ಶಿಕ್ಷಣದಿಂದ ಸ್ತ್ರೀ ಮತ್ತು ಉಕ್ಕಿನ ತರುಣ ಪಡೆ; ಎರಡು ತತ್ವಗಳ ಸಂಗಮ ಈ ಸಾಹಿತ್ಯ ಸಮ್ಮೇಳನ
– ಅಕ್ಷತಾ ಬಜ್ಪೆ
ವಿವೇಕಾನಂದರ ಪಶ್ಚಿಮದ ದಿಗ್ವಿಜಯದ ಕಥೆ ನಮಗೆಲ್ಲ ಗೊತ್ತೇ ಇದೆ. ಆದರೆ ಈ ಒಂದು ದಿಗ್ವಿಜಯ ಗುರು–ಶಿಷ್ಯೆಯರ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು. ದೇಶಕ್ಕೆ ಶುಭಶಕುನವಾಯಿತು. ಸ್ವಾಮಿ ವಿವೇಕಾನಂದರು ಹೋದಲ್ಲೆಲ್ಲಾ ಅವರನ್ನು ಅನುಸರಿಸುತ್ತಾ ಅವರ ಉಪನ್ಯಾಸಗಳನ್ನು ಕೇಳುತ್ತಿದ್ದ ಐಯರ್ಲೆಂಡಿನ ಮಾರ್ಗರೆಟ್ ಗೆ ಭಾರತದ ಬಗ್ಗೆ ಇದ್ದ ಕುತೂಹಲ ಹೆಚ್ಚಾಗುತ್ತಲೇ ಹೋಯಿತು. ಭಾರತಕ್ಕೆ ಬರಲು ಉತ್ಸುಕರಾಗತೊಡಗಿದರು. ಇದಕ್ಕಾಗಿ ಸ್ವಾಮೀಜಿಯವರಲ್ಲಿ ನಿವೇದನೆಯನ್ನು ಸಲ್ಲಿಸಿದರು. ಆದರೆ ಸ್ವಾಮೀಜಿ ಒಪ್ಪಲಿಲ್ಲ. ಸ್ವಾಮೀಜಿಯವರು ತಮ್ಮ ಮೊದಲ ಯುರೋಪ್ ಪ್ರವಾಸ ಮುಗಿಸಿ ಆಗಷ್ಟೇ ಭಾರತಕ್ಕೆ ಹಿಂದಿರುಗಿದ್ದರು. ಪರಿಸ್ಥಿತಿಗೆ ಸ್ಪಂದಿಸಿದ ಸ್ವಾಮೀಜಿ ಮಾರ್ಗರೆಟ್ ಗೆ ಪತ್ರ ಬರೆದು ಭಾರತಕ್ಕೆ ಬರುವಂತೆ ಸೂಚನೆಯಿತ್ತರು.
ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಸೋದರಿ ನಿವೇದಿತಾ ಭೋಗ ಭೂಮಿಯನ್ನು ತೊರೆದು ಯೋಗ ಭೂಮಿಯತ್ತ ಪಯಣಿಸಿದರು. ಹೊರಡುವ ಮುಂಚೆಯೇ ಭಾರತದಲ್ಲಿನ ದಯನೀಯ ಪರಿಸ್ಥಿತಿಯನ್ನು ವಿವರಿಸಿದ್ದ ಸ್ವಾಮೀಜಿಗೆ ‘ನಿಮ್ಮ ಜನರೇ ಇನ್ನು ನಮ್ಮ ಜನರು’ ಎಂದು ಸಮಾಧಾನ ಪಡಿಸಿದ್ದರು.ಒಂದು ರೆಕ್ಕೆಯಿಂದ ಹಕ್ಕಿ ಹಾರಲಾರದು ಅಂತೆಯೇ ಪುರುಷರ ಜೊತೆಯಾಗಿ ಸ್ತ್ರೀಯರೂ ಶಿಕ್ಷಿತರಾಗಿ ಬಲಿಷ್ಟರಾದರೆ ಮಾತ್ರ ಸಧೃಡ ಭಾರತವನ್ನು ಕಟ್ಟಲು ಸಾಧ್ಯ ಎಂಬ ಚಿಂತನೆ ಹೊಂದಿದ್ದರು. ಸ್ವಾಮೀಜಿ ‘ತಾಯಿಯ ಮೃದು ಹೃದಯ, ಯೋಧನ ವಿರ್ಯೋತ್ಸಾಹಗಳು, ತತ್ವಜ್ಞಾನಿಯ ಬೌದ್ಧಿಕ ಪ್ರತಿಭೆ, ಸಂತನ ದಿವ್ಯದೃಷ್ಟಿ, ದೇಶ ಪ್ರೇಮಿಯ ರಾಷ್ಟ್ರಪ್ರಜ್ಞೆ ಇದೆಲ್ಲಾ ಏಕತ್ರ ಕಲಿತ ನಾರೀಮಣಿ ನಿವೇದಿತಾ, ಸ್ವಾಮೀಜಿಗೆ ತಮ್ಮ ಇಂಗ್ಲೆಂಡ್ ಕಾರ್ಯದ ಪರಿಣಾಮವಾಗಿ ದೊರೆತಂತಹ ಅತ್ಯಂತ ಶ್ರೇಷ್ಟ ಪುಷ್ಪ.
ಸ್ವಾಮೀಜಿಯವರ ತೇಜಃಪೂರ್ಣ ಮಾತಿಗೆ ತಲೆದೂಗಿದ ನಿವೇದಿತಾ, ಅವರ ಆಣತಿಯಂತೆ ಭಾರತಕ್ಕೆ ಬಂದಿಳಿದರು. ಭಾರತದ ಸ್ತ್ರೀ ಸಂಕುಲದ ಮಧ್ಯೆ ಇವರ ಆಗಮನ ವಿದ್ಯುತ್ ಸಂಚಾರವನ್ನೇ ತಂದಿತು. ಆದರೆ ನಿವೇದಿತಾರ ಹಾದಿ ಸುಗಮವಾಗಿರಲಿಲ್ಲ. ಯೂರೋಪಿನಿಂದ ಬಂದ ಈ ಶ್ವೇತ ಕುವರಿಯನ್ನು ಜನ ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. ಹಲವಾರು ಕಡೆ ಆಕೆಯನ್ನು ತಿರಸ್ಕಾರ ಭಾವದಿಂದಲೇ ಕಂಡರು. ಆದರೆ “ತನಗೆ ದೇವಭೂಮಿ ಇದು” ಎಂದು ದೃಢವಾಗಿ ಸಂಕಲ್ಪ ಮಾಡಿದ್ದ ಆಕೆಗೆ ಇದು ಬೇಸರ ತರಿಸಲಿಲ್ಲ, ಬದಲಾಗಿ ಅಸಹಾಯಕರಾಗಿ ಮನೆಯೊಳಗೆ ಕುಳಿತಿದ್ದ ಸ್ತ್ರೀಯರಿಗೆ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವ ಹೊಸ ಕೈಂಕರ್ಯವನ್ನು ಕೈಗೆತ್ತಿಕೊಳ್ಳುವಂತೆ ಮಾಡಿತು. ಏಕೆಂದರೆ ಇವರು ಈ ಭೂಮಿಗಾಗಿ ಮಾಡಿದ ಕೆಲಸಗಳು ನಮಗಾಗಿ ಮಾಡಿದ ಸೇವೆ ಬಣ್ಣಿಸದಸದಳವಾದದ್ದು. ಇಂತಹ ತ್ಯಾಗ – ಸೇವೆ ಮಾತೃ ಹೃದಯವೊಂದರಿಂದ ಮಾತ್ರ ಮೂಡಿಬರಲು ಸಾಧ್ಯ.
ಸಮಕಾಲೀನ ವ್ಯಕ್ತಿಯಾಗಿದ್ದ ಪ್ರತ್ಯಕ್ಷದರ್ಶಿ ಡಾ. ರಾಧಾ ಗೋವಿಂದಕರ್ ಒಂದು ಘಟನೆಯನ್ನು ಹೀಗೆ ವಿವರಿಸುತ್ತಾರೆ.
ಒಂದು ದಿನ ಮಧ್ಯಾಹ್ನ ಪ್ಲೇಗ್ ರೋಗವಿದ್ದ ಶಿಶುವನ್ನು ತಮ್ಮ ಮನೆಗೆ ತಂದು 2 ದಿನ ನಿರಂತರ ಶುಶ್ರೂಶೆ ಮಾಡಿ ಕೊನೆಗೆ ಆ ಪುಟ್ಟ ಮಗು ಆಕೆಯ ಮಡಿಲಲ್ಲೇ ಚಿರನಿದ್ರೆಯನ್ನು ಪಡೆಯಿತು. ಆಹಾ! ಎಂತಹ ಹೃದಯ ವೈಶಾಲ್ಯತೆ. ಇಂತಹ ದಿವ್ಯ ಚೇತನಗಳ ಪರಂಪರೆಯಿಂದಲೇ ಬಹುಶಃ ಭಾರತ ವಿಶ್ವಗುರುವಾಗಿದ್ದು ಎನಿಸುತ್ತದೆ. ಇಂತಹ ಸಾವಿರ ಸಾವಿರ ಸೇವೆ–ಶ್ರಮ–ತ್ಯಾಗಗಳ ಪುಂಖಾನುಂಪುಖದ ಕಥೆಗಳೇ ನಿವೇದಿತಾರ ಬದುಕು.ಭಾರತೀಯ ಸಮಾಜ “ಶಿಕ್ಷಣ” ದಿಂದ ಮಾತ್ರ ಪುಟಿದೇಳಬಲ್ಲದು. ಶಿಕ್ಷಣ ಮಾತ್ರ ಪುನರ್ ಚೈತನ್ಯ ತುಂಬಬಲ್ಲದು. ಅದರಲ್ಲಿಯೂ ಮಹಿಳಾ ಶಿಕ್ಷಣದಿಂದ ಮಾತ್ರ ದೇಶವನ್ನು ಪುನರ್ ನಿರ್ಮಾಣ ಮಾಡಲು ಸಾಧ್ಯ ಎಂಬ ಸ್ವಾಮಿ ವಿವೇಕಾನಂದರ ದೂರದೃಷ್ಟಿಯ ಚಿಂತನೆಯನ್ನು ಅವರ ಆದೇಶವೆಂದೇ ಶಿರಸಾವಹಿಸಿ ಪಾಲಿಸಿದ್ದರು ನಿವೇದಿತಾ.
ತಮ್ಮ ತೀವ್ರ ಕಾರ್ಯದೊತ್ತಡದ ನಡುವೆ ವಿದ್ಯಾಲಯವನ್ನು ಎಂದೂ ನಿವೇದಿತ ನಿರ್ಲಕ್ಷಿಸಲಿಲ್ಲ, ಜೊತೆಗೆ, ತಾವೂ ಭಾರತದ ಪುತ್ರಿಯರು ಎಂಬ ಭಾವನೆ ಬಾಲಕಿಯರ ಮನಸ್ಸಿನಲ್ಲಿ ದೃಢವಾಗಿ ಬೇರೂರುವಂತೆ ಮಾಡಿದರು ನಿವೇದಿತಾ. ಬಾಲಕಿಯರ ಸರ್ವತೋಮುಖ ಅಭಿವೃದ್ಧಿಯೇ ಸೋದರಿ ನಿವೇದಿತಾರ ಪರಮೋದ್ದೇಶವಾಗಿತ್ತು. ಈಕೆಯ ವಿದ್ಯಾದಾನಕ್ಕೆ ಎರಡು ದೊಡ್ಡ ವಿಘ್ನಗಳಿದ್ದವು. ಗೈರು ಹಾಜರಿ ಮತ್ತು ಬಾಲ್ಯವಿವಾಹ ಹೆತ್ತವರ ನಿರ್ಲಕ್ಷ್ಯ, ಸ್ವಲ್ಪ ತರಬೇತುಗೊಂಡ ಮಕ್ಕಳ ಬಾಲ್ಯ ವಿವಾಹ ಇಂತಹ ಹಲವಾರು ಅಡಚಣೆಗೆಳ ಮಧ್ಯೆ ಧೈರ್ಯಗೆಡದೆ ಶಾಲೆಯನ್ನು ಉತ್ತಮಗೊಳಿಸುವ ಭಗೀರಥ ಪ್ರಯತ್ನ ಮಾಡಿದರು. ‘ಶಿಕ್ಷಣವನ್ನು ಆಧ್ಯಾತ್ಮದ ಅಂಗ’ ಎಂದು ಆಕೆ ಭಾವಿಸಿದ್ದರಿಂದಲೇ ಕಲಕತ್ತೆಯಲ್ಲಿ ಇರುವಷ್ಟು ಕಾಲವೂ ಹಗಲಿರುಳೂ ಅದಕ್ಕಾಗಿ ದುಡಿದಳು.
ಗಿರಿಬಾಲಾ ಘೋಷ್ ಎಂಬ 22 ವಯಸ್ಸಿನ ತರುಣಿಯನ್ನು ಶಾಲೆ ಬಿಡಿಸಿದ ಹೆತ್ತವರು ಚಿಕ್ಕಪ್ಪನ ಮನೆಗೆ ಕುಳ್ಳಿಸಿದರು. ಒಂದು ದಿನ ಶಾಲೆಯಲ್ಲಿ ನಡೆಯುತ್ತಿದ್ದ ಪ್ರಾರ್ಥನೆ ಕೇಳಿಸಿಕೊಂಡ ಅಜ್ಜಿ ಆಕರ್ಷಿತಳಾಗಿ ತಾನೇ ಮೊಮ್ಮಗಳನ್ನು ಪುನಃ ಶಾಲೆಗೆ ಸೇರಿಸಿದಳು. ಹೀಗೆ ನಿವೇದಿತಾ ಶಾಲೆಯನ್ನು ಆನಂದಧಾಮವಾಗಿ ಪರಿವರ್ತಿಸಿದ್ದರು ಅವತ್ತಿನ ದಿನಗಳಲ್ಲಿ ಭಾರತೀಯ ಸ್ತ್ರೀ ಕುಲದ ಬೆನ್ನೆಲುಬಾಗಿ ನಿಂತರು. ಪ್ರತೀ ಸ್ತ್ರೀಗೆ ಶಿಕ್ಷಣದ ಮೂಲಕ ಸ್ವಾಭಿಮಾನವನ್ನು ಧಾರೆಯೆರೆದರು. ನಿವೇದಿತಾರ ಈ ಸೇವಾಕಾರ್ಯದುದ್ದಕ್ಕೂ ಸ್ವಾಮಿ ವಿವೇಕಾನಂದರು ಸದಾ ಸಹಕಾರ ಹಾಗೂ ಮಾರ್ಗದರ್ಶನ ನೀಡುತ್ತಿದ್ದರೂ, ನಿವೇದಿತಾ ಸ್ವತಂತ್ರವಾಗಿ ತಮ್ಮ ಎಲ್ಲ ಕೆಲಸಗಳನ್ನು ನಿರ್ವಹಿಸಬೇಕು ಹಾಗೂ ತಮ್ಮ ಚಿಂತನೆಗಳನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳಬೇಕೆಂದು ಸ್ವಾಮೀಜಿ ಬಯಸಿದ್ದರು. ಒಮ್ಮೆ ತಾವು ಈ ಆಶಯವನ್ನು ಆಶೀರ್ವಾಣಿಯ ಮೂಲಕ ಆಕೆಯಲ್ಲಿ ನಿವೇದಿಸಿದ್ದರು ಕೂಡ.
“ತಾಯಿಯ ಹೃದಯ, ಮಲಯ ಮಾರುತದ ಸ್ನಿಗ್ಧ ಮಧುರತೆ, ಆರ್ಯವೇದಿಯ ಮೇಲೆ, ಯಾವ ಪವಿತ್ರ ಕಾಂತಿ ಮತ್ತು ಶಕ್ತಿ ಸ್ವತಂತ್ರವಾಗಿ ಪ್ರಜ್ವಲಿಸುತ್ತಿರುವುದೋ ಅದು, ವೀರನ ದೃಢತೆ, ಇವೆಲ್ಲವೂ ನಿನ್ನ ಪಾಲಿಗಿರಲಿ. ಇಷ್ಟೇ ಅಲ್ಲದೆ ಹಿಂದೆಂದೂ ಯಾರೂ ಕನಸಿನಲ್ಲಿಯೂ ಕಾಣದ ಇನ್ನೂ ಅನೇಕವೂ ನಿನ್ನ ಪಾಲಿಗಿರಲಿ. ಭಾರತದ ಭವಿಷ್ಯತ್ ಪುತ್ರರಿಗೆ ನೀನು ತಾಯಿಯಾಗಿಯೂ, ಸೇವಕಿಯಾಗಿಯೂ, ಬಂಧುವಾಗಿಯೂ ಇರು”.
ಇಂತಹ ಶಕ್ತಿಯುತವಾದ ವೀರ ನುಡಿಗಳು ನಿವೇದಿತಾರನ್ನು ವ್ಯಕ್ತಿಯಿಂದ, ಭಾರತದ ಶಕ್ತಿಯನ್ನಾಗಿ ಪರಿವರ್ತಿಸಿತು. ಸೂರ್ಯನ ಬೆಳಕನ್ನು ತಾನು ಹೀರಿ, ಕತ್ತಲಿನಲ್ಲಿ ಚಂದ್ರನು ಅದನ್ನು ತಾನು ಪ್ರತಿಫಲಿಸುವಂತೆ ಸೋದರಿ ನಿವೇದಿತಾ ವಿವೇಕಾನಂದರ ಚಿಂತನೆಗಳಿಗೆ ಮೂರ್ತರೂಪವಾಗಿ ಬೆಳಗಿದರು. ಜೊತೆಗೆ ಈ ಪುಣ್ಯಭೂಮಿಯನ್ನು ಬೆಳಗಿದರು.
ಇಂತಹ ದಿವ್ಯಪುಷ್ಪವು ಭಾರತಾಂಬೆಯ ಸೇವೆಗಾಗಿ ಜನಿಸಿ ಈ ವರ್ಷಕ್ಕೆ 150 ವಸಂತಗಳು ಸಂದಿವೆ. ಸ್ವಾಮಿ ವಿವೇಕಾನಂದರ ಚಿಂತನೆಗಳ ಜೀವಂತ ಮೂರ್ತಿಯಾಗಿ ಬಾಳಿದ ನಿವೇದಿತಾ ನಮಗೆ, ಇಂದಿನ ಸ್ತ್ರೀ ಸಮಾಜಕ್ಕೆ ಕೈ ತುಂಬಾ ಜವಾಬ್ದಾರಿಗಳನ್ನು, ಆದರ್ಶಗಳನ್ನು ಬಿಟ್ಟುಹೋಗಿದ್ದಾಳೆ. ಆಕೆಯ ಮೂಲಕ ಕೈಗೂಡಬೇಕಿದ್ದ ಸ್ವಾಮಿ ವಿವೇಕಾನಂದರ ಸಂಕಲ್ಪಗಳನ್ನು ಅರಳಿಸಿ, ಭಾರತವನ್ನು ಜಗಜ್ಜನನಿಯಾಗಿಸಬೇಕಿದೆ. ಭವ ಸಾಗರವ ದಾಟಿಸಲು ಪಶ್ಚಿಮದಿಂದ ಏಳು ಕಡಲು ದಾಟಿ ಪೂರ್ವಕ್ಕೆ ಆಕೆ ಕಟ್ಟ ಹೊರಟ ಸೇತುವಿಗೆ ನಮ್ಮದೂ ಅಳಿಲು ಸೇವೆಯಿರಲಿ. ತುಕ್ಕು ಹಿಡಿಯುವುದಕ್ಕಿಂತ ಸವೆಯುವುದು ಲೇಸಲ್ಲವೇ?
ಅಂಥ ಗುರು-ಶಿಷ್ಯೆ ಸಂಗಮವನ್ನು ಅರ್ಥಪೂರ್ಣವಾಗಿ ಸಮಾಜಕ್ಕೆ ಕಾರ್ಯಕ್ರಮವೊಂದು ದೇಶದಲ್ಲೇ ಮೊದಲ ಬಾರಿಗೆ ನಡೆಯುತ್ತಿದೆ. ಸ್ವಾಮಿ ವಿವೇಕಾನಂದ ಮತ್ತು ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ಇಂದು ಮತ್ತು ನಾಳೆ ನಡೆಯಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಯುವಕರು ಉತ್ಸಾಹಭರಿತರಾಗಿ ಅದರಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂಗಮವನ್ನು, ಸಂಭ್ರಮವನ್ನು ಸ್ರಷ್ಟಿಸಲು ಶಿಕ್ಷಣದಿಂದ ಸ್ತ್ರೀ ಎಂದ ಅಕ್ಕ ನಿವೇದಿತಾ ಮತ್ತು ಉಕ್ಕಿನ ಶಕ್ತಿಯ ತರುಣಪಡೆಗಲ್ಲದೆ ಇನ್ನಾರಿಗೆ ಸಾಧ್ಯ? ಅವೆರಡೂ ಮಂಗಳೂರಿನಲ್ಲಿ ಈ ಎರಡು ದಿನಗಳಲ್ಲಿ ಮಿಂದೇಳಲಿದೆ.
ಅಕ್ಷತಾ ಬಜ್ಪೆಯವರೇ, ತಮಗೆ ನನ್ನ ಮನದಾಳದ ಮಾತುಗಳನ್ನು ಹೇಳಲೇಬೇಕಿದೆ. ನಾನು ಆಗಾಗ್ಗೆ ಸ್ವಾಮಿ ವಿವೇಕಾನಂದರ ಬಗ್ಗೆ ಬರುವ/ಸಿಗುವ ಲೇಖನಗಳನ್ನು ಓದುತ್ತಿರುತ್ತೇನಾದರೂ, ಸಹೋದರೆ ನಿವೇದಿತಾಳನ್ನು ನಾನು/ನಾವು ಮರೆತೇ ಹೋಗಿದ್ದೇವೆ. ಎಂತಹ ಅಕ್ಷಮ್ಯ ಅಪರಾಧವಾಗಿದೆ ಎಂಬುದನ್ನು ಈ ನಿಮ್ಮ ಲೇಖನ ಓದಿದ ನಂತರ ನನಗೆ ಬಹಳ ಪಶ್ಚಾತ್ತಾಪವಾಗಿದ್ದಲ್ಲದೇ ಕಣ್ಣಲ್ಲಿ ನೀರಾಡಿತು. ಆಕೆಯ ನೆನಪು ಪುನಃ ಮರಳಿ ಬರುವಂತೆ ಮಾಡಿದ ನಿಮಗೆ ನನ್ನ ಅನಂತಾನಂತ ಧನ್ಯವಾದಗಳು. ಸದರಿ ಲೇಖನವನ್ನು ನಾನು ನಕಲು ಮಾಡಿಕೊಂಡು ಅದನ್ನೊಂದು ಕಡೆ ಭದ್ರಪಡಿಸಿಟ್ಟಿದ್ದೇನೆ. ತಮಗೆ ಮಂಗಳವಾಗಲಿ.