ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 1, 2017

ಚಿತ್ತೋರ್ ಘರ್ ಕೋಟೆ

‍ನಿಲುಮೆ ಮೂಲಕ

– ಮಯೂರಲಕ್ಷ್ಮೀ

12140744_1332900670100353_513369733292930039_nಭಾರತದ ಅತಿ ದೊಡ್ಡ ಕೋಟೆ ಮೇವಾಡದ ಚಿತ್ತೋರಿನ ಕೋಟೆ. ಬೇರಾಚ್ ನದಿ ಈ ರಾಜ್ಯದ ಜೀವನಾಡಿ ಎಂದೆನಿಸಿತ್ತು. ಇಲ್ಲಿ ಆಳುತಿದ್ದ ರಜಪೂತ ದೊರೆಗಳು ಸೂರ್ಯವಂಶದ ದೊರೆಗಳೆಂದೇ ಪ್ರಸಿದ್ಧರು. ರಾಜಸ್ಥಾನದ ಅಜಮೇರಿನಿಂದ ೨೩೩ ಕೊಲೋಮೀಟರ್ ದೂರದಲ್ಲಿರುವ ಚಿತ್ತೋರ್  ಘರ್ ಕೋಟೆಯ ಮೂಲತಃ ನಿರ್ಮಾತರು ಮೌರ್ಯರು ಎನ್ನುವ ಅಭಿಪ್ರಾಯವಿದೆ.  ಆರ್ಯರ ದೊರೆ ‘ಚಿತ್ರಾಂಗದ ಮೌರ್ಯ’ ನೆನಪಲ್ಲಿ ಚಿತ್ತೋರಿನ ಕೋಟೆಗೆ ಈ ಹೆಸರು ಬಂತು ಎಂದು ಇತಿಹಾಸದಲ್ಲಿದೆ. ಮಹಾಭಾರತದ ಸಮಯದಲ್ಲಿ ಭೀಮ ತನ್ನ ಬಲವಾದ ಹಸ್ತದಿಂದ ನೆಲವನ್ನು ಅಗೆದು ನೀರಿನ ಚಿಲುಮೆಯನ್ನು ನಿರ್ಮಿಸಿದ. ಅದೇ ಅಲ್ಲಿನ ಭೀಮಲತ ಕುಂಡವಾಗಿ ನೀರಿನ ಸರೋವರವಾಯಿತು ಅನ್ನುತ್ತದೆ ಅಲ್ಲಿನ ಪುರಾಣದ ಕಥೆ.


ಚಿತ್ತೋರಿನ ರಾಜ ರಜಪೂತ ಮನೆತನದ ವೀರ ರತನ್ ಸೇನನ ಪತ್ನಿಯಾದ ಪದ್ಮಿನಿ ಚಿತ್ತೋರಿನ16427788_1332899823433771_3623610615582877551_n ಪ್ರಜೆಗಳನ್ನು ತನ್ನ ಸ್ವಂತ ಮಕ್ಕಳಂತೆ ಸಲಹುತ್ತಾ , ತನ್ನ ದೇಶದ ಧರ್ಮದ ರಕ್ಷಣೆಗಾಗಿ ನಿಂತವಳು. ಅಲ್ಲಾವುದ್ದೀನನ ದುಷ್ಟ ಕೈಗಳಿಗೆ ತಾನೇ ಮುಂದೆ ನಿಂತು ದುರ್ಗೆಯಾಗಿ ಹೋರಾಡಿ ಸೋಲಿಸಿದಳು. ಆದರೆ ಅಲ್ಲಾವುದ್ದೀನನ ಮೋಸಕ್ಕೆ ರಾಜ ಬಲಿಯಾದಾಗ ತನ್ನ ಮೇಲೆ ಮೋಹಿತನಾಗಿದ್ದ ಕಾಮದಾಹಿ ಖಿಲ್ಜಿ, ಮೋಸದಿಂದ ಚಿತ್ತೋರಿನ ಮೇಲೆ ಅಕ್ರಮಣ ನಡೆಸಿದಾಗ ಅವನ ಕೈಗೆ ಸಿಲುಕದೆ ತಾನೇ ಜವಾಹರ್ ಪದ್ಧತಿಯಲ್ಲಿ ಉಳಿದ ವೀರ ಸ್ತ್ರೀಯರ ಜೊತೆ ಉರಿವ ಚಿತೆಯೇರಿ ಮೇವಾಡದ ಘನತೆಗೆ ಕಳಶವಿಟ್ಟಂತೆ ಬಲಿದಾನಿಯಾದಳು. ಇದಕ್ಕೆ ಪ್ರತೀಕಾರವಾಗಿ ಖಿಲ್ಜಿಯ ೩೦೦೦೦ ಹಿಂದೂಗಳ ಮರಣ ಹೋಮ ಮಾಡಿದ. ೧೩೦೩ರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಆಕ್ರಮಣಕ್ಕೆ ಸಿಲುಕಿದ ಮೇಲೆ ಚಿತ್ತೋರಿನ ವೈಭವ ಅಂತ್ಯ ಕಾಣತೊಡಗಿತು.  ನಂತರ ಕೋಟೆಯನ್ನು ತನ್ನ ಮಗ ಖಿಝೀರ್ ಖಾನ್ ಸುಪರ್ದಿಗೆ ನೀಡಿ ಕೋಟೆಯನ್ನು ಖಿಝಿರ್ಬಾದ್ ಎಂದು ಬದಲಾಯಿಸಿದ.

೧೫ನೆಯ ಶತಮಾನದ ನಂತರ ಮೊಘಲರು ಅಕ್ರಮಣಗೈದರು.
ಮುಂದೆ ರಜಪೂತ ದೊರೆ ಹಮ್ಮಿರ ಸಿಂಗ್ ಮೇವಾಡವನ್ನು ವಶಪಡಿಸಿಕೊಂಡ. ನಂತರ ಕೆಲ ವರ್ಷಗಳ ಕಾಲ ‘ಮೇವಾಡ’ ಮರಳಿ ತನ್ನ ರಾಜ ವೈಭವ ಪಡೆಯಿತು. ಹಾಗೆ ಮುಂದುವರೆದು ೧೪೩೩ರಲ್ಲಿ ರಾಣಾ ಕುಂಭ ಮೇವಾಡದ ದೊರೆಯಾದ. ನಂತರ ಅವನ ಮಗ ಉದಯ್ ಸಿಂಗ್, ಅನಂತರ ೧೫೨೭ರಲ್ಲಿ ರಾಜ ಸಂಗ್ರಾಮ ಸಿಂಗ್ ಮೇದಿನಿ ರಾಯ್ ಎನ್ನುವ ರಜಪೂತ, ಆಳ್ವಾರ ಮುಖ್ಯಸ್ಥನ ನೆರವಿನಿಂದ ಮೊಘಲ ದೊರೆ ಬಾಬರನನ್ನು ಎದುರಿಸಿ ಸೋತನು.

೧೫೩೫ರಲ್ಲಿ ಬಹದ್ದೂರ್ ಶಾಹ್ ಆಕ್ರಮಣ, ನಂತರ ಅಕ್ಬರ್ ೧೫೬೮ರಲ್ಲಿ ಆಕ್ರಮಣ ಮಾಡಿ ಇಡೀ ಕೋಟೆಯನ್ನು ನಾಶ ಮಾಡಿದ. ರಜಪೂತ ದೊರೆಗಳು ಅಪ್ರತಿಮ ಸಾಹಸಿಗಳು ಸೋಲನ್ನು ಕಂಡರೂ ಎದೆಗುಂದದೆ ಮತ್ತೆ ಮತ್ತೆ ವೀರ ಸಿಂಹಗಳಂತೆ ಹೊರಡುವ ಮನೋಭಾವವನ್ನುಳ್ಳವರು. ತಮ್ಮ ರಾಜ್ಯದ ರಾಜರ ರಕ್ಷಣೆಗೆ ಪ್ರಜೆಗಳು ಕೂಡ ಅಷ್ಟೇ ನಿಷ್ಠೆಯಿಂದ ನಿಲ್ಲುವವರು. ಮೂರೂ ಬಾರಿ ಆಕ್ರಮಣಕ್ಕೆ ತುತ್ತಾಗಿದ್ದರೂ ಚಿತ್ತೋರಿನ ಕೋಟೆ ಮತ್ತು ರಾಜ್ಯ ಮತ್ತೆ ಮತ್ತೆ ಹೋರಾಟಕ್ಕೆ ಸಿದ್ಧವಾಗಿ ನಿಲ್ಲುತ್ತಿತ್ತು. ಮುಂದೆ ರಾಜ ಉದಯ್ ಸಿಂಗ್ ಚಿತ್ತೋರಿನಿಂದ ಉದಯಪುರದವರೆಗೂ ಮೊಘಲರೊಂದಿಗೆ ಹೋರಾಡಿ ಚಿತ್ತೋರಿನ ಮೇವಾಡದ ರಕ್ಷಣೆಗೆ ನಿಂತ. ಆದರೂ ತಮ್ಮ ದೊರೆಗಳು ಸೋಲುತ್ತಿದ್ದರೆನ್ನುವ ವಿಷಯ ಅರಿವಾಗುತ್ತಿದ್ದಂತೆಯೇ ಚಿತ್ತೋರಿನ ರಾಜಮನೆತನದ ಮತ್ತು ಪ್ರಜೆಗಳ ಸಾವಿರಾರು ವೀರ ಮಹಿಳೆಯರು ಚಿತೆಯೇರಿ ಜವಹಾರದ ಮೊರೆ ಹೋದರು.

೧೬೧೬ರಲ್ಲಿ ರಾಜ ಅಮರ ಸಿಂಗ್ ರಾಜನಾಗಿದ್ದ ಸಮಯದಲ್ಲಿ ಮೇವಾಡ ಮತ್ತೆ ಬಲಿಷ್ಠವಾಯಿತು. ರಾಜನ ಶೌರ್ಯದಿಂದಾಗಿ ಮೊಘಲರ ‘ಜಹಾಂಗಿರ್’ ಪುನಃ ಮೇವಾಡಕ್ಕೆ ರಾಜ್ಯವನ್ನು ಹಿಂದಿರುಗಿಸಿದ. ರಜಪೂತರ ಸತತ ಹೋರಾಟದಿಂದ ಚಿತ್ತೋರಿನ ಕೋಟೆ ರಕ್ಷಣೆಯಾಗುತ್ತಿತ್ತಾದರೂ  ಮೂರೂ ಬಾರಿ ತೀವ್ರ ಆಕ್ರಮಣದಿಂದ ತನ್ನ ವೈಭವನ್ನು ಕಳೆದುಕೊಂಡು ಕ್ರಮೇಣ ಶಿಥಿಲವಾಗತೊಡಗಿತು. ಕಾಲಕ್ರಮೇಣದಲ್ಲಿ ಚಿತ್ತೋರಿನ ಕೋಟೆ ಬ್ರಿಟಿಷರ ಕೈ ವಶವಾಯಿತು……

ಕೋಟೆಯ ಮೂಲ ರೂಪದ ವೈಭವ:
ಮೂಲತಃ ಮೀನಿನ ಆಕಾರದಲ್ಲಿರುವ ಚಿತ್ತೋರಿನ ಕೋಟೆ ೧೩ ಕಿಲೋಮೀಟರ್ ಸುತ್ತಳತೆ ಮತ್ತು ೩ ಕಿಲೋಮೀಟರ್ ಅಗಲ ಹಾಗೆ ೭೦೦ ಎಕರೆ ವಿಸ್ತೀರ್ಣದಲ್ಲಿದೆ. ಹತ್ತಲು ಅತಿ ದುರ್ಗಮವಾದ ಎತ್ತರವಿದ್ದು ಗಂಭೀರಿ ನದಿಯ ಮೇಲಿನ ಹತ್ತು ಕಮಾನುಗಳನ್ನು ಹೊಂದಿವೆ. ಸುಣ್ಣದ ಸೇತುವೆಯನ್ನು ದಾಟಿ ನಂತರ ಸಿಗುವ ಎರಡು ಎತ್ತರದ ಟವರ್ ದಾಟಿ ಮುಂದೆ ಸಾಗಿದರೆ ಕೋಟೆಯ ಕೋಣೆಯನ್ನು ತಲುಪಬಹುದು. (ಪ್ರಸ್ತುತ ಈಗ ತಿಳಿಸಿದ ಕಟ್ಟಡದ ಅನೇಕ ಭಾಗಗಳು ಭಗ್ನವಾಗಿ ಅವಶೇಷಗಳಾಗಿ ಉಳಿದಿವೆ.)

ಮೇವಾಡದ ಅನೇಕ ದೊರೆಗಳು ಕೋಟೆಯನ್ನು ತಮ್ಮ ರಾಜ್ಯಭಾರದ ಸಮಯದಲ್ಲಿ ಅಭಿವೃದ್ಧಿಗೊಳಿಸಿದ್ದರು. ೫ನೆಯ ಶತಮಾನದಿಂದ ೧೨ನೆಯ ಶತಮಾನದವರೆಗೆ ವಿವಿಧ ಹಂತದಲ್ಲಿ ಕೋಟೆಯನ್ನು ಬಲಪಡಿಸಲಾಗಿತ್ತು. ರಾಜ ‘ಕುಂಭ’ ಏಳು ಎತ್ತರದ ಏರುವ ದ್ವಾರಗಳನ್ನು ಕಟ್ಟಿಸಿದ್ದನು. ಭವ್ಯ ಕೋಟೆಯೊಳಗೆ ೬೫ ವಿವಿಧ ಕಟ್ಟಡಗಳು, ನಾಲ್ಕು ಸಂಕೀರ್ಣ ಅರಮನೆಗಳು, ೧೯ ಪ್ರಮುಖ ದೇವಾಲಯಗಳು, ೪ ಸ್ಮಾರಕಗಳು ಮತ್ತು ೨೦ ನೀರಿನ ಸೆಲೆಗಳಿದ್ದವು..

ಪ್ರಮುಖ ದೇವಾಲಯಗಳು :
16406437_1332900976766989_7614796170979886018_nರಾಜ ಕುಂಭನಿಂದ ಅಭಿವೃದ್ಧಿ ಹೊಂದಿದ್ದ ಕುಂಭ ಶ್ಯಾಮ ದೇವಾಲಯ, ಮೀರಾಬಾಯಿ ದೇಗುಲ, ಶೃಂಗಾರ ಚೌರಿ ದೇವಾಲಯ ಮತ್ತು ಆದಿ ವರಾಹ ದೇವಾಲಯ. ಪ್ರಮುಖವಾಗಿ ವಿಜಯ ಸ್ತಂಭ. ಇದು ಮಹ್ಮದ್ ಶಾಹ್ ಖಿಲ್ಜಿಯಿಂದ ಮತ್ತೆ ವಶವಾದ ಚಿತ್ತೋರಿನ ರಾಜ್ಯದ ವಿಜಯದ ಸಂಕೇತ. ರಾಣಾ ಕುಂಭನಿಂದ ಸ್ಥಾಪಿತವಾದದ್ದು. ಇಂದಿಗೂ ಈ ಸ್ಥಂಭದ ದೀಪಾಲಂಕಾರ ಪ್ರತಿ ಸಂಜೆ ನಡೆಯುತ್ತದೆ.

ರಾಣಿ ಪದ್ಮಿನಿಯ ಶ್ವೇತ ಅರಮನೆ:
ಮೂರೂ ಅಂತಸ್ತಿನ ಅರಮನೆ ಖಿಲ್ಜಿಯಿಂದ ಮತ್ತು ನಂತರದ ಆಕ್ರಮಣಗಳಿಂದ ನಾಶವಾದ ನಂತರ ೧೯ನೆಯ ಶತಮಾನದಲ್ಲಿ ಮತ್ತೆ ನಿರ್ಮಿಸಲಾಯಿತು. ರಾಣಿ ಪದ್ಮಿನಿಯ ಅರಮನೆಯ ಸ್ವರೂಪದಿಂದ ಪ್ರೇರಿತವಾಗಿ ನಂತರ ಸರೋವರದಿಂದ ಬಳಿ ‘ಜಯ ಮಹಲಿನ’ ನಿರ್ಮಾಣವಾಯಿತು. ( ಇದೇ ಸರೋವರದ ಬಳಿ ರಾಣಿ ಪದ್ಮಿನಿಯ ಪ್ರತಿಬಿಂಬವನ್ನು ಖಿಲ್ಜಿ ಕಂಡನು ಎನ್ನುತ್ತಾರೆ ). ರಾಜಸ್ಥಾನದ ರಜಪೂತ ಜನರಿಗೆ ಇಂದಿಗೂ ರಾಣಿ ಪದ್ಮಿನಿ ಮತ್ತು ಚಿತ್ತೋರಿನ ಮೇವಾಡದ ರಾಣಿಯರು ಮತ್ತು ವೀರ ವನಿತೆಯರು ದುರ್ಗೆ, ಸರಸ್ವತಿಯಂತೆ ಪೂಜನೀಯರು. ರಾಣಿಯ ಬಲಿದಾನ ಮತ್ತು ಚಿತೆಯೇರಿ ಮಡಿದ ವೀರ ವನಿತೆಯರ ಸ್ಮರಣೆಯಲ್ಲಿ ಚಿತ್ತೋರ್ಘರದಲ್ಲಿ ಪ್ರತಿ ವರ್ಷ “ಜೌಹರ್ ಮೇಳ ” ನಡೆಯುತ್ತದೆ.

(ಆಧಾರ : ಇಂಟರ್ನೆಟ್ flickr )

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments