ಇಂದು ಕಂಬಳ, ನಾಳೆ ಜೋಡೆತ್ತಿನ ಗಾಡಿ, ಸಂಕ್ರಾಂತಿ, ನಾಡಿದ್ದು ಇನ್ನೇನೋ…?
– ಶಿವಕುಮಾರ ಪಿ.ವಿ.
ಸಂಶೋಧನಾ ವಿದ್ಯಾರ್ಥಿ
ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ.
ಪ್ರಾಣಿಗಳಿಗೆ ಹಿಂಸೆ ನೀಡಿ ಮನರಂಜನೆ ಪಡೆಯಲಾಗುತ್ತಿದೆ ಎಂಬುದು ಕಂಬಳ, ಜಲ್ಲಿಕಟ್ಟುವಿನಂತ ಕ್ರೀಡೆಗಳನ್ನು ನಿಲ್ಲಿಸಲು ಪ್ರಾಣಿದಯಾ ಸಂಘಗಳು ನೀಡುತ್ತಿರುವ ಕಾರಣ. ನ್ಯಾಯಾಲಯವೂ ಕೂಡ ‘ಪ್ರಾಣಿ ಹಿಂಸೆ’ಯ ಮಾನದಂಡವನ್ನಾದರಿಸಿ ಈ ಕ್ರೀಡೆಗಳಿಗೆ ನಿಷೇಧಾಜ್ಞೆಯನ್ನೂ ಹೇರುತ್ತಿದೆ. ಇದನ್ನಿಟ್ಟುಕೊಂಡೇ ನೋಡಿದರೆ, ಕೋಳಿ-ಕುರಿ, ದನಗಳನ್ನು ಕಡಿದು ತಿನ್ನುವುದು ಅವುಗಳ ಮಾರಣಹೋಮವಾಗಿ ಕಾಣಿಸಬೇಕಿತ್ತು. ಆದರೆ ಹಾಗಾಗುತ್ತಿಲ್ಲ. ಆಶ್ಚರ್ಯವೆಂದರೆ, ಪ್ರಾಣಿ ಹಿಂಸೆ, ಪ್ರಾಣಿ ಬಲಿಯನ್ನು ನಿಷೇಧಿಸಬೇಕೆನ್ನುವ ಸಕಲ ಪ್ರಾಣಿಗಳ ಜೀವಪರ ದಯಾಳುಗಳೆ ಬೀಫ್, ಮತ್ತಿತರ ಮಾಂಸ ಖಾದ್ಯಗಳನ್ನು, ಅವುಗಳ ರಕ್ತದ ಸೂಪನ್ನು ಚಪ್ಪರಿಸುತ್ತಿರುತ್ತಾರೆ. ಅದಕ್ಕಾಗಿ ಹೋರಾಟಗಳನ್ನೂ ಮಾಡುತ್ತಾರೆ. ಪ್ರಾಣಿಗಳನ್ನು ಬೇಕಾದರೆ ಕಡಿದು ತಿನ್ನಿ, ಆದರೆ ಅವುಗಳಿಗೆ ಹಿಂಸೆ ಕೊಡಬೇಡಿ ಎಂಬುದು ಇವರ ಆಕ್ಷೇಪಣೆ! ಹಾಗಾದರೆ, ಪ್ರಾಣಿ ಹಿಂಸೆಯ ಗುರಾಣಿಯ ಹಿಂದಿರುವ ತರ್ಕವೇನು, ಇವರ ನಿಜವಾದ ಕಾಳಜಿ ಪ್ರಾಣಿ ಹಿಂಸೆ ಮಾಡಬಾರದೆನ್ನುವುದೇ?
ಇವರ ಆಕ್ಷೇಪಣೆಯೇ ವಿಚಿತ್ರವೂ, ಪ್ರಶ್ನಾರ್ಹವೂ ಆಗಿದೆ. ಏಕೆಂದರೆ, ಈ ಕ್ರೀಡೆಗಳಲ್ಲಿ ಪ್ರಾಣಿ ಹಿಂಸೆಯಾಗುತ್ತದೆ ಎನ್ನುವವರು, ಅವುಗಳನ್ನು ಕೊಲ್ಲುವಾಗ ಹಿಂಸೆಯಾಗುವುದಿಲ್ಲ ಎಂದು ತೊರಿಸಬೇಕಾಗುತ್ತದೆ. ಆದರೆ, ಅಂತಹ ಸಾಧ್ಯತೆಗಳಂತೂ ಇಲ್ಲ. ಒಂದೊಮ್ಮೆ, ರೆಪ್ಪೆ ಬಡಿಯುಷ್ಟರಲ್ಲಿ ಮುಗಿದುಹೋಗುವ ಈ ಕ್ರೀಡೆಗಳಲ್ಲಿ ಕೊಡುವ ಕೆಲವು ಏಟುಗಳೇ ಪ್ರಾಣಿ ಹಿಂಸೆಯೆಂದಾದರೇ, ನಗರೀಕರಣದಿಂದಾದ ಮೊಬೈಲ್ ಟವರ್, ರೆಡಿಯೋ ತರಂಗಗಳು, ಅರಣ್ಯಗಳನ್ನು ಸೀಳಿರುವ ಬೃಹತ್ ರೈಲು, ರಸ್ತೆ, ವಾಹನಗಳು, ಕೈಗಾರಿಕೆಗಳು, ಪ್ರಾಣಿ ಸಂಗ್ರಹಾಲಯ, ಕುದುರೆ ರೇಸ್, ಸೈನ್ಯದಲ್ಲಿ ಶ್ವಾನಗಳ ಬಳಕೆ, ಪ್ರದರ್ಶನ, ಪ್ರಾಣಿಯಾಧಾರಿತ ಸಾರಿಗೆ ಇಂತದೇ ಇನ್ನೂ ಲೆಕ್ಕವಿಲ್ಲದಷ್ಟು ನಿಷೇಧದ ಕಂತೆಗಳನ್ನೇ ಸೃಷ್ಟಿಸಬೇಕಾದೀತು. ಈ ಕಾಲಕ್ಕಂತೂ ಇದು ಅಸಾಧ್ಯವಾದ ಕೆಲಸ. ಈ ಅಸಾಧ್ಯತೆಯೇ ಪ್ರಾಣಿ ಹಿಂಸೆಯ ಮಾನದಂಡದ ಅರ್ಥಹೀನತೆಯನ್ನು ತೋರಿಸುತ್ತದೆ. ಆದರೆ, ಇವುಗಳನ್ನೆಲ್ಲಾ ಜೀವಪರ ಧ್ವನಿಗಳು ವಿರೋಧಿಸುವುದಿಲ್ಲ. ಅಂದರೆ, ಈ ಕ್ರೀಡೆಗಳಲ್ಲಿ ನಡೆಯುವ ಪ್ರಾಣಿ ಹಿಂಸೆಯು ಮಾತ್ರ ಇವರ ಕಾಳಜಿ!
ಅದಕ್ಕೂ ಮುಖ್ಯವಾಗಿ ‘ಪ್ರಾಣಿ ಹಿಂಸೆ’ಯ ವ್ಯಾಖ್ಯಾನವೇ ನಮಗೆ ಅರ್ಥವಾಗುವುದಿಲ್ಲ, ಏಕೆಂದರೆ, ಎತ್ತಿಗೆ ಹೊಡೆದರೆ ನೋವಾಗುತ್ತದೆಯೆಂದು ಕೂತರೆ, ಯಾವೊಬ್ಬ ರೈತನು ಬಿತ್ತಿ ಬೆಳೆಯಲು ಸಾಧ್ಯವೇ ಇಲ್ಲ. ಹಾಗಂತ ರೈತರಾಗಲೀ ಅಥವಾ ಅವುಗಳನ್ನು ಕ್ರೀಡೆಗಳಲ್ಲಿ ತರುವವರಾಗಲೀ ಪ್ರಾಣಿಗಳಿಗೆ ಹೊಡೆದರೆ ನೋವಾಗಲಾರದೆನ್ನುವಷ್ಟು ಕಟುಕರಾಗಿರುವುದಿಲ್ಲ. ಏಕೆಂದರೆ, ಅವರು ಅವುಗಳನ್ನು ವರ್ಷಗಟ್ಟಲೇ ಶ್ರಮವಹಿಸಿ ಮುದ್ದಿನಿಂದ ಸಾಕಿರುತ್ತಾರೆ. ಈ ಕ್ರೀಡೆಗಳಿಗಾಗಿ ಬಳಸುವ ಕೋಣ, ಹೋರಿಗಳಂತೂ ರಾಜಾತಿತ್ಯವನ್ನೇ ಪಡೆಯುತ್ತಿರುತ್ತವೆ. ಹಾಗಾಗಿ ಹೊಡೆದ ಮೇಲೆ ಮರುಗುವುದು, ಅವುಗಳ ನೋವು ನಲಿವುಗಳನ್ನೂ ಹಂಚಿಕೊಳ್ಳುವುದು, ಅವುಗಳನ್ನೇ ಅವಲಂಬಿಸಿರುವ ಜನರು ಅವುಗಳನ್ನು ದೈವದಂತೆ ಪೂಜಿಸುವುದು ಸಹ ಅಷ್ಟೇ ಸಹಜವಾಗಿರುತ್ತದೆ.
ಕಂಬಳದ ಕುರಿತಾಗಿ ಸಾವಿರಾರು ವರ್ಷಗಳ ಹಿಂದಿನ ಶಿಲಾಶಸನಗಳ ಉಲ್ಲೇಖಗಳು, ಪಾಡ್ದನಗಳು, ಜನಪದ ಕಥೆಗಳೂ ಇವೆ. ಅಲ್ಲದೇ, ದೈವದ ಹೆಸರಿನಲ್ಲಿ ನಡೆಯುವ ತುಳುನಾಡಿನ ಜನರ ಸಾಂಸ್ಕೃತಿಕ ಶ್ರೀಮಂತಿಕೆಯೊಂದಿಗೆ ಕಂಬಳವು ಬೆಸೆದುಕೊಂಡಿದೆ. ಹಾಗಾಗಿ ಪ್ರಾಣಿ ಹಿಂಸೆಯ ವ್ಯಾಖ್ಯಾನವು ಪ್ರಾಣಿ ಮೂಲದ ಕ್ರೀಡೆಗಳಲ್ಲಿ ಅರ್ಥಹೀನವೆನಿಸುತ್ತದೆ. ಆದರೆ, ಕಂಬಳ ಅಥವಾ ದನ ಬೆದರಿಸುವ ಹಬ್ಬಗಳಲ್ಲಿ ಪ್ರಾಣಿ ಹಿಂಸೆಯಾಗುತ್ತದೆ ಎನ್ನುವವರು ಅದೇ ಪ್ರಾಣಿಗಳನ್ನು ಪೂಜಿಸುವ ವಿದ್ಯಮಾನದ ಎದುರು ನಿರುತ್ತರರಾಗುತ್ತಾರೆ. ಹಾಗಾದರೆ, ಪ್ರಾಣಿ ಹಿಂಸೆಯ ವ್ಯಾಖ್ಯಾನ ಎಲ್ಲಿಂದ ಬೆಳೆದು ಬಂದಿತು? ಪ್ರಾಣಿಗಳನ್ನು ಕೊಂದು ತಿನ್ನುವುದಕ್ಕಿಂತ ಅವುಗಳಿಗೆ ಹೊಡೆಯುವುದು ಮಹಾ ಹಿಂಸೆಯಾಗಿದ್ದು ಹೇಗೆ? ಇದಕ್ಕೂ ಸೆಕ್ಯೂಲರ್ ಮೌಲ್ಯಗಳಿಗೂ ಏನಾದರು ಸಂಬಂಧವಿದೆಯೇ?
ಹೌದು, ಸೆಕ್ಯುಲರ್ ಚೌಕಟ್ಟು ಇಂತಹ ಚರ್ಚೆಗಳನ್ನು ದೇಶಾದ್ಯಂತ ಹಿಂಡಿ ಹಿಪ್ಪೆ ಮಾಡಿರುವುದು ನಿಜ. (ಉದಾಹರಣೆಗೆ ಗೋಹತ್ಯೆ ನೀಷೇಧ ವಿರೋಧಿ ಚರ್ಚೆ) ಅಸಲಿಗೆ, ‘ಪ್ರಾಣಿ ಹಿಂಸೆ’ಯ ಈ ವ್ಯಾಖ್ಯಾನ ಬೆಳೆದು ಬಂದಿದ್ದೇ ಪಾಶ್ಚಾತ್ಯ ಕ್ರಿಶ್ಚಿಯನ್ ರಿಲಿಜನ್ನಿನ ‘ಐತಿಹಾಸಿಕ’ ಕಥೆಯ ನೆರಳಿನಲ್ಲಿ; ಕ್ರಿಶ್ಚಿಯಾನಿಟಿಯಲ್ಲಿ ಮಾಂಸಾಹಾರಕ್ಕೆ ನಿಷೇಧವಿಲ್ಲ. ಆದರೆ ಪ್ರಾಣಿಬಲಿಗೆ ನಿಷೇಧವಿದೆ. ಏಕೆಂದರೆ, ಕ್ರಿಸ್ತನ ಬಲಿದಾನವಾದಾಗಲೇ ಮನುಕುಲದ ಪಾಪಕ್ಕೆ ಪ್ರಾಯಶ್ಚಿತ್ತವಾಯ್ತು. ಹಾಗಾಗಿ ಇತರ ಜೀವ-ಜಂತುಗಳ ಬಲಿ ನೀಡುವುದು ಕ್ರಿಸ್ತನ ಬಲಿದಾನವನ್ನೇ ಅಲ್ಲಗಳೆದಂತೆ. ಹಾಗಾಗಿ, ಪ್ರಾಣಿ ಬಲಿಯು ತಪ್ಪು, ಅದು ಸಿನ್ (‘ಪಾಪ’). ಇದನ್ನೇ ಕ್ರಿಯೆಯಲ್ಲಿಯೂ ಪಾಲಿಸುವುದು ಅಲ್ಲಿ ಸರಿಯಾದ ಕ್ರಮ. ರಿಲಿಜನ್ನಿನ ಈ ಕಥೆಯು ಸೆಕ್ಯುಲರ್ ಆದಾಗ, ಗಾಡ್ ಮತ್ತು ರಿಲಿಜನ್ ಮಾಯವಾಗಿ, ಆ ಜಾಗದಲ್ಲಿ ‘ಹಿಂಸೆ’ಯೆಂಬ ಪರಿಭಾಷೆ ಬಂದು ಕೂತಿದೆ. ಪಾಶ್ಚಾತ್ಯ ರಿಲಿಜನ್ನಿನ ಈ ಪ್ರೊಟೆಸ್ಟಾಂಟ್ ಧೋರಣೆಯೇ ಇಂದು ಸೆಕ್ಯುಲರ್ ಮೌಲ್ಯವಾಗಿ ಆಧುನಿಕ ಚಿಂತನೆಗಳಲ್ಲಿ ‘ಪ್ರಾಣಿ ಹಿಂಸೆ’ ತಪ್ಪೆನ್ನುವ ವ್ಯಾಖ್ಯಾನರೂಪ ಪಡೆದಿದೆ.
ಈ ಸೆಕ್ಯುಲರ್ ಐಡಿಯಾಲಜಿಯು ಪ್ರಾಣಿ ಸಂಬಂಧಿತ ಚಟುವಟಿಕೆಗಳನ್ನು ಹಿಂಸೆಯ ಪರಿಭಾಷೆಯಲ್ಲಿ ‘ಜೀವಪರ’, ‘ವೈಚಾರಿಕ’ವೆಂಬಂತೆ ನೋಡುತ್ತದೆ. ಹಾಗಾಗಿಯೇ, ಆಹಾರಕ್ಕಾಗಿ ಪ್ರಾಣಿಗಳನ್ನು ಕೊಂದರೆ ಅದು ಆಹಾರದ ಹಕ್ಕು, ಧಾರ್ಮಿಕ ಆಚರಣೆಗಾಗಿ ಕ್ರೀಡೆ ನಡೆದರೆ ಅದು ಮೂಢನಂಬಿಕೆಯ ಹಿಂಸೆಯಾಗುತ್ತದೆ. ಹಕ್ಕಿನ ಹಿಂಸೆಯು ಸಹ್ಯ, ಸ್ವಾಭಾವಿಕವಾದರೆ, ಮೂಢನಂಬಿಕೆಯ ಹಿಂಸೆಯು ಅಸಹ್ಯ ಮತ್ತು ಅಸ್ವಾಭಾವಿಕ ಎನ್ನುವ ದ್ವಂದ್ವಗಳನ್ನು ಹುಟ್ಟಿಸಿದೆ. ಮತ್ತು ನಮ್ಮದಲ್ಲದ ಪಾಶ್ಚಾತ್ಯ ರಿಲಿಜನ್ನಿನ ಜಗತ್ತನ್ನೇ ನಮ್ಮ ಸಂಸ್ಕೃತಿಯಲ್ಲೂ ವಿಸ್ತರಿಸುತ್ತಿರುತ್ತದೆ. ಹಾಗಾಗಿ, ಈ ಹಿಂಸೆಯ ಮಾನದಂಡವಿಟ್ಟುಕೊಂಡು ಇಲ್ಲಿನ ಪ್ರಾಣಿ ಸಂಬಂಧಿತ ಕ್ರೀಡೆಗಳನ್ನು ಅಮಾನುಷವೆಂಬಂತೆ ವಿರೋಧಿಸುವುದು ನಮ್ಮ ಸಂಸ್ಕೃತಿಗೆ ಪರಕೀಯವಾಗುತ್ತದೆ.
ವಿಪರ್ಯಾಸವೆಂದರೆ, ಕಂಬಳ, ಜಲ್ಲಿಕಟ್ಟಿನ ನಿಷೇಧವನ್ನು ವಿರೋಧಿಸುವವರೂ ಈ ಸೆಕ್ಯಲರ್ ವಿವರಣಾ ಚೌಕಟ್ಟಿನಿಂದ ಮುಕ್ತವಾಗಿಲ್ಲ. ಇವರೂ ಸಹ ‘ಪ್ರಾಣಿ ಹಿಂಸೆ’ ತಪ್ಪು ಎನ್ನುವ ಮಾನದಂಡವನ್ನು ಪ್ರಾಶ್ನಾತೀತವಾಗಿ ಒಪ್ಪಿಕೊಂಡಿದ್ದಾರೆ. ಏಕೆಂದರೆ, ಅವರು ಶತಾಯಗತಾಯ ಇವುಗಳಲ್ಲಿ ಪ್ರಾಣಿ ಹಿಂಸೆ ನಡೆಯುವುದಿಲ್ಲವೆಂದು ತೋರಿಸಲು ಹೆಣಗುತ್ತಿದ್ದಾರೆ. ಇಂತಹ ಒತ್ತಡವನ್ನು ಸೃಷ್ಟಿಸುತ್ತಿರುವುದು ಭಾರತೀಯ ಸಾಂಸ್ಕೃತಿಕ ವೈವಿಧ್ಯತೆಯನ್ನು, ಬಹುತ್ವವನ್ನು ಹಾಡಿ ಹೊಗಳುವ, ಅದಕ್ಕೆ ಧಕ್ಕೆಯಾಗಬಾರದೆಂದು ಆತಂಕದಲ್ಲೇ ಇರುವ ಸೆಕ್ಯುಲರ್ ಐಡಿಯಾಲಾಜಿ. ಅಸಲಿಗೆ, ಇಲ್ಲಿನ ಸಾಂಸ್ಕೃತಿಕ ವೈವಿಧ್ಯತೆಗೆ ಸಂಚಕಾರ ಬರುತ್ತಿರುವುದೇ ಇಲ್ಲಿಂದ ಎಂಬುದು ಹೇಳಬೇಕಾದ ಗುಟ್ಟೇನಲ್ಲ. ಈ ಸೆಕ್ಯುಲರ್ ವಿವರಣಾ ಚೌಕಟ್ಟನ್ನು ಗೊತ್ತಿದ್ದೋ, ಗೊತ್ತಿಲ್ಲದೆಯೋ ಒಪ್ಪಿಕೊಂಡಿರುವುದರಿಂದ ಕಂಬಳ, ಜಲ್ಲಿಕಟ್ಟಿನ ನಿಷೇಧವನ್ನು ವಿರೋಧಿಸುವವರಿಗಿರುವ ದಾರಿಗಳೆಂದರೆ; ಈ ಕ್ರೀಡೆಗಳಲ್ಲಿ ಪ್ರಾಣಿ ಹಿಂಸೆ ನಡೆಯುವುದಿಲ್ಲವೆಂದು ತೋರಿಸುವುದು, ಮತ್ತದು ತಮ್ಮ ಧಾರ್ಮಿಕ ಹಕ್ಕು ಎಂದು ಪ್ರತಿಪಾದಿಸುವುದು.
ಆದರೆ, ಇದು ದುಃಸ್ಸಾಹಸದ ಮಾತಾದೀತು. ಏಕೆಂದರೆ, ಪ್ರಾಣಿಗಳನ್ನು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಮಾಡಲು ಹಲವು ತಂತ್ರಗಳ ಜೊತೆಗೆ ಅಲ್ಪವಾದರೂ ಏಟು ಕೊಡುವುದು ಸಹಜ. ಅಷ್ಟಲ್ಲದೇ ಅವುಗಳನ್ನು ಸ್ಪರ್ಧೆಗಾಗಿ ಪಳಗಿಸುವವರೂ ಸಹ ಕ್ರೀಡೆ ಮುಗಿಯುವುದರೊಳಗಾಗಿ ಹಣ್ಣುಗಾಯಿ ನೀರುಗಾಯಿಯಾಗಿರುತ್ತಾರೆ. ಏಕೆಂದರೆ, ಇದು ಯಾವುದೇ ಕಂಪ್ಯೂಟರ್, ಮೊಬೈಲ್‍ಗಳಲ್ಲಿ ಆಡುವ ವರ್ಚುವಲ್ ಆಟವಲ್ಲ್ಲ. ಹಾಗಾಗಿ, ಈ ಅಲ್ಪ ‘ಹಿಂಸೆ’ (ಅದನ್ನು ಹಿಂಸೆ ಎನ್ನುವುದೇ ಆದರೆ) ಇಲ್ಲದೆ ಕ್ರೀಡೆ ನಡೆಸುವುದು ಹೋಗಲಿ, ಎತ್ತು, ಕೋಣಗಳನ್ನೇ ನಂಬಿರುವ ರೈತರನ್ನು, ಭಾರತದ ಕೃಷಿಯನ್ನೇ ಊಹಿಸಲು ಸಾಧ್ಯವಿಲ್ಲ. ಇನ್ನು ಇದನ್ನು ಧಾರ್ಮಿಕ ಹಕ್ಕನ್ನಾಗಿ ಪ್ರತಿಪಾದಿಸುವುದು ನಮ್ಮ ಆಚರಣೆಗಳಿಗೆ ರಿಲಿಜನ್ನಿನಲ್ಲಿರುವಂತೆ ವೈಜ್ಞಾನಿಕ ಕಾರಣಗಳನ್ನು ನೀಡಿ, ಅವುಗಳನ್ನು ಸಾಭೀತುಮಾಡುವ ಡಾಕ್ಟ್ರಿನ್‍ಗಳ ಹುಡುಕಾಟಕ್ಕೆ ಹಚ್ಚುತ್ತದೆ. (ಬಲಪಂಥದಲ್ಲಿ ಇದು ಸಾಮಾನ್ಯವಾಗಿದೆ) ಧಾರ್ಮಿಕ ಹಕ್ಕಿನ ರಕ್ಷಕರ ವಾದವೇ ಅಂತಿಮವಾಗಿ, ಅದು ಸುಳ್ಳು/ಮೂಢನಂಬಿಕೆಯಿಂದಾದ ಪ್ರಾಣಿ ಹಿಂಸೆಯೆಂಬ ಸಮರ್ಥನೆಯನ್ನು ಹುಟ್ಟಿಸಿಬಿಡುತ್ತದೆ. ಇದು ಸಾಂಪ್ರದಾಯಿಕ ಕ್ರೀಡೆಗಳನ್ನು ಸಮರ್ಥಿಸುವ ಬರದಲ್ಲಿ ಅವುಗಳ ಸಾಂಸ್ಕೃತಿಕ ಅನನ್ಯತೆಯನ್ನೇ ವಿರೂಪಗೊಳಿಸುತ್ತದೆ. ಹಾಗಾಗಿ ಇವೆರಡೂ ಕೂಡ ಸೆಕ್ಯೂಲರಿಸಂ ಹೆಣೆದಿರುವ ಬಲೆಯಲ್ಲಿ ಸಿಲುಕಿಸುತ್ತವೆಯಷ್ಟೇ.
ಇಂದು ಕಂಬಳ, ದನ ಬೆದರಿಸುವ ಹಬ್ಬ, ನಾಳೆ ಜೋಡೆತ್ತಿನ ಗಾಡಿ ಸ್ಪರ್ದೆ, ಸಂಕ್ರಾತಿ, ನಾಡಿದ್ದು ಮತ್ತೇನೋ..? ನಮಗುಳಿದ ಒಂದೇ ದಾರಿಯೆಂದರೆ, ಪ್ರಾಣಿಗಳಿಗೆ ಹೊಡೆಯುವ ಹಾಗೂ ಅವುಗಳನ್ನು ಪೂಜಿಸುವ ವಿದ್ಯಮಾನಗಳ ಕುರಿತು, ನಮ್ಮ ಸಾಂಪ್ರದಾಯಿಕ ಪ್ರಾಣಿ ಮೂಲದ ಅಥವಾ ಇನ್ನಾವುದೇ ಆಚರಣೆಗಳ ಕುರಿತು ಏಳುವ ಈ ‘ವೈಚಾರಿಕ’ ಪ್ರಶ್ನೆಗಳ ಮೂಲವನ್ನೇ ಭೇದಿಸುವುದು. ಅಂತಹ ಪ್ರಶ್ನೆಗಳೇ ನಮ್ಮ ಸಂಸ್ಕೃತಿಗೆ ಹೇಗೆ ಅಸಮರ್ಪಕ ಎಂದು ಬೌದ್ಧಿಕವಾಗಿ ತೋರಿಸಿಕೊಡುವುದು. ಇಲ್ಲವಾದರೆ, ಸಾವಿರಾರು ವರ್ಷಗಳಿಂದ ಜತನದಿಂದ ಉಳಿದುಕೊಂಡುಬಂದ ನಮ್ಮ ಸಾಂಸ್ಕೃತಿಕ ಅನನ್ಯತೆಯ ಕುರಿತು ನಾವೇ ಮೂಕರಾದರೆ ಅದು ವೇಗವಾಗಿ ನಾಶವಾಗುವುದರಲ್ಲಿ ಯಾವ ಸಂದೇಹಗಳೂ ಇಲ್ಲ!
ನೀವು ಹೇಳುತ್ತಿರುವುದು ಸರಿಯಾಗಿಯೇ ಇದೆ.ಹಿಂಸೆಯ ಪರಿಕಲ್ಪನೆಗೆ ಬರುವಿರಾದರೆ ತಾಯಿ ಮಗುವಿಗೆ ಜನ್ಮ ನೀಡುವುದು ಹಿಂಸೆ ಅಲ್ಲವೆ.ಇಂತವರು ಅದನ್ನು ನಿಲ್ಲಿಸಲು ಹಿಂಜರಿಯರು.