ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 1, 2017

8

“ಜಗತ್ತಿನಲ್ಲಿ ಯಾವ ಬಲಪಂಥವೂ ಇಲ್ಲ. ನೀವದಕ್ಕೆ ಸೇರಬೇಕೆಂಬ ಬಲವಂತವೂ ಇಲ್ಲ”

‍ನಿಲುಮೆ ಮೂಲಕ

– ರಾಘವೇಂದ್ರ ಸುಬ್ರಹ್ಮಣ್ಯ

383448-31622-22ಇಡೀ ಜಗತ್ತಿನಲ್ಲಿ ಎಲ್ಲರೂ ‘ಎಡಪಂಥೀಯರು’, ‘ಬಲಪಂಥೀಯರು’ ಎಂಬ ಪದಗಳನ್ನು ಪುಂಖಾನುಪುಂಖವಾಗಿ ಹರಿಬಿಡುತ್ತಾರೆ. ಆದರೆ ಯಾರಿಗೂ ಅವುಗಳ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲ. ಯಾಕೆ ಯಾರನ್ನು ಎಡಪಂಥೀಯರು ಅಂತಾ ಕರೀತಾ ಇದ್ದೀವಿ ಅಂತಲೂ ಗೊತ್ತಿಲ್ಲದೇ ಆ ಪದವನ್ನ ಉಪಯೋಗಿಸ್ತಾ ಇದ್ದಾರೆ. ಎಡಪಂಥೀಯರು ಎಂಬ ಪದ, ಎಡಪಂಥೀಯ ರಾಜಕಾರಣ ಎಂಬ ಪದದಿಂದ ಎರವಲು ಪಡೆದದ್ದು. ಈ ಎಡಪಂಥೀಯ ರಾಜಕಾರಣವೆಂದರೇನು?

ಐತಿಹಾಸಿಕವಾಗಿ ನೋಡಿದಾಗ ನಮಗೆ ಈ ಪದಗಳ ಮೂಲ ಪ್ರೆಂಚ್ ಕ್ರಾಂತಿಯ ಆಸುಪಾಸಿನಲ್ಲಿ ಕಂಡುಬರುತ್ತದೆ. ರಾಜಕಾರಣದಲ್ಲೇನು ಎಡ ಬಲ ಎಂದು ಕೇಳುತ್ತೀರಾ!? ಉತ್ತರ ಇಲ್ಲಿದೆ ನೋಡಿ. ಫ್ರೆಂಚ್ ಕ್ರಾಂತಿಯ ಸಮಯದಲ್ಲಿ, (ಅಂದರೆ 1789ರಿಂದ 1799ರವರೆಗೆ), ಅಲ್ಲಿನ ‘ಎಸ್ಟೇಟ್ ಜನರಲ್’ನ ಆಸನ ವ್ಯವಸ್ಥೆಯಲ್ಲಿ (Estate General, ಫ್ರಾನ್ಸಿನ ಅಂದಿನ ಕಾಲದ ವಿಧಾನಸಭೆಯಾಗಿತ್ತು), ಸಭಾಧ್ಯಕ್ಷರ ಎಡಬದಿಯಲ್ಲಿ ಕುಳಿತವರು ಬಹುಮಟ್ಟಿಗೆ ‘ರಾಜಪ್ರಭುತ್ವವನ್ನು (Monarchy)’ಯನ್ನು ವಿರೋಧಿಸಿ, ‘ಪ್ರಜಾಪ್ರಭುತ್ವವನ್ನು (Republic)’ ಹಾಗೂ ‘ಧರ್ಮನಿರಪೇಕ್ಷತೆ (Secularization)’ ಬೆಂಬಲಿಸುತ್ತಿದ್ದರು. ಹಾಗೂ ಬಲಗಡೆಗೆ ಕುಳಿತವರು ಹಳೆಯ ಆಡಳಿತಾತ್ಮಕ ವ್ಯವಸ್ಥೆಯನ್ನು, ಅಂದರೆ ರಾಜಪ್ರಭುತ್ವವನ್ನು, ಬೆಂಬಲಿಸುತ್ತಿದ್ದರು. ‘ಎಡಪಂಥೀಯ’ ಎಂಬ ಪದ 1815ರಲ್ಲಿ ‘ರಾಜಪ್ರಭುತ್ವ’ ಮರಳಿ ಅಧಿಕಾರಕ್ಕೆ ಬಂದ ನಂತರ ಹೆಚ್ಚು ಖ್ಯಾತಿ ಪಡೆಯಿತು. ತಮಾಷೆಯೆಂದರೆ, 1815ರ ನಂತರ ಫ್ರಾನ್ಸಿನಲ್ಲಿ ಈ ಪದ ಹೆಚ್ಚು ಉಪಯೋಗಸಲ್ಪಟ್ಟಿದ್ದು ಯಾವ ಪಕ್ಷಕ್ಕೂ ಸೇರದ ‘ಪಕ್ಷೇತರ’ರಿಗೆ ಹೊರತು ನಿಜಕ್ಕೂ ಪ್ರಜಾಪ್ರಭುತ್ವವನ್ನು ಬಯಸುತ್ತಿದ್ದವರಿಗಲ್ಲ. ಈ ಎಡಪಂಥೀಯರಲ್ಲಿ ಮಧ್ಯ-ಎಡ (center-left)ದಿಂದ ಹಿಡಿದು ತೀರಾ ಎಡ (far left), ಎಂಬ ಬೇರೆ ಬೇರೆ ಪಂಗಡಗಳಿವೆ. ಕೆಲವೆಡೆ ಈ ಫಾರ್ ಲೆಫ್ಟಿಗರನ್ನು ತೀರಾ ಅತ್ತತ್ಲಾಗೆ ಅನ್ನೋ ಹಾಗೇ ultra left ಎಂದೂ ಕರೆಯುತ್ತಾರೆ. ಈ ಮಧ್ಯ-ಎಡದಲ್ಲಿ ಮತ್ತೆ ಸೋಶಿಯಲ್ ಡೆಮಾಕ್ರೇಟರು (Social Democrats – ಸಾಮಾಜಿಕ ಪ್ರಜಾಪ್ರಭುತ್ವವಾದಿಗಳು), ಸೋಶಿಯಲ್ ಲಿಬರಲ್ಲರು (Social Liberals – ಸಾಮಾಜಿಕ ಪ್ರಗತಿಪರರು), ಡೆಮಾಕ್ರೆಟಿಕ್ ಸೋಶಿಯಲಿಸ್ಟರು (Democratic Socialists – ಪ್ರಜಾಪ್ರಭುತ್ವವಾದಿ ಸಮಾಜವಾದಿಗಳು) ಹಾಗೂ ಎಕೋ ಸೋಶಿಯಲಿಸ್ಟರು (Eco socialists – ಪರಿಸರ ಸಮಾಜವಾದಿಗಳು) ಎಂಬ ಒಡಕು ಬೇರೆ ಇದೆ. ಇವರ ಪ್ರಕಾರ ‘ತೀರ ಎಡ’ದವರು ತೀವ್ರಗಾಮಿಗಳು. ಅವರು ಒಂತರಾ ಎಡಪಂಥಕ್ಕೇ ಅವಮಾನವೆನ್ನುವಂತೆ ಉಳಿದವರು ನೋಡುತ್ತಾರೆ.

19ನೇ ಶತಮಾನದ ನಂತರ, ಈ ಪದದ ಬಳಕೆಯ ವ್ಯಾಪ್ತಿ ಹೆಚ್ಚುತ್ತಾ ಹೋಯಿತು. ಸಮಾಜವಾದ (Socialism), ಸಮಾನತಾವಾದ ಹಾಗೂ ಅರಾಜಕತಾವಾದ (Anarchism)ದ ಬೆಂಬಲಿಗರಿಗೂ ಎಡಪಂಥೀಯರೆಂದು ಕರೆಯುವುದು ಪ್ರಚಲಿತವಾಯಿತು. ಇಪ್ಪತ್ತನೆಯ ಶತಮಾನದಲ್ಲಿ ಈ ಪದ ಬರೇ ಬೆಂಬಲಿಗರಿಗಷ್ಟೇ ಅಲ್ಲದೇ, ಕೆಲ ಚಳುವಳಿಗಳಿಗೆ ಕೂಡಾ ಬಳಕೆಯಾಗಲು ಪ್ರಾರಂಭವಾಯಿತು. ನಾಗರಿಕ ಹಕ್ಕುಗಳ ಚಳುವಳಿಗಳೂ, ಯುದ್ಧ ವಿರೋಧಿ ಚಳುವಳಿಗಳೂ ಮತ್ತು ಪರಿಸರದ ಸಂಬಂಧೀ ಚಳುವಳಿಗಳೂ ಸಹ, ಎಡಪಂಥೀಯ ವಾದಕ್ಕೆ ಯಾವ ರೀತಿಯ ಸಾಮ್ಯತೆಯಿಲ್ಲದಿದ್ದರೂ, ಎಡಪಂಥೀಯ ಚಳುವಳಿಗಳೆಂದು ಕರೆಯಲ್ಪಟ್ಟವು. ಈಗಂತೂ ಈ ವ್ಯಾಖ್ಯಾನವನ್ನು ಇಡೀ ರಾಜಕೀಯ ಪಕ್ಷಗಳಿಗೆ ಬಳಸಲಾಗುತ್ತಿದೆ. ಅಮೇರಿಕಾ ಸಂಯುಕ್ತ ಸಂಸ್ಥಾನದ ಡೆಮಾಕ್ರಟಿಕ್ ಪಕ್ಷ, ಯುನೈಟೆಡ್ ಕಿಂಗ್ಡಮ್ಮಿನ ಲೇಬರ್ ಪಾರ್ಟಿ, ಭಾರತದ ಸಿ.ಪಿ.ಐ ಪಾರ್ಟಿ, ಚೀನಾದ ಲೇಬರ್ ಪಾರ್ಟಿಗಳು ಇವೆಲ್ಲಾ ಎಡಪಂಥೀಯರೆಂದು ಗುರುತಿಸಿಕೊಂಡ ಕೆಲ ಪಕ್ಷಗಳು.

ಫ್ರೆಂಚ್ ಕ್ರಾಂತಿಯ ನಂತರ ಈ ಪಂಥಗಾರಿಕೆ ಬೇರೆಯದೇ ರೂಪ ಪಡೆದುಕೊಂಡಿತು. ಪಶ್ಚಿಮದೆಡೆಗೆ ನೋಡಿದಾಗ ಅಮೇರಿಕಾದಲ್ಲಿ ‘ಕ್ರಿಶ್ಚಿಯನ್ ಬಲಪಂಥ’ ಎಂಬುದು ಬಹಳ ಶಕ್ತಿಶಾಲೀ ಸಂಘಟನೆ. ಆದರೆ ಇವರುಗಳು ಬಲಪಂಥೀಯರಾಗಿದ್ದು ಹೇಗೆ ಎಂಬ ಇತಿಹಾಸ ನೋಡಿದರೆ ಒಂದು ತಮಾಷೆಯಾದ ಎಳೆ ಹೊರಬರುತ್ತದೆ. ಈ ಸಂಪ್ರದಾಯವಾದಿ ಕ್ರಿಶ್ಚಿಯನ್ ಗುಂಪುಗಳಲ್ಲಿ ಗಟ್ಟಿಯಾದ ಧಾರ್ಮಿಕ ನಂಬಿಕೆಗಳಿದ್ದವು. ಅವರುಗಳಲ್ಲಿ ಭ್ರೂಣಹತ್ಯೆ, ಮದುವೆಯ ಚೌಕಟ್ಟಿನ ಹೊರಗಿನ ಸೆಕ್ಸ್, ಗರ್ಭನಿರೋಧಕಗಳು, ಸಲಿಂಗಪ್ರೇಮ ಹಾಗೂ ಸಲಿಂಗ ಮದುವೆಗಳು, ಡಾರ್ವೀನಿಯನ್ ವಿಕಾಸವಾದದೆಡೆಗಿನ ತಿರಸ್ಕಾರ ಹಾಗೂ ವಿಜ್ಞಾನ ಎಲ್ಲೆಲ್ಲಿ ಬೈಬಲ್ಲಿಗೆ ವಿರುದ್ಧವಾದ ಸಿದ್ಧಾಂತಗಳನ್ನು ಕೊಟ್ಟಿತೋ ಅವನ್ನು ನಿರಾಕರಿಸುವ ಮನಸ್ಥಿತಿಯಿದ್ದಿದ್ದರಿಂದ ಅವರನ್ನು “ಸಂಪ್ರದಾಯವಾದಿಗಳು” (conservatives)) ಎಂದು ಕರೆಯುವುದು ಸುಲಭದ ಮಾತಾಗಿತ್ತು. ಈ ನಂಬಿಕೆಗಳನ್ನು ವಿರೋಧಿಸುವವರಲ್ಲಿ ಅಂದರೆ ಅಬಾರ್ಷನ್, ಕಾಂಟ್ರಸೆಪ್ಷನ್, ಸಲಿಂಗಪ್ರೇಮ ಇತ್ಯಾದಿಗಳಿಗೆ ಸಮ್ಮತಿಯಿದ್ದರಿಂದ ಅವರುಗಳು ತಮ್ಮನ್ನು ತಾವೇ ಪ್ರಗತಿಪರರೆಂದು ಗುರುತಿಸಿಕೊಂಡಿದ್ದರು. ಸಹಜವಾಗಿಯೇ ಸಮಾಜದ ಮುಖ್ಯವಾಹಿನಿಯಿಂದ ತುಳಿತಕ್ಕೊಳಗಾದವರ ಪರ ಹೋರಾಡುವುದು ಎಡಪಂಥೀಯರ ಅಂದಿನ ಉದ್ದೇಶವಾದ್ದರಿಂದ, ಲಿಬರಲ್ಲುಗಳು ತಮ್ಮನ್ನು ತಾವು ಎಡಪಂಥೀಯರೆಂದು ಕರೆದುಕೊಳ್ಳಲಾರಂಭಿಸಿದರು. ಇದಕ್ಕೆ ವ್ಯತಿರಿಕ್ತವಾಗಿದ್ದವರನ್ನು ಅಂದರೆ ಧಾರ್ಮಿಕ ಹಾಗೂ ಸಾಂಪ್ರದಾಯಿಕ ನಂಬಿಕೆಗಳಿರುವ ಗುಂಪುಗಳಿಗೆ ಪಶ್ಚಿಮದಲ್ಲಿ ಬಲಪಂಥವೆಂದು ಹೆಸರುಬಂತು.

ಈ ಎಡ-ಬಲದ ಒಂದಲ ಇಷ್ಟಕ್ಕೇ ನಿಲ್ಲಲಿಲ್ಲ. ಭೌಗೋಳಿಕವಾಗಿ ಹಾಗೂ ಕಾಲದ ಜೊತೆಗೆ ಎಡ-ಬಲದ ವ್ಯಾಖ್ಯಾನಗಳು ಬದಲಾಗುತ್ತಲೇ ಇವೆ. ಅಮೇರಿಕಾ ಸಂಯುಕ್ತ ಸಂಸ್ಥಾನದ, Department of Homeland Security ಪ್ರಕಾರ ‘ರಾಜಕೀಯ ಪ್ರಕ್ರಿಯೆಗಳ ಬದಲಾಗಿ ಹಿಂಸಾತ್ಮಕ ಕ್ರಾಂತಿಯಿಂದ ಬದಲಾವಣೆ ತರಲು ಪ್ರಯತ್ನಿಸುವ’ ಗುಂಪುಗಳನ್ನು ಎಡಪಂಥೀಯ ತೀವ್ರಗಾಮಿಗಳೆನ್ನಲಾಗುತ್ತದೆ. ಈ ಪಟ್ಟಿಯಲ್ಲಿ ‘ಟ್ರಾಟ್ ಸ್ಕಿಯಿಸ್ಟರು’ (Trotskyists), ‘ಮಾವೋಯಿಸ್ಟರು’ (Maoists), ‘ಅರಾಜಕತಾವಾದಿಗಳು'(Anarchists) ಹೆಸರನ್ನು ಸೇರಿಸಲಾಗಿದೆ. ರಷ್ಯಾ ಹಾಗೂ ಚೀನಾದಲ್ಲಿ ಕಮ್ಯೂನಿಸ್ಟ್ ತತ್ವಗಳನ್ನು ಬೆಂಬಲಿಸುವವರನ್ನು ಎಡಪಂಥೀಯರೆಂದು ಕರೆದರೆ, ಭಾರತದಲ್ಲಿ ಎಡಪಂಥೀಯರ ಪಟ್ಟಿಗೆ ಕಮ್ಯೂನಿಸ್ಟರು ಮಾತ್ರವಲ್ಲದೇ ಲಿಬರಲ್ ಸೋಶಿಯಲಿಸ್ಟರೂ, ನಕ್ಸಲ್ ಹೊರಾಟಗಾರರೂ, ರಾಜ್ಯವಿರೋಧಿಗಳೂ (anti-establishment), ಮಾನವ ಹಕ್ಕುಗಳ ಹೋರಾಟಗಾರರೂ, ಹಾಗೂ ಎಷ್ಟೋ (ಹಿಂದೂ ಹಾಗೂ ಇತರೇ ಮತಗಳ) ಅಲ್ಪಸಂಖ್ಯಾತ ಗುಂಪುಗಳೂ ತಮ್ಮನ್ನು ತಾವು ಎಡಪಂಥೀಯರ ಪಟ್ಟಿಗೆ ಸೇರಿಸಿಕೊಂಡಿದ್ದಾರೆ. ಈ ಎಡ ಅಸ್ಮಿತೆಯ ಅಡ್ಡ ಪರಿಣಾಮವಾಗಿ ಬಹುಸಂಖ್ಯಾತ ಹಿಂದೂ ರಾಷ್ಟ್ರೀಯವಾದಿಗಳನ್ನು ಬಲಪಂಥೀಯರೆಂದು ಬಿಂಬಿಸಲಾಯಿತು. ಈ ಹೋರಾಟಗಳೂ ಕೂಗಾಟಗಳೂ ಎಡಪಂಥೀಯರಿಂದ ಹೊರಹೊಮಿದ್ದರಿಂದ ಅವರುಗಳು “ನಾನು ಮತ್ತು ಅವರು” (self and others) ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿ “ನಾವಲ್ಲದವರನ್ನು” ಬಲಪಂಥೀಯರು ಎಂದು ಕರೆಯಲಾರಂಭಿಸಿದರು. ಹೀಗೆ ಈ “ಬಲಪಂಥ” ಅನ್ನೋ ಪದ ಕೂಡಾ ಎಡಪಂಥೀಯರಿಂದಲೇ ಹುಟ್ಟಿದ್ದು. ಭಾರತೀಯ ಬಲಪಂಥಕ್ಕೂ, ಪಶ್ಚಿಮದ ಬಲಪಂಥಕ್ಕೂ ಅಜಗಜಾಂತರ ವ್ಯತ್ಯಾಸವಿದ್ದಾಗ್ಯೂ, ಹಾಗೂ ಹಿಂದೂ ನ್ಯಾಷನಲಿಸ್ಟುಗಳಲ್ಲೇ ಸೋಶಿಯಲಿಸ್ಟ್ ಚಿಂತನೆಗಳಿದ್ದಾಗ್ಯೂ ಸಹ ಅವರು ತಮಗೇ ಗೊತ್ತಿಲ್ಲದಂತೆ ನಿಧಾನವಾಗಿ ಹಾಗೂ ಅನಗತ್ಯವಾಗಿ “ಬಲಪಂಥೀಯ” ಎಂಬ ಹಣೆಪಟ್ಟಿ ಪಡೆದರು. ಸ್ವಾತಂತ್ರ್ಯಾ ನಂತರ ಸುಮಾರು ಅರವತ್ತರ ದಶಕದಲ್ಲಿ ಹುಟ್ಟಿಕೊಂಡ ಚಾಳಿಯಿದು. ಥಾಮಸ್ ಹ್ಯಾನ್ಸನ್ ಕೂಡಾ “ಹಿಂದೂಗಳಲ್ಲಿ ಮೇಲ್ವರ್ಗದ ಜನರು ಒಟ್ಟಾಗಿ ತಮ್ಮ ತಮ್ಮ ಸಾಮಾಜಿಕ ಸ್ಥರಗಳನ್ನು ಉಳಿಸಿಕೊಳ್ಳಲು ಗುಂಪುಗಾರಿಕೆ ಮಾಡಿ, ಆರ್ಥಿಕವಾಗಿ ದುರ್ಬಲರಾದವರನ್ನು ತುಳಿದದ್ದರಿಂದ ಹಾಗೂ ಎಡಪಂಥೀಯರು ಸಹಜವಾಗಿಯೇ ಈ ಆರ್ಥಿಕ ದುರ್ಬಲ ವರ್ಗಗಳ ಪರವಾಗಿ ವಾದಮಾಡುತ್ತಿದ್ದರಿಂದ, ಆ ಎಡಪಂಥೀಯರ ವಿರೋಧಿಗಳೆಲ್ಲರೂ ಬಲಪಂಥೀಯರೆಂದು ಕರೆಯಲ್ಪಟ್ಟರು” ಅನ್ನುತ್ತಾನೆ.

ಈ ಪಂಥ ವಿಂಗಡಣೆ ಬರೇ ಚಿಂತನೆ ಅಥವಾ ಕಾಲದೊಡನೆ ಮಾತ್ರ ಬದಲಾಗಿಲ್ಲ. ಕೆಲ ಪ್ರದೇಶಗಳಲ್ಲಿ ಧಾರ್ಮಿಕ ನಂಬಿಕೆಗಳೂ ಜನರನ್ನು ಎಡ ಬಲವೆಂದು ವಿಂಗಡಿಸಿವೆ. ಉದಾಹರಣೆಗೆ ಇಸ್ಲಾಂನಲ್ಲಿ ಶಿಯಾಗಳನ್ನು ಸ್ಥೂಲವಾಗಿ ಬಲಪಂಥೀಯರೆಂದು ವಿಂಗಡಿಸಲಾಗುತ್ತದೆ. ಆದರೆ ಇಲ್ಲಿ ಈ ವಿಂಗಡಣೆ ಆರ್ಥಿಕ ಅಥವಾ ಸಾಮಾಜಿಕ ಕಾರಣಗಳಿಗಲ್ಲ. ಬದಲಿಗೆ ಬಹುಸಂಖ್ಯಾತ ಸುನ್ನಿಗಳ ಧಾರ್ಮಿಕ ನಂಬಿಕೆಗಳ ವಿರೋಧಕ್ಕಾಗಿ (ಮೊಹಮ್ಮದ್ ಅವರೇ ಕೊನೆಯ ಪ್ರವಾದಿ ಎಂಬ ನಂಬಿಕೆ, ಮಹ್ದಿಯ ಕುರಿತಾದ ನಂಬಿಕೆ, ಹದೀತ್ ಗಳ ಬಗ್ಗೆಯಿರುವ ಭಿನ್ನ ನಂಬಿಕೆಗಳು ಇತ್ಯಾದಿ) ಅವರನ್ನು ಬಲಪಂಥೀಯರೆಂದು ಗುರುತಿಸಲಾಗುತ್ತದೆ. ವಿಚಿತ್ರವೆಂದರೆ ಸುನ್ನಿಗಳು ಶಿಯಾರನ್ನು ಬಲಪಂಥೀಯರೆಂದರೆ, ಶಿಯಾಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ನಂಬಿಕೆಯಿರುವವರನ್ನು ಬಲಪಂಥೀಯರೆಂದು ಕರೆಯಲಾಗುತ್ತದೆ. ಉದಾಹರಣೆಗೆ ಇರಾನಿನಲ್ಲಿ “ಇಸ್ಲಾಮಿಕ್ ಸೊಸೈಟಿ ಆಫ್ ಇಂಜಿನಿಯರಿಂಗ್” ಅನ್ನು ಬಲಪಂಥೀಯ ವಿಚಾರಧಾರೆಯ ಗುಂಪು ಎಂದು ಗುರುತಿಸಲಾಗುತ್ತದೆ. ಭಾರತದಲ್ಲಿ ಸಂಪ್ರದಾಯವಾದಿ ಹಿಂದೂಗಳನ್ನು ಹಾಗೂ ರಾಷ್ಟ್ರೀಯವಾದಿ ಹಿಂದೂಗಳನ್ನು ಬಲಪಂಥೀಯರು ಎಂದು ಗುರುತಿಸಲಾಗುತ್ತದೆ. ಹೀಗೇ ಜಗತ್ತಿನ ನಾನಾ ಭಾಗಗಳಲ್ಲಿ ಬಲಪಂಥಕ್ಕೆ ಬೇರೆ ಬೇರೆ ವಿವರಣೆಯಿದೆ. ಆದರೆ ಭಾರತದಲ್ಲಿ ಸ್ಥೂಲವಾಗಿ ಧಾರ್ಮಿಕ ಬಹುಸಂಖ್ಯಾತರನ್ನು, ಸಂಪ್ರದಾಯವಾದಿಗಳನ್ನೂ ಬಲಪಂಥೀಯರೆಂದು ಕರೆಯಲಾಗುತ್ತದೆ. ಇವರ ಧೋರಣೆಗಳನ್ನು ನಂಬದ ಗುಂಪುಗಳು ತಮ್ಮನ್ನು ತಾವೇ ‘ಪ್ರಗತಿಪರರು’ ಎಂದು ಸ್ವಯಂ ದೃಡೀಕರಿಸಿಕೊಂಡು ಎಡಪಂಥಗಳಾಗಿವೆ. ಆದರೂ ಸಹ ಇಲ್ಲಿ ನೀವು ನೋಡಬೇಕಾದ್ದದ್ದೇನೆಂದರೆ, ಬಲಪಂಥವೆಂದು ಯಾವತ್ತೂ ಎಲ್ಲಿಯೂ ಇರಲೇ ಇಲ್ಲ. ಕೆಲವೊಂದಷ್ಟು ಜನ ತಮ್ಮನ್ನು ತಾವು ಎಡಪಂಥೀಯರೆಂದು ಕರೆದುಕೊಂಡ ಮೇಲೆ, ಉಳಿದವರನ್ನು ಬಲವಂತವಾಗಿ ಬಲಪಂಥೀಯರೆಂದು ಕರೆಯಲಾಯ್ತು. ಯಾರ್ಯಾರು ಎಡಪಂಥವಲ್ಲವೋ, “ನನಗೂ ಎಡಪಂಥೀಯರಿಗೂ ಸಂಬಂಧವಿಲ್ಲ. ನಾನು ಸರಿಯಾಗಿದ್ದನ್ನು ಮಾಡುತ್ತೇನೆ” ಎಂದು ನಿಂತರೋ ಅವರಿಗೆ ಬಲಪಂಥೀಯರೆಂದು ಕರೆಯಲಾಗಿದೆ ಅಷ್ಟೇ. ಹಾಗಾಗಿ, ‘ಎಡಪಂಥೀಯ’ ಎಂಬ ಪಂಗಡವೊಂದಿದೆಯೇ ಹೊರತು, ಬಲಪಂಥೀಯ ಎಂಬ ಪಂಗಡವಾಗಲೀ, ಬಲಪಂಥೀಯರೆಂಬುವವರಾಗಲೀ ಯಾರೂ ಇಲ್ಲ. ಫ್ರೆಂಚ್ ಕ್ರಾಂತಿಯ ನಂತರ ಬಲಪಂಥವೆನ್ನುವುದು ಯಾವುದೂ ಉಳಿಯಲಿಲ್ಲ. ಇವತ್ತು ರಾಜಪ್ರಭುತ್ವವನ್ನು ಬೆಂಬಲಿಸುವ ಯಾವುದೇ ಪಕ್ಷ ಜಗತ್ತಿನಲ್ಲಿ ಇಲ್ಲ. ರಾಜಪ್ರಭುತ್ವ ಚಾಲ್ತಿಯಲ್ಲಿರುವ ದೇಶಗಳು ಇಂದಿಗೂ ಇವೆ. ಆದರೆ ಅಲ್ಲಿಯೂ ಅದನ್ನು ಬೆಂಬಲಿಸುವಂತಹ ಯಾವ ಪಕ್ಷಗಳೂ ಇಲ್ಲ. ಮಾಡಲು ಕೆಲಸವಿಲ್ಲದ ರಾಜಕೀಯ ಪರಿಣಿತರು, ಯಾರ್ಯಾರು ಎಡಪಂಥೀಯರನ್ನು ವಿರೋಧಿಸಿದರೋ ಅವರೆನ್ನೆಲ್ಲಾ ‘ಬಲಪಂಥೀಯ’ರೆಂದು ಕರೆಯುವ ಮೂರ್ಖತನವೊಂದನ್ನು ಮಾಡಿದರು. ಅದು ಇವತ್ತಿಗೂ ಮುಂದುವರೆಯುತ್ತಿದೆ. ಆದ್ದರಿಂದ ನೀವು ಯಾವುದಾದರೂ ಒಂದು ಪಂಥಕ್ಕೆ ಸೇರಿರಲೇಬೇಕೆಂಬ ನಿಯಮವೇನೂ ಇಲ್ಲ. ನೀವು ಎಡಪಂಥವಲ್ಲದಿದ್ದರೆ ನೀವು ನೇರ ಪಂಥೀಯರಾಗುತ್ತೀರಷ್ಟೇ ಹೊರತು ಬಲಪಂಥೀಯರಾಗುವುದಿಲ್ಲ.

ಒಂದಾನೊಂದು ಕಾಲದಲ್ಲಿ, ಕಗತ್ತಿನ ಕೆಲಭಾಗಗಳಲ್ಲಿ ಎಡಪಂಥೀಯರಿಂದ ಶೋಷಿತವರ್ಗಗಳಿಗೆ ಖಂಡಿತವಾಗಿಯೂ ನ್ಯಾಯದೊರಕಿಸಿಡುವ ಪ್ರಯತ್ನ ನಡೆದಿವೆ. ಆ ಕಾರಣಕ್ಕೆ ಅವರನ್ನು ಅಭಿನಂದಿಸಲೇಬೇಕು. ಆದರೆ, ಇವತ್ತಿನ ಎಡಪಂಥ, ಅದೂ ಭಾರತದಲ್ಲಿ ಯಾವುದೇ ಒಂದು ನಿರ್ಧಿಷ್ಟ ಸಿದ್ಧಾಂತೆಡೆಗೆ ಗುರಿಯಿಡದೇ ಎಲ್ಲೆಲ್ಲಿ ಸಾಧ್ಯವೋ ಎಲ್ಲಾ ಕಡೆಯೂ ಮೂಗು ತೂರಿಸಿ ಹಲವಾರು ಸಾಮಾಜಿಕ ಅವ್ಯವಸ್ಥೆಗಳಿಗೆ ಕಾರಣರಾಗಿದ್ದಾರೆ. ನಕ್ಸಲರೆಂಬ ಭಸ್ಮಾಸುರರನ್ನು ಸೃಷ್ಟಿಸಿದ್ದು ಇದೇ ಎಡಪಂಥ. ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಕರೆಯಲ್ಪಡುತ್ತಿದ್ದ ದಾವಣಗೆರೆಯ ಕಾಟನ್ ಮಿಲ್ಲುಗಳನ್ನೂ ನೆಲಸಮ ಮಾಡಿದ್ದೂ ಇದೇ ಎಡಪಂಥ. ಇವತ್ತು ದಲಿತ ಹೋರಾಟವನ್ನೂ, ಮುಸ್ಲಿಂ ಹೋರಾಟಗಳನ್ನೂ ದಾರಿತಪ್ಪಿಸಿ ಅದಕ್ಕೆ “ಹಿಂದೂ ವಿರೋಧಿ ಹೋರಾಟ”ದ ರೂಪ ಕೊಟ್ಟಿರುವುದೂ ಇದೇ ಎಡಪಂಥ. ಇಂತವರಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವುದು ಸಮಾಜದ ಆರೋಗ್ಯಕ್ಕೆ ಬಹಳ ಮುಖ್ಯ. ಹಾಗೆಯೇ “ನಮಗೊಂದು ಅಸ್ತಿತ್ವ ಬೇಕು” ಅನ್ನೋ ಕಾರಣಕ್ಕಾಗಿ “ಬಲಪಂಥ” ಅನ್ನೋದೊಂದನ್ನ ತಾವಾಗಿಯೇ ಹುಟ್ಟು ಹಾಕ್ಕೊಂಡು ನಾವು ಬಲಪಂಥೀಯರು ಎಂದು ಕೂಗಾಡುತ್ತಿರುವವರ ಬಗ್ಗೆ ನಾವೆಲ್ಲರೂ ಎಚ್ಚರದಿಂದಿರಬೇಕು. ಅವರು ಯಾವುದೇ ಧರ್ಮ, ಮತಗಳಿಗೆ ಸೇರಿದವರಾಗಿದ್ದರೂ ಅವರನ್ನು ದೂರವಿಡಬೇಕು.

ನಿಮಗೆ ಯಾರಾದರೂ “ನೀವ್ಯಾವ ಪಂಥ” ಅಂತಾ ಕೇಳಿದರೆ ನೀವು ಹೇಳಬೇಕಾದ್ದಷ್ಟೇ “ನೋಡಪ್ಪಾ. ಜಗತ್ತಿನಲ್ಲಿ ಇರುವುದೇ ನೇರಮಾರ್ಗ ಹಾಗೂ ವಾಮಮಾರ್ಗ (ಅಥವಾ ನೇರಪಂಥ ಹಾಗೂ ವಾಮಪಂಥ). ನಾನು ವಾಮಮಾರ್ಗಿಯಲ್ಲ. ಅಷ್ಟೇ”.

ಮೂಲ ಚಿತ್ರ :- http://www.buzzle.com

8 ಟಿಪ್ಪಣಿಗಳು Post a comment
 1. SalamBava
  ಫೆಬ್ರ 2 2017

  When the world is fast descending into fascism, right wing apologetics will keep denying the existence of the Right just like holocaust deniers.

  ಉತ್ತರ
  • ಶೆಟ್ಟಿನಾಗ ಶೇ.
   ಫೆಬ್ರ 2 2017

   ಖರೆ ನುಡಿದಿರಿ ಬಾವ ಭಾಯಿ!

   ಉತ್ತರ
   • ಮಾರ್ಕ್ಸ್ ಮಂಜು
    ಫೆಬ್ರ 2 2017

    ಮಾರ್ಕ್ಸಿಸಂ ಎಂಬುದು ಮಣ್ಣಾಗಿದ್ದರೂ(ಕ್ಯೂಬಾ,ಕೇರಳವನ್ನು ಬಿಟ್ಟಂತೆ),ಮಾರ್ಕ್ಸಿಸ್ಟುಗಳು ಎಂದು ಕರೆದುಕೊಳ್ಳುವ ಉತ್ಕಟ ಅಭಿಮಾನ ಕೇವಲ ಎಡಪಂಥೀಯರಿಗಷ್ಟೇ ಸಾಧ್ಯವಾದುದಾಗಿರುವುದು ಬಾವಾ ಭಾಯ್.ಎಡಪಂಥೀಯರಿಗೆ ಮಹರ್ಷಿಯಾಗಿ ಮಾರ್ಕ್ಸ್ ಇರುವವರಾಗಿದ್ದಾರೆ.ಬಲಪಂಥೀಯರಿಗೆ ಯಾವ ಮಹರ್ಷಿ ಇರುವರೆಂಬುದೇ ತಿಳಿದಿಲ್ಲ

    ಉತ್ತರ
    • SalamBava
     ಫೆಬ್ರ 2 2017

     “ಬಲಪಂಥೀಯರಿಗೆ ಯಾವ ಮಹರ್ಷಿ ಇರುವರೆಂಬುದೇ ತಿಳಿದಿಲ್ಲ”

     Maharshi jayasreenivasan guruji

     Maharshi Anand Guruji

     ಉತ್ತರ
     • ಶೆಟ್ಟಿನಾಗ ಶೇ.
      ಫೆಬ್ರ 3 2017

      ಬಾವ ಭಾಯಿ! ಹಹಹ! ಮಹರ್ಷಿ ಜಯಶ್ರೀನಿವಾಸನ್ ಗುರೂಜಿ! ಹಹಹ! ನಿಮ್ಮ ಹಾಸ್ಯ ಪ್ರಜ್ಞೆ ಗಜಬ್ ಆಗಿದೆ.

      ಉತ್ತರ
    • ಶೆಟ್ಟಿನಾಗ ಶೇ.
     ಫೆಬ್ರ 3 2017

     “ಮಾರ್ಕ್ಸಿಸಂ ಎಂಬುದು ಮಣ್ಣಾಗಿದ್ದರೂ(ಕ್ಯೂಬಾ,ಕೇರಳವನ್ನು ಬಿಟ್ಟಂತೆ),”

     ಅಭಿನವ ಚನ್ನಬಸವಣ್ಣ ಎಂದೇ ಶರಣ ಸಂಕುಲದಲ್ಲಿ ಪ್ರಖ್ಯಾತರಾಗಿರುವ ಅನನ್ಯ ಬಸವಾದ್ವೈತಿ ಸೂಫಿ ಅನುಭಾವಿ ದರ್ಗಾ ಸರ್ ಅವರು ಹೀಗೆ ಅಭಿಪ್ರಾಯ ಪಟ್ಟಿದ್ದಾರೆ: “I am not a fortune teller. Still I say, America will be the center of the World Communist Movement withing 25 years.”

     ಮತ್ತೆ ಬರಲಿವೆ ಒಳ್ಳೆಯ ದಿನಗಳು.

     ಉತ್ತರ
     • ಮಾರ್ಕ್ಸ್ ಮಂಜು
      ಫೆಬ್ರ 3 2017

      ಆ ಒಳ್ಳೆಯ ದಿನವನ್ನು ನೋಡುವಾಗ ಮಿ.ದರ್ಗಾ ಅವರು ನಮ್ಮ ಮಹರ್ಷಿ ಮಾರ್ಕ್ಸ್ ಅವರ ಲೋಕದಲ್ಲಿ ಇರಬಹುದೆನ್ನುವುದು ನನ್ನ ಅಭಿಪ್ರಾಯವಾಗಿದೆ

      ಉತ್ತರ
      • ಶೆಟ್ಟಿನಾಗ ಶೇ.
       ಫೆಬ್ರ 3 2017

       ಹೌದು ಅವರು ಆ ಸುದಿನವನ್ನು ಬಸವಣ್ಣನವರ ಪದತಳದಲ್ಲಿ ಕುಳಿತು ವೀಕ್ಷಿಸುತ್ತಾರೆ.

       ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments