ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 9, 2017

ದ್ವಂದ್ವ (ಸಣ್ಣ ಕತೆ )

‍ನಿಲುಮೆ ಮೂಲಕ

– ಹೆಚ್. ಎಸ್. ಅರುಣ್ ಕುಮಾರ್

thesesamescholarನಾನು ಅಪ್ಪಾಜಿ ಪಕ್ಕದಲ್ಲಿ ಕುಳಿತಿದ್ದೆ. ಸಾವಿರಾರು ಜನರ ಪ್ರಾಣ ಕಾಪಾಡಿದ ಆ ವ್ಯಕ್ತಿ ಮರಣಶಯ್ಯೇಯಲ್ಲಿ ಮಲಗಿರುವುದು ಹರಿಹರಪುರದ ನಿವಾಸಿಗಳಿಗೆ ಅತೀವ ದುಃಖದ ಸಂಗತಿ. ನಮ್ಮ ಮನೆಯಲ್ಲಿ ದೊಡ್ಡ ಗುಂಪೇ ಸೇರಿತ್ತು. ಆಯುರ್ವೇದದ ಪಂಡಿತ ರಾಮ ಜೋಯಿಸ್ ಎಂದರೆ ಸುತ್ತ ಮುತ್ತಲ ಸ್ಥಳಗಳಲ್ಲಿ ಪ್ರಖ್ಯಾತ. ಮನೆಯ ಪಕ್ಕದಲ್ಲಿ ಒಂದು ದೊಡ್ಡ ವೈದ್ಯಶಾಲೆ. ೮-೧೦ ಜನ ರೋಗಿಗಳಿಗೆ ತಂಗಲು ಕೊಠಡಿಗಳು. ಪಂಚಕರ್ಮ, ತರ್ಪಣ, ಶಿರೋಧಾರ, ಅಂಜನಾ ಚಿಕಿತ್ಸೆಗಳಲ್ಲಿ ಸಿದ್ದ ಹಸ್ತ. ಬೇರೆ ಬೇರೆ ದೇಶಗಳಿಂದ ಬಂದು “ಆರೋಗ್ಯಧಾಮ”ದಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಜೊತೆಗೆ ಶಾರದಾಮಾತೆ ದೇವಾಲಯದ ಮುಖ್ಯ ಅರ್ಚಕ. ನನಗೂ ಆಯುರ್ವೇದದ ಚಿಕಿತ್ಸೆಯ ಜ್ಞಾನವಿದೆ. ಜೊತೆಗೆ ವೇದ ಉಪನಿಷತ್ ಭಾಗವತದ ಕುರಿತು ಆಳವಾದ ಅರಿವು ಬಂದಿದ್ದು ಅಪ್ಪಾಜಿಯವರ ಸಂಗದಿಂದಲೇ. ಶಾರದಾ ದೇವಿಯ ಪೂಜೆ ಪುನಸ್ಕಾರಗಳಲ್ಲಿ ನಾನೂ ಭಾಗಿಯಾಗುತ್ತಿದ್ದೆ. ಹಣೆಗೆ ಕುಂಕುಮ ಗಂಧ ಹಚ್ಚಿಕೊಂಡು ಬಿಳುಪಾದ ಪಂಜೆಯುಟ್ಟು ಅಪ್ಪಾಜಿಯ ಜೊತೆ ದೇವಾಲಯಕ್ಕೆ ಹೋಗುವಾಗ ಎಲ್ಲರ ಗಮನ ನನ್ನತ್ತ ಇರುತ್ತಿತ್ತು. ನನ್ನ ಹರೆಯದ ವಯಸಿನಲ್ಲಿ ಮುಖದ ಪ್ರಶಾಂತತೆಯನ್ನು ನೋಡಿ ನನಗೆ ಹಲವರು ನಮಸ್ಕಾರ ಮಾಡಿ ಮುಂದೆ ಹೋಗುತ್ತಿದ್ದರು. ನನಗೆ ತುಂಬಾ ನಾಚಿಕೆಯಾಗುತ್ತಿತ್ತು. ನನ್ನಂತ ಹರೆಯದ ಹುಡುಗನಿಗೆ ಇದು ಮುಜುಗರವಾಗುತ್ತಿತ್ತು.

ನಾನು ಭಾವುಕನಾಗಿ ಅಪ್ಪಾಜಿಯ ಪಕ್ಕದಲ್ಲಿ ಕುಳಿತಿದ್ದೆ. ರುಕ್ಮಿಣಿ ನನ್ನ ಪಕ್ಕದಲ್ಲಿ ಬಂದು ಕುಳಿತಳು. ದಿನವೂ ಶಾರದಾ ದೇವಾಲಯಕ್ಕೆ ಹೂವು ತಂದು ಕೊಡುವುದು ಅವಳ ಕೆಲಸ, “ಏನೂ ಆಗಲ್ಲ ಸುಮ್ಮನಿರು” ಅಂತಂದಳು. ಆದರೂ ಅಲ್ಲಿ ನೆರೆದಿದ್ದ ಎಲ್ಲರಿಗೂ ಪರಿಸ್ಥಿತಿಯ ಗಂಭೀರತೆ ತಿಳಿದಿತ್ತು. ಗಂಗಾಜಲ ನನ್ನ ಪಕ್ಕದಲ್ಲಿ ಇರಿಸಿದ್ದರು. ಅಪ್ಪಾಜಿ ಕೊನೆ ಉಸುರಿನ ಮುನ್ನ ಗಂಗಾ ಜಲವನ್ನು ಕುಡಿಸಿದೆ. ಎಲ್ಲವು ಸ್ತಬ್ದ. ಮೌನವಾಗಿ ನನ್ನ ಕಣ್ಣಿಂದ ನೀರು ಹರಿಯಲಾರಂಭಿಸಿತು .

ಅತೀವ ದುಃಖ ಸಂಕಟಗಳಿಂದ ಎಲ್ಲ ಕಾರ್ಯಗಳನ್ನು ಮಾಡಿ ಮುಗಿಸಿದೆ. ಇದಾದ ಒಂದು ವಾರದಲ್ಲಿ ದೇವಸ್ಥಾನದ ಪೂಜೆ ಮುಗಿಸಿ ಮನೆಯ ಮುಂದೆ ಕುಳಿತಿದ್ದೆ. ದೊಡ್ಡ ಐಷಾರಾಮಿ ಕಾರೊಂದು ಮನೆಯ ಮುಂದೆ ನಿಂತಿತು. ಅದರಿಂದ ಮೂವರು ಕೆಳಗಿಳಿದರು. ಒಬ್ಬ ಮದ್ಯ ವಯಸ್ಸಿನವನು, ಇಬ್ಬರು ಹರೆಯದವರು ಅವರ ವೇಷ ಭೂಷಣ ಮುಸ್ಲಿಂ ಜನಾಂಗದಾಗಿತ್ತು. ಅದೇನು ಅಚ್ಚರಿಯ ವಿಷಯವಾಗಿರಲಿಲ್ಲ. ಆರೋಗ್ಯ ಧಾಮಕ್ಕೆ ದೇಶ ವಿದೇಶದವರು ಬರುವುದು ಸಾಮಾನ್ಯ.

ಆ ಮದ್ಯ ವಯಸ್ಸಿನವನು ಮಾತಾಡಲು ಪ್ರಾರಂಭಿಸಿದ “ರಾಮಾಜೋಯಿಸ್, ದೇವರಂತ ಮನುಷ್ಯ. ಖುದಾಗೆ ಇಷ್ಟ ಆಯಿತು ಅನಿಸತ್ತೆ. ನಿನಗೆ ಜೀವ ತುಂಬಿದವರು ಅವರೇ” ಅವರ ಮಾತು ನನಗೆ ಅರ್ಥವಾಗಲಿಲ್ಲ .

ಮುಂದಿನ ಅವನ ಮಾತುಗಳು ನನಗೆ ಆಘಾತ ಉಂಟುಮಾಡಿದವು. ನನಗೆ ೧ ವರ್ಷವಿದ್ದಾಗ ಅವರೇ ನನ್ನನ್ನು ಆರೋಗ್ಯ ಧಾಮಕ್ಕೆ ಸೇರಿಸಿದ್ದರಂತೆ. ನನ್ನ ಖಾಯಲೆ ವಾಸಿಮಾಡಲು ೩-೪ ವರ್ಷ ಜೋಯಿಸರು ತುಂಬಾ ಶ್ರಮ ಪಟ್ಟರಂತೆ. ನಂತರ ಅವರ ನಡುವೆ ಒಂದು ಒಪ್ಪಂದವಾಗಿತ್ತಂತೆ. ಅವರು ಬದುಕಿರುವವರೆಗೂ ನನ್ನನ್ನು ನೋಡಲು ಬರಬಾರದೆಂದು, ತಾನು ಮಗನಂತೆ ಸಾಕುತ್ತೇನೆ ಎಂದರಂತೆ. ಆ ಮದ್ಯ ವಯಸ್ಸಿನವ ಹೇಳಿದ “ನಮಗೆ ನಿನ್ನನ್ನು ಈ ದೇಶದ ಈ ಗುಡ್ಡ ಗಾಡಿನಲ್ಲಿ ಬಿಡಲು ಇಷ್ಟವಿರಲಿಲ್ಲ. ನಿನ್ನ ಅಮ್ಮಾಜಾನ್ದು ಒಂದೇ ಹಠ.. ಬೇಟಾ ಸುಖವಾಗಿದ್ದಾರೆ ಸಾಕು ಅಂತ. ಬೇರೆ ದಾರಿಯಿರಲಿಲ್ಲ. ಅರ್ಚಕರ ಸಾವಿನ ಸುದ್ದಿ ತಿಳಿದು ದುಬೈಯಿಂದ ಬಂದಿದ್ದೇವೆ. ಇವರು ನಿನ್ನ ಭಾಯಿಜಾನ್..! “ನನಗೆ ಇವರು ಏನು ಹೇಳುತ್ತಿದ್ದಾರೆ ಅಂತ ಅರ್ಥವಾಗದೆ ದಿಗ್ಭ್ರಮೆಯಾಗಿತ್ತು. ಮನೆಯ ಸುತ್ತಲೂ ಜನ ಸೇರಿದ್ದರು. “ಬೇಟಾ ನಿನ್ನ ಸ್ಥಿತಿ ನಮಗೆ ಅರ್ಥವಾಗತ್ತೆ. ಆದರೆ ನೀನು ನಮ್ಮವ. ಮುಸ್ಲಿಂ ರಕ್ತ ನಿನ್ನಲ್ಲಿ ಹರಿಯುತ್ತಿರೋದು.” ಬುದ್ದಿ ಮಂಕಾಗಿತ್ತು. ಇವನು ತನ್ನ ತಂದೆಯಂತೆ, ಅವರು ನನ್ನ ಅಣ್ಣಂದಿರು .. ಎಲ್ಲವು ಅಸಂಭದ್ದ ಎನಿಸಿತು. ತನ್ನಲ್ಲಿ ಭಾವನೆಗಳೇ ಉಕ್ಕಲಿಲ್ಲ. ಈ ಅಪರಿಚಿತರ ನಡುವೆ ನಿಲ್ಲಲಾಗದೆ ಗಟ್ಟಿಯಾಗಿ ಕಿರುಚಿದೆ. “ನನ್ನ ಬಿಟ್ಟು ಬಿಡಿ, ಸುಳ್ಳು ಕಥೆಗಳಿಂದ ನನ್ನನ್ನು ಮೂರ್ಖನನ್ನಾಗಿ ಮಾಡಬೇಡಿ”..! ಅವರು ಹೊರಡುವ ಮುನ್ನ “ಒಂದು ವಾರದಲ್ಲಿ ದುಬೈಗೆ ಹೊರಡುತ್ತೀದ್ದೇವೆ. ನಿನ್ನನ್ನು ನೋಡಲು ನಿನ್ನ ಅಮ್ಮಾ ಜಾನ್ ಕಾಯುತ್ತಿದ್ದಾಳೆ” ಕಾರು ಧೂಳೆಬ್ಬಿಸುತ್ತ ಹೊರಟುಹೋಯಿತು.

ಬೆಳಗ್ಗೆ ಏಳುವಾಗ ತಲೆ ಸಿಡಿಯುತ್ತಿತ್ತು. ಇದು ಸಾಧ್ಯವೇ? ನಾನು ಮುಸ್ಲಿಂ ಹುಡುಗ ಎಂದು ತಿಳಿದೂ ಅಪ್ಪಾಜಿ ಏಕೆ ನನ್ನನ್ನು ಸಾಕಿದರು. ಜೊತೆ ಆಯುರ್ವೇದ ಅರ್ಚಕಧರ್ಮ ಏಕೆ ಕಲಿಸಿದರು. ಬ್ರಾಹ್ಮಣ ಹುಡುಗರಂತೆ ಉಪನಯನ, ಬ್ರಹ್ಮೋಪದೇಶ, ಗಾಯತ್ರಿ ಜಪ ಏಕೆ ಕಲಿಸಿದರು ಎಷ್ಟು ಯೋಚಿಸಿದರು ಬಗೆ ಹರಿಯಲಿಲ್ಲ. ದೇವಸ್ಥಾನದ ಕಟ್ಟೆಯ ಮೇಲೆ ಕುಳಿತಿದ್ದೆ. ನನಗೆ ದೇವಾಲಯದ ಪ್ರವೇಶ ಉಚಿತವೇ ?. ತಾನು ಶಾರದಾ ದೇವಿ ಪೂಜೆ ಮಾಡುವುದು ಧರ್ಮವೇ ? .

ಪಕ್ಕದಲ್ಲಿ ಶೃಂಗೇರಿ ಬಸ್ ನಿಂತಿತ್ತು. ಏನನ್ನೋ ಯೋಚಿಸಿ ಬಸ್ ಹತ್ತಿದೆ. ಶೃಂಗೇರಿಯ ಗುರುಗಳ ಪಾದಕ್ಕೆ ಎರಗಿದೆ. ನನ್ನ ಸ್ಥಿತಿ ಅವರಿಗೆ ವಿವರಿಸಿದೆ. ಗುರುಗಳು “ಎಲ್ಲಿಯವರೆಗೆ ನಿನ್ನಲ್ಲಿ ದ್ವಂಧ್ವ ಇರುತ್ತದೆಯೋ ಅಲ್ಲಿಯವರೆಗೆ ನಿನಗೆ ಪೂಜೆ ಅನುಚಿತ. ಎಂದು ನೀನು ಸಂಪೂರ್ಣವಾಗಿ ಒಂದು ನಂಬಿಕೆಗೆ ಶರಣಾಗುತ್ತಿಯೂ ಅದೇ ನಿನ್ನ ಧರ್ಮ. ಅರ್ಚಕ ವೃತ್ತಿಗೆ ನಿನ್ನನ್ನು ಜನ ವಿರೋದಿಸಬಹುದು. ಬದುಕಲು ಅದೊಂದೇ ದಾರಿಯಲ್ಲ”. ಗುರುಗಳ ಕಾಲಿಗೆ ದೂರದಿಂದ ನಮಸ್ಕರಿಸಿದೆ.

ಹರಿಹರಪುರದಲ್ಲಿ ನನ್ನ ವಿಷಯ ಮನೆ ಮನೆ ಮಾತಾಗಿತ್ತು. ಎಲ್ಲರಿಗು ಅಚ್ಚರಿ. ರಾಮಾಜೋಯಿಸ್ ಅವರು ತಂಗಿಯ ಮಗ ಎಂದು ಹೇಳಿದ್ದರು. ಇದೇನು ಹೊಸಸುದ್ದಿ ?. ಉಳಿದ ಅರ್ಚಕರು, ಬ್ರಾಹ್ಮಣರು ನನ್ನನ್ನು ದೂರವಿಟ್ಟರು. ದೇವಾಲಯ ಪ್ರವೇಶ ನಿಷಿದ್ಧವಾಗಿತ್ತು. ಬರಿಯ ಒಂದು ಸುದ್ದಿಯಿಂದ ನನ್ನ ಬದುಕೇ ಬೇರಾಗಿತ್ತು.. ಮರುದಿನ ಆ ಕಾರು ಮತ್ತೆ ಬಂತು. ಮೂವರೂ ಬಗೆ ಬಗೆಯಾಗಿ ನನಗೆ ಹೇಳಿದರು. ದುಬೈನಲ್ಲಿ ಎರಡು ಹೋಟೆಲ್ಸ್ ಇದೆ. ತುಂಬಾ ಅನುಕೂಲವಾಗಿದೆ, ಬಂದುಬಿಡು ” ನನಗೆ ಕಣ್ಣು ಮುಚ್ಚಿದರೆ ತಾಯಿ ಶಾರದೆಯೇ ಬರುತ್ತಿದ್ದಳು. ಆಯುರ್ವೇದ, ಅಪ್ಪಾಜಿಯ ನೆನಪು ನನ್ನನ್ನು ಸ್ಥಿರವಾಗಿ ಉಳಿಸಿತ್ತು. “ಬೇಟಾ ನಿನಗೆ ಸಮಾಧಾನ ಆಗಿ ಬರಬೇಕು ಅನ್ನಿಸಿದಾಗಿ ಬಂದುಬಿಡು. “ಕಾರು ಹೊರಟುಹೋಯಿತು. ಅಲ್ಲೇ ನಿಂತು ನೋಡುತ್ತಿದ್ದ ರಹೀಮ್ ಕಾಕಾ ನನ್ನ ಹತ್ತಿರ ಬಂದು” ಅವರು ಹೇಳೂದು ನಿಜ ಬೇಟಾ. ನನಗೆ ಗೊತ್ತು”. ರಹೀಮ್ ಕಾಕಾ ಎಂದರೆ ಹರಿಹರಪುರದಲ್ಲಿ ತುಂಬಾ ಗೌರವ.

ಅಂದು ದೇವಸ್ಥಾನದ ಕಟ್ಟೆ ಮೇಲೆ ಕುಳಿತಿದ್ದೆ. ತಾಯಿ ಶಾರದೆಯ ವಿಗ್ರಹ ಕಾಣಿಸುತ್ತಿತ್ತು. ಹಾಗೆ ನೋಡುತ್ತಾ ಮುಸ್ಲಿಂ ಹೆಣ್ಣೊಬ್ಬಳ ಮುಖ ತೇಲಿಬಂತಂತೆ ಅನಿಸಿ ಕಣ್ಣು ತುಂಬಿಕೊಂಡಿತು. ಕಣ್ಣೀರು ಒರೆಸಿಕೊಂಡು ರಸ್ತೆಯತ್ತ ನೋಡಿದೆ. ಮಕ್ಕಳ ಜೊತೆ ಮೇರಿ ಟೀಚರ್ ರಸ್ತೆ ದಾಟುತ್ತಿದ್ದರು.. ಶೃಂಗೇರಿ ಬಸ್ ತಿರುವಿನಲ್ಲಿ ವೇಗವಾಗಿ ಬರುವುದನ್ನು ನೋಡಿ ಗಾಬರಿಯಿಂದ ಮಕ್ಕಳನ್ನು ಹಿಂದೆ ಎಳೆದುಕೊಂಡು ಆಯತಪ್ಪಿ ಬಿದ್ದಳು. ಅಲ್ಲಿದ್ದ ಚೂಪಾದ ಕಲ್ಲಿಗೆ ತಲೆ ಬಡಿದು ರಕ್ತ ಸುರಿಯತೊಡಗಿತು. ನಾನು ತಕ್ಷಣ ಅಲ್ಲಿಗೆ ಧಾವಿಸಿದೆ , ಅವಳ ಬಿಳಿಯ ಬಟ್ಟೆಗಳು ರಕ್ತಮಯವಾಗಿದ್ದವು. ಆಕೆಯು ನಡುಗುವ ಕೈಗಳಿಂದ ನನ್ನ ಕೈ ಹಿಡಿದುಕೊಂಡಳು. ಅಲ್ಲಿಯೇ ಇದ್ದ ಆಟೋದವನ ಸಹಾಯದಿಂದ ಅಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದೆ.

ಎರಡನೇ ದಿನ ಆಸ್ಪತ್ರೆಯಲ್ಲಿ ನರ್ಸ್ ಹೇಳಿದಳು “ನೀನು ಸೇರಿಸಿದ ಟೀಚರ್ ಈಗ ಗುಣಮುಖಳಾಗುತ್ತಿದ್ದಾಳೆ. ಏನೂ ಭಯವಿಲ್ಲ. ನಿನ್ನನ್ನು ನೋಡಲು ಅವಳು ಕಾಯುತ್ತಿದ್ದಾಳೆ “. ಇನ್ನೊಂದು ವಿಸ್ಮಯದ ವಿಚಾರ. ಒಂದು ತಿಂಗಳ ಹಿಂದೆ ಕ್ಯಾಂಪ್ನಲ್ಲಿ ನೀನು ಮಾಡಿದ ರಕ್ತದಾನ ಅವಳ ಜೀವ ಉಳಿಸಿದೆ. ತುಂಬಾ ರೇರ್ ಗ್ರೂಪ್ ಅದು. “ನಾನು ಆಕೆಯನ್ನು ನೋಡಲು ವಾರ್ಡ್ನತ್ತ ನಡೆದೆ. ಮೇರಿ ಟೀಚರ್ ನನ್ನನ್ನು ನೋಡಿ “ಥಾಂಕ್ ಯು ಮೈ ಸನ್, ನಿನ್ನ ಉಪಕಾರ ನಾನು ಮರೆಯಲ್ಲ. ಜೀಸಸ್ ನಿನಗೆ ಒಳ್ಳೆಯದು ಮಾಡುತ್ತಾನೆ” ಅವಳ ಕುತ್ತಿಗೆಯಲ್ಲಿದ್ದ ಶಿಲುಬೆಯ ಸರವನ್ನು ನನ್ನ ಕೈಯಲ್ಲಿ ಇಟ್ಟಳು.

“ನನ್ನ ಕುತ್ತಿಗೆಯಲ್ಲಿದ್ದ ಜನಿವಾರ, ನನ್ನ ಮುಸ್ಲಿಂ ರಕ್ತ, ನನ್ನ ಕೈಯಲ್ಲಿನ ಶಿಲುಬೆ ಸರ ಎಲ್ಲವೂ ನೀನಾರು ಎಂದು ಗಹಗಹಿಸಿ ನಕ್ಕಂತೆ ಅನಿಸಿತು”. ಮನಸಿನ ದ್ವಂದ್ವ ಮಾಯೆಯಾಗಿತ್ತು. ನನ್ನ ಹೆಜ್ಜೆಗಳು “ಆರೋಗ್ಯಧಾಮ” ದತ್ತ ಸಾಗಿತು.

ಚಿತ್ರ ಕೃಪೆ :- http://kids.baps.org

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments