ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 14, 2017

1

ಪೀರಾಯರ ಒಂದು ಕಥಾನಕ – ನೀಳ್ಗತೆ ಭಾಗ ೨

‍ನಿಲುಮೆ ಮೂಲಕ

– ಮು. ಅ. ಶ್ರೀರಂಗ, ಬೆಂಗಳೂರು

(ನಿಲುಮೆಯಲ್ಲಿ ೨೧-೧-೨೦೧೭ ರಂದು ಪ್ರಕಟವಾದ ನೀಳ್ಗತೆ ಯ ಮುಂದುವರಿದ ಭಾಗ)

oldman-walking[ಇಲ್ಲಿಯರೆಗೆ:- ಸರ್ಕಾರಿ ಕೆಲಸದಿಂದ ನಿವೃತ್ತರಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ  ಪದ್ಮನಾಭರಾವ್(ಪೀರಾಯ) ಅಲ್ಲಿನ ಗಡಿಬಿಡಿಯ, ಏಕತಾನತೆಯ ಜೀವನ, ಇವುಗಳಿಂದ ಬೇಸತ್ತು, ನಾಲ್ಕಾರು ದಿನಗಳಾದರೂ ಇವೆಲ್ಲದರಿಂದ ದೂರವಿರೋಣ ಎಂದು ತನ್ನ ಸ್ನೇಹಿತ ಹಾಗೂ ಬೆಂಗಳೂರಿನಲ್ಲಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಜು ವಶಿಷ್ಠನ ಸ್ವಂತ ಊರಿನಲ್ಲಿದ್ದ ತೋಟದ ಮನೆಗೆ ಬರುತ್ತಾರೆ. ಪಕ್ಕದ ಮನೆಯಲ್ಲಿದ್ದ ಕಂಟ್ರಾಕ್ಟರ್, ಸೈಟು, ಮನೆಗಳ ಬ್ರೋಕರ್ ಏಜೆನ್ಸಿ ನಡೆಸುತ್ತಿದ್ದ ಲಿಂಗೇಗೌಡನ ಪರಿಚಯವಾಗುತ್ತದೆ. ಆತನ ಅತೀ ಮಾತುಗಾರಿಕೆ ಪೀರಾಯರಿಗೆ ಬೇಸರ ತರಿಸುತ್ತದೆ. ಆ ಊರಿನ ಕಾಲೇಜಿನಲ್ಲಿ ನಡೆಯುವ ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರಸಂಕಿರಣದ ಆಹ್ವಾನ ಪತ್ರಿಕೆ ಕೊಡಲು ಬರುವ ಕನ್ನಡ ಉಪನ್ಯಾಸಕಿ ರಮಾದೇವಿಯ ಭೇಟಿಯೂ ಆಗುತ್ತದೆ.

———- ಮುಂದೆ ಓದಿ

                                                                       –೧–

ನಿನ್ನೆ ರಾತ್ರಿ ನಿದ್ದೆ ಬಂದದ್ದು ತೀರಾ ತಡವಾದ್ದರಿಂದ ಪೀರಾಯರಿಗೆ ಬೆಳಗ್ಗೆ ಎಂಟು ಗಂಟೆಗೆ ಎಚ್ಚರವಾಯ್ತು. ಏಳಲು ಮನಸ್ಸಿಲ್ಲ. ಜತೆಗೆ ಸ್ವಲ್ಪ ತಲೆನೋವು ಬೇರೆ. ರಾತ್ರಿ ಐದಾರು ಬಾರಿ ಜಲಬಾಧೆಗೆಂದು ಎದ್ದಿದ್ದರೂ ಈಗಲೂ ಒತ್ತಡ. ರಾತ್ರಿ ನಿದ್ದೆ ಬರುವುದು ತಡವಾದವಾದರೆ ಜಲಬಾಧೆ-ತಲೆನೋವು ರಾಯರಿಗೆ ಮಾಮೂಲು. ಎದುರುಗಡೆ ಟಿ ವಿ ಪಕ್ಕ ಇಟ್ಟಿದ್ದ ವಿಚಾರ ಸಂಕಿರಣದ ಆಹ್ವಾನ ಪತ್ರಿಕೆ ಕಣ್ಣಿಗೆ ಬಿತ್ತು. ‘ಹೂಂ ಸ್ವಲ್ಪ ವಾತಾವರಣ ಬದಲಾದರೆ ತಲೆನೋವು ಹೋದೀತು’ ಎಂದು ಎದ್ದು ಸ್ನಾನ ಮುಗಿಸಿದರು. ತಿಂಡಿ ಆದಮೇಲೆ ಬಿ ಪಿ ಮಾತ್ರೆ ಜತೆಗೆ ಒಂದು ನೋವು ನಿವಾರಕ ಮಾತ್ರೆ ನುಂಗಲೇ ಬೇಕು. ಇಲ್ಲದಿದ್ದರೆ ತಲೆನೋವು ಹೋಗುವುದಿಲ್ಲ ಅನಿಸಿತು. ಹೋಟೆಲ್ ನಲ್ಲಿ ತಿಂಡಿ ತಿನ್ನುತ್ತಿದ್ದಾಗ ಆ ವಿಚಾರ ಸಂಕಿರಣಕ್ಕೆ ಹೋಗಿ ಮಾಮೂಲಿ ತೌಡು ಕುಟ್ಟುವ ಭಾಷಣಗಳನ್ನು ಕೇಳಿ ಇನ್ನೂ ತಲೆನೋವು ಜಾಸ್ತಿ ಮಾಡಿಕೊಳ್ಳುವುದು ಏಕೆ? ರಮಾದೇವಿ ಕೇಳಿದರೆ ಅನಾರೋಗ್ಯದ ವಿಷಯ ಹೇಳಿದರಾಯ್ತು ಎಂದು ರಾಯರು ನಿರ್ಧರಿಸಿದರು. ಮಾತ್ರೆ ನುಂಗಿ ಕಾಫಿ ಕುಡಿಯುತ್ತಿದ್ದಾಗ ನಿನ್ನೆ ಸಂಜೆ ಆ ಲಿಂಗೇಗೌಡ ಆಕೆಯ ವಿಷಯವನ್ನು ಹೇಳುವ ನೆವದಲ್ಲಿ ಬಿಟ್ಟ ತಲೆಯಲ್ಲಿನ  ಹುಳದಿಂದ ಏಕೋ ರಾಯರ ನಿರ್ಧಾರ ಹತ್ತೇ ನಿಮಿಷದಲ್ಲಿ ಬದಲಾಯ್ತು. ಕಾಲೇಜಿನ ಕಡೆ ನಡೆದರು. ಕಾಲೇಜಿನ ಕಾಂಪೌಂಡ್ ನ ಒಳಗೆ ‘ರಾಮೇಗೌಡ ಸಭಾಭವನ’. ಸಾಕಷ್ಟು ದೊಡ್ಡದಾಗೇ ಇತ್ತು. ಅಲ್ಲೇ ದೊಡ್ಡದಾಗಿ ವಿಚಾರ ಸಂಕಿರಣದ ಬ್ಯಾನರ್ ಕಟ್ಟಿದ್ದರು. ರಾಯರು ಒಳಗೆ ಹೋಗುವ ಹೊತ್ತಿಗೆ ಸ್ವಾಗತ ಭಾಷಣ ಮುಗಿಯುವ ಹಂತಕ್ಕೆ ಬಂದಿತ್ತು. ಡಯಾಸ್ ನ ಎದುರಿಗೆ ಒಂದು ಇನ್ನೂರು ಜನ ಕೂರುವಷ್ಟು ಕುರ್ಚಿಗಳನ್ನು ಹಾಕಿದ್ದರು. ಅವುಗಳ ಒಂದು ಭಾಗದಲ್ಲಿ ‘ವಿದ್ಯಾರ್ಥಿಗಳಿಗೆ’ ಇನ್ನೊಂದು ಭಾಗದಲ್ಲಿ ‘ಸಾರ್ವಜನಿಕರಿಗೆ’ ಎಂಬ ಬೋರ್ಡ್ ಗಳನ್ನು ಹಾಕಿದ್ದರು. ಎಲ್ಲಾ ಸೇರಿ ಒಂದು ನೂರು ಜನ ಇರಬಹುದೇನೋ ಎಂದು ರಾಯರು ಮನಸ್ಸಿನಲ್ಲೇ ಲೆಕ್ಕ ಹಾಕಿದರು. ವಿಚಾರ ಸಂಕಿರಣದ ಮೊದಲ ಭಾಗ ‘ನವ್ಯೋತ್ತರ ಕಥೆಗಳಲ್ಲಿ ಸ್ತ್ರೀವಾದ’ ಶುರುವಾಯಿತು. ಎರಡನೆಯದು ಕಾದಂಬರಿಗಳದ್ದು ಮತ್ತು ಕೊನೆಯದಾಗಿ ಕಾವ್ಯಗಳ ಬಗ್ಗೆ.

                                                                                                         –೨–

ಸಂಜೆ ನಾಲ್ಕು ಗಂಟೆಗೆ ಕಾಲೇಜಿಂದ ಬಂದ ರಾಯರು ನಿನ್ನೆಯ ನಿದ್ದೆಯ ಬಾಕಿ ತೀರಿಸಲು ಮಲಗಿದರು. ಎಚ್ಚರವಾದಾಗ ರಾತ್ರಿ ಏಳು ಗಂಟೆಯಾಗಿತ್ತು. ಕಾಫಿ ಕುಡಿಯಬೇಕೆನ್ನಿಸಿತು. ಮನೆಗೆ ಸಮೀಪದಲ್ಲೇ ಇದ್ದ ಒಂದು ದರ್ಶಿನಿಗೆ ಹೋದರು. ಮತ್ತೆ ಊಟಕ್ಕೇಕೆ ಬರುವುದು ಎಂದು ಅನಿಸಿ ಎರಡು ಇಡ್ಲಿ, ಎರಡು ಖಾಲಿ ದೋಸೆ ತಿಂದು ಕಾಫಿ ಕುಡಿದರು. ಒಂದು ನಾಲ್ಕು ಬಾಳೆಹಣ್ಣು ತೊಗೊಂಡು ರಾತ್ರಿ ಒಂಬತ್ತರ ತನಕ ಹಾಗೇ ಸ್ವಲ್ಪ ಸುತ್ತಾಡಿ ಮನೆಯ ದಾರಿ ಹಿಡಿದರು.. ಲಿಂಗೇಗೌಡನ ಮನೆ ದಾಟಿ ಇನ್ನೇನು ತಾವಿದ್ದ ರಾಜು ವಸಿಷ್ಠನ ಮನೆಗೆ ಹೋಗಬೇಕು ಅಷ್ಟರಲ್ಲಿ ರಾಯರ ಎಡಭಾಗದಿಂದ, ‘ಸಾರ್ ನಮಸ್ಕಾರ’ ಎಂದು ಯಾರೋ ತಮ್ಮನ್ನೇ ಮಾತಾಡಿಸಿದಂತಾಗಿ ಒಂದು ಕ್ಷಣ ನಿಂತರು. ಲಿಂಗೇಗೌಡನ ಮನೆಯ ಕಾಂಪೌಂಡ್ ಗೇಟಿನ ಪಕ್ಕ ನಿಂತಿದ್ದ ವ್ಯಕ್ತಿಯ ಕಡೆಗೆ ತಿರುಗಿ ‘ನಮಸ್ಕಾರ. ನೀವ್ ಯಾರೋ ಗೊತ್ತಾಗ್ಲಿಲ್ಲ’ ಎಂದು ರಾಯರು ಒಂದು ನಿಮಿಷ ನಿಂತರು..

‘ನಾನು  ಬಾಳಪ್ಪ ಸಾರ್’

‘ಓ ಬಾಳಪ್ಪನೇನು? ಲಿಂಗೇಗೌಡರು ಹೇಳಿದ್ರು’

‘ನಮ್ಮ ಗೌಡ್ರು ಇವತ್ತು ಬೆಳಗ್ಗೆ ಬೆಂಗ್ಳೂರಿಗೆ ಹೋಗುವಾಗ ಹೇಳಿದ್ರು. ಪಕ್ಕದ ಮನೆ ಸಾಹೇಬ್ರಿಗೆ ಬಾಳಾ ಸಂಕೋಚ. ನೀನೇ ಬೆಳಗ್ಗೆ ಸಂಜೆ ಎರಡ ಸಲ ಹೋಗಿ ಏನಾರ ಬೇಕಾ ಅಂತ ವಿಚಾರಿಸ್ಕೊ ಅಂತ. ನಂ ಗೌಡ್ರು ತುಂಬಾ ಒಳ್ಳೇ ಮನಸ್ಸು ಇರೋ ಮನುಷ್ಯರು ಸಾರ್. ಅಂತೋರು ಅಪರೂಪ.. ನಾನು ಬೆಳಿಗ್ಗೆ ಎರಡ ಸಲ ಬಂದಿದ್ದೆ. ಮನೆಗೆ ಬೀಗ ಹಾಕಿತ್ತು’.

‘ಕೆಲಸ ಎಲ್ಲಾ ಆಯ್ತಾ’.

‘ಆಯ್ತು ಸಾರ್.. ಗೌಡರ ಹೆಂಗಸರು ಮಕ್ಕಳು ಪಕ್ಕದ ಊರಿಗೆ ಅವರ ನೆಂಟರ ಮನೇಲಿ ಮದುವೆ ಇದೆ ಅಂತ ಹೋಗಿದ್ದಾರೆ.. ನಾಳೆ ಮಧ್ಯಾಹ್ನದ ಹೊತ್ತಿಗೆ ಬರಬಹುದು. ರಾತ್ರಿಗೆ ನಂಗೆ ಒಂದೆರೆಡು ಸಣ್ಣ ರಾಗಿ ಮುದ್ದೆ ತೊಳಸಿಕೊಂಡ್ರೆ ಆಯ್ತು’.

‘……… ‘

‘ಪೇಟೆ ಕಡೆಗೆ ಹೋಗ್ತಾಯಿದೀನಿ. ನಿಮಗೆ ಏನಾದ್ರೂ ತರಬೇಕಾಗಿತ್ತಾ ಸಾರ್’

‘ಏನು ಬೇಡಾ ಬಾಳಪ್ಪ. ಮತ್ತೆ ಏನು ವಿಶೇಷ?’

‘ಏನು ವಿಶೇಷ ಇಲ್ಲ ಸಾರ್.. ಹೊಟ್ಟೆ ಪಾಡಿಗೆ ಗೌಡ್ರ ಮನೇಲಿ ಒಂದು ಕೆಲಸ ಮಾಡ್ಕೊಂಡಿದಿನಿ’

ಪೀರಾಯರಿಗೆ ಇಂದು ಏಕೋ ಏನೂ ಓದಲು, ಟಿವಿ ನ್ಯೂಸ್ ನೋಡಲು ಮನಸ್ಸಿರಲಿಲ್ಲ. ರಾತ್ರಿ ಮಲಗುವ ಮುನ್ನ ಒಮ್ಮೆ ಟಿ ವಿ ನ್ಯೂಸ್ ನೋಡಿದರೆ ಸಾಕು ಎನಿಸಿತು.

‘ನಿಮ್ಮ ಮೂಲ ಊರು ಯಾವುದು ಬಾಳಪ್ಪ?’

‘ಇಲ್ಲಿಂದ ಒಂದು ಹದಿನೈದು ಇಪ್ಪತ್ತು ಮೈಲಿ ದೂರದಲ್ಲಿ ಮಾಗಡಿ ಅಂತ ಒಂದು ಚಿಕ್ಕ ಪಟ್ಟಣ ಇದೆ. ಅದೇ ನಮ್ಮೂರಿಗೆ ತಾಲ್ಲೂಕು. ಅಲ್ಲಿಂದ ಒಂದು ಐದಾರು ಮೈಲಿ ದೂರದಲ್ಲಿ ದೊಡ್ಡಗೆರೆ ಅಂತ ಒಂದು ಹಳ್ಳಿ ನಮ್ಮೂರು.. ನಿಂತಗೊಂಡೇ ಮಾತಾಡ್ತಿದೀರಲ್ಲ ಸಾರ್. ಮನೆ ಒಳಕ್ಕೆ ಬನ್ನಿ ‘

‘ಬೇಡ. ಸುಮ್ನೆ ಹಂಗೇ ನಿಂತ್ಕೊಂಡೆ. ನಿಮಗೆ ಬಿಡುವಿದ್ರೆ ನೀವೇ ಬನ್ನಿ’

‘ಸಾರ್ ನಾನೇ  ನಿಮ್ಮನೆಗೆ ಬರ್ತೀನಿ. ಆದ್ರೆ ಒಂದು ಕಂಡಿಷನೂ. ನೀವು ನನ್ನ ಬನ್ನಿ, ಹೋಗಿ, ನೀವು, ತಾವು ಅಂತ ಅನ್ನಬಾರ್ದು. ನೀನು ಆನ್ನಿ, ಬಾಳ ಅನ್ನಿ ಸಾಕು’.

‘ಆಯ್ತು ಬಾರಪ್ಪ’

‘ಮನೆಗೆ ಬೀಗ ಹಾಕಿ ಒಂದು ಹತ್ತು ನಿಮಿಷದೊಳಗೆ ನಿಮ್ಮನಿಗೆ ಬರ್ತೀನಿ. ನೀವು ಹೋಗಿರಿ ಸಾರ್’.

ರಾಯರ ಮನೆಗೆ ಬಂದ ಬಾಳಪ್ಪ ಎಷ್ಟೇ ಬಲವಂತ ಮಾಡಿದರೂ ಕುರ್ಚೀ ಮೇಲೆ ಕೂಡಲಿಲ್ಲ. ಈ ಸೆಕೆಗೆ ನೆಲನೇ ತಣ್ಣಗಿರತ್ತೆ ಅಂತ ಚಕ್ಕಳ ಮಕ್ಕಳ ಹಾಕಿ ಕುಳಿತ.

‘ನೀನು ನಾಟಕದ ಕಂಪನಿಲಿ ಇದ್ದೆ, ನಾಟಕದ ಹಾಡು ಚೆನ್ನಾಗಿ ಹಾಡ್ತೀ ಅಂತ ನಿಮ್ಮ ಗೌಡ್ರು ಹೇಳಿದ್ದ್ರು. ಈ ಕಡೆ ಕಂಪನಿ ನಾಟ್ಕ ನಡೆಸೋರು ಇದ್ದರೇನು?’

‘ಇಲ್ಲ ಸಾರ್. ಹಳ್ಳಿಲಿ ವರ್ಷಕ್ಕೋ, ಎರಡು ವರ್ಷಕ್ಕೋ ಒಂದ್ ಸಲ ಸ್ಕೂಲ್ ಮೇಷ್ಟ್ರುಗಳು ಅವರ ಜತೆಗೆ ಉಡಕ್ಕೆ ಉಣ್ಣಕ್ಕೆ ಯೋಚ್ನೆ ಇಲ್ಲದ ಒಂದಷ್ಟು ಜನ ಸೆರ್ಕ್ಕೊಂಡು ಅವರವರೇ ದುಡ್ಡು ಹಾಕ್ಕೊಂಡು ಊರ ಮಧ್ಯದಲ್ಲಿ ಒಂದು ಚಪ್ಪರ ಹಾಕಿ ರಾಮಾಯಣ, ಕುರುಕ್ಷೇತ್ರ ಇಂಥಾ ನಾಟ್ಕ ಆಡೋರು ಅಷ್ಟೇ. ಆಗೆಲ್ಲಾ ಈ ಮಂಡ್ಯದ ಕಡೆಯೋರ್ದು ಸೀನರಿ, ಸೆಟ್ಟಿಂಗು ಇವೆಲ್ಲಾ ಫೇಮಸ್. ಸೀತೆ, ದ್ರೌಪದಿ, ರುಕ್ಮಿಣಿ, ಸತ್ಯಭಾಮೆ ಇಂತಾ ಪಾರ್ಟುಗಳಿಗೆ ಹೆಂಗಸರನ್ನೇ ಬೇರೆ ಕಡೆಯಿಂದ ಕರೆಸೋರು. ನಮ್ಮೂರ್ಗೂ ಒಂದು ಸಲ ಕರೆಸಿದ್ರು. ನಾನು ನಮ್ಮೂರಿನಲ್ಲಿ ಪಾರ್ಟು ಹಾಕ್ಕೊಂಡು ನಾಟಕ ಆಡ್ತಿರ್ಲಿಲ್ಲ. ನೋಡ್ತಿದ್ದೆ ಅಷ್ಟೇ’

‘ಮತ್ತೆ ನಿಮ್ಮ ಗೌಡ್ರು ನಾಟ್ಕದ ಕಂಪನೀಲಿ ನೀ ಇದ್ದೆ ಅಂತ ಹೇಳಿದ್ರು?’

‘ಆ ಕಡೆ ಹುಬ್ಳಿ, ದಾವಣಗೆರೆ ನಾಟಕದ ಕಂಪನಿಗಳು ಇದ್ದವಲ್ಲ ಸಾರ್.. ಅದರಲ್ಲಿ ಅದೂ ಇದೂ ಕೆಲಸ ಮಾಡ್ಕೊಂಡು, ಅವರು ಬೇರೆ ಬೇರೆ ಊರಿನಲ್ಲಿ ಕ್ಯಾಂಪ್ ಹಾಕಿದಾಗ ಅಲ್ಲಿಗೂ ಅವರುಗಳ ಜತೆ ನಾನು ಹೋಗ್ತಿದ್ದೆ. ಹೆಂಗೂ ಎರಡು ಹೊತ್ತಿನ ಊಟ ಕಳೀತಿತ್ತು. ನಂಗೂ ಹಿಂದಿಲ್ಲ, ಮುಂದಿಲ್ಲ; ಸಂಸಾರದ ಚಿಂತೆ ಇಲ್ಲ. ಅಲ್ಲಿ ದಿನಾ ನಾಟ್ಕ ನೋಡ್ತಿದ್ದೆ. ನೋಡಿ ನೋಡಿ ಆ ನಾಟ್ಕಗಳ ಡೈಲಾಗು, ಹಾಡುಗಳು ಅಷ್ಟಿಷ್ಟು ಬರತ್ತೆ ಅಷ್ಟೇ ಸಾರ್’

ಈ ಮೂಲೇಲಿ ಇರೋ ಮಾಗಡಿ ಹತ್ತಿರದ ಒಂದು ಹಳ್ಳಿಯೋನು ಅಷ್ಟು ದೂರದಲ್ಲಿರೋ ದಾವಣಗೆರೆ, ಹುಬ್ಳಿ ಕಡೆಯ ನಾಟಕದ ಕಂಪನಿಗಳ ಜತೆ ಧೀಮ್ರಂಗ ಅಂತ ಆರಾಮಾಗಿ ಸುತ್ತುಕೊಂಡು ಇದ್ದ, ಇರಬಹುದಾದ ಒಂದು ಸಾಧ್ಯತೆಯನ್ನು ಕಂಡು ರಾಯರಿಗೆ ಕುತೂಹಲ ಹೆಚ್ಚಾಗತೊಡಗಿತು. ಬೆಂಗಳೂರಿನಲ್ಲಿದ್ದಾಗಲೂ ಪೀರಾಯರು ಪ್ರತಿ ತಿಂಗಳೂ ತಮ್ಮ ಮನೆಗೆ ರದ್ದಿ ಪೇಪರ್ ತೊಗೊಳ್ಳಲು ಬರುತ್ತಿದ್ದ ತಮಿಳುನಾಡಿನ ಸೆಲ್ವಂ, ಆಗಾಗ ಬರುತ್ತಿದ್ದ ಒರಿಸ್ಸಾ ಕಡೆಯ ಪ್ಲಮ್ಬರ್ ನೀರಜ್ ಇವರುಗಳ ಜತೆ ಮಾತಾಡುತ್ತಾ ಅವರ ಊರು ಜನಗಳ ಬಗ್ಗೆ ಕೇಳುತ್ತಿದ್ದರು. ಅವರು ಹೋದ ಮೇಲೆ ರಾಯರ ಹೆಂಡತಿ ‘ನಿಮಗೆ ನೆಂಟರ ಹತ್ತಿರ, ಹೆಂಡತಿ ಮಕ್ಕಳ ಹತ್ತಿರ ಮಾತಾಡಲು ಪುರಸೊತ್ತಿಲ್ಲ, ಆಸಕ್ತಿ ಇಲ್ಲ. ಯಾವುದೋ ಊರವರ ಕಥೆ ಕೇಳಲು ಅದೇನು ಕೆಟ್ಟ ಕುತೂಹಲವೋ ನಾ ಕಾಣೆ’ ಎಂದು ಹಂಗಿಸುತ್ತಿದ್ದರು. ರಾಯರು ಮಾತಾಡಿ ಸುಮ್ಮನೆ ಘರ್ಷಣೆ ಏಕೆ ಎಂದು ಹಾಲಿನಿಂದ ಎದ್ದು ತಮ್ಮ ರೂಮಿಗೆ ಹೋಗುತ್ತಿದ್ದರು.

ರಾಯರು ಮಾತಾಡದೆ ಕೂತಿದ್ದನ್ನು ನೋಡಿ ಬಾಳಪ್ಪನಿಗೆ ತನ್ನ ಮಾತಿನಿಂದ ಅವರಿಗೆ ಬೇಜಾರಾಯ್ತೆನೋ ಅನಿಸಿ
‘ಸಾರ್ ನಾನು ಅದೂ ಇದೂ ಜಾಸ್ತಿ ಮಾತಾಡಿದ್ರೆ ಕ್ಷಮಿಸಿ ಸಾರ್’ ಅಂದ

‘ಇಲ್ಲಪ್ಪ ನಿನ್ನ ಕಥೆ ಪೂರ್ತಿ ಕೇಳ್ಬೇಕು ಅಂತ ಆಸೆ ಆಯ್ತು. ನಿನ್ನ ಹೇಳು ಅಂತ ಕೇಳಿದ್ರೆ ನಿಂಗೆ ಬೇಜಾರಾಗತ್ತೆನೋ ಅಂತ ಯೋಚಿಸ್ತಿದ್ದೆ’

‘ನಂದೂ ನಮ್ಮೂರಿಂದು ಕಥೆ ಹೇಳ್ತಿನಿ. ನಂಗೇನೂ ಬೇಜಾರಿಲ್ಲ. ನೀವು ಕಥೆ ಬರೆಯೋರ ಸಾರ್. ಅದೇ ಸಿನಿಮಾಗೆ, ಟಿ ವಿ ನಲ್ಲಿ ದಿನಾ ಬರತಲ್ಲ ಅದೇನ್ ಅಂತಾರೆ? ಮೂರ್ನಾಲ್ಕು ವರ್ಷ ಆದ್ರೂ ಮುಗಿಯಲ್ವಲ್ಲ  ಏನಂತಾರೆ ಅವಕ್ಕೆ …….. ?’

‘ಮೇಘಾ ಸೀರಿಯಲ್ಲು ಅಂತಾರೆ. ನಾನು ಯಾವ ಕಥೇನೂ ಬರೆಯೋನು ಅಲ್ಲ. ನಿನಗ್ಯಾಕೆ ಅನುಮಾನ ಬಂತು?’

‘ಹಂಗೇ ಸುಮ್ನೆ ಕೇಳ್ದೆ. ಈ ಪಟ್ಟಣದಾಗೆ ಎರಡು ಮೂರು ವರ್ಷದ ಹಿಂದೆ ಒಂದು ಕೇಸಾಗಿತ್ತು. ಯಾರೋ ಈ ಊರಲ್ಲಿ ಕಥೆ ಬರೆಯೋರು ಅಂತ ಹೇಳ್ಕೊಂಡು ಇಲ್ಲಿರೋ ಸಣ್ಣ ಪುಟ್ಟ ರಾಜಕೀಯ ಮಾಡೋ ಪುಢಾರಿಗಳು, ಸರ್ಕಾರಿ ಆಫೀಸರುಗಳು, ಪೊಲೀಸರೂ, ಕಳ್ಳರು, ಇನ್ನೂ ಅದೂ ಇದೂ ಕೆಟ್ಟ ಕೆಲಸ ಮಾಡೋರ್ನೆಲ್ಲಾ ಹೋಟ್ಲು, ಬಾರಲ್ಲಿ, ಹೆಂಗೋ ಫ್ರೆಂಡ್ಸ್ ಮಾಡ್ಕೊಂಡು ಮಾತಾಡ್ಸಿ ವಾರಕ್ಕೊಂದು ಸಲ ಬೆಂಗಳೂರಿನಿಂದ ಪ್ರಿಂಟಾಗೋ ಅವರ ಪೇಪರ್ ನಲ್ಲಿ ‘ನಾವ್ ಹೇಳೋದೆಲ್ಲಾ ಸತ್ಯ’ ಅಂತ ಸತ್ಯ ಹರಿಶ್ಚಂದ್ರ ಅನ್ನೋ ಹೆಸರಲ್ಲಿ ಬರೀತಾಯಿದ್ರು. ಒಂದು ಐದಾರು ವಾರ ಆಗೋ ಹೊತ್ತಿಗೆ ಈ ಸತ್ಯ ಹರಿಶ್ಚಂದ್ರ ಯಾರು ಅಂತ ಹಂಗೂ ಹಿಂಗೂ ಒಂದಷ್ಟು ಜನಗಳಿಗೆ, ಅಂದ್ರೆ ಯಾರ ಕಥೆ ಬರೆದಿದ್ದನೋ ಅವರಿಗೆ ಅನುಮಾನ ಬಂತು. ಒಂದಿನ ರಾತ್ರಿ ಹತ್ತು ಗಂಟೇಲಿ ಅವನು ಹೊಟೇಲ್ನಲ್ಲಿ ಊಟ ಮಾಡ್ಕೊಂಡು ಈಚೆಗೆ ಬರೋದನ್ನೇ ಕಾಯ್ತಾ ಒಂದ್ ಐದ್ ಜನ ಅವನ ಮಕಕ್ಕೆ ದಪ್ಪ ಬೆಡ್ ಶೀಟ್ ಹಾಕಿ ಅನಾಮತ್ತಾಗಿ ಎತ್ಕೊಂಡು ಪಕ್ಕದಲ್ಲೇ ನಿಂತಿದ್ದ ಅವರ ಕಾರಿನಲ್ಲಿ ಹಾಕ್ಕೊಂಡು ಈ ಊರಿಂದ ಒಂದ್ ಐದಾರು ಮೈಲಿ ದೂರ ಇರೋ ನೀಲಗಿರಿ ತೋಪಿನಲ್ಲಿ ಹೋಗಿ ಕೈ ಕಾಲು ಮುರಿದು ಅಲ್ಲೇ ಇದ್ದ ಒಂದು ಹಳ್ಳದಾಗೇ ಎಸೆದು ಬಂದ್ರು. ಬೆಳಗ್ಗೆ ಯಾರೋ ಆ ಕಡೆ ಓಡಾಡೋರು ನೋಡಿ ಅವ್ನ ಎತ್ತಿ ಒಂದು ರಿಕ್ಷಾದಲ್ಲಿ ಹಾಕ್ಕೊಂಡು ಬಂದು ಆಸ್ಪತ್ರೆಗೆ ಸೇರ್ಸಿದ್ರು. ಅವ್ನು ಅಲ್ಲಿಂದ್ಲೇ ಪೊಲೀಸರಿಗೆ ಫೋನ್ ಮಾಡ್ದ. ಅವ್ರು ಆಸ್ಪತ್ರಗೆ ಬಂದ್ರು. ಕಂಪ್ಲೇಂಟ್ ಬರಕ್ಕೊಂಡ್ರು. ಅವ್ನ ಆಸ್ಪತ್ರೆಗೆ ಸೇರಿಸದೋರ ಸಾಕ್ಷಿ ಹಾಕಿಸ್ಕೊಂಡ್ರು. ಕೇಸ್ ಮಾಡುದ್ರು. ಆದ್ರೆ ಯಾರು ಅವನ ಕೈ ಕಾಲು ಮುರಿದ್ರು ಅನ್ನೋದಕ್ಕೆ ಸಾಕ್ಷಿ ಇಲ್ಲದೆ ಕೇಸು ಮೂರ್ನಾಲಕ್ಕು ತಿಂಗಳಾದ ಮೇಲೆ ಬಿದ್ದೋಯ್ತು. ಒಂದು ಸ್ವಲ್ಪ ಕಷ್ಟಪಟ್ಟಿದ್ರೆ ಆ ಕಥೆ ಬರೆಯೋನ ಕೈಕಾಲು ಮುರಿದೋರು ಯಾರು ಅಂತ ಹಿಡಿಬೋದಾಗಿತ್ತು. ಆದ್ರೆ ಅವ್ನು ಪ್ರತಿ ವಾರ ಪೊಲೀಸ್ನೋರು, ಆಫೀಸಿನ ಗುಮಾಸ್ತನಿಂದ ಹಿಡಿದು ದೊಡ್ಡೋರತನಕ ಎಲ್ಲರ ಬುಡಕ್ಕೆ ಬಿಸಿನೀರು ಹಾಕಕ್ಕೆ ಶುರು ಮಾಡಿದ್ದ. ಇವ್ನ ಹಿಂಗೇ ಬಿಟ್ರೆ ಕಷ್ಟ ಅಂತ ಎಲ್ಲಾ  ದೊಡ್ಡೋರು ಸೇರಿಕೊಂಡು ಪೋಲಿಸ್ನೋರ್ಗೆ ಹೇಳಿದ್ರು. ನಾಳೆ ನಮ್ಮ ಮೇಲೂ ಆ ಸತ್ಯಹರಿಶ್ಚಂದ್ರ ಬರೆದು ನಮ್ಮ ಕೆಲಸಕ್ಕೆ ಕುತ್ತು ತಂದೊ, ಸರ್ಕಾರದೋರು ನೀರು, ನೆರಳು ಇಲ್ಲದ ಜಾಗಕ್ಕೆ ಒಗಾಯಿಸಿದ್ರೆ ಕಷ್ಟ ಅಂತ ಪೋಲಿಸ್ನೋರೂ  ಸುಂನಾದ್ರು’

‘ಆ ಪೇಪರ್ ನೋನು ಈಗ ಎಲ್ಲಿದ್ದಾನೆ?’

‘ಅವ್ನೂ ಕೋರ್ಟಲ್ಲಿ ಇವರ ಮೇಲೆ ಅವರ ಮೇಲೆ ಅನುಮಾನಾ ಇದೆ ಅಂತ ಹೇಳಿದ. ಆದ್ರೆ ಅದಕ್ಕೆ ಸಾಕ್ಷಿ ಇಲ್ಲ. ಸಾಕ್ಷಿ ಇಲ್ಲದಿದ್ರೆ ಕೋರ್ಟು ಕೇಳ್ತಾದ? ಕೊನೆಗೆ ಅದೇ ಪೇಪರ್ ನಲ್ಲಿ ‘ಸತ್ಯಕ್ಕೆ ಸಾವು, ಅಸತ್ಯದ ಜಯ’ ಅಂತ ತನ್ನ ಕಥೇನೆಲ್ಲಾ ಬರೆದು ಈ ಊರ ಸವಾಸನೆ ಬೇಡ ಅಂತ ಬೆಂಗ್ಳೂರಿಗೆ ಹೋದ. ಆಗ ನೀವ್ ಹೇಳ್ದ್ರಲ್ಲಾ ಟಿವೀಲಿ ದಿನಾ ಬರತ್ವಲ್ಲಾ ಮೇಘಾ ಸೀರಿಯಲ್ಗಳಿಗೆ ಕಥೆ ಬರಕ್ಕೊಂಡು ಇದಾನಂತೆ. ನಮ್ ಗೌಡ್ರು ಒಂದಿನ ಹೇಳಿದ್ರು’ ಬಾಳಪ್ಪ ಸುಮ್ಮನಾದ.

ಪೀರಾಯರಿಗೆ ತಮ್ಮ ಮೇಲೆ ಅವನಿಗೆ ಅನುಮಾನ ಬಂತಲ್ಲ ಅಂತ ಮನಸ್ಸಿನ ಒಂದು ಮೂಲೇಲಿ ಮುಳ್ಳು ಮುರಿದಂತಾಯ್ತು. ಇನ್ನೊಬ್ಬರ ಬಗ್ಗೆ ಕುತೂಹಲ ತೋರಿಸೋದು ತಪ್ಪೇನೋ? ತಮ್ಮ ಹೆಂಡತಿ ಹೇಳುತ್ತಿದ್ದದ್ದು ಜ್ಞಾಪಕಕ್ಕೆ ಬಂತು. ಎಷ್ಟೋ ಜನ ಹೊಟ್ಟೆ ಬಟ್ಟೆಗೆ ಇಲ್ಲದವರು ಮನೆ, ಊರು ಬಿಟ್ಟು ಹೋಗಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಶ್ರೀಮಂತರೂ ಆಗಿದ್ದಾರೆ; ಸಾಯುವ ತನಕ ಅಲ್ಲಿ ಇಲ್ಲಿ ಹೊಟ್ಟೆ ಹೊರೆದುಕೊಳ್ಳಲು ಏನೋ ಕೆಲಸ, ನೈತಿಕವೋ, ಅನೈತಿಕವೋ ಮಾಡಿಕೊಂಡು ಹಾಗೆ ಇದ್ದಾರೆ. ಇವೆಲ್ಲಾ ರಾಯರಿಗೆ ತಿಳಿಯದ್ದೇನಲ್ಲ. ಇನ್ನು ಮೇಲಾದರೂ ಇನ್ನೊಬ್ಬರ ಜೀವನದ ಬಗ್ಗೆ ನನಗಿರುವ ಈ ಕೆಟ್ಟ ಕುತೂಹಲಕ್ಕೊಂದು ಬ್ರೇಕ್ ಹಾಕಲೇಬೇಕು. ನಾನೇನು ಸಾಹಿತಿಯಲ್ಲ ಇನ್ನೊಬ್ಬರ ಬಗ್ಗೆ ತಿಳಿದುಕೊಂಡು ಕಥೆ ಕಾದಂಬರಿ ಬರೆಯಲು. ಅಥವಾ ಪತ್ರಿಕೆಗಳಲ್ಲಿ ಬರೆಯಲು, ಟಿವಿ ನ್ಯೂಸ್ ಚಾನೆಲ್ ನಲ್ಲಿ ಪ್ರಸಾರಮಾಡಲು ಪತ್ರಕರ್ತನೂ ಅಲ್ಲ. ನನಗೇಕೆ ಇಲ್ಲದ ಈ ಉಸಾಬರಿ? ರಾಯರು ಮನಸ್ಸಿನಲ್ಲಿ ತಮಗೆ ತಾವೇ ಶಿಕ್ಷೆ ಕೊಟ್ಟುಕೊಳ್ಳುತ್ತಾ ಕೂತರು.

ಬಾಳಪ್ಪನೇ ಮಾತು ಶುರು ಮಾಡಿದ. ರಾಯರು ತಮ್ಮ ಶಿಕ್ಷಾ ಪರ್ವದಿಂದ ಹೊರಗೆ ಬಂದರು..

‘ಏನೂ ತಿಳ್ಕೋಬ್ಯಾಡಿ ಸಾರು. ಹಿಂಗೇ ಏನೋ ಹಳೇದು ಜ್ಞಾಪಕ್ಕೆ ಬಂತು ಕೇಳ್ದೆ. ಏನಪ್ಪಾ ಈ ಆಳು ನನ್ನ ಸಿಐಡಿಯೋರ ತರ ವಿಚಾರಿಸ್ಕೊತಾ ಇದಾನೆ ಅಂತಾ’

‘         ‘

‘ಸಾರು ನಂಗೆ ಹದಿನೈದು ವರ್ಷ ಆಗೋ ತಂಕ  ನಮ್ಮೂರಲ್ಲೇ ಇದ್ದೆ. ಆಮೇಲೆ ದಾವಣಗೆರೆ, ಹುಬ್ಳಿ ಸೀಮೆಗೆ ಹೊರಟೋದೆ. ಯಾಕೆ ಹೋದೆ ಹೇಗೆ ಹೋದೆ ಇವೆಲ್ಲಾ ಒಂಥರಾ ಈ ಸಿನಿಮಾ ಕಥೆ ಇರ್ತಾವಲ್ಲಾ ಹಂಗೆ. ಯಾರ್ಗಾದ್ರೂ ಹೇಳಿದ್ರೆ ಹೋಗಲೇ ನೀ ರೀಲ್ ಬಿಡ್ತಾಯಿದೀಯಾ. ನಾವೇನ್ ಕಿವೀಲಿ ಹೂ ಇಟ್ಕೊಂಡಿಲ್ಲ ನೀ ಹೇಳಾದೆಲ್ಲಾ ನಂಬಕೆ ಅಂತಾರೆ’

‘…….. ‘

‘ಯಾಕ್ ಸಾರು ನಾನ್ ಮಾತಾಡೋ ಹಳ್ಳಿ ಭಾಸೆ ಬೇಸರ ಬಂತಾ? ಈ ಜಿಲ್ಲೆನಾಗೆ ರೀಲು ಬಿಡೋದು, ಕಿವೀಲಿ ಹೂ ಇಡೋದು ಅಂದ್ರೆ ಸುಳ್ಳು ಹೇಳ್ತಾನೆ ಅಂತಾ ಅರ್ಥ ಅಂತೇ ಸಾರು. ನಾನು ಹುಬ್ಳಿ ಕಡೆಯಿಂದ ಬಂದ್ ಒಂದೆರೆಡು ತಿಂಗ್ಳು ನಂಗೂ ತಿಳಿತಿರ್ಲಿಲ್ಲ. ಅಮ್ಯಾಲ್ ಆಮ್ಯಾಲ್ ತಿಳೀತು. ಓ ಆಗ್ಲೇ ರಾತ್ರಿ ಹತ್ ಗಂಟೆ ಆಯ್ತಲ್ಲ ಸಾರ್. ನೀವ್ ಮಲಕ್ಕೊಳಿ ಬೆಳಗ್ಗೆ ಬರ್ತೀನಿ ಸಾರ್’ ಎಂದು ಬಾಳಪ್ಪ ಎದ್ದು ಹೊರಟ.

ಪೀರಾಯರು ಎದ್ದು ಬಾಗಿಲು ಹಾಕಿಕೊಂಡು ಬಂದು ಟಿ ವಿ ರಿಮೋಟ್ ಕೈಗೆತ್ತಿಕೊಂಡರು. ಅಷ್ಟರಲ್ಲಿ ರಾಯರ ಮೊಬೈಲ್ ರಿಂಗಾಯಿತು. ರಾಜು ವಸಿಷ್ಠ ಎಂದು ಮೊಬೈಲ್ ಸ್ಕ್ರೀನ್ ಮೇಲೆ ನೋಡಿ ರಾಯರನ್ನು ಆವರಿಸಿದ್ದ ಮನಃಕ್ಲೇಷ ಸ್ವಲ್ಪ ಮರೆಯಾಯಿತು.
‘ಪೀರಾಯರೇ ಹೇಗಿದೆ ನಮ್ಮ ಊರು, ನನ್ನ ಮನೆ, ತೋಟ’

‘ನೀನೇನಪ್ಪಾ ಮಹಾರಾಜನ ಥರ ಇದ್ದೀಯ. ಆಡಳಿತಕ್ಕೊಂದು ಅರಮನೆ; ವಿಶ್ರಾಂತಿಗೆ ಮತ್ತೊಂದು. ನನಗೂ ಬೆಂಗಳೂರಿನಲ್ಲಿ ಇದ್ದೂ ಇದ್ದೂ ಸಾಕಾಗಿತ್ತು. ಸ್ವಲ್ಪ ಬದಲಾವಣೆ ಆಯ್ತು’

‘ಇವತ್ತು ಕಾಲೇಜಿನಲ್ಲಿ ನಡೆದ ವಿಚಾರ ಸಂಕಿರಣಕ್ಕೆ ಹೋಗಿದ್ದೆಯೇನಯ್ಯಾ? ರಮಾದೇವಿ ನನಗೆ whatsapp ನಲ್ಲಿ ಮೆಸೇಜ್ ಕಳಿಸಿದ್ರು. ನಿನಗೂ ಇನ್ವಿಟೇಶನ್ ಕೊಟ್ಟಿದ್ದೀನಿ ಅಂತ’

‘ಹೋಗಿದ್ದೆನಪ್ಪಾ. ಅದೇ ಮಾಮೂಲಿ ಡೈಲಾಗುಗಳು, ಜಾರ್ಗನ್ಗಳು’

‘ಇನ್ನೆನಯ್ಯ ವಿಶೇಷ’

‘ನಿನ್ನ ಮನೆ ಪಕ್ಕದಲ್ಲಿ ಇದ್ದಾನಲ್ಲಪ್ಪ. ಲಿಂಗೇಗೌಡ ಅಂತ. ಒಳ್ಳೆ ಬೋರೆವೆಲ್ ಗಿರಾಕಿ ಕಣಯ್ಯಾ. ಇನ್ನು ನಾಲ್ಕು ದಿನ ಊರಲ್ಲಿ ಇರಲ್ಲ ಆ ಮೇಲೆ ಬರ್ತೀನಿ ಅಂತ ನಿನ್ನೆ ರಾತ್ರಿ ಹೇಳಿಹೋದ. ಅವ್ನು ಬರಕ್ಕೆ ಮುಂಚೆ ನಾನು ಬೆಂಗಳೂರಿಗೆ ಹೋಗ್ತೀನಪ್ಪ. ನಿಂಗೆ ಬರಕ್ಕೆ ಆದ್ರೆ ನಾಳೆ ನಾಡಿದ್ದರಲ್ಲಿ ಇಲ್ಲಿಗೆ ಬಾ. ಇಲ್ದಿದ್ರೆ ನಾನು ನೀನೂ ಇನ್ನೊಂದ್ ಸಲ ಇಲ್ಲಿಗೆ ಬಂದ್ರಾಯ್ತು’

‘ಅವನ ಮನೆ, ಸೈಟು ಬ್ರೋಕರ್ ಕೆಲಸಕ್ಕೆ ಮಾತು ಬೇಕಲಪ್ಪ. ಅದಕ್ಕೆ ಆಡ್ತಾನೆ. ನಿಂಗೇನಾದ್ರೂ ಬೇಜಾರಾಗೋ ಥರ ಮಾತಾಡ್ನಾ’

‘ಛೆ ಛೆ ಹಾಗಲ್ಲಯ್ಯಾ ನಾನು ಹೇಳಿದ್ದು’

‘ಇವತ್ತು  ಯಾವಾರನಪ್ಪಾ.. ಶುಕ್ರವಾರ; ನಾನು ಭಾನುವಾರ ಬರ್ತೀನಿ. ಅಲ್ಲಿ ಸುತ್ತಾ ಮುತ್ತಾ ನೋಡೋ ಒಂದೆರೆಡು ಜಾಗ ಇದೆ ನೋಡೋಣ. ಶೋಲೆ ಸಿನಿಮಾ ನೋಡಿದೀಯಲ್ಲಯ್ಯ ಅದನ್ನು ಶೂಟ್ ಮಾಡಿದ್ದು ಅಲ್ಲೇ ಒಂದು ಹಳ್ಳೀಲಿ. ಅದ್ನ ಸಿಪ್ಪಿನಗರ ಮಾಡ್ತೀನಿ ಅಂತ ಹೇಳಿದ್ನಂತೆ ಆ ಸಿನಿಮಾ ಪ್ರೊಡ್ಯೂಸರ್. ಯಾವ ನಗರನೂ ಆಗ್ಲಿಲ್ಲ. ಒಂದು ಇಪ್ಪತ್ತು ಇಪ್ಪತ್ತೈದು ವರ್ಷದ ಹಿಂದೆ ಆ ಊರಿನ ಬಗ್ಗೆ ಒಂದು ಪತ್ರಿಕೇಲಿ ಬಂದಿತ್ತು. ನೀನು ಓದಿರಬಹುದು’

‘ಓದಿರಬಹುದು. ಆದ್ರೆ ಈಗ ಜ್ಞಾಪಕ ಇಲ್ಲ’

‘ಹೋಗಲೀ ಬಿಡು. ನಾಳೆ ರಮಾದೇವಿ ಬರಬಹುದು. ವಿಚಾರಸಂಕಿರಣ ಹೇಗಿತ್ತು ಅಂತ ಕೇಳಕ್ಕೆ. ಸ್ವಲ್ಪ ಛಳಿ ಬಿಟ್ಟು ಮಾತಾಡಯ್ಯ. ನಿನ್ ಬಗ್ಗೆ ನಾನು ಸ್ವಲ್ಪ ಜಾಸ್ತಿನೇ buildup ಕೊಟ್ಟು ಹೇಳಿದ್ದೆನಯ್ಯ’

‘ಏನ್ buildup ಅಯ್ಯಾ? ನಾ ಏನ್ ಸಿನಿಮಾದ ಹೀರೋನೋ ಇಲ್ಲಾ ರೌಡಿನೋ? buildup ತೊಗೊಳಕ್ಕೆ?’

‘Literary buildup ಕಣಯ್ಯ’

‘ಏನೋ ಮಾಡಪ್ಪ. ನಾಳೆ ಬೆಳಗಾಗಲಿ ನೋಡೋಣ’

‘ಏಕಯ್ಯಾ ಅಷ್ಟೊಂದು ನಿರಾಶೆ? ಏನು ಹಿಮಾಲಯಕ್ಕೆ ಹೋಗೋ ಪ್ಲಾನ್ ಇದೆಯೆನಯ್ಯಾ?’

‘ಇಲ್ಲಾ ಮಾರಾಯಾ. ಸುಮ್ನೆ ಹೇಳ್ದೆ’

‘ok good night’

ವಶಿಷ್ಠನ ಫೋನ್ ಮುಗಿದ ನಂತರ ಪುನಃ ಮೊಬೈಲ್ ರಿಂಗಾಯ್ತು. ರಾಯರ ಹೆಂಡತಿ.
‘ಏನ್ ಸ್ವಾಮೀ ಎಲ್ಲಾ ಆರಾಮನ. ನಿನ್ನೆ ರಾತ್ರಿ ಏನು ಫೋನ್ ಮಾಡ್ಲಿಲ್ಲ? ತುಂಬಾ ಬುಸಿನೋ?’

‘ದಿನಾ ಫೋನ್ ಮಾತಾಡಿ ಮಾತೋಡಕ್ಕೆ ಏನ್ ಇರತ್ತೆ ಮಾರಾಯ್ತಿ. ಇವತ್ತು ಮಾಡಣಾ ಅಂತಿದ್ದೆ. ಅಷ್ಟರಲ್ಲಿ ನೀನೇ ಮಾಡ್ದೆ. ಎಲ್ಲ್ರೂ ಆರಾಮಾಗಿದೀರಾ?’

‘ಹೂಂ ಇದೀವಿ. ನೀವು ನಿಮ್ಮ whatsappಗೆ ಅದೇನೋ status ಹಾಕ್ಕೊಂಡಿದೀರಲ್ಲಾ. ಏನದು, ನಡೆಯಲಾರದ ದಾರಿ ಹಿಡಿಯಲಾರದ ಬಸ್ಸು ಅಂತ ……..’
‘ಅಲ್ಲ ಕಣೆ ಅದು ನಡೆಯಲಾರದ ದೂರ ಹಿಡಿಯಲಾರದ ಬಸ್ಸು ಅಂತ.

‘ಈಗ ಅದೇಕೆ ಜ್ಞಾಪಕ ಬಂತು ನಿಂಗೆ’

‘ನೀವು ನಂಹಾಗೆ ಸುಂಸುಮ್ನೆ whatsappನಲ್ಲಿ  ಯಾವುದೋ ಒಂದು status ಹಾಕ್ಕೊಳೋರಲ್ಲ ಆಲ್ವಾ? ನೀವ್ ಒಂಥರಾ ನಂಗಿಂತಾ different ಆಲ್ವಾ? ‘ಯಾಕೆ ಹಿಂಗಾಕ್ಕೊಂಡಿದಾರೆ ಇವತ್ತು ರಾತ್ರಿ ಫೋನ್ ಮಾಡ್ದಾಗ ಕೇಳಬೇಕು’ ಅಂತ ಅನ್ಕಕೊಂಡಿದ್ದೆ. ಆಮೇಲೆ ನಾನೇ ಕಂಡು ಹಿಡಿದೆ’

‘ಏನ್ ತನಿಖೆ ಮಾಡ್ದೆ?’

‘ಇವತ್ತು ಮಗ ಸೊಸೆ ಬೆಳಗ್ಗೆ ಕೆಲ್ಸಕ್ಕೆ ಹೋದ್ಮೇಲೆ ಮಧ್ಯಾನ್ಹ ಹನ್ನೆರಡು ಗಂಟೆ ಹೊತ್ತಿಗೆ ಸ್ವಲ್ಪ ಮಲ್ಕೊಳ್ಳನಾ ಅಂತ ಅನ್ನಿಸ್ತು. ನಮ್ಮ ರೂಮ್ಗೆ ಹೋದೆ. ಅಲ್ಲಿ ನಿಮ್ಮ ಪುಟ್ಟ ಪುಸ್ತಕ ಸಂಗ್ರಹದ ಶೆಲ್ಫ್ ಅಸ್ತವ್ಯಸ್ತ ಆಗಿತ್ತು. ಒಂದ್ ಗಂಟೆ ಹೊತ್ತಿಗೆ ಎಚ್ಚರ ಆಯ್ತು. ಅವಾಗ ನಿಮ್ಮ ಪುಸ್ತಕಗಳನ್ನ ಸ್ವಲ್ಪ ನೀಟಾಗಿ ಜೋಡಿಸೋಣ ಅಂತಾ ಕೂತ್ಕೊಂಡೆ. ಅವಾಗ ನೀವ್ ಹಾಕ್ಕೊಂಡಿದ್ದೀರಲ್ಲಾ whatsapp status ಆ ಹೆಸರಿನ ಒಂದು ಪುಸ್ತಕ ಸಿಕ್ತು. ಅದರ ಮೇಲೆ ಭಾಸ್ಕರರಾಯರ ಅಸಲಿ ಕಥೆಗಳು ಅಂತ ಇತ್ತು. ಅದನ್ನು ನೀವು ಎರಡು ಸಲ ಓದಿದೀರಿ. ನಿಮಗೊಂದು ಅಭ್ಯಾಸವಿದೆಯಲ್ಲ. ಪುಸ್ತಕ ಒಳ ಪುಟದಲ್ಲಿ ಓದಲು ಪ್ರಾರಂಭಿಸಿದ ತಾರೀಖು, ಓದಿ ಮುಗಿಸಿದ ತಾರೀಖು ಹಾಕೋದು. ಈ ಪುಸ್ತಕದ ಮೇಲೆ ಎರಡನೇ ಸಲ ಓದಿದ್ದು ಅಂತ ಕಳೆದ ತಿಂಗಳ ಒಂದು ತಾರೀಖು ಹಾಕಿದ್ದೀರಿ. ಯಾಕೋ ಕುತೂಹಲ ಆಯ್ತು. ನಮ್ಮ ಪೀರಾಯರಿಗೆ ಈ ಪುಸ್ತಕ ತುಂಬಾ ಇಷ್ಟ ಆಗಿರಬಹುದು ಅನ್ಸ್ತು. ಹಾಗೆ ಒಂದೆರೆಡು ಕಥೆ ಓದ್ದೆ. ಆಮೇಲೆ ಊಟ ಆದ ಮೇಲೆ ಕೂತಕೊಂಡ್ ಎಲ್ಲಾ ಕಥೆ ಓದ್ದೆ. ಚೆನ್ನಾಗಿದೇರಿ ಕಥೆಗಳು. ಆದ್ರೆ ಅಲ್ಲಿ ಬರೋ ಭಾಸ್ಕರರಾಯರ ತರ ಆಗ್ಬೇಡಿ. ಪೋಲೀಸೂ, ಕೇಸೂ ಅದೂ ಇದೂ ಅಂತ ಆದ್ರೆ ಆಮೇಲೆ ಟಿವಿಯೋರು, ಪೇಪರ್ ನೂರು ನಮ್ಮ ಮನೆ ಮುಂದೆ ಟೆಂಟ್ ಹಾಕ್ಕೊಂಡ್ ಬಿಡ್ತಾರೆ ಕಣ್ರೀ’

ರಾಯರಿಗೆ ಯಾಕೋ ಇಂದು ತಾವು ಎದ್ದ ಗಳಿಗೇನೇ ಸರಿಯಿಲ್ಲವೇನೋ ಅನ್ಸ್ತು.ಅವರಿಗೆ ಈ ಗಳಿಗೆ ಹಲ್ಲಿ ಶಕುನ, ಕವಡೆ ಶಾಸ್ತ್ರ ಇವೆಲ್ಲದರಲ್ಲಿ ನಂಬಿಕೆಯಿಲ್ಲದ್ದಿದ್ದರೂ ಏಕೆ ಆಗ  ಬಾಳಪ್ಪ, ಈಗ ನನ್ನ ಹೆಂಡ್ತಿ ಇವತ್ತು ನನ್ನ ಬಗ್ಗೆ ಹೀಗೆ ಮಾತಾಡ್ತಿದಾರೆ? ಇನ್ನು ಆ ವಸಿಷ್ಠ ನನ್ನ ಬಗ್ಗೆ ರಮಾದೇವಿಗೆ literary buildup ಕೊಟ್ಟಿದ್ದಾನಂತೆ. ನಾಳೆ ಏನು ಕಾದಿದೆಯೋ?

ರಾಯರ ಕಡೆಯಿಂದ  ಮಾತಿಲ್ಲವಾದಾರಿಂದ
‘ಏಕ್ರಿ ಏನಾದ್ರೂ ತೊಂದ್ರೆಲಿ ಸಿಕ್ಕಿಹಾಕಿಕೊಂಡಿದಿರೇನ್ರೀ?’

ರಾಯರಿಗೆ ವಾತಾವರಣವನ್ನು ಸ್ವಲ್ಪ ಹಗುರವಾಗಿಸಬೇಕೆನ್ನಿಸಿತು
‘ಯಾಕೆ ಮಧ್ಯಾಹ್ನ ಟಿವಿ ಸೀರಿಯಲ್ಲೋ, ಒಗ್ಗರಣೆ, ಸಾಸಿವೆ ಡಬ್ಬಿ, ಹೊಸರುಚಿನೋ ನೋಡಕ್ಕೆ ಕರೆಂಟ್ ಇರ್ಲಿಲ್ವಾ? ಇಲ್ಲ ಟಿವಿ ಕೆಟ್ಟೋಗಿದೆಯಾ? ಒಂದು ಕಥೆ ಪುಸ್ತಕ ಓದಿ ಅದರಲ್ಲಿ ಬರೋ ಒಂದು ಪಾತ್ರ ನನ್ನ ಗಂಡನೇ ಯಾಕಾಗಿರಬಾರದು? ಯಾಕ್ ಹಾಗೆ ಆಗಬಾರದು ಅಂತ ನಿನಗೆ ಅನ್ಸ್ತು? ನನ್ನ ಮೇಲೆ ನಂಬಿಕೆ ಇಲ್ಲವೇನೆ?’

‘ನಂಬಿಕೆ ಪ್ರಶ್ನೆ ಅಲ್ಲರೀ. ಆದ್ರೂ….’

‘ಹೋಗ್ಲಿ ಬಿಡೆ. ಆ ಕಥೆಗಳನ್ನು ಅವ್ರು ಬರೆದಿದ್ದಕ್ಕೆ ಸಾರ್ಥಕವಾಯ್ತು. ಅವರ ಇಮೈಲ್ ಐಡಿ ಆ ಪುಸ್ತಕದಲ್ಲೇ ಇರಬೇಕು. ನಾನು ಬಂದಮೇಲೆ ಅವರಿಗೆ ನಿಮ್ಮ ಪುಸ್ತಕ ನಮಗೆ ತುಂಬಾ ಇಷ್ಟವಾಯ್ತು; ಮಧ್ಯಮ ಅಥವಾ ಮೇಲ್ಮಧ್ಯಮ ವರ್ಗದ ಪಟ್ಟಣ, ನಗರವಾಸದ ಯಾರ ಜೀವನದಲ್ಲೂ ಬೇಕಾದರೆ ಈ ಥರ ಆಗ್ಬೋದು ಅಂತ ಇಬ್ರ ಹೆಸರೂ ಸೇರಿಸಿ ಒಂದು ಮೇಲ್ ಕಳಿಸೋಣ’

‘ನೀವು ಯಾವತ್ತು ಬೆಂಗಳೂರಿಗೆ ಬರ್ತೀರಾ?’

‘ಇನ್ನೊಂದೆರೆಡು ದಿನಾ ಕಣೆ. ದೂರದ ಬೆಟ್ಟ ನುಣ್ಣಗೆ ಅಂತಾರಲ್ಲ ಹಾಗೆ. ನಂಗೂ ಎರಡು ದಿನಕ್ಕೆ ಬೇಜಾರಾಗಿದೆ. ಆ ವಸಿಷ್ಠ ಒಂದೆರೆಡು ದಿನಾ ಬಿಟ್ಟು ಇಲ್ಲಿಗೆ ಬರ್ತೀನಿ ಅಂತ ಈಗ್ತಾನೇ ಫೋನ್ ಮಾಡಿದ್ದ. ನೆಮ್ಮದಿಯಾಗಿ ನಿದ್ದೆ ಮಾಡು. ನಾನು ಎಲ್ಲೂ ಓಡಿಹೋಗಲ್ಲ. ಓಕೆ ಗುಡ್ ನೈಟ್ ‘

‘ಗುಡ್ ನೈಟ್. ಟೇಕ್ ಕೇರ್ ‘

ಪೀರಾಯರ ತಲೆ ಕೆಟ್ಟುಹೋಯಿತು. ಟಿವಿಯಲ್ಲಿ ಕಾಮಿಡಿ ಚಾನೆಲ್ ಹಾಕಿದರು. ಹಾಗೆ ನೋಡುತ್ತಾ ಮಂಚದ ಮೇಲೆ ಮಲಗಿದರು.

ಮುಂದುವರೆಯುತ್ತದೆ….

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments