ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 7, 2017

10

ಭೈರಪ್ಪನವರ ಬದುಕು ನಮಗೇಕೆ ಮಾದರಿ

‍ನಿಲುಮೆ ಮೂಲಕ

– ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯ ಗ್ರಂಥಪಾಲಕರು
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ
ಬಾಗಲಕೋಟ

imagesಎಸ್.ಎಲ್. ಭೈರಪ್ಪ ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರು. ಇಪ್ಪತ್ತೈದು ಕಾದಂಬರಿಗಳು, ಆತ್ಮವೃತ್ತಾಂತ, ನಾಲ್ಕು ಸಾಹಿತ್ಯ ಚಿಂತನ ಗ್ರಂಥಗಳು ಮತ್ತು ಎರಡು ಸಂಪಾದಿತ ಕೃತಿಗಳ ಲೇಖಕರಾದ ಎಸ್.ಎಲ್.ಭೈರಪ್ಪನವರು ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲೂ ಓದುಗರ ದೊಡ್ಡ ಸಮೂಹವನ್ನು ಹೊಂದಿರುವ ವಿಶಿಷ್ಟ ಬರಹಗಾರ. ಭೈರಪ್ಪನವರ ಕಾದಂಬರಿಗಳು ತೆಲುಗು, ಮರಾಠಿ, ಹಿಂದಿ ಭಾಷೆಗಳೂ ಸೇರಿ ಭಾರತದ ಎಲ್ಲ 14 ಭಾಷೆಗಳಿಗೂ ಅನುವಾದಗೊಂಡಿವೆ. ಭೈರಪ್ಪನವರ ಬದುಕು ಮತ್ತು ಸಾಹಿತ್ಯ ಕುರಿತೇ ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಬೇರೆ ಬೇರೆ ಲೇಖಕರಿಂದ ರಚನೆಗೊಂಡಿರುವುದು ಇನ್ನೊಂದು ವಿಶೇಷ. ಕಾಲಕಾಲಕ್ಕೆ ತಮ್ಮ ಬರವಣಿಗೆಯಿಂದ ಭೈರಪ್ಪನವರು ಕನ್ನಡದ ಓದುಗರನ್ನು ಚಿಂತನೆಗೆ ಹಚ್ಚುತ್ತಲೇ ಬಂದಿರುವರು. ಅವರ ಕೃತಿಗಳು ಮನೋರಂಜನೆಗಾಗಿಯೋ ಇಲ್ಲವೇ ಸಮಯ ಕಳೆಯುವುದಕ್ಕಾಗಿಯೋ ಓದುವಂಥ ಪುಸ್ತಕಗಳ ಸಾಲಿನಲ್ಲಿ ನಿಲ್ಲುವ ಕೃತಿಗಳಲ್ಲ. ಭೈರಪ್ಪನವರ ಕಾದಂಬರಿಯೊಂದನ್ನು ಓದಿದ ನಂತರ ಅದು ಓದುಗನ ಮನಸ್ಸನ್ನು ಅನೇಕ ದಿನಗಳವರೆಗೆ ಕಾಡುತ್ತ ಹೊಸ ಚಿಂತನೆಯನ್ನು ಸೃಷ್ಟಿಸಿ ಬದುಕಿನ ಪರಿವರ್ತನೆಗೆ ಕಾರಣವಾಗುತ್ತದೆ.

ಸಣ್ಣ ವಯಸ್ಸಿನಲ್ಲೆ ತಾಯಿಯನ್ನು ಕಳೆದುಕೊಂಡು, ಸಾಲು ಸಾಲು ಸಾವುಗಳಿಗೆ ಸಾಕ್ಷಿಯಾಗಿ, ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಹುಡುಗನೊಬ್ಬ ತನ್ನ ಪರಿಶ್ರಮ ಮತ್ತು ವ್ಯಕ್ತಿತ್ವದಿಂದ ಕನ್ನಡದ ಮೇರು ಸಾಹಿತಿಯಾಗಿ ಬೆಳೆದ ಕಥೆ ತುಂಬ ಅನನ್ಯವಾದದ್ದು. ಕನ್ನಡ ಸಾಹಿತ್ಯ ಲೋಕದಲ್ಲಿ ಬಹುದೊಡ್ಡ ಓದುಗರ ಸಮೂಹವನ್ನು ತನ್ನ ಕಾದಂಬರಿಗಳಿಗೆ ದಕ್ಕಿಸಿಕೊಂಡ ಎಸ್.ಎಲ್.ಭೈರಪ್ಪನವರು ತಾವು ಚಿತ್ರಿಸಿದ ಪಾತ್ರಗಳಂತೆಯೇ ಘನವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ವ್ಯಕ್ತಿತ್ವದಿಂದ ಮಾತ್ರ ವ್ಯಕ್ತಿ ದೊಡ್ಡವನಾಗಬಲ್ಲ ಎನ್ನುವುದಕ್ಕೆ ಅವರ ಬದುಕಿನ ಪ್ರಸಂಗವೊಂದು ಹೀಗಿದೆ ‘ನಾನು ಮೈಸೂರು ಸೇರಿದ ಮೇಲೆ ಭೈರಪ್ಪ ಎಂಬ ಹೆಸರು ತೀರ ಹಳ್ಳಿಯದು ತುಸು ನವೀನವಾಗಿರುವ ಹೆಸರಿಗೆ ಬದಲಿಸಿಕೊಳ್ಳಬೇಕೆಂದು ಒಬ್ಬ ಸ್ನೇಹಿತ ಸೂಚಿಸಿದ. ನನಗೂ ಅದು ನಿಜವೆನ್ನಿಸಿತು. ಉದ್ದಕ್ಕೂ ಇದ್ದ ಹಣದ ಅಡಚಣೆಯಲ್ಲಿ ತಿಂಗಳು ತಿಂಗಳಿಗೆ ವರ್ಷ ವರ್ಷಕ್ಕೆ ಅದು ಮುಂದೆ ಹೋಗಿ ಕೊನೆಗೆ ತತ್ವಶಾಸ್ತ್ರದಲ್ಲಿ ಆನರ್ಸ್ ಓದುವ ಹೊತ್ತಿಗೆ ಇನ್ನೊಂದು ವಿಚಾರ ಬಂತು. ನನ್ನ ಸ್ನೇಹಿತನೇ ಆಗಿದ್ದ ಒಬ್ಬ ಅಮಾಸೆಗೌಡ ಅಮರನಾಥನೆಂದು ಮಾಡಿಕೊಂಡಿದ್ದನ್ನು ನೋಡಿದೆ. ಕರಿಯಪ್ಪ ಎಂಬ ಇನ್ನೊಬ್ಬನು ಕನಕರಾಜನಾದ. ಶಿವಪ್ಪನು ಶಿವಪ್ರಸಾದನಾದ. ಇವರೆಲ್ಲ ಹಳ್ಳಿಯವರು ನಗರಕ್ಕೆ ಬಂದವರು. ಕಾಲೇಜು ಸೇರಿರುವರು. ತಮ್ಮ ಹೆಸರಿನ ಬಗೆಗೆ ಆ ಹೆಸರು ಸೂಚಿಸುವ ಹಿನ್ನೆಲೆಯ ಬಗೆಗೆ ಹೀನಾಯಭಾವ ಬೆಳೆದು ಹೀಗೆ ಬದಲಿಸಿಕೊಳ್ಳುತ್ತಿದ್ದಾರೆಂದು ಅರ್ಥವಾಯಿತು. ಆದರೆ ಹೆಸರಿನಲ್ಲೇನಿದೆ? ಅಮರನಾಥನೆನ್ನಿಸಿಕೊಂಡದ್ದರಿಂದ ಅಮಾಸೆಗೌಡನ ಬಣ್ಣ ಬಿಳುಪಾಗಲಿಲ್ಲ. ಹೆಸರಿಗೆ ಮಹತ್ವ ತಂದುಕೊಂಡುವುದು ವ್ಯಕ್ತಿತ್ವವೇ ಹೊರತು ಹೆಸರು ವ್ಯಕ್ತಿತ್ವಕ್ಕೆ ಮೆರುಗು ಕೊಡುವುದಿಲ್ಲ ಎಂಬ ವಿಚಾರಗಳು ಮನಸ್ಸಿನಲ್ಲಿ ಹುಟ್ಟಿ ನನ್ನ ಹೆಸರನ್ನು ಬದಲಿಸಲಿಲ್ಲ. ಭೈರಪ್ಪ ಎನ್ನುವ ಹೆಸರನ್ನೇ ಉಳಿಸಿಕೊಂಡೆ’.

ಭೈರಪ್ಪನವರು ತತ್ವಶಾಸ್ತ್ರದ ವಿದ್ಯಾರ್ಥಿ ಮತ್ತು ತತ್ವಶಾಸ್ತ್ರದ ಬೋಧನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರು. ವೃತ್ತಿ ನಿಮಿತ್ಯ ದೂರದ ಗುಜರಾತನಲ್ಲಿದ್ದು ಭೀಮಕಾಯ ಮತ್ತು ವಂಶವೃಕ್ಷ ಕಾದಂಬರಿಗಳನ್ನು ಬರೆದು ಲೇಖಕರಾಗಿ ಗುರುತಿಸಿಕೊಂಡಿದ್ದ ಭೈರಪ್ಪನವರಿಗೆ ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ಮಾಡುವ ಆಕಾಂಕ್ಷೆ. ತತ್ವಶಾಸ್ತ್ರ ವೃತ್ತಿಯ ಬೆಳವಣಿಗೆಗಾದರೆ ಸಾಹಿತ್ಯ ಆತ್ಮ ಸಂತೋಷಕ್ಕೆ ಎನ್ನುವ ಭಾವನೆ ಅವರದಾಗಿತ್ತು. ಒಂದು ಹಂತದಲ್ಲಿ ಎರಡೂ ಕ್ಷೇತ್ರಗಳಲ್ಲಿ ಬರವಣಿಗೆಯ ಕೃಷಿಯನ್ನು ಮುಂದುವರೆಸುವುದು ಅವರಿಗೆ ಸವಾಲಿನ ಕೆಲಸವಾಗುತ್ತದೆ. ಆಗ ಅವರೆದುರು ತತ್ವಶಾಸ್ತ್ರ ಇಲ್ಲವೇ ಸಾಹಿತ್ಯ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗುತ್ತದೆ. ಇಂಥದ್ದೊಂದು ದ್ವಂದ್ವ ಮತ್ತು ತಲ್ಲಣಗಳ ನಡುವೆ ತಾವು ಸಾಹಿತ್ಯವನ್ನು ಆಯ್ಕೆ ಮಾಡಿಕೊಂಡ ಘಟನೆಯನ್ನು ಭೈರಪ್ಪನವರು ಹೀಗೆ ವಿವರಿಸುತ್ತಾರೆ ‘ಸುಮಾರು ಒಂದು ತಿಂಗಳಿನಲ್ಲಿ ಹೊಳೆಯತೊಡಗಿತು. ಕಲೆಯ ಹುಟ್ಟು, ಗುರಿ, ಸ್ವರೂಪ, ವಿಧಾನಗಳ ಬಗೆಗೆ ಸುಮಾರು ಹತ್ತು ವರ್ಷದಿಂದ ಒಂದೇ ಸಮನೆ ಓದುತ್ತಿದ್ದೀನಿ. ಪಿಎಚ್.ಡಿ ಈಗ ಡಿ.ಲಿಟ್ ಎಂದು ಅದನ್ನೇ ಬರೆಯುತ್ತಿದ್ದೀನಿ. ಅದು ಬೌದ್ಧಿಕ ಪ್ರಚೋದನೆ ಕೊಟ್ಟಿದೆ. ಡಿಗ್ರಿ ಕೊಟ್ಟಿದೆ. ರೀಡರ್ ಹುದ್ದೆಯ ಅವಕಾಶವನ್ನೂ ಅದು ಹೆಚ್ಚಿಸಿದೆ. ಆದರೆ ಅದರಲ್ಲಿ ರಸವಿರಲಿಲ್ಲ. ‘ವಂಶವೃಕ್ಷ’ದ ಮೂಲಕ ನಾನು ರಸವನ್ನು ಸೃಷ್ಟಿಸಿದ್ದೇನೆ. ಸೃಷ್ಟಿಯ ಆನಂದವನ್ನು ಅನುಭವಿಸಿದ್ದೇನೆ. ನಾನು ಸೃಜನಶೀಲ ಕಲಾವಿದನಾಗಬೇಕೋ ಅಥವಾ ಕಲಾಮೀಮಾಂಸಕನಾಗಬೇಕೋ? ಅವರಿವರ ಕಲಾಸಿದ್ಧಾಂತಗಳನ್ನು ಅಧ್ಯಯನ ಮಾಡಿ ಒಂದನ್ನು ಇನ್ನೊಂದರೊಡನೆ ಹೊಲಿಸಿ ವಿಮರ್ಶಿಸಿ ಥೀಸಿಸ್ ಬರೆದು ಇವೆಲ್ಲ ತೃತೀಯ, ಚತುರ್ಥ ದರ್ಜೆಯ ಕಸರತ್ತುಗಳು. ಬರೀ ಬರೆದು ಹೊರಹಾಕುವುದಲ್ಲ. ವಿಧಾನದಲ್ಲಿಯೂ ಸೂಕ್ಷ್ಮತೆ ಇರುವ ಕುಸರಿಗೆಲಸವಿರುವ ಪಾತ್ರಗಳ ಒಳಗನ್ನು ಪದರಪದರವಾಗಿ ತೋರಿಸುವ ರೀತಿಯಲ್ಲಿ ಬರೆಯಬೇಕು. ಬರವಣಿಗೆಯು ಕಲೆಯಾಗಬೇಕು ಎಂಬ ಬಯಕೆ ಹುಟ್ಟಿತು. ಆಳವಾದ ಚಿಂತನೆಗಳನ್ನೊಳಗೊಂಡ ಪ್ರತಿಯೊಬ್ಬ ಸಾಹಿತಿಗೂ ತತ್ವಶಾಸ್ತ್ರದ ಪರಿಚಯವಿದ್ದೇ ಇರುತ್ತದೆ. ನನಗೆ ತುಸು ವೃತ್ತಿಯ ಮಟ್ಟದಲ್ಲಿ ಆಗಿದೆ ಅಷ್ಟೆ. ನಾನು ತತ್ವಶಾಸ್ತ್ರದಲ್ಲಿ ಸೃಜನಾತ್ಮಕವಾಗಿ ಸೃಷ್ಟಿಸುವುದು ನನ್ನ ಮನೋಧರ್ಮದಲ್ಲಿಲ್ಲ. ನನ್ನದು ಭಾವ ಪ್ರಧಾನ ವ್ಯಕ್ತಿತ್ವ. ನಾನು ಸೃಜನಾತ್ಮಕವಾಗಬಹುದಾದದ್ದು ಸಾಹಿತ್ಯದಲ್ಲಿ ಮಾತ್ರ ಎಂಬುದನ್ನು ಒಂದು ಘಟ್ಟದಲ್ಲಿ ಅರ್ಥಮಾಡಿಕೊಂಡೆ. ಸಾಹಿತ್ಯವು ನನ್ನ ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮವಾಯಿತು. ಅದು ಅಪೇಕ್ಷಿಸಿದಂತೆ ನನ್ನ ಕಾಲ, ಚಿಂತನೆ, ವ್ಯವಸಾಯಗಳನ್ನೆಲ್ಲ ಬದಲಿಸಿಕೊಂಡೆ’.

ಹೀಗೆ ಕಾದಂಬರಿ ರಚನೆಯ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ ಬೈರಪ್ಪನವರಿಗೆ ತಮ್ಮ ಬರವಣಿಗೆ ಕುರಿತು ಸ್ವವ್ಯಾಮೋಹವಾಗಲಿ ಇಲ್ಲವೇ ಪಕ್ಷಪಾತದ ಗುಣವಾಗಲಿ ಇಲ್ಲ. ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಓದುಗರ ಸಮೂಹವನ್ನು ಹೊಂದಿರುವ ಅವರು ತಮ್ಮ ಬರವಣಿಗೆಯ ಮಿತಿಯನ್ನು ಕೂಡ ಯಾವ ಸಂಕೋಚಗಳಿಲ್ಲದೆ ಹಂಚಿಕೊಳ್ಳುತ್ತಾರೆ. ಜೊತೆಗೆ ಎಲ್ಲವನ್ನೂ ನಾನು ಸೃಷ್ಟಿಸಬಲ್ಲೆ ಎನ್ನುವ ಅಹಂಕಾರವೂ ಭೈರಪ್ಪನವರದಲ್ಲ. ಬರಹಗಾರ ತನ್ನೆಲ್ಲ ಮಿತಿಗಳನ್ನು ಅರಿತಾಗ ಮಾತ್ರ ಸಾಹಿತ್ಯದಲ್ಲಿ ತುಂಬ ಅನನ್ಯವಾದದ್ದನ್ನು ಸೃಷ್ಟಿಸಲು ಸಾಧ್ಯ ಎನ್ನುವುದಕ್ಕೆ ಭೈರಪ್ಪನವರು ಬರಹಗಾರರಿಗೊಂದು ಆದರ್ಶವಾಗಿ ನಿಲ್ಲುತ್ತಾರೆ. ಅವರು ತಮ್ಮ ಬರವಣಿಗೆಯ ಮಿತಿಯನ್ನು ಹೀಗೆ ಹೇಳುತ್ತಾರೆ ‘ನನ್ನ ಬರವಣಿಗೆಯಲ್ಲಿ ಹಳ್ಳಿಯ ಚಿತ್ರಣವಾಗಿ ಚನ್ನರಾಯಪಟ್ಟಣ, ಅರಸೀಕೆರೆ, ತಿಪಟೂರು ತಾಲ್ಲೂಕುಗಳೇ ಪದೇ ಪದೇ ಬರುವ ಕಾರಣವೆಂದರೆ ಈ ಪ್ರದೇಶದ ಅನುಭವವೇ ನನಗೆ ದಟ್ಟವಾಗಿ ಆಗಿರುವುದು. ಹುಬ್ಬಳ್ಳಿ ಧಾರವಾಡ ಕಡೆಯ ಕೆಲವು ಹಳ್ಳಿಗಳನ್ನೂ ನಾನು ನೋಡಿದ್ದೇನೆ. ಅಲ್ಲಿ ಸಂಚರಿಸಿದ್ದೇನೆ. ಹಾಗೆ ಗುಜರಾತ, ಬಿಹಾರಗಳ ಕೆಲವು ಹಳ್ಳಿಗಳನ್ನೂ ನೋಡಿಬಲ್ಲೆ. ಆದರೆ ಜೀವನ ವಿವರ, ಭಾಷೆ ಮತ್ತು ಪಾತ್ರದ ಅರಿವುಗಳ ದೃಷ್ಟಿಯಿಂದ ಯಾವ ಅನುಮಾನ ಹಿಂಜರಿಕೆಗಳೂ ಇಲ್ಲದೆ ನಮ್ಮ ಈ ತೆಂಗಿನ ಸೀಮೆಯ ಜೀವನ ಗೊತ್ತಿರುವಷ್ಟು ದಟ್ಟವಾಗಿ ಬೇರೆಯವು ಗೊತ್ತಿಲ್ಲ. ಹಳ್ಳಿಯ ಕನ್ನಡವೆಂದರೆ ನನ್ನ ಹಿಡಿತಕ್ಕೆ ಬರುವುದು ಈ ನನ್ನ ಸೀಮೆಯದೇ. ಕೋಪ, ತಾಪ, ಪ್ರೀತಿ, ಖುಷಿ, ಸಜ್ಜನಿಕೆ ಮೊದಲಾದ ಸಂದರ್ಭಗಳಲ್ಲಿ ಬೈಗುಳಗಳಲ್ಲಿ ಈ ಪ್ರದೇಶದ ಕನ್ನಡವು ಹೇಗೆ ಬಾಗಿ ಬಳುಕಿ ಚಿತ್ರಶಕ್ತಿಯಿಂದ ಬಳಕೆಯಾಗುತ್ತದೆಂಬುದು ನನಗೆ ಜೀವನಾನುಭವದಿಂದ ಗೊತ್ತು. ಮೂಲ ಭಾಷೆಯೇ ಮುಷ್ಟಿಗ್ರಾಹ್ಯವಾಗದೆ ಅದನ್ನು ಸೃಜನಾತ್ಮಕವಾಗಿ ಬಳಸುವುದು ಹೇಗೆ?. ಮೈಸೂರು ನಗರದ ಸನ್ನಿವೇಶಗಳನ್ನು, ಪಾತ್ರಗಳನ್ನು, ಸಂಭಾಷಣೆಯನ್ನು, ಭಾಷೆಯನ್ನು ಸಹಜವಾಗಿ ಸೃಷ್ಟಿಸುತ್ತೇನೆ. ಆದರೆ ಮೈಸೂರಿನ ಪಕ್ಕದಲ್ಲಿರುವ ಒಂದು ಹಳ್ಳಿಯ ಪಾತ್ರವನ್ನು ಅಷ್ಟೇ ಸಹಜ ಸುಲಭವಾಗಿ ತರಲಾರೆ. ಮೈಸೂರು, ಬೆಂಗಳೂರು, ಬೊಂಬಾಯಿ, ದಿಲ್ಲಿಗಳನ್ನು ನಗರವಾಗಿ ಮಾಡಿಕೊಂಡರೂ ಅಲ್ಲಿಗೆ ಬರುವ ಹಳ್ಳಿಯ ಪಾತ್ರವನ್ನು ನನ್ನ ತೆಂಗಿನ ಸೀಮೆಯಿಂದಲೇ ತರದೆ ಬೇರೆ ದಾರಿ ನನಗಿಲ್ಲ. ಹಳ್ಳಿಯೇ ಗೊತ್ತಿಲ್ಲದ ಕೆಲವು ಲೇಖಕರು ಧಾರವಾಡ, ಬೀದರ್, ಹಾಸನ, ತುಮಕೂರು ಹೀಗೆ ಯಾವ ಜಿಲ್ಲೆಯ ಹಳ್ಳಿಗರ ಪಾತ್ರವನ್ನು ಬೇಕಾದರೂ ಚಿತ್ರಿಸುವ ಸಾಹಸ ಮಾಡುವುದನ್ನು ನಾನು ಬಲ್ಲೆ. ಆದರೆ ಕಲೆಯ ಒಳವರ್ಮದ ಸಹಜತೆಯು ಇಂಥ ಸಾಹಸದಿಂದ ಸಾಧಿತವಾಗುವುದಿಲ್ಲ’.

ಭೈರಪ್ಪನವರ ಸಾಹಿತ್ಯ ಸೃಷ್ಟಿಯ ಸೃಜನಶೀಲತೆ ಕಾದಂಬರಿ ಪ್ರಕಾರಕ್ಕೆ ಮಾತ್ರ ನಿಷ್ಠವಾದದ್ದು. ಅವರೇ ಹೇಳುವಂತೆ ಅವರು ಬರೆದಿರುವುದು ಎರಡೇ ಎರಡು ಸಣ್ಣ ಕಥೆಗಳನ್ನು. ಬೃಹತ್ ಗಾತ್ರದ ಪುಸ್ತಕಗಳ ಓದಿನಿಂದ ಓದುಗರು ವಿಮುಖರಾಗುತ್ತಿರುವರು ಎನ್ನುವ ತಕರಾರು ಇವತ್ತಿನ ಅನೇಕ ಲೇಖಕರದಾಗಿದೆ. ಅದಕ್ಕೆಂದೇ ಎಷ್ಟೋ ಲೇಖಕರು ಓದುಗರನ್ನು ಬಹುಬೇಗ ಹೋಗಿ ತಲುಪಲು ಕಾದಂಬರಿ ಪ್ರಕಾರಗಳಿಂದ ಸಣ್ಣಕಥೆಗಳಿಗೆ ತಮ್ಮ ಬರವಣಿಗೆಯ ವ್ಯವಸಾಯವನ್ನು ಬದಲಿಸಿಕೊಂಡ ಅನೇಕ ಉದಾಹರಣೆಗಳಿವೆ. ಜೊತೆಗೆ ಓದುಗರ ಆಸಕ್ತಿಯೇ ಲೇಖಕರ ಬರವಣಿಗೆಯ ಬಂಡವಾಳವಾಗುತ್ತಿರುವ ದಿನಗಳಲ್ಲಿ ಕೂಡ ಭೈರಪ್ಪನವರ ನಿಷ್ಠೆ ಮತ್ತು ಓದುಗರನ್ನು ದಕ್ಕಿಸಿಕೊಳ್ಳುತ್ತಿರುವ ಪರಿ ಅಚ್ಚರಿಯ ಸಂಗತಿಗಳಲ್ಲೊಂದು. ಬರವಣಿಗೆಯಲ್ಲಿ ತೊಡಗಿಸಿಕೊಂಡ ಸಂದರ್ಭ ತಮ್ಮನ್ನು ಪ್ರಭಾವಿಸುವುದು ಕಾದಂಬರಿಯ ವಿಷಯ ವಸ್ತುವೆ ವಿನಃ ಓದುಗರಲ್ಲ ಎನ್ನುವುದನ್ನು ಭೈರಪ್ಪನವರು ಹೀಗೆ ವಿವರಿಸುತ್ತಾರೆ ‘ನಾನು ಬರೆಯುವ ವಸ್ತು ಮನೋಧರ್ಮದಿಂದಲೇ ಕಾದಂಬರಿಯ ಹರಹನ್ನು ಪಡೆಯುತ್ತದೆ. ಸಣ್ಣ ಕಥೆಯು ನನ್ನ ಮನೋಧರ್ಮಕ್ಕೆ ಹೇಳಿಸಿದ್ದಲ್ಲ. ಹಾಸ್ಟೆಲಿನ ಮ್ಯಾಗಜೀನಿಗೆ ಬರೆದಿದ್ದ ಒಂದೆರಡು ಕತೆಗಳನ್ನು ಬಿಟ್ಟರೆ ನನ್ನ ಮೊಟ್ಟ ಮೊದಲ ಬರವಣಿಗೆಯೇ ಕಾದಂಬರಿ. ಅನಂತರ ಕೂಡ ನಾನು ಬರೆದಿರುವುದು ಎರಡೇ ಎರಡು ಸಣ್ಣ ಕಥೆಗಳು. ನಾನು ಹಲವು ಬಾರಿ ನನ್ನ ಮತ್ತು ನನ್ನ ಓದುಗರ ನಡುವಣ ಸಂಬಂಧವನ್ನು ಚಿಂತಿಸಿದ್ದೇನೆ. ಆರಂಭದ ಧರ್ಮಶ್ರೀ, ದೂರ ಸರಿದರು ಬರೆಯುವಾಗ ನನಗೆ ಓದುಗರ ಮೇಲೆ ಈ ಭಾಗ, ಈ ಸಂಭಾಷಣೆ, ಈ ಪಾತ್ರವರ್ತನೆ ಯಾವ ಪರಿಣಾಮ ಮಾಡುತ್ತದೆಂಬ ಪ್ರಜ್ಞೆ ಇತ್ತು. ಅನಂತರ ಹೊರಟು ಹೋಯಿತು. ನಾನು ಬರೆಯುವಾಗ ನನ್ನ ಮನಸ್ಸನ್ನು ನಿರ್ದೇಶಿಸುವುದು ಆ ಪಾತ್ರ ಆ ಸನ್ನಿವೇಶ ಆ ದ್ವಂದ್ವ ತಿಕ್ಕಾಟಗಳ ಒಳಸತ್ಯಗಳು ಮಾತ್ರ. ಕಾದಂಬರಿಯ ಉದ್ದ ಗಾತ್ರಗಳನ್ನು ನಿರ್ಧರಿಸುವುದು ಅದರ ವಸ್ತುವಿನ ಪೂರ್ಣಾಭಿವ್ಯಕ್ತಿ ಮಾತ್ರ. ಬೇರೆ ಯಾವ ಪರಿಗಣನೆಯೂ ನನಗಿರುವುದಿಲ್ಲ. ಇಂಥ ಕಲೆಯ ಏಕಮೇವ ನಿಷ್ಠೆಯಿಂದ ಬರೆದದ್ದು ಓದುಗರನ್ನು ತಟ್ಟಿಯೇ ತಟ್ಟುತ್ತದೆ ಎಂಬುದು ಅನಂತರದ ಮಾತು’.

ಭೈರಪ್ಪನವರಲ್ಲಿ ನಾವು ಮೆಚ್ಚುವ ಇನ್ನೊಂದು ಗುಣ ಅವರೊಳಗಿನ ಕಲಿಯುವ ಮತ್ತು ಹೊಸ ಸಂಗತಿಗಳನ್ನು ತಿಳಿದುಕೊಳ್ಳುವ ಕುರಿತಾದ ಶ್ರದ್ಧೆ. ಅದು ಸಂಗೀತವಿರಬಹುದು, ಚಿತ್ರಕಲೆಯಾಗಿರಬಹುದು, ಧರ್ಮವೊಂದರ ಆಳ ಅಗಲವನ್ನು ಅಭ್ಯಾಸ ಮಾಡುವ ಗುಣವಾಗಿರಬಹುದು, ವಿಜ್ಞಾನದ ಕುತೂಹಲಕ್ಕೆ ಹುಡುಕುವ ಉತ್ತರವಾಗಿರಬಹುದು, ಭಾಷೆಯೊಂದನ್ನು ಕಲಿಯುವ ಆಸಕ್ತಿಯಾಗಿರಬಹುದು. ಸಂಗೀತ ಪ್ರಧಾನ ಕಾದಂಬರಿ ‘ಮಂದ್ರ’, ಧರ್ಮ ಪ್ರಧಾನ ಕಾದಂಬರಿ ‘ಸಾರ್ಥ’ ಮತ್ತು ವೈಜ್ಞಾನಿಕ ಕಾದಂಬರಿ ‘ಯಾನ’ ಕಲಿಕೆಯ ಬಗೆಗಿನ ಭೈರಪ್ಪನವರೊಳಗಿನ ಶ್ರದ್ಧೆ ಮತ್ತು ನಿಷ್ಠೆಗೆ ಮಹತ್ವದ ದೃಷ್ಟಾಂತಗಳು. ಸಂಸ್ಕೃತ ಭಾಷೆಯ ಕಲಿಕೆಗೆ ಕಾರಣವಾದ ಘಟನೆಯನ್ನು ಭೈರಪ್ಪನವರು ತಮ್ಮ ಆತ್ಮಕಥೆಯಲ್ಲಿ ಹೀಗೆ ವಿವರಿಸಿರುವರು ‘ಶಾಲೆಯಲ್ಲಾಗಲಿ ಕಾಲೇಜಿನಲ್ಲಾಗಲಿ ನಾನು ಸಂಸ್ಕೃತ ಕಲಿತಿರಲಿಲ್ಲ. ನಾನು ಓದಿದ್ದ ಹಳ್ಳಿಯ ಶಾಲೆಗಳಲ್ಲಿ ಸಂಸ್ಕೃತವು ಒಂದು ವಿಷಯವಾಗಿ ಇರಲಿಲ್ಲ. ಆದರೂ ಸಂಸ್ಕೃತ ವ್ಯಾಕರಣ ಗೊತ್ತಿಲ್ಲದೆಯೂ ಕೆಲವು ಉಪನಿಷತ್ತುಗಳನ್ನು ಕನ್ನಡಾನುವಾದದೊಡನೆ ಓದಿದ್ದೆ. ಹಲವಾರು ಶ್ಲೋಕಗಳನ್ನು ಬಾಯಿಪಾಠ ಮಾಡಿದ್ದೆ. ಒಮ್ಮೆ ಗದುಗಿನಲ್ಲಿ ನನ್ನನ್ನು ಒಂದು ಉಪನ್ಯಾಸಕ್ಕೆ ಕರೆಸಿದ್ದರು. ಸಭಿಕರ ಮೆಚ್ಚುಗೆ ಮತ್ತು ತನ್ಮಯತೆ ನನಗೆ ಅಮಲೇರಿಸಿ ತುಂಬ ಓಘವಾಗಿ ಮಾತನಾಡಿದೆ. ಎಲ್ಲರೂ ಮೆಚ್ಚಿದರು ಹೊಗಳಿದರು. ಇಷ್ಟು ವಯಸ್ಸಿಗೇ ತತ್ವಶಾಸ್ತ್ರದಲ್ಲಿ ಏನು ತಿಳುವಳಿಕೆ ಎಂದು ಕೆಲವರು ಉದ್ಗರಿಸಿದರು. ಆದರೆ ಕೊನೆಗೆ ಒಬ್ಬ ವೃದ್ಧರು ನನ್ನನ್ನು ಒಂದು ಮೂಲೆಗೆ ಕರೆದೊಯ್ದು ‘ರಾಯರೆ ನೀವು ತುಸು ಸಂಸ್ಕೃತ ಪಾಠ ಹೇಳಿಸಿಕೊಳ್ಳೊದು ಒಳ್ಳೆಯದು. ಶಂಕರಾಚಾರ್ಯರು ಕಬ್ಬಿಣವನ್ನು ಕಾಯಿಸುತ್ತಿದ್ದ ಕಮ್ಮಾರನ ಮುಂದೆ ನಿಂತು ಭವತಿ ಭಿಕ್ಷಾನ್ ದೇಹಿ ಅಂದರು ಅಂತ ಹೇಳಿದಿರಿ. ಹೆಂಗಸನ್ನು ಭವತಿ ಭಿಕ್ಷಾನ್ ದೇಹಿ ಅನ್ನೊದು ಸರಿ. ಆದರೆ ಕಮ್ಮಾರ ಗಂಡಸು. ಗಂಡಸನ್ನು ಬೇಡುವಾಗ ಭವಾನ್ ಭಿಕ್ಷಾನ್ ದದಾತು ಅನ್ನಬೇಕು. ಶಂಕರಾಚಾರ್ಯರಿಗೆ ಸಂಸ್ಕೃತದ ಇಂಥ ವ್ಯಾಕರಣ ತಪ್ಪು ತಿಳೀತಿತ್ತು ಅಂತ ನನ್ನ ಭಾವನೆ’ ಎಂದರು. ನನಗೆ ನಾಚಿಕೆಯಾಯಿತು. ಇಡೀ ಸಭೆಯನ್ನಲ್ಲದೆ ನನ್ನನ್ನೂ ತೇಲಿಸಿಬಿಟ್ಟಿದ್ದ ಓಘದ ಗುಂಗು ಸರಕ್ಕನೆ ಇಳಿದು ಬುರುಡೆಯ ಒಳಗೆ ತಣ್ಣೀರು ತುಂಬಿಕೊಂಡಂತೆ ಆಯಿತು. ಅದು ಬರೀ ನಾಚಿಕೆಯಲ್ಲ ಧೃತಿನಷ್ಟ. ಆ ವೃದ್ಧರಲ್ಲಿ ಕ್ಷಮೆ ಬೇಡಿದೆ. ಭಾಷಣ ಮೊದಲಾದುವನ್ನು ಮಾಡುವುದನ್ನು ನಿಲ್ಲಿಸಬೇಕೆಂದು ತಕ್ಷಣ ನಿರ್ಧರಿಸಿದೆ. ಅಂದಿನಿಂದಲೇ ಸಂಸ್ಕೃತದ ಕಲಿಕೆ ಆರಂಭಿಸಿದೆ’.

ಭೈರಪನವರ ದೃಷ್ಟಿಯಲ್ಲಿ ಸಾಹಿತ್ಯವೆಂದರೆ ಅದೊಂದು ಶುದ್ಧ ಸೃಜನಶೀಲತೆ. ಸಾಹಿತ್ಯದಲ್ಲಿ ಈ ಎಡ, ಬಲ, ಬಂಡಾಯ, ಸ್ತ್ರೀ ಸಾಹಿತ್ಯ ಎನ್ನುವ ವಿಂಗಡಣೆಯನ್ನು ಅವರು ವಿರೋಧಿಸುತ್ತಾರೆ. ಲೇಖಕರು ಯಾವುದೋ ಒಂದು ಗುಂಪಿಗೆ ನಿಷ್ಠರಾಗಿ ಹಣೆಪಟ್ಟಿಯನ್ನಂಟಿಸಿಕೊಂಡಲ್ಲಿ ಅವರೊಳಗಿನ ಸೃಜನಶೀಲ ಸೃಷ್ಟಿಯ ಬೆಳವಣಿಗೆ ನಿಂತುಹೋಗುತ್ತದೆ ಎನ್ನುವ ಅಭಿಪ್ರಾಯ ಅವರದು. ಆದ್ದರಿಂದ ಲೇಖಕನಾದವನು ಶುದ್ಧ ಸಾಹಿತ್ಯಕ್ಕೆ ನಿಷ್ಠನಾಗಿರಬೇಕೆ ವಿನಃ ಯಾವುದೋ ಒಂದು ವರ್ಗ ಅಥವಾ ವಿಂಗಡಣೆಗಲ್ಲ. ಭೈರಪ್ಪನವರ ದೃಷ್ಟಿಯಲ್ಲಿ ಸಾಹಿತ್ಯವೆನ್ನುವುದು ‘ಸಾಹಿತ್ಯದ ಕೆಲಸವೆಂದರೆ ಮನುಷ್ಯನ ಅಂತರಾಳಕ್ಕೆ ಪ್ರವೇಶ ದೊರಕಿಸಿಕೊಡುವುದು. ಪ್ರೀತಿ ಅನುಕಂಪ ಕರುಣೆಗಳನ್ನು ಹುಟ್ಟಿಸುವುದು. ನಮ್ಮ ಕಹಿ ಅನುಭವವು ಏನೇ ಇರಲಿ ಪ್ರತಿಯೊಂದು ಪಾತ್ರದ ಅಂತರಂಗವನ್ನು ಹೊಕ್ಕು ಅನುಕಂಪದಿಂದ ಬಿಚ್ಚಿಡದಿದ್ದರೆ ಅದು ಮೇಲ್ಮಟ್ಟದ ಸಾಹಿತ್ಯವಾಗುವುದಿಲ್ಲ. ಇಡೀ ರಾಷ್ಟ್ರವನ್ನು ಜೈಲಾಗಿ ಪರಿವರ್ತಿಸಿದ್ದ ಸ್ಟಾಲಿನ್ನನ ಪ್ರತೀಕವಾಗಿ ಚಿತ್ರಿಸಿರುವ ಅಬಕುಮೋಘನ ಪಾತ್ರದಲ್ಲಿ ಕೂಡ ಸೊಲ್ಜನಿಟ್ಸಿನ್ ಎಷ್ಟು ಅನುಕಂಪ ಅರಿವು ಮತ್ತು ಅಂತರ್ನೋಟವನ್ನು ಸಾಧಿಸಿದ್ದಾನೆ. ಇಲ್ಲದಿದ್ದರೆ ಅವನು ದೊಡ್ಡ ಲೇಖಕನಾಗುತ್ತಿರಲಿಲ್ಲ. ಸೃಜನಶೀಲತೆಗೆ ಹೆಣ್ಣುಗಂಡೆಂಬ ವ್ಯತ್ಯಾಸವೇ ಇಲ್ಲ. ಅದು ಶುದ್ಧ ಸೃಜನಶೀಲತೆ. ಲೇಖಕನು ತಾನು ಕಂಡು ಅನುಭವಿಸಿದ ಜೀವನಾನುಭವವನ್ನೇ ಕುರಿತು ಬರೆಯುವುದು ಸಹಜ. ಆದರೆ ಬರವಣಿಗೆ ಸೃಜನಶೀಲವಾದಾಗ ತನ್ನ ಅನುಭವದ ಸೀಮಿತತೆಯನ್ನು ದಾಟಿ ತನ್ನ ಜಾತಿ, ಮತ, ವರ್ಗ, ಲಿಂಗ, ದೇಶ ಮೊದಲಾದ ಭೇದಗಳನ್ನು ಮೀರಿರುತ್ತದೆ’.

ಸುಮಾರು ಮೂರು ದಶಕಗಳ ಕಾಲ ವಿದ್ಯಾರ್ಥಿಗಳಿಗೆ ತತ್ವಶಾಸ್ತ್ರವನ್ನು ಬೋಧಿಸಿದ ಭೈರಪ್ಪನವರು ಅಧ್ಯಾಪನ ವೃತ್ತಿಯನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿದವರು. ವಿದ್ಯಾರ್ಥಿ ದೆಸೆಯಲ್ಲಿ ಯಮುನಾಚಾರ್ಯರಂಥ ಅಧ್ಯಾಪಕರ ಪ್ರಭಾವಕ್ಕೊಳಗಾದ ಭೈರಪ್ಪನವರಿಗೆ ಗುರುವಾದವನು ವಿದ್ಯಾರ್ಥಿಗಳ ಬುದ್ಧಿ ಮಾತ್ರವಲ್ಲ ಮನಸ್ಸು ಭಾವನೆಗಳನ್ನು ಅರಿತು ತಿದ್ದಬೇಕು ಎನ್ನುವುದರಲ್ಲಿ ಅಪಾರ ನಂಬಿಕೆ. ಬರವಣಿಗೆಯ ಪರಿಣಾಮ ವಿದ್ಯಾರ್ಥಿಗಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗದೇ ಹೋಯಿತಾದರೂ ತರಗತಿಯೊಳಗೆ ನಾನು ಉತ್ತಮ ದರ್ಜೆಯ ಅಧ್ಯಾಪಕನಾಗಿದ್ದೆ ಎನ್ನುತ್ತಾರೆ ಭೈರಪ್ಪನವರು. ಶಿಕ್ಷಕನ ವ್ಯಕ್ತಿತ್ವವನ್ನು ಭೈರಪ್ಪನವರು ಹೀಗೆ ಕಟ್ಟಿಕೊಡುತ್ತಾರೆ ‘ಅಧ್ಯಾಪಕತನವೂ ಒಂದು ವೃತ್ತಿ ನಿಜ. ಬ್ಯಾಂಕ್ ನೌಕರನು, ರೈಲ್ವೆ ನೌಕರನು, ಫ್ಯಾಕ್ಟರಿ ಎಂಜಿನಿಯರನು ನನ್ನ ಕೆಲಸದ ವೇಳೆಯ ನಂತರ ನಾನೇನು ಮಾಡುತ್ತೇನೆಂದು ಕೇಳುವ ಅಧಿಕಾರ ನಿನಗಿಲ್ಲ ಎಂದರೂ ನಡೆದೀತು. ಆದರೆ ಇದೇ ಮಾತನ್ನು ಹೇಳುವ ಅಧಿಕಾರ ಅಧ್ಯಾಪಕನಿಗಿಲ್ಲ. ವಿದ್ಯಾರ್ಥಿಗಳಿಗೆ ಪರೋಕ್ಷವಾಗಿಯಾದರೂ ತಿಳಿದು ಅವರ ಚಾರಿತ್ರ್ಯಕ್ಕೆ ಕೆಟ್ಟ ಮಾದರಿಯಾಗುವ ಯಾವ ಕೆಲಸವನ್ನೂ ಖಾಸಗಿಯಲ್ಲಿ ಕೂಡ ಮಾಡುವುದು ಅಧ್ಯಾಪಕನಿಗೆ ಸಲ್ಲುವುದಿಲ್ಲ. ಅಂಥವನು ಆ ವೃತ್ತಿಯನ್ನು ಬಿಟ್ಟುಬಿಡಬೇಕು ಎಂದು ನಾನು ದೃಢವಾಗಿ ನಂಬಿದವನು. ಉಪಾಧ್ಯಾಯನ ಘನತೆ ಇರುವುದು ಅವನ ಸಂಬಳದಿಂದಲ್ಲ. ವಿದ್ವತ್ತು, ಚಾರಿತ್ರ್ಯದಿಂದ ಕೂಡಿದ ಸ್ವಾತಂತ್ರ್ಯ ಮತ್ತು ಬೋಧನಾ ಶಕ್ತಿಗಳಿಂದ’.

ಹೀಗೆ ಭೈರಪ್ಪನವರ ವ್ಯಕ್ತಿತ್ವ ನಮಗೆ ಮಾದರಿಯಾಗಲು ಅನೇಕ ದೃಷ್ಟಾಂತಗಳಿವೆ. ಈ ಎಂಬತ್ತಾರರ ಇಳಿವಯಸ್ಸಿನಲ್ಲೂ ಭೈರಪ್ಪನವರು ಬರವಣಿಗೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವರು. ಕಾದಂಬರಿಯಿಂದ ಕಾದಂಬರಿಗೆ ಅವರ ಬರವಣಿಗೆಯ ವಿಷಯ ವಸ್ತು ವೈವಿಧ್ಯಮಯವಾಗಿ ಬೆಳೆದು ನಿಂತಿದೆ. ವಿಜ್ಞಾನದಂಥ ವಿಷಯ ವಸ್ತುವನ್ನೂ ಅತ್ಯಂತ ಸಲೀಸಾಗಿ ಕಾದಂಬರಿಗೆ ಒಗ್ಗಿಸಿಕೊಳ್ಳುವ ಭೈರಪ್ಪನವರ ಸೃಜನಶೀಲತೆ ಕನ್ನಡ ಸಾಹಿತ್ಯ ಲೋಕದ ಅಚ್ಚರಿಗಳಲ್ಲೊಂದು. ಪ್ರಶಸ್ತಿ-ಸನ್ಮಾನ-ಗೌರವಗಳಿಗಾಗಿ ಬರೆಯದೆ, ಅಕಾಡೆಮಿಕ್ ವಲಯದ ಉದ್ದೇಶಪೂರಿತ ಕಟುಟೀಕೆಗಳಿಂದ ಕಂಗಾಲುಗೊಳ್ಳದೆ, ಓದುಗರನ್ನು ಓಲೈಸಬೇಕೆನ್ನುವ ದರ್ದಿಗೆ ಸಿಕ್ಕುಕೊಳ್ಳದೆ ಸೃಜನಶೀಲ ಸಾಹಿತ್ಯದ ಸೃಷ್ಟಿಯಲ್ಲಿ ತೊಡಗಿಸಿಕೊಂಡಿರುವ ಭೈರಪ್ಪನವರು ಕನ್ನಡ ಸಾಹಿತ್ಯ ಲೋಕದ ಅನನ್ಯ ಮತ್ತು ಅಪೂರ್ವ ಬರಹಗಾರ.

10 ಟಿಪ್ಪಣಿಗಳು Post a comment
  1. ಫೆಬ್ರ 7 2017

    ಉತ್ತಮವಾದ ಬರಹ.

    ಉತ್ತರ
  2. ಫೆಬ್ರ 7 2017

    ಹೆಸರು ಬದಲಿಸಿಕೊಳ್ಳದ ಭೈರಪ್ಪನವರಿಂದ ಕ್ಷಣಕ್ಷಣಕ್ಕೂ ಬದಲಾಗುವ ನಾಗಿ ಯಂಥ ಊಸರವಳ್ಲಿಗಳು ಕಲಿಯುವುದು ಬಹಳಷ್ಟು ಇದೆ. ಆದರೆ ಕೊಚ್ಚೆಯ ಹುಳಗಳಿಗೆ ಬೆಳಕ್ಯಾಕೆ ಎಂಬ ಧೋರಣೆ ಅವುಗಳದ್ದು

    ಉತ್ತರ
  3. Mallappa
    ಫೆಬ್ರ 8 2017

    ಕೆಲದ ವೇಳೆಯ ನಂತರ ನಾನೇನು ಮಾಡುತ್ತೇನೆಂದು ಕೇಳುವ ಅಧಿಕಾರ ನಿನಗಿಲ್ಲ ಎಂದರೂ ನಡೆದೀತು. ಆದರೆ ಇದೇ ಮಾತನ್ನು ಹೇಳುವ ಅಧಿಕಾರ ಅಧ್ಯಾಪಕನಿಗಿಲ್ಲ. ವಿದ್ಯಾರ್ಥಿಗಳಿಗೆ ಪರೋಕ್ಷವಾಗಿಯಾದರೂ ತಿಳಿದು ಅವರ ಚಾರಿತ್ರ್ಯಕ್ಕೆ ಕೆಟ್ಟ ಮಾದರಿಯಾಗುವ ಯಾವ ಕೆಲಸವನ್ನೂ ಖಾಸಗಿಯಲ್ಲಿ ಕೂಡ ಮಾಡುವುದು ಅಧ್ಯಾಪಕನಿಗೆ ಸಲ್ಲುವುದಿಲ್ಲ” ಇದು ಭೈರಪ್ಪ. ಯಾರದೋ ನಿಯಂತ್ರಣದಿಂದ ತನ್ನನ್ನು ಸರಿಪಡಿಸುವುದಲ್ಲ. ತನ್ನನ್ನು ತಾನೇ ನಿಯಂತ್ರಿಸಿಕೊಂಡು ಎಲ್ಲರಿಗೂ ದಾರಿ ಯಾಗುವುದು. ಒಳ್ಳೆಯ ಲೇಖನ. ಧನ್ಯವಾದಗಳು.

    ಉತ್ತರ
  4. UNIVERSAL
    ಫೆಬ್ರ 8 2017

    ಹಾಗೆ ಹೇಳಲು ಹೋದರೆ ಮಾದರಿ ಜೀವನ ನಡೆಸಿದವರ ಸಂಖ್ಯೆ ಈ ಲೋಕದಲ್ಲಿ ಸಾವಿರಾರಿದೆ. ನಮ್ಮ ದೇಶದಲ್ಲಿ ನೆನಪಿಟ್ಟುಕೊಳ್ಳುವಂತಹ ಮಾದರಿ ಜೀವನ ನಡೆಸಿದವರೆಂದರೆ ಸ್ವಾಮಿ ವಿವೇಕಾನಂದರು ಮಾತ್ರ. ಭೈರಪ್ಪನವರು ಬ್ರಾಹ್ಮಣರನ್ನು ಹೀಯಾಳಿಸುವುದರಲ್ಲಿ ಎಲ್ಲರನ್ನೂ ಮೀರಿಸಿದಂತಹ ಮಾದರಿ ಜೀವನ ನಡೆಸಿದ “ಮಹಾನ್ ದಾರ್ಶನಿಕ” ಎನ್ನಬಹುದೇನೋ? ಜಾತಿ ಮತಗಳನ್ನು ಬೆಳೆಯಲು ಬಿಟ್ಟವರು ಬ್ರಾಹ್ಮಣರು ಮಾತ್ರವಲ್ಲ. ಇದಕ್ಕೆ ಎಲ್ಲರ ಸಹಕಾರವೂ ಇತ್ತು. ಯಾವ ಜಾತಿಯನ್ನು ಹೀಯಾಳಿಸಿದರೂ ತಮ್ಮನ್ನೇ ಹೀಯಾಳಿಸಿಕೊಂಡಂತಾಗುತ್ತದೆ ಎನ್ನುವುದು ಇವರ ಗಮನಕ್ಕೆ ಬರಲೇ ಇಲ್ಲ. ಪಾಪ. ಇಡೀ ದೇಶದ ಜನ ಜಾತಿಮತಗಳನ್ನು ನಿಕೃಷ್ಟಗೊಳಿಸಿ ವಿಶ್ವಮಾನವರಾದರೆ ಮಾತ್ರ ನಮ್ಮ ದೇಶ ಉದ್ಧಾರವಾದೀತು. ಒಬ್ಬರನ್ನೊಬ್ಬರು ಹೀಯಾಳಿಸುವುದರಿಂದ ಯಾರು ಯಾರಿಗೂ ಮಾದರಿಯಾಗುವುದು ಸಾಧ್ಯವೇಯಿಲ್ಲ. ರಾಜಕುಮಾರ.ವ್ಹಿ.ಕುಲಕರ್ಣಿಯವರೇ ನಿಮ್ಮ ಅಭಿಪ್ರಾಯ ಸರ್ವಸಮ್ಮತವಲ್ಲ.

    ಉತ್ತರ
    • M A Sriranga
      ಫೆಬ್ರ 8 2017

      ಯೂನಿವಸಲ್ ಅವರಿಗೆ—- ತಮ್ಮ ಪ್ರತಿಕ್ರಿಯೆಗೆ ಭೈರಪ್ಪನವರ ಕಾದಂಬರಿಗಳ ನೆಲೆಯಿಂದ ಮಾತ್ರ ನಾನು ಉತ್ತರಿಸುವ ಪ್ರಯತ್ನ ಮಾಡುತ್ತೇನೆ. ಬ್ರಾಹ್ಮಣರನ್ನು ತನ್ನ ಕೃತಿಗಳಲ್ಲಿ ಟೀಕಿಸಿದ ಮಾತ್ರಕ್ಕೆ ಯಾವೊಬ್ಬ ಸಾಹಿತಿಯ ಮೌಲ್ಯಮಾಪನ ಮಾಡುವುದು ತಪ್ಪು. ‘ವಂಶವೃಕ್ಷ’ ಕಾದಂಬರಿಯಲ್ಲಿ ಶ್ರೀನಿವಾಸ ಶ್ರೋತ್ರಿಯಂತಹ ಸದ್ಗ್ರುಹಸ್ಥ, ಕರುಣಾಮಯಿ ಪಾತ್ರವಿರುವಹಾಗೆಯೇ ತನ್ನ ಆಸ್ತಿ ದಾಯಾದಿಗಳ ಪಾಲಾಗುವುದನ್ನು ತಪ್ಪಿಸಲು ಅನೈತಿಕ ದಾರಿ ಹಿಡಿದ ಶ್ರೋತ್ರಿಗಳ ಅಪ್ಪನೂ ಇದ್ದಾರೆ. ತಮ್ಮಿಂದ ತಮ್ಮ ಹೆಂಡತಿಗೆ ಒಂದು ಮಗುವಾದ ನಂತರದಲ್ಲಿ, ಏರು ಯೌವನದ ದಿನಗಳಲ್ಲಿ ಹೆಂಡತಿಯ ಆರೋಗ್ಯದ ನಿಮಿತ್ತ ಅನಿವಾರ್ಯವಾಗಿ ಬ್ರಹ್ಮಚರ್ಯೆ ಪಾಲಿಸಿದವರು ಶ್ರೀನಿವಾಸ ಶ್ರೋತ್ರಿ. ಶ್ರೋತ್ರಿಯವರ ಹೆಂಡತಿಯೇ ಮನೆಕೆಲಸದ ಹೆಂಗಸಿನ ಜತೆ ಮುಚ್ಚುಮರೆಯಲ್ಲಿ ಸುಖ ಅನುಭವಿಸಬಹುದಾದಂತಹ ಒಂದು ಅವಕಾಶ ಕಲ್ಪಿಸಿದರೂ ಅಂತಹ ಅನೈತಿಕ ಕೆಲಸಕ್ಕೆ ಮುಂದಾಗದೇ ತಮ್ಮ ನಿಷ್ಠೆ ಕಾಪಾಡಿಕೊಂಡಂತಹವರು. ಆದರೆ ತಮ್ಮ ಸೊಸೆ ಗಂಡ ಸತ್ತಮೇಲೆ ಎರಡನೇ ಮದುವೆ ಮಾಡಿಕೊಂಡಾಗ ಆಯಾ ಕಾಲಧರ್ಮ; ಅವರವರ ಇಷ್ಟ ಎಂದು ಅದಕ್ಕೆ ಒಪ್ಪಿಗೆ ನೀಡಿದರು. ‘ಇದು ಕೂಡದು’ ಎಂದು ಬಲವಂತ ಮಾಡಲಿಲ್ಲ. ಕೊನೆಗೆ ತಾನು ನನ್ನಪ್ಪನ ಮಗನಲ್ಲ ಎಂದು ಗೊತ್ತಾದಾಗ, ನಾನು ಶ್ರೋತ್ರಿಯ ವಂಶಕ್ಕೇ ಸೇರಿಲ್ಲವಾದ್ದರಿಂದ ಆಸ್ತಿಗೆ ಹಕ್ಕುದಾರ ಅಲ್ಲ ಎಂದು ತಮ್ಮಲ್ಲಿದ್ದ ಎಲ್ಲಾ ಆಸ್ತಿಯನ್ನು ದಾನ ಮಾಡಿ ಸಂನ್ಯಾಸಿಯಾಗಲು ಊರು ಬಿಟ್ಟು ಹೊರಟವರು.
      ೨.’ಗೃಹಭಂಗ’ ಕಾದಂಬರಿಯಲ್ಲಿ ತಮ್ಮ ದಡ್ಡತನ,ಕೋಪಗಳಿಂದ ಎರಡು ಹೊತ್ತಿನ ಊಟಕ್ಕೂ ಕಷ್ಟ ಪಡುವಂತಾದ ಗಂಗಮ್ಮ,ಅವಳ ಇಬ್ಬರು ಮಕ್ಕಳ ಜೀವನದ ಸಶಕ್ತ ಚಿತ್ರಣವಿದೆ. ತಾನು ಸೊಸೆಯಾಗಿ ಬಂದ ಈ ದಡ್ಡ,ಹುಂಬ ಸಂಸಾರವನ್ನು ಹೇಗಾದರೂ ಮಾಡಿ ಸ್ವಲ್ಪವಾದರೂ ಸರಿಪಡಿಸಬೇಕೆಂದು ಕಷ್ಟ ಪಡುವ ಚೆನ್ನಿಗರಾಯನ ಹೆಂಡತಿ ನಂಜಮ್ಮನ ಪಾತ್ರ ಗಮನಿಸಿ. ಭಿಕ್ಷೆ ಬೇಡಿ ಬದುಕಬಾರದು ಎಂದು ತಾನೇ ಗಂಡನ ಶಾನುಭೋಗ್ಯದ ಕೆಲಸವನ್ನೂ ಕಲಿತು, ಇರಲು ಸ್ವಂತಕ್ಕೆ ಒಂದು ಮಣ್ಣಿನ ಮನೆಯಾದರೂ ಸಾಕು ಎಂದು ತಾನೇ ನಿಂತು,ಕೆಲಸ ಮಾಡಿ ಮನೆ ಕಟ್ಟಲೂ ಮುಂದಾಗುತ್ತಾಳೆ. ಹಿರಿಯ ವಿಮರ್ಶಕಾರದ ಕೀರ್ತಿನಾಥ ಕುರ್ತಕೋಟಿಯವರು ಗೃಹಭಂಗ ಕಾದಂಬರಿಯ ವಿಮರ್ಶೆ ಮಾಡುತ್ತಾ ಒಂದು ಮಾತು ಹೇಳುತ್ತಾರೆ –‘ಈಗಲೂ ರಾಮಸಂದ್ರಕ್ಕೆ ಹೋದರೆ, ಹರಕಲು ಸೀರೆಯುಟ್ಟು, ಭಿಕ್ಷೆ ಬೇಡಿ ತಂದ ರಾಗಿಯನ್ನು ಮೊರದಲ್ಲಿ ಕೇರುತ್ತಾ ಕೂತ ಗಂಗಮ್ಮನನ್ನು ಕಾಣಬಹುದೇನೋ ಎನ್ನುವಷ್ಟರ ಮಟ್ಟಿಗೆ ಆ ಪಾತ್ರ ಸಶಕ್ತವಾಗಿ ಮೂಡಿ ಬಂದಿದೆ’. ತಾವು ಗೃಹಭಂಗ ಕಾದಂಬರಿಯಲ್ಲಿ ಹುಟ್ಟಿನಿಂದ ಬ್ರಾಹ್ಮಣರಾದ ಗಂಗಮ್ಮ ಅಂಡ್ ಸನ್ಸ್ ಅವರ ಅವಾಚ್ಯ ಮಾತುಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಭೈರಪ್ಪನವರು ಬ್ರಾಹ್ಮಣ ಜಾತಿಯವರನ್ನು ಟೀಕಿಸಿದ್ದಾರೆ/ಹೀಯಾಳಿಸಿದ್ದಾರೆ ಇತ್ಯಾದಿ ಇತ್ಯಾದಿ ಹೇಳುವುದು ಸರಿಯೇ? ಯೋಚಿಸಿ. ಇದೇ ರೀತಿ ‘ದಾಟು’, ‘ಅನ್ವೇಷಣೆ’ ಕಾದಂಬರಿಗಳಿಂದಲೂ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ತಾವು ಹಿರಿಯರು ಅವನ್ನೆಲ್ಲಾ ಓದಿರುತ್ತೀರಿ ಎಂಬ ವಿಶ್ವಾಸ ನನಗಿದೆ. ಆದ್ದರಿಂದ ಹೆಚ್ಚಿಗೆ ಬರೆಯಲು ಹೋಗುವುದಿಲ್ಲ.

      ಉತ್ತರ
  5. Rajkumar.V.Kulkarni
    ಫೆಬ್ರ 8 2017

    ಮಾನ್ಯಶ್ರೀ ಯುನಿವರ್ಸಲ್ ಅವರೆ ಭೈರಪ್ಪನವರು ತಮ್ಮ ಕಾದಂಬರಿಗಳಲ್ಲಿ ಬದುಕಿನ ಮೌಲ್ಯಗಳನ್ನು ಎತ್ತಿ ಹಿಡಿದು ನಾವುಗಳು ಒಂದಿಷ್ಟು ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮಾಡಿದ ಬರಹಗಾರರೆ ವಿನ: ಒಂದು ಜಾತಿಯನ್ನು ಇನ್ನೊಂದು ಜಾತಿಯ ಮೇಲೆ ಎತ್ತಿ ಕಟ್ಟಿದ ಲೇಖಕರಲ್ಲ. ಅವರ ಅನೇಕ ಕಾದಂಬರಿಗಳಲ್ಲಿ ಅನೇಕ ಬ್ರಾಹ್ಮಣ ಪಾತ್ರಗಳು ಆದರ್ಶವಾಗಿ ಮೂಡಿಬಂದಿವೆ. ಜೊತೆಗೆ ಪಾತ್ರವೊಂದು ನಮ್ಮನ್ನು ಪ್ರಭಾವಿಸುವುದು ಅದರ ವ್ಯಕ್ತಿತ್ವದಿಂದಲೇ ಹೊರತು ಜಾತಿಯಿಂದಲ್ಲ. ತನ್ನ ಜಾತಿಯನ್ನೇ ಆದರ್ಶವಾಗಿಟ್ಟುಕೊಂಡು ಬರೆಯುವ ಲೇಖಕ ಅನೇಕ ಅಪಮೌಲ್ಯಗಳಿಗೆ ಕುರುಡನಾಗಿರಬೇಕಾಗುತ್ತದೆ. ಅಂಥ ಲೇಖಕ ಸೃಜನಶೀಲ ಸೃಷ್ಟಿಗೆ ದ್ರೋಹ ಬಗೆದಂತೆ ಎನ್ನುವ ಅಭಿಪ್ರಾಯ ನನ್ನದು. ಭೈರಪ್ಪನವರೇ ಹೇಳಿದಂತೆ ಯಾವುದೇ ಸ್ಥಾಪಿತ ಸಿದ್ಧಾಂತವನ್ನು ಓದುಗರ ಮೇಲೆ ಬಲವಂತವಾಗಿ ಹೇರುವ ಮನೋಭಾವ ಅವರದಲ್ಲ. ಜೀವನದ ಮೌಲ್ಯಗಳನ್ನು ಓದುಗರಿಗೆ ಮನವರಿಕೆ ಮಾಡಿಕೊಟ್ಟು ಆ ಮೂಲಕ ಬಹುದೊಡ್ಡ ಸಾಮಾಜಿಕ ಸ್ಥಿತ್ಯಂತರಕ್ಕೆ ಕಾರಣವಾಗುವ ಜೀವನ ದೃಷ್ಟಿ ಭೈರಪ್ಪನವರ ಸಾಹಿತ್ಯದ್ದು. ಈ ಸಂದರ್ಭ ನನಗೆ ಯಶವಂತ ಚಿತ್ತಾಲರ ಈ ಮಾತು ನೆನಪಿಗೆ ಬರುತ್ತಿದೆ “ಮನುಷ್ಯನನ್ನು ಮನುಷ್ಯನನ್ನಾಗಿಸುವ ಪ್ರಕ್ರಿಯೆಗೆ ಒಳಪಡಿಸುವುದೇ ಸಾಹಿತ್ಯದ ಮೂಲ ಉದ್ದೇಶ”. ಈ ಮಾತನ್ನು ನಮ್ಮ ಬರಹಗಾರರು ಒಂದು ಆದರ್ಶವಾಗಿ ಇಟ್ಟುಕೊಳ್ಳುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ.

    ಉತ್ತರ
    • Suresh
      ಫೆಬ್ರ 8 2017

      Raj Kumar avare,

      Nimma maathu sari

      ಉತ್ತರ
  6. Ckvmurthy
    ಫೆಬ್ರ 8 2017

    Rajkumarji,why waste your energy in replying these unworthy comments by cheap people.Their leftist mindset will not agree with anything which is in order.”Naibaladonku”.Always it is healthy to have discussion with people of equal calibre.These hypocrites are waste bodies.Their knowledge is borrowed from Mankeshpatrike.&.Burdeshmaster.

    ಉತ್ತರ
    • Rajkumar.V.Kulkarni
      ಫೆಬ್ರ 9 2017

      Thank you murthy sir

      ಉತ್ತರ
  7. Veeresh M S
    ಫೆಬ್ರ 11 2017

    Sent from Yahoo Mail on Android

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments