ವಿಚಿತ್ರವಾಗಿದೆ ಮನಸ್ಸು..!
– ಗೀತಾ ಹೆಗ್ಡೆ
ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಮನಸ್ಸು ತುಂಬಾ ಬೇಸರದಲ್ಲಿ ಕಳೆದುಹೋಗುವಷ್ಟು ಮುದುಡಿಕೊಂಡು ಹೃದಯದಲ್ಲಿ ವಿಚಿತ್ರವಾದ ನೋವಿನ ತರಂಗಗಳನ್ನು ಎಬ್ಬಸಿಬಿಡುತ್ತದೆ. ಯಾಕೆ ? ಕಾರಣ ಹುಡುಕಲು ಹೋದರೆ ನಿಜವಾಗಲೂ ಅಂಥದ್ದೇನೂ ಇರುವುದಿಲ್ಲ. ಆದರೂ ಎಲ್ಲೋ ಯಾರೋ ಎಂದೋ ಹೇಳಿದ ಒಂದು ಚಿಕ್ಕ ಮಾತಿಗೂ ಯಾವತ್ತೋ ನೆನಪಿಸಿಕೊಂಡು ಸುಮ್ಮನೆ ದುಃಖ ಪಡುತ್ತದೆ. ಯಾಕೀಗೆ ? ಇದರಿಂದ ಏನು ಪ್ರಯೋಜನ ? ಯಾಕೆ ಈ ಮನಸ್ಸಿನ ಗುಣ ಹೀಗೆ ?
ಬುದ್ದಿ ಹೇಳುತ್ತದೆ, ಬಿಡು ಯಾಕೆ ಈ ನೆನಪುಗಳು ? ವಿವೇಕ ಹೇಳುತ್ತದೆ ನಾನು ಹೀಗೆಲ್ಲ ಏನೇನೊ ನೆನಪಿಸಿಕೊಂಡು ತಲೆ ಕೆಡಿಸಿಕೊಂಡು ದಿನದ ಸಮಯವೆಲ್ಲ ಹಾಳುಮಾಡಿಕೊಳ್ಳಬಾರದು. ಮಾಡಲು ಬೇಕಾದಷ್ಟು ಕೆಲಸವಿದೆ. ಅಚ್ಚುಕಟ್ಟಾಗಿ ಎಲ್ಲ ಬೇಗ ಬೇಗ ಮುಗಿಸಿ ಅದು ಓದಬೇಕು, ಇದು ಓದಬೇಕು, ಏನಾದರೂ ಹೊಸದೊಂದು ಬರಿಬೇಕು. ಹೀಗೆ ನೂರಾರು ಯೋಜನೆಗಳು ಚಿತ್ತದಲ್ಲಿ ಹರಿದಾಡುತ್ತದೆ. ಈ ಒಂದು ಯೋಚನೆ ಒಂದು ರೀತಿ ಉತ್ಸಾಹ ಬಂದು, ಮಾಡುವ ಕೆಲಸದಲೀ ಶೃದ್ಧೆ , ಭಕ್ತಿ, ಕಾತರ ಉಂಟುಮಾಡುತ್ತದೆ.
ಆದರೆ ಈ ಮನಸ್ಸಿಗೆ ಬಂದ ವಿಚಾರ ಪಕ್ಕನೆ ಅಳಿಸುವುದಿಲ್ಲ; ಅದು ತಲೆ ಕೊರೆಯುತ್ತಲೇ ಇರುತ್ತದೆ. ಕುಳಿತಲ್ಲಿ, ನಿಂತಲ್ಲಿ ಬೆನ್ನಟ್ಟಿದ ಭೂತದ ತರ ಬಹಳ ಕಾಟ ಕೊಡುತ್ತದೆ. ಒಮ್ಮೊಮ್ಮೆ ಇದರಿಂದ ಹೊರಗೆ ಬರಲು ದಿನ, ಎರಡು ದಿನ ಬೇಕು. ಅಂದರೆ ಆ ಜಾಗದಲ್ಲಿ ಇನ್ನೊಂದು ಸಂತೋಷದ ಕ್ಷಣ ಅಥವಾ ಹೊಸ ವಿಚಾರದ ಪ್ರವೇಶವಾಗಬೇಕು. ಅಥವಾ ಇರುವ ವಾತಾವರಣದಿಂದ ಬೇರೆಲ್ಲಾದರೂ ದೂರ ಹೋಗಿ ಮನಸ್ಸನ್ನು ಬೇರೊಂದು ವಿಚಾರದಲ್ಲಿ ತುರುಕುವ ಪ್ರಯತ್ನ ಮಾಡಬೇಕು.
ಆದರೆ ಪುನಃ ಮೊದಲಿನ ಸ್ಥಾನಕ್ಕೆ ಬಂದಾಗ ಮತ್ತೆ ಅದೇ ಬೇಸರ ಮೊಳಕೆಯೊಡೆಯುವ ಸಂದರ್ಭವೂ ಇದೆ. ಅಬ್ಬಾ, ಈ ಮನಸ್ಸು ಎಂಥ ಶಕ್ತಿಶಾಲಿ. ಇಡೀ ದೇಹವನ್ನು ತನ್ನ ಅಣತಿಯಲ್ಲೇ ಇಟ್ಟುಕೊಳ್ಳುತ್ತದೆ. ಎಲ್ಲವೂ ತಾನು ಹೇಳಿದ ಹಾಗೇ ಕೇಳಬೇಕು.
ಹಾಗಾದರೆ ಈ ಬುದ್ದಿ, ವಿವೇಕ, ಜ್ಞಾನ ಇವೆಲ್ಲ ಏನು? ಇವೆಲ್ಲವುಗಳ ಸ್ಥಾನ ಎಲ್ಲಿ ಈ ದೇಹದಲ್ಲಿ? ಮನಸ್ಸಿಗೊಂದೇ ಯಾಕೆ ಇಷ್ಟೊಂದು ಪ್ರಬಲವಾದ ಸ್ಥಾನ? ” ಮನಸ್ಸು ಕಂಟ್ರೋಲಲ್ಲಿ ಇಡೋದು ಬಹಳ ಕಷ್ಟ;” ಈ ಮಾತು ಎಲ್ಲಾ ಕಡೆ ಕೇಳುತ್ತಲೇ ಇದ್ದೇನೆ. ಹಾಗಾದರೆ ಎಲ್ಲರಿಗೂ ಇದೇ ತರ ಅನುಭವ ಆಗುತ್ತದೆಯೆ? ಹಾಗಾದರೆ ಮನಸ್ಸು ಎಲ್ಲರಲ್ಲೂ ಒಂದೇ ತರ ಇರುವುದೆ? ಆದರೆ ಒಬ್ಬೊಬ್ಬರ ಮನಸ್ಸು ಒಂದೊಂದು ತರ ಅಂತ ಮಾತಾಡೋದು ಕೇಳಿದ್ದೇನೆ. ಯಾವುದು ನಿಜ? ಆಗೆಲ್ಲ ಅನಿಸುತ್ತದೆ; ಛೆ, ಬೇರೆಯವರ ಮನಸ್ಸನ್ನು ಅವರ ಮನಸ್ಸಿನ ಒಳಗೆ ಹೋಗಿ ತಿಳಿದುಕೊಳ್ಳುವ ಹಾಗಿದ್ದರೆ ಚೆನ್ನಾಗಿ ಇರುತ್ತಿತ್ತು. ಆದರೆ ಅದು ಅಸಾಧ್ಯದ ಮಾತು.
ಆದರೆ ಈ ಬರವಣಿಗೆ ಅದೆಷ್ಟು ಚಾಲು! ಯಾರ ಮನಸ್ಸಿನಲ್ಲಿ ಏನಿದೆ ಎಂದು ಅವರ ಕೈಯಲ್ಲಿ ಕಥೆಯ ರೂಪದಲ್ಲೊ, ಕವನದ ರೂಪದಲ್ಲೊ ಬರೆಸಿಬಿಡುವುದಲ್ಲ! ನಿಜಕ್ಕೂ ಅದ್ಭುತ.
ಹೀಗೆ ಈ ಮನಸ್ಸಿನ ಬಗ್ಗೆ ವಿಶ್ಲೇಷಣೆ ಮಾಡಿದಷ್ಟೂ ಮುಗಿಯುವುದೇ ಇಲ್ಲ. HATS OFF ಮನಸೆ!!
ಮನಸ್ಸು ಯಾವಾಗಲೂ
ಸತ್ತ ನೆನಪುಗಳ ಸುತ್ತ
ಗಿರಕಿ ಹೊಡೆಯುತ್ತಲೇ
ಇರುತ್ತದೆ,
ವಿವೇಕ ಹೇಳುತ್ತದೆ
ಇದರಿಂದ ಏನೂ
ಪ್ರಯೋಜನ ಇಲ್ಲ
ಬಿಟ್ಟು ಬಿಡು ಅಂತ.
ಆದರೂ ಕೇಳಬೇಕಲ್ಲ
ಬೇಕಾದ್ದು,ಬೇಡಾದ್ದು
ಎಲ್ಲಾ ನೆನಪಿಸಿಕೊಂಡು
ಆಕಾಶವೇ ತಲೆ ಮೇಲೆ
ಬಿದ್ದವರ ತರ ಪೆಚ್ಚು
ಮೋರೆ ಹಾಕಿಕೊಂಡು
ಅತ್ತು ಅತ್ತು ಕಣ್ಣೆಲ್ಲ
ಹೆಂಡ ಕುಡಿದವರಂತೆ
ಕೆಂಗಣ್ಣು ಮಾಡಿಕೊಂಡು
ಈ ದೇಹದ ಸೌಂದರ್ಯ
ಸತ್ಯ ನಾಶ ಮಾಡೋದರಲ್ಲಿ
ಅದೇನು ಖುಷಿನೊ
ಆ ದೇವರೆ ಬಲ್ಲ!
ಓ ಮನಸೆ, ಒಮ್ಮೆ
ನೀನೆ ಯೋಚಿಸಿ ನೋಡು
ಸ್ವರ್ಗದ ಬೇರು ನಿನ್ನಲ್ಲೇ ಇದೆ
ತಂಗಾಳಿಯಾಗಿ
ಸವಿ ಸವಿಯಾದ
ನೆನಪುಗಳಷ್ಟನ್ನೇ
ನೀ ಉಳಿಸಿಕೊಂಡು
ದೇಹವನ್ನು ಆವರಿಸಿಕೊ
ಶಿರದಲ್ಲಿ ಸಿಗುವುದು
ನಿನಗೆ ರಾಜ ಮಯಾ೯ದೆ
ಮನು ಕುಲಕೆ ನೀನಾಗಿರುವೆ
ಮೂಲಾಧಾರ!!
ಚಿತ್ರ ಕೃಪೆ :- http://www.lifehack.org/
Good one
ಬಹಳ ಚೆನ್ನಾಗಿತ್ತು ಈ ಬರಹ.
Nice article