ಕಡಲತಡಿಯಲ್ಲಿ ಮೊಳಗಲಿದೆ ಸಾಹಿತ್ಯ ಸಮ್ಮೇಳನದ ಝೇಂಕಾರ
– ರಾಜೇಶ್ ನರಿಂಗಾನ
ಹೌದು.. ಕಡಲತೀರ ಮಂಗಳೂರು ಒಂದು ವಿಶಿಷ್ಟ, ವಿನೂತನ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಜ್ಜುಗೊಂಡಿದೆ. ಇದನ್ನು ವಿಶಿಷ್ಟ, ವಿನೂತನ ಎಂದು ಕರೆಯುವುದಕ್ಕೂ ಕಾರಣವಿದೆ. ಇದು ದೇಶದಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿರುವ ಸಾಹಿತ್ಯದ ಉತ್ಸವ. ಜಗತ್ತು ಕಂಡ ಶ್ರೇಷ್ಠ ಸಂತ, ಸಿಡಿಲ ಸಂನ್ಯಾಸಿ ಸ್ವಾಮಿ ವಿವೇಕಾನಂದ ಮತ್ತು ಅವರ ಅಸ್ಖಲಿತ ವಾಗ್ಝರಿಗೆ ಮರುಳಾಗಿ ದೂರದ ಪಾಶ್ಚಿಮಾತ್ಯ ದೇಶವಾದ ಐರ್ಲೆಂಡಿನಿಂದ ಭಾರತಕ್ಕೆ ಆಗಮಿಸಿ, ಈ ದೇಶಕ್ಕಾಗಿ ತಮ್ಮನ್ನು ತಾವು ಸಂಪೂರ್ಣವಾಗಿ ನಿವೇದಿಸಿದ ಸೋದರಿ ನಿವೇದಿತಾ ಅವರ ಸಾಹಿತ್ಯದ ಸಂಗಮವಿದು. ಈ ಇಬ್ಬರು ಶ್ರೇಷ್ಟ ವ್ಯಕ್ತಿಗಳ ಸಾಹಿತ್ಯದ ಅಧ್ಯಯನ, ಅವರ ಜೀವನ ಪ್ರೇರಣೆಯ ಸಂದೇಶದ ಅಪೂರ್ವ ಸಮಾವೇಶವೇ “ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ”
ಈ ನಾಡಿನ ಖ್ಯಾತ ಚಿಂತಕ, ವಾಗ್ಮಿ, ಅಂಕಣಕಾರ ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ಕಳೆದ ಎರಡುವರೆ ವರ್ಷಗಳಿಂದ ಅನೇಕ ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಂಡು ಇಡೀ ರಾಷ್ಟ್ರದ ಗಮನ ಸೆಳೆದಿರುವ ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ನೇತೃತ್ವದಲ್ಲಿ ಈ ಅಭೂತಪೂರ್ವ ಸಾಹಿತ್ಯ ಸಮ್ಮೇಳನವು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಇದೇ ಫೆಬ್ರವರಿ 11 ಮತ್ತು 12 ರಂದು ಸಂಪನ್ನಗೊಳ್ಳಲಿದೆ.
ಸಾಹಿತ್ಯ ಸಮ್ಮೇಳನದಲ್ಲಿ ಏನಿದೆ?
ದಿನಾಂಕ 11.02.2017 ರ ಶನಿವಾರದಂದು ಬೆಳಿಗ್ಗೆ 9.30 ಗಂಟೆಗೆ ಸ್ವಾಮೀಜಿ ಮತ್ತು ಭಗಿನಿ ನಿವೇದಿತಾ ಅವರ ಸಾಹಿತ್ಯ ಭಂಡಾರಗಳನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಮೆರವಣಿಗೆಯ ಮೂಲಕ ಈ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ. ಸ್ವಾಮಿ ವಿವೇಕಾನಂದ ಮತ್ತು ಸೋದರಿ ನಿವೇದಿತಾ ಅವರ ಜೀವನ, ಸೇವಾ ಕಾರ್ಯ, ಪ್ರೇರಣೆಯ ಸಂದೇಶಗಳನ್ನು ಒಳಗೊಂಡ ಆರು ವಿಭಿನ್ನ ಗೋಷ್ಠಿಗಳು ಈ ಸಾಹಿತ್ಯ ಸಮ್ಮೇಳನದ ಒಟ್ಟು ಹೂರಣ. ಒಂದೊಂದು ಗೋಷ್ಠಿಯೂ ವಿಭಿನ್ನ ಪರಿಕಲ್ಪನೆಯಿಂದ ಕೂಡಿರುವುದರಿಂದ ಸ್ವಾಮೀಜಿ ಮತ್ತು ಅಕ್ಕ ನಿವೇದಿತಾರಿಂದ ಪ್ರೇರಣೆ ಪಡೆದು ಸಮಾಜದ ವಿವಿಧ ಸ್ಥರಗಳಲ್ಲಿ ಸಾಧನೆಗೈದ ಅನೇಕ ಸಾಧಕರು, ಸಂತರು ಈ ಎಲ್ಲಾ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ. ಜೊತೆಗೆ ಸಮಾಜದ ವಿವಿಧ ಮಜಲುಗಳಲ್ಲಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಿರುವ ಸಂಘ ಸಂಸ್ಥೆಗಳ ಪ್ರದರ್ಶಿನಿ ಈ ಸಮ್ಮೇಳನದಲ್ಲಿ ಸಮ್ಮಿಳನಗೊಂಡಿದೆ.
ರಾಷ್ಟ್ರಭಕ್ತಿಗೆ ಪರ್ಯಾಯ ಪದವೇ ಸ್ವಾಮಿ ವಿವೇಕಾನಂದ. ಬೆಳೆಯುತ್ತಿರುವ ನವ ತರುಣ ಜನಾಂಗದಲ್ಲಿ ರಾಷ್ಟ್ರಭಕ್ತಿಯನ್ನು ಉದ್ದೀಪಿಸಲು ‘ ಗೆಲುವೇ ಗುರಿ’ ‘ಮಕ್ಕಳ ಸಮಾವೇಶ’, ಮಾತೃ ಶಕ್ತಿಯನ್ನು ಜಾಗೃತಗೊಳಿಸಲು ಕಾಲೇಜು ವಿದ್ಯಾರ್ಥಿನಿಯರಿಗಾಗಿ ‘ ಶಕ್ತಿ ಸ್ವರೂಪಿಣಿ’ ಎಂಬ ಪರಿಕಲ್ಪನೆಯೊಂದಿಗೆ ‘ಸ್ತ್ರೀ ಸಮಾವೇಶ’, ಸದೃಢ ದೇಹ ಸುಭದ್ರ ಸಮಾಜ’ ಎನ್ನುವ ಪರಿಕಲ್ಪನೆಯೊಂದಿಗೆ ಸಂಪನ್ನಗೊಳ್ಳಲಿರುವ ‘ ಗರಡಿಯಾಳುಗಳ ಸಮಾವೇಶ’, ಸ್ವಾಮೀಜಿ ಪಶ್ಚಿಮದ ದಿಗ್ವಿಜಯವನ್ನು ಮುಗಿಸಿ ಮಾತೃಭೂಮಿಗೆ ಮರಳಿದಾಗ ಮದ್ರಾಸಿನ ಕಡಲತೀರದ ಮೀನುಗಾರರು ತಮ್ಮ ಮನೆಗಳಲ್ಲಿ ದೀಪ ಹಚ್ಚಿ, ರಂಗೋಲಿ ಬಿಡಿಸಿ ಭವ್ಯ ಸ್ವಾಗತ ಕೋರಿದ್ದನ್ನು ಪುನರ್ ಸ್ಮರಿಸುವ ಸಲುವಾಗಿ ‘ಅವಕಾಶಗಳ ಸಾಗರ’ ಎಂಬ ಪರಿಕಲ್ಪನೆಯೊಂದಿಗೆ ‘ಮೀನುಗಾರರ ಸಮಾವೇಶ’, ಸಮಾಜದ ವಿವಿಧ ಸ್ಥರಗಳಿಗೆ ಸಂಪರ್ಕ ಕಲ್ಪಿಸುವ ರಾಯಭಾರಿಗಳಾದ ರಿಕ್ಷಾ ಸಾರಥಿಗಳಿಗಾಗಿ ‘ರಾಷ್ಟ್ರ ರಥದ ಚಾಲಕ ಶಕ್ತಿ’ ಎಂಬ ಪರಿಕಲ್ಪನೆಯೊಂದಿಗೆ ‘ಸಾರೋಟುವಾಲಾ ಸಮಾವೇಶ’ ಈ ಸಾಹಿತ್ಯ ಸಮ್ಮೇಳನಕ್ಕೆ ಇನ್ನಷ್ಟು ಮೆರುಗು ನೀಡಲಿದೆ. ಜೊತೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹದಿನೈದಕ್ಕೂ ಹೆಚ್ಚು ಕಾಲೇಜುಗಳಲ್ಲಿ ಸ್ವಾಮಿ ವಿವೇಕಾನಂದ ಮತ್ತು ಸೋದರಿ ನಿವೇದಿತಾ ಅವರ ಜೀವನ ಪ್ರೇರಣೆಯ ಸಂದೇಶಗಳನ್ನು ತಲುಪಿಸುವ ಉದ್ದೇಶದಿಂದ ‘ಕಾಲೇಜು ವಿದ್ಯಾರ್ಥಿ ಸಮಾವೇಶ’ಗಳು ಶನಿವಾರದಂದು ನಡೆಯಲಿವೆ.
“ಭಾರತವನ್ನು ತಿಳಿದುಕೊಳ್ಳಬೇಕೇ? ಹಾಗಿದ್ದರೆ ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ” ಎಂದಿದ್ದರು ಭಾರತ ಕಂಡ ಶ್ರೇಷ್ಠ ಕವಿ ರವೀಂದ್ರನಾಥ್ ಟಾಗೋರರು. ನರೇಂದ್ರನಾಥ ಜನಿಸುವ ಮೊದಲು ಭಾರತ ಹೇಗಿತ್ತು? ನರೇಂದ್ರನಾಥ ವಿವೇಕಾನಂದ ಆಗುವ ಸಮಯದಲ್ಲಿ ಭಾರತ ಯಾವ ಪರಿಸ್ಥಿತಿಯಲ್ಲಿತ್ತು.? ವಿವೇಕಾನಂದರ ಪಶ್ಚಿಮದ ಜ್ಞಾನ ದಿಗ್ವಿಜಯದ ನಂತರ ಭಾರತದ ಸ್ಥಿತಿ ಹೇಗೆ ಬದಲಾಯಿತು? ವಿವೇಕಾನಂದರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಪ್ರೇರಣೆಗಳೇನು? ಇವೆಲ್ಲವನ್ನೂ ಇತಿಹಾಸದ ಪರಿಕಲ್ಪನೆಯಲ್ಲಿ ‘ನರೇಂದ್ರ ಪೂರ್ವ’ ಮತ್ತು ‘ನರೇಂದ್ರ ಶಕ’ ಎಂದು ಹೇಳಬಹುದು. ಈ ಕುರಿತ ವಿಭಿನ್ನ ಕಥನವೇ ‘ನರೇಂದ್ರ ಭಾರತ’. ಈ ನರೇಂದ್ರ ಭಾರತ ಕಥನ ಕಾರ್ಯಕ್ರಮವು ಶನಿವಾರದಂದು ಸಂಜೆ 6.30ರಂದು ಶ್ರೀ ಚಕ್ರವರ್ತಿ ಸೂಲಿಬೆಲೆಯವರ ನೇತೃತ್ವದಲ್ಲಿ ನಡೆಯಲಿದೆ. ಇದಕ್ಕೆ ಕಿರಿಕ್ ಪಾರ್ಟಿ ಸಿನೆಮಾ ಖ್ಯಾತಿಯ ರಕ್ಷಿತ್ ಶೆಟ್ಟಿ ಕೂಡ ಸಾಥ್ ನೀಡಲಿದ್ದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡಲಿದ್ದಾರೆ.
ಪೂರ್ವದ ವಿವೇಕಾನಂದರು ಪಶ್ಚಿಮದಲ್ಲಿ ಮಿಂಚಿದ ಬಗೆ, ಭಾರತದಲ್ಲಿ ಜಡುಕಟ್ಟಿ ಹೋಗಿದ್ದ ತರುಣ ಜನಾಂಗವನ್ನು ಮತ್ತೆ ರಾಷ್ಟ್ರದೀವಿಗೆಯ ಯಜ್ಞಕ್ಕೆ ಸಮರ್ಪಿಸಲು ನೀಡಿದ ಪ್ರೇರಣೆ, ಸ್ವಾಮೀಜಿಯವರು ಭಾರತದ ಆಧ್ಯಾತ್ಮಿಕ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರಿದ ಶೈಲಿ, ಪಶ್ಚಿಮದ ಅಕ್ಕ ನಿವೇದಿತಾ ಪೂರ್ವದಲ್ಲಿ ತಮ್ಮನ್ನು ತಾವು ಸಮಾಜಕ್ಕೆ ನಿವೇದಿಸಿಕೊಂಡ ರೀತಿ, ಕಲ್ಲು ಮುಳ್ಳಿನ ಹಾದಿಯಲ್ಲಿ ಕೈಗೊಂಡ ಸೇವಾ ಕಾರ್ಯ ಇವೆಲ್ಲವುಗಳನ್ನೂ ಒಂದೇ ವೇದಿಕೆಯಡಿ ವಿವಿಧ ಮಜಲುಗಳಲ್ಲಿ ತೆರೆದಿಡುವ ಪ್ರಯತ್ನವೇ ಈ ಸಾಹಿತ್ಯ ಸಮ್ಮೇಳನ. ಸಾಹಿತ್ಯ ಸಮ್ಮೇಳನವೆಂದರೆ ಕೇವಲ ಕವನ ವಾಚನ; ತಲೆ ಮೇಲಿಂದ ಹಾದು ಹೋಗುವ ವಿಚಾರಗಳ ಕುರಿತಾದ ಗೋಷ್ಠಿಗಳು ಎನ್ನುವ ಕಾಲಘಟ್ಟದಲ್ಲಿ, ನಿಜವಾದ ಸಾಹಿತ್ಯ ಸಮ್ಮೇಳನವೆಂದರೆ ಸಮಾಜದ ವಿವಿಧ ಸ್ಥರಗಳನ್ನು ಒಗ್ಗೂಡಿಸುವ ಸಮಾವೇಶ ಎನ್ನುವ ಪರಿಕಲ್ಪನೆ ನಮ್ಮದು. ಸಾಹಿತ್ಯವು ಒಂದು ಪಂಥದ ಸ್ವತ್ತಲ್ಲ ಅದು ಸಮಸ್ತ ದೇಶವಾಸಿಗಳ ಆಸ್ತಿ ಎಂಬ ಆಶಯದೊಂದಿಗೆ ಯಾವುದೇ ಪಂಥ ಭೇದವಿಲ್ಲದೆ ನಡೆಯಲಿದೆ ಈ ಸಾಹಿತ್ಯ ಸಮ್ಮೇಳನ. ಹಾಗಿದ್ದರೆ ತಡವೇಕೆ? ಬನ್ನಿ.. ನಮ್ಮೊಂದಿಗೆ ಕೈ ಜೋಡಿಸಿ.. ಎರಡು ದಿನಗಳ ಕಾಲ ನಡೆಯಲಿರುವ ಈ ವಿನೂತನ ರಾಷ್ಟ್ರಭಕ್ತಿ ಪ್ರೇರಿತ ಈ ಜಾತ್ರೆಯಲ್ಲಿ ಪಾಲ್ಗೊಂಡು ಸಾಹಿತ್ಯದ ರಸದೌತಣವ ಸವಿಯೋಣ. ಈ ಮೂಲಕ ನಾವೆಲ್ಲರೂ ಸ್ವಾಮಿ ವಿವೇಕಾನಂದ ಮತ್ತು ಅಕ್ಕ ನಿವೇದಿತಾರ ಜೀವನ ಪ್ರೇರಣೆಯ ಸಂದೇಶಧಾರಕರಾಗೋಣ. ಸಂದೇಶವಾಹಕರಾಗೋಣ.