ವಿಷಯದ ವಿವರಗಳಿಗೆ ದಾಟಿರಿ

ಜನವರಿ 29, 2017

ಓಡುವ ಕೋಣದ ಹಿಂದೆ ಎಷ್ಟೆಲ್ಲಾ ಅಡಗಿದೆ?

‍ನಿಲುಮೆ ಮೂಲಕ

– ಸಂತೋಷ್ ತಮ್ಮಯ್ಯ

860897a4867e00f161e4236fd7fe5aeeಕರಾವಳಿಯ ಖ್ಯಾತ ಕನ್ನಡ ಮತ್ತು ತುಳು ಕಾದಂಬರಿಗಾರ ದಿವಂಗತ ಬೋಳ ಚಿತ್ತರಂಜನ್ ದಾಸ್ ಶೆಟ್ಟಿಯವರು ತಮ್ಮ  “ಅಳಿದುಳಿದವರು” ಕಾದಂಬರಿಯಲ್ಲಿ ಕಂಬಳವನ್ನು ವಿವರಿಸುವುದು ಹೀಗೆ : ಎಲ್ಲಾ ಒಕ್ಕಲು ಮಕ್ಕಳು, ಮನೆಯವರೂ ಅಂದು ಸಡಗರದಿಂದಿದ್ದರು. ಏಕೆಂದರೆ ಅಂದು ಗದ್ದೆಯ ನಾಟಿ ಕಾರ್ಯದ ಕಡೆಯ ದಿನ. ನಸುಬೆಳಕಿನಲ್ಲೇ ಎತ್ತುಗಳು, ಕೋಣಗಳನ್ನು ಬಾಕಿಮಾರು ಗದ್ದೆಗೆ ಇಳಿಸಲಾಯಿತು. ಹತ್ತು ಜೋಡೆತ್ತುಗಳು ನಿಂತರೂ ತುಂಬದ ಆ ಬಾಕಿಮಾರು ಗದ್ದೆಯ ಕಡೆಯ ನಾಟಿ ಎಂದರೆ ಆ ಗುತ್ತಿಗಷ್ಟೇ ಅಲ್ಲ, ಊರಿಗೇ ಒಂದು ಸಂಭ್ರಮ. ಹೆಂಗಸರು ಗದ್ದೆಗೆ ತಣಿ ಎರೆದರು, ಸುಳಿ ಬಾಳೆ ಎಲೆಗಳಿಂದ ನಾಗನಿಗೆ ನೈವೇದ್ಯ ಅರ್ಪಿಸಿದರು.ಕೆಲವರು ಬೊಂಡಗಳನ್ನು ಇಟ್ಟು ಪ್ರಾರ್ಥನೆ ಸಲ್ಲಿಸಿದರು. ನಾಟಿಗದ್ದೆಯನ್ನು ಅದಾಗಲೇ ಉತ್ತಾಗಿತ್ತು. ಇನ್ನು ಅದನ್ನು ಹಸನು ಮಾಡಬೇಕು. ಎತ್ತು-ಕೋಣಗಳಿಗೆ ಕಟ್ಟಿದ್ದ ನೊಗವನ್ನು ಹಾಗೇ ಬಿಟ್ಟು ಹಲಗೆಯನ್ನು ಅದಕ್ಕೆ ಬಿಗಿಯಲಾಯಿತು. ಗದ್ದೆಯಲ್ಲಿ ಕೆಸರು ಎಂದರೆ ಮೂರ್ನಾಲ್ಕು ಇಂಚು ಕಾಲು ಹೂತುಹೋಗುವಷ್ಟು ಆಳ. ಆ ಹಲಗೆಯ ಮೇಲೆ ಒಂದು ಕಾಲಿಟ್ಟು. ಕೆಸರಿನಲ್ಲಿ ಇನ್ನೊಂದು ಕಾಲಿಟ್ಟು ಹಲಗೆ ಕಟ್ಟಿದ ಕೋಣಗಳನ್ನು ನಡೆಸಬೇಕು. ಅದನ್ನು ಆದಷ್ಟೂ ಬೇಗ ಮಾಡಬೇಕು. ಆ ಬಾಕಿಮಾರು ಎಂಬ ದೇವರ ಗದ್ದೆಯೋ ಉದ್ದಕ್ಕೆ ಮಲಗಿದೆ. ಬೇಗ ಸಮಾ ಮಾಡದಿದ್ದರೆ ಬೇಗ ನಾಟಿ ಆರಂಭವಾಗುವುದಿಲ್ಲ.

ಗದ್ದೆಗಿಳಿದವರು ಸಾಲಾಗಿ ನಿಂತ ಜೋಡುಗಳನ್ನು ಮುಂದಕ್ಕಟ್ಟಿದರು. ಎತ್ತುಗಳು ಮುಂದಕ್ಕೋಡಿದರೆ ಕೋಣಗಳು ನಿಧಾನ ಓಡುವವವು. ಸಹಜವಾಗಿ ಕೋಣಗಳ ಯಜಮಾನ ಎತ್ತುಗಳ ಸಮಕ್ಕೆ ಕೋಣಗಳು ಓಡಲು ಅವುಗಳಿಗೆ ಭಾರಿಸುವನು. ಕೋಣಗಳ ಚರ್ಮಗಳಿಗೆ ಅವು ತಾಗದೆ ಆತ ಮತ್ತೊಮ್ಮೆ ಜೋರಾಗಿಯೇ ಭಾರಿಸುವನು. ಜೋಡುಗಳು ಜೋರಾಗಿ ಓಡುವವು. ಸಾಲಾಗಿ ಓಡಲು ಮತ್ತಷ್ಟು ಪೆಟ್ಟುಗಳು ಅವಕ್ಕೆ ಬೀಳುವವವು. ಒಂದು ಜೋಡು ಮತ್ತೊಂದನ್ನು ದಾಟಿದರೆ ಮತ್ತೊಬ್ಬನು ತಾನು ಮೊದಲು ಗುರಿಮುಟ್ಟಬೇಕು ಎಂದು ತನ್ನ ಜೋಡುಗಳನ್ನೂ ಮತ್ತಷ್ಟು ವೇಗದಿಂದ ಓಡಿಸುವನು. ತನ್ನ ಎತ್ತು ಕಡೆಯಲ್ಲಿ ಉಳಿದರೆ ವ್ಯವಸಾಯ ತಿಳಿಯದವನು ಎಂದು ಹಂಗಿಸುವರೋ ಎಂಬ ಭಯ ಆತನಿಗೆ. ಇವನ್ನೆಲ್ಲಾ ಕಟ್ಟಪುಣಿಯಲ್ಲಿ ನಿಂತು ನೋಡಿದವರಿಗೆ ಅದು ಮೋಜೆನಿಸುವುದು. ಸ್ಪಧೆಯೊಂದು ಅಲ್ಲಿ ತಾನೇತಾನಾಗಿ ಅಲ್ಲಿ ಮೂಡುವುದು. ಕಟ್ಟಪುಣಿ (ಏರಿ)ಯಲ್ಲಿ ಗದ್ದಲ, ಕೇಕೆ, ಬೊಬ್ಬೆ. ತಾನೇ ತಾನಾಗಿ ಹಬ್ಬದ ಸಡಗರವೊಂದು ಅಲ್ಲಿ ಮೂಡುವುದು. ತಣಿ ಎರೆಯಲು ಬಂದ ಹೆಂಗಸರು ಜೋಡುಗಳು ಹಲಗೆ ಮುಟ್ಟುವವರೆಗೆ ಮರೆತು ನೋಡುತ್ತಾ ಇದ್ದುಬಿಡುವರು.
ಅಂದ ಹಾಗೆ ಕಾದಂಬರಿಯಲ್ಲಿ ಉಲ್ಲೇಖವಾಗಿರುವ ಈ ಸಾಲುಗಳು ಕೇವಲ ಕಾದಂಬರಿಕಾರನ ಕಲ್ಪನೆಯಲ್ಲ. ಇಂದಿಗೂ ಸಾಂಪ್ರದಾಯಿಕ ಭತ್ತ ಬೆಳೆಯುವ ಕರಾವಳಿಯ ಕೆಲವು ಭಾಗಗಳಲ್ಲಿ ಈ ಚಿತ್ರಣವನ್ನು ಕಾಣಬಹುದು. ಸುಳ್ಯ, ಬೆಳ್ತಂಗಡಿ, ಕಾರ್ಕಳ ತಾಲೂಕಿನ ಕೆಲ ಭಾಗಗಳಲ್ಲಿ, ಜೈನರ ಭತ್ತದ ಗದ್ದೆಗಳಲ್ಲಿ, ಅಡಿಕೆ ಯಶಸ್ವಿಯಾಗದ ಕರಾವಳಿಯ ಭಾಗಗಳ ಗದ್ದೆ, ಕಟ್ಟಪುಣಿಗಳಲ್ಲಿ ಇಂದಿಗೂ ಅದೇ ಹಬ್ಬ, ಅದೇ ಸಡಗರ, ಕಡೆಯ ನಾಟಿ ದಿನದಂದು ಇದೇ ರೀತಿಯ ಪರಂಪರೆ. ಸಣ್ಣ ಹಿಡುವಳಿದಾರರೂ ತಮ್ಮ ಸಣ್ಣ ಗದ್ದೆಯನ್ನು ಕೊನೆಯ ನಾಟಿಯಂದು ಸಂಭ್ರಮಿಸುವುದು ಹೀಗೆಯೇ. ಕಾದಂಬರಿಯಲ್ಲಿ ಉಲ್ಲೇಖವಾದಂತೆ ದೊಡ್ಡ ಹಿಡುವಳಿದಾರರೂ ಕೊನೆಯ ನಾಟಿಯನ್ನು ಸಂಭ್ರಮಿಸುವುದೂ ಹೀಗೆಯೇ. ಅಂದ ಹಾಗೆ ಇವು ಕಂಬಳ ಅಲ್ಲ. ಕಡೆಯ ನಾಟಿ ಅಷ್ಟೇ. ಇಲ್ಲೆಲ್ಲಾ ಎತ್ತುಗಳನ್ನು ಹೊಡೆಯಲಾಗುತ್ತದೆ. ಕೋಣಗಳನ್ನು ವೇಗವಾಗಿ ಓಡಿಸಲಾಗುತ್ತದೆ. ಹಾಗಾದರೆ ಅಲ್ಲೆಲ್ಲಾ ಭತ್ತದ ಕೃಷಿಯನ್ನೇ ನಿಷೇಧಿಸಿಬಿಡಬೇಕೇ? ಎಲ್ಲೆಲ್ಲೂ ಯಾಂತ್ರಿಕ ಕೃಷಿಯನ್ನೇ ಪ್ರತಿಷ್ಠಾಪಿಸಿಬಿಡಬೇಕೇ? ನಾಗನಿಗೆ ತಣಿ ಎರೆಯುವುದನ್ನೂ ನಿಲ್ಲಿಸಿಬಿಡಬೇಕೇ? ತಮ್ಮ ಕೊನೆಯ ನಾಟಿಯಂದು ಕೃಷಿಕರು ಎಷ್ಟು ಸಂಭ್ರಮಪಡುವರೋ, ತಣಿ ಎರೆಯುವರೋ ಅಷ್ಟೇ ಭಕ್ತಿ, ಅಷ್ಟೇ ಸಡಗರ ಕೋಣಗಳನ್ನು ಓಡಿಸುವುದರಲ್ಲೂ ಅಲ್ಲಿರುತ್ತವೆ. ಆದರೆ ಅಂಥದ್ದೇ ಸಡಗರ ಕಂಬಳವಾಗಿಹೋದರೆ ಮಾತ್ರ ನಮ್ಮ ಕಾನೂನಿಗೆ ಪ್ರಾಣಿಹಿಂಸೆಯಾಗಿಬಿಡುತ್ತದೆ!

ಹೀಗೆ ಕೊನೆಯ ನಾಟಿಯಂದು ಕೋಣಗಳನ್ನು ಓಡಿಸುವ ಈ ಪದ್ಧತಿ ಮುಂದೆ ಹಲವು ಪರಿವರ್ತನೆಗಳಿಗೆ ತುತ್ತಾಗಿ ಸ್ಪರ್ಧೆಯಾಯಿತು ಎಂಬುದು ಹಲವು ಪಂಡಿತರ ಮತ. ಏನೇ ಇದ್ದರೂ ಈ ಆಧುನಿಕ ಕಂಬಳ ತನ್ನ ಮೂಲ ಪರಂಪರೆಗಳಿಂದ ಹೊರಬರಲಿಲ್ಲ ಎಂಬುದು ಕೂಡಾ ಸತ್ಯ. ಕಂಬಳ ವಿರೋಧಿಸುವವರಿಗೆ ಕೆಸರು ಗದ್ದೆಗಳಲ್ಲಿ ಕೇವಲ ಕೋಣಗಳು ಓಡುವುದು ಮಾತ್ರ ಕಂಡರೆ ಕಂಬಳದಲ್ಲಿ ಕಾಣದ ಸಂಗತಿಗಳೂ ಹಲವಿವೆ. ಒಂದೂರಿನ ಕಂಬಳ ಎಂದರೆ ಅದೊಂದು ಕೃಷಿ ಮೇಳ. ಅಲ್ಲಿ ಜೋಡೆತ್ತುಗಳ ವ್ಯಾಪಾರವೂ ನಡೆಯುತ್ತಿದ್ದವು. ಕೃಷಿ ಸಲಕರಣೆಗಳ, ಬಿತ್ತನೆ ಬೀಜಗಳ ಮಾಹಿತಿ ವಿನಿಮಯವಾಗುತ್ತಿದ್ದವು. ಕೃಷಿಕರ ಸಮಾಗಮವಾಗುತ್ತಿದ್ದವು. ಜೊತೆಗೆ ಭರಪೂರ ಮನರಂಜನೆಯೂ ಸಿಗುತ್ತಿದ್ದವು. ಯಾವಾಗ ದೇಶದಲ್ಲಿ ಉಳುವವನೇ ಭೂಮಿಯೊಡೆಯ ಎಂಬ ಕಾನೂನು ಜಾರಿಗೆ ಬಂತೋ ಕರಾವಳಿಯಲ್ಲಿ ಸಾಮಾಜಿಕ ಸ್ಥಿತ್ಯಂತರದ ಜೊತೆಜೊತೆಗೇ ಸಾಂಸ್ಕೃತಿಕ ಸ್ಥಿತ್ಯಂತರಗಳೂ ಸಂಭವಿಸಿದವು. ಸಹಜವಾಗಿ ಕಂಬಳಗಳೂ ಸೊರಗತೊಡಗಿದವು. ಕಂಬಳದ ಗದ್ದೆ ವ್ಯಾಜ್ಯದ ಭೂಮಿಯಾಗಿ ಯಾರದೋ ಪಾಲಾಗಿತ್ತು. ಕಂಬಳ ನಡೆಸುತ್ತಿದ್ದ ಹಲವು ಪ್ರತಿಷ್ಠಿತ ಮನೆತನಗಳು ತಮ್ಮ ಭೂಮಿಗಳನ್ನು ಕಳೆದುಕೊಂಡು ಮುಂಬೈ ಸೇರಿಕೊಂಡರು. ಇನ್ನು ಕೆಲವೆಡೆ ಭೂಮಿಗಳನ್ನು ಕಳೆದುಕೊಂಡ ಕಂಬಳದ ಗದ್ದೆಗಳು ಚೂರುಚೂರಾಗಿಹೋಗಿತ್ತು. ಕಂಬಳಗಳ ಸಂಖ್ಯೆ ಕಡಿಮೆಯಾಗತೊಡಗಿತು. ಕಂಬಳ ಸೊರಗಿದ ಜೊತೆಜೊತೆಗೇ ತುಳುನಾಡಿನ ಜನರು ತಮ್ಮ ಆಚರಣೆಯ ಹಲವು ಸಂಗತಿಗಳನ್ನೂ ಕಳೆದುಕೊಳ್ಳಲಾರಂಭಿಸಿದರು. ಕಂಬಳದ ಗದ್ದೆ ಎಂಬ ಪವಿತ್ರ ಭೂಮಿಗೆ ಹಾಲೆರೆಯುವುದು ಕಡಿಮೆಯಾಯಿತು. ಜನ ಇದರಿಂದ ತಮಗೆ ಕಷ್ಟಕಾಲ ಬಂತೆಂದು ಕೊರಗಿದರು. ಜನ ಮತ್ತು ಜಾನುವಾರುಗಳ ರೋಗಗಳ ನಿವಾರಣೆಗೆ ಕಂಬಳದ ದಿನದಂದು ಅಕ್ಷತೆ ಹಾಕಿ ಪ್ರಾರ್ಥಿಸಿದರೆ ಗುಣವಾಗುತ್ತಿದ್ದವು ಎಂದುಕೊಂಡ ಆಸ್ತಿಕರು ಕಂಬಳಗಳಿಲ್ಲದೆ ಖಾಲಿತನವನ್ನು ಅನುಭವಿಸಿದರು. ದೈವ-ಭೂತಗಳು ಸಂತೃಪ್ತರಾಗಿಲ್ಲವೆಂದು ಕೊರಗಿದರು. ಯಾವ ಗದ್ದೆಗಳಿಗೆ ಸೂತಕಾಧಿಗಳಿದ್ದರೆ ಪ್ರವೇಶವಿಲ್ಲ ಎಂಬ ಕಟ್ಟೆಳೆಗಳಿದ್ದವೋ ಅವೇ ಪಾಳು ಸುರಿದವು. ಒಟ್ಟು ಕಂಬಳದ ಹಿಂದೆ ಇದ್ದ ಒಂದು ಆರಾಧನಾ ಪದ್ಧತಿ ಕ್ರಮೇಣ ನೇಪತ್ಯಕ್ಕೆ ಸರಿಯತೊಡಗಿತು.

ಅಂಥ ಹೊತ್ತಲ್ಲಿ ಕಂಬಳದ ಪುನರುತ್ಥಾನಕ್ಕೆ ಶ್ರಮಿಸಿಸಲು ಹಲವು ಯುವಕರು ಮುಂದೆ ಬಂದರು. ಅವರಲ್ಲೊಬ್ಬರು ಪ್ರೋ. ಗುಣಪಾಲ ಕಡಂಬ ಎಂಬವರು. ಮೈಸೂರಿನಲ್ಲಿ ಜನಪದ ಐಚ್ಛಿಕ ಓದುತ್ತಿದ್ದ ಗುಣಪಾಲರು ಮೈಸೂರು ಸೀಮೆಯ ಜನಪದ ಕಲೆಗಳನ್ನು ಅಧ್ಯಯನ ಮಾಡುತ್ತಿದ್ದಾಗ ತಮ್ಮೂರಿನಲ್ಲೂ ಮರೆತುಹೋಗಲಿರುವ ಕಂಬಳವೆಂಬ ಜನಪದ ಕಲೆಯೊಂದಿದೆ ಎಂಬ ಸಂಗತಿ ಹೊಳೆಯಿತು. ಓದು ಮುಗಿಸಿ ಮರಳಿ ಊರಿಗೆ ಬಂದವರೇ ಕಂಬಳದ ಬಗ್ಗೆ ಅಧ್ಯಯನಕ್ಕೆ ತೊಡಗಿದರು. ಹುಡುಕುತ್ತಾ ಹೋದಂತೆ ಗುಣಪಾಲರಿಗೆ ಸಮಸ್ತ ತುಳುನಾಡು, ಅಲ್ಲಿನ ಕೃಷಿ ಪರಂಪರೆ ಕಂಬಳದ ಸುತ್ತಲೇ ತಿರುಗುತ್ತಿದೆ ಎಂಬುದನ್ನು ಕಂಡುಕೊಂಡರು. ಅದಾಗಾಗಲೇ ಕೆಲವೆಡೆ ಕಂಬಳ ನಡೆಯುತ್ತಿದ್ದರೂ ಅವು ತಮ್ಮ ಮೂಲಸ್ವರೂಪವನ್ನು ಕಳೆದುಕೊಂಡಿದ್ದವು. ಜೂಜು ಮೇರೆ ಮೀರಿತ್ತು. ಕಂಬಳದ ಹೆಸರಿನಲ್ಲಿ ಸಂಸ್ಕೃತಿಯೊಂದನ್ನು ಬಿಟ್ಟು ಬೇರೆಲ್ಲವೂ ನಡೆಯುತ್ತಿತ್ತು. ತಿಳಿದವರು ಜಮೀನು ವ್ಯಾಜ್ಯಗಳಿಂದ ಆಸಕ್ತಿಯನ್ನು ಕಳೆದುಕೊಂಡಿದ್ದರು. ಕೆಲವರು ಗುಣಪಾಲರಿಗೆ ಕಂಬಳವೆನ್ನುವುದು ಪೋಲಿಗಳ ಅಡ್ಡೆ , ಅದರತ್ತ ಮುಖ ಹಾಕಬಾರದೆಂದು ತಿಳಿಸಿದರು. ಆದರೆ ಗುಣಪಾಲ ಕಡಂಬರು ಅದನ್ನು ಸವಾಲಾಗಿ ಸ್ವೀಕರಿಸಿದರು. ೧೯೯೪ರಲ್ಲಿ ಸಮಾನಮನಸ್ಕರ ಜೊತೆಗೂಡಿ ಕಂಬಳ ನಿರ್ವಹಣಾ ಸಮಿತಿಯನ್ನು ರಚಿಸಿದರು. ನಿಂತುಹೋಗಿದ್ದ ಕಂಬಳಗಳನ್ನು ಒಂದೊಂದಾಗಿ ಪುನರಾರಂಭಿಸಿದರು. ಕಂಬಳದೊಡನೆ ಸಂಸ್ಕೃತಿಯೂ ಮತ್ತೆ ಆಚರಣೆಗೆ ಬಂತು. ಮುಂದೆ ಕಂಬಳ ಅಕಾಡೆಮಿಯನ್ನು ಸ್ಥಾಪಿಸಿದರು. ಕರಾವಳಿಯ ಎಲ್ಲಾ ಕಂಬಳಗಳಿಗೆ ಸ್ವತಃ ತೀರ್ಪುಗಾರರಾಗಿ ಹೋದರು. ಕಂಬಳದಲ್ಲಿ ನಡೆಯುತ್ತಿದ್ದ ವಿಕೃತಿಗಳನ್ನೆಲ್ಲಾ ನಿಲ್ಲಿಸಿದರು. ಸ್ಪರ್ಧೆ ಮನರಂಜನೆಗೆ ಮಾತ್ರ ಸೀಮಿತವಾಗಬೇಕು ಎಂಬುದನ್ನು ತಿಳಿಸಿದರು. ಪ್ರತೀ ವರ್ಷ ೧೫೦ ಜನರನ್ನು ಸೇರಿಸಿ ಕಂಬಳ ಶಿಬಿರವನ್ನು ಆಯೋಜಿಸಿದರು. ತುಳು ಇತಿಹಾಸವನ್ನು ಅಧ್ಯಯನ ಮಾಡಿ ಕಂಬಳದ ವೈಜ್ಞಾನಿಕತೆಯನ್ನು ಆಚರಣೆಗೆ ತಂದರು. ೧೦ ದಿನಗಳ ಶಿಬಿರದಲ್ಲಿ ಕಂಬಳದ ಸ್ವರೂಪ, ಕಂಬಳದ ಕೋಣಗಳು, ಕಂಬಳಕ್ಕೆ ಬಳಸುವ ಹಗ್ಗ, ಹಲಗೆ, ನೊಗ, ಕೋಣ ಓಡಿಸುವವರಿಗೆ ತರಬೇತಿಯನ್ನು ನೀಡಿದರು. ಕಳೆದ ೨೫ ವರ್ಷಗಳಿಂದ ಪ್ರತಿಫಲಾಪೇಕ್ಷೆಯಿಲ್ಲದೆ ಜಿಲ್ಲಾ ಕಂಬಳ ಸಮಿತಿಯನ್ನು ಮುನ್ನಡೆಸಿದರು. ಅದರ ಪರಿಣಾಮ ಇಂದಿನ ಕಂಬಳ.
ಇಂದಿನ ಕಂಬಳವನ್ನು ನೋಡಿದ ಯಾರಿಗೇ ಆದರೂ ಇದು ಬರೀ ಕೋಣಗಳು ಓಡುವ ಸ್ಪರ್ಧೆ ಎನಿಸುವುದಿಲ್ಲ. ಏಕೆಂದರೆ ಇಂದಿನ ಆಧುನಿಕ ಕಂಬಳ ಕೂಡಾ ಒಂದು ಧಾರ್ಮಿಕ ಆಚರಣೆಯ ಭಾಗವೆಂಬಂತೆ ಆರಂಭವಾಗುತ್ತದೆ. ಕಂಬಳ ಗದ್ದೆಯ ಸಮೀಪದ ದೇವಸ್ಥಾನ ಅಥವಾ ದೈವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲುತ್ತವೆ. ನಾಗದೇವರಿಗೆ ತಣಿ ಎರೆಯಲಾಗುತ್ತದೆ. ಆದರೆ ಸೂತಕಾಧಿಗಳಿರುವ ಕುಟುಂಬಸ್ಥರು ಇವತ್ತಿಗೂ ಕಂಬಳಗಳಿಗೆ ತಮ್ಮ ಕೋಣಗಳನ್ನು ಇಳಿಸುವುದಿಲ್ಲ. ಆತ ಎಷ್ಟೇ ಪ್ರತಿಷ್ಠಿತ ಮನೆತನದವನಾಗಿರಲಿ, ಎಷ್ಟೋ ದಿನಗಳಿಂದ ಕಂಬಳಕ್ಕಾಗಿ ತನ್ನ ಕೋಣಗಳನ್ನು ಸಜ್ಜುಗೊಳಿಸಿ ಕಾಯುತ್ತಿರಲಿ ಅಂಥವನಿಗೆ ಆ ಹೊತ್ತಲ್ಲಿ ಕಂಬಳ ನಿಷಿದ್ಧ. ಕಂಬಳಕ್ಕೆ ಇಳಿಯಲಾಗದ ಜನರು ಕಂಬಳದ ಗದ್ದೆಯ ನೀರನ್ನು ದಡದಲ್ಲಿ ನಿಂತಿರುವ ಕೋಣಗಳಿಗೆ ಪ್ರೋಕ್ಷಣೆ ಮಾಡುವುದನ್ನು, ಕಂಬಳ ಗದ್ದೆಗೆ ಅಕ್ಷತೆ ಹಾಕುವುದನ್ನು ಇಂದಿಗೂ ಕಾಣುತ್ತೇವೆ. ಮೊದಲಿದ್ದ ಹೊಡೆದಾಟ, ಜಗಳಗಳು ನಿಂತಿವೆ. ಕಂಬಳದಲ್ಲಿ ತಜ್ಞ ತೀರ್ಪುಗಾರರೇ ಹಾಜರಿರುತ್ತಾರೆ. ತೀರ್ಪಿನಲ್ಲಿ ಪಾರದರ್ಶಕತೆ ತರಲಾಗಿದೆ. ಇವೆಲ್ಲದರ ನಂತರ ಎರಡನೆಯ ಪ್ರಾಮುಖ್ಯತೆಯನ್ನು ಸ್ಪರ್ಧೆಗೆ ಇಡಲಾಗುತ್ತದೆ. ಕ್ಯಾಮರಾಗಳನ್ನು ಬಳಸಲಾಗುತ್ತದೆ. ಕ್ಯಾಮರಾ ಕೈಕೊಟ್ಟರೆ ಅತ್ಯಾಧುನಿಕ ಗ್ಲೇಸರ್ ನೆಟ್ವರ್ಕ್ ಸಿಸ್ಟಮ್ ಕೂಡಾ ಇರುತ್ತದೆ. ಕೆಲವೆಡೆ ಡ್ರೋನ್ ಕ್ಯಾಮರಾಗಳು ಮತ್ತು ರೋಪ್ ವೇ ಕ್ಯಾಮರಾ ಸಿಸ್ಟಮ್ ಅನ್ನು ಕೂಡಾ ಬಳಸಲಾಗುತ್ತದೆ. ಬಹುಕೋನಗಳಿಂದ ಫಲಿತಾಂಶವನ್ನು ನಿರ್ಧರಿಸಲು ನಾನಾ ಕ್ಯಾಮರಾಗಳನ್ನು ಇಡಲಾಗಿರುತ್ತದೆಯೆಂದರೆ ಈ ಕರಾವಳಿಯ ಜನರಿಗೆ ಕಂಬಳವೆಂದರೆ ಅದೆಷ್ಟು ಅಭಿಮಾನವಿರಬಹುದು? ಕಟ್ಟುನಿಟ್ಟಿನ ತೀರ್ಪುಗಾರರು ಯಾವ ಕಾರಣಕ್ಕೂ ಕಂಬಳ ಸ್ಪರ್ಧೆಯಾಗಬಾರದು ಎಂದು ಪದೇ ಪದೇ ಘೋಷಿಸುತ್ತಲೇ ಇರುತ್ತಾರೆ. ಯಾವನೇ ಒಬ್ಬ ಕಂಬಳ ಓಡಿಸುವವನು ತನ್ನ ಕೋಣಗಳಿಗೆ ಅಗತ್ಯಕ್ಕಿಂತ ಹೆಚ್ಚಿಗೆ ಹೊಡೆದರೆ ಆತನಿಗೆ ಎಚ್ಚರಿಕೆ, ಅಮಾನತು ಮಾಡುವ ನಿಯಮ ಕೂಡಾ ಇಂದಿನ ಆಧುನಿಕ ಕಂಬಳದಲ್ಲಿದೆ. ಇನ್ನೆಲ್ಲಿಯ ಪ್ರಾಣಿಹಿಂಸೆ? ಇವಿಷ್ಟೇ ಅಲ್ಲ. ಕಂಬಳ ಒಂದು ಸಾಮಾಜಿಕ ಸಾಮರಸ್ಯದ ಉತ್ಸವ. ದಾರಿಯಲ್ಲಿ ಇರುವೆ ಕಂಡರೆ ಅದು ದಾಟಿದ ಮೇಲೆ ನಡೆಯುವಷ್ಟು ಅಹಿಂಸೆಯ ಆರಾಧಕರಾದ ಜೈನರೂ ಕೋಣಗಳನ್ನು ಕಂಬಳಕ್ಕಿಳಿಸುತ್ತಾರೆ, ದಲಿತನೂ ಗದ್ದೆಗೆ ಇಳಿಯುತ್ತಾನೆ. ಜಾತಿಭೇದವಿಲ್ಲದೆ ಒಂದೇ ಸಂಸ್ಕೃತಿಯನ್ನು ಆಚರಿಸುವ ಇಂಥ ಉತ್ಸವಗಳನ್ನು ನಿಲ್ಲಿಸಬೇಕೆನ್ನುವುದರ ಹಿಂದೆ ಅಡಗಿರುವ ಹುನ್ನಾರವಾದರೂ ಯಾವುದು? ಕರ್ನಾಟಕ ರಾಜ್ಯ ಸರ್ಕಾರ ನೀಡುವ ಕ್ರೀಡಾರತ್ನ ಪ್ರಶಸ್ತಿಗೆ ಹಲವು ಕಂಬಳ ಓಡಿಸುವನೂ ಭಾಜನರಾಗಿದ್ದಾರೆಂದರೆ ಅದಕ್ಕೇನನ್ನಬೇಕು? ಹಾಗಾದರೆ ಗ್ರಾಮೀಣ ಕ್ರೀಡೆಗಳು ಅಳಿಯಬೇಕೆ? ಮರಕೋತಿ, ಚಿಣ್ಣಿದಾಂಡುಗಳು ಆಟಗಳಲ್ಲೂ ಕೈಕಾಲುಗಳನ್ನು ಗಾಯಮಾಡಿಕೊಳ್ಳುವ ಸಂದರ್ಭವಿರುತ್ತವೆ. ಹಾಗಾದರೆ ಅದನ್ನೂ ಅಪಾಯಕಾರಿ ಎಂದೋ ಇದರಿಂದ ಮರ, ಅಲ್ಲಿನ ಪಕ್ಷಿ ಕೀಟಗಳಿಗೆ ಅಪಾಯಕಾರಿ ಎಂದು ಅವನ್ನೂ ನಿಷೇಧಿಸಿಬಿಡಬೇಕೆ? ಪರಂಪರೆಯೊಡನೆ ಬೆಸೆದುಕೊಂಡ ಎಲ್ಲಾ ಆಚರಣೆಗಳನ್ನು ರದ್ದುಮಾಡಲೇ ಬೇಕು ಎನ್ನುವ ಬಲವಂತದ ಹಿಂದೆ ಯಾವುದೋ ಒಂದು ಕ್ಷುದ್ರಶಕ್ತಿಗಳ ಹುನ್ನಾರ ಅಡಗಿದೆ ಎಂದು ಅನಿಸುವುದಿಲ್ಲವೇ? ಅಷ್ಟಕ್ಕೂ ಕೋಣಗಳಿಗೆ ಎರಡು ಭಾರಿಸುವುದಕ್ಕೂ ಕೋಣಗಳನ್ನು ಅಮಾನುಷವಾಗಿ ಕೊಂದು ತಿನ್ನುವುದಕ್ಕೂ ವ್ಯತ್ಯಾಸವಿಲ್ಲವೇ? ಹಾಗಾದರೆ ಕಸಾಯಿಖಾನೆಗಳೇಕೆ ಇನ್ನೂ ನಿಷೇಧಗೊಂಡಿಲ್ಲ? ಇಂದು ಕರಾವಳಿಯ ಜನರು ಕೇಳುತ್ತಿರುವುದೂ ಇದೇ ಪ್ರಶ್ನೆ. ಗುಣಪಾಲ ಕಡಂಬರಂತೂ ಭತ್ತದ ಕೃಷಿ ಯಾವಾಗಿಂದ ಆರಂಭವಾಯಿತೋ ಅಲ್ಲಿಂದಲೇ ಕಂಬಳ ಆರಂಭವಾಯಿತು ಎನ್ನುತ್ತಾರೆ. ಅಂಥ ಮೂಲಕ್ಕೇ ಕೊಳ್ಳಿಇಡುವ ಜನರ ಅಸಲಿ ಉದ್ದೇಶವೇನು?

ಕಳೆದೆರಡು ವರ್ಷಗಳ ಹಿಂದೆ ಎಲ್ಲಿಂದಲೋ ಬಂದ ಒಬ್ಬ ಕಾವಿಧಾರಿಯೊಬ್ಬ ಕೊಡಗಿನಲ್ಲಿ ಪ್ರಾಣಿಬಲಿಯಾಗುತ್ತಿದೆ, ದೇವಸ್ಥಾನಗಳಲ್ಲಿ ನಡೆಯುತ್ತಿರುವ ಪ್ರಾಣಿಬಲಿಯನ್ನು ನಿಲ್ಲಿಸಬೇಕು ಎಂದು ಹೋರಾಟ ಮಾಡಲಾರಂಬಿಸಿದ. ಕೆಲವೇ ಕೆಲವು ಜನರನಿಟ್ಟುಕೊಂಡ ಆತ ಬಹುಜನರ ಭಾವನೆಗಳನ್ನು ಕಾನೂನಿನ ಮೂಲಕ ಅದುಮಿ ಹಾಕಿದ. ಪರಿಣಾಮ ಎಷ್ಟೋ ಶತಮಾನಗಳಿಂದ ನಡೆಯುತ್ತಿದ್ದ ಬುಡಕಟ್ಟು ಸಂಸ್ಕೃತಿಯೊಂದು ಆ ಸಣ್ಣ ಗುಂಪಿನ ಮುಂದೆ ಸೋತಿತು. ಇಂದಿಗೂ ಕೊಡಗಿನ ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ನಡೆಯುತ್ತಿಲ್ಲ. ಆದರೆ ಕೊಡಗಿನಲ್ಲಿ ಜನರೇನೂ ಜನ ಕೋಳಿ-ಕುರಿಗಳನ್ನು ತಿನ್ನುವುದು ಬಿಟ್ಟಿದ್ದಾರೆಯೇ ಎಂದರೆ ಇಲ್ಲ. ಕೊಡಗಿನಲ್ಲಿ ಮಿಲಿಟರಿ ಹೊಟೆಲುಗಳನ್ನು ನಿಲ್ಲಿಸಲಾಗಿದೆಯೇ ಎಂದರೂ ಇಲ್ಲ. ಅಷ್ಟೇ ಅಲ್ಲ. ಅಕ್ರಮ ಬೇಟೆಗಾರರನ್ನು ಅದೇ ಕಾನೂನು ಸದೆ ಬಡಿದಿದೆಯೇ ಎಂದರೆ ಅದೂ ಇಲ್ಲ. ಅಕ್ರಮ ಬೇಟೆ ಪ್ರಾಣಿ ದಯಾ ಗುಂಪಿನವರ ಸುಪರ್ದಿಗೆ ಇನ್ನೂ ಸೇರಿಲ್ಲ. ಆ ಯಶಸ್ಸಿನ ಮದ ಈಗ ಇತರ ಸಂಗತಿಗಳತ್ತ ತಿರುಗಿದೆ. ಬೆಂಗಳೂರಿನಲ್ಲಿ ಬೀದಿ ನಾಯಿಗಳು ಮಕ್ಕಳನ್ನು ಕೊಲ್ಲುತ್ತಿವೆ ಅವುಗಳನ್ನು ಕೊಲ್ಲಿ ಎಂದಾಗ ಬೀದಿನಾಯಿಗಳ ಪ್ರಾಣ ಮಕ್ಕಳ ಪ್ರಾಣಕ್ಕಿಂತ ಶ್ರೇಷ್ಠ ಎಂದು ಇದೇ ಪ್ರಾಣಿದಯಾ ಸಂಘ ಹೋರಾಟ ಮಾಡಿತ್ತು. ರಂಜಾನಿನ ರಕ್ತಸಿಕ್ತ ಬೀದಿಗಳನ್ನು ದಾಟಿಕೊಂಡೇ ತೆರಳಿದ ಪ್ರಾಣಿದಯಾ ಸಂಘದವರು ಯಾವುದೋ ದೇಶದ ಯಾವುದೋ ಪರ್ವತಗಳಲ್ಲಿ ಚಿಟ್ಟೆಗಳು ಸಾಯುತ್ತಿವೆ ಎಂದು ಕೊರಗಿ ಫಲಕ ಹಿಡಿದು ಪ್ರತಿಭಟನೆ ನಡೆಸಿದರು! ನಾವಿನ್ನೂ ಕಮ್ಯುನಿಸಂ ಎಂಬುದು ಸತ್ತುಹೋಗಿದೆ, ಆ ಸಿದ್ಧಾಂತ ಇಂದು ಕೆಲವು ರಾಜಕೀಯ ಪುಢಾರಿಗಳ ಅಧಿಕಾರಕ್ಕೇರುವ ಅಸ್ತ್ರವಾಗಿ ಮಾತ್ರ ಉಳಿದಿದೆ ಎಂದುಕೊಂಡಿದ್ದೇವೆ. ಆದರೆ ಅವುಗಳ ಉಪ ಉತ್ಪನ್ನಗಳನ್ನು ಮರೆತುಬಿಟ್ಟಿದ್ದೇವೆ. ಏಕೆಂದರೆ ಕೊಡಗಿನಲ್ಲಿ ಕೋಳಿ ಕುಯ್ಯುವುದನ್ನು ನಿಲ್ಲಿಸಿದವರೂ, ಇದೀಗ ಕರಾವಳಿಯ ಕಂಬಳದ ಮೇಲೆ ಕಣ್ಣಿಟ್ಟವರೆಲ್ಲರೂ ಇಂಥ ಕಮ್ಯುನಿಸಮ್ಮಿನ ಉಪ ಉತ್ಪನ್ನಗಳೇ.

ಈ ಉಪಉತ್ಪನ್ನಗಳಿಗೆ ಎಂದಿನಂತೆ ಸಂಸ್ಕೃತಿಯನ್ನು ಮುಗಿಸಬೇಕು ಎಂಬ ಹಂಬಲ. ಹೀಗೆ ಮುಗಿಸಲು ಹೊರಡುವವರನ್ನು ಮುಗಿಸದ ಹೊರತು ಸಂಸ್ಕೃತಿಯ ರಕ್ಷಣೆ ಆಗುವುದು ಎಂಬ ನಂಬಿಕೆ ಸುತರಾಂ ಇಲ್ಲ.

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments