ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 4, 2017

1

ರಾಹುಲ್ ಗಾಂಧಿಗೆ ಬಿ.ಪಿ.ಎಲ್ ಕಾರ್ಡ್ ನೀಡಲು ನಿರ್ಧಾರ: ಸಿಎಂ (ಸುಳ್ಸುದ್ದಿ)

‍ನಿಲುಮೆ ಮೂಲಕ

– ಪ್ರವೀಣ್ ಕುಮಾರ್, ಮಾವಿನಕಾಡು

sulsuddiರಾಹುಲ್ ಗಾಂಧಿ ಅವರಿಗೆ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಮೂಲಕ ಬಿ.ಪಿ.ಎಲ್ ಕಾರ್ಡ್ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅವರು ಇಂದು ಮೂರನೇ ಮಹಡಿಯಲ್ಲಿ ನಡೆದ ತುರ್ತು ಸಚಿವ ಸಂಪುಟದ ಸಭೆಯ ನಂತರ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.ಈ ಬಗ್ಗೆ ಸಚಿವ ಸಂಪುಟ ಒಮ್ಮತದ ನಿರ್ಧಾರ ಕೈಗೊಂಡಿದ್ದು ಮುಂದಿನ ಶುಕ್ರವಾರ ನವದೆಹಲಿಯಲ್ಲಿ ಅವರನ್ನು ಭೇಟಿಯಾಗಿ ಅವರಿಗೆ ಬಿ.ಪಿ.ಎಲ್ ಕಾರ್ಡ್ ನೀಡಲಾಗುವುದು ಎಂದು ತಿಳಿಸಿದರು. ಅದಕ್ಕಾಗಿ ಅಂದು ಅರ್ಧ ಗಂಟೆ ಭೇಟಿಯಾಗಲು ಅವರ ಬಳಿ ಸಮಯ ಕೇಳಿ ಪತ್ರ ಬರೆದಿದ್ದು ಪಕ್ಷಾಧ್ಯಕ್ಷರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಅನುಮತಿಯ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು.

ಕೆಲವು ದಿನಗಳ ಹಿಂದೆ ಸಾರ್ವಜನಿಕರ ಮುಂದೆ ತಮ್ಮ ಹರಿದ ಜುಬ್ಬಾ ತೋರಿಸಿದ್ದನ್ನು ಕಂಡು ನಮ್ಮ ಸರ್ಕಾರ ರಾಹುಲ್ ಗಾಂಧಿಯವರ ಹೆಸರಿನಲ್ಲಿ ಬಿ.ಪಿ.ಎಲ್ ಕಾರ್ಡ್ ಗಾಗಿ ಸ್ವಯಂಪ್ರೇರಿತ ಅರ್ಜಿಯೊಂದನ್ನು ದಾಖಲಿಸಿಕೊಂಡಿದ್ದು ಆ ಮೂಲಕ ನಮ್ಮ ಸರ್ಕಾರ ಆ ಅರ್ಜಿಯನ್ನು ಪರಿಶೀಲಿಸಿ ನಂತರ ಸರ್ಕಾರ ಅವರಿಗೆ ಬಿ.ಪಿ.ಎಲ್ ಕಾರ್ಡ್ ನೀಡಲು ನಿರ್ಧರಿಸಿತು ಎಂದು ಮಾನ್ಯ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು. ಇದಿಷ್ಟೇ ಅಲ್ಲದೆ ಕೆಲವು ತಿಂಗಳ ಹಿಂದೆ ಅವರು ಬ್ಯಾಂಕ್ ನಿಂದ ಕೇವಲ ನಾಲ್ಕು ಸಾವಿರ ರೂ.ಗಳನ್ನೂ ಹಿಂಪಡೆದು ಅದೇ ಹಣದಲ್ಲಿ ಇಂದಿಗೂ ಬದುಕುತ್ತಿದ್ದಾರೆ. ಅದಾದ ನಂತರ ಅವರು ಹಣ ಹಿಂಪಡೆಯಲು ಯಾವುದೇ ಬ್ಯಾಂಕ್ ಅಥವಾ ಎ.ಟಿ.ಎಂ.ಮುಂದೆ ಕ್ಯೂ ನಿಂತ ಬಗ್ಗೆ ವರದಿಯಾಗಿಲ್ಲ. ಅಷ್ಟೇ ಅಲ್ಲದೆ ಅದೇ ನಾಲ್ಕು ಸಾವಿರ ರೂ.ಗಳಲ್ಲಿ ಲಂಡನ್ ಟೂರ್ ಕೂಡಾ ಮುಗಿಸಿ ಬಂದಿದ್ದಾರೆ. ಇಷ್ಟೊಂದು ಕಡಿಮೆ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದರೆ ಅವರ ಆದಾಯ ನಮ್ಮ ಸರ್ಕಾರ ಬಿ.ಪಿ.ಎಲ್ ಕಾರ್ಡ್ ನೀಡಲು ನಿಗದಿಪಡಿಸಿರುವ ಆದಾಯ ಮಿತಿಯ ವ್ಯಾಪ್ತಿಯೊಳಗೇ ಇದೆ. ಆದ್ದರಿಂದ ಅವರನ್ನು ಕಡುಬಡವ ಎಂದೇ ಗುರುತಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಸ್ವಯಂ ಪ್ರೇರಿತವಾಗಿ ಅವರಿಗೆ ಬಿ.ಪಿ.ಎಲ್ ಕಾರ್ಡ್ ನೀಡಲು ನಿರ್ಧರಿಸಿತು ಎಂದು ಅವರು ತಿಳಿಸಿದರು.

ನಮ್ಮ ರಾಜ್ಯದ ನಾಗರೀಕರಲ್ಲದವರಿಗೆ ನಮ್ಮ ರಾಜ್ಯದಲ್ಲಿ ಬಿ.ಪಿ.ಎಲ್ ಕಾರ್ಡ್ ನೀಡುವುದು ಎಷ್ಟು ಸೂಕ್ತ ಎಂದು ಕೇಳಿದ ಪತ್ರಕರ್ತರೊಬ್ಬರ ಪ್ರಶ್ನೆಗೆ ಸಿಡಿಮಿಡಿಗೊಂಡ ನಮ್ಮ ಮುಖ್ಯಮಂತ್ರಿಗಳು ಅವರ ಅಜ್ಜಿ ನಮ್ಮ ರಾಜ್ಯದಲ್ಲಿ ಚುನಾವಣೆಗೆ ನಿಂತು ಗೆದ್ದಿರಲಿಲ್ವೇನ್ರೀ..? ಅವರ ತಾಯಿ ಇದೇ ರಾಜ್ಯದಲ್ಲಿ ಚುನಾವಣೆಗೆ ನಿಂತು ಗೆದ್ದಿರಲಿಲ್ವೇನ್ರೀ..? ಆಗ ಇಲ್ಲದ ಕ್ಯಾತೆ ಈಗ ಯಾಕೆ ತೆಗೀತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅದೂ ಅಲ್ಲದೇ ಅವರ ಅಜ್ಜಿಯ ಕಾಲದಲ್ಲೇ “ಗರೀಬಿ ಹಠಾವೋ” ಘೋಷಣೆ ಮಾಡಿದ್ದು ಅವರ ಮೊಮ್ಮಗನೇ ಹರಿದ ಜುಬ್ಬಾ ತೋರಿಸುತ್ತಿದ್ದಾರೆ ಎಂದರೆ ಇಂದಿಗೂ “ಗರೀಬಿ ಹಠಾವೋ” ಘೋಷಣೆಯಿಂದ ಯಾವ ಪರಿಣಾಮವೂ ಆಗಿಲ್ಲ ಎನ್ನುವುದನ್ನು ತೋರಿಸುತ್ತದೆ. ಅವರ ಪಕ್ಷ ಅಧಿಕಾರದಲ್ಲಿರುವ ಅತೀ ದೊಡ್ಡ ರಾಜ್ಯವಾಗಿ ಕನಿಷ್ಠ ಅವರ ಕುಟುಂಬದ ಬಡತನವನ್ನು ನಿವಾರಿಸಲು ಶ್ರಮಿಸಬೇಕಾಗಿದ್ದು ನಮ್ಮ ಕರ್ತವ್ಯ. ನಮ್ಮ ಸರ್ಕಾರ ಬಡವರ ಪರವಾಗಿದ್ದು ರಾಹುಲ್ ಗಾಂಧಿ ಕೂಡಾ ಒಬ್ಬ ಕಡುಬಡವರು ಎನ್ನುವುದು ಈಗ ಜಗಜ್ಜಾಹೀರಾಗಿದೆ. ಹೀಗಿರುವಾಗ ಅವರಿಗೆ ಬಿ.ಪಿ.ಎಲ್.ಕಾರ್ಡ್ ನೀಡುವ ತೀರ್ಮಾನ ತಪ್ಪಾಗುವುದಾದರೂ ಹೇಗೆ?ದಯವಿಟ್ಟು ಇಂತಹಾ ಒಳ್ಳೆಯ ಕಾರ್ಯಕ್ಕೆ ಯಾರೂ ಕೊಂಕು ತೆಗೆಯಬಾರದು ಎಂದು ಅವರು ಪತ್ರಕರ್ತರ ಮೂಲಕ ರಾಜ್ಯದ ಜನತೆಗೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವರು, ಇಂಧನ ಸಚಿವರು ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಜರಿದ್ದರು.

ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ ಅವರು “ಬಡತನ ಎನ್ನುವುದು ಮಾನಸಿಕ ಸ್ಥಿತಿಯಷ್ಟೇ”. ಆದರೂ ಪ್ರತೀ ಬಾರಿ ನನ್ನ ಹರಿದ ಜುಬ್ಬಾ ನೋಡಿಕೊಂಡಾಗ ನನ್ನ ಮಾನಸಿಕ ಸ್ಥಿತಿ ಬದಲಾಗುತ್ತದೆ. ನನ್ನ ಸ್ಥಿತಿಯನ್ನು ಗಮನಿಸಿ ಬಿ.ಪಿ.ಎಲ್.ಕಾರ್ಡ್ ನೀಡುವ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರಕ್ಕೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ. ಹಾಗೆಯೇ ಕಾರ್ಡ್ ಅನ್ನು ಬೆಂಗಳೂರಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ವ್ಯಾಪ್ತಿಗೆ ಬರುವಂತೆ ನೀಡಿದರೆ ನನಗೆ ಪ್ರತೀ ತಿಂಗಳೂ ನ್ಯಾಯಬೆಲೆ ಅಂಗಡಿಗೆ ಹೋಗಿ ಬರಲು ಅನುಕೂಲವಾಗುತ್ತದೆ. ಭೇಟಿಯಾದಾಗ ಈ ಬಗ್ಗೆ ಅವರನ್ನು ವಿನಂತಿಸಿಕೊಳ್ಳಲಿದ್ದೇನೆ ಎಂದು ಅವರು ತಿಳಿಸಿದರು.

ವಿಷಯ ತಿಳಿದು ಸಂತಸ ವ್ಯಕ್ತಪಡಿಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಗರೀಬ್ ಹಠಾವೋ ಎನ್ನುವುದು ನಮ್ಮ ಪಕ್ಷದ ಮೂಲ ಮಂತ್ರವಾಗಿದ್ದು ಅದಕ್ಕೆ ನಮ್ಮ ಪಕ್ಷದ ಆಡಳಿತವಿರುವ ರಾಜ್ಯವೊಂದರಲ್ಲಿ ಮತ್ತೊಮ್ಮೆ ಚಾಲನೆ ಸಿಕ್ಕಿದೆ. ಮುಂದಿನ ವರ್ಷಗಳಲ್ಲಿ ದೇಶದ ಜನತೆ ನಿರಂತರವಾಗಿ ನಮ್ಮ ಪಕ್ಷಕ್ಕೆ ಅಧಿಕಾರ ನೀಡಿದರೆ ಇನ್ನೂರು ವರ್ಷಗಳಲ್ಲಿ ದೇಶದ ಎಲ್ಲಾ ಕುಟುಂಬಗಳಿಗೂ ಬಿ.ಪಿ.ಎಲ್ ಕಾರ್ಡ್ ನೀಡುವ ಮೂಲಕ ಬಡತನವನ್ನು ನಿವಾರಿಸಲಾಗುವುದು ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಉತ್ತರಪ್ರದೇಶದಲ್ಲಿ ಆ ಪಕ್ಷದ ಉಸ್ತುವಾರಿಯಾಗಿರುವ ಶ್ರೀಮತಿ ಇಂದಿರಾ ಗಾಂಧಿಯವರನ್ನೇ ಹೋಲುವ ಪ್ರಿಯಾಂಕಾ ಗಾಂಧೀ ವಾದ್ರಾ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ ‘ನನಗಂತೂ ಬಡತನದ ಅನುಭವವಿಲ್ಲ. ಯಾರು ಹರಿದ ಜುಬ್ಬಾಧರಿಸುತ್ತಾರೋ ಅವರನ್ನೇ ಕೇಳಿ’ ಎನ್ನುತ್ತಾ ಹೊರನಡೆದರೆನ್ನಲಾಗಿದೆ.

ವಿ.ಸೂ: ಇದೊಂದು ಸತ್ಯ ಸುದ್ದಿಯಾಧಾರಿತ ಸುಳ್ಸುದ್ದಿಯಾಗಿದ್ದು ಇದು ಕೇವಲ ಮನರಂಜನೆಗಾಗಿ ಮಾತ್ರ.

1 ಟಿಪ್ಪಣಿ Post a comment
  1. ಚಂದ್ರು
    ಫೆಬ್ರ 4 2017

    ನಿಮ್ಮ ವಿಡಂಬನಾತ್ಮಕ ಬರಹ ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments