ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 12, 2017

26

ಕಲೆ ಮತ್ತು ಸಾಹಿತ್ಯಗಳು ಐಡಿಯಾಲಜಿಯ ಬಂಧನದಿಂದ ಎಂದು ಹೊರಬಂದಿತು?

‍ನಿಲುಮೆ ಮೂಲಕ

– ಬಾಲಚಂದ್ರ ಭಟ್

hammer_and_sickle-svg“ಸಾಹಿತ್ಯವನ್ನು ಕೆಡಿಸಿದ್ದೇ ಈ ಮಾರ್ಕ್ಸಿಸ್ಟುಗಳು. ರಸಾನುಭೂತಿ ಅನ್ನೋದನ್ನು ಮರೆತು ಸಮಾಜಕ್ಕೆ ನಿಮ್ಮ ಕೊಡುಗೆ ಏನು ಅಂತ ಕವಿಗಳಿಗೆ, ಕತೆಗಾರರಿಗೆ ಕೇಳೋಕೆ ಶುರು ಮಾಡಿದ್ದೇ ಅವರು. ಶಾಸ್ತ್ರೀಯ ಸಂಗೀತ ಒಂದು ಅವರಿಗೆ ಅರ್ಥ ಆಗ್ತಿರಲಿಲ್ಲ ನೋಡ್ರೀ. ಒಂದು ವೇಳೆ ಅರ್ಥ ಆಗಿದ್ದರೆ ಬೆಳಗ್ಗೆ ಹಾಡೋ ತೋಡೀ ರಾಗದಿಂದ ಸಮಾಜಕ್ಕೆ ಏನು ಕೊಡುಗೆ ಸಿಕ್ಕಿದೆ ಅಂತಾನೂ ಕೇಳಿರೋರು. ಪುಣ್ಯಕ್ಕೆ ಬಹುತೇಕ ಮಾರ್ಕ್ಸಿಸ್ಟರಿಗೆ ಸಂಗೀತದ ಗಂಧವೇ ಇಲ್ಲ”

ಹೀಗಂತ ಎಸ್ ಎಲ್ ಭೈರಪ್ಪನವರು ಜೈಪುರ ಲಿಟರರಿ ಫೆಸ್ಟಿವಲ್ ನಲ್ಲಿ ಹೇಳಿದ್ದರೆಂದು ಜೋಗಿಯವರು ಇತ್ತೀಚೆಗೆ ಫೇಸ್ಬುಕ್ ನಲ್ಲಿ ಹಾಕಿಕೊಂಡಿದ್ದರು. ಭೈರಪ್ಪನವರ ಈ ಹೇಳಿಕೆಗೆ ವಿರುದ್ಧ ಪ್ರತಿಕ್ರಿಯಿಸಿದವರೆಲ್ಲರೂ ಅವರು ನೋಡಿದ ಸಾಹಿತ್ಯಾಸಕ್ತ ಹಾಗೂ ಸಂಗೀತಾಸಕ್ತ ಮಾರ್ಕ್ಸಿಸ್ಟರನ್ನು ಉದಾಹರಿಸುವದರ ಮೂಲಕ ಭೈರಪ್ಪನವರ ಹೇಳಿಕೆಯನ್ನು ಅಲ್ಲಗೆಳೆದಿದ್ದರು. ಭೈರಪ್ಪನವರು ಏನೆ ಹೇಳಿದರೂ ಅದಕ್ಕೆ ಉಗ್ರ ಪ್ರತಿರೋಧ ಬರುವದು ಸಾಮಾನ್ಯ. ಅದರಲ್ಲೂ ಮಾರ್ಕ್ಸಿಸ್ಟರ ಬಗ್ಗೆ ಇಂತಹ ಹೇಳಿಕೆ ಕೊಟ್ಟರೆ ಮಾರ್ಕ್ಸಿಸಂ ನ್ನು ಗುತ್ತಿಗೆ ತೆಗೆದುಕೊಂಡವರು ಮುಗಿಬೀಳುವದನ್ನು ಊಹಿಸಬಹುದಾದದ್ದೆ. ಆದರೆ ಈ ಕುರಿತ ಪರ ವಿರೋಧ ಅಭಿಪ್ರಾಯಗಳ ಹೊರತಾಗಿಯೂ ಭೈರಪ್ಪನವರ ಹೇಳಿಕೆ ಮಾರ್ಕ್ಸಿಸಂ ನ ವಿಷ್ಲೇಷಣೆಗೆ ಪ್ರಸ್ತುತವಂತೂ ಹೌದು.

ಭೈರಪ್ಪನವರ ಈ ಹೇಳಿಕೆ ಸರಿಯೋ ತಪ್ಪೊ ಎಂದು ತರ್ಕಿಸುವದು ತುಂಬಾ ಕಷ್ಟ. ಅಥವಾ ಒಂದು ರೀತಿಯಲ್ಲಿ ಅವರು ಹೇಳಿದ್ದು ಸತ್ಯ, ಒಂದು ರೀತಿಯಲ್ಲಿ ಸುಳ್ಳು ಎನ್ನಬಹುದು. ಒಂದು ಮಟ್ಟಿಗೆ ಸುಳ್ಳು ಯಾಕೆಂದರೆ ಅವರ ಹೇಳಿಕೆಗಳಿಗೆ ತದ್ವಿರುದ್ದವಾದ, ಅಂದರೆ ಸಾಹಿತ್ಯ, ಸಂಗೀತ ಹಾಗೂ ಇತರ ಕಲೆಗಳಲ್ಲಿ ಆಸಕ್ತರಾದ ಬಹಳಷ್ಟು ಮಾರ್ಕ್ಸಿಸ್ಟರನ್ನು ಉದಾಹರಿಸಬಹುದು. ಬರಿ ಅಷ್ಟೆ ಅಲ್ಲ, ದೇವರನ್ನು ನಂಬುವ (ಮನೆಯ ಒಳಗೆ ಮಾತ್ರ ಅಥವಾ ಹೊರಗೂ) ಮಾರ್ಕ್ಸಿಸ್ಟರೂ ಇದ್ದರು ಮತ್ತು ಇದ್ದಾರೆ. ಅತ್ತ ಕಡೆ ಆಧ್ಯಾತ್ಮಿಕತೆಯನ್ನೂ, ಇತ್ತ ಕಡೆ ಮಾರ್ಕ್ಸಿಸಂ ಅನ್ನೂ ಅನುಸರಿಸಲಾರದೆ, ಬಿಟ್ಟೂ ಬಿಡಲಾರದೆ ‘ಆಧ್ಯಾತ್ಮಿಕ ನಾಸ್ತಿಕರಾಗಿರಬೇಕು’ ಎಂದು ಬೋಧಿಸುವ ಸ್ವಯಂ ನೇಮಿತ ತತ್ವಾಧಾರಿ ಕಮ್ಯುನಿಷ್ಟರೂ ಇದ್ದಾರೆ. ತಮ್ಮ ಧರ್ಮಗ್ರಂಥವನ್ನು ಬಿಟ್ಟು ಆಚೆ ಬರಲಾರದೆ, ಅನಿವಾರ್ಯತೆಗೆ ಬಿದ್ದು ಕಮ್ಯೂನಿಷ್ಟ್ ರ ಮುಖವಾಡ ತೊಟ್ಟ ಮತಾಂಧರೂ ಇದ್ದಾರೆ.  ಹೀಗಾಗಿ ಮಾರ್ಕ್ಸಿಸ್ಟರೆಲ್ಲರನ್ನೂ ಒಂದೇ ಮುಷ್ಟಿಯಲ್ಲಿ ಹಿಡಿದಿಡುವಷ್ಟು ‘ಸಮಾನತೆ’ ಮಾರ್ಕ್ಸಿಸ್ಟರೊಳಗೆ ಇಲ್ಲ. ಈ ಅಸಮಾನತೆಯನ್ನು, ದ್ವಂದ್ವವನ್ನು ಅರ್ಥೈಸುವ ಜನಪ್ರಿಯ ವಾಖ್ಯವೂ ಕಮ್ಯುನಿಷ್ಟರಿಂದಲೇ ಬಂದಿದೆ. ಅದೇನೆಂದರೆ “ಕಮ್ಯುನಿಷ್ಟರೆ ಬೇರೆ ಕಮ್ಯುನಿಸಮ್ಮೇ ಬೇರೆ” ಎಂಬುದು. ಅದನ್ನು ಇನ್ನೂ ವಿಸ್ತರಿಸಿ ಹೀಗೂ ಹೇಳಬಹುದು ‘ಬೇರೆ ಬೇರೆ ಕಮ್ಯುನಿಷ್ಟರೆಲ್ಲರೂ ಬೇರೆ ಬೇರೆ’ ಎಂದು. ಹಾಗಾಗಿ ಭೈರಪ್ಪನವರಾಗಲೀ ಇನ್ಯಾರಾಗಲೀ ಕಮ್ಯುನಿಷ್ಟರ ಬಗ್ಗೆ ಏನೆ ಹೇಳಿಕೆ ನೀಡಿದರೂ ಸಾರಾಸಗಟವಾಗಿ ನಿರಾಕರಿಸುವಷ್ಟು ಮಾರ್ಕ್ಸಿಸ್ಂ ಹಂಚಿಹೋಗಿದೆ. ಆದರೆ ಸೋವಿಯಟ್ ಒಕ್ಕೂಟದ ಕಮ್ಯುನಿಷ್ಟ್ ಅವಧಿಯಲ್ಲಿ ಆದ ಸಾಹಿತ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಭೈರಪ್ಪನವರು ಹೇಳಿದ್ದು ಅಕ್ಶರಶಃ ಸತ್ಯ. ಯಾಕೆಂದರೆ ಸೋವಿಯಟ್ ಒಕ್ಕೂಟವು  ‘ಸೋಶಿಯಲಿಸ್ಟ್ ರಿಯಲಿಸ್ಮ್’ ಹೆಸರಿನಲ್ಲಿ ಕಲೆ, ಸಾಹಿತ್ಯದ ಮೇಲೆ ಮಾಡಿದ ದೌರ್ಜನ್ಯಕ್ಕೆ ೬೦-೭೦ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸ ಇದೆ. ಸಾಹಿತ್ಯ ಅಥವಾ ಯಾವುದೆ ಕಲಾ ಪ್ರಕಾರವು ಕಮ್ಯುನಿಷ್ಟ್ ವಿಚಾರಧಾರೆಯನ್ನು ಮಾತ್ರ ಪ್ರತಿನಿಧಿಸಬೇಕು ಎಂಬುದನ್ನು ಸೋವಿಯಟ್ ಒಕ್ಕೂಟವು ಕಾನೂನಿನ ಮುಖಾಂತರವೇ ಆಗ್ರಹಿಸಿತು. ಅದರಿಂದ ಹೊರತಾದ ಸಾಹಿತ್ಯವನ್ನು ಮಾನ್ಯ ಮಾಡಲಿಲ್ಲ ಅಥವಾ ಅಂತಹ ಸಾಹಿತ್ಯವನ್ನು ತಡೆಯೊಡ್ಡಲಾಯಿತು. ಹಾಗಾಗಿ ಸಾಹಿತಿಗಳು ಕಮ್ಯುನಿಷ್ಟ್ ಚಿಂತನೆಯ ಮಾದರಿಯ ಸಾಹಿತ್ಯವನ್ನು ಸೃಷ್ಟಿಸುವದು ಅನಿವಾರ್ಯವಾಯಿತು. ಅಥವಾ ಅಂತಹ ಸಾಹಿತಿಗಳು ಮಾತ್ರವೆ ಮನ್ನಣೆಗೆ ಪಾತ್ರರಾದರು. ಇದು ಅಂದಿಗೇ ಆ ದೇಶಕ್ಕೆ ಮಾತ್ರ ಮುಗಿಯದೆ, ಸೋಶಿಯಲಿಸ್ಟ್ ರಿಯಲಿಸ್ಮ್ ನ ಮಾದರಿ ಸರ್ಕಾರಿ ವಲಯದಲ್ಲಿ ಭಾರತವೂ ಸೇರಿದಂತೆ ಬಹುತೇಕ ಎಲ್ಲ ಸೆಕ್ಯುಲರ್ ದೇಶಗಳಲ್ಲಿ ಇಂದಿಗೂ ಮಾನದಂಡವಾಗಿ ಪರಿಗಣಿಸಲ್ಪಡುತ್ತಿದೆ ಎನ್ನುವದು ಗಮನಾರ್ಹ.

‘ಸೋಶಿಯಲಿಸ್ಟ್ ರಿಯಲಿಸ್ಮ್’ ಹುಟ್ಟಿಕೊಂಡಿದ್ದು ೧೯೧೭ ರ ಸೋವಿಯಟ್ ಕ್ರಾಂತಿಯ ನಂತರ. ಅಧಿಕೃತವಾಗಿ ಚಾಲ್ತಿಗೆ ಬಂದಿದ್ದು ಹಾಗೂ ಸ್ಪಷ್ಟ ರೂಪ ಪಡೆದುಕೊಂಡಿದ್ದು ೧೯೩೨ರ ಹೊತ್ತಿಗೆ. ಇದರ ಹರಿಕಾರ ಮ್ಯಾಕ್ಸಿಮ್ ಘೋರ್ಕಿ. ನಂತರ ೧೯೩೪ರಲ್ಲಿ ಸೋವಿಯಟ್ ರಷ್ಯಾವು ‘ಸೋಶಿಯಲಿಸ್ಟ್ ರಿಯಲಿಸ್ಮ್’ ಪ್ರಕಾರ ಸಾಹಿತ್ಯವು ಯಾವ ರೀತಿಯದ್ದಾಗಿರಬೇಕು ಎಂದು ನೀತಿ ನಿಯಮಗಳನ್ನು ವಿಧಿಸಿತು. ಅದರ ಪ್ರಕಾರ ಯಾವುದೆ ಸಾಹಿತ್ಯ, ಕಲಾ ಪ್ರಕಾರವು ನಾಲ್ಕು ರೀತಿಯ ಅಂಶಗಳನ್ನು ಒಳಗೊಂಡಿರಲೇಬೇಕು. ಅವೆಂದರೆ, ಕಲೆ ಹಾಗೂ ಸಾಹಿತ್ಯವು ಕಾರ್ಮಿಕರ ಕುರಿತದ್ದಾಗಿರಬೇಕು, ದಿನನಿತ್ಯದ ಚಟುವಟಿಕೆಗಳನ್ನು ಆಧರಿಸಿದ್ದಿರಬೇಕು, ಕಾಲ್ಪನಿಕವಾಗಿರದೆ ನೈಜ್ಯವಾಗಿರಬೇಕು, ಹಾಗೂ ಕೊನೆಯದಾಗಿ ಕಮ್ಯುನಿಷ್ಟ್ ಪಾರ್ಟಿಯ ರಾಜಕೀಯ ಧೋರಣೆಯನ್ನು ಹೊಂದಿರಬೇಕು. ಕಲೆ ಅಥವಾ ಸಾಹಿತ್ಯವು ಈ ನಾಲ್ಕು ಅಂಶಗಳನ್ನು ಹೊಂದಿರದಿದ್ದರೆ ಅದನ್ನು ಪರಿಗಣಿಸಲಾಗುತ್ತಿರಲಿಲ್ಲ. ಉದಾರಣೆಗೆ ಲೈಂಗಿಕತೆ, ಧಾರ್ಮಿಕತೆ, ರೊಮ್ಯಾಂಟಿಸಿಸ್ಮ್, surrealism (ನವ್ಯ ಪ್ರಕಾರ: ಅರೆಪ್ರಜ್ನಾವಸ್ಥೆ ಅಥವಾ ಕನಸಿನಲ್ಲಿ ಮೂಡಿದ ಚಿತ್ರ, ಭಾವನೆಗಳನ್ನು ಬಿತ್ತರಿಸುವಿಕೆ), expressionism(ಅಭಿವ್ಯಕ್ತಿವಾದ; ಭಾವನೆಗಳನ್ನು ನವಿರೇಳಿಸಲು ಬಿತ್ತರಿಸುವ ಕಲಾ ಪ್ರಕಾರ), mysticism(ಆಧ್ಯಾತ್ಮಿಕ), abstract art(ಅಮೂರ್ತ ಕಲೆ: ಬಣ್ಣ, ಆಕಾರ, ನಮೂನೆಗಳನ್ನು ಬಳಸಿ ವ್ಯಕ್ತಪಡಿಸುವ ಕಲೆ) ಇವುಗಳನ್ನು ನಿರ್ಭಂಧಿಸಲಾಯಿತು. ಕೃತಿಗಳಲ್ಲಿ ಬಳಸುವ ಆಂತರಿಕ ಸಂಭಾಷಣೆ(Internal dialogues) ಇತ್ಯಾದಿ ನೈಜ್ಯತೆಗೆ ಹೊರತಾದ ಪ್ರಯೋಗಗಳನ್ನು ನಿಷೇಧಿಸಲಾಯಿತು. ಹಾಗೆ ನೋಡಿದರೆ ಕಮ್ಯುನಿಷ್ಟರು ಕೇವಲ ರಿಲಿಜಿಯಸ್ ಕಲಾ ಕೃತಿಗಳನ್ನು ಮಾತ್ರ ನಿಷೇಧಿಸಲಿಲ್ಲ. ರಿಲಿಜಿಯಸ್ ಪುಸ್ತಕಗಳ ಜೊತೆಗೆ ಪ್ಲಾಟೊ, ಡಿಸ್ಕಾರ್ಟಸ್, ಕ್ಯಾಂಟ್, ಟಾಲ್ಸ್ಟಾಯ್, ವಿಲಿಯಮ್ ಜೇಮ್ಸ್ ರ ಪುಸ್ತಕಗಳು ನಿಷೇಧಕ್ಕೆ ಒಳಗಾದವು. ೧೯೩೦ ರ ಹೊತ್ತಿಗೆ ಸುಮಾರು ೮ ಲಕ್ಷ ಪುಸ್ತಕಗಳು ನಾಶವಾಗಲ್ಪಟ್ಟವು. ೧೯-೨೦ ನೆ ಶತಮಾನದಲ್ಲಿ ಆವಂಟ್-ಗಾರ್ಡ್ (avant-garde) ಚಳುವಳಿಯ ಮೂಲಕ ಹುಟ್ಟಿಕೊಂಡ ಫ಼್ಯುಚುರಿಸ್ಮ್, ಮಾಡರ್ನಿಸ್ಮ್, ಎಕ್ಸ್ಪ್ರೆಶನಿಸ್ಮ್, ಸರ್ರೀಯಲಿಸ್ಮ್ ಮುಂತಾದ ಅನೇಕ ‘ಇಸಂ’ ಗಳಿಗೂ ನಿಷೇಧ ಒಡ್ಡಿದರು. ಆವಂಟ್-ಗಾರ್ಡ್ (avant-garde) ಚಳುವಳಿಯು ೨೦ನೇ ಶತಮಾನದಲ್ಲಿ ರೂಪುಗೊಂಡ ಪುನರುತ್ಥಾನದ (Renaissance) ಮುಂದುವರೆದ ಬೆಳವಣಿಗೆ ಎನ್ನಬಹುದು. ಹಳೆಯ ಕಲಾ ಮಾದರಿಗಳನ್ನು ಬದಿಗೊತ್ತಿ, ಸಾಂಪ್ರದಾಯಿಕ ಕಲಾಪ್ರಕಾರಗಳನ್ನು ದಾಟಿ, ಕಲೆಯಲ್ಲಿ ಹೊಸತನದ ಅನ್ವೇಷಣೆಗೆ ನಾಂದಿ ಹಾಡುವ ನಿಟ್ಟಿನಲ್ಲಿ ಇದು ಹುಟ್ಟಿಕೊಂಡಿತು. ಯುರೋಪಿನ ಸಾಮಾಜಿಕ, ರಾಜಕೀಯ ಬೆಳವಣಿಗೆಗಳು, ಐಡಿಯಾಲಜಿಗಳು ಹುಟ್ಟುಹಾಕಿದ ತತ್ವಗಳು ಸಹಜವಾಗಿಯೇ ಆವಂಟ್-ಗಾರ್ಡ್ ಚಳುವಳಿಯ ಮೂಲಕ ಈ ಮೇಲೆ ಹೆಸರಿಸಿದ ಅನೇಕ ‘ಇಸಂ’ ಗಳನ್ನು ಕಲಾಪ್ರಾಕಾರಗಳಲ್ಲಿ ಸೃಷ್ಟಿಸಿತು. ಆದರೆ ಸಾಂಪ್ರದಾಯಿಕತೆಯಿಂದ ಹೊರಬರಹೊರಟಿದ್ದ ಈ ಇಸಂಗಳನ್ನು ಕತ್ತು ಹಿಸುಕಿ ನಿರ್ಭಂಧಿಸಿದ್ದು ಮಾತ್ರ ಕಮ್ಯುನಿಸ್ಮ್ ಎಂಬ ಭೂತ. ಹಾಗಂತ ಈ ಇಸಂ ಗಳು ಕಮ್ಯುನಿಷ್ಟ್ ವಿಚಾರಧಾರೆಗೆ ವಿರುದ್ಧವಿತ್ತೆಂದು ಅರ್ಥವಲ್ಲ. ಕಮ್ಯುನಿಸ್ಮ್ ನ ಸೃಷ್ಟಿಗೆ ಕಾರಣವಾಗಿದ್ದ ರಾಜಕೀಯ, ಸಾಮಾಜಿಕ, ಮತ್ತು ರಿಲಿಜಿಯಸ್ ಚಿಂತನೆಗಳೆ ಈ ಇಸಂ ಗಳನ್ನು ಸೃಷ್ಟಿಸಿದ್ದರಿಂದ ಅವುಗಳ ವಿಚಾರಧಾರೆಯಲ್ಲಿ ಸಾಮ್ಯತೆಗಳನ್ನೂ ಕಾಣಬಹುದಿತ್ತು. ಆದರೆ ಇಂತಹ ಕಲಾಪ್ರಕಾರಗಳು ‘ಸೋಶಿಯಲಿಸ್ಟ್ ರಿಯಲಿಸ್ಮ್’ ನ ಮಾದರಿಯನ್ನು ಅನುಸರಿಸದಿದ್ದ ಕಾರಣ ತಿರಸ್ಕೃತವಾಯಿತು. ಉದಾರಣೆಗೆ ‘ರಷ್ಯನ್ ಫ್ಯುಚರಿಸ್ಟ್’ ಗಳು ಕಮ್ಯುನಿಸ್ಮ್ ತತ್ವಕ್ಕೆ ಒತ್ತುಕೊಟ್ಟಿದ್ದರೂ ನಂತರ ಬೋಲ್ಶೆವಿಕ್ ಕಾಲದಲ್ಲಿ ಮೂಲೆಗುಂಪಾಯಿತು. ಹಾಗಾಗಿ ಸೋವಿಯಟ್ ರಷ್ಯಾದಲ್ಲಿ ಕಲೆ ಮತ್ತು ಸಾಹಿತ್ಯ ಕೃತಿಗಳು ಕೇವಲ ರಾಜಕೀಯ ವಿಚಾರವನ್ನು ಮಾತ್ರ ಪೋಷಿಸಲು ಮೀಸಲಾಗಿರಿಸಲಾಗಿತ್ತು ಅಂದರೆ ಅತಿಶಯೋಕ್ತಿಯಲ್ಲ. ಸಾಹಿತ್ಯ, ಕಲೆಗಳು ಏಕಮುಖವಾಗಿರಬೇಕೆಂದು ಆಗ್ರಹಿಸುತ್ತಿದ್ದ ಕಮ್ಯುನಿಸ್ಮ್ ಗೆ ಈ ಎಲ್ಲಾ ಇಸಂ ಗಳ ಧೇಯೋದ್ದೇಶಗಳನ್ನು ಒಪ್ಪಿಕೊಳ್ಳುವ ಸಹಿಷ್ಣುತೆಯಿರಲಿಲ್ಲ. ಅಚ್ಚರಿಯೆನೆಂದರೆ ಯಾವ ಎಡಪಂಥೀಯರು ಇಂದು ಮುಕ್ತ ಲೈಂಗಿಕತೆಯ ಕುರಿತು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಹೋರಾಡುತ್ತಾರೊ ಹಾಗೂ ಸಾಹಿತ್ಯಗಳಲ್ಲಿ ಅವು ಇರಬೇಕೆಂದು ಒತ್ತಾಯಿಸುತ್ತಾರೋ ಅಂದಿನ ಅದೇ ಪಂಥೀಯರು ಈ ಮೊದಲು ಕಲಾ ಕೃತಿಗಳಲ್ಲಿ ಲೈಂಗಿಕತೆಯನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಷೆಧಿಸಿದ್ದರು. ಲೈಂಗಿಕತೆಯನ್ನು, ಸಲಿಂಗಕಾಮವನ್ನು ಉತ್ತೇಜಿಸುತ್ತದೆ ಎನ್ನುವ ಕಾರಣಕ್ಕಾಗಿ Jazz ಮತ್ತು gypsy ಸಂಗೀತಗಳನ್ನು ಸೋವಿಯಟ್ ರಷ್ಯಾದಲ್ಲಿ ನಿಷೇಧಿಸಲಾಗಿತ್ತು. Shostakovich ನ ‘Lady Macbeth’ ಸ್ಟಾಲಿನ್ ನ ಅವಧಿಯಲ್ಲಿ ನಿಷೇಧಕ್ಕೆ ಗುರಿಯಾದದ್ದು ಇದಕ್ಕೆ ಒಂದು ಉತ್ತಮ ಉದಾರಣೆ. ‘ಸೋಶಿಯಲಿಸ್ಟ್ ರಿಯಲಿಸ್ಮ್’ ಹರಿಕಾರ, ವಿಚಾರವಾದಿ ಸಾಹಿತಿಯೆನಿಸಿಕೊಂಡ ಮ್ಯಾಕ್ಸಿಮ್ ಗೋರ್ಕಿಯೆ ಸ್ವತಃ ಇವುಗಳ ನಿಷೇಧದ ಪರ ಇದ್ದ. ನೊಬೆಲ್ ವಿಜೇತ ಸಾಹಿತಿ ಅಲೆಕ್ಸಾಂಡರ್ ಸೊಲ್ಜೆನಿಟ್ಸನ್ (Aleksandr Solzhenitsyn) ಸ್ಟಾಲಿನ್ ನ ಸರ್ವಾಧಿಕಾರದ ಕುರಿತು ಬರೆದನೆಂಬ ಕಾರಣಕ್ಕಾಗಿ ಆತನನ್ನು ಬಂಧಿಸಲಾಗಿತ್ತು ಹಾಗೂ ನಂತರ ಗಡಿಪಾರು ಮಾಡಲಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೋರಾಡುವವರು ತಾನು ಪ್ರತಿಪಾದಿಸುವ ತತ್ವಕ್ಕೆ ಹೊರತಾದ ಸಾಹಿತಿಯನ್ನು/ಸಾಹಿತ್ಯವನ್ನು ತಡೆಯಲು ಎಲ್ಲಾ ತಂತ್ರಗಳನ್ನೂ ಉಪಯೋಗಿಸುತ್ತಾರೆ. ಭೈರಪ್ಪನವರನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಬರುವುದನ್ನು ವಿರೋಧಿಸುವ ನಡೆ ಇದಕ್ಕೊಂದು ಉತ್ತಮ ಉದಾರಣೆ.

ಕಮ್ಯುನಿಸ್ಮ್ ನ ಈ ಅಧಿಪತ್ಯಕ್ಕೆ ಮೂಲ ಕಾರಣ, ಕೇವಲ ಕಮ್ಯುನಿಸ್ಮ್ ತತ್ವ ಮಾತ್ರ ಎಂದರೆ ತಪ್ಪಾಗುತ್ತದೆ. ಅದು ಯಾವುದೇ ಐಡಿಯಾಲಜಿಯ ಸ್ವಭಾವ ಗುಣ ಎನ್ನಬಹುದು. ರಿಲಿಜಿಯನ್ ಗಳಂತೆ ’ತಾನು ಮಾತ್ರ ಅಂತಿಮ ಸತ್ಯ’ ಎಂಬ ಧ್ಯೇಯವಾಖ್ಯವನ್ನು ಎಲ್ಲಾ ಐಡಿಯಾಲಜಿಗಳೂ ಪ್ರತಿಪಾದಿಸುತ್ತವೆ. ತನ್ನ ದೃಷ್ಟಿಯಲ್ಲಿ ಸತ್ಯವಲ್ಲದ್ದನ್ನು ನಾಶಪಡಿಸುವ ಆಕ್ರಮಣಕಾರಿಶೀಲತೆಯನ್ನು ಐಡಿಯಾಲಜಿಗಳು ಮೈಗೂಡಿಸಿಕೊಂಡಿರುತ್ತವೆ. ಅಂದಿನ ಕಮ್ಯುನಿಸ್ಂ ಗೂ ಇಂದಿನ ಇಲ್ಲಿನ ಕಮ್ಯುನಿಸ್ಮ್ ಗೂ ಬಹಳಷ್ಟು ವ್ಯತ್ಯಾಸಗಳಿದ್ದರೂ ರಾಜಕೀಯ ಅವಶ್ಯಕತೆಗಳಿಗುಣವಾಗಿ ಆ ಧ್ಯೇಯ ವಾಖ್ಯ ಒಂದೇ ಆಗಿರುತ್ತದೆ. ಕಲೆ, ಸಾಹಿತ್ಯದ ಮೇಲೆ ನಡೆದ ದೌರ್ಜನ್ಯಕ್ಕೆ ಇಷ್ಟೊಂದು ದೀರ್ಘ ಇತಿಹಾಸ ಇರಬೇಕಾದರೆ ಭೈರಪ್ಪನವರು ಹೇಳಿದ್ದರಲ್ಲಿ ಎಲ್ಲಿ ಸುಳ್ಳಿದೆ? ಒಂದು ವೇಳೆ ಭೈರಪ್ಪನವರು ನಮ್ಮ ದೇಶದ ಮಾರ್ಕ್ಸಿಸ್ಟರ ಕುರಿತು ಈ ಹೇಳಿಕೆ ನೀಡಿದ್ದರೂ ಅದು ಸುಳ್ಳಾಗಲಾರದು. ಆದರೆ ಇಲ್ಲೊಂದು ವ್ಯತ್ಯಾಸ ಇದೆ. ಅಲ್ಲಾದರೋ ಸಾಮಾಜಿಕ, ಕ್ರಿಶ್ಚಿಯಾಯಾನಿಟಿಯ, ಹಾಗೂ ರಾಜಕೀಯ ಬೆಳವಣಿಗೆಗಳು ’ಸೋಶಿಯಲಿಸ್ಟ್ ರಿಯಲಿಸ್ಮ್’ ಅನ್ನು ಹುಟ್ಟುಹಾಕುವದರ ಮೂಲಕ ಸಾಹಿತ್ಯದ ಮೇಲೆ ಬದಲಾವಣೆಯನ್ನು ತಂದಿತು. ಆದರೆ ಇಲ್ಲಿ ಹಾಗಲ್ಲ, ಅಲ್ಲಿ ಹುಟ್ಟು ಹಾಕಲ್ಪಟ್ಟ ’ಸೋಶಿಯಲಿಸ್ಟ್ ರಿಯಲಿಸ್ಮ್’ ನ ಚಿಂತನೆಯು ಸಾಹಿತ್ಯವೂ ಸೇರಿದಂತೆ ರಾಜಕೀಯ, ಸಾಂಸ್ಕೃತಿಕ ಜಗತ್ತನ್ನು ಅಲ್ಲೋಲಕಲ್ಲೋಲಮಾಡಿತು. ಇಲ್ಲಿ ಯಾವುದೆ ಕಮ್ಯುನಿಷ್ಟರು ಬಂದು ಬೆದರಿಸಲಿಲ್ಲ, ನಮ್ಮನ್ನು ಆಳಲಿಲ್ಲ, ಬಂಧಿಸಲಿಲ್ಲ. ’ಸೋಶಿಯಲಿಸ್ಟ್ ರಿಯಲಿಸ್ಮ್’ ನ ಕನ್ನಡಕವನ್ನು ಧರಿಸುವದರ ಮೂಲಕ ನಮ್ಮನ್ನು ನಾವೇ ಬಂಧಿಸಿಕೊಂಡೆವು. ಯಾವುದೆ ’ಇಸಂ’ ಗಳ ಪ್ರಜ್ನೆಯೇ ಇಲ್ಲದೇ ಬೆಳೆದುಬಂದ ಸಾಹಿತ್ಯಗಳನ್ನು ಯುರೋಪಿನಲ್ಲಿ ಹುಟ್ಟಿಕೊಂಡ ‘ಇಸಂ’ಗಳ ಚೌಕಟ್ಟಿನಲ್ಲಿ ಬಂಧಿಸಿದ ಬೌದ್ಧಿಕತೆ ನಮ್ಮ ಇತಿಹಾಸಕಾರರದು, ಸಮಾಜಶಾಸ್ತ್ರಜ್ನರದು ಹಾಗೂ ಕೊನೆಯದಾಗಿ ಸಾಹಿತಿಗಳದು. ಹಾಗಾಗಿ ನಮ್ಮ ಸಾಹಿತ್ಯ ಕಲಾ ಕೃತಿಗಳಿಗೂ ‘ಇಸಂ’ಗಳ ಪಟ್ಟ ದೊರಕಿತು. ಮೊದಲೇ ಇದ್ದ ಕೃತಿಗಳ ಅಧ್ಯಯನಕ್ಕೆ ’ಸೋಶಿಯಲಿಸ್ಟ್ ರಿಯಲಿಸ್ಮ್’ ನ ಮಾದರಿಯನ್ನು ನಮ್ಮ ಬುದ್ಧಿಜೀವಿಗಳು ಅನುಸರಿಸಿದರು. ಹಾಗಾಗಿ ರಾಮಾಯಣ, ಮಹಾಭಾರತಗಳು ೨೦ನೇ ಶತಮಾನದ ಸಾಮಾಜಿಕ ವಿವರಣೆಗೆ ಒಳಪಟ್ಟವು. ರಾಮ ಸ್ತ್ರೀಪೀಡಕನಾದ, ಮನು ಪುರೋಹಿತಶಾಹಿ ವ್ಯವಸ್ಥೆಯ ಹರಿಕಾರನಾದ, ಕಂಬಳ, ಜಲ್ಲಿಕಟ್ಟುಗಳು ಜಮೀಂದಾರಿ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುವ ಆಚರಣೆಗಳಾಗಿ ಬಿಂಬಿಸಲ್ಪಟ್ಟವು. ಹೋಗಲಿ, ಕೊನೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಕೂಡ ‘ಫೀಡಲಿಸ್ಂ’ ಎಂದು ಕರೆಯಲ್ಪಡುತ್ತದೆ ಎಂದರೆ ನಮ್ಮ ಬುದ್ಧಿಜೀವಿಗಳ ಬೌದ್ಧಿಕತೆಯ ಶೋಚನೀಯ ಸ್ಥಿತಿಯನ್ನು ತಿಳಿಸುತ್ತದೆ ಅಷ್ಟೆ. ಅದರೆ ಇಲ್ಲಿ ಒಂದನ್ನು ಗಮನಿಸಬಹುದು. ಪಾಶ್ಚಾತ್ಯ ದೇಶಗಳಲ್ಲಿ ’ಸೋಶಿಯಲಿಸ್ಟ್ ರಿಯಲಿಸ್ಮ್’ ಪ್ರಭಾವಿಸಿದ್ದಕ್ಕೂ ನಮ್ಮ ದೇಶದಲ್ಲಿ ಅದು ಪ್ರಭಾವಿಸಿದ್ದಕ್ಕೂ ವ್ಯತ್ಯಾಸಗಳೆನೇ ಇದ್ದರೂ ಒಂದು ವಿಷಯದಲ್ಲಿ ಮಾತ್ರ ಸ್ಪಷ್ಟ ಹೋಲಿಕೆ ಇದೆ. ಅದೆನೆಂದರೆ ಕಲೆ ಮತ್ತು ಸಾಹಿತ್ಯಗಳು ಎಲ್ಲಾ ಕಡೆಗಳಲ್ಲಿ ರಾಜಕೀಯ ಹಿತಾಸಕ್ತಿಯನ್ನು ಪ್ರಚುರಪಡಿಸುವ ದಲ್ಲಾಳಿಗಳಂತೆ ಉಪಯೋಗಿಸಲ್ಪಟ್ಟವು; ಇಂದಿಗೂ.

‘ಸಾಹಿತ್ಯ ಎಂದರೆ ಜೀವಪರವಾಗಿರಬೇಕು, ತಳಸಮುದಾಯಗಳನ್ನು ಪ್ರತಿನಿಧಿಸಬೇಕು, ಕಾರ್ಮಿಕರನ್ನು ಪ್ರತಿನಿಧಿಸಬೇಕು’ ಎಂಬ ನಿಲುವನ್ನು ಎಲ್ಲರೂ ಒಪ್ಪಲೇಬೇಕು ಎನ್ನುವ ಮನೋಭಾವ ಹಲವರಲ್ಲಿದೆ. ಯಾಕೆಂದರೆ ಈ ನಿಲುವಿನಲ್ಲಿ ಭಾವನಾತ್ಮಕತೆ ಇದೆ. ಬಹುಷಃ ಇದೆ ಕಾರಣಕ್ಕಾಗಿಯೆನೊ ಮೇಲ್ನೋಟಕ್ಕೆ ’ಸೋಶಿಯಲಿಸ್ಟ್ ರಿಯಲಿಸ್ಮ್’ ಸಾಹಿತ್ಯ ಒಳ್ಳೆಯದು, ಅನುಕರಣೀಯ ಎನಿಸಿಕೊಂಡುಬಿಡುತ್ತದೆ. ಎಷ್ಟೆಂದರೆ ಇದರ ಹೊರತಾಗಿ ಸೊಲ್ಲೆತ್ತಿದವರನ್ನು ’ಅಮಾನವೀಯ’, ’ತರತಮ ಸಂಸ್ಕೃತಿ’, ’ಜೀವವಿರೋಧಿ’ ಎಂದೆಲ್ಲಾ ಆರೋಪಿಸುವಷ್ಟು. ಆದರೆ ’ಸೋಶಿಯಲಿಸ್ಟ್ ರಿಯಲಿಸ್ಮ್’ ಸಾಹಿತ್ಯದಿಂದ ಕಾರ್ಮಿಕರ ಸ್ಥಿತಿಗತಿಯಲ್ಲಿ ಏಳ್ಗೆ ಉಂಟಾಯಿತಾ? ಶ್ರೇಣಿಕೃತ ವ್ಯವಸ್ಥೆ ತೊಲಗಿ ಸಮಾನತೆ ಬಂತಾ? ಹಾಗೆ ಸಾಧ್ಯವಿದ್ದರೆ ಲಕ್ಷಾಂತರ ರೈತರ ಸಾವಿಗೆ ಕಾರಣವಾದ  ’ಹೋಲೊಡೊಮೋರ್’(Holodomore) ನಂತಹ ಹೀನ ಕೃತ್ಯಗಳು ಸ್ಟಾಲಿನ್ ನ ಕಮ್ಯುನಿಸ್ಮ್ ಅವಧಿಯಲ್ಲಿ ನಡೆಯುತ್ತಿತ್ತಾ? ’ಗುಲಗ್’ನ ಜೈಲ್ ನಲ್ಲಿ ಬಲವಂತದಿಂದ ನಡೆಸುವ ಲೇಬರ್ ಸಿಸ್ಟಮ್ (forced labor system) ಇರುತ್ತಿತ್ತಾ? ನಂದಿಗ್ರಾಮದಲ್ಲಿ ಕಗ್ಗೋಲೆ ನಡೆಯುತ್ತಿತ್ತಾ? ಲಕ್ಷ ಲಕ್ಷ ಖರ್ಚು ಮಾಡಿ ನಡೆಸುವ ಚಳುವಳಿಗಳು, ಕಾರ್ಯಕ್ರಮಗಳು, ಪುಸ್ತಕ ಬಿಡುಗಡೆ ಸಮಾರಂಭಗಳು ಸಮಾನತೆಯನ್ನು ಸಾಧಿಸುವಲ್ಲಿ ಎಷ್ಟು ಯಶಸ್ವಿಯಾಗಿವೆ? ಎಂದು ಕೇಳಿಕೊಂಡರೆ ಸಿಗುವ ಉತ್ತರ ನಕಾರ. ಇವೆಲ್ಲಾ ಪ್ರಕ್ರಿಯೆಗಳು ಒಂದಿಷ್ಟು ರಾಜಕೀಯ ಪಕ್ಷಗಳಿಗೆ ತಮ್ಮ ಋಣ ಸಂದಾಯ ಮಾಡಿದವಷ್ಟೆ. ಹಾಗಾಗಿ ಸಾಹಿತ್ಯದಲ್ಲಿ ’ಸೋಶಿಯಲಿಸ್ಟ್ ರಿಯಲಿಸ್ಮ್’ ಎಂಬ ಭಾವನಾತ್ಮಕತೆ ರಾಜಕೀಯ ವ್ಯವಸ್ಥೆಯಲ್ಲಿ ’commodity'(ಸರಕಾಗಿ) ಯಾಗಿ ಮಾರ್ಪಾಡಾಯಿತು ಎನ್ನಬಹುದು. ಇದು ಸ್ವತಃ ಕಾರ್ಲ್ ಮಾರ್ಕ್ಸ್ ಆತಂಕ ವ್ಯಕ್ತಪಡಿಸಿದ ’commodity fetishness’ ಗೆ ಉದಾರಣೆಯಗುತ್ತಿರುವದು ವಿಪರ್ಯಾಸ.

ಹಾಗೆ ನೋಡಿದರೆ ’ಸಾಹಿತ್ಯ ಎಂದರೆ ಹೇಗಿರಬೇಕು? ಏನನ್ನು ಒಳಗೊಂಡಿರಬೇಕು?’ ಎಂದೆಲ್ಲಾ ಸಾಹಿತ್ಯಕ್ಕೆ ಶರತ್ತು ವಿಧಿಸುವದೆ ಅಸಂಬದ್ಧ. ಸಾಹಿತ್ಯಕ್ಕೆ ಒಂದು ಉದ್ದೇಶವನ್ನು ರೂಪಿಸಿ, ಯಾವುದೊ ಒಂದು ಐಡಿಯಾಲಜಿಯನ್ನು ನಿರೂಪಿಸುವದಕ್ಕೋಸ್ಕರ ಸೃಷ್ಟಿಸುವದು ಪೂರ್ವಾಗ್ರಹಗಳ ಕಂತೆಯಾಗುತ್ತದೆ. ಹೇಗೆ ಒಂದು ಐಡಿಯಾಲಜಿ ತನ್ನನ್ನು ಸತ್ಯ ಎಂದು ಪ್ರತಿಪಾದಿಸುತ್ತಾ ಉಳಿದವುಗಳನ್ನು ವಿರೋಧಿಸುತ್ತಾ ಹೋಗುತ್ತದೆಯೋ ಐಡಿಯಾಲಜಿಗಳಿಂದ ಬೆಳೆಯುವ ಸಾಹಿತ್ಯ ಕೂಡಾ ಇತರ ಸಾಹಿತ್ಯಗಳನ್ನು ತುಳಿಯುವತ್ತ ಸಾಗುತ್ತದೆ. ವಿಪರ್ಯಾಸವೆಂದರೆ ಇದೆ ಐಡಿಯಾಲಜಿಗಳು ತನ್ನನ್ನು ತಾನೆ ಸಹಿಷ್ಣು ಎಂದು ಕೂಡಾ ಪ್ರತಿಪಾದಿಸುತ್ತದೆ.  ಭಾರತದಲ್ಲಿ ಈ ’ಇಸಂ’ ಗಳು ಹುಟ್ಟುವದಕ್ಕೂ ಮೊದಲು ಸಾಹಿತ್ಯಗಳು ಯಾವುದೊ ಉದ್ದೇಶಪೂರ್ವಕವಾಗಿ ರೂಪುಗೊಂಡಿರಲಿಲ್ಲ. ಸಾಹಿತ್ಯ ಎಂದರೆ ಹೀಗಿರಬೇಕು, ಉಳಿದದ್ದೆಲ್ಲವೂ ಗೌಣ ಎನ್ನುವ ನಿರಾಕರಣೆ ಇರಲೇ ಇಲ್ಲ. ವಿವಿಧತೆ ಎನ್ನುವದು ಸಹಜವಾಗಿಯೆ ಮೂಡಿಬಂದಿತು. ಹಾಗಾಗಿ ಸಾಹಿತ್ಯವು ತನ್ನತನವನ್ನು ಉಳಿಸಿಕೊಳ್ಳಲು ಸಾಹಿತ್ಯವನ್ನು ಐಡಿಯಾಲಜಿಯ ಬಂಧನದಿಂದ ಬಿಡುಗಡೆಗೊಳಿಸಿ ಸ್ವತಂತ್ರವನ್ನಾಗಿಸುವದು ಇಂದಿನ ತುರ್ತು ಅಗತ್ಯ.

26 ಟಿಪ್ಪಣಿಗಳು Post a comment
 1. BSJP Narayana
  ಫೆಬ್ರ 14 2017

  Really a good article. Congratulations.

  ಉತ್ತರ
 2. BSJP Narayana
  ಫೆಬ್ರ 14 2017

  Really a sensible thinking about literature. Keep it up

  ಉತ್ತರ
 3. ಸಾಹಿತ್ಯಗೆ ವಾಕ್ಸ್ವಾತಂತ್ರ್ಯವಿಲ್ಲ !! 😦 😦

  ಉತ್ತರ
 4. SalamBava
  ಫೆಬ್ರ 16 2017

  Ideology in itself is not wrong. Wrong ideology in literature is problematic. Ideology that promotes equality, brotherhood and justice enriches literature. Marxism for example.

  ಉತ್ತರ
  • ಫೆಬ್ರ 17 2017

   What I was trying to tell was Ideology that promoted equality, brotherhood and justice itself went responsible for massacre in the very communist era of socialist regime. That’s even true for India. You may count countless examples.

   ಉತ್ತರ
   • ಶೆಟ್ಟಿನಾಗ ಶೇ.
    ಫೆಬ್ರ 17 2017

    “equality, brotherhood and justice itself went responsible for massacre ”

    ಇದು ಹೇಗೆ ಸಾಧ್ಯ ಮಹನೀಯರೇ? ಎಲ್ಲಿ ಸಮಾನತೆ, ಸೋದರತೆ, ಹಾಗೂ ನ್ಯಾಯವಿದೆಯೋ ಅಲ್ಲಿ ಹತ್ಯಾಕಾಂಡಕ್ಕೆ ಆಸ್ಪದವೇ ಇಲ್ಲ.

    ಉತ್ತರ
    • ಫೆಬ್ರ 19 2017

     ಅದನ್ನು ನೀವೇ ಹೇಳ್ಬೇಕು ಶೆಟ್ಟಿನಾಗರವರೇ. ಸಮಾನತೆ, ಸೋದರತೆ ಯಾವ ಕಮ್ಯುನಿಷ್ಟ್ ರಾಷ್ಟ್ರದಲ್ಲೂ ಯಾಕಿಲ್ಲ? ಕಮ್ಯುನಿಸ್ಮ್ ಎಂಬುದು ಸಮಾನತೆ, ಸೋದರತೆಯನ್ನು ಪ್ರತಿಪಾದಿಸುತ್ತದೆಯಾದರೆ ಆ ರಾಷ್ತ್ರಗಳಲ್ಲೂ ರಕ್ತಪಾತ ನಡೆದಿದ್ದು ಯಾಕೆ?

     ಉತ್ತರ
     • ಶೆಟ್ಟಿನಾಗ ಶೇ.
      ಫೆಬ್ರ 20 2017

      “ಕಮ್ಯುನಿಸ್ಮ್ ಎಂಬುದು ಸಮಾನತೆ, ಸೋದರತೆಯನ್ನು ಪ್ರತಿಪಾದಿಸುತ್ತದೆಯಾದರೆ ಆ ರಾಷ್ತ್ರಗಳಲ್ಲೂ ರಕ್ತಪಾತ ನಡೆದಿದ್ದು ಯಾಕೆ?”

      ಭಗವದ್ಗೀತೆ ಬಹಳಷ್ಟು ಧರ್ಮ ಬೋಧನೆ ಮಾಡುತ್ತದೆ. ಆದರೆ ಮಹಾಭಾರತದಲ್ಲಿ ಆ ಪಾಟಿ ರಕ್ತಪಾತ ನಡೆದದ್ದು ಯಾಕೆ?

      ಉತ್ತರ
      • ಫೆಬ್ರ 20 2017

       ಮಹಾಭಾರತ ಹಿಸ್ಟರಿಯಲ್ಲ.. ಕತೆಗಳಲ್ಲಿ ರಕ್ತಪಾತ ನಡೆದರೆ ಅದು ಹಿಂಸೆಯಾಗುವದಿಲ್ಲ.. ಇಷ್ಟಾಗಿ ಭಗವದ್ಗೀತೆಯು ಯುದ್ಧ ಬೇಡ ಅನ್ನುವದಿಲ್ಲ.

       ಉತ್ತರ
       • ಶೆಟ್ಟಿನಾಗ ಶೇ.
        ಫೆಬ್ರ 20 2017

        ಗುಡ್ ಜೋಕ್.

        ಉತ್ತರ
      • ಫೆಬ್ರ 20 2017

       ಕಮ್ಯುನಿಸ್ಮ್ ಬಗ್ಗೆ ಕೇಳಿದರೆ ಭಗವದ್ಗೀತೆಯ ವಿಷ್ಯ ಯಾಕೆ? ನಿಮ್ಮ ಪ್ರಕಾರ ಭಗವದ್ಗೀತೆ ತಾರತಮ್ಯವನ್ನು ಹುಟ್ಟುಹಾಕುತ್ತದೆಯಲ್ಲವೇ? ಭಗವದ್ಗೀತೆ ಯಾವತ್ತೂ ಕಾನೂನಾಗಿರಲಿಲ್ಲ, ಕಮ್ಯುನಿಸ್ಮ್ ನಂತೆ.

       ಉತ್ತರ
       • ಶೆಟ್ಟಿನಾಗ ಶೇ.
        ಫೆಬ್ರ 21 2017

        ಕಮ್ಯೂನಿಸಂ ಅನ್ನು ಟೀಕೆ ಮಾಡುವವರು ಮೊದಲು ಗೀತೆಯನ್ನು ಖಂಡಿಸಿ.

        ಉತ್ತರ
    • shripad
     ಫೆಬ್ರ 20 2017

     ಶೆ.ನಾಗರೇ…ಮಹಾನ್ ಮಾನವತಾವಾದ ಇರುವ ಕಡೆ ಹಿಂಸೆಯೇ ಇಲ್ಲ!!! ಇಲ್ಲಿ ನೋಡಿ-
     “ಹನ್ನೆರಡು ಮತ್ತು ಹದಿಮೂರನೆಯ ಶತಮಾನಗಳಲ್ಲಿ ವೀರಶೈವ ಮತದ ಚಳವಳಿ ತೀವ್ರವಾಗಿ ನಡೆದಿತ್ತು. ಜೈನ ಮತ್ತು ವೀರಶೈವ ಮತಗಳ ನಡುವೆ ಘರ್ಷಣೆಗಳೂ ನಡೆಯುತ್ತಿದ್ದವು. ವಿಜಾಪುರ ಜಿಲ್ಲೆಯ ತಾಳಿಕೋಟೆಯ ಶಾಸನದಲ್ಲಿ (ಪಗರಟಿಗೆ 300 ಹಾಗೂ ವಿರುಪರಸನ ಶಾಸನಗಳು) ಜೈನರ ರಕ್ತ ಕಕ್ಕಿಸಿದ, ನಾಲಗೆ ಕಿತ್ತ, ಚರ್ಮ ಸುಲಿದ, ಜೈನ ದೇಗುಲಗಳನ್ನು ನೆಲಸಮ ಮಾಡಿದ ವಿವರಗಳಿವೆ. (ಈ ಬಗ್ಗೆ ಹಂಪನಾ ಅವರ ಲೇಖನ ಗಮನಿಸಬಹುದು- ಜನ್ನ- ಒಂದು ಮರು ಚಿಂತನೆ, ಕನರ್ಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2008, ಪುಟ 1-10)ವೀರಶೈವರ ದಾಳಿಗೆ ಸಿಲುಕಿ ತತ್ತರಿಸಿದ ಜೈನರು ಉತ್ತರ ಭಾಗವನ್ನು ತೊರೆದು ದಕ್ಷಿಣದ ಹೊಯ್ಸಳರ ಆಶ್ರಯಕ್ಕೆ ಬಂದರು…”

     ಉತ್ತರ
     • ಶೆಟ್ಟಿನಾಗ ಶೇ.
      ಫೆಬ್ರ 21 2017

      ರೇವಣಸಿದ್ಧರ ವೀರಶೈವ ಬೇರೆ ಬಸವಣ್ಣನವರ ಲಿಂಗಾಯತ ಬೇರೆ. ಲಿಂಗಾಯತ = ಕಾಯಕ ಸಿದ್ಧಾಂತ, ವೀರಶೈವ = ಕರ್ಮ ಸಿದ್ಧಾಂತ. ದರ್ಗಾ ಸರ ಅವರೂ ನಿಮ್ಮಂತ ಪಂಡಿತರಿಗೂ ಅರ್ಥವಾಗುವಂತೆ ವ್ಯತ್ಯಾಸಗಳನ್ನು ಇಲ್ಲಿ ಪಟ್ಟಿ ಮಾಡಿದ್ದಾರೆ: _http://avadhimag.com/2013/10/17/%E0%B2%B2%E0%B2%BF%E0%B2%82%E0%B2%97%E0%B2%BE%E0%B2%AF%E0%B2%A4-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%B5%E0%B3%80%E0%B2%B0%E0%B2%B6%E0%B3%88%E0%B2%B5-%E0%B2%8F%E0%B2%A8%E0%B2%BF/

      ಉತ್ತರ
      • Shripad
       ಫೆಬ್ರ 21 2017

       ಪಾಮರರಾದ ಶೆಟ್ಕರ್ರೇ, ನಿಮ್ಮ ದರ್ಗಾ ಸರ ಏನಾದ್ರೂ ಬರೆದುಕೊಳ್ಳಲಿ; ಇಂದಿನ ತಮ್ಮ ವಿಚಾರದ ಅನುಕೂಲಕ್ಕೆ ತಕ್ಕಂತೆ ಬೇಕಾದ ವರ್ಗೀಕರಣ ಮಾಡಿಕೊಳ್ಳಲಿ. ಆದರೆ “ಹನ್ನೆರಡು ಮತ್ತು ಹದಿಮೂರನೆಯ ಶತಮಾನಗಳಲ್ಲಿ ವೀರಶೈವ ಮತದ ಚಳವಳಿ ತೀವ್ರವಾಗಿ ನಡೆದಿತ್ತು. ಜೈನ ಮತ್ತು ವೀರಶೈವ ಮತಗಳ ನಡುವೆ ಘರ್ಷಣೆಗಳೂ ನಡೆಯುತ್ತಿದ್ದವು” ಎನ್ನುವ ವಾಕ್ಯದಲ್ಲಿನ ವೀರಶೈವ ಅಂದರೆ ನಿಮ್ಮ ‘ಲಿಂಗಾಯತ’ ಬೇರೆ ಅನ್ನುವ ‘ಇಂದಿನ’ ವರ್ಗೀಕರಣವಿಲ್ಲದ ಒಟ್ರಾಸಿ ಗುಂಪೇ ಆಗಿದೆ. ಧರೆಗೆ ದೊಡ್ಡವರಾದ ಮಂಟೇಸ್ವಾಮಿಯನ್ನು ದೂರವಿಟ್ಟವರೂ ಇವರೇ. ಇವರನ್ನೇ ಬಸವಣ್ಣ ದೂರವಿಟ್ಟು ಮಂಟೇಸ್ವಾಮಿಯವರನ್ನು ಆದರಿಸುತ್ತಾನೆ. ಈ ನಿಮ್ಮ ‘ಇಂದಿನ’ ಲಿಂಗಾಯತ ವರ್ಗೀಕರಣ ಕೂಡ ಒಟ್ರಾಸಿ ಗುಂಪಲ್ಲೇ ಸೇರಿದೆ. ತಮ್ಮ ಸುರಕ್ಷತಾ ದೃಷ್ಟಿಯಿಂದ ಅವರೇ ಬೇರೆ ಮಹಾನ್ ಅಹಿಂಸಾವಾದಿಗಳಾದ ನಾವೇ ಬೇರೆ ಎಂದು ವಾದಿಸಲು ಸಾಧ್ಯವಿಲ್ಲ! ಸ್ವತಃ ಬಸವಣ್ಣನ ವಿರುದ್ಧ ಈ ಒಟ್ರಾಸಿ ಗುಂಪೇ ಬಂಡೆದ್ದುದು!!

       ಉತ್ತರ
       • ಶೆಟ್ಟಿನಾಗ ಶೇ.
        ಫೆಬ್ರ 22 2017

        “ಬಸವಣ್ಣನ ವಿರುದ್ಧ ಈ ಒಟ್ರಾಸಿ ಗುಂಪೇ ಬಂಡೆದ್ದುದು”

        ಜೈನರಿಗೆ ವೀರಶೈವರು ಹಿಂಸೆ ಕೊಟ್ಟಿದ್ದರೆ ಅದಕ್ಕೆ ಬಸವಣ್ಣನವರು ಹೇಗೆ ಕಾರಣವಾಗುತ್ತಾರೆ?! ವೀರಶೈವರು ಹಿಂದೂಧರ್ಮಿಗಳು. ಬಸವಧರ್ಮಿಗಳನ್ನು ಲಿಂಗಾಯತ ಎಂದು ಕರೆಯುತ್ತಾರೆ. ಬಸವಧರ್ಮವು ಹಿಂಸೆಯನ್ನು ಒಪ್ಪುವುದಿಲ್ಲ.

        ಉತ್ತರ
        • shripad
         ಫೆಬ್ರ 23 2017

         ನಿಮ್ಮ ಅಥವಾ ನಿಮ್ಮ ‘ದರ್ಗ ಸರ’ ಅವರ ಪ್ರಕಾರ ವಚನಕಾರರಲ್ಲಿ ವೀರಶೈವ ವಚನಕಾರರು ಯಾರು, ಲಿಂಗಾಯತ/ಬಸವಧರ್ಮ ವಚನಕಾರರು ಯಾರು?
         ಪರಂಜ್ಯೋತಿ ಧರೆಗೆ ದೊಡ್ಡವರು ಕಲ್ಯಾಣಕ್ಕೆ ಬಂದಾಗ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರು ಮಂಟೇಸ್ವಾಮಿಯನ್ನು ಬಹಿಷ್ಕರಿಸಿ ಬಸವಣ್ಣರಿಗೆ ಛೀಮಾರಿ ಹಾಕಿ ಓಡಿಹೋದರಲ್ಲ? ಅವರೆಲ್ಲ ಯಾರು? ಮಂಟೇಸ್ವಾಮಿ/ಅಲ್ಲಮರನ್ನು ಆರೈಕೆ ಮಾಡುವುದು ಬಸವಣ್ಣ ಮಾತ್ರ! ಇವರು ಯಾರು ಸ್ವಾಮಿ? ಬಸವಧರ್ಮದವರಾ?

         ಉತ್ತರ
         • ಶೆಟ್ಟಿನಾಗ ಶೇ.
          ಫೆಬ್ರ 23 2017

          ಅಣ್ಣ ಬಸವಣ್ಣನವರು ಹಾಕಿ ಕೊಟ್ಟ ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯದ ಮಾರ್ಗದಲ್ಲಿ ಸಾಗುತ್ತಿರುವವರೆಲ್ಲ ಸಲ್ಲುವರು ಶರಣರಿಗೆ. ಉದಾಹರಣೆಗೆ ದರ್ಗಾ ಸರ್ ಹಾಗೂ ವಿಶ್ವಾರಾಧ್ಯ ಸರ್. ಇವರು ಎಂದಾದರೂ ನರಪಿಳ್ಳೆಗೆ ಹಿಂಸೆ ಕೊಟ್ಟಿದ್ದನ್ನು ನೋಡಿದ್ದೀರಾ? ಎಲ್ಲರೂ ಇವರಂತೆ ಯಾಕೆ ಇಲ್ಲ?

          ಉತ್ತರ
          • shripad
           ಫೆಬ್ರ 24 2017

           ಅವರೇಕೆ? ಈ ದೃಷ್ಟಿಯಿಂದ ನಾನೂ ಯಾರಿಗೂ ಹಿಂಸೆ ಕೊಟ್ಟಿಲ್ಲ…(ನಿಮ್ಮಂಥವರಿಗೆ ತಲೆಬೇನೆ ಬಿಟ್ಟರೆ!). ಅದಿರಲಿ, ಈಗ ಹೇಳಿ. ವಚನಗಳು ವೀರಶೈವರ ರಚನೆಗಳೋ ಲಿಂಗಾಯತರವೋ? ಒಟ್ರಾಸಿಯಾಗಿ ಶರಣ ಅಂದರೆ ಯಾರು, ಜಂಗಮ ಅಂದರೆ ಯಾರು? ಇಷ್ಟೇ ಬೇಕಾದುದು ನನಗೆ.

          • SalamBava
           ಫೆಬ್ರ 24 2017

           Darga’s delineation of Lingayata from Veerashaiva is widely accepted by scholars, saints, and discerning citizens. Darga has provided us a scientific procedure for rationally answering who’s Lingayata and who’s Veerashaiva. Please educate yourself first by reading Darga’s scholarly literature on the subject instead of pestering the humble Shetkar.

    • Shripad
     ಫೆಬ್ರ 21 2017

     “ಇದು ಹೇಗೆ ಸಾಧ್ಯ ಮಹನೀಯರೇ? ಎಲ್ಲಿ ಸಮಾನತೆ, ಸೋದರತೆ, ಹಾಗೂ ನ್ಯಾಯವಿದೆಯೋ ಅಲ್ಲಿ ಹತ್ಯಾಕಾಂಡಕ್ಕೆ ಆಸ್ಪದವೇ ಇಲ್ಲ”-ಪಾಮರ ಶೆಟ್ಕರ್.
     ಹೌದು. ಈ ಮಾತಿಗೆ ಢಾಳಾದ ಪುರಾವೆ ಭಯಂಕರ ಸೋದರತೆ, ಸಮಾನತೆ ಪ್ರತಿಪಾದಿಸುವ ಕೇರಳದ ಲಾಲ್ ಝಂಡಾದ ಅಡಿಯಲ್ಲಿ ನಡೆಯುತ್ತಿರುವ ಕೊಲೆಗೇಡಿ ಕೃತ್ಯಗಳಲ್ಲಿದೆ!

     ಉತ್ತರ
     • ಶೆಟ್ಟಿನಾಗ ಶೇ.
      ಫೆಬ್ರ 22 2017

      ಕೇರಳದಲ್ಲಿ ರಾಜಕೀಯ ಹತ್ಯೆಗಳು ಹೆಚ್ಚಾಗಿವೆ ನಿಜ. ಆದರೆ ಮಾರ್ಕ್ಸ್ ವಾದವು ಅದಕ್ಕೆ ಕಾರಣವಲ್ಲ. ಸಂಘ ಕಾರ್ಯಕರ್ತರು ಮಾರ್ಕ್ಸ್ ವಾದವನ್ನು ಒಪ್ಪಿಕೊಂಡು ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯದ ಪರವಾಗಿ ನಿಂತರೆ ಹಿಂಸೆ ತಾನಾಗಿಯೇ ಕೊನೆಗೊಳ್ಳುತ್ತದೆ.

      ಉತ್ತರ
      • shripad
       ಫೆಬ್ರ 23 2017

       “. ಸಂಘ ಕಾರ್ಯಕರ್ತರು ಮಾರ್ಕ್ಸ್ ವಾದವನ್ನು ಒಪ್ಪಿಕೊಂಡು ಸಮಾನತೆ, ಭ್ರಾತೃತ್ವ …” ಓಹೋ ಮಾರ್ಕ್ಸ್ ವಾದಿಗಳು ಇವನ್ನೆಲ್ಲ ಗುತ್ತಿಗೆ ಪಡೆದಿದ್ದಾರೆ…ಅವರನ್ನು ಒಪ್ಪದಿದ್ದರೆ?…ಹತ್ಯೆ, ಕೊಲೆ, ದಗಾ! ಆಹಾ ಎಂಥಾ ಮಾನವೀಯತೆ!!! ಬಹುತ್ವ ಒಪ್ಪುವ, ಜೀವಪರ ಎಂದು ಬಡಬಡಿಸುವ ನಿಮಗೆ ಇನ್ನೊಂದು ಬಗೆಯ ಚಿಂತನೆಯನ್ನು ಒಪ್ಪುವ ಕನಿಷ್ಠ ತಾಳ್ಮೆಯೇ ಇಲ್ಲ ಎನ್ನುವುದು ಮತ್ತೆ ಸಾಬೀತಾಯಿತು. ಢೋಂಗಿ ಸಮಾನತೆ.

       ಉತ್ತರ
       • ಶೆಟ್ಟಿನಾಗ ಶೇ.
        ಫೆಬ್ರ 23 2017

        ತಪ್ಪು ಅರ್ಥೈಕೆ. ರಾಜಕೀಯ ಹತ್ಯೆಗಳನ್ನು ಮಾರ್ಕ್ಸ್ ವಾದಕ್ಕೆ ತಳುಕು ಹಾಕುವುದು ಸರಿಯಲ್ಲ. ತ್ರಿಪುರಾದಲ್ಲೂ ಕಮ್ಯೂನಿಸ್ಟ್ ಸರಕಾರವಿದೆ. ಅಲ್ಲಿ ಹತ್ಯೆಗಳು ನಡೆಯುತ್ತಿವೆಯೇ? ಸಂಘದ ಕಾರ್ಯಕರ್ತರು ಹಿಂಸೆಯನ್ನು ತ್ಯಜಿಸಿ ಅಹಿಂಸಾತ್ಮಕ ರಾಜಕೀಯ ಚಳುವಳಿಯನ್ನು ನಡೆಸುವುದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಒಳ್ಳೆಯದು.

        ಉತ್ತರ
        • shripad
         ಫೆಬ್ರ 24 2017

         ತ್ರಿಪುರಾ ಯಾಕೆ? ಸದ್ಯ ಕೇರಳದ ಬಗ್ಗೆ ಮಾತಾಡಿ. ತ್ರಿಪುರಾ ಜನ ಮುಗ್ಧರು, ಅವರಿಗಿನ್ನೂ ನಿಮ್ಮ ನಿಜ ಬಣ್ಣ ಗೊತ್ತಾಗಿಲ್ಲ. ಮಾರ್ಕ್ಸ್ ವಾದ ಒಪ್ಪದಿದ್ದರೆ? ಹತ್ಯೆ ನಿಲ್ಲುವುದಿಲ್ಲ ಅಲ್ಲವೇ? ನೀವೇನು ಭ್ರಾತೃತ್ವ, ಸೋದರತೆ, ಇತ್ಯಾದಿಗಳನ್ನು ಗುತ್ತಿಗೆ ಪಡೆದಿದ್ದೀರಾ?
         “ಸಂಘದ ಕಾರ್ಯಕರ್ತರು ಹಿಂಸೆಯನ್ನು ತ್ಯಜಿಸಿ ಅಹಿಂಸಾತ್ಮಕ ರಾಜಕೀಯ ಚಳುವಳಿಯನ್ನು ನಡೆಸುವುದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಒಳ್ಳೆಯದು” ಅನ್ನುವ ನಿಮಗೆ ಮಾರ್ಕ್ಸ್ ವಾದಿಗಳು ತಣ್ಣಗೆ ಇರುವುದು ಒಳ್ಳೆಯದು ಅನ್ನಲು ಏನಡ್ಡಿ? ಡಬ್ಬಾ ಐಡಿಯಾಲಜಿ ಅಡ್ಡ ಬರುತ್ತದೆ ಅಲ್ಲವೇ?

         ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments