ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 5, 2017

1

ಉತ್ತರಕಾಂಡದ ಓದು ಮತ್ತು ಜಿಜ್ಞಾಸೆ.

‍ನಿಲುಮೆ ಮೂಲಕ

– ನವೀನ ಗಂಗೋತ್ರಿ

uttarakaandaರಾಮಾಯಣವನ್ನಾಗಲೀ ಮಹಾಭಾರತವನ್ನಾಗಲೀ ಅವಲೋಕಿಸುವ ಸಂದರ್ಭ ಆಗಾಗ ಬರುತ್ತಲೇ ಇರುತ್ತದೆ. ಅದೆಷ್ಟು ಬಾರಿಗೆ ಅವಲೋಕಿಸಿದರೂ ರಾಮನೆಂಬಾತ ಮಾತ್ರ ಎಟುಕಿಗೆ ನಿಲುಕದ, ಯಾವುದಕ್ಕೂ ಕಲಕದ, ಅರ್ಥವಾಗದ ಮತ್ತು ಅರ್ಥಮಾಡಿಸಿಕೊಳ್ಳುವ ಬಯಕೆಯೂ ಇಲ್ಲದ ಪಾತ್ರವಾಗಿಯೇ ನನಗೆ ತೋರುತ್ತಾನೆ. ಅವನ ಕೃತ್ಯಗಳ ಪರವಾಗಿ ಜಿಜ್ಞಾಸೆಗೆ ನಿಂತಾಗೆಲ್ಲ ಕೊನೆಯಲ್ಲಿ ಆತನ ನಿರ್ಧಾರಗಳೆಡೆಗೆ ಪ್ರಶ್ನೆಗಳೇ ಉಳಿಯುತ್ತವೆ. ಹಾಗಂತ ಅವನ ಕೃತ್ಯಗಳ ಪರವಲ್ಲದ ಕೋನ ಹಿಡಿದುಕೊಂಡೆನೋ, ಆತನ ‘ಧರ್ಮ’ವು ಎಲ್ಲೋ ಒಂದು ಸಣ್ಣ ಹೊಳಹಿನಲ್ಲಿ ಸುಳಿದು ವಿರೋಧವಾದದ ಬುಡವನ್ನೇ ಕಡಿಯುತ್ತದೆ. ರಾಮ ಇವತ್ತಿಗೂ ನನ್ನ ಅರಿವಿನ ಯಾವ ಅಂಚಿಗೂ ನಿಲುಕದವನು.

ಉತ್ತರಕಾಂಡವನ್ನು ಎತ್ತಿಕೊಂಡಾಗ ಕಾದಂಬರಿಕಾರನು ಕಥೆಯ ಹರಿವಿನಲ್ಲಿ ಒದಗಿಸಬಹುದಾದ ರಸಸೃಷ್ಟಿಯಲ್ಲಿ ಮಿಂದೇಳುವ ಬಯಕೆಯು ಹಿರಿದಾಗಿತ್ತಾದರೂ ರಾಮನನ್ನು ನನಗೆ ಹತ್ತಿರವಾಗಿಸಬಹುದೇನೋ ಅನ್ನುವ ಸಣ್ಣದೊಂದಾಸೆಯೂ ಮನಸಲ್ಲಿತ್ತು.

ಭೈರಪ್ಪನವರ ಕೃತಿಗಳಲ್ಲೆಲ್ಲ ನನ್ನನ್ನು ಅತಿಯಾಗಿ ಆವರಿಸಿದ್ದು ಪರ್ವ. ಅದು ಬಿಟ್ಟರೆ ನಾನು ಮೊತ್ತ ಮೊದಲಿಗೆ ಓದಿಕೊಂಡಿದ್ದ ಸಾರ್ಥ. ಉಳಿದ ಕೃತಿಗಳದ್ದು ಪರ್ವದ ಎತ್ತರ ಅಲ್ಲವೇ ಅಲ್ಲ. ಅವರ ‘ದಾಟು’ ಕೃತಿಯನ್ನು ಮಾತ್ರ ದಾಟಲಾಗದೇ ಅರ್ಧಕ್ಕೆ ಬಿಟ್ಟಿದ್ದೇನೆ. ಕಾದಂಬರಿಕಾರನಾಗಿ ಭೈರಪ್ಪನವರ ಸ್ವಾಮಿತ್ವವನ್ನು ಕಂಡದ್ದೇನಿದ್ದರೂ ಪರ್ವದಲ್ಲಿ. ಇದೀಗ ಉತ್ತರಕಾಂಡಕ್ಕೆ ಅಂಥದೇ ಲೋಕೋತ್ತರ ಕಾವ್ಯವೊಂದರ ಮರುನಿರ್ಮಾಣವೇ ವಸ್ತುವಾದ್ದರಿಂದ ಅವರ ಉಳಿದ ಕಾದಂಬರಿಗಳ ಓದಿಗಿಂತ ಭಿನ್ನವಾಗಿರಬಹುದೆಂಬ ನಿರೀಕ್ಷೆಯಂತೂ ಇತ್ತು.

ಉತ್ತರಕಾಂಡದ ಸೀತೆ ಎಲ್ಲವನ್ನೂ ತನ್ನ ಕಣ್ಣಲ್ಲಿ ಕಾಣುತ್ತ, ಕಾಣಲಾಗದ್ದನ್ನು ಅವರಿವರಿಂದ ಕೇಳುತ್ತ, ಹಾಗೆ ಕೇಳಿದ್ದನ್ನು ತನ್ನ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುತ್ತ ಹೋಗುತ್ತಾಳೆ. ಸೀತೆಯೇ ಕೇಂದ್ರವಾಗಿದ್ದರಿಂದ ಉತ್ತಮಪುರುಷದ ನಿರೂಪಣೆಯೇ ಕಾದಂಬರಿಯುದ್ದಕ್ಕೂ. ನಿರೂಪಣೆಗಳಲ್ಲಿ ಅತ್ಯಂತ ಪ್ರಬಲವಾದ್ದು ಉತ್ತಮಪುರುಷದ ನಿರೂಪಣೆಯೆಂಬುದು ನನ್ನ ಅನಿಸಿಕೆ. ಸಹಜವಾಗಿಯೇ ಆಕೆ ಕಟ್ಟಿಕೊಡುವ ಕಥೆ ಶಕ್ತವಾಗಿದೆ.

ರಾಮಾಯಣದ ಮರುನಿರೂಪಣೆಯನ್ನು ಅದೆಷ್ಟು ಭಾರತೀಯ ಕವಿಗಳು ಮಾಡಿಲ್ಲ ಹೇಳಿ. ಅದು ರಘುವಂಶದ ಕಾಲಿದಾಸನಿರಬಹುದು, ಉತ್ತರರಾಮಚರಿತದ ಭವಭೂತಿಯಿರಬಹುದು, ಶ್ರೀರಾಮಾಯಣದರ್ಶನದ ಕುವೆಂಪುವಿರಬಹುದು- ಎಲ್ಲರೂ ‘ಅಪಾರೇ ಕಾವ್ಯಸಂಸಾರೇ ಕವಿರೇಕಃ ಪ್ರಜಾಪತಿಃ’ ಅನ್ನುವುದನ್ನು ಮತ್ತೆ ಮತ್ತೆ ಸತ್ಯ ಮಾಡಿದ್ದಾರೆ. ಅದೇ ಸಾಲಿಗೆ ಉತ್ತರಕಾಂಡದ ಭೈರಪ್ಪ ಕೂಡ ಸೇರುತ್ತಾರೆ. ರಾಮಾಯಣದ ವಸ್ತುವನ್ನು ಕಾವ್ಯದ ಹದಕ್ಕೆ ಮಾಗಿಸುವಾಗಿನ ಇವರೆಲ್ಲರ ಸ್ವಾತಂತ್ರ್ಯವು ಪ್ರಜಾಪತಿಯ ಸೃಷ್ಟಿಶೀಲತೆಯಷ್ಟೇ ಮಹತ್ತ್ವದ್ದು ನಿಜ.

ಕಾಲಿದಾಸನ ರಾಮನೂ ‘ಸೀತೆಗಾಗಿ ಮಾಡಿದ ಯುದ್ಧವಲ್ಲ ಅದು, ನನ್ನ ಅಹಂತೆಯನ್ನು ಕೆಣಕಿದವನಿಗೆ ಕೊಟ್ಟ ಉತ್ತರವಷ್ಟೇ’ ಅನ್ನುವ ಮಾತಾಡುತ್ತಾನೆ. (‘ರಕ್ಷೋ ವಧಾಂತೋ ನ ಚ ಮೇ ಪ್ರಯಾಸಃ…..’). ಸೀತೆಗಾಗಿಯೇ ರಾಮ ಲಂಕೆಯನ್ನು ಪುಡಿಗೈದನೆಂಬ ಆದರ್ಶ ಪ್ರೇಮದ ವಾದಕ್ಕೆ ಮೊದಲ ಪೆಟ್ಟು ಬಹುಶಃ ಇದೇ ಇದ್ದೀತು. ಭವಭೂತಿಯ ಉತ್ತರಾಮಚರಿತವಂತೂ ಪೂರ್ಣ ರಾಮಾಯಣವನ್ನು ಕರುಣರಸದ ಮೇರು ಶೃಂಗಕ್ಕೊಯ್ದು ನಿಲ್ಲಿಸುತ್ತದೆ. ಅಲ್ಲಿ ದುಃಖದ ಅತಿರೇಕದಿಂದಾಗಿ ಬಹುತೇಕ ಪಾತ್ರಗಳು ಅಡಿಗಡಿಗೆ ಮೂರ್ಛೆ ಬಂದು ಬೀಳುತ್ತವೆ. ಮೊದಲ ಓದಿಗೆ ಈ ಪರಿಯ ದುಃಖದ ಅಭಿವ್ಯಕ್ತಿಯು ಅಲೋಕಸಾಧಾರಣವಾದ್ದು ಎಂದು ಯಾರಿಗಾದರೂ ಅನ್ನಿಸುವುದು ಸಹಜ. ಇನ್ನು ಕುವೆಂಪುರವರಂತೂ ‘ಕೊಲೆಯ ಕಥೆಯಲ್ಲವಿದು, ಕಲೆಯ ಕಥೆಯು’ ಎಂದೇ ಆರಂಭಿಸಿ ತಮ್ಮ ಕಾವ್ಯದ ಉದ್ದಕ್ಕೂ ರೋಮಾಂಚದ ಉತ್ತುಂಗವನ್ನು ಸೃಷ್ಟಿಸಿಕೊಡುತ್ತಾರೆ. ಕಾವ್ಯಸತ್ಯಗಳನ್ನು ನಿರ್ಮಿಸಿಕೊಂಡು ರಮಿಸುವ ಮಾನವ ಮನಸಿನ ಸ್ವಭಾವಕ್ಕೆ ಕುವೆಂಪು ಅವರ ಕಾವ್ಯದುದ್ದಕ್ಕೂ ದಂಡಿಯಾಗಿ ಸಿಗುತ್ತದೆ ಸರಕು.

ಈ ಮೇಲಿನ ಮೂವರಿಗೂ ‘ದಿವ್ಯ’ ದ ಸ್ಪರ್ಷದಿಂದ ಪೂರ್ತಿಯಾಗಿ ಬಿಡಿಸಿಕೊಳ್ಳುವ ಅಗತ್ಯ ಕಂಡಿರಲಿಲ್ಲವೇನೋ. ದಿವ್ಯವಾದ್ದನ್ನು (ಅಥವಾ ಅಲೌಕಿಕವಾದ್ದನ್ನು) ಇಟ್ಟುಕೊಂಡೇ ಹೊರಟ ಈ ಮೂವರಿಗೆ ರಸಸೃಷ್ಟಿಯು ಪ್ರಾಯಃ ಕಷ್ಟತಮವಾದ್ದಾಗಿರಲಿಲ್ಲ. ಮಾನವ ಮನಸಿನ ಸ್ವಭಾವದಂತೆ ಲೋಕಾತೀತವಾದ್ದು ನಮ್ಮನ್ನು ಅತ್ಯಂತ ಬೇಗ ರಸೋನ್ನತಿಗೆ ಕೊಂಡೊಯ್ಯುತ್ತದೆ. ಉತ್ತರಕಾಂಡವು ಈ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವುದಿದ್ದರೆ ಅದು ತನ್ನ ನೆಲಕ್ಕಂಟಿಯೇ ನಡೆಯುವ ಸ್ವಭಾವದಿಂದಾಗಿ. ನೆಲವನ್ನೆಂದಿಗೂ ಬಿಡೆನೆಂಬ ಶಪಥ ಮಾಡಿಯೇ ಹೊರಟಂತಿದೆ ಕಥೆ. ನೆಲದ ಮಗಳ ಕಣ್ಣಲ್ಲಿ ಕಾಂಬ ಕಥೆಯಾದ್ದರಿಂದ ನೆಲವ ಬಿಡೆನೆಂಬ ಶಪಥ ಇಲ್ಲಿ ಸಹಜಜವೂ ಹೌದು. ಅದೇನೇ ಆದರೂ ರಾಮಾಯಣದ ಕಥೆಯನ್ನು ದಿವ್ಯದ ಹಂಗು ತೊರೆದು ಬರೆಯುವೆನೆಂಬುದು ಸಾಹಸಾತ್ಮಕ ನಿರ್ಣಯ. ಮಹಾಭಾರತವನ್ನೂ ನೆಲಕ್ಕೆ ಬಿಗಿದು ಬಂಧಿಸುವ ಪ್ರಯತ್ನ ಪರ್ವದಲ್ಲಿದೆಯಾದರೂ ಮಹಾಭಾರತದ ಕಥೆಗಿರುವ ಸ್ವಭಾವಕ್ಕೂ ರಸಸೃಷ್ಟಿಗೂ ಅವಿನಾಭಾವ ಸಂಬಂಧವಿರುವುದರಿಂದ ಅದು ಇಷ್ಟೊಂದು ದೊಡ್ಡ ಸವಾಲಾಗಿರಲಿಕ್ಕಿಲ್ಲ. ಆದರೆ ರಾಮಾಯಣದ ಕಥೆ ಹಾಗಲ್ಲ. ದಿವ್ಯವನ್ನು ತೊರೆದರೆ ಇಲ್ಲಿ ಉಳಿಯುವ ರಸವೆಂದರೆ ಕರುಣ ಮಾತ್ರ, ಅದ್ಭುತವಂತೂ ಮಣ್ಣುಗೂಡಿ ಹೋಗುತ್ತದೆ. ಶೃಂಗಾರ, ವೀರ, ಅದ್ಭುತ, ಭೀಭತ್ಸ, ರೌದ್ರಗಳನ್ನೆಲ್ಲ ದಿವ್ಯದ ಹೊರತಾಗಿಯೂ ಮಹಾಭಾರತಲ್ಲಿ ಹಿಡಿದುಕೊಟ್ಟಂತೆ ಇಲ್ಲಿ ಊಹೂಂ. ‘ಏಕೋ ರಸಃ ಕರುಣ ಏವ..’ ಎಂಬ ಮಾತು ರಾಮಾಯಣದ ಕಥೆಗೆ ಹೇಳಿ ಮಾಡಿಸಿದಂಥದು. ಅದು ಬಿಟ್ಟರೆ ಶಾಂತವನ್ನು ದುಡಿಸಿಕೊಳ್ಳಬಹುದಷ್ಟೆ. ಹಾಗೊಂದು ಮಿತಿಗೆ ತಾನು ಬದ್ಧವಾಗುತ್ತೇನೆಂಬ ಅರಿವಿದ್ದೂ ದಿವ್ಯವನ್ನು ಬದಿಗಿಟ್ಟು ಉತ್ತರಕಾಂಡದ ಕಥೆ ಬರೆದಿದ್ದು ಬರಹಗಾರನ ಸಾಹಸವಲ್ಲದೆ ಮತ್ತೇನಲ್ಲ.

ಉದಾಹರಣೆಗೆ ನೋಡಿ- ಕುವೆಂಪುರವರ ರಾಮನ ಕಾಲಿಗೆ ತಾಕಿದ ಕಲ್ಲೊಂದು ಅಹಲ್ಯೆಯಾಗಿ ಮೈತಳೆದ ಕ್ಷಣದಲ್ಲಿ, ಆ ವಿಸ್ಮಯಕ್ಕೆ ಬೆರಗಾಗಿ ಸ್ವತಃ ರಾಮನೇ ಆ ಹೆಣ್ಣು ಜೀವಕ್ಕೆ ಅರೆಕ್ಷಣ ಶಿರಬಾಗುತ್ತಾನೆ. ‘ತನ್ನ ಕಾವ್ಯಕೆ ತಾಂ ಮಹಾಕವಿ ಮಣಿವಂತೆ!’ ಎಂಬ ಉಪಮೆಯನ್ನೂ ಕವಿ ಕೊಡುತ್ತಾರೆ. ಆ ಬಿಂದುವಿನಲ್ಲಿ ಸಹೃದಯನಿಗೆ ಹೊತ್ತಿಕೊಳ್ಳುವ ರೋಮಾಂಚವಿದೆಯಲ್ಲ ಅದು ಅಮೋಘವಾದ್ದು. ಇದು ಅತ್ಯಂತ ಶಕ್ತ ಅಭಿವ್ಯಕ್ತಿ ಎಂಬುದು ಅದಕ್ಕೆ ಕಾರಣವಾದರೂ ಅದಕ್ಕೂ ಆಧಾರಭೂತವಾದ್ದು ಅಹಲ್ಯೆಯು ಕಲ್ಲಾಗಿದ್ದಳೆಂಬ ಅಲೌಕಿಕ ಕಾವ್ಯಸತ್ಯ. ಆದರೆ ಉತ್ತರಕಾಂಡದಲ್ಲಿ ಕಲ್ಲೇ ಆಗದ ಅಹಲ್ಯೆಯನ್ನು ಯಾವ ರಾಮನ ಕಾಲಿಗೆ ಸೋಕಿಸಿಯೂ ಹೆಣ್ಣು ಮಾಡಲು ಸಾಧ್ಯವಿಲ್ಲ. ಮತ್ತಲ್ಲಿ ಅದ್ಭುತರಸದ ಉನ್ನತಿಯೂ ಅಸಂಭವ. ಲೋಕೋತ್ತರ ಕಾವ್ಯವೊಂದನ್ನು ನೆಲಕ್ಕೆ ಬಾಗಿಸುವಾಗ ಸೃಷ್ಟಿಕರ್ತನಿಗೆ ಎದುರಾಗಬಹುದಾದ ಬಲುದೊಡ್ಡ ಸವಾಲು ಇಂಥವು. ಉತ್ತರಕಾಂಡ ಅದಕ್ಕೆಲ್ಲ ಎದೆಗೊಡುತ್ತದೆ. ಸೀತೆಯನ್ನು ಕದ್ದೊಯ್ಯಲು ಪುಷ್ಪಕವಿಮಾನದಲ್ಲಿ ಬಾರದ ರಾವಣ, ರಾವಣನನ್ನು ತಡೆಯಲೆಂದು ಬಾರದ ಜಟಾಯು, ಸೀತೆಯನ್ನು ಹಡುಕಲೆಂದು ಸಮುದ್ರಲಂಘನ ಮಾಡದ ಕಪಿ, ಹತ್ತು ತಲೆಯಿರದ ರಾವಣ ಮತ್ತು ಎಲ್ಲಕ್ಕಿಂತ ದೊಡ್ಡದೆಂದರೆ ಸೇತುವೆಯನ್ನೇ ಕಟ್ಟದ ರಾಮ! ಇಷ್ಟೆಲ್ಲ ನೆಲಕ್ಕಂಟಿಕೊಂಡು ನಡೆಯುವ ಕಥೆ ಉತ್ತರಕಾಂಡ. ಇದೆಲ್ಲದರ ಮಧ್ಯೆ ವಿಲಕ್ಷಣನೆಂದರೆ ರಾಮ. ಅವ ಅತ್ತ ನೆಲದವನೂ ಅಲ್ಲದೆ ಇತ್ತ ದಿವ್ಯನೂ ಅಲ್ಲದೆ ಹೆಣಗಾಡಿದನಾ ಅನ್ನಿಸುವಂತಿದ್ದಾನೆ. ಉತ್ತರಕಾಂಡದ ಮಟ್ಟಿಗೆ ಮಾತ್ರವೇ ಈ ಪ್ರಶ್ನೆ ಯಾಕೆಂದರೆ ನೆಲದ ಜೀವಗಳು ಕೈಗೊಳ್ಳದ ನಿರ್ಣಯವನ್ನು ಕೈಗೊಳ್ಳುತ್ತಾನೆ ರಾಮ. ರಾಮನನ್ನು ಲೋಕೋತ್ತರವಾಗಿಸಲು ಹೊರಟಿದ್ದರೆ ಈ ಪ್ರಶ್ನೆ ಬರುತ್ತಿರಲಿಲ್ಲ, ಆದರೆ ಇಲ್ಲಿ ರಾಮನು ನೆಲದ ಜೀವವಾಗಿರಬೇಕಾದವನು.

ಲೋಕದ ಯಾವ ಹರಿವಿಗೂ ಕರಗದೊಂದು ಕಲ್ಲ ಬಂಡೆ ರಾಮ. ಧರ್ಮವೆಂದರೆ, ಸತ್ಯವೆಂದರೆ, ಅವನೇ ಹೇಳುವಂತೆ ಅಚಲವಾದ, ಬದಲಾಗದ ತ್ರಿಕಾಲಿಕೈಕರೂಪವಾದ ಸಂಗತಿಯಿರಬಹುದು. ಆದರೆ ಅಂಥದೊಂದು ಸತ್ಯದ್ರವ್ಯವು ಲೌಕಿಕ ಬದುಕಿಗೆ ಒದಗುವಂಥದಲ್ಲ; ಲೋಕದ ಬದುಕಿಗೆ ಲೋಕದ ಸತ್ಯಗಳೇ ಆಧಾರ. ರಾಮನ ಧರ್ಮದ ವ್ಯಾಖ್ಯಾನ ಸೀತೆಗೆ ಹೇಗೆ ಅರ್ಥವಾಗಲಿಲ್ಲವೋ ಹಾಗೇ ಯಾರಿಗೂ ಅರ್ಥವಾದಂತೆ ಕಾಣುವುದಿಲ್ಲ. ಅರ್ಥವಾದಂತೆ ಕಂಡರೂ ಪ್ರಶ್ನೆಯನ್ನಂತೂ ಉಳಿಸಿಹೋಗುತ್ತಾನೆ ಆತ. ತ್ರಿಕಾಲಾಬಾಧಿತ ಸತ್ಯವೊಂದಕ್ಕಾಗಿ ನಿಂತುಕೊಳ್ಳುವ ಪುರುಷನ ಸುತ್ತಲಿನವರ ಲೌಕಿಕಸಾಧಾರಣ ಬದುಕು ಅದೆಂಥ ದಾರುಣವಾಗಿರುತ್ತದೆ ಎಂಬುದಕ್ಕೆ ಕನ್ನಡಿ ಹಿಡಿದ ಕೃತಿ ಇದು. ‘ಸ್ವಯಂ ಹಿಂಸೆ ಮತ್ತು ಅವಲಂಬಿತರ ಹಿಂಸೆಯೇ ನಿನ್ನ ಧರ್ಮದ ತಿರುಳೋ?’ ಎಂದೊಮ್ಮೆ ಲಕ್ಷ್ಮಣನಿಂದ ಕೇಳಿಸಿಯೂ ಇದ್ದಾರೆ ಕಾದಂಬರಿಕಾರ. ಧರ್ಮವು ಮೂರು ಕಾಲಿನಲ್ಲಿ ನಿಂತುಕೊಂಡಿತ್ತೆನ್ನಲಾದ ತ್ರೇತಾಯುಗದಲ್ಲೆ ಆದರ್ಶಕ್ಕೆ ಈ ಕಥೆಯಾದರೆ ಕಲಿಯುಗದ ಕಥೆಯೇನಿದ್ದೀತೋ!

ಕಾದಂಬರಿಯಲ್ಲಿ ಪ್ರೇಮವೆಂಬ ದ್ರವ್ಯದ ಅಸತ್ಯತೆಯನ್ನು ಸೀತೆ ಮಥಿಸಿ ಅರಿತುಕೊಳ್ಳುತ್ತಾಳಲ್ಲ, ಆ ಭಾಗ ತಾತ್ತ್ವಿಕವಾಗಿ ಬಲು ದೃಢವಾದ್ದು ಮತ್ತು ಪ್ರಭಾವಿಯಾದ್ದು. ಪ್ರೇಮವೆಂಬುದು ಈ ಲೋಕದ ಅತ್ಯಂದ ಸುಂದರವಾದ ಅಸತ್ಯ. ಅದು ಸ್ವಾರ್ಥದ ಉತ್ಪನ್ನ. ಉಪನಿಷತ್ತಿನ ವಾಕ್ಯಗಳು ಸೀತೆಯ ಈ ಚಿಂತನೆಗೆ ಒತ್ತಾಸೆಯಾಗಿ ನಿಲ್ಲುತ್ತವೆ. (ಹಾಗಿದ್ದೂ ಪ್ರೇಮವಿಲ್ಲದೆ ಜೀವನವಿಲ್ಲೆಂಬುದು ಮತ್ತದೇ ಲೋಕಸತ್ಯ.). ಕಾದಂಬರಿಯಲ್ಲಿ ಇದು ಅಸಹಾಯ ವೇದಾಂತವಲ್ಲ, ಬದಲಿಗೆ ಅನುಭವದಿಂದೆದ್ದ ತಿಳಿವು. ಧರ್ಮವೆಂದರೇನೆಂಬುದಕ್ಕೆ ಲೋಕೋನ್ನತ ಉದಾಹರಣೆಯಾಗಿ ನಿಲ್ಲಲೆಂಬಂತೆ ಹೊರಟ ರಾಮನ ಪ್ರೇಮವೂ ಸಹ ಸ್ವಾರ್ಥದ್ದೇ ಚಂದದ ರೂಪವಾಗಿ ತೋರುವ ಕಾದಂಬರಿಯ ಘಟ್ಟವಿದೆಯಲ್ಲ, ಅಲ್ಲಿ ಪ್ರಾಯಃ ರಾಮನು ಒಂದು ಕ್ಷಣಕ್ಕೆ ನೆಲದತ್ತ ಬಾಗಿದನೇನೋ. ಆದರೆ ಮುಂದುವರಿಯುವ ಮೌನ, ನಿಶ್ಚಲ ವ್ಯಕ್ತಿತ್ವಗಳು ಅನತಿಕಾಲದಲ್ಲಿ ಮತ್ತೆ ಅವನನ್ನು ನೆಲದವನಲ್ಲವೆಂಬಂತೆ ನಿಲ್ಲಿಸಿಬಿಡುತ್ತವೆ. ಧರ್ಮಸಭೆಯಲ್ಲಿ ಸೀತೆಯ ನಡೆಯಿಂದ ಇನ್ನಷ್ಟು ಮತ್ತಷ್ಟು ಅಂತರ್ಮುಖಿಯಾಗುತ್ತಾನೆ. ತನ್ನ ನಿರ್ಧಾರಗಳ ಕುರಿತಾದ ಹೆಚ್ಚಿನ ವಿವರಣೆಯಿಲ್ಲದೆ ರಾಮ ಮರೆಯಾಗುತ್ತಾನೆ. ಸೀತೆ ಮಾತ್ರ ‘ಆತ್ಮನಸ್ತು ಕಾಮಾಯ ಪತಿಃ ಪ್ರಿಯೋ ಭವತಿ’ ಎಂದು ಪ್ರೇಮದ ಅಸತ್ಯತೆಯನ್ನು ಅರಿವಾಗಿಸಿಕೊಂಡ ಬಳಿಕವೂ ತಾನು ಆ ಪ್ರೇಮವನ್ನು ತೊರೆದು ಬದುಕಲಾರೆ ಎಂಬಂತೆ, ನೆಲದವಳಾಗಿ ತನ್ನ ಬದುಕು ಅಸತ್ಯವೇ ಆದರೂ ಪ್ರೇಮಕ್ಕೇ ಜೋತುಬೀಳುವುದೆಂಬುದನ್ನು ತೋರಿಸುತ್ತಾಳೆ. ನೆಲಕ್ಕೇ ಸೇರುತ್ತಾಳೆ.

ಕರುಣವೆಂಬ ರಸವನ್ನಲ್ಲದೆ ಬೇರೆ ರಸವನ್ನು ಹೊತ್ತಿಸಬೇಕೆಂದು ಧರ್ಮಸಭೆ ಕರೆದಿದ್ದ ಕವಿ, ತನ್ನ ಕೈಗೆ ಮೀರಿದ್ದು ಇವೆಲ್ಲ ಎಂಬಂತೆ ಕೈ ಚೆಲ್ಲುತ್ತಾನೆ. ಗಹನವಾದ ತಾತ್ತ್ವಿಕ ಜಿಜ್ಞಾಸೆಗಳಿಗೆ ರಾಮಾಯಣದಲ್ಲಿ ಯಾವೆಲ್ಲ ಜಾಗಗಳು ಉಳಿದುಕೊಂಡಿವೆಯೋ ಅದೇ ಜಾಗಗಳು ಇಲ್ಲೂ ಇವೆ, ಇನ್ನೂ ಇವೆ. ಲೌಕಿಕಾಲೌಕಿಕಗಳು ಒಂದಾಗಿ ಬದುಕಿಗೆ ಒದಗವು ಎಂಬುದೇ ರಾಮಾಯಣದ ಸಂದೇಶವೇ? ರಾಮನೆಂದರೆ ‘ವಿಗ್ರಹವಾನ್ ಧರ್ಮಃ’ ಎಂದು ಪ್ರಸಿದ್ಧಿಯಿದೆಯಲ್ಲ, ಅದು ಮಾನವ ಮಾತ್ರನಿಗೆ ಎಂದೆಂದಿಗೂ ಆದರ್ಶದ ಮಟ್ಟದ್ದಾಗಿ ಮಾತ್ರ ಉಳಿಯಬಲ್ಲ, ಎಂದಿಗೂ ವಾಸ್ತವದಲ್ಲಿ ಹದಗಾಣದ ಸಂಗತಿಯೇ? ಈ ಪ್ರಶ್ನೆಗಳಿಗೆ ಎಸ್ ಎಲ್ ಭೈರಪ್ಪರವರ ಉತ್ತರಕಾಂಡವು ತನ್ನ ದನಿಯಲ್ಲಿ ‘ಹೌದು’ ಎಂದುತ್ತರಿಸಿದಂತೆ ನನಗೆ ಭಾಸವಾಯ್ತು. ಅಂತೂ ನೆಲದ ಪಾತಳಿಗೆ ಸಮಾನಾಂತರವಾಗಿ ಹರಿದ ಉತ್ತರಕಾಂಡದಲ್ಲೂ ಶ್ರೀರಾಮ ನೆಲಕ್ಕೆ ಒದಗಲಿಲ್ಲ. ರಾಮಾಯಣವು ಎಂದೆಂದಿಗೂ ಮುಗಿಯದ ಕಥೆ ಎಂಬುದು ಸತ್ಯವೇನೋ.

1 ಟಿಪ್ಪಣಿ Post a comment
  1. Mallappa
    ಫೆಬ್ರ 7 2017

    ವಿಮರ್ಶೆ ಅರ್ಥವಾಗದೆ. “ದಿವ್ಯ”ದ ಕವಚವಿಲ್ಲದೇ, ನೆಲದ ಘಾಟು ವಾಸನೆ ಹೀರ ಹೊರಟ ಕವಿ ಸಾಹಸ ಮೆಚ್ಚತಕ್ಕದ್ದಾಗಿದೆ. ಇದು ಪರ್ವವೆನೂ ಅಲ್ಲ. ಆದರೂ ಭೈರಪ್ಪನವರು ಕಾವ್ಯದ ಉಳಿದ ಅದರಲ್ಲೂ ಉರ್ಮಿಳೆಯತ್ತ ಸ್ವಲ್ಪಮಟ್ಟಿಗೆ ಕಣ್ಣು ಹಾಕಬಹುದಿತ್ತು. ಮಂದ್ರ ಬರೆದವರು ಉತ್ತರಕಾಂಡದ ಕಾಂಡದಲ್ಲೇ ನಿಂತಂತಾಗಿದೆ. ಸಾರ್ಥದಂತೆ ಇಲ್ಲಿ ಕಥೆಯ ಚಕ್ರ ಉರಳಿಲ್ಲ. ಆಳದ ಅಧ್ಯಯನ ಮಾಡದೇ ಭೈರಪ್ಪ ಏನನ್ನು ಬರಯುವವರಲ್ಲ. ಆದರೂ ಎಲ್ಲೋ ಕೊರತೆ ಅನಿಸುತ್ತದೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments