ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 13, 2017

ಬಣ್ಣದ ಬದುಕು

‍ನಿಲುಮೆ ಮೂಲಕ

– ಎಸ್ ಜಿ ಅಕ್ಷಯ್ ಕುಮಾರ್

poster‘ರವಿ’ ಬೆಳಗ್ಗೆ ಏಳುವಾಗ, ಆಗಸದಲ್ಲಿನ ರವಿ ತನ್ನ ಹಾದಿಯ ಕಾಲು ಭಾಗ ಕ್ರಮಿಸಿಯಾಗಿತ್ತು. ಎದ್ದವನು ಮುಖಕ್ಕೆ ನೀರು ಸಹ ಹಾಕದೇ, ಸೀದಾ ತೆಂಕೊಡ್ಲಿನ ಬಸ್ ಸ್ಟಾಪಿನತ್ತ ನಡೆದ. ಬಸ್ ಸ್ಟಾಪಿನ ಹಿಂದಿನ ಗೋಡೆಗೆ ಮೂತ್ರಾಲಂಕಾರ ಮಾಡಿ, ತನ್ನ ಕಲೆಯನ್ನು ತಾನೇ ಮೆಚ್ಚಿಕೊಂಡು ಶಂಕ್ರಣ್ಣನ ಹೋಟೇಲಿಗೆ ಬಂದು ಕುಳಿತ. ಅದು ಶಂಕ್ರಣ್ಣನ ಮನದಲ್ಲೊಂದೇ ಹೋಟೆಲ್ ಆಗಿತ್ತು. ಉಳಿದವರಿಗೆಲ್ಲ ಅದು ತಟ್ಟಿ ಕಟ್ಟಿದ ಜೋಪಡಿಯಂತೆ ಕಾಣುತ್ತಿತ್ತು. ಅಲ್ಲಿ ಶಂಕ್ರಣ್ಣ ಚಾ, ಬೋಂಡ ಮುಂತಾದವುಗಳನ್ನು ಮಾರುತ್ತಿದ್ದ. ಬೆಳಗಿನ ಪೇಪರು ತೆಂಕೊಡ್ಲಿನ ಮಟ್ಟಿಗೆ ದೊಡ್ಡ ವಿಚಾರವೇ ಆಗಿತ್ತು. ಅದನ್ನು ತರಿಸುತ್ತಿದ್ದುದು ಪೈಗಳ ಮನೆಗಾದರೂ ಬಸ್ ಕಂಡೆಕ್ಟರ್ ಅದನ್ನು ಶಂಕ್ರಣ್ಣನ ಅಂಗಡಿಯಲ್ಲಿ ಕೊಟ್ಟು ಹೋಗುತ್ತಿದ್ದ. ಅವರ‍್ಯಾರಾದರೂ ತೆಗೆದುಕೊಂಡು ಹೋಗುವ ಮೊದಲೇ ಓದಬೇಕೆಂಬ ಬಯಕೆಯಲ್ಲೇ ರವಿ ನಡೆದು ಬಂದಿದ್ದ. ಸೀದಾ ಕೊನೆಯ ಪುಟಕ್ಕೆ ತಿರುಗಿಸಿ ಭಾರತ ಮತ್ತೊಂದು ಟೆಸ್ಟನ್ನು ಸೋತಿದ್ದನ್ನು ಪಕ್ಕಾ ಮಾಡಿಕೊಂಡು ಆಟಗಾರ ಕುಟುಂಬಕ್ಕೆಲ್ಲ ಬೈದು, ಮುಖಪುಟದಲ್ಲಿ ಹಲ್ಲು ಕಿರಿಯುತ್ತಿದ್ದ ರಾಜಕಾರಣಿಗಳಿಗೊಂದಿಷ್ಟು ಬೈದು ಪೇಪರು ಬಿಸಾಕಿ ವಾಪಸ್ಸು ಹೊರಟ. ಅವನ ಆಗಮನದಲ್ಲಿ ಶಂಕ್ರಣ್ಣ ಎಷ್ಟು ನಿರ್ಲೀಪ್ತನಾಗಿದ್ದನೋ, ಈಗಲೂ ಅಷ್ಟೇ ನಿರ್ಲೀಪ್ತನಾಗಿದ್ದ.

‘ಇವತ್ತು ಅಣ್ಣ ಬಂದ ಕೂಡಲೇ ಅವನಿಗೆ ಹೇಳಿಬಿಡಬೇಕು.’ ಎಂದು ತನಗೆ ತಾನೇ ಹೇಳಿಕೊಳ್ಳುತ್ತ ರವಿ ಮನೆಯತ್ತ ಕಾಲು ಹಾಕಿದ.

ರವಿಯ ಅಪ್ಪ ಅಮ್ಮ ತೀರಿಕೊಂಡು ಸುಮಾರು ವರ್ಷಗಳಾಗಿದ್ದವು. ಅವನ ಅಪ್ಪ ಬಾಂಬೆಯಲ್ಲಿ ಟೇಲರಿಂಗ್ ಮಾಡುತ್ತಿದ್ದನಂತೆ. ದೀಪಾವಳಿಗೆ ಮಕ್ಕಳನ್ನು ನೋಡಲೆಂದು ಬರುತ್ತಿದ್ದಾಗ ಬಸ್ಸು ಕೆರೆ ಏರಿ ಇಳಿದು ಮುಳುಗಿ ಗಂಡ ಹೆಂಡತಿ ಇಬ್ಬರೂ ಸತ್ತು ಹೋಗಿದ್ದರು. ಆಗ ರವಿಗಿನ್ನೂ ಐದೋ ಆರೋ ವರ್ಷವಿರಬೇಕು. ಅದಾದ ನಂತರ ರವಿಗೆ ಅಜ್ಜಿಯ ಆರೈಕೆಯೇ ನೆಲೆಯಾಯಿತು, ಮನೆಯ ಜವಾಬ್ದಾರಿ ಅಣ್ಣನ ಹೆಗಲೇರಿತು. ಅವನ ಅಣ್ಣ ಕುಂದಾಪುರದ ದೊಡ್ಡ ಶೆಟ್ಟರ ಅಂಗಡಿಯಲ್ಲಿ ಲೆಕ್ಕ ಪತ್ರ ಬರೆಯುತ್ತಿದ್ದ. ವಾರಕ್ಕೊಮ್ಮೆ ಮನೆಗೆ ಬರುವ ಅಣ್ಣನೆಂದರೆ, ರವಿಗೆ ಮೊದಲಿಂದಲೂ ಸಲಿಗೆಗಿಂತ ಭಯವೇ ಸ್ವಲ್ಪ ಜಾಸ್ತಿ.

ರವಿ ಪಿಯೂಸಿ ಮುಗಿಸಿ ಡಿಗ್ರಿಗೆಂದು ಎರಡು ವರ್ಷ ಕಾಲೇಜಿಗೆ ಹೋಗಿದ್ದರೂ, ಒಂದು ಪೇಪರು ಪಾಸು ಮಾಡಲಾಗದ ಧೀರನೆಂಬ ಬಿರುದು ಪಡೆದು ಕೊನೆಗೊಂದು ದಿನ ಕಾಲೇಜಿಗೆ ಕಲ್ಲು ಹೊಡೆದು ಬಂದಿದ್ದ. ಕಾಲೇಜಿಗೆ ಹೋಗಿ ಕಲಿತಿದ್ದೇನಾದರೂ ಇದ್ದರೆ ಅದು ಸಿನೆಮಾ ನೋಡುವುದು ಮತ್ತು ಕದ್ದು ಬೀಡೀ ಸೇದುವುದಷ್ಟನ್ನೆ.

ಮನೆಗೆ ಬಂದು ಅಜ್ಜಿ ಕೊಟ್ಟ ಗಂಜಿ ಕುಡಿದು, ಅಣ್ಣನಿಗೆ ವಿಚಾರ ಹೇಗೆ ಹೇಳುವುದೆಂದು ಯೋಚಿಸುತ್ತಾ ಕುಳಿತಾಗ ತಲೆಗೇನೂ ಹೋಳೆಯಲಿಲ್ಲ. ಸುರೇಶನನ್ನಾದರೂ ಕೇಳಿ ನೋಡೋಣ ಎಂದು ಸುರೇಶನ ಮನೆಯತ್ತ ಹೊರಟ.

ಮಧ್ಯಾಹ್ನದ ಸೂರ್ಯ ನೆತ್ತಿ ಸುಡುತ್ತಿದ್ದ. ದಾರಿಯಲ್ಲಿ ಬಂದ ಗೋವಿಂದನ ಬೈಕಿಗೆ ಕೈ ಅಡ್ಡಹಾಕಿ, “ಓ ಅಲ್ಲಿ, ಸುರೇಶನ ಮನೆ ತಂಕ ಬಿಡು ಮಾರಾಯ.” ಎಂದ.

“ಸುರೇಶ ಎಲ್ಲಿದ್ದ ಅಂತ ಹೇಳುಕೆ ಹೊಂಟ್ಯ ಎನಾ?” ಎಂದು ಗೋವಿಂದ ಮಾತಿಗಾರಂಭಿಸಿದ.

“ಎಲ್ಲಿದ್ದ ಅಂದ್ರೆ? ಮನೆಲೇ ಇರಬೇಕಲ?”

“ಓ, ಏನೂ ಗೊತ್ತೇ ಇಲ್ಲ ಅನ್ನೊನ ಹಂಗೆ ಆಡೂದು ನೋಡು. ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದರೆ ಇವಂಗೆ ಗೊತ್ತೇ ಇಲ್ಲ. ನೀನು ಸುರೇಶ ಎಂತ ದೋಸ್ತಿ ಅಂತ ಇಡೀ ಊರಿಗ್ ಗೊತ್ತುಂಟು. ಹೇಳ ಮಾರಾಯ.”

ರವಿ ಕಾಲೇಜಿಗೆ ಕಲ್ಲು ಹೊಡೆಯುವಾಗ, ಕ್ಲಾಸಿಗೆ ಚಕ್ಕರ್ ಹಾಕಿ ಸಿನೆಮಾಕ್ಕೆ ಹೋದಾಗೆಲ್ಲ ಸುರೇಶನೂ ಅವನ ಜೊತೆಗೆ ಇರುತ್ತಿದ್ದ. ಆದರೆ ಇತ್ತೀಚಿಗೆ ಇಬ್ಬರೂ ಸಿಗದೆ ಸುಮಾರು ದಿನಗಳೇ ಆಗಿದ್ದವು.

“ಎಂತ ಅಂತ ಸರಿ ಹೇಳು ಮಾರಾಯ, ನಂಗೆಂತದೂ ಗೊತ್ತಿಲ್ಲ.”

“ಅಲ್ಲ ಸುರೇಶ ಯಾವುದೋ ಹುಡುಗಿ ಓಡಿಸ್ಕಂಡು ಹೋದ ಸುದ್ದಿ ನಿಂಗೆ ಗೊತ್ತೇ ಇಲ್ವ, ಹೇಳು?”

ರವಿಗೆ ಸುಧಾರಿಸಿಕೊಳ್ಳಲೆರಡು ಕ್ಷಣ ಹಿಡಿಯಿತು. ‘ಎಂತಾ? ನಮ್ಮ ಹೆದರುಪುಕ್ಕ ಸುರೇಶ ಹುಡುಗಿ ಸಂತಿಗೆ ಓಡಿ ಹೋಗುದಾ? ಅದಕ್ಕಿಂತ ಮೊದಲು ಮೀನು ಮರ ಹತ್ತುತ್ತವೆ’ ಎಂದುಕೊಳ್ಳುತ್ತಿದ್ದಾಗಲೆ,

“ಮೊನ್ನೆ ಸಂಜೆಯಿಂದ ಮನೆ ಬದಿಗೆ ಕಾಣುಕೆ ಇಲ್ವಂತೆ. ಒಂದಿಷ್ಟು ಬಟ್ಟೆ, ದುಡ್ಡು ಎಲ್ಲಾ ಹೊತ್ತ್ಗಂಡು ಹೋಗಾನೆ ಅಂಬರು. ನಿನ್ನೆ ಸಂಜೆ ಅವನ ಮನೆ ಬದಿಗೆ ಜೋರು ಗೌಜಿ ಬಿದ್ದಿತ್ತ. ಅವನ ಅಮ್ಮನ ರೋದನೆ ನೋಡುಕೆ ಆತಿಲ್ಲೆ. ಇದ್ಯಾವೂದೂ ಗೊತ್ತಿಲ್ವ ನಿಂಗೆ. ಸತ್ಯ ಮಾಡಿ ಹೇಳು ನೋಡುವಾ?” ಎಂದ.

“ಇಲ್ವ ಮಾರಾಯ. ನಂಗೆಂತದೂ ಗೊತ್ತಿಲ್ಲ. ನಿನ್ನೆ ಇಡೀ ತೋಟದಾಗೇ ಇದ್ದೆ. ಬೆಳಗ್ಗೆ ಶಂಕ್ರಣ್ಣನೂ ಎಂತದೂ ಹೇಳಲಿಲ್ಲಪ್ಪ.” ಎನ್ನುತ್ತಿದ್ದವನಿಗೆ ಸಡನ್ನಾಗಿ ಏನೋ ಹೊಳೆದಂತಾಗಿ, “ಓಯ್, ಇಲ್ಲೇ… ಇಲ್ಲೇ ನಿಲ್ಸು ಮಾರಾಯ.” ಎಂದ. ಅವನು ಪೂರ್ತಿ ನಿಲ್ಲಿಸುವುದರೊಳಗೇ ಇಳಿದುಕೊಂಡ.

“ಆ ಕಡೀಕೆ ಹೋದ್ರೆ, ನಂಗೆಂತಾದ್ರೂ ಗೊತ್ತಿರ್ತದೆ ಅಂತ ನನ್ನ ಹಿಡ್ಕಂತ್ರು. ನಾ ಸುಮ್ನೆ ಸಿಕ್ಕಬೀಳುದೆಂತಕ್ಕೆ? ವಾಪಸ್ ಹೋಗ್ತೆ. ನೀ ನಡಿ.” ಎಂದು ಗೋವಿಂದನನ್ನು ಅತ್ತ ಸಾಗು ಹಾಕಿ ರವಿ ವಾಪಸ್ಸು ಮನೆಗೆ ಬಂದ. ಅಣ್ಣ ಬಂದು ಜಗಲಿಯ ಮೇಲೆ ಕುಳಿತು ಏನೋ ಲೆಟರ್ ಓದುತ್ತಿದ್ದ. ‘ಈಗೇ ಹೇಳಲಾ?’ ಎಂದೊಮ್ಮೆ ಯೋಚಿಸಿದ ರವಿ, ‘ಬೇಡ. ಅಣ್ಣ ಸುಧಾರಿಸಿಕೊಳ್ಳಲಿ’ ಎಂದುಕೊಂಡ.

ತಲೆಯ ತುಂಬ ಸುರೇಶನದೇ ಯೋಚನೆ. ಆ ಪುಕ್ಕ ಬಡ್ಡೀಮಗನಿಗೆ ಅಷ್ಟೆಲ್ಲಾ ಧೈರ್ಯ ಬಂದಿದ್ದಾದರೂ ಹೇಗೆ? ಎಂಬ ಪ್ರಶ್ನೆಗವನಿಗೆ ಉತ್ತರವೇ ಹೊಳೆಯಲಿಲ್ಲ. ರವಿ ಮತ್ತು ಸುರೇಶ ಚಿಕ್ಕಂದಿನಿಂದ ಒಂದೇ ಕ್ಲಾಸಿನಲ್ಲಿದ್ದವರು, ಒಟ್ಟಿಗೆ ಕಾಲೇಜಿಗೂ ಹೋದವರು. ರವಿಯ ಕಿತಾಪತಿಗಳಲೆಲ್ಲ ಸುರೇಶನ ಅರೆ ಮನಸ್ಸಿನ ಕಾಲೊಂದು ಯಾವಾಗಲೂ ಇರುತ್ತಿತ್ತು. ಆದರೆ ಸಿಕ್ಕಿಬೀಳುವ ಭಯ ವಿಪರೀತವಾಗಿ, ಅದೇ ಭಯದಲ್ಲೇನಾದರೂ ಯಡವಟ್ಟು ಮಾಡಿಕೊಂಡು, ಕೊನೆಗೆ ಸಿಕ್ಕಿಬೀಳುವುದರಲ್ಲಿ ಸುರೇಶನಷ್ಟು ಪ್ರತಿಭಾಶಾಲಿಗಳು ಇನ್ಯಾರೂ ಇರಲಿಲ್ಲ. ಅದಕ್ಕೆ ಅವನಿಗೆ ಪುಕ್ಕ ಸುರೇಶನೆಂಬ ಬಿರುದು ಸಿಕ್ಕಿದ್ದು.

ಅವರಿಬ್ಬರೂ ಕಾಲೇಜಿನಲ್ಲಿದ್ದಾಗ ಕಾರಿಡಾರು, ಕ್ಯಾಂಟೀನುಗಳಲ್ಲಿ ಒಟ್ಟಿಗೆ ಕುಳಿತು ಹುಡುಗಿಯರನ್ನು ನೋಡುವುದು, ಕೆಲವರಿಗೆ ಸ್ಮೈಲ್ ಕೊಡುವುದು, ಅವರೇನಾದರೂ ತಿರುಗಿ ನೋಡುವುದರೊಳಗೆ ಅಲ್ಲಿಂದ ಜಾಗ ಖಾಲಿ ಮಾಡುವುದಕ್ಕಷ್ಟೆ ರವಿಯ ಪ್ರೇಮ ಪುರಾಣಗಳು ಸೀಮಿತವಾಗಿದ್ದವು.

ಸುರೇಶ ಒಂದು ದಿನ ಬಂದು, “ನಾನು ರೇಖಾಂಗೆ ಲೆಟರ್ ಕೊಟ್ಟೆ” ಎಂದರೆ ಯಾರೂ ನಂಬಿರಲಿಲ್ಲ. ಆದರೆ ರವಿಯ ಕಣ್ಣೆದುರೇ ರೇಖಾ ಬಂದು ಸುರೇಶನ ಕೆನ್ನೆಗೊಂದು ಬಾರಿಸಿ, ಲೆಟರ್ ಹರಿದು ಅವನ ಮುಖದೆಡೆಗೆ ಬಿಸಾಕಿ ಹೋದಾಗ ನಂಬದೇ ಬೇರೆ ದಾರಿಯಿರಲಿಲ್ಲ. ‘ಅಂತಹ ಸುರೇಶ!, ನಮ್ಮ ಹೆದರುಪುಕ್ಕ ಸುರೇಶ, ಯಾರ ಜೊತೆಗೋ ಓಡಿಹೋಗಿದ್ದಾನೆಂದರೆ ಅದನ್ನು ಹೇಗೆ ನಂಬುವುದು!’

ಮಧ್ಯಾಹ್ನ ಕಳೆಯಿತು, ಸಂಜೆಯಾಯಿತು, ರಾತ್ರಿಯ ಊಟಕ್ಕೂ ಕುಳಿತಾಯಿತು ಆದರೆ ರವಿಗೆ ಬಾಯಿ ತೆಗೆಯಲು ಧೈರ್ಯವೇ ಸಾಲುತ್ತಿಲ್ಲ. ಆಗ ಅಜ್ಜಿ ಬಡಿಸುತ್ತ ಬಂದವಳು, “ರವಿ, ಬಾಂಬೆಗೆ ಹೋಗ್ತಾನಂತೆ. ಸಿನೇಮಾ ಪೋಸ್ಟರ್ ಕೆಲಸಕ್ಕೆ.” ಎಂದು ಹೇಳಿ ಒಳನಡೆದು ಬಿಟ್ಟಳು.

‘ತನಗೊಬ್ಬನಿಗೇ ಗೊತ್ತಿರಬೇಕಾದ ಟಾಪ್ ಸಿಕ್ರೇಟು ಅಜ್ಜಿಗೆ ಗೊತ್ತಾಗಿದ್ದಾದರೂ ಹೇಗೆ?’ ಎಂದು ಯೋಚಿಸುವಷ್ಟರಲ್ಲಿ, ಅವನ ಅಣ್ಣ, “ಎಂತದೂ ಬೇಡ.” ಎಂದುಬಿಟ್ಟ. ರವಿಯ ಬಾಯಿ ಕಟ್ಟಿಹೋಗಿತ್ತು. ಊಟ ಅರ್ಧಕ್ಕೆ ಬಿಟ್ಟು ಎದ್ದವನು, ಅಂತಹ ಪುಕ್ಕ ಸುರೇಶನೇ ಅಷ್ಟು ಧೈರ್ಯ ಮಾಡಬೇಕಾದರೆ ನಾನೇಕೆ ಹೆದರಬೇಕೆಂದು ತನ್ನನ್ನು ತಾನೆ ಹುರಿದುಂಬಿಸಿಕೊಂಡರೂ, ಅವನ ಬಾಯಿಂದ ಹೊರಬಿದ್ದುದು, “ಎಂತಕ್ಕೆ?” ಎಂಬ ಮೂರಕ್ಷರಗಳಷ್ಟೇ.

“ಬೇಡ ಅಂದ್ರೆ ಬೇಡ ಅಷ್ಟೆ.”

“ವಯಸ್ಸಿಗೆ ಬಂದ ಹುಡುಗ, ದುಡಿಲಿಕ್ಕೆ ಹೋಗ್ತೆ ಅಂತಿದ್ದಾನೆ. ಹೋಗ್ಲಿ ಮರಿ” ಎಂದಳು ಅಜ್ಜಿ. ರವಿಗೆ ಒಮ್ಮೆಲೇ ಅಜ್ಜಿಯ ಮೇಲೆ ಪ್ರೀತಿ ಹೆಚ್ಚಾಗಿಬಿಟ್ಟಿತು.

“ಇವ ಕಾಲೇಜಿಗೇ ಹೋಗಿ ಕಡಿದು ಕಟ್ಟೆ ಹಾಕಿದ್ದು ಸಾಲದೇ? ದುಡಿಲಿಕ್ಕೆ ಬಾಂಬೆಗೇ ಹೋಗಬೇಕಾ?” ಎಂದೆಲ್ಲ ಶುರು ಮಾಡಿದ್ದ ಅಣ್ಣನ ಅರೋಪ ಪ್ರವಾಹಕ್ಕೆ ತಡೆ ಹಾಕಿ ರವಿ,

“ನಾನು ಹೋಗುವವನೆಯ.” ಎಂದು ಅದಾವ ಸಿಟ್ಟೊ, ಧೈರ್ಯದಲ್ಲೊ ಹೇಳಿಬಿಟ್ಟನೋ, ಅವನಿಗೂ ತಿಳಿಯದು. ಆದರೆ ಆ ಕ್ಷಣದಲ್ಲೇ ತಾನು ಜೀವನದಲ್ಲಿ ಏನಾದರೂ ಆಗಬೇಕು ಅಂತಿದ್ರೆ ಅದು ಪೋಸ್ಟರ್ ಆರ್ಟಿಸ್ಟ್ ಎಂಬ ಪರಮಗುರಿಯೊಂದು ರವಿಗೆ ದೃಗ್ಗೋಚರವಾದ ಅನುಭವವಾಯಿತು.

ಮೂರು ದಿನದಲ್ಲಿ ರವಿ ಹೆಗಲಿನೊಂದು ಬ್ಯಾಗಿನಲ್ಲಿ ತನ್ನ ಪೇಂಟು, ಬ್ರಷ್, ಟ್ರಂಕೊಂದರಲ್ಲಿ ತನ್ನ ಬಟ್ಟೆ ಬರೆ ಹೊತ್ತು, “ಅಪ್ಪ ಅಮ್ಮನ ಮುಂದಿನ ಶ್ರಾದ್ಧಕ್ಕೆ ಬರುತ್ತೇನೆ. ಅಷ್ಟೊತ್ತಿಗಾದರೂ ಅಣ್ಣನಿಗೆ ನನ್ನ ಮೇಲಿನ ಸಿಟ್ಟು ಇಳಿದಿರಬಹುದು.” ಎಂದು ಅಜ್ಜಿಗೆ ಹೇಳಿ ರವಿ ಬಾಂಬೆಯ ಟ್ರೇನು ಹತ್ತಿದ.

—————- *** —————-

ಕಣ್ಣಲ್ಲಿ ನೂರು ಕನಸು ಹೊತ್ತು ಬಾಂಬೆಯ ಟ್ರೇನು ಹತ್ತಿದ್ದ ರವಿಗೆ ತನ್ನ ನಿರ್ಧಾರವೇನೂ ಹುಡುಗಾಟಿಕೆಯಂತೆ ಕಂಡಿರಲಿಲ್ಲ. ಸುತ್ತಲ ಹತ್ತೂರಿನಲ್ಲಿ ಅವನಷ್ಟು ಚೆನ್ನಾಗಿ ಪೇಂಟಿಂಗ್ ಮಾಡುವವರು ಯಾರೂ ಇಲ್ಲವೆಂದು ಊರ ಜನ ಅವನೆದುರು ಹೇಳುತ್ತಿದ್ದರು. ಕಳೆದ ವರ್ಷ ಕುಂದಾಪುರದ ದೇವಸ್ಥಾನದ ಗೋಡೆಗಳ ಮೇಲೆ ಬರೆದಿದ್ದ ಚಿತ್ರಗಳನ್ನೂ ಉಡುಪಿಯ ಗುರುಗಳೂ ಮೆಚ್ಚಿದ್ದು ಅವನ ಕೀರ್ತಿಪತಾಕೆಯಂತಿತ್ತು. ಹೀಗಾಗಿ ಕೂಪಮಂಡೂಕದಂತಿದ್ದ ರವಿಗೆ ತನ್ನ ಕಲೆಯ ಬಗ್ಗೆ ಚೂರು ವಿಪರೀತವೇ ಅನ್ನುವಷ್ಟು ಅಭಿಮಾನ ಇದ್ದದ್ದು ಸುಳ್ಳಲ್ಲ.

ಬಾಂಬೆಯಲ್ಲಿ ಉಳಿಯಲು, ಊಟ ತಿಂಡಿಗೆಲ್ಲ ಶಾಮಣ್ಣ ವ್ಯವಸ್ಥೆ ಮಾಡಿಕೊಡುತ್ತಾನೆಂಬ ನಂಬಿಕೆಯೂ ಅವನಿಗೆ ಸ್ವಲ್ಪ ನಿರಾಳವನ್ನುಂಟು ಮಾಡಿತ್ತು. ಹೋದ ಸಲ ಸಿಕ್ಕಾಗ ಶಾಮಣ್ಣ ಹೇಳಿರಲಿಲ್ಲವೇ, “ನೀನು ಬಾಂಬೆಗೆ ಬರೂದೊಂದು ನೋಡ್ಕ. ಆಮೇಲೆ ಈ ಶಾಮಣ್ಣ ಇದ್ನಲ್ಲ. ನಿಂಗೆಂತಕ್ಕೆ ಚಿಂತೆ? ಇಳ್ದವನೆ ಸೀದಾ ಈ ಅಡ್ರೆಸ್ಸಿಗೆ ಬಂದುಬಿಡು. ಮುಂದಿಂದೆಲ್ಲ ನಾ ಕಂಡ್ಕತ್ತೆ.” ಎಂದು. ಪರ್ಸಿಗೊಮ್ಮೆ ಕೈ ಮುಟ್ಟಿ ಇದೆಯೆಂಬುದನ್ನ ಖಾತ್ರಿ ಪಡಿಸಿಕೊಂಡ. ಅದರಲ್ಲೇ ಶಾಮಣ್ಣನ ಅಡ್ರೆಸ್ಸಿನ ಚೀಟಿಯೂ ಇದ್ದುದು. ಹೀಗೆ ತನ್ನ ಕಲೆಯ ಬಗೆಗಿನ ಚೂರು ಹೆಚ್ಚೇ ಅನ್ನಬಹುದಾದ ಅಭಿಮಾನ, ಶಾಮಣ್ಣನ ಮಾತು, ಸುರೇಶನಗಿಂತ ತಾನು ದೊಡ್ಡ ಸಾಹಸ ಮಾಡುತ್ತಿದ್ದೇನೆಂಬ ಗರ್ವಗಳನ್ನೆಲ್ಲ ಹೊತ್ತು ರವಿ ಬಾಂಬೆಗೆ ಬಂದಿಳಿದ.

ಕನಸುಗಳ ನಗರಿ ಬಾಂಬೆ. ಅಕ್ಷರಶಃ ಕೋಟ್ಯಾಂತರ ಜನರ ಕನಸುಗಳಿಗೆ ನೆಲೆಕೊಟ್ಟ ಮಹಾನಗರಿಯದು. ಅಲ್ಲಿ ಬಾಲಿವುಡ್‍ನ ಥಳುಕಿದೆ. ಧಾರಾವಿಯ ಕೊಳಕಿದೆ. ಡಾನ್ಸ್ ಬಾರುಗಳ ಮಾದಕತೆಯಿದೆ. ದರ್ಗಾಗಳ ಸೂಫಿ ಸಂಗೀತವಿದೆ. ಮಸಾಲಾ ಚಾಯ್‍ನ ಚುರುಕಿದೆ. ಫಾರಿನ್ ವಿಸ್ಕಿಯ ಅಮಲಿದೆ. ಸ್ವರ್ಗಕ್ಕೆ ಏಣಿ ಹಾಕಿ ನಿಂತಂತಹ ಕಟ್ಟಡಗಳಿವೆ. ನರಕದ ಕ್ರೌರ್ಯವನ್ನೂ ನಾಚಿಸುವಂತಹ ಭೂಗತ ಜಗತ್ತಿದೆ. ಬಾಂಬೆಯಲ್ಲಿ ಎಲ್ಲವೂ ಇದೆ. ಅಲ್ಲಿ ಎಲ್ಲರೂ ಇದ್ದಾರೆ. ಮರಾಠಿಗರ ಮಧ್ಯೆ ಇದ್ದರೂ, ಗುಜರಾತಿಗಳ ವ್ಯವಹಾರ, ಮಾರ್ವಾಡಿಗಳ ವ್ಯಾಪಾರ, ಬಿಹಾರ- ಉತ್ತರಪ್ರದೇಶಗಳವರ ಕೂಲಿ, ಸಾಬರ ಹೊಡೆದಾಟಗಳಿಲ್ಲದೆ ಬಾಂಬೆ ಅಪೂರ್ಣ. ಇಂತಹವರ ಮಧ್ಯೆ ಕರ್ನಾಟಕದ ಕರಾವಳಿಯವರದೊಂದು ದೊಡ್ಡ ಅಸ್ತಿತ್ವವಿದೆ. ಎಲ್ಲೆಲ್ಲಿಂದಲೋ ಬಂದು ಒಂದು ಉಡುಪಿ ಹೋಟೆಲ್ಲು ನಡೆಸಿಯೋ, ಮತ್ತೊಂದು ಮಗದೊಂದು ಮಾಡಿಕೊಂಡು ಜೀವನ ಸಾಗಿಸುವವರ ಸಂಖ್ಯೆ ಅಪಾರ.

ಅಜ್ಜಿಗೊಬ್ಬ ಮೊಮ್ಮಗ, ಅಣ್ಣನಿಗೊಬ್ಬನೇ ತಮ್ಮನಾಗಿದ್ದ ರವಿ, ಬಾಂಬೆಗೆ ಬಂದಿಳಿದಾಕ್ಷಣ ಇಲ್ಲಿನ ಕೋಟ್ಯಾಂತರ ಅನಾಮಿಕರಲ್ಲೊಬ್ಬ ಅನಾಮಿಕನಾಗಿ ಹೋದ. ಅವನಿಗೆ ಮೊದಲು ಆಶ್ಚರ್ಯ ಹುಟ್ಟಿಸಿದ್ದು, ಬಾಂಬೆಯ ಅವಸರ. “ನಾಳೆಯೇ ಜಗತ್ತು ಕೊನೆಯಾಗುತ್ತೆ, ಅಷ್ಟರಲ್ಲಿ ಇದೆಲ್ಲಾ ಮಾಡಿ ಮುಗಿಸಿಬಿಡಬೇಕು ಇಲ್ಲವೆಂದರೆ ನರಕಕ್ಕೆ ಹೋಗುತ್ತೀಯಾ” ಅಂತ ದೇವರೆ ಬಂದು ಎಲ್ಲರಿಗೂ ಹೇಳಿದ್ದಾನೋ ಎಂಬಷ್ಟು ಅವಸರ. ಇಡೀ ಊರೇ ಕುಂದಾಪುರದ ಗಡಿಬಿಡಿ ಶೆಟ್ಟರಥವರಿಂದ ತುಂಬಿ ಹೋಗಿದೆ ಎನಿಸಿತು ರವಿಗೆ.

ಇಳಿದವನು ಮುತ್ತುತ್ತಿದ್ದ ಟಾಕ್ಸಿಯವರೊಂದಿಗೆ ಗುದ್ದಾಡಿ ವಿಜಯಿಯಾದನೆಂಬಂತೆ ಹೊರಬಂದವನನ್ನು ಹಿಡಿದುಕೊಂಡ ರಿಕ್ಷಾದವನೊಂದಿಗೆ ಒಂದಿಷ್ಟು ಚೌಕಾಸಿ ಮಾಡಿ ಅಂತೂ ಘಾಟ್ಕೋಪರ್‍ನಲ್ಲಿದ್ದ ಶಾಮಣ್ಣನ ಅಡ್ರೆಸ್ಸಿಗೆ ಬಂದು ಮುಟ್ಟಿದ.

ಹೋಗಿ ಬಾಗಿಲು ತಟ್ಟಿದರೆ, ಯಾವನೋ ದೈತ್ಯಾಕಾರಾದ ಆಸಾಮಿ ಬಂದು, “ಕ್ಯಾ?” ಎಂದ. ರವಿ ಎನೂ ಅರ್ಥವಾಗದವನಂತೆ, “ಶಾಮಣ್ಣ… ಶಾಮಣ್ಣ” ಎಂದು ಬಡಬಡಿಸಿದ. “ಓನರ್ ಸೆ ಜಾಕೆ ಬಾತ್ ಕರೋ” ಎಂದು ಗೊಗ್ಗರು ದನಿಯಲ್ಲಿ ಹೇಳಿ ಬಾಗಿಲು ಹಾಕಿಕೊಂಡ.

ಓನರ್‍ನ ಹತ್ತಿರ ಮಾತನಾಡಿದ ರವಿಗೆ ಕಾಲಕೇಳಗಿನ ಭೂಮಿಯೇ ಕುಸಿದಂತಾಯಿತು. ಶಾಮಣ್ಣ ಮೂರು ತಿಂಗಳ ಬಾಡಿಗೆ ಕೊಡದೆ, ಓನರನಿಗೆ ಮೇಲಿಂದ ಐದು ಸಾವಿರ ಟೊಪ್ಪಿ ಹಾಕಿ ಓಡಿ ಹೋಗಿ ಆರು ತಿಂಗಳಾಗುತ್ತ ಬಂತಂತೆ.

“ನೀನು ಅವನ ಪರಿಚಯದವನೋ ಅಥವಾ ನಿನಗೂ ಅವನು ದುಡ್ಡು ಕೊಡಬೇಕೋ?” ಎಂದು ಕೇಳಿದಾಗ ರವಿ ಸುಧಾರಿಸಿಕೊಂಡು, “ಇಲ್ಲ ನನಗೂ ಅವನು ಐನೂರು ರೂಪಾಯಿ ಕೊಡುವುದಿತ್ತು” ಎಂದು ಹೇಳಿ ವಾಪಸ್ಸು ಹೊರಡುವವನಿದ್ದ. ಓನರನೇ ಅಷ್ಟರಲ್ಲಿ, “ಅವನಿದ್ದ ರೂಮು ಖಾಲಿಯಿದೆ, ಬೇಕಾದರೆ ಹೇಳು ಎಂದ. ರವಿಗೆ ಸಿಕ್ಕಿದ ಚಾನ್ಸು ಬಿಡುವುದು ಬೇಡ ಎನಿಸಿ, ಅಡ್ವಾನ್ಸೂ, ಬಾಡಿಗೆಗೆಲ್ಲ ಚೌಕಾಸಿ ಮಾಡಿ ತನ್ನ ಲಗ್ಗೇಜನ್ನೆಲ್ಲ ಹೊತ್ತು ಓನರ್ ಹೇಳಿದ ಮೂರನೇ ಮಹಡಿಯ ರೂಮಿಗೆ ಹೋದ.

“ಭರ್ಜರಿ ಆರಾಮಾಗಿದ್ದೇನೆ. ಅದ್ಭುತ ರೂಮಿದೆ.” ಎಂದೆಲ್ಲ ಹೇಳಿದ್ದ ಶಾಮಣ್ಣ ಕಟ್ಟಿದ್ದ ಕನಸಿನ ಲೋಕವೆಲ್ಲ ರೂಮೂ ಹೊಕ್ಕಾಕ್ಷಣ ಮಾಯವಾಯಿತು. ಬಹುಶಃ ಬಾಂಬೆಯ ಟ್ರೇನುಗಳಲ್ಲಿ ತಿರುಗಿ ಚೆನ್ನಾಗಿ ಅನುಭವವಿದ್ದ ಶಾಮಣ್ಣ, ಊರಲ್ಲೆಲ್ಲ ಹಳಿಯಿಲ್ಲದೇ ಟ್ರೇನು ಬಿಟ್ಟಿದ್ದ ಎಂಬುದು ರವಿಗೆ ಅರ್ಥವಾಯಿತು. ಶಂಕ್ರಣ್ಣನ ಚಾ ಅಂಗಡಿಗಿಂತ ಚಿಕ್ಕದಾಗಿತ್ತು ಆ ರೂಮು. ಗೋಡೌನಿನಂತಿದ್ದ ಅದರಲ್ಲಿ ಒಂದೆರಡು ಹಳೇ ಸಾಮಾನು ಬಿದ್ದಿದ್ದವು, ಶಾಮಣ್ಣನದೇ ಇರಬೇಕು. “ಬೇಕಾದರೆ ಇಟ್ಟುಕೋ, ಇಲ್ಲವಾದರೆ ಬಿಸಾಕು” ಎಂದು ಓನರನೇನೋ ಹೇಳಿ ಹೋದ.

ರವಿಗೀಗ ಚಿಂತೆ ಹತ್ತಿತು. ‘ಬಾಂಬೆಯಂತಹ ಮಾನವ ಸಮುದ್ರದಲ್ಲಿ ಯಾರ ಸಹಾಯವೂ ಇಲ್ಲದೇ ಜೀವನ ಸಾಗಿಸುವುದಾದರೂ ಹೇಗೆ? ನಂಬಿ ಬಂದಿದ್ದ ಶಾಮಣ್ಣನಂತೂ ದೊಡ್ಡ ದಗಲ್ಬಾಜಿ ಅಂತಾಯಿತು. ಈಗೇನು ಮಾಡುವುದು?’ ಎನ್ನುತ್ತ ಕುಳಿತಿದ್ದವನಿಗೆ, ಸಂಜೆಯ ತಂಗಾಳಿ ಸ್ವಲ್ಪ ಧೈರ್ಯ ತುಂಬಿತು. ‘ಇಲ್ಲಿ ನೂರಾರು ಥೇಟರಿದೆ, ಎಲ್ಲಾದರೂ ಕೆಲಸ ಸಿಗ್ಗುತ್ತದೆ.’ ಎಂದು ತನಗೇ ತಾನೆ ಧೈರ್ಯ ಹೇಳಿಕೊಂಡ. ಮುಂದೆ ತನ್ನ ಜೀವನ ಹೇಗೇಗೆ ತಿರುಗುತ್ತದೆಂಬ ಸೂಚನೆ ಒಂಚೂರಾದರೂ ಇದ್ದರೆ ರವಿ ಆ ಧೈರ್ಯ ಮಾಡುತ್ತಿದ್ದನೋ ಇಲ್ಲವೋ. ಆದರೀಗ ಅವನೂ ಇಲ್ಲೇ ಇರುವುದೆಂದು ನಿರ್ಧರಿಸಿಯಾಗಿತ್ತು.

ದಿನಕ್ಕೊಂದರಂತೆ ಥೇಟರಿಗೆ ಹೋಗುವುದು, ಮ್ಯಾನೇಜರನೋ, ಗೇಟ್ ಕೀಪರನದೋ ದೋಸ್ತಿ ಮಾಡಿಕೊಳ್ಳಲು ಪ್ರಯತ್ನಿಸಿವುದು ಇದೇ ಆಯಿತು ರವಿಯ ಮುಂದಿನ ಒಂದು ತಿಂಗಳು. ಕೈಯಲ್ಲಿ ಹೇಗೂ ಅಲ್ಪ ಸ್ವಲ್ಪ ದುಡ್ಡಿದ್ದದ್ದುರಿಂದ ಮೊದಲೆರಡು ವಾರ ಸ್ವಲ್ಪ ಯಾರಾದರೂ ರೇಗಿದರೆ, “ನೀನಿಲ್ಲ ಅಂದರೆ ಮತ್ತೊಬ್ಬ ಕೆಲಸ ಕೊಡುತ್ತಾನೆ, ಮಾದರ್ ಛೋದ್” ಎಂದು ಬೈದು ವಾಪಸ್ಸು ಬಂದುಬಿಡುತ್ತಿದ್ದ. ಸಂಜೆಯಾದರೆ ಪೇಟೆ ಸುತ್ತಲು ಬಹಳ ಖುಷಿಯಾಗುತ್ತಿತ್ತು. ಅದೇನು ಬೆಳಕು, ಊರಿಗೆ ಹೋಲಿಸಿದರೆ ಇಲ್ಲಿ ನಿತ್ಯ ದೀಪಾವಳಿಯೆ.

ಒಂದು ದಿನ ರವಿ ಹತಾಶನಾಗಿ ರೂಮಿಗೆ ವಾಪಸ್ಸು ಹೋಗಲೆಂದು ದಾದರಿನ ಲೋಕಲ್ ರೈಲ್ವೇ ಸ್ಟೇಷನ್ನಿನ ಮೆಟ್ಟಿಲಿಳಿಯುತ್ತಿದ್ದ. ಎದುರಿನಿಂದ ಬಂದ ಸಾಬನೊಬ್ಬ ರವಿಯ ಪಕ್ಕದಲ್ಲಿದ್ದ ಸೇಠುವಿನ ಹೊಟ್ಟೆಗೆ ಚೂರಿ ಹಾಕಿದ್ದ. ಬಾಂಬೆಯ ಕರಾಳ ಅಂಡರ್ ವರ್ಲ್ಡ್‍‍ ತನ್ನ ಝಲಕ್ಕು ತೋರಿಸಿತ್ತು. ಮೈಯೆಲ್ಲಾ ರಕ್ತಸಿಕ್ತವಾಗಿದ್ದ ರವಿಗೆ ಬಾಂಬೆಯ ಮನುಷ್ಯತ್ವದ ಬಗ್ಗೆ ಅನುಮಾನ ಹುಟ್ಟಿತು.

ಒಂದುವರೆ ತಿಂಗಳಾದರೂ ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ.  ಕೈಲಿದ್ದ ದುಡ್ಡು ಖಾಲಿಯಾಗುತ್ತಿತ್ತು. ಕೆಲವು ಥೇಟರಿನಲ್ಲಿ ಅವನತ್ತ ತಿರುಗೂ ನೋಡುತ್ತಿರಲಿಲ್ಲ, ಇನ್ನೂ ಕೆಲವೆಡೆ ಕೆಲಸದ ಮಾತೆತ್ತಿದ ತಕ್ಷಣ ಮಾತು ಬಂದಾಗಿ ಬಿಡುತ್ತಿತ್ತು. ಬೆಳಗ್ಗಿಂದ ಏನೂ ತಿನ್ನದವನು ಫೌಂಟೆನ್ನಿನ ಹತ್ತಿರದ ಥೇಟರಿಗೆ ಮತ್ತೊಮ್ಮೆ ಪ್ರಯತ್ನಿಸಬೇಕೆಂದು, ಘಾಟ್ಕೋಪರ್ ನಲ್ಲಿ ಟ್ರೇನಿಗೆ ಕಾಯುತ್ತಿದ್ದ. ಅವನ ಮುಂದೆ ಒಂದಿಷ್ಟು ದೂರದಲ್ಲಿ ಪರ್ಸೊಂದು ಬಿದ್ದಿದ್ದು ಕಾಣಿಸಿತು. ಎತ್ತಿ ಯಾರದೆಂದು ಕೇಳುವಷ್ಟರಲ್ಲಿ, ಯಾವನೋ  ಒಬ್ಬ “ಚೋರ್, ಚೋರ್” ಎಂದು ಕೂಗಿದ. ಮತ್ತೋಬ್ಬ ಹಿಂದಿನಿಂದ ಹೊಡೆದು ಕಾಲರ್ ಪಟ್ಟಿ ಹಿಡಿದು, “ಬೆಹನ್ ಛೋದ್, ಚೋರಿ ಕರ್ತಾ ಹೈ?” ಎಂದು ಎರಡು ಬಾರಿಸಿದ. “ಮಾರೋ ಸಾಲೆ ಕೋ.” ಎಂದು ಸುತ್ತಲಿದ್ದವರೆಲ್ಲ  ಬಾರಿಸತೊಡಗಿದರು. ಮರುದಿನ ಸಂಜೆಯ ಹೊತ್ತಿಗೆ ರೂಮು ಮುಟ್ಟುವ ಹೊತ್ತಿಗೆ, ಬಣ್ಣದ ಜೀವನದ ಕನಸು ಹೊತ್ತು ಬಾಂಬೆಗೆ ಬಂದಿದ್ದ ರವಿಯ ಬ್ಲಾಕ್ ಎಂಡ್ ವೈಟ್ ಫೋಟೋ ಪೋಲಿಸ್ ಸ್ಟೇಷನ್ನಿನ ಪಿಕ್ ಪಾಕೇಟರ್ಸ್ ಲಿಸ್ಟಿನಲ್ಲಿತ್ತು.

ರೂಮಿಗೆ ಹೋಗಿ ಬಿದ್ದಿದ್ದ ರವಿಯ ತಲೆ ಸಿಡಿಯುತ್ತಿತ್ತು. ಯಾರೋ ಬಾಗಿಲು ಬಡಿದರು, ಎದ್ದು ಹೋಗಿ ಬಾಗಿಲು ತೆಗೆದರೆ ಓನರ್ ಮೊದಲ ದಿನ ನೋಡಿದ್ದ ದೈತ್ಯನೊಂದಿಗೆ ನಿಂತಿದ್ದ. ಬಾಗಿಲು ತೆಗೆದ ರವಿಯನ್ನು ಮೇಲಿಂದ ಕೆಳಗಿನವರೆಗೊಮ್ಮೆ ನೋಡಿದ. ಊದಿದ್ದ ಕೆನ್ನೆ ಇನ್ನೂ ಇಳಿದರಿಲಿಲ್ಲ. ಒಂದು ಕಣ್ಣು ಕಪ್ಪಗಾಗಿ ಅರೆ ಮುಚ್ಚಿಕೊಂಡಿತ್ತು. ಈಗ ಬೀಳುತ್ತಾನೋ, ಇನ್ನೊಂದು ಕ್ಷಣಕ್ಕೆ ಬೀಳುತ್ತಾನೋ ಎಂಬಂತಿದ್ದ ಅವಸ್ಥೆಯನ್ನೂ ನೋಡಿಯೂ ಎನೂ ಸಂಬಂಧವೇ ಇಲ್ಲದವನಂತೆ, ಏನೋ ಬಡಬಡಾಯಿಸಿ ವಾಪಸ್ ಹೋದ. ರವಿಗೆ ಅವನು ಹೇಳಿದ್ದು ಸರಿಯಾಗಿ ಕೇಳಿಸಿಯೂ ಇರಲಿಲ್ಲ. ಮರುದಿನ ಬೆಳಿಗ್ಗೆ ರವಿ ತನ್ನ ಸಾಮಾನಿನ ಸಮೇತ ಬೀದಿಗೆ ಬಿದ್ದ.

ರೂಮಿನಿಂದ ಹೊರಬಿದ್ದ ರವಿ ಬಂದು ಹೊಟ್ಟೆ ತುಂಬಾ ನೀರು ಕುಡಿದು, ಯಾವುದೋ ಹಳೆಯ ಬಿಲ್ಡಿಂಗಿನೆದುರು ನೂರಾರು ಜನರ ನಡುವೆ ನೆಲಕ್ಕೆ ಪೇಪರ್ ಹಾಸಿಕೊಂಡು, ಚಳಿಯಲ್ಲಿ ನಡುಗುತ್ತಾ ಮಲಗಿದ. ಮರುದಿನ ಬೆಳಿಗ್ಗೆ ಬೆಳಕು ಮೂಡುವ ಮೊದಲೇ ಅವನಿದ್ದ ಜಾಗ ಗಿಜುಗುಡುತ್ತಿತ್ತು. ಎತ್ತ ನೋಡಿದರೂ ಅರೆ ಬರೆ ತೊಟ್ಟ ಕೂಲಿ ಕಾರ್ಮಿಕರೇ. ಹೆಂಗಸರು ಗಂಡಸರೆಂಬ ಭೇದವಿಲ್ಲದೇ ಒಬ್ಬರೊನ್ನೊಬ್ಬರು ಬೈಯುತ್ತಾ, ಇನ್ಯಾರತ್ತಲೋ ನಗುತ್ತ ಏನಾದರೂ ಕೆಲಸ ಸಿಗಬಹುದೇ ಎಂದು ಕಾಯುತ್ತಿದ್ದರು. ಯಾವನೋ ಒಬ್ಬ ಬಂದವನು ರವಿಯ ಪಕ್ಕದಲ್ಲಿದ್ದ ಒಂದಿಷ್ಟು ಜನರನ್ನು ಲೆಕ್ಕ ಹಾಕಿ ಅವರಿಗೆಲ್ಲಾ ಎಲ್ಲೋ ಹೋಗಲು ಹೇಳುತ್ತಿದ್ದ. ಅವನು ರವಿಯತ್ತ ಒಂದರ್ಧ ದೃಷ್ಟಿ ಬೀರಿ, “ಕ್ಯಾ ಕರ್ತಾ ಹೈ ತೂ?” ಎಂದ. ರವಿಯ ಮನಸಿಗೆ ಏನು ಹೇಳಬೇಕೆಂಬುದೇ ಸರಿಯಾಗಿ ತೋಚಲಿಲ್ಲ. ಏನಾದರೂ ಕೆಲಸ ಮಾಡಿದ್ದರಲ್ಲವೇ ಇಂತಹದ್ದೆಂದು ಹೇಳಲು. ಆದರೆ ಅವನ ಬಾಯಿ “ಪೇಂಟರ್” ಎಂದು ತೊದಲಿ, ಅವನು “ಆಜಾ. ಕಾಮ್ ಹೈ.” ಎಂದು ಹೇಳಿಯೂ ಆಗಿತ್ತು.

ಪೇಂಟರ್ ಆಗುವ ರವಿಯ ಕನಸು ಅಂತೂ ಇಂತೂ ನನಸಾಯಿತು. ಮಧ್ಯಾಹ್ನದ ಉರಿಬಿಸಿಲಿನಲ್ಲಿ, ಧೂಳ ಸಾಗರದ ನಡುವೆ ರವಿ ರಸ್ತೆಯ ಡಿವೈಡರಿನಂಚಿಗೆ ಕಪ್ಪು- ಬಿಳಿ ಪಟ್ಟೆಯೆಳೆಯುತ್ತಿದ್ದ.

—————- *** —————-

ಎರಡೊ- ಎರಡೂವರೆ ವರ್ಷವೋ ಹೀಗೇ ಕಳೆಯಿತು. ದಿನದ ಕೂಳು ದಿನ ದುಡಿಯುವವರಿಗೆ ವಾರ ತಿಂಗಳು, ವರ್ಷಗಳ ಲೆಕ್ಕವೇಕೆ? ಇಂದು ಹೊಟ್ಟೆಗೆ ಸಿಕ್ಕಿದರೆ, ಇವತ್ತಿನ ದಿನ ಮುಗಿಯಿತು. ನಾಳೆಗೆ ಸಿಕ್ಕರೆ ಒಳ್ಳೆಯದು ಎಂಬ ಭರವಸೆಯಲ್ಲಿ ಮಲಗಿದರಾಯ್ತು. ಬಾಂಬೆ ಎಗ್ಗಿಲ್ಲದ ವೇಗದಲ್ಲಿ ಬೆಳೆಯುತ್ತಿತ್ತು. ಬಾಂಬೆಯೆಂಬ ಟ್ರೇನಿನಲ್ಲಿ ಒಂದಿಷ್ಟು ಶ್ರೀಮಂತರು ಎಸಿ ಬೋಗಿಯಲ್ಲಿ ಕುಳಿತು ಪಯಣವನ್ನು ಸವಿಯುತ್ತಿದ್ದರೆ, ಇನ್ನೊಂದಿಷ್ಟು ಜನ ಹೇಗೇಗೋ ಬಾಗಿಲಲ್ಲೇ ಜೋತಾಡುತ್ತ ಜೀವನ ಸಾಗಿಸುತ್ತಿದ್ದರು. ಗಾಲಿಯಡಿಗೆ ಒಂದಿಷ್ಟು ಜೀವಗಳು ನೂಚ್ಚುನೂರಾಗುತ್ತಿದ್ದರೂ ಟ್ರೇನಿನ ವೇಗಕ್ಕೇನೂ ತಡೆಯಿರಲಿಲ್ಲ.

ರವಿಯ ಜೀವನವೂ ಸಾಗುತ್ತಿತ್ತು. ರೋಡಿಗೆ ಕಪ್ಪು ಬಿಳಿ ಬಳಿಯುತ್ತಿದ್ದವನು ಈಗ ಮನೆ, ಬಿಲ್ಡಿಂಗುಗಳಿಗೆ ಬಣ್ಣ ಹೊಡೆಯುತ್ತಾನೆ. ಜುಹು ಬೀಚಿಗೆ ಹೋಗಿ ಆಗಿಗ ಬಂದ ಪ್ರವಾಸಿಗರ ಚಿತ್ರ ಬಿಡಿಸಿ ಕೊಟ್ಟು ಒಂದಿಷ್ಟು ದುಡಿಯುತ್ತಿದ್ದ. ಚೆಂಬೂರಿನಲ್ಲೊಂದು ಹತ್ತು ಬೈ ಎಂಟರ ಕೋಣೆಯೇ ಅವನ ಸಾಮ್ರಾಜ್ಯ. ಅಲ್ಲಿಲ್ಲಿ ಉಳಿದ ಬಣ್ಣ ತಂದು ಅಮಿತಾಭ್‍ನ, ರೇಖಾಳ ಮುಖಗಳನ್ನು ಬಿಡಿಸಲು ಒದ್ದಾಡುತ್ತಾನೆ. ಕೈಗಳಲ್ಲಿ ಮೊದಲಿನ ಚುರುಕಿಲ್ಲ. ರಸ್ತೆಯ ಡಾಂಬರು, ಬಿಲ್ಡಿಂಗಿನ ವೈಟ್ ವಾಷ್, ಮನೆಯ ರೆಡ್ ಅಕ್ಸೈಡುಗಳ ಬೆರಕೆಗೆ ಸೂಕ್ಷ್ಮತೆಯ ಸುಳಿವಿಲ್ಲ.

ಒಂದು ದಿನ ಪ್ರಭಾತ್ ನಗರದಲ್ಲಿದ್ದ ಸ್ಟುಡಿಯೋದ ಹಳೇ ಸೆಟ್ಟಿಗೆ ಹೊಸದಾಗಿ ಬಣ್ಣ ಹೊಡೆಸುತ್ತಿದ್ದರು. ರವಿ ಅದರ ಬೋರ್ಡಿಗೆ ಒಂದು ಸುಂದರ ಸೂರ್ಯಾಸ್ತದ ಚಿತ್ರ ಬಿಡಿಸುತ್ತಿದ್ದ. ಹಿಂದಿಂದ ಯಾರೋ ಬಂದು ನಿಂತು ಅವನ ಕೆಲಸ ನೋಡುತ್ತಿದ್ದರು. ಅವನು ಕೆಲಸ ಮುಗಿಸಿ ಏಣಿ ಇಳಿದು ಬಂದಾಗ ಅಲ್ಲಿದ್ದವನು,

“ರವಿ ತೂ ಹಿ ಹೈ ನಾ? ಕಾಮ್ ಅಚ್ಛಾ ಕರ್ತಾ ಹೈ ತೂ. ಮೇರೆ ಸಾಥ್ ಕಾಮ್ ಕರೇಗಾ?” ಎಂದ. ರವಿಗೆ ಚೂರು ಆಶ್ಚರ್ಯವಾದರೂ ಅದನ್ನು ತೋರಿಸಿಕೊಳ್ಳದೆ ಅಲಕ್ಷ್ಯದಿಂದ “ಕ್ಯಾ ಕಾಮ್?” ಎಂದು ಕೇಳಿದ.

“ಪೋಸ್ಟರ್ ಕಾ ಕಾಮ್ ಹೈ. ಪೈಸಾ ಭೀ ಅಚ್ಛಾ ಮಿಲೇಗಾ ಎಂದ.” ರವಿಗೆ ಅಂದು ಆದ ಸಂತೋಷ, ಆಶ್ಚರ್ಯ, ಖುಷಿಗಳಿಗ್ಯಾವುದಕ್ಕೂ ಮಿತಿಯಿರಲಿಲ್ಲ. ಅಂತೂ ಇಂತೂ ಬಾಂಬೆ ಅವನ ಕನಸು ನೆರವೇರಿಸಿತ್ತು.

ರವಿಗೆ ಕೆಲಸ ಕೊಟ್ಟ ದೇವಿ ಶೆಟ್ಟಿ, ಮೂಲತಃ ಕುಂದಾಪುರದವನು. ಹದಿನೈದನೇ ವಯಸ್ಸಿಗೇ ಬಾಂಬೆಗೆ ಬಂದವನು ಮಾಡದ ಕೆಲಸವಿರಲಿಲ್ಲ. ಈಗ ಸಿನೆಮಾದ ಪೋಸ್ಟರಿನ ಬಿಸಿನೆಸ್ಸಿಗೆ ಕೈ ಹಾಕಿ ಐದು ವರ್ಷವಾಗಿತ್ತು. ಅವನೇನು ಸ್ವತಃ ದೊಡ್ಡ ಪೇಂಟರಲ್ಲ, ಅವರಿವರ ಹತ್ತಿರ ಪೇಂಟಿಂಗಿನ ಕೆಲಸ ಮಾಡಿಸಿ ತಾನೊಂದಿಷ್ಟು ಕಮೀಷನ್ ಮುರಿದುಕೊಳ್ಳುತ್ತಿದ್ದುದಷ್ಟೇ ಆಗಿದ್ದರೂ ಅವನ ವ್ಯವಹಾರ ಸೂಕ್ಷ್ಮತೆಯಿಂದ ಅದು ಅವನಿಗೆ ಭಾರಿ ಲಾಭ ತಂದುಕೊಟ್ಟಿತ್ತು. ಕೆಲಸದ ವರ್ಕ್ ಲೋಡು ಜಾಸ್ತಿ ಆಗಿ ಪೇಂಟರು ಸಿಗದೇ ಒದ್ದಾಡುತ್ತಿದ್ದ ಅವನ ಕಣ್ಣಿಗೆ ರವಿ ಬಿದ್ದಿದ್ದ. ರವಿಯ ಕಥೆ ಅವರಿವರಿಂದ ಕೇಳಿ ಅರ್ಧ ಕನಿಕರಕ್ಕೇ ಕೊಟ್ಟ ಕೆಲಸವಾಗಿತ್ತು ಅದು.

ಆದರೆ ರವಿಯ ಚಿತ್ರಗಳು ಅವನಿಗೂ ದಂಗು ಬಡಿಸುವಷ್ಟು ಚೆನ್ನಾಗಿರುತ್ತಿದ್ದವು. ಕಣ್ಣು ಸೆಳೆಯುವಂತಹ ಬಣ್ಣಗಳು, ದೊಡ್ಡ ದೊಡ್ಡ ಅಕ್ಷರಗಳಿಂದ ತುಂಬಿರುತ್ತಿದ್ದ ಪೋಸ್ಟರುಗಳಿಗೆ ಅವರ ಜೋಡಿ ಫೇಮಸ್ಸಾಗತೊಡಗಿತ್ತು. ರವಿಯ ಪ್ರತಿಭೆ ಬಳಸಿ ದೇವಿ ಶೆಟ್ಟಿ ತಾನೂ ಬೆಳೆದ, ತಮ್ಮ ಕಡೆಯವನೆಂಬ ಸಲಿಗೆಗೆ ರವಿಯನ್ನೂ ಬೆಳೆಸಿದ. ದುಡ್ಡು ಕಾಸು ಕೈ ಸೇರಿ ಜೀವನ ಸ್ವಲ್ಪ ಸುಧಾರಿಸಿದಂತೆ ರವಿಯ ಪೇಂಟಿಂಗುಗಳು ಇನ್ನೂ ಉತ್ತಮವಾದವು.

“ಭಗವಾನ್ ಜಬ್ ದೇತಾ ಹೈ ತೋ, ಛಪ್ಪಡ್ ಫಾಡ್ ಕೆ ದೇತಾ ಹೈ” ಎನ್ನುತ್ತಿದ್ದ ದೇವಿ ಶೆಟ್ಟಿ. ಅವರಿಬ್ಬರೂ ವಾರಕ್ಕೆರಡು ಮೂರು ಬಾರಿ ಯಾವುದಾದರೂ ಡಾನ್ಸ್ ಬಾರಿನಲ್ಲಿ ಕುಳಿತು ವಿಸ್ಕಿ ಕುಡಿಯುತ್ತ ಹರಟುತಿದ್ದರು. ಈಗಂತೂ ಪ್ರೊಡ್ಯುಸರ್ ಗಳು ದೇವಿ ಶೆಟ್ಟಿಯ ಆಫೀಸಿನೆದುರು ನಿಂತು ಸಾವಿರಾರು ರೂಪಾಯಿ ಕೊಟ್ಟು ಬುಕಿಂಗ್ ಮಾಡಿ ಹೋಗುತ್ತಿದ್ದರು. ಮೂರ್ನಾಲ್ಕು ವರ್ಷ ಹೀಗೆ ಕಳೆಯಿತು. ಇಬ್ಬರೂ ಸೇರಿ ಲಕ್ಷಾಂತರ ದುಡಿದರು. ರವಿ ಒಂದು ದಿನ ಬಾಂಬೆಯ ಪ್ರಸಿದ್ಧ ಮೆಟ್ರೋ ಥೇಟರಿನೆದುರು ನಿಂತು ತಾನು ಬಿಡಿಸಿದ್ದ ಪೋಸ್ಟರನ್ನು ಕಣ್ತುಂಬ ನೋಡಿ ಹೆಮ್ಮೆ ಪಟ್ಟಿದ್ದ.

ದೇವಿ ಶೆಟ್ಟಿ ಮದುವೆಯಾದ, ವ್ಯವಹಾರವೂ ಚೆನ್ನಾಗಿ ನಡೆಯುತ್ತಿತ್ತು. “ರವಿ, ಇತ್ತೀಚಿಗೆ ತುಂಬಾ ಕುಡಿತಿದ್ದಿ. ಎಕ್ ಶಾದಿ ಕರ್ ಲೋ.” ಎಂದು ಒಂದು ದಿನ ದೇವಿ ಶೆಟ್ಟಿ ಹೇಳಿದಾಗ, ರವಿಗೂ ಅವನಿಗೂ ಸ್ವಲ್ಪ ಜಗಳವಾಗಿತ್ತು. ರವಿಯ ಕುಡಿತ ಮಿತಿ ಮೀರುತಿತ್ತು. ಕುಡಿಯದಿದ್ದರೆ ಕೈ ನಡುಗುವುದು ನಿಲ್ಲುತ್ತಲೇ ಇರಲಿಲ್ಲ ಎಂಬ ಪರಿಸ್ಥಿತಿಗೆ ಬಂದಿದ್ದ. ದೇವಿ ಶೆಟ್ಟಿಗೂ ಅವನಿಗೂ ಮಾತು ಕತೆ ನಡೆಯುತ್ತಿದ್ದುದೂ ಅಷ್ಟಕ್ಕಷ್ಟೆ. ಇವನು ಹದಗೆಡುವುದನ್ನು ನೋಡಿ ದೇವಿ ಶೆಟ್ಟಿಗೆ ಬೇಸರವಾಗುತ್ತಿತ್ತು, ಆದರೇನೂ ಮಾಡುವಂತಿರಲಿಲ್ಲ. ಆದರೆ ಬರುತ್ತಿದ್ದ ದುಡ್ಡು ಅದನ್ನೆಲ್ಲ ಮರೆಸುತ್ತಿತ್ತು.

ಅಂತದ್ದರಲ್ಲಿ ಒಂದು ದಿನ ರವಿ ಅವನ ಆಫೀಸಿಗೆ ಬಂದು, ಸ್ವೀಟು ತುಂಬಿದ್ದ ಬಾಕ್ಸೋಂದನ್ನು ಕೊಟ್ಟು, “ಭಾಯಿ, ನಾನು  ಮದುವೆ ಆಗಬೇಕೂ ಅಂತ ಇದೀನಿ. ಹುಡುಗಿ ಮನೆಯವರೂ ಓಪ್ಪಿದ್ದಾರೆ. ಮುಂದಿನ ಶುಕ್ರವಾರ ಮದುವೆ. ನನಗೆ ಇಲ್ಲಿ ನೀವೆ ಎಲ್ಲಾ, ಬಂದು ಆಶೀರ್ವಾದ ಮಾಡಬೇಕು.” ಎಂದ. ದೇವಿ ಶೆಟ್ಟಿಗೆ ಅವತ್ತು ತುಂಬಾ ಖುಷಿಯಾಗಿತ್ತು. ಕುಡಿದು ಹಾಳಾಗುತ್ತಿದ್ದ ರವಿ ಸಂಸಾರಸ್ಥನಾಗುತ್ತಾನೆ. ಸ್ವಲ್ಪ ಉದ್ಧಾರವಾಗುತ್ತಾನೆ ಅಂತ ತುಂಬಾ ಖುಷಿಪಟ್ಟ.

ರವಿಯ ಮದುವೆಯಲ್ಲಿ ದೇವಿ ಶೆಟ್ಟಿಗೆ ಸ್ವಲ್ಪ ವಿಚಿತ್ರ ಎನಿಸಿತು. ಹೆಣ್ಣಿನ ಕಡೆಯವರಾರೂ ಇರಲಿಲ್ಲ. ರವಿಯ ಕಡೆಯಿಂದಲೂ ದೊಡ್ಡವರಾರೂ ಇರಲಿಲ್ಲ. ಇದ್ದವರು ರವಿಯ, ದೇವಿ ಶೆಟ್ಟಿಯ ಕೆಲವು ಮಿತ್ರರಷ್ಟೆ. ಅವನಿಗೆ ಹುಡುಗಿಯನ್ನು ಎಲ್ಲೋ ನೋಡಿದ್ದೇನೆ ಎನಿಸುತ್ತಿತ್ತಾದರೂ ಎಲ್ಲಿ ಎಂದು ನೆನಪಾಗಲಿಲ್ಲ.

ಮದುವೆ ಮುಗಿಸಿ, ಅವರಿಬ್ಬರನ್ನು ರವಿ ಮಾಡಿದ್ದ ಹೊಸ ಮನೆಗೆ ಕರೆದೊಯ್ದು ಬಿಟ್ಟು ಮನೆಗೆ ಬಂದ ದೇವಿ ಶೆಟ್ಟಿಗೆ ನೆನಪಾಯಿತು, ಅವಳು ತನ್ನ ಹಳೇಕಾಲದ ಗೆಳೆಯ, ಶಿಲ್ಪಾ ಥೇಟರಿನ ಗೇಟ್ ಕೀಪರಾಗಿದ್ದ, ಕರೀಂ ಮಾಮೂನ ಮಗಳು ಶಬಾನಾ ಎಂದು. ದೇವಿಶೆಟ್ಟಿ ಹೋಗಿ ಕರಿಂಮಾಮೂನನ್ನ ಕೇಳಿದಾಗ ಅವನು ಹೇಳಿದ್ದು, ರವಿ ಒಂದು ದಿನ ಶಬಾನಾಳ ಜೊತೆ ಬಂದು ನಾವಿಬ್ಬರೂ ಮದುವೆಯಾಗುತ್ತೆವೆ ಅಂದಿದ್ದನಂತೆ. ಸಾಮಾನ್ಯನಾಗಿದ್ದ ಕರಿಂಮಾಮೂ ದೇವರು ಧರ್ಮದಲ್ಲಿಟ್ಟಿದ್ದ ಅಪಾರ ಶ್ರದ್ಧೆಯಿಂದ ಬೇಡ ಅಂದನಂತೆ. ಮರುದಿನ ಯಾರೋ ಇಬ್ಬರು ಅಂಡರ್ ವರ್ಲ್ಡ್‍ ನ ಇಬ್ಬರು ಪುಡಿ ರೌಡಿಗಳು ಬಂದು ಇಪ್ಪತ್ತೈದು ಸಾವಿರ ಅವನಿಗೆಸೆದು, “ಛುಪ್ ರಹ್ ಜಾವೋ ಮಾಮೂ” ಎಂದಿದ್ದರಂತೆ. ಅವರಿಗೆ ಹೆದರಿ, ಇನ್ನೂ ಮೂರು ಹೆಣ್ಣು ಮಕ್ಕಳಿದ್ದ ಕರಿಂಮಾಮೂ ಸುಮ್ಮನಾಗಿದ್ದ.

ಇಷ್ಟೆಲ್ಲಾ ಮಾಡಿ ಮದುವೆಯಾದ ಶಬಾನಾಳನ್ನೂ ಸರಿಯಾಗಿ ಬಾಳಿಸಲಿಲ್ಲ. ಒಂದು ದಿನ ದೇವಿ ಶೆಟ್ಟಿ ಸಿಕ್ಕಿದಾಗ ಅವಳು ರಸ್ತೆಯಲ್ಲೇ ಅತ್ತು ಬಿಟ್ಟಿದ್ದಳು. ಅವಳ ಕೆನ್ನೆಯ ಮೇಲೆ ಬೆರಳ ಗುರುತುಗಳಿದ್ದವು. ರವಿಯಂತೂ ಈಗ ಬ್ರಷ್ ಹಿಡಿಯುವ ಪರಿಸ್ಥಿತಿಯಲ್ಲೂ ಇರುತ್ತಿರಲಿಲ್ಲ. ಕೇವಲ ನಿಂತು ಹೀಗೆ ಮಾಡು ಹಾಗೆ ಮಾಡು ಎನ್ನುತ್ತಿದ್ದ. ಇತ್ತ ವ್ಯವಹಾರವೂ ಕುಸಿಯಲಾರಂಭಿಸಿತ್ತು. ದೇವಿ ಶೆಟ್ಟಿಗೆ ರವಿಯ ಬಗ್ಗೆ ತಡೆಯಲಾರದಷ್ಟು ಅಸಹ್ಯ ಹುಟ್ಟಿತ್ತು, ಆದರೆ ಶಬಾನಾಳ ಮುಖ ನೆನೆಸಿಕೊಂಡು ಅವನ್ನು ಸುಮ್ಮನಾಗಿದ್ದ.

ಊರಿಗೆ ಬಂದ ಮಾರಿ ಇಡೀ ಊರನ್ನೇ ನಾಶ ಮಾಡುವಂತೆ, ಡಿಜಿಟಲ್ ಪೋಸ್ಟರುಗಳು ಬ್ರಷ್ಶು ಪೇಂಟಿನ ಸಾಮ್ರಾಜ್ಯವನ್ನು ನಾಶ ಮಾಡಿದವು. ತಿಂಗಳಿಗೆ ಲಕ್ಷಾಂತರ ದುಡಿಯುತ್ತಿದ್ದ ದೇವಿ ಶೆಟ್ಟಿ ಸಹ ಆಫೀಸ್ ಬಾಗಿಲಿಗೆ ಬೀಗ ಜಡಿದು, “ಕಲ್ ಸೆ ಕಾಮ್ ನಹೀ.” ಎಂದುಬಿಟ್ಟ.

—————- *** —————-

ಪೋಸ್ಟರಿನ ದುಡಿಮೆಯಲ್ಲಿ ಆಕಾಶಕ್ಕೇರಿ ಕುಳಿತಿದ್ದ ರವಿ, ಕೆಲಸ ನಿಂತಾಕ್ಷಣ ಭೂಮಿಯ ಗುರಾತ್ವಾಕರ್ಷಣೆಗೆ ಸಿಕ್ಕಿ ನಾಶವಾಗುವ ಧೂಮಕೇತುವಿನಂತೆ ನೆಲಕ್ಕುರುಳಿದ. ಒಂದಿಷ್ಟು ದಿನ ಹಳೇ ಗೆಳೆಯರೊಂದಿಗೆ ಕುಳಿತು ಕುಡಿದ. ಒಮ್ಮೊಮ್ಮೆ ತನ್ನ ಜೀವನದ ಬಗ್ಗೆಯೇ ರೇಜಿಗೆ ಹುಟ್ಟುತಿತ್ತು. ಆವಾಗ ಇನ್ನೊಂದಿಷ್ಟು ಕುಡಿದ.

ಒಂದು ದಿನ ಬೆಳಿಗ್ಗೆ ಅವನಿಗೆ ಎಚ್ಚರಾದಾಗ ಆಗಸದಲ್ಲಿನ ರವಿ ತನ್ನ ಹಾದಿಯ ಮುಕ್ಕಾಲು ಭಾಗ ಕ್ರಮಿಸಿಯಾಗಿತ್ತು. ಎದ್ದವನು ಮುಖಕ್ಕೆ ನೀರು ಸಹ ಹಾಕದೇ, ಸೀದಾ ಬಾರಿನತ್ತ ನಡೆದ. ಅಲ್ಲಿ ಕುಳಿತು ಪೇಪರು ತಿರುಗಿಸುತ್ತಾ ಭಾರತ ಮತ್ತೊಂದು ಟೆಸ್ಟ್ ಸೋತಿದ್ದಕ್ಕೊಂದಿಷ್ಟು ಬೈದು, “ಏಕ್ ಬೋತಲ್ ವಿಸ್ಕಿ” ಎಂದ. ಬಾರಿನ ಗಲ್ಲೆಯ ಮೇಲಿದ್ದವನು ಒಳಗಿದ್ದವನನ್ನು ಕೂಗಿ, “ಸುರೇಶ್, ಎಕ್ ಬೋತಲ್ ವಿಸ್ಕಿ ಲಾವೊ.” ಎಂದ.  ರವಿ ಒಳಗಿನಿಂದ ಬಂದವನನ್ನೇ ದಿಟ್ಟಿಸಿ ನೋಡಿದ. ಯಾವನೋ ಇಪ್ಪತ್ತು ಇಪ್ಪತ್ತೈದರ ಯುವಕ, ತಂದು ವಿಸ್ಕಿ ಬಾಟಲ್ ಅವನೆದುರಿಗಿಟ್ಟ. ರವಿಗೇನೋ ಸಂಕಟವಾದಂತಾಯಿತು. ಹಾಗೆಯೇ ಎದ್ದು ನಡೆದ. ಮನೆಗೆ ಬಂದು ಕೂತವನಿಗೆ, ತನಗೇಕೆ ಹಾಗನ್ನಿಸಿತು ಎಂಬುದೇ ಅರ್ಥವಾಗಲಿಲ್ಲ. ಆ ಯುವಕನನ್ನೆಲ್ಲಾದರೂ ನೋಡಿದ್ದೇನೆಯೇ? ಎಂದು ಯೋಚಿಸಿದ. ನೆನಪಾಗಲಿಲ್ಲ. ಬಾಂಬೆಗೆ ಬಂದು ಹದಿನೈದು ವರ್ಷವಾಯಿತು. ಎಲ್ಲವೂ ಎಲ್ಲಿ ನೆನಪಿರಬೇಕು ಎಂದುಕೊಂಡ.

ಅವನ ದೃಷ್ಟಿ ಅಲ್ಲಿಯೇ ಆಡುತ್ತಿದ್ದ ಮಗಳತ್ತ ಹರಿಯಿತು. ಅವನು ಅವಳ ಮುಖ ಸರಿಯಾಗಿ ನೋಡಿದ್ದೆ ಆವತ್ತಿರಬೇಕು. ‘ಎಷ್ಟು ಮುದ್ದಾಗಿದ್ದಾಳೆ ನನ್ನ ಮಗಳು’ ಎಂದು ಕೊಳ್ಳುತ್ತಿದ್ದಾಗಲೇ, ಅವಳು ಇವನನ್ನು ನೋಡಿ ಓಡಿ ಹೋಗಿ ಶಬಾನಾಳ ಹಿಂದೆ ಅಡಗಿಕೊಂಡಳು. ರವಿಗೆ ತನ್ನ ಬಗ್ಗೆಯೇ ಒಂದು ಅಸಹ್ಯ ಹುಟ್ಟಿತು. ಮನೆಯಿಂದ ಎದ್ದು ಹೊರನಡೆದರೆ ಕಾಲುಗಳು ಸೀದಾ ಮತ್ತೊಂದು ಬಾರಿನೆಡೆ ಕೊಂಡೊಯ್ದವು. ಅವನ ಅಸಹ್ಯ ಹೆಚ್ಚಾಯಿತು. ಹೋಗಿ ಯಾವುದೋ ಮುರುಕಲು ಬಿಲ್ಡಿಂಗಿನೆದುರು ಕುಳಿತ. ಮಗಳ ಮುಖ ಕಣ್ಮುಂದೆ ಬಂತು. ಅದರ ಹಿಂದೆಯೆ ಇನ್ನೊಂದು ಮುಖ ಮೂಡಿತು. ವಯಸ್ಸಾಗಿ ಸುಕ್ಕು ಬಿದ್ದು ಹಣ್ಣಾದ ಮುದುಕಿಯ ಮುಖ, ಎಲ್ಲಿಯೋ ನೋಡಿದ್ದೇನೆ ಎನಿಸಿತು, ಮುಖ ಇನ್ನಷ್ಟು ಸ್ಪಷ್ಟವಾಯಿತು. ರವಿ ದಿಟ್ಟಿಸಿ ನೋಡಿದ, ಆಗ ಗೊತ್ತಾಯಿತು ಆ ಮುದುಕಿ ತನ್ನ ಅಜ್ಜಿ ಎಂದು. ಅದರ ಹಿಂದೆ ಒತ್ತರಿಸಿ ಬಂದ ನೆನಪುಗಳ ಪ್ರವಾಹಕ್ಕೆ ರವಿ ನುಜ್ಜುಗುಜ್ಜಾಗಿ ಹೋದ.

‘ತನಗೂ ಊರೆಂಬುದೊಂತ್ತಿಲ್ಲವೇ? ಅದರ ನೆರಳ ಬದಿಗೂ ಸುಳಿಯದೇ ಹದಿನೈದು ವರ್ಷವಾಯಿತು. ಬರುವಾಗ ಅಪ್ಪ ಅಮ್ಮನ ಶ್ರಾದ್ಧಕ್ಕೆ ಬರುತ್ತೇನೆಂದು ಅಜ್ಜಿಗೆ ಹೇಳಿ ಬಂದಿದ್ದೆ. ಅವತ್ತು ಹೊಟ್ಟೆಗೆ ತಿನ್ನಲೂ ಕಾಸಿರಲಿಲ್ಲ. ಎಷ್ಟು ದಿನ ಹೊಟ್ಟೆಗಿಲ್ಲದೇ ಮಲಗಿದೆನೋ? ಆಗೆಲ್ಲ ಅಜ್ಜಿಯ ನೆನಪು ಬರುತ್ತಿತ್ತು, ಜೊತೆಗೆ ಅಣ್ಣನ ಮೇಲಿನ ಸಿಟ್ಟೂ. ಅಜ್ಜಿ ಹೇಗಿದ್ದಾಳೋ? ಆಗಲೇ ಅರವತ್ತು ದಾಟಿತ್ತು, ಇನ್ನೂ ಇದ್ದಾಳೋ? ಒಮ್ಮೆ ಬೇಡ ಎಂದಿದ್ದಕ್ಕೆ ಅಣ್ಣನನ್ನು ಅದೆಷ್ಟು ಬೈದೆನಲ್ಲ, ಅವನ ಮದುವೆ ಆಯಿತೋ? ಇಲ್ಲವೋ ಎಂದೆಲ್ಲ ಚಡಪಡಿಸಿದ.  ಇಷ್ಟು ವರ್ಷ ಅವರ್ಯಾರ ನೆನಪೂ ಇಲ್ಲದಂತೆ ಬದುಕಿದೆನೆಲ್ಲ ನನ್ನನ್ನು ಎಷ್ಟು ಕೆಡಿಸಿಬಿಟ್ಟಿತು ಈ ಬಾಂಬೆ. ಬಣ್ಣದ ಕನಸು ಹೊತ್ತು ಬಂದಿದ್ದ ನನಗೆ ಕೆಲಸ ಕೊಟ್ಟಿತು, ಕನಸು ಪೂರೈಸಿತು, ದುಡ್ಡು ಕೊಟ್ಟಿತು ಬದಲಿಗೆ ನನ್ನ ಮನುಷ್ಯತ್ವವನ್ನೇ ಕಿತ್ತುಕೊಂಡಿತು ಈ ಬಾಂಬೆ. ದುಡ್ಡಿನ ಘಮಲು, ವಿಸ್ಕಿಯ ಅಮಲಿನಲ್ಲಿ ಅಣ್ಣ ಅಜ್ಜಿಯರನ್ನು ನೆನೆಯಲಿಲ್ಲ, ಹೆಂಡತಿಯ ಬಗ್ಗೆ ಕಾಳಜಿ ತೋರಲಿಲ್ಲ, ಮಗಳನ್ನ ಪ್ರೀತಿಸಲಿಲ್ಲ. ನಾನೆಷ್ಟು ಹಾಳಾಗಿ ಹೋದೆನೆಲ್ಲ. ಇನ್ನು ಇಲ್ಲಿರಬಾರದು. ಈ ಊರಿನ ಸಹವಾಸವೇ ಬೇಡ’ ಎಂದು ಕೊಂಡು ಹಿಂತಿರುಗಿದ ರವಿ, ಮೂರು ದಿನಕ್ಕೆ ತನ್ನ ವ್ಯವಹಾರವನ್ನೆಲ್ಲ ಮುಗಿಸಿ ವಾಪಸ್ಸು ಹೋಗಲು ಟ್ರೇನು ಹತ್ತಿದ. ಅವನಂತಹ ಸಾವಿರ ಕೃತಘ್ನರನ್ನು ನೋಡಿದ್ದ ಬಾಂಬೆ ಅವನು ಸರಿದ ಜಾಗದಲ್ಲಿ ಮತ್ತೊಬ್ಬನ ಕನಸಿಗೆ ನೆಲೆ ನೀಡುತ್ತಾ ಮುಂದುವರೆಯಿತು.

ಚಿತ್ರ ಕೃಪೆ :- http://www.tribuneindia.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments