಣೆಗೆ ಒಳಪಡಬೇಕಾಗುತ್ತದೆ. ಯಾವುದೇ ಸಿದ್ಧಾಂತವು ತನ್ನ ವಿವರಣೆಯೇ ಅಂತಿಮ ಸತ್ಯ ಎಂಬ ಪ್ರತಿಪಾದನೆಯನ್ನು ಮಾಡುವುದಿಲ್ಲ. ಸೈದ್ಧಾಂತಿಕ ವಿವರಣೆಯು ಫ್ಯಾಕ್ಟ್ ಗಳನ್ನು ಆಧರಿಸಿರುತ್ತದೆ. ಸಿದ್ಧಾಂತ ಆಧರಿಸಿದ ಫ್ಯಾಕ್ಟ್ ಗಳು ಬದಲಾದರೆ, ಸಿದ್ಧಾಂತಗಳು ತಮ್ಮ ವಿವರಣೆಯನ್ನು ಪರಿಷ್ಕರಿಸಬೇಕಾಗುತ್ತದೆ ಇಲ್ಲವೇ ಸಿದ್ಧಾಂತವೇ ದೋಷಯುತವಾದುದು ಎಂದು ಸಾಬೀತಾಗುತ್ತದೆ. ಹಾಗೆಯೇ ಈ ಸಿದ್ಧಾಂತಗಳಿಗೆ ಫ್ಯಾಕ್ಟ್ ಗಳು ಅವಲೋಕನಗಳೇ ಆಧಾರವಾಗಿದ್ದು, ಸ್ವತಂತ್ರವಾಗಿರುತ್ತವೆ. ಅವುಗಳಿಗೆ ಯಾವುದೇ ವೈರಿ ಬಣಗಳ ಅಸ್ಥಿತ್ವ ಅನಿವಾರ್ಯವಲ್ಲ. ಆದರೆ ಐಡಿಯಾಲಜಿಗಳ ಸ್ವರೂಪ ಸಂಪೂರ್ಣ ಭಿನ್ನ.

ಐಡಿಯಾಲಜಿಗಳು ತನ್ನ ವಿವರಣೆಯೇ ಅಂತಿಮ ಸತ್ಯ ಎಂದು ಪ್ರತಿಪಾದಿಸುತ್ತವೆ. ಫ್ಯಾಕ್ಟ್ ಗಳನ್ನು ಆಧರಿಸುವ ಬದಲು ಒಂದಿಷ್ಟು ನಂಬಿಕೆಗಳನ್ನು ಆಧರಿಸುವ ವಿವರಣೆಯಾಗಿರುತ್ತದೆ. ಈ ನಂಬಿಕೆಗಳಿಗೆ ಪೂರಕವಾಗಿರುವ ಘಟನೆಗಳು ಹೆಚ್ಚು ಪ್ರಿಯವಾಗಿರುತ್ತವೆ. ನಂಬಿಕೆಗೆ ವಿರುದ್ಧವಾಗಿರುವುದನ್ನು ದ್ವೇಷಿಸುವುದೊಂದೇ ಮಾರ್ಗ. ಹಾಗಾಗಿ ವೈರಿಬಣಗಳೇ ಇದರ ಅಸ್ತಿತ್ವದ ಪೂರ್ವ ನಿಬಂಧನೆಯಂತಿದೆ.

ವಿದ್ಯಾರ್ಥಿಗಳು ಸಿದ್ಧಾಂತಗಳ ಭಾಗವಾಗುವ ಬದಲು ಇಂತಹ ಐಡಿಯಾಲಜಿಗಳ ಭಾಗವಾದರೆ, ಜ್ಞಾನದ ಅಭಿವೃದ್ಧಿಗಿಂತ ಕಿತ್ತಾಟಗಳೇ ಹೆಚ್ಚಾಗುವ ಸಾಧ್ಯತೆ ಇದೆ. ಸಿದ್ಧಾಂತವಾದರೆ ನಮ್ಮ ಜ್ಞಾನವನ್ನು ಪರಿಷ್ಕರಿಸುತ್ತಾ, ಸುತ್ತಲಿನ ಪ್ರಪಂಚವನ್ನು ಸರಿಯಾಗಿ ಗ್ರಹಿಸುವ ಮಾರ್ಗಗಳನ್ನು ಒದಗಿಸುತ್ತದೆ. ಇದು ನಿಜವಾದ ಶಿಕ್ಷಣದ ಸಾರ್ಥಕತೆ ಕೂಡ. ಆದರೆ ವಿದ್ಯಾರ್ಥಿಗಳು ಐಡಿಯಾಲಜಿ ಪ್ರೇರಿತ ಚಳವಳಿಗಳ ಭಾಗವಾಗಿದ್ದು, ತನ್ನ ನಂಬಿಕೆಯೇ ಸತ್ಯ ಎಂಬ ಹಟಕ್ಕೆ ಬೀಳುತ್ತಾರೆ. ಅಷ್ಟೇ ಅಲ್ಲದೇ ಮತ್ತೊಂದು ಐಡಿಯಾಲಜಿಯನ್ನು ನಂಬುವವರನ್ನು ವೈರಿಗಳೆಂದು ನೋಡದೇ ವಿಧಿಯಿಲ್ಲ. ಹೀಗೆ ನಂಬಿಕೆಯಲ್ಲಿ ಆರಂಭವಾಗಿ ವೈರತ್ವ ಜಗಳ, ಸಂಘರ್ಷದಂತಹ ಮಾರ್ಗದಲ್ಲಿ ಚಲಿಸಿ, ಹತಾಶೆಯಲ್ಲೋ, ಆತ್ಯಹತ್ಯೆಯಲ್ಲೋ ಅವರ ಜೀವನ ಕೊನೆಯಾಗುತ್ತದೆ.

ಇಷ್ಟಕ್ಕೇ ಸೀಮಿತವಾಗುವುದಿಲ್ಲ. ಈ ಐಡಿಯಾಲಜಿಗಳು ಹೊಸಸಿದ್ಧಾಂತಗಳ ಉಗಮಕ್ಕೆ ಕೂಡ ಮಾರಕವಾಗಿ ಪರಿಣಮಿಸುತ್ತವೆ. ಸಮಾಜವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಅರ್ಥೈಸಿಕೊಂಡು ಅದನ್ನೇ ಅಂತಿಮ ಸತ್ಯ ಎಂಬ ಧೋರಣೆಯು, ಸಮಾಜದ ಕುರಿತ ಹೊಸ ಚಿಂತನೆಗಳು ಹುಟ್ಟುವುದನ್ನು ಹತ್ತಿಕ್ಕಲು ಪ್ರಯತ್ನಿಸುತ್ತವೆ. ಹೊಸ ಜ್ಞಾನವನ್ನು ಸೃಷ್ಟಿಸಬೇಕಾದವರೆ, ಅದನ್ನು ತಡೆಯಲು ಮುಂದಾಗುವುದು ದುರಂತ. ಹೀಗಿರುವಾಗ ಶಿಕ್ಷಣ ಕ್ಷೇತ್ರಕ್ಕೆ ಸೆಕ್ಯುಲರ್ ಅಥವಾ ಹಿಂದುತ್ವ ಅಥವಾ ಮಾರ್ಕ್ಸಿಸ್ಟ್ ಐಡಿಯಾಲಜಿ ಪ್ರೇರಿತ ಸಂಘಟನೆಗಳು ಅವಶ್ಯಕವೇ? ಈ ಆಕ್ಟಿವಿಸಂ ಶಿಕ್ಷಣದಲ್ಲಿ ವೈಜ್ಞಾನಿಕ ಜ್ಞಾನವನ್ನು ಬೆಳೆಸುವ ಬದಲು ಅದನ್ನು ಹತ್ತಿಕ್ಕಲು ಪ್ರಯತ್ನಿಸುತ್ತದೆ.

ಇದಕ್ಕೆ ಇನ್ನೊಂದು ಆಯಾಮವೂ ಇದೆ. ಈ ಐಡಿಯಾಲಜಿಯನ್ನೇ ಆಧಾರವಾಗಿ ರಾಜಕೀಯ ಪಕ್ಷಗಳು ಅಸ್ಥಿತ್ವದಲ್ಲಿರುತ್ತವೆ. ಸಂಘಟನೆಯ ಮೂಲಕ ಕಾಲೇಜು – ವಿವಿಗಳೊಳಗೆ ರಾಜಕೀಯದ ಹಸ್ತಕ್ಷೇಪ ಶುರುವಾಗುತ್ತದೆ. ರಾಜಕೀಯದ ಹಸ್ತಕ್ಷೇಪವೂ ಇರುವುದರಿಂದ ಅಧ್ಯಯನ – ಸಂಶೋಧನೆಗಳು ರಾಜಕೀಯ ಪಕ್ಷಗಳ ಐಡಿಯಾಲಜಿಗಳನ್ನು ಬಲಪಡಿಸುವ ಕೆಲಸದಲ್ಲಿ ನಿರತವಾಗುವುದು ಅನಿವಾರ್ಯವಾಗಿ ಬಿಡುತ್ತದೆ. ಪಕ್ಷಗಳು ಸಮಾಜದ ಕುರಿತ ನಿರ್ದಿಷ್ಟ ಕಾಲಘಟ್ಟದ ತಿಳುವಳಿಕೆಯ ಬುನಾದಿ ಮೇಲೆ ನಿಂತಿದ್ದು, ಸಮಾಜದ ಕುರಿತ ತಿಳುವಳಿಕೆಯಲ್ಲಿ ಏರುಪೇರಾದರೆ, ಪಕ್ಷಗಳ ಅಸ್ತಿತ್ವಕ್ಕೆ ದಕ್ಕೆ. ಹಾಗೂ ಅಂತಹ ತಿಳುವಳಿಕೆಯ ಮೇಲೆ ನಿಂತಿರುವ ಹೋರಾಟಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಸಮಾಜದ ಕುರಿತ ಹೊಸ ಸಿದ್ಧಾಂತಗಳನ್ನು ರೂಪಿಸುವ ಸಂಶೋಧನೆಗಳನ್ನು ಬೆಂಬಲಿಸುವ ಬದಲಿಗೆ ಮೊಟಕುಗೊಳಿಸಲು ಶತಾಯ ಗತಾಯ ಪ್ರಯತ್ನಿಸುತ್ತವೆ. ಅಂದರೆ ಶಿಕ್ಷಣ ಕ್ಷೇತ್ರವನ್ನು ಸರ್ಕಾರಗಳು, ರಾಜಕೀಯ ಪಕ್ಷಗಳು, ಈ ಹೋರಾಟಗಳು ತಮ್ಮ ಅಡ್ಡಗಳನ್ನಾಗಿ ಮಾಡಿಕೊಂಡು, ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತವೆ. ಅದರ ಫಲಶೃತಿಯೇ ಮೇಲಿನ ಕೆಲ ಅಹಿತಕರ ಘಟನೆಗಳು.

ಹಾಗಾಗಿ ಹೊಸ ಹೊಸ ಅಧ್ಯಯನ – ಸಂಶೋಧನೆಗಳ ಮೂಲಕ ಗೆದ್ದಲು ಹಿಡಿದಿರುವ ಶಿಕ್ಷಣ ಕ್ಷೇತ್ರವನ್ನು ಸುಧಾರಿಸುವ ಸವಾಲು ನಮ್ಮ ಮುಂದಿದೆ. ಆದರೆ, ಹಾಗೆ ಮಾಡಲು ಪ್ರೋತ್ಸಾಹಿಸಬೇಕಾದ ಸರ್ಕಾರಗಳೇ ಅವುಗಳ ವಿರುದ್ಧ ಸಮರ ಸಾರಿರುವುದು, ಹಾಗೂ ತಮ್ಮ ಐಡಿಯಾಲಜಿಗಳಿಗೆ ಪೂರಕವಾದ ಚಳವಳಿಗಳನ್ನು, ಹೋರಾಟಗಳನ್ನು ಕಾಲೇಜು – ವಿವಿಯೊಳಗೆ ಮಾಡುವಂತೆ ಪ್ರೋತ್ಸಾಹಿಸುತ್ತಿರುವುದು ವಿಪರ್ಯಾಸ. ಅಲ್ಲಿಯ ವಾತಾವರಣವನ್ನು ಅಹಿತಕರಗೊಳಿಸುವ ಜೊತೆಗೆ ನಮ್ಮ ತಿಳುವಳಿಕೆಯನ್ನು 100-200 ವರ್ಷಗಳಷ್ಟು ಹಿಂದೆ ಉಳಿಯುವಂತೆ ಮಾಡುತ್ತವೆ. ಖಂಡಿತವಾಗಿಯೂ ಇದು ಭಾರತೀಯ ಶಿಕ್ಷಣದ ಅವನತಿಯಲ್ಲದೇ ಬೇರೆನೂ ಅಲ್ಲ.

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಮಾಡುವುದೆಂದರೆ, ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸೆಕ್ಯಲರ್ ಐಡಿಯಾಲಜಿಯನ್ನು ಪಠ್ಯದಲ್ಲಿ ತುರುಕುವುದಾಗಲೀ, ಬಿ.ಜೆ.ಪಿ ಅಧಿಕಾರ ಹಿಡಿದರೆ ಹಿಂದುತ್ವ ಐಡಿಯಾಲಜಿಯನ್ನ ಪಠ್ಯವನ್ನಾಗಿಸುವುದಾಗಲೀ ಅಲ್ಲ. ಬದಲಿಗೆ ಈ ಐಡಿಯಾಲಜಿಗಳು ಶಿಕ್ಷಣ ಕ್ಷೇತ್ರವನ್ನು ಪ್ರಭಾವಿಸದ ಹಾಗೆ ನೋಡಿಕೊಳ್ಳುವುದು ಹಾಗೂ ಈ ಐಡಿಯಾಲಜಿಗಳನ್ನು ಪ್ರಶ್ನಿಸುವ, ಅದಕ್ಕಿಂತ ಉತ್ತಮ ಸಿದ್ಧಾಂತಗಳನ್ನು ರೂಪಿಸುವ ಮುಕ್ತ ವಾತಾವರಣವನ್ನು ಕಲ್ಪಿಸುವುದು. ಆ ಮೂಲಕ ವಿದ್ಯಾರ್ಥಿಗಳು ಸಿದ್ಧಾಂತಗಳ ಭಾಗವಾಗಬೇಕೆ ಹೊರತು ಐಡಿಯಾಲಜಿಗಳ ಭಾಗವಾಗುವುದಲ್ಲ. ಐಡಿಯಾಲಜಿಗಳ ಭಾಗವಾಗಿ ಹೋರಾಟದಲ್ಲಿ ತೊಡಗಿಸಿಕೊಂಡರೆ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರದ ಮೂಲ ಉದ್ದೇಶಕ್ಕೆ ವಿರುದ್ಧವಾದಂತೆ. ಜ್ಞಾನದ ಬೆಳವಣಿಗೆಯೇ ಈ ಕ್ಷೇತ್ರದ ಮೂಲ ಉದ್ದೇಶ ಎಂಬುದನ್ನು ಮರೆಯಬಾರದು.

4 ಟಿಪ್ಪಣಿಗಳು Post a comment
  1. rajaram hegde
    ಜನ 19 2017

    very good article Praveen!

    ಉತ್ತರ
  2. Praveen konandur
    ಜನ 20 2017

    Thank you sir…

    ಉತ್ತರ
  3. ಜನ 25 2017

    Nice article, Praviin.

    ಉತ್ತರ
  4. Devu Hanehalli
    ಜನ 28 2017

    Dear Sri Praveen, really a thought provoking article. There is no point in expecting our political leaders and ideologues pay heed to your words and thoughts. Thank you for the nice article.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments