ಜಲ್ಲಿಕಟ್ಟು ಹೆಸರಿನಲ್ಲಿ ಹೊಸದೊಂದು ಸಂಸ್ಕೃತಿ ಸಾಧ್ಯವಿಲ್ಲ ಅಂತೀರಾ?
– ನರೇಂದ್ರ ಎಸ್ ಗಂಗೊಳ್ಳಿ
ನಾಡು ನುಡಿ ಸಂಸ್ಕೃತಿ ಸಂಪ್ರದಾಯದ ಅಭಿಮಾನದ ವಿಚಾರಕ್ಕೆ ಬಂದಾಗ ತಮಿಳುನಾಡಿನ ಜನರು ಯಾವತ್ತಿಗೂ ಒಂದು ಹೆಜ್ಜೆ ಮುಂದೆ ನಿಲ್ಲುತ್ತಾರೆ. ಇದು ಹೊಗಳಿಕೆ ಅಂತೇನೂ ಅಲ್ಲ. ನಮ್ಮ ಜನರ ಅಭಿಮಾನದ ನೆಲೆಯಲ್ಲಿ ನೋಡಿದಾಗ ಹಾಗನ್ನಿಸುವುದು ಸಹಜ. ಮೊನ್ನೆ ಮೊನ್ನೆ ಪ್ರಸ್ತುತ ಜಲ್ಲಿಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ನಡೆದ ಹೋರಾಟದ ಪರಿ ಇದೆಯಲ್ಲಾ ಅದು ನಿಜಕ್ಕೂ ಪ್ರತಿಯೊಬ್ಬರಿಗೂ ಪ್ರೇರಣೆಯನ್ನು ನೀಡುವಂತಾದ್ದು. ಅವರಿಗೊಂದು ಮೆಚ್ಚುಗೆಯಿರಲಿ. ಆದರೆ ಈ ಜಲ್ಲಿಕಟ್ಟು ವಿಚಾರವನ್ನು ತೀರಾ ಭ್ರಮೆಗಳಿಗೆ ಕಟ್ಟುಬೀಳದೆ ವಾಸ್ತವದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ ತೀರ್ಮಾನಕ್ಕೆ ಬರುವ ಅವಶ್ಯಕತೆ ಇಲ್ಲ ಎನ್ನುತ್ತೀರಾ?
ನಾವು ಯೋಚಿಸಬೇಕಾಗಿರುವುದು ಇಲ್ಲಿಯೇ? ಆನೋ ಭಧ್ರಾಃ ಕೃತವೋ ಯಂತು ವಿಶ್ವತಃ ಎನ್ನುತ್ತದೆ ನಮ್ಮ ಸುಭಾಷಿತ. ಅಂದರೆ ಒಳ್ಳೆಯ ವಿಚಾರಗಳು ಪ್ರಪಂಚದ ಯಾವ ಮೂಲೆಯಿಂದ ಬಂದರೂ ಸ್ವೀಕರಿಸು ಎಂದು. ಪೆಟಾ ಸಂಸ್ಥೆಯ ಹೋರಾಟಗಳು ಬಹಳಷ್ಟು ಸೀಮಿತ ಪ್ರದೇಶ ಮತ್ತು ಸೀಮಿತ ಆಚಾರ ವಿಚಾರಗಳನ್ನು ಒಳಪಟ್ಟು ನಡೆಯುತ್ತಿರುವುದು ಖಂಡಿತ ಅಲ್ಲಗಳೆಯಲಾಗದ ವಿಚಾರ. ಅವರಲ್ಲೂ ರಾಜಕೀಯ ಇಲ್ಲವೆನ್ನಲಾಗದು. ಗಲ್ಫ್ ರಾಷ್ಟ್ರಗಳಲ್ಲಿ ನಡೆಯುವ ಒಂಟೆ ಓಟದ ಬಗೆಗಾಗಲಿ, ಪ್ರಪಂಚದಾದ್ಯಂತ ನಡೆಯುತ್ತಿರುವ ದನ ಕುರಿ ಕೋಳಿ ಸೇರಿದಂತೆ ಅಸಂಖ್ಯಾತ ಪ್ರಾಣಿಗಳನ್ನು ಕಸಾಯಿಖಾನೆಗೆ ಸಾಗಿಸುವಾಗ ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿರುವ ವಿಚಾರದಲ್ಲಾಗಲಿ ಅಥವಾ ಒಂದು ಧರ್ಮದ ಜನ ಬಲಿದಾನದ ನೆಪದಲ್ಲಿ ಪ್ರಾಣಿಯ ಕೊರಳನ್ನು ಚೂರಿಯಿಂದ ಸ್ವಲ್ಪವೇ ಕತ್ತರಿಸಿ ಗಂಟೆ ಗಟ್ಟಲೆ ಕಾಲ ಅವುಗಳು ರಕ್ತ ಬಸಿದು ಅಸಾಯಕತೆಯಿಂದ ನಿತ್ರಾಣವಾಗಿ ಒದ್ದಾಡಿಕೊಂಡು ಸಾಯುವ ವಿಚಾರದ ಬಗೆಗಾಗಲಿ ಪೆಟಾ ಸೇರಿದಂತೆ ಬಹುತೇಕ ಎಲ್ಲರದ್ದೂ ಮೌನ. ಪೆಟಾದ ವಿರೋಧ ಒಂದು ಧರ್ಮದ ಆಚರಣೆಗಳಿಗಷ್ಟೇ ಸೀಮಿತವಾದರೆ ಅದರ ಮಾನವೀಯ ತತ್ವಗಳನ್ನು ನಂಬಲಾದೀತೆ? ಅಷ್ಟಕ್ಕೂ ಎಲ್ಲವನ್ನೂ ಪೆಟಾವೇ ಮಾಡಬೇಕೆಂದು ನಿರೀಕ್ಷಿಸುವುದು ಸರಿ ಅನ್ನಿಸುತ್ತಾ?
ನಿಮಗೆ ಗೊತ್ತಿರಲಿ. ಪೆಟಾದ ಕಾರ್ಯ ವೈಖರಿ ಮತ್ತು ಪ್ರಾಣಿ ಪ್ರೇಮದ ಬಗೆಗೆ ಬಹಳಷ್ಟು ಸಂದೇಹಗಳಿವೆ. ಅಧಿಕೃತ ಮಾಹಿತಿಯ ಪ್ರಕಾರ ಪೆಟಾ 1998 ರಿಂದ ಈಚೆಗೆ ತಾನು ಸ್ವೀಕರಿಸಿದ ಪ್ರಾಣಿಗಳಲ್ಲಿ ಬರೋಬ್ಬರಿ ಶೇಕಡ 86ಕ್ಕೂ ಅಧಿಕ (ಸುಮಾರು 35000) ಪ್ರಾಣಿಗಳನ್ನು (ನಾಯಿ ಬೆಕ್ಕುಗಳೇ ಹೆಚ್ಚು) ಯುಥನೇಶಿಯ ನೀಡಿ ಸಾಯಿಸಿದೆ. ಅದೊಂದು ರಾಸಾಯನಿಕ ಚುಚ್ಚುಮದ್ದು ಜೀವಿಗಳನ್ನು ಕ್ಷಣ ಮಾತ್ರದಲ್ಲಿ ಪರಲೋಕಕ್ಕೆ ಕಳಿಸುವಂತಾದ್ದು. ಯುಥನೇಶಿಯದ ಸಾಹಿತ್ಯಿಕ ಅರ್ಥ ಒಳ್ಳೆಯ ಸಾವು ಎಂದು. ಪ್ರಾಣಿ ಪ್ರೇಮಿ ಪೆಟಾ ಹೀಗೂ ಮಾಡುತ್ತಾ ಎಂದು ಅಚ್ಚರಿ ಆದರೂ ಸತ್ಯ. ಹಾಗೆಂದು ಪೆಟಾ ಮಾಡಿದ ಒಳ್ಳೆಯ ಕೆಲಸಗಳನ್ನು ಅಲ್ಲಗಳೆಯಲಾಗದು. ಇರಲಿ ಬಿಡಿ. ವಿಚಾರಕ್ಕೆ ಬರೋಣ.
ಜಲ್ಲಿಕಟ್ಟುವಿಗೆ ಮಹತ್ವ ಇದೆ. ಅದು ಒಂದು ಆಚರಣೆಯ ಪ್ರತೀಕ ಎಲ್ಲವೂ ಸರಿ. ಆದರೆ ಆಚರಣೆ ಸಂಪ್ರದಾಯದ ಹೆಸರಿನಲ್ಲಿ ಮೂಕ ಜೀವಿಗಳನ್ನು ಅನಾವಶ್ಯಕವಾಗಿ ರೊಚ್ಚಿಗೆಬ್ಬಿಸಿ ಅವುಗಳನ್ನು ಬೆದರಿಸಿ ಗೋಳುಹೊಯ್ದುಕೊಂಡು ಅದನ್ನು ಪಳಗಿಸಿ ವೀರ ಪುರುಷನೆನಿಸಿಕೊಳ್ಳುವುದು ಒಂದು ಆಟವೆ ? ಇಲ್ಲಿ ಗೂಳಿಗಳಿಗೆ ನೋವಾಗಬಹುದು. ಆದರೆ ಮನುಷ್ಯರು ಸತ್ತಿದ್ದಾರೆಯೇ ಹೊರತು ಗೂಳಿಗಳಲ್ಲ ಎನ್ನುತ್ತಾರೆ ಒಂದಷ್ಟು ಮಂದಿ. ಹಾಗಾದರೆ, ಮನುಷ್ಯ ಜೀವಕ್ಕೆ ಬೆಲೆ ಇಲ್ಲವೆ? (ನಿಮಗೆ ಗೊತ್ತಿರಲಿ 2008 ರಲ್ಲಿ ಹೀಗೆ ಪ್ರಾಣ ಕಳೆದುಕೊಂಡ ವ್ಯಕ್ತಿಯ ತಂದೆ ಮನವಿ ಮಾಡಿದ್ದಕ್ಕೆ ಸುಪ್ರೀಂ ಕೋರ್ಟು ಅವತ್ತೇ ಅದಕ್ಕೆ ನಿಷೇಧ ಹೇರಿತ್ತು) ಅಷ್ಟಕ್ಕೂ ಮನೋರಂಜನೆಯ ಹೆಸರಿನಲ್ಲಿ ಜೀವವನ್ನು ಪಣಕ್ಕಿಡುವ ಔಚಿತ್ಯವಾದರೂ ಏನಿದೆ? ಅದೇ ಸಂಸ್ಕೃತಿಯ ಹೆಸರಿನಲ್ಲಿ ನಾವು ದೊಡ್ಡದೊಂದು ಉತ್ಸವ ಮಾಡಿ ಅಷ್ಟೂ ಗೂಳಿಗಳನ್ನು ದನಗಳನ್ನು ಗೌರವಿಸುವ ಕೆಲಸವನ್ನೇಕೆ ಮಾಡಬಾರದು ? ಜಲ್ಲಿಕಟ್ಟು ಕೃಷಿಕರ ಕ್ರೀಡೆ ಎನ್ನುವಂತೆ ಬಿಂಬಿಸಲಾಗುತ್ತದೆ. ನಿಜವಿರಬಹುದು. ಆದರೆ ಈ ಕ್ರೀಡೆಯಿಂದ ಅದೆಷ್ಟು ಬಡ ಕೃಷಿಕರು ಉದ್ಧಾರವಾದರು ಎನ್ನುವುದನ್ನು ಕೂಡ ಯೋಚಿಸಬೇಕಲ್ಲವೆ? ಸಂಸ್ಕೃತಿ ಎಂದರೆ ನಾಗರಿಕತೆ ಎನ್ನುವ ಅರ್ಥವೂ ಇದೆ. ಬದಲಾದ ನಾಗರಿಕತೆಗೆ ತಕ್ಕ ಹಾಗೆ ನಮ್ಮ ಸಂಪ್ರದಾಯಗಳಲ್ಲಿ, ಆಚರಣೆಗಳಲ್ಲಿ ಒಂದಷ್ಟು ಬದಲಾವಣೆಗಳನ್ನು ಧನಾತ್ಮಕವಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲವೆ? ಜಲ್ಲಿಕಟ್ಟು ಹೆಸರಿನಲ್ಲಿಯೇ ಹೊಸ ಅಚರಣೆಯ ಮೂಲಕ ನಮ್ಮ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಮತ್ತು ಆ ಮೂಲಕ ನಮ್ಮ ಸಂಸ್ಕೃತಿಯನ್ನು ಮತ್ತೊಂದು ವೈಭವದ ಮಜಲಿಗೆ ಕೊಂಡೊಯ್ಯುವುದು ಖಂಡಿತಾ ಸಾಧ್ಯವಿದೆ ಅಲ್ಲವೆ?
ಜಲ್ಲಿಕಟ್ಟು ಇಲ್ಲದಿದ್ದರೆ ಈ ತಳಿಯ ಗೂಳಿಗಳೆಲ್ಲಾ ಕಸಾಯಿ ಖಾನೆ ಸೇರುತ್ತವೆ ಎನ್ನುವುದು ಮತ್ತೊಂದು ವಾದ. ಈಗ ಸೇರುತ್ತಿರುವ ಗೂಳಿಗಳು ಕೂಡ ಪ್ರಾಣಿಗಳಲ್ಲವೆ ? ಯಾಕೆ ನಾವು ಬರಿಯ ಲಾಭದ ಉದ್ದೇಶಕ್ಕಾಗಿಯೇ ಗೂಳಿಗಳನ್ನು ಸಾಕ ಬೇಕೆ? ಲಕ್ಷಗಟ್ಟಲೆ ಹಣ ಕೊಟ್ಟು ಒಂದನ್ನು ಲಾಲನೆ ಪಾಲನೆ ಮಾಡುವ ಬದಲು ಹತ್ತು ಪ್ರಾಣಿಗಳನ್ನ ಹಾಗೆ ಮಾನವೀಯತೆಯ ನೆಲೆಯಲ್ಲಿ ಸಾಕಬಹುದಲ್ಲವೆ ? ಪ್ರಾಣಿಗಳ ಸೋಲು ಗೆಲುವಿನಲ್ಲಿ ನಮ್ಮ ಪ್ರತಿಷ್ಠೆಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡುವುದು ಅದೆಂತಹ ಸಾಧನೆ? ಇವತ್ತು ಬಹಳ ದೊಡ್ಡಮಟ್ಟದ ಸೆಲೆಬ್ರಿಟಿಗಳು, ರಾಜಕೀಯ ನಾಯಕರುಗಳು ಜಲ್ಲಿಕಟ್ಟಿನ ಪರವಾಗಿ ನಿಂತಿದ್ದಾರೆಂದರೆ ಅದು ಪಕ್ಕಾ ತಮ್ಮ ಅಭಿಮಾನಿಗಳನ್ನು ಮತ್ತು ವೋಟ್ ಬ್ಯಾಂಕ್‍ನ್ನು ಉಳಿಸಿಕೊಳ್ಳುವ ನಡೆಯೂ ಆಗಿದ್ದಿರಬಹುದು. ಯಾಕೆಂದರೆ ಜನಶಕ್ತಿಯ ಅರಿವು ಏನೆಂಬುದು ಅವರು ತಿಳಿಯದಷ್ಟು ದಡ್ಡರೇನಲ್ಲ. ಎಲ್ಲರೂ ಜಲ್ಲಿಕಟ್ಟು ಪರ ಇದ್ದಾರೆ ಎಂದ ಮಾತ್ರಕ್ಕೆ ಒಂದು ದೇಶದ ಕಾನೂನನ್ನೇ ಧಿಕ್ಕರಿಸಿ ನಡೆಯುವುದು ಸರಿ ಎನ್ನುತ್ತೀರಾ ? ಹಾಗಾದರೆ ಸುಪ್ರೀಂ ಹೇಳಿದ್ದಕ್ಕೆ ಕರ್ನಾಟಕ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲೇಬೇಕು ಎಂದು ವಾದಿಸಲು ಅವರಿಗೆ ಸಾಧ್ಯವಾದೀತಾ?
ದೇವದಾಸಿ ಪದ್ಧತಿ, ಬೆತ್ತಲೆ ಸೇವೆ ಇತ್ಯಾದಿಗಳೆಲ್ಲಾ ನಡೆಯುತ್ತಿದ್ದುದು ಇದೇ ತೆರನಾದ ಸಂಪ್ರದಾಯದ ಹೆಸರಿನಲ್ಲಿ ಎನ್ನುವುದನ್ನು ಮರೆಯಬಾರದು. ಯಾವುದೇ ಸಂಪ್ರದಾಯ ಎನ್ನುವುದು ಬೇರೆಯವರ ಶೋಷಣೆಯಲ್ಲಿ ಹಿಂಸೆಯಲ್ಲಿ ನಾವು ಖುಷಿ ಕಂಡುಕೊಳ್ಳುವಂತಾದ್ದಾಗಿರಬಾರದು. ಮನೋರಂಜನೆ ಎನ್ನುವುದು ಎಲ್ಲರ ಮನಸ್ಸಿಗೂ ಖುಷಿಕೊಡುವಂತಾದ್ದಾಗಿರಬೇಕು. ದೂರದೇಶದಲ್ಲೆಲ್ಲೋ ನಡೆಸುತ್ತಾರೆ ನಾವೂ ಮಾಡಿದರೆ ತಪ್ಪೇನು ? ಎನ್ನುವ ಮೊಂಡು ವಾದ ಬಿಡೋಣ. ಎಲ್ಲಕ್ಕಿಂತ ಹೆಚ್ಚಾಗಿ ಇಂತಹ ಸೂಕ್ಷ್ಮ ವಿಚಾರಗಳ ಬಗೆಗೆ ನಿರ್ಧಾರಗಳನ್ನು ಅಥವಾ ಬದಲಾವಣೆಗಳನ್ನು ತೆಗೆದುಕೊಳ್ಳುವಾಗ ಧಿಢೀರ್ ಪ್ರಕ್ರಿಯೆಯ ಬದಲು ಹಂತ ಹಂತವಾಗಿ ಜಾರಿಗೆ ತರುವಂತಹ ಜನರ ಮನಸ್ಸನ್ನು ಓಲೈಸುವಂತಹ ಕಾರ್ಯಗಳು ನಡೆಯಬೇಕು. ಆಗ ಮಾತ್ರ ಯಾವ ಹೆಚ್ಚಿನ ಗೊಂದಲ ಗಲಭೆಗಳು ಇಲ್ಲದೆ ವ್ಯವಸ್ಥೆ ಸುಗಮವಾಗಿ ಸಾಗಲು ಸಾಧ್ಯ. ಹಾಗಾಗಲಿ ಎಂದು ಆಶಿಸೋಣ.
ಕೊನೆ ಮಾತು : ಜೀವನದ ಅನಿವಾರ್ಯತೆಗಳೇ ಬೇರೆ. ಹಾಗಾಗಿ ಅದೂ ಸೇರಿದಂತೆ ಹಿಂಸೆ, ಮೋಜು ಎಲ್ಲವನ್ನೂ ಒಟ್ಟಾಗಿ ಪರಿಗಣಿಸಿ ಸೂಕ್ತವಾದೊಂದು ನಿರ್ಧಾರ ತಗೆದುಕೊಳ್ಳುವುದು ಅವರವರ ವಿವೇಚನೆಗೆ ಬಿಟ್ಟಿದ್ದು. ನಮ್ಮ ಮನಸ್ಸು ಮತ್ತು ಬದುಕನ್ನು ಬೇರೆಯವರು ಆಳಲು ಅವಕಾಶ ಕೊಡಬಾರದು.